ತುಮಕೂರು ಲೈವ್

Sslc ಪರೀಕ್ಷೆ: ದಾನಿಗಳು ಮಕ್ಕಳಿಗೆ ಊಟ, ತಿಂಡಿ ನೀಡುವಂತಿಲ್ಲ

ತುರುವೇಕೆರೆ: ತಾಲ್ಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗು ದಾನಿಗಳಿಂದ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಊಟ, ತಿಂಡಿ ಕೊಡಿಸಬಾರದು ಎಂದು ತಹಶೀಲ್ದಾರ್ ಆರ್.ನಯಿಂಉನ್ನೀಸಾ ಮುಖ್ಯ ಶಿಕ್ಷಕರುಗಳಿಗೆ ಸೂಚಿಸಿದರು.

ಪಟ್ಟಣದ ಜೆಪಿ ಆಂಗ್ಲಪ್ರೌಢ ಶಾಲಾ ಆವರಣದಲ್ಲಿ ತಹಶೀಲ್ದಾರ್ ಆರ್.ನಯಿಂಉನ್ನೀಸಾ ಅಧ್ಯಕ್ಷತೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಕೋವಿಡ್-19ರ ಹಿನ್ನಲೆಯಲ್ಲಿ ಮಕ್ಕಳು ಮತ್ತು ಪೋಷಕರುಗಳಲ್ಲಿನ ಭಯವನ್ನು ದೂರು ಮಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿ. ಪರೀಕ್ಷಾ ಕೇಂದ್ರಗಳ ಸ್ವಚ್ಛತೆ ಕಾಪಾಡಲು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಹಾಗು ಪಟ್ಟಣ ಪಂಚಾಯಿತಿಗಳ ನೆರವನ್ನು ಪಡೆಯಿರಿ ಎಂದರು.

ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ನೋಡಿಕೊಳ್ಳಲು ಒಂದೇ ಕಡೆ ಹಾಕಬೇಡಿ. ಆರೋಗ್ಯ ವ್ಯತ್ಯಸಾವಿರುವ ಮಕ್ಕಳಿಗೆ ಧೈರ್ಯ ತುಂಬಿ ಎಂದರು.

ಎಲ್ಲ ಕೇಂದ್ರಗಳಲ್ಲಿ ಪೊಲೀಸ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ತುರ್ತು ಚಿಕಿತ್ಸಾ ಕಿಟ್ ವ್ಯವಸ್ಥೆ ಮಾಡಲಾಗುವುದು. ಮಾಸ್ಕ್ ಧರಿಸುವುದು ಖಡ್ಡಾಯ. ಮುಖ್ಯವಾಗಿ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಿ ಒಟ್ಟಾರೆಯಾಗಿ ಯಾವ ಮಕ್ಕಳೂ ಸಹ ಸೌಕರ್ಯಗಳ ಸಮಸ್ಯೆಯಿಂದ ಪರೀಕ್ಷೆಯಿಂದ ವಂಚಿತರಾಗಬಾರದು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಆರ್.ಜಯರಾಮ್ ಮಾತನಾಡಿ, ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ 25 ಸಾವಿರ ಮಾಸ್ಕ್ ಗಳನ್ನು ರೋಟರಿ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು.

ಬಿಇಒ ಸಿ.ರಂಗಧಾಮಯ್ಯ ಮಾತನಾಡಿ, ತಾಲ್ಲೂಕಿನ ಎಲ್ಲ ಕೇಂದ್ರಗಳಲ್ಲಿ 2016 ಮಕ್ಕಳು ಪರೀಕ್ಷೆ ಬರೆಯಲಿದ್ದು ಹೊರ ತಾಲ್ಲೂಕುಗಳಿಂದ ಇಲ್ಲಿಗೆ 46 ಮಕ್ಕಳು ಪರೀಕ್ಷೆ ಬರೆಯಲು ಬಂದಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಆರೋಗ್ಯ, ಬಸ್ ಸೇರಿದಂತೆ ಹಲವು ಸವಲತ್ತುಗಳನ್ನು ಒದಗಿಸಲಾಗಿದೆ ಎಂದರು.

ಈ ವೇಳೆ ಎಲ್ಲ ಪರೀಕ್ಷಾ ಕೇಂದ್ರದ ಮುಖ್ಯಾಧಿಕಾರಿಗಳಿಗೆ ಶಾಸಕ ಮಸಾಲಜಯರಾಂ ನೀಡಿದ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಲಾಯಿತು.

ಟಿಎಚ್.ಒ ಡಾ.ಸುಪ್ರಿಯಾ, ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್, ಬಿಆರ್ಸಿ ವಸಂತ್ ಕುಮಾರ್, ರೋಟರಿ ಅಧ್ಯಕ್ಷ ಗುಪ್ತಾ ಇದ್ದರು.

Comment here