Thursday, February 26, 2026
Google search engine
Home Blog Page 256

ಕರೊನಾ ಪೀಡಿತ 10 ತಿಂಗಳ ಮಗು ಗುಣಮುಖ: ವೈದ್ಯರಲ್ಲಿ ಮಂದಹಾಸ

Publicstory.in


ಮಂಗಳೂರು: 10 ತಿಂಗಳ ಮಗುವಿನ ಕರೋನಾ ಪ್ರಕರಣವು, ರಾಜ್ಯದಲ್ಲೇ ವಿಶಿಷ್ಟ ಪ್ರಕರಣವಾಗಿತ್ತು. ಕೇವಲ ಎದೆ ಹಾಲು ಕುಡಿಯುವ ಪುಟ್ಟ ಕಂದನಿಗೆ ಕರೋನಾ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿತ್ತು.

ಪುಟ್ಟ ‌ಮಗುವಿನ‌ ಐಸೋಲೇಶನ್ ನೊಂದಿಗೆ, ಚಿಕಿತ್ಸೆ ನೀಡುವುದು ಬಹಳ ಸೂಕ್ಷ್ಮವಾಗಿತ್ತು. ವೈದ್ಯರು ಈ ಸವಾಲನ್ನು ಬಹಳ ನಾಜೂಕಾಗಿ ನಿರ್ವಹಿಸಿದ್ದು, ವೆನ್ ಲಾಕ್ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡಿ, ಮಗುವನ್ನು ಗುಣಮುಖಗೊಳಿಸಿದ್ದಾರೆ. ಇದು ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೂ ಖ್ಯಾತಿ ತಂದಿದೆ.

ಅದೇ ರೀತಿ, ಮಗುವಿನ ಗ್ರಾಮದಲ್ಲಿ ಯಾರಿಗೂ ಕರೋನಾ ಹರಡದಿರುವುದು ಸಮಾಧಾನಕರ ವಿಷಯವಾಗಿದೆ. ಕರೋನಾ ದೃಟಪಟ್ಟ ನಂತರ ಇಡೀ ಸಜೀಪನಡು ಗ್ರಾಮವನ್ನು ಸಂಪೂರ್ಣ ಸೀಲ್ ಮಾಡಲಾಗಿತ್ತು. ಗ್ರಾಮಸ್ಥರು ಬಹಳ ಉತ್ತಮ‌ ಸಹಕಾರ ನೀಡಿದ್ದಾರೆ.

ಈ ಅವಧಿಯಲ್ಲಿ ಜಿಲ್ಲಾಡಳಿತ ಗ್ರಾಮಸ್ಥರಿಗೆ ಎಲ್ಲಾ ಅಗತ್ಯ ಸಾಮಾಗ್ರಿಗಳು, ಸೌಲಭ್ಯಗಳನ್ನು ಮನೆ ಬಾಗಿಲಿಗೆ‌ ಒದಗಿಸಿದೆ.

ಮಗುವು ಸಂಪೂರ್ಣ ಗುಣಮುಖ ವಾಗಿ, ಇಂದು ಆಸ್ಪತ್ರೆ ಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದೆ.

ಮಗುವಿನ ತಾಯಿ ಹಾಗೂ ಅಜ್ಜಿಯ ಪರೀಕ್ಷಾ ವರದಿಗಳು ನೆಗೆಟಿವ್ ಆಗಿರುತ್ತದೆ. ಇವರೂ ಕೂಡಾ ಇಂದು ಡಿಸ್ಚಾಜ್೯ ಆಗಿರುತ್ತಾರೆ.
ಇದುವರೆಗೆ ದ.ಕ. ಜಿಲ್ಲೆಯ 12 ಕರೋನಾ‌ ಪಾಸಿಟಿವ್ ಪ್ರಕರಣಗಳಲ್ಲಿ 6 ಮಂದಿ ಗುಣಮುಖರಾಗಿ, ಬಿಡುಗಡೆಗೊಂಡಿದ್ದು, ಶೇಕಡಾ 50 ಪ್ರಗತಿಯಾಗಿದೆ.

ಈ ವಾರ ಪೂರ್ತಿ ಅಂದರೆ ಏಪ್ರಿಲ್ 5 ರಿಂದ 11 ರವರೆಗೆ‌ ದ.ಕ. ಜಿಲ್ಲೆಯಲ್ಲಿ ಯಾವುದೇ ಹೊಸ ಕರೋನಾ ಪ್ರಕರಣಗಳು ದೃಢಪಟ್ಟಿರುವುದಿಲ್ಲ. ಇದು ಜಿಲ್ಲೆಯ ಮಟ್ಟಿಗೆ ಆಶಾದಾಯಕ ಸಂಗತಿ.

ನವಿಲು

0

ದೇವರಹಳ್ಳಿ ಧನಂಜಯ


ನಾ,
ಗರಿಬಿಚ್ಚಿದ ನವಿಲು.
ಬೆನ್ನ ಹಿಂದೆ ಅಗಣಿತ ಕಣ್ಣುಗಳು.
ದೃಷ್ಟಿಯೂ ಇಲ್ಲ ದಾರಿಯೂ ಇಲ್ಲ.

ಮೋದ ಮೊದಲು,
ಎದೆಯಲ್ಲಿ, ರಾಗ ಪಲ್ಲವಿಸಿದಾಗ,
ಗರಿಗೆದರುತ್ತಿದ್ದೆ.
ಝುಂ! ಎನುವ ಮೈ ಪುಳಕಕ್ಕೆ.

ಇಳೆಗಿಳಿವ ಮಳೆ,
ಮೊಳೆವ ಚಿಗುರು,
ಇಳಿ ಸಂಜೆಯ ಸೂರ್ಯನ ತಂಪು,
ಖುಷಿಗೆ ಇಂಬು ಕೊಡುತ್ತಿದ್ದವು.

ಆಗ ನಾನು
ಸಂಭ್ರಮಕ್ಕೆ ಸರದಾರ.
ಲೋಕಕೆ ಕೈ ಚಾಚಿದ. ಬಣ್ಣದ
ಕನಸ ಗರಿಗಳು. ಭಾರವಾಗುತ್ತಿರಲಿಲ್ಲ.

ಕುಣಿವ ನವಿಲಿಗೆ
ನಿಲುವುಗನ್ನಡಿ ಇಟ್ಟು,
ಕಣ್ಣ ನೋಟವ ಕೊಂದುಬಿಟ್ಟರು.
ಉಳಿದದ್ದು ಖುಷಿಯ ಹುಸಿಗಂಟು.

ಗರಿ ಉದುರುತ್ತಿವೆ,
ಕಾಲು ಸೋಲುತ್ತಿವೆ,
ಆದರೂ ಕುಣಿಯಲೇ ಬೇಕು.
ಲೋಕದ ತೇವುಲಿಗೆ, ಮೂರೋತ್ತು.

ನನಗೆ ಗೊತ್ತು.
ಉದುರಿದ ಗರಿ, ಈಗ ಅಲಂಕಾರಿಕ ವಸ್ತು.
ನಾನೀಗ ಪುಕ್ಕವಿಲ್ಲದ ನವಿಲು.
ಕನಸು ಬತ್ತಿದ ಕಡಲು.

ನಾನರಿಯೆ ನಿನ್ನ ಪ್ರೇಮದ ಪರಿಯ…!!!

ಮಮತಾ ಗೌಡ


ಬದುಕಿದರೆ ಹೀಗೆಯೇ ಬದುಕಬೇಕು ಎಂದು ನಿರ್ಧರಿಸಿದ್ದನೇನೋ! ಅಂವ ಆಕೆಯನ್ನು ಮೋಹಿಸಿದ. ಆಕೆಯೊಳಗೆ ಕನಸುಗಳನ್ನು ಹುಟ್ಟು ಹಾಕಿದ, ಕಳೆದೇಳು ಜನುಮದ ಫಲ ನೀನೆಂದ. ಎದ್ದು ಬಿದ್ದು ಕುಣಿದಾಡಿತ್ತು ಆಕೆಯ ಮನಸ್ಸು. ಅರಿಯದ ಹುಡುಗಿಗೆ ಅರೆ ಅಮಲೇರಿಸಿ ಈಗ ಈತ ಸುಮ್ಮನಾದ!

ಹೆಸರಿಗಾಕೆ ಆತನ ಪತ್ನಿ, ಮನದನ್ನೆ. ಒಂದು ದಿನ ಕರೆದು ಮುದ್ದಿಸುತ್ತಾನೆ. ಮತ್ತೊಂದು ವರುಷ ಮುಖ ತಿರುಗಿಸಿಯೇ ನಿಂತಾನು. ಅಲ್ಲಿಯವರೆಗೆ ಈಕೇ ಕಾಯುತ್ತಲೆ ಇರಬೇಕು. ಅವನ ಬಗ್ಗೆಯೇ ಕನಸು ಹೆಣೆಯುತ್ತಿರಬೇಕು! ಆಕೆ ಸಿಡುಕಿ ಎಂದು ಸುತ್ತಮುತ್ತಲೆಲ್ಲ ಬುಡ ಬುಡಕೆ ಹಬ್ಬಿಸಿ ಮೌನವಾಗಿ ಮನೆಯೊಳಗೆ ಕುಳಿತ. ಸಿಡುಕಲಿಲ್ಲ ಆಕೆ!

ಅವರೆಲ್ಲ ಸರಿ ಇಲ್ಲ, ಮನೆಯೊಳಗೆ ಇದ್ದು ಬಿಡು ಎಂದ ಮರು ಮಾತನಾಡಲಿಲ್ಲ. ಆತನಿಂದ ಸಿಗದ ಪ್ರೀತಿಗೆ ಹಂಬಲಿಸಿ ಮನದೊಳಗಿದ್ದ ಆಸೆ,ಕನಸುಗಳೆಲ್ಲ ಹಳಸಲಾಗಿದೆ.

ಮನಸ್ಸು ಸಾವಿರ ಬಾರಿ ರೋಧಿಸುತ್ತದೆ. ಈಗ ಕಣ್ಣೀರೂ ಯಾಂತ್ರಿಕ. ಒಂದೊಂದು ಸಲ ಬಾರಿ ಒತ್ತರಿಸಿ ಆಳು ಬಂದರೆ ಯಾರಿಗೂ ಹೇಳದೆ ತನ್ನ, ಮನ ಎಷ್ಟು ಬಾದಿಸಿರಬೇಕು ಹೆಣ್ಣು ಮಕ್ಕಳು ತಾಳ್ಮೆಯ ಪ್ರತಿಬಿಂಬ ಆ ಕಟ್ಟೆ ಒಮ್ಮೆ ಒಡೆದು ಹೋದರೆ ಮತ್ತೆಂದು ಅವಳು ಅವನನ್ನು ಬಯಸುವುದಿಲ್ಲ.

ಹೆಣ್ಣು ದಿನದ ಬೆಳಗು. ಮನೆಯೆದುರು ಚೆಂದದ ರಂಗೋಲಿ ಬಿಡಿಸಿ ತನ್ನ ಮನಕ್ಕು ರಂಗೋಲಿ ಬಿಡಿಸಿಕ್ಕೂಳುವ ಕಲೆ ಅರಿತವರು ಅಂತಹ ಹೆಂಡತಿಯನ್ನು ಕೇವಲ ಒಂದು ಮನೆ ಕೆಲಸಕ್ಕೆ ಸೇರಿದವಸ್ತುವಂತೆ ಕಾಣುವ ಪ್ರತಿ ಗಂಡನ ವಿರುದ್ಧ ನನ್ನದೊಂದು ಧಿಕ್ಕಾರ. ಆದರೆ ಇಂದೆಕೋ ಆಕೆ ಸುಮ್ಮನೆ ಇದ್ದಾಳೆ.

ಆಕೆಗೆ ತನಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದ ಅಪ್ಪನ ನೆನಪು ಅಮ್ಮನ ಪ್ರೀತಿ ಎಂದು ನೆನಪು ಬರಲಿಲ್ಲ. ಕಾರಣ ಗಂಡನ ಮನೆಯ ಮಾನದ ವಿಷಯ. ಆಕೆಗೆ ಆಕಯೇ ಒಂದು ಚೌಕಟ್ಟು. ಆಕೆಯ ಗಂಡನಿಗೆ ಇದೆಲ್ಲ ಅರ್ಥವಾಗುತ್ತದೆ ಒಂದು ದಿನ ಎಂಬ ಕಾರಣಕ್ಕೆ ಅವನನ್ನು ಸಹಿಸಿಕೊಂಡಿರಬಹುದು. ಆತನ ಪ್ರೀತಿ ಒಂದೊಂದು ದಿನ ನಾಜೂಕಿನ ಪ್ರೀತಿ ಮರುದಿನ ಅದೇ ಹಳೆಯ ಚಾಳಿ.

ಪ್ರತಿ ಮನೆಯೊಳಗೊ ಹೆಣ್ಣಿನ ಮನದಲ್ಲಿ ಹೀಗೊಂದು ವೇದನೆ ಇರಬಹುದು ಎಂದು ತನ್ನನ್ನು ತಾನೇ ಸಂತೈಸಿಕೂಳ್ಳುತ್ತಾಳೆ. ಬದಲಾಗದ ಬದುಕಲ್ಲಿ ಆತನ ಬದಲಾವಣೆಗಾಗಿ ಕಾಯುವುದೊಂದೇ ಆಕೆಯ ಗುರಿ. ಅಲ್ಲಿಯವರೆಗೆ ಏಕಾಂತ ಕಳೆಯಲು ಆ ಹಾಡಿದೆ, ನೀ ಮಿಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ…..

ಮಧ್ಯರಾತ್ರೀಲಿ ಈ ಇಬ್ಬರು ಪತ್ರಕರ್ತರು ಮೆರೆದ ಮಾನವೀಯತೆ…

0

ಗುದ್ದಿ

ಚನ್ನಬಸಪ್ಪ ರೊಟ್ಟಿ


ಸ್ನೇಹಿತರೇ, ಇದು ನನ್ನ ಸಹೋದ್ಯೋಗಿಯಾಗಿ ಕಲಬುರ್ಗಿಯ ‘ಪ್ರಜಾವಾಣಿ’ ಬ್ಯೂರೋದಲ್ಲಿ ಕೆಲಸ ಮಾಡುತ್ತಿರುವ ಸಹೃದಯಿ ಸ್ನೇಹಿತ, ನಲ್ಮೆಯ ಬೀಗ ಮನೋಜಕುಮಾರ ಗುದ್ದಿಯ ‘ಅನ್ನದ ಋಣ’ವನ್ನು ನಾನು ಮಧ್ಯರಾತ್ರಿಯಲ್ಲಿ ತೀರಿಸಿದ ಕತೆ.‌‌..

ಅಂದರೆ, ನಾನು ಆತನ ಮನೆಯಲ್ಲಿ ತಿಂದುಂಡ ಋಣ ತೀರಿಸಿದ್ದಲ್ಲ…! ಆತ ತನ್ನ ಬಾಲ್ಯದಿಂದ ತಿಂದುಂಡ ‘ಋಣ’ ತೀರಿಸಿದ ಕತೆ…

ಹೌದು, ಕೊರೊನಾ ಲಾಕ್ ಡೌನ್ ಕಾರಣ ನಮ್ಮ ಕಚೇರಿಯ ಸಹೋದ್ಯೋಗಿಗಳು ಸೇರಿ, ಪ್ರತಿದಿನ ಸಂಜೆ ವೇಳೆ ತಿಂಡಿ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅದರಲ್ಲಿ ನಮ್ಮ ತಂಗಿ ಜಾನಕಿಗೆ (ಮನೋಜನ ಶ್ರೀಮತಿ) ತೊಂದರೆ ಕೊಟ್ಟು ಅತಿ ಹೆಚ್ಚು ಬಾರಿ ತಿಂಡಿ ಮಾಡಿಸಿಕೊಂಡು ಬಂದವನು ಮನೋಜನೇ…

ಇಂದೂ ಕೂಡ ಆತ ಮನೆಯಿಂದ ಇಪ್ಪತ್ತು ಜನರು ಹೊಟ್ಟೆ ತುಂಬ ತಿನ್ನಬಹುದಾದಷ್ಟು ಅವಲಕ್ಕಿ ಮಾಡಿಸಿಕೊಂಡು ಬಂದಿದ್ದ. ಸಂವಹನ ಕೊರತೆಯಿಂದ ಮತ್ತೊಬ್ಬ ಸಹೋದ್ಯೋಗಿ ಗುರುರಾಜ್ ಕೂಡ ಚಿತ್ರಾನ್ನ ಮಾಡಿಸಿಕೊಂಡು ಬಂದಿದ್ದರು.

ಚಿತ್ರಾನ್ನ ರಾತ್ರಿವರೆಗೆ ತಾಳುವುದಿಲ್ಲ ಎಂದರಿತು ಅದನ್ನು ಸಂಜೆ ಹೊತ್ತಿಗೇ ತಿಂದು ಮುಗಿಸಿ, ಅವಲಕ್ಕಿಯನ್ನು ರಾತ್ರಿಗೆ ಉಳಿಸಿಕೊಂಡೆವು. ಅದರಂತೆ ರಾತ್ರಿ ಕೆಲಸ ಮುಗಿದ ನಂತರ ನಾನೂ ಸೇರಿ ಆರು ಜನ ಅವಲಕ್ಕಿಯನ್ನು ಹೊಟ್ಟೆ ಬಿರಿಯುವಂತೆ ತಿಂದೆವು.‌ ಕೆಲವರು ‘ಚಿತ್ರಾನ್ನವೇ ಸಾಕಾಗಿದೆ’ ಎಂದು ಹಾಗೆಯೇ ಹೊರಟು ಹೋದರು. ಆದರೂ ಹತ್ತು, ಜನರಿಗೆ ಆಗುವಷ್ಟು ಅವಲಕ್ಕಿ ಡಬ್ಬಿಯಲ್ಲಿ ಉಳಿದಿತ್ತು…!

ಈ ಲಾಕ್ ಡೌನ್ ಸಂದರ್ಭದಲ್ಲಿ ಅದೆಷ್ಟೋ ಜನ ತುತ್ತು ಕೂಳಿಗಾಗಿ ಪರದಾಡುತ್ತಿರುವ ಚಿತ್ರ ಕಣ್ಮುಂದೆ ಬಂತು. ನಿತ್ಯ ಅಂಥ ಹತ್ತಾರು ಸುದ್ದಿಗಳನ್ನು ನಾವೇ ಬರೆದು, ಓದಿ, ಪ್ರಕಟಿಸುತ್ತಿರುವುದೂ ನೆನಪಾಯಿತು…

ಏನೇ ಆಗಲಿ, ಅವಲಕ್ಕಿಯನ್ನು ‘ವೇಸ್ಟ್’ ಮಾಡದಿರಲು ನಿರ್ಧರಿಸಿದೆ. ರಾತ್ರಿ 12.15ಕ್ಕೆ ಸ್ನೇಹಿತ ರಾಮಮೂರ್ತಿಯನ್ನು ಬೈಕ್ ಮೇಲೆ ಕೂರಿಸಿಕೊಂಡು, ಅವಲಕ್ಕಿ ಮತ್ತು ಎರಡು ಹಳೆಯ ದಿನಪತ್ರಿಕೆಗಳನ್ನು ತೆಗೆದುಕೊಂಡು ಕಲಬುರ್ಗಿ ನಗರದ ರೈಲುನಿಲ್ದಾಣಕ್ಕೆ ತೆರಳಿದೆನು. ಅಲ್ಲಿ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ನಾಲ್ಕು ಪೊಲೀಸರಿಗೆ ಅವಲಕ್ಕಿಯನ್ನು ವಿತರಿಸಿದೆನು. ಅವರು ಖುಷಿಯಿಂದಲೇ ಅವಲಕ್ಕಿ ತಿಂದು ಧನ್ಯವಾದ ಹೇಳಿದರು.

ಇನ್ನೂ ಆರು ಜನರಿಗೆ ಆಗುವಷ್ಟು ಅವಲಕ್ಕಿ ಇತ್ತು. ಅಲ್ಲೇ ರಸ್ತೆ ಬದಿ ಮಲಗಿದ್ದ ಅಜ್ಜಿಗೆ ಒಂಚೂರು ಅವಲಕ್ಕಿ ಬಡಿಸಿ, ಬಸ್ ಸ್ಟ್ಯಾಂಡನಲ್ಲಿ ಯಾರಾದರೂ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿ ನಾನು ರಾಮು ಬಸ್ ಸ್ಟ್ಯಾಂಡಿಗೆ ತೆರಳಿದೆವು.

ಖಾಲಿ ಇರುವ ಬಸ್ ಸ್ಟ್ಯಾಂಡ್ ಕಾಯಲೆಂದೇ ಡ್ಯೂಟಿ ಮೇಲಿದ್ದ ಮೂವರು ಕಂಟ್ರೋಲರ್ ಗಳು, ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳು ಅಲ್ಲಿದ್ದರು. ಅವರಿಗೆ ನಮ್ಮ ಪರಿಚಯ ಹೇಳಿಕೊಂಡು, ‘ಅವಲಕ್ಕಿ ತಿನ್ನುತ್ತೀರಾ ಸರ್?’ ಎಂದು ಕೇಳಿದೆವು.

ಅವರು ಅತ್ಯಂತ ಸಂತಸದಿಂದ ಎಲ್ಲ ಅಲಕ್ಕಿಯನ್ನು ತಾವೇ ಬಡಿಸಿಕೊಂಡು ಖುಷಿಯಿಂದ ಸವಿದು ಧನ್ಯವಾದ ಹೇಳಿದರು. ಅನ್ನಾಮೃತವನ್ನು ಸವಿದು ಅದು ಕೇಡಾಗದಂತೆ ನೋಡಿಕೊಂಡದ್ದಕ್ಕಾಗಿ ನಾವೂ ಅವರಿಗೆ ಪ್ರತಿ ಧನ್ಯವಾದ ಹೇಳಿದೆವು.

ಮಧ್ಯರಾತ್ರಿಯಲ್ಲಿ ಹಸಿದವರಿಗೆ ಅವಲಕ್ಕಿ ಉಣಿಸಿದ ಖುಷಿ ನಮ್ಮಲ್ಲಿತ್ತು. ಬೇಕೆಂದರೂ ಒಂದು ಬಿಸ್ಕತ್ತೂ ಸಿಗದ ಅವಧಿಯಲ್ಲಿ ಹಾಟ್ ಬಾಕ್ಸ್ ನಲ್ಲಿ ಬಂಧಿಯಾಗಿದ್ದ ಬಿಸಿ ಅವಲಕ್ಕಿ ಅವರ ಹೊಟ್ಟೆಯ ಹಸಿವನ್ನು ಹಿಂಗಿಸಿತ್ತು.

ಆ ಪೊಲೀಸಪ್ಪಗಳು ಮತ್ತು ಸಾರಿಗೆ ಸಿಬ್ಬಂದಿ ಕುಚೇಲ ಕೊಟ್ಟ ಅವಲಕ್ಕಿಯನ್ನು ಆತ್ಮತೃಪ್ತಿಯಿಂದ ಸವಿದ ಕೃಷ್ಣನಿಗಿಂತ ಕಡಿಮೆ ಏನಲ್ಲ ಎಂದೆನಿಸಿತು…

ಇನ್ನು ಮನೋಜನ ‘ಅನ್ನದ ಋಣ’ಕ್ಕೆ ಬರುವುದಾದರೆ, ಆತನ ತಂದೆ ಈಶಾನ್ಯ ಸಾರಿಗೆಯಲ್ಲಿ ಕಂಡಕ್ಟರ್, ಕಂಟ್ರೋಲರ್ ಆಗಿ ಸೇವೆ ಸಲ್ಲಿಸಿ, ಕಳೆದ ವರ್ಷವಷ್ಟೇ ನಿವೃತ್ತರಾಗಿದ್ದಾರೆ. ಅವಲಕ್ಕಿ ಸವಿದ ಸಾರಿಗೆ ಸಿಬ್ಬಂದಿ ಮನೋಜನ ತಂದೆಯೊಂದಿಗೆ ತಮ್ಮ ಮನೆಯ ಅನ್ನವನ್ನು ಅದ್ಯಾವಗಲೋ ಹಂಚಿಕೊಂಡು ತಿಂದಿರಬಹುದು… ಅಥವಾ ತಮ್ಮ ತಂದೆಯ ದುಡಿಮೆಯಿಂದ ನಮ್ಮ ಮನೋಜ ಪಡೆದಿದ್ದ ಅನ್ನ, ಶಿಕ್ಷಣದ ಋಣ ಅವಲಕ್ಕಿಯ ರೂಪದಲ್ಲಿ ಸಾರಿಗೆ ಇಲಾಖೆಗೆ ಮರು ಸಂದಾಯವಾಗಿರಬಹುದು..‌.!

ಇನ್ನು ಆ ಪೊಲೀಸರು ಅದ್ಯಾವುದೋ ಸುದ್ದಿ ಮೂಲವಾಗಿ ಮನೋಜನಿಗೆ ಸುದ್ದಿ ಬರೆಯಲು ನೆರವಾಗಿರಬಹುದು… ಅದಕ್ಕಾಗಿಯೇ ಅವರಿಗೂ ಮನೋಜನ ಮನೆಯ ಅವಲಕ್ಕಿಯ ಋಣ ಸಂದಾಯವಾಗಿರಬಹುದು… ಯಾರಿಗೆ ಗೊತ್ತು..?

ಅದಕ್ಕೇ ಅಲ್ಲವೇ ಹಿರಿಯರು ಹೇಳಿದ್ದು, ‘ದಾನೇ ದಾನೇಪೇ ಲಿಖಾ ರೆಹತಾ ಹೈ ಖಾನೇವಾಲೇ ಕಾ ನಾಮ’ ಎಂದು…

ಅಂತೂ ನಾನು ಮನೋಜನ ಮನೆಯ ಅವಲಕ್ಕಿಯನ್ನು ಅದ್ಯಾರ್ಯಾರಿಗೋ ಹಂಚಿದೆನು…!

ಇದರಲ್ಲಿ ನನ್ನ ದೊಡ್ಡತನವೇನಿಲ್ಲ. ಅದೇನಿದ್ದರೂ ನನ್ನ ಬೀಗ ಮನೋಜ ಮತ್ತು ಆತನ ಅರ್ಧಾಂಗಿ, ಅನ್ನಪೂರ್ಣೆ ಸ್ವರೂಪಿ, ಜಾನಕಿಯಮ್ಮನದ್ದು ಮಾತ್ರ…

ಆದರೆ, ಅನ್ನಾಮೃತ ವೇಸ್ಟ್ ಆಗಲಿಲ್ಲ ಎಂಬ ಖುಶಿ ನನ್ನದಾದದ್ದು ಸುಳ್ಳಲ್ಲ…


ಚನ್ನಬಸಪ್ಪ ರೊಟ್ಟಿ ಅವರದು ಸ್ನೇಹಮಯ ವ್ಯಕ್ತಿತ್ವ. ಪತ್ರಕರ್ತರಾಗಿ ಅವರ ಅನೇಕ ವರದಿಗಳು ಗಮನ ಸೆಳೆದಿವೆ. ಬಿ ಇಡಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಅವರು ಪ್ರಜಾವಾಣಿಯಲ್ಲಿ ಪತ್ರಕರ್ತ ವೃತ್ತಿ ಆರಿಸಿಕೊಂಡರು. ಶಿಕ್ಷಣದ ಬಗ್ಗೆ ಆಳ ಅಧ್ಯಯನದ ಅವರ ವರದಿಗಳು ಗಮನ ಸೆಳದಿವೆ.

ಹೋರಾಟದ ಮೂಲಕವೇ ಗುರುತಿಸಿಕೊಂಡು ಪತ್ರಿಕೋದ್ಯಮಕ್ಕೆ ಕಾಲಿಟ್ಟ ಮನೋಜ್ ಕುಮಾರ್ ಗುದ್ದಿ ಕಡು ಪ್ರಾಮಾಣಿಕ. ಧಾರವಾಡದಲ್ಲಿ ಅವರು ವರದಿಗಾರರಾಗಿದ್ದಾಗ ಮಾಡಿದ ವರದಿಯೊಂದು ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿತ್ತು. ಚುನಾವಣಾ ಸಮಯದಲ್ಲಿ ಕಾಸಿಗಾಗಿ ಸುದ್ದಿ ವಿಚಾರ ಬಯಲಿಗೆಳೆದಿದ್ದರು. ಇವೆಲ್ಲಕ್ಕಿಂತ ಹೆಚ್ಚಾಗಿ ತಾಯಿ ಹೃದಯದ ಅವರಿಗೆ ಬಡವರೆಂದರೆ ಅಚ್ಚುಮೆಚ್ಚು.

ರೊಟ್ಟಿ ಅವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಬರೆದಿದ್ದು ಇಲ್ಲಿದೆ.

ಹಳ್ಳಿ ಹಳ್ಳಿ ಕಾಯೋ ನಮ್ ಹಳ್ಳಿ ರೇಡಿಯೋ!

0

ತುರುವೇಕೆರೆ ಪ್ರಸಾದ್


ತುರುವೇಕೆರೆ: ನಮ್ಮಲ್ಲಿ ಒಂದು ಹಿತೋಪದೇಶವಿದೆ: “ತನಗಾಗಿ ಸ್ವಲ್ಪ, ಪರರಿಗಾಗಿ ಸರ್ವಸ್ವ” ಎಂದು.ಕರೋನಾದಿಂದ ಮನುಷ್ಯನ ಅಟ್ಟಹಾಸಕ್ಕೆ ಅಹಮಿಕೆಗೆ ಒಂದು ಕಾಮ ಬಿದ್ದಿದೆ.

ಮನೆಯಲ್ಲೇ ಕೊಳ್ಳುಬಾಕತನವಿಲ್ಲದೆ ತನ್ನ ಇತಿಮಿತಿಯಲ್ಲಿ ಸರಳ ಜೀವನ ನಡೆಸಬಹುದು, ತನಗಾಗಿ ಸ್ವಲ್ಪ ಸಾಕು ಎಂಬುದು ಜ್ಞಾನೋದಯವಾಗಿದೆ.

ಇನ್ನು ಪರರಾಗಿ ಸರ್ವಸ್ವ. ಕೊರೋನಾ ವಿರುದ್ಧ ಹೋರಾಟದಲ್ಲಿ ವೈದ್ಯರು, ದಾದಿಯರು, ಪೋಲೀಸ್ ಸಿಬ್ಬಂದಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಸಮರೋಪಾದಿಯಲ್ಲಿ ಉಪಚಾರ ಮಾಡುತ್ತಿರುವ ಇವರೆಲ್ಲಾ “ಪರರಿಗಾಗಿ ಸರ್ವಸ್ವ”ವನ್ನೂ ತ್ಯಾಗ ಮಾಡಿ ಮನುಕುಲದ ಒಳಿತಿಗಾಗಿ ಟೊಂಕಕಟ್ಟಿ ನಿಂತಿದ್ದಾರೆ.


ನಿಮ್ಮೂರಿನ ಸುದ್ದಿ, ವರದಿ, ನಿಮ್ಮ ಲೇಖನಗಳನ್ನು ಇಲ್ಲಿಗೆ ವಾಟ್ಸಾಪ್ ಮಾಡಿ:9844817737


ಸಾಮಾಜಿಕ ಜವಾಬ್ಧಾರಿ ಎನ್ನುವುದು ಈ ಭೂಮಿ ಮತ್ತು ಅದರ ಮೇಲಿನ ಜೀವಿಗಳ ಸಾಮುದಾಯಿಕ ಹಿತಾಸಕ್ತಿ ಕಾಯುವ ಒಂದು ವೈಯಕ್ತಿಕ ಹಾಗೂ ಅಮೂಲ್ಯ ಕರ್ತವ್ಯ.

ಹೀಗಾಗಿ ಈ ಸಾಮಾಜಿಕ ಜವಾಬ್ಧಾರಿ ಎನ್ನುವುದು ಅತ್ಯಂತ ಮಹತ್ವದ ಬದ್ಧತೆಯಾಗಿದೆ.ಹಲವು ಪ್ರಖ್ಯಾತ ಉದ್ಯಮಿಗಳು, ಸಿನಿಮಾ ನಟರು, ಆಟಗಾರರು, ಸಂಘ ಸಂಸ್ಥೆಗಳು ಸಂಕಷ್ಟದ ಸಮಯದಲ್ಲಿ ಈ ಜವಾಬ್ಧಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆ ತುರುವೇಕೆರೆಯ ಚಿಮ್ಮನಹಳ್ಳಿಯ ಶ್ರೀ ಮುನೀಶ್ವರ ಶಿಕ್ಷಣ ಟ್ರಸ್ಟ್ ರಾಜ್ಯಕ್ಕೇ ಅನುಕರಣೀಯ ಮಾದರಿಯಾಗಿದೆ.

ಟ್ರಸ್ಟ್ ಆಶ್ರಯದಲ್ಲಿ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್, ಪಟ್ಟಣ ಪಂಚಾಯ್ತಿ, ತಾಲ್ಲೂಕು ಆಡಳಿತ ಒಟ್ಟಿಗೆ ಸೇರಿ ಕರೋನಾ ವಿರುದ್ಧ ತಳಮಟ್ಟದ ಹೋರಾಟವನ್ನು ಸಂಘಟಿಸಿದ್ದಾರೆ.

ಲೈವ್ಲಿ ಹುಡ್ ಪ್ರೋಗ್ರಾಂನ ಮಾಜಿ ನಿರ್ದೇಶಕ ಹಾಗೂ ರೆಡ್‍ಕ್ರಾಸ್ ಸಂಘಟನೆಯ ಮುಖ್ಯಸ್ಥ ಡಾ. ಅಚ್ಯುತರಾವ್ ಹಾಗೂ ಶ್ರೀ ಮುನೀಶ್ವರ ಟ್ರಸ್ಟ್‍ನ ಮಹಾಪೋಷಕ ಸಿ.ಎನ್ ಶಿವಪ್ಪನವರ ನೇತೃತ್ವದಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವುದರಿಂದ ಹಿಡಿದು ಜನರ ಸಂಕಷ್ಟಕ್ಕೆ ಸ್ಪಂದಿಸುವವರೆಗೆ ಈ ಸಂಘಟನೆಗಳ ಗುಂಪು ಸಾಮಾಜಿಕ ಸಾಂತ್ವನ ಮತ್ತು ಸೇವೆಯ ಹೊಸ ಮಾರ್ಗಗಳನ್ನು ಕಂಡುಕೊಂಡಿದೆ.

ಇವುಗಳಲ್ಲಿ ಪ್ರಮುಖವಾದ್ದು ನಮ್ ಹಳ್ಳಿ ರೇಡಿಯೋ!ಈ ಕಾರ್ಯಕ್ರಮದ ರೂವಾರಿ ನೊಣವಿನಕೆರೆಯ ಎಂ.ಪಿ. ಗಿರೀಶ್. ಟಿವಿ ವಾಹಿನಿಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದ ಗಿರೀಶ್ ಕೊರೊನಾ ವಿರುದ್ಧ ಹೋರಾಡಲೇ ತಮ್ಮ ವೃತ್ತಿ ಜೀವನವನ್ನು ಬದಿಗಿಟ್ಟು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಸುಲಭವಾಗಿ ಸಿಗುವ ದುಬಾರಿ ಅಲ್ಲದ ಉಪಕರಣಗಳಿಂದ ವ್ಯಾನ್ ಒಂದರಲ್ಲಿ ಗಿರೀಶ್ ಕಂಪ್ಯೂಟರ್, ರೆಕಾರ್ಡರ್, ಮೈಕ್, ಆಪ್ಲಿಫೈಯ್ಯರ್ ಇತರೆ ಸಲಕರಣೆಗಳನ್ನು ಸಜ್ಜುಗೊಳಿಸುವ ಮೂಲಕ ವೈಫೈ ಮೂಲಕ ನಿರ್ವಹಿಸಬಹುದಾದ ರೇಡಿಯೋ ಕೇಂದ್ರವನ್ನು ಸ್ಥಾಪಿಸಿದ್ದಾರೆ.

ಈ ಸಂಚಾರಿ ನಮ್ ಹಳ್ಳಿ ರೇಡಿಯೋ ಕೇಂದ್ರದ ಮೂಲಕ ಪ್ರಸ್ತುತ ಸಂಕಷ್ಟದ ಸಂದರ್ಭದಲ್ಲಿ ತೀರಾ ಕುಗ್ರಾಮಗಳಲ್ಲಿರುವ ಮೊಬೈಲ್ ಸಂಪರ್ಕವೂ ಸಿಗದ ಜನರ ಕಷ್ಟಕಾರ್ಪಣ್ಯಗಳನ್ನು ಆಡಳಿತಕ್ಕೆ ಮುಟ್ಟಿಸುವುದು, ಅವರ ಸಮಸ್ಯೆಗಳಿಗೆ ಸ್ಪಂದಿಸುವುದು, ಅವರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು, ಸಾಂತ್ವನ ಹೇಳುವುದು, ಧೈರ್ಯ ತುಂಬುವುದು ಮತ್ತು ಅವರನ್ನು ಮುಖ್ಯವಾಹಿನಿಗೆ ತರುವುದು ಗಿರೀಶ್ ಅವರ ಉದ್ದೇಶ.

ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಈ ರೇಡಿಯೋ ಸಂದೇಶದ ಮೂಲಕವೇ ಪ್ರಾಸ್ತಾವಿಕ ನುಡಿಗಳನ್ನಾಡಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.ಬೆಳಿಗ್ಗೆ 5 ಗಂಟೆಯಿಂದಲೇ ಈ ಸೇವಾ ಸಂಘಟನೆಯ ಕಾರ್ಯ ಆರಂಭವಾಗುತ್ತದೆ.

ಬೆ.5 ರಿಂದ 8 ಗಂಟೆಯವರೆಗೆ ಈ ಸಂಘಟನೆಯ ಕಾರ್ಯಕರ್ತರು ಪಟ್ಟಣದ ಹಲವಾರು ಕೊಳಗೇರಿ/ ಹಿಂದುಳಿದ ಬಡಾವಣೆಗಳಲ್ಲಿರುವ ನಿರ್ಗತಿಕರು ಹಾಗೂ ಅಸಹಾಯಕರಿಗೆ ಹಾಲು ತಲುಪಿಸುವ ಪ್ರಯತ್ನ ಮಾಡುತ್ತಾರೆ.

ದೇವೇಗೌಡ ಬಡಾವಣೆ, ಕೆಂಪುಕಟ್ಟೆ, ಮೀನಾಕ್ಷಿವನ, ಜನತಾ ಕಾಲೋನಿ, ಇಂದಿರಾ ನಗರ, ವಡಕಟ್ಟೆ ಈ ಪ್ರದೇಶಗಳಲ್ಲಿ ಪ್ರತಿದಿನ ಸುಮಾರು 700 ಲೀಟರ್ ಹಾಲನ್ನು ಮನೆ ಮನೆಗೆ ಹಂಚಲಾಗುತ್ತದೆ.

ಆ ನಂತರ ಡಾ.ಅಚ್ಯುತ್‍ರಾವ್,ಡಾ.ಶರತ್, ಗಿರೀಶ್, ಮೆಂಟರ್ ಗೋಪಿಕೃಷ್ಣ ಹಾಗೂ ಮುನೀಶ್ವರ ಟ್ರಸ್ಟ್‍ನ ಶೈಕ್ಷಣಿಕ ನಿರ್ದೇಶಕಿ ಡಾ.ಶೀಲಾ ಖರೆ ಇವರ ನೇತೃತ್ವದ ಒಂದು ತಂಡ ಸಂಚಾರಿ ರೇಡಿಯೋ ಕೇಂದ್ರದೊಂದಿಗೆ ಹಳ್ಳಿಗಳಿಗೆ ಪಯಣ ಹೊರಡುತ್ತದೆ.ಈ ರೇಡಿಯೋ ಕೇಂದ್ರ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಹಾಡುಗಳು, ಲಾವಣಿಗಳು, ಪ್ರಕಟಣೆಗಳೊಂದಿಗೆ ಗಡಿಭಾಗದ ಹಳ್ಳಿಗಳತ್ತ ಸಾಗುತ್ತದೆ.

ಪ್ರತಿ ಹಳ್ಳಿಯಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.ಊರ ಮುಖಂಡರು, ಯುವಕರು, ಗೃಹಿಣಿಯರು, ಆಟೋ ಚಾಲಕರು, ಕೂಲಿ ಕಾರ್ಮಿಕರು,ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ರೇಡಿಯೋ ಮೂಲಕ ತಮ್ಮ ಅಭಿಪ್ರಾಯ, ಕಷ್ಟಕಾರ್ಪಣ್ಯವನ್ನು ಹಂಚಿಕೊಳ್ಳುತ್ತಾರೆ.

ಕೊರೊನಾ ಅಲ್ಲದೆ ಇತರೆ ಕಾಯಿಲೆಗಳಿಂದ ನರಳುವವರಿಗೆ, ಔಷಧೋಪಚಾರ ಬೇಕಾಗಿರುವವರಿಗೆ ಸಲಹೆ,ಉಪಚಾರ, ಮಾರ್ಗದರ್ಶನ,ಸಹಾಯಹಸ್ತವನ್ನು ಡಾ.ಶರತ್ ತಂಡ ನೀಡುತ್ತದೆ.ಇದೇ ವೇಳೆ ಹಳ್ಳಿಗಳಲ್ಲಿ ಸಾಮಾಜಿಕವಾಗಿ ಹಿಂದುಳಿದವರು, ನಿರ್ಗತಿಕರು, ಪಾಳ್ಯಗಳಲ್ಲಿ ವಾಸಿಸುವವರು, ಬುಡಕಟ್ಟು ಜನಾಂಗದವರು,ಅಲೆಮಾರಿಗಳು, ವಲಸೆ ಕಾರ್ಮಿಕರು ಹೀಗೆ ಜನಜೀವನದ ಒಂದು ಸಮೀಕ್ಷೆಯೂ ಸಮಾನಾಂತರವಾಗಿ ನಡೆಯುತ್ತದೆ.

ಸಂಜೆ ವೇಳೆಗೆ ಒಂದು ಹಳ್ಳಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ‘ ಅರಳೀಕಟ್ಟೆ’ ಮಾದರಿಯಲ್ಲಿ ಒಂದು ಚಿಕ್ಕ ಸಂವಾದ ಏರ್ಪಡಿಸಲಾಗುತ್ತದೆ. ಅಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಹಳ್ಳಿಯ ಬಡಜನರ ಸಮಸ್ಯೆಗಳ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಊರಿನ ರಾಜಕೀಯ ವ್ಯಕ್ತಿಗಳು, ಮುಖಂಡರೊಂದಿಗೆ ಚರ್ಚೆ ನಡೆಯುತ್ತದೆ.

ಇದೆಲ್ಲದರ ಫಲಶೃತಿಯಾಗಿ ಸುತ್ತ ನಾಲ್ಕೈದು ಹಳ್ಳಿಗಳ ಒಂದು ಹೊಸ ಯುವತಂಡವೇ ಕೊರೋನಾ ವಿರುದ್ಧ ಹೋರಾಡಲು ಸಜ್ಜಾಗಿ ನಿಲ್ಲುತ್ತದೆ. ಈಗಲಾಗಲೇ ಈ ಸಂಚಾರಿ ರೇಡಿಯೋ ಕೇಂದ್ರ ಬಾಣಸಂದ್ರ, ಜಿ. ಮಲ್ಲೇನಹಳ್ಳಿ, ಕೊಂಡಜ್ಜಿ, ವಿಘ್ನಸಂತೆ, ನೊಣವಿನಕೆರೆ,ಅಕ್ಕಳಸಂದ್ರ ಗೊಲ್ಲರಹಟ್ಟಿ ಅಲ್ಲದೆ ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರ, ಹಾಗೂ ತುಮಕೂರಿನ ಕೆ.ಎಂ.ದೊಡ್ಡಿ, ಗೂಳೂರು ಹೀಗೆ ಕಳೆದ 6 ದಿನಗಳಿಂದ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಚರಿಸಿ ಜನರಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಿದೆ.

ಇದು ಒಂದು ಭಾಗವಾದರೆ ಸಿ.ಎ. ಶಿವಣ್ಣ, ಪ್ರಜ್ವಲ್, ಡಾ. ರಂಗನಾಥ್, ಮಮತಾ, ಪದ್ಮಿನಿ ನೇತೃತ್ವದ ಇನ್ನೊಂದು ತಂಡ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದ ವಲಸೆ ಕಾರ್ಮಿಕರು, ಅಲೆಮಾರಿ ತಂಡಗಳು, ಕೂಲಿಕಾರ್ಮಿಕರು ಇತರೆ 88 ಅಸಹಾಯಕ ಕುಟುಂಬಗಳಿಗೆ ಊಟದ ವ್ಯವಸ್ಥೆ ಮಾಡುತ್ತದೆ.

ಇತರೆ ಸಂಘಟನೆಗಳ ಆಶ್ರಯದಲ್ಲಿ ಮನೆ ಮನೆಗೆ ಹೋಗಿ ಊಟದ ಪ್ಯಾಕೆಟ್‍ಗಳನ್ನು ಹಂಚಲಾಗುತ್ತದೆ. ಹಾಗೇ ಹಗಲು ರಾತ್ರಿ ಕರ್ತವ್ಯದಲ್ಲಿ ನಿರತರಾಗಿರುವ ಪೋಲೀಸ್ ಸಿಬ್ಬಂದಿ, ಪೌರಕಾರ್ಮಿಕರು, ವೈದ್ಯರು, ದಾದಿಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಹ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಇಷ್ಟೇ ಅಲ್ಲದೆ ತಂಡ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಗಿಂದಾಗ್ಗೆ ನಡೆಸುತ್ತಿದೆ. ವಿಶೇಷವಾಗಿ ಪೌರಕಾರ್ಮಿಕರು ಹಾಗೂ ಪೋಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇದಕ್ಕಾಗಿ ಉಷ್ಣಮಾಪಕ ಯಂತ್ರದ(ಸ್ಕ್ರೀನಿಂಗ್) ವ್ಯವಸ್ಥೆಯನ್ನೂ ಮಾಡಲಾಗಿದೆ.

ನಮ್ ರೇಡಿಯೋದಲ್ಲಿ ಸ್ಥಳೀಯ ಪತ್ರಕರ್ತರು,ವೈದ್ಯ ಡಾ.ನಾಗರಾಜ್, ರಾಜಕೀಯ ಮುಖಂಡ ಕೊಂಡಜ್ಜಿ ವಿಶ್ವನಾಥ್ ಇತರೆ ಗಣ್ಯರು ಸಹ ಉಪಯುಕ್ತ ಸಂದೇಶ ನೀಡಿದ್ದಾರೆ.

ಸ್ಥಳೀಯ ಶಾಸಕ ಜಯರಾಮ್,ತಹಸೀಲ್ದಾರ್ ನಯೀಮ್ ಉನ್ನೀಸಾ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಂಜುಳಾದೇವಿ, ಆರಕ್ಷಕ ವೃತ್ತ ನಿರೀಕ್ಷಕ ಲೋಕೇಶ್, ಆರಕ್ಷಕ ಉಪನಿರೀಕ್ಷಕ ಪ್ರೀತಮ್ ಇವರೆಲ್ಲಾ ಕರೋನಾ ವಿರುದ್ಧದ ಈ ಅಭಿಯಾನಕ್ಕೆ ಕೈ ಜೋಡಿಸಿ ಬೆನ್ನುಲುಬಾಗಿ ನಿಂತಿದ್ದಾರೆ.

ಒಂದು ಸಮುದಾಯ ತನ್ನ ಮುಂದಿನ ಪೀಳಿಗೆಗೆ ಈ ಭೂಮಿ, ಇದರ ನೈಸರ್ಗಿಕ ಸಂಪನ್ಮೂಲ ಜೊತೆಗೆ ತನ್ನ ಮೌಲ್ಯಗಳು, ವಿಚಾರಗಳು, ಕೌಶಲಗಳು, ಸಾಂಸ್ಕøತಿಕ ಚಹರೆಗಳು ಇವನ್ನೆಲ್ಲಾ ವರ್ಗಾಯಿಸಬೇಕು.

ಸಾಮಾಜಿಕ ಜವಾಬ್ಧಾರಿ ಇಲ್ಲದ ಸಮಾಜ ಇವಾವ ಮೌಲ್ಯಗಳನ್ನೂ ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಿಲ್ಲ.ಏಕೆಂದರೆ ಅಂತಹ ಸಮುದಾಯವೇ ತನ್ನ ಬೇಜವಾಬ್ಧಾರಿ ವರ್ತನೆಯಿಂದ ತನಗೆ ತಾನೇ ಭಸ್ಮಾಸುರನಂತೆ ವರವನ್ನೇ ಶಾಪವಾಗಿಸಿಕೊಂಡು ನಾಶವಾಗಿ ಹೋಗುತ್ತದೆ.ಹಾಗಾಗಿ ಕೊರೊನಾ ಸಂದರ್ಭದ ಸಾಮಾಜಿಕ ಸಮಸ್ಯೆಗಳ ಜೊತೆ ಜೊತೆಗೆ ನಂತರದ ಗಂಭೀರ ದುಷ್ಪರಿಣಾಮಗಳನ್ನೂ ಎದುರಿಸಲು ಜನರನ್ನು ಸನ್ನದ್ದುಗೊಳಿಸಿ ಧೈರ್ಯ ತುಂಬುತ್ತಿರುವ ರೆಡ್‍ಕ್ರಾಸ್ ಮತ್ತು ಇತರೆ ಸಂಘಟನೆಗಳಿಗೆ ಒಂದು ಬಿಗ್ ಸಲ್ಯೂಟ್ ಹೊಡೆಯಲೇಬೇಕು..!ಕೊರೊನಾ ವಾರಿಯರ್ಸ್.. ಹ್ಯಾಟ್ಸ್ ಆಫ್ ಟು ಯೂ !(ನಮ್ ಹಳ್ಳಿ ರೇಡಿಯೋ ಲಿಂಕ್:http://www.namdu1radio.com))

ಲಾಕ್ ಡೌನ್ ನಡುವೆ ಹುಟ್ಟು ಹಬ್ಬ ಆಚರಿಸಿಕೊಂಡು ಬಿರಿಯಾನಿ‌ ಹಂಚಿದ ಶಾಸಕ: ಮೂವರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು

Public story.in


ಗುಬ್ಬಿ: ಲಾಕ್ ಡೌನ್ ನಡುವೆ ಜನರಿಗೆ‌ ಬಿರಿಯಾನಿ ಹಂಚಿದ ತುರುವೇಕೆರೆ ಶಾಸಕ ಮಸಾಲ ಜಯರಾಮ್ ಜನರಿಗೆ ಲಾಕ್ ಡೋನ್ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಗುಬ್ಬಿ ತಾಲೂಕಿನ ಸಿ.ಎಸ್.ಹೋಬಳಿಯ ಇಡಗೂರು ಗ್ರಾಮದಲ್ಲಿ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಶನಿವಾರ ಹುಟ್ಟು ಹಬ್ಬ ಆಚರಣೆ ಮಾಡಿದರು. ಈ ವೇಳೆ ಸಾಮಾಜಿಕ ಅಂತರಕ್ಕೆ ತಿಲಾಂಜಲಿ ನೀಡಿದರು.


ಕಾರ್ಟೂನ್ ಕಾರ್ನರ್: ಕೆ.ಎಂ.ಮುಸ್ತಾಫ, ರಿಪ್ಪನ್ ಪೇಟೆ


ನೂರಾರು ಜನರು ಸೇರಿದ್ದರು. ಲಾಕ್ ಡೌನ್ ಉಲ್ಲಂಘನೆ ಮಾಡಿದ ಶಾಸಕರು ಕೇಕ್ ಕತ್ತರಿಸಿದರು.‌ ಶಾಸಕರು ಕೈಗವಸು ಧರಿಸಿದ್ದರು. ಅಲ್ಲಿದ್ದ ಜನರು ಕನಿಷ್ಟ ಮಾಸ್ಕ್ ಸಹ ಧರಿಸಿರಲಿಲ್ಲ.

ಸಿ.ಎಸ್.ಪುರ ಪೊಲೀಸರ ನಿರ್ಲಕ್ಷ್ಯ‌ ಎದ್ದು ಕಾಣುತ್ತಿತ್ತು. ಹುಟ್ಟು ಹಬ್ಬದ ಸಮಾರಂಭವನ್ನು ಕೆಲವು ಕಾರ್ಯಕರ್ತರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಮೇಲೆ ಘಟನೆ ವೈರಲ್ ಆಯಿತು.

ಮೂವರ ಮೇಲೆ ಎಫ್ಐಆರ್


ಘಟನೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಕೊಂಡ‌ ಜಿಲ್ಲಾಡಳಿತ ತಹಶೀಲ್ದಾರ್ ಮೂಲಕ ಪೊಲೀಸರಿಗೆ ನೋಟಿಸ್ ನೀಡಲಾಗಿದೆ.

ಬಗ್ಗೆ ಉತ್ತರಿಸುವಂತೆ ಸರ್ಕಲ್ ಇನ್‌ಸ್ಪೆಕ್ಟರ್‌ ರಾಮಕೃಷ್ಣಯ್ಯ ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

‘ಸಬ್‌ಇನ್‌ಸ್ಪೆಕ್ಟರ್ ನಾಗರಾಜು ನಮಗೆ ಈ ಕಾರ್ಯಕ್ರಮ ವಿಚಾರವನ್ನು ಗಮನಕ್ಕೆ ತಂದಿರಲಿಲ್ಲ. ಈ ಬಗ್ಗೆ ಪಿಎಸ್‌ಐ ಅವರಿಂದ ಕಾರಣ ಕೇಳಿದ್ದೇನೆ’ ಎಂದು ರಾಮಕೃಷ್ಣಯ್ಯ ತಿಳಿಸಿದ್ದಾರೆ.

ಇದಾದ ಬಳಿಕ ಸಿ.ಎಸ್.ಪುರ ಪೊಲೀಸರು ಶಾಸಕರ ಮೂವರು ಹಿಂಬಾಲಕರ ಮೇಲೆ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಹುಟ್ಟುಹಬ್ಬ ಆಚರಣೆ ಆಯೋಜನೆ ಮಾಡಿದ್ದ ಇಡಗೂರು ರವಿ, ರಾಜೇನಹಳ್ಳಿ ವಸಂತಕುಮಾರ ಹಾಗೂ ಹೊನ್ನೇಗೌಡ ಮತ್ತು ಇನ್ನಿತರರ ಮೇಲೆ ಸುಮೊಟೊ ಪ್ರಕರಣ ದಾಖಲಾಗಿದೆ.

ಸಿಎಸ್ ಪುರ ಠಾಣೆಯ ಕಾನ್ ಸ್ಟೆಬಲ್ ನವೀನ್ ಅವರ ದೂರಿನನ್ವಯ ಸಿ.ಎಸ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂಬಳದ‌ ಹಣದಲ್ಲಿ‌‌ ದಿನಸಿ ಖರೀದಿಸಿಕೊಟ್ಟ ಪೊಲೀಸರು

ಕಡಬ (ದಕ್ಷಿಣ ಕನ್ನಡ ‌ಜಿಲ್ಲೆ): ಬಡತನದಿಂದ ದಿನದೂಡುತ್ತಿದ್ದ ವೃದ್ಧೆಯೋರ್ವರಿಗೆ ದಿನಬಳಕೆಯ ಸಾಮಾಗ್ರಿಗಳನ್ನು ಖರೀದಿಸಿಕೊಟ್ಟು ಕಡಬ ಠಾಣೆಯ‌ ಮಹಿಳಾ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ವೃದ್ಧೆಯ ಮನೆಯಲ್ಲಿ ದಿನ ಬಳಕೆಯ ವಸ್ತುಗಳು ಇಲ್ಲದಿರುವ ಬಗ್ಗೆ ಮಾಹಿತಿ ತಿಳಿದ ಮಹಿಳಾ ಸಿಬ್ಬಂದಿಗಳಾದ ಭಾಗ್ಯಮ್ಮ ಮತ್ತು ನಾಗರತ್ನ ತಮ್ಮದೇ ದುಡ್ಡಿನಲ್ಲಿ ಸಾಮಾಗ್ರಿಗಳನ್ನು ಖರೀದಿಸಿ ಆಟೋರಿಕ್ಷಾದ ಮೂಲಕ ವೃದ್ಧೆಯನ್ನು ಕಳುಹಿಸಿಕೊಟ್ಟರು.

ಶುಕ್ರವಾರ ಕೂಡಾ ಮರ್ಧಾಳದಲ್ಲಿ ಕರ್ತವ್ಯ ನಿರತರಾಗಿದ್ದ ಕಡಬ ಠಾಣೆಯ ಮಹಿಳಾ ಸಿಬ್ಬಂದಿಗಳಾದ ಚಂದ್ರಿಕಾ ಹಾಗೂ ದಿವ್ಯಾ ತಿರುಪತಿಯಿಂದ ಆಗಮಿಸಿದ್ದ ಪಾದಚಾರಿ ವೃದ್ಧರೋರ್ವರನ್ನು ಉಪಚರಿಸಿ ಬಿಸ್ಕತ್ತು, ತಂಪು ಪಾನೀಯ ಹಾಗೂ ನಗದು ನೀಡಿ ಮಾನವೀಯತೆ ಮೆರೆದಿದ್ದರು.

ನನ್ನೊಳಗಿನ ಜೀವವೇ…… 

ಮಮತಾ ಗೌಡ

ಕಳೆದು ಹೋಗುವ ಮುನ್ನವೇ ಈ ಜೀವನ ಸೇರಿದ ಪ್ರೀತಿ. ನಿನಗೆ ಹೇಳಬೇಕೆಂದು ಕೊಂಡ ಯಾವುದೋ ಒಂದು ತುಡಿತ ನನ್ನೆದೆಯೂಳಗೆ ಹಾಗೆ ನೆಲೆಯೂರಿದೆ. ಹೇಳಲಾಗದೆ ಚಡಪಡಿಸುತ್ತಿರುವೆ.

ನಿನ್ನ ಪ್ರೀತಿಯಲ್ಲಿ ಸಿಲುಕಿದಾಗಿನಿಂದ ನಾನು ನಾನಾಗಿಲ್ಲ. ನನ್ನ ಯೋಚನೆಗಳು, ದಾರಿ ಬೇರೆಯಾಗಿದೆ. ಮನಸ್ಸು ಮಾತೇ ಕೇಳುತ್ತಿಲ್ಲ ಕಣೋ ಕನಸೆಲ್ಲಾ ನಿನ್ನದಾಗಿದೆ ನನಗೇಕೋ ಹೀಗೆಲ್ಲ ಎಂದು ಪ್ರಶ್ನಿಸಿದರು ಉತ್ತರವಿಲ್ಲ.

ಹೌದು ನನಗೇಕೆ ಹೀಗೆ? ನಿನ್ನೊಟ್ಟಿಗೆ ಆಡುವ ಆ ತುಂಟ ಜಗಳಕ್ಕೆ ಮನಸ್ಸು ಅದೆಷ್ಟೋ ಸಂತೋಷಿಸಿದೆ ನಾ ವಿವರಿಸಲಾರೆ. ನಿನ್ನೊಟ್ಟಿಗೆ ಕುಳಿತು ಕಳೆದ ನಿಮಿಷಗಳು ತಾಯಿಯ ಮಡಿಲಿಂದ ಮಗು ಜನ್ಮವ ಪಡೆದು ಹೊರ ಜಗತ್ತು ಕಾಣುವ ಹಾಗೆ ನಿನ್ನಲ್ಲಿ ನಾ ಆ ಹೊಸ ಜಗವ ಕಾಣುತಿಹೆನು….

ನನ್ನೊಳಗಿರುವ ನಿನ್ನನ್ನು ಪ್ರತಿ ಗಳಿಗೆಯೂ ನೆನೆಯುತ್ತಿರುತ್ತೆನೆ ಕಳೆದೋಗುವ ಮುನ್ನವೇ ಈ ಮನದಲ್ಲಿನ ಪ್ರೀತಿಯ ಪ್ರತಿಕ್ರಿಯೆಗೆ ಜೀವ ನೀಡು.

ಇಳಿ ಸಂಜೆ ತಂಪಾದ ಗಾಳಿಯಲ್ಲಿ ಕುಳಿತು ನಿನ್ನ ನೆನೆದಾಗ ದುಂಬಿಯ ಸ್ಪರ್ಶಕ್ಕೆ ಹೂವು ಹೇಗೆ ಅರಳುವುದೋ ಹಾಗೆ ನೀ ಕೊಟ್ಟ ಮುತ್ತು ನೆನಪಾಗಿ ಮನವು ಅರಳಿ ಹಕ್ಕಿಯಂತೆ ಹಾರಲಾರಂಬಿಸುತ್ತದೆ. ಕೆಲವೊಮ್ಮೆ ಈ ನೋವಿನ ಮನಕ್ಕೆ ನೀ ಕೊಟ್ಟ ಸಾಂತ್ವನ ಎಲ್ಲ ನೋವನ್ನು ಮರೆಸಿ ಸದಾ ಹಸನ್ಮುಖಿಯಾಗಿರುವಂತೆ ಮಾಡಿದೆ ನನ್ನನ್ನು. ಈ ಸಮಯ ನೀ ದೂರವಿದ್ದರೇನು?

ನೀ ನನ್ನಲ್ಲಿ ಕಟ್ಟಿದ ಆ ಸವಿನೆನಪುಗಳಲ್ಲೆ ನಾ ನಿನ್ನ ಕಾಣುತಿಹೆನು. ಈ ಹೃದಯಕ್ಕೆ ನಿನ್ನ ಪ್ರೀತಿಯ ರಾಯಭಾರಿ ನೀಡಿಯೇನು? ನನ್ನೆದೆಗೆ ಒಡೆಯನಾಗಿರುವ ನಿನಗೆ ನೋಟದಲ್ಲೆ ನನ್ನ ಬಂದಿಯಾಗಿಸಿದ ಆ ನಿನ್ನ ಎರಡು ಕಣ್ಗಳಿಗೆ ಚುಂಬಿಸಿ, ನಿನ್ನೆದೆಗೆ ಒಮ್ಮೆ ತಬ್ಬಿ, ತೋಳಬಂದಿಯಲ್ಲಿ ಬಂದಿಯಾಗಿರುವ ಬಯಕೆ ನನ್ನ ಕನಸಿನ ದೋಣಿಗೆ ನಾವಿಕ ನೀನೇ…… ನನ್ನ ಪ್ರತಿ ಹೆಜ್ಜೆಗೆ ಮರು ಹೆಜ್ಜೆ ನೀನದೆ ಹಾಗಿರಲಿ…….


ಮಮತಾ ಗೌಡ ಅವರು ಬೆಂಗಳೂರಿನವರು. ಬಿಕಾಂ ಓದಿರುವ ಅವರೀಗ ಭಾರತೀಯ ಆಡಳಿತ ಸೇವೆ ( IAS) ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾರೆ.

ಹಿಂದೂಸ್ತಾನಿ ಗಾಯಕಿಯೂ ಆಗಿರುವ ಅವರಿಗೆ ಸಂಗೀತದಲ್ಲೇ ಹೆಚ್ಚು ಆಸಕ್ತಿ. ಬರವಣಿಗೆ ಅವರ ಇಷ್ಟದ ಕೆಲಸ. ಹಲವು ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟವಾಗಿವೆ.

ಅಮ್ಮನ ವಾರವೂ, ಗಿಣ್ಣಿನ ಸೊಬಗೂ…

2

Photo: ವಾಟ್ಸಾಪ್ ನಲ್ಲಿ ಬಂದಿದ್ದು.

ಉಜ್ಜಜ್ಜಿ ರಾಜಣ್ಣ


ಬೆಳೆ ಕೊಯ್ಲು ಮುಗಿದು ಕಣಗಾಲ ಶುರುವಾಗಿರುತಿತ್ತು. ಬಾವಿ ದಿಣ್ಣೆ, ಹಳ್ಳಸಾಲು, ಗುಂಡುಗಟ್ಟೆ, ಕೆರೆ ಏರಿ ತನುವಾದ ಜಾಗದಲ್ಲಿ ಇರಬಹುದಾದ ಹೂವಿನ ಗಿಡಗಳು ಮಳೆಗಾಲಕ್ಕಿಂತಲೂ ಹೇಳೆಚ್ಚಾಗಿ ಬಿಸಿಲುಂಡು ಕಣಗಿಲೆ, ಸುತ್ತು ಕಣಗಿಲೆ, ಧೂಪ ಕಣಗಿಲೆ ಹೂವುಗಳು ಅರಳಿರುತಿದ್ದವು.

ಮುತ್ತುಗದ ಹೂವೋ ಅರಳಿ ಶಿವರಾತ್ರಿ ಕರೆಯುತ್ತಿರುತ್ತವೆ. ಖೂಳೆ ಹೊಲಗಳಲ್ಲಿ ತುಂಬೆ ಗಿಡಗಳಂತೂ ಮೈ ತುಂಬಾ ಹೂವಾಗಿ ರಾಶಿ ಪೂಜೆಗೆ ಅಣಿಯಾಗಿರುತಿದ್ದವು.


ನಿಮ್ಮೂರಿನ ವರದಿಗಾರರು ನೀವೆ ಯಾಕಾಗಬಾರದು. ನಿಮ್ಮೂರಿನ ಸಮಸ್ಯೆ, ವರದಿಗಳನ್ನು ಇಲ್ಲಿಗೆ‌ ವಾಟ್ಸಾಪ್ ಮಾಡಿ: 9844817737


ಅವಗಳ ಮೈ ಸಿರಿ ನೋಡುವಾಗ ಯಾರಾದರೂ ತುಂಡನೆ ಆಳು ಎದುರುಗೋಳ ಬಂದರೆ ತುಂಬೆ ಗಿಡುಕೆ ಏಣಿ ಹಾಕೋ ಹೂವಾಡಿಗ ಎನ್ನುತಿದ್ದರು. ಬ್ರಹ್ಮದಂಡೆ ಹೂವುಗಳೂ ಕಣಗಾಲದಲ್ಲೇ ಹೆಚ್ಚಾಗಿ ಅರಳುತ್ತವೆ. ಹಳ್ಳಕಾಯಿ ಮುರಿಯಲು ಬಂದಿರುತಿದ್ದವು. ಹುಚ್ಚಳ್ಳು ಸಜ್ಜೆ ತೆನೆ ಅಕ್ಕಡಿ ಜೋಳ ಒಣಗಿ ಹೊರೆ ಕಟ್ಟಲ್ಪಟ್ಟಿರುತಿದ್ದವು.

ಕಣಗಾಲ ಬಂದರೂ ಅವರೆ ಕಾಯಿ ಬಳ್ಳಿ ಒಳಗೆ ಅಂಕುಲ ಅಂಕುಲ ಅವರೆ ಗಿಡಕ್ಕೆ ಬುಡದಿಂದ ಬಳ್ಳಿಗುಂಟಲೂವೆ ಕಿರು ಗೆಜ್ಜೆ ಕಟ್ಟಿದಂತಿರುತಿದ್ದವು ಅವು ಬಲಿತು ಮೂಗೊಣಗುವ ಸೊಗಡವರೆ ಕಾಲ ಇನ್ನೇನು ಮುಗಿಯೋದರ ಅವದಿಯಲ್ಲಿ ಕಣಗಾಲವೂ. ತೊಳಕೆ ಹುರುಳಿ ಬಿದ್ದ ಇಬ್ಬನಿ ಕುಡಿದು ಬಲಿಯುತ್ತಿರುತ್ತಿತ್ತು.

ಹುರುಳಿ ಬೋಟು ಹೊಲದಲ್ಲಿ ಗೆಜ್ಜೆ ಕಟ್ಟಿ ಬೆಳೆಸಿದಂತೆ ಇರುತ್ತಿತ್ತು. ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಹಿಸುಕಿದ ಅವರೆ ತೊಕ್ಕು ಆಂಮ್ರ ಬರಾಗಿ ಮುದ್ದೆ ದೊಡ್ಡಿ ಭತ್ತದ ಅಕ್ಕಿ ಅನ್ನ. ಅಷ್ಟೊತ್ತಿಗಾಗಲೇ ಹೊಲ ಭತ್ತದ ಕೊಯ್ಲು ಮುಗಿಸಿ ಭತ್ತ ಸರುಗಂತೆ ಹೊಡೆದು ಒಣಗಿಸಿ ತುಂಬಿಕೊಂಡಿರುತಿದ್ದರು.

ಹೊತ್ತಿಗೆ ಸರಿಯಾಗಿ ಗ್ಯಾನ ಮಾಡಿ ಗೊಂತಿ ಸೇರುವ ರಾಸುಗಳಂತೆ ಹಟ್ಟಿ ಒಳಗೆ ಈವಳ್ಳಿ ರಾಸುಗಳಾದ ಎಮ್ಮೆ, ಹಸಗಳು ಕರು ಹಾಕಿರಿತಿದ್ದವು.‌ ಕಾಲಕ್ಕೆ ಸರಿಯಾಗಿ ಅಪರೂಪಕ್ಕೊಮ್ಮೆ ತಪ್ಪವೂ ಗಿಣ್ಣದಾಲು ದೊರೆಯುತಿತ್ತು.

ಗಿಣ್ಣು ಹಾಲು ಕಾಯಿಸಿ ಪಾಯಸ ಮಾಡುದಕ್ಕೆ ಗಿಣ್ಣ ಕಾಯಿಸೋದು ಎನ್ನುತಿದ್ದರು. ಸಾಮಾನ್ಯವಾಗಿ ಅಮ್ಮನ ವಾರವೇ ಗಿಣ್ಣ ಕಾಯಿಸುತಿದ್ದರು. ಅಮ್ಮನ ವಾರ ಎಂದರೆ ಗೊತ್ತಲ್ಲ; ಬ್ರೇಸ್ತುವಾರದು ಮುಂದ್ಲು ದಿನ ಸುಕ್ರುವಾರ. ಸನಿವಾರ ಮುಗುದು ಸ್ವಾಮಾರ ಆಗಿ ಬಳಿಗ್ಗೇ ಮಂಗಳುವಾರ ಬರುತ್ತಲ್ಲ ಅದೂವೆ ಅಮ್ಮನ ವಾರ. ಅಬ್ಬಬ್ಬಾ! ಅದೆಂತಹ ಸೊಬಗಿನ ಕಾಲ ನೋಡಿದೆವು. ಮನೆತನ ತಿಂಗಳ ಮಟ್ಟಿಗೆ ಕಣದತ್ತಿರವೇ ಸ್ಥಳಾಂತರಗೊಂಡಿರುತಿತ್ತು.

ಕೊಯ್ಲು ಕಾಲಕ್ಕೆ ಸರಿಯಾಗಿ ಕುರಿ ಭಂಡ ಕಟಾವು ಮಾಡೊ ಕಾಲ. ಚಿಕ್ಕನಾಯಕನಹಳ್ಳಿ ಕುರುಬುರು ರಾಮಣ್ಣ ಅವರೆಲ್ಲರೂ ಬರುತಿದ್ದರು.

ಭಂಡ ಕಟಾವು ಮಾಡಲು ಕುರುಬುರು ಬರುತ್ತಾರೆ ಎಂದರೆ ವಾರಕ್ಕೆ ಮುಂಚೆಯೇ ಕುರಿಯೋರು ಮನೆಗಳಲ್ಲಿ ತಯಾರಿಗಳಾಗತಿದ್ದವು. ಅವರನ್ನು ನೆಂಟರನ್ನು ಕಂಡ ಹಾಗೆ ಕಾಣೋರು. ಅವರಿಗೆ ಸುಖುವಾದ ಊಟ ಬಾಯಿ ತಂಬಾ ಎಲಡಿಕೆ. ಕಂಬಳಿ ಗದಿಗೆ ಹಾಕಿ ಇಳ್ಳೇವು ದಕ್ಷಿಣೆ ಇಟ್ಟು ಜಾಡಿ ಪೂಜೆ ಮಾಡಿ ಹಾಲು ಅರಿವಾಣದಲ್ಲಿ ಅವರನ್ನು ಒಳಗೊಂಡು ನಂತರದಲ್ಲಿ ಭಂಡದ ಕಟಾವು ಮಾಡಲಾಗುತ್ತಿತ್ತು.

ಅವರು ಬಂದರೆ ಐದಾರು ದಿನ ಅವರಿಗೆ ಮಾಡಿದ್ದೇ ನಮುಗೂವೆ ಹಬ್ಬ. ಕಡಗಣ ಆಗೋದು ಅಗೋ ಇಗೋ ಅನ್ನೋದುರೊಳಿಗೆ ಕೆರೆ ಆಶ್ರಯದ ಬೇಸುಗೆ ಬೆಳೆ ಗದ್ದೆ ನಾಟಿ ಕೆಲಸಗಳು ಕೈ ನೆರವಿಗೆ ಬರುತಿದ್ದವು.

ಕಣಗಾಲದಲ್ಲೇ ಮಾಯಿನು ಮರದು ಸಾಬರು ಹುಣಸೆ ಮರದ ಸಾಬರು ಮಾಯಿನು ಕಾಯಿ ಇಳುವೋಕೆ, ಹುಣಸೆ ಮರ ಬಡಿಯಾಕೆ ಬರುತಿದ್ದರು. ಅವರು ಹುಣಸೆ ಮರ ಬಡಿಯಕೋದೋರಿಗೆ, ಹಣ್ಣಾಯಕೋಗೋರಿಗೆ ಕೂಲಿನೂ ಕೊಡೋರು.

ಮರ ಫಸಲು ಗುತ್ತಿಗೆ ಮೊದಲೇ ಮಾತನಾಡಿಕೊಂಡಿರುತಿದ್ದರು. ಮುಂಗಡ ಹಣ ಪಡೆದವರು ಫಸಲು ದುಡ್ಡು ಕೊಟ್ಟವರ ಕೈ ಸೇರುವವರೆವಿಗೂ ಬೆಳೆಯನ್ನು ನಿಗುವಾಗಿ ನೋಡಿಕೊಳ್ಳುವುದು ವಾಡಿಕೆ. ಕೈ ವೊಡ್ಡಿ ಇಸ್ಕಂಡೀವಿ ಅವುರಿಗೆ ಮೋಸ ಆಗಬಾರದೆಂಬ ಕಾರಣದಿಂದಾಗಿ ವಾರಸುದಾರರೇ ಮರ ಕಾಯೋರು. ಹೀಗೆ ಫಸಲು ಕಾಯ್ದ ಕೊಟ್ಟದ್ದಕ್ಕೆ ಉಳಿಕೆ ಹಣದ ಜೊತೆಯಲ್ಲಿ ಉಬ್ಬಲುತಟ್ಟಿ ತಂಬಾ ಹುಣಸೆಹಣ್ಣು ಕೊಡಲಾಗುತ್ತಿತ್ತು.

ಮಾವು ಹುಣಸೆಯನ್ನು ಕೊಂಡು ಮೌಲ್ಯವರ್ಧನೆ ಮಾಡಿ ಕೊಡುತಿದ್ದರು. ಇದರಿಂದ ಜನ ಬಂಗ ನೀಸೋದು ತಪ್ಪೋದು. ವರ್ಷದಲ್ಲಿ ಎರಡೂ ಮೂರು ಬಾರಿಗೆ ಬಂದು ಗೇಯೋ ಎತ್ತುಗಳಿಗೆ ಲಾಳ ಕಟ್ಟಿ ಮತ್ತೆ ಐದಾರು‌ ದಿನಗಳ ನಂತರ ಬಂದು ಲಾಳ ಕಟ್ಟಿಸಿಕೊಂಡ ರಾಸು ಅವುಗಳು ಸರಿಯಾಗಿ ಕಾಲು ತುಳಿದುಕೊಂಡಿವೆಯೆ ಎಂದು ತಿಳಿದುಕೊಳ್ಳಲು ಹೋಗಿ ಬಂದು ಮಾಡುತಿದ್ದರು. ಹೊಸ ಬಟ್ಟೆ ಅಸನಾಗಿ ಅಳತೆಗೆ ಸರಿಯಾಗಿ ಬುಸುಕೋಟು, ತಂಬುದೋಳಿನು ಅಂಗಿ ಹೊಲಿದು ಸಿದ್ಧಪಡಿಸಿ ಕೊಡುತಿದ್ದರಲ್ಲ ಬಟ್ಟೆ ಹೊಲಿಯೊ ಸಾಬರು.

ಅದುಕೂ ಮೊದಲು ನಾವೆಲ್ಲರೂ ತೊಡುತಿದ್ದ ಅಳತೆಗೆ ಸಾಲದ ಅಥವಾ ದೊಗಲೆ ಆಗಿರುತಿದ್ದ ಸಂತೆ ಮೇಲಿನ ಮಾರಿಗೆ ಅಂಗಿಗಳು. ಹಳ್ಳಿಗಳಲ್ಲಿ ಮಷಿನ್ ಸಾಬರ ಮನೆಗಳು. ಅವರು ಸಾಮಾನ್ಯವಾಗಿ ಮೊದಲು ಹಳ್ಳಿಗಳಿಗೆ ಹಿಟ್ಟಿನ ಗಿರಣಿಗಳನ್ನು ತಂದವರು.

ಇದರಿಂದಾಗಿ ಗ್ರಾಮೀಣ ಭಾರತದಲ್ಲಿ ಬಾರೀ ಬದಲಾವಣೆಯೇ ಆಯಿತು. ಅವಗೆಲ್ಲಾ, ಅವಿಭಕ್ತ ಕುಟುಂಬಗಳ ಹಳ್ಳಿ ಭಾರತಕ್ಕೆ ಇವರು ಹಿಟ್ಟಿನ ಗಿರಣಿಗಳನ್ನು ತಂದದ್ದು ಮಹಿಳಾ ಭಾರತಕ್ಕೆ ಬಹುತೇಕ ಬಹು ದೊಡ್ಡ ಬಿಡುಗಡೆಯಾಯಿತು.

ಬೇಸಾಯ ಮಾಡಿ ಇಡೀ ಕುಟುಂಬವೇ ಬೆಳೆದ ದವಸ ದಿನಸಿಗಳನ್ನು ಮನೆಯ ಒಬ್ಬರೋ ಇಬ್ಬರೋ ಮಹಿಳೆಯರು ಅವುಗಳನ್ನು ವರ್ಷವಿಡೀ ಕುಟ್ಟಿ ಬೀಸಿ ಅಡಿಗೆ ಮಾಡಬೇಕಾಗಿತ್ತು. ಮಹಿಳೆಯರಿಗೆ ಇದು ರಾತ್ರಿ ಹಗಲಿನ ಕೆಲಸವಾಗಿತ್ತು. ಯಾ ನಮಪ್ಪನೋ ಸಾಬರು ಅವರನ್ನು ತಣ್ಣನೆಯ ಹೊತ್ತಿನಲ್ಲಿ ನೆನೆಯ ಬೇಕು, ಎಲ್ಲಿ ಹುಡುಕಿಕೊಂಡು ತಂದರೋ ರಾಗಿ ಮಷಿನ್ ಎಂದು ಮಷಿನ್ ಮನೆ ಸಾಬರನ್ನು ಬಾಯಿ ತಂಬಾ ಹೊಗಳಿದ್ದು ಹೊಗಳಿದ್ದೆ.

ಕಡುಗೋಲು ಕೈ ಬಾಚಿ ಹಾರೆಕೋಲು ಕುಳ ಜಿಗುಣೆ ಮಂತಾಗಿ ಅಣಿಸಿ ಅಣಸಾಕಿಸಲು ಅವುಗಳನ್ನು ಹೊತ್ತು ಕುಲುಮೆ ಮನೆಗೇ ಹೋಗಬೇಕಾಗಿತ್ತು. ಕಂಚುಮುಟ್ಟು ಇತ್ತಾಳೆ ಪಾರರ್ತೆ ಪಡಗು ಕಲಾಯಿ ಮಾಡಿ ತಳಕಟ್ಟಿ ತೂತು ಮುಚ್ಚಿ ಬೆಲೆ ಬಾಳುವ ಅವುಗಳನ್ನು ಮರುಬಳಕೆ ಮಾಡಬಹುದಾದ ರೀತಿಮಾರ್ಗ ಮಾಡಿಕೊಟ್ಟವರು ಕಲಾಯಿ ಸಾಬರು. ಅವರು ಇಲ್ದುದ್ದುರೆ ಕಂಚು ಮುಟ್ಟಿನ ಸಾಮಾನುಗಳೆಲ್ಲಾ ಹಾಳು ಬಿದ್ದು ಅಟ್ಟನೋ ತಿಪ್ಪೆನೋ ಸೇರಿರವು. ಅವುಗಳು ಗುಜುರಿಯಾಗಿ ಗುರುತಿಸಲ್ಪಟ್ಟು ಬೆಲೆ ಕಳೆದು ಕೊಳ್ಳುತಿದ್ದವು.

ಸಬ್ಬನು ಸಾವುರ ಕುರಿ ಹಾಳಿದ ಜನರು ಅನೇಕ ಪಶುಪಾಲನಾ ಸಮುದಾಯಗಳು. ಮುಖ್ಯವಾಗಿ ಕಾಯೋರರು ತಿನ್ನೋರು ಎಲ್ಲಾ ನಾವು ಕಾಣೋ ಹಾಗೆ ಮಾಂಸ ತಿನ್ನೋರು ಚರ್ಮ ಬಿಸಾಡೋರು. ಹಳ್ಳಿಗಳಲ್ಲಿ ಚರ್ಮೋದ್ಯಮ ಬೆಳಸಿ ಚರ್ಮದ ಮೌಲ್ಯ ವರ್ಧನೆಯನ್ನು ಪಶುಪಾಲನಾ ಸಮುದಾಯಗಳಿಗೆ ಕಲಿಸಿ ಹಣಗಳಿಕೆಯ ಅತ್ಯುನ್ನತ ಮಾರ್ಗ ತೋರಿಕೊಟ್ಟವರು ನಮ್ಮ ಸಾಬರಲ್ಲವೆ.

ಬಾನ ಮುಗುದು ವಾರಾದರೂವೆ ಚರ್ಮವನ್ನು ತೆಗೆದುಕೊಂಡು ಹೋಗಲು ಸಾಬರು ಬರಲಿಲ್ಲ ಅಂತಾ ಚರ್ಮಕ್ಕೆ ಉಪ್ಪು ಸರವಿ ಕೆಡದಾಗೆ ವಾಸನೆ ಬರದಾಗೆ ಇಟ್ಟುಕೊಂಡು ಅವರು ಬಂದಾಗ ಖರೀದಿಗೆ ಕೊಡೇವು.

ಕೊಟ್ಟಿಗೇಲಿ ಹೀನುಸುಳಿ ಹುಟ್ಟದರೆ ಕಣ್ಣಿ ಕಳಚಿ ಕಾಡಿಗೇನು ಹೊಡಿಯಿಲಿಲ್ಲ ಪುಗುಸಟ್ಟೇನೂ ಯಾರಿಗೂವೆ ಮಾರಲ್ಲ. ಅವುಗಳನ್ನು ತಗೊಳೋರು ಸುಳಿ ಸುದ್ದ ನೋಡೇ ಕೊಳ್ಳೋದು. ಹಾಗೆ ಕೊಟಿಗೇಲಿ ಉಳುದಾವು ಕೊಳ್ಳೋರು ಯಾರು?

ಕೋಡು ಮುರುಕ, ಮೋಟುಬಗ್ಗರಿ, ಕಾಲು ಮುರುಕಗಳನ್ನೆಲ್ಲಾ ಯಾಪಾರ ಮಾಡಿಸಿ ಕೊಟ್ಟೋರುನ್ನ ಮರಿಯೋದೆ. ಇದು ನ್ಯಾಯಕ್ಕೆ ಸಾಕಾಗೊ ಮಾತೆ. ಮಿಶ್ರ ತಳಿ ಹಸ ಗುಂಡು ಕರ ಈದರೆ ಕರ ಅದರ ಅವ್ವನು ಹಾಲು ಕಚ್ಚಲು ಬಿಡಲ್ಲ. ಅದು ಗೇಯೋಕೆ ಬರಲ್ಲ ಅಂದು ಮೇಲೆ ಅದು ಅದರ ಅವ್ವನು ಹಾಲು ಯಾಕೆ ಕುಡಿಬೇಕು ಅನ್ನೋ ಲೆಕ್ಕಾಚಾರ.

ಗೋಣಿ ಚೀಲಕ್ಕೆ ತಂಬಿ ಮಾರಾಟ ಮಾಡುತ್ತಾರೆ. ಲಾಳ ಕಟ್ಟೋದರಿಂದ ಕಾಲು ಸೋತ ಮರಿ ಕರಪಡಿ ಮಾಡಿ ಕಾಸಿ ಕರಗಿಸಿ ಪಶುಪಾಲನಾ ಸಮುದಾಯಗಳಿಗೆ ಮತ್ತು ಕೃಷಿಕರಿಗೆ ಕರೆನ್ಸಿ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಜನರ ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಸಬಲೀಕರಣಕ್ಕೆ ನೆರವಾದವರು ಜನಸಾಮಾನ್ಯರ ಸಂಪತ್ತಿನ ಉತ್ಪಾದನಾ ವಲಯಗಳ ಆಶ್ರಯ ದಾತರು ಸಾಬರು. ಮಾಂಸೋದ್ಯಮ, ಚರ್ಮೋದ್ಯಮ ಮತ್ತು ಗುಜರಿಗೆ ಮೌಲ್ಯ ವರ್ಧನೆ ಮಾಡಿದವರು. ಗ್ರಾಮೀಣ ಭಾರತದ ಅರ್ಥ ವ್ಯವಸ್ಥೆಗೆ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ.

ಹುಣಸೆ ಮರದ ಸಾಬರು ಬರಲಿಲ್ಲ, ಮಾಯಿನು ಮರದ ಸಾಬರು ಬರಲಿಲ್ಲ, ಚರ್ಮದ ಸಾಬರು ಬರಲಿಲ್ಲ, ಕಲಾಯಿ ಸಾಬರು ಬರಲಿಲ್ಲ, ಕಡ್ಡಿ ಇಡಗಲು ಸಾಬರು ಬರಲಿಲ್ಲ, ಮಷಿನ್ ಸಾಬರು ಬರಲಿಲ್ಲ, ಹುಣಸೆ ಹೆಣ್ಣಿನ ಸಾಬರು ಬರಲಿಲ್ಲ, ಹೊಂಗೆ ಬೀಜದ ಸಾಬರು ಬರಲಿಲ್ಲ ಎಂತೆಲ್ಲಾ ದಾರಿ ಕಾಯುತ್ತಿದ್ದ ಸಂದರ್ಭದಲ್ಲಿ ಇವತ್ತಿನ ಹಳ್ಳಿಗಳು ಕೊರೊನ ಕೋಮುವಾದಿಗಳು ಹಬ್ಬಿಸುವ ಸುಳ್ಳು ಸುದ್ದಿಗಳನ್ನು ನಂಬಿ ಬದುಕುವ ಪರಿಸ್ಥಿತಿಯನ್ನು ತಂದು ಕೊಂಡಿವೆಯಲ್ಲ? ಇವರು ಕೈ ಮೇಲೆ ಹಣ ಮಡಗಿ ಯಾಪಾರ ಮಾಡೋರು. ಬಿಳಿ ಚೀಟಿ ವ್ಯಾಪಾರ ವಹಿವಾಟು ನಡೆಸುವವರು ಇವರಲ್ಲ. ರೈತರ ಕಷ್ಟದ ಪರಿಸ್ಥಿತಿಯನ್ನೇ ಇಂತಹ ವ್ಯಾಪಾರದಾರರೂ ಅನುಭವಿಸುತಿದ್ದಾರೆ.

ಯಾತರ ಮಾತಿದು ರೀತಿಗೆ ಬಾರದು ಸೋತು ಸುಮ್ಮನೆ ನಡೆ ಮನೆಗೆ ಎಂದು ಹೇಳುವಂತಾಗಿದೆ. ಹೊನ್ನು ಬಿತ್ತಿ ಹೊನ್ನು ಬೆಳೆಯುವಂತಹ ಸಮುದಾಯದ ಸಂಬಂಧಗಳನ್ನು ಕಳೆದುಕೊಳ್ಳಲು ಹಳ್ಳಿಗಳು ಮುಂದಾಗಿವೆ. ತಿಳಿಯೋಣ, ಜಾತಿ ಸೂತಕ ಎಂಬೊ ಮಾತಿಲ್ಲ. ಹಾಗೆಯೇ, ಜಾತಿ ಮೂಲಕ ಕೊರೊನ ಹರಡುವುದಿಲ್ಲ.


ಉಜ್ಜಜ್ಜಿ ರಾಜಣ್ಣ ಅವರು ಹಿರಿಯ ಪತ್ರಕರ್ತರು, ಸಾಹಿತಿ‌ ಹಾಗೂ ಪ್ರಕಾಶಕರು. ಹಲವು ಹೋರಾಟಗಳಲ್ಲಿ ಮುಂಚೂಣಿ ಪಾತ್ರ ವಹಿಸಿದವರು.

ಹೋರಾಟ, ಪರಿಸರ, ಕಾಡು, ಶ್ರಮ ಸಂಸ್ಕೃತಿ ಜನರ ನಡುವೆ ಸದಾಕಾಲ ತಿರುಗಾಡುವ ಅವರು ಇದೇ ಮೊದಲ ಸಲ ಮೇಕೆ, ಕುರಿಗಾಹಿಗಳ ಸಾಂಸ್ಕೃತಿಕ ಹಿರಿಮೆ, ಗರಿಮೆಗಳ ಬಗ್ಗೆ ಆಗಾಗ ಬರೆಯುತ್ತಿದ್ದಾರೆ. ಅರೆ ಮಲೆನಾಡು, ಬಯಲು ಸೀಮೆ, ನೀಲಗಿರಿ ಸೆರಗಿನೊಂದಿಗೆ ಸಂಬಂಧ ಬೆಸೆದುಕೊಂಡಿರುವ ತುಮಕೂರು ಜಿಲ್ಲೆಯ ಸಾಂಸ್ಕೃತಿಕ, ಸಾಂಸ್ಥಿಕ ಸಂಬಂಧಗಳ ಬಗ್ಗೆ ಇವರ ಲೇಖನಗಳು ಗಮನ ಸೆಳೆಯುತ್ತವೆ. ಇವರ ಮೊ. 9 4 4 8 7 4 7 3 6 0

ಮಗು

ದೇವರಹಳ್ಳಿ ಧನಂಜಯ


ಆಸೆ,ಕನಸು,ಪಥ್ಯ,ಅಪಥ್ಯ,
ಬೇರೆ,ಬೇರೆಯದೇ ಸತ್ಯ.
ನಿನ್ನ ಆಗಮನದಿಂದ ಸುಖಾಂತ್ಯ
ಎರಡು ಪ್ರಪಂಚ ಒಂದಾಗಿ ದಾಂಪತ್ಯ.

ಕಿಚ್ಚು,ಹುಚ್ಚು,ಬೇರೆಯದೇ ಸಂಬಂಧ
ಎಲ್ಲವೂ ಡಿಕ್ಕಿ,ಸೆಳೆತ ವೈರುಧ್ಯ.-
ಕೂಡಿ, ಕೊನರು ಹೊಮ್ಮಿದ
ಜೀವಪರ ಗಂಧ.

ಕೊಸರು ಕೊನರಾಗಿ ಮಡಿಲು ತುಂಬಿ.
ಮೈ ಮನದಿ ಕಚಗುಳಿ ಪಲ್ಲವಿಸಿದಾಗ .
ಹೇರುವ ಯಾತನೆಯು ಪುಳಕದ ಘಳಿಗೆಯ
ಹೆತ್ತ ಒಡಲು ಮರೆಯಲಾಗದು.

ಹುಟ್ಟಿಸಿದವ ಎಂಬ ಅಹಂಕಾರದ ಎದೆಯ ಮೇಲೆ
ಪುಟ್ಟ ಪಾದ ಇಟ್ಟು ತುಟಿ ಚೆಲ್ಲಿದ ನಗು.
“ನಾನು ಹುಟ್ಟಿದ ಮೇಲೆ ನೀನು ಹುಟ್ಟಿದ್ದು”ಎಂದ ಮಗು,
ನಿರಹಂಕಾರದ ಪಾಠಹೇಳಿದ ಗುರು.


ನಿಮ್ಮೂರಿನ ಸಮಸ್ಯೆ, ಸುದ್ದಿಗಳನ್ನು ಇಲ್ಲಿಗೆ ಬರೆದು ವಾಟ್ಸಾಪ್ ಮಾಡಿ: 9844817737


ಕಣ್ಣು ಕಂಡವರೆಲ್ಲ ನಿನ್ನ ಬಿಂಬವೇ ಆಗಿ
ಎಲ್ಲರೂ ಎಲ್ಲವೂ ನೀನೇ ಆಗಿ
ಒಳಗಿನ ಕತ್ತಲೆ ದೂಡಿ.
ಎದೆಯ ಬೆಳಗಿದ ಮಿಂಚುಹುಳುವೆ.

ರಕ್ತ ಮಾಂಸ ದಿಂದಲೇ ಉದಿಸಿ
ಮನುಜ ಮಿತಿಯನ್ನು ಮಾನವೀಯ ಗೊಳಿಸಿ.
ದೇವರ ಹೆಸರಲ್ಲಿ ಕತ್ತಿ ಶೂಲಗಳು ಇರಿಯುತ್ತಿವೆ.
ಗುಂಡು ತುಪಾಕಿ ಸಿಡಿಯುತ್ತಿವೆ

ಸುಳ್ಳ, ಕೊಲೆಗಡುಕ, ಎಲ್ಲರ ಎದೆಯಲ್ಲೂ
ತಣ್ಣಗೆ ಕುಳಿತು ನಗುತ್ತಿರುವ ನನ್ನ ದೇವರೇ
ನಿನ್ನ ವಿಶಾಲ ಬಿತ್ತಿಯ ಮರೆಯಲಾಗದು
ಮರೆಯಲಾಗದ ಕವಿತೆಯ ಬರೆಯಲಾಗದು.