ಪೊಲಿಟಿಕಲ್

ಹೇರೂರು ಗ್ರಾಪಂ ಉಪಾಧ್ಯಕ್ಷರಾಗಿ ಗೌರಮ್ಮ ಅವಿರೋಧ ಆಯ್ಕೆ.

Publicstory/prajayoga

ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ ಹೇರೂರು ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊದಲೂರು ಸದಸ್ಯೆ ಗೌರಮ್ಮ ಅವಿರೋಧವಾಗಿ ಶನಿವಾರ ಆಯ್ಕೆಯಾದರು.

ಹೇರೂರು ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಶಿರಸ್ತೇದಾರ್ ಶ್ರೀನಿವಾಸ್ ನಡೆಸಿಕೊಟ್ಟರು. ಎಸ್ಸಿ ಮಹಿಳಾ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಕಿಟ್ಟದಕುಪ್ಪೆ ಗಂಗಮ್ಮ ರಾಜೀನಾಮೆ ಸಲ್ಲಿಸಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊದಲೂರು ಗೌರಮ್ಮ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಎಲ್ಲಾ ಸದಸ್ಯರ ಒಮ್ಮತದಲ್ಲಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.

ನಂತರ ಸುದ್ದಿಗಾರರ ಜತೆ ಮಾತನಾಡಿದ ನೂತನ ಉಪಾಧ್ಯಕ್ಷೆ ಗೌರಮ್ಮ, ಗುಬ್ಬಿ ಪಟ್ಟಣಕ್ಕೆ ಹೊಂದಿಕೊಂಡ ಹೇರೂರು ಗ್ರಾಪಂ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮೂಲಭೂತ ಸೌಕರ್ಯ ಒದಗಿಸುವಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಸರ್ಕಾರದ ಅನುದಾನ ಬಳಸಿ ಅಭಿವೃದ್ದಿ ಕೆಲಸ ಮಾಡಿ ಮಾದರಿ ಗ್ರಾಪಂ ಎನಿಸಿಕೊಳ್ಳಲು ಶ್ರಮಿಸುತ್ತೇನೆ ಎಂದರು.

ಗ್ರಾಪಂ ಅಧ್ಯಕ್ಷ ಸೋಮಶೇಖರ್ ಮಾತನಾಡಿ ಎಲ್ಲಾ ಸದಸ್ಯರು ಒಗ್ಗೂಡಿ ಪಂಚಾಯಿತಿ ಅಭಿವೃದ್ಧಿ ಮಾಡುತ್ತಿದ್ದೇವೆ. ಪಕ್ಷಾತೀತ ನಿಲುವು ಜೊತೆಗೆ ಶಾಸಕರು, ಸಂಸದರಿಂದ ಅನುದಾನ ತರುವಲ್ಲಿ ಶ್ರಮಿಸಿದ್ದೇವೆ. ಹೆದ್ದಾರಿಗೆ ಹೊಂದಿಕೊಂಡ ಈ ಹೇರೂರು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಕ್ಕೂ ಕುಡಿಯುವ ನೀರು, ರಸ್ತೆ, ಬೀದಿ ದೀಪ ಒದಗಿಸಿದ್ದೇವೆ. ವಿಶೇಷ ಅನುದಾನ ತರುವ ಜೊತೆಗೆ ತೆರಿಗೆ ಸಂಗ್ರಹ ಮಾಡುವ ಮೂಲಕ ಆದಾಯದ ಮೂಲ ಹೆಚ್ಚಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಸದಸ್ಯರಾದ ಶಿವಪ್ಪ, ಶ್ರೀನಿವಾಸ್, ರಾಧಾಮಣಿ, ಬಿಲ್ಕ್ಸ್ ಬಾನು, ರಮೇಶ್, ರವೀಶ್, ರೇಣುಕಪ್ಪ, ಜಯಣ್ಣ, ಶೋಭಾ, ಪವನ್, ವೆಂಕಟೇಶ್, ಮುಖಂಡರಾದ ರಂಗಸ್ವಾಮಯ್ಯ, ಸಂತೋಷ್, ಪುಟ್ಟಸ್ವಾಮಯ್ಯ, ಮೂರ್ತಿ, ವಿಜಯ್, ಪಿಡಿಒ ಪ್ರಶಾಂತಕುಮಾರ್ ಇತರರು ಇದ್ದರು.

Comment here