ತುಮಕೂರು; ತುಮಕೂರು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಡಾ. ಸುರೇಶಬಾಬು ಅಧಿಕಾರ ಸ್ವೀಕರಿಸಿದ್ದಾರೆ.
ಸುರೇಶಬಾಬು ಅವರು ಡಾ.ವೀರಭದ್ರಯ್ಯ ಅವರಿಂದ ಅಧಿಕಾರ ಪಡೆದುಕೊಂಡರು.
ಜಿಲ್ಲಾಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿದ್ದ ಸುರೇಶಬಾಬು ಹಿರಿಯ ವೈದ್ಯರು.ಈ ಹಿಂದೆ ಅವರು ಜಿಲ್ಲಾ ಶಸ್ತ್ರಚಿಕಿತ್ಸರಾಗಿ ಅಧಿಕಾರ ಸ್ವೀಕರಿಸಿದ್ದ ಕೆಲವೇ ತಿಂಗಳಲ್ಲಿ ಅವರನ್ನು ಅಧಿಕಾರದಿಂದ ಇಳಿಸಿ ಡಾ. ವೀರಭದ್ರಯ್ಯ ಅವರನ್ನು ಸರ್ಕಾರ ಜಿಲ್ಲಾ ಶಸ್ತ್ರಚಿಕಿತ್ಸರಾಗಿ ನೇಮಕ ಮಾಡಿತ್ತು.
ಸರ್ಕಾರದ ಈ ಕ್ರಮದ ವಿರುದ್ಧ ಸುರೇಶಬಾಬು ಅವರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರು ಅಧಿಕಾರ ಸ್ವೀಕರಿಸಿದರು.
ಅವರ ಸೇವಾವಧಿ ಇನ್ನು ನಾಲ್ಕು ತಿಂಗಳಷ್ಟೆ ಉಳಿದಿದೆ. ಅಲ್ಲಿಯವರೆಗೂ ಅವರು ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಸೇವಾ ನಿಯಮಗಳನ್ನು ಸರಿಯಾಗಿ ರೂಪಿಸಿಲ್ಲದ ಕಾರಣ ಕಿರಿಯ ವೈದ್ಯರು ಸಹ ಉನ್ನತ ಹುದ್ದೆ ಅಲಂಕರಿಸುತ್ತಾರೆ. ರಾಜಕೀಯ ಪ್ರಭಾವ ಇಲ್ಲದ ಹಿರಿಯ ವೈದ್ಯರು ಹುದ್ದೆಗಳಿಗೆ ನೇಮಕವಾಗಲು ಸಾಧ್ಯವಾಗದೇ ಕಿರಿಯರ ಕೆಳಗೆ ಕೆಲಸ ನಿರ್ವಹಿಸಬೇಕಾಗಿದೆ ಎಂಬುದು ಹಿರಿಯ ವೈದ್ಯರುಗಳ ಆರೋಪವಾಗಿದೆ.
ಇತರೆ ಇಲಾಖೆಗಳಲ್ಲಿ ಸೇವಾ ಹಿರಿತನದ ಮೇಲೆ ಹುದ್ದೆ ಸಿಕ್ಕರೆ ಇಲ್ಲಿ ತದ್ವಿರುದ್ಧ.ರಾಜ್ಯ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಸಂಘದ ನೂತನ ಅಧ್ಯಕ್ಷರಾದ ಡಾ.ದೇಸಾಯಿ ಈ ಬಗ್ಗೆ ಈಗಾಗಲೇ ದನಿ ತೆಗೆದಿದ್ದಾರೆ.
ಸರ್ಕಾರದ ಇತರೆ ಇಲಾಖೆಗಳಂತೆ ಆರೋಗ್ಯ ಇಲಾಖೆಯಲ್ಲು ಸೇವಾ ಹಿರಿತನ ನಿಯಮಗಳನ್ನು ರೂಪಿಸಬೇಕಾಗಿದೆ ಎಂಬ ಬೇಡಿಕೆಯನ್ನು ಅವರು ಈಗಾಗಲೇ ಮುಂದಿಟ್ಟಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
Comment here