ತುಮಕೂರು:- ಯುನಿಸೆಫ್ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಚೈಲ್ಡ್ ರೈಟ್ಸ್ ಟ್ರಸ್ಟ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ ತುಮಕೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಬಾಲಭವನ ದಲ್ಲಿ ತುಮಕೂರು ಜಿಲ್ಲೆಯ ಮಕ್ಕಳ ಹಕ್ಕುಗಳ ಸಂಸತ್ 2023 ಹಾಗೂ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಮಾಲೋಚನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪವಿತ್ರ ರವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪವಿತ್ರ ರವರು, ಶಾಲೆಗಳಲ್ಲಿ ಮಕ್ಕಳಿಂದಲೇ ಮಕ್ಕಳ ಸಂಸತ್ ಮಾಡಿಕೊಂಡು ಮಕ್ಕಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಹಾಗೆಯೇ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಮಕ್ಕಳ ಮೂಲಕ ಮಕ್ಕಳ ಸಮಸ್ಯೆಗಳನ್ನು ಚರ್ಚಿಸಿ, ಮಕ್ಕಳಿಂದಲೇ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ತುರ್ತಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಮಕ್ಕಳ ಸಮಸ್ಯೆಗಳು ಏನೇ ಇದ್ದರೂ ಅಂಜಿಕೆ ಇಲ್ಲದೆ ಭಯಪಡದೆ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಸಮಸ್ಯೆಗಳು ಇರುವಾಗ ಮೌನವಾಗಿದ್ದರೆ ಸಮಸ್ಯೆಗಳು ಇನ್ನೂ ಹೆಚ್ಚಾಗುತ್ತವೆ. ಮಕ್ಕಳು ಅವರ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದರ ಮೂಲಕ ಶಿಕ್ಷಣದ ಕಡೆ ಹೆಚ್ಚು ಗಮನವನ್ನು ಕೊಡಬೇಕು. ನಿಮಗೆ ಸಮಸ್ಯೆಗಳು ಬಂದಾಗ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡುವ ಮುಖಾಂತರ ಸಹಾಯ ಪಡೆದುಕೊಳ್ಳಬಹುದು. ಆದರೆ ಅದನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾದ ಅನುಷಾರವರು ಮಾತನಾಡಿ, ಮಕ್ಕಳ ಹಕ್ಕುಗಳು ಎಲ್ಲರಿಗೂ ತಿಳಿದಿರಬೇಕು. ಬದುಕುವ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ಭಾಗವಹಿಸುವ ಹಕ್ಕು, ರಕ್ಷಣೆ ಹೊಂದುವ ಹಕ್ಕುಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಉಪಯುಕ್ತವಾಗಿದೆ. ಯಾವುದೇ ಮಗು ಸಮಸ್ಯೆಗಳಿಂದ ಬಳಲಬಾರದು. ಸಮಸ್ಯೆ ಬಂದಾಗ ಪರಿಹಾರಗಳನ್ನು ಕಂಡುಕೊಳ್ಳಬೇಕು. ಯಾವುದೇ ಮಗು ಅಪೌಷ್ಟಿಕತೆಯಿಂದಾಗಲೀ, ಶಿಕ್ಷಣದಲ್ಲಾಗಲಿ, ಆರೋಗ್ಯದಲ್ಲಾಗಲಿ ಮತ್ತು ಭಾಗವಹಿಸುವಿಕೆಯಿಂದ ವಂಚಿತರಾಗಬಾರದು. ಈ ಮಕ್ಕಳ ಸಂಸತ್ ಮೂಲಕ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದೆಂದು ತಿಳಿಸಿದರು.
ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆಯ ಶಿವರಾಜು ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಸಮಸ್ಯೆಗಳು, ಮತ್ತು ಬೇಡಿಕೆಗಳನ್ನು ಸರ್ಕಾರ ತುರ್ತಾಗಿ ಪರಿಶೀಲಿಸಬೇಕಾಗಿದೆ. ಮಕ್ಕಳೇ ಅವರನ್ನು ಕಾಡುತ್ತಿರುವ ಸಮಸ್ಯೆಗಳನ್ನು ಗುರ್ತಿಸಿ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ತಲುಪಿಸಿ ಅವುಗಳಿಗೆ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚರ್ಚಿಸಿ ಆಗ್ರಹಿಸಲು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರವು ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಹಾಗೂ ಮಾನ್ಯ ಮುಖ್ಯಮಂತ್ರಿ ಗಳೊಂದಿಗೆ ಮಕ್ಕಳ ಸಮಾಲೋಚನೆಯನ್ನು ರಾಜ್ಯಮಟ್ಟದಲ್ಲಿ ಆಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯಿಂದ ಇಬ್ಬರು ಮಕ್ಕಳನ್ನು ಜಿಲ್ಲಾ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಸಲು ಜಿಲ್ಲಾ ಮಟ್ಟದ ಮಕ್ಕಳ ಸಂಸತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಮಕ್ಕಳ ಹಕ್ಕುಗಳ ಕಾರ್ಯಕರ್ತರಾದ ಮಂಜುನಾಥ್ ಅಮಲಗೊಂದಿ ರವರು ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮಕ್ಕಳನ್ನು ಸಹ ದೇಶದ ಪ್ರಜೆಗಳೆಂದು ಎಲ್ಲರೂ ಪರಿಗಣಿಸಬೇಕಿದೆ. ಇಂದಿನ ಮಕ್ಕಳು ಇಂದಿನ ಪ್ರಜೆಗಳಾಗಿರುತ್ತಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮಕ್ಕಳ ಪ್ರಮಾಣ ಶೇಕಡಾ 34ರಷ್ಟಿದೆ. ಆದರೆ ಮಕ್ಕಳಿಗಾಗಿ ಮೀಸಲಿಡುವ ಒಟ್ಟು ಹಣ ತೀರಾ ಕಡಿಮೆ ಇರುತ್ತದೆ. ಆಗಾಗಿ ಮಕ್ಕಳನ್ನು ಸಹ ಆಡಳಿತ ಪ್ರಕ್ರಿಯೆಯಲ್ಲಿ ಭಾಗವಹಿಸಿಕೊಳ್ಳಬೇಕಿದೆ. ಜೊತೆಗೆ ನವೆಂಬರ್ ನಲ್ಲಿ ಪ್ರತಿ ಗ್ರಾಮ ಪಂಚಾಯತಿಯೂ ಸಹ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಿ ಮಕ್ಕಳ ಹಕ್ಕುಗಳಿಗೆ ಧ್ವನಿಯಾಗಬೇಕಿದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮಕ್ಕಳ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಹೇಳಿಕೊಳ್ಳಲು ಮಕ್ಕಳ ಹಕ್ಕುಗಳ ಸಂಸತ್ ಉತ್ತಮ ವೇದಿಕೆಯಾಗಿದೆ. ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮದಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಪ್ರಸ್ತುತಪಡಿಸಿದರು. ಅದರಲ್ಲಿ ಬಹುತೇಕ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಆಪ್ತಸಮಾಲೋಚಕರನ್ನು ನೇಮಿಸಲು ಜಿಲ್ಲಾ ಮಕ್ಕಳ ಸಂಸತ್ ನಲ್ಲಿ ಮಕ್ಕಳು ಒತ್ತಾಯಿಸಿದರು. ತುಮಕೂರು ಜಿಲ್ಲೆಯಿಂದ ವಿದ್ಯಾರ್ಥಿಗಳಾದ ತಿರುಮಲ ಮತ್ತು ತೇಜಸ್ವಿನಿ ರವರು ಆಯ್ಕೆಯಾಗಿದ್ದಾರೆ. ಇವರು ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ನಲ್ಲಿ ತುಮಕೂರು ಜಿಲ್ಲೆಯನ್ನು ಪ್ರತಿನಿಧಿಸುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ಮಕ್ಕಳ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ವಿವರಿಸಲಾಯಿತು. ಮಕ್ಕಳಿಗೆ ಗುಂಪು ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳು ತಮ್ಮ ಸಮಸ್ಯೆಗಳನ್ನು ಪ್ರಸ್ತುತಪಡಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸರ್ಟಿಫಿಕೇಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಾದ ರಮೇಶ್ ರವರು, ಡಾ. ತೋತ್ಯ ನಾಯ್ಕ್ ರವರು, ಮಕ್ಕಳ ಸಹಾಯವಾಣಿ ಸಂಯೋಜಕರಾದ ಗೌರಮ್ಮ, ಅಜಯ್ ಕುಮಾರ್, ಪವಿತ್ರ ರವರು, ಮಕ್ಕಳ ರಕ್ಷಣಾ ಘಟಕದ ಶಿವಣ್ಣ ರವರು, ಬಾಲಭವನದ ಮಮತಾ ರವರು ಹಾಗೂ ವಿವಿಧ ಶಾಲಾ ಕಾಲೇಜುಗಳಿಂದ ಮಕ್ಕಳು ಭಾಗವಹಿಸಿದ್ದರು.
ದಿನಾಂಕ:-09-11-2023 ತಮ್ಮ ವಿಶ್ವಾಸಿಗಳು ಸಂಸ್ಥೆಯ ಪರವಾಗಿ