ಜಸ್ಟ್ ನ್ಯೂಸ್

ಬಿಳಿಗೆರೆ ಕೃಷ್ಣಮೂರ್ತಿ ಕೃತಿ ಬಿಡುಗಡೆ

ಮಕ್ಕಳ ಕಲ್ಪನೆಯನ್ನು ಇಂದಿನ ಶಿಕ್ಷಣ ಕೊಲ್ಲುತ್ತಿದೆ : ಜೋಗಿ ವಿಷಾದ

ಕಲ್ಪನೆಯನ್ನು ಕೊಲ್ಲುವ ಶಿಕ್ಷಣ ನಮ್ಮ ಮುಂದಿರುವುದು ವಿಷಾದಕರ ಎಂದು ಖ್ಯಾತ ಸಾಹಿತಿ, ಪತ್ರಕರ್ತ ಜೋಗಿ ಅವರು ಅಭಿಪ್ರಾಯಪಟ್ಟರು.

“ಬಹುರೂಪಿ” ಪ್ರಕಾಶನ ಹಮ್ಮಿಕೊಂಡಿದ್ದ ಬಿಳಿಗೆರೆ ಕೃಷ್ಣಮೂರ್ತಿ ಅವರ ‘ಛೂಮಂತ್ರಯ್ಯನ ಕಥೆಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ಹುಳಿಯಾರಿನ ಬಿ ಎಂ ಎಸ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆಧುನಿಕತೆಯ ಭರಾಟೆಗೆ ಉತ್ತರಿಸುವ ಭರದಲ್ಲಿ ನಾವು ಮಕ್ಕಳಿಗೆ ಕರಾರುವಾಕ್ಕುತನವನ್ನು ಕಲಿಸುತ್ತಿದ್ದೇವೆ. ಬದುಕು ಕರಾರುವಾಕ್ಕುತನದಿಂದ ಕೂಡಿರುವುದಿಲ್ಲ. ಕಲ್ಪನೆಯ ಲೋಕವನ್ನು ತೊಡೆದು ಹಾಕುವುದರ ಮೂಲಕ ನಾವು ಮಕ್ಕಳ ಬದುಕನ್ನು ನರಕವಾಗಿಸಿದ್ದೇವೆ ಎಂದರು.

ಛೂಮಂತ್ರಯ್ಯ ಎಂಬುವನು ತೇಜಸ್ವಿಯವರ ಮಂದಣ್ಣ ಹಾಗೂ ಕರ್ವಾಲೋ ಎರಡೂ ವ್ಯಕ್ತಿತ್ವದ ಅನುಭವ ಲೋಕದ ಮಿಶ್ರಣದಂತಿದೆ. ನಗರಕ್ಕಿಂತ ಭಿನ್ನವಾದ ಮತ್ತು ಸುಂದರವಾದ ಲೋಕವೊಂದು ಇದೆ ಎನ್ನುವುದನ್ನು ಕೃತಿ ಬಿಚ್ಚಿಡುತ್ತದೆ. ಸಂತೋಷದ ಮೂಲವನ್ನು ಈ ಕೃತಿ ಕಟ್ಟಿಕೊಡುತ್ತದೆ ಎಂದು ಪ್ರಶಂಸಿಸಿದರು.

ಕೃತಿಕಾರ ಬಿಳಿಗೆರೆ ಕೃಷ್ಣಮೂರ್ತಿ ಅವರು ಮಾತನಾಡಿ ಹದಿಹರಯದ ಮಕ್ಕಳಿಗೆ ಸಾಹಿತ್ಯವೇ ಇಲ್ಲ. ಆ ಕೊರತೆಯನ್ನು ತುಂಬಿಸಲು ಈ ಕೃತಿಯ ಮೂಲಕ ಪ್ರಯತ್ನಿಸಿದ್ದೇನೆ ಎಂದರು.

‘ಅನ್ವೇಷಣೆ’ ಪತ್ರಿಕೆಯ ಸಂಪಾದಕ ಆರ್ ಜಿ ಹಳ್ಳಿ ನಾಗರಾಜ್, ವಿಮರ್ಶಕ ಬೆಳಗುಲಿ ನಾಗಭೂಷಣ್, ಬಹುರೂಪಿಯ ಜಿ ಎನ್ ಮೋಹನ್ ಮಾತನಾಡಿದರು.
ಖ್ಯಾತ ಸಹಜ ಕೃಷಿಕ ಶಿವನಂಜಯ್ಯ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು.

Comment here