ಧಾರ್ಮಿಕ

ಗಣಪನ ಮೂರ್ತಿಯೊಂದಿಗೆ ಪುನೀತ್ ಪುತ್ಥಳಿ

Publicstory/prajayoga

– ವಿಶೇಷ ವರದಿ, ಮಿಥುನ್ ತಿಪಟೂರು.

ಅಪ್ಪು ಅವರ ನಗುಮೊಗದ ಗಲ್ಲವ ಹಿಡಿದು ಕುಳಿತ ಗಣಪ ಮೂರ್ತಿ

ತಿಪಟೂರು:  ಗಣೇಶ ಚತುರ್ಥಿ ನಾಡಿನ ಜನರ ಬಹು ಅಚ್ಚುಮೆಚ್ಚಿನ ಹಬ್ಬ. ಒಂದು ದಿನಕ್ಕೆ ಮುಗಿಯದೆ ವಾರ, ತಿಂಗಳು ಪೂರ್ತಿಯೂ ಆಚರಿಸಲ್ಪಡುತ್ತದೆ. ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ನಗರದಲ್ಲಿ ಜನರು ಸಡಗರದಿಂದ ಸಂಭ್ರಮಕ್ಕೆ ಅಣಿಯಾಗುತ್ತಿದ್ದಾರೆ.

ದೇಶದಾದ್ಯಂತ ಗಣೇಶ ಚತುರ್ಥಿ ಸಮೀಪಿಸುತ್ತಿರುವ ಹಿನ್ನೆಲೆ ಗಣೇಶ ವಿಗ್ರಹ ಮೂರ್ತಿಗಳ ಬೇಡಿಕೆ ಹೆಚ್ಚಾಗಿದೆ. ಕರ್ನಾಟಕದಲ್ಲಿಯೂ ವಿಶೇಷ ರೀತಿಯ ಗಣಪತಿ ವಿಗ್ರಹ ಮೂರ್ತಿ ಗಳಿಗೆ ಭಾರಿ ಬೇಡಿಕೆ ಇದೆ.

ಈ ನಡುವೆ ಡಾ.ರಾಜ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಗೆಳೆಯರ ಬಳಗದ ವತಿಯಿಂದ ಈ ಬಾರಿ ತಿಪಟೂರಿನಲ್ಲಿ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಇರುವ ಗಣಪತಿ ಮೂರ್ತಿ ತಯಾರಿಸಿರುವುದು ವಿಶೇಷವಾಗಿ ಕಂಡು ಬರುತ್ತಿದೆ‌. 

ಕಲಾವಿದ

ವಿಗ್ರಹ ಕಲಾವಿದ ಚೇತನ್  ಮಾಧ್ಯಮದೊಂದಿಗೆ ಮಾತನಾಡಿ, ನಾವು ಮತ್ತು ನಮ್ಮ ತಂದೆ ಕಳೆದ ಮೂವತ್ತು ವರ್ಷಗಳಿಂದ ಗಣಪತಿ ವಿಗ್ರಹ ತಯಾರಿಕೆಯಲ್ಲಿ ತೊಡಗಿದ್ದೇವೆ. ತಿಪಟೂರು ಗಣಪತಿಯನ್ನು ಎರಡು ವರ್ಷಗಳಿಂದ ನಾನೇ ಮಾಡುತ್ತಿದ್ದೇನೆ. ಈ ಸಲ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಇರುವ ಗಣಪತಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಪ್ರತಿಕ್ರಿಯಿಸಿದರು.

ಸೂರ್ಯಪ್ರಕಾಶ್

ಈ ಬಾರಿಯ ಗಣೇಶೋತ್ಸವದಲ್ಲಿ ಪುನೀತ್ ಅಣ್ಣ ಇಲ್ಲದ ಕಾರಣ ಅವರ ಸ್ಮರಣಾರ್ಥವಾಗಿ  ಗಣಪತಿಯೊಂದಿಗೆ ಅವರ ವಿಗ್ರಹ ಮೂರ್ತಿಯನ್ನು ಮಾಡಿಸಲಾಗಿದೆ ಎಂದುಪುನೀತ್ ರಾಜ್ ಕುಮಾರ್ ಗೆಳೆಯರ ಬಳಗದ ಸದಸ್ಯ ಸೂರ್ಯಪ್ರಕಾಶ್ ಪ್ರಜಾಯೋಗ ದಿನ ಪತ್ರಿಕೆ ಹಾಗೂ ಪಬ್ಲಿಕ್ ಸ್ಟೋರಿಗೆ ತಿಳಿಸಿದರು‌.

ತಿಪಟೂರಿನಲ್ಲಿ ಈ ಬಾರಿ ನೂರಕ್ಕೂ ಸ್ಥಳಗಳಲ್ಲಿ ಸರ್ಪದ ಎಡೆಯೊಂದಿಗೆ ಗೌರಿ ಹಾಗೂ ವೆಂಕಟೇಶ್ವರನ ಸ್ವರೂಪದಲ್ಲಿರುವ ಆಕರ್ಷಕ ಗಣಪನ ಮೂರ್ತಿಗಳನ್ನು ಮಾರಾಟ ಮಾಡುತ್ತಿರುವುದು ಎಲ್ಲರ ಗಮನ ಸೆಳೆಯಿತು.

Comment here