ಜನಮನರಾಜ್ಯ

ಡಿಜಿಟಲ್ ಗ್ರಾಮ ಆಗದ ಹೊರತು ಹಳ್ಳಿಗರಿಗೆ ಉಳಿಗಾಲಇಲ್ಲ

ಡಾ. ಶ್ವೇತಾರಾಣಿ. ಹೆಚ


ಡಿಜಿಟಲ್ ಇಂಡಿಯಾದ‌ ಅಡಿ ಒದಗಿಸಲಾಗುತ್ತಿರುವ ಸೇವೆಗಳಿಂದ ಗ್ರಾಮೀಣ ಜನರು ವಂಚಿತರಾಗುತ್ತಿದ್ದಾರೆ.
ಸರ್ಕಾರ ಲಸಿಕೆ ನೀಡಲು ಪಾರದರ್ಶಕತೆ ಕಾಪಾಡಲು ಆನ್ ಲೈನ್ ಮೂಲಕ

18 ರಿಂದ 44 ವರ್ಷದ ಒಳಗಿನವರು ಲಸಿಕೆ ಪಡೆಯಲು ನೋಂದಾವಣೆಗೆ ಅವಕಾಶ ಮಾಡಿಕೊಟ್ಟಿದೆ. ಆದರೆ ಇದರ ಉಪಯೋಗ ಹೆಚ್ಚು ತಾಂತ್ರಿಕವಾಗಿ ಪರಿಣಿತಿ ಪಡೆದ ವಿದ್ಯಾವಂತ ವರ್ಗದವರ ಪಾಲಾಗುತ್ತಿದೆ.

ಸರ್ಕಾರವೇನೊ ಲಸಿಕೆ ಯನ್ನು ಎಲ್ಲಾ ಪ್ರದೇಶವಾರು ವಿತರಿಸುತ್ತಿದೆ. ಆದರೆ ಹಳ್ಳಿಗಳಲ್ಲಿ ಎಷ್ಟೋ ಮನೆಗಳಲ್ಲಿ ಪೋನ್ ಗಳೇ ಇಲ್ಲದಿರುವಾಗ ಸ್ಮಾರ್ಟ್ ಪೋನ್ ಇಲ್ಲದಿರುವಾಗ ಹಳ್ಳಿಗರು ಕೋವಿಡ್ ಲಸಿಕೆ ಬುಕ್ ಮಾಡುವಲ್ಲಿ ಹಿಂದೆ ಬೀಳುತ್ತಿದ್ದಾರೆ ಅವರಿಗೆ ಗ್ರಾಮಲೆಕ್ಕಿಗಳು ಮತ್ತು ಗ್ರಾಮ ಸೇವಾ ಕೇಂದ್ರಗಳ ಮೂಲಕ ಲಸಿಕೆ ಪಡೆಯಲು ನೋಂದಣಿಗೆ ಅವಕಾಶ ಮಾಡಿಕೊಡದ ಹೊರತು ಗ್ರಾಮೀಣ ಪ್ರದೇಶದವರು ವಂಚಿತರಾಗುತ್ತಾರೆ.

ಬೆಂಗಳೂರು ನಿವಾಸಿಗಳಾದ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಳ್ಳಿಗಳಲ್ಲಿ ಕೂಡ ಲಸಿಕೆ ಪಡೆಯಲು ಸ್ಲಾಟ್ ಬುಕ್ ಮಾಡಿಕೊಳ್ಳವ ಅವಕಾಶವಿದೆ. ರೈಲು ಮತ್ತು ಬಸ್ ಸಂಚಾರ ವ್ಯವಸ್ಥೆ ಇರುವ ಊರುಗಳಾದ ಗುಬ್ಬಿ, ಕುಣಿಗಲ್, ತುರುವೆಕೆರೆ ಮುಂತಾದ ಕಡೆ ಬೆಂಗಳೂರಿಗರು ಬಂದು ಲಸಿಕೆ ಪಡೆಯುತ್ತಿದ್ದಾರೆ. ಇದರಿಂದ ಗ್ರಾಮೀಣ ವಾಸಿಗಳು ಅಕ್ಷರಶಃ ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ.

ಲಸಿಕೆ ಸ್ಲಾಟ್ ಬುಕ್ ಮಾಡಲು ಪ್ರದೇಶಗಳ ನಿರ್ಬಂಧವನ್ನು ಹೇರದ ಕಾರಣ ತಂತ್ರಜ್ಞಾನದಿಂದ ಲಸಿಕೆ ದುರ್ಬಳಕೆ ಯಾಗುತ್ತಿದೆ. ಆದ್ದರಿಂದ ಸರ್ಕಾರ ಇದರತ್ತ ಗಮನವರಿಸಬೇಕು.

“ನಮ್ಮತ್ರ ಕೀ ಪ್ಯಾಡ್ ಮೊಬೈಲ್ ಐತೆ. ಅದರಲ್ಲಿ ನೆಟ್ ಬರಲ್ಲ, ಬೇರೇನು ಬರಲ್ಲ. ಬರಿ ಮಾತಾಡಬಹುದು ಅಷ್ಟೇ. ಊರಲ್ಲಿ ಒಳ್ಳೆ ಫೋನ್ ಇರೋರತ್ರ ಹೋದ್ರು ಅವರು ಮಾಡಕೊಡಲಿಲ್ಲ. ಆಸ್ಪತ್ರೆಗೆ ಹೋದ್ರೆ ಅದೇನ್ ಮೊದ್ಲೆ ಫೋನ್ ನಲ್ಲಿ ಮಾಡಬೇಕು ಅಂತಾರೆ. ನಮಗೆ ವಯಸ್ಸಾದರೂ ಲಸಿಕೆ ಪಡೆಯೋದೆ ಕಷ್ಟ ಆಗ್ತಾ ಇದೆ. ಯಾರ್ನ ಕೇಳ್ಬೆಕೊ ಗೊತ್ತಾಗ್ತ ಇಲ್ಲ. ಸರ್ಕಾರಾನೆ ಏನಾದ್ರು ಮಾಡ್ಬೇಕು.‌ಇಲ್ಲ ಮನೆ ಮನೆಗೆ ಬಂದು ಹಾಕಿದ್ರು ಆಯ್ತು ಎನ್ನುತ್ತಾರೆ”.ಕೊಡಿಗೆನಹಳ್ಳಿಯ ರಾಜಣ್ಣ.

ತುರುವೆಕೆರೆ ತಾಲ್ಲುಕು ಆಸ್ಪತ್ರೆಯಲ್ಲಿ ಬೆಂಗಳೂರಿನಲ್ಲೇ ಕುಳಿತು ಸ್ಲಾಟ್ ಬುಕ್ ಮಾಡಿಕೊಂಡಿರುವವರೇ ಜಾಸ್ತಿ ಎನ್ನುತ್ತಾರೆ ಅಲ್ಲಿನ ಆರೋಗ್ಯಾಧಿಕಾರಿ.

ಕೀ ಪ್ಯಾಡ್ ಮೊಬೈಲ್ ಹೊಂದಿರುವ, ಪೋನ್ ಹೊಂದಿಲ್ಲದ ಬಡ ಗ್ರಾಮೀಣ ವಾಸಿಗಳಿಗೆ ಗ್ರಾಮ ಲೆಕ್ಕಿಗರ ಅನ್ನು ತೊಡಗಿಸಿಕೊಂಡು ಸ್ಲಾಟ್ ಬುಕ್ ಮಾಡುವ, ಇಲ್ಲವೇ ಆರೋಗ್ಯ ಇಲಾಖೆಯ ಮನೆ ಮನೆ ಭೇಟಿಕೊಡುವ ಸಿಬ್ಬಂದಿಗಳ ಮೂಲಕ ಲಸಿಕೆ ಬುಕ್ ಮಾಡುವಂತೆ ವ್ಯವಸ್ಥೆ ಕಲ್ಪಿಸಬೇಕು ಇಲ್ಲವಾದಲ್ಲಿ ಗ್ರಾಮೀಣ ವಾಸಿಗಳು ಲಸಿಕೆ ಪಡೆಯುವಲ್ಲಿ ಹಿಂದೆ ಬೀಳುತ್ತಾರೆ. ಲಸಿಕೆಯಿಂದ ವಂಚಿತರಾಗುತ್ತಾರೆ. ಇಲ್ಲದೇ ಹೋದಲ್ಲಿ digital India digital ಗ್ರಾಮವಾಗದ ಹೊರತು ಹಳ್ಳಿಗರಿಗೆ ಉಳಿಗಾಲವಿಲ್ಲ.

Comment here