Thursday, February 13, 2025
Google search engine
Home Blog

ರಾಜಕೀಯ ಬಲೆಗೆ ಅಶ್ಲೀಲ ವಿಡಿಯೋ ಕಾಲ್?

0

ತುಮಕೂರು: ರಾಜಕೀಯವಾಗಿ ಬೆಳೆಯುವ ಮುಖಂಡರನ್ನು, ವಿರೋಧಿ ಬಣದಲ್ಲಿರುವರನ್ನು ಹಣೆಯಲು ಅಶ್ಲೀಲ ವಿಡಿಯೋ ಕಾಲ್ ಬಳಕೆ ಮಾಡಿಕೊಳ್ಳಲಾಗುತ್ತಿದೆಯೇ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.
ಸಾಮಾಜಿಕ ಜಾಲತಾಣಗಳ ಈ ಕಾಲಘಟ್ಟದಲ್ಲಿ ಸ್ವಲ್ಪ ಯಾಮಾರಿದರೂ ಸಾಕು ಇಂಥ ಬಲೆಗಳಿಗೆ ಸಿಕ್ಕಿಸುವುದು ಸುಲಭವಾಗಿದೆ. ಇದನ್ನು ರಾಜಕೀಯಕ್ಕೂ ಬಳಕೆ ಮಾಡಿಕೊಂಡರೆ ಅದರಂಥ ಹೀನಾಯ ಸ್ಥಿತಿ ಮತ್ತೊಂದು ಇರಲಾರದು.
ಹನಿ ಟ್ರ್ಯಾಪ್ ಹಳೆಯ ವಿಷಯ. ಅಶ್ಲೀಲ, ನಗ್ನ ವಿಡಿಯೋ ಕಾಲ್ ಮಾಡಿದಾದ ಅದನ್ನು ಒಂದೆರಡು ಸೆಕೆಂಡ್ ಗಳ ಕಾಲ ರೆಕಾಡ್ರ್ ಮಾಡಿಕೊಂಡರೂ ಸಾಕು, ಸಿಕ್ಕವನನ್ನು ಹೇಗೆ ಬೇಕಾದರೂ ಸಾಮಾಜಿಕವಾಗಿ ಮರ್ಯಾದೆ ಕಳೆದು ಆತನನ್ನು ಮುಖ್ಯವಾಹಿನಿಯಿಂದ ಹಿಂದೆ ಸರಿಸಲು.
ತುಮಕೂರಿನ ಭೈರವೇಶ್ವರ ಕೋ ಆಫರೇಟಿವ್ ಬ್ಯಾಂಕ್ ನ ಚುನಾವಣೆ ಹಿನ್ನೆಲೆಯಲ್ಲಿ ಇಂಥದೊಂದು ಚರ್ಚೆ ಜೋರಾಗಿ ವಾಟ್ಸಾಪ್ ಗ್ರೂಪ್ ಗಳಲ್ಲಿ ನಡೆದಿದೆ. ಆದರೆ ಇಂಥ ಬೆಳವಣಿಗೆಗಳು ಯಾವುದೇ ಸಮುದಾಯಕ್ಕೂ ಶೋಭೆ ತರುವಂಥವಲ್ಲ.
ಒಕ್ಕಲಿಗ ಸಮುದಾಯವರ ಹಿಡಿತದಲ್ಲಿರುವ ಈ ಬ್ಯಾಂಕ್ ನ ಚುನಾವಣೆಗಳು ಇತ್ತೀಚಿನವರೆಗೂ ಅಂಥ ಪ್ರಾಮುಖ್ಯತೆ ಗಳಿಸಿರಲಿಲ್ಲ. ಬ್ಯಾಂಕ್ ಬೆಳೆದಂತೆ ಈ ಚುನಾವಣೆ ರಂಗು ಪಡೆದುಕೊಂಡಿದೆ. ಜೋರಾಗಿ ನಡೆಯುತ್ತಿದೆ. ಒಕ್ಕಲಿಗರಲ್ಲೇ ಮೂರು-ನಾಲ್ಕು ಬಣಗಳು, ಒಳಸುಳಿಗಳು, ರಾಜಕೀಯ ಕೆಸೆರೆರಚಾಟ, ಪಾಟರ್ಿಗಳು ಇಂಥವೆಲ್ಲ ಈ ಚುನಾವಣೆಗೂ ಕಾಲಿಟ್ಟಿದೆ.

ಹೀಗಾಗಿಯೇ ವಿರೋಧಿ ಬಣದವರನ್ನು ಹಣೆಯಲು ಅಶ್ಲೀಲ ವಿಡಿಯೋ ಚಾಟ್ ನ ಬಳಕೆಗೆ ಯತ್ನಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಲು ಕಾರಣವಾಗಿದೆ.
ಬಿಜೆಪಿ ಸಕ್ರಿಯ ಮುಖಂಡರೂ ಆಗಿರುವ, ಹಿರಿಯ ವಕೀಲರಾದ ರವಿ ಗೌಡ ಅವರಿಗೆ ಎರಡು-ಮೂರು ಸಲ ವಿಡಿಯೋ ಕರೆ ಮೂಲಕ ಬಲೆಗೆ ಕೆಡವಿಕೊಳ್ಳುವ ಪ್ರಯತ್ನಕ್ಕೆ ಈ ಆರೋಪಗಳು ಇಂಬು ನೀಡಿದಂತಿವೆ.
‘ನಾನು ಚುನಾವಣೆಯಲ್ಲಿ ಸಕ್ರಿಯವಾಗಿರುವ ಕಾರಣದಿಂದಲೇ ಅಶ್ಲೀಲ ವಿಡಿಯೊ ಕರೆ ಮೂಲಕ ನನ್ನನ್ನು ಹಣೆಯಲು ಯತ್ನಿಸಿದ್ದಾರೆ. ಆದರೆ ಅದೃಷ್ಟ. ಆ ಸಂದರ್ಭ ನನ್ನ ಮೊಬೈಲ್ ಬೇರೆಯವರು ಬಳಕೆ ಮಾಡಿದ್ದರು. ಇಲ್ಲದಿದ್ದರೆ ನನ್ನನ್ನು ಸಾಮಾಜಿಕವಾಗಿ ತೇಜೋವಧೆ ಮಾಡಿಬಿಡುತ್ತಿದ್ದರು’ ಎಂದು ರವಿಗೌಡ ಅವರು ಪಬ್ಲಿಕ್ ಸ್ಟೋರಿಯೊಂದಿಗೆ ಮಾತನಾಡಿ ನೇರ ಆರೋಪ ಮಾಡಿದರು.
‘ಈ ಥರದ್ದು ಯಾರೇ ಮಾಡಿದರೂ ತಪ್ಪು, ರಾಜಕೀಯವಾಗಿ ಇದನ್ನು ಬಳಸಲೇಬಾರದು. ಆದರೆ ಈ ಥರದ್ದು ಸೈಬರ್ ಕ್ರೈಂ, ಹಣ ಕೀಳಲು ಸಹ ಮಾಡುತ್ತಿದ್ದಾರೆ. ರಾಜಕೀಯವಾಗಿ ಇದೆಯೋ, ಇಲ್ಲವೋ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಒಟ್ಟಾರೆ ಇದೊಂದು ದುರುಪಯೋಗ. ಒಟ್ಟಾರೆ ಇದೊಂದು ಜಾಲ ಇದೆ. ಸಾಮಾನ್ಯ ಜನ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಇದನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜಕೀಯ ಕಾರಣದಿಂದಲೂ ಮಾಡಿರಬಹುದೇನೋ? ಒಟ್ಟಾರೆ ತನಿಖೆ ಆಗಬೇಕು’ ಎಂದು ಬೈರವೇಶ್ವರ ಬ್ಯಾಂಕ್ ಚುನಾವಣೆಯಲ್ಲಿ ವೆಂಕಟೇಶ್ ಬಾಬು ಅವರ ಬಣದಲ್ಲಿ ಗುರುತಿಸಿಕೊಂಡಿರುವ ಬೆಳ್ಳಿ ಲೋಕೇಶ್ ಅವರು ತಿಳಿಸಿದರು.
ಯಾರೇ ಆಗಲಿ, ರಾಜಕೀಯವಾಗಿ ನೇರವಾಗಿ ಎದುರಿಸಬೇಕೇ ಹೊರತು ಇಂಥ ಅಡ್ಡ ಮಾರ್ಗ ಹಿಡಿಯಬಾರದು. ಈ ಸಂಬಂಧ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ ಎಂದು ವಿವರ ಬಿಚ್ಚಿಟ್ಟರು.
ಜಿಲ್ಲಾ ಒಕ್ಕಲಿಗರ ಸಂಘ ಹಾದಿತಪ್ಪಿದಂತಿದೆ. ಅದಕ್ಕೆ ಚುನಾವಣೆ ನಡೆಸಲು, ಸರಿದಾರಿಗೆ ತರಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇಂಥ ಬಿಕ್ಕಟ್ಟಿನಲ್ಲಿ ಬೈರವೇಶ್ವರ ಬ್ಯಾಂಕ್, ಒಕ್ಕಲಿಗರ ಮುಖಂಡರ ಪ್ರಾಬಲ್ಯ ಮೆರೆಯಲು ವೇದಿಕೆಯಂಥಾಗುತ್ತಿದೆ.ಇದೇ ಕಾರಣಕ್ಕಾಗಿ ಈ ಬ್ಯಾಂಕ್ ನ ಚುನಾವಣೆ ಈ ಸಮುದಾಯದಲ್ಲಿ ಪ್ರಾಮುಖ್ಯತೆ ಗಳಿಸತೊಡಗಿದೆ.
ವೆಂಕಟೇಶ್ ಬಾಬು ಅವರ ಬಣದಲ್ಲಿ ರಾಧಾ ದೇವರಾಜ್, ಆನಂದ್, ಸುಜಾತಾ ನಂಜೇಗೌಡ ಗುರುತಿಸಿಕೊಂಡಿದ್ದಾರೆ.
ಹಿರಿಯ ವಕೀಲರಾದ ಚಿಕ್ಕರಂಗಣ್ಣ ಅವರ ಬಣದಲ್ಲಿ ಕೈದಾಳ ಸತ್ಯ, ಸ್ವಾಮಿ, ರಂಗಾಮಣಿ ಇತರರು ಗುರುತಿಸಿಕೊಂಡಿದ್ದಾರೆ.

ಶಾಸಕ ಶ್ರೀನಿವಾಸ್ ಅವರಿಂದ ರಾಜೀ?

ಶಾಸಕರೂ ಆಗಿರುವ ರಾಜ್ಯ ಸಾರಿಗೆ ನಿಗಮಗಳ ಅಧ್ಯಕ್ಷರಾದ ಎಸ್.ಆರ್.ಶ್ರೀನಿವಾಸ್ ಅವರು ಎರಡೂ ಬಣಗಳ ನಡುವೆ ರಾಜೀಸೂತ್ರ ಮಾಡಿ, ಚುನಾವಣೆ ನಡೆಯದಂತೆ ತಡೆಯಲು ಸೋಮವಾರ (ಇಂದು) ಸಭೆ ಕರೆದಿದ್ದಾರೆ.
ಚುನಾವಣೆ ನಡೆದರೆ ಸಮುದಾಯದ ನಡುವೆ ಬಿರುಕು ಮೂಡಲಿದೆ. ಎಲ್ಲರೂ ಸೇರಿ ಒಂದಾಗಿ ಬ್ಯಾಂಕ್ ಅನ್ನು ಇನ್ನೂ ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಎರಡು ಬಣದವರ ಸಭೆ ಕರೆದಿದ್ದಾರೆ. ಶಾಸಕ ಶ್ರೀನಿವಾಸ್ ಅವರ ಮಾತಿಗೆ ಒಪ್ಪಿಗೆ ಸೂಚಿಸಿದರೆ ಚುನಾವಣೆ ನಡೆಯುವುದಿಲ್ಲ.

ಜನರ ಪ್ರಶ್ನೆಗಳಿಗೆ ಉತ್ತರ ನೀಡುವ ಪಿಟ್ಕಾಯಣ

ಅಯ್ಯೋ ಅವನಿಗಿನ್ನೂ ಚಿಕ್ಕ ವಯಸ್ಸು, ರಾತ್ರಿ ಮಲಗಿದ್ದಲ್ಲೇ ಸತ್ತೋದಗಿದ್ನಂತೆ!, ಅಯ್ಯೋ, ಪ್ರೈವೆಟ್ ನನಗೇನು ಲಾಭ ಅಲ್ವಾ? ನಮ್ಮ ಕೊಳವೆಬಾವಿ ಮೋಟರ್ ಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಹಾಕಲಿಕ್ಕೂ, ಅದಾನಿಗೋ, ಅಂಬಾನಿಗೂ, ಟಾಟಾಗೋ ಯಾರೊ ಕಂಪನಿಯನವರಿಗೇನು ಲಾಭ? ಅಯ್ಯೋ, ಇದೇನು ಈ ಮಾತ್ರೆ ಕೆಲ್ಸನೇ ಮಾಡಲ್ಲ?, ಬಿಡ್ಲೇ ಕೊಟ್ಟವರು ಕೋಡಂಗಿ, ಈಸ್ಕೋಂಡೋನು ಈರಭದ್ರ!
ಹಳ್ಳಿಕಟ್ಟೆಯ ಮೇಲೆ ಅಥವಾ ಸಿಟಿಯೊಳಗಿನ ಉಸಿರುಕಟ್ಟಿಸುವ ಮನೆಯೊಳಗೆ ಹೀಗೇ ಮಾತನಾಡಿಕೊಳ್ಳುವ, ಅಯ್ಯೋ ನಮ್ಮ ದೇಶ ಶ್ರೀಮಂತ ದೇಶ ಆಗೋದ್ಯಾವಾಗಾ? ದಿಲ್ಲಿಯಲ್ಲಿ ಬಿಸಿಲು ಹೆಚ್ಚಾದರೆ ನಮ್ಮೂರಲ್ಲಿ ಏಕೆ ಸೆಖೆ? ಇಂಥ ಪ್ರಶ್ನೆಗಳಿಗೆ ಸರಳ ಉತ್ತರ ಹೇಳಬೇಕೆನಿಸಿದರೆ ಅವರ ಕೈಗೆ ಪಿಟ್ಕಾಯಣ ಪುಸ್ತಕ ಕೊಟ್ಟರೆ ಸಾಕು.

ದೇಶಗಳನ್ನು ಸುಭದ್ರವಾಗಿ ಕಟ್ಟಬೇಕು. ನಮ್ಮ ಮುಂದಿನ ಮಕ್ಕಳು, ಮರಿಮಕ್ಕಳಾದರೂ ಸುಖವಾಗಿ (ಒಳ್ಳೆಯ ಭದ್ರತೆಯ ಉದ್ಯೋಗ, ಉತ್ತಮ ಮನೆ, ಖಚರ್ೆ ಇಲ್ಲದ ಉತ್ತಮ ಸಕರ್ಾರಿ ಆಸ್ಪತ್ರೆ, ಶಿಕ್ಷಣ, ಒಳ್ಳೆಯ ಪರಿಸರ) ಬದುಕಬೇಕೆಂದರೆ ಇಂಥ ಪಿಟ್ಕಾಯಣ ಪುಸ್ತಕಗಳು ಮನ, ಮನೆ ತಲುಪಬೇಕು. ಈ ಮೂಲಕ ಜನಸಾಮಾನ್ಯರಿಗೆ ನಮ್ಮ ಆಡಳಿತದ ನೀತಿಗಳು ಹೇಗೆ ನಮ್ಮನ್ನು ಕತ್ತು ಸೀಳುತ್ತಿವೆ, ರಾಜಕಾರಣಿಗಳು, ಮಧ್ಯವರ್ತಿಗಳು, ಕೆಲವೇ ಮಾಧ್ಯಮ ಸಂಸ್ಥೆಗಳು, ಕೆಲವೇ ಕಾರ್ಪೋರೇಟ್ ಕಂಪನಿಗಳು, ವಿದೇಶಿ ಸಖ್ಯದ ಕಂಪೆನಿಗಳು ಎಷ್ಟೆಷ್ಟು ಬೇಗ ಶ್ರೀಮಂತವಾಗುತ್ತವೆ ಎಂಬುದರ ರಹಸ್ಯ ತಿಳಿಸಲು ಯತ್ನಿಸುತ್ತವೆ ಇಲ್ಲಿನ ಲೇಖನಗಳು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಡಳಿತದ ನೀತಿಗಳನ್ನು ಪ್ರಶ್ನೆ ಮಾಡುವುದು ಎಷ್ಟು ಮುಖ್ಯ ಎಂಬುದು ಅರಿವಾಗಲಿದೆ. ಪಿಟ್ಕಾಯಣ ಪುಸ್ತಕ ಓದುತ್ತಿದಂತೆ ಇಂಥ ಪುಸ್ತಕಗಳ್ಯಾಕೆ ವಿಶ್ವವಿದ್ಯಾನಿಲಯ, ಕಾಲೇಜುಗಳಿಗೆ ಪಠ್ಯವಾಗಬಾರದು ಎನಿಸಿದರೆ ಅದೇನು ಭಾವುಕ ಎನಿಸಲಾರದು.
ಹಲವು ಮಿತಿಗಳ ನಡುವೆ, ವಾರ್ತಾಭಾರತಿ ಪತ್ರಿಕೆಗೆ ಬರೆದಿರುವ ಅಂಕಣ ಬರಹಗಳ ಒಟ್ಟು ಸಂಕಲನವೇ ಈ ಪಿಟ್ಕಾಯಣ ಪುಸ್ತಕ. ಇಲ್ಲಿರುವ ಎಲ್ಲ ಅಂಕಣಗಳು ಸರ್ಕಾರದ ನೀತಿಗಳ ಬಗ್ಗೆ ಪ್ರಶ್ನೆ ಮಾಡುತ್ತವೆ. ಕೆಲವು ಬರಹಗಳು ಅಂಕಿ ಅಂಶಗಳನ್ನು ಮುಂದಿಡುತ್ತವೆ. ಕೆಲವು ಬರಹಗಳು ಅಚನಾಕಾಗಿ ಕೊನೆಗೊಂಡಂತಿವೆ. ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆಯಾದ ಬಹುರೂಪಿ ಈ ಪುಸ್ತಕವನ್ನು ಪ್ರಕಟಿಸಿದೆ.
ಮೊದಲೆಲ್ಲ ಸ್ವಾತಂತ್ರ್ಯ, ಸ್ವಾತಂತ್ರ್ಯ, ಯಾರಿಗೆ ಬಂತು ಸ್ವಾತಂತ್ರ್ಯ, ಟಾಟಾ, ಬಿರ್ಲಾರ ಜೇಬಿಗೆ ಬಂತು ಸ್ವಾತಂತ್ರ್ಯ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆಯ ವೇಳೆ ಕೂಗುತ್ತಿದ್ದರು. ಈಗ ಇದು ಹೇಗೆ ಬದಲಾಗಿದೆ, ಟಾಟಾ, ಬಿರ್ಲಾರ ಬದಲಿಗೆ ಯಾರ ಹೆಸರುಗಳು ಮುನ್ನೆಲೆಗೆ ಬಂದಿವೆ ಎಂಬುದನ್ನು ಹೇಳಬೇಕಾಗಿಲ್ಲ.
ಪಕ್ಷ ರಾಜಕೀಯವನ್ನು ಬದಿಗಿಟ್ಟು ಎಲ್ಲರೂ ಓದುವಂಥ, ಪ್ರಶ್ನೆ ಮಾಡುವಂಥ ಪುಸ್ತಕ ಇದಾಗಿದೆ. ಕಥೆ, ಕಾದಂಬರಿಯಂತೆ ಕುತೂಹಲಕಾರಿಯಾಗಿ ಎಲ್ಲೂ ನಿಲ್ಲಿಸದಂತೆ ಓದಿಸಿಕೊಂಡು ಹೋಗುತ್ತವೆ ಇಲ್ಲಿನ ಬರಹಗಳು.
ಈ ಬರಹಗಳನ್ನು ಬರೆಯಲು ಲೇಖಕರು ಯಾವ, ಯಾವ ಮೂಲಗಳಿಂದ ಮಾಹಿತಿಗಳನ್ನು ತೆಗೆದಿದ್ದಾರೆ, ಸಂಗ್ರಹಿಸಿದ್ದಾರೆ ಎಂಬುದನ್ನು ಅವರ ಮಾತುಗಳಲ್ಲೇ ಓದಿಕೊಳ್ಳಬಹುದಾಗಿದೆ.
ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಈ ಪುಸ್ತಕದ ಲೇಖಕರು. ಪಿಟ್ಕಾಯಣ ಹೆಸರು ಹೇಗೆ ಬಂತು ಎಂಬುದು ಪುಸ್ತಕದ ಆರಂಭದಲ್ಲೇ ರಾಮಾಯಣ ಕಾಲಕ್ಕೆ ಸಂಬಂಧಿಸಿದಂತೆ ರಾಜ್ಯದ ಕರಾವಳಿ ಭಾಗದಲ್ಲಿ ಚಾಲ್ತಿಯಲ್ಲಿದ್ದ ಕಥೆಯೊಂದರ ಹಿನ್ನೆಲೆಯಲ್ಲಿ ಈ ಪದದ ಅರ್ಥವನ್ನು ಲೇಖಕರೇ ವಿವರಿಸಿದ್ದಾರೆ. ಹೀಗಾಗಿ ಪುಸ್ತಕ ಕೊಂಡು ಓದಿದಾಗಲೇ ಅದು ನಿಮಗೆ ಗೊತ್ತಾದರೆ ಚೆನ್ನ.
ಸಂವಾದಕ್ಕೆ ಎಳೆಯುವ ಶಕ್ತಿಯೂ ಈ ಪುಸ್ತಕಕ್ಕೆ ಇದೆ. ಅದನ್ನು ಯಾರೂ ಬೇಕಾದರೂ ಮಾಡಬಹುದು. ಸಂವಾದಗಳೇ ಪ್ರಜಾಪ್ರಭುತ್ವದ ಶಕ್ತಿ. ಪುಸ್ತಕ ಎಲ್ಲರ ಮನೆ ತಲುಪಲಿ. ಎಲ್ಲ ದಿಕ್ಕುಗಳಿಂದಲೂ ಈ ಪುಸ್ತಕಕ್ಕೆ ಪ್ರಶ್ನೆಗಳು, ಉತ್ತರಗಳು ಬಂದ್ದಲ್ಲಿ ನಾಡುಕಟ್ಟುವ ಪ್ರಕ್ರಿಯೆಗೆ ಒಂದಿಷ್ಟು ಶಕ್ತಿ ತುಂಬಿದಂತಾಗುತ್ತದೆ.
ಬಹುರೂಪಿಯ ಆನ್ ಲೈನ್ ಜಾಲತಾಣದ ಮೂಲಕವು ಪುಸ್ತಕವನ್ನು ತರಿಸಿಕೊಳ್ಳಬಹುದಾಗಿದೆ. ಪುಸ್ತಕದ ಬೆಲೆ ರೂ.300.

ಮೂರು ಸ್ಫೋಟ, 4 ಸಾವು ; ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ ; ಸಿಐಟಿಯು ಆಕ್ರೋಶ

0

ಸಂತ್ರಸ್ತರ ಪ್ರತಿ ಕುಟುಂಬಕ್ಕೆ ತಲಾ 50 ಲಕ್ಷ ಪರಿಹಾರ
ಹಾಗೂ
ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ; ಸಿಐಟಿಯು ಅಗ್ರಹ

ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಒಂದು ಸಾವಾಗಿ ಇನ್ನೂ ನಾಲ್ಕೈದು ದಿನಗಳಷ್ಟೇ ಆಗಿದೆ. ಕಾರ್ಮಿಕ-ಸಮುದಾಯದಲ್ಲಿ ಅದರ ದುಃಖ ಆರುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ.

ತುಮಕೂರು ನಗರದ ಹೊರವಲಯದಲ್ಲಿರುವ ಅಂತರಸನಹಳ್ಳಿ-ಕೈಗಾರಿಕಾ ಪ್ರದೇಶದಲ್ಲಿನ ‘ಪರಿಮಳ ಆಗ್ರೋ ಟೆಕ್’ ಕಾರ್ಖಾನೆಯಲ್ಲಿ ಬುಧವಾರ ಭೀಕರ ಸ್ಫೋಟ ಸಂಭವಿಸಿ, ಎರಡು ಸಾವು ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿರುವ ಮೂವರು ಕಾರ್ಮಿಕರ ಸ್ಥಿತಿ ಚಿಂತಾಜನಕ.

ಹಿಂದಿನ ದಿನವಷ್ಟೇ ಕೋಪ್ಪಳ ತಾಲ್ಲೂಕಿನ ಅಲ್ಲಾನಗರದ ಹೋಸಪೇಟೆ ಸ್ಟೀಲ್ ಕಾರ್ಖಾನೆ(ಕಾಮಿನಿ ಇಂಡಸ್ಟ್ರೀಸ್)’ನಲ್ಲಿ ಮಂಗಳವಾರ ಸಂಜೆ ಅನಿಲ ಸೋರಿಕೆಯಿಂದಾಗಿ ಮಾರುತಿ ಕೊರಗಲ್ (24 ವರ್ಷ) ಹೆಸರಿನ ಕಾರ್ಮಿಕರೊಬ್ಬರು ದುರ್ಮರಣಕ್ಕೀಡಾಗಿದ್ದರು. ಈ ಸ್ಫೋಟದಲ್ಲಿ ಇನ್ನೂ 7 ಜನ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದು ಮಾಸುವ ಮುನ್ನವೇ ತುಮಕೂರಿನ ಸ್ಫೋಟದ-ಘಟನೆ ರಾಜ್ಯದ ಕಾರ್ಖಾನೆ ಕಾರ್ಮಿಕರಲ್ಲಿ ಆತಂಕ ಮತ್ತು ಆಕ್ರೋಶ ಹುಟ್ಟಿಸಿದೆ.

ಕಾರ್ಖಾನೆ ಮಾಲೀಕರ ಹೊಣೆಗೇಡಿತನ ಹಾಗೂ ಅಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವ ಮರ್ಜಿಯಲ್ಲಿ ದುಡಿಯುತ್ತಿದ್ದ ಈ ನಾಲ್ಕೂ ಅಮೂಲ್ಯ ಜೀವಗಳು ತಮ್ಮದಲ್ಲದ ತಪ್ಪಿನಿಂದಾಗಿ ಇಹಲೋಕ ತ್ಯಜಿಸಿವೆ.

ಬಂಡವಾಳಶಾಹಿ ನಿರ್ಲಕ್ಷ್ಯ, ಸುರಕ್ಷತಾ ಉಡುಪು ಮತ್ತು ಸಲಕರಣೆಗಳ ಕೊರತೆ ಹಾಗೂ ಯಂತ್ರೋಪಕರಣಗಳ ಸಮರ್ಪಕ ದುರಸ್ತಿ ಮಾಡಿಸದ ಕಾರ್ಖಾನೆ ಆಡಳಿತ ಮಂಡಳಿಯವರ ಬೇಜವಾಬ್ದಾರಿತನಗಳು ಮೇಲ್ನೋಟಕ್ಕೆ ಇಲ್ಲಿ ಎದ್ದು ಕಾಣುತ್ತಿವೆ.

ಕಾರ್ಖಾನೆಗಳ ಯಂತ್ರೋಪಕರಣಗಳ ಸಮರ್ಪಕವಾದ ನಿರ್ವಹಣೆಯ ಕುರಿತು ಕಾಲಕಾಲಕ್ಕೆ ಪರಿಶೀಲನೆ ನಡೆಸಿ, ಅದರ ಸುರಕ್ಷತೆಯನ್ನು ಖಾತರಿಪಡಿಸಬೇಕಿದ್ದ
‘ಫ್ಯಾಕ್ಟರೀಸ್ ಮತ್ತು ಬಾಯ್ಲರ್ ಇಲಾಖೆ’ಯ ಬೇಜವಾಬ್ದಾರಿತನವೂ ಇಲ್ಲಿ ಪ್ರಮುಖ ದೋಷಿ. ತಮ್ಮ ಹೊಣೆಗಾರಿಕೆಗಳನ್ನು ಜವಾಬ್ದಾರಿಯುತವಾಗಿ ಅನುಷ್ಠಾನಗೊಳಿಸಬೇಕಿದ್ದ ಬಹುತೇಕರ ಬೇಜವಾಬ್ದಾರಿತನದಿಂದಾಗಿ ಈ ಸಾವುಗಳು ಸಂಭವಿಸಿವೆ ಎಂದು, ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಗಂಭೀರವಾಗಿ ಅರೋಪಿಸುತ್ತದೆ. ತಮ್ಮ ಹೊಣೆಗೇಡಿತನದಿಂದಾಗಿ ಇಂತಹ ಅವಘಡಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಐಟಿಯು ಆಗ್ರಹಿಸುತ್ತದೆ. ಮತ್ತು, ಘಟನೆಯಲ್ಲಿ ಮರಣ ಹೊಂದಿರುವ ಕಾರ್ಮಿಕರ ಅವಲಂಬಿತರಿಗೆ ಅಯಾ ಕಾರ್ಖಾನೆ ಮಾಲೀಕರಿಂದ ತಲಾ 50 ಲಕ್ಷ ಪರಿಹಾರವನ್ನು ಕೊಡಿಸುವಂತೆ ಸಿಐಟಿಯು ಒತ್ತಾಯಿಸುತ್ತದೆ. ಹಾಗೂ ಎಲ್ಲಾ ಗಾಯಾಳುಗಳಿಗೂ ಉಚಿತ ಚಿಕಿತ್ಸೆ ಕೊಡಿಸುವುದಲ್ಲದೆ, ಅವರಿಗೂ ತಲಾ 15 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ತೀವ್ರವಾಗಿ ಒತ್ತಾಯಿಸುತ್ತದೆ.

ಮೃತರ ಕುಟುಂಬದ ದುಃಖದಲ್ಲಿ ಸಿಐಟಿಯು ಸದಾ ಭಾಗಿಯಾಗಿರುತ್ತದೆ.

ತುಮಕೂರು ನಗರದ ಸ್ಪೋಟದಲ್ಲಿ ಮರಣ ಹೊಂದಿರುವ ಕಾರ್ಮಿಕರು ಬಿಹಾರ ಮೂಲದದವರು. ಸಂತೋಷ್(22 ವರ್ಷ) ಮತ್ತು ಚಂದನ್ ಶರ್ಮಾ(26 ವರ್ಷ). ದೂರದ ಬಿಹಾರದಲ್ಲಿರುವ ಅವರ ಕುಟುಂಬದ ಹೊಣೆಯನ್ನು ನಿರ್ವಹಿಸಿಬೇಕಾಗಿದ್ದ ಈಯಿಬ್ಬರು ಯುವಕರು ಇಷ್ಟು ಸಣ್ಣವಯಸ್ಸಿಗೆ ಮರಣ ಹೊಂದಿರುವುದು ವಿಷಾದಕರ.

ಬಿಹಾರ ಸೇರಿದಂತೆ ಉತ್ತರಭಾರತ ಮತ್ತು ಹಲವು ಈಶಾನ್ಯ ರಾಜ್ಯಗಳಿಂದ ಲಕ್ಷಗಟ್ಟಲೆ ಕಾರ್ಮಿಕರು ನಮ್ಮ ರಾಜ್ಯ ಮತ್ತು ಜಿಲ್ಲೆಯಲ್ಲಿ ವಿವಿಧ ಕೆಲಸಕಾರ್ಯಗಳಲ್ಲಿ ತೊಡಗಿದ್ದಾರೆ. ಹೀಗೆ ಹಿಂಡು-ಹಿಂಡಾಗಿ ಕಾರ್ಮಿಕರನ್ನು ಇಲ್ಲಿಗೆ ಕರೆತಂದು, ಯಾವುದೇ ಕಾರ್ಮಿಕ ಕಾಯ್ದೆ- ಕಾನೂನುಗಳ ಕನಿಷ್ಟ ರಕ್ಷಣೆ ಇಲ್ಲದಂತೆ ದುಡಿಸಿಕೊಳ್ಳಲಾಗುತ್ತಿದೆ. ಕಡೆಗೆ ಇವರ ಜೀವಗಳಿಗೂ ಬೆಲೆಯಿಲ್ಲದಂತೆ ಇವರನ್ನು ಸಾರಾಸಗಟು ಕಡೆಗಣಿಸಿ, ನಿತ್ಯ ಶೋಷಿಸುತ್ತಿರುವುದನ್ನು ಸಿಐಟಿಯು ಖಂಡಿಸುತ್ತದೆ. ಬಂಡವಾಳಗಾರರು ಕಾರ್ಮಿಕರ ಜೀವಗಳಿಗೆ ಕನಿಷ್ಟ ಕಿಮ್ಮತ್ತನ್ನೂ ಕೊಡದೆ ತಮ್ಮ ಲಾಭದ ಕಡೆಗಷ್ಟೇ ಗಮನ ಕೇಂದ್ರಿಕರಿಸಿದ್ದಾರೆ. ವಲಸೆ ಕಾರ್ಮಿಕರ ಪಾಲಿನ ಶೋಚನೀಯ ಸ್ಥಿತಿಯಿದು.

ಈ ನಾಲ್ಕೂ ಪ್ರಕರಣಗಳಲ್ಲಿಯೂ ಕ್ರಿಮಿನಲ್ ನಿರ್ಲಕ್ಷ್ಯ ತೋರಿರುವವರ ವಿರುದ್ದ ಸೂಕ್ತವಾದ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಸಿಐಟಿಯು ಅಗ್ರಹಿಸುತ್ತದೆ.

ಮುಖ್ಯವಾಗಿ, ಎಲ್ಲ ಗಾಯಾಳುಗಳಿಗೂ ಅತ್ಯುತ್ತಮವಾದ ಚಿಕಿತ್ಸೆಯನ್ನು ಸರ್ಕಾರ ಉಚಿತವಾಗಿ ಒದಗಿಸಿಕೊಡಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಕರ್ನಾಟಕದ ಸೈಯದ್ ಮುಜೀಬ್, ಎ. ಲೋಕೇಶ್, ಜಿ.ಕಮಲ ಹಾಗೂ ಅಧ್ಯಕ್ಷರು, ಜಿಲ್ಲಾ ಖಜಾಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಒತ್ತಾಯಿಸಿದ್ದಾರೆ.
__________________________________________________

*ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್*
ಜನಪರ ಚಳವಳಿ ಕೇಂದ್ರ, ಗಾಂಧಿನಗರ,
ವಿದ್ಯೋದಯ ಲಾ-ಕಾಲೇಜು ಹಿಂಭಾಗ, ತುಮಕೂರು. ಫೋ: 0816-2278960

ವರದಿ,
*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಹೆಣ್ಣುಮಕ್ಕಳಿಗೆ ಶಿಕ್ಷಣದ ಕಣ್ಣಾದ ಸಾವಿತ್ರ ಬಾಯಿಫುಲೆ

ತುರುವೇಕೆರೆ: ಹಲವು ಅಪಮಾನಗಳ ನಡುವೆ ನೊಂದವರ, ದಮನಿತ ಸಮುದಾಯಗಳ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಬಹುವಾಗಿ ಶ್ರಮಿಸಿದ ಸಾವಿತ್ರ ಬಾಯಿಫುಲೆಯವರ ಹೋರಾಟ ಸಮಕಾಲೀನ ಮಹಿಳೆಯರಿಗೆ ಪ್ರೇರಣೆಯಾಗಿದೆ ಎಂದು ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಎಚ್.ಕೆ.ಸವಿತಾರವರು ಅಭಿಪ್ರಾಯಪಟ್ಟರು.

ಪಟ್ಟಣದ ಕನ್ನಡ ಭವನದಲ್ಲಿ ತಾಲ್ಲೂಕು ಸಾವಿತ್ರ ಬಾಯಿಫುಲೆ ಶಿಕ್ಷಕಿಯರ ಸಂಘದಿಂದ ಸಾವಿತ್ರ ಬಾಯಿಫುಲೆ ಜನ್ಮದಿನದ ಅಂಗವಾಗಿ ತಾಲ್ಲೂಕಿನ ಉತ್ತಮ ಶಿಕ್ಷಕಿಯರಿಗೆ ಅಕ್ಷರದ್ವ ಪ್ರಶಸ್ತಿ ಪ್ರಧಾನ, ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಹಾಗು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತುರುವೇಕೆರೆಗೆ ಶಿಕ್ಷಣ ಇಲಾಖೆಯಿಂದ ಆಯ್ಕೆಯಾದವರಿಗೆ ಅಭಿನಂಧನಾ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಭಾಗವಹಿಸಿ ಮಾತನಾಡಿದರು.

ಸಾವಿತ್ರ ಬಾಯಿಫುಲೆಯವರು ಭಾರತೀಯ ಸಮಾಜದ ಸುಧಾರಕಿಯಾಗಿ ಮತ್ತು ಶಿಕ್ಷಣ ತಜ್ಞರಾಗಿ ದುಡಿದವರು. ಇದಕ್ಕೂ ಮೊದಲು ಜ್ಯೋತಿರಾವ್ ಪುಲೆಯವರು ತಮ್ಮ ಮಡದಿಗೆ ತಾವೇ ಶಿಕ್ಷಣಕೊಟ್ಟು ತದನಂತರ ಮಿಷನರಿ ಶಾಲೆಗೆ ಶಿಕ್ಷಕಿ ತರಭೇತಿಗೆ ಕಳುಹಿಸಿ ಶಿಕ್ಷಕಿಯಾಗುವಂತೆ ನೆರವಾಗಿದ್ದರು. ಪತಿ, ಪತ್ನಿಯರು ಬಡ, ಶೋಷಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಕಣ್ಣಾಗಿ 14 ಶಾಲೆಗಳನ್ನು ತೆರೆದು ಉಚಿತ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಮೌಢ್ಯ ಹಾಗು ತಮ್ಮ ಹಕ್ಕುಗಳನ್ನು ಪಡೆಯಲು ಪಶ್ನಿಸುವಂತೆ ಮಾಡಿದರು ಎಂದರು.

ಸಾವಿತ್ರ ಬಾಯಿಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆ ಎಂ.ಟಿ.ಭವ್ಯ ಸಂಪತ್ ಮಾತನಾಡಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕಿಯರ ಹಲವು ಸಮಸ್ಯೆಗಳ ಈಡೇರಿಕೆಗೆ ಧ್ವನಿಯಾಗಿ ನಿಂತು ಸಂಘವು ಹೋರಾಟ ಮಾಡುತ್ತಿದೆ. ಮಹಿಳೆಯರು ಹೆಚ್ಚು ಸಂಘಟಿತರಾಗಿ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುವಂತಾಗಬೇಕು ಹಾಗು ಹೆಚ್ಚಿನ ಸಂಖ್ಯೆಯಲ್ಲಿ ತಾಲ್ಲೂಕಿನ ಶಿಕ್ಷಕಿಯರು ಸಂಘದ ಸದಸ್ಯತ್ವ ಪಡೆದುಕೊಂಡು ಸಾವಿತ್ರ ಬಾಯಿಫುಲೆಯವರ ಆಶಯಗಳಿಗೆ ಅನುಗುಣವಾಗಿ ಸಂಘವನ್ನು ಮುನ್ನಡೆಸೋಣ ಎಂದು ಕಿವಿ ಮಾತು ಹೇಳಿದರು.

ಇದೇ ವೇಳೆ ನರ್ಸ್ ಶ್ವೇತ ಕೆ.ಎಸ್ ರವರು ಗರ್ಭಕೋಶ್ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು. ಅಕ್ಷರದ್ವ ಪ್ರಶಸ್ತಿಯನ್ನು ಶಿಕ್ಷಕಿಯರಾದ ಉಮಾ, ಸಾವಿತ್ರಮ್ಮ, ಹೇಮಾವತಿ, ಲಲಿತಮ್ಮಎಸ್, ಗಾಯಿತ್ರಿ, ಶಿವನಂಜಮ್ಮ, ರಮಾರವರಿಗೆ ಪ್ರಧಾನ ಮಾಡಲಾಯಿತು. ಇದೇ ವೇಳೆ ಷಣ್ಮುಕಪ್ಪ, ಲೋಕೇಶ್, ಪ್ರಶಾಂತ್ ಮತ್ತು ಯೋಗಾನಂದ್ ಹಾಗು ನಿವೃತ್ತ ಶಿಕ್ಷಕಿಯರನ್ನು ಅಭಿನಂಧಿಸಲಾಯಿತು.

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯ ವ್ಯವಸ್ಥಾಪಕರಾದ ಕೆ.ಕೃಷ್ಣಪ್ರಸಾದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಹನುಮಕ್ಕ, ಜಲಜಾಕ್ಷಿ, ಜಿಪಿಟಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಧರ್, ಪದಾಧಿಕಾರಿಗಳಾದ ಗೀತಾ, ವನಜಾಕ್ಷಿ, ನೇತ್ರಾ ನಿರೂಪಿಸಿ, ಸುಜಾತ ರಾಮಯ್ಯ ಪ್ರಾರ್ಥಿಸಿ, ಮಮತಾ ಲೇಪಾಕ್ಷ ಮೂರ್ತಿ ಸ್ವಾಗತಿಸಿ, ರಶ್ಮಿ ಶಶಿಕುಮಾರ್ ಪ್ರಾಸ್ತಾವಿಕ ನುಡಿ ನುಡಿದು, ಸರ್ವಮಂಗಳ ಮೋಹನ್ಬಾಬು ವಂದಿಸಿದರು, ಪದಾಧಿಕಾರಿಗಳಾದ ಗೀತಾ, ವನಜಾಕ್ಷಿ ಮತ್ತಿತರರಿದ್ದರು.

ತುಮಕೂರಿನ ಸಿದ್ದು ಆರ್‌.ಜಿ.ಹಳ್ಳಿಗೆ ‘ಬಿ.ಎಸ್‌. ವೆಂಕಟರಾಂ ಪ್ರಶಸ್ತಿ’

0

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ‘ಪ್ರಜಾವಾಣಿ’ ಹಿರಿಯ ವರದಿಗಾರ ಸಿದ್ದು ಆರ್‌.ಜಿ.ಹಳ್ಳಿ ಅವರಿಗೆ ‘ಅತ್ಯುತ್ತಮ ಸ್ಕೂಪ್‌ ವರದಿ’ಗೆ ಬಿ.ಎಸ್‌. ವೆಂಕಟರಾಂ ಪ್ರಶಸ್ತಿ ಲಭಿಸಿದೆ.

ತುಮಕೂರು ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಜ. 18 ಮತ್ತು 19ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸಿದ್ದು ಅವರು ಮೂಲತಃ ತುಮಕೂರು ತಾಲ್ಲೂಕಿನ ರಾಮಗೊಂಡನಹಳ್ಳಿ ಗ್ರಾಮದವರು. ಆರಂಭದ ದಿನಗಳಲ್ಲಿ ತುಮಕೂರಿನ ‘ಪ್ರಜಾ ಪ್ರಗತಿ’ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿ, ನಂತರ ‘ಪ್ರಜಾವಾಣಿ’ಯಲ್ಲಿ ಕಳೆದ 15 ವರ್ಷಗಳಿಂದ ಮೈಸೂರು, ಹುಬ್ಬಳ್ಳಿ, ಹಾವೇರಿಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಮಂಡ್ಯ ಜಿಲ್ಲಾ ವರದಿಗಾರರಾಗಿದ್ದಾರೆ.

ಹಾವೇರಿ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ನಡೆದಿದ್ದ ‘ವಿದ್ಯಾಸಿರಿ’ ಸ್ಕಾಲರ್‌ಶಿಪ್‌ ಹಗರಣ ಕುರಿತ ಸರಣಿ ವರದಿಗೆ ಪತ್ರಕರ್ತರ ಸಂಘದಿಂದ ‘ಅತ್ಯುತ್ತಮ ತನಿಖಾ ವರದಿ’ಗೆ ಕೊಡುವ ಟಿ.ಕೆ. ಮಲಗೊಂಡ ರಾಜ್ಯ ಪ್ರಶಸ್ತಿಯೂ ಇವರಿಗೆ ದೊರೆತಿದೆ.

ಗಾಳಿಪಟ

0

ಡಾ// ರಜನಿ ಎಂ


ಸೂತ್ರ ಸರಿಯಾಗಿ
ಹಾಕಿದ್ದರೆ ..ಇಲ್ಲಾ ಗೋತ

ಮೇಲೆ ಹಾರಿ
ಸೂರ್ಯನ ಪಥ ಬದಲಿಸುವ
ನೋಡುವ ಹುನ್ನಾರ

ಅಲ್ಲೇ ಕೊಬ್ಬು ಹೆಚ್ಚಾಗಿ ತಿರುಗಿ ತಿರುಗಿ
ಆಟ ಆಡಿದರೆ
ಒಂದು ಸಾರಿ ದಾರ ಎಳೆದರೆ
ಮತ್ತೆ ಬಂತು ಒಳ್ಳೆ ಬುದ್ಧಿ .

ಒಮ್ಮೆಲೇ ದೊಡ್ಡ ಗೋತ
ಹೊಡೆದರೆ ..ಜೊತೆಗಾರರಿಗೆ
ಬಾಳ ಸಂತೋಷ

ಮೆಲ್ಲ ಮೆಲ್ಲಗೆ
ಸ್ವಲ್ಪ ಸ್ವಲ್ಪ ಎಳೆದು
ಮತ್ತೆ ದಾರಿಗೆ ತಂದರೆ ..ಆಹಾ

ಹಾರುವಾಗ ಸೂರ್ಯನ
ಬಿಸಿ
ಗಾಳಿಯ ತಂಪು
ನಿನಗೆ ಮಾತ್ರ

ದಾರ ಹಿಡಿದ ಕೈಗೆ
ಮಾತ್ರ ಗೊತ್ತು
ನಿನ್ನ ಹಾರಾಟ

ಪೂರ್ತಿ ಬಿಟ್ಟು
ಬಿಟ್ಟು
ಮತ್ತೆ ದಾರದ ಉಂಡೆ
ಹಿಡಿಯುವ ತಾಕತ್ತು ನನಗೆ ಮಾತ್ರ

ನಿನ್ನ ಬಿಗಿ ಅನುಭವಿಸಲು
ಎರಡು ನಿಮಿಷ
ಹಿಡಿಯಲು ಎರವಲು ಕೊಡುವ ಗತ್ತು ನನ್ನದು

ಗಾಳಿ ಮನೆ ಮೇಲೆ
ಹತ್ತಿದರೆ ಬೀಸುವುದಿಲ್ಲ
ಓಡಿ ಗಾಳಿಗೆ ಪಟ
ಬಿಡುವ ,ಬಾಲಂಗೋಚಿ
ಅಂಟಿಸುವ
ಗೆಳೆಯ ಬೇಕಲ್ಲ …

ರಾತ್ರಿ ಮಲಗಿದಾಗ
ಲೈಟ್ ಕಂಬಕ್ಕೆ
ಸಿಕ್ಕಿಕೊಂಡ ಗಾಳಿ ಪಟ
ಕನಸಲ್ಲಿ.

ಕನ್ನಡ ಸಾಹಿತ್ಯ ಶ್ರೀ ಸಾಮಾನ್ಯನ ಪ್ರತೀಕ ಪೂಜ್ಯ ಶ್ರೀ  ವೀರೇಶಾನಂದ ಸರಸ್ವತೀ ಸ್ವಾಮೀಜಿ

ಮೈಸೂರು


ಕನ್ನಡ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಇಡೀ ಜಗತ್ತಿಗೆ ಪರಿಚಯಿಸಿದೆ. ಶ್ರಮ ಸಂಸ್ಕೃತಿಯ ವೈಶಿಷ್ಟ್ಯತೆ ಚಿಂತನೆ ಕುರಿತಂತೆ ಪ್ರಾಚೀನ ಕಾಲದಿಂದಲೂ ಇಲ್ಲಿಯವರೆಗೂ ಸಾಹಿತಿಗಳು ವಿಶೇಷವಾಗಿ ನಿರೂಪಿಸಿದ್ದಾರೆ. ಕನ್ನಡ ಮಾತೃಭಾಷೆಯಲ್ಲದ ಅನೇಕ ಮಹನೀಯರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಸ್ಮರಣೀಯವಾದದ್ದು.ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ವಿಚಾರ ಸಂಕಿರಣದ ಗೋಷ್ಠಿಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.ಭಾಷೆಯ ಬಗೆಗೆ ಗಂಭೀರವಾದ ಚಿಂತನೆ ನಡೆಸಿದವರು ಮಾತ್ರ ಜನಮಾನಸದಲ್ಲಿ ಉಳಿಯುತ್ತಾರೆ.ಹಾಗಾಗಿ ಕನ್ನಡ ಸಾಹಿತ್ಯ ಶ್ರೀ ಸಾಮಾನ್ಯನ ಪ್ರತೀಕ ಎಂದು ತುಮಕೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.

ಉದಯಪುರದಲ್ಲಿ ಮಿಂಚಿದ ಶಿರಾದ ಮೇಸ್ಟ್ರು

0

ಕೇಂದ್ರ ಸಂಸ್ಕೃತಿಕ ಸಚಿವಾಲಯದಿಂದ ರಾಜ್ಯದ ವಿವಿಧ ಜಿಲ್ಲೆಗಳ ಶಿಕ್ಷಕರಿಗೆ ರಾಜಸ್ಥಾನ ರಾಜ್ಯದ ಉದಯಪುರದಲ್ಲಿ ನಮ್ಮ ಸಂಸ್ಕೃತಿಯಲ್ಲಿ ವಿವಿಧತೆ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿತ್ತು.

ಈ ತರಬೇತಿಯಲ್ಲಿ ಕಲೆ ಮತ್ತು ಸಾಂಸ್ಕೃತಿಕ ಅಧ್ಯಯನ ಕುರಿತು ತರಬೇತಿ ಪಡೆಯಲು ಕರ್ನಾಟಕ ರಾಜ್ಯದಿಂದ 8 ಶಿಕ್ಷಕರು ಭಾಗವಹಿಸಿ, ವಿವಿಧ ಕಲೆಗಳನ್ನು ಅನಾವರಣಗೊಳಿಸಿ, ಹಲವು ರಾಜ್ಯಗಳ ಶಿಕ್ಷಕರಿಂದ ಹಾಗೂ ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಂದ ಪಡೆದಿದ್ದಾರೆ.
ಶಿರಾ ತಾಲ್ಲೂಕಿನ ಗಾಣದಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಆರ್.ತಿಪ್ಪೇಸ್ವಾಮಿ ಹಾಗೂ ಗೊಲ್ಲರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಹಶಿಕ್ಷಕ ನೂರ್‌ ಅಹಮದ್‌ ಸೇರಿದಂತೆ ರಾಜ್ಯದ ಚಿತ್ರದುರ್ಗ, ರಾಮನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತಲಾ ಇಬ್ಬರು ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ, ನಮ್ಮ ನೆಲಮೂಲ ಸಂಸ್ಕೃತಿಯ ಬಗ್ಗೆ ಅಲ್ಲಿನ ಶಿಕ್ಷಕರಿಗೆ ಮಾಹಿತಿ ನೀಡಿ, ಬೇರೆ ಬೇರೆ ರಾಜ್ಯಗಳ ಕಲೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಅಧ್ಯಯನ ಮಾಡಿ ಬಂದಿದ್ದಾರೆ.
ಕೇಂದ್ರ ಸಾಂಸ್ಕೃತಿಕ ಸಚಿವಾಲಯದಿಂದ ರಾಜಸ್ಥಾನದ ಉದಯಪುರದಲ್ಲಿ ಕಳೆದ ಡಿ.11 ರಿಂದ ಪ್ರಾರಂಭವಾದ ಈ ತರಬೇತಿ ಕಾರ್ಯಾಗಾರದಲ್ಲಿ ಪ್ರತಿದಿನವೂ ಎರಡು ರಾಜ್ಯಗಳ ವಿಸ್ತೃತ ಮಾಹಿತಿಯೊಂದಿಗೆ ಅಲ್ಲಿನ ಭೌಗೋಳಿಕ ವೈವಿಧ್ಯತೆ, ಭಾಷಾ ವೈವಿಧ್ಯತೆ, ಆಹಾರ ಪದ್ಧತಿ, ಉಡುಗೆ-ತೊಡುಗೆ, ಪ್ರಾದೇಶಿಕ ಕಲೆಗಳ ಅನಾವರಣ, ಸ್ಥಳೀಯ ನೃತ್ಯ ಪ್ರಕಾರಗಳು ಸೇರಿದಂತೆ ಹಲವು ವೈವಿಧ್ಯತೆಗಳನ್ನು ಪ್ರತಿ ಶಿಕ್ಷಕರು ಪ್ರದರ್ಶನ ನೀಡಿದರು.
ಕರ್ನಾಟಕದ ಜಾನಪದ ನೃತ್ಯ ಪ್ರಕಾರಗಳಾದ ಕಂಸಾಳೆ, ವೀರಗಾಸೆ, ಯಕ್ಷಗಾನ, ಡೊಳ್ಳು ಕುಣಿತ, ಹುಲಿ ಕುಣಿತ, ಗೊರವರ ಕುಣಿತ ಸೇರಿದಂತೆ ಹಲವು ಕಲಾಪ್ರಕಾರಗಳ ಪರಿಚಯ ಮಾಡಿಕೊಡಲಾಯಿತು. ರಾಜ್ಯದ ವಿವಿಧ ಭಾಗಗಳ ವೇಷ-ಭೂಷಣ, ಆಹಾರ ಪದ್ದತಿ, ನೃತ್ಯ ಪ್ರಕಾರಗಳನ್ನು ಪ್ರದರ್ಶನ ಮಾಡಲಾಯಿತು.
ಶಿರಾ ತಾಲ್ಲೂಕು ಗಾಣದಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಸಹಶಿಕ್ಷಕ ಆರ್.ತಿಪ್ಪೇಸ್ವಾಮಿ ದಕ್ಷಿಣ ಕರ್ನಾಟಕದ ಮೈಲಾರಲಿಂಗನ ಭಕ್ತರು ಪ್ರದರ್ಶಿಸುವ ಗೊರವರ ಕುಣಿತ ನೃತ್ಯ ಪ್ರಕಾರವನ್ನು ಪ್ರದರ್ಶಿಸಿದ್ದು, ಎಲ್ಲರ ಮನ ಸೂರೆಗೊಂಡಿತು. ಹಿರಿಯೂರಿನ ಅರುಣ್‌, ಚಿದಾನಂದ್‌, ಚಿಕ್ಕಮಗಳೂರಿನ ಶಿವಕುಮಾರ್, ರಾಮನಗರ ಜಿಲ್ಲೆಯ ರಂಜಿತ ಸಂಗಡಿಗರು ಪ್ರದರ್ಶಿಸಿದ ಹುಲಿ ಕುಣಿತ ಆಕರ್ಷಣೀಯವಾಗಿತ್ತು. ನಂತರ ರಾಜ್ಯದ ವಿಶೇಷ ತಿನಿಸುಗಳನ್ನು ಎಲ್ಲಾ ಶಿಬಿರಾರ್ಥಿಗಳಿಗೂ ಹಾಗೂ ಅಧಿಕಾರಿಗಳಿಗೂ ವಿತರಿಸಿ, ಅದರ ವೈಶಿಷ್ಟ್ಯತೆ ಬಗ್ಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರು ಕರ್ನಾಟಕ ದೇಗುಲಗಳ ಬಗ್ಗೆ ತಯಾರಿಸಿದ ಪ್ರಾಜೆಕ್ಟ್‌ ಗೆ ಪ್ರಥಮ ಬಹುಮಾನ ಲಭಿಸಿತು. ರಾಮನಗರದ ಲಾವಣ್ಯ, ಚಿಕ್ಕಮಗಳೂರಿನ ಶಕೀಲ ಭಾಗವಹಿಸಿ, ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಕುರಿತು ಮಾಹಿತಿ ಹಂಚಿಕೊಂಡರು.

ಫೋಟೋ-1 ಮತ್ತು 2
ಶಿರಾ ತಾಲ್ಲೂಕಿನ ಶಿಕ್ಷಕರಾದ ಆರ್.ತಿಪ್ಪೇಸ್ವಾಮಿ ಹಾಗೂ ನೂರ್‌ ಅಹಮದ್‌ ಸೇರಿದಂತೆ ರಾಜ್ಯದ 8 ಜನ ಶಿಕ್ಷಕರು ರಾಜಸ್ಥಾನದ ಉದಯಪುರದಲ್ಲಿ ನಡೆದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯದ ಕಲೆಗಳ ಪ್ರದರ್ಶನ ನೀಡಿದರು.

ತಮ್ಮ ಲೇಖನಿಯ ಪರಿಣಾಮದಿಂದಲೇ ದೇಶ ಮುನ್ನಡೆಸಿದ ಡಾ.ಸಿಂಗ್ ; ಕೆ ಎಸ್ ಕಿರಣಕುಮಾರ್

0

(ಆಧಾರ್ ಪ್ರವರ್ತಕ ಡಾ ಸಿಂಗ್ ; ಸಿ ಡಿ ಚಂದ್ರಶೇಖರ್)

ಚಿಕ್ಕನಾಯಕನಹಳ್ಳಿ :‌ ಬ್ಲಾಕ್ ಕಾಂಗ್ರೆಸ್ ಕಛೇರಿ ಆವರಣದಲ್ಲಿ ಮಾಜಿ ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ರವರ ಶ್ರದ್ಧಾಂಜಲಿ ಸಭೆ ನಡೆಸಲಾಯ್ತು.

ಮಹಾತ್ಮಗಾಂಧಿ ನರೇಗಾ ಕ್ರಾಂತಿಯ ಮೂಲಕ ಬಡವರ ಒಡಲಿಗೆ ಅನ್ನ ಕಲ್ಪಿಸಿಕೊಟ್ಟ ಜ್ಞಾನಮೌನಿ ಡಾ ಮನಮೋಹನ್ ಸಿಂಗ್’ರವರ ಗೌರವಾರ್ಥ ಎರಡು ನಿಮಿಗಳ ಮೌನಾಚರಣೆ ಮಾಡಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮಾಜಿ ಶಾಸಕ ಕೆ ಎಸ್ ಕಿರಣಕುಮಾರ್ ಮಾತನಾಡಿ, ಅಬ್ಬರದ ಭಾಷಣ ಮಾಡುವವರು ಮಾತ್ರವೇ ದೇಶದ ನಾಯಕರಲ್ಲ. ತಮ್ಮ ಬಳಿಯಿರುವ ಲೇಖನಿಯ ಪರಿಣಾಮಕಾರಿ ಸದ್ಬಳಕೆಯಿಂದಲೇ ದೇಶ ಮುನ್ನಡೆಸುವ ಸಾಮರ್ಥ್ಯ ಹೊಂದಿದವರೇ ನಿಜವಾದ ಜನನಾಯಕರು. ಹಳಿ ತಪ್ಪಿದ್ದ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಮತ್ತೆ ಆರ್ಥಿಕ ಪ್ರಗತಿಯ ಗತಿಶೀಲತೆಯನ್ನು ತಂದುಕೊಟ್ಟಂಥವರು ಡಾ. ಮನಮೋಹನ್ ಸಿಂಗ್’ರವರು. ಪ್ರಧಾನಿಯಾಗಿದ್ದಾಗ, ಹೊರಗೆ ಅಡಮಾನ ಇಟ್ಟಿದ್ದ ದೇಶದ ಚಿನ್ನವನ್ನು ಮತ್ತೆ ದೇಶಕ್ಕೆ ಮರಳಿ ಗಳಿಸಿಕೊಟ್ಟವರು ಡಾ ಸಿಂಗ್. ಪ್ರಪ್ರಥಮವಾಗಿ, ಎಪ್ಪತ್ತೊಂದು ಸಾವಿರ ಕೋಟಿಗಳಷ್ಟು ರೈತರ ಸಾಲಮನ್ನಾ ಮಾಡಿದ ಮೌನದಿರಿಸಿನ ಧೀರ ವ್ಯಕ್ತಿತ್ವ ಡಾ ಮನಮೋಹನ್ ಸಿಂಗ್’ರವರದು. ಅಬ್ಬರದ ಭಾಷಣ ಮಾಡುತ್ತಾ, ಜನರನ್ನು ಮರುಳು ಮಾಡುತ್ತಾ ಕಾಲತಳ್ಳುವ ವ್ಯಕ್ತಿ ಅವರಾಗಿರಲಿಲ್ಲ. ಮಾತಾಡದೇ ಕೆಲಸ ಮಾಡುತ್ತಾ ದೇಶದ ಜನರ ಬದುಕು-ಭವಿಷ್ಯ ಎರಡನ್ನೂ ಸುಭದ್ರಗೊಳಿಸಲು ಅವಿರತ ಪ್ರಯತ್ನಿಸುತ್ತಿದ್ದವರು. ಅವರ ನಿಧನದಿಂದ ದೇಶ ನಿಜಕ್ಕೂ ಇಂದು ಬಡವಾಗಿದೆ ಎಂದು ವಿಷಾದಿಸಿದರು.

ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ ಡಿ ಚಂದ್ರಶೇಖರ್ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಆರೋಗ್ಯ ಮಟ್ಟವನ್ನು ಸುಧಾರಿಸಲು ರಾಷ್ಟ್ರೀಯ ಆರೋಗ್ಯ ಮಿಷನ್ ಜಾರಿಗೆ ತಂದಂತಹ ಮಹಾವ್ಯಕ್ತಿ ಡಾ ಮನಮೋಹನ್ ಸಿಂಗ್’ರವರು. ಜನ-ಸಾಮಾನ್ಯರ ಕೈಗೆ ಅಸಾಮಾನ್ಯ ಬಲ ತಂದುಕೊಟ್ಟಂತಹ ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ’ಗಳನ್ನು ದೇಶಕ್ಕೆ ಕೊಟ್ಟ ಶ್ರೇಯಸ್ಸು ಡಾ ಸಿಂಗ್’ರವರದ್ದು. ಬಡವರಿಗಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಜಾರಿಗೆ ತಂದು, ವರ್ಷವಿಡೀ ಯಾರಿಗೂ ಅನ್ನಾಹಾರಗಳ ಕೊರತೆ ಎದುರಾಗದಂತೆ ಕಾಳಜಿ ವಹಿಸಿದ್ದರು. ತಮ್ಮ ಅಧಿಕಾರಾವಧಿಯ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಅವರೊಬ್ಬ ಮಹಾನ್ ಆರ್ಥಿಕ ತಜ್ಞರಾಗಿದ್ದರು. ಮಾರುತಿ ಕಾರ್ ಎಂದರೆ, ಅವರಿಗೆ ಅತಿಯಾದ ಪ್ರೀತಿ. ಆಗೆಲ್ಲ ಕೇವಲ ಮಾರುತಿ ಕಾರ್ ಮಾತ್ರ ಕಾಣಿಸುತ್ತಿದ್ದ ಇಂಡಿಯಾದ ರಸ್ತೆಗಳಲ್ಲಿ, ನೂರಾರು ಮಾದರಿಯ ಬೇರೆ ಬೇರೆ ಕಾರುಗಳೂ ಕಾಣುವಷ್ಟರ ಮಟ್ಟಿಗೆ, ದೇಶದ ವಾಹನ ಉತ್ಪಾದನಾ ಕ್ಷೇತ್ರಕ್ಕೂ ಒತ್ತು ಕೊಟ್ಟವರು. ಕಂಪ್ಯೂಟರ್ರು, ಮೊಬೈಲು, ಟ್ಯಾಬು ಇತ್ಯಾದಿ ಗ್ಯಾಜೆಟ್ಟುಗಳು ದೇಶದ ಜನರಿಗೆ ಸುಲಭ ದರಗಳಲ್ಲಿ ದೊರೆಯುವಂತೆ ಮಾಡಿದ್ದ ಆರ್ಥಿಕ ಕ್ಷೇತ್ರದ ಅಪರೂಪದ ಸಾಧಕ. ಇಡೀ ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಸಿಲುಕಿ ನಲುಗುತ್ತಿದ್ದಾಗ, ಆಯೆಲ್ಲ ಆರ್ಥಿಕ ಸಂಕಟಗಳಿಗೆ ದೇಶ ಬಲಿಯಾಗದಂತೆ ಎಚ್ಚರ ವಹಿಸಿ ಭಾರತವನ್ನು ಕಾಪಾಡಿಕೊಂಡ ಮೌನ ಕ್ರಾಂತಿಕಾರ. ದೇಶದ ಜನರಿಗೆ ಸುಗಮವಾಗಿ ಸಕಾಲದಲ್ಲಿ ಸೇವೆಗಳನ್ನು ಒದಗಿಸಿಕೊಡುವ ಉದ್ದೇಶದಿಂದ ಆಧಾರ್ ಕಾರ್ಡ್ ತಂದ ಪ್ರವರ್ತಕರು ಅವರು. ಅವರನ್ನು ಮೌನಿ ಮೌನಿ ಎಂದು ಮೂದಲಿಸಿ ಜರೆಯುತ್ತಿದ್ದ ವಿರೋಧಿಗಳೂ ಕೂಡ ಇಂದು, ಡಾ. ಸಿಂಗ್ ಸಾಹೇಬರು, ದೇಶಕ್ಕೆ ನೀಡಿರುವ ಅತ್ಯಮೂಲ್ಯ ಕೊಡುಗೆಗಳನ್ನು ಎಣಿಸುತ್ತಾ ಕೂತಿದ್ದಾರೆ.

ಹುಳಿಯಾರ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ, ಟಿ, ಚಿಕ್ಕಣ್ಣ, ರಾಜ್ಯ ಸೇವಾದಳದ ಕಾರ್ಯದರ್ಶಿ ಕೆ ಜಿ ಕೃಷ್ಣೆಗೌಡ, ಬಗರ್ ಹುಕುಂ ಸಮಿತಿ ಸದಸ್ಯ ಬೇವಿನಹಳ್ಳಿ ಚನ್ನಬಸವಯ್ಯ, ಪುರಸಭೆ ಸದಸ್ಸುಗಂದರಾಜು, ಕೆಂಪಮ್ಮ, ಪುರಸಭೆ ಆಶ್ರಯ ಸಮಿತಿಸದಸ್ಯ ರಾದ ಸಿ, ಕೆ, ಪೀರ್ ಪಾಷಾ, ಸೇವಾದಳ ಅಧ್ಯಕ್ಷರಾದ ಗೋವಿಂದರಾಜು, ಸಣ್ಣತಾಯಮ್ಮ, ಜಾಣೆಹಾರ್ ಬಸವರಾಜ್, ಕೆಡಿಪಿ ಸದಸ್ಯ ರಾಮಚಂದ್ರಯ್ಯ, ಗ್ಯಾರಂಟಿ ಸಮಿತಿ ಸದಸ್ಯರಾದ ರೇಣುಕಾಸ್ವಾಮಿ, ಚಂದ್ರಯ್ಯ, ಓಂಕಾರಮೂರ್ತಿ, ಸಿದ್ದರಾಮಯ್ಯ, ಅಗಸರಹಳ್ಳಿ ನರಸಿಂಮೂರ್ತಿ, ಸೇವಾದಳದ ಮಾಜಿ ಜಿಲ್ಲಾಧ್ಯಕ್ಷ ನಿಶಾನಿ ಕಿರಣ್, ರಾಜು ಕರಿಯಪ್ಪ, ನೀಲಕಂಠಯ್ಯ, ದರ್ಘಾ ಜಾವೇದ್, ಚಿ ನಾ ಹಳ್ಳಿ ಜ಼ಾಕಿರ್ ಹುಸೇನ್, ಹೊನ್ನೇಬಾಗಿ ಜಾಫರ್, ಪ್ರಸನ್ನಕುಮಾರ್ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.

*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಚಿಕ್ಕನಾಯಕನಹಳ್ಳಿಗೆ ತಿಂಡಿಗೆ ಬರಲಿದ್ದಾನೆ ತುಂಡೇರಾಯ

ಚಿಕ್ಕನಾಯಕನಹಳ್ಳಿ: ಇಲ್ಲಿಗೆ ಡಿಸೆಂಬರ್ 29ರಂದು ತುಂಡೇರಾಯ ತಿಂಡಿಗೆ ಬರಲಿದ್ದಾನೆ. ತುಂಡೇರಾಯನನ್ನು ನೋಡಲು ಯಾರೂ ಬೇಕಾದರೂ ಬರಬಹುದು.

ಜರ್ಮನ್ ನಾಟಕಕಾರ *ಬರ್ಟೋಲ್ಟ್ ಬ್ರೆಖ್ಟ್* ರಚಿಸಿದ ‘ದ ರೆಜ಼ಿಸ್ಟೆಬಲ್ ರೈಜ಼್ ಆಫ್ ಆರ್ಥುರೋ ಊಯಿ’ ನಾಟಕದ ಕನ್ನಡರೂಪ.
ನಿರ್ದೇಶನ, *ಶಕೀಲ್ ಅಹ್ಮದ್*. ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನವಾಗಿದೆ. ನಾಟಕಾಸಕ್ತರು ಭಾಗವಹಿಸಲು ಆಹ್ವಾನಿಸಲಾಗಿದೆ.

ದಿ.*29.12.2024*, ಭಾನುವಾರ
ಸಂಜೆ, *5.45*’ಕ್ಕೆ (ಛಳಿಗಾಲದ ಪ್ರಯುಕ್ತ)
ಸ್ಥಳ, ತೀ.ನಂ.ಶ್ರೀ.ಭವನ, ಚಿಕ್ಕನಾಯಕನಹಳ್ಳಿ ಆಯೋಜಿಸಲಾಗಿದೆ.
ಮೋಡಿ ಮಾಡಬಲ್ಲ ಮೋಹಕ ಮಾತುಗಳನ್ನಾಡುವ ತುಂಡೇರಾಯ, ಬಯಸಿದ್ದನ್ನು ಪಡೆಯಲು ಏನು ಮಾಡಲೂ ಹಿಂಜರಿಯದಂವ. ತುಂಡೇರಾಯನ ದುರಾಸೆ ಮತ್ತು ಅಧಿಕಾರ ದಾಹ ಹೆಚ್ಚಾದಂತೆ ಅದನ್ನು ಸಾಧಿಸಿಕೊಳ್ಳುವ ಮಾರ್ಗಗಳೂ ಹೆಚ್ಚು ಕ್ರೂರಗೊಳ್ಳುತ್ತಾ ಹೋಗುತ್ತವೆ. ತನ್ನ ಬುದ್ಧಿ ಮತ್ತು ಬಲಪ್ರಯೋಗದಿಂದ ಅಧಿಕಾರದ ಗದ್ದುಗೆಗಳನ್ನು ಏರುವ ಹವಣಿಕೆ ಈತನದು. ಜನರನ್ನು ಮಾತಿನಲ್ಲಿ ಮರುಳು ಮಾಡುತ್ತಾ, ಮರುಳಾಗದಿದ್ದವರನ್ನು ಕೊಲ್ಲುತ್ತಾ, ತನ್ನ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಬಯಸುತ್ತಾನೆ.

ಸಮಕಾಲೀನ ಜಾಗತಿಕ ರಾಜಕೀಯ ಮತ್ತು ಯಾವುದೇ ದೇಶ ಕಾಲವನ್ನೂ ಸಂಕೇತವಾಗಿ ಪ್ರತಿನಿಧಿಸಬಲ್ಲ ವಿಡಂಬನಾತ್ಮಕ ನಾಟಕವಿದು.

ಅವಧಿ, *120* ನಿಮಿಷಗಳು
ಟಿಕೆಟ್ ದರ, *50′ ರೂಪಾಯಿ ನಿಗದಿಪಡಿಸಲಾಗಿದೆ.

*ಸಂಚಲನ*(ರಿ)
ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ
ಚಿಕ್ಕನಾಯಕನಹಳ್ಳಿ–ಇವರು ನಾಟಕ ಆಯೋಜಿಸಿದ್ದಾರೆ.*ಕುವೆಂಪು ಜನ್ಮದಿನ*’ದಂದು,
*ನಿರ್ದಿಗಂತ*, ಮೈಸೂರು ಇವರು ಪ್ರಸ್ತುತಿಪಡಿಸುತ್ತಿದ್ದಾರೆ.
____________________________________________