Friday, May 31, 2024
Google search engine
Homeತುಮಕೂರು ಲೈವ್ಹೆಚ್ಚುತ್ತಿವೆ ನರಭಕ್ಷಕ ಚಿರತೆಗಳು

ಹೆಚ್ಚುತ್ತಿವೆ ನರಭಕ್ಷಕ ಚಿರತೆಗಳು

ಕೆ.ಈ.ಸಿದ್ದಯ್ಯ


ತುಮಕೂರು ಜಿಲ್ಲೆಯಲ್ಲಿ ನರಭಕ್ಷಕ ಚಿರತೆ ದಾಳಿಗೆ ಮೂವರು ಬಲಿಯಾಗಿದ್ದಾರೆ. ಇದುವರೆಗೆ ಕುರಿ, ಮೇಕೆ, ದನಕರುಗಳು ಮತ್ತು ನಾಯಿಗಳ ಮೇಲೆ ದಾಳಿ ಮಾಡಿ ತಿನ್ನುತ್ತಿದ್ದ ಚಿರತೆಗಳು ಇದೀಗ ಮನುಷ್ಯನ ಮೇಲೆ ಎರಗತೊಡಗಿವೆ.

ಜಿಲ್ಲೆಯಲ್ಲಿ ಚಿರತೆಯ ಸಂತತಿ ಹೆಚ್ಚಿರುವುದು ಮತ್ತು ಆಹಾರದ ಕೊರತೆಯೂ ದಾಳಿ ಅಧಿಕಗೊಳ್ಳಲು ಕಾರಣವಾಗಿದೆ.

ಈ ದಾಳಿಗಳನ್ನು ಗಮನಿಸಿದರೆ ನರಭಕ್ಷಕ ಚಿರತೆ ತನ್ನ ಆವಾಸ ಸ್ಥಾನವನ್ನು ದಿನದಿನಕ್ಕೂ ಬದಲಿಸುತ್ತಿರುವಂತೆ ಕಂಡುಬರುತ್ತಿದೆ.

ಕುಣಿಗಲ್ ತಾಲೂಕಿನ ದೊಡ್ಡಮಳಲವಾಡಿಯಲ್ಲಿ ವ್ಯಕ್ತಿಯೊಬ್ಬನ ಕುತ್ತಿಗೆ ಸೀಳಿ ರಕ್ತ ಕುಡಿದು ಸಾಯಿಸಿತ್ತು. ಜೊತೆಗೆ ಗಿಡದಪಾಳ್ಯದಲ್ಲಿ ಮಹಿಳೆಯೊಬ್ಬರನ್ನು ಕೊಂದು ಹಾಕಿತ್ತು. ಇದೀಗ ಗುಬ್ಬಿ ತಾಲೂಕಿನ ಮಣಿಕುಪ್ಪೆಯಲ್ಲಿ ಬಾಲಕ ಸಮರ್ಥ್ ನ ಕುತ್ತಿಗೆ ಬಾಯಿ ಹಾಕಿ ರಕ್ತಹೀರಿ ಸಾಯಿಸಿದೆ.

ಪ್ರತಿ ಚಿರತೆ ದಾಳಿಯ ಸಮಯದಲ್ಲೂ ಆಯಾ ಗ್ರಾಮಸ್ಥರು ಚಿರತೆಗಳ ಹಾವಳಿ ಹೆಚ್ಚಿಸಿದೆ. ಅವುಗಳು ದಾಳಿ ನಡೆಯದಂತೆ ಕ್ರಮ ವಹಿಸಬೇಕು ಎಂದು ಮನವಿಗಳ ಮೇಲೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ತುಮಕೂರು ಜಿಲ್ಲೆಯ ಕುಣಿಗಲ್, ಕೊರಟಗೆರೆ, ಸಿರಾ ಮತ್ತು ಪಾವಗಡ ತಾಲೂಕುಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಕುರಿ, ಮೇಕೆ, ದನಕರು ಮತ್ತು ನಾಯಿಗಳನ್ನು ತಿಂದು ಹೋಗುತ್ತಿದ್ದವು.

ಕುರಿಗಾಹಿಗಳು ಮೇಕೆ ಕಾಯುವವರು ಮತ್ತು ದನಗಾಹಿಗಳು ಚಿರತೆ ಕಂಡರೆ ಜೋರಾಗಿ ಕೂಗಿಕೊಂಡು ಅವುಗಳನ್ನು ಕಾಡಿಗೆ ಅಟ್ಟುತ್ತಿದ್ದರು. ಪದೇ ಪದೇ ಕುರಿಗಳ ಹಿಂಡಿನ ಮೇಲೆ ದಾಳಿ ನಡೆಸುತ್ತಿದ್ದುದು ಸಿರಾ ತಾಲೂಕಿನಲ್ಲಿ.

ಕೊರಟಗೆರೆಯಲ್ಲಿ ದನಗಳನ್ನು ಕಚ್ಚಿ ತಿಂದು ಹೋಗಿದ್ದ ಪ್ರಕರಣಗಳು ವರದಿಯಾಗಿದ್ದವು. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ದಾಳಿ ಪ್ರದೇಶಗಳಿಗೆ ತೆರಳಿ ನಾಯಿಯನ್ನು ಬೋನಿನೊಳಗೆ ಕಟ್ಟಿ ಚಿರತೆಯನ್ನು ಹಿಡಿದು ಕಾಡಿಗೆ ಬಿಟ್ಟುಬರುತ್ತಿದ್ದರು. ಈ ಕೆಲಸ ನಿರಂತರವಾಗೇ ನಡೆದುಕೊಂಡುಬಂದಿತ್ತು.

ಚಿರತೆಗಳು ವಾಸಿಸಲು ಸೂಕ್ತ ಆವಾಸ ಸ್ಥಾನಗಳ ಕೊರತೆ ಇದೆ. ಪೊದೆಗಳನ್ನು ಬಿಟ್ಟರೆ ಬೇರೆ ದಟ್ಟವಾದ ಅರಣ್ಯ ಪ್ರದೇಶಗಳು ಇಲ್ಲದೇ ಇರುವುದು ಮತ್ತು ಅಲ್ಲಿ ಮಾಂಸಾಹಾರಿ ಪ್ರಾಣಿಗಳಿಗೆ ಬೇಕಾದ ಆಹಾರ ಇಲ್ಲದೇ ಇರುವುದರಿಂದ ಚಿರತೆಗಳು ಗ್ರಾಮಗಳಿಗೆ ದಾಳಿ ಇಡುತ್ತಿವೆ.

ಸಸ್ಯಹಾರಿ ಪ್ರಾಣಿಗಳಿಗೆ ಬೇಕಾದ ಹಣ್ಣಿನ ಗಿಡಗಳನ್ನು ಹುಲ್ಲು ವ್ಯಾಪಕವಾಗಿ ಬಳಸಿದರೆ ಜಿಂಕೆ, ಮೊಲ, ಕೋತಿಗಳ ಸಂತತಿ ಹೆಚ್ಚುತ್ತದೆ. ಆಗ ಮಾಂಸಾಹಾರಿ ಪ್ರಾಣಿಗಳು ಕಾಡಿನಿಂದ ಹೊರಬರದೆ ಅಲ್ಲಿಯೇ ಆಹಾರ ಹುಡುಕೊಂಡು ತಿನ್ನುತ್ತವೆ. ಆದರೆ ಇಂತಹ ಕ್ರಮಗಳನ್ನು ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.

ಚಿರತೆಗಳು ರಾತ್ರಿಯ ವೇಳೆ ಹೆಚ್ಚು ಸಂಚಿಸುತ್ತಿದ್ದವು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವೇಗವಾಗಿ ಹೋಗುತ್ತಿದ್ದವು. ಆಹಾರದ ಕೊರತೆ ಉಂಟಾಗಿ ಈಗ ಹಗಲು ವೇಳೆಯಲ್ಲೂ ಸಾಕುಪ್ರಾಣಿಗಳು ಮತ್ತು ಒಬ್ಬಂಟಿ ಮನುಷ್ಯನ ಮೇಲೆ ದಾಳಿಯಿಡಲಾರಂಭಿಸಿವೆ. ಇದು ಚಿರತೆ ಸಂಚರಿಸುವ ಗ್ರಾಮಗಳಲ್ಲಿ ಜನರು ಭೀತಿಗೊಳಗಾಗುವಂತೆ ಮಾಡಿದೆ.

ಚಿರತೆ ದಾಳಿ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಬೆಳೆಗಳಿಗೆ ನೀರು ಹಾಯಿಸಲು ಕೂಡ ಒಬ್ಬೊಬ್ಬರೇ ಹೋಗಲಾರದಂತಹ ಪರಿಸ್ಥಿತಿ ಇದೆ. ಹಗಲು ವೇಳೆ ವಿದ್ಯುತ್ ಇಲ್ಲದೆ ರಾತ್ರಿ ವೇಳೆ ರೈತರು ತೋಟತುಡಿಕೆಗಳಿಗೆ ನೀರು ಹರಿಸಲು ಹೋಗಬೇಕು.

ಚಿರತೆಯ ಹಾವಳಿಯಿಂದ ಭಯಗೊಂಡಿರುವ ಜನರು ಬೆಳೆ ಹೋದರೂ ಪರವಾಗಿಲ್ಲ ಜೀವ ಉಳಿದರೆ ಸಾಕು ಎಂದು ಯೋಚಿಸುತ್ತಿದ್ದಾರೆ.

ಜೊತೆಗೆ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಕೆಟ್ಟಶಬ್ದಗಳಿಂದ ಬೈಯ್ಯುತ್ತಿದ್ದಾರೆ.
ಇತ್ತೀಚೆಗಷ್ಟೇ ಹೆಬ್ಬೂರು ಹೋಬಳಿಯಲ್ಲಿ ನರಭಕ್ಷಕ ಚಿರತೆಯನ್ನು ಹಿಡಿದಿದ್ದರು ಎಂದು ಹೇಳಲಾಗಿತ್ತು. ಜನರು ಕೂಡ ಇದೇ ನರಭಕ್ಷಕ ಚಿರತೆ. ಇನ್ನು ಮುಂದೆ ಚಿರತೆ ದಾಳಿಯ ಭಯವಿಲ್ಲ ಎಂದು ಭಾವಿಸುತ್ತಿರುವಾಗಲೇ ಮಣಿಕುಪ್ಪೆಯಲ್ಲಿ ಐದು ವರ್ಷದ ಬಾಲಕ ಸಮರ್ಥ್ ನನ್ನು ಚಿರತೆ ರಕ್ತ ಹೀರಿ ಕೊಂದಿದೆ.

ಮಣಿಕುಪ್ಪೆ ಗ್ರಾಮಕ್ಕೆ ಅನತಿದೂರದಲ್ಲೇ ಇರುವ ತೋಟದಿಂದ ಸಂಜೆ 5.30ರ ಸುಮಾರಿನಲ್ಲಿ ಅಜ್ಜಿ ಮತ್ತು ಮೊಮ್ಮಗ ಸಮರ್ಥ್ ಎಮ್ಮೆ ಹೊಡೆದುಕೊಂಡು ಬರುವಾಗ ಏಕಾಏಕಿ ಬಂದ ಚಿರತೆ ಬಾಲಕನ ಮೇಲೆ ಎರಗಿ ಅವನನ್ನು ಪೊದೆಗೆ ಎಳೆದುಕೊಂಡು ಹೋಗಿ ರಕ್ತ ಹೀರಿ ಸಾಯಿಸಿದೆ. ಇದು ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭಯವನ್ನು ಉಂಟು ಮಾಡಿದೆ.

ಮನುಷ್ಯನ ರಕ್ತದ ರುಚಿ ಕಂಡಿರುವ ನರಭಕ್ಷಕ ಚಿರತೆಗಳು ಮನುಷ್ಯನ ಮೇಲೆ ದಾಳಿ ಇಡುತ್ತಿವೆ. ಆದರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಮೌನವಹಿಸಿದೆ. ಇಂತಹ ದಾಳಿಗಳು ಮುಂದೆ ನಡೆಯದಂತೆ ಕ್ರಮ ಕೈಗೊಳ್ಳಬೇಕು.

ಚಿರತೆಗಳ ಗಣತಿ ಆಗಬೇಕು. ಅವುಗಳಿಗೆ ಬೇಕಾದ ಆವಾಸ ಸ್ಥಾನ ನಿರ್ಮಾಣ ಮತ್ತು ಆಹಾರ ಒದಗಿಸಿ ಮನುಷ್ಯನ ಮೇಲೆ ಎರಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?