ಪಾವಗಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಜೆಡಿಎಸ್ ಪಕ್ಷದ ವತಿಯಿಂದ ಆಹಾರ ವಿತರಣೆಗೆ ಚಾಲನೆ ನೀಡಲಾಯಿತು.
ಕೊರೊನಾ ಲಾಕ್ ಡೌನ್ ನಿಂದಾಗಿ ಹೋಟೆಲ್ ಗಳು ಕಾರ್ಯ ನಿರ್ವಹಿಸದ ಕಾರಣ ಗ್ರಾಮೀಣ ಭಾಗದಿಂದ ಆಸ್ಪತ್ರೆ, ಬ್ಯಾಂಕ್, ಇತ್ಯಾದಿ ಕೆಲಸಗಳಿಗಾಗಿ ಬಂದ ಜನತೆ ಹಸಿವಿನಿಂದ ಬಳಲುತ್ತಿದ್ದಾರೆ. ಜೊತೆಗೆ ಪಟ್ಟಣದ ಬಡಾವಣೆಗಳಲ್ಲಿನ ಕೆಲ ಬಡ ಕುಟುಂಬಗಳಿಗೆ ಆಹಾರದ ಅಗತ್ಯವಿದೆ ಹೀಗಾಗಿ ಮೇ-3 ರವರೆಗೆ ನಿತ್ಯ ಮಧ್ಯಾಹ್ನ ಆಹಾರ ವಿತರಿಸಲಾಗುವುದು ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜಿನಪ್ಪ, ಜಿಲ್ಲೆಯಾದ್ಯಂತ ಮಾಸ್ಕ್, ಆಹಾರ, ಬಟ್ಟೆ, ಪಡಿತರ ಇತ್ಯಾದಿ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ. ತಾಲ್ಲೂಕಿನಲ್ಲಿಯೂ ಮೇ-3 ಕುಟುಂಬಗಳಿಗೆ ಆಹಾರ ವಿತರಿಸಿಸಲು ನಿರ್ಧರಿಸಲಾಗಿದೆ. ಮೇ-3 ರ ನಂತರ ಲಾಕ್ ಡೌನ್ ಮುಂದುವರೆದಲ್ಲಿ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ಯೋಜನೆ ಮುಂದುವರೆಸಲಾಗುವುದು ಎಂದರು.
ಜನತೆ ಸರ್ಕರದ ಮಾರ್ಗ ಸೂಚಿಗಳನ್ನು ಪಾಲಿಸಬೇಕು. ಮನೆಯಿಂದ ಹೊರಬರದೆ ಕೊರೊನಾ ಹರಡುವುದನ್ನು ತಡೆಗಟ್ಟಬೇಕು ಎಂದು ಕರೆ ನೀಡಿದರು.
ಬೊಮ್ಮತನಹಳ್ಳಿ ಮಾರ್ಗದ ಆಶ್ರಮದ ಬಳಿ ಆಹಾರ ಸಿದ್ದಪಡಿಸಲಾಯಿತು. ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಅಡುಗೆ ತಯಾರಿ ಹಾಗೂ ವಿತರಣಾ ಕಾರ್ಯದಲ್ಲಿ ಭಾಗವಹಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಕಾರ್ಯಾಧ್ಯಕ್ಷ ಈರಣ್ಣ, ಕಾರ್ಯದರ್ಶಿ ಸಾರವಾಟಪುರ ಬಾಬು, ಯುವ ಘಟಕದ ಅಧ್ಯಕ್ಷ ಮಂಜುನಾಥ ಚೌಧರಿ, ನಗರ ಘಟಕದ ಅಧ್ಯಕ್ಷ ಶಾಂತಕುಮಾರ್, ಪುರಸಭೆ ಸದಸ್ಯ ಗೊರ್ತಿ ನಾಗರಾಜು, ಮುಖಂಡ ತಿಮ್ಮಾರೆಡ್ಡಿ, ಮನು, ಗೋಪಾಲ್, ವಸಂತ್, ವೆಂಕಟೇಶ್, ನಾಗೇಂದ್ರ, ಮಣಿ, ಕುಮಾರ್, ನಲ್ಲಪ್ಪ, ಯೂನಸ್, ಮತಿನ್, ಈರಣ್ಣ ಇತರರು ಇದ್ದರು.
ತುಮಕೂರು: ಉಳ್ಳವರಿಗೆ ದಾನ ನೀಡುವುದು ಬೇಡ ಎಂಬ ಅಭಿಯಾನ ಉಳ್ಳವರಿಂದಲೇ ಆರಂಭವಾಗಬೇಕಾಗಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಹೇಳಿದ್ದಾರೆ.
ಗೂಳೂರು ಜಿಲ್ಲಾ ಪಂಚಾಯತನ ಹರಳೂರು ಗ್ರಾಮದಲ್ಲಿ ಬಡವರಿಗೆ ಆಹಾರದ ಕಿಟ್ ಹಾಗೂ ಎಲ್ಲ ಜನರಿಗೂ ಮಾಸ್ಕ್ ಹಂಚುವ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರೊನಾಕ್ಕೆ ಈವರೆಗೂ ಔಷಧಿ ಕಂಡು ಹಿಡಿಯಲು ಇಡೀ ಜಗತ್ತಿಗೆ ಸಾಧ್ಯವಾಗಿಲ್ಲ. ಹೀಗಾಗಿ ಬಡವರು ಮತ್ತಷ್ಟು ಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದರು.
ಕ್ಷೇತ್ರದಲ್ಲಿ ಕೆಲವರು ಉಳ್ಳವರಿಗೂ ದಾನ ನೀಡ ತೊಡಗಿದ್ದಾರೆ. ದಾನದ ಮೂಲಕ ರಾಜಕೀಯ ಶಕ್ತಿ ಗಳಿಸಿಕೊಳ್ಳಲು ಮುಂದಾಗಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ರಾಜಕೀಯ ಮಾಡುವ ಮನಸ್ಸನ್ನು ಯಾರೂ ಇಟ್ಟುಕೊಳ್ಳಬಾರದು ಎಂದು ಹೇಳಿದರು.
ಉಳ್ಳವರು ಯಾವುದೇ ಕಾರಣಕ್ಕೂ ಆಹಾರ ಕಿಟ್ ಪಡೆಯಬೇಡಿ. ನಾನು ಅದಕ್ಕಾಗಿ ಒಂದು ಕಿಟ್ ಗೆ 600-700 ರೂಪಾಯಿ ವೆಚ್ಚ ಮಾಡುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಪಡಿತರ ಕಾರ್ಡ್ ಇಲ್ಲದ, ಆಧಾರ್ ಗೆ ಪಡಿತರ ಕಾರ್ಡ್ ಲಿಂಕ್ ಆಗದ ಬಡವರಿಗೆ ಆಹಾರ ವಿತರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಉಳ್ಳವರು ಯಾವುದೇ ಕಾರಣಕ್ಕೂ ತಪ್ಪು ಹುಡುಕಬೇಡಿ. ಬಡವರ ಬಗೆಗಿನ ಕಾಳಜಿ, ಗೌರವ, ಅವರ ಸ್ಥಿತಿಯನ್ನು ಕಂಡು ಮಾತನಾಡುತ್ತಿದ್ದೇನೆ. ಇದೇ ಪ್ರೀತಿ, ಗೌರವ ಬಡವರ ಬಗ್ಗೆ ನಿಮಗೂ ಇದೆ ಎಂದು ನಾನು ತಿಳಿದುಕೊಂಡಿದ್ದಾನೆ ಎಂದರು.
ರೈತರಿಗೆ ಬೆಳೆದಿರುವ ತರಕಾರಿ ಮಾರಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೂ ಒಳಿತಾಗಲೀ ಎಂಬ ಕಾರಣದಿಂದ ತರಕಾರಿ, ಗೆಣಸು, ಬಾಳೆಕಾಯಿ ಕೊಂಡು ಬಡವರಿಗೆ, ಅಗತ್ಯ ಇರುವವರಿಗೆ ಹಂಚುವ ಕೆಲಸ ಮಾಡುತ್ತಿದ್ದೇನೆ ಎಂದರು.
ತ್ಯಾಗದ ಹಿಂದೆ ಸುಖ ಇರಲಿದೆ. ಸ್ವಾಭಿಮಾನ ನಮಗೆ ಘನತೆ ತಂದು ಕೊಡುತ್ತದೆ. ನನ್ನ ಕ್ಷೇತ್ರದ ಜನರು ಸ್ವಾಭಿಮಾನಿಗಳು. ಹೀಗಾಗಿಯೇ ಕಳೆದ ಹತ್ತು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲಿ ಆಗದಷ್ಟು ಅಭಿವೃದ್ಧಿ ಕೆಲಸಗಳನ್ನು ಕ್ಷೇತ್ರದಲ್ಲಿ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಗೂಳೂರು ಜಿಲ್ಲಾ ಪಂಚಾಯ್ತಿಯ ಹರಳೂರು ಗ್ರಾಮ ಪಂಚಾಯತಿ ಪ್ರತಿ ಮನೆ ಮನೆಗೆ ಉಚಿತವಾಗಿ ಮಾಸ್ಕ್ ಹಾಗೂ ನೇರವಾಗಿ ರೈತರಿಂದ ಖರೀದಿ ಮಾಡಿದ ತರಕಾರಿಯನ್ನು ಮತ್ತು ರೇಷನ್ ಕಾರ್ಡ್ ರಹಿತ ಬಡ ಕುಟುಂಬಗಳಿಗೆ ರೇಷನ್ ಕಿಟ್ ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಕುಮಾರ್, ಹರಳೂರು ಕುಮಾರಯ್ಯ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಜಣ್ಣ, ಗ್ರಾಮ ಪಂ ಸದಸ್ಯರಾದ ರಮೇಶ್, ಪುಟ್ಟರಾಜು, ಶಾಂತಕುಮಾರ್, ಕೃಷ್ಣಪ್ಪ, ಮುಖಂಡರಾದ ಹೊನ್ನೇಶ್ ಕುಮಾರ್, ಪಾಲಣ್ಣ ಮುಂತಾದವರು ಭಾಗವಹಿಸಿದ್ದರು.
ತುಮಕೂರು: ಸುಮಾರು ಎಂಬತ್ತರ ಆಸುಪಾಸಿನ ವಯೋವೃದ್ಧೆ. ಮುಗದಲ್ಲಿ ಸದಾ ವಿಭೂತಿ, ಕುಂಕುಮ. ಕೈಲೊಂದು ಹಳೆಯದಾದ ಬ್ಯಾಗ್ ಹಿಡಿದು ದಾರಿಯಲ್ಲಿ ತನಗಿಷ್ಟವಾದವರು ಯಾರಾದರು ಸಿಕ್ಕರೆ ಸಾಕು ಅವರಿಗೊಂದಿಷ್ಟು ಹೂಪತ್ರೆ ಕೊಟ್ಟು ದೇವರ ಪ್ರಸಾದ ಇಟ್ಟುಕೊಳ್ಳಿ ಎಂದು ಮುಂದೆ ಹೋಗುತ್ತದೆ.
ದೇವರ ಹೂಪತ್ರೆ ಕೊಟ್ಟಾಕ್ಷಣ ಅಜ್ಜಿ ಏನನ್ನಾದರೂ ಆಪೇಕ್ಷಿಸಬಹುದು ಎಂದು ಅಂದಕೊಂಡೆ ಅದು ಸುಳ್ಳು. ಯಾರಿಂದಲೂ ಏನನ್ನೂ ಆಪೇಕ್ಷಿಸದ ಅಜ್ಜಿ ಒಂಟಿ ಜೀವಿ. ತನ್ನ ಒಂದು ತಿಂಗಳ ವೃದ್ಧಾಪ್ಯ ವೇತನ ಹಾಗೂ ಒಂದು ತಿಂಗಳ ಪಡಿತರ ದಿನಸಿಗಳನ್ನು ನಿರ್ಗತಿಕರ ತುತ್ತಿನ ತೀಲ ಚೀಲ ತುಂಬಲು ನೀಡಿ ಇಳಿವಯಸ್ಸಿನಲ್ಲೂ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ಕೊರಟಗೆರೆ ಪಟ್ಟಣದ ಒಂದು ಮೂಲೆಯ ಸಣ್ಣ ಮನೆಯೊಂದರಲ್ಲಿವ ಅಜ್ಜಿಯ ಹೆಸರು ಶಿವರುದ್ರಮ್ಮ. ಯಾರೊಬ್ಬರೂ ಆಸರೆ ಇಲ್ಲದ ಒಬ್ಬಂಟಿ ಜೀವ. ಆದರೂ ಅವರ ಮಾನವೀಯತೆಗೆ ಕೊರತೆ ಇಲ್ಲ.
ಕೊರೊನಾ ಲಾಕ್ ಡೌನ ಪರಿಸ್ಥಿತಿಯಲ್ಲಿ ಪ್ರತಿನಿತ್ಯ ಹಸಿದವರಿಗೆ ಅನ್ನ ನೀಡುವ ಕೊರಟಗೆರೆಯ ಫ್ರೆಂಡ್ಸ್ ಗ್ರೂಪ್ ಸದಸ್ಯರಿಗೆ ತನ್ನ ಪಡಿತರ ಹಾಗೂ ವೃದ್ಧಾಪ್ಯದ ಒಂದಿಷ್ಟು ಹಣ ನೀಡಿ ನಿರ್ಗತಿಕರ ಅನ್ನದಾನಕ್ಕೆ ತನ್ನದೂ ಒಂದಿಷ್ಟು ಅಳಿಲು ಸೇವೆ ಇರಲಿ ಎಂದು ಸಹಾಯ ಹಸ್ತ ಚಾಚಿದೆ.
ಕೊರಟಗೆರೆಯಲ್ಲಿ ಫ್ರೆಂಡ್ಸ್ ಗ್ರೂಪ್ ಹಾಗೂ ಜಗ್ಗೇಶ್ ಅಭಿಮಾನಿ ಬಳಗದ ವತಿಯಿಂದ ತಾಲ್ಲೂಕಿನ ಸಿದ್ದರಬೆಟ್ಟದ ವೀರಭದ್ರಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಲಾಖ್ ಡೌನ್ ಆದಾಗಿನಿಂದಲೂ ಪ್ರತಿನಿತ್ಯ ನಿರ್ಗತಿಕರಿಗೆ, ಹಸಿದವರಿಗೆ ಅನ್ನ ನೀಡುವ ಕೆಲಸವನ್ನು ಮಾಡುತ್ತಿದೆ.
ಸುಮಾರು 80 ವರ್ಷ ಇಳಿ ವಯಸ್ಸಿನ ಶಿವರುದ್ರಮ್ಮ ಕಳೆದ ವಾರ ತಮ್ಮ ಕುಟುಂಬಕ್ಕೆ ನೀಡಿದ್ದ ಪಡಿತರವನ್ನು ದಾಸೋಹಕ್ಕಾಗಿ ನೀಡಿತ್ತು. ಇಳಿವಯಸ್ಸಿನಲ್ಲಿ ಶಿವರುದ್ರಮ್ಮಳಿಗೆ ಯಾರೊಬ್ಬರ ಆಸರೆ ಇಲ್ಲ. ಅವರಿವರು ಕೊಟ್ಟ ಊಟ ಅಥವಾ ಪಡಿತರ ದಾನ್ಯ ಹಾಗೂ ವೃದ್ಧಾಪ್ಯ ವೇತನದಲ್ಲೆ ಆಕೆಯ ಜೀವನ ನಡೆಯಬೇಕು.
ದಿನ ನಿತ್ಯ ಅಲ್ಲಲ್ಲಿ ಸಿಗುವ ಬಿಳಿಎಕ್ಕದ ಹೂ, ಪತ್ರೆಗಳನ್ನು ಬಿಡಿಸಿ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿ ಕೈಮುಗಿಯುತ್ತದೆ. ಆನಂತರ ದೇವರಿಗೆ ಅರ್ಪಿಸಿದ ಹೂಪತ್ರೆಯನ್ನು ದಾರಿಯಲ್ಲಿ ಯಾರಾದರೂ ಸಿಕ್ಕರೆ ಅಂತವರಿಗೆ `ದೇವರ ಪ್ರಸಾದ’ ತೆಗೆದುಕೊಳ್ಳಿ ಎಂದು ಪ್ರೀತಿಯಿಂದ ಮಾತನಾಡಿಸಿ ಕೊಟ್ಟು ಮುಂದೆ ಹೋಗುತ್ತದೆ.
ಹೂ ಪ್ರಸಾದ ಅಜ್ಜಿ ದಿನ ಯಾರೆಂದರೆ ಅವರಿಗೆ ಕೊಡುವುದಿಲ್ಲ. ತನಗೆ ಇಷ್ಟ ಬಂದವರು ಹೊಸಬರಾದರೂ ಪರವಾಗಿಲ್ಲ ಅಂತವರಿಗೆ ಮಾತ್ರ ಕೊಡುತ್ತದೆ. ಆಗಂತ ಹೂ ತೆಗೆದುಕೊಂಡವರಿಂದ ಅಜ್ಜಿ ಏನನ್ನೂ ಪ್ರತಿಫಲ ಆಪೇಕ್ಷಿಸುವುದಿಲ್ಲ. ದೇವರ ಹೂ ಪ್ರಸಾದ ನೀಡುವ ಕಾಯಕವನ್ನು ಬಹಳ ವರ್ಷಗಳಿಂದ ಅಜ್ಜಿ ನಡೆಸಿಕೊಂಡು ಬಂದಿದೆ. ಲಾಖ್ ಡೌನ್ ಇರುವ ಕಾರಣ ಪಟ್ಟಣದಲ್ಲಿ ಇರುವ ನಿರ್ಗತಿಕರು, ಬಡವರು, ಹಸಿದವರಿಗೆ ನೀಡುವ ಊಟದಲ್ಲಿ ನನ್ನದು ಸ್ವಲ್ಪ ಸೇರಿಕೊಳ್ಳಲಿ ಎಂದು ಪಡಿತರ ಹಾಗೂ ತಾನು ಕೂಡಿಟ್ಟ ವೇತನವನ್ನು ತಂದುಕೊಟ್ಟಿದೆ.
ನನಗ್ಯಾರಾದ್ರು ಊಟ ಹಾಕ್ತಾರೆ. ಇದ್ಯಾವುದೋ ರೋಗ ಬಂದು ಜನಕ್ಕೆ ಊಟ ಇಲ್ದಂಗಾಗೈತೆ. ಇಂತಾ ಕಷ್ಟ ಕಾಲ್ದಾಗೆ ಹಸಿದೋರಿಗೆ ಅನ್ನ ಹಾಕುದ್ರೆ ಒಂದಿಷ್ಟು ಪುಣ್ಯ ಬರತ್ತೆ. ನನ್ನಂತ ಎಷ್ಟೋ ಜನರಿಗೆ ಅನ್ನ ಹಾಕ್ತಿರೋ ಇವರಿಗೆ ನನ್ನದು ಒಂದು ಅಳಿಲು ಸೇವೆ ಸೇರಿಕೊಳ್ಳಲಿ ಬುಡಿ.
ಶಿವರುದ್ರಮ್ಮ, ವೃದ್ಧೆ
ಅಜ್ಜಿಯ ಮಾನವೀಯ ಗುಣಕ್ಕೆ ನಾವು ಎಷ್ಟೇ ಕೃತಜ್ಞತೆ ಸಲ್ಲಿಸಿದ್ರೂ ಅದು ಕಡಿಮೆಯೇ. ನಿನ್ನ ಜೀವನ ನಿರ್ವಹಣೆಗೆ ಇಟ್ಟುಕೊಳ್ಳಿ ಎಂದು ನಾವು ಎಷ್ಟೇ ಹೇಳಿದರೂ ಅಜ್ಜಿ, ನನ್ನ ಜೀವ್ನ ಎಂಗೋ ಆಗುತ್ತೆ ನಾನು ಕೋಡೋದು ನಾಲ್ಕ ಜನರ ಹೊಟ್ಟೆನಾದ್ರು ತುಂಬುತ್ತೆ ತಗಳಿ ಎಂದು ಪಡಿತರ ದಿನಸಿ ಹಾಗೂ ತಾನು ಕೂಡಿಟ್ಟ ವೃದ್ಧಾಪ್ಯ ವೇತನ ಹಣ ತಂದು ಕೊಟ್ಟಿದೆ. ನಾವು ಅದನ್ನು ಬಡವರ ಹೊಟ್ಟೆ ತುಂಬಲು ವಿನಿಯೋಗಿಸುತ್ತೇವೆ.
‘Ladies need not apply’
ಹಾಗೊಂದು ಸಾಲು ಕಂಡದ್ದೇ ಅವರು ಕುದ್ದು ಹೋದರು.
ತಕ್ಷಣ ಒಂದು ಪೋಸ್ಟ್ ಕಾರ್ಡ್ ತೆಗೆದುಕೊಂಡವರೇ ‘ಹಾಗೆ ಪ್ರಕಟಣೆ ಕೊಡಲು ಮನಸ್ಸು ಹೇಗೆ ಬಂತು’ ಎಂದು ಬರೆದು ಪೋಸ್ಟ್ ಬಾಕ್ಸ್ ಗೆ ಹಾಕಿ ನಿಟ್ಟುಸಿರುಬಿಟ್ಟರು.
ಹಾಗೆ ನೇರಾನೇರ ಪತ್ರ ಬರೆದದ್ದು ಮತ್ಯಾರೂ ಅಲ್ಲ- ಸುಧಾಮೂರ್ತಿ
ಪತ್ರ ಬರೆದದ್ದು ಅಷ್ಟು ದೊಡ್ಡ ಟಾಟಾ ಸಾಮ್ರಾಜ್ಯ ಕಟ್ಟಿದ ಜೆ ಆರ್ ಡಿ ಟಾಟಾ ಅವರಿಗೆ
ಇನ್ಫೋಸಿಸ್ ನ ಆವರಣದಲ್ಲಿ ಇದ್ದ ಚಂದನೆಯ ಹೂಗಳನ್ನು ನೋಡುತ್ತಾ ಇದ್ದವನು ತಕ್ಷಣ ಅವರತ್ತ ತಿರುಗಿದೆ.
‘ಅಷ್ಟೇ ಅಲ್ಲ ಮೋಹನ್, ಆ ಚಿಕ್ಕ ಪೋಸ್ಟ್ ಕಾರ್ಡ್ ದೊಡ್ಡ ಕೆಲಸವನ್ನೇ ಮಾಡಿತು. ಟಾಟಾ ಸಂಸ್ಥೆಯಿಂದ ತಕ್ಷಣ ಮರು ಉತ್ತರ ಬಂತು.
ಹೋದಾಗ ಕೆಲಸಕ್ಕೆ ಸೇರಿಕೊಳ್ಳಿ ಅಂದರು’ ಎಂದಾಗ ಅವರ ಮುಖದಲ್ಲಿ ಒಂದು ಸಮಾಧಾನ
‘ನಾನು ಹುಬ್ಬಳ್ಳಿಯ ಭೂಮರೆಡ್ಡಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಲು ಹೋಗ್ತೀನಿ ಅಂತ ನಿರ್ಧರಿಸಿದಾಗ ಅಪ್ಪನಿಂದ ಹಿಡಿದು ಕಾಲೇಜಿನ ಪ್ರಾಂಶುಪಾಲರವರೆಗೆ ಎಲ್ಲರೂ ಬೆಚ್ಚಿಬಿದ್ದಿದ್ದರು. ಇದುವರೆಗೂ ಎಂಜಿನಿಯರಿಂಗ್ ಓದಲು ಒಬ್ಬ ಹೆಣ್ಣು ಮಗಳು ಬಂದಿಲ್ಲ. ಅಂತಹದ್ದರಲ್ಲಿ ಈಗ ಯಾಕೆ. ಇಲ್ಲಿನ ಗಂಡು ಮಕ್ಕಳಿಗೂ ಇದು ಹೊಸ ರೀತಿಯದ್ದು. ಹಾಗಾಗಿ ಆಕೆಗೆ ತೊಂದರೆ ಕೊಡಬಹುದು ಅಂತೆಲ್ಲಾ ಬ್ರೈನ್ ವಾಶ್ ಆಯ್ತು. ಆದರೆ ನಾನು ನಿರ್ಧರಿಸಿ ಆಗಿತ್ತು. ಕಾಲೇಜು ಸೇರಿಯೇಬಿಟ್ಟೆ’ ಎಂದು ನಕ್ಕರು
‘ನಿಮಗೆ ಗೊತ್ತಿರಲಿ ಮೋಹನ್, ನಾನು ಕಾಲೇಜಿಗೆ ಸೇರಿದಾಗ ಹೆಣ್ಣು ಮಕ್ಕಳಿಗೆ ಶೌಚಾಲಯವೇ ಇರಲಿಲ್ಲ. ಎಂಜನಿಯರಿಂಗ್ ಅಂದ್ರೆ ಗಂಡುಮಕ್ಕಳಿಗೆ ಅನ್ನೋ ಕಾಲದಲ್ಲಿದ್ರು.
ನಾನು ಶೌಚಕ್ಕೆ ಹೋಗಬೇಕು ಎಂದರೆ ಮಧ್ಯಾಹ್ನ ಮನೆಗೆ ಬಂದು ಮತ್ತೆ ಕಾಲೇಜಿಗೆ ಹೋಗಬೇಕಿತ್ತು. ನಾಲ್ಕು ವರ್ಷ ಈ ರೀತಿ ಸುತ್ತಿದ್ದೇನೆ’ ಎಂದವರೇ ‘ಅದು ನನ್ನೊಳಗೆ ಕೊರೆಯುತ್ತಲೇ ಇತ್ತು. ಆ ನಂತರ ನಾನು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥಳಾದಾಗ ಮೊದಲು ಮಾಡಿದ್ದು ರಾಜ್ಯದ ಎಲ್ಲೆಡೆ 13 ಸಾವಿರ ಹೆಣ್ಣುಮಕ್ಕಳ ಶೌಚಾಲಯ ನಿರ್ಮಿಸಿದ್ದು’ ಎಂದರು.
ನಾನಿನ್ನೂ ಅವರ ಮಾತನ್ನು ನನ್ನೊಳಗೆ ಇಳಿಸಿಕೊಳ್ಳುತ್ತಿದ್ದೆ.
‘ನನಗೆ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಬಂತು. ನನ್ನ ಅಮ್ಮನಿಗೆ ಚರಿತ್ರೆ ಎಂದರೆ ಪ್ರಾಣ. ಆಕೆಯೇ ನನಗೆ ಚಿಕ್ಕಂದಿನಲ್ಲೇ ಅತ್ತಿಮಬ್ಬೆ ಬಗ್ಗೆ ಹೇಳಿದ್ದರು. ಅವರನ್ನು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕರೆದುಕೊಂಡು ಹೋಗಬೇಕು ಅಂತಿದ್ದೆ. ಆದರೆ ಅವರು ಆಸ್ಪತ್ರೆ ಸೇರಿದ್ದರು. ನಾನು ಪ್ರಶಸ್ತಿ ಪಡೆದವಳೇ ಸೀದಾ ಆಸ್ಪತ್ರೆಗೆ ಬಂದು ಅಮ್ಮನ ಮುಂದೆ ಅದನ್ನು ಇಟ್ಟೆ.
ಅಮ್ಮ ಹೇಳಿದ್ದು ಒಂದೇ ಮಾತು- ಈ ಪ್ರಶಸ್ತಿ ಹಣ ಎಲ್ಲಾ ದಾನ ಮಾಡಬೇಕು ತಿಳೀತಾ ಅಂತ. ಅದರ ಮಾರನೆಯ ದಿನವೇ ಅವರು ಸಾವನ್ನಪ್ಪಿದರು. ಈ ಮಾತು ಇಂದಿಗೂ ನನ್ನ ಕಿವಿಯಲ್ಲಿ ಗುಂಯ್ಗುಡುತ್ತಿದೆ’ ಎಂದರು.
‘ಶಿವನು ಭಿಕ್ಷಕೆ ಬಂದ ನೋಡುಬಾರೆ ತಂಗಿ..’ ಅಂತ ಹಾಡಿದೆ ಎಂದೆ.
ಅವರು ನೆನಪಿನ ಓಣಿಯಲ್ಲಿ ಕಳೆದುಹೋಗೋದಿಕ್ಕೆ ಅಷ್ಟು ಸಾಕಾಯ್ತು.
ತಕ್ಷಣ ಅವರಿಗೆ ನೆನಪಾದದ್ದು ತಮ್ಮ ಬಾಲ್ಯದ ಕೆಂಪಕ್ಕಿ ಅನ್ನ. ನನಗೆ ದಾನದ ಮಹತ್ವ ಗೊತ್ತಾಗೋದಿಕ್ಕೆ ಒಂದೆರಡಲ್ಲ ನೂರು ಇನ್ಸಿಡೆಂಟ್ ಗಳಿದ್ದಾವೆ.
ನಾನು ಚಿಕ್ಕವಳಾಗಿರುವಾಗ ನಮ್ಮ ಮನೆಯಲ್ಲಿ ಕೆಂಪಕ್ಕಿಯಲ್ಲಿ ಅನ್ನ ಮಾಡ್ತಿದ್ದರು. ಭಿಕ್ಷಕ್ಕೆ ಬಂದವರಿಗೆ ಬಿಳಿ ಅಕ್ಕಿ ಕೊಡ್ತಾ ಇದ್ದರು. usually ಇದು ರಿವರ್ಸ್ ಇರುತ್ತೆ. ಅದಕ್ಕೆ ನಾನು ಅಜ್ಜಿಯನ್ನು ಕೇಳಿದೆ ಯಾಕೆ ಈ ರೀತಿ ಅಂತ ಅವರು ಯಾಚನೆಗೆ ಬರುವವರು ದೇವ ಮಾನವರು ಅವರ ಬಳಿ ಇಲ್ಲ ಅಂತ ಬರೋದಿಲ್ಲ, ನಮಗೆ ಕೊಡುವ ಮನಸ್ಸಿದೆಯಾ ಅಂತ ಟೆಸ್ಟ್ ಮಾಡೋಕೆ ಬರ್ತಾರೆ’ ಅಂದರು. ನಾನು ಆಮೇಲೆ ಗಮನಿಸಿದೆ. ನಮ್ಮ ಮನೆಗೆ ಹಾಗೆ ಬರ್ತಾ ಇದ್ದದ್ದು ಪೀರಸಾಬರು, ಎಲ್ಲಮ್ಮನ ಜೋಗತಿಯರು, ತಿರುಪತಿಯ ಗೋವಿಂದನಿಗೆ ಹರಕೆ ಹೊತ್ತವರು.
ತಕ್ಶಣ ನನಗೆ ಅವ್ರು ‘ಕೆಂಪು ಅಕ್ಕಿಯ ಕಣಜ’ ಎನ್ನುವ ಲೇಖನ ಬರೆದದ್ದು ನೆನಪಿಗೆ ಬಂತು, ಅದನ್ನು ನೆನಪಿಸಲು ಬಾಯಿ ತೆರೆದೆ.
ಆದರೆ ಅವರು ಇನ್ನೊಂದೇ ಲೇಖನದ ಗುಂಗಿನಲ್ಲಿದ್ದರು. ಅದು ಅವರ ಅಜ್ಜಿ 62ನೆಯ ವಯಸ್ಸಿನಲ್ಲಿ ‘ಆ ಆ ಇ ಈ’ ಕಲಿತ ಕಥೆ.
ನನ್ನ ಅಜ್ಜಿ ಶಾಲೆಗೇ ಹೋಗಿರಲಿಲ್ಲ. ಆಮೇಲೆ ನನಗೆ ಒತ್ತಾಯ ಮಾಡಿ ಅಕ್ಷರ ಕಲಿತಳು. ಇದನ್ನು ಬರೆದೆ. ದೂರದರ್ಶನದವರು ಇದನ್ನ ‘ಮೇರಿ ಪೆಹ್ಲಿ ಛಾತ್ರಾ’ ಅಂತ ಪ್ರಸಾರ ಮಾಡಿದರು. ಅದಕ್ಕೆ ಬಹುಮಾನವೂ ಬಂತು. ನನಗೆ ಕಲಿಯುವಿಕೆಯ ಬಗ್ಗೆ ಆಸಕ್ತಿ, ಯಾವಾಗ ಬೇಕಾದರೂ ಕಲಿಯಬಹುದು ಎನ್ನುವ ನಂಬಿಕೆ ಬಂದಿದ್ರೆ ಅದಕ್ಕೆ ನಮ್ಮ ಅಜ್ಜಿಯೇ ಕಾರಣ ಎಂದರು.
ಸುಧಾಮೂರ್ತಿ ಅವರು ಕೆಲವೇ ತಿಂಗಳ ಹಿಂದಷ್ಟೇ ‘ಕೌನ್ ಬನೇಗಾ ಕರೋಡ್ಪತಿ’ ಹಾಟ್ ಸೀಟ್ ನಲ್ಲಿ ಅಮಿತಾಬ್ ಎದುರು ಕುಳಿತಿದ್ದರು.
ತಕ್ಷಣ ನೆನಪಿಗೆ ಬಂದಿದ್ದು ಇವರು ಅಮಿತಾಬ್ ಬಚ್ಚನ್ ಬಳಿ ತಾವು ಚಕ್ಕರ್ ಹಾಕಿ ಸಿನೆಮಾ ನೋಡಿದ್ದು. ಇವರೇ ಟಿಕೆಟ್ ತೆಗೆಸಿ ನಾರಾಯಣ ಮೂರ್ತಿಯವರನ್ನ ಫಿಲಂ ಗೆ ಕರೆದುಕೊಂಡು ಹೋಗ್ತಾ ಇದ್ದದ್ದರ ಬಗ್ಗೆ ಹೇಳಿದ್ದು. ಒಂದೇ ಸಿನೆಮಾವನ್ನು ಬ್ಯಾಕ್ ಟು ಬ್ಯಾಕ್ ನೋಡಿದ ರೆಕಾರ್ಡ್ ಕೂಡಾ ಇವರ ಬಳಿ ಇದೆ.
ಸಮಾಜಸೇವೆ ಮೇಲೆ ಭಾಷಣ ಮಾಡೋದಿಕ್ಕೆ ಅಂತ ಇವರು ಪಾಕಿಸ್ತಾನಕ್ಕೆ ಹೋದಾಗ ಎಲ್ಲರೂ ಶಾಪಿಂಗ್ ಗೆ ಸಜ್ಜಾದ್ರು.
ಸುಧಾ ಮೂರ್ತಿ ಮಾತ್ರ ನನಗೆ ಮೊಘಲ್ ಎ ಅಜಂ ನ ಅನಾರ್ಕಲಿ ಬೇಕು ಅಂತ ಅವಳನ್ನ ಹುಡುಕ್ತಾ ಹೋದರು.
ಪಾಪ ಅನಾರ್ಕಲಿ ಊರ ಮಧ್ಯದಲ್ಲಿಯೇ ಅನಾಥವಾಗಿ ಮಲಗಿದ್ದಾಳೆ ಅಂತ ನಿಟ್ಟುಸಿರಿಟ್ಟರು.
ನಾರಾಯಣಮೂರ್ತಿಗಳಿಗೆ ಇವರೇ ಸಿನೆಮಾ ಟಿಕೆಟ್ ತೆಗೆಸಿದ್ದು ನನ್ನ ಮನಸ್ಸಲ್ಲಿ ಉಳಿದಿತ್ತು. ನೀವು ಸಿಕ್ಕಾಪಟ್ಟೆ ಲೆಕ್ಕಾಚಾರಾನಾ ಅಂದೆ.
ನಾವು ಹೇಳಿ ಕೇಳಿ ಕುಲಕರ್ಣಿಗಳು. ಪೈ ಟು ಪೈ ಲೆಕ್ಕ ಅಂದವರೇ ನಾರಾಯಣಮೂರ್ತಿಗಳಿಗೆ ಇನ್ನೂ ಕೆಲಸ ಸಿಕ್ಕಿರಲಿಲ್ಲ ಆಗ ನಾನು ಹಣ ಕೊಡ್ತಿದ್ದೆ. ನೋಡ್ರಿ ಇದು ದಾನ ಅಲ್ಲ, ಸಾಲ ಅಂತ ಹೇಳಿಯೇ ಕೊಟ್ಟಿದ್ದೆ. ಅಷ್ಟೇ ಅಲ್ಲ ಒಂದು ಪುಸ್ತಕದಲ್ಲಿ ಅದನ್ನ ಬರೆದೂ ಇಟ್ಟಿದ್ದೆ. ಆಮೇಲೆ ಏನು ಮಾಡೋದು ಅವರ ಜೊತೇನೇ ಮದುವೆ ಆಯ್ತು. ಇನ್ನು ಗಂಡನ ಅಕೌಂಟು, ಹೆಂಡತಿ ಅಕೌಂಟು ಅಂತ ಬೇರೆ ಬೇರೆ ಏನು ಅಂತ ನಾನೇ ಆ ಪುಸ್ತಕ ಹರಿದು ಹಾಕಿದೆ ಎಂದು ನಕ್ಕರು.
ಹಾಗೆ ಸುಧಾಮೂರ್ತಿ ಪೈ ಟು ಪೈ ಲೆಕ್ಕ ಹಾಕಿ ಕೂಡಿಸಿಟ್ಟಿದ್ದ 10 ಸಾವಿರ ಹಣವೇ ಇನ್ಫೋಸಿಸ್ ಎದ್ದು ನಿಲ್ಲಲು ಕಾರಣ ಆಯ್ತು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ.
ನಾನು ಕೂಡಿಟ್ಟದ್ದು 10250 ರೂಪಾಯಿ ಅಂತ ಜೋರಾಗಿ ನಗುತ್ತಾ ನನ್ನ ಲೆಕ್ಕ ತಿದ್ದಿದರು. ನಾನು 250 ರೂ ನನಗಿಟ್ಟುಕೊಂಡೆ. 10 ಸಾವಿರ ಇನ್ಫೋಸಿಸ್ ಹುಟ್ಟು ಹಾಕಲು ಕೊಟ್ಟೆ ಎಂದರು.
—
ಹಾಡು ಬಾಯಿ ಪಾಠ ಮಾಡೋದು, ಕವಿತೆ ಉರು ಹಚ್ಚೊದು ಗೊತ್ತು
ಆದರೆ ಸುಧಾಮೂರ್ತಿ ವಿಷಯದಲ್ಲಿ ಒಂದು ಮಜಾ ಇದೆ
ಅವರು ಇಡೀ ಡಿಕ್ಷನರಿಯನ್ನೇ ಬಾಯಿ ಪಾಠ ಮಾಡಿಬಿಟ್ಟಿದ್ದರು
‘ಚಿಕ್ಕವಳಿರುವಾಗ ಬೇಸಿಗೆ ರಜೆಯಲ್ಲಿ ಹೇಗೆ ಸಮಯ ಕಳೆಯೋದು ಅಂತಾನೇ ಗೊತ್ತಾಗ್ತಿರಲಿಲ್ಲ. ಆಗ ನನ್ನ ತಮ್ಮನಿಗೆ ನೀನು ಭಾರದ್ವಾಜ್ ಡಿಕ್ಷನರಿ ಉರು ಹೊಡಿ ನಾನು ‘ಕನ್ನಡ ಕಸ್ತೂರಿ ಕೋಶ’ ಉರು ಹೊಡೀತೀನಿ ಅಂದೆ . ಈಗಲೂ ಕಸ್ತೂರಿ ಕೋಶ ನನ್ನ ಬಾಯಲ್ಲಿದೆ ಎಂದು ನಕ್ಕರು.
ದಿನಾಂಕ 23/ 4 /2020, ಗುರುವಾರ , ಶ್ರೀ ಶಾರ್ವರಿ ನಾಮ ಸಂವತ್ಸರ ,ಚೈತ್ರ ಮಾಸ, ಉತ್ತರಾಯಣ, ವಸಂತಋತು, ಕೃಷ್ಣಪಕ್ಷ ಅಮಾವಾಸ್ಯೆ ತಿಥಿ 7: 56 ನಿಮಿಷದವರೆಗೆ, ನಂತರ ಪಾಡ್ಯಮಿ ತಿಥಿ, ನಕ್ಷತ್ರ :- ಅಶ್ವಿನಿ ಮತ್ತು ಭರಣಿ, ಯೋಗ:- ಪ್ರೀತಿ ಮತ್ತು ಆಯುಷ್ಮಾನ್ ,ಕರಣ – ನಾಗವ, ಮಳೆ ನಕ್ಷತ್ರ:- ಅಶ್ವಿನಿ, ದಿಕ್ಕು ಶೂಲೆ:- ದಕ್ಷಿಣ, ಪರಿಹಾರ:- ಎಳ್ಳು, ರಾಜಯೋಗ :- ಈ ದಿನ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭ. ರಾಹುಕಾಲ:-1:52pm to 3:26pm, ಗುಳಿಕಕಾಲ:-09:13am to 10:46am, ಯಮಗಂಡಕಾಲ:-06:06am to 07:39am ಸೂರ್ಯೋದಯ:-6:06am, ಸೂರ್ಯ ಅಸ್ತ:-6:32pm.
ರಾಶಿ ಭವಿಷ್ಯ
ಮೇಷ ರಾಶಿ
ಈ ದಿನ ಸಮಸ್ಯೆಗಳು ಹೆಚ್ಚು ಆಗುತ್ತವೆ ಮಾಡುವ ವೃತ್ತಿಯಲ್ಲಿ ತೊಂದರೆಗಳು ಮಿತ್ರರಿಂದ ನೆರೆಹೊರೆಯವರಿಂದ ಸಹಕಾರ ಸಿಗದೆ ಬೇಸರ ಉಂಟಾಗಬಹುದು ಆದರೂ ಆದರೂ ಸ್ವಲ್ಪ ಪ್ರಮಾಣದ ನೆಮ್ಮದಿ ತಾಯಿ ಕಡೆಯಿಂದ ದೊರೆಯಬಹುದು ,ವಾಹನ, ಜಮೀನಿನ ಆರ್ಥಿಕ ಚಟುವಟಿಕೆ ಸ್ವಲ್ಪ ಅನುಕೂಲ ಸಮಾಧಾನ ತರುತ್ತದೆ.
ವೃಷಭ ರಾಶಿ
ಈ ದಿನ ಮಿತ್ರರಿಂದ, ನೆರೆಹೊರೆಯವರಿಂದ ಸಹಾಯ ಸಹಕಾರ ಸಿಗದಿದ್ದರೂ ಬೇರೆ ರೀತಿಯಿಂದ ಅನುಕೂಲ ಸಿಗುತ್ತದೆ, ಸಂಪಾದನೆ ವಿಚಾರದಲ್ಲಿ ಲಾಭ ಸಿಗುತ್ತದೆ, ಮಾಡುವ ಕೆಲಸಗಳು ಯಶಸ್ಸು ಪಡೆಯುತ್ತವೆ , ಆದರೂ ಸ್ವಲ್ಪ ಪ್ರಮಾಣದ ಅನಾರೋಗ್ಯ, ಭಯ, ಖರ್ಚು ಸಾಯಂಕಾಲದವರೆಗೂ ಇರುತ್ತದೆ.
ಮಿಥುನ ರಾಶಿ
ಈ ದಿನ ಸಂಗಾತಿಗೆ ಸುಸ್ತು ಕಾಣಿಸಬಹುದು ಇನ್ನುಳಿದಂತೆ ನೀವು ಮಾಡುವ ಕೆಲಸಗಳಲ್ಲಿ ಯಶಸ್ಸು ಕಾಣುವ ಸಮಯ, ಈ ದಿನ ಶ್ರಮ ಸ್ವಲ್ಪ ಲಾಭ ಹೆಚ್ಚು.
ಕಟಕ ರಾಶಿ
ಈ ದಿನ ಇತರೆ ತೊಂದರೆ ಕಡಿಮೆಯಾಗಿ ಸಮಸ್ಯೆ ಪರಿಹಾರವಾಗುವ ಅವಕಾಶವಿದೆ ,ಈ ದಿನ ಸಂಗಾತಿಯಿಂದ ಸಹಕಾರ ,ಉತ್ತಮ ಆಹಾರ , ಪಾನೀಯ ಅನುಭವ ,ಸಂತೋಷ ಲಭ್ಯ.
ಸಿಂಹ ರಾಶಿ
ಈ ದಿನ 75% ರಷ್ಟು ಅಶುಭ ಫಲ ಪಡೆಯುವ ಅವಕಾಶ ಇದೆ, ಇನ್ನುಳಿದಂತೆ ಕೆಲವು ಸಮಸ್ಯೆಗಳು ಹಾಗೆ ಮುಂದುವರೆಯುತ್ತವೆ , ಸಂತಾನದಿಂದ ಕಿರಿಕಿರಿ ಯಾಗಲಿ ಅಥವಾ ಅನಾರೋಗ್ಯ ವಾಗಲಿ , ಅಥವಾ ಮಾನಸಿಕ ಕಿರಿಕಿರಿ ಇಲ್ಲವೇ ಭಯದಿಂದ ಉದ್ವೇಗಕ್ಕೆ ಒಳಗಾಗುವ ಎಲ್ಲಾ ಅವಕಾಶಗಳು ಗೋಚರವಾಗುತ್ತವೆ.
ಕನ್ಯಾ ರಾಶಿ
ಈ ದಿನ ಕೂಡ 75% ರಷ್ಟು ತಲೆ ಬಿಸಿ ಹೆಚ್ಚಾಗುವ ಅವಕಾಶವಿದೆ , ತಾಯಿ ,ವಾಹನ, ಜಮೀನಿನ ಕಿರಿಕಿರಿ ನಿಮಗೆ ಅನಾರೋಗ್ಯ ಅಥವಾ ಅಸಮಾಧಾನ, ಅದೇ ರೀತಿ ವಾಹನದ ಅಪಘಾತ ಭಯವೂ ಇದೆ ,ವಿದ್ಯುತ್ ಆಗಾತ ವಾಗಲಿ ಅಥವಾ ಸರ್ಪದ ವಿಷ ಭಯವಾಗಲಿ ಸಾಯಂಕಾಲದವರೆಗೂ ಹೆಚ್ಚಾಗಿ ಕಾಡುವ ಸಂಭವ ಇದೆ ,ಎಚ್ಚರಿಕೆ ಅಗತ್ಯ.
ತುಲಾ ರಾಶಿ
ಈ ದಿನ ಬೇರೆಯವರಿಂದ ಸಹಕಾರ ದೊರೆಯುತ್ತಿಲ್ಲ ಎಂಬ ಸ್ವಲ್ಪ ಬಾದೆ ಬಿಟ್ಟರೆ ಇನ್ನುಳಿದಂತೆ ಎಲ್ಲಾ ಶುಭ ಫಲಗಳು ಬರುತ್ತವೆ, ಆಕಸ್ಮಿಕವಾಗಿ ಅನುಕೂಲಗಳು ಆಗಬಹುದು ,ಲಾಭ ಆಗಬಹುದು, ಆನಂದ ಸಿಗಬಹುದು, ನಿಮ್ಮ ನಿರೀಕ್ಷೆಯಷ್ಟು ಲಾಭ ಬರಬಹುದಾದ ಲಕ್ಷಣಗಳು ಇರುವುದರಿಂದ ಬೇಸರ ದೂರವಾಗುತ್ತದೆ, ಆದ್ದರಿಂದ ಮನೆಯವರೊಂದಿಗೆ ಸಂತೋಷವಾಗಿ ಕಾಲ ಕಳೆಯುವ ಅವಕಾಶಗಳು ಇದೆ.
ವೃಶ್ಚಿಕ ರಾಶಿ
ಈ ದಿನ 75% ರಷ್ಟು ಹಣದ ಸಮಸ್ಯೆ ಮನಸ್ಸಿಗೆ ಬೇಸರ ಕಾಡುವ ಅವಕಾಶವಿದೆ, ಅಂದುಕೊಂಡ ಕಾರ್ಯಗಳು ಪೂರ್ಣಪ್ರಮಾಣದಲ್ಲಿ ಸಫಲವಾಗದೇ ಊಟ ಹಾಗೂ ಮಾತಿನ ವಿಚಾರದಲ್ಲಿ ಲಯ ತಪ್ಪುತ್ತದೆ ಆದರೂ ನಿಮಗೆ ಯಾರಾದರೂ ಸಹಾಯ ಮಾಡುವ ಅವಕಾಶ ಇದೆ.
ಧನಸ್ಸು ರಾಶಿ
ಈ ದಿನ ನಿಮ್ಮ ಮಾತಿಗೆ ಅಥವಾ ಅಭಿಪ್ರಾಯಕ್ಕೆ ಬೆಲೆ ಸಿಗುವ ಅವಕಾಶವಿದೆ, ಶುಭ ಫಲಗಳನ್ನು ಪಡೆಯುವ ಅವಕಾಶ ಇದೆ ,ಸಂಜೆ ನಂತರ ಬೇಸರ ಹಾಗೂ ಶರೀರದ ಉಷ್ಣಾಂಶ ಕಡಿಮೆ ಆಗುತ್ತದೆ. ಮಕರ ರಾಶಿ
ಈ ದಿನ ಸುತ್ತಲೂ ಬರುವ ಸಮಸ್ಯೆಗಳು ನಿಮಗೆ ಅವಮಾನ ಹೆಚ್ಚು ಮಾಡುತ್ತವೆ ,ಕೆಲವು ವಿಷಯಗಳು ತಲೆ ಕೆಟ್ಟಂತೆ ಮಾಡುತ್ತವೆ ,ಎಲ್ಲಾ ಕಡೆ ಅಶಾಂತಿ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ , ರಾತ್ರಿಗೆ ನಿದ್ದೆ ಸಮಸ್ಯೆ ಉಂಟಾಗುವ ಅವಕಾಶ ಇದೆ, ಆದ್ದರಿಂದ ದೇವರಿಗೆ ಶರಣಾಗುವುದು ಒಂದೇ ದಾರಿ.
ಕುಂಭ ರಾಶಿ
ಈ ದಿನ ಸ್ವಲ್ಪ ಹಣ ಖರ್ಚು ಅಥವಾ ಮಾತಿನ ಕರ್ಚು ಆಗಬಹುದು ,ಇನ್ನುಳಿದಂತೆ ನಿಮಗೆ ಬೇರೆಯವರ ,ಮಿತ್ರರ ಕುಟುಂಬಸ್ಥರ ಸಹಾಯ ದೊರೆಯುತ್ತದೆ ,ಸಾಡೆಸಾತಿ ಶನಿ, ತೊಂದರೆ ಕಡಿಮೆಯಾಗಿ ಶತ್ರು ಬಾದೆ, ರೋಗಬಾಧೆ ,ಸಾಲದ ಬಾದೆ ಬಗೆಹರಿಯುವ ಅವಕಾಶ ಇದೆ ,ಆಕಸ್ಮಿಕ ಅನುಕೂಲಗಳು ಆಗುತ್ತವೆ.
ಮೀನ ರಾಶಿ
ಈ ದಿನ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ತೊಂದರೆಗಳು ಉಂಟಾಗಬಹುದು , ಅಷ್ಟು ಬಿಟ್ಟರೆ ಇನ್ನೂ ಎಲ್ಲಾ ರೀತಿಯಿಂದಲೂ ಲಾಭ , ಅನುಕೂಲ, ವಾಹನ, ಮನೆ ಸಮಸ್ಯೆಗಳು ಕಡಿಮೆಯಾಗುವ ಅವಕಾಶ ಇದೆ. ಶಾಂತಿ:- ಈ ದಿನ ನಿಮ್ಮ ಇಷ್ಟ ಗುರುಗಳನ್ನು ಸ್ಮರಣೆ ಮಾಡುವುದು ಹಾಗೂ ರಾಘವೇಂದ್ರ ಅಥವಾ ಸಾಯಿಬಾಬಾ ಅಥವಾ ಶಿವನಿಗೆ ನಮಸ್ಕಾರ ಮಾಡಿಕೊಳ್ಳುವುದು ಉತ್ತಮ,” ಓಂ ಗುರುವೇ ನಮಃ” ಈ ಮಂತ್ರ ಗಳನ್ನು 108 ಬಾರಿ ಪಠಿಸುವುದು ಉತ್ತಮ.
ನಾನು ಭೂಮಿ
ನಾನು ತಾಯಿ
ಕಾಯುತ್ತಿರುವೆ
ಸಕಲ ಚರಾಚರವ
ನಿನ್ನ ಕುಟಿಲವ
ಹೇ! ಮಾನವ
ನೀನು ಒಳ್ಳೆಯವನಾಗಿದ್ದರೆ
ನಗುತ್ತಿದ್ದೆ ನಾ ವಸುಂಧರೆ.
ನಾನು ಊರ್ವಿ
ನಾನು ನಿಗರ್ವಿ
ಉರಿಯುತ್ತಿದ್ದೇನೆ .
ಮಲೆ ಕಾನು ನೆಲ ಬಾನು
ಉರಿದು ಮುಕ್ಕಿರುವೆ.
ಹೇ! ಮನುಜ
ನೀನೊಬ್ಬ ಒಳ್ಳೆಯವಾನಾಗಿದ್ದರೆ.
ಉಳಿಯುತ್ತಿದ್ದೆ ಈ ಧರೆ.
ನಾನು ಅವನಿ.
ನಾನು ಜನನಿ.
ಕೊರಗುತ್ತಿದ್ದೇನೆ,
ನಿನಗೆ ಜನ್ಮ ನೀಡಿದ್ದಕ್ಕೆ.
ಸಕಲ ಕೂಲಕೋಟಿಯ,
ವಿಪತ್ತಿಗೆ ದೂಡಿದ್ದಕ್ಕೆ.
ಹೇ!ನರ
ನೀ ಬಿಟ್ಟಿದ್ದಾರೆ ಹುನ್ನಾರ
ಬೀಗುತ್ತಿದ್ದೆ ನಾ ಕ್ಷಿತಿ.
ನಾ ಮಣ್ಣು
ತೆರೆ ನಿನ್ನ ಕಣ್ಣು
ನಾ ಶಾರ್ವರಿ
ನಿನ್ನ ಸ್ಥಾನವ ಅರಿ
ನಾ ಪ್ರಶ್ನಿ ಕೇಳುತ್ತಿದ್ದೇನೆ.
ಗುಡಿಕಟ್ಟಿ,ಗಡಿಕಟ್ಟಿ
ದ್ವೇಷವೇಕೆ ಬಿತ್ತುತಿರುವೆ
ನಾನು ಇಳೆ ಇಳಿದು ನೋಡು
ಕೆಡುಕ ಕೊಂದ ಹಲಾಹಲೆ.
ನಾನು ಧರಣಿ
ಸಹನೆಯ ಗಣಿ
ಗರ್ಭದ ಕೋಪ
ಜ್ವಾಲೆ ಆಗುವ ಮುನ್ನ
ನಿಲ್ಲಿಸು ನಿನ್ನ ಆಟಾಟೋಪ
ಸಹನೆ ಸಂಯಮದ ಅರ್ಥ ತಿಳಿ
ಸಹಜೀವಿಗಳೊಟ್ಟಿಗೆ ಸಹಬಾಳ್ವೆಗೆ ಇಳಿ
ಉಳಿ ಉಳಿಸು ಹೇಳುತಿರುವೆ ಕರುಣ.
Publicstory.inಪಾವಗಡ: ಶಾಸಕ ವೆಂಕಟರವಣಪ್ಪ ಪಡಿತರ ವಿತರಣೆ, ಆಹಾರ ವಿತರಣೆಗೆ ಚಾಲನೆ ನೀಡಿ ಜನರ ಕಷ್ಟಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಮಾದ್ಯಮಗಳಲ್ಲಿ ಪಡಿತರ ವಿತರಿಸುವ ಪ್ರಮಾಣದ ಬಗ್ಗೆ ವ್ಯಾಪಕವಾಗಿ ಕಾಮೆಂಟ್ ಮಾಡಲಾಗುತ್ತಿದೆ.ಈ ಬಗ್ಗೆ ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯಿಸಿ ಹೆಚ್ಚಿನ ಜನರಿಗೆ ಪಡಿತರ ಸಿಗಲಿ ಎಂಬ ಉದ್ದೇಶದಿಂದ 36 ಟನ್ ಅಕ್ಕಿ, 6.5 ಸಾವಿರ ಟನ್ ಬೇಳೆ, 6.5 ಸಾವಿರ ಟನ್ ಸಕ್ಕರೆ ವಿತರಿಸಲಾಗಿದೆ. ಇದು ಕೊನೆಯೂ ಅಲ್ಲ. ಇದರ ಜೊತೆಗೆ ನಿತ್ಯ 50 ಕೆ.ಜಿ ಪ್ರಮಾಣದ ಉಪಹಾರವನ್ನು ಪಟ್ಟಣದಲ್ಲಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.ಪಟ್ಟಣದ 6 ಸಾವಿರ ಬಡ ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಪಟ್ಟಣಕ್ಕೆ ಬರುವ ಗ್ರಾಮಸ್ಥರು ಹಾಗೂ ಪಟ್ಟಣದ ನಿರ್ಗತಿಕರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಲಾಕ್ ಡೌನ್ ಮುಗಿಯುವವರೆಗೆ ಉಪಹಾರ ವಿತರಣೆ ಮುಂದುವರೆಯಲಿದೆ ಎಂದರು.ಜಿಲ್ಲಾ ಪಂಚಾಯತ್ ಸದಸ್ಯ ಎಚ್.ವಿ. ವೆಂಕಟೇಶ್ ಮಾತನಾಡಿ ಪಟ್ಟಣದ 23 ವಾರ್ಡ್ ಗಳ ಬಡ ಕುಟುಂಬಗಳನ್ನು ಗುರುತಿಸಿ ವಾರ್ಡ್ ಸದಸ್ಯರ ಮುಖಾಂತರ ಪಡಿತರ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.ತಾಲ್ಲೂಕು ಬರ ಪೀಡಿತ ಬಡ ಹಾಗೂ ದಲಿತ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕೆಲಸ ಹರಸಿ ಬೆಂಗಳೂರು, ಇತರೆಡೆಗೆ ಹೋಗಿದ್ದ ಕೂಲಿ ಕಾರ್ಮಿಕರು ಮನೆ ಸೇರಿದ್ದಾರೆ. ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತಾಲ್ಲೂಕಿಗೆ ವಿಶೇಷ ಪ್ಯಾಕೇಜ್ ತರುವತ್ತ ಶಾಸಕರು ಗಮನಹರಿಸಬೇಕು ಎಂಬುದು ಜನತೆಯ ಒತ್ತಾಯ.ಪಡಿತರ ವಿತರಿಸಿರುವ ಪ್ರಮಾಣದ ಬಗ್ಗೆ ಪಟ್ಟಣದ ಜನತೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಕಷ್ಟದ ವೇಳೆಯಲ್ಲಿ ಸಾವಿರಾರು ಕುಟುಂಬಗಳಿಗೆ ಶಾಸಕರು, ಪುರಸಭೆ ಸದಸ್ಯರು 12 ರಿಂದ 15 ಲಕ್ಷ ಮೊತ್ತದ ದಿನಸಿ ವಿತರಿಸಿದ್ದಾರೆ. ಸಿಕ್ಕಷ್ಟು ಸಿಗಲಿ ಎಂಬ ಸಮಾಧಾನ ಬಡ ಜನರಲ್ಲಿದೆ.ಶಾಸಕರು ವಿತರಿಸಿದ ಪಡಿತರಕ್ಕಿಂತ ನಿಮ್ಮೊಂದಿಗೆ ನಾನಿದ್ದೇನೆ ಸಮಸ್ಯೆ ಇದ್ದರೆ ತಿಳಿಸಿ ಬಗೆಹರಿಸುತ್ತೇನೆ ಎಂಬ ಅವರ ಆಶ್ವಾಸನೆ ತಾಲ್ಲೂಕಿನ ಜನತೆಯಲ್ಲಿ ಶಕ್ತಿ ತುಂಬಿದೆ. ಆತ್ಮ ವಿಶ್ವಾಸವನ್ನು ಇಮ್ಮುಡಿಗೊಳಿಸಿದೆ.ಎ. ಶಂಕರರೆಡ್ಡಿ, ಗುರಪ್ಪ, ಸುದೇಶ್ ಬಾಬು. ವೆಂಕಟರವಣ. ರಾಜೇಶ್, ರವಿ. ಮಣಿ. ವೇಲು ಮುರಘನ್, ವಿಜಿ, ಕಿರಣ್, ಭಾಸ್ಕರ್, ಗಜೇಂದ್ರ, ಮಣಿ. ಇತರರು ಇದ್ದರು.
Tumkuru: ಜಿಲ್ಲೆಯಿಂದ ಹುಣಸೆ ಹಣ್ಣು ಮತ್ತು ಕೊಬ್ಬರಿಯನ್ನು ಕೆಲವು ನಿಬಂಧನೆಗೊಳಪಟ್ಟು ಹೊರ ರಾಜ್ಯಗಳಿಗೆ ಕಳುಹಿಸಲು ಏಪ್ರಿಲ್ 24ರಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶಾಸಕರು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಕೊವಿಡ್-19 ಸೋಂಕು ಹರಡದಂತೆ ತಡೆಗಟ್ಟುವ ಸಲುವಾಗಿ ಹೊರ ರಾಜ್ಯಗಳಿಗೆ ಹುಣಸೆ ಹಣ್ಣು ಮತ್ತು ಕೊಬ್ಬರಿ ತೆಗೆದುಕೊಂಡು ಹೋಗಿ ವಾಪಸ್ ಬರುವ ಲಾರಿ ಡ್ರೈವರ್‍ಗಳನ್ನು 14 ದಿನಗಳವರೆಗೆ ಕಡ್ಡಾಯವಾಗಿ ಕ್ವಾರೆಂಟೈನ್ ಮಾಡಲಾಗುವುದು ಎಂದರು.
ಕೋವಿಡ್-19ರ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ರೈಸ್‍ಮಿಲ್‍ಗಳಲ್ಲಿ ಹೊರ ರಾಜ್ಯಗಳಿಂದ ಭತ್ತ ತರಿಸುತ್ತಿರುವುದು ಹಾಗೂ ರೈಸ್ ಸರಬರಾಜು ಆಗುತ್ತಿದೆ. ಅದೇ ರೀತಿ ಕೊಬ್ಬರಿ ಹಾಗೂ ಹುಣಸೆ ಹಣ್ಣಿನ ವರ್ತಕರು/ಎಪಿಎಂಸಿಗಳು ನಿರ್ವಹಣೆ ಮಾಡಬೇಕು ಎಂದರು.
Tumkuru: ಮೇ 3ರ ನಂತರ ಸರ್ಕಾರ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಪರೀಕ್ಷೆ ಬರೆಯಲು ನಿರಂತರ ಅಧ್ಯಯನಶೀಲರಾಗಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ತುಮಕೂರು ಸಿದ್ಧಗಂಗಾ ಮಠದಲ್ಲಿ ವಸತಿ ಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಮಠದಲ್ಲಿ 1320 ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿರುವುದು ಖಚಿತಪಡಿಸಿಕೊಂಡ ಸಚಿವರು ವಿದ್ಯಾರ್ಥಿಗಳ ಸಂಶಯ ಮತ್ತು ಸಂದೇಹಗಳಿಗೆ ಪರಿಹಾರ ಸೂಚಿಸಿದರು.
ವಿಶ್ವಕ್ಕೆ ಅಂಟಿಕೊಂಡಿರುವ ಪ್ರಾಣಾಂತಿಕ ಕೋವಿಡ್-19 ಸೋಂಕಿನಿಂದ ಮುಕ್ತರಾಗಲು ದೇಶ ಮತ್ತು ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಇದರಿಂದ ಮುಗಿಯಬೇಕಾಗಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆ ಹಾಗೂ ಪಿ.ಯು.ಸಿ.ಯ ಒಂದು ವಿಷಯದ ಪರೀಕ್ಷೆ ಮುಂದೂಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 8.50ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲಿದ್ದಾರೆ. ಅವರೊಂದಿಗೆ ಆತ್ಮಸ್ಥೈರ್ಯ ತುಂಬಿ ಧೈರ್ಯ ಹೇಳಲಾಗುತ್ತಿದೆ. ಪರೀಕ್ಷೆಯ ಮುನ್ನ ಪುನರ್‍ಮನನ ತರಗತಿ ನಡೆಸಿ ಪರೀಕ್ಷೆ ನಡೆಸುವ ದಿನವನ್ನು ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ಪ್ರಕಟಿಸಲಿದೆ ಎಂದರು.
ಸರ್ಕಾರ ನಿರ್ಧಾರ ಪ್ರಕಟಿಸುವ ಮೊದಲು ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳುವುದು ಅಥವಾ ಶುಲ್ಕ ಪಡೆಯುವುದು ಸಮಂಜಸವಲ್ಲ. ಪ್ರಸಕ್ತ ಸಮಯದಲ್ಲಿ ಸಮಾಜದ ಎಲ್ಲಾ ತರಹದ ಜನರ ಆರ್ಥಿಕ ಸ್ಥಿತಿ ಜರ್ಜರಿತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಶಾಲಾ ಶುಲ್ಕ ವಿಧಿಸುವ ಬಗ್ಗೆ ಸರ್ಕಾರ ಚರ್ಚಿಸಿ ತೀರ್ಮಾನ ಕೈಗೊಂಡು ಪ್ರಕಟಿಸಲಿದೆ.
ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಸಂಯಮದಿಂದ ಇದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಅಣಿಯಾಗಬೇಕು ಎಂದರು. ವಿದ್ಯಾ ರ್ಥಿಗಳು ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಇಲಾಖೆ ಆಯುಕ್ತ ಡಾ. ಜಗದೀಶ್ಶ್ರೀ, ಸಿದ್ದಗಂಗಾ ಮಠದ ಸಿದ್ಧಲಿಂಗ ಶ್ರೀಗಳು, ಶಾಸಕ ಜ್ಯೋತಿಗಣೇಶ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಉಪನಿರ್ದೇಶಕರಾದ ಕಾಮಾಕ್ಷಮ್ಮ ಹಾಗೂ ರೇವಣಸಿದ್ಧಪ್ಪ ಇದ್ದರು.