ತುಮಕೂರು ಲೈವ್

ಮೀಸಲಾತಿ ಹೋರಾಟಕ್ಕೆ ಶಿರಾ ಕುರುಬರ‌ ಸಾಥ್…

Publicstory


ಸಿರಾ: ಕುರುಬ ಸಮುದಾಯಕ್ಕೆ ಎಸ್‌ ಟಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ, ಜನವರಿ15ರಿಂದ ಕಾಗಿನೆಲೆ ಮಹಾಸಂಸ್ಥಾನದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ತಾಲ್ಲೂಕಿನ ಕುರುಬರು ಒಗ್ಗಟ್ಟು ಪ್ರದರ್ಶಿಸಿ, ಸಂವಿಧಾನಾತ್ಮಕ ಹಕ್ಕು ಮತ್ತು ಸಮಾನತೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಾಳಿದಾಸ ವಿದ್ಯಾವರ್ಧಕ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಕರೆನೀಡಿದರು.

ಸಿರಾ ನಗರದ ಶ್ರೀ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ʼಕುರುಬ ಸಮುದಾಯಕ್ಕೆ ಎಸ್‌ ಟಿ ಮೀಸಲಾತಿ ಹೋರಾಟದ ಪಾದಯಾತ್ರೆʼ ಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜಗದ್ಗುರುಗಳ ನೇತೃತ್ವದಲ್ಲಿ 4 ವಿಭಾಗಗಳ ಶ್ರೀಗಳೊಂದಿಗೆ ಜನವರಿ 15ರಂದು ಕಾಗಿನೆಲೆಯಿಂದ ಹೊರಡುವ ಪಾದಯಾತ್ರೆಯು ಜನವರಿ 28ರಂದು ತಾಲ್ಲೂಕಿಗೆ ಆಗಮಿಸಲಿದ್ದು, ಅಂದು ಕುರುಬ ಸಮುದಾಯದ ಎಲ್ಲಾ ಜನರು ಬೆಳಿಗ್ಗೆ 6 ಗಂಟೆಗೆ ಸೇರಿ, ಇಡೀ ದಿನ ಪಾದಯಾತ್ರೆಯ ಜತೆಗಿದ್ದು, ರಾತ್ರಿ ಸಿರಾ ನಗರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಾಸ್ತವ್ಯಕ್ಕೆ ಬೇಕಾದ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ತಿಳಿಸಿದರು.

ಸಮಾಜದ ಮುಖಂಡ ಎಸ್‌ ಎಲ್‌ ರಂಗನಾಥ್‌ ಮಾತನಾಡಿ, ರಾಜ್ಯದ ಕುರುಬ ಸಮುದಾಯದ ನಾಯಕರು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಎಸ್‌ ಟಿ ಹೋರಾಟಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಲು ತೀರ್ಮಾನಿಸಿದ್ದಾರೆ. ನಮ್ಮ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರುವುದಿಲ್ಲ ಆದ್ದರಿಂದ ಸಮುದಾಯದ ಜನ ಯಾವುದೇ ಅಪಪ್ರಚಾರಗಳಿಗೆ ಕಿವಿ ಕೊಡದೆ, ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.

ಹಿರಿಯ ಮುಖಂಡ ಬಿ.ಜಿ.ಕರಿಯಪ್ಪ ಮಾತನಾಡಿ, ಈ ಹಿಂದೆ ಕುರುಬ ಸಮುದಾಯವನ್ನು‌ ಎಸ್‌ ಟಿ ಸಮುದಾಯಕ್ಕೆ ಸೇರಿಸಲಾಗಿತ್ತು. ಆದರೆ ಅಂದಿನ ರಾಜಕೀಯ ಇಚ್ಚಾಶಕ್ತಿ ಇಲ್ಲದೇ ಮತ್ತು ರಾಜಕೀಯ ನಾಯಕರ ಕೈವಾಡದಿಂದ ಎಸ್‌ ಟಿ ಹೋರಾಟದಿಂದ ಕೈಬಿಡಲಾಗಿದೆ.

ಆದರೆ ಈಗ ನಮ್ಮ ಹಕ್ಕು ಪಡೆಯಲು ಹೋರಾಡಲೇ ಬೇಕಾದ ಅನಿವಾರ್ಯತೆ ಇದೆ ಎಂದರು.
ರೇವಣಸಿದ್ದೇಶ್ವರ ಮಠದ ಬಿಂದುಶೇಖರ ಒಡೆಯರ್‌ ಮಾತನಾಡಿ, ಜಗದ್ಗುರುಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಯಾರನ್ನೂ ಕರೆಯಬೇಕಾದ ಅವಶ್ಯಕತೆ ಇಲ್ಲ. ಎಲ್ಲರೂ ಸಹ ನಮ್ಮ ಮನೆ ಕೆಲಸ ಎಂದು ಭಾವಿಸಿ, ಐತಿಹಾಸಿಕ ಈ ಹೋರಾಟಕ್ಕೆ ಧುಮುಕಿ, ನಮಗೆ ಸಿಗಬೇಕಾದ ಸಂವಿಧಾನಾತ್ಮಕ ಹಕ್ಕು ಪಡೆಯಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಡಾ.ಮಂಜುನಾಥ್‌, ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಮಂಜುನಾಥ್‌, ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ.ಮಂಜುನಾಥ್‌, ಮುಖಂಡ ಬರಗೂರು ನಟರಾಜು, ಬರಗೂರು ಶ್ರೀನಿವಾಸ್‌, ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಬಸ್‌ ಶಿವಶಂಕರ್‌, ಎಲ್.ಭಾನುಪ್ರಕಾಶ್‌, ಪುರುಷೋತ್ತಮ್‌, ಸಿದ್ಧರಾಜು, ಕೆಂಚಧ್ಯಾಮಣ್ಣ, ಪಾಂಡುರಂಗಯ್ಯ, ಕನಕ ಮಹಿಳಾ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಲಕ್ಷ್ಮೀದೇವಿ ಸಾವಂತಿಗೆ, ವಿ.ಜಿ.ಧೃವಕುಮಾರ್‌, ಶಿವಕುಮಾರ್‌ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಕುರುಬ ಸಮಾಜದ ಮುಖಂಡರು ಹಾಜರಿದ್ದರು.

Comment here