ತುಮಕೂರು ಲೈವ್

THE NEW PUBLIC SCHOOL: ವಾರ್ಷಿಕೋತ್ಸವ

Tumkuru: ತಂದೆ-ತಾಯಿಗಳ ಮಕ್ಕಳ ಬೆಳವಣಿಗೆ ಮತ್ತು ಓದಿನ ಕಡೆ ಗಮನ ಕೊಡದಿದ್ದರೆ ಮಕ್ಕಳ ವ್ಯಕ್ತಿತ್ವದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಸಿದ್ದಗಂಗಾ ಆಸ್ಪತ್ರೆ ಮೆಡಿಷನ್ ವಿಭಾಗದ ಮುಖ್ಯಸ್ಥೆ ಡಾ.ಎಂ.ಶಾಲಿನಿ ತಿಳಿಸಿದರು.

ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ದಿ ನ್ಯೂ ಪಬ್ಲಿಕ್ ಶಾಲೆಯ 15ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಸಾಧನೆ ಮಾಡಿದರೆ ಅದರಷ್ಟು ಸಂತೋಷ ಮತ್ತು ಸಾರ್ಥಕತೆ ಬೇರೊಂದಿಲ್ಲ ಎಂದರು.

ಸಮಾಜದಲ್ಲಿ ಮೂರು ರೀತಿಯ ಪೋಷಕರನ್ನು ನೋಡುತ್ತೇವೆ. ಮೊದಲ ರೀತಿಯ ಪೋಷಕರು ಮಕ್ಕಳು ಕೇಳಿದ್ದೆಲ್ಲವನ್ನೂ ತಂದುಕೊಟ್ಟು ಅದರ ಸ್ವಂತಿಕೆ ಇಲ್ಲದಂತೆ ಮಾಡುತ್ತಾರೆ. ಎರಡನೆ ರೀತಿಯ ಪೋಷಕರು ಉದ್ಯೋಗಿಗಳಾಗಿದ್ದು ಮಕ್ಕಳ ಬಗ್ಗೆ ಗಮನ ಕೊಡುವುದಿಲ್ಲ. ಇವರು ಬೆಳಗ್ಗೆ ಮನೆ ಬಿಟ್ಟರೆ ಮತ್ತೆ ಸಂಜೆ ಮನೆ ಸೇರುತ್ತಾರೆ. ಮಕ್ಕಳ ಬಗ್ಗೆ ವಿಚಾರಿಸುವುದೇ ಇಲ್ಲ. ಹೀಗಾಗಿ ಆ ಮಕ್ಕಳು ಕಲಿಕೆಯ ಬಗ್ಗೆ ಆಸಕ್ತಿ ವಹಿಸುವುದಿಲ್ಲ.

ಮೂರನೇ ರೀತಿ ಪೋಷಕರು ತುಂಬ ಹಠವಾದಿಗಳು, ತಾವು ಹೇಳಿದ್ದನ್ನು ಮಾತ್ರ ಮಕ್ಕಳು ಕೇಳಬೇಕು. ಪುಸ್ತಕ ಹಿಡಿ ಅಂದ್ರೆ ಹಿಡಿಯಬೇಕು. ಊಟಕ್ಕೆ ಬಾ ಎಂದರೆ ಬರಬೇಕು. ಮಲಗು ಅಂದ್ರೆ ಮಲಗಬೇಕು. ಹೀಗೆ ತಮ್ಮ ನಿಯಮಗಳನ್ನು ಹೇರುವ ಪೋಷಕರಿಂದ ಮಕ್ಕಳು ಓದುವುದೂ ಇಲ್ಲ. ಸ್ವಂತಿಕೆಯನ್ನು ಕಲಿಯುವುದಿಲ್ಲ. ಪೋಷಕರ ಇಂತಹ ನಡವಳಿಕೆಗಳು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಹಾಗಾಗಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲೇಖಕ ಕೆ.ಪಿ. ಲಕ್ಷ್ಮೀಕಾಂತರಾಜೇ ಅರಸ್ ಮಾತನಾಡಿ, ಮಕ್ಕಳ ಹಸಿವಿಗೆ ಅನ್ನಬೇಕು. ಹಾಗೆಯೇ ಜ್ಞಾನವೃದ್ದಿಗೆ ಕೇಳುವ ಮನೋಭಾವ ಬೆಳೆಸಬೇಕು. ಹೊಸ ಆಲೋಚನೆ, ಹೊಸ ಕಲ್ಪನೆ ಮತ್ತು ಪುಸ್ತಕ ಓದುವಂತಹ ವಾತಾವರಣವನ್ನು ಪೋಷಕರು ನಿರ್ಮಿಸಬೇಕು. ಆಗ ಮಕ್ಕಳು ಕ್ರಿಯಾಶೀಲವಾಗಿರುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಶೀರ್ವಾದ ಟ್ರಸ್ಟ್ ಅಧ್ಯಕ್ಷ ಎಚ್.ಡಿ.ರೇಣುಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ದಿ ನ್ಯೂ ಪಬ್ಲಿಕ್ ಶಾಲೆ ಗೌರವ ಕಾರ್ಯದರ್ಶಿ ವಿರೇಶ್ ಉಪಸ್ಥಿತರಿದ್ದರು. ಶಿಕ್ಷಕಿ ವಿ.ಕೆ.ನೇಹ ಸ್ವಾಗತಿಸಿ, ದೀಪ್ತಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

Comment here