ಜಸ್ಟ್ ನ್ಯೂಸ್

ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲದೆ ಪರದಾಡುತ್ತಿರುವ ಜನತೆ

ಲಕ್ಷ್ಮೀಕಾಂತರಾಜು ಎಂಜಿ, 9844777110


ಎಲ್ಲರಿಗೂ ಎಲ್ಲಡೆ ಆರೋಗ್ಯವೆಂದು ಆರೋಗ್ಯ ಇಲಾಖೆ ಹೇಳುತ್ತದೆ. ಆದರೆ,ಗಡಿ ಹಾಗೂ ಹಿಂದುಳಿದ ಪ್ರದೇಶಗಳಿಗಳ ಜನರ ಆರೋಗ್ಯದ ಕುರಿತ ಆರೋಗ್ಯ ಇಲಾಖೆ ಕಾಳಜಿವಹಿಸುವುದೇ ಇಲ್ಲ. ಹಿಂದುಳಿದ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದೂರವಿರುವ ಒಂದು ಪಂಚಾಯತಿಯ ಜನರು ಆರೋಗ್ಯ ಕೈ ಕೊಟ್ಟಾಗ ಇಲ್ಲಿನ ರೋಗಿಗಳು ದೂರದ ಆಸ್ಪತ್ರೆಗಳಿಗೆ ಹೋಗುವ ಅನಿವಾರ್ಯತೆ ಉಂಟಾಗಿದೆ.

ಹೌದು. ಗುಬ್ಬಿ ತಾಲ್ಲೂಕಿನ ಗಡಿ ಹಾಗೂ ಅತ್ಯಂತ ಹಿಂದುಳಿದ ಪ್ರದೇಶವಾದ ಮಂಚಲದೊರೆ ಗ್ರಾಪಂ ಕೇಂದ್ರಕ್ಕೆ ಇದುವರೆಗೂ ಪ್ರಾಥಮಿಕ ಆರೋಗ್ಯಕೇಂದ್ರವಿಲ್ಲದೆ ಇಲ್ಲಿನ ಜನರು ದೂರದೂರಿನ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. ಮಂಚಲದೊರೆ ಪಂಚಾಯಿತಿ ಕೇಂದ್ರಸ್ಥಾನಕ್ಕೆ ಸುಮಾರು ಹದಿನಾರು ಹಳ್ಳಿಗಳು ಸೇರಿದ್ದು ಇದು ಗುಡ್ಡಗಾಡು ಪ್ರದೇಶವಾಗಿದ್ದು ಭೌಗೋಳಿಕವಾಗಿ ದೊಡ್ಡದಾಗಿದೆ.ಪಂಚಾಯತಿ ಕೇಂದ್ರ ಸ್ಥಾನದಿಂದ ಗಡಿಗ್ರಾಮಗಳು ಆರೇಳು ಕಿಮೀ ದೂರದಲ್ಲಿವೆ.

ಈ ಗ್ರಾಮಗಳಲ್ಲಿನ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೂ ದೂರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಅನಿವಾರ್ಯತೆ ಈ ಭಾಗದ ಜನರದ್ದಾಗಿದೆ.

ಮಂಚಲದೊರೆಯಲ್ಲಿ ಈಗಾಗಲೇ ಆಯರ್ವೇದ ಆಸ್ಪತ್ರೆ ಇದೆ. ಆದರೆ ವಾರಕ್ಕೆ ಎರಡು ಬಾರಿ ಬರುವ ಡಾಕ್ಟರ್, ವೈದ್ಯರಿಗೆ ಕಚೇರಿ ಕೆಲಸ ಮೀಟಿಂಗ್ ಇದ್ದರೆ ವಾರಪೂರ್ತಿ ಇಲ್ಲಿಗೆ ವೈದ್ಯರೇ ಬರುವುದಿಲ್ಲ .ಆದ್ದರಿಂದ ಇಲ್ಲಿನ ರೋಗಿಗಳಿಗೆ ಆಯುರ್ವೇದ ಆಸ್ಪತ್ರೆಯ ಸೌಲಭ್ಯವೂ ದೊರಕದಂತಾಗಿದೆ ಎಂದು ದೂರುತ್ತಾರೆ ಮಂಚಲದೊರೆ ಪಂಚಾಯತಿ ಜನರು.

ಈ ಭಾಗದ ಸುಮಾರು ಹಳ್ಳಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕೆಂದರೆ ದೂರದ ಹದಿನೈದು ಇಪ್ಪತ್ತು ಕಿಮೀ ದೂರದ ಹೊಸಕೆರೆ ಹಾಗೂ ಚೇಳೂರು ಆಸ್ಪತ್ರೆಗಳಿಗೆ ಹೋಗಬೇಕಿದ್ದು ಒಂದು ದಿನವೇ ಬೇಕಾಗುತ್ತದೆ.

ದೂರದ ಊರುಗಳಿಗೆ ಚಿಕಿತ್ಸೆ ಬಯಸಿ ಹೋಗುವದರಿಂದ ಇಲ್ಲಿನ ವೃದ್ಧರು ಹಾಗೂ ಮಹಿಳೆಯರಿಗೆ ಬಹಳ ತೊಂದರೆಯಾಗಿರುತ್ತದೆ. ಹೆರಿಗೆ ಮತ್ತಿತರ ತುರ್ತು ಸಮಸ್ಯೆಗಳಿಗೆ ತಾಲ್ಲೂಕು ಕೇಂದ್ರ ನಲವತ್ತು‌ ಕಿಮೀ‌ ದೂರವಿರುವ ಕಾರಣ ಕಡಿಮೆ ಪ್ರಯಾಣ ಅವಧಿಯಲ್ಲಿ ವೈದ್ಯರನ್ನ ಕಾಣುವುದು ಕನಸಿನ ಮಾತಾಗಿದೆ

ಈ ಪಂಚಾಯತಿಯ ಆರೋಗ್ಯ ಸಮಸ್ಯೆಗೆ ಪರಿಹಾರವಾಗಿ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕೆಂದು ಈ ಬಾಗದ ಜನರಿಂದ ಬಹುದಿನದ ಬೇಡಿಕೆಯಾಗಿದ್ದು ಇಲ್ಲಿನ ಜನಪ್ರತಿನಿಧಿಗಳ ಬೇಜವಬ್ದಾರಿಯಿಂದ ಇದುವರೆಗೂ ಕೆಲಸವಾಗಿಲ್ಲ ಎನ್ನುತ್ತಾರೆ ರಾಜಕೀಯ ಮುಖಂಡರೊಬ್ಬರು.

ಮಂಚಲದೊರೆ ಗ್ರಾಮ ಪಂಚಾಯತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡುವುದು ತಡವಾದರೂ ಇರುವ ಆಯುರ್ವೇದ ಆಸ್ಪತ್ರೆಗೆ ಪ್ರತಿ ದಿನವೂ ವೈದ್ಯರು ಕರ್ತವ್ಯಕ್ಕೆ ಹಾಜರಾಗುವುಂತೆ ಮಾಡಿದರೂ ಸ್ವಲ್ಪಮಟ್ಟಿಗಿನ‌ ಸಮಸ್ಯೆ ಬಗೆ ಹರಿಯುತ್ತದೆ . ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಲಿ ಎಂಬುದೇ ಇಲ್ಲಿನ‌ ಜನರ ಅಭಿಲಾಷೆಯಾಗಿದೆ.


ಮಂಚಲದೊರೆಯಲ್ಲಿ ಈಗಾಗಲೇ ಆಯುರ್ವೇದ ಆಸ್ಪತ್ರೆ ಇದ್ದು ಅದನ್ನು ಮೇಲ್ದರ್ಜೆಗೆ ಏರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಲು ಅವಕಾಶ ಇರುವುದಿಲ್ಲ. ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು‌ ಮಾಡಬೇಕಾಗಿದೆ.ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸೋಣ.
ಬಸವರಾಜು. ಸಂಸದರು. ತುಮಕೂರು‌ ಕ್ಷೇತ್ರ

ಮಂಚಲದೊರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದರೆ‌ ಈ ಭಾಗದ ಜನರಿಗೆ ತುರ್ತು ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುತ್ತೆ
ಮರಡಿರಂಗನಾಥ,ಮಂಚಲದೊರೆ

ಮಂಚಲದೊರೆಯಲ್ಲಿ ಈಗಿರುವ ಆಯುರ್ವೇದ ಆಸ್ಪತ್ರೆಗೆ ಖಾಯಂ ವೈದ್ಯರನ್ನ ನೇಮಿಸಿ ಪ್ರತಿದಿನವೂ ರೋಗಿಗಳಿಗೆ ವೈದ್ಯರು‌ ಸಿಗುವಂತೆ ಮಾಡಿದರೆ ಇಲ್ಲಿನ ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ
ರಮೇಶ,ಮಂಚಲದೊರೆ

Comment here