ಕವನ

ಅಮ್ಮ ಸಾಯಲಿಲ್ಲ

ಡಾ. ರಜನಿ ಎಂ


ನಾನು ಬಟ್ಟೆ ಮೇಲೆ
ಬಿಡಿಸುವ
ಬಣ್ಣದ ಚಿತ್ತಾರದಲ್ಲಿ..

ಒಬ್ಬಟ್ಟಿನ ಹೂರಣ
ಚೆನ್ನಾಗಿ ಹುರಿ … ಎಂದು
ಹೇಳುವಾಗ.

ನಾನು ಹಾಕುವ
ಕ್ರೋಶಾ ಕೈ
ಚೀಲದಲ್ಲಿ..

ಹಸಿರು ಮಸಾಲೆಯ
ಮಟನ್
ಚಾಪ್ಸಿನಲ್ಲಿ..

ತುರುಬಿಗೆ
ಚುಚ್ಚಿದ
ಜಡೆಬಿಲ್ಲೆಯಲ್ಲಿ.

ಹೇಳಿಕೊಟ್ಟಿದ್ದ
ಕೃಷ್ಣನ ತೊಟ್ಟಿಲ
ರಂಗೋಲಿಯಲ್ಲಿ..

ಕೇಳುತ್ತಿದ್ದ
ಪಿ.ಕಾಳಿಂಗರಾವ್
ಹಾಡಿನಲ್ಲಿ..

ವಿವಿಧಭಾರತಿ
ಟ್ಯೂನ್ ನಲ್ಲಿ..

ಕಲೆಸುತ್ತಿದ್ದ ತುಪ್ಪ
ಬೇಳೆ ಸಾರಿನ
ಹದದಲ್ಲಿ.

ಹಣೆಯ
ಶಿಂಗಾರ್ ಸ್ಟಿಕರ್ ನಲ್ಲಿ
ಅವಲಕ್ಕಿ ಸರದಲ್ಲಿ
ಹರಳು ಬಳೆಯಲ್ಲಿ.

ಬೆಳ್ಳುಳ್ಳಿ ಸುಳಿಯಲು
ಬಿಡುತ್ತಿದ್ದ ಹೆಬ್ಬೆಟ್ಟು
ಉಗುರಿನಲ್ಲಿ…

ಬಾ ಊಟಕ್ಕೆ
ಎಂದು ಮುತ್ತಿಡುತ್ತಿದ್ದ
ತುಟಿಯ ಸ್ಪರ್ಶದಲ್ಲಿ…

ರಮ್ಮಿ ಕಾರ್ಡ್ ಅನ್ನೇ
ಎಸೆದು
ಥೂ …ಎನ್ನುತ್ತಿದ್ದ ವರಸೆಯಲ್ಲಿ

ಅವಿತು ಹೋಗಿದ್ದಾಳೆ..

” ಅಮ್ಮ ” “ಅಜ್ಜಿ'” ಎಂದರೆ ಅವರವರದೇ ಆದ ನೆನಪುಗಳು.
ಅದು ತಮ್ಮದೇ ವಿಶೇಷ ನೆನಪಿನ ಮೂಸೆ .
ರಂಗೋಲಿ ಬಿಡುವಾಗ, ನಗುವಾಗ , ದೋಸೆ ಹುಯ್ಯುವಾಗ, ಕಿರುಬೆರಳ ಉಗುರು …..
ಎಲ್ಲೆಂದರಲ್ಲಿ ದುತ್ತನೆ ಹಾದು ಹೋಗುತ್ತಾಳೆ.
ನಾಳೆ ನಾವೂ ಯಾವುದೋ ತೆರದಲ್ಲಿ.
ಪೀಳಿಗೆ ಪೀಳಿಗೆಗೆ ದಾಟಿ ಹೋಗುವ ನೆನಪುಗಳು.
ಆಚರಣೆಗಳು. ನೆನಪಿನ ಹಾಯಿ ದೋಣಿ ಈ ಕವನ ಓದಿದ ನಂತರ ಎಲ್ಲರಿಗೂ ಅಮ್ಮ ಅಜ್ಜಿ ನೆನೆಪು ಮರುಕಳಿಸುತ್ತದೆ.

Comment here