Thursday, February 26, 2026
Google search engine
Home Blog Page 261

ತುರುವೇಕೆರೆ: ಕರೊನಾ ಸಿಬ್ಬಂದಿಗೆ ಧಮ್ಕಿ: ಆರೋಪಿ ಬಂಧನ

Publicstory. in


ತುರುವೇಕೆರೆ: ಕೊರೊನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿ ಶುಕ್ರವಾರ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಧಮ್ಕಿ, ಬೆದರಿಕೆ ಹಾಕಿದ ಕಾರಣ ವ್ಯಕ್ತಿಯೊರ್ವನನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ತಾಲ್ಲೂಕಿನ ಕಸಬಾದ ಲೋಕಮ್ಮನಹಳ್ಳಿ ಗ್ರಾಮದ ಪರಮೇಶ್ವರಯ್ಯ ಅವರ ಮಗ ಮಲ್ಲಿಕಾರ್ಜುನ್(40) ಎಂದು ಗುರುತಿಸಲಾಗಿದೆ.

ಗೃಹರಕ್ಷಕ ಮಹಿಳಾ ಸಿಬ್ಬಂದಿ ಹಾಗು ಕಂದಾಯ ಇಲಾಖೆಯ ಸಿಬ್ಬಂದಿ ಜನರು ಅನಾವಶ್ಯಕವಾಗಿ ಯಾರೂ ಓಡಾಡಬಾರದೆಂದು ಇಂದು ಬೆಳಗ್ಗೆ ದಬ್ಬೇಘಟ್ಟ ರಸ್ತೆಯಲ್ಲಿ ಜಾಗೃತಿ ಮೂಡಿಸುತ್ತಿದ್ದರು.
ಇದೇ ಮಾರ್ಗದಲ್ಲಿ ಮಲ್ಲಿಕಾರ್ಜುನ್ ಅವರ ಕಾರು ಬಂದದ್ದನ್ನು ಕಂಡು ನಿಯೋಜನೆಗೊಂಡ ಸಿಬ್ಬಂದಿಗಳು ಪ್ರಶ್ನಿಸಿದ್ದಾರೆ. ಇದಕ್ಕೆ ಕೋಪಗೊಂಡ ಚಾಲಕ ಮಲ್ಲಿಕಾರ್ಜುನ್ ಕರ್ತವ್ಯನಿರತ ಸಿಬ್ಬಂದಿಗಳ ಮೇಲೆ ಅವಾಚ್ಯ ಶಬ್ಬಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾನೆ.
ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಕಲಂ353, 188 ಮತ್ತು 504 ರೀತ್ಯ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಯ ಕಾರನ್ನು ವಶಪಡಿಸಿಕೊಳ್ಳಲಾಗಿದೆಂದು ಪೊಲೀಸರು ತಿಳಿಸಿದರು.

ಹೋಮ್ ಕ್ವಾರಂಟೈನ್‍ ಬಿಟ್ಟು ಹುಡುಗರ ಜತೆ ಕ್ರಿಕೆಟ್ ಆಡುತ್ತಿದ್ದ!

Publicstory. in


ಉಡುಪಿ: ಜಿಲ್ಲೆಯ ಕಾಪು ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಮೇಲೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಗರಂ ಆಗಿದ್ದಾರೆ. ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಅವನೇ ಭರಿಸಬೇಕು ಎಂದು ಗುಡುಗಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕಾದ ವ್ಯಕ್ತಿ ಕ್ರಿಕೆಟ್ ಆಡಿದ್ದಾನೆ. ಆತ ನಿಯಮ ಉಲ್ಲಂಘನೆ ಮಾಡಿ ಎಲ್ಲ ಕಡೆ ಓಡಾಡಿದ್ದಾನೆ. ಹೋಮ್ ಕ್ವಾರಂಟೈನ್‍ನ ಸೂಚನೆ ನೀಡಿದರೂ ಆ ವ್ಯಕ್ತಿ ಹೊರಗಡೆ ತಿರುಗಾಡಿದ್ದಾನೆ. ಆತನಿಂದ ಎಲ್ಲರ ವೆಚ್ಚವನ್ನು ವಸೂಲಿ ಮಾಡುತ್ತೇನೆ ಎಂದರು.

ಇಡೀ ಊರಿಗೆ ಆದ ವೆಚ್ಚವನ್ನು ಆ ರೋಗಿ ಕೊಡಬೇಕು. ಆ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸು ಕೂಡ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕ್ವಾರಂಟೈನ್ ಸಂದರ್ಭದಲ್ಲಿ ಉದ್ಧಟತನ ತೋರಿದ ಎಲ್ಲರಿಂದ ವೆಚ್ಚವನ್ನು ವಸೂಲಿ ಮಾಡುತ್ತೇವೆ. ಕಾನೂನು ಉಲ್ಲಂಘಿಸಿದವರಿಗೆ ಎರಡು ವರ್ಷ ಜೈಲುವಾಸ ವಿಧಿಸುವ ಅವಕಾಶ ಇದೆ ಎಂದು ಹೇಳಿದರು.

ವಿದೇಶದಿಂದ ಬಂದ ವ್ಯಕ್ತಿ ಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಡಾಡಿದ್ದು, ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಎಂಟು ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಕ್ವಾರಂಟೈನ್‍ನಲ್ಲಿ ಇರುವವರನ್ನು ಅವರ ಕುಟುಂಬದವರು ಹೊರ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಕೊರೊನಾ: ಆಶಾ ಕಾರ್ಯಕರ್ತೆಗೆ ಬೆದರಿಕೆ- ಮೂವರು ವಶಕ್ಕೆ

ತುಮಕೂರು: ಬೆಂಗಳೂರಿನ ಸಾದಿಕ್ ಲೇಔಟ್ ನಲ್ಲಿ ಕರೊನಾ ಸಮೀಕ್ಷೆಗೆ ಹೋಗಿದ್ದಾಗ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಆಶಾ ಕಾರ್ಯಕರ್ತೆ, ಹೆಗಡೆ ನಗರದ ಕೃಷ್ಣವೇಣಿ ಮೇಲೆ ಸಾರಾಯಿ‌ ಪಾಳ್ಯದ ಸಾದಿಕ್ ಲೇಔಟ್‌ನಲ್ಲಿ ಹಲ್ಲೆಗೆ ಯತ್ನಿಸಿದದ್ದರು.

ಆರೋಗ್ಯ ಇಲಾಖೆ ಸಿಬ್ಬಂದಿ ಮುನಿರಾಜು ಗುರುವಾರ ದೂರು ನೀಡಿದ್ದಾರೆ. ಈ ವೇಳೆ ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀನಿವಾಸ್‌ ಅವರು ಕೃಷ್ಣವೇಣಿ ಅವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದರು.

ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು 15 ದಿನಗಳಿಂದ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸುತ್ತಿದ್ದಾರೆ. ಬುಧವಾರ ಹೋಗಿದ್ದಾಗ ಮಸೀದಿಯ ಧ್ವನಿವರ್ಧಕದಿಂದ ‘ಆರೋಗ್ಯ ಕಾರ್ಯಕರ್ತೆಯರಿಗೆ ಯಾವುದೇ ಮಾಹಿತಿ ನೀಡದೆ, ಓಡಿಸಿ‘ ಎಂದು ಕೂಗಿಸಲಾಗಿತ್ತು. ಆಗ ಸುತ್ತುವರಿದ ಕೆಲವರು ಕೃಷ್ಣವೇಣಿ ಅವರ ಮೊಬೈಲ್‌ ಕಸಿದುಕೊಂಡು ಸಮೀಕ್ಷೆಯ ಕಾಗದ ಪತ್ರ ಹರಿದು ಹಾಕಿದ್ದರು.

ಎರಡು ಎಡಗೈಗಳು ನಮಸ್ಕರಿಸಬೇಕಾಗಿದೆ…

ಡಾ.ಶ್ವೇತಾರಾಣಿ ಎಚ್.


ಮಿಡಿಯುವ ಹೃದಯ ಬೇಕಾಗಿದೆ
ಹೃದಯದ ಬಳಿಯೇ
ಕಿವಿ ಇದ್ದರೂ ಕೇಳುತ್ತಿಲ್ಲ
ಪಿಸುಮಾತು
ಸ್ವರ ಲಯ ತಾಳದ
ಅರಿವಿಲ್ಲ
ಜೋಡಿಗಳಾದರೇನು
ಎರಡು ಎಡಗೈಗಳು ನಮಸ್ಕರಿಸಲು
ಸಾಧ್ಯವೇ
ಕಣ್ಣಿಗೆ ಕಾಣದ್ದು
ಮನಸ್ಸಿಗೆ ಕಾಣುವುದಾ????

ಅಪಶೃತಿಯ ಛಾಯೆ ಬಿಡದೆ
ಕಾಡುತ್ತಿರುವಾಗ
ಮುಗುಳ್ನಗೆ ಇನ್ನೆಲ್ಲಿ
ನಾವೇ ಸೃಷ್ಟಿಸಿಕೊಂಡ
ಜೈಲಲ್ಲಿ ಬಂಧಿಯಾದ
ಹಕ್ಕಿ…..
ಹಾರುವ ಕನಸು…..

ನನ್ನಿಂದ ಎಲ್ಲವನ್ನೂ ಕಸಿದಿರುವೆ
ನನ್ನ ತಾಯ್ತನ ಕಸಿದೆ
ನನ್ನ ತಾಳ್ಮೆ
ನೆಮ್ಮದಿ
ನನ್ನ ಹೆಣ್ತನ
ಕೊನೆಗೆ ನನ್ನ ಮನುಷತ್ವವನ್ನೂ
ಕಸಿದಿರುವೆ
ಈಗ ನನ್ನಲ್ಲಿ ಉಳಿದಿರುವುದು
ಉಸಿರು
ಮತ್ತು ರಾಕ್ಷಸತನ ಮಾತ್ರ.


ಕವಯತ್ರಿ ಕನ್ನಡ ಉಪನ್ಯಾಸಕಿ

ಅಜ್ಞಾತಿಗಳ ಆತ್ಮ ಚರಿತ್ರೆ

(ಡಾ.ಎಚ್.ಶ್ವೇತಾರಾಣಿ ಮೂಲತಃ ನೆಲಮಂಗಲದವರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಯಲ್ಲಿ ಕನ್ನಡ ವಿಭಾಗದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಏಳು ಮಲ್ಲಿಗೆ ಗನ್ನೆ ಮತ್ತು ಇತರ ಕತೆಗಳು ಅವರ ಸಂಪಾದಿತ ಕೃತಿ. ಒಳಗುದಿ ಅವರ ವಿಮರ್ಶಾ ಕೃತಿ. ಕವಯತ್ರಿ ಹೌದು. ಇದು ಅವರ ಮೊದಲ ಕಾದಂಬರಿ. ಧಾರವಾಹಿ ರೂಪದಲ್ಲಿ ಪ್ರಕಟವಾಗಲಿದೆ.)

ಪಾಳೇಗಾರ ನಾಯಕ ಹೇಳಿ ಕಳಿಸಿದ್ದ ಮಾತು ಕೇಳಿದ ಮನೆಯವರೆಲ್ಲರಿಗೂ ಗರ ಸಿಡಿಲು ಬಡಿದಂತಾಗಿತ್ತು. ಮನೆಯ ಗಂಡು ಮಕ್ಕಳು ಕೋಪಕ್ಕೆ ಸಿಲುಕಿ ದವಡೆ ಕಡಿಯುತ್ತಿದ್ದರು. ಆದರೂ ಒಂದಿಬ್ಬರು ತುಟಿ ಬಿಚ್ಚಿ ಮಾತು ಮೀರಿ ಒಂದೆರಡು ಮಾತುಗಳನ್ನು ಆಡಿಯೇ ಬಿಟ್ಟಿದ್ದರು.

ಮನೆಯ ಕರಣಿಕನೆದುರು ಇದೂವರೆಗೂ ಯಾರು ಮಾತನಾಡಿದ ಉದಾಹಣೆಯೇ ಆ ಕುಟುಂಬದಲ್ಲಿ ಇರಲಿಲ್ಲ. ಕರಣಿಕ ಬಿಟ್ಟರೆ ಕರಣಿಕನ ತಾಯಿ ಮಾತ್ರ ಇಂಥ ಸಂದರ್ಭಗಳಲ್ಲಿ ಏನಾದರೂ ಮಾತನಾಡಿ, ಸಲಹೆ ನೀಡುವುದು ಆ ಮನೆತನಕ್ಕೆ ಬಂದಿದ್ದ ರೂಢಿ.

ಸಂಜೆಯನ್ನು ಸುಮ್ಮನೇ ಬಿಡಲು ಸಾಧ್ಯವೇ ಇಲ್ಲ ಎನ್ನುವಂತೆ ಸೂರ್ಯನನ್ನು ಭೂಮಿ ನುಂಗುತ್ತಿದ್ದ. ಬೆಳಕು ಹರಿದ ಮೇಲೆ ರಾತ್ರಿ ಆಗಲೇಬೇಕಲ್ಲವೇ, ಯಾಕೋ ಕರಣಿಕನ ಮನೆಯವರಿಗೆ ಹೊತ್ತು ಮೀರಿ ಕತ್ತಲು ಜಗತ್ತನ್ನು ಆವರಿಸುತ್ತಿದ್ದದ್ದು ಗಮನಕ್ಕೆ ಬಂದಂತೆಯೇ ಇರಲಿಲ್ಲ. ಕರಣಿಕರ ಮನೆ ಮುಂದಿನ ಜಾಗ ಎಂದರೆ ಒಂದರ್ಥದಲ್ಲಿ ಜಾತ್ರೆಯೇ ಸರಿ. ಸಾವಿರಕ್ಕೂ ಮೀರಿ ಕುರಿಗಳು, ಆಳು ಕಾಳುಗಳು, ಐವತ್ತು ಜತೆ ದನ ಕರುಗಳು, ಹಾಲು ಕರೆಯುವವರು, ಹುಲ್ಲು ತರುವವರು, ಕತ್ತಿ ಮಸೆಯುವವರು, ಎಲ್ಲೋ ಪರವೂರಿನಿಂದ ಕೆಲಸ ಹುಡುಕಿಕೊಂಡು ಬಂದವರು … ಹೀಗೆ ಯಾವಾಗಲೂ ಜನ ಜಂಗುಳಿ. ಆದರೆ ಈ ದಿನ ಮನೆಯ ಹಿತ್ತಲಕೋಣೆಯಿಂದ ಕರಣಿಕರ ಯಾರೂ ಈಚೆ ಬರದಿರುವುದನ್ನು ಕಂಡು, ಆಳು ಮಕ್ಕಳಿಗೆ ಇದೇನಪ್ಪ ಎಂಬ ಚಿಂತೆ.

‘ಯಾವೊತ್ತು ಹೀಂಗಾಗಿರಲಿಲ್ಲ, ಅದೇನೋ ಗುಸು-ಗುಸು ಮಾತು ಕೇಳ್ತಪ್ಪ, ಕರಣಿಕರು ಕೂತಾರೆ, ದೊಡ್ಡರೋ ವಿಸಯ ನಮಗ್ಯಾಕವ್ವ’ ಎಂದು ಬೋರಲಿಂಗ ಎಲ್ಲರ ಎದುರು ಹೇಳಿದ ಮೇಲೆ ಹಟ್ಟಿಯಲ್ಲಿದ್ದ ಆಳು-ಮಕ್ಕಳು ಸ್ವಲ್ಪ ನಿರಾಳವಾದರು. ಉಗಾದಿ ಬಂತಲ್ಲ ಅದಕ್ಕ, ಬ್ಯಾಟೆ ವಿಚಾರ ಏನಾರಾ ಮಾತಡ್ತಿರಬಹುದು ಎಂದು ಒಂದಿಬ್ಬರು ಪಿಸುಗುಟ್ಟಿದರು. ಈಗ್ಲೆ ಎಂಥದ್ಲೆ ಬ್ಯಾಟ ವಿಚಾರ, ಕೆಂಚವ್ವನ ಮದುವೆ ವಿಚಾರ ಏನಾರ ಮಾತಡ್ತಾರೇನೋ ಎಂದು ಒಂದಿಬ್ಬರು ಪಿಸುಗುಟ್ಟಿದರು. ಮನೆಯವರು ಯಾಕೆ ಈಟೊತ್ತಾದರೂ ಹೊರಗೆ ಬರಲಿಲಲ್ಲ ಎಂಬದು ಕೊನೆಗೂ ಯಾರಿಗೂ ಗೊತ್ತಾಗಲೇ ಇಲ್ಲ.

ಇದು ಹಾಸನ ಜಿಲ್ಲೆಯ ದಿಡಿಗದ ಕತೆ. ಎಲ್ಲೆಲ್ಲೂ ಬ್ರಿಟಿಷರದೇ ಕಾರುಬಾರು. ಆದರೆ ಈ ಊರಿಗಿನ್ನೂ ಬ್ರಿಟಿಷರು, ಪಟೀಷರು ಬಂದಿರಲಿಲ್ಲ. ಮೈಸೂರು ಅರಸರ ಸಂಸ್ಥಾನಕ್ಕೆ ಹಾಸನ ಸೇರಿತ್ತು. ಆದರೂ ಇನ್ನೂ ನಾಯಕರ ಅಟ್ಟಹಾಸ ನಿಂತಿರಲಲ್ಲ, ಅಲ್ಲಲ್ಲೇ ಪಾಳ್ಯ ಪಟ್ಟ ಕಟ್ಟಿಕೊಂಡು ಆಡಳಿತ ನಡೆಸುತ್ತಲೇ ಇದ್ದರು. ಪಾಳೇಗಾರನ್ನೊಬ್ಬನ ಆಡಳಿತಕ್ಕೆ ದಿಡಿಗವು ಸೇರಿತ್ತು. ದಿಡಿಗದ ನರಸೇಗೌಡರು ಪಾಳೇಗಾರನ ಕರಣಿಕರಾಗಿದ್ದರು. ನರಸೇಗೌಡರು ಜೋರು ಆಸಾಮಿಯೇ ಸರಿ. ರೊಟ್ಟೆ ಗಾತ್ರದ ಮೀಸೆ. ಬಲಾಢ್ಯ ದೇಹ ಎಂಥವರನ್ನು ಕೆಲ ಕಾಲ ನಿಂತು ನೋಡುವಂತೆ ಮಾಡುತ್ತಿತ್ತು. ಈ ಮನೆತನದವರು ಅಷ್ಟೇ ಸುಂಕ ಅದು- ಇದು ವಸೂಲಿ ಮಾಡಿ ಪಾಳೆಗಾರನಿಗೆ ಕೊಡುವ ಕೆಲಸ ಮಾಡುತ್ತಿತ್ತು. ನರಸೇಗೌಡರು ಅದೇ ಕೆಲಸ ಮಾಡುತ್ತಿದ್ದರು.

ನರಸೇಗೌಡರೆಂದರೆ ದಿಡಿಗದವರಿಗೆ ಎಲ್ಲಿಲ್ಲದ ಪ್ರೀತಿ. ಊರಲ್ಲಿ ಯಾವುದೇ ಸಮಸ್ಯೆ ಬರಲಿ, ಪಾಳೇಗಾರನ ಮುಂದೆ ಹೋಗುವುದಕ್ಕೆ ಮುಂಚೆ ಅದು ಕರಣಿಕರ ಮುಂದೆ ಬರುತ್ತಿತ್ತು. ಕರಣಿಕರು ನ್ಯಾಯ ಪಂಚಾಯಿತಿ ಮಾಡಿದ ಮೇಲೆ ಅದು ಮುಗಿದಂತೆಯೇ ಸರಿ. ಮತ್ತೊಬ್ಬರು ಬಾಯಿ ಸೇರಿಸುವಂತಿರಲಿಲ್ಲ.

ನರಸೇಗೌಡರ ಚಿಕ್ಕಮಗಳು ಕೆಂಚಮ್ಮ. ಆಕೆ ಸೌಂದರ್ಯ ದೇವತೆ. ಆ ಕಾಲದಲ್ಲಿ ಅಷ್ಟೊಂದು ಬೆಳ್ಳಗೆ ಹಾಲುನೊರೆಯಂತೆ ಇದ್ದ ಹೆಣ್ಣು ಇರಲಿಲ್ಲವೇನೋ. ಕಾಲಿನವರೆಗೂ ಬರುವ ಜಡೆ. ಕೆಂಚಮ್ಮನನ್ನು ನೋಡಿದರೆ ಯಾರೋ ದೇವತೆಯೇ ಹುಟ್ಟಿ ಭೂಮಿಗೆ ಬಂದಿರಬೇಕು ಎಂದು ಹೇಳುತ್ತಿದ್ದರು. ಊರವರಿಗೆ ಆಗೊಮ್ಮೆ-ಹೀಗೊಮ್ಮೆ ಕೆಂಚಮ್ಮನನ್ನು ನೋಡಿ ಬರೋದಂದ್ರೆ ಬಾಳ ಖುಷಿ. ತನ್ನ ಸೌಂದರ್ಯದ ಬಗ್ಗೆ ಹೆಚ್ಚೇನು ಅಹಂ ಬೆಳೆಸಿಕೊಳ್ಳದ ಕೆಂಚಮ್ಮ ಕರಣಿಕರ ಮನೆಯಲ್ಲಿದ್ದ ರೀತಿ ರಿವಾಜುಗಳಿಗೆ ಅನುಸಾರವಾಗಿಯೇ ಬೆಳೆದಿದ್ದಳು. ತುಂಬಿದ ಮನೆಯಲ್ಲಿ ಒಬ್ಬರಿಗೊಂದು, ಮತ್ತೊಬ್ಬರಿಗೊಂದು ಎಂಬ ನ್ಯಾಯವೇ ಆ ಮನೆಯಲ್ಲಿ ಇರಲಿಲ್ಲ.. ನಮ್ಮ ಮನೆತನದಲ್ಲೇ ಇಂಥ ಹುಡುಗಿ ಹುಟ್ಟಿರಲಿಲ್ಲ ಎಂದು ಎಲ್ಲರೂ ಬಾಯಿ ತುಂಬಾ ಹೊಗಳುತ್ತಿದ್ದರು. ಹಟ್ಟಿಗೆ ಬಂದ ಆಳು-ಕಾಳುಗಳು ಮಾತ್ರ ದೇವತೆ ಎಂದೇ ಕರೆಯುತ್ತಿದ್ದರು. ಮನೆಯ ಮಕ್ಕಳು ಸಂಜೆ ಬಂದ ಹಸು-ಕರುಗಳನ್ನು ಗೊಂತುಗಳಿಗೆ ಕಟ್ಟುವ ಕೆಲಸವನ್ನು ಮಾಡಬೇಕಿತ್ತು. ಕೆಂಚಮ್ಮನೂ ಅದೇ ಕೆಲಸ ಮಾಡಬೇಕಿತ್ತು. ದಿನಾ ಸಂಜೆ ಮನೆಗೆ ಮೇಯ್ದು ಬಂದ ಹಸುಗಳನ್ನು, ಗಿಡ್ಡ ಕರುಗಳನ್ನು ಮನೆಯ ಮುಂದೆ ಇರುತ್ತಿದ್ದ ಗೊಂತುಗಳಿಗೆ ಕಟ್ಟುವ ಕೆಲಸ ಕೆಂಚಮ್ಮ ಮಾಡುತ್ತಿದ್ದಳು. ಕೆಂಪಮ್ಮನಿಗೆ ವಹಿಸಿದ್ದ ಈ ಕೆಲಸವೇ ಮುಂದೊಂದು ದಿನ ಕುಟುಂಬಕ್ಕೆ ಮುಳುವಾಗಲಿದೆ ಎಂಬುದು ಗೊತ್ತಿದ್ದರೆ ಕರಣಿಕರಾದರೂ ಏಕೆ ಈ ಕೆಲಸ ವಹಿಸುತ್ತಿದ್ದರು.

(ಮುಂದುವರೆಯುವುದು)……….

ಕರೊನಾ ಗುಳೆ

ಡಾ. ರಜನಿ ಎಂ.


ಹೊತ್ತಿರುವ ಹೊರೆ
ಹಳೆ ಬಟ್ಟೆ,ಪುಡಿಗಾಸು
ಪಾಪುವಿನ ಸಿರಪ್
ರೇಷನ್ ಕಾರ್ಡ್.‌‌.‌‌ಆಧಾರ್ ಜೆರಾಕ್ಸ್

ಬಿರು ಬಿಸಿಲು
ಆದರೂ ನಡಿಗೆ ಬೀಸು
ಎದ್ದು ಹೋಗಬೇಕು.. ಬಿರ ಬಿರನೆ

ಬಿಟ್ಟಿದ್ದ ಊರಿಗೇ
ಮರಳಿ ಅಟ್ಟುತ್ತಿದೆ ಕರೋನಾ
ಬಸಿರು,ಸಂಸಾರ,ಹೆರಿಗೆ ಎಲ್ಲಾ ಕೆಟ್ಟು ಬಂದ ಪಟ್ಟಣದಲ್ಲೇ

ನರಳಲು,ಉಪವಾಸ ಇರಲು‌‌..ಸಾವಿನ ಹೆದರಿಕೆ
ಇರುವಾಗ ಬೇಕು…‌ತನ್ನೂರು…‌
ತನ್ನ ಜನ.‌‌.‌‌‌ಮನ

ದುಡಿಸಿಕೊಂಡ ಜನ ,ಊರು ‌‌‌..‌‌ನನ್ನದಲ್ಲ.‌‌‌…
ನಾಳೆಗೆ ಗ್ಯಾರಂಟಿ ಇಲ್ಲ..‌…ನನ್ನ
ಸಾವುಕಾರ

ದಾಟುವೆವು ನಾವು..‌ಯಮುನಾ.‌
ಕೃಷ್ಣಾ..‌ಕಾವೇರಿ..‌ಸೇರಲು.‌‌…ನನ್ನ ಊರು.‌‌
ನನ್ನ ಸೂರು

ಕಾಯಿದ,ಕರೊನಾಗಳ…‌‌ಅರಿವಿಲ್ಲಾ
ನೋಡಿಲ್ಲ .‌‌‌‌‌‌‌…..ಟಿವಿ.‌‌‌….
ಮೇಸ್ತ್ರಿ..‌.ಪತ್ತೇ..‌‌‌‌….ಇಲ್ಲ

ಒಮ್ಮೆ. …ಊರು ..‌ಸೇರೀ.‌‌‌…ನೋಡಿದರೆ
ಹೆತ್ತವರ ಮುಖ
ತುತ್ತು ..ಅನ್ನ…ಕಡಕ್ ರೊಟ್ಟಿ
ತಲೆ ಜಗಲಿ

ಬದುಕಿದ್ದರೆ

ಕರೋನಾ…‌‌ಬಂದಾಗ..‌‌‌‌‌‌….
ಕಥೆ… ನನ್ನ..‌ಮೊಮ್ಮಗಳಿಗೇ.


ಕವಯತ್ರಿ ತುಮಕೂರಿನಲ್ಲಿ ವೈದ್ಯರು.

ಕೂಲಿ ಕಾರ್ಮಿಕರಿಗೆ ಆಸರೆಯಾದ ರಾಮಕೃಷ್ಣ ಸೇವಾಶ್ರಮ

ಪಾವಗಡದ ಪಟ್ಟಣದ ರಾಮಕೃಷ್ಣ ಸೇವಾಶ್ರಮದಲ್ಲಿ ಬುಧವಾರ ಇನ್ ಫೋಸಿಸ್ ಸಹಕಾರದೊಂದಿಗೆ ಕೂಲಿಕಾರ್ಮಿಕರಿಗೆ ಆಹಾರದ ಪೊಟ್ಟಣ ವಿತರಿಸುವ ಹಾಗೂ ನಿತ್ಯ 200 ರೂ ಖಾತೆಗೆ ಹಾಗುವ  ಕೆಲಸಕ್ಕೆ ಚಾಲನೆ ನೀಡಲಾಯಿತು.

ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಹಮಾಲಿಗಳು, ಕೂಲಿ ಕಾರ್ಮಿಕರಿಗೆ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ಸ್ವಾಮಿ ಜಪಾನಂದ ಜಿ ಚಾಲನೆ ನೀಡಿದರು.


ವಿವಿಧ ಇಲಾಖೆಗಳ ಸಿಬ್ಬಂದಿ, ಸಾರ್ವಜನಿಕರಿಗೆ, ಶುದ್ಧೀಕರಣ ಘಟಕಗಳಿಗೆ 6 ಸಾವಿರ ಮಾಸ್ಕ್, ಸಾಬೂನು ಇತರೆ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೆ 120 ಬಡ ಮಕ್ಕಳಿಗೆ ತಿಂಡಿಯನ್ನು ವಿತರಿಸಲಾಗುತ್ತಿದೆ. ಮಕ್ಕಳಿಗೆ ಉಪಹಾರದ ಜೊತೆಗೆ ಸಾಬೂನು ವಿತರಿಸಲಾಗುತ್ತಿದೆ. ಕೊರೊನಾ ಪರಿಣಾಮ ಕಡಿಮೆಯಾಗಿ ಲಾಕ್ ಡೌನ್ ಮುಕ್ತಾಯವಾಗುವವರೆಗೆ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.


ಸರ್ಕಾರಿ ವಕೀಲ ಮಂಜುನಾಥ್ ಅವರು ಎಲ್ಲ ಕಾರ್ಮಿಕರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಿದರು.
ತಹಶೀಲ್ದಾರ್ ವರದರಾಜು, ಸರ್ಕಲ್ ಇನ್ಸ್ ಪೆಕ್ಟರ್ ನಾಗರಾಜು, ಗ್ರೇಡ್ 2 ತಹಶೀಲ್ದಾರ್ ಸತ್ಯನಾರಾಯಣ್, ಪುರಸಭೆಯ ಮುಖ್ಯಾಧಿಕಾರಿ ನವೀನ್ ಚಂದ್ರ ಉಪಸ್ಥಿತರಿದ್ದರು.

ಆಹಾರ, ಔಷಧಿ ಕಿಟ್ ವಿತರಣೆ

ಪಾವಗಡ: ತಾಲ್ಲೂಕಿನ ಬೈರಾಪುರ, ಅರಳಿಕುಂಟೆಯ 180 ಬಡ ಕುಟುಂಬಗಳಿಗೆ ಹೆಲ್ಪ್ ಸೊಸೈಟಿ ಹಾಗೂ ಸನ್ ರೈಸ್ ಆಸ್ಪತ್ರೆ ವತಿಯಿಂದ ದಿನಸಿ ಹಾಗೂ ಔಷಧಿ ಕಿಟ್ ವಿತರಿಸಲಾಯಿತು.

ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಮಾತನಾಡಿ, 180 ಕುಟುಂಬಗಳಿಗೆ ಆಹಾರ ಹಾಗೂ ಔಷಧಿ ಕಿಟ್ ವಿತರಿಸಲಾಗುತ್ತಿದೆ. ಮುಂದೆ ಹೆಚ್ಚಿನ ಬಡ ಜನತೆಗೆ ಇಂತಹ ತುರ್ತು ಸ್ಥಿತಿಯಲ್ಲಿ ಬೇಕಿರುವ ಸಾಮಾಗ್ರಿಗಳನ್ನು ವಿತರಿಸುವ ಚಿಂತನೆ ಸಂಸ್ಥೆ ಮುಂದೆ ಇದೆ. ಆರಂಭದಲ್ಲಿ ಮಾಸ್ಕ್ ಮಾತ್ರ ವಿತರಿಸಲಾಗುತ್ತಿತ್ತು. ಗ್ರಾಮೀಣ ಭಾಗದ ಜನತೆಗೆ ಅನುಕೂಲ ಮಾಡುವ ದೃಷ್ಟಿಯಿಂದ ಮಾಸ್ಕ್, ಸಾಬೂನು ಜೊತೆಗೆ ಪಡಿತರವನ್ನೂ ಹಂಚಲಾಗುತ್ತಿದೆ ಎಂದು ತಿಳಿಸಿದರು.

ಸನ್ ರೈಸ್ ಆಸ್ಪತ್ರೆಯೆ ವೈದ್ಯ ಡಾ ಶ್ರೀಕಾಂತ್ ಮಾತನಾಡಿ, ಜನತೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಸಾಬೂನು, ಸ್ಯಾನಿಟೈಸರ್ ನಿಂದ ಕೈತೊಳೆಯಬೇಕು. ಜ್ವರ, ನೆಗಡಿ ಕೆಮ್ಮಿನ ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ಆಗಮಿಸಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮುಖಂಡ ವೆಂಕಟಸುಬ್ಬಯ್ಯ, ವೆಂಕಟೇಶ್, ಗೌತಮ್, ತಿರುಮಲೇಶ್ ನಾಯ್ಡು, ನಾಗಾರ್ಜುನ, ಕಾರ್ತಿಕ್, ಹರೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಲಾಕ್ ಡೌನ್ ಹೆಸರಿನಲ್ಲಿ ದಂಧೆ

ತುಮಕೂರು ಜಿಲ್ಲೆ  ಪಾವಗಡ ದಲ್ಲಿ ಕೊರೊನಾ ಲಾಕ್ ಡೌನ್ ನ ಕೆಲ ಷರತ್ತುಗಳನ್ನೇ ಬಂಡವಾಳ ಮಾಡಿಕೊಂಡು ಪೊಲೀಸರು ಹಣ ಸುಲಿಯುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಾಲು ಮಾರುವವರು ಅಥವಾ ಅಂಗಡಿಯಲ್ಲಿದ್ದ ಸಾಮಗ್ರಿಯನ್ನು ತೆಗೆದುಕೊಳ್ಳಲು ತುರ್ತು ಸ್ಥಿತಿಯಲ್ಲಿ ಬೀಗ ತೆಗೆಯುತ್ತಿದ್ದವರನ್ನು ಕರೆತಂದು ಠಾಣೆಯಲ್ಲಿ ಆಹಾರ, ನೀರು ನೀಡದೆ ಗಂಟೆ ಗಟ್ಟಲೆ  ಕೂರಿಸಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಠಾಣೆಗೆ ಕರೆತಂದು  ಬಡ ಜನತೆಯಿಂದ   ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ನೇರವಾದ ಆರೋಪಗಳು ಕೇಳಿ ಬಂದವು.

ತುರ್ತು ಸ್ಥಿತಿಯಲ್ಲಿ  ಪೊಲೀಸರಿಗೆ ಕೊಡಲು ಹಣ ಎಲ್ಲಿಂದ ತರಬೇಕು. ಅವರಿಗೆ ಬೇಕಿರುವವರಿಗೆ ಮಾತಿನಲ್ಲಿ ಹೇಳಿ ಕಳುಹಿಸುತ್ತಾರೆ. ಸಾಮಾನ್ಯ ಜನರನ್ನು ಠಾಣೆಗೆ ಕರೆತಂದು  ಕೂರಿಸಿ ಕಿರುಕುಳ ಕೊಡುವುದರ ಜೊತೆಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ದೂರಿದರು.

ಇದರೊಟ್ಟಿಗೆ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ವಶಪಡಿಸಿಕೊಳ್ಳುವ ಉನ್ನತ ಅಧಿಕಾರಿಗಳ ಆದೇಶವನ್ನೂ ತಮ್ಮ ಲಾಭಕ್ಕೆ ಪೊಲೀಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಪಟ್ಟಣದ ಜನತೆ ದೂರುತ್ತಿದ್ದಾರೆ.       ವಾಹನಗಳನ್ನು ವಶಪಡಿಸಿಕೊಂಡು ಠಾಣೆಗೆ ತಂದ ನಂತರ ಹಣ ಕೊಟ್ಟವರ  ವಾಹನಗಳನ್ನು ಬಿಟ್ಟು ಕಳುಹಿಸಲಾಗುತ್ತಿದೆ. ಇವರು ಕೇಳಿದಷ್ಟು ಹಣ ಕೊಡಲಾಗದವರ    ವಾಹನಗಳನ್ನು ಮಾತ್ರ ಠಾಣೆಯಲ್ಲಿ ಇರಿಸಿಕೊಳ್ಳಲಾಗುತ್ತಿದೆ.

ವಾಹನಗಳನ್ನು ವಶಪಡಿಸಿಕೊಳ್ಳುವ ವಿಡಿಯೋ ಚಿತ್ರೀಕರಿಸುವಂತೆ  ಪೊಲೀಸ್ ಆಯುಕ್ತರು ಸೂಚಿಸಿದ್ದರು. ಆದರೆ ಠಾಣೆಯ ಅಧಿಕಾರಿಗಳು ಇಷ್ಟ ಬಂದಂತೆ ಆದೇಶಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

144 ಸೆಕ್ಷನ್ ಹಾಗೂ ಲಾಕ್ ಡೌನ್ ಷರತ್ತುಗಳನ್ನು ಹಣ ಮಾಡುವ ಅಸ್ತ್ರವಾಗಿ ಪಟ್ಟಣದ ಪೊಲೀಸರು ಬಳಸಿಕೊಳ್ಳುತ್ತಿರುವುದು ಅಮಾನವೀಯ ಎಂದು ಬಡ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇದೇ ರೀತಿ ಸಾರ್ವಜನಿಕರಿಗೆ ಸ್ಪಂದಿಸದೆ ತೀವ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದ ಸಬ್ ಇನ್ ಸ್ಪೆಕ್ಟರ್ ಅನ್ನು ಪೊಲೀಸ್ ವರಿಷ್ಠಾಧಿಕಾರಿ ಕೆಲ ತಿಂಗಳುಗಳ ಹಿಂದೆಯಷ್ಟೆ ಅಮಾನತ್ತುಗೊಳಿಸಿದ್ದರು.  ಇದೀಗ ಮತ್ತೆ ಸಮಸ್ಯೆ ಮರುಕಳಿಸುತ್ತಿದೆ ಎಂದು ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Tumkuru: ಫುಡ್ ಪಾರ್ಕ್ ವಶಕ್ಕೆ ಕೋಡಿಹಳ್ಳಿ ಜಗದೀಶ್ ಒತ್ತಾಯ

Publicstory. in


Tumkuru: ಲಾಕ್ ಡೌನ್ ಪರಿಣಾಮ ಜಿಲ್ಲೆಯ ರೈತರ ಕೋಟ್ಯಂತರ ಮೌಲ್ಯದ ಆಹಾರ ಬೆಳೆಗಳು ಹೊಲ, ತೋಟಗಳಲ್ಲೇ ಹಾಳಾಗುತ್ತಿದ್ದು, ಜಿಲ್ಲಾಡಳಿತ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಭಾರತೀಯ ಕೃಷಿಕ ಸಮಾಜದ ಜಗದೀಶ್ ಕೋಡಿಹಳ್ಳಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್, ಕೃಷಿ ಸಚಿವ, ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿರುವ ಅವರು, ಕೂಡಲೇ ತುಮಕೂರು ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಫುಡ್ ಪಾರ್ಕ್ ಅನ್ನು ಸರ್ಕಾರದ ವಶಕ್ಕೆ ಪಡೆಯಬೇಕು.‌ ಇಲ್ಲಿನ ಶೀತಲೀಕರಣದ ಗೋದಾಮಿನಲ್ಲಿ ರೈತರು ಬೆಳೆಗಳನ್ನು ಕೂಡಲೇ ದಾಸ್ತಾನು ಮಾಡಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪುಡ್ ಪಾರ್ಕ್ ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗಿದೆ. ಇದಕ್ಕೆ ಸರ್ಕಾರದ ಬಂಡವಾಳವೂ ಸೇರಿದೆ. ಜಿಲ್ಲೆಯಲ್ಲಿ ಬೆಳೆದಿರುವ ಹಣ್ಣು, ತರಕಾರಿಗಳನ್ನು ಇಲ್ಲಿ ಸಂಗ್ರಹ ಮಾಡುವಷ್ಟು ಜಾಗ ಇದೆ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ ಅವರು ಕೂಡಲೇ ಎಲ್ಲ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಕರೆದು ಒಂದೇ ದಿನದಲ್ಲಿ ರೈತರ ಪಟ್ಟಿಯನ್ನು ತಯಾರಿಸಬೇಕು.‌ರೈತರ ಹೊಲಗಳಿಗೆ ಸರ್ಕಾರಿ ಬಸ್ ಗಳನ್ನು ಕಳುಹಿಸಿ ಉತ್ಪನ್ನಗಳನ್ನು ಸಂಗ್ರಹಿಸಿ ಅದನ್ನು ಪುಡ್ ಪಾರ್ಕ್ ನ ಗೋದಾಮಿನಲ್ಲಿ ಸಂಗ್ರಹಿಸಿ, ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ತಾತ್ಕಾಲಿಕವಾಗಿ ಫುಡ್‌ ಪಾರ್ಕ್ ವಶಕ್ಕೆ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯ ನಡುವೆ ಸಂಪರ್ಕ ಕಡಿತಗೊಂಡಿದ್ದರಿಂದ ದಿನಸಿ ಪದಾರ್ಥಗಳು ಪೂರೈಕೆಯಾಗುತ್ತಿಲ್ಲ. ಜನರಿಗೆ ಅಗತ್ಯವಾದ ಆಹಾರ ಪದಾರ್ಥಗಳು ಅಡಿಗೆಗೆ ಬೇಕಾಗುವ ಬೇಳೆಕಾಳು ಹುರುಳಿಕಾಳು ಅಡುಗೆ, ಎಣ್ಣೆ ಆಗಿರಬಹುದು ಮತ್ತಿತರ ಪದಾರ್ಥಗಳು ಅಭಾವ ಕಂಡು ಬರ್ತಾಯಿದೆ. ಜಿಲ್ಲೆಯಲ್ಲಿ ಇನ್ನೆರಡು ಮೂರು ದಿನಗಳಲ್ಲಿ ದಿನಸಿ ಪದಾರ್ಥಗಳು ಪೂರೈಕೆಯಾಗದೆ ಇದ್ದರೆ ಜನರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಲಾಕ್ಡೌನ್ ಪರಿಣಾಮವಾಗಿ ರೈತರು ಬೆಳೆದ ಬೆಳೆಗಳನ್ನು ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ತರಲು ರೈತರಿಗೆ ಪೊಲೀಸರು ರೈತರ ಉತ್ಪನ್ನಗಳನ್ನು ತುಂಬಿರುವ ವಾಹನಗಳನ್ನು ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ. ಲಾಕ್ಡೌನ್ ಪರಿಣಾಮವಾಗಿ ರೈತರು ಬೆಳೆದಂತಹ ಶಿರಾ ತಾಲೂಕಲ್ಲಿ ಮೂರು ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಕರ್ಬುಜ ಹಣ್ಣನ್ನು ಸುಮಾರು 25ರಿಂದ 30 ಟನ್ ಕೆರೆಗೆ ಸುರಿದಿದ್ದಾರೆ. ಇದರಿಂದ ಸುಮಾರು ನಾಲ್ಕು ಲಕ್ಷದಷ್ಟು ನಷ್ಟ ಸಂಭವಿಸಿದೆ.ಮತ್ತೊಂದೆಡೆ ಟೊಮೇಟೊವನ್ನು ರಸ್ತೆಬದಿಯಲ್ಲಿ ಲೋಡ್ ಗಟ್ಟಲೆ ಸುರಿದು ಹೋಗಿರುತ್ತಾರೆ. ರೈತರು ಬೆಳೆದಂತಹ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ ಕಣ್ಣೀರು ಹಾಕುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ರೈತರೇ ನಗರ ಜನರ‌ ಮನೆ ಬಾಗಿಲಿಗೆ ಟ್ರ್ಯಾಕ್ಟರ್, ಮತ್ತಿತರ ವಾಹನಗಳಲ್ಲಿ ತುಂಬಿಕೊಂಡು ಮಾರಾಟ ಮಾಡಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.