Thursday, February 26, 2026
Google search engine
Home Blog Page 260

ಅಕ್ಕಿ, ಚಾ ಹುಡಿ ವಿತರಿಸಿದ ಕಾರ್ಪೊರೇಟರ್ ಶಶಿಧರ ಹೆಗ್ಡೆ

Publicstory. in


Mangalore: ಕೊರೊನಾ ವಿರುದ್ಧದ ಜನತಾ ಕರ್ಫ್ಯೂ ನಿಂದಾಗಿ ದಿನ ನಿತ್ಯದ ಬದುಕಿಗೆ ಯಾವುದೇ ಆದಾಯ ಮೂಲಗಳಿಲ್ಲದೆ ತತ್ತರಿಸಿ ಸಂಕಷ್ಟ ಗೊಳಗಾದ ಮಂಗಳೂರು ಮಹಾ ನಗರ ಪಾಲಿಕೆಯ ದೇರಬೈಲ್ 24 ವಾರ್ಡ್- ಜನರಿಗೆ ಜನರಿಗೆ ಅಕ್ಕಿ, ಚಾಹುಡಿ ಸಕ್ಕರೆ ಉಪ್ಪು ಮುಂತಾದವುಗಳನ್ನು ಎಂ.ಶಶಿಧರ ಹೆಗ್ಡೆ ಯವರು ವಿತರಿಸಿದರು.

ನಾವೆಲ್ಲರೂ ವೈಯುಕ್ತಿಕವಾಗಿ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಬೇಕು ಎಂದರು.

ಈ ಸಂಧರ್ಭದಲ್ಲಿ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಸೇವಕರಾಗಿ ಸಹಕರಿಸಿದರು.

Lockdown ನಲ್ಲಿ ಹಿರಿಯ ವಕೀಲರಾದ HSS ಇಚ್ಛಾಶಕ್ತಿ

ಶಿವರಾಜ್


ನನ್ನ ಆದ್ಯ ಗುರುವರ್ಯರು, ಪ್ರಪ್ರಥಮ ಸೀನಿಯರ್ರು, ಸದಾವಂದನೀಯರು, ವಿದ್ಯೋದಯ ಕಾನೂನು ವಿಶ್ವವಿದ್ಯಾಲಯದ ಸಂಸ್ಥಾಪಕಾಧಿಪತಿ ಹೆಚ್ ಎಸ್ ಶೇಷಾದ್ರಿ ಅವರು (HSS) ತಮ್ಮ ಇಳಿ ವಯಸ್ಸಿನಲ್ಲಿ ದೇಶದ ಒಳಿತಿಗಾಗಿ ಮನೆಯಲ್ಲೇ ಉಳಿದು ತಮ್ಮ ಸುಪುತ್ರ ಮತ್ತು ಅವರ ಕುಟುಂಬದೊಂದಿಗಿದ್ದು, ಕೊರೋನಾ ತಡೆಯುವತ್ತ ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಿದರು.

ಬಿಡುವನ್ನು ವಿವಿಧ ಆಟಗಳನ್ನು ಆಡುವ ಮೂಲಕ ಕಳೆದರು.

ಮನೆಯಲ್ಲೇ ಎಲ್ಲರೂ ಉಳಿಯಬೇಕು. ಇದರಿಂದ ಸೋಂಕು ನಿರ್ಮೂಲನೆ ಸಾಧ್ಯ ಎಂದರು.

ಉರಿಬಿಸಿಲಿನ ತಾಪಕ್ಕೆ ಉದುರುತ್ತಿರುವ ಮಾವು: ಜಿಲ್ಲೆಯ ರೈತರಲ್ಲಿ ಆತಂಕ

ಜಗದೀಶ್ ಕೋಡಿಹಳ್ಳಿ


ತುಮಕೂರು: ಹಣ್ಣುಗಳ ರಾಜ ಮಾವಿನ ಹಣ್ಣು. ಪ್ರತಿವರ್ಷ ಜನವರಿ ತಿಂಗಳಲ್ಲೇ ಮಾವಿನ ಗಿಡದಲ್ಲಿ ತುಂಬಾ ಹೂವು ಕಾಯಿಗಳು ಇರ್ತಿತ್ತು. ಈ ಸಲ ಮಾವಿನ ಹಂಗಾಮು ಎರಡು ತಿಂಗಳ ತಡವಾಗುತ್ತಿದೆ.

ಮಾವಿನಕಾಯಿ ಎಳ್ಳು ಅಮಾವಾಸ್ಯೆಗೆ ಎಳ್ಳು ಕಾಳಿನಷ್ಟು, ಹುಣ್ಣಿಮೆಗೆ ಬಾರಿ ಕಾಯಿಯಷ್ಟು, ಹೋಳಿ ಹುಣ್ಣಿಮೆಗೆ ಹೋಳಾಗುವಷ್ಟು ಇರುತ್ತಿತ್ತು,
ಆದರೆ ಈ ವರ್ಷ ಮಾವಿನ ಫಸಲು ಈ ಮಾತಿಗೆ ವಿರುದ್ಧವಾಗಿದೆ.

ಇವತ್ತಿಗಾಗಲೇ ಹೋಳಾಗುವಷ್ಟು ಕಾಯಿಯ ಗಾತ್ರ ಇರಬೇಕಿತ್ತು. ಆದ್ರೆ ಈ ಬಾರಿ ಹೆಚ್ಚು ಬಿಸಿಲಿನ ಕಾರಣ ಸಣ್ಣಗಾತ್ರದ ಪೀಚು ನೆಲಕಚ್ಚುತ್ತಿದೆ ಎಂದು ಮಾವು ಬೆಳೆಗಾರಾದ ಹಂಚಿಹಳ್ಳಿ ರಾಜಣ್ಣ ಹೇಳುತ್ತಾರೆ.

ತಡವಾಗಿ ಬಿಟ್ಟಿರುವ ಮಾವಿನ ಹೂವು ಉದುರಲು ಪ್ರಾರಂಭವಾಗಿತ್ತು. ಹಿಂದೆ ಬಂದಂತಹ ಕಾಯಿ ಕಟ್ಟುವುದು ಅನುಮಾನವಾಗಿತ್ತು. ಹವಾಮಾನ ವೈಪರೀತ್ಯದಿಂದ ಪ್ರತಿವರ್ಷದಂತೆ ಮೇ ತಿಂಗಳ ಮೊದಲ ವಾರದಲ್ಲಿ ಬಾದಾಮಿ ರಸ್ಪುರಿ, ಬ್ಯಾನಿಶಷಾನ್ ಗಳಂತಹ ಮಾವು ಮಾರುಕಟ್ಟೆಗೆ ಬರುವುದು ಅನುಮಾನವಾಗಿದೆ ಎನ್ನುತ್ತಾರೆ ಅವರು.

ಕೂರೊನಾ ವೈರಸ್ ರೋಗದಿಂದ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ತೋಟಕ್ಕೆ ಬರುತ್ತಿಲ್ಲ. ಮಾವಿನ ತೋಟಗಳು ವ್ಯಾಪಾರವಾಗುತ್ತಿಲ್ಲ ಎಂದು ಮಾವು ಬೆಳೆಗಾರಾದ ಬ್ರಹ್ಮಸಂದ್ರ ಪುಟ್ಟರಾಜು ಹೇಳುತ್ತಾರೆ

ಈ ಬಾರಿ ಇಳುವರಿ ಅತಿ ಕಡಿಮೆ ಇದೆ. ಮಾರುಕಟ್ಟೆಗೆ ಮಾವಿನ ಕೊರತೆ ಎದುರಾಗುತ್ತದೆ. ಈಗಿರುವ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಮಾವಿನ ಬೆಳೆಗೆ ಬೆಲೆ ಸಿಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ನಮ್ಮ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮಾವು ಕೈಕೊಟ್ಟರೆ ನಮ್ಮ ಜಿಲ್ಲೆಯ ರೈತರ ಪರಿಸ್ಥಿತಿ ಹೇಳತಿರದು ಎಂದು ಮಧುಗಿರಿಯ ವಿಶ್ವಮೂರ್ತಿ, ದೇವರಾಜ್ ಆತಂಕ ವ್ಯಕ್ತಪಡಿಸಿದರು.

ಮೇ ತಿಂಗಳಿಂದ ಜುಲೈ ತಿಂಗಳು ಮಾವಿನ ಸುಗ್ಗಿ ಇರುವುದರಿಂದ ಮಕ್ಕಳು ಮಾವು ಬೆಳೆಗಾರರು ಸೇರಿದಂತೆ ಕೂಲಿ ಕಾರ್ಮಿಕರಿಗೂ ಕೈತುಂಬಾ ಕೆಲಸ ಮತ್ತು ಹಣ ಸಿಗುತ್ತಿತ್ತು. ಈ ವರ್ಷ ನಮ್ಮ ರೈತರ ಕಷ್ಟ ಕೇಳೋರಿಲ್ಲ ಅನ್ನುವ ಹಾಗಿದೆ ಎಂದು ಮಾವು ಬೆಳೆಗಾರಾದ ಚನ್ನಕೇಶವ್ ಅವರು ಹೇಳುತ್ತಾರೆ

ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್ ರವರು ” ಹವಾಮಾನ ವೈಪರಿತ್ಯದಿಂದ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆದ್ದರಿಂದ ಜಿಲ್ಲೆಯಲ್ಲಿ ಶೇಕಡ 25ರಷ್ಟು ಮಾತ್ರ ಫಸಲು ಕಾಣಬಹುದು.ಈಗ ಬಂದಿರುವ ಫಸಲನ್ನು ಅಲ್ಲೊಂದು ಇಲ್ಲೊಂದು ಮಾವು ಕಾಣುತ್ತಿದೆ. ಹೀಗಾಗಿ ಈ ಬಾರಿ ಮಾವಿನ ಫಸಲು ಕುಂಠಿತಗೊಂಡು ಮಾವು ಬೆಳೆಗಾರರನ್ನು ಚಿಂತೆಗೀಡುಮಾಡಿದೆ’ ಹೇಳಿದರು.

ಫುಡ್ ಪಾರ್ಕ್ ಬಳಸಿ


ರೈತರಲ್ಲಿ ಒಂದು ಆತಂಕ ವಾದರೆ, ಇರುವ ಫಸಲನ್ನು ರಕ್ಷಿಸಿಕೊಳ್ಳಲು ಜಿಲ್ಲೆಯ ರೈತರು ಸಂಸ್ಕರಿಸಲು ಶೀತಲೀಕರಣ ಅವಶ್ಯಕವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಆದ್ದರಿಂದ, ಫುಡ್ ಪಾರ್ಕ್ ನಲ್ಲಿ ಈ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಮುಂದಾಗಬೇಕು ಎನ್ನುತ್ತಾರೆ DYFI ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರಾಘವೇಂದ್ರ.

ಇಂಡಿಯಾ ಫುಡ್ ಪಾರ್ಕ್ ಪಿಪಿಪಿ ಮಾದರಿಯಲ್ಲಿ ಸ್ಥಾಪಿತವಾಗಿದ್ದು ಇದಕ್ಕೆ ಸರ್ಕಾರದ ಬಂಡವಾಳವು ಸೇರಿದೆ ಎಂಬುದನ್ನು ಜಿಲ್ಲಾಡಳಿತ ಮರೆಯಬಾರದು ಎಂದರು.


ವರದಿಗಾರರು ಭಾರತೀಯ ಕೃಷಿಕ್ ಸಮಾಜದ ಜಿಲ್ಲಾಧ್ಯಕ್ಷರು. ಪವರ್ ಗ್ರಿಡ್ ಸೇರಿದಂತೆ ಹಲವು ರೈತರ ಸಮಸ್ಯೆಗಳ ಪರ ದೊಡ್ಡಮಟ್ಟದಲ್ಲಿ ದನಿ ಎತ್ತಿದವರು.

ರೈತರ ಭೂಮಿ ಸ್ವಾಧೀನದ ವಿಷಯದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ‌ ಹೋರಾಟ ರೂಪಿಸಿದ್ದಾರೆ. ಜಿಲ್ಲೆಗೆ ಹೇಮಾವತಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆಯಲ್ಲಿ ಹೆಚ್ಚಿನ ನೀರು ಹಂಚಿಕೆ ಸಂಬಂಧ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಸಮಾಜಸೇವೆ, ಪರಿಸರ ರಕ್ಷಣೆ, ಕಾಡು ಬೆಳೆಸುವುದು, ನೈಸರ್ಗಿಕ ಕೃಷಿ ಬೆಂಬಲಿಸುವ ಕೆಲಸದಲ್ಲೂ ತೊಡಗಿದ್ದಾರೆ.


ಈ ಕಾಯಿ ಕಟ್ಟಿದರೆ ಕೊರೊನಾ ಬರಲ್ವಂತೆ!

ತುಮಕೂರು ಜಿಲ್ಲೆ ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳಲ್ಲಿ ತಿಪ್ಪೆಯಲ್ಲಿ ಬೆಳೆಯುವ ಕಾಯಿಯನ್ನು ಮನೆಯ ತಲ ಬಾಗಿಲಿಗೆ ಕಟ್ಟಿದರೆ ಕೊರೊನಾ ಸೋಂಕು ಹರಡುವುದಿಲ್ಲ ಎಂಬ ವದಂತಿ ಹರಡುತ್ತಿದೆ.

ತಿಪ್ಪೆ, ಹೊಲ ಗದ್ದೆಗಳನ್ನು ಅಲೆದು ಜನತೆ ಕಾಯಿಯನ್ನು ಹುಡುಕಿ ತರುತ್ತಿದ್ದಾರೆ. ತಂದ ಕಾಯಿಯನ್ನು ತಂತಿ ಅಥವಾ ದಾರಕ್ಕೆ ಕಟ್ಟಿ ಮುಖ್ಯ ಧ್ವಾರದ ಮೇಲೆ ಕಟ್ಟುತ್ತಿದ್ದಾರೆ.

ಈ ಕಾಯಿಯೂ ನೋಡಲು ಕೊರೊನಾ ವೈರಸ್ ಆಕಾರದಲ್ಲಿಯೇ ಇದೆ. ಸಧ್ಯ ಕಾಯಿಗಳಿಗೆ ಸಾಕಷ್ಟು ಬೇಡಿಕೆ ಇದೆ.

ಈ ಬಗ್ಗೆ ರೊಪ್ಪ ಗ್ರಾಮದ ಪವನ್ ಪ್ರತಿಕ್ರಿಯಿಸಿ, ಕಾಯಿ ಹುಡುಕಲು ಜನತೆ ಗುಂಪಿನಲ್ಲಿ ಓಡಾಡುತ್ತಿದ್ದಾರೆ. ಈ ಕಾಯಿ ಆಯುರ್ವೇದಕ್ಕೆ ಬಳಕೆಯಾಗುತ್ತದೆ. ಆದರೆ ಇದರಿಂದ ವೈರಸ್ ನಿಯತ್ರಣವಾಗುವ ಬಗ್ಗೆ ಯಾವುದೇ ಪುರಾವೆ ಇಲ್ಲ.

ಜನತೆ ಕಾಯಿ ಹುಡುಕಲು ಅಲೆದಾಡಿ ಅಪಾಯ ತಂದುಕೊಳ್ಳುವ ಬದಲು ಮನೆಯಲ್ಲಿದ್ದರೆ ಒಳ್ಳೆಯದು. ಜನತೆ ಊಹಾ ಪೋಹಗಳಿಗೆ ಕಿವಿಗೊಡಬಾರದು ಎಂದರು.

ಬಹುತೇಕ ವೃದ್ದೆಯರು ಮನೆಯಲ್ಲಿ ಕಾಯಿ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ. ಕಾಯಿ ಕಟ್ಟಿದರೆ ಆಗುವ ನಷ್ಟವೇನು. ಅದಕ್ಕೆ ಹಣ ಕೊಡಬೇಕೆ? ಎಂದು ಹೇಳಿ ಕಟ್ಟಿಸಲಾಗುತ್ತಿದೆ. ಕೊರೊನಾ ಕಾಯಿ ಎಂಬ ಹೆಸರಿನಿಂದಲೇ ತಿಪ್ಪೆಯಲ್ಲಿ ಬೆಳೆಯುವ ಕಾಯಿಯನ್ನು ಕರೆಯಲಾಗುತ್ತಿದೆ.

ಸೈನಿಕರಿಗೂ ತಗುಲಿತು ಕರೊನಾ

Tumkuru: ದೇಶದಲ್ಲಿ ಮುಂದುವರೆದ ಮಾರಕ ಕೊರೋನಾ ವೈರಸ್ ಅಟ್ಟಹಾಸ.
24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 478 ಪ್ರಕರಣಗಳು ದಾಖಲು.
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,547ಕ್ಕೆ ಏರಿಕೆ.
ಮಹಾರಾಷ್ಟ್ರದಲ್ಲಿ ಇನ್ನೂ 6 ಬಿಎಸ್‍ಎಫ್ ಸಿಬ್ಬಂದಿಯಲ್ಲಿ ಸೋಂಕು ದೃಢ.
ದೇಶದಲ್ಲಿ ವೈದ್ಯರು ಸೇರಿ 50 ವೈದ್ಯಕೀಯ ಸಿಬ್ಬಂದಿಗೆ ಕೊವಿಡ್ -19 ಪಾಸಿಟಿವ್.
ತಮಿಳುನಾಡಿನಲ್ಲಿ ಮತ್ತೆ 102 ಹೊಸ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 411ಕ್ಕೆ.
ಮುಂಬೈನಲ್ಲಿ 278 ಮಂದಿ ಸೋಂಕಿತರು, ಪುಣೆಯಲ್ಲಿ 70 ಮಂದಿ ಸೋಂಕಿತರು
ಉತ್ತರ ಪ್ರದೇಶದಲ್ಲಿ 40 ಹೊಸ ಸೋಂಕು ಪ್ರಕರಣಗಳು ದಾಖಲು.
ತೆಲಂಗಾಣದಲ್ಲಿ ಮತ್ತೆ 75 ಮಂದಿಯಲ್ಲಿ ಸೋಂಕು ಸೋಂಕಿತರ ಸಂಖ್ಯೆ 229.
ಅಸ್ಸಾಂನಲ್ಲೂ ಮತ್ತೆ 4 ಹೊಸ ಸೋಂಕು ಪ್ರಕರಣಗಳು ದಾಖಲು.
ತಮಿಳುನಾಡಿನಲ್ಲಿ 02 ಮಂದಿಯಲ್ಲಿ ಸೋಂಕು, ಸೋಂಕಿತರ ಸಂಖ್ಯೆ 411.

150 ವರ್ಷಗಳ ಹಿಂದೆ ತುಮಕೂರನ್ನು ಕಾಡಿದ ಭೀಕರತೆ ಕರೊನಾ ಮೀರಿಸಿತ್ತು ಗೊತ್ತಾ?

0

-ಡಾ.ಓ.ನಾಗರಾಜು


ಸ್ನೇಹಿತರೇ, ಹಾಗೆ ಸುಮ್ಮನೆ ಮೈಸೂರು ಗೆಜಟ್ ನ ಅವಲೋಕಿಸುತ್ತಿರುವಾಗ ನಮ್ಮ ತುಮಕೂರು ಜಿಲ್ಲೆಗೆ ಸಂಬಂಧ ಪಟ್ಟ ಮಾಹಿತಿ ಸಿಗಬಹುದೆ ಎಂದು ಕುತೂಹಲದಿಂದ ಓದಿದೆ.

ಕ್ರಿ.ಶ.1866 ನೇ ಇಸವಿ ಮೇ ತಿಂಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ನಡೆದ ಎಲ್ಲ ಆಗು ಹೋಗುಗಳ ಭಾಗಶ: ವರದಿ ನನ್ನ ಗಮನ ಸೆಳೆಯಿತು.


ಲೇಖನ, ವರದಿ, ಬರಹಗಳನ್ನು ನೀವು ವಾಟ್ಸಾಪ್ ಮಾಡಬಹುದು:9844817737


ತುಮಕೂರು ಜಿಲ್ಲೆ ಅಂದು ನಂದಿ ದುರ್ಗ ಡಿವಿಜನ್ ಗೆ ಒಳಪಟ್ಟಿತ್ತು ಎಂಬ ಮಾಹಿತಿ ಯ ಜೊತೆಗೆ ಮೇ ತಿಂಗಳಲ್ಲಿ ಜಿಲ್ಲೆಯ ಜನ -ಜಾನುವಾರಗಳ ಪ್ರಕೃತಿ ಯೊಂದಿಗಿನ ಅವಲಂಬನೆ ಮತ್ತುಅವಘಡ ಸಂಬಂಧಿತ ಸಾಧಕ ಬಾಧಕಗಳು ನಮ್ಮ ಇಂದಿನ ಕೊರೋನ ಸೋಂಕಿನ ಭಯದ ವಾತಾವರ ಕ್ಕೆ ತುಲನೆ ಮಾಡತೊಡಗಿ ಸೋಜಿಗಪಟ್ಟೆ.

ನನ್ನಲ್ಲಿ ಇಂದಿನ ಆಡಳಿತ ದ ಹೊಣೆಗೇಡಿತನದ ಬಗ್ಗೆ ಬಾಲಿಶ ಹೇಳಿಕೆಗಳ ಬಗ್ಗೆ ಹಲವಾರು ಪ್ರಶ್ನೆಗಳಿವೆ. ಆ ಸಂಬಂಧ ಮಾತಾಡುವ ಕಾಲ ಇಲ್ಲವಾದ್ದರಿಂದ, ನಾನು ಓದಿ ಮೈಸೂರು ಗೆಜೆಟ್ ಯಥಾವತ್ತಾದ ವರದಿ ನಿಮ್ಮ ಅವಗಾಹನೆಗೆ ತರುತ್ತಿದ್ದೇನೆ.

ಸುಮಾರು ಒಂದೂವರೆ ಶತಮಾನದ ಹಿಂದೆ ತುಮಕೂರು ಜಿಲ್ಲೆ ಯಾವ ರೀತಿ ಪ್ರಾಕೃತಿಕ ವಿಕೋಪ ಕ್ಕೆ ನಲುಗಿತ್ತು.(ಉಖಾಲ್ ಜಲಾಬ್ ಎಂದರೆ ವಾಂತಿ ಭೇದಿ ಎಂದು ಅರ್ಥ ) ಸಾವುಗಳು ಸಂಭವಿಸಿದ್ದವು. ಬರದ ಚಿತ್ರಣವೂ ಇದೆ.

ತುಮಕೂರು ಡಿಸ್ಟ್ರಿಕ್ಟ್ ಕಾಲಸ್ಥಿತಿ ವೃತ್ತಾಂತ: ತುಮಕೂರು ಡಿಸ್ಟ್ರಿಕ್ ನಲ್ಲಿ ವೈಶಾಖ ಫಸಲ್ ಕಟಾವ್ ಆಯಿತು. ಕೆಲವು ಸ್ಥಳಗಳಲ್ಲಿ ವಿನಾ ಮಿಕ್ಕಾದ ಕಡೆ ಸಾಮಾನ್ಯವಾಗಿ ರೈತರು ತಮ್ಮ ಹೊಲಗಳನ್ನು ಊಳುವುದಕ್ಕೆ ಅನುಕೂಲವಾಗಿ ಸಾಕಾದಷ್ಟು ಆಗಲಿಲ್ಲವು. ಬಾಗಾಯತು ಮತ್ತು ತರೀಪೈರಿಗೆ ಮಳೆಇಲ್ಲದೆಯೂ ಭಾವಿಗಳಲ್ಲಿಯೂ,ಕೆರೆಗಳೊಳಗೂ ನೀರು ಇಲ್ಲದೆಯೂ ನಷ್ಟಕರವಾಗಿತ್ತು.

ಪದಾರ್ಥಗಳು ದೊರೆಯದರಿಂಲೂ ಧಾರಣೆ ಚಡಾವಿನಿಂದಲೂ ಬಡವರು ಬಹಳ ಕಷ್ಟ ಪಡುತ್ತಿದ್ದರು. ಕುಣಿಗಲ್ ತಾಲ್ಲೂಕಿನಲ್ಲಿ ಬಹಳಮಂದಿ ಮತ್ತೆಲ್ಲಿಯಾದರು ಕೆಲಸ ನೋಡಿ ಕೊಳ್ಳುವುದಕ್ಕೋಸ್ಕರ ಸ್ಥಳ ಬಿಟ್ಟು ಹೋಗುತ್ತಿದ್ದರಂತೆ.

ಕೆಲವು ಸ್ಥಳಗಳಲ್ಲಿ ಜೋಳ ಯೆಳ್ಳು ಅರಳು ಉದ್ದು ಹೆಸರು ಇವುಗಳು ಪೇರಾವ್ ಆಗಿದ್ದವು. ತುಮಕೂರು ತಾಲ್ಲೂಕಿನಲ್ಲಿ ಆನೆ ಕಲ್ಲು ಸಹಿತವಾಗಿ ಮಳೆ ಬಿತ್ತು. ಮದ್ದಗಿರಿ ( ಮಧುಗಿರಿ), ತುರುವೇಕೆರೆ ಹೊನ್ನವಲ್ಲಿ, ಶಿರಾ ಈ ತಾಲ್ಲೂಕುಗಳಲ್ಲಿ ಉಖಾಲ್ ಜಿಲಾಬ್ ಉಪದ್ರವವುಂಟಾಗಿತ್ತು ಪರಂತು ಇತರ ವಿಷಯದಲ್ಲಿ ಆ ಡಿಸ್ಟ್ರಿಕ್ಟಿನಲ್ಲಿ ಓಳ್ಳೇ ಆರೋಗ್ಯ ವುಂಟಾಗಿತ್ತು.

ಎಲ್ಲಾ ತಾಲ್ಲೂಕಿನೊಳಗೂ ಮುಖ್ಯವಾಗಿ ಸಿರಾ ತಾಲ್ಲೂಕಿನಲ್ಲಿ ದನಗಳು ಹುಲ್ಲಿಲ್ಲದೆ ನೀರಿಲ್ಲದೆ ಕಷ್ಟ ಪಡುತ್ತಿದ್ದವು. ಮತ್ತು ಗೋಮಾರಿಯಿಂದ ಅನೇಕ ದನಗಳು ಸತ್ತು ಹೋದವು. ಸಿರಾ ತಾಲ್ಲೂಕು ವೊಂದರಲ್ಲಿಯೇ 4338 ದನಗಳಿಗೆ ಕಡಮೆ ಇಲ್ಲದೆ ಮುಖ್ಯವಾಗಿ ಹೊಟ್ಟೆ ಗೆ ಇಲ್ಲದ್ದರಿಂಲೇ ಸತ್ತು ಹೋದವೆಂದು ತಿಳಿಯಲಾಯಿತು.

ಮನುಷ್ಯರಲ್ಲಿ ಉಲಾಖ್ ಜಲಾಬ್ ನಿಂದಾಹೋದವರು ( ಸತ್ತು ಹೋದವರು) 42 ಮಂದಿ. ಶಿಡ್ಲುಹೊಡೆದು ಹೋದವರು 4 ಮಂದಿ ಸಹಿತ ವಾಗಿ ಹಸಿವು, ಕಾಯಿಲೆಯಿಂದ 284 ಮಂದಿ ಮೃತಪಟ್ಟರು. ದನಗಳಲ್ಲಿ ಗೋಮಾರಿ ಯಿಂದ ಹೊದ್ದು 227 ಸಹಿತವಾಗಿ ವಿಸ್ತಾರ 5421 ಕಾಲ್ನಡೆಗಳು ನಷ್ಟವಾದವು. ಆದರೆ ಏಪ್ರಿಲ್ ತಿಂಗಳಲ್ಲಿ 283 ಮಟ್ಟಿಗೆ ಹೋದವು.

ಮೇಲಿನ ವರದಿಯಲ್ಲಿ ಅಂದಿನ ಆಡಳಿತ ಜನರ ಸಮಸ್ಯೆಗೆ ಸ್ಪಂದಿಸುವ ಯಾವ ಯತ್ನ ಮಾಡದಿರುವುದು ತಿಳಿಯುತ್ತದೆ ಮತ್ತು ಇಂದು ಕೊರೋನ ಉಂಟು ಮಾಡಿರುವ ಅಲ್ಲೋಲ ಕಲ್ಲೋಲ ಪರಿಸ್ಥಿತಿ ಯಲ್ಲಿ ಒಬ್ಬೊಬ್ಬರೂ ಪರಿಸ್ಥಿತಿಯ ಲಾಭವನ್ನು ಪಡೆಯಲು ಯತ್ತಿಸುತ್ತಿದ್ದಾರೆ ಹಾಗೂ ಕೆಲವರು ಪ್ರಾಮಾಣಿಕ ವಾಗಿ ಸಮಸ್ಯೆ ನಿವಾರಣೆಗೆ ಕಾರ್ಯ ಮಗ್ನವಾಗಿರುವ ವಿದ್ಯಮಾನ ಕಣ್ಮುಂದೆಯೇ ಇದೆ. ಆ ಗೆಜೆಟ್ ವರದಿಯೊಂದಿಗೆ ಇಂದಿನ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ ಹೇಗಿದೆ ಎಂಬುದನ್ನು ಹೋಲಿಕೆ ಮಾಡಿ.


ಲೇಖಕ ಡಾ.ಓ.ನಾಗರಾಜ್ ಮೂಲತಃ ಕೊರಟಗೆರೆಯವರು.ಕೊರಟಗೆರೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು.

ಬಂಡಾಯ ಸಾಹಿತ್ಯ ಚಳವಳಿಯ ಮುಂಚೂಣಿಯಲ್ಲಿರುವ ಅವರು, ತುಮಕೂರು ಜಿಲ್ಲೆಯ ಮಹತ್ವದ ಬರಹಗಾರರಲ್ಲಿ ಒಬ್ಬರು.

ತುಮಕೂರು ಜಿಲ್ಲೆಯ ಚನ್ನರಾಯನದುರ್ಗವನ್ನು ಕೇಂದ್ರವಾಗಿಟ್ಟುಕೊಂಡು ಆಳ್ವಿಕೆ ಮಾಡಿದ ಈ ನಾಡಿನ ಮೊದಲ ದಲಿತ ದೊರೆ ಕುರುಂಗರಾಜನ ಕುರಿತು ಇವರು ಬರೆದಿರುವ ಕುರಂಗರಾಜ ವೈಭವ ಐತಿಹಾಸಿಕ ಕಾದಂಬರಿ ಇಡೀ ನಾಡಿನ ಇತಿಹಾಸ ಅಧ್ಯಯನಕಾರರಿಗೆ ಹೊಸ ದಾರಿಯ ಹುಡುಕಾಟ ತೋರಿಸಿದೆ.


ಗುಬ್ಬಿ ತಹಶೀಲ್ದಾರ್ ಸಂದರ್ಶನ: ಜನರ ಸಮಸ್ಯೆ ನೀಗಿಸುವ ಆಡಳಿತಕ್ಕೆ ಒತ್ತು

0

🖋 ಲಕ್ಷ್ಮೀಕಾಂತರಾಜು ಎಂ.ಜಿ


ಗುಬ್ಬಿ ತಾಲ್ಲೂಕಿನ ತಿಪ್ಪೂರಿನಲ್ಲಿ ರೈತನ ಮರಕಡಿದ ಪ್ರಕರಣದ ವಿವಾದದಲ್ಲಿ ಇಲ್ಲಿನ ತಹಶೀಲ್ದಾರ್ ಅವರನ್ನ ಸರ್ಕಾರ ಸೇವೆಯಿಂದ ಹಿಂಪಡೆದ ಪರಿಣಾಮ ತಹಶೀಲ್ದಾರ್ ಹುದ್ದೆ ಖಾಲಿ ಇತ್ತು. ಆ ಸ್ಥಾನಕ್ಕೆ ಡಾ// ಪ್ರದೀಪ್ ಕುಮಾರ್ ಅವರನ್ನ ತಹಶೀಲ್ದಾರ್ ಗ್ರೇಡ್ 1 ಹುದ್ದೆಗೆ ನೇಮಿಸಿದ್ದು, ಪ್ರದೀಪ್ ಕುಮಾರ್ ಅವರು ಗುಬ್ಬಿ ತಹಸೀಲ್ದಾರ್ ಆಗಿ ಅಧಿಕಾರವಹಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಜನರು ಸದಾ ಆತಂಕದಲ್ಲಿಯೇ ಕಾಲ‌ ದೂಡುವಂತಾಗಿದೆ. ರೈತನ ಬೆಳೆಗೂ ಮಾರುಕಟ್ಟೆ ಸಿಗದಂತಾಗಿದೆ. ಇಂಥಹ ಕ್ಲಿಷ್ಟಕರ ಸವಾಲುಗಳು ಇರುವ ಸಮಯದಲ್ಲಿ ಗುಬ್ಬಿ ತಹಶೀಲ್ದಾರ್ ಆಗಿ ಅಧಿಕಾರಿವಹಿಸಿಕೊಂಡಿರುವ ಡಾ.ಪ್ರದೀಪ್ ಕುಮಾರ್ ಅವರನ್ನು “ಪಬ್ಲಿಕ್ ಸ್ಟೋರಿ” ವೆಬ್ ಪತ್ರಿಕೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿ‌ದೆ.


ಲೇಖನ, ವರದಿ, ಬರಹಗಳನ್ನು ನೀವು ವಾಟ್ಸಾಪ್ ಮಾಡಬಹುದು:9844817737


ಪ್ರಶ್ನೆ:: ನಿಮ್ಮ ಮೂಲ‌ಸ್ಥಳ ಹಾಗೂ ಹಿನ್ನೆಲೆ ಹಾಗೂ ವಿದ್ಯಾರ್ಹತೆ ಏನು?

ನನ್ನದು ಬೀದರ್ ಜಿಲ್ಲೆಯ ಬಸವಕಲ್ಯಾಣ. ಪಶುವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರ. ಸರ್ಕಾರಿ ಪಶುವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಾ 2014 ಬ್ಯಾಚಿನ ಕೆಎಎಸ್ ಅಧಿಕಾರಿಯಾಗಿ ನೇಮಕವಾಗಿದ್ದೇನೆ.

ಪ್ರಶ್ನೆ:: ರಾಜ್ಯವ್ಯಾಪಿ ಕರೋನಾ ಹರಡುತ್ತಾ ಆತಂಕದಲ್ಲಿರುವ ಸಮಯದಲ್ಲಿ ಗುಬ್ಬಿ ತಹಶೀಲ್ದಾರ್ ಆಗಿ ನೇಮಕವಾಗಿ ಬಂದಿದ್ದೀರಾ. ನಿಮ್ಮ ಮುಂದೆ ಸವಾಲುಗಳ ರಾಶಿಯೇ ಇದೆ ಹೇಗೆ ನಿಭಾಯಿಸುತ್ತೀರಾ?

ದೇಶವ್ಯಾಪಿ ಕರೋನಾ ವ್ಯಾಪಿಸಿದೆ. ಆದರೆ,ನಮ್ಮ ತಾಲ್ಲೂಕಿನಲ್ಲಿ ಇದುವರೆಗೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ತಾಲ್ಲೂಕಿನಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು ಜನರಿಗೆ ಹೊರಬಾರದಂತೆ ಮನವಿ ಮಾಡಲಿದ್ದು ಕೊರೋನಾ ಹರಡದಂತೆ ತಡೆಗಟ್ಟಲು ಸರ್ಕಾರದ ಎಲ್ಲ ನಿಯಮಗಳನ್ನ ಕಡ್ಡಾಯವಾಗಿ ಅನುಷ್ಠಾನ ಮಾಡಲಾಗುವುದು.

ಪ್ರಶ್ನೆ:ನೆರೆಯ ಶಿರಾ ಪಟ್ಟಣದಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಗುಬ್ಬಿಯು ಶಿರಾದೊಂದಿಗೆ ಗಡಿ ಹಂಚಿಕೊಂಡಿದ್ದು ಆ ಭಾಗದಿಂದ ಕೊರೋನಾ ತಡೆಗಟ್ಟಲು ಯಾವ ಕ್ರಮ ಕೈಗೊಂಡಿದ್ದೀರಿ?

ನಮ್ಮ ತಾಲ್ಲೂಕಿಗೆ ಹೊಂದಿಕೊಂಡಿರುವ ಶಿರಾದಿಂದ ಗುಬ್ಬಿ ತಾಲ್ಲೂಕಿ ಪ್ರವೇಶ ಪಡೆಯುವ ಶಿರಾ-ನಂಜನಗೂಡು ರಸ್ತೆಯ ದೇವರಹಳ್ಳಿಯ ಬಳಿ ಚೆಕ್ ಪೋಸ್ಟ್ ಹಾಕಿ ಪರಿಶೀಲಿಸಿ ಬಿಡಲಾಗುತ್ತಿದೆ. ಬುಕ್ಕಾಪಟ್ಟಣ ಮಾರ್ಗದ ಶಿವರಾಂಪುರದ ಬಳಿ ಚೆಕ್ ಪೋಸ್ಟ್ ಹಾಕಿದ್ದು ಅಲ್ಲಿಯೂ ಪರಿಶೀಲಿಸಿ ಬಿಡಲಾಗುತ್ತಿದೆ. ಹಾಗೂ ಕಾಳಿಂಗನಹಳ್ಳಿಯಲ್ಲಿ ಮತ್ತೊಂದು ಚೆಕ್ ಪೋಸ್ಟ್ ನಾಳೆ ತೆರೆಯಲಾಗುವುದು.

ಪ್ರಶ್ನೆ:: ಗುಬ್ಬಿಯಲ್ಲಿ ನಿಷೇದಾಜ್ಞೆ ಇದ್ದರೂ ಅಲ್ಲಲ್ಲಿ ಜನಸಂದಣಿ ಇದೆ. ನಿಮ್ಮ ಪ್ರತಿಕ್ರಿಯೆ?

ಹೌದು. ಅಲ್ಲಲ್ಲಿ ಜನ ಗುಂಪುಗೂಡುತ್ತಾರೆ. ಪೊಲೀಸ್ ಇನ್ಸ್ ಪೆಕ್ಟರ್ ಜೊತೆ ಮಾತನಾಡಿ ನಿಷೇದಾಜ್ಞೆಯನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸುತ್ತೇನೆ.

ಪ್ರಶ್ನೆ: ಈಗ ಬೇಸಿಗೆ ಇದೆ. ಈ ಲಾಕ್ ಡೌನ್ ಅಂಥ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದರೆ ಯಾವ ಕ್ರಮ ವಹಿಸುತ್ತೀರಾ?

ಇದುವರೆಗೆ ತಾಲ್ಲೂಕಿನಲ್ಲಿ ಕುಡಿಯುವ ‌ನೀರಿನ ಸಮಸ್ಯೆ ವರದಿಯಾಗಿಲ್ಲ. ಆದಲ್ಲಿ ಟ್ಯಾಂಕರ್ ಮೂಲಕ ನೀರನ್ನ ಸರಬರಾಜು ಮಾಡಲಾಗುವುದು.

ಪ್ರಶ್ನೆ:: ಪೌತಿ ಖಾತೆ ಅಂದೋಲನದಲ್ಲಿ ತಾಲ್ಲೂಕಿನಾದ್ಯಂತ ಖಾತೆ ಬದಲಾವಣೆಗೆ ಅರ್ಜಿ ಸ್ವೀಕರಿಸಲಾಗಿದೆ. ಸ್ವೀಕರಿಸಿದ ಅರ್ಜಿಗಳಲ್ಲಿ ಶೇ 50 ರಷ್ಟು ಮಾತ್ರ ಹಕ್ಕು ಬದಲಾವಣೆಯಾಗಿವೆ. ಉಳಿದ ಅರ್ಜಿಗಳ ಖಾತೆಬದಲಾವಣೆ ಯಾವಾಗ?

ಸಲ್ಲಿಸಿರುವ ದಾಖಲೆಗಳಲ್ಲಿ ಪೂರಕವಾಗಿರದ ದಾಖಲೆಗಳು ಹಾಗೂ ನಮ್ಮ ಭೂಮಿ ವೆಬ್ ಸೈಟ್ ನ ತಾಂತ್ರಿಕ ದೋಷದಿಂದ ವಿಳಂಬವಾಗಿದೆ.ಸಾಧ್ಯವಾದಷ್ಟು ಈ ಸಮಸ್ಯೆ ಪರಿಹರಿಸುತ್ತೇನೆ.

ಪ್ರಶ್ನೆ: 2019 ರ ಕಡತ ವಿಲೇವಾರಿ ಸಪ್ತಾಹದಲ್ಲಿ ತಮ್ಮ ಕಚೇರಿಯಲ್ಲಿ ಕಡತ ವಿಲೇವಾರಿ ನಿರೀಕ್ಷಿತ ಪ್ರಗತಿಕಂಡಿಲ್ಲ. ಇದರ ಕುರಿತು ತಾವು ತಗೆದುಕೊಳ್ಳುವ ಕ್ರಮಗಳೇನು?.

ಜಲಾಕ್ ಡೌನ್ ತೆರವು ಬಳಿಕ ತಾಲ್ಲೂಕು ಕಚೇರಿಯಲ್ಲಿನ ಕಡತ ವಿಲೇವಾರಿ ಕೆಲಸಕ್ಕೆ ವೇಗ ನೀಡಲಾಗುವುದು. ವಿಶೇಷ ಮುತುವರ್ಜಿ ವಹಿಸುತ್ತೇನೆ.

ಕ್ಷಮಿಸಿಬಿಡು ಪ್ರಭುವೇ

ದೇವರಹಳ್ಳಿ ಧನಂಜಯ


ಕ್ಷಮಿಸಿಬಿಡು ಪ್ರಭುವೇ
ದೀಪ ಎಂಬುದು ಮೌಢ್ಯ ಅಜ್ಞಾನ
ಅಂಧಕಾರ ತೊಲಗಿಸುವ ಬೆಳಕು
ಅಂದು ಕೊಂಡಿದ್ದಕ್ಕೆ.

ಕ್ಷಮಿಸಿಬಿಡು ಪ್ರಭುವೇ
ಎಲ್ಲರ ಒಳಿತಿಗಾಗಿ
ಸರ್ವಶಕ್ತನಲ್ಲಿ ದಿನವೂ
ಪ್ರಾರ್ಥಿಸಿಕೊಂಡದ್ದಕ್ಕೆ.
ಸಹಬಾಳ್ವೆಯ
ಕನಸು ಕಂಡಿದ್ದಕ್ಕೆ

ಕ್ಷಮಿಸಿಬಿಡು ಪ್ರಭುವೇ
ದಿನವಿಡೀ ದುಡಿದು
ಗೂಡು ಸೇರುವ ಹಕ್ಕಿಗಳಂತೆ
ಮನೆಗೆ ಮರಳಿದ್ದಕ್ಕೆ
ಗೋಧೂಳಿಯಲ್ಲಿ
ನಿಮ್ಮ ಆಣತಿ ಇಲ್ಲದೆ
ಪ್ರತಿದಿನ ಹಣತೆ ಹಚ್ಚಿದ್ದಕ್ಕೆ.
ಹಣತೆ ಅಚ್ಚುವುದು ಸಂಸ್ಕಾರ
ಅಂದುಕೊಂಡಿದ್ದಕ್ಕೆ


ಲೇಖನ, ವರದಿ ಬರಹಗಳನ್ನು ನೀವು ವಾಟ್ಸಾಪ್ ಮಾಡಬಹುದು:9844817737


ಕ್ಷಮಿಸಿಬಿಡು ಪ್ರಭುವೇ
ಆಯ್ಕೆಯ ಮೂಲಕವೇ
ನಿಮಗೆ ಶಕ್ತಿ ತುಂಬಿದ್ದೇವೆ
ಅಂದು ಕೊಂಡಿದ್ದಕ್ಕೆ
ನಿಮ್ಮ ಶಕ್ತಿ
ನಮ್ಮ ಒಳಿತಿಗೆ ಎಂದು
ನಂಬಿ ಕೊಂಡಿದ್ದಕ್ಕೆ

ಕ್ಷಮಿಸಿಬಿಡು ಪ್ರ ಭುವೇ
ಕತ್ತಲಲ್ಲೂ ಕಾಣುವ
ಆಳ್ವಿಕೆಯ ಹುಳುಕುಗಳನ್ನು
ಬೆಳಕಲ್ಲು ಕಾಣದೆ ಹೋಗಿದ್ದಕ್ಕೆ
ಭ್ರಮೆಯ ಬೆಳಕಲ್ಲಿ
ಕತ್ತಲ ಸತ್ಯಗಳ ಮರೆಮಾಚು ತಿರುವ
ನಿಜ ಮುಖವ
ಅರಿಯದೇ ಕುರುಡಾಗಿದ್ದಕ್ಕೆ.

ಕ್ಷಮಿಸಿಬಿಡು ಪ್ರಭುವೇ
ಶ್ರಮಿಕರ ಕಿಸೆಯಲ್ಲಿ
ನೀನಿಟ್ಟ ಅಜ್ಞಾತ ಕತ್ತರಿಯ
ನೋಡದೆ ಹೋಗಿದ್ದಕ್ಕೆ
ಭ್ರಮೆಯ ಬ್ರಹ್ಮ
ರಕ್ಷಣೆಗೆ ಬರಲಾರ ಎಂಬ
ಕಟು ಸತ್ಯ
ಅರಿಯದೆ ಹೋಗಿದ್ದಕ್ಕೆ.


ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದೇವರಹಳ್ಖಿಯವರಾದ ಧನಂಜಯ ವೃತ್ತಿಯಲ್ಲಿ ಶಿಕ್ಷಕರು. ಕೆಲಕಾಲ ಪ್ರಜಾವಾಣಿ ವರದಿಗಾರರಾಗಿದ್ದ ಅವರು ಹಲವು ಮಹತ್ವದ ವರದಿಗಳನ್ನು ಮಾಡಿದ್ದಾರೆ. ಸಮಾಜ, ಪರಿಸರ, ಸಮಾನತೆ, ನೀರು, ಕಾಡು ಹೀಗೆ ಅನೇಕ‌ ಹೋರಾಟಗಳಿಗೆ ಜೀವ ತುಂಬುವ ಕೆಲಸವನ್ನು ಮಾಡಿದ್ದಾರೆ.

ಎರಡೇ‌ ದಿನದಲ್ಲಿ‌ 61 ಸಾವಿರ ಕುಟುಂಬಕ್ಕೆ ಪಡಿತರ ವಿತರಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ

Publicstory. in


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ಏಪ್ರಿಲ್ 2 ರಂದು ಪ್ರಾರಂಭವಾಗಿದ್ದು, ಎರಡು ದಿನಗಳಲ್ಲಿ 61302 ಕಾರ್ಡುದಾರರಿಗೆ ಅಕ್ಕಿ ವಿತರಣೆ ಮಾಡಲಾಗಿದೆ.
ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ಒಟ್ಟಿಗೇ ನೀಡಲಾಗುತ್ತಿದೆ.

ಬಿಪಿಎಲ್ ಕಾಡ್೯ ನವರಿಗೆ ಪ್ರತೀ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ, ಪ್ರತೀ ಅಂತ್ಯೋದಯ ಕಾಡ್೯ಗೆ 70 ಕೆ.ಜಿ. ಹಾಗೂ ಪ್ರತೀ ಏಪಿಎಲ್ ಕಾಡ್೯ಗೆ 20 ಕೆ.ಜಿ.ಯಂತೆ ಅಕ್ಕಿ ವಿತರಿಸಲಾಗುತ್ತಿದೆ.

ಏಪ್ರಿಲ್ 2 ಮತ್ತು 3 ರಂದು ದ.ಕ. ಜಿಲ್ಲೆಯಲ್ಲಿ 61302 ಕಾಡ್೯ಗಳಿಗೆ ಸುಮಾರು 27000 ಕ್ವಿಂಟಾಲ್ ಅಕ್ಕಿ ವಿತರಿಸಲಾಗಿದೆ. ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಪಾಡಲಾಗುತ್ತಿದೆ ಎಂದು ಆಹಾರ ಇಲಾಖೆ ಜಂಟೀ ನಿರ್ದೇಶಕರು ತಿಳಿಸಿದ್ದಾರೆ.

ದೇವರಹಳ್ಳಿ ಧನಂಜಯ ಬರೆದ ಲಾಕ್ಡೌನ್ ಕವಿತೆ

0

ಕಾಲ ನಿಂತಂತಿದೆ. ಉಸಿರೂ
ನಿಲ್ಲಬಹುದು. ಸಮಯ
ಹೆಚ್ಚಿಲ್ಲ .ಏನಾದರೂ ಒಳ್ಳೆಯದ ಮಾಡಬೇಕು.
ನಡೆಯಲ್ಲದ ನಡೆಯ ನಿಲ್ಲಿಸಿ,
ಸರಿ ನಡೆಯ ನಿಂತು ಯೋಚಿಸಬೇಕು.

ಸೋಪು, ಸ್ಯಾನಿಟೈಸರ್ ಬಳಸಿ ,
ಕೈ ತೊಳೆಯಬೇಕು.
ಹೃದಯದ ನೆಲ್ಲಿಕಾಲ ಮೇಲೆ,
ಪ್ರೀತಿಪಾತ್ರರ ಒಳಿತಿಗೆ ಮನಸು
ಕಾವು ಕುಂತಿದೆ.
ಶುದ್ಧ ಹಸ್ತನೂ, ಶುದ್ಧ ಮನಸ್ಕನೂ,
ಆಗುವ ಹಂಬಲ ಹೆಚ್ಚಾಗಿದೆ.

ಜತೆಗೇ ಇದ್ದು ,ಸಂಬಂಧಗಳ ಒಟ್ಟಿಗೆ,
ಫಾರಿನರ್ ಆಗಿರುವೆ.
ನನ್ನ ನಾ ,ಮರೆತು, ಮಗನೊಟ್ಟಿಗೆ ಆಡಬೇಕು.
ಅಪ್ಪನ ಮಂಡಿ ನೋವು,ಅಮ್ಮನ ಬಿಪಿ ಜತೆ ಮಾತನಾಡಬೇಕು
ಮಡದಿಯ ಕನಸು ಆಲಿಸಬೇಕು
ಕ್ವಾರನ್ ಟೈನ್ ಆಗಬೇಕು.

ಮೊದಲೆಲ್ಲಾ ಹೀಗೆ ಆಗುತ್ತಿರಲಿಲ್ಲ.
ಕಂಡ ಮುಖ ಗಳಲ್ಲೆಲ್ಲ
ಪ್ರೀತಿಪಾತ್ರರು ಇಣುಕುತ್ತಿರಲಿಲ್ಲ.
ಪೊಲೀಸ್ ಮುಖದಲ್ಲಿ ಅಣ್ಣ,
ನರ್ಸ್ ಮುಖದಲ್ಲಿ ತಂಗಿ,
ಸಂಬಂಧಗಳು ಕಾಣುತ್ತಿವೆ
ರಸ್ತೆಗಿಳಿದಾಗ ಮಾಸ್ಕ್ ಧರಿಸಬೇಕು.

ಎಲ್ಲರೂ ನಮ್ಮವರೇ
ಎಂದು ಹೇಳಲು
ಮದ್ದಿಲ್ಲದ ರೋಗವೇ ಬರಬೇಕಾ?
ಮನಸ್ಸು ಕೇಳಿದೆ
ನೀನು ಮನುಷ್ಯನಾ?


ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದೇವರಹಳ್ಖಿಯವರಾದ ಧನಂಜಯ ವೃತ್ತಿಯಲ್ಲಿ ಶಿಕ್ಷಕರು. ಕೆಲಕಾಲ ಪ್ರಜಾವಾಣಿ ವರದಿಗಾರರಾಗಿದ್ದ ಅವರು ಹಲವು ಮಹತ್ವದ ವರದಿಗಳನ್ನು ಮಾಡಿದ್ದಾರೆ. ಸಮಾಜ, ಪರಿಸರ, ಸಮಾನತೆ, ನೀರು, ಕಾಡು ಹೀಗೆ ಅನೇಕ‌ ಹೋರಾಟಗಳಿಗೆ ಜೀವ ತುಂಬುವ ಕೆಲಸವನ್ನು ಮಾಡಿದ್ದಾರೆ.