Thursday, February 26, 2026
Google search engine
Home Blog Page 263

ತುಮಕೂರಿನಲ್ಲಿ ಮತ್ತೊಬ್ಬರಿಗೆ ಕರೊನಾ ಸೋಂಕು

ತುಮಕೂರು: ಜಿಲ್ಲೆಯಲ್ಲಿ ಎರಡನೇ ಕರೊನಾ ಸೋಂಕು ದೃಢಪಟ್ಟಿದೆ.

ಕರೊನಾ ಸೋಂಕಿನಿಂದ‌ ಸಾವಿಗೀಡಾಗಿದ್ದ ಶಿರಾ ವ್ಯಕ್ತಿಯ ಹದಿಮೂರು ವರ್ಷದ ಮಗನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಸಂಪರ್ಕದಲ್ಲಿದ್ದ ಇನ್ನೂ ಹಲವರ ಪರೀಕ್ಷಾ ವರದಿ ಬರಬೇಕಾಗಿದೆ.

ಕರೊನಾ ಆಸ್ಪತ್ರೆಯಾಗಿ ತುಮಕೂರು ಜಿಲ್ಲಾಸ್ಪತ್ರೆ: ಸಾಮಾನ್ಯ ರೋಗಿಗಳು ಶ್ರೀದೇವಿಗೆ ಶಿಪ್ಟ್

Publicstory.in


ತುಮಕೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಹಾಗೂ ಮುಂದೆ ಬರುವ ಯಾವುದೇ ಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ತುಮಕೂರು ಜಿಲ್ಲಾಸ್ಪತ್ರೆಯನ್ನು ಸಂಪೂರ್ಣವಾಗಿ ಕರೊನಾ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದೆ.

ಒಟ್ಟು 400 ಬೆಡ್ ಗಳ ಸಾಮರ್ಥ್ಯದ ಈ ಆಸ್ಪತ್ರೆ ಕರೊನಾ ಸೋಂಕಿತರನ್ನಷ್ಟೇ ನೋಡುವ, ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿ ಮಾರ್ಪಾಡಾಗಲಿದೆ.
ಸದ್ಯ, ಹದಿನೈದು ಹಾಸಿಗೆಗಳ ಒಂದು ವಾರ್ಡ್ ಅನ್ನು ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ನೀಡಲಾಗಿತ್ತು.

ಆಸ್ಪತ್ರೆಯಲ್ಲಿ ಈಗ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ರೀತಿಯ ರೋಗಿಗಳನ್ನು ನಗರದ ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಶಿಪ್ಟ್ ಮಾಡುವ ಕೆಲಸ ನಡೆಯುತ್ತಿದೆ.

ಸಾಕಷ್ಟು ರೋಗಿಗಳನ್ನು ಈಗಾಗಲೇ ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಇವರಿಗೆಲ್ಲ ಅಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗುವುದು. ರೋಗಿಗಳಿಗೆ ಬೇಕಾದ ಔಷಧಗಳನ್ನು ಜಿಲ್ಲಾಸ್ಪತ್ರೆಯಿಂದಲೇ ಪೂರೈಕೆ ಮಾಡಲಾಗುವುದು ಎಂದು ಡಾ.ವೀರಭದ್ರಯ್ಯ ಪಬ್ಲಿಕ್ ಸ್ಟೋರಿ.ಇನ್ ಗೆ ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲ 400 ಬೆಡ್ ಗಳನ್ನು ಕರೊನಾ ಸೋಂಕಿತರಿಗೆ‌, ಶಂಕಿತ ಸೋಂಕಿತರನ್ನು ನೋಡಿಕೊಳ್ಳಲು ಮೀಸಲಾಗಿಡಲಾಗುವುದು. ಸಾಮಾನ್ಯ ರೋಗಿಗಳಿಗೆ ಪ್ರವೇಶ ಇರುವುದಿಲ್ಲ ಎಂದು ಅವರು ಹೇಳಿದರು.

ಮುಂದಿನ ವಾರದ ವೇಳೆಗೆ ಆಸ್ಪತ್ರೆಯನ್ನು ಕೊರೊನಾ ಆಸ್ಪತ್ರೆಯಾಗಿ ಮಾರ್ಪಡಿಸಲಾಗುವುದು ಎಂದರು.

ಮೊಳಕೆಯಾಗದೇ ಮೊಳೆತು

ಡಾ.ರಜನಿ ಎಂ


ಮೊಳಕೆಯಾಗದೇ ಮೊಳೆತು

ಯಾರ ನೆನಪಿಸದ

ಮೊಳಕೆ

ಹೇಳಿ

ಕರೆಯಿತೇ ಬೆಳಕು

ಸುರಿಯಿತೆ ಹನಿ

ಬೀಗ ಹಾಕಿದರೂ ಪ್ರಸವ

ಉಬ್ಬಿದ ಬೀಜ

ಇಬ್ಭಾಗ

ಚಿಗುರೆಲೆ ಬಾಗಿ ಬಳುಕಿ

ತಬ್ಬಿ

ತುಕ್ಕಾಗಿ- ಮುಕ್ಕಾಗಿ

ಸಾಯುವ ಮುನ್ನ

ಪ್ರೀತಿಯ ಬೀಜ

ಮೊಳೆಯಲೇ ಬೇಕು

ಯಾರಿಗೂ ಕಾಣದೇ

ಸಾಮಾಜಿಕ ಜವಾಬ್ಧಾರಿಗೆ ಆಗಬೇಡವೇ ನಾವು ಮಾದರಿ?

0

ತೋವಿನಕೆರೆಯಲ್ಲಿ ಔಷಧಿ ಅಂಗಡಿ ಮುಂದೆ ಜನರು ತೋರಿದ ಸಾಮಾಜಿಕ ಅಂತರ ಪ್ರಶಂಸೆಗೆ ಪಾತ್ರವಾಗಿದೆ.

ತುರುವೇಕೆರೆ ಪ್ರಸಾದ್


ಕೊರೋನಾ ನಿಯಂತ್ರಣಕ್ಕಾಗಿ ನಮ್ಮ ಪ್ರಧಾನಮಂತ್ರಿಯವರೇ ಕೈಮುಗಿದು “ದಯವಿಟ್ಟು ಮನೆಯಲ್ಲಿರಿ” ಎಂದು ಕಳಕಳಿಯ ಮನವಿ ಮಾಡಿಕೊಂಡ ಮೇಲೂ ನಾವು ಗುಂಪು ಗುಂಪಾಗಿ ಸೇರುವ, ವಿನಾಕಾರಣ ಹೊರಗೆ ಸುತ್ತುವ ನಮ್ಮ ಚಾಳಿಯನ್ನು ಕಡಿಮೆ ಮಾಡಲಿಲ್ಲ. ದಿನಸಿ ಅಂಗಡಿಯ ಮುಂದೆ, ತರಕಾರಿ ಅಂಗಡಿಗಳ ಮುಂದೆ ಸಂಯಮದಿಂದ ಅಂತರ ಕಾಯ್ದುಕೊಂಡು ನಿಲ್ಲಲಿಲ್ಲ.

ಹಬ್ಬ,ಸಂತೆ, ಜಾತ್ರೆ ಬೇಡವೇ ಬೇಡ ಎಂದು ದೂರ ಉಳಿಯಲಿಲ್ಲ. ಪ್ರತಿದಿನ ನೂರಾರು ಜನರು ನಮ್ಮ ಕಣ್ಮಂದೇ ಹೆಣವಾಗುವುದನ್ನು ಟಿವಿಯಲ್ಲಿ ನೋಡುತ್ತಿದ್ದರೂ ನಾವು ತೀರಾ ನಿರ್ಲಕ್ಷ್ಯ ಹಾಗೂ ಬೇಜವಾಬ್ಧಾರಿಯಿಂದ ವರ್ತಿಸಿಬಿಟ್ಟೆವು.

ನಮ್ಮ ಜವಾಬ್ಧಾರಿಯುತ ಯುವಕರು ರಸ್ತೆಗಳಲ್ಲಿ ಕ್ರಿಕೆಟ್ ಆಡಿದರು. ಅದಕ್ಕೆ ಪೋಲೀಸರು ಬೆದರಿಕೆಯ ಮೂಲಕ, ಲಾಠಿ ಪ್ರಹಾರದ ಮೂಲಕ ಜನರನ್ನು ಚದುರಿಸಿ ಓಡಿಸಬೇಕಾಯಿತು. ಇದು ನಾವು ವಿದ್ಯಾವಂತರೂ, ವಿಚಾರಂತರೂ ಆದರೂ ಸಾಮಾಜಿಕ ಜವಾಬ್ಧಾರಿಯನ್ನು ನಿಭಾಯಿಸುವ ಯಾವ ನೈತಿಕ ಪ್ರಜ್ಞೆ, ವಿವೇಕ ಇಲ್ಲದ ಜನ ಎಂಬುದನ್ನು ನಿರೂಪಿಸಿದೆ.

ಸಾಕ್ರಟೀಸ್ ಹೇಳುವಂತೆ ಶಿಕ್ಷಣ ಜನರನ್ನು ನಾಗರಿಕರನ್ನಾಗಿಸಿ ಸಾರ್ವಜನಿಕ ಜವಾಬ್ಧಾರಿಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಹಾಗೆಯೇ, ಸಾಮಾಜಿಕ ಜವಾಬ್ಧಾರಿ ಎನ್ನುವುದು ಈ ಭೂಮಿ ಮತ್ತು ಅದರ ಮೇಲಿನ ಜೀವಿಗಳ ಸಾಮುದಾಯಿಕ ಹಿತಾಸಕ್ತಿ ಕಾಯುವ ಒಂದು ವೈಯಕ್ತಿಕ ಹಾಗೂ ಅಮೂಲ್ಯ ಕರ್ತವ್ಯ.

ಹೀಗಾಗಿ ಒಂದು ಸಮುದಾಯ ತನ್ನ ಮುಂದಿನ ಪೀಳಿಗೆಗೆ ಈ ಭೂಮಿ, ಇದರ ನೈಸರ್ಗಿಕ ಸಂಪನ್ಮೂಲ ಜೊತೆಗೆ ತನ್ನ ಮೌಲ್ಯಗಳು, ವಿಚಾರಗಳು, ಕೌಶಲಗಳು, ಸಾಂಸ್ಕøತಿಕ ಚಹರೆಗಳು ಇವನ್ನೆಲ್ಲಾ ವರ್ಗಾಯಿಸಬೇಕು. ಸಾಮಾಜಿಕ ಜವಾಬ್ಧಾರಿ ಇಲ್ಲದ ಸಮಾಜ ಇವಾವ ಮೌಲ್ಯಗಳನ್ನೂ ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಿಲ್ಲ.ಏಕೆಂದರೆ ಅಂತಹ ಸಮುದಾಯವೇ ತನ್ನ ಬೇಜವಾಬ್ಧಾರಿ ವರ್ತನೆಯಿಂದ ತನಗೆ ತಾನೇ ಭಸ್ಮಾಸುರನಂತೆ ವರವನ್ನೇ ಶಾಪವಾಗಿಸಿಕೊಂಡು ನಾಶವಾಗಿ ಹೋಗುತ್ತದೆ.

ಹಾಗಾಗಿ ಈ ಸಾಮಾಜಿಕ ಜವಾಬ್ಧಾರಿ ಎನ್ನುವುದು ಅತ್ಯಂತ ಮಹತ್ವದ ಬದ್ಧತೆಯಾಗಿದೆ. ತನ್ನ ಮತ್ತು ಸಮುದಾಯದ ಹಿತರಕ್ಷಣೆ, ಸಾಮಾಜಿಕ ಹಕ್ಕುಗಳು, ಸಾಮಾಜಿಕ ಕರ್ತವ್ಯಗಳು, ಬುದ್ದಿವಂತಿಕೆಯ ನಡೆ, ಜ್ಞಾನ ಮತ್ತು ಅವಕಾಶ ಈ ಎಲ್ಲಾ ಅಂಶಗಳೂ ಸಾಮಾಜಿಕ ಜವಾಬ್ಧಾರಿಯಲ್ಲಿ ಸೇರುತ್ತವೆ.

ಇವೆಲ್ಲವನ್ನೂ ಒಂದು ಸಂಕಷ್ಟ ಸಮಯದಲ್ಲಿ ಮಿಳಿತಗೊಳಿಸಿ ವಿವೇಕದಿಂದ ವರ್ತಿಸಬೇಕಾಗುತ್ತದೆ.
ಆದರೆ ಇಂತಹ ವಿವೇಕಯುತ ಸಾಮಾಜಿಕ ಜವಾಬ್ಧಾರಿಯ ನಡವಳಿಕೆಯನ್ನು ಯಾರು ಯಾರಿಗೆ ಹೇಳಿಕೊಡಬೇಕು ಎಂಬುದೇ ಜಿಜ್ಞಾಸೆಯಾಗಿದೆ.

ವಿದ್ಯಾವಂತರು, ವಿಚಾರವಂತರೆನಿಸಕೊಂಡವರೇ ಪದೇ ಪದೇ ಸಾಮಾಜಿಕ ಜವಾಬ್ಧಾರಿ ಮರೆತು ಅವಿವೇಕದಿಂದ ವರ್ತಿಸುವುದನ್ನು ನೋಡುತ್ತಿದ್ದೇವೆ. ಹಾಗಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ಎಲ್ಲೋ ಗುರುತರವಾದ ಲೋಪವಿದೆ ಎನಿಸುತ್ತಿದೆ.

ನೈತಿಕ ಹಾಗೂ ಸಾಮಾಜಿಕ ಜವಾಬ್ಧಾರಿಯ ಶಿಕ್ಷಣದಿಂದ ನಾವು ವಂಚಿತರಾಗುತ್ತಿದ್ದೇವೆ. ಹೊರದೇಶಗಳಲ್ಲಿರುವಂತೆ ವಿದ್ಯಾರ್ಥಿದೆಸೆಯಲ್ಲೇ ನಮಗೆ ಇಂತಹ ಒಂದು ಶಿಕ್ಷಣದ ಅಗತ್ಯವಿದೆ.

ಸಾಂಪ್ರದಾಯಿಕ ಶಿಕ್ಷಣದ ಮೂಲಕ ಕೌಶಲ ಹಾಗೂ ಜ್ಞಾನಾರ್ಜನೆಯಾದರೆ ನೈತಿಕ ಶಿಕ್ಷಣದ ಮೂಲಕ ನಾವು ಈ ಸಾಮಾಜಿಕ ಜವಾಬ್ಧಾರಿಯ ಅರಿವು ಮತ್ತು ಜಾಗೃತಿ ಮೂಡಿಸಬಹುದಾಗಿದೆ.

ವಿಪರ್ಯಾಸವೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವೇ ಇಲ್ಲ. ಸಾಮಾಜಿಕ ಜವಾಬ್ಧಾರಿಯ ಅರಿವು ಮೂಡಿಸುವ ಶಿಕ್ಷಣವೂ ಇಲ್ಲ, ಅದಕ್ಕೆ ಸಮಯಾವಕಾಶವೂ ಇಲ್ಲ. ನಮ್ಮ ಶಿಕ್ಷಣ ಸಂಸ್ಥೆಗಳು ಕೇವಲ ಕೌಶಲ ಮತ್ತು ಉದ್ಯೋಗದತ್ತ ಧಾವಂತದಲ್ಲಿ ಓಡುವ ಕಣ್ಣುಕಟ್ಟಿದ ಕುದುರೆಗಳಾಗಿವೆ.ವಾಸ್ತವದಲ್ಲಿ ನಮ್ಮ ಧರ್ಮ, ಸಂಪ್ರದಾಯಗಳೇ ನಮಗೆ ಸಾಕಷ್ಟು ಸಾಮಾಜಿಕ ಜವಾಬ್ಧಾರಿಯ ತಿಳುವಳಿಕೆ ನೀಡುವ ಮೂಲ ಆಕರಗಳಾಗಿವೆ.

ನಮ್ಮ ವೇದ, ಪುರಾಣ ಶಾಸ್ತ್ರಗಳಲ್ಲಿ ಉದಾತ್ತ ಚಿಂತನೆ,ಲೋಕೋತ್ತರವಾದ ಆದರ್ಶನಡೆಗಳು ಮತ್ತು ಸಮಷ್ಟಿ ಹಿತದ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ನನ್ನನ್ನೂ ಒಳಗೊಂಡಂತೆ ಅಥವಾ ನನ್ನನ್ನು ಹೊರತುಪಡಿಸಿ ಇಡೀ ಜಗತ್ತು ಕ್ಷೇಮವಾಗಿರಬೇಕು,ಸುಸ್ಥಿರವಾಗಿರಬೇಕೆಂಬ ತತ್ವವೇ ವಿಶ್ವಮಾನವ ತತ್ವ.

ಇವೆಲ್ಲಾ ನಮಗೆ ಹೊಸದೇನಲ್ಲ.ಆದರೆ ಇಂತಹ ಸಾಮಾಜಿಕ ಜವಾಬ್ಧಾರಿಯ ಜ್ಞಾನ ನಮ್ಮ ಇಂದಿನ ಪೀಳಿಗೆಯ ಮಕ್ಕಳಿಗೆ ವರ್ಗಾವಣೆಯಾಗುತ್ತಿಲ್ಲ. ಸಮಷ್ಠಿ ಹಿತ, ಸರಳ ಜೀವನ, ಉದಾತ್ತ ಚಿಂತನೆಯ ತತ್ವ, ಮೌಲ್ಯಗಳು ಇಂದು ಸ್ವಾರ್ಥ, ಐಶರಾಮಿ ಬದುಕು ಹಾಗೂ ದಾಷ್ಟ್ಯ ವರ್ತನೆಗೆ ಪಲ್ಲಟಗೊಂಡಿದೆ.

ಮಕ್ಕಳಿಗೆ ತಾಯಿಯೇ ಮೊದಲ ಗುರು, ತಂದೆಯೇ ಎರಡನೇ ಗುರು- ಈ ಇಬ್ಬರೂ ಗುರುಗಳು ತಮ್ಮ ಬದುಕಿನ ಜಂಜಾಟದಲ್ಲಿ ಬಾಲ್ಯದಲ್ಲಿ ಮಕ್ಕಳಿಗೆ ನೀಡಬೇಕಾದ ನೈತಿಕ ಶಿಕ್ಷಣ, ಸಾಮಾಜಿಕ ಜವಾಬ್ಧಾರಿಯ ಶಿಕ್ಷಣದಿಂದ ಮಕ್ಕಳನ್ನು ವಂಚಿಸುತ್ತಿದ್ದಾರೆ.

ಇನ್ನು ಮೂರನೆಯ ಹಾಗೂ ಮಹತ್ವದ ಗುರುವೆಂದರೆ ಶಾಲೆಯಲ್ಲಿನ ಶಿಕ್ಷಕರು. ಈ ಶಿಕ್ಷಕರೇ ತಂದೆ, ತಾಯಿಗಳ ಜವಾಬ್ಧಾರಿಯನ್ನೂ ಹೊತ್ತು ಅಕಾಡೆಮಿಕ್ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ಹಾಗೂ ಸಾಮಾಜಿಕ ಜವಾಬ್ಧಾರಿಯ ಶಿಕ್ಷಣವನ್ನೂ ಕೊಡಬೇಕಿದೆ.

ದುರದೃಷ್ಟವೆಂದರೆ ಬಹುತೇಕ ಶಿಕ್ಷಕರಿಗೇ ಈ ಎರಡೂ ಶಿಕ್ಷಣದ ಪರಿಕಲ್ಪನೆ ಇಲ್ಲದಿರುವುದು. ಬಹುತೇಕ ಶಿಕ್ಷಕರು ವಿಷಯಗಳನ್ನು ಉರು ಹೊಡೆಸಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದಷ್ಟೇ ತಮ್ಮ ಕೆಲಸ ಎಂದು ಭಾವಿಸಿದ್ದಾರೆ. ಅವರ ಸಾಮಾಜಿಕ ಕಳಕಳಿ ಮತ್ತು ನಾಗರಿಕತೆ ಪ್ರಜ್ಞೆ ಕೇವಲ ಗಣಪತಿ ಪೂಜೆ, ಸರಸ್ವತಿ ಪೂಜೆ, ರಾಷ್ಟ್ರೀಯ ಹಬ್ಬಗಳಲ್ಲಿನ ಶಾಲೆಯ ಎರಡು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿರುತ್ತದೆ.

ಹೋಂ ವರ್ಕ್ ಅಸೈನ್‍ಮೆಂಟ್‍ಗಳನ್ನು ನೀಡುವುದು, ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಬಿಟ್ಟು ಇವರು ಸ್ವಯಂ ಪ್ರೇರಣೆಯಿಂದ ವಿದ್ಯಾರ್ಥಿಗಳ ಸಾಮಥ್ರ್ಯದ ಆಂತರಿಕ ಮೌಲ್ಯಮಾಪನ ಮಾಡುವುದೇ ಇಲ್ಲ. ಶಿಕ್ಷಕರು ಪ್ರಕೃತಿ ಪರಿಸರದೊಂದಿಗಿನ ಮಾನವನ ಅವಲಂಬನೆ, ನೈಸರ್ಗಿಕ ಸಂಪನ್ಮೂಲಗಳ ಕನಿಷ್ಠ ಬಳಕೆ, ಪರಿಸರ ಸಂರಕ್ಷಣೆ, ವಿವಿಧ ಪ್ರಾಕೃತಿಕ ದುರಂತಗಳ ವಿರುದ್ಧ ಹೋರಾಡುವುದು ಹೇಗೆ ?

ಪರಿಸರವನ್ನು ಸ್ಚಚ್ಛವಾಗಿಟ್ಟುಕೊಳ್ಳುವುದು ಹೇಗೆ? ಇಂತಹ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವುದೇ ಇಲ್ಲ. ಶಿಕ್ಷಕರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವಿದ್ಯಾರ್ಥಿಗಳ ಮೇಲೆ ಹೇರದೆ ಅವರಿಗೆ ನಿಷ್ಪಕ್ಷಪಾತವಾಗಿ ಬೋಧನೆ ಮಾಡಬೇಕು.

ರಾಜಕೀಯ ಮತ್ತು ಧರ್ಮಗಳಿಗೆ ಸಂಬಂಧಿಸಿದಂತೆ ಅವಶ್ಯಕತೆಗೆ ತಕ್ಕಷ್ಟೇ ಸಾಮಾನ್ಯ ಅಂಶಗಳನ್ನು ಮಾತ್ರ ಚರ್ಚಿಸಬೇಕು. ತನ್ನ ವೈಯಕ್ತಿಕ ನಂಬಿಕೆಗಳಿಗಾಗಿ ಪಠ್ಯವನ್ನು, ಬೋಧನೆಯನ್ನು ತಿರುಚಿ ವಿದ್ಯಾರ್ಥಿಗಳ ಮೇಲೆ ಹೇರಬಾರದು ಎಂಬುದು ಒಂದು ಆದರ್ಶ ಮತ್ತು ಎಲ್ಲರೂ ಒಪ್ಪುವ ಸಿದ್ದಾಂತ. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಮತ್ತು ಸ್ವತಂತ್ರವಾಗಿ ತಮಗೆ ಬೇಕಾದ ಮಾರ್ಗ ಹಾಗೂ ತತ್ವಗಳನ್ನು ಅಳವಡಿಸಿಕೊಳ್ಳುವ ಮುಕ್ತ ಅವಕಾಶಗಳನ್ನು ಶಿಕ್ಷಕರು ನೀಡಬೇಕು.ಆದರೆ ಈಗ ಆಗುತ್ತಿರುವುದೇನು? ಜೆಎನ್‍ಯು ಮಾದರಿಯ ಹಲವು ವಿಶ್ವವಿದ್ಯಾಲಯಗಳಲ್ಲಿ ಇದಕ್ಕೆ ವಿರುದ್ಧ ಪ್ರಕ್ರಿಯೆ ನಡೆಯುತ್ತದೆ. ಅಧ್ಯಾಪಕರು ಬೋಧನೆಯ ನೆಪದಲ್ಲಿ ವಿಚಾರವಂತಿಕೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಮೇಲೆ ತಮ್ಮ ಸಿದ್ಧಾಂತಗಳನ್ನು ಹೇರುತ್ತಿದ್ದಾರೆ.

ನೈತಿಕತೆಯ ಮಾರ್ಗಗಳಿಗೆಲ್ಲಾ ಕೇಸರೀಕರಣ ಎಂದು ಲೇಬಲ್ ಅಂಟಿಸಿ ವಿದ್ಯಾರ್ಥಿಗಳ ದಿಕ್ಕುತಪ್ಪಿಸಲಾಗುತ್ತಿದೆ. ನೈತಿಕ ಶಿಕ್ಷಣವೇ ಇಲ್ಲದೆಡೆ ಸಾಮಾಜಿಕ ಜವಾಬ್ಧಾರಿಯನ್ನು ನಿರೀಕ್ಷಿಸುವುದಾದರೂ ಹೇಗೆ ? ಅದನ್ನು ರೂಢಿಸುವುದಾದರೂ ಹೇಗೆ ಎಂಬುದೇ ಸವಾಲಿನ ವಿಷಯವಾಗಿದೆ.

ಮಕ್ಕಳಿಗೆ ಮನೆಯಿಂದಲೇ ಈ ಸಾಮಾಜಿಕ ಜವಾಬ್ಧಾರಿಯ ಅರಿವು ಮೂಡಿಸುವ ಪ್ರಯತ್ನ ಪ್ರಾರಂಭವಾಗಬೇಕು. ತಂದೆ ತಾಯಿಯರೂ ಕೂಡ ಈ ಜವಾಬ್ಧಾರಿಯನ್ನು ಕಠಿಣ ಬದ್ಧತೆಯಾಗಿ ಸ್ವೀಕರಿಸಬೇಕು. ತನ್ನನ್ನು ತಾನು ಮೊದಲು ಸ್ವಚ್ಚವಾಗಿಟ್ಟುಕೊಳ್ಳುವ ಪಾಠ ಶುರುವಾಗಬೇಕು.

ಎಲ್ಲಂದರಲ್ಲಿ ಗುಟ್ಕಾ ತಿಂದು ಉಗುಳುವುದು, ಮಲಮೂತ್ರ ವಿಸರ್ಜಿಸುವುದು, ಪರಿಸರ ಹಾಳುಗೆಡವುವುದು ಅನುವಂಶೀಯ ಎನ್ನುವಷ್ಟರ ಮಟ್ಟಿಗೆ ನಮ್ಮಲ್ಲಿ ಹಾಸು ಹೊಕ್ಕಾಗಿದೆ. ಇದರಿಂದ ಬಿಡುಗಡೆ ಸಿಗಬೇಕು. ಪ್ರಾಥಮಿಕ ಹಂತದಲ್ಲೇ ಪಠ್ಯದಲ್ಲಿ ನೈತಿಕ ಹಾಗೂ ಸಮುದಾಯದ ಜವಾಬ್ಧಾರಿಯ ಕುರಿತ ಶಿಕ್ಷಣ ನೀಡಬೇಕು. ಬೇರೆ ವಿಷಯಗಳಿಗಿರುವಂತೆಯೇ ಅವಕ್ಕೂ ಪಠ್ಯ ಪುಸ್ತಕ ಇರಬೇಕು.

ಪ್ರವಾಹ, ಕಾಳ್ಗಿಚ್ಚು, ಸಾಂಕ್ರಾಮಿಕ ರೋಗ ಭೀತಿಯ ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಅನುಸರಿಸಬೇಕಾದ ಸಾಮಾಜಿಕ ಜವಾಬ್ಧಾರಿಯ ಕುರಿತು ವಿಶೇಷ ತರಬೇತಿ ನೀಡಬೇಕು.ಸಾಮಾಜಿಕ ಜವಾಬ್ಧಾರಿ ಭಾರತೀಯರ ಅನುವಂಶೀಯ ಮಾದರಿ ಎಂದು ಹೆಮ್ಮೆ ಪಡುವಂತಾಗಬೇಕು.

ಮನುಷ್ಯನ ಅಸ್ತಿತ್ವ ಕರುಣೆ ಮತ್ತು ಕುತೂಹಲದ ಮೇಲೆ ನಿಂತಿದೆ. ಇವರೆಡೂ ಮನುಷ್ಯನನ್ನು ಜ್ಞಾನದೆಡೆ ಕೊಂಡೊಯ್ಯುತ್ತವೆ. ಕೇವಲ ಕರುಣೆ ಇಲ್ಲದ ಕುತೂಹಲ ಮತ್ತು ಜ್ಞಾನದ ಮೇಲೆ ನಿಂತ ಅಸ್ತಿತ್ವ ಅಮಾನವೀಯವಾದುದು, ಹಾಗೇ ಕುತೂಹಲ ಮತ್ತು ಜ್ಞಾನ ಇಲ್ಲದ ಕರುಣೆ ನಿಷ್ಪ್ರಯೋಜಕ ಎಂದು ಅಣುಭೌತವಿಜ್ಞಾನಿ ವಿಕ್ಟರ್ ವೆಯಿಸ್‍ಕಾಫ್ ಹೇಳುತ್ತಾರೆ.

ಸಮುದಾಯದ ಅಥವಾ ಸಾಮಾಜಿಕ ಜವಾಬ್ಧಾರಿಗೆ ಹಲವು ಸಂದರ್ಭಗಳಲ್ಲಿ ಕರುಣೆ ಅಥವಾ ಅನುಕಂಪವೇ ಮೂಲದ್ಯವ್ಯವಾಗಿರುತ್ತದೆ. ಕೆಟ್ಟ ಕುತೂಹಲ ಹಾಗೂ ಅಜ್ಞಾನ ಪ್ರದರ್ಶನದ ಸಂದರ್ಭಗಳಲ್ಲಿ ಅನುಕಂಪವನ್ನು ಅಂತರಂಗದ ಭಾವವಾಗಿಟ್ಟುಕೊಂಡೇ ನಿಷ್ಠುರತೆ ಪ್ರದರ್ಶಿಸಬೇಕಾಗುತ್ತದೆ. ಅದನ್ನೇ ಈಗ ನಮ್ಮ ಆಡಳಿತ ಹಾಗೂ ಪೋಲೀಸರು ಲಾಠಿ ಬೀಸಿ ಮಾಡುತ್ತಿರುವುದು.

ಇದು ಬೇಸರದ ಸಂಗತಿಯಾದರೂ ಅನಿವಾರ್ಯವಾಗಿದೆ. ಸಾಮಾಜಿಕ ಜವಾಬ್ಧಾರಿ ಮರೆತು ಆ ಮಟ್ಟಕ್ಕಿಳಿದ ನಾವೂ ನಮ್ಮ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಕಿದೆ.


ಲೇಖಕರು ಹಿರಿಯ ಪತ್ರಕರ್ತರು ಹಾಗೂ ಸಾಹಿತಿ. ಇಲ್ಲಿಯ ಅಭಿಪ್ರಾಯಗಳೆಲ್ಲವೂ ಲೇಖಕರವು.

ಎಣ್ಣೆ ಸಿಗದಿದ್ದಕ್ಕೆ ಕತ್ತು ಕೊಯ್ದುಕೊಂಡ


ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಐಡಿಹಳ್ಳಿ ಹೋಬಳಿಯ ಚಿಕ್ಕದಾಳವಟ್ಟ ಗ್ರಾಮದ ವ್ಯಕ್ತಿ ಕುಡಿಯುವುದಕ್ಕೆ ಮಧ್ಯ ಸಿಗುತ್ತಿಲ್ಲಾ ಎಂಬ ಕಾರಣಕ್ಕೆ ಚಾಕುವಿನಿಂದ ಕುತ್ತಿಗೆ ಕೂಯ್ದುಕೊಂಡಿರುವ ಘಟನೆ ಭಾನುವಾರ ನಡೆದಿದೆ.

ಹನುಮಂತಪ್ಪ (60) ಎಂಬುವವರು ಭಾನುವಾರ ಬೆಳಿಗ್ಗೆ ಮದ್ಯ ಸಿಗುತ್ತಲ್ಲ ಎಂದು ಚಡಪಡಿಸಿ ಕೊನೆಗೆ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡಿದ್ದಾರೆ.

ತೀವ್ರ ರಕ್ತ ಸ್ರಾವವಾಗುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಮತ್ತೊಂದು ಚಿರತೆ ಸೆರೆ

Publicstory. in


Tumkuru: ಜಿಲ್ಲೆಯ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಅರಿಯೂರು ಗ್ರಾಮಪಂಚಾಯತಿ ವ್ಯಾಪ್ತಿಯ ಚನ್ನಿಗಪ್ಪನಪಾಳ್ಯದ ಕೆರೆ ಬಳಿ ನಾಲ್ಕೈದು ದಿನಗಳಿಂದ ಪ್ರತ್ಯಕ್ಷವಾಗಿ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿತ್ತು.

ಸಾಕು ಪ್ರಾಣಿಗಳನ್ನು ಭಕ್ಷಿಸುತ್ತಿದ್ದ ಸುಮಾರು ೨ ವರ್ಷದ ಗಂಡು ಚಿರತೆಯನ್ನು ತುಮಕೂರು ವಲಯದ ಅರಣ್ಯ ಸಿಬ್ಬಂದಿ ಇಂದು ಕಾರ್ಯಾಚರಣೆ ನಡೆಸಿ ಬೋನಿನಲ್ಲಿ ಸೆರೆ ಹಿಡಿದಿದ್ದಾರೆ.

ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತುಮಕೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ

ಶಿರಾ- ಕರೊನಾ ಸಾವು: ಜಿಲ್ಲಾ ಆರೋಗ್ಯ ಇಲಾಖೆಗೆ ಉಳಿಸಿಹೋದ ಪ್ರಶ್ನೆಗಳು

Publicstory. in


ತುಮಕೂರು: ಶಿರಾದ ವ್ಯಕ್ತಿಯೊಬ್ಬರು ಕರೊನಾ ಸೋಂಕಿ‌ನಿಂದ ಮೃತಪಟ್ಟ ಘಟನೆ ಜಿಲ್ಲೆಯ ಆರೋಗ್ಯ ಇಲಾಖೆಯ ಮೇಲಿನ ವಿಸ್ವಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಸಾವಿಗೀಡಾದ ವ್ಯಕ್ತಿ ಹೊರದೇಶಕ್ಕೆ ಹೋಗಿರಲಿಲ್ಲ ಎಂಬ ಒಂದೇ ಸ್ಪಷ್ಟನೆ ನೀಡಿ ಸಮಾಧಾನ ಹೇಳಿಕೊಳ್ಳಲು ಸಾಧ್ಯವಿಲ್ಲ. ದೆಹಲಿಯಲ್ಲಿ ಈ ಮೊದಲೇ ಸೋಂಕು ಕಾಣಿಸಿಕೊಂಡಿತ್ತು. ಅಲ್ಲದೇ ಆತ ಹೋಗಿದ್ದ ಈ ಭಾಗದಲ್ಲಿ ಮುಸಲ್ಮಾನರು ಕರೆಯುವ ದೆಹಲಿ ಮಸೀದಿ ಸಮಾವೇಶಕ್ಕೆ. ಸಮಾವೇಶದಲ್ಲಿ, ದೆಹಲಿಯಿಂದ ಬರುವಾಗ ಎಲ್ಲಿ ಬೇಕಾದರೂ ಸೋಂಕು ತಗುಲಿರುವ ಸಂಭವವಿದೆ.

ಕೊರೊನಾ ಸೋಂಕಿನ ಲಕ್ಷಣಗಳ ಬಗ್ಗೆ ಆರೋಗ್ಯ ಇಲಾಖೆ, ವಾಹಿನಿಗಳು ಸಣ್ಣ ಮಗುವಿಗೂ ಗೊತ್ತಾಗುವಷ್ಟು ಪ್ರಚಾರ ಮಾಡಿವೆ. ಇಷ್ಟಿದ್ದು, ಜಿಲ್ಲಾಸ್ಪತ್ರೆಯ ವೈದ್ತರು, ಸಿಬ್ವಂದಿಗೆ ಒಂದು ಸಣ್ಣ ಅನುಮಾನ ಬಾರದೇ ಹೋಗಿರುವುದು ಅಚ್ಚರಿಯಾಗಿದೆ.

ಈ ವ್ಯಕ್ತಿಯ ಟ್ರಾವೆಲ್ ಇಸ್ಟರಿ ನೋಡಿದರಂತೂ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ.ಕನಿಷ್ಟ ಪಕ್ಷ, ಜಿಲ್ಲಾಸ್ಪತ್ರೆ ವಾರ್ಡ್ ನಲ್ಲಿ ಸೋಂಕಿನ ಲಕ್ಷಣಗಳು ಇರುವವರು ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ಸಣ್ಣ ಚರ್ಚೆ ನಡೆದಿದ್ದರೂ ಈ ತಪ್ಪು ನಡೆಯುತ್ತಿರಲಿಲ್ಲ.

ಜಿಲ್ಲಾಸ್ಪತ್ರೆಯಲ್ಲಿ ಎಷ್ಟು ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆ ಯಲ್ಲಿ ವೆಂಟಿಲೇಟರ್ ಎಷ್ಟಿವೆ ಎಂಬ ಮಾಹಿತಿಯನ್ನು ಜನರಿಗೆ ನೀಡಬೇಕಾಗಿದೆ.

ಸೋಂಕಿತ ವ್ಯಕ್ತಿಗೆ ವೆಂಟಿಲೇಟರ್ ನೀಡಲಾಗಿತ್ತೇ? ಇಲ್ಲವೇ ವರದಿ ಬರುವವರಿಗೂ ಕಾದು ಬಂದ ನಂತರ ಸೋಂಕಿತ ಎಂಬುದು ತಿಳಿಯಿತೆ ಎಂಬ ಪ್ರಶ್ನೆಗಳಲ್ಲಿ ಇನ್ನೂ ಉತ್ತರ ಸಿಕ್ಕಿಲ್ಲ.

ಈ ಬಗ್ಗೆ ಪ್ರಶ್ನಿಸಲು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ ಅವರಿಗೆ ಕರೆ ಮಾಡಿದಾಗ ಸಭೆಯಲ್ಲಿರುವುದಾಗಿ ತಿಳಿಸಿದರು.DHO ಅವರು ಕರೆ ಸ್ವೀಕರಿಸಲಿಲ್ಲ. ಈ ಇಬ್ಬರು ಅಧಿಕಾರಿಗಳು ಮಾಹಿತಿ ನೀಡಿದರೆ ಈ ವರದಿಯೊಂದಿಗೆ ಸೇರಿಸಲಾಗುವುದು.

ಸೋಂಕಿತ ವ್ಯಕ್ತಿ ಮೆಡಿಕಲ್ ಅಡ್ವೈಸ್ ವಿರುದ್ಧ ಖಾಸಗಿ ಆಸ್ಪತ್ರೆ ಗೆ ಹೋಗಬಹುದೇ? ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ ಬಳಿಕ ಈ ಸೋಂಕಿತನನ್ನು ವಾಪಸ್ ಜಿಲ್ಲಾಸ್ಪತ್ರೆ ಗೆ ಕರೆ ತರಲಾಯಿತೇ? ಆತನ ಸಂಬಂಧಿಕರು ಕರೆದುಕೊಂಡು ಬಂದರೆ ಎಂಬ ಪ್ರಶ್ನೆಗಳಿವೆ.

ಹೊರದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡುವುದಷ್ಟಕ್ಕೆ ಹೆಚ್ಚು ಒತ್ತು ಕೊಟ್ಟು, ಉಳಿದ ಸಿದ್ಧತೆಗಳನ್ನು ಏನೆಲ್ಲ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆಯೂ ಹೇಳಬೇಕಾಗಿದೆ.

ಕರೊನಾ ಸೋಂಕಿನ ಲಕ್ಷಣ ವಿದೇಶದಿಂದ ಬಂದವರಲ್ಲಿ ಅಥವ ಯಾರಲ್ಲಿ ಕಂಡು ಬಂದರೂ ಉದಾಸೀನ ಮಾಡಬಾರದು ಎಂಬ ಪಾಠ ಕಲಿಯಬೇಕಾಗಿದೆ‌.

ತುರುವೇಕೆರೆ; ಖಾಸಗಿ ಕ್ಲಿನಿಕ್ ವೈದ್ಯರಿಗೆ ನೋಟಿಸ್

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯೊಂದಿಗೆ ಶಾಸಕ ಮಸಾಲಜಯರಾಮ್ ನೇತೃತ್ವದಲ್ಲಿ ಕೊರೊನಾ ಸೋಂಕು ನಿಯಂತ್ರಣ ಕುರಿತು ಶುಕ್ರವಾರ ಸಭೆ ನಡೆಯಿತು.

ಮಕ್ಕಳು, ವೃದ್ದರೂ ಸೇರಿದಂತೆ ಎಲ್ಲರೂ ಮನೆಯ ಹೊರಗಡೆ ಬರಬೇಡಿ. ನಾನು ನಿಮ್ಮ ಮನೆಯ ಮಗನಾಗಿ ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ. ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ದಯಮಾಡಿ ಪಾಲಿಸಿ. ತುರುವೇಕೆರೆಯನ್ನು ಕಾಪಾಡಿ ಎಂದು ಶಾಸಕರು ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ನಮ್ರತೆಯಿಂದ ಬೇಡಿಕೊಂಡರು.

ಹೊರ ಜಿಲ್ಲೆ ಮತ್ತು ಬೆಂಗಳೂರಿನಿಂದ ಈಗಾಗಲೇ ನೂರಾರು ಜನರು ತಾಲ್ಲೂಕಿಗೆ ಆಗಮಿಸಿರುವುದರಿಂದ ಅವರೆಲ್ಲರಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದು ಒಂದು ಸವಾಲಾಗಿ ಪರಿಣಮಿಸಿದೆ. ಪಟ್ಟಣದಲ್ಲಿ ಅನಾವಶ್ಯಕವಾಗಿ ಓಡಾಡುವವರಿಗೆ ಬಿಸಿ ತೋರಿಸಿ. ಪಟ್ಟಣದಲ್ಲಿ ಭಾಗಶಃ ಜನರ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಇದರಲ್ಲಿ ಪೊಲೀಸರ ಶ್ರಮವಿದೆ ಎಂದು ಸಿಪಿಐ.ಲೋಕೇಶ್ ಅವರನ್ನು ಅಭಿನಂದಿಸಿದರು.

ತರಕಾರಿ, ದಿನಸಿ, ಹಣ್ಣು ಮೊದಲಾದ ಅಗತ್ಯ ವಸ್ತುಗಳಿಗೆ ಕಿಂಚಿತ್ತೂ ಊನಬಾರದಂತೆ ಕ್ರಮವಹಿಸಲಾಗಿದೆ. ಎಲ್ಲರಿಗೂ ಗ್ಯಾಸ್ ಮತ್ತು ಪಡಿತರ ಅಕ್ಕಿಯನ್ನು ಸಕಾಲಕ್ಕೆ ಸಿಗುವಂತೆ ನೋಡಿಕೊಳ್ಳಲಾಗಿದೆ. ಪಟ್ಟಣಿಗರ ಮನೆಬಾಗಿಲಿಗೆ ದಿನಸಿ ಮತ್ತು ತರಕಾರಿಗಳನ್ನು ತಲುಪಿಸುವ ಕೆಲಸವನ್ನು ತಹಶೀಲ್ದಾರ್ ಆರ್.ನಯೀಂಉನ್ನೀಸಾ ಮಾಡುತ್ತಿದ್ದಾರೆ.

ಖಾಸಗಿ ಕ್ಲಿನಿಕ್ ಮುಚ್ಚಿದರೆ ಕಠಿಣ ಕ್ರಮ: ಇಲ್ಲಿನ 12 ಖಾಸಗಿ ಕ್ಲಿನಿಕ್ಗಳು ಕೊರೊನಾ ಭೀತಿಯಿಂದ ಜನ ಸಾಮಾನ್ಯರಿಗೆ ಚಿಕಿತ್ಸೆ ನೀಡುವಲ್ಲಿ ಪಲಾಯಾನ ಮಾಡಿವೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಇವರೆಲ್ಲರೂ ಬಾಗಿಲು ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡದಿದ್ದರೆ ಅಂತಹವರ ಪರವಾನಗಿಯನ್ನು ರದ್ದುಪಡಿಸಲಾಗುವುದೆಂದು ನೋಟೀಸ್ ನೀಡಿ ಎಂದು ತಾಲ್ಲೂಕು ಆರೋಗ್ಯಧಿಕಾರಿ ಡಾ.ಸುಪ್ರಿಯಾಗಿ ಸೂಚಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಆರ್.ನಯೀಂಉನ್ನೀಸಾ, ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿ ಜಯಕುಮಾರ್, ಸಿಪಿಐ.ಲೋಕೇಶ್, ಪ.ಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಟಿಎಚ್ಒ.ಸುಪ್ರಿಯಾ, ಸಾರ್ವಜನಿಕ ಆಸ್ಪತ್ರೆಯ ವೈದ್ಯಧಿಕಾರಿ ಶ್ರೀಧರ್, ಡಾ.ಪವನ್ಕುಮಾರ್ ಇದ್ದರು.

ಹೆಚ್ಚಿನ ಬೆಲೆಗೆ ದಿನಸಿ ಮಾರಿದರೆ ಕ್ರಿಮಿನಲ್ ಕೇಸ್

ಪಾವಗಡ: ನಿತ್ಯವಸರ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಿದರೆ ಹುಷಾರ್. ಕ್ರಮಿನಲ್ ಕೇಸ್ ಹಾಕಿ ಬಾಗಿಲು ಮುಚ್ಚಿಸುತ್ತೇನೆ.

ಹೀಗೆ ಮಾತಾಡುತ್ತೇನೆ ಎಂದು ಬೇಸರ ಮಾಡಿಕೊಳ್ಳಬೇಡಿ ಪರಿಸ್ಥಿತಿ ಹಾಗಿದೆ ಎಂದು ಸಂದರ್ಭವನ್ನು ವಿವರಿಸುತ್ತಾ ವ್ಯಾಪಾರಿಗಳಿಗೆ ಡಿ ವೈ ಎಸ್ ಪಿ ಪ್ರವಿಣ್ ಎಚ್ಚರಿಕೆ ಕೊಟ್ಟರು.

ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ

ತರಕಾರಿ, ಹಣ್ಣು, ಆಹಾರ ಪದಾರ್ಥಗಳನ್ನು ದುಭಾರಿ ಬೆಲೆಗೆ ಮಾರಾಟ ಮಾಡಬೇಡಿ. ದೂರುಗಳು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ವ್ಯಾಪಾರ ಮಾಡುವುದರ ಜೊತೆಗೆ ಜನತೆಗೆ ಮಾಸ್ಕ್ ಹಾಗೂ ಗ್ಲೌಸ್ ಧರಿಸುವಂತೆ ತಿಳಿಸಿ. ಕೊರೊನಾ ಬಗ್ಗೆ ಅರಿವು ಮೂಡಿಸಿ ಎಂದರು.

ತಹಶೀಲ್ದಾರ್ ವರದರಾಜು ಮಾತನಾಡಿ, ನೂತನ ಬಸ್ ನಿಲ್ದಾಣದಲ್ಲಿ ತರಕಾರಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಕಂದಾಯ ನಿರೀಕ್ಷಕ ರಾಜಗೋಪಾಲ್, ಗ್ರಾಮ ಲೆಕ್ಕಿಗ ಗಿರೀಶ್, ಸರ್ಕಲ್ ಇನ್ ಸ್ಪೆಕ್ಟರ್ ನಾಗರಾಜು, ಸಬ್ ಇನ್ ಸ್ಪೆಕ್ಟರ್ ನಾಗರಾಜು, ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ ಹಾಜರಿದ್ದರು.

ಕೊರೊನಾ: ತುಮಕೂರು ಮೂವರು ವೈದ್ಯರಿಗೆ ಗೃಹ ಬಂಧನ

ತುಮಕೂರು: ಕರೊನಾ ಸೋಂಕಿನಿಂದ ಸಾವಿಗೀಡಾದ ಶಿರಾದ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಮೂವರು ವೈದ್ಯರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದ್ದು, ಮೂವರನ್ನೂ ಗೃಹ ಬಂಧನದಲ್ಲಿರುವಂತೆ ಸೂಚಿಸಿದೆ.

ಸಾವಿಗೀಡಾದ ವ್ಯಕ್ತಿಯು ಶಿರಾದ ಎರಡು ಕ್ಲಿನಿಕ್ ಗಳಲ್ಲಿ ತೋರಿಸಿದ್ದರು. ಇದಾದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ್ದರು.

ಜಿಲ್ಲಾಸ್ಪತ್ರೆಯ ವೈದ್ಯರು ಸೇರಿದಂತೆ ಮೂವರು ವೈದ್ಯರಗಳಿಗೆ ಹೋಂ ಕ್ವಾರಂಟೈನ್ ನಲ್ಲಿ ಇರಲು ಈಗಾಗಲೇ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಇವರಲ್ಲದೇ ವ್ಯಕ್ತಿಯ ಎಕ್ಸ್ ರೇ ತೆಗೆದಿದ್ದ ಸಿಬ್ಬಂದಿ ಹಾಗೂ ನರ್ಸ್ ಗಳನ್ನು ಹೋಂ ಕ್ವಾರಂಟೈನ್ ಗೆ ಹೇಳಲಾಗಿದೆ.

ಸಾವಿಗೀಡಾದ ವ್ಯಕ್ತಿ ವಿದೇಶಕ್ಕೆ ಹೋಗಿಲ್ಲ ಎಂದು ಯಾಮಾರಿದ್ದು ಈಗ ಮುಳುವಾಗಿದೆ ಎಂದು ವೈದ್ಯರೊಬ್ವರು ತಿಳಿಸಿದರು.

ಸಾವಿಗೀಡಾದ ಸೋಂಕಿತ ವ್ಯಕ್ತಿ ಅಕ್ಕ ಪಕ್ಕದ ಬೆಡ್ ನಲ್ಲಿದ್ದ, ಆ ವಾರ್ಡ್ ನಲ್ಲಿ ಇದ್ದ ರೋಗಿಗಳ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಹುಡುಕಿ ತಪಾಸಣೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಆರೋಗ್ಯ ಇಲಾಖೆ ಏನನ್ನು ಹೇಳಿಲ್ಲ.