ಕವನ

ಮತ್ತೆ ಬಂದ ವಸಂತ


ಬೋಳಾದ
ಮರಗಳಿಗೆ
ಹೂವಿನ ಹೊದಿಕೆ.

ಒಣಗಿ ಅದುರಿ
ಉದುರಿದ
ಎಲೆಗಳ ಹಾಸಿಗೆ
ಗೊಬ್ಬರ…ಚಿಗುರಿದ ಗಟ್ಟಿ
ಎಳೆಯ ಎಲೆಗಳಿಗೆ.

ಮಣ್ಣಿನ ಹೆಂಟೆಗಳೂ
ಹಸಿರು ಹುಲ್ಲಿನ
ಬಟ್ಟೆ ತೊಟ್ಟು.

ತೂರಿ ಬಂದ
ಹೊಂಗೆ ಹೂವ
ಗಮಲು ತಂದ ಮತ್ತು.

ದುಂಬಿ.. ಜೇನ್ನೊಣ
ಗಳ.. ಹೊಟ್ಟೆ ತುಂಬಿದ
ಮರುಳು
ಮಾಡುವ ರಾಗ.

ನಿನಗೆ ಹೊಸ
ಹಸುರುಡುಗೆ ಎಂದು
ನಾನೂ ಹೊಸ ಬಟ್ಟೆ ತೊಟ್ಟು…

ಒಣಗಿದ್ದ
ಬೋಳು ಬರಿದು
ಮರದ ಒಳಗೆ
ಅವಿತಿದ್ದ ಜೀವ ಚೈತನ್ಯ.

ಕಾದು ಕುಳಿತಿದ್ದ
ಜೀವ ಸೆಲೆ
ಮೊಳಕೆಯೊಡೆಯಲು.

ಕಳಚಿದ ಎಲೆ
ಕರೆಯಲಿಲ್ಲ
ಕೊರಗಲಿಲ್ಲ…
ಮತ್ತೆ ಮರು ಹುಟ್ಟು ಪಡೆದು…

ಭೂಮಿಯೊಳಗಡೆ
ಯಿoದ ಹೊರಟ
ಅಷ್ಟೂ ಬಣ್ಣಗಳೂ
ಎಲ್ಲಿ ಅವಿತ್ತಿದ್ದೋ?

ಯುಗಾದಿಗೂ
ವಸಂತನಿಗೂ
ತಳುಕು….
ಮಾವಿನ ಚಿಗುರು
ಬೇವಿನ ಹೂ…ಅರಳುವ ಸಮಯ..

ವಸಂತದಲ್ಲೇ
ಚಿತ್ರಿಸುವ
ಚಿತ್ರಗಾರ …

ಕಾಮನ ಸುಟ್ಟ
ಮೇಲೆ …ಎರಚಿದ
ರಂಗುನೋಕುಳಿ … ಕಾರಣ?

ಕುಹೂ ಕುಹೂ
ಕೂಗಿ ಕರೆದು..
ಮಾನವ ಬರೇ ಕಣ್ಸನ್ನೆ…

ಮತ್ತು ಬರಿಸುವ
ಹೊಂಗೆ ನೆರಳೂ..
ಅರಳಿದ ಜಾಲಾರ…
ಹಸಿರ ಹುಲ್ಲ ಹಾಸಿಗೆ…

ಯಾರಿಗೆ ವಸಂತ
ನಿನ್ನ ತಯಾರಿ…

ಪ್ರೀತಿಸುವ ಹೃದಯಕ್ಕೂ
ಆಸ್ವಾದಿಸುವ ಕಣ್ಣಿಗೂ..

ಅರಳಿ ಪ್ರತಿ ದಿನ
ಮಾಗಿದ ಹೂವೂ

ಬಿದ್ದ ಹನಿಗೆ
ಮಣ್ಣಿನ ವಾಸನೆ..

ರಜನಿ

Comments (1)

  1. ವಸಂತ ಕಾಲದ ವರ್ಣನೆ ತುಂಬಾ ಸುಂದರವಾಗಿದೆ

Comment here