ಭಾನುವಾರದ ಕವಿತೆ

‌ಭಾನುವಾರದ ಕವಿತೆ : ಮೋಡ

ಡಾII ರಜನಿ.ಎಂ


ಕಪ್ಪು ಮೋಡದ
ಹಿಂದೆ ಉರಿಯುವ ಸೂರ್ಯ..
ಅವನೊಂದಿಗಿನ ದುಗುಡ ಹರಿದು

ನೀರಾಗಿ ತುಂತುರು
ಜಡಿ ಜಿಟಿ ಜಿಟಿ..
ಜಗಳ ತಾರಕಕ್ಕೇರಿ ಗುಡುಗು ಸಿಡಿಲು

ಎಲ್ಲೋ ಒಮ್ಮೊಮ್ಮೆ ಮಿಂಚು
ಹುಯ್ದು ಹುಯ್ದು ಬರಿದಾಗಿ..
ದಿನ ದಿನ ಕಳೆದು ಬಿಳಿಯಾಗಿ

ಹಗುರಾಗಿ ಟಪಟಪನೆ
ಬೀಳುವ ಹನಿ ಒಂದೊಂದು ಥರಾ..
ಬಿದ್ದಾಗಲೇ ಗೊತ್ತಾಗುವುದು

ನೆನೆಯದೇ ನಿಂತು ಕಿಟಕಿಯಿಂದ
ನೋಡಿ ನಡುಗಿ ತಣ್ಣನೆ ಗಾಳಿಗೆ ..
ಸಿಡಿದ ನೀರಿಗೆ

ನಿಂತು ಸುರಿವ ಮಳೆಯಲ್ಲಿ
ಮುಖದ ಮೇಲೆ ಬಿದ್ದ ನೂರಾರು ಹನಿ..
ಕೈಲಿ ಹಿಡಿದ ಆಣಿಕಲ್ಲು

ಕಣ್ಣಿಗೆ ಕೆನ್ನೆಗೆ ಬಿದ್ದಹನಿ
ಹರಿದು ಬಾಯಿಗೆ..
ನುಂಗಿ ನೀರಾಗಿ

ಹನಿಯ ರಭಸ
ಕೂಡಿಟ್ಟ ದುಃಖಕ್ಕೆ ..
ಪ್ರೀತಿಗೆ ಅಳತೆಗೋಲು

ಸುರಿದು ಬರಿದಾಗಿ
ಕರಗಿದ ಮೋಡ..
ಕಾಣೆಯಾಗಿ

ಕಾದು ಪ್ರೀತಿ
ಮತ್ತೊಮ್ಮೆ ..
ಮಡುಗಟ್ಟಿ ಮೋಡವಾಗಲು

ಒಲವು ಭಾರವಾಗಿ
ಕುಸಿದು ..
ಸುರಿಸಿದ ಮಳೆ

ಹರಿವ ನೀರಲ್ಲಿ
ಮೂಡಿದ ಚಿತ್ರ..
ತಿರುಗಾ ಮರುಗಾ

ಕಪ್ಪನೆ ಮೋಡ ಮಡುಗಟ್ಟಿ ಮಳೆ ಮಿಂಚು ಗುಡುಗು, ಮನದಲ್ಲಿ ದುಃಖ ಮಡುಗಟ್ಟಿದರೂ ಹಾಗೆಯೇ, ಹೃದಯದಲ್ಲಿ ಪ್ರೀತಿ ಮಡುಗಟ್ಟಿದರೂ ಹಾಗೆಯೇ ಸುರಿಯಬೇಕು. ಈ ಸಮೀಕರಣದಲ್ಲಿ ಸುರಿಯುತ್ತಿರುವ
ಮಳೆಗೆ ಹೇಳಿ ಮಾಡಿಸಿದಂತೆ ಇದೆ ಕವನ .

Comment here