ಜಸ್ಟ್ ನ್ಯೂಸ್

ನನ್ನೊಳಗಿನ ಕನಸು ಸಾಕಾರಗೊಂಡಿತು: ʻಕನ್ನಡತಿʼ ರಂಜನಿ

ಪುಸ್ತಕ ಬರೆಯುವ ಕನಸೊಂದು ನನ್ನ ಮನಸಿನ ಮೂಲೆಯಲ್ಲಿ ಕುಳಿತಿತ್ತು. ಕತೆ ಡಬ್ಬಿ ಮೂಲಕ ಇದು ಸಾಕಾರಗೊಂಡಿದೆ. ಮೊದಲ ಪುಸ್ತಕವಾಗಿದ್ದರಿಂದ ತುಂಬಾ ಸಂಭ್ರಮದಲ್ಲಿರುವೆ ಎಂದು ʻಕನ್ನಡತಿʼ ಖ್ಯಾತಿಯ ನಟಿ ರಂಜನಿ ರಾಘವನ್‌ ತಿಳಿಸಿದರು.

ಬಹುರೂಪಿ ಹಮ್ಮಿಕೊಂಡಿದ್ದ ರಂಜನಿ ರಾಘವನ್ ಅವರ ಕಥಾ ಸಂಕಲನ ʻಕತೆ ಡಬ್ಬಿʼ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ʻಅವಧಿʼ ವೆಬ್‌ ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಕತೆಗಳನ್ನು ಬರೆದೆ. ಅದಕ್ಕೆ ಬಂದ ಪ್ರತಿಕ್ರಿಯೆಗಳು ನನಗೆ ಉತ್ಸಾಹ ತುಂಬಿತು ಅದೇ ಕಾರಣವಾಗಿ ಕತೆ ಡಬ್ಬಿ ರೂಪುಗೊಂಡಿತು. ಮುಂದೆ ಕಾದಂಬರಿಯನ್ನು ಬರೆಯುವ ಹಸಿವು ಇದೆ. ಬರವಣಿಗೆಯ ಲೋಕದಲ್ಲಿ ದಿಗ್ಗಜರ ನಡುವೆ ʻಪುಟ್ಟಗೌರಿʼಯ ಕಥಾ ಸಂಕಲನಕ್ಕೆ ಸೊಗಸಾದ ಸ್ವಾಗತ ಸಿಕ್ಕಿದ್ದು ಸಂತಸ ತಂದಿದೆ ಎಂದರು.

ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ, ಲೇಖಕ ಜೋಗಿ ಮಾತನಾಡಿ ಕತೆ ಹೇಳುವ ಶೈಲಿ ಮತ್ತು ವಯಸ್ಸನ್ನು ಮೀರಿ ಆಲೋಚನೆ, ಸೊಗಸಾದ ತಂತ್ರಗಾರಿಕೆಯ ಬಳಕೆ ಮತ್ತು ಇಂದಿನ ಕಾಲದ ಭಾಷೆಯನ್ನು ಹಿಡಿದಿಡುವ ನೈಜತೆ ʻಕನ್ನಡತಿʼ ರಂಜನಿ ರಾಘವನ್‌ ಅವರ ಕಥೆಗಳ ಹೆಚ್ಚುಗಾರಿಕೆ ಎಂದರು.

ಮನುಷ್ಯನ ಪಿಪಾಸುತನ ಮತ್ತು ದಾಹವನ್ನು ಹಿಡಿದಿಟ್ಟಿದ್ದಾರೆ. ಗಾಢವಾಗಿರುವ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಬದುಕನ್ನು ಸುಂದರಗೊಳಿಸುವ ಮತ್ತು ಕತೆಯಲ್ಲಿ ಬರುವ ಸೂಕ್ಷ್ಮಗಳನ್ನು ಬಹುವಾಗಿ ಹಿಡಿದಿದ್ದಾರೆ ಎಂದು ಶ್ಲಾಘಿಸಿದರು.

ಅತಿಥಿಯಾಗಿದ್ದ ಚಿತ್ರ ನಿರ್ದೇಶಕ ಜಯತೀರ್ಥ ಮಾತನಾಡಿ, ಸಂಪ್ರದಾಯದ ಹೊರೆ ಕಳಚಿ ಸತ್ಯಕ್ಕೆ ಹತ್ತಿರವಾಗುವ ಪ್ರಾಮಾಣಿಕ ಪ್ರಯತ್ನಪಟ್ಟಿದ್ದಾರೆ ಎಂದರು. ಚಿತ್ರ ನಟ ಋಷಿ ಮಾತನಾಡಿ, ಶೂಟಿಂಗ್‌ ಟೈಂನಲ್ಲಿ ಕತೆಗಳನ್ನು ಹೇಳುತ್ತಿದ್ದ ರಂಜನಿ, ಇದೀಗ ಕತೆಗಾರ್ತಿಯಾಗಿ ರೂಪುಗೊಂಡಿದ್ದಕ್ಕೆ ಹೆಮ್ಮೆಪಡುವೆ ಎಂದರು.

‘ಬಹುರೂಪಿ’ ಯ ಜಿ ಎನ್‌ ಮೋಹನ್‌, ಬಹುರೂಪಿ ಬುಕ್‌ ಹಬ್‌ ನಿರ್ದೇಶಕರಾದ ಶ್ರೀಜಾ ವಿ ಎನ್, ಧೀರಜ್‌ ಹನುಮೇಶ್ ಉಪಸ್ಥಿತರಿದ್ದರು.

ಈ ಕೃತಿಯನ್ನು ಕೊಳ್ಳಲು 70191 82729 ಸಂಪರ್ಕಿಸಿ

Comment here