ತುಮಕೂರು ಲೈವ್

Tumukuru ಜಿಲ್ಲಾಸ್ಪತ್ರೆಯಲ್ಲಿ ಕೊರೊನೋ ವೈರಸ್ ನಿಗಾ ಘಟಕ

Tumkur: ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಫರ್ಹಾನ ಇಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೊರೊನೋ ವೈರಸ್ ನಿಗಾ ಘಟಕವನ್ನು ವೀಕ್ಷಿಸಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಯ್ದುಕೊಂಡಿರುವುದಕ್ಕೆ ಶ್ಲಾಘಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಕೊರೊನಾ ವೈರಸ್ ರೋಗದ ಮುನ್ನೆಚ್ಚರಿಕಾ ಕ್ರಮವಾಗಿ ಕೈಗೊಂಡಿರುವ ಕೊಠಡಿಯಲ್ಲಿ ಉತ್ತಮ ವ್ಯವಸ್ಥೆ ಮಾಡಿದೆ. ಸ್ವಚ್ಚತೆಯನ್ನು ಕಾಪಾಡಿಕೊಳ್ಳಲಾಗಿದೆ. ಕೊರೋನಾ ವೈರಸ್ ನಮ್ಮ ದೇಶಕ್ಕೆ ಬರಬಾರದು ಎಂದರು.

ಪಾಲಿಕೆ ವತಿಯಿಂದ ಜಿಲ್ಲಾಸ್ಪತ್ರೆಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ನೀಡಲು ಬದ್ದವಾಗಿದ್ದೇವೆ. ಈ ವಾರ್ಡಿನ ಪಾಲಿಕೆ ಸದಸ್ಯರೂ ಕೂಡ ಪ್ರತಿ ಎಂಟು ದಿನಗಳಿಗೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲಾ ಶಸ್ತ್ರಚಿಕಿತ್ಸಕರು ಆಸ್ಪತ್ರೆಯ ಪ್ರತಿಯೊಂದು ವಾರ್ಡನ್ನು ತೋರಿಸಿದ್ದು ಚನ್ನಾಗಿಟ್ಟುಕೊಂಡಿದ್ದಾರೆ ಎಂದು ಹೇಳಿದರು.

ಪ್ರಮುಖವಾಗಿ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಆರೋಗ್ಯವೇ ದೇಶದ ಸಂಪತ್ತು ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಮಾತನಾಡಿ, ಮೇಯರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕೊರೊನ ವೈರಸ್ ಬಾಧಿತರಿಗಾಗಿ ನಾಲ್ಕು ಹಾಸಿಗೆಗಳ ಕೊಠಡಿಯನ್ನು ಸಿದ್ದಮಾಡಿಟ್ಟುಕೊಳ್ಳಲಾಗಿದೆ. ಚಿಕಿತ್ಸೆಗೂ ಕ್ರಮ ಕೈಗೊಳ್ಳಲಾಗಿದೆ. ಔಷಧಿಗಳು ಸಂಗ್ರಹ ಇವೆ ಎಂದು ಸ್ಪಷ್ಟಪಡಿಸಿದರು.


ಚೀನಾದಿಂದ ಬಂದಿರುವ ಯಾರೇ ಆಗಲಿ ಜಿಲ್ಲಾಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಹೊರ ರಾಜ್ಯದಿಂದ ಬಂದವರನ್ನು ನಾವು ಗುರುತಿಸಲು ಸಾಧ್ಯವಿಲ್ಲ. ಆದರೆ ತುಮಕೂರಿನವರು ಯಾರೇ ಆಗಲಿ ಚೀನಾಕ್ಕೆ ಹೋಗಿ ಹಿಂತಿರುಗಿದ್ದರೆ ಅವರು ಆಸ್ಪತ್ರೆಗೆ ಬರಬೇಕು. ತಪಾಸಣೆ ಮಾಡಿಸಿಕೊಂಡು ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.


Comment here