Monday, March 16, 2026
Google search engine
Home Blog Page 101

ಕೆಂಬಳಲು ಸೊಸೈಟಿ ಅಧ್ಯಕ್ಷರಾಗಿ ರಂಗರಾಮಯ್ಯ ಆಯ್ಕೆ

ಪಬ್ಲಿಕ್ ಸ್ಟೋರಿ


ತುಮಕೂರು: ತಾಲ್ಲೂಕಿನ ರಾಯಪುರ ಕೃಷಿ ಪ್ರಾಥಮಿಕ ಸಹಕಾರ ಸಂಘದ ಕೆಂಬಳಲು ಕೇಂದ್ರ ಸ್ಥಾನ ಸಂಘಕ್ಕೆ ಅಧ್ಯಕ್ಷರಾಗಿ ರಂಗರಾಮಯ್ಯ ಹಾಗೂ ಉಪಾಧ್ಯಕ್ಷರಾಗಿ ಎಸ್.ಸತೀಶ್ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರು, ಉಪಾಧ್ಯಕ್ಷರ ಜತೆ ನಿರ್ದೇಶಕರು ಚಿತ್ರದಲ್ಲಿದ್ದಾರೆ.

ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರು‌ ನಡುವೆ ಅಪಘಾತ – ಮೂವರ ಸಾವು

ತಿಪಟೂರು : ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರಿನ‌ ನಡುವೆ ಅಪಘಾತದಲ್ಲಿ ಕಾರಿನಲ್ಲಿ ಇದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ‌ ನಡೆದಿದೆ.

ತಾಲ್ಲೂಕಿನ ತಿಮ್ಲಾಪುರ – ಮತ್ತೀಹಳ್ಳಿ ಗೇಟ್ ನಡುವೆ ಈ ಅಪಘಾತ ಸಂಭವಿಸಿದೆ.
ಬಸ್ ಶಿವಮೊಗ್ಗ – ಅರಸೀಕೆರೆ ಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಎದುರಿಗೆ ಬರುತ್ತಿದ್ದ ಕಾರಿನ ನಡುವೆ‌ ಮುಖಾಮುಖಿ ಡಿಕ್ಕಿ ಸಂಭವಿಸಿದ ಹಿನ್ನೆಲೆಯಲ್ಲಿ ಕಾರಿನಲ್ಲಿ ಇದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲಿ ಮೃತಪಟ್ಟಿದ್ದು ಒಬ್ಬರು ಗಾಯಗೊಂಡಿದ್ದಾರೆ.

ದೇಶಾದ್ಯಂತ ಸಹಜ ಬೇಸಾಯ: ಕೆ.ಎನ್.ಗೋವಿಂದಾಚಾರ್ಯ ಕರೆ

Publicstory


ತುಮಕೂರು: ನಿಸರ್ಗಾಧಾರಿತ ಕೃಷಿ ಪ್ರಯೋಗಗಳು ಹಾಗೂ ಜೀವ ಪರಿಸರವನ್ನೊಳಗೊಂಡ ಸಹಜಬೇಸಾಯ ಪದ್ಧತಿಯನ್ನು ದೇಶಾದ್ಯಂತ ಕೊಂಡೊಯ್ಯಬೇಕೆಂದು ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಸಂಸ್ಥಾಪಕ ಕೆ.ಎನ್.ಗೋವಿಂದಾಚಾರ್ಯ ಕರೆಕೊಟ್ಟರು.

ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ನ ಗಾಂಧಿ ಸಹಜ ಬೇಸಾಯಾಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಾಂಧೀ ಸಹಜ ಬೇಸಾಯ ಮಾದರಿ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಹಜ ಬೇಸಾಯವನ್ನು ತಮ್ಮ ಪ್ರದೇಶಗಳಲ್ಲಿ ಅನುಸರಿಸುವ ಮೂಲಕ ಜನಂದೋಲನವಾಗಿಸಬೇಕು ಎಂದರು.

ಬಡವರಿಗೆ ಬೇಕಾದ ವ್ಯವಸ್ಥೆಯನ್ನು ದೇಶ ಮತ್ತು ರಾಜಕಾರಣ ಒಪ್ಪಿಕೊಳ್ಳಬೇಕು ಹಾಗೂ ಇಡೀ ದೇಶಕ್ಕೆ ಆಶ್ರಮದ ಮಾದರಿಯನ್ನು ಪಾಲಿಸಿ ರೂಪದಲ್ಲಿ ತರಬೇಕು. ರಾಸಾಯನಿಕ ಗೊಬ್ಬರಗಳನ್ನು ಬಳಸದೆ ರೈತರು ಕಷಿ ಮಾಡಬೇಕು. ಭಾರತದ ಪ್ರತಿಯೊಬ್ಬ ರೈತ ಮತ್ತು ಅವರ ಭೂಮಿ ವಿಶಿಷ್ಟವಾದದ್ದು, ಅದನ್ನು ಗೌರವಿಸಿ ಕೃಷಿ ಮಾಡಿದರೆ ಯಶಸ್ವಿಯಾಗುತ್ತೇವೆ. ಇದರ ತುರ್ತು ಇಂದಿಗಿದೆ ಎಂದರು.

ಸಹಜಬೇಸಾಯ ಶಾಲೆಯ ಕೃಷಿ ವಿಜ್ಞಾನಿ ಡಾ.ಮಂಜುನಾಥ್ ಮಾತನಾಡಿ, ಹವಾಮಾನ ಬದಲಾವಣೆ, ನಿರುದ್ಯೋಗ, ವಲಸೆ, ಅಪೌಷ್ಟಿಕತೆಯಂತಹ ತಾರತಮ್ಯಗಳನ್ನು ಹೋಗಲಾಡಿಸಬೇಕಾದರೆ ವ್ಯವಸ್ಥೆ ವಿಕೇಂದ್ರೀಕರಣವಾಗಬೇಕು. ಇಲ್ಲವಾದರೆ ಆರ್ಥಿಕ ಬಿಕ್ಕಟ್ಟು ಹೆಚ್ಚಾಗುತ್ತದೆ. ಕಾರ್ಪೊರೇಟೀಕರಣವನ್ನು ಧಿಕ್ಕರಿಸಿ ಗುಡಿ ಕೈಗಾರಿಕೆಗಳತ್ತ ಸಾಗಿದಾಗ ಮಾತ್ರ ಜನರು ನೆಮ್ಮದಿಯಿಂದ ಬದುಕುತ್ತಾರೆ ಎಂದರು.

ಎಡ ಮತ್ತು ಬಲ ಸೇರಿಸಂತೆ ಎಲ್ಲಾ ಪಂಥದವರೂ ಒಂದಾಗಿ ಮಧ್ಯಮ ಮಾರ್ಗದಲ್ಲಿ ಮುನ್ನಡೆಯುವ ಅಗತ್ಯವಿದೆ. ಕೃಷಿ ಮತ್ತು ಗುಡಿ ಕೈಗಾರಿಕೆಗಳಲ್ಲಿ ರಚನಾತ್ಮಕ ಕಾರ್ಯಗಳನ್ನು ಮಾಡುವ ಮೂಲಕ ಸ್ಥಳೀಯತೆಯನ್ನು ವಿಸ್ತರಿಸಿಕೊಂಡರೆ ಬಂಡವಾಳ ಶಾಹಿಗಳನ್ನು ಬಗ್ಗು ಬಡಿಯಬಹುದು ಎಂದು ತಿಳಿಸಿದರು. ಈ ವೇಳೆ ಶ್ರೀಲಂಕಾ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಕೃಷಿಗೆ ಬಳಸುವ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದು ಭಾರತದೆಲ್ಲೆಡೆ ಪಾಲಿಸಿ ರೂಪದಲ್ಲಿ ಬರಬೇಕು ಎಂಬ ಚರ್ಚೆಯಾರಿತು.

ಕಾರ್ಯಕ್ರಮದಲ್ಲಿ ಜನ ಸಂಗ್ರಾಮ ಪರಿಷತ್ ಜಿಲ್ಲಾಧ್ಯಕ್ಷ ಪಂಡಿತ್ ಜವಾಹರ್, ಚಿಂತಕ, ಪರಿಸರವಾದಿ ಸಿ.ಯತಿರಾಜು ಹಾಗೂ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಕಾರ್ಯಕರ್ತರು ಸೇರಿದಂತೆ ವಿವಿಧ ರಾಜ್ಯದ ಸ್ವಯಂ ಸೇವಕರು ಹಾಜರಿದ್ದರು

ಸಮಾಜದ ತಾಯ್ತನ ಕಾಪಾಡೋಣ: ಡಾ ವಿಜಯಾ

ಬಹುರೂಪಿಯ ಕೃತಿ ಬಿಡುಗಡೆಯಲ್ಲಿ ಅಮ್ಮನ ನೆನಪು

ಬೆಂಗಳೂರು, ಜುಲೈ 3- ‘ಪ್ರತಿಯೊಬ್ಬರೊಳಗೂ ತಾಯ್ತನವಿದ್ದರೆ ಅದು ಸಮಾಜವನ್ನು ಆರೋಗ್ಯವಾಗಿರಿಸಬಲ್ಲದು’ ಎಂದು ಖ್ಯಾತ ವಿಚಾರವಾದಿ ಡಾ ವಿಜಯಾ ಅಭಿಪ್ರಾಯಪಟ್ಟರು.

‘ಬಹುರೂಪಿ’ ಪ್ರಕಾಶನ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿರುಚಿತ್ರ ನಿರ್ದೇಶಕ ಜಯರಾಮಾಚಾರಿ ಅವರ ಕೃತಿ ‘ನನ್ನವ್ವನ ಬಯೋಗ್ರಫಿ’ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ತಾಯ್ತನ ಎನ್ನುವುದು ಕಳೆದುಹೋಗುತ್ತಿರುವ ಕಾರಣಕ್ಕಾಗಿಯೇ ಸಮಾಜದಲ್ಲಿ ಬಿಕ್ಕಟ್ಟುಗಳು ಹೆಚ್ಚುತ್ತಿವೆ. ಒಂದು ತಾಯ್ತನದ ಗುಣ ಏನು ಎನ್ನುವುದನ್ನು ಈ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಒಬ್ಬ ತಾಯಿ ತನ್ನನ್ನು ಕಷ್ಟಕ್ಕೆ ಒಡ್ಡಿಕೊಂಡೇ ಕುಟುಂಬದ ಸ್ವಾಸ್ಥ್ಯವನ್ನು ಕಾಪಾಡಲು ಮುಖ್ಯ ಕಾರಣಳಾಗುತ್ತಾಳೆ. ಅಂತಹ ತಾಯ್ತನವನ್ನು ಕಾಪಾಡೋಣ ಎಂದರು.

ಕಲಬುರ್ಗಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ ಜೋಶಿ ಅವರು ಮಾತನಾಡಿ ರಂಗಭೂಮಿ ಎಲ್ಲರ ಹೃದಯಕ್ಕೆ ಹತ್ತಿರವಾಗುವುದೇ ಅದರ ತಾಯ್ತನದ ಗುಣದಿಂದ. ಹಾಗಾಗಿ ರಂಗಭೂಮಿ ಎಲ್ಲರಿಗೂ ಅತ್ಯಂತ ಇಷ್ಟವಾಗುತ್ತದೆ ಎಂದರು.

ಹಿರಿಯ ಪತ್ರಕರ್ತ, ಲೇಖಕ ಎ ಆರ್ ಮಣಿಕಾಂತ್ ಅವರು ಮಾತನಾಡಿ ನನ್ನ ತಾಯಿಯ ಅನುಭವ ಲೋಕವೇ ನನ್ನೊಳಗಿನ ಭಾವಕೋಶ ಹಾಗಾಗಿಯೇ ಬರವಣಿಗೆಯಲ್ಲಿ ನಾನು ಭಾವುಕನಾಗಲು ಸಾಧ್ಯವಾಯಿತು. ನನ್ನವ್ವನ ಬಯೋಗ್ರಫಿ ಎಲ್ಲರ ಅಮ್ಮನ ಬಯೋಗ್ರಾಫಿಯಾಗಿದೆ ಎಂದರು.

ಹಿರಿಯ ಪತ್ರಕರ್ತ, ಲೇಖಕ ಜಿ ಎನ್ ಮೋಹನ್ ಅವರು ಮಾತನಾಡಿ ತಾಯಂದಿರನ್ನು ಗೌರವಿಸುವ, ಪ್ರೀತಿಸುವ ಎಲ್ಲಾ ಮನಸ್ಸುಗಳಿಗಾಗಿ ಪ್ರತೀ ವರ್ಷ ತಾಯಿಯನ್ನು ಕುರಿತ ಒಂದು ಕೃತಿ ಬಹುರೂಪಿ ಪ್ರಕಟಿಸುತ್ತದೆ ಎಂದು ಘೋಷಿಸಿದರು. ಯಾವುದೇ ತಾಯಿ ಒಂದು ಬೆಲ್ಲ ಕಡೆದ ಕಲ್ಲಿನಂತೆ. ನೋವಿನಿಂದ ಗಟ್ಟಿಯಾದರೂ ಎಲ್ಲರಿಗೂ ಸಿಹಿ ಹಂಚುವಾಕೆ ಎಂದು ಬಣ್ಣಿಸಿದರು. ‘ಬಹುರೂಪಿ’ಯ ಸಂಸ್ಥಾಪಕಿ ಶ್ರೀಜಾ ವಿ ಎನ್ ಉಪಸ್ಥಿತರಿದ್ದರು.

ಇವರೇ ನಮ್ಮ ಡಾಕ್ಟ್ರು; : ದೇವರೇ ಬಂದ್ರೂ ರಜನಿ ಡಾಕ್ಟರೇ ಹೇಳ್ ಬೇಕು!

1

ಮಹೇಂದ್ರಕೃಷ್ಣಮೂರ್ತಿ


ಆ ದೇವರು ಬಂದು ಹೇಳಿದ್ರು ಇವ್ರು ನಂಬಲ್ಲ ಬಿಡಿ ಡಾಕ್ಟರ್. ರಜನಿ ಡಾಕ್ಟ್ರೇ ಹೇಳ್ ಬೇಕು. ಆಗಷ್ಟೇ ಇವರಿಗೆ ನಂಬಿಕೆ.

ಶ್ವೇತಾ ಮಾತು ಕೇಳಿದ ಡಾ. ಮಹೇಶ ಗಾಂಧಿ ಅವರು ಕೆಲಕ್ಷಣ ಗಲಿಬಿಲಿಗೊಂಡರು.ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ನನಗೆ ನೆಲಮಂಗಲದ ಮಾತೃಶ್ರೀ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ನೀಡುತ್ತಿದ್ದರು.

ಅವರೂ ಸಹ ಪರಿಚಿತರೇ. ತಮಾಷೆಯ ಡಾಕ್ಟರ್ ಅವರು. ತುಂಬಾ ಮೃದು ಮನುಷ್ಯರು. ಬಡವರನ್ನು ಕಂಡರೆ ಪ್ರೀತಿ ಹೆಚ್ಚು. ನೆಲಮಂಗಲದಲ್ಲೇ ಕಡಿಮೆ ವೆಚ್ಚದ ಆಸ್ಪತ್ರೆ ಅವರದು. ಹೇ ನಾನು ಅದೇ ಮೆಡಿಷನ್ ನೇ ಹಾಕಿರೋದು ಅಂದ್ರು.‌ ಮಹೇಂದ್ರ ಅವರೇ ಜಾಸ್ತಿ ಎದುರುತ್ತಿದ್ದಾರೆ ಅಂದ್ರು.

ಬೆಂಗಳೂರಿನಿಂದ ಡಾಕ್ಟರ್ ಅವರನ್ನು ಕರೆಸಿದ್ರು. ಆದ್ರು, ಕೊನೆಗೂ ಅವರಿಗೆ ಗೊತ್ತಾಗಿ ಬಿಟ್ಟಿತು. ರಜನಿ ಡಾಕ್ಟರೇ ಬರಬೇಕು ಅಂತಾ!!

ಮರು ದಿನ, ರಜನಿ ಡಾಕ್ಟರಿಗೆ ಶ್ವೇತಾ ಕಡೆಯಿಂದ ಫೋನ್ ಮಾಡಿಸಿದ್ರು.‌ ನನ್ನ ಮುಂದೇನೆ ಮಾತನಾಡಿದ್ರು. ಹತ್ತು ಹದಿನೈದು ನಿಮಿಷ. ಇಬ್ಬರು ಫೋನ್ ನಲ್ಲೇ ನಗಾಡಿದರು. ಕಡೇಗೆ ಯಾವ, ಯಾವ ಮೆಡಿಷನ್ ಕೊಡಲಾಗಿದೆ ಎಂದು ಫೋನ್ ನಲ್ಲೇ ವಿವರಿಸಿದರು. ರಜನಿ ಅವರು ಅತ್ತ ಕಡೆಯಿಂದ ಹೇಳಿದ ಮತ್ತೊಂದು ಮೆಡಿಷನ್ ಬರೆದುಕೊಂಡರು. ಸಂಜೆ ವೇಳೆಗೆ ಆರೋಗ್ಯ ಸುಧಾರಿಸತೊಡಗಿತು.

ಗುಬ್ಬಿಯಲ್ಲಿ ಕೆಲಸ ಮಾಡುತ್ತಿದ್ದಾಗ ಡಾ. ರಜನಿ ಅವರು ಮನೆ ಮಾತಾಗಿದ್ದರು. ಅದರಲ್ಲೂ ಮಕ್ಕಳ ಚಿಕಿತ್ಸೆಯಲ್ಲಿ ಅವರದು ಎತ್ತಿದ ಕೈ.

ಅವರು ನನಗೆ ಹೇಗೆ ಪರಿಚಿತರಾದರು ಎನ್ನುವುದು ನೆನಪಿನಲ್ಲಿ ಉಳಿದಿಲ್ಲ. ತುಮಕೂರು ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕರಾಗಿದ್ದ ಸಂದರ್ಭದಲ್ಲಿ ಸುದ್ದಿ ವಿಚಾರವಾಗಿ ಅವರ ಪರಿಚಯ ಹೆಚ್ಚಾಯಿತು. ನಂತರದಲ್ಲಿ ನಾನು ಅವರ ಪರ್ಮನೆಂಟ್ ರೋಗಿಯಾದೆ!!

ಅವರೊಮ್ಮೆ ರೋಗಿಗೆ ತಮ್ಮದೇ ರಕ್ತ ನೀಡುತ್ತಾ ಚಿಕಿತ್ಸೆಯನ್ನೂ ನೀಡಿ ಬದುಕಿಸಿದ್ದು ತುಂಬಾ ಜನರಿಗೆ ಗೊತ್ತಿಲ್ಲ!

ಡಾಕ್ಟರ್ ಗಳು ಸಾಮಾನ್ಯವಾಗಿ ಜೋರು ಇರುವುದಿಲ್ಲ. ಇವರು ಬಹಳ ಜೋರಿನ ಡೋಂಟ್ ಕೇರ್ ಡಾಕ್ಟರ್. ಇವರನ್ನು ಕಂಡರೆ ಇಲಾಖೆಯಲ್ಲಿ ಸಾಕಷ್ಟು ಜನರಿಗೆ ಭಯ, ಮತ್ತಷ್ಟು ಜನರಿಗೆ ಹೊಟ್ಟೆಕಿಚ್ಚು! ಒಳ್ಳೆಯ ಕವಿಯತ್ರಿಯೂ ಆಗಿರುವ ಅವರು ಡಾ. ಬೆಸಗರಹಳ್ಳಿ ರಾಮಣ್ಣ ಅವರ ಶಿಷ್ಯೆ.

ರಸ್ತೆಯಲ್ಲಿ ನಿಂತುಕೊಂಡರೂ ಸಹ ರೋಗಿಗಳು ಬಂದು ಚಿಕಿತ್ಸೆ ಪಡೆಯುವಷ್ಟು ರೋಗಿಗಳಲ್ಲಿ ನಂಬಿಕೆ ಉಳಿಸಿಕೊಂಡಿದ್ದಾರೆ.

ಮಧ್ಯ ರಾತ್ರಿ, ಬೆಳಗಿನ ಜಾವ ಯಾವಾಗ ಬೇಕಾದರೂ ರೋಗಿಗಳಿಗೆ ಲಭ್ಯ. ಒಂದೊಮ್ಮೆ ದೆಹಲಿ ಹೋಗಬೇಕಾದವರು ಬೆಂಗಳೂರಿನಿಂದ ಕಾರು ಬಾಡಿಗೆ ಪಡೆದು ನನ್ನ ಮಗನನ್ನು ನೋಡಿ ಸೀದಾ ಏರ್ ಪೋರ್ಟ್ ಗೆ ಹೋಗಿದ್ದರು.

ನಮ್ಮನೆಯಲ್ಲಿ ಯಾವಾಗಲೂ ತಮಾಷೆ ಮಾಡ್ತಾರೆ. ಅವನಿಗೆ ರಜನಿ ಡಾಕ್ಟರ್ ಹೇಳಿದ್ರೆ ಸಾಕು ಅಂತಾ. ಬೆಂಗಳೂರಲ್ಲೇ ಇರಲಿ, ಊರಲ್ಲೇ ಇರಲಿ ಆರೋಗ್ಯ ಕೆಟ್ಟರೆ ರಜನಿ ಡಾಕ್ಟರ್ ಇರುವಲ್ಲಿ ಹೋಗಬೇಕು.

ಡಾಕ್ಟರ್ ಗಳು ದೇವರಾಗೋದು ಹೀಗೇನೆ. ನಾನು ನೋಡಿದ, ಕೇಳಿದ, ನೋಡದೇ ಇರುವ,‌ಕೇಳದೇ ಇರುವ ಎಲ್ಲ ಡಾಕ್ಟರ್ ಗಳಿಗೆ ವೈದ್ಯರ ದಿನದ ಶುಭಾಷಯಗಳು.

ಇನ್ನೊಂದು ಮಾತು ಮರೆತಿದ್ದೆ. ನಾನು ಸಣ್ಣವನಿದ್ದಾಗ ನಮ್ಮೂರಿನ ಆಸ್ಪತ್ರೆಯಲ್ಲಿ ಮಹಮದ್ ಗೌಸ್ +( ಇದೇ ಹೆಸರು ಇರಬಹುದು) ಇದ್ದರು. ಜ್ವರದಿಂದ ಬಳಲುತ್ತಿದ್ದ ನನಗೆ ಇಂಜೆಕ್ಷನ್ ಚುಚ್ಚಲು ಹೋದಾಗ ಅವರನ್ನು ಒದೆದಿದ್ದೆ. ಆದರೂ ಅವರ ಪ್ರೀತಿಯ ನಗುಮುಖ ಬದಲಾಗಲಿಲ್ಲ. ಆನಂತರ ತುಂಬಾ ವರ್ಷಗಳ ಕಾಲ, ಈಗಲೂ ಆ ಘಟನೆ ನನ್ನನ್ನು ಕಾಡುತ್ತಿದೆ. ಅವರು ಎಲ್ಲಿದ್ದಾರೋ ಗೊತ್ತಿಲ್ಲ. ಅವರು ನೆನಪು ಸದಾ ನನ್ನೊಳಗಿದೆ. ಆರೇಳು ಹಳ್ಳಿಗಳ ಅದೆಷ್ಟು ಸಾವಿರ ಜನರನ್ನು ಉಳಿಸಿದ್ದಾರೆ ಅವರು.

ಚಿ.ನಾ.ಹಳ್ಳಿ: ಆಮ್ ಆದ್ಮಿ ಗ್ರಾಮ ಸಂಪರ್ಕ ಸಭೆಗೆ ನಿರ್ಧಾರ

Publicstory


Chikkanayakanahalli: ತಾಲ್ಲೂಕಿನಲ್ಲಿ ಆಮ್ ಅದ್ಮಿ ಪಕ್ಷಕ್ಕೆ ಜನ ಸಮುದಾಯದಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಜನರೊಟ್ಟಿಗೆ ಪಕ್ಷದ ಸಂಪರ್ಕ ಮತ್ತಷ್ಟು ತೀವ್ರಗೊಳಿಸಲು ಆಮ್ ಅದ್ಮಿ ಗ್ರಾಮಸಭೆಗಳನ್ನು ಅಯೋಜಿಸಿದೆ ಎಂದು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಬೆಳಗುಲಿ ಮಹಾವೀರ ಜೈನ್ ತಿಳಿಸಿದ್ದಾರೆ.

ಇದೇ 1ರಂದು ನೇ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಚಿಕ್ಕನಾಯಕನಹಳ್ಳಿ ಟೌನ್ ಶೆಟ್ಟಿಕೆರೆ ರಸ್ತೆ ನವೋದಯ ಕಾಲೇಜ್ ಎದರು ” ಆಮ್ ಆದ್ಮಿ ಪಕ್ಷ “ದ ಕಚೇರಿ ಉದ್ಘಾಟನೆ ಹಾಗೂ ಮೊದಲ ಗ್ರಾಮ ಸಂಪರ್ಕ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ತುಮಕೂರು ಜಿಲ್ಲಾ ಎ ಎ ಪಿ. ಅಧ್ಯಕ್ಷರಾದ Dr. ವಿಶ್ವನಾಥ್ ಮತ್ತು ವಲಯ ಸಂಯೋಜಕರಾದ ಗುರುಮೂರ್ತಿ ಮತ್ತು ಉಮಾಶಂಕರ್, ವಿಮಲ್ ಪಾಂಡೆ , ಫಾರೂಕ್, ಕಾರ್ಯಧ್ಯಕ್ಷರು ತುಮಕೂರು ಜಿಲ್ಲೆ. ಮತ್ತು Dr. ನಿಜಾಮುದ್ದೀನ್, ಆಡಿಟರ್ ಬಶೀರ್ ಅಹಮದ್, ಪ್ರೇಮಕುಮಾರ್ ರವರು ಸಂಬಾವ್ಯ ಅಭ್ಯರ್ಥಿ ಸಿರಾ. ಮತ್ತು ಮಂಜುನಾಥ್ ಎ ಎ ಪಿ.ಸಿರಾ. ಹಾಗೂ ಪ್ರಭುಸ್ವಾಮಿ ಸಂಬಾವ್ಯ ಅಭ್ಯರ್ಥಿ ಗುಬ್ಬಿ. ಮತ್ತು ಇತರೆ ಮುಖಂಡರು ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.

” ಅಮ್ ಆದ್ಮಿ ಪಕ್ಷದ ” ಕಚೇರಿಯ ಉದ್ಘಾಟನೆಯನ್ನು ಕೂಲಿ ಕಾರ್ಮಿಕರು ಮತ್ತು ರೈತರು ಮತ್ತು ಆಟೋ ಚಾಲಕರು ಉದ್ಘಾಟಿಸಲಿದ್ದಾರೆ ಎಂದು‌ ತಿಳಿಸಿದ್ದಾರೆ.

ಸ್ವರ್ಣ ಗೋಪುರದ ಮೇಲೊಂದು ರಾತ್ರಿ

0

ರವಿಕುಮಾರ್ ಕಮ್ಮನಕೋಟೆ


ಬ್ಯುಸಿ ಲೈಫ್ ಶೆಡ್ಯೂಲ್ ನಡುವೆ ಮನಸ್ಸು ರೀಲಾಕ್ಸ್ ಮೂಡ್ನತ್ತ ವಾಲುವುದು ಸಹಜ. ಅದಕ್ಕಾಗಿಯೇ ರಿಸ್ಕ್ ಅನ್ನೋ ರಸ್ಕ್ ನಂತಹ ಬೆಟ್ಟದ ರಾತ್ರಿ ಚಾರಣಕ್ಕೆ ಗೆಳೆಯ ಮೊಸರುಕುಂಟೆ ಗಂಗಾಧರ್ ಜೊತೆ ಈ ವಿಚಾರ ಪ್ರಸ್ತಾಪ ಮಾಡಿದೆ.

ನಮ್ಮ ಪರಮ ಆತ್ಮಿಯರ ಜೊತೆ ಕಾಡು ಮೇಡು ಸುತ್ತಿದರೆ ಮರೆಯಲಾಗದ ನೆನಪು ಉಳಿಯುತ್ತೆ ಎಂಬ ಚರ್ಚೆಯಾಯಿತು. ಸರಿ ಯಾರ ಜೊತೆಗೆ ಹೋಗೋದು ಎಂಬುದು ಇಬ್ಬರಿಗೂ ಪ್ರಶ್ನೆ? ಸದಾ ಲವಲವಿಕೆಯಿಂದಿರುವ.. ಪ್ರಾಕೃತಿಕ ಸೊಬಗನ್ನು ಸದಾ ಆಹ್ವಾದಿಸುವ ದಿ ಫೇಮಸ್ ಭ್ರೂಣ ತಜ್ಞ ಡಾ.ಹೇಮಂತ್ ಸರ್ ತಕ್ಷಣಕ್ಕೆ ಸ್ಮೃತಿ ಪಟಲಕ್ಕೆ ಬಂದರು. ಅವರನ್ನು ವಿನಂತಿಸಿಕೊಂಡಾಗ ಅವರು ಸಂತೋಷದಿಂದ ಬರುವ ಒಪ್ಪಿಗೆಯನ್ನಿತ್ತರು.

ಶನಿವಾರ ರಾತ್ರಿ ಹೊರಡಲು ನಾವು ಸಿದ್ಧತೆ ಮಾಡಿಕೊಂಡೆವು. ಆ ಕಡೆ ಯಿಂದ ಡಾ. ಹೇಮಂತ್ ಸರ್ ಮತ್ತು ಅವರ ತಂಡ ನಮ್ಮ ಜೊತೆ ಗೂಡಿತ್ತು. ಅವರ ಕಾರಿನಲ್ಲಿಯೇ ಮಧುಗಿರಿಯ ಶ್ವಾಸಕೋಶದಂತಿರುವ ಕಮ್ಮನಕೊಟೆ ಕಡೆ ನಮ್ಮ ಪ್ರಯಾಣ ಸಾಗಿತು. ನಮ್ಮ ಮತ್ತು ಅವರ ಕುಶಲೋಪರಿ ಮಾತನಾಡುವ ಹೊತ್ತಿಗೆ ಕಮ್ಮನಕೋಟೆ ಹೆಬ್ಬಾಗಿಲನ್ನು ರೀಚ್ ಆದೆವು.

ಕಾರಿನಿಂದ ಇಳಿದು ಮೊದಲಿಗೆ ಹೋದದ್ದು ದನಕರುಗಳೇ ಸಂಪತ್ತಿನಂತೆ ತುಂಬಿರುವ ಮಾವನ ಮನೆಗೆ. ದನದ ಕರುಗಳು, ಬೆಕ್ಕಿನ ಮರಿಯನ್ನು ಮದ್ದಾಡಿದ ನಂತರ ಉಡುಬೆಟ್ಟದ ಕಡೆ ಕಾರಿನ ಟಯರ್ಗಳು ಮುಖ ಮಾಡಿದವು. ಎಕ್ಸ್ಯುವಿ 500 ಕಾರಿನ ಠೀವಿಯ ಚಲನೆ ನಿರಾಯಾಸವಾಗಿ ಗುಡ್ಡಗಳ ಮೇಲೆ ಹಾದುಹೋಗುವ ಡಾಂಬರು ರಸ್ತೆಯನ್ನೇರಿ ಆನೆಯ ಗಂಭೀರ ನಡಿಗೆಯಂತೆ ಸಾಗುತ್ತಿತ್ತು.

ಅಷ್ಟೊತ್ತಿಗೆ ಕತ್ತಲಾಗಿದ್ದರೂ ಆಗಸದಲ್ಲಿನ ಸಂಜೆಯ ಬೆಳಕಿನ ಮುಸುಕು ಆರಿರಲಿಲ್ಲ. ಗಗನವನ್ನು ಚುಂಬಿಸುವಂತೆ ಕಾಣುವ ಎತ್ತರದ ಬೆಟ್ಟಗಳು ಕಮ್ಮನಕೋಟೆಗೆ ನಿರ್ಮಿಸಲಾದ ಸ್ವರ್ಣ ಗೋಪುರಗಳಂತೆ ಕಾಣುತ್ತಿದ್ದವು. ಘಾಟ್ ಪ್ರದೇಶದಂತೆ ಇದ್ದ ಹಾದಿಯಲ್ಲಿ ಸಾಗುವಾಗಂತೂ ಕವಳಿಸಂದಿ ಕಾಡಿನ ತಣ್ಣನೆಯ ಗಾಳಿ ಮೈ ಸೋಕಿದಾಗ ರೋಮಾಂಚನ.

ಜೀರ್ಜಿಂಬೆಯಂತೆ ಕರುವುಗಳನ್ನು ದಾಟಿ ಉಡಬೆಟ್ಟದ ಮಾರಮ್ಮ ದೇವಸ್ಥಾನದ ಪಕ್ಕದಲ್ಲಿ ಕಾರು ಬಂದು ನಿಂತಿತು.
ಟ್ರಕಿಂಗ್ ಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬೆಟ್ಟ ಹತ್ತಲು ಹೊರಟೇ ಬಿಟ್ಟೆವು. ಕಡಿದಾದ ಬಂಡೆಗಳನ್ನು ಏರಿ ಹತ್ತುವುದೇ ಒಂದ್ ಟಾಸ್ಕ್. ಸದಾ ಅರಗಿನ ಅರಮನೆಯಲ್ಲಿರುವ ವೈದ್ಯರು ನಮಗಿಂತಲೂ ಉತ್ಸುಕರಾಗಿ ಬೆಟ್ಟ ಏರುವುದು ನೋಡಿದರೆ ನಿಜಕ್ಕೂ ಅಚ್ಚರಿ ಎನಿಸಿತು.

ಟೆಂಟ್ ಗಳು ಹಾಗೂ ಆಹಾರ ಸಾಮಾಗ್ರಿಗಳು, ಬಿಂದಿಗೆಯಲ್ಲಿ ನೀರನ್ನು ಹೊತ್ತು ಹೋದದ್ದು ದೇಹಕ್ಕೆ ದಣಿವಾದರೂ ಮನಸ್ಸಿಗೆ ಉಲ್ಲಾಸ ತಂದುಕೊಟ್ಟಿತು.

ಡಾಕ್ಟರ್ ಗಳು, ನಮ್ಮೂರ ಪಾಕೃತಿಕ ಸೌಂದರ್ಯವನ್ನು ನೋಡಿ ಆಗಸದತ್ತ ಕೈಚಾಚಿ ಸಂತಸದ ನಗೆ ಕೂಗುವಾಗ ಕಮ್ಮನಕೋಟೆ ಪ್ರಾಕೃತಿಕ ಸೊಬಗಿಗೆ ಗರ್ವ ಹುಟ್ಟಿಸಿರಬಹುದು. ಇಲ್ಲವೇ ನಿಸರ್ಗವೇ ಹಳ್ಳಗಳ ರೂಪದಲ್ಲಿ ನಾಚಿ ನೀರಾಗಿರಬಹುದು ಎನಿಸತೊಡಗಿತು.

ಮುತ್ತಿನಂತಹ ಮಿರುಗುವ ನಕ್ಷತ್ರ ಪುಂಜಗಳು ಆಕಾಶಕ್ಕೆ ತಲೆ ಎತ್ತಿ ನೋಡಿದರೆ ಮದುವೆಯ ದಿಬ್ಬಣದಲ್ಲಿ ಕಾಣುವ ಸಾಲು ಸಾಲು ದೀಪಗಳಂತೆ ಕಪ್ಪು ಮೋಡಗಳ ನಡುವೆ ಗೋಚರಿಸುತ್ತಿದ್ದವು. ಎತ್ತಿದ ಕತ್ತನ್ನು ಭೂಮಿಯ ಕಡೆ ತಿರುಗಿಸಿದಾಗ ರಾತ್ರಿ ಹೊತ್ತಿನಲ್ಲಿ ಬೆಳಗುತ್ತಿದ್ದ ಊರ ಬೀದಿ ದೀಪಗಳು ಎರಡು ಸಾವಿರ ಅಡಿಗೂ ಎತ್ತರದಿಂದ ನೋಡಿದರೆ ಅಲ್ಲಲ್ಲೆ ಸಣ್ಣ ದ್ವೀಪಗಳಂತೆ ಕಾಣದೆ ಇರುತ್ತವೆಯೇ?

ಬೆಟ್ಟ ಏರಿ ದಣಿದಿದ್ದ ನಮಗೆ ಒಂದು ಗುಂಪು ಒಣ ಸೌದೆಯನ್ನು ತಂದು ಪೈರ್ ಕ್ಯಾಂಪ್ ಹಾಕಿದ್ದು ಚಳಿ ಹವೆಗೆ ಮೈ ಕಾವೇರಿಸಿತು. ಮತ್ತೊಂದು ತಂಡವು ನಾಲ್ಕು ಕಲ್ಲುಗಳನ್ನು ಜೋಡಿಸಿ ಅಡುಗೆಗೆ ತಯಾರಿ ನಡೆಸಿತು.

ಅಸಂಖ್ಯಾತ ಮಾತುಗಳು ಮುಗಿಯುವ ವೇಳೆಗೆ ಹಸಿ ಟೊಮ್ಯಾಟೊ ಗೊಜ್ಜು , ನಾಟಿ ಕೋಳಿ ಸಾರು, ಮುದ್ದೆ , ಅನ್ನವನ್ನು ಅಡಿಕೆ ಪಟ್ಟೆ ಎಲೆಯಲ್ಲಿ ಹಾಕಿಕೊಂಡು ಸಂತೃಪ್ತವಾಗಿ ಹಸಿವನ್ನು ನೀಗಿಸಿಕೊಂಡೆವು. ಜಾನಪದ ಹಾಡುಗಳನ್ನು ಹಾಡುತ್ತ ರಾತ್ರಿ ಎರಡು ಗಂಟೆವರೆಗೂ ವಿರಮಿಸಿ ತಮ್ಮ ಟೆಂಟುಗಳಲ್ಲಿ ಮಲಗಿಕೊಂಡರು .

ನಾನು ಮತ್ತು ಸ್ನೇಹಿತ ಗಂಗಾಧರ್ ಬೆಂಕಿಯ ಕಡೆ ಪಾದಗಳನ್ನು ಹಾಕಿ ಬೆಚ್ಚನೆ ಮಲಗಿರುವಾಗ ಕರಡಿ ಮರಿಗಳ ಕೂಗು ಕೇಳಿಸಿತು. ಆಗ ಓಹ್.. ನಾವು ಕಾಡಿನಲ್ಲಿರುವ ಸಂಗತಿ ಮತ್ತೊಮ್ಮೆ ಪ್ರಜ್ಞೆಗೆ ಬಂತು. ಒಂದು ಕ್ಷಣ ಜೀವ ದಂಗಾಯಿತು ಆದರೂ ಅಷ್ಟೇನೂ ಭಯವಾಗಲಿಲ್ಲ.

ಬೆಳಗ್ಗೆಯಾದರೂ ಕೆಂಡ ಉರಿಯುತ್ತಲೇ ಇತ್ತು. ಸೂರ್ಯೋದಯ ವಾಗತೊಡಗಿದಾಗ ಎಲ್ಲರೂ ಸೂರ್ಯನ ಎದುರಿಗೆ ಮುಖಮಾಡಿ ನಿಂತೆವು. ಬಿಸಿಲು ನೆತ್ತಿಗೇರುವ ಹೊತ್ತಿಗೆ ಬೆಟ್ಟವಿಳಿದು ಕಮ್ಮನಕೋಟೆ ಫಾಲ್ಸ್ಗೆ ತೆರಳಿದೆವು.

ನೀರಿನಲ್ಲಿ ಮಿಂದು ಶಾಂತಕ್ಕ ಅತ್ತಿಗೆ ಮಾಡಿದ್ದ ಚಿತ್ರನ್ನದ ಜೊತೆಗೆ ಕಾಫಿ ಕುಡಿದು ಎಕ್ಸ್ಯುವಿ ರಥವನ್ನೇರಿ ತಮ್ಮ ತಮ್ಮ ಊರುಗಳ ಕಡೆ ಮುಖ ಮಾಡಿದೆವು. ಭಾಸ್ಕರನು ಅಷ್ಟೊತ್ತಿಗೆ ಭಾನುವಾರಕ್ಕೆ ಶುಭ ಹಾರೈಸಿ ಸುಂದರ ಸೋಮವಾರಕ್ಕೆ ಮತ್ತೆ ಬರಲು ಹಾತೊರೆಯುತ್ತಿದ್ದ.

ಗುಂಡಾದ ಭೂಮಿಲಿ ಎಂದಾದರೊಂದು ದಿನ ಮತ್ತೆ ಸಿಕ್ಕೆ ಸಿಗುತ್ತೇವೆ ಎಂದು ಬೆಂಗಳೂರಿನಿಂದ ಬಂದಿದ್ದ ಡಾ . ಹೇಮಂತ್ ಸರ್ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ಹೇಳಿ ವಿಕ್ ಎಂಡ್ ಟ್ರಕಿಂಗ್ ಮುಕ್ತಾಯ ಮಾಡಿದವು.

ಕಲಿಯುವ ಕೆಲಸಕ್ಕೆ ಮುಕ್ತಾಯವಿಲ್ಲ; ಪ್ರೊ.ಎಚ್.ಎಸ್.ರಾಘವೇಂದ್ರ ರಾವ್

Publicstory

ತುಮಕೂರು: ನಿಜವಾದ ವಿಮರ್ಶೆ ಲೋಕ ವಿಮರ್ಶೆ ಅಲ್ಲ, ಆತ್ಮವಿಮರ್ಶೆ. ಸಮಾನತೆ ಮತ್ತು ಒಳ ಮನಸ್ಸು ನಮ್ಮ ಗುರುವಾಗಬೇಕು ಎಂದು ಸಾಹಿತ್ಯ ವಿಮರ್ಶಕ ಪ್ರೊ.ಎಚ್.ಎಸ್.ರಾಘವೇಂದ್ರ ರಾವ್ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ವಿಶ್ವವಿದ್ಯಾನಿಲಯ ಪ್ರಸಾರಂಗದಿಂದ ಆಯೋಜಿಸಿದ್ದ ‘ತಿಳಿವ ತೇಜದ ನಡೆ ವಿಶೇಷ ಉಪನ್ಯಾಸ ಮಾಲೆ’ ಕಾರ್ಯಕ್ರಮದಲ್ಲಿ ‘ನವೋದಯ ಕಾವ್ಯ: ಅಧ್ಯಯನದ ಬಗೆ’ ವಿಷಯ ಕುರಿತು ಮಾತನಾಡಿದ ವಿಮರ್ಶಕ ಪ್ರೊ. ಎಚ್. ಎಸ್ ರಾಘವೇಂದ್ರರಾವ್ ಕಲಿಯುವ ಕೆಲಸಕ್ಕೆ ಮುಕ್ತಾಯವಿಲ್ಲ. ಕಲೆ, ಸಾಹಿತ್ಯ ಈ ಎಲ್ಲವೂ ನಮ್ಮನ್ನು ನಾವು ನೋಡಿಕೊಳ್ಳುವ ಕನ್ನಡಿಗಳು ಇದನ್ನು ಅರ್ಥ ಮಾಡಿಕೊಂಡಾಗ ಎಲ್ಲಾ ಕಾಲಘಟ್ಟದ ಕಾವ್ಯಗಳೂ ಅರ್ಥವಾಗುತ್ತವೆ. ಪ್ರತಿಯೊಬ್ಬ ಕವಿಯ ಮೂಲಕವೂ ಕನ್ನಡ ಹುಟ್ಟುತ್ತದೆ. ಕನ್ನಡ ಎಂಬುದು ಬರಿಯ ಭಾಷೆಯಲ್ಲ. ಕನ್ನಡ ಎಂದರೆ ಬದುಕು, ಜಗತ್ತನ್ನು ಕಟ್ಟಿಕೊಡುವ ರೀತಿ. ಸಂಸ್ಕೃತಿ ಎಂಬುದಕ್ಕೆ ಭಾಷೆ ಉಪಕರಣವೇ ಹೊರತು ಅದೇ ಸರ್ವಸ್ವವಲ್ಲ ಎಂದರು.

ಓದು ಒಂದು ಬಗೆಯಾದರೆ ಅಧ್ಯಯನ ಮತ್ತೊಂದು ಬಗೆ. ಅಧ್ಯಯನ ಮಾಡಲು ಹೊರಟಾಗ ಯಾವ ಸಂಗತಿಗಳು ಸಹಕಾರಿಯಾಗುತ್ತವೆ, ಅಡ್ಡಿಯಾಗುತ್ತವೆ ಮತ್ತು ಅವುಗಳನ್ನು ಮೀರುವುದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕು. ಇದೇ ಸರಿ, ಇಷ್ಟೇ ಓದಬೇಕು ಎಂದು ಒತ್ತಾಯ ಮಾಡಿದರೆ ಅದು ಫ್ಯಾಸಿಸಂನ ಭಾಗ. ಕಾವ್ಯವು ನಮ್ಮ ಅನುಭವ ಭಾವ, ವಿಚಾರ, ಲೋಕಕ್ಕೆ ತಕ್ಕಂತೆ ಬದಲಾಗುತ್ತದೆ ಅಥವಾ ಹೊಸತೊಂದು ಸೇರ್ಪಡೆಯಾಗುತ್ತದೆ. ಇದು ಅಧ್ಯಯನದ ಬಹುಮುಖ ಮತ್ತು ಚಲನ ಶೀಲತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಕವಿತೆ ಕಾವ್ಯಗಳಿಗೆ ದಲಿತ, ನವೋದಯ, ನವ್ಯ, ಬಂಡಾಯ, ಪ್ರಗತಿಶೀಲ ಎಂಬ ಚಳವಳಿಗಳ ಹಣೆ ಪಟ್ಟಿಯನ್ನು ಅಂಟಿಸುತ್ತೇವೆ. ಆದರೆ ಸಾಮಾಜಿಕ ಸಖ್ಯ ದಾರುಣವಾಗಿದ್ದಾಗಲೂ ಕವಿತೆ ಎನ್ನುವುದು ಅದನ್ನು ಮೀರಲು, ವಿಮರ್ಶಿಸಲು ಪ್ರಯತ್ನಿಸುತ್ತದೆ. ಸಮಾಜದ ಸ್ಥಿತಿ, ಸಂಸ್ಕೃತಿ ಹಾಗೂ ಕವಿತೆಗೂ ಇರುವ ಸಂಬಂಧವನ್ನು ನಾವು ಅರಿತಿರಬೇಕು. ನಾವು ಕೂಡ ವಿದ್ಯಾರ್ಥಿ ಎನ್ನುವ ಭಾವವನ್ನು ಯಾವಾಗ ಮರೆಯುತ್ತೇವೆ ಆಗ ಅಧ್ಯಾಪಕರಾಗಿ ಉಳಿಯುವುದಿಲ್ಲ. ಇದನ್ನು ಅರಿತರೆ ಕಲಿಸುವ ಹಕ್ಕು ಪಡೆಯುತ್ತೇವೆ. ತಾವು ಮಾಡುವ ಕೆಲಸವನ್ನು ಪ್ರೀತಿಸಬೇಕು ಹಾಗೂ ಆಸಕ್ತಿ ಮತ್ತು ಕರ್ತವ್ಯದ ರೂಪದಲ್ಲಿ ನೋಡಬೇಕಾಗುತ್ತದೆ ಎಂದರು.

ಎಲ್ಲರೂ ಕವಿತೆಗೆ ಮರುಳರಾಗಿರಬೇಕು ಎಂಬುದನ್ನು ಯಾರೂ ಅಪೇಕ್ಷೆ ಪಡಬೇಕಾದ್ದಿಲ್ಲ. ಯಾವುದೇ ಕಾವ್ಯ ನಿಶ್ಚಿತವಾದ ಅರ್ಥವನ್ನು ಒಳಗೊಂಡಿರುವುದಿಲ್ಲ. ಓದದೇ, ಕೇಳದೆ ಬರುವ ಆತ್ಮವಿಶ್ವಾಸ ಅಹಂಕಾರವಾಗಿರುತ್ತದೆ. ನಾವು ಸ್ವಂತವಾಗಬೇಕಾದರೆ ಲೋಕಾಂತವನ್ನು ಒಳಗೊಳ್ಳಬೇಕು. ಇದು ಕಾವ್ಯಕ್ಕೂ ಅನ್ವಯಿಸುತ್ತದೆ. ಕವಿತೆಯಲ್ಲಿ ಭಾಷೆ ಬದಲಾಗುತ್ತದೆ. ಪ್ರತಿಯೊಂದು ಕವಿತೆಯೂ ಕವಿಯನ್ನು ಮತ್ತೆ ಮತ್ತೆ ಹುಟ್ಟಿಸುತ್ತದೆ. ಕುವೆಂಪು ಅವರು ‘ರಾಮಾಯಣ ದರ್ಶನಂ’ ಕಟ್ಟಿಕೊಟ್ಟರು ಮತ್ತು ಅದರೊಂದಿಗೆ ತಮ್ಮನ್ನೂ ಕಟ್ಟಿಕೊಂಡರು ಎಂದು ತಿಳಿಸಿದರು.

ಪಾಠ ಮಾಡುವಾಗ ಕವಿಯ ಅರ್ಥ ಒಂದು ಬಗೆಯಾದರೆ, ಅಧ್ಯಾಪಕನ ಅರ್ಥ ಇನ್ನೊಂದು, ವಿದ್ಯಾರ್ಥಿಗಳ ಅನುಭವ ಮತ್ತು ದೃಷ್ಠಿಕೋನದಿಂದ ಹುಟ್ಟುವ ಅರ್ಥ ಹಾಗೂ ವಿದ್ಯಾರ್ಥಿ ತಾನೇ ಓದಿ ತನಗೆ ದಕ್ಕಿದಷ್ಟು ಅರ್ಥ ಮಾಡಿಕೊಳ್ಳುವುದು ಮತ್ತೊಂದು ಬಗೆ. ಇದರಲ್ಲಿ ಅಂತಿಮ ಅರ್ಥ ಹೇಗೆ ಹುಟ್ಟುತ್ತದೆ? ಎಂದು ಪ್ರಶ್ನಿಸಿದರು. ಸಾಹಿತ್ಯವೆಂದರೆ ಧರ್ಮ ಗ್ರಂಥವಲ್ಲ. ಅದು ಗೋಡೆಗಳನ್ನು ನಿರ್ಮಿಸುವುದಿಲ್ಲ, ಕೆಡವುತ್ತದೆ. ನಮ್ಮ ಓದು, ಕಲಿಕೆ, ಬರವಣಿಗೆ ಕಾಲದ ಒತ್ತಡವನ್ನು ಮೀರಬೇಕು ಹಾಗೂ ಮೇಷ್ಟ್ರುಗಳಿಗೆ ನಿಷ್ಪಕ್ಷಪಾತ ಗುಣಬೇಕು ಎಂದು ಅಭಿಪ್ರಾಯಪಟ್ಟರು. ಉಪನ್ಯಾಸದ ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದವೂ ನಡೆಯಿತು.

ಪ್ರಸಾರಾಂಗ ನಿರ್ದೇಶಕರಾದ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಯವರು ಸ್ವಾಗತಿಸಿದರು. ಸಂಶೋಧನಾರ್ಥಿ ರಂಗಸ್ವಾಮಿ ಹೆಚ್. ವಂದಿಸಿದರು.

ತುಮಕೂರು: ಚುರುಕಾದ ಆಮ್ ಆದ್ಮಿ ಪಾರ್ಟಿ! ಅಭ್ಯರ್ಥಿಗಳ ಪೈಪೋಟಿ

ತುಮಕೂರು: ಮಳೆಗಾಲ ಬಿತ್ತನೆಗೆ ಒಳ್ಳೆಕಾಲವೆಂಬಂತೆ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಆಮ್ ಆದ್ಮಿ ಪಾರ್ಟಿ ಜಿಲ್ಲೆಯ ಗ್ರಾಮ ಮಟ್ಟದಲ್ಲಿ ತನ್ನ ಪಕ್ಷದ ‘ಬಿತ್ತನೆ’ ಕಾರ್ಯ ಚುರುಕುಗೊಳಿಸಿದೆ.

ತಳಮಟ್ಟದಲ್ಲಿ ಪಕ್ಷ ಸಂಘಟಿಸುವ ಕಾರ್ಯಕರ್ತರನ್ನು ರೂಪಿಸುವ ಸಲುವಾಗಿ ‘ಗ್ರಾಮ ಸಂಪರ್ಕ ಅಭಿಯಾನ’ ನಡೆಯುತಿದ್ದು, ಇದರ ಭಾಗವಾಗಿ ಜಿಲ್ಲಾ ಸಮಾವೇಶ ಈಚೆಗೆ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆದಿತ್ತು.
ಇದೀಗ ಮುಂದುವರೆದ ಭಾಗವಾಗಿ ಜಿಲ್ಲೆಯ 11ವಿಧಾನಸಭಾ ಕ್ಷೇತ್ರಗಳ ಬೂತ್ ಮಟ್ಟದ ಕಾರ್ಯಕರ್ತರನ್ನು ಒಳಗೊಂಡ ತಾಲ್ಲೂಕು ಸಮಾವೇಶಗಳಿಗೆ ಸಿದ್ದತೆ ನಡೆದಿದೆ.

ಜುಲೈ1ಕ್ಕೆ ಚಿಕ್ಕನಾಯಕನಹಳ್ಳಿ, 6ರಂದು ಕುಣಿಗಲ್, 7ಕ್ಕೆ ತಿಪಟೂರು ಸೇರಿದಂತೆ ಜುಲೈ 30 ಅಥವಾ ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯ ಎಲ್ಲಾ 11ವಿಧಾನಸಭಾ ಕ್ಷೇತ್ರಗಳ ಸಮಾವೇಶಗಳು ಮುಗಿಯಲಿವೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ್ ಹೇಳುತ್ತಾರೆ.

ಬೆದೆ ಮಳೆಯಲ್ಲಿ ಬಿತ್ತನೆ ಬೀಜ ಬೇಲಿಗೆ ಹೊಯ್ದರೂ ಹುಟ್ಟುತ್ತವೆ ಎಂಬ ನಾಣ್ಣುಡಿಯಂತೆ ಆಮ್ ಆದ್ಮಿ ಪಕ್ಷ ಈಗಾಗಲೇ ವಿಧಾನಸಭಾವಾರು ಸಂಭವನೀಯ ಅಭ್ಯರ್ಥಿಗಳನ್ನು ಪಟ್ಟಿ ಮಾಡಿ ಅವರನ್ನು ಸುಲಭವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿದೆ.

ಪಕ್ಷ ಸಂಘಟನೆಯಲ್ಲಿ ಪರಸ್ಪರ ಪೈಪೋಟಿ ಮೂಡಲೆಂದು ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ ಎರಡ್ಮೂರು ಸಂಭವನೀಯ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ಒಬ್ಬರು, ಗರಿಷ್ಠ ಐವರು ಸಂಭವನೀಯ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
ಕುಣಿಗಲ್ ಕ್ಷೇತ್ರದಲ್ಲಿರುವ ಇಬ್ಬರು ಸಂಭವನೀಯ ಅಭ್ಯರ್ಥಿಗಳ ಪೈಕಿ ಜಯರಾಮಯ್ಯ ಜುಲೈ 6ರಂದು ತಾಲ್ಲೂಕು ಸಮಾವೇಶ ಹಮ್ಮಿಕೊಂಡಿದ್ದಾರೆ. ಕ್ಷೇತ್ರದ ಎಲ್ಲಾ ಬೂತ್ ಮಟ್ಟದಿಂದ ಸುಮಾರು 2ಸಾವಿರ ಕಾರ್ಯಕರ್ತರನ್ನು ಸಂಘಟಿಸಿ ಸಮಾವೇಶ ನಡೆಸುವುದಾಗಿ ಜಯರಾಮಯ್ಯ ಹೇಳುತ್ತಾರೆ.
ಪಾವಗಡ, ಶಿರಾ, ಕುಣಿಗಲ್, ತಿಪಟೂರು, ತುರುವೇಕೆರೆ, ತುಮಕೂರು ನಗರ, ಚಿಕ್ಕನಾಯಕನಹಳ್ಳಿ, ಗುಬ್ಬಿ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಸಮರ್ಥರಿದ್ದು, ತುಮಕೂರು ಗ್ರಾಮಾಂತರ ಸೇರಿ ಎರಡ್ಮೂರು ಕ್ಷೇತ್ರದಲ್ಲಿ ಮುಖಂಡರ ಕೊರತೆ ಇದೆ ಎಂಬುದನ್ನು ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ್ ಒಪ್ಪುತ್ತಾರೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಸಂಭವನೀಯ ಅಭ್ಯರ್ಥಿಗಳಿದ್ದು, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಸಲುವಾಗಿ ಒಂದು ವಾರ ಕಾಲ ‘ಶ್ರೀಸಾಮಾನ್ಯ’ ಯಾತ್ರೆ ನಡೆಸಿದ ನಂತರ ಆಗಸ್ಟ್ ಮೊದಲ ವಾರದಲ್ಲಿ ತಾಲ್ಲೂಕು ಸಮಾವೇಶ ನಡೆಸುವುದಾಗಿ ಸಂಭವನೀಯ ಅಭ್ಯರ್ಥಿ ಪ್ರೇಮಕುಮಾರ್ ಅಂಕಸಂದ್ರ ಹೇಳುತ್ತಾರೆ.
ಗ್ರಾಮ ಮಟ್ಟದಲ್ಲಿ ಮಾತ್ರವಲ್ಲದೆ ತುಮಕೂರು ನಗರದಲ್ಲಿ ವಾರ್ಡ್ ವಾರು ಪಕ್ಷ ಸಂಘಟನೆ ಮಾಡಲು ಪದಾಧಿಕಾರಿಗಳು ಪ್ರತಿದಿನ ಮುಂಜಾನೆ ಒಂದು ಗಂಟೆ ಕಾಲ ಉದ್ಯಾನ ವನಗಳಲ್ಲಿ ಪಕ್ಷದ ಪರವಾಗಿ ಅಭಿಯಾನ ನಡೆಸವುದು. ನಾಗರಿಕರಿಂದ ಆಯಾ ವಾರ್ಡ್ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರಿಸುವುದು. ಮುಂಜಾನೆ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ಸೇರುವ ಕಡೆ ಚಹಾ ಡಬ್ಬಿಯೊಂದಿಗೆ ಹೋಗಿ ಅವರಿಗೆ ಚಹಾ ವಿತರಿಸಿ ಜನಸಾಮಾನ್ಯರಿಗೆ ಆಮ್ ಆದ್ಮಿ ಪಾರ್ಟಿಯ ಅಗತ್ಯವನ್ನು ಮನಗಾಣಿಸುವ ಬಗ್ಗೆ ಸಲಹೆ ನೀಡಿರುವುದಾಗಿ ಜಿಲ್ಲಾಧ್ಯಕ್ಷ ಡಾ ವಿಶ್ವನಾಥ್ ತಿಳಿಸಿದ್ದಾರೆ.

ಬೆಟ್ಟದ ತಪ್ಪಲಲ್ಲಿ ಸಾಮೂಹಿಕ ಯೋಗಾಭ್ಯಾಸ

ತುಮಕೂರು(ಕ.ವಾ): ಹಸಿರಿನ ವನಸಿರಿಯ ನಡುವೆ ಹಕ್ಕಿಗಳ ಕಲರವದೊಂದಿಗೆ ಸೂರ್ಯನ ಮೊದಲ ರಶ್ಮಿ ಭೂರಮೆಗೆ ಮುತ್ತಿಕ್ಕುವ ಸಮಯದಲ್ಲಿ ಸುಕ್ಷೇತ್ರ ಸಿದ್ಧರಬೆಟ್ಟದ ತಪ್ಪಲಲ್ಲಿ ಓಂಕಾರದಿಂದ ಪ್ರಾರಂಭವಾದ ಸಾಮೂಹಿಕ ಯೋಗಾಭ್ಯಾಸ ಎಲ್ಲರಲ್ಲೂ ನವಚೈತನ್ಯ ತಂದುಕೊಟ್ಟಿತು.

ಜಿಲ್ಲೆಯ ಕೊರಟಗೆರೆ ತಾಲೂಕು ಸುಕ್ಷೇತ್ರ ಸಿದ್ಧರಬೆಟ್ಟದ ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ಆವರಣದಲ್ಲಿ ಮಂಗಳವಾರ ಬೆಳಗಿನ ಜಾವ ಶ್ರೀ ಕ್ಷೇತ್ರದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮಿಗಳು, ಮಠದ ವಿದ್ಯಾರ್ಥಿಗಳು, ವಿವಿಧ ಅಧಿಕಾರಿಗಳು, ಸಂಘ ಸಂಸ್ಥೆಗಳ ಸದಸ್ಯರು ವಿವಿಧ ಯೋಗಾಸನ, ಪ್ರಾಣಾಯಾಮ ಹಾಗು ಧ್ಯಾನಾಭ್ಯಾಸ ಮಾಡುವ ಮೂಲಕ ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಸಿದ್ಧರಬೆಟ್ಟದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ಡಾ|| ಹೆಚ್.ಬಿ. ಭವ್ಯ ಅವರು ವಿವಿಧ ಆಸನಗಳ ಭಂಗಿಗಳು ಹಾಗೂ ಆಸನಗಳನ್ನು ಅಭ್ಯಾಸ ಮಾಡುವುದರಿಂದಾಗುವ ಪ್ರಯೋಜನಗಳ ಬಗೆ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ವಜ್ರಾಸನ, ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧಚಕ್ರಾಸನ, ತ್ರಿಕೋನಾಸಾನ, ವಕ್ರಾಸನ, ಉಷ್ಟ್ರಾಸನ, ಶಶಾಂಕಾಸನ, ಮಕರಾಸನ, ಶಲಭಾಸನ, ಧನುರಾಸನಗಳಲ್ಲದೆ ನಾಡಿಶುದ್ಧಿ ಹಾಗೂ ಶೀತಳಿ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿಸಲಾಯಿತು. ಈ ಅಭ್ಯಾಸಗಳಿಂದ ದೇಹದಲ್ಲಾಗುವ ಬದಲಾವಣೆಗಳು ಎಲ್ಲರ ಅನುಭವಕ್ಕೆ ಬಂದಿತು.

ಡಾ|| ಭವ್ಯ ಮಾತನಾಡಿ ಊಟದ ನಂತರ ಮಾಡುವ ಏಕೈಕ ಆಸನ ವಜ್ರಾಸನದಿಂದ ಅಜೀರ್ಣ ಸಮಸ್ಯೆ; ಮಕರಾಸನದಿಂದ ಉಸಿರಾಟದ ತೊಂದರೆ; ಶಶಾಂಕಾಸನ ಅಭ್ಯಾಸದಿಂದ ರಕ್ತದೊತ್ತಡ ನಿಯಂತ್ರಣ, ಬೆನ್ನಿನ ಸಮಸ್ಯೆ ನಿವಾರಣೆಯಾಗುತ್ತದೆ. ನಾಡಿಶುದ್ಧಿ ಹಾಗೂ ಶೀತಳಿ ಪ್ರಾಣಾಯಾಮ ಅಭ್ಯಾಸದಿಂದ ದೇಹದಲ್ಲಿರುವ ೭೨೦೦೦ ನಾಡಿಗಳು ಶುದ್ಧಿಯಾಗುತ್ತವೆ. ದೇಹದ ಸಮತೋಲನ ಕಾಯ್ದುಕೊಳ್ಳಬಹುದು. ಮನಸ್ಸು ಶಾಂತಚಿತ್ತತೆಯಿಂದಿರಲು ಸಾಧ್ಯಮಾಡಿಕೊಡುತ್ತದೆ ಎಂದು ಸಲಹ ನೀಡಿದರು.

ಬ್ರಹ್ಮಕುಮಾರಿ ಸಂಸ್ಥೆಯ ಸುಜಾತಕ್ಕ ಅವರು ಧ್ಯಾನಾಭ್ಯಾಸವನ್ನು ಮಾಡಿಸುತ್ತಾ ಧ್ಯಾನ ಮಾಡುವುದರಿಂದ ಮನಸ್ಸಿಗೆ ಏಕಾಗ್ರತೆ, ತಾಳ್ಮೆ, ಸಮಾಧಾನ ತಂದುಕೊಡುವುದಲ್ಲದೆ ಜ್ಞಾನದ ಮಟ್ಟ ಹೆಚ್ಚುತ್ತದೆ ಎಂದರು.

ಯೋಗಾಭ್ಯಾಸದಲ್ಲಿ ವಿವಿಧ ಆಸನಗಳನ್ನು ಅಭ್ಯಾಸ ಮಾಡಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡುತ್ತಾ, ವಿಶ್ವದಾದ್ಯಂತ ಜೂನ್ ೨೧ರಂದು ಏಕಾಕಾಲಕ್ಕೆ ಯೋಗ ದಿನವನ್ನಾಗಿ ಆಚರಿಸುತ್ತಿದ್ದೇವೆ.

ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಾವಿಂದು ಆಚರಿಸುತ್ತಿದ್ದು, ಪ್ರಧಾನ ಮಂತ್ರಿ ಮೋದಿಯವರೂ ಸಹ ಮೈಸೂರಿನಲ್ಲಿ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದರಲ್ಲದೆ ಯೋಗ, ಪ್ರಾಣಾಯಾಮ, ಧ್ಯಾನಕ್ಕೆ ಈ ಸಿದ್ಧರಬೆಟ್ಟ ಕ್ಷೇತ್ರವು ಸೂಕ್ತವಾಗಿದೆ. ಕಳೆದ ೮ ವರ್ಷಗಳ ಹಿಂದೆ ಯೋಗವೆಂದರೆ ದೇಹವನ್ನು ದಂಡಿಸುವ ವ್ಯಾಯಾಮವೆಂದು ನಂಬಲಾಗುತ್ತಿತ್ತು. ಆದರೆ ಯೋಗವೆಂದರೆ ಕೇವಲ ವ್ಯಾಯಾಮವಲ್ಲ. ದೇಹಕ್ಕೂ, ಮನಸ್ಸಿಗೂ ಸಮಾಧಾನ ತರುವ ಸಾಧನ. ಯೋಗಾಭ್ಯಾಸ ಮಾಡುವವರು ಉಸಿರಾಟದ ಮೇಲೆ ಗಮನವನ್ನು ಕೇಂದ್ರೀಕರಿಸಿ ಸುಧೀರ್ಘವಾಗಿ, ನಿಧಾನವಾಗಿ, ಕ್ರಮವಾಗಿ ಉಸಿರಾಡಬೇಕು. ಯೋಗ ಸಾಧಕರ ಸಲಹೆಯಿಲ್ಲದೆ ಉಸಿರಾಟದ ಕ್ರಮವಿಲ್ಲದೆ ತಪ್ಪಾಗಿ ಯೋಗಾಭ್ಯಾಸ ಮಾಡಿದರೆ ಅಡ್ಡಪರಿಣಾಗಳುಂಟಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಯೋಗ ತಜ್ಞರ ಸಲಹೆಗಳನ್ನು ಅನುಸರಿಸಿಯೇ ಯೋಗಾಭ್ಯಾಸ ಮಾಡಬೇಕೆಂದರು.

ಯೋಗವನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ಮನಸ್ಸನ್ನು ಕೇಂದ್ರೀಕರಿಸಬಹುದಲ್ಲದೆ ನೆನಪಿನ ಶಕ್ತಿ ಹೆಚ್ಚುತ್ತದೆ. ಸುಮಾರು ೫೦೦೦ ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಯೋಗ, ಧ್ಯಾನ, ಪ್ರಾಣಾಯಾಮಕ್ಕೆ ನಮ್ಮ ದೇಶವೇ ಮೂಲ ತವರು. ವಿದೇಶೀಯರೇ ಆಕರ್ಷಿತರಾಗಿ ಯೋಗಾಭ್ಯಾಸದಲ್ಲಿ ತೊಡಗುತ್ತಿರುವಾಗ ನಾವೇಕೆ ಅಭ್ಯಾಸ ಮಾಡಬಾರದು? ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡುವ ಮೂಲಕ ದೇಹ ಮತ್ತು ಮನಸ್ಸನ್ನು ಸದೃಢವಾಗಿಟ್ಟುಕೊಳ್ಳೋಣವೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯವಹಿಸಿ ಎಲ್ಲ ಆಸನಗಳ ಅಭ್ಯಾಸದಲ್ಲಿ ಪಾಲ್ಗೊಂಡಿದ್ದ ಶ್ರೀ ಕ್ಷೇತ್ರದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮಿಗಳು ಮಾತನಾಡುತ್ತಾ ಸುಕ್ಷೇತ್ರದಲ್ಲಿ ಯೋಗ ದಿನಾಚರಣೆ ಹಮ್ಮಿಕೊಂಡಿರುವುದು ತಮಗೆ ಸಂತೋಷದ ವಿಚಾರ. ಪ್ರತೀದಿನ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ, ಜ್ಞಾನ ಪ್ರಾಪ್ತಿಯಾಗುವುದಲ್ಲದೆ ಆಯುಷ್ಯ ವೃದ್ಧಿಯಾಗುತ್ತದೆ. ಎಲ್ಲರೂ ಯೋಗಬಂಧುಗಳಾಗಿ ಆರೋಗ್ಯಯುತ ಜೀವನ ನಡೆಸಬೇಕೆಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರ್‌ವಾಡ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಕೊರಟಗೆರೆ ತಹಶೀಲ್ದಾರ್, ನಾಹಿದಾ ಜಂ ಜಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಮಂಜುನಾಥ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಟಿ.ಎ. ವೀರಭದ್ರಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ|| ಸಂಜೀವಮೂರ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಠದ ಭಕ್ತಾದಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆಯುಷ್ ಇಲಾಖೆ, ಎನ್.ಸಿ.ಸಿ., ಎನ್‌ಎಸ್‌ಎಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ನೆಹರು ಯುವ ಕೇಂದ್ರ, ಆಶ್ವಿನಿ ಆಯುರ್ವೇದ ಮತ್ತು ಹೆಚ್‌ಎಂಎಸ್ ಯುನಾನಿ ಕಾಲೇಜು, ಬ್ರಹ್ಮ ಕುಮಾರಿ ಸಂಸ್ಥೆ, ಗಂಗಾ ನರ್ಸಿಂಗ್ ಹೋಂ, ಬೂದಗವಿ ಗ್ರಾಮ ಪಂಚಾಯತಿ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.