ತುಮಕೂರು ಲೈವ್

ಆಡುಗಳ ಮೇಲೆ ದಾಳಿ ಮಾಡಿದ ಚಿರತೆ

Publicstory. in


ತುರುವೇಕೆರೆ: ಮಾಯಸಂದ್ರ ಹೋಬಳಿ ವಡವನಗಟ್ಟ ಸಮೀಪ ಕಪ್ಪೂರು ಗ್ರಾಮದ ಹೊರವಲಯದಲ್ಲಿ ಚಿರತೆಯೊಂದು ಇಂದು ಮಧ್ಯಾಹ್ನ ಮೇಯುತ್ತಿದ್ದ ಆಡುಗಳ ಮೇಲೆ ದಾಳಿ ಮಾಡಿದ ಪರಿಣಾಮ ಒಂದು ಆಡು ಸ್ಥಳದಲ್ಲೇ ಮೃತಪಟ್ಟಿದೆ.

ಗ್ರಾಮದ ಭೈರಪ್ಪ ತಮ್ಮ ಆಡುಗಳನ್ನು ಮೇಯಲೆಂದು ಗ್ರಾಮದ ಹೊರವಲಯದ ತಮ್ಮ ಹೊಲದಲ್ಲಿ ಬಿಟ್ಟಿದ್ದರು. ಸಂಜೆ 5 ಗಂಟೆ ವೇಳೆಯಲ್ಲಿ ಚಿರತೆಯೊಂದು ಮೇಯುತ್ತಿದ್ದ ಆಡಿನ ಮೇಲೆ ದಾಳಿ ಮಾಡಿ ಅದರ ಕುತ್ತಿಗೆ ಕಚ್ಚಿ ಸಾಯಿಸಿದೆ.

ಈ ಹಠಾತ್ ಆಕ್ರಮಣದಿಂದ ವಿಹ್ವಲಗೊಂಡ ಇತರೆ ಆಡುಗಳು ಕೂಗಿದ ಶಬ್ಧ ಕೇಳಿ ಗಾಬರಿಯಿಂದ ಈಚೆ ಬಂದ ಭೈರಪ್ಪನವರ ಹೆಂಡತಿ ಚಿರತೆ ಆಡಿನ ಕುತ್ತಿಗೆ ಹಿಡಿದು ಎಳೆದಾಡುತ್ತಿರುವುದನ್ನು ನೋಡಿ ಜೋರಾಗಿ ಕೂಗಿದ್ದಾರೆ. ತಕ್ಷಣ ಚಿರತೆ ಆಡನ್ನು ಹಾಗೇ ಬಿಟ್ಟು ಓಡಿಹೋಗಿದೆ. ಈ ದುರ್ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಭೈರಪ್ಪನವರ ಮನೆಯ ಹಿಂಭಾಗದಲ್ಲಿ ಕೆಂಪವ್ವನ ಕಟ್ಟೆ ಎಂಬ ತಗ್ಗು ಪ್ರದೇಶವಿದೆ. ಸದ್ಯ ಅದರಲ್ಲಿ ನೀರಿಲ್ಲದೆ ಗಿಡಗೆಂಟೆಗಳಿಂದ ಆವೃತವಾಗಿದ್ದು ಕಾಡು ಪ್ರಾಣಿಗಳ ತಂಗುದಾಣವೆನಿಸಿದೆ. ಹಲವು ಗ್ರಾಮಸ್ಥರು ಚಿರತೆ ಆ ಪ್ರದೇಶದಲ್ಲಿ ಅಡ್ಡಾಡುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಕೂಡಲೇ ಚಿರತೆ ಹಿಡಿದು ಗ್ರಾಮಸ್ಥರಿಗೆ ರಕ್ಷಣೆ ಕೊಡಬೇಕೆಂದು ಸಾಮಾಜಿಕ ಕಾರ್ಯಕತ‍್ ರಘುಯಾದವ್ ಒತ್ತಾಯಿಸಿದ್ದಾರೆ.

Comment here