ಜಸ್ಟ್ ನ್ಯೂಸ್

ಕೋವಿಡ್ ಲಸಿಕೆ ಅಪಪ್ರಚಾರಿಗಳ ವಿರುದ್ಧ ಕ್ರಮ: ಕಡಕೋಳ

ಪಾವಗಡ: ಕೋವಿಡ್ ಲಸಿಕೆ ಬಗ್ಗೆ ಸುಳ್ಳು ಸುದ್ಧಿ ಹರಡಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಎಚ್ಚರಿಸಿದರು.

ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಬುಧವಾರ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಪಟ್ಟಣದ ಬಡಾವಣೆಯೊಂದರಲ್ಲಿ ಲಸಿಕೆ ಹಾಕಿಸಿಕೊಂಡು ವೃದ್ಧೆಯೋರ್ವರು ಮೃತಪಟ್ಟಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿದೆ. ಕೆಲವರು ಯಾವುದೊ ರಾಜ್ಯದಲ್ಲಿನ ಸುಳ್ಳು ಸುಳ್ಳು ಸಂದೇಶಗಳನ್ನು ವಾಟ್ಸ್ ಆಪ್, ಫೇಸ್ ಬುಕ್ ಜಾಲತಾಣಗಳಲ್ಲಿ ಹಂಚಿಕೊಂಡು ಇಲ್ಲ ಸಲ್ಲದ ಗೊಂದಲ ಸೃಷ್ಟಿಸುತ್ತಿರುವ ದೂರುಗಳು ಬರುತ್ತಿವೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ನಿತ್ಯ ಸಾವಿರ ಮಂದಿಗೆ ಲಸಿಕೆ ಹಾಕಿಸಲಾಗುತ್ತಿದೆ. ಪುರಸಭೆ ವ್ಯಾಪ್ತಿಯ ಜನಪ್ರತಿನಿದಿಗಳು, ಗ್ರಾಮ ಪಂಚಾಯಿತಿ ಜನಪ್ರತಿನಿದಿಗಳು ಲಸಿಕೆ ಹಾಕಿಸಲು ಅಧಿಕಾರಿಗಳಿಗೆ ಸಹಕರಿಸಬೇಕು. ಜನರಲ್ಲಿರುವ ಗೊಂದಲ ನಿವಾರಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಬೇಕು ಎಂದರು.

ಡಿವೈಎಸ್ ಪಿ ರಾಮಕೃಷ್ಣ, ತಹಶೀಲ್ದಾರ್ ಕಲ್ಯಾಣಿ ವೆಂಕಟೇಶ್ ಕಾಮ್ಳೆ, ಪುರಸಭೆ ಮುಖ್ಯಾಧಿಕಾರಿ ಅರ್ಚನಾ, ಸದಸ್ಯ ಸುದೇಶ್ ಬಾಬು, ಕಂದಾಯ ಅಧಿಕಾರಿ ನಾಗಬೂಷಣ್, ಗ್ರಾಮ ಲೆಕ್ಕಿಗ ಗಿರೀಶ್ ಉಪಸ್ಥಿತರಿದ್ದರು.

Comment here