ರಾಜ್ಯ

ಬಗೆದಷ್ಟೂ ಕಗ್ಗಂಟಾಗುತ್ತಿರುವ ; ಕರ್ದಾದಲ್ಲಿನ ಬೀಳು ,ಪಢಾ,ಬಂಜರು ಪ್ರಕರಣಗಳು.

ಲಕ್ಷ್ಮೀಕಾಂತರಾಜು ಎಂಜಿ.

 

ಐಎಲ್,ಪಹಣಿ,ಆರ್ ಆರ್ ಸೇರಿದಂತೆ ಇನ್ನಿತರ ಕಂದಾಯ ಇಲಾಖೆಯ ದಾಖಲೆಗಳು ಇದ್ದ ಮಾತ್ರಕ್ಕೆ ಜಮೀನನ ಅಳತೆ ಕಾರ್ಯ ನಿರ್ವಹಿಸಲಾಗದು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರು ಸ್ಪಷ್ಠೀಕರಣ ನೀಡಿದ್ದಾರೆ‌.

ಹೌದು,ಕರ್ದಾದಲ್ಲಿನ ಬೀಳು,ಫಡಾ,ಖರಾಬು,ಬಂಜರು ಪ್ರಕರಣಗಳ ವಿಲೇವಾರಿ ಸಂಬಂಧ ಸ್ಪಷ್ಠೀಕರಣ ಕೋರಿ ಚಿಂತಾಮಣಿಯ ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರು ಬರೆದ ಪತ್ರಕ್ಕೆ ಸ್ಪಷ್ಠೀಕರಣ ನೀಡಿರುವ ಅವರು, ಕೇವಲ ಕಂದಾಯ ದಾಖಲೆಗಳಿಂದ ಭೂಮಿಯ ಮಾಲೀಕರನ್ನ ಗುರ್ತಿಸಲಾಗದು,ಅದಕ್ಕೆ ಪೂರಕವಾಗಿ ಸರ್ವೇ ದಾಖಲೆಗಳಲ್ಲಿಯೂ ಖಾಸಗಿ ಮಾಲೀಕರ ಹೆಸರು ದಾಖಲಾಗಿದ್ದಾಗ ಮಾತ್ರ ಅಳತೆ ಕಾರ್ಯ ನಿರ್ವಹಿಸಲು ಸಾಧ್ಯವೆಂದಿದ್ದಾರೆ.

ಕರ್ದಾದಲ್ಲಿನ ಬೀಳು,ಫಡಾ,ಬಂಜರು ಪ್ರಕರಣಗಳ ವಿಲೇವಾರಿ ಸಂಬಂಧ ಕ್ರಮಕೈಗೊಳ್ಳಲು ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತರು ಹೊರಡಿಸಿದ್ದ sslr/ 11028/025/2016 ಪತ್ರದಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಪ್ರಕರಣ 163 ರ ಉಪಪ್ರಕರಣ 2 ರ ಅನ್ವಯ ಕ್ರಮವಹಿಸಿ ಎಂದು ಎಲ್ಲ ತಹಸೀಲ್ದಾರ್ ಅವರುಗಳಿಗೆ ಸೂಚಿಸಲಾಗಿತ್ತು.

ಈ ಭೂ ಮಾಪನ ಇಲಾಖೆಯ ಆಯುಕ್ತರು ಪತ್ರದಲ್ಲಿ ಉಲ್ಲೇಖಿಸಿದ್ದ ನಿಯಮದಡಿ ಕರ್ದಾದಲ್ಲಿನ ಬೀಳು ,ಫಡಾ,ಖರಾಬು,ಬಂಜರು ಪ್ರಕರಣಗಳಲ್ಲಿನ ಜಮೀನುಗಳ ಅಳತೆ ಮಾಡಿ ತತ್ಕಾಲ್, 11 e ನಕಾಶೆ ಮಾಡಲು ಚಿಂತಾಮಣಿ ತಹಸೀಲ್ದಾರ್ ಅವರು ಅಲ್ಲಿನ ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಆದೇಶಿದಾಗ ಈ ಎಲ್ಲ ಬೆಳವಣಿಗೆಗಳು ನಡೆದು ಚಿಕ್ಕಬಳ್ಳಾಪುರ ಜಿಲ್ಲೆಯ ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರು 22 ಪುಟಗಳ ಸವಿಸ್ತಾರವಾಗಿ ವಿವರಣೆ ಬರೆದಿರುವುದು ನೋಡಿದಾಗ ಈ ಪ್ರಕರಣಗಳಿಗೆ ಮುಕ್ತಿ ಅಷ್ಟು ಸುಲಭವಲ್ಲ ಎಂಬುದು ತಿಳಿಯುತ್ತಿದೆ.

ಸರ್ವೇಯ ಕರ್ದಾದಲ್ಲಿ ಅಥವಾ ರೀ ಸರ್ವೇಯ ದಾಖಲೆಯಲ್ಲಿ ಖಾಸಗಿ ಮಾಲೀಕನ ಹೆಸರು ಇಲ್ಲದ ಜಮೀನುಗಳ ರೈತರು ತತ್ಕಾಲ್ ಪೋಡಿಗೆ ಅಥವಾ 11e ನಕಾಶೆ ತಯಾರಿಸಲು ಅರ್ಜಿ ಸಲ್ಲಿಸಿ ಅಳತೆಗಾಗಿ ಸರ್ವೇಯರ್ ಗಳನ್ನ ಕಾಯುತ್ತಿದ್ದ ರೈತರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರ ಸ್ಪಷ್ಠೀಕರಣ ರೈತರ ಈ ಸಮಸ್ಯೆ ಸಧ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲವೆಂದು ರೈತರು ಬೇಸರಿಸಿಕೊಳ್ಳುತ್ತಿದ್ದಾರೆ.

1964 ರ ಭೂ ಕಂದಾಯ ಅಧಿನಿಯವು ಜಾರಿಗೆ ಬರುವ ಮುನ್ನ ಭೂಮಿಗೆ ಸಂಬಂಧಿಸಿದಂತೆ ಮೈಸೂರು ರೆವೆನ್ಯೂ ಕೋಡ್ 1888 ಜಾರಿಯಲ್ಲಿದ್ದು, ಈ ಕಾಯ್ದೆಯಡಿಲ್ಲಿಯೇ ಭೂ ಮಾಪನ ಮತ್ತು ಕಂದಾಯ ವ್ಯವಸ್ಥೆಯ ಕಾನೂನು ಜಾರಿಯಲ್ಲಿರುತ್ತದೆ. ಆಗ ಕಂದಾಯ ನಿಗದಿಯಾಗಿದ್ದ ಸರ್ಕಾರಿ ಭೂಮಿಗಳೂ ಇದ್ದು ವ್ಯವಸಾಯದ ಉದ್ದೇಶಕ್ಕಾಗಿ ಆಸಕ್ತಿ ಉಳ್ಳವರಿಗೆ ನೀಡಿ ಕಂದಾಯ ಸಂಗ್ರಹಿಸಲಾಗುತ್ತಿತ್ತು. ಆದರೆ ,ಮಾಲೀಕತ್ವ ಸರ್ಕಾರದ್ದೇ ಆಗಿರುತ್ತದೆ. ಆದ್ದರಿಂದ ಈ ಪ್ರಕರಣಗಳ ಭೂಮಿಗಳು ಸರ್ಕಾರದ್ದೇ ಎಂಬುದು ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳ ವಾದವಾಗಿದೆ.

ಸರ್ವೇ ದಾಖಲೆ ಕರ್ದಾದಲ್ಲಿ ನಮೂದಾಗಿರುವ ಸರ್ಕಾರಿ ಖರಾಬು,ಕರ್ದಾ ಇಲ್ಲ ಬೀಳು ,ಬಂಜರು ಜಮೀನುಗಳು ಖಾಸಗಿ ವ್ಯಕ್ತಿಗಳಿಗೆ ಹೇಗೆ ಬಂದಿತು ಎಂಬ ನಡಾವಳಿಯ ಆದೇಶದ ಕಡತವಿಲ್ಲದೆ ಸರ್ವೆ ದಾಖಲೆಗಳಲ್ಲಿ ಖಾಸಗಿ ವ್ಯಕ್ತಿಗಳ ಹೆಸರನ್ನ ಸೇರಿಸಿಕೊಳ್ಳಲು ಅವಕಾಶವಿರುವುದಿಲ್ಲವೆಂದು ಅಧಿಕಾರಿಗಳು ಹೊರಡಿಸಿರುವ ಸ್ಪಷ್ಠೀಕರಣದಲ್ಲಿ ತುಂಬಾ ಸ್ಪಷ್ಟಪಡಿಸಿರುವ ಕಾರಣ ಈ ಪ್ರಕರಣಗಳಲ್ಲಿ ಬಾಕಿ ಇರುವ ಅರ್ಜಿಗಳಿಗೆ ಮುಕ್ತಿ ಸಿಗುವುದು ಅಷ್ಟು ಸುಲಭವಲ್ಲ ಎಂಬುದು ರೈತಾಪಿ ವರ್ಗದಿಂದ ಕೇಳಿಬರುತ್ತಿದೆ.

ಈ ಪ್ರಕರಣಗಳ ತಾಂತ್ರಿಕ ಸಮಸ್ಯೆಯನ್ನ ಬಗೆಹರಿಸಲು ನಮ್ಮ ಇಲಾಖೆಯಲ್ಲಿನ ನಿಯಮಗಳಲ್ಲಿ ತೊಡಕಿವೆ. ಈ ಸಂಬಂಧ ಸರ್ಕಾರ ಮಧ್ಯಪ್ರವೇಶ ಮಾಡಿ ನಿಯಮಗಳನ್ಬ ಮಾರ್ಪಡಿಸಬೇಕು. ಜಿಲ್ಲಾಧಿಕಾರಿಗಳಿಗೆ ಕುಲಕಂಶವಾಗಿ ಪರಿಶೀಲಿಸಿ ನೈಜ ಮಾಲೀಕನನ್ನ ಗುರ್ತಿಸಿ ಆದೇಶ ಮಾಡುವ ವಿವೇಚನಾಧಿಕಾರವನ್ನ ನೀಡಿದರೆ ಬಗೆಹರಿಸಲು ಸಾಧ್ಯ ಎನ್ನುತ್ತಾರೆ ಹೆಸರೇಳಲಿಚ್ಚಿಸದ ಸರ್ವೇ ಅಧಿಕಾರಿಗಳು.

ಬಹಳಷ್ಟು ವರ್ಷಗಳಿಂದ ಕೆಲ ರೈತರು ತಮ್ಮ ಜಮೀನುಗಳನ್ನ ಪೋಡಿ ಮಾಡಿಸಿಕೊಳ್ಳಲು ಛಾತಕ ಪಕ್ಷಿಯಂತೆ ಕಾಯುತ್ತಿದ್ದರೂ ಸರ್ವೆ ದಾಖಲೆಗಳಲ್ಲಿ ಹಿಡುವಳಿ ಜಮೀನಾಗಿರದೇ ಸರ್ಕಾರಿ ಮಾಲೀಕತ್ವ( ಪಡಾ,ಖರಾಬು,ಬಂಜರು,ಬೀಳು) ಗುರುತಿಸಿರುವ ಜಮೀನುಗಳನ್ನ ಅಳತೆ ಮಾಡಿ ನಕಾಶೆ ಮಾಡಿಕೊಡುತ್ತಿಲ್ಲ. ಈಗಲಾದರೂ ಬಗೆಹರಿದೀತು ಎಂದು ಆಶಾವಾದಿಯಾಗಿದ್ದ ಈ ಪ್ರಕರಣಗಳಲ್ಲಿ ರಾಜ್ಯ ವ್ಯಾಪಿ ಅರ್ಜಿದಾರರಾಗಿರುವ ರೈತರಿಗಳಿಗೆ ಅಧಿಕಾರಿಗಳ ಸ್ಪಷ್ಠೀಕರಣ ನೋಡಿದ ಮೇಲೆ ಮತ್ತಷ್ಟು ವಿಳಂಬವಾಗುವುದನ್ನ ಅರಿತು ಕಂಗಲಾಗಿರುವುದಂಥೂ ಸತ್ಯ.

…………

ಈ ಪ್ರಕರಣಗಳ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಡಿಎಲ್ ಆರ್ ಅವರು ಹೊರಡಿಸಿರುವ ಸ್ಪಷ್ಠೀಕರಣ ನನ್ನ ಗಮನಕ್ಕೆ ಬಂದಿಲ್ಲ. ರೈತರಿಂದ ಲಿಖಿತವಾಗಿ ಮನವಿ ಬಂದರೆ ಗಮನವಹಿಸಿ ನಿಯಾಮನುಸಾರ ಪರಿಹರಿಸಲು ಪ್ರಯತ್ನಿಸುತ್ತೇನೆ.

ಮನೀಷ್ ಮೌದ್ಗಿಲ್.
ಆಯುಕ್ತರು, ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ,ಬೆಂಗಳೂರು.
………………….

Comment here