ಪೊಲಿಟಿಕಲ್

ಪತ್ರಕರ್ತರು ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಿ : ರಂಗಸ್ವಾಮಿ  

Publicstory/prajayoga

ಕುಣಿಗಲ್ : ಪತ್ರಿಕಾ ವೃತ್ತಿ ಅತ್ಯಂತ ಪವಿತ್ರವಾದದ್ದು ಹಾಗೂ ಮೌಲ್ಯಧಾರಿತವಾದದ್ದು. ಹಾಗಾಗಿ ಪತ್ರಿಕೆಗಳು ನೊಂದವರ, ಕಣ್ಣೀರು ಒರೆಸುವ ಕೆಲಸ ಮಾಡಬೇಕೆಂದು ಪುರಸಭಾ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ 2022 ಹಾಗೂ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮಗಾಂಧಿಜಿ, ಜವಹರ ಲಾಲ್ ನೆಹರು, ಡಾ.ಬಿ.ಆರ್.ಅಂಬೇಡ್ಕರ್, ಸರ್ಧಾರ್ ವಲ್ಲಭಾಯಿ ಪಟೇಲ್, ಜಾನ್ಸಿರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಕಿತ್ತೂರುರಾಣಿ ಚನ್ನಮ್ಮ ಮೊದಲಾದ ಲಕ್ಷಾಂತರ ಮಂದಿ ಅವಿರತ ಚಳುವಳಿ, ಹೋರಾಟ ನಡೆಸಿದರು. ಅವರಂತೆ ಪತ್ರಿಕಾ ರಂಗವು ಬ್ರಿಟೀಷರ ಗುಲಾಮ ಗಿರಿಯಿಂದ ಭಾರತವನ್ನು ಮುಕ್ತಗೊಳಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಮುಖ ಪಾತ್ರ ವಹಿಸಿದೆ ಎಂದರು.

ಮಳೆ, ಚಳಿ, ಗಾಳಿ, ಬಿಸಿಲು ಎನ್ನದೇ ರಜೆ ಇಲ್ಲದೆ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಜೀವನ ಭದ್ರತೆ ಸರ್ಕಾರ ಒದಗಿಸದೇ ಇರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ಈ ಬಾರಿ ಪುರಸಭಾ ಬಜೆಟ್ನಲ್ಲಿ ಪತ್ರಕರ್ತರ ಆರೋಗ್ಯ ವಿಮೆಗೆ ಹಣ ಕಾದಿರಿಸಿ ಈಗಾಗಲೇ 20 ಮಂದಿ ಪತ್ರಿಕಾ ವರದಿಗಾರರಿಗೆ ವಿಮೆ ಮಾಡಿಸಲಾಗಿದೆ. ಮುಂದಿನ ದಿನದಲ್ಲಿ  ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಎಚ್.ಡಿ.ರಂಗನಾಥ್ ಅವರ ಮಾರ್ಗದರ್ಶನದಲ್ಲಿ ಪತ್ರಿಕಾ ಭವನಕ್ಕೆ ಹಾಗೂ ಪತ್ರಕರ್ತರಿಗೆ ಪುರಸಭೆವತಿಯಿಂದ ನಿವೇಶನ ಕೊಡಲು ಪ್ರಯತ್ನಿಸುವುದ್ದಾಗಿ ಭರವಸೆ ನೀಡಿದರು.

ನಕಲಿ ಪತ್ರಕರ್ತರ ಹಾವಳಿ ಹೆಚ್ಚಳ :

ಜಿಲ್ಲಾ ಪತ್ರಿಕಾ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಇದರಿಂದ ನೈಜ್ಯ ಪತ್ರಕರ್ತರ ಗೌರವಕ್ಕೆ ದಕ್ಕೆಯುಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಣಕ್ಕಾಗಿ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಬೆದರಿಸಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ನಖಲಿ ಪತ್ರಕರ್ತರನ್ನು ಹತ್ತಿಕಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರಿಕಾ ಸಂಘದಿಂದ ದೂರು ನೀಡಲು ತಿರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪುರಸಭಾ ಸದಸ್ಯ ಕೋಟೆ ನಾಗಣ್ಣ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಳಂತೆ ಪತ್ರಿಕಾ ರಂಗವು ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿದೆ. ಕುಣಿಗಲ್ ತಾಲೂಕು ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಆನೇಕ ಮಂದಿ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಬೆರಳೆಣಿಕೆಯಷ್ಟು ಮಾತ್ರ ವೃತ್ತಿ ಪತ್ರಕರ್ತರಿಗೆ ಮಾಶಾಸನ ಸಿಗುತ್ತಿದೆ. ಹಾಗಾಗಿ ಸರ್ಕಾರ ನಿವೃತ್ತಿ ಹಂಚಿನಲ್ಲಿ ಇರುವ ಎಲ್ಲಾ ಪತ್ರಕರ್ತರಿಗೂ ಮಾಶಾಸನ ನೀಡುವ ಮೂಲಕ ಅವರ ಜೀವನದ ಭದ್ರತೆಗೆ ಆಧಾರವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಆನಂದ್ಕುಮಾರ್(ಕಾಂಬ್ಲಿ), ಗೋಪಿಅರಸ್, ಪತ್ರಿಕಾ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್,   ತಾಲೂಕು ಕಸಪಾ ಅಧ್ಯಕ್ಷ ಕಪನಿಪಾಳ್ಯರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Comment here