Thursday, February 26, 2026
Google search engine
Home Blog Page 252

ಸುರೇಶಗೌಡರ ಬಗ್ಗೆ ಸಚಿವ ಆಶೋಕ್ ಹೇಳಿದ್ದೇನು ಗೊತ್ತಾ?

Publicstory. in


ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕರೊನಾ ಹಾಗೂ ಲಾಕ್ ಡೌನ್ ನಿಂದ ಸಂಕಷಕ್ಕೀಡಾಗಿರುವ ಜನರಗೆ ನೆರವು ನೀಡುವಲ್ಲಿ ಮಾದರಿಯಾಗಿ ಗಮನ ಸೆಳೆದಿರುವ ಮಾಜಿ ಶಾಸಕ ಸುರೇಶ ಗೌಡ ಅವರ ಕೆಲಸ ನೋಡಲು ಬೆಂಗಳೂರಿನಿಂದ ಬಂದಿದ್ದ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದೇನು ಗೊತ್ತಾ?

( ಏ.19ರಂದು) ತುಮಕೂರು ತಾಲ್ಲೂಕಿನ ಊರ್ಡಿಗೆರೆ ಬಂದಿದ್ದ ಸಚಿವ ಆಶೋಕ್ ಕ್ಷೇತ್ರದಲ್ಲಿ ನಡೆಯುತ್ತಿರುವ ನೆರವಿ‌ನ ಕೆಲಸ ನೋಡಿ‌ ಸಂಭ್ರಮಿಸಿದರು.

ಇದನ್ನು ಓದಿ:https://publicstory.in/ತುಮಕೂರು-ಗ್ರಾಮಾಂತರದಲ್ಲಿ-ಸ/

ಕಾರ್ಯಕ್ರಮದ ಬಳಿಕ ಊಟದ ವೇಳೆ ಕ್ಷೇತ್ರದಲ್ಲಿ ನೀಡಿರುವ ನೆರವಿನ ಲೆಕ್ಕದ ಮಾಹಿತಿ ಪಡೆದರು. ಇಷ್ಟು ಕೆಲಸ ಶಾಸಕರಾದವರೂ ಸಹ ಮಾಡಿಲ್ಲ ಎಂದರು.

ಇದಕ್ಕು ಮುನ್ನ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರು ಕುಳಿತುಕೊಳ್ಳಲು ಮೂರು ಅಡಿ ಅಂತರದಲ್ಲಿ ಕುರ್ಚಿಗಳನ್ನು ಹಾಕಿ ವ್ಯವಸ್ಥೆ ಮಾಡಿದ್ದನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಇಡೀ ಕರ್ನಾಟಕದಲ್ಲಿ ಇದೇ ಮೊದಲ ಸಲ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗಿದೆ. ಇದನ್ನು ನೋಡಿ ನಾನು ಮಾತನಾಡಬೇಕು ಎನ್ನಿಸುತ್ತಿದೆ. ಇಲ್ಲದಿದ್ದರೆ ಇಲ್ಲಿಂದ ಓಡಿ ಹೋಗುತ್ತಿದ್ದೆ ಎಂದರು.


ಇದಕ್ಕೂ ಮುನ್ನ ಪಬ್ಲಿಕ್ ಸ್ಟೋರಿ.ಇನ್ ಜತೆ ಮಾತನಾಡಿದ ಮಾಜಿ ಶಾಸಕ ಬಿ.ಸುರೇಶ ಗೌಡರು. ಕ್ಷೇತ್ರದ ಜನರು ಕಷ್ಟದಲ್ಲಿದ್ದಾರೆ. ಅವರಿಗೆ ನೆರವಾಗಬೇಕೆಂಬ ಕಾರಣದಿಂದ ಈ ಕೆಲಸ ಮಾಡುತ್ತಿದ್ದೇನೆ. ಇದರ ಹಿಂದೆ ಯಾವುದೇ ಉದ್ದೇಶ ಇಲ್ಲ ಎಂದರು. ಕ್ಷೇತ್ರದ ಎಲ್ಲ ಜನರಿಗೂ ಮಾಸ್ಕ್ ವಿತರಿಸುತ್ತಿದ್ದೇನೆ. ಈಗಾಗಲೇ 55 _ ಸಾವಿರ ಮಾಸ್ಕ್ ವಿತರಿಸಲಾಗಿದೆ. ಲಾಕ್ ಡೌನ್ ಆದಾಗಿನಿಂದಲೂ ಕ್ಷೇತ್ರದೆಲ್ಲಡೇ ಸುತ್ತಾಡುತ್ತಿದ್ದೇನೆ. ಸಹಾಯ ಅಷ್ಟೇ ಮಾಡುತ್ತಿಲ್ಲ, ಜತೆಗೆ ಜನರಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.

ತರಕಾರಿ. ಹಣ್ಣು ಬೆಳೆದಿರುವ ರೈತರಿಂದ ಕೊಂಡು ಅದನ್ನು ಬಡವರಿಗೆ ಹಂಚುವ ಕೆಲಸ ಮಾಡುತ್ತಿದ್ದೇನೆ ಎಂದು ಅವರು ವಿವರಿಸಿದರು.


ಸುರೇಶ ಗೌಡರು ಇದನ್ನೆಲ್ಲ ರಾಜಕೀಯಕ್ಕಾಗಿ ಮಾಡುತ್ತಿಲ್ಲ. ಕ್ಷೇತ್ರದ ಜನರು ಕಷ್ಟದಲ್ಲಿರುವುದನ್ನು ಕಂಡು ತಮ್ಮ ಸ್ವಂತ ಹಣದಲ್ಲಿ ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಸಂಭ್ರಮಪಟ್ಟರು.

ಸುಮಾರು 20 ಸಾವಿರ ಮಾಸ್ಕ್ ಹಂಚಿಕೆಗೆ ಚಾಲನೆ ನೀಡಿದರು. ಪಡಿತರ ಕಾರ್ಡ್ ಇಲ್ಲದವರ ಮನೆ ಬಾಗಿಲಿಗೆ ಆಹಾರ ಸಾಮಾಗ್ರಿಗಳು, ತರಕಾರಿ ಕಿಟ್ ವಿತರಣೆಗೂ ಚಾಲನೆ ನೀಡಿದರು.

ಜನರು ಯಾರೂ ಸಹ ಹೆದರಬಾರದು. ಜ್ವರ,ಕೆಮ್ಮು, ಗಂಟಲು ನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ತೋರಿಸಿಕೊಳ್ಳಬೇಕು. ಕೋವಿಡ್ ಮುಚ್ಚಿಟ್ಟುಕೊಂಡಂತೆ ಇಡೀ ಕುಟುಂಬದ ಸಾವಿಗೆ ನೀವೆ ಕಾರಣರಾಗುತ್ತೀರಿ ಎಂಬುದನ್ನು ಯಾರೂ ಮರೆಯಬಾರದು ಎಂದು ಸಚಿವರು ಎಚ್ಚರಿಸಿದರು.

ಕೊರೊನಾ ರೋಗಿಗಳ ಖರ್ಚನ್ನು ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಳ್ಳುತ್ತದೆ. ಅವರನ್ನು ನೋಡಿಕೊಳ್ಳಲೆಂದೇ ಮೂವರು ನರ್ಸ್ ಗಳನ್ನು ನೇಮಕ ಮಾಡಲಾಗುವುದು. ಆಹಾರ, ಔಷಧವನ್ನು ಉಚಿತವಾಗಿ ಸರ್ಕಾರವೇ ನೀಡುತ್ತದೆ. ಹೀಗಾಗಿ ಯಾರೂ ಹೆದರಬಾರದು. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ. ಆರೈಕೆ ಮಾಡುವ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳುತ್ತದೆ ಎಂದರು.

ಮಾಜಿ ಸಚಿವ ಸುರೇಶ ಗೌಡ, ಜಿಲ್ಲಾಧಿಕಾರಿ ರಾಖೇಶ್ ಕುಮಾರ್ ಇತರರು ಇದ್ದರು.

ಇದಾದ ಬಳಿಕ ಸುರೇಶ ಗೌಡರ ನೇತೃತ್ವದಲ್ಲಿ ದುರ್ಗದಹಳ್ಳಿ, ಬ್ಯಾತ ಗ್ರಾಮದ ಮನೆಮನೆಗೂ ಮಾಸ್ಕ್, ಆಹಾರ ಕಿಟ್ ವಿತರಿಸಿದರು.

ರೋಗಿ ಕಡೆಯವರೇ ಪೊರಕೆ‌ ಹಿಡಿದು ಸ್ವಚ್ಛ ಮಾಡಿದರು…!

ಚಿಕ್ಕನಾಯಕನಹಳ್ಳಿ: ರೋಗಿಯನ್ನು ಕರೆದೊಯ್ಯಲು ಬಂದಿದ್ದ 108 ತೀರಾ ಧೂಳಿನಿಂದ ಕೂಡಿದ್ದು ಅನಿವಾರ್ಯವಾಗಿ ಕುಟುಂಬದವರೇ ಸ್ವಚ್ಛಮಾಡಿ ರೋಗಿಯನ್ನು ಕರೆದೊಯ್ದ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿ ಶಿಡ್ಲಕಟ್ಟೆ ಗ್ರಾಮದಲ್ಲಿ ಜರುಗಿದೆ.

ತುರ್ತು ಅಗತ್ಯದ ಮೇರೆಗೆ ಆಂಬುಲೆನ್ಸ್ 12 ಗಂಟೆಗೆ ಆಗಮಿಸಿದ್ದು ಆಂಬುಲೆನ್ಸ್ ಸ್ಥಿತಿ ನೋಡಿದರೆ ಅದರಲ್ಲಿ ಹತ್ತಿ ಕುಳಿತುಕೊಳ್ಳುವುದೇ ರೋಗಕ್ಕೆ ಆಹ್ವಾನ ನೀಡಿದಂತೆ ಎನ್ನುವ ಸ್ಥಿತಿಯಲ್ಲಿತ್ತು ಎನ್ನಲಾಗಿದ್ದು ಸ್ವಚ್ಛತೆ ಇಲ್ಲದ ಅಂಬುಲೆನ್ಸ್ ನೋಡಿ ಆರೋಗ್ಯ ಇಲಾಖೆಯ ಬೇಜವಾಬ್ದಾರಿತನಕ್ಕೆ ಹಿಡಿಶಾಪ ಹಾಕಿದ ಕುಟುಂಬದವರು ತಾವೇ ಮುಂದೆ ನಿಂತು ಹಿಡಿದು ಸ್ವಚ್ಛ ಮಾಡಿ ನಂತರ ರೋಗಿಯನ್ನು ಕರೆದೊಯ್ದರು.

ಕರೊನಾ ವೈರಾಣು ಹರಡದಂತೆ ಎಲ್ಲೆಡೆ ಸ್ವಚ್ಛತೆಗೆ ಆದ್ಯತೆ ನೀಡುತ್ತಿರುವ ಸಮಯದಲ್ಲಿ ರೋಗಿಯನ್ನು ಕರೆದೊಯ್ಯುವ ಆಂಬುಲೆನ್ಸ್ ನಲ್ಲಿ ಕನಿಷ್ಠ ಸ್ವಚ್ಛವಾಗಿಡಲು ನಿಗಾವಹಿಸದೆ ಬೇಜವಾಬ್ದಾರಿತನ ಪ್ರದರ್ಶಿಸಿರುವ ಅಂಬುಲೆನ್ಸ್ ವಾಹನದವರ ಬಗ್ಗೆ ಅಲ್ಲಿನ ಗ್ರಾಮಸ್ಥರು ಹಿಡಿಶಾಪ ಹಾಕಿದ್ದು ಇದೇನು ಜನಗಳನ್ನು ಕರೆದೊಯ್ಯುವ ವಾಹನವೋ ಅಥವಾ ದನಗಳನ್ನು ಕರೆದೊಯ್ಯುವ ವಾಹನವೋ ಎಂದು ಪ್ರತಿಕ್ರಿಯಿಸಿದ್ದು ಈ ಬಗ್ಗೆ ಸಂಬಂಧಪಟ್ಟವರು ತುರ್ತಾಗಿ ಗಮನ ಹರಿಸುವಂತೆ ಅಲ್ಲಿನ ಗ್ರಾಮಸ್ಥ ಕುಮಾರ್ ಮನವಿ ಮಾಡಿದ್ದಾರೆ

ಬುಗುರಿ

ದೇವರಹಳ್ಳಿ ಧನಂಜಯ


ಬುಗುರಿ ತಲೆ
ಗಿರಗಿರ ತಿರುಗಿ,
ತಿರು ತಿರುಗಿ!

ತಿಪ್ಪರಲಾಗ.
ತಿರುಗುವ ತಲೆಗೆ,
ಇಲ್ಲ ಕೈ ಕಾಲು.

ತಿಕ್ಕಲು ತಲೆ
ಮೂಲ ತಿರುಗಣಿಯ
ಮರೆಮಾಚಿದೆ.

ಎಲ್ಲೂ ಹೋಗದೆ
ಚಡಪದಿಸುತಿದೆ
ನಿಲ್ಲಲಾಗದೆ.

ತಿರುಕ ತಲೆ
ತಿರುಗುತ್ತಲೇ ಇದೆ
ಲೊಬದತ್ತಲೇ

ರಾಗ ದ್ವೇಷದ
ರೋಗ ನೆತ್ತಿಗೇರಿದೆ
ಏನೋ ಕೇಡಿಗೆ

ತರೇಹಾವರಿ
ಬಣ್ಣಗಳು ಕಣ್ ಕಟ್ಟಿ
ಮಂಡೆ ಸುತ್ತಿದೆ.

ಇದು ಭ್ರಮೆಯೋ
ಭ್ರಮಣೆಯೋ ಗೊತ್ತಿಲ್ಲ
ಕೆಟ್ಟ ತಲೆಗೆ

ಪಾದವಿಲ್ಲದೆ
ಚಲಿಸುತಲಿರುವೆ
ಪಥ ವಿಲ್ಲದೆ

ನಿಲ್ಲಲಾಗದ
ಬದುಕಿಗೆ, ಚಲನೆ
ಇಲ್ಲ.ನೆಮ್ಮದಿ.

ಚಾಟಿ ಯಾರದೋ
ಚಲನೆಯೂ ಯಾರದೋ
ಬಾಳು ಎಲ್ಲಿಗೋ

ನಿಲ್ಲುವ ಆಸೆ
ನಿಂತ್ರೆ ಬೀಳುವ ಭಯ
ತಲೆ ಗಿರಕಿ

ಅದು ‘ಬರಗೂರು’

ಜಿ ಎನ್ ಮೋಹನ್‌


ನಾನು, ಬರಗೂರು ಅವರ ಜೊತೆ ಸಾಕಷ್ಟು ಮಾತನಾಡಿದ್ದೇನೆ, ಮತ್ತೆ ಮತ್ತೆ ಮಾತನಾಡಿದ್ದೇನೆ.

ಆದರೆ ಯಾಕೋ ಗೊತ್ತಿಲ್ಲ ಅವರು ನನ್ನೊಂದಿಗೆ ಹಂಚಿಕೊಂಡ ಈ ಒಂದು ಸಂಗತಿ ನನ್ನ ಮನದಲ್ಲಿ ಒಂದು ಅಚ್ಚರಿಯಾಗಿ ಉಳಿದುಬಿಟ್ಟಿದೆ.

ಒಮ್ಮೆ ಬರಗೂರು ರಾಮಚಂದ್ರಪ್ಪನವರು ತಮ್ಮ ಮಗನನ್ನು ಕರೆದುಕೊಂಡು ಊರಿಗೆ ಹೋದರು. ಮಗ ಊರಿಗೆ ಭೇಟಿ ಕೊಡುತ್ತಿದ್ದುದು ಅದೇ ಮೊದಲ ಬಾರಿ. ಬಸ್ಸಿನಿಂದ ಇಳಿದ ತಕ್ಷಣವೇ ಅವನಿಗೆ ದೊಡ್ಡದಾಗಿ ಊರಿನ ಫಲಕ ಕಾಣಿಸಿತು. ಬೆಕ್ಕಸ ಬೆರಗಾದವನೇ ‘ಅಪ್ಪಾ ನೋಡು ನಿನ್ನ ಹೆಸರನ್ನೇ ಊರಿಗೆ ಇಟ್ಟಿದ್ದಾರೆ’ ಎಂದು ಉದ್ಘರಿಸಿದ.

ಎಷ್ಟು ಚಂದ! ಒಂದು ಮಗುವಿಗೆ ಅಪ್ಪ ಊರಿನ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಜೋಡಿಸಿಕೊಂಡಿದ್ದಾರೆ ಎನ್ನುವುದು ಗೊತ್ತಿಲ್ಲದೇ ಬೆಕ್ಕಸಬೆರಗಾಗಿದೆ. ಅಪ್ಪನ ಹೆಸರನ್ನೇ ಊರಿಗೆ ಇಟ್ಟಿದ್ದಾರೆ ಎಂದುಕೊಳ್ಳುವ ಮಗು ಮನಸ್ಸು ನನ್ನನ್ನು ಅಂದಿಗೂ ಇಂದಿಗೂ ಕಾಡುತ್ತಲೇ ಇದೆ.

ಯಾರಿಗಾದರೂ ‘ರಾಮಚಂದ್ರಪ್ಪ’ ಎಂದು ಹೇಳಿ ನೋಡಿ ಬಿಲ್ ಕುಲ್ ಗೊತ್ತಾಗುವುದಿಲ್ಲ. ಆದರೆ ರಾಮಚಂದ್ರಪ್ಪ ಎನ್ನುವ ಹೆಸರನ್ನೇ ಬಳಸದೆ ‘ಬರಗೂರು’ ಎಂದು ನೋಡಿ ಖಂಡಿತಾ ಬರಗೂರು ರಾಮಚಂದ್ರಪ್ಪನವರು ಕಣ್ಣೆದುರು ಬಂದೇ ಬರುತ್ತಾರೆ.

ವ್ಯಕ್ತಿಯಿಂದಾಗಿ ಊರಿಗೂ ರೆಕ್ಕೆ ಸಿಕ್ಕ ಉದಾಹರಣೆಗಳು ತುಂಬಾ ಕಡಿಮೆ. ಅಂತಹದ್ದರಲ್ಲಿ ಬರಗೂರೂ ಒಂದು. ಅದನ್ನೇ ಬಹುಷಃ ಆ ಮಗು ಮಾತಾಡಿ ತೋರಿಸಿತ್ತು.

ಬರಗೂರು ನಾನೂ ಅನೇಕ ಬಾರಿ ಅನೇಕ ಕಾರಣಗಳಿಗೆ ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದೇವೆ.

ಅವರ ಊರಲ್ಲಿ ‘ಬರಗೂರು’ ಎಂದು ಕರೆದರೂ ಯಾರಿಗೂ ಗೊತ್ತಾಗುವುದಿಲ್ಲ, ‘ರಾಮಚಂದ್ರಪ್ಪ’ ಎಂದು ಕರೆದರೂ ಯಾರಿಗೂ ಗೊತ್ತಾಗುವುದಿಲ್ಲ

ಯಾಕೆಂದರೆ ಇವರು ಇಡೀ ಊರಿಗೆ ‘ಚಂದ್ರಣ್ಣ’ ಮಾತ್ರ.

‘ನಮ್ಮ ಈ ನಾಡಿನಲ್ಲಿ, ಭವ್ಯ ನಾಮ ಬೀಡಿನಲ್ಲಿ, ಬೇಗೆಯೇ ಬೆಟ್ಟವಾಗಿ ಉತ್ತರಕ್ಕೆ ಕಾವಲು’ ಎನ್ನುವ, ಜನರ ನಾಲಿಗೆಯಲ್ಲಿ ಸದಾ ಇರುವ ಹಾಡನ್ನು ಬರೆದವರು ಬರಗೂರು.

ಇಂತಹ ನಾಡು ಬಣ್ಣಿಸಿದ ಬರಗೂರರಿಗೆ ಸದಾ ಕಾಡುತ್ತಿದ್ದ ಸಂಗತಿ ಎಂದರೆ ಶಾಲೆಯಲ್ಲಿ ಮೇಷ್ಟ್ರು ಬಣ್ಣಿಸುತ್ತಿದ್ದ ಶ್ರೀಗಂಧದ ನಾಡು ಎಂದರೆ ಏನು ಎನ್ನುವುದು. ‘ಹಾಗೆ ಹೇಳುತ್ತಿದ್ದ ಮೇಷ್ಟರಾಗಲೀ, ಕೇಳುತ್ತಿದ್ದ ನಾವಾಗಲಿ ಶ್ರೀಗಂಧವನ್ನು ನೋಡಿಯೇ ಇರಲಿಲ್ಲ. ಇನ್ನು ಕುವೆಂಪು ಅವರ ಮಲೆನಾಡು, ಕಾರಂತರ ಕಡಲು, ಬೇಂದ್ರೆಯವರ ಸಾಧನಕೇರಿ, ಕೆ ಎಸ್ ನ ಅವರ ಮೈಸೂರು ಮಲ್ಲಿಗೆ ಮಾತು ಬಿಡಿ..’

ಬರಗೂರು ಟೈಲರ್ ಆಗಿದ್ದರು ಎನ್ನುವ ವಿಷಯ ಸುಮಾರು ಜನರಿಗೆ ಗೊತ್ತಿಲ್ಲ. ಬದುಕಿನ ನೇಯ್ಗೆಯ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಮಾತನಾಡುವ ಬರಗೂರರಿಗೆ ಸಮಾಜದ ಒಳಗಿನ ಈ ಸೂಕ್ಷ್ಮ ನೇಯ್ಗೆಗಳು ಚೆನ್ನಾಗಿ ಗೊತ್ತು.

ಕೋಮುಗಳ ನಡುವಿನ ಸೌಹಾರ್ದದ ಬಗ್ಗೆ ಬರಗೂರು ಅವರದ್ದು ಖಡಕ್ ನಿಲುವು. ಈ ಬಗ್ಗೆ ಅವರ ಮಾತುಗಳನ್ನು ಅಂದಿನಿಂದ ಇಂದಿನವರೆಗೂ ಕೇಳಿದ್ದೇನೆ

ಸಮಾಜದ ನೇಯ್ಗೆಯೊಳಗೆ ಎಲ್ಲ ಧರ್ಮಗಳೂ ಇರಬೇಕು ಎನ್ನುವ ಅವರ ಖಡಕ್ ನಿಲುವಿಗೆ ಕಾರಣವಾಗಿರಬಹುದಾದ ಒಂದು ಅಂಶ ನನಗೆ ಇತ್ತೀಚೆಗೆ ಗೊತ್ತಾಯಿತು.

ಬರಗೂರು ಸೈಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಪಂಚರ್ ಹಾಕುವ ಕೆಲಸ. ಈ ಮಧ್ಯೆ ಹಜರತ್ ಸಾಹೇಬರ ಒಡನಾಟ. ಅಲ್ಲಿಯೇ ಅವರ ಮನದೊಳಗೆ ಸಾಮರಸ್ಯದ ಮೊದಲ ಬೀಜ ಬಿತ್ತಿಹೋಗಿದ್ದು.

ಬರಗೂರರಿಗೆ ಯುಗಾದಿ ಹಬ್ಬದ ಜೊತೆಗೆ ರಂಜಾನ್ ಸಹಾ ಬದುಕಿನ ಭಾಗವಾಗಿದ್ದು ಅಲ್ಲಿಯೇ.

ಎ ಆರ್ ಕೃಷ್ಣಶಾಸ್ತ್ರಿಗಳ ‘ವಚನ ಭಾರತ’ವನ್ನು ಇಡೀ ಬೀದಿಗೆ ಕೇಳುವಂತೆ ಓದುತ್ತಿದ್ದ, ಬನಿಯನ್ ಮೇಲೆ ಅಕಸ್ಮಾತ್ ಆಗಿ ಇಂಕ್ ಚೆಲ್ಲಿದಾಗ ತಾನು ಚೋಟುದ್ದ ಇರುವಾಗಲೇ ಪೆನ್ ಗೆ ಭಡ್ತಿ ಹೊಂದಿದ್ದೇನೆ ಎಂದು ಗೊತ್ತಾಗಲಿ ಎಂದು ಅದನ್ನು ವಾರವಾದರೂ ಒಗೆಯದೇ ಹಾಕಿಕೊಂಡು ಊರ ತುಂಬಾ ತಿರುಗಿದ ಬರಗೂರರ ಕಣ್ಣ ಮುಂದೆ ಒಂದು ದೊಡ್ಡ ಆಸೆ ಇತ್ತು.

‘ಏನು ಸಾರ್ ಅದು’ ಎಂದು ಕೇಳಿದೆ.
‘ನನಗೆ ಬಸ್ ಚಾಲಕನಾಗಬೇಕು ಎನ್ನುವ ದೊಡ್ಡ ಆಸೆ ಇತ್ತು’ ಎಂದರು.

‘ನಿಮ್ಮ ಆಸೆ ಪೂರೈಸಿದೆಯಲ್ಲಾ ಸಾರ್’ ಎಂದೆ.
ಅವರು ಅಚ್ಚರಿಯಿಂದ ನನ್ನ ಮುಖ ನೋಡಿದರು.
‘ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಚಾಲಕ ಶಕ್ತಿ ನೀವು’ ಎಂದೆ.

ಬರಗೂರರ ಮುಖದಲ್ಲಿ ಸದಾ ಇರುವ ಮುಗುಳ್ನಗು ಸ್ವಲ್ಪ ಹೆಚ್ಚಾಯಿತು.

ಅಣ್ಣಾ ಇರ್ನ ಪಾಡಿ ಕೊರ್ಪರ?

0

ರಾಮಪ್ರಸಾದ್


ಅಣ್ಣಾ ಇರ್ನ ಪಾಡಿ ಕೊರ್ಪರ? (ಅಣ್ಣಾ ನಿಮ್ಮ ಹಾಡಿ ಕೊಡ್ತೀರಾ? )ಹಲವು ವರುಷಗಳಿಂದ ನಮ್ಮ ಹಾಡಿಯ ಮರಗಳನ್ನು ಕಡಿದು ಮಾರುವ ಸಲುವಾಗಿ ಜನರು ಈ ಪ್ರಶ್ನೆ ಕೇಳ್ತಾ ಇದ್ರು.ಹಾಡಿ ಅಂದಾಗ ನೆನಪಾಗುವುದು ನಮ್ಮ ಬಾಲ್ಯದ ಜೀವನ.


ಕರಾವಳಿಯ , ಮಲೆನಾಡಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ರಾಮಪ್ರಸಾದ್ ವಿವರಿಸಿದ್ದಾರೆ. ರಾಮಪ್ರಸಾದ್ ಅವರು ಆಗುಂಬೆಯ ಹೆಬ್ರಿಯವರು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಕೊನೆಯಲ್ಲಿ ಹೇಳಿರುವ ಅಣ್ಣಾ ಬಿಜಾಕ್ರೆ ಕೊರ್ಪರ? ಮಾತುಗಳು ನಾವುಗಳೇ ಸೇರಿ ಹಾಳುಗೆಡವಿರುವ ಕರಾವಳಿ ಕಂಡು ಕರಳು‌‌ ಚುರುಕ್ ಎನ್ನಿಸುತ್ತದೆ.


ಬೇಸಗೆ ರಜೆ ಸಿಕ್ಕಿದ ತತ್ ಕ್ಷಣ ಒಂದು ನಿಮಿಷವೂ ವ್ಯರ್ಥ ಮಾಡದೆ ಸಿಕ್ಕಿದ ಬಸ್ಸು ಹಿಡಿದು ಕಾರ್ಕಳದಿಂದ ಮುದ್ರಾಡಿಗೆ ಬರ್ತಾ ಇದ್ದದ್ದು , ಮನೆಯವರ ಕಣ್ಣು ತಪ್ಪಿಸಿ ಬೈಲು, ಹಾಡಿ, ಕಾಡು ಸುತ್ತುತ್ತಾ ಇದ್ದದ್ದು, ಕೆಲವೊಮ್ಮೆ ಗಣೇಶಣ್ಣ ನ ಅಂಗಡಿಯಿಂದ ಗಂಟೆಗೆ ಒಂದು ರೂ ನಂತೆ ಬಾಡಿಗೆ ಸೈಕಲ್ನಲ್ಲಿ ಕಾಡಿನ ಕಡೆಗೆ ಹೋಗ್ತಾ ಇದ್ದದ್ದು, ಹಸಿದು ಸುಸ್ತಾದಾಗ ಹೈ ಸ್ಕೂಲ್ ಹತ್ತಿರದ ತಿಮ್ಮಣ್ಣನ ಕ್ಕ್ಯಾಂಟೀನಿನಿಂದ ರವಾ -ವಡೆ ತಿಂದಿದ್ದು.

ಹಾಡಿ ತೋಟಗಳನ್ನು ದಾಟಿ ಸಹೋದರ ಮತ್ತು ಸ್ನೇಹಿತರೊಂದಿಗೆ ಹಲಸು ,ಹೆಬ್ಬಲಸು, ಕಾಡುಮಾವು, ಚಂಪೆ, ನೇರಳೆ, ಹೆನ್ನೇರಳೆ, ಕುಂಟಾಲ್, ಜಂಬೂ ನೇರಳೆ, ಬೆಮ್ಮರಿಲು, ರೆಂಜೆ, ಸಳ್ಳೆ, ಕೇಪಳ, ಗೇರು – ಹಣ್ಣುಗಳನ್ನು ತಿಂದು ತೇಗಿರುವುದು, ಮೇಲ್ಚಾವಣಿಯಿಂದ ಹೈಗಾ (Hopea ponga ) ಮರದ ಎರಡು ರೆಕ್ಕೆಯುಳ್ಳ ಬೀಜಗಳನ್ನು ಎಸೆದು ಅದು ಸುರುಳಿ ಸುತ್ತುತ್ತಾ ನೆಲದ ಮೇಲೆ ಬೀಳುವುದನ್ನು ನೋಡಿ ಆನಂದಿಸಿದ್ದು.


ನಿಮ್ಮೂರಿನ ಸುದ್ದಿ ಲೇಖನಗಳನ್ನು ನೀವೂ ಬರೆಯಿರಿ: ವಾಟ್ಸಾಪ್: 9844817737


ಅಪರೂಪಕ್ಕೊಮ್ಮೆ ಸಹೋದರಿಯರೊಂದಿಗೆ ಪಕ್ಷಿ ವೀಕ್ಷಣೆ ಮಾಡ್ತಾ ಟಿಟ್ಟಿಭ (Vanellus indicus ) ಹಕ್ಕಿಗಳ ಮೊಟ್ಟೆ ಮರಿಗಳನ್ನು ಹುಡುಕುವುದು, ನಮ್ಮ ತೆಂಗಿನ ತೋಟಕ್ಕೆ ಬರುತ್ತಿದ್ದ ಹಾರೋತಿಯ (Draco dussunieri) ದರ್ಶನ, ಕಾಡು ಹೂಗಳ ಮತ್ತು ನವಿಲು ಗರಿಗಳ ಸಂಗ್ರಹಣೆ- ಹೀಗೆ ಅಸಂಖ್ಯ ಸವಿನೆನಪುಗಳು.ರೈತನ ಜೀವನದ ಒಂದು ಅಮೂಲ್ಯ ಭಾಗ ಅವನ ಹೊಲ/ಗದ್ದೆ ಯ ಹತ್ತಿರ ಇರುವ ಹಾಡಿ. ಬೆಳಗ್ಗೆ ಬೇಗನೆ ಎದ್ದು ಹೊರಟವನೆ ಮರದ ಹರೆ (ಮುಂಡಿಲು ಮರದ ಗೆಲ್ಲು)ಯನ್ನೇ ಪೊರಕೆಯಾಗಿಸಿ ಬಳ್ಳಿಯನ್ನೇ ದಾರವಾಗಿಸಿ ತರಗಲೆ (ದರುಗು, ದರಗು, ಬಿಜಾಕ್ರೆ ) ಗುಡಿಸುತ್ತ ಅಲ್ಲಲ್ಲಿ ರಾಶಿ ಹಾಕುತ್ತಿದ್ದ. ರೈತರ ಜೊತೆಗೆ ಬರುವ ಮಕ್ಕಳು ರೆಂಜೆ ಹೂವನ್ನು ಆಯ್ದು ಅಜ್ಜಿಯ ಸಹಕಾರದೊಂದಿಗೆ ದಾರದಲ್ಲಿ ಪೋಣಿಸಿ ದೇವರಿಗೆ ಮಾಲೆಯಾಗಿಸುತ್ತಿದ್ದರು.ತರಗಲೆ ರಾಶಿಯನ್ನು ಕೆಲವೊಮ್ಮೆ ಆಶ್ರಯವಾಗಿಸಿರುವ ಆಮೆ ಮತ್ತು ತವುಡು ಕನ್ನಡಿ(Hypnale hypnale) ಹಾವುಗಳ ದರ್ಶನ ಕೂಡ ಆಗ್ತಾ ಇದ್ದವು.ಅಟ್ಟೆ ಬೋರು (ಒಂದು ಬಗೆಯ ಬಳ್ಳಿ ) ಉಪಯೋಗಿಸಿ ತಕ್ಕದಾದ ಬುಟ್ಟಿ ಗಳನ್ನು ಹೆಣೆದು ವಿಶಿಷ್ಟ ರೀತಿಯಲ್ಲಿ ತರಗಲೆಯನ್ನು ತುಂಬಿಸಿ ತಾನೂ ಅಥವಾ ಕುಟುಂಬಸ್ಥರ ಸಹಾಯದಿಂದಲೂ ತನ್ನ ಮನೆಯ ಅಂಗಳಕ್ಕೆ ತರುತ್ತಿದ್ದ. ತರಗಲೆಯನ್ನು ಗುಡ್ಡೆ ಹಾಕುವ ಪರಿ ಹೇಗಿತ್ತು ಅಂದರೆ ಮಳೆಗಾಲದಲ್ಲಿ ನೀರಿನ ಹನಿ ಕೂಡ ಗುಡ್ಡೆಯ ಒಳಗೆ ಹೋಗ್ತಾ ಇರಲಿಲ್ಲ.

ಹೀಗೆ ಹಲವಾರು ತಲೆಮಾರಿನ ಅನುಭವ ರೈತನ ಯಶಸ್ಸಿನ ಗುಟ್ಟಾಗಿತ್ತು. ಹಸುವಿನ ಗೊಬ್ಬರಕ್ಕೆ ಮತ್ತು ಸುಡುಮಣ್ಣುನ್ನು ತಯಾರಿಸಲು ಉಪಯೋಗ ಆಗ್ತಾ ಇತ್ತು ಈ ಸಂಗ್ರಹಣೆ.

ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಜೊತೆಗೆ ಒಡನಾಟ ಇಟ್ಟುಕೊಂಡಿತ್ತು ರೈತನ ಕುಟುಂಬ.ಮಳೆಗಾಲ ಶುರುವಾದಂತೆ ಕಲ್ಲಣಬೆ, ಬೋಗಿ ಅಣಬೆ ಮತ್ತು ಹೆಗ್ಗೆಲಣಬೆಯ ಸಾರು/ಪಲ್ಯ, ಉಪ್ಪಿಗೆ ಹಾಕಿದ ಮಾವಿನಕಾಯಿ, ಅಂಬಡೆ, ಹಲಸಿನ ಕಾಯಿ , ಕ್ಯಾನೆ, ಹೆಬ್ಬಲಸು, ಕಣಲೆ ಚಟ್ನಿ, ವಾಟೆ ಹುಳಿ ಬಳಸಿ ತಯಾರಿಸಿದ ಹಳ್ಳದ ಮೀನು ಸಾರು ಎಲ್ಲಾ ನಮ್ಮಲ್ಲಿ ಸರ್ವೇ ಸಾಮಾನ್ಯ ಆಗಿತ್ತು.

ಗೇರು ಬೀಜ, ಹಲಸಿನ ಬೀಜ ನೀರುಳ್ಳಿ ಗೆಣಸು ಸುಟ್ಟು ತಿನ್ನೋದು, ಹಲಸಿನ ಹಪ್ಪಳ ಕೊಬ್ಬರಿ ತುಂಡಿನ ಜೊತೆಗೆ ತಿನ್ನೊದು -ಹೀಗೆ ಮಳೆಗಾಲದ ಆಹಾರ ಪದ್ದತಿಯೇ ಒಂದು ಸೊಗಸು.

ಸೂರ್ಯ ಮೂಡುವ ಮುನ್ನವೇ ಮುಗುಳಕ್ಕಿಯ ಗಂಜಿಯನ್ನುಉಂಡು ಹೊಲಕ್ಕೆ ಹೊರಟ ರೈತ ಮತ್ತೆ ಮನೆಯತ್ತ ಬರುವುದು ಸಂಜೆಯೇ ಸರಿ. ಗದ್ದೆಯಲ್ಲಿ ನೀರಿನ ಮಟ್ಟ ಸಮತೋಲನದಲ್ಲಿಡುವುದು, ಕಳೆಗಿಡಗಳ ನಿರ್ವಹಣೆ, ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ. ಭತ್ತದ ಸಸಿಗಳಿಗೆ ಬರುವ ಹುಳುಹುಪ್ಪಟೆಗಳನ್ನು ಕಪ್ಪೆ ಮತ್ತು ಹಕ್ಕಿಗಳು ಹತೋಟಿಯಲ್ಲಿಡ್ತಾ ಇದ್ದವು.

ರೈತ ಬೆಳೆದ ಭತ್ತ, ಅಡಕೆ, ತೆಂಗು, ಮಾವು, ಹಲಸು, ತರಕಾರಿ ಬೆಳೆಗಳು ಇವುಗಳ ಪರಾಗಸ್ಪರ್ಶ ಕ್ರಿಯೆಯನ್ನು ಪಕ್ಕದ ಹಾಡಿ /ಕಾಡಿನಲ್ಲಿರುವ ದುಂಬಿಗಳು/ಜೇನು ಹುಳಗಳು ಮಾಡ್ತಾ ಇದ್ದವು.ಇಲಿಗಳ ಸಂಖ್ಯೆ ಅತಿಯಾಗದಂತೆ ಸುತ್ತಮುತ್ತಲಿನ ಹಾವುಗಳು ನೋಡಿಕೊಳ್ಳುತ್ತಿದ್ದವು.

ರೈತ ಹೊಲದ ಹತ್ತಿರ ತಾನೇ ನಿರ್ಮಿಸಿದ ತಾತ್ಕಾಲಿಕ ಮನೆಯಲ್ಲಿ (ಗುಡುo) ರಾತ್ರಿಯಲ್ಲ ಕಳೆದು ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸುತ್ತಿದ್ದ. ಬೆಳೆ ಕಟಾವು ನಂತರ ಪ್ರತೀ ಗದ್ದೆಗೆ ದೀಪವನ್ನು ಇಡುತ್ತಾ ಶಕ್ತಿ ಮತ್ತು ಹುರುಪನ್ನು ಕೊಟ್ಟಂತಹ ಬಲಿದೇವರಿಗೆ, ಕಾಡು /ಹಾಡಿ, ಪೃಕೃತಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸುತ್ತಾ ಸಾಗುವ ರೈತನ ನಿರ್ಮಲ, ನಿರಾತಂಕ ಮನಸ್ಸು ತನಗೂ ಹಾಗೂ ಇತರ ರೈತರಿಗೂ ಉತ್ತೇಜಕವಾಗಿತ್ತು.

ಮುಡಿ ಕಟ್ಟುವ ಸಂಪ್ರದಾಯದ ಮೂಲಕ ಬೆಳೆದ ಭತ್ತವನ್ನು ಅಕ್ಕಿಮಾಡಿ ಸಂರಕ್ಷಿಸುತ್ತಿದ್ದ. ಮಳೆನೀರನ್ನು ನಿಧಾನವಾಗಿ ಹಂತ ಹಂತವಾಗಿ ಇಂಗಿಸುವ ಹಾಡಿ /ಕಾಡುಗಳು ಅಂತರ್ಜಲ ಮಟ್ಟವನ್ನು ಕಾಯ್ದುಕೊಂಡು ವರುಷಕ್ಕೆ ಮೂರು ಭತ್ತದ ಬೆಳೆ ಬೆಳೆಯಲು ಅನುವು ಮಾಡಿ ಕೊಟ್ಟಂತಹ ಕಾಲವದು.

ಅಪಾರ ಜ್ಞಾನಭಂಡಾರವನ್ನೇ ಹೊತ್ತುಕೊಂಡಿದ್ದ ರೈತರು ಸಂಪ್ರಾದಾಯಿಕ ವ್ಯವಸಾಯ ಪದ್ದತಿಯನ್ನು ರಕ್ತಗತವಾಗಿಸಿಕೊಂಡಿದ್ದರು. ಪ್ರಕೃತಿಯ ಜೊತೆಗಿನ ನಂಟು ಮನುಷ್ಯನಲ್ಲಿ ಬೇರೂರಿತ್ತು. ನೆಮ್ಮದಿ ಎಂಬುದು ಎಲ್ಲರ ಮನೆಯಂಗಳದಲ್ಲಿನ ಚೆಲುವಿನ ರಂಗೋಲಿಯಂತಿತ್ತು (ಕೂಡು ಕುಟುಂಬ ).

ಕಾಲಕ್ರಮೇಣ, ಏರುತ್ತಿರುವ ಜನಸಂಖ್ಯೆ, ಬದಲಾದ ದಿನಚರಿ, ಪ್ರೋತ್ಸಾಹ ಇಲ್ಲದಿರುವುದು, ಇನ್ನಿತರ ಅಗೋಚರ ಕಾರಣಗಳಿಂದ ಸಾಂಪ್ರದಾಯಿಕ ವ್ಯವಸಾಯ ಪದ್ದತಿಗೆ ಹಲವರು ತಿಲಾಂಜಲಿ ನೀಡಿದರು.

ಸಕಲ ಜೀವ ಜಗತ್ತಿಗೆ ಪ್ರತ್ಯಕ್ಷವಾಗಿ ಬೆನ್ನೆಲುಬಾಗಿದ್ದ ಹಾಡಿ /ಕಾಡುಗಳು, ಹಿರಿಯರು ಕಷ್ಟಪಟ್ಟು ನೆಟ್ಟು ಬೆಳೆಸಿದ ದೈತ್ಯ ಮರಗಳು ಜನರಿಗೆ ಬೇಡವಾದವು. ಪ್ರಕೃತಿ-ಮನುಷ್ಯನ ನಡುವಿನ ಅನ್ಯೋನ್ಯ ಸಂಬಂಧ ಸಾರುವಿಕೆಯ ನಿದರ್ಶನಗಳಾದ ಹಿರಿಯರು ಸಂರಕ್ಷಿಸಿದ್ದ ನಾಗಬನದ ಸುತ್ತಲಿದ್ದ ಗಿಡ ಮರಗಳೂ ಕಡಿಮೆಯಾದವು.

ಪಟ್ಟಣದಲ್ಲಿನ ತೋರ್ಪಡಿಕೆಯ ಜೀವನವೇ ಒಳಿತು ಎನ್ನುವ ಭಾವನೆ ಜನರಲ್ಲಿ ಬೇರೂರಿತು. ಹಾಡಿಯಲ್ಲಿದ್ದ ಒಂದೊಂದು ಮರಗಳು ಬ್ಯಾಂಕಿನಲ್ಲಿ ಕೂಡಿಟ್ಟ ಒಂದೊಂದು ನೋಟಿನ ಕಂತೆಗಳಾದವು . ಹಾಡಿ ಮಾರಾಟ ಹಾಗೂ ಕೊಳ್ಳುವಿಕೆ ಒಂದು ಉದ್ಯಮವಾಯ್ತು.

ಬಣ್ಣ ಬಣ್ಣದ ಬದುಕನ್ನೇ ಅಪ್ಪಿಕೊಂಡಿದ್ದವರ ಸಾಲ ತೀರಿಸುವ ಅಥವಾ ಸಾಮಾಜಿಕ ಪ್ರತಿಷ್ಠೆ ಯನ್ನು ತೋರ್ಪಡಿಸುವ ಮೂಲವಾದವು ಈ ನೋಟಿನ ಕಂತೆಗಳು.

ರಬ್ಬರ್ ಮತ್ತು ಅನಾನಾಸ್ ತೋಟಗಳು ಅಣಬೆಯಂತೆ ತಲೆಯೆತ್ತಿದವು. ಪ್ರಸ್ತುತ ಕಾಡುಗಳ/ಹಾಡಿಗಳ ಮಾರಣಹೋಮ ಪ್ರಪಂಚದಾದ್ಯಂತ ನಡೆಯುತ್ತಿರುವುದು ಖೇದಕರ ಸಂಗತಿ. ತನ್ನ ಸ್ವಾರ್ಥ ಕಾರ್ಯ ಸಾಧನೆಗಾಗಿ ಮನುಷ್ಯನು ಜಗತ್ತಿನಾದ್ಯಂತ ನೈಸರ್ಗಿಕ ಕಾಡನ್ನೇ ಬೆಂಕಿಗೆ ಆಹುತಿಯಾಗಿಸತೊಡಗಿದ.

ಪ್ರಕೃತಿಗೆ ಗೌರವ ಕೊಡುತ್ತಿದ್ದ ಸಂಧರ್ಭದಲ್ಲಿ ಮನುಷನನ್ನ ತನ್ನ ಮಕ್ಕಳಂತೆ ಸಾಕಿದ್ದು ಈ ಪ್ರಕೃತಿಯೇ. ಕಾಲಕ್ಕೆ ತಕ್ಕಂತೆ ಮಳೆ, ಅದರಿಂದ ಬೆಳೆ, ಪರಿಶುದ್ಧವಾದ ನೀರು, ಸ್ವಚ್ಛವಾದ ಗಾಳಿ ಎಲ್ಲಾ ಯಥೇಚ್ಛವಾಗಿತ್ತು.ಪ್ರಕೃತಿಯ ಜೊತೆಗಿನ ಮಾನವನ ಸಂಬಂಧದ ಸಂಕೋಲೆ ಕಳಚಿಕೊಂಡಾಗ ಶುರುವಾಯಿತು

ಮನುಷ್ಯನಿಗೆ ಸಂಕಟ. “ಕೆರೆಯ ನೀರನು ಕೆರೆಗೆ ಚೆಲ್ಲಿ”, ಎನ್ನುವಂತೆ ಗಂಟೆಗಿಷ್ಟು ಅಂತ ದುಡ್ಡು ಕೊಟ್ಟು ಶುದ್ದ ಆಮ್ಲಜನಕವನ್ನು ಖರೀದಿ ಮಾಡತೊಡಗಿದ (ಇತ್ತೀಚಿಗೆ ನವ ದೆಹಲಿಯಲ್ಲಿ ನಡೆದದ್ದು).

ಜಾಗತಿಕ ತಾಪಮಾನ ಏರಿಕೆಯ ಸೃಷ್ಟಿ ಕರ್ತ ಎಂಬ ಬಿರುದನ್ನು ಪಡೆದುಕೊಂಡ.ಬರಗಾಲ, ಅತಿವೃಷ್ಟಿ, ಸುಂಟರಗಾಳಿ, ಮೇಘಸ್ಪೋಟ, ನೆರೆ, ಸಾಗರದ ನೀರಿನ ಮಟ್ಟದಲ್ಲಿನ ಏರಿಕೆ, ಅಂತ ಪ್ರಕೃತಿಯು ಪದೇ ಪದೇ ಕೊಡುತ್ತಿರುವ ಎಚ್ಚರಿಕೆಗಳನ್ನು ನಿರ್ಲಕ್ಷಿಸತೊಡಗಿದ.

ಹೊಟ್ಟೆಪಾಡಿಗಾಗಿ ಬೇಟೆಯಾಡುತ್ತಿದ್ದವ ಮನಬಂದಂತೆ ಕಾಡು ಪ್ರಾಣಿಗಳ ಬೇಟೆಯಾಡಿ ಅದನ್ನೇ ಉದ್ಯಮವಾಗಿಸಿದ.ಲಂಗು ಲಗಾಮು ಇಲ್ಲದೆ ಸಿಕ್ಕಿದ ಪ್ರಾಣಿಗಳನ್ನು ತಿನ್ನತೊಡಗಿದ.

ತಾನೇ ಪ್ರಪಂಚದೊಡೆಯ ಎಂದು ಜಂಭದ ಕೋಳಿಯಂತೆ ಬೀಗುತ್ತಿದ್ದ ಮನುಷ್ಯನಿಗೆ ಕುದುರೆ ಲಾಳ ತೊಡಿಸಿ, ಮೊಣಕಾಲೂರುವ ಹಾಗೆ ಮಾಡಿ ಪ್ರಕೃತಿಯೇ ಮೇಲು ಎಂದು ತೋರಿಸಿಕೊಟ್ಟದ್ದು ಬರಿಗಣ್ಣಿಗೆ ಕಾಣಿಸದಿದ್ದಂತಹ ಒಂದು ಜಾತಿಯ ಸೂಕ್ಷ್ಮಾಣುಜೀವಿ.ಹಲವು ಬಾರಿ ವಿಜ್ಞಾನಿಗಳು ಎಚ್ಚರಿಸಿದ್ದರೂ ನಮಗೆ ಅವರ ಮಾತು ಕೇಳುವಷ್ಟು ತಾಳ್ಮೆ, ಪುರುಸೊತ್ತು ಇರ್ಲಿಲ್ಲ ಬಿಡಿ.

ಇದೊಂದೇ ಸೂಕ್ಶ್ಮಾಣುಜೀವಿ ಮಾತ್ರ ಅಲ್ಲ, ಇದರ ಹೊರತಾಗಿ ಬೇರೆ ರೋಗ ಕೂಡ ಬರಬಹುದು ಅಂತ ವಿಜ್ಞಾನಿಗಳ ಅಭಿಪ್ರಾಯ.ಅಂದ ಹಾಗೆ ಇತ್ತೀಚೆಗೆ ಒಬ್ಬರು ಕೇಳಿದ್ದು
ಅಣ್ಣಾ ಬಿಜಾಕ್ರೆ ಕೊರ್ಪರ?
(ಅಣ್ಣಾ ತರಗಲೆ ಕೊಡ್ತಿರಾ?)ಅವರವರ ಜಾಗದಲ್ಲಿನ ಪ್ರಕೃತಿಯ ವರವನ್ನು ಜೋಪಾನವಾಗಿ ಕಾಪಾಡಿಕೊಂಡ್ರೆ ಬೇರೆಯವರನ್ನು ಕೇಳುವ ಅವಶ್ಯಕತೆ ಇಲ್ಲ ಎಂದು ನನ್ನ ಅನಿಸಿಕೆ.


ಲಾಕ್ ಡೌನ್ ಸಂಕಷ್ಟ: ಊರ್ಡಿಗೆರೆಗೆ ಬರಲಿದ್ದಾರೆ ಸಚಿವ ಆಶೋಕ್

Publicstory.in


ತುಮಕೂರು: ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ರೈತರು ಹಾಗೂ ಜನರಿಗೆ ಮಾಜಿ ಶಾಸಕ ಬಿ.ಸುರೇಶ ಗೌಡ ಅವರ‌ ನೆರವಿನ ಹಸ್ತ ಮುಂದುವರೆಸಿದ್ದು, ಕಂದಾಯ ಸಚಿವ ಆರ್.ಆಶೋಕ್ ಭಾನುವಾರ {ಏ.19) ಊರ್ಡಿಗೆರೆಗೆ ಬರಲಿದ್ದಾರೆ.

ಇದನ್ನೂ ಓದಿ:https://publicstory.in/ತುಮಕೂರು-ಗ್ರಾಮಾಂತರದಲ್ಲಿ-ಸ/

‌ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಯೂಸಬಲ್ ಮಾಸ್ಕ್ ಗಳನ್ನು ವಿತರಿಸುವ ಕೆಲಸದಲ್ಲಿ ಸುರೇಶ ಗೌಡರು ತೊಡಗಿದ್ದಾರೆ. ಕ್ಷೇತ್ರದಲ್ಲಿ ಒಂದು ಲಕ್ಷ ಮಾಸ್ಕ್ ವಿತರಿಸುವ ಗುರಿಯನ್ನು ಹಾಕಿಕೊಂಡಿದ್ದು ಈಗಾಗಲೇ 20/ಸಾವಿರದಷ್ಟು ಹಂಚಿಕೆ ಮಾಡಿದ್ದಾರೆ.

ಸಂಜೆ‌ 4ಕ್ಕೆ ನಡೆಯುವ ಮಾಸ್ಕ್ ಹಂಚಿಕೆ ಸಮಾರಂಭಕ್ಕೆ ಕಂದಾಯ ಸಚಿವರಾದ ಆರ್.ಆಶೋಕ್ ಚಾಲ‌ನೆ ನೀಡಿದರು. ಊರ್ಡಿಗೆರೆ ಪಂಚಾಯತಿ ವ್ಯಾಪ್ತಿಯಲ್ಲಿ‌ 20 ಸಾವಿರ ಮಾಸ್ಕ್ ಹಂಚಿಕೆಗೆ ಸಚಿವರು‌‌ ಚಾಲನೆ ನೀಡುತ್ತಿದ್ದಾರೆ.

ಮಾಜಿ‌‌ ಶಾಸಕ ಸುರೇಶಗೌಡ ಅವರ ಸ್ವಂತ ಹಣದಲ್ಲಿ ಈ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಇದೇ ಅಲ್ಲದೇ ರೈತರಿಂದ ತರಕಾರಿ, ಬಾಳೆಗೊನೆ ಖರೀದಿಸಿ ಅದನ್ನು ಕ್ಷೇತ್ರದ ಜನರಿಗೆ ಉಚಿತವಾಗಿ ನೀಡುತ್ತಿದ್ದಾರೆ.

ಇದೇ ಅಲ್ಲದೇ ಪಡಿತರ ಕಾರ್ಡ್ ಇಲ್ಲದ ಕುಟುಂಬಗಳಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ತರಕಾರಿ ಮತ್ತಿತರ ಸಾಮಾಗ್ರಿಗಳನ್ನು ಕೊಡುತ್ತಿದ್ದಾರೆ.

ಮಾಜಿ‌ ಶಾಸಕರ ಕೆಲಸಕ್ಕೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಡವರು, ರೈತರ ಕೈ ಹಿಡಿಯುವಂತೆ ಪ್ರಧಾನಿ, ಮುಖ್ಯಮಂತ್ರಿ ಅವರ ಸಲಹೆಯನ್ನು ಅಕ್ಷರಶಃ ಸುರೇಶ ಗೌಡ ಜಾರಿಗೆ ತಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈಗ ಕಂದಾಯ ಸಚಿವ ಆರ್.ಆಶೋಕ್ ಬರುತ್ತಿರುವುದು‌ ಗಮನ ಸೆಳೆದಿದೆ.

ಇದನ್ನು‌ ಓದಿ: https://publicstory.in/ಒಂದೇ-ದಿನ-5-ಟನ್-ತರಕಾರಿ-3‌-ಟನ್-ಬ/

ಹೋಗದಿರಿ ದೇವಳಕ್ಕೆ


ಶಶಿಕುಮಾರ ವೈ ಬಿ


ಹೋಗದಿರಿ ದೇವಳಕ್ಕೆ,
ದೇವರ ಪಾದಗಳ ಮೇಲೆ ಹೂಗಳನ್ನಿಡಲು.
ಮೊದಲು ತುಂಬಿಕೊಳ್ಳಿ ನಿಮ್ಮ ಮನೆಯ,
ಪ್ರೀತಿ, ಕರುಣೆಗಳ ಸುಗಂಧದಿಂದ.

ಹೋಗದಿರಿ ದೇವಳಕ್ಕೆ,
ದೇವನ ಪೀಠದ ಮುಂದೆ ಮೋಂಬತ್ತಿಗಳ ಉರಿಸಲು.
ಮೊದಲು ತೊಲಗಿಸಿ ನಿಮ್ಮ ಹೃದಯದಿಂದ,
ಪಾಪ, ಹಮ್ಮು, ಅಹಮ್ಮಿನ ಅಂಧಕಾರವ.


ಹೋಗದಿರಿ ದೇವಳಕ್ಕೆ,
ಪ್ರಾರ್ಥನೆಯಲ್ಲಿ ನಿಮ್ಮ ಶಿರವ ಬಾಗಿಸಲು.
ಮೊದಲು ಕಲಿಯಿರಿ, ಸಹವ್ಯಕ್ತಿಗಳ ಮುಂದೆ ನಮ್ರತೆಯಲ್ಲಿ ಬಾಗಲು,
ಹಾಗೆಯೇ ನಿಮಗೆ ಕೇಡೆಣಿಸಿದವರಿಗೂ ಲೇಸೆಣಿಸಲು.

ಹೋಗದಿರಿ ದೇವಳಕ್ಕೆ,
ಮೊಣಕಾಲೂರಿ ಪ್ರಾರ್ಥಿಸಲು.
ಮೊದಲು ಬಾಗಿರಿ, ಕೆಳಬಿದ್ದವನ ಮೇಲೆತ್ತಲು,
ಹಾಗೆಯೇ ನವ ಸಂತತಿಯ ಹೊಸಕದೆ ಬಲಪಡಿಸಲು.

ಹೋಗದಿರಿ ದೇವಳಕ್ಕೆ,
ಮಾಡಿದ ಪಾಪಕ್ಕೆ ಕ್ಷಮೆ ಬೇಡಲು.
ಮೊದಲು ಮನಸಾರೆ ಕ್ಷಮೆ ನೀಡಿ, ನಿಮಗೆ ನೋವುಣಿಸಿದವರಿಗೂ.


ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಠಾಗೂರರ ಆಂಗ್ಲ ಕವಿತೆ ‘Go not to the Temple’ನ ಕನ್ನಡ ಅನುವಾದ.
ಅನುವಾದಕರು : ಶಶಿಕುಮಾರ ವೈ. ಬಿ.

ಆಂಗ್ಲಭಾಷಾ ಉಪನ್ಯಾಸಕರು,
ಶೇಷಾದ್ರಿಪುರಂ ಪದವಿಪೂರ್ವ ಕಾಲೇಜು,
ತುಮಕೂರು.

ಕೃಷಿ ಕ್ಷೇತ್ರಕ್ಕೂ Covid- 19 ರ ಬಾಧೆ

0

ಉಜ್ಜಜ್ಜಿ ರಾಜಣ್ಣ


ತಿಪಟೂರು: ಬೆಳೆಗಳಿಗೆ ಕೀಟ ಬಾಧೆ ರೋಗಬಾಧೆ ನಿಭಾಯಿಸಿಕೊಂಡು ಮುಂದುವರಿದ ಕೃಷಿಯಲ್ಲಿ ಕೊರೊನವನ್ನು ಹೇಗೆ ನಿಭಾಯಿಸುವರೊ?

ಅಶ್ವಿನಿ ಮಳೆ ಮುಗಿದು ಇನ್ನೇನು ಭರಣಿ ಮಳೆ ಬೀಳಬೇಕು. ದೇಶವೇ ಲಾಕ್ ಡೌನ್‌ ಆಗಿದೆ. ಭರಣಿ ಮಳೆ ಬಂದರೆ ಧರಣೆಲ್ಲಾ ಹಸಿರು ಎಂಬುದು ರೈತರ ಮಾತು ಉಸಿಯಾಗದಿದ್ದರೆ ಮುಂಗಾರು ಬೀಜ ನೆಲಕ್ಕೆ ಬೀಳುತ್ತವೆ.

ಆಟೋಮೊಬೈಲ್ ಅಂಗಡಿಗಳು ಬಾಗಿಲು ತೆರೆಯದೆ ಟ್ರಾಕ್ಟರ್ ಬೇಸಾಯಕ್ಕೆ ನೆಟ್ಟೂ ಬೋಲ್ಟುಗಳೂ ದೊರೆಯದಂತಾಗಿವೆ.

ಮುಂದುವರಿದು ರೈತರಿಗೆ ಬೀಜ ಗೊಬ್ಬರ, ಕೀಟ ನಾಶಕಗಳೂ ಬೇಕಾಗಬಹುದು. ಅಂಗಡಿ ಮುಗ್ಗಟ್ಟುಗಳು ಮುಚ್ಚಿಹೋಗಿರುವುದರಿಂದ ಮುಂದೆನು ಅವರಿಗೆ ಎನ್ನುವಂತಾಯಿತು. ಕೃಷಿ, ತೋಟಗಾರಿಕೆ, ಇಲಾಖೆಗಳು ಬೀಜ, ಗೊಬ್ಬರ, ಯಂತ್ರೋಪಕರಣಗಳನ್ನು ನೀಡಬಹುದು.

ಆದರೆ, ಅವುಗಳ ದುರಸ್ತಿಯ ಸಾಮಗ್ರಿಗಳಿಗಾಗಿ ಯಂತ್ರೋಪಕರಣಗಳ ಬಿಡಿಭಾಗಗಳನ್ನು ಖರೀದಿಸಲು ಆಟೋಮೊಬೈಲ್ ಅಂಗಡಿಗಳು ಮತ್ತು ಕೃಷಿ ಯಂತ್ರಗಳ ದುರಸ್ತಿಗೆ ಆಟೋಮೊಬೈಲ್ ವರ್ಕ್ ಶಾಪ್ ಗಳು ತೆರೆಯದೆ ಕೃಷಿ ಕೆಲಸಗಳು ಪ್ರಾರಂಭದಲ್ಲಿಯೇ ಕುಂಠಿತವಾಗುವಂತಾದವು.

ನಟ್ ಬೋಲ್ಟ್ ಗಳೇನು ಕಾಸು ಕರೇಮಣಿ ಏನನ್ನೂ ಕೊಡದೆ ಬೇಲಿ ಒಳಗೆ ಉಚಿತವಾಗಿ ದೊರೆಯುವ ಕಿಚಡಿ ಬೆಣೆಗಳೇ? ಟ್ರಾಕ್ಟರ್ ಬೇಸಾಯಕ್ಕೆ ಮೂಲಭೂತವಾಗಿ ಬೇಕಾದ ಬಿಡಿಭಾಗಗಳನ್ನು ಖರೀದಿಸಲು ಬೇಸಾಯಗಾರರಿಗೆ ತೊಂದರೆ ಎದುರಾಯಿತು.

ಆಟೋಮೊಬೈಲ್ ಅಂಗಡಿಗಳನ್ನು ತೆರೆದರೆ ನಟ್ ಬೋಲ್ಟ್ ತೆಗೆದುಕೊಂಡೋಗಿ ನಮ್ಮೂರ ಬಡಗಿಗಳಿಗೆ ನೀಡಿದರೆ ಅವುಗಳನ್ನು ಅವರು ಜೋಡಿಸಿ ದುರಸ್ತಿ ಮಾಡಲು ಮರಮುಟ್ಟಿನ ನೇಗಿಲು ನೊಗ ಅಲ್ಲ.

ಬಡಗಿಗಳ ಹತ್ತಿರ ಇರೋದು ಉಳಿ, ಕೈಬಾಚಿ, ಕೊಡತಿ ಇತ್ಯಾದಿ. ಯಜ ತೋಡಿ ಉಗುಲಿಗೆ ಹೀಚಿನು ಗಳ ತೊಡಸಿ ಜಿಗಣೆ ಹೊಡೆದು ಕುಳಕಟ್ಟಿ ನೇಗಿಲನ್ನು ಆಯವಾಗಿ ಕಡದು ಬಳದು ನೋಡಿ ಸರಿಮಾಡಿ ಕೊಡಲು ಅದೇನು ಮರದ ನೇಗಿಲು ಅಲ್ಲ. ಕಬ್ಬಿಣದ ನೇಗಿಲು ಮತ್ತು ಟ್ರಾಕ್ಟರ್ ಕೂಡಿ ಇತರೆ ದುರಸ್ತಿ ಮಾಡಲು Spanner, cutting player, Screwdriver ಇತ್ಯಾದಿ ಹಿಡಿದು Mechanic ಬರಬೇಕು. Automobile work shop ಗಳು ತೆರೆಯದೆ ರೈತರು ಪರದಾಡುವಂತಾಗಿದೆ.

ಹೀಗಾಗಿ Covid- 19 ಕೊರೊನ ಬೇಸಾಯ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರಿತು. ಈಗ ಗೊತ್ತಾಗಿರಬಹುದು ಬೇಸಾಯದಾರರಿಗೆ; ಎಂತವೋ ಬ್ಯಾಸಾಯಕ್ಕೆ ನ್ಯಾರವಾಗೊ ಅಂತಹವು ಗೊಂತೆಗೆ ಒಂದು ಜೊತೆ ಎತ್ತು, ಒಂದು ಮರದ ನೇಗಿಲು ಮನೆ ಮುಂದೆ ಇದ್ದರೆ, ಆರಂಭದ ಭಂಗ ಪ್ರಾರಂಭದಲ್ಲಿಯಾದರೂ ಸರಿಹೋಗುತ್ತಿತ್ತಲ್ಲವೆ ಎಂಬುದು.

Automobile workshop ನುರಿತ ಕೆಲಸಗಾರರು ಮತ್ತು ಬೇಸಾಯಗಾರರು ಸದೂರವನ್ನು ಎರ್ಪಡಿಸಿಕೊಂಡು ಕೆಲಸ ಮಾಡುವುದು ಕಷ್ಟ ಸಾಧ್ಯವಾಗಿರುತ್ತದೆ

ಯುಗಾದಿ ಹಬ್ಬಕ್ಕೂ ಮಂಚೆ ವಿಶ್ವ ಮಹಿಳಾ ದಿನ ಹೋಗಿ ವಿಶ್ವ ಗುಬ್ಬಚ್ಚಿ ದಿನ, ವಿಶ್ವ ಅರಣ್ಯ ದಿನ, ವಿಶ್ವ ಜಲ ದಿನ, ವಿಶ್ವ ಹವಾಮಾನ ದಿನ, ವಿಶ್ವ ರಂಗಭೂಮಿ ದಿನ ಕಳೆದಂತೆ ಮಾರ್ಚ್ ಮುಗಿದ ನಂತರ ಎಪ್ರಿಲ್ ನಲ್ಲಿ ವಿಶ್ವ ಆರೋಗ್ಯ ದಿನ, ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ, ವಿಶ್ವ ಪರಂಪರೆಯ ದಿನ, ಬಸವ ಜಯಂತಿ ಮತ್ತು ವಿಶ್ವ ಭೂ ದಿನ.

ಅಶ್ವಿನಿ ಮತ್ತು ಭರಣಿ ಮಳೆ ಹಿಂದುಮುಂದು. ಮುಂಗಾರು ಬಿತ್ತನೆ ಕಾರ್ಯಗಳು ಮಳೆ ನಡೆಸಿಕೊಂಡರೆ ಬಿತ್ತಿದ ಬೀಜ ಭೂಮಿ ಮೇಲೆ ಬಂದು ಮೇಲೆಸಳಿಕ್ಕುವ ಕಾಲಕ್ಕೆ ಸರಿಯಾಗಿ ಬಸವನ ಜಯಂತಿ ಕಾಲ. ಕೆರೆ ಒಳಗೆ ಮೈತೊಳೆದು ಕೋಡಿಗೆ ಬಣ್ಣ ಕೋಡಣಸು ಬೆನ್ನು ಮೇಲೆ ಸಬರ ಹಾಕಿ ಪಾದಕ್ಕೆ ಚಿನ್ನ ಮುಟ್ಟಿಸಲು ಮನೆ ಮುಂದೆ ಒಂದು ಜೊತೆ ದನ ಕಟ್ಟಿಕೊಂಡು ಸಾಕಲಾರದ ಪರಿಸ್ಥಿತಿ ಪರಿಣಾಮವಾಗಿ ಟ್ರಾಕ್ಟರ್ ಬೇಸಾಯದ ಹೊಸ ಪರಂಪರೆ ಭಾರತದ ಬಹುತೇಕ ಹಳ್ಳಗಳಲ್ಲಿ ವಿಶೇಷವಾಗಿ ಬೆಳೆದು ಮುಂದುವರಿದಿದೆ.

ಮುಂಗಾರು ಮಳೆಯ ಹಂಗಾಮು ಹೊನ್ನಾರು ಹೂಡಲು ಬೇಸಾಯದ ಎತ್ತುಗಳಿಗೆ ಹಳ್ಳಿಗಳು ಹುಡುಕಾಟದಲ್ಲಿ ತೊಡಗುತ್ತವೆ. ಬಹುತೇಕ ಎಲ್ಲರ ಮನೆಯ ಮುಂದೆಯೂ ನೇಗಿಲು ಎಳೆಯಲು ಹೆಗಲಾಗದ ಸೀಮಹಸುಗಳು.

ಬಸವನ ಜಯಂತಿ ದಿನವೇ ವಿಶ್ವ ಪರಂಪರೆಯ ದಿನ. ಪರಂಪರೆಯ ಪುರಾತನ ಬೇಸಾಯದ ‘ಹಸೆ’ಯೇ ಹಳ್ಳಿಗಳಿಗೆ ಮರೆತು ಹೋಗಿದೆ. ಈಗಂತೂ Covid- 19 ಆರೋಗ್ಯ ಸಮಸ್ಯೆಗಳ ಜಾಗತಿಕ ವಿಪರೀತಗಳನ್ನು ಸೃಷ್ಟಿಸಿದೆ. ಕೂಡಿ ಊಟ ಮಾಡುವಂತಹ ಪರಿಸ್ಥಿತಿ ಇಲ್ಲ,

ಕೂಡಿ ಬೇಸಾಯದ ಬದುಕನ್ನೂ ಮಾಡಲಾರದ ಸ್ಥತಿ. ಕೂಡು ಬೇಸಾಯ ಮಾಡುವವರ ಪಾಡೇನೋ? ಕೃಷಿ ಮತ್ತು ಪಶುಪಾಲನಾ ಸಮುದಾಯಗಳು ಸಂಕಟಕ್ಕೀಡಾದವು. ಎಲ್ಲದಕ್ಕೂ ಸದೂರವನ್ನು ಅನುಸರಿಸಿ ಕೃಷಿ ಚಟುವಟಿಕೆಗಳನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯದಂತಾಯಿತು ಕೃಷಿಯಲ್ಲೂ ಕೊರೊನ ಸವಾಲು ಎದುರಾಯಿತು.

ಬೇಸಾಯಕ್ಕೆ ಮನೆ ಮಂದಿ ಎಲ್ಲರ ಸಹಾಯವೂ ಬೇಕಾಗಿತ್ತು. ಬೆಟ್ಟದ ಮೇಲಿನ ಕೊರಡಿನಿಂದ ಬೇಲಿ ಒಳಗಿನ ಕಿಚುಡಿ ಬೆಣೆವರೆವಿಗೂ ವ್ಯವಸಾಯ ಕಾಡು ಬೇಲಿಯ ನಿಸರ್ಗ ಸಂಬಂದ ಹೊಂದಿತ್ತು ಬೇಸಾಯ.

ಈಗ ಆಟೋಮೊಬೈಲ್ ಕ್ಷೇತ್ರ ಮತ್ತು ಪೆಟ್ಟ್ರೋಲ್ ಡೀಸೆಲ್ ಬಂಕ್ ಹಾಗು ವರ್ಕಷಾಪ್ ಗಳು ತೆರೆಯದಿದ್ದರೆ ಬಾರೆಯ ಮೇಲೆ ಬೇಸಾಯದ ಕೆಲಸಗಳು ನಿಂತು ಹೋಗುತ್ತವೆ. ಮೊದಲು ಈ ಹಿಂದೆ ಆಟೊಮೊಬೈಲ್ ಕ್ಷೇತ್ರಕ್ಕೂ ಮತ್ತು ಕೃಷಿ ಕ್ಷೇತ್ರಕ್ಕೂ ಕಬ್ಬಿಣದ ಅಂಗಡಿ ಹಾಗು ನೊಣದ ಸಂಬಂಧದಂತಿತ್ತು ಕಬ್ಬಿಣದ ಅಂಗಡಿಗಳಲ್ಲಿ ನೊಣಗಳಿಗೇನು ಸಂಬಂಧ ಎನ್ನುವಂತೆ.

ಕಾಡು, ಜಾತ್ರೆ, ಸಂತೆ ಮತ್ತು ಕುಲಮೆ ಮನೆ ಹಂತದಲ್ಲಿ ಬೇಸಾಯ ಕೆಲಸಗಳು ಕೈಗೂಡಿರುತಿದ್ದವು. ಐದಾರು ಬಾರೆ ಸುತ್ತಿದರೆ ಅಲ್ಲೊಂದು ಕಾಡು, ಅಲ್ಲೊಂದು ಜಾತ್ರೆ, ಅಲ್ಲೊಂದು ವಾರದ ಸಂತೆ, ಹತ್ತಾರು ಹಳ್ಳಿ, ಹಳ್ಳಿಗೆ ಒಂದೊಂದು ಕುಲುಮೆ ಮನೆಗಳು.

ದುಡ್ಡು ದುಗ್ಗಾಣಿ ಕೊಡಂಗಿರಲ್ಲಿಲ್ಲ, ಯಾರ ಮುಬ್ಬಾಯನೂ ಮಾಡಂಗಿರಲಿಲ್ಲ ಅರಣ್ಯಗಳಲ್ಲ ನೇಗಿಲು ಕೊರಡು, ಹೀಚಿನ ಕಡ್ಡಿ, ಅಟ್ಟಿನ ಗಳ ಮೊದಲಾದ ಮರ ಮುಟ್ಟಿನ ಸಾಮಗ್ರಿಗಳು ಉಚಿತವಾಗಿ ಯಾವ ಅಟಂಕೂ ಇಲ್ಲದೆ ದೊರೆಯುತಿದ್ದವು.

ಇವು ಹಲವಾರು ಸಲ ಕೊಪ್ಪಲು, ಬದು, ಉದಿ, ತೋಟದ ಬೇಲಿ ಸಾಲಿನಲ್ಲಿ ಬೇಸಾಯಗಾರರು ಬೆಳೆಸಿಕೊಂಡಿರುತಿದ್ದ ಕೃಷಿ ಉಪ ಅರಣ್ಯಗಳೊಳಗೆ ಪುಗುಸಟ್ಟಗೇ ಕೈ ಸೇರುತಿದ್ದವು. ಬೇಲಿಗಳಂತೂ ನಾವೇನೂ ಬೇಡವೆ ನಾವೂ ತಿಂಗಳು ತನಕ ಆಗುತೀವಿ ನಿಮ್ಮ ಬೇಸಾಯದ ಆಸರೆಗೆ. ಕಿಚುಡಿ ಬೆಣೆಗಾದರೂ ನಮ್ಮ ಬುಡದಲ್ಲಿ ಹುಡುಕಲು ನೀವು ಬರಲೇಬೇಕು.

ಬ್ಯಾಸಾಯದ ದನಗಳುನ್ನು ಮೇಯಿಸಲು ನಮ್ಮ ಒಬ್ಬೆಗೆ ನೀವು ಬರಲೇ ಬೇಕು ಎನ್ನುವಂತಿರುತಿದ್ದವು. ಕೈಬೀಸಿ ಕರೆಯುತಿದ್ದ ಕೊಪ್ಪಲು ಬೇಲಿ ಕಾಡುಗಳು ಕಣ್ಣಳತೆಯ ಕಲ್ಲೆಸೆಯುವ ದೂರದಲ್ಲೇ ಇರುತಿದ್ದವಲ್ಲ. ಬೇಸಾಯದ ಜೊತೆಗೆ ಮನೆಯ ಮರಮುಟ್ಟುಗಳನ್ನು ಬೇಲಿ ಮತ್ತು ಕೊಪ್ಪಲು ಕಾಡುಗಳೇ ಒದಗಿಸುತ್ತಿದ್ದವು. ಪಿಳ್ಳೆಗುಜ್ಜು, ತೀರು, ತೊಲೆ, ಅಡ್ಡೆ, ಬೆಲಗು, ಕವೆ, ಜವಿ, ಹಲಗೆ, ನಿಲಪಟ್ಟೆ ಎತ್ತನ ಗಾಡಿಗೆ ಹಾರೆಕೋಲು, ಒಂಕಿ, ಪಾರಿ ಮೂಕು, ಅಚ್ಚು ಬೇರೆ ಸಾಮಾನುಗಳಾದ ಕೊಡತಿ, ರೊಟ್ಟಿಮರಗೆ, ಸಾವಿಗೆ ಒರಳು ಇವುಗಳಿಗಾಗಿಯೂ ಬೇಲಿ ಮತ್ತು ಕೊಪ್ಪಲು ಕಾಡುಗಳನ್ನೇ ಹೆಚ್ಚಾಗಿ ಅವಲಂಬಿಸಲಾಗಿರುತಿತ್ತು.

ಮುಖ್ಯವಾಗಿ ದೊರೆಯುತ್ತಿದ್ದ ಮರಮಂಡಿಗಳಿಂದ ನೇಗಿಲು, ನೊಗ, ಮೇಣಿ, ಹಿಡಿಕಾಯಿ, ಹೀಚು ಮೊದಲಾದ ಕೃಷಿ ಪರಿಕರಗಳನ್ನಾಗಿ ಮಾಡಿಕೊಳ್ಳಲು ಅನುಕೂಲಕರ ವಾದ ಅಡವಿಯ ವಾತಾವರಣ ಹತ್ತಿರದಲ್ಲೇ ನಿಸರ್ಗ ನಿರ್ಮಿತವಾಗಿರುತ್ತಿತ್ತು ಕೊಪ್ಪಲು ಕಾಡುಗಳಲ್ಲಿ. ಹೊಲಗಳು ಸಾಧಾರಣವಾದ ಕೃಷಿ ಅರಣ್ಯ ಪ್ರದೇಶಗಳಾಗಿರುತಿದ್ದವು.

ಈಗಿನ ಕೃಷಿ ಸಂಬಂಧAutomobile company, Automobile workshop, Seed’s and Fertilizer company ಗಳ ಭಾಗವಾಗಿದೆ.

ತಾಯಿ ಪ್ರೀತಿಗೆ ಬೆಲೆ ಕಟ್ಟಲಾದೀತೆ….?

2

ರಂಗನಕೆರೆ ಮಹೇಶ್


ಬಹು ದಿನಗಳ ಹಿಂದಿನ ಘಟನೆ…ನಾನು ಕಾರ್ಯ ನಿಮಿತ್ತ ರಾಯದುರ್ಗಕ್ಕೆ ಹೋಗಬೇಕಾಗಿತ್ತು. ನೇರವಾಗಿ ರಾಯದುರ್ಗಕ್ಕೆ ಬಸ್ ಇಲ್ಲದ ಕಾರಣ ಹುಳಿಯಾರಿನಿಂದ ಬಳ್ಳಾರಿಗೆ ಸರ್ಕಾರಿ ಬಸ್ ಹತ್ತಿ ಹೊರಟೆ. ಹಾನ್ಗಲ್ ಕ್ರಾಸ್ನಿಂದ ಮೊಳಕಾಲ್ಮೂರು ಮೂಲಕ ರಾಯದುರ್ಗಕ್ಕೆ ಹೋಗಬಹುದು.

ಸರಿ ಹಾನ್ಗಲ್ ಕ್ರಾಸ್ಗೆ ಟಿಕೇಟ್ ಪಡೆದು ಬಸ್ ಇಳಿದೆ. ನನ್ನನ್ನು ಬಿಟ್ಟರೆ ಮತ್ತಾರು ಬಸ್ನಿಂದ ಇಳಿಯಲಿಲ್ಲ. ನಾನೊಬ್ಬನೇ ಇಳಿದುದನ್ನು ಗಮನಿಸಿದ ಸುಮಾರು 85ರ ಪ್ರಾಯದ ಅಜ್ಜಿಯೊಬ್ಬರು ನನ್ನ ಬಳಿ ಹಣದ ಸಹಾಯ ಕೇಳಿದರು.

ಆದರೆ ನನ್ನಲ್ಲಿ ಚಿಲ್ಲರೆಯಿಲ್ಲದ ಕಾರಣ ನನ್ನ ಬಳಿ ಹಣ ಇಲ್ಲ ಎಂದೇ…ಆದ್ರೆ ಆ ಅಜ್ಜಿ ತನ್ನ ಹಸಿವನ್ನು ಮೂಕ ವೇದನೆಯ ಮೂಲಕ ತೋರ್ಪಡಿಸಿ ಮುಂದೆ ಹೋಯಿತು.

ಸಮಯ ಆಗಲೇ 3 ರ ಗಡಿ ದಾಟಿದ್ದರಿಂದ ನಾನು ಏನಾದರೂ ತಿಂದು ಅಜ್ಜಿಗೆ ಏನಾದರೂ ಕೊಡಿಸೋಣ ಎಂದು ಸಹ ಅಲ್ಲಿಯೇ ಇದ್ದ ಡಾಬಾ ಬಳಿ ಹೋದೆ. ಅಜ್ಜಿಯನ್ನು ಸಹ ಕರೆದೊಯ್ದು ಅಜ್ಜಿಗೆ ತಿಂಡಿ ಕೊಡಲು ಹೇಳಿದೆ.

ಆದ್ರೆ ಸಮಯ ಮೀರಿದ್ದರಿಂದ ಒಂದೇ ಒಂದು ಪ್ಲೇಟ್ ಅನ್ನ ಇರುವುದಾಗಿ ಡಾಬಾ ಮಾಲೀಕ ಹೇಳಿದ. ನನ್ನದು ಹೇಗೋ ಆಗುತ್ತದೆ ಅದನ್ನೇ ಕೊಡುವಂತೆ ತಿಳಿಸಿ ಹಣ ಕೊಟ್ಟು ಮತ್ತೆ ಬಸ್ ನಿಲ್ಲುವ ಸ್ಥಳದಲ್ಲಿ ಬಂದು ನಿಂತೆ. ಆದರೆ ಅಲ್ಲಿಂದ ಖಾಸಗಿ ಬಸ್ ಗಳ ಸಂಚಾರವಾಗಿರುವುದರಿಂದ ಬಸ್ ಬರುವುದು ತಡವಾಯಿತು.

ಅತ್ತಿತ್ತ ನೋಡುತ್ತಾ ನಿಂತಿರುವ ವೇಳೆ ಮತ್ತೆ ಅಜ್ಜಿಯ ಕಡೆ ಗಮನ ಹರಿಯಿತು. ಅಜ್ಜಿ ಅನ್ನಸಾರನ್ನು ಹಿಡಿದು ಊಟ ಮಾಡದೆ ಮುಂದಕ್ಕೆ ಹೋಗುತ್ತಿತ್ತು.

ಅರೆ ಹೊಟ್ಟೆ ಹಸಿವಾಗಿದೆ ಎಂದು ಕೇಳಿದ ಅಜ್ಜಿ ಎಲ್ಲಿಗೆ ಹೋಗುತ್ತದೆ ಎಂದು ಹಿಂಬಾಲಿಸಿ ಹೋದೆ. ಅದೇ ರಸ್ತೆಯ ಮರದ ಬುಡದಲ್ಲಿ ಜೀವವಿದ್ದರೂ ನಿರ್ಜಿವ ವಸ್ತುವಿನಂತೆ ಮಲಗಿದ್ದ ವ್ಯಕ್ತಿಗೆ ತುತ್ತು ಕೊಡಲು ಅಜ್ಜಿ ಮುಂದಾಗಿತ್ತು. ಆದ್ರೆ ಆತ ಅಜ್ಜಿಯನ್ನು ದೊಣ್ಣೆಯಿಂದ ಹೊಡೆಯುತ್ತಾ ಕೆಟ್ಟ ಭಾಷೆಯಲ್ಲಿ ಬೈಗುಳ ಹಾಕುತ್ತಾ ಅಜ್ಜಿಗೆ ಹಿಂಸೆ ಕೊಡುತ್ತಿದ್ದ.

ಇದ್ರ ಪರಿವೆಯೇ ಇಲ್ಲದೆ ಅಜ್ಜಿ ತುತ್ತು ಉಣಿಸುತ್ತಾ ಅಳುತ್ತಾ ಕೊಡುವ ಹಿಂಸೆಯನ್ನು ಸಹಿಸಿಕೊಂಡು ಏನೇನೋ ರೋಧಿಸುತ್ತಿತ್ತು. ಕುತೂಹಲ ತಡೆಯಲಾರದೆ ಅಲ್ಲಿಯೇ ಇದ್ದ ಅಂಗಡಿಯವರನ್ನು ಅಜ್ಜಿಗೂ ಆ ವ್ಯಕ್ತಿಗೆ ಇರುವ ಸಂಬಂದ ಏಕೆ ಈ ಅಜ್ಜಿ ಆತ ಅಷ್ಟು ಹಿಂಸೆ ನೀಡಿದರೂ ಸುಮ್ಮನಿದೆ ಎಂದು ಕೇಳಿದೆ.

ಆತ ಆ ಅಜ್ಜಿಯ ಒಬ್ಬನೇ ಮಗ. ಮಧ್ಯಮ ವರ್ಗದ ಕುಟುಂಬವಾಗತ್ತು. ಆದರೆ ಇತ್ತೀಚೆಗೆ ಗಂಡ ಹೆಂಡತಿ ಮಧ್ಯೆ ಯಾವುದೋ ವಿಷಯಕ್ಕೆ ಮನಸ್ತಾಪ ಉಂಟಾಗಿ ಸಂಸಾರ ಬೇರೆಯಾಗಿದೆ. ಇದರಿಂದ ಬೇಸತ್ತು ಮಗ ಹುಚ್ಚನಾಗಿ ಹೋಗಿದ್ದಾನೆ.

ತನ್ನ ಮಗನ ಸ್ಥಿತಿ ನೋಡಿ ಅಜ್ಜಿ ತನ್ನ ಗ್ರಾಮವನ್ನು ತೊರೆದು ಹುಚ್ಚನಾಗಿರುವ ಮಗನ ಯೋಗಕ್ಷೇಮ ನೋಡಿಕೊಳ್ಳುತ್ತಿದೆ. ಯಾರು ಏನೇ ಕೊಟ್ಟರೂ ಅದನ್ನು ತನ್ನ ಮಗನಿಗೆ ತಿನ್ನಿಸುತ್ತದೆ.

ಮುಂದೆ ಎಂದಾದರೂ ಮಗ ಸರಿಯಾಗ ಬಹುದೆಂಬ ಆಸೆಯಿಂದ ಅಜ್ಜಿ ಕಾಲ ನೂಕುತ್ತಿದೆ ಎಂದು ವಿವರಿಸಿದರು. ಇದನ್ನೇ ಅಲ್ಲವೇ ತಾಯಿ ಪ್ರೀತಿ ಎನ್ನುವುದು.. ತಂದೆ-ತಾಯಂದಿರು ಮನೆಯಲ್ಲಿದ್ದರೆ ತೊಂದರೆಯಾಗುತ್ತದೆ ಎಂದು ವೃದ್ದಾಶ್ರಮಗಳಿಗೆ ಸೇರಿಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೆ ಇಂತಹ ಪ್ರಸಂಗಗಳು ಪಾಠವಾಗಬೇಕಾಗಿದೆ.

ಎರಡು ‘ಪ್ರೂಫ್ ಮಿಸ್ಟೇಕ್’ ಕೃತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವು…

ಜಿ.ಎನ್.ಮೋಹನ್


ನಾನು ಕಲಬುರ್ಗಿಗೆ ಕಾಲಿಟ್ಟು ಕೆಲವು ತಿಂಗಳಷ್ಟೇ ಆಗಿತ್ತು.

‘ಲೋಹಿಯಾ ಪ್ರಕಾಶನ’ದ ಚನ್ನಬಸವಣ್ಣ ಅವರು ಫೋನ್ ಮಾಡಿ ನಿಮಗೆ ಒಂದು ಹಸ್ತಪ್ರತಿ ಕಳಿಸ್ತಿದ್ದೇನೆ ಅದನ್ನು ಓದಿ ಪ್ರಿಂಟ್ ಮಾಡಬಹುದಾ ಹೇಳಿ ಎಂದು ಒತ್ತಾಯಿಸಿದರು.

ಅವರು ತಿಳಿಸಿದಂತೆ ನಾಲ್ಕೈದು ದಿನಗಳಲ್ಲಿ ಸಾಕಷ್ಟು ದೊಡ್ಡದಾದ ಹಸ್ತಪ್ರತಿಯೇ ಬಂತು.
ನೋಡಿದರೆ ಅದು ನಮ್ಮ ಎಚ್. ನಾಗವೇಣಿಯ ‘ಗಾಂಧಿ ಬಂದ’ ಕಾದಂಬರಿಯ ಹಸ್ತಪ್ರತಿ.

ಆಗಿನ್ನೂ ಕಲಬುರ್ಗಿಯ ನೆಲದ ಸೊಗಡಿಗೆ ಹೊಂದಿಕೊಳ್ಳುತ್ತಿದ್ದ ನನಗೆ ಕರಾವಳಿಯ ಸೆಳೆತ ಬಿಟ್ಟಿರಲಿಲ್ಲ.
ಐದು ವರ್ಷಗಳ ಕಾಲ ಮಂಗಳೂರಿನಲ್ಲಿದ್ದು ಇಡೀ ಅವಿಭಜಿತ ದಕ್ಷಿಣ ಕನ್ನಡವನ್ನು ಬಿರುಗಾಳಿಯಂತೆ ಸುತ್ತಿದ್ದ ನನಗೆ ಕಡಲಿಲ್ಲದ ಊರಲ್ಲಿ ಇರುವುದಕ್ಕೆ ಮೈ ಮನಸ್ಸನ್ನು ಒಗ್ಗಿಸಿಕೊಳ್ಳುತ್ತಿದ್ದೆ.
ಆಗ ಸಿಕ್ಕಿದ್ದೇ ಇದು.

ಓದಲು ಕುಳಿತವನು ಆ ಹಸ್ತಪ್ರತಿ ಹಿಡಿದೇ ಹಗಲು ರಾತ್ರಿಗಳನ್ನು ಒಂದು ಮಾಡಿದೆ.
ಕೊನೆ ಪುಟ ಮಗುಚಿದಾಗ ‘ವಾಹ್!’ ಎನ್ನುವ ಉದ್ಘಾರ ಹೊರಬಿತ್ತು.
ನಾಗವೇಣಿ ತಮ್ಮ ಇಡೀ ಬದುಕನ್ನು ಅರೆದು ಸೃಷ್ಟಿಸಿದ್ದಾರೇನೋ ಎನ್ನುವಂತಿತ್ತು ‘ಗಾಂಧಿ ಬಂದ’.

ಮೊದಲು ಉತ್ತರ ಕನ್ನಡ, ದಕ್ಷಿಣ ಕನ್ನಡ ಎರಡೂ ಒಂದೇ ಆಗಿತ್ತು. ಅದಕ್ಕೆ ‘ಕನ್ನಡ ಜಿಲ್ಲೆ’ ಎಂದು ಕರೆಯುತ್ತಿದ್ದರು.
ಆ ಕನ್ನಡ ಜಿಲ್ಲೆಗೆ ಮೂರು ಬಾರಿ ಗಾಂಧಿ ಭೇಟಿ ಕೊಡುವ ಹಿನ್ನೆಲೆಯಲ್ಲಿ ಜರುಗುವ ಕಥೆ ಇದು.
ನಾನು ಇನ್ನಿಲ್ಲದಂತೆ ಮಿಸ್ ಮಾಡಿಕೊಳ್ಳುತ್ತಿದ್ದ ಇಡೀ ಕಡಲ ತೀರ ಈ ಕಾದಂಬರಿಯ ಮೂಲಕ ನನ್ನ ಮಡಿಲಿಗೆ ಬಂದು ಬಿದ್ದಿತ್ತು.
ಅಲ್ಲಿಯ ಕಡಲು, ಬದುಕು ಎಲ್ಲವೂ ನನ್ನನ್ನು ಮತ್ತೆ ತವರಿಗೆ ಎಳೆದುಕೊಂಡು ಹೋಗಿ ನಿಲ್ಲಿಸಿತ್ತು.

ಅದನ್ನು ಓದಿ ಥ್ರಿಲ್ ಆದ ನಾನು ಆ ಥ್ರಿಲ್ ಇತರರಿಗೂ ದಾಟಿಸಬೇಕೆಂದುಕೊಂಡು ನನ್ನ ಆಯ್ದ ಗೆಳೆಯರಿಗೆ ನೀಡಿದೆ.
ಆ ಕಾದಂಬರಿ ಕೈದಾಟಿದ ಎರಡು ದಿನಕ್ಕೆ ನನ್ನ ಬಳಿ ವಾಪಸ್ ಬಂತು ‘ಬರೀ ಪ್ರೂಫ್ ಮಿಸ್ಟೇಕು ಸಾರ್’ ಎನ್ನುವ ಷರಾದೊಂದಿಗೆ.
ನಾನೂ ಓದಿದ್ದೆನಲ್ಲಾ, ಏನಿತ್ತು ಪ್ರೂಫ್ ಮಿಸ್ಟೇಕ್ ಅದರಲ್ಲಿ ಎಂದು ಕ್ಷಣ ಗೊಂದಲಕ್ಕೊಳಗಾದೆ.
ಆಮೇಲೆ ಗೊತ್ತಾಯಿತು. ತುಳುನಾಡಿನ ಬಹುತೇಕ ಪದ ಪ್ರಯೋಗಗಳು ಅಲ್ಲಿನವರಿಗೆ ಅರ್ಥವೇ ಆಗಿರಲಿಲ್ಲ.
ಒಂದೇ ಏಟಿಗೆ ಪ್ರೂಫ್ ಮಿಸ್ಟೇಕ್ ಎನ್ನುವ ತೀರ್ಮಾನಕ್ಕೆ ಬಂದಿದ್ದರು.

ಇದಾಗಿ ಮೂರು ವರ್ಷ ಕಳೆಯಿತು.
ನಾನು ಕಲಬುರ್ಗಿಯಲ್ಲಿ ಮೂರು ವರ್ಷ ಇದ್ದು ಕೆಲಸ ಬದಲಿಸಿ ಮತ್ತೆ ಕರಾವಳಿಯನ್ನೇ ಆಯ್ಕೆ ಮಾಡಿಕೊಂಡು ಬಂದಿದ್ದೆ.

ಬಂದಿನ್ನೂ ಕೆಲ ತಿಂಗಳಾಗಿರಲಿಲ್ಲ
ಮತ್ತೆ ಲೋಹಿಯಾ ಚನ್ನಬಸವಣ್ಣ ಅವರ ಕರೆ
ಒಂದು ಹಸ್ತಪ್ರತಿ ಕಳಿಸ್ತೇನೆ ಓದಿ ಮುದ್ರಣಕ್ಕೆ ತೆಗೆದುಕೊಳ್ಳಬಹುದಾ ಹೇಳಿ ಅಂತ.ಜ

ಸರಿ ಅಂದ ಮೂರನೆಯ ದಿನಕ್ಕೆ ಹಸ್ತಪ್ರತಿ ಬಂತು.
ನೋಡುತ್ತೇನೆ ಗೀತಾ ನಾಗಭೂಷಣರ ‘ಬದುಕು’ ಕಾದಂಬರಿ.

ಮತ್ತೆ ನಾನು ಹಸ್ತಪ್ರತಿ ಹಿಡಿದು ಹಗಲು ರಾತ್ರಿಗಳನ್ನು ಒಂದು ಮಾಡಿದೆ.
ಓದಿ ಮುಗಿಸಿದಾಗ ಸಾಕಷ್ಟು ದಿನ ಅದು ನನ್ನೊಳಗೆ ಆಡುತ್ತಲೇ ಇತ್ತು.
ಅದರೊಳಗೆ ನನ್ನ ಕಲಬುರ್ಗಿಯ ನಿಟ್ಟುಸಿರಿತ್ತು.
ಅಲ್ಲಿಯ ನೋವು ಪುಟ ಪುಟದಲ್ಲೂ ಹೊರಳಿತ್ತು.

ನನಗೆ ಗೀತಕ್ಕನ ಕೃತಿ ಎಷ್ಟು ಇಷ್ಟವಾಯಿತೋ ಅಷ್ಟೇ ನಾನು ಮಿಸ್ ಮಾಡಿಕೊಳ್ಳುತ್ತಿದ್ದ ಕಲಬುರ್ಗಿ ನನ್ನ ಕೈಗೆ ಮತ್ತೆ ಸಿಕ್ಕಿದ್ದು ಇನ್ನಷ್ಟು ಸಂತೋಷಕ್ಕೆ ಕಾರಣವಾಗಿತ್ತು.

ಕಲಬುರ್ಗಿ ಎನ್ನುವುದು ಬರೀ ಶರಣಬಸವೇಶ್ವರ, ಬಂದೇ ನವಾಜ್ ಅಲ್ಲ.. ಮಾಪುರ ತಾಯಿಯ ಮಕ್ಕಳ ತವರು ಕೂಡಾ.
ಇಂತಹ ಜಿಲ್ಲೆಯ ಮೂಲೆ ಮೂಲೆ ಸುತ್ತಿದ ನನ್ನೊಳಗೆ ಅವರ ವೇದನೆಯ ಎಳೆಯೊಂದು ಸದಾ ಜೊತೆಯಾಗಿತ್ತು.
ಹಾಗಾಗಿ ಈ ಕೃತಿ ನನ್ನ ಇನ್ನೊಂದು ತವರಿನ ಗಂಧವನ್ನು ತೀಡಿತ್ತು

ಇದರಿಂದ ಥ್ರಿಲ್ ಆದ ನಾನು ಇದನ್ನು ಬೇರೆಯವರೂ ಓದಬೇಕೆಂದು ಅಲ್ಲಿಯ ಮುದ್ರಕನೊಬ್ಬನಿಗೆ ಕೊಟ್ಟೆ.
ಆಶ್ಚರ್ಯ ಆದರೂ ನಿಜ ಆತ ಎರಡೇ ದಿನದಲ್ಲಿ ‘ಸಾರ್ ಇದರಲ್ಲಿ ಬರೀ ಪ್ರೂಫ್ ಮಿಸ್ಟೇಕ್’ ಎಂದು ವಾಪಸು ಕೊಟ್ಟ.

ನನಗೆ ಇಂದಿಗೂ ಅಚ್ಚರಿ ಎರಡು ಮಹತ್ಕೃತಿಗಳು, ಎರಡು ಭಿನ್ನ ಸಂಸ್ಕೃತಿಯ ಲೋಕದಲ್ಲಿ ‘ಪ್ರೂಫ್ ಮಿಸ್ಟೇಕ್’ ಕೃತಿಗಳಾಗಿ ಹಣೆಪಟ್ಟಿ ಹೊಂದಿದ್ದವು.
ಆದರೆ ಎರಡೂ ಆಯಾ ನೆಲದ ಮಿಸ್ಟೇಕ್ ಗಳಿಗೆ ಖಂಡಿತಾ ಪ್ರೂಫ್ ಒದಗಿಸುತ್ತಿದ್ದವು.

—-
ಹೇಳಲು ಮರೆತೆ..

ನಾನು ಹಸ್ತಪ್ರತಿಯಲ್ಲಿಯೇ ಓದಿದ, ಮುದ್ರಿಸಲೇಬೇಕು ಎಂದು ಷರಾ ಬರೆದ ಎರಡೂ ಕೃತಿಗಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದು ಬೀಗಿದವು.

‘ಬದುಕು’ ಕೇಂದ್ರ ಸಾಹಿತ್ಯ ಅಕಾಡೆಮಿ, ‘ಗಾಂಧಿ ಬಂದ’ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಪಾತ್ರವಾದವು.

ಗಾಂಧಿ ಬಂದ ಕೃತಿಯ ಮೊದಲ ಮುದ್ರಣಕ್ಕೆ ಬೆನ್ನುಡಿಯನ್ನು ನಾನೇ ಬರೆದಿದ್ದೆ.