ಜಸ್ಟ್ ನ್ಯೂಸ್

ಮಧುಗಿರಿಯಲ್ಲಿ ನಕಲಿ ವೈದ್ಯರ ಹಾವಳಿ

ಮಧುಗಿರಿ: ತಾಲ್ಲೂಕಿನಾಧ್ಯಂತ ನಾಯಿ ಕೊಡೆಗಳಂತೆ ಹಬ್ಬಿರುವ ನಕಲಿ ವೈದ್ಯರು ಅಮಾಯಕ ಬಡ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದರೆ ಮತ್ತೊಂದು ಕಡೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರಪಟ್ಟಿ ಪ್ರಕಟಿಸದೆ ಇರುವ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ವಿಪರ್ಯಾಸವಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಸರ್ಕಾರಗಳು ಹರಸಾಹಸ ಪಡುತ್ತಿರುವಾಗ ಯಾವ ಖಾಯಿಲೆಗೆ ಯಾವ ಚುಚ್ಚು ಮದ್ದು ನೀಡಬೇಕೆಂಬದನ್ನೇ ತಿಳಿಯದ ನಕಲಿ ವೈದ್ಯರಿಂದಾಗಿ ಜನರ ಆರೋಗ್ಯ ಹದಗೆಡುತ್ತಿದೆ.

ಆರೋಗ್ಯ ಅಧಿಕಾರಿಗಳ ಪಟ್ಟಿಯೊಂದರ ಪ್ರಕಾರ ತುಮಕೂರು ಜಿಲ್ಲೆಯಲ್ಲಿ ಸುಮಾರು 123 ಮಧುಗಿರಿ ತಾಲ್ಲೂಕಿನಲ್ಲಿ 66 ನಕಲಿ ವೈದ್ಯರಿದ್ದಾರೆಂದು ಅಂದಾಜಿಸಲಾಗಿತ್ತು.

ಆದರೆ ವಾಸ್ತವಾಗಿ ಅದಕ್ಕೆ ಮೂರುಪಟ್ಟು ನಕಲಿ ವೈದ್ಯರಿದ್ದು ಅಧಿಕಾರಿಗಳಿಗೆ ಕಪ್ಪ ಕಾಣಿಕೆಗಳನ್ನು ನೀಡಿ ಪಟ್ಟಿಯಿಂದ ಕೈಬಿಡುವಂತೆ ನೋಡಿಕೊಂಡಿರುವುದು ಸುಳ್ಳೇನಲ್ಲ.

ಇಲಾಖೆಯ ಅಧಿಕಾರಿಗಳು ಕಾಟಾಚಾರಕ್ಕೆಂಬಂತೆ ಕೆಲವೇ ಕೆಲವರ ಕ್ಲಿನಿಕ್‍ಗಳ ಮೇಲೆ ದಾಳಿ ನಡೆಸಿ ಇಲಾಖೆಯ ನಿರ್ದೇಶಕರಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ತಮ್ಮ ಪಾಲಿನ ಕರ್ತವ್ಯ ಮುಗಿಸಿ ನಕಲಿ ವೈದ್ಯರ ಕಡೆಯಿಂದ ಬರುವ ಗಿಫ್ಟ್ ಆಫರ್ ಗಳನ್ನು ಕಾಲ ಕಾಲಕ್ಕೆ ಪಡೆಯುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ತಾಲ್ಲೂಕಿನಾದ್ಯಂತ ಇರುವ ಕ್ಲಿನಿಕ್‍ಗಳು ರಾಜಾರೋಷವಾಗಿ ರೋಗಿಗಳಿಗೆ ಸ್ಟಿರಾಯ್ಡ್ ಅಂಶಗಳನ್ನು ಹೊಂದಿರುವ ಹೆಚ್ಚು ಡೋಸೇಜ್‍ನ ಔಷಧಿಗಳನ್ನು ನೀಡಿ ತಾತ್ಕಾಲಿಕವಾಗಿ ಖಾಯಿಲೆ ವಾಸಿ ಮಾಡುತ್ತಿರುವ ಈ ನಕಲಿ ವೈದ್ಯರು ಸಮೀಪದ ಔಷಧಿ ಅಂಗಡಿಗಳ ಮಾಲೀಕರೊಂದಿಗೆ ಸೇರಿ ಕಮೀಷನ್ ದಂದೆಯೊಂದನ್ನು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಪಟ್ಟಣದಲ್ಲಿನ  ಅಗತ್ಯ ಸೌಕರ್ಯಗಳಿಲ್ಲದ ಕ್ಲಿನಿಕ್‍ಗಳ ಮುಂದೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಸರದಿ ಸಾಲಿನಲ್ಲಿ ಗರ್ಭಿಣಿಯರು ನಿಲ್ಲಲು ಆಗದೆ ರಸ್ತೆ ಬದಿಗಳಲ್ಲಿನ ಮರಗಳ ಕೆಳಗೆ ನಿಂತು ಗಂಟೆಗಟ್ಟಲೆ ಕಾಯಬೇಕಿದೆ. ಹೊರ ರಾಜ್ಯದಿಂದ ಬಂದು ಇಲ್ಲಿಯೇ ನೆಲಸಿರುವ ಸಿಡಕು ಸ್ವಭಾವದ ವೈದ್ಯೆ ಸೂಚಿಸಿದ ಹಾಗೂ ಅವರ ಮೆಡಿಕಲ್ ಷಾಪ್ ನಲ್ಲಿಯೇ ಔಷಧ ಪಡೆಯುವುದರೊಂದಿಗೆ ಹೇಳಿದಷ್ಟು ಹಣ ಪಾವತಿಸಿ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆ.

ಈ ಖಾಸಗಿ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವೆರಿಗೆ 20 ಸಾವಿರ ಹಾಗೂ ಸಿಜೇರಿಯನ್‍ಗೆ 50 ಸಾವಿರ ನಗದು ಹಣ ಪಡೆಯುತ್ತಾರೆಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ತಾಲ್ಲೂಕಿನ ಕೆಲವು ಕಡೆ ಕಷ್ಟ ಪಟ್ಟು ವ್ಯಾಸಂಗ ಹಾಗೂ ಕಾನೂನು ಬದ್ಧವಾಗಿ ಪಡೆದ ಸರ್ಟಿಫಿಕೆಟ್ ವೈದ್ಯರ ವಿರುದ್ಧ ಇಲ್ಲ ಸಲ್ಲದ ಮೂಕರ್ಜಿಗಳನ್ನು ರೋಗಿಗಳಿಂದ ಆರೋಗ್ಯ ಇಲಾಖೆಗೆ ಬರೆದು ಬರೆಸಿ ಕೊಡುತ್ತಿರುವವರ ಸಂಖ್ಯೆಯು ಹೆಚ್ಚಾಗಿದೆ ಇದರಿಂದಾಗಿ ಮೂಲ ವೈದ್ಯಕೀಯ ಪ್ರಮಾಣ ಪತ್ರ ಪಡೆದವರಿಗೂ ಸಹ ಇರಿಸು ಮುರಿಸು ಉಂಟಾಗುತ್ತಿದೆ.

ಈ ಹಿಂದೆ ಸಚಿವರಾಗಿದ್ದ ರಮೇಶ್ ಕುಮಾರ್ ರವರು ಆರೋಗ್ಯ ಇಲಾಖೆಗೆ ಮೇಜರ್ ಸರ್ಜರಿ ಮಾಡಲು ಹೊರಟು ನಕಲಿ ವೈದ್ಯರೆಂದು ಧೃಢಪಟ್ಟಲ್ಲಿ 5 ಲಕ್ಷ ರೂಪಾಯಿ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ಎಂಬ ಮಸೂದೆಯನ್ನು ತರಲು ಮುಂದಾಗಿದ್ದರು. ನಂತರ ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಮಸೂದೆಯ ಕಡತಗಳು ಇಲಾಖೆಯಲ್ಲಿಯೇ ಧೂಳು ಹಿಡಿಯುವಂತಾಗಿದೆ ಎಂಬುದು ನಾಗರೀಕರ ಆರೋಪವಾಗಿದೆ.

ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಗಮನಹರಿಸಿ ನಕಲಿ ವೈದ್ಯರ ಹಾವಳಿ ಹಾಗೂ ಖಾಸಗಿ ಕ್ಲಿನಿಕ್‍ಗಳನ್ನು ನಿಯಂತ್ರಿಸಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

 

Comment here