ಜನಮನಪೊಲಿಟಿಕಲ್ಪ್ರತಿಭಟನೆ

ಬದಲಾಗಬೇಕಿರುವುದು ಡಿಪಿ ಅಲ್ಲ! ಪ್ರಧಾನಿಗಳಿಗೆ ಯುವಕನಿಂದ ಬದಲಾವಣೆ ಪಾಠ

Publicstory/prajayoga

ಸಿದ್ದು ಬಿ.ಎಸ್ ಸೂರನಹಳ್ಳಿ, ತಿಪಟೂರು

ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು  ದೇಶದ ಜನತೆಗೆ “ತಿರಂಗ ಡಿಪಿ” ಯ ಕರೆಯನ್ನು ನೀಡಿದ್ದಾರೆ. ಪ್ರಧಾನಮಂತ್ರಿ ಅವರೇ ಬದಲಾಗಬೇಕಿರುವುದು ಡಿಪಿ ಅಲ್ಲ. ಬದಲಾಗಬೇಕಿರುವುದು ಜಿಡಿಪಿ, ಬದಲಾಗಬೇಕಿರುವುದು ನಿರುದ್ಯೋಗ, ಬದಲಾಗಬೇಕಿರುವುದು ಬಡತನ, ಬದಲಾಗಬೇಕಿರುವುದು ಜನರ ಸಂಕಷ್ಟ, ವಾಟ್ಸಪ್ ಡಿಪಿ, ಫೇಸ್ಬುಕ್, ಟ್ವಿಟರ್, ಮತ್ತು ಇನ್ಸ್ಟಾಗ್ರಾಮ್ ಡಿಪಿ ಬದಲಾವಣೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.

ಹಿಂದಿನಿಂದಲೂ ಕನ್ನಡದ ಮೇಲೆ ಹಿಂದಿ ಹೇರಿಕೆ ನಡೆಯುತ್ತಲೇ ಬಂದಿದೆ. ಇತ್ತೀಚಿಗೆ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಹೆಚ್ಚಾಗಿದೆ. 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವಕ್ಕೆ “ಹರ್ ಘರ್ ತಿರಂಗಾ” ಬದಲಾಗಿ ಕರ್ನಾಟಕದಲ್ಲಿ ಕನ್ನಡದಲ್ಲಿ “ಪ್ರತಿ ಮನೆ ಮನೆಯಲ್ಲೂ ತ್ರಿವರ್ಣ” ಎಂಬುದಾಗಿ ಕರೆಯಬಹುದಿತ್ತು. ಕರ್ನಾಟಕದಲ್ಲಿ ಹಿಂದಿ ಹೇರಿಕೆ ಯಾಕೆ..? ಹಿಂದಿ ಭಾಷೆ ರಾಷ್ಟ್ರೀಯ ಭಾಷೆಯೇ…? ಹಿಂದಿ ಭಾಷೆಗಿಂತ ಮೊದಲು ಜನ್ಮತಾಳಿದ್ದು ದ್ರಾವಿಡ ಭಾಷೆಗಳು. ಇಲ್ಲಿ ದ್ರಾವಿಡ ಭಾಷೆಗಳೆ ಸಾರ್ವಭೌಮ…
ಭಾರತದ ಧ್ವಜ ಸಂಹಿತೆ 2002ರ ಪ್ರಕಾರ ತ್ರಿವರ್ಣ ಧ್ವಜವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಆದರೆ ಇಲ್ಲಿ ಪ್ರಸ್ತುತ ಬೀದಿಬೀದಿಯಲ್ಲಿ ಪಾಲಿಯಸ್ಟರ್, ಪ್ಲಾಸ್ಟಿಕ್ ನಂತಹ ವಸ್ತುಗಳ ಮೂಲಕ ತಯಾರಿಸಿ ಮಾರಾಟ ಮಾಡಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದ್ದಂತೆ ಕಾಣುತ್ತಿದೆ. ಅದಲ್ಲದೆ ರಾಷ್ಟ್ರಧ್ವಜವನ್ನು ಉತ್ಸವಕ್ಕಾಗಿ ಅಥವಾ ಯಾವುದೇ ರೀತಿಯ ಅಲಂಕಾರದ ಉದ್ದೇಶಗಳಿಗಾಗಿ ಬಳಸಬಾರದು. ಇಲ್ಲಿ ನೋಡಿದರೆ ಉತ್ಸವ ನಡೆಸಲು ತಯಾರಾಗುತ್ತಿದೆ ಎಂದು ಭಾಸವಾಗುತ್ತಿದೆ.

ಡಾಂಭಿಕ ದೇಶಭಕ್ತಿ ಮಾರಕ

ರಾಷ್ಟ್ರಧ್ವಜದ ಅಧಿಕೃತ ಪ್ರದರ್ಶನಕ್ಕಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಗದಿಪಡಿಸುವ ವಿಶೇಷಣಗಳಿಗೆ ಅನುಗುಣವಾಗಿ ಮತ್ತು ಅವುಗಳ ಗುರುತು ಹೊಂದಿರುವ ಧ್ವಜವನ್ನು ಮಾತ್ರ ಬಳಸಬೇಕು.
ತ್ರಿವರ್ಣ ಧ್ವಜವನ್ನು ಇಂದು ಸರ್ಕಾರ ಕೈಗೊಂಡಿರುವ ಹರ್ ಘರ್ ತಿರಂಗಾವು ಟವಲ್ ನಂತೆ ಬಳಸಿ ಅವಮಾನಿಸಲಾಗುತ್ತಿದೆ.

ಕೆಲವು ಸಂಘಟನೆಗಳು ತ್ರಿವರ್ಣ ಧ್ವಜವನ್ನು ಕನಿಷ್ಟದ ಸಂಕೇತ ಎಂದು ತಿಳಿದುಕೊಂಡೆವೆ ಅನಿಸುತ್ತಿದೆ. 53 ವರ್ಷಗಳ ಕಾಲ ತ್ರಿವರ್ಣ ಧ್ವಜವನ್ನು ತಿರಸ್ಕರಿಸುತ್ತಲೇ ಬಂದಿದೆ. ಈಗಲೂ ಸಹ ತಿರಸ್ಕರಿಸುತ್ತಲೇ ಇದೆ. ಕೆಲ ಸಂಘಟನೆಗಳು ಭಾರತದ ಸ್ವತಂತ್ರವನ್ನು ಸಂಭ್ರಮಿಸಲೇ ಇಲ್ಲ. ಭಾರತ ಸಾರ್ವಭೌಮತೆಯನ್ನು ಒಪ್ಪಲೇ ಇಲ್ಲ. ಏಕೆಂದರೆ ಅವರಿಗೆ ಬೇಕಿದ್ದು ಸಂವಿಧಾನಾತ್ಮಕ ಭಾರತವಲ್ಲ, ಮನುಸ್ಮೃತಿಯ ಭಾರತ.

ಸರ್ಕಾರದಿಂದ ಪೋಸ್ಟ್ ಆಫೀಸ್‌ಗಳಲ್ಲಿ ನೀಡಲಾಗುತ್ತಿರುವ ಅಸಮರ್ಪಕ‌ ಪಾಲಿಯಸ್ಟರ್ ಧ್ವಜ

ಪ್ರಸ್ತುತವಾಗಿ ನಮ್ಮ ದೇಶದಲ್ಲಿ 2014ರಿಂದ ಬಂದಂತಹ ದೇಶಭಕ್ತರ ಸಂಖ್ಯೆಯೇ ಹೆಚ್ಚಾಗಿದೆ. ಇಂತಹ ಸಾಂದರ್ಭಿಕ ಡಾಂಭಿಕತನದ ದೇಶಭಕ್ತಿ ಮತ್ತು ಮುಖವಾಡ ಧರಿಸಿದ ದೇಶಭಕ್ತರಿಂದ ದೇಶಕ್ಕೆ ಎಂದೆಂದಿಗೂ ಮಾರಕ ಮತ್ತು ಇಂಥವರಿಂದ  ದೇಶಕ್ಕೆ ಉತ್ತಮವಾದ ಕೆಲಸ ಕಾರ್ಯ ನೀಡಲು ಸಾಧ್ಯವಾಗುವುದಿಲ್ಲ.

ಭಾರತ ದೇಶದಲ್ಲಿ ಎಷ್ಟೋ ಬಡಕುಟುಂಬಗಳಿಗೆ ಮನೆಗಳಿಲ್ಲ. ಇಂದು ಪ್ರಧಾನಿಯವರು “ಹರ್ ಘರ್ ತಿರಂಗಾ” ಕ್ಕೆ ಕರೆ ಕೊಟ್ಟಿರುವುದು ಹಾಸ್ಯಾಸ್ಪದವಾಗಿದೆ. ಮೊದಲು ಮನೆ ಕೊಡಿ ನಂತರ ಮನೆಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಕರೆ ಕೊಡಿ. ಅದನ್ನು ಬಿಟ್ಟು ಕೈಗೆ ಬಾವುಟ ಕೊಟ್ಟು 25 ರೂ ತೆಗೆದುಕೊಂಡು  ಮನೆಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ಅಂತದರೆ ಹೇಗೆ? 75ನೇ ಸ್ವಾತಂತ್ರ ಮಹೋತ್ಸವದ ಅಂಗವಾಗಿ ಅಮೃತ ಮಹೋತ್ಸವದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಬಿದ್ದಂತೆ ಎದ್ದುಕಾಣುತ್ತಿದೆ.

ಒಣ ಭಾಷಣಗಳು ಸಮಸ್ಯೆಗಳಿಗೆ ಪರಿಹಾರವಲ್ಲ

ದೇಶದ ಜನರು ಬಡತನ, ನಿರುದ್ಯೋಗ, ಬೆಲೆ ಏರಿಕೆಯ, ನಡುವೆ ಸಿಲುಕಿ ನರಳುತ್ತಿದ್ದಾರೆ. ಇವರಿಗೆ ಉತ್ತಮ ಸೌಲಭ್ಯ ಕೊಡುವಲ್ಲಿ ಸರ್ಕಾರ ಫಲವಾಗಿ, ಇಂದು 75ನೇ ಸ್ವಾತಂತ್ರೋತ್ಸವದ ಕಡೆ ಜನರ ಗಮನ ಸೆಳೆದು ದಿಕ್ಕು ತಪ್ಪಿಸುತ್ತಿದ್ದಾರೆ. ದೇಶದ ಯುವಜನತೆಗೆ ಒಣ ಭಾಷಣಗಳಿಂದ ಮತ್ತು ಸುಳ್ಳು ಭಾಷಣಗಳಿಂದ ಯಾವುದೇ ರೀತಿಯ ಅನುಕೂಲ ಅಥವಾ ದೇಶದ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಇಂತಹದ್ದನ್ನು ಯುವ ಜನತೆ ಅರಿತುಕೊಳ್ಳಬೇಕಾಗಿದೆ.

ಇಂದು ಚೀನಾ ದೇಶದಿಂದ ಪಾಲಿಯಸ್ಟರ್ ಧ್ವಜವನ್ನು ತಯಾರಿಸಿ ಆಮದು ಮಾಡಿಕೊಳ್ಳುತ್ತಿರುವುದು ಖಂಡನೀಯ. ಕೆಲವು ದಿನಗಳ ಹಿಂದೆ ಚೀನಾ ದೇಶದ ಕೆಲವು ಮೊಬೈಲ್ ಆಪ್ ಗಳನ್ನು ನಿರ್ಬಂಧಿಸಿದ್ದರು ಸ್ವಾಗತರ್ಹ. ಆದರೆ ಇಂದು ಚೀನಾ ದೇಶದಿಂದ ಪಾಲಿಯಸ್ಟರ್ ಧ್ವಜವನ್ನು ತೋರಿಸಿ ಕೊಳ್ಳುತ್ತಿರುವುದು ಏಕೆ? ರಾಷ್ಟ್ರಧ್ವಜವನ್ನು ಖಾದಿ ಬಟ್ಟೆಯಿಂದ ತಯಾರಿಸಬೇಕು. ಪಾಲಿಯಸ್ಟರ್, ಪ್ಲಾಸ್ಟಿಕ್ ಬಳಸಬಾರದು. ಖಾದಿ ಬಟ್ಟೆಗಳ ಕೈಮಗ್ಗಗಳಲ್ಲಿ ಧ್ವಜ ತಯಾರಿಸಬೇಕು. ಆದ್ದರಿಂದ ಚರಕದಿಂದ ನೂಲು ತೆಗೆಯುವ ಕರಕುಶಲಕರ್ಮಿಗಳಿಗೆ ಉದ್ಯೋಗ ಸಿಗುತ್ತದೆ. ಈ ಉದ್ಯೋಗಸ್ಥರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.

ಭಾರತದ ರಾಷ್ಟ್ರಧ್ವಜದ ಮೂರು ಬಣ್ಣಗಳು ಎಲ್ಲಾ ಧರ್ಮೀಯರನ್ನು ಒಳಗೊಂಡಂತೆ ಸೂಚಿಸುತ್ತದೆ. ವರ್ಷವಿಡಿ ಪ್ರತಿಯೊಬ್ಬರೂ ತ್ಯಾಗ ಮನೋಭಾವನೆ, ಪರಸ್ಪರ ಶಾಂತಿ ಮತ್ತು ದೇಶದ ಸಮೃದ್ಧಿಗೆ ಕೈಜೋಡಿಸುವುದು ಆಗಿದೆ. ಆದರೆ ಇಂದು ಪ್ರಸ್ತುತ ವ್ಯವಸ್ಥೆ ಗಮನಿಸಿದಾಗ ಧರ್ಮಕ್ಕೊಂದು ಬಣ್ಣವನ್ನು ಕಲ್ಪಿಸಿ ಅಸಹಿಷ್ಣುತೆಗೆ ದಾರಿ ಮಾಡಿಕೊಟ್ಟಂತೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.

ರಾಷ್ಟ್ರಧ್ವಜ ವನ್ನು ಸಾಂವಿಧಾನಿಕ ಹುದ್ದೆಗೇರಿದವರ ಕಾರುಗಳು ಮತ್ತು ಜೀಪುಗಳ ಮೇಲೆ ರಾಷ್ಟ್ರಧ್ವಜವನ್ನು ಬಳಸಬಹುದು. ಆದರೆ ಇಂದು ಎಲ್ಲಾ ಖಾಸಗಿ ವ್ಯಕ್ತಿಗಳು ಕಾರು, ಜೀಪುಗಳ ಮೇಲೆ  ರಾಷ್ಟ್ರಧ್ವಜವನ್ನು ಬಳಸುತ್ತಿದ್ದಾರೆ. ಇದು ರಾಷ್ಟ್ರಧ್ವಜಕ್ಕೆ ಮಾಡುವ ಅಪಮಾನ. ರಾಷ್ಟ್ರಧ್ವಜದ ರಕ್ಷಣೆ ಮತ್ತು ಗೌರವ ಕೊಡುವುದು  ನಮ್ಮೆಲ್ಲರ ಹೊಣೆ, ರಾಷ್ಟ್ರಧ್ವಜ ನಮ್ಮ ಸ್ವಾಭಿಮಾನದ ಸಂಕೇತ. ನಮ್ಮ ರಾಷ್ಟ್ರಧ್ವಜ ನಮ್ಮ ಹೆಮ್ಮೆ.

Comment here