ತುಮಕೂರು ಲೈವ್

ತುಮಕೂರಿನಲ್ಲಿ ಮುಂದಿನ ವಾರ ಲಾಕ್ ಡೌನ್ ತೆರವು?

Public story


ತುಮಕೂರು: ಮುಂದಿನ ಒಂದು ವಾರದಲ್ಲಿ ನಿರೀಕ್ಷೆಯಂತೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದರೆ ಲಾಕ್‌ಡೌನ್ ತೆರವುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯ ಇನ್ನೂ ಕೆಲವು ಪ್ರದೇಶಗಳಲ್ಲಿ ಜಿಲ್ಲಾಡಳಿತದ ನಿರೀಕ್ಷೆಯಂತೆ ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ. ಈಗಲೂ ಇರುವ ಕೆಂಪು ವಲಯ ಮತ್ತು ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ತೆರವಿಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಕೊರೋನಾ ಸೋಂಕಿತರ ಸಂಖ್ಯೆಯ ಹೆಚ್ಚಳದಿಂದಾಗಿ ಶಿರಾ ತಾಲೂಕು ಸೇರಿದಂತೆ ಉಳಿದ ತಾಲೂಕುಗಳ ಭಾಗಗಳು ಕೆಂಪುವಲಯ ಹಾಗೂ ಹಾಟ್‌ಸ್ಪಾಟ್ ಪ್ರದೇಶಗಳನ್ನಾಗಿ ಗುರತಿಸಲಾಗಿದೆ. ಈ ಪ್ರದೇಶಗಳಲ್ಲಿ ಸೋಂಕನ್ನು ನಿಯಂತ್ರಣಕ್ಕೆ ತಂದು ಆ ಪ್ರದೇಶಗಳನ್ನು ಕೆಂಪುವಲಯ ಹಾಗೂ ಹಾಟ್‌ಸ್ಪಾಟ್‌ಗಳಿಂದ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ
ಸೋಂಕಿತರ ಸಂಪರ್ಕಿತರ ಬಗ್ಗೆ ನಿಗಾವಹಿಸಬೇಕು. ರೋಗಲಕ್ಷಣಗಳುಳ್ಳ ಸೋಂಕಿತರ ಸಂಪರ್ಕಿತರು ಹಾಗೂ ಸೋಂಕಿತರ ಕುಟುಂಬಸ್ಥರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಬೇಕು. ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರನ್ನು ಬಳಸಿಕೊಂಡು ಕೋವಿಡ್ ಸೋಂಕಿತರ ಆರೋಗ್ಯದ ಬಗ್ಗೆ ಸದಾ ಗಮನಹರಿಸುವಂತೆ ನಿರ್ದೇಶಿಸಿದರು.

ಆರ್‌ಸಿಎಚ್ ಅಧಿಕಾರಿ ಡಾ. ಕೇಶವರಾಜ್ ಮಾತನಾಡಿ, ಜಿಲ್ಲೆಗೆ ಪೂರೈಕೆಯಾಗುತ್ತಿರುವ ಲಸಿಕೆಯನ್ನು ತಾಲೂಕುವಾರು ಜನಸಂಖ್ಯೆಗನುಗುಣವಾಗಿ ಲಸಿಕಾಕರಣ ಕಾರ್ಯ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆಯಾಗದಂತೆ ಲಸಿಕಾ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಲಸಿಕೆ ಪೂರೈಕೆಯಾಗುವ ಸಾಧ್ಯತೆಯಿದೆ. ಹೆಚ್ಚು ಲಸಿಕೆ ಬಂದ ತಕ್ಷಣ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ವರ್ಗದವರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರಿಗೆ ಮಾಹಿತಿ ಒದಗಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಬಾಬು ಮಾತನಾಡಿ, ಜಿಲ್ಲೆಯಲ್ಲಿ ಪತ್ತೆಯಾಗಿರುವ ಬ್ಲಾಕ್ ಫಂಗಸ್ ರೋಗಿಗಳಿಗೆ ಸೂಕ್ತವಾಗಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕವಿದ್ದಲ್ಲಿ ಮಾತ್ರ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ ಎಂದ ಅವರು ಜಿಲ್ಲೆಗೆ ಹೆಚ್ಚಿನ ಔಷಧಗಳ ಲಭ್ಯತೆಯ ಅವಶ್ಯಕವಿದೆ ಎಂದು ವಿವರಣೆ ನೀಡಿದರು.

*ಮೂರನೇ ಅಲೆ ಎದುರಿಸಲು ಸಿದ್ಧತೆಗೆ ಕ್ರಮ*:


ತಜ್ಞರ ವರದಿ ಪ್ರಕಾರ ಕೋವಿಡ್ 3ನೇ ಅಲೆ ಬರುವ ಸಾಧ್ಯತೆಯಿದ್ದು, ಮೂರನೇ ಅಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಮೂರನೇ ಅಲೆ ಮಕ್ಕಳಿಗೆ ಹೆಚ್ಚಾಗಿ ತಗುಲುವ ನಿರೀಕ್ಷೆಯಿದೆ. ಹಾಗಾಗಿ ಎಲ್ಲಾ ಅಧಿಕಾರಿಗಳೂ ಸಮನ್ವಯ ಸಾಧಿಸಿ ಚಿಕಿತ್ಸೆಗೆ ಕೊರತೆಯುಂಟಾಗದಂತೆ ಎಚ್ಚರಿಕೆ ವಹಿಸಬೇಕು. ಈಗಿನಿಂದಲೇ ಹೆಚ್ಚು ನಿಗಾವಹಿಸಿ ಅಪೌಷ್ಟಿಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಅಂಗನವಾಡಿ ಮಟ್ಟದಲ್ಲಿಯೇ ಅಪೌಷ್ಟಿಕ ಮಕ್ಕಳಿಗೆ ಸೂಕ್ಷ್ಮ ಪೋಷಕಾಂಶವುಳ್ಳ ಆಹಾರ ವಿತರಣೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ನಿರ್ದೇಶಿಸಿದರು.

ಕೋವಿಡ್ ಮೂರನೆ ಅಲೆಯಿಂದ ಮಕ್ಕಳು ಬಾಧಿತರಾಗಬಾರದು. ಈ ನಿಟ್ಟಿನಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸಿಕೊಳ್ಳಬೇಕು. ಜಿಲ್ಲೆಯಲ್ಲಿನ ಹಾಲು ಉತ್ಪಾದಕ ಸೊಸೈಟಿಗಳಿಂದ ಅತ್ಯುತ್ತಮ ಗುಣಮಟ್ಟದ ಪೌಷ್ಟಿಕ ಹಾಲು ಮತ್ತು ಉತ್ಪನ್ನಗಳನ್ನು ಒದಗಿಸುವ ಸಂಬಂಧ ಸಭೆ ಕರೆದು ಚರ್ಚಿಸಬೇಕು. ಒಟ್ಟಾರೆ ಮೂರಲೇ ಕೋವಿಡ್ ಅಲೆಯಿಂದಾಗಿ ಜಿಲ್ಲೆ ನಲುಗದಂತೆ ಕ್ರಮವಹಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಶಿಶು ತಜ್ಞ ವೈದ್ಯರೊಂದಿಗೆ ಸಭೆ ನಡೆಸಿ ಮೂರನೇ ಅಲೆ ನಿಯಂತ್ರಣಕ್ಕೆ ಬೇಕಾದ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಸೇರಿದಂತೆ ವಿವಿಧ ಅಧಿಕಾರಿಗಳಿದ್ದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಏಪ್ರಿಲ್ ಹಾಗೂ ಮೇ ಮಾಹೆಯಲ್ಲಿ ಒಟ್ಟು 7579 ಮಕ್ಕಳಲ್ಲಿ ಕೊರೋನಾ ಸೋಂಕು ಕಂಡು ಬಂದಿತ್ತು. ಆದರೆ, ಈ ಅವಧಿಯಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಒಂದು ಮಗು ಮಾತ್ರ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಕೋವಿಡ್‌ನಿಂದ ಸಾವನ್ನಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಾದ್ಯಂತ 8672 ಅಪೌಷ್ಟಿಕವುಳ್ಳ ಹಾಗೂ ವಿವಿಧ ಗಂಭಿರ ಖಾಯಿಲೆಗಳಿಂದ ಬಳಲುತ್ತಿರುವ 2200 ಮಕ್ಕಳನ್ನು ಗುರುತಿಸಲಾಗಿದ್ದು, ಈ ಮಕ್ಕಳ ಆರೋಗ್ಯದ ಕಡೆ ನಿಗಾ ವಹಿಸಬೇಕೆಂದು ಸೂಚನೆ ನೀಡಲಾಗಿದೆ. ಅಪೌಷ್ಠಿಕ ಮಕ್ಕಳಿಗೆ ಡೈರಿಯಿಂದ ನಿತ್ಯ 200 ಎಂ.ಎಲ್. ಹಾಲು ಹಾಗೂ ಇನ್ನಿತರ ದಾನಿಗಳ ನೆರವಿನಿಂದ ಪೌಷ್ಠಿಕ ಆಹಾರ ವಿತರಣೆಗೆ ಚಿಂತನೆ ನಡೆಸಲಾಗುತ್ತಿದೆ. ಗುರುತಿಸಲಾಗಿರುವ ಈ ಮಕ್ಕಳನ್ನು ಉತ್ತಮ ಆರೋಗ್ಯ ಸ್ಥಿತಿಗೆ ಮರಳಿದುವುದು ಮುಖ್ಯ ಉದ್ದೇಶವಾಗಿದೆ. ಈಗಾಗಲೇ ವಿವಿಧ ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ಮೂರನೇ ಅಲೆಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಜ್ವರ, ತಲೆನೋವಿನಂತಹ ಲಕ್ಷಣಗಳು ಬರುವುದಿಲ್ಲ. ಕೊರೋನಾ ವೈರಸ್ ಬೇರೆ ರೀತಿಯಲ್ಲಿ ರೂಪಾಂತರ ಹೊಂದಬಹುದೆನ್ನುವ ಬಗ್ಗೆ ಚರ್ಚೆಯಾಗುತ್ತಿದೆ.
ಕೆಲವು ಮಾಹಿತಿಯ ಪ್ರಕಾರ ಶೇ.90ರಷ್ಡು ಕಣ್ಣು ಕೆಂಪಗಾಗಿ ಕಣ್ಣಿನ ಬಳಿ ಗುಳ್ಳೆಗಳಾಗುವ ಸಾಧ್ಯತೆ ಇದೆ. ವಾಂತಿ ಅಥವಾ ಬೇಧಿಯಾಗುತ್ತದೆ. ವಾಂತಿ ಅಥವಾ ಬೇಧಿಯಾಗುವ ಮಕ್ಕಳನ್ನು ಕೋವಿಡ್ ಎಂದು ಚಿಕಿತ್ಸೆ ಮಾಡಲಾಗುತ್ತದೆ.

ಕಣ್ಣು ಕೆಂಪಗಾಗಿ ಕಣ್ಣಿನ ಬಳಿ ಗುಳ್ಳೆಗಳಾಗಬಹುದೆಂಬ ಲಕ್ಷಣದ ಬಗ್ಗೆ ಇನ್ನೂ ಶೇ.100ರಷ್ಟು ಖಚಿತವಾಗಿಲ್ಲ. ಸಾಮಾನ್ಯ ರೋಗ ಲಕ್ಷಣಗಳು ಕಂಡುಬಂದಲ್ಲಿ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ. ರೋಗ ಲಕ್ಷಣ ಕಂಡು ಬಂದ ಮಕ್ಕಳ ಆರೈಕೆಗಾಗಿ ಈಗಾಗಲೇ 600 ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸರ್ಕಾರದ 18 ಸೇರಿದಂತೆ ಒಟ್ಟು 70 ಮಕ್ಕಳ ವೈದ್ಯರಿದ್ದು ಅವರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಬೆಂಗಳೂರಿನಿಂದ ಓರ್ವ ತಜ್ಞರನ್ನು ಕರೆಸಿ ಎಲ್ಲ ವೈದ್ಯರೊಂದಿಗೆ ಸಭೆ ನಡೆಸಲಾಗುವುದು.

ಖಾಸಗಿ 85 ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ 74 ಐಸಿಯು ವೆಂಟಿಲೇಟರ್‌ಗಳಿದ್ದು, ಅಗತ್ಯಕ್ಕೆ ಅನುಗುಣವಾಗಿ ಮಕ್ಕಳ ವೆಂಟಿಲೇಟರ್‌ಗಳನ್ನಾಗಿ ಮಾರ್ಪಾಡು ಮಾಡಲಾಗುವುದು. ಮಕ್ಕಳಿಗೆ ಸರಿ ಹೊಂದುವ ಮಾಸ್ಕ್ ವಿತರಣೆಗೂ ತಯಾರಿ ನಡೆಸಲಾಗಿದೆ ಎಂದು ಹೇಳಿದರು.

ಅಂಗನವಾಡಿಯಿಂದ ಸ್ವಿರುಲಿನಾ ಚಿಕ್ಕಿ ವಿತರಣೆ ಮಾಡುತ್ತಿದ್ದು, ಇದರ ಜೊತೆಗೆ ಪೌಷ್ಠಿಕಯುಕ್ತ ಆಹಾರ ಪದಾರ್ಥ ವಿತರಿಸಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರಮಜರುಗಿಸಲಾಗುವುದು. ಮೂರನೇ ಅಲೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಅಂಗನವಾಡಿಯಲ್ಲಿ ,145811 ಶಾಲೆಯಲ್ಲಿ 2.44 ಲಕ್ಷ ಸೇರಿ ಒಟ್ಟು 3.81ಲಕ್ಷ ಮಕ್ಕಳಿದ್ದಾರೆ. ಈ ಪೈಕಿ 8672 ಅಪೌಷ್ಟಿಕ, 127 ತೀವ್ರ ಅಪೌಷ್ಟಿಕ ಮಕ್ಕಳಿದ್ದಾರೆ. ಸರ್ಕಾರದಿಂದ ಸಿಗುವ ಎಲ್ಲಾ ಪೌಷ್ಟಿಕಾಂಶಗಳನ್ನು ಸೂಕ್ತ ರೀತಿಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.

Comment here