Thursday, February 26, 2026
Google search engine
Home Blog Page 266

ಕರೊನಾ: ವಿದೇಶದಿಂದ ಬಂದವರ ಮಾಹಿತಿ‌‌‌ ನೀಡಲು ಸಹಾಯವಾಣಿ ಆರಂಭ: ಜನರಿಗೆ ಮನವಿ

Publicstory. in


ತುಮಕೂರು: ಜಿಲ್ಲೆಯಲ್ಲಿ ಕರೋನಾ ಕೋವಿಡ್-19 ಅನ್ನು ನಿಯಂತ್ರಿಸ ಬೇಕಾಗಿರುವ ಹಿನ್ನೆಲೆಯಲ್ಲಿ ವಿದೇಶಗಳಿಂದ ಪ್ರವಾಸ ಮುಗಿಸಿ ತುಮಕೂರು ಜಿಲ್ಲೆಗೆ ವಾಪಸ್ಸಾಗುತ್ತಿರುವವರು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ತಮ್ಮ ಮಾಹಿತಿಯನ್ನು ನೊಂದಾಯಿಸಿ ಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಚಂದ್ರಿಕಾ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಿದೇಶಗಳಿಂದ ತುಮಕೂರು ಜಿಲ್ಲೆಗೆ ಆಗಮಿಸುತ್ತಿರುವವರು ಕಡ್ಡಾಯವಾಗಿ ತಮ್ಮ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡಿ ತಪಾಸಣೆಗೆ ಒಳಗಾಗ ಬೇಕಾಗುತ್ತದೆ.

ಒಂದು ವೇಳೆ ವಿದೇಶದಿಂದ ಆಗಮಿಸಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡದೇ ಇರುವವರು ಕಂಡು ಬಂದರೆ ಅಕ್ಕಪಕ್ಕದ ಮನೆಯವರು/ ಸಾರ್ವಜನಿಕರು ಮಾಹಿತಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಅಥವಾ ಜಿಲ್ಲಾ ಸಹಾಯವಾಣಿ ಸಂಖ್ಯೆ: 0816-2278387, 0816-2251414, 0816-2252936 ಕ್ಕೆ ಹಾಗೂ ಮೊ.ಸಂ.9449843179/9449843064 ಕ್ಕೆ ಕರೆ ಮಾಡಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ 277 ಮಂದಿಯ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೂ ಕರೋನಾ ಕೋವಿಡ್-19 ಪ್ರಕರಣಗಳು ಪತ್ತೆಯಾಗಿರುವುದಿಲ್ಲ. ಸಾರ್ವಜನಿಕರು ಯಾವುದೇ ಕಾರಣಕ್ಕೆ ಭಯಪಡದೆ ಮುನ್ನೆಚ್ಚರಿಕೆ ಕ್ರಮವಾಗಿ ಜನರಿಂದ ಅಂತರ ಕಾಯ್ದುಕೊಳ್ಳುವುದು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವುದು. ಜ್ವರ, ಕೆಮ್ಮು, ನೆಗಡಿ ಪೀಡಿತರು ಹತ್ತಿರದ ಆಸ್ಪತ್ರೆಗಳಲ್ಲಿ ತಪಾಸಣೆಗೊಳ ಪಡಬೇಕು ಎಂದು ಅವರು ತಿಳಿಸಿದ್ದಾರೆ.

ಉಸಿರಾಟದ ತೊಂದರೆ: ಜಿಲ್ಲಾಸ್ಪತ್ರೆಗೆ ಯುವಕ

ತುಮಕೂರು ಜಿಲ್ಲೆ ಪಾವಗಡ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದ ಸುಮಾರು 35 ವರ್ಷದ ಯುವಕ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ವೈದ್ಯರು ಹೆಚ್ಚಿ ತಪಾಸಣೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಯುವಕ  ಕೆಮ್ಮು, ನೆಗಡಿ, ಉಸಿರಾಟದ ತೊಂದರೆ  ಎಂದು ಚಿಕಿತ್ಸೆ ಪಡೆಯಲು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ. ಅನುಮಾನಗೊಂಡ ವೈದ್ಯರು ತಪಾಸಣೆ ಮಾಡಿಸುವುದು ಒಳ್ಳೆಯದು ಎಂದು ನಿರ್ಧರಿಸಿ ತುಮಕೂರಿಗೆ ಕಳುಹಿಸಿಕೊಟ್ಟರು.

ಜನತೆ ಭಯಪಡುವ ಅಗತ್ಯವಿಲ್ಲ ವ್ಯಕ್ತಿಯು ವಿದೇಶದಿಂದ ಬಂದವರ ಸಂಪರ್ಕಕ್ಕೆ ಹೋಗಿಲ್ಲ, ಈತನೂ ಎಲ್ಲಿಯೂ ಹೋಗದೆ ಗ್ರಾಮದಲ್ಲಿಯೇ ಇದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ ಪಬ್ಲಿಕ್ ಸ್ಟೋರಿಯೊಂದಿಗೆ ಮಾತನಾಡಿ, 35 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಕೆಮ್ಮು, ನೆಗಡಿ, ಕಫ ಸಮಸ್ಯೆ ಇತ್ತು. ಕಫ ಇದ್ದರೆ ಸಾಮಾನ್ಯವಾಗಿ ಉಸಿರಾಟದ ತೊಂದರೆಯೂ ಇರುತ್ತದೆ.  ಹೀಗಾಗಿ ಇಂತಹ ಸಂದರ್ಭದಲ್ಲಿ  ತಪಾಸಣೆ ಮಾಡಿಸುವುದು ಒಳ್ಳೆಯದು. ಮುನ್ನೆಚ್ಚರಿಕಾ ಕ್ರಮವಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಆತನನ್ನು ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಜನತೆ ಆತಂಕಪಡುವ ಅಗತ್ಯವಿಲ್ಲ.  ವಿದೇಶಗಳಿಂದ 10 ಮಂದಿ ಆಗಮಿಸಿದ್ದಾರೆ. 10 ಮಂದಿಯ ಬಗ್ಗೆ ಇಲಾಖೆ ನಿಗಾ ವಹಿಸಿದೆ. ಎಲ್ಲರೂ ಆರೋಗ್ಯವಾಗಿದ್ದರೆ ಎಂದು ಅವರು ತಿಳಿಸಿದರು.

 

ಕೊರೊನಾ; ಕೇರಳ ಮಾದರಿ‌ ನೆರವಿಗೆ CPIM ಒತ್ತಾಯ

Publicstory.in


Tumkuru; ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ಕುಸಿದು ಹೋಗಿದೆ. ಸಂಘಟಿತ ಮತ್ತು ಅಸಂಘಟಿತ ವಲಯವೂ ಸೇರಿದಂತೆ ಸಾಮಾನ್ಯ ಜನರು ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದು ಸರ್ಕಾರಗಳು ಅವರ ನೆರವಿಗೆ ಬರಬೇಕು ಎಂದು ಸಿಪಿಎಂ ಮುಖಂಡ ಬಿ.ಉಮೇಶ್ ಒತ್ತಾಯಿಸಿದರು.

ತುಮಕೂರಿನ ಗಾಂಧೀನಗರದಲ್ಲಿರುವ ಜನಚಳವಳಿ ಕೇಂದ್ರದಲ್ಲಿ ಕೊರೊನ ವೈರಸ್ ವಿರುದ್ದ ಹೋರಾಟಕ್ಕೆ ಜನತೆಯ ಸೌಹಾರ್ದತಾ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೊರೊನ ವೈರಸ್ ನಿಂದ ಜನರು ಭೀತರಾಗಿದ್ದಾರೆ. ಜನರಲ್ಲಿರುವ ಭೀತಿ ಹೋಗಲಾಡಿಸಲು ಸರ್ಕಾರಗಳು ಕ್ರಮ ವಹಿಸಬೆಕು ಎಂದು ತಿಳಿಸಿದರು.

ಕೊರೋನ ವೈರಸ್ ಬಗ್ಗೆ ಸಾಮಾನ್ಯ ಜನರಿಗೆ ಇರುವ ಅನುಮಾನಗಳನ್ನು ಬಗೆಹರಿಸಬೇಕು. ಇಂದು ಟಿವಿ ಮಾಧ್ಯಮಗಳು ಜನರಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡುತ್ತಿವೆ. ಸರ್ಕಾರ ಕೇವಲ ಚರ್ಚೆ ನಡೆಸುತ್ತಿದೆಯೇ ಹೊರತು ಕೊರೊನಾ ವೈರಸ್ ತಡೆಗೆ ವ್ಯಾಪಕ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಕೇರಳ ಸರ್ಕಾರ 20 ಸಾವಿರ ಕೋಟಿ ರೂಪಾಯಿ ಹಣವನ್ನು ಕೊರೋನ ತಡೆಯಲು ಮೀಸಲಿಟ್ಟಿದೆ. ಜನರಿಗೆ ಎರಡು ತಿಂಗಳು ಪಡಿತರ ವಿತರಿಸುವ ಕೆಲಸಕ್ಕೆ ಮುಂದಾಗಿದೆ. ಆರೋಗ್ಯಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೊನಾ ಹರಡದಂತೆ ತಡೆಯಲು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಬಹುತೇಕ ಕಡೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕು. ರೈತರು ಯುಗಾದಿ ಹಬ್ಬದ ಸಮಯದಲ್ಲಿ ಕುರಿ, ಕೋಳಿ ಮತ್ತು ಮೇಕೆಗಳನ್ನು ಮಾರಾಟ ಮಾಡಿ ಜೀವನ ನಡೆಸಲು ಹಣ ಗಳಿಸುತ್ತಿದ್ದರು. ಆದರೆ ಕೊರೊನ ವ್ಯಾಪಾರ ಸ್ಥಗಿತಗೊಂಡಿದೆ. ಗ್ರಾಮೀಣ ಪ್ರದೇಶದ ಬಡ ಕುಟುಂಬಗಳು ಹಣವಿಲ್ಲದೆ ತೊಂದರೆ ಅನುಭವಿಸುತ್ತಿವೆ.ಇವರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಮುಖಂಡ ಎ. ಲೋಕೇಶ್ ಮಾತನಾಡಿ ಕೈಗಾರಿಕೆ, ಗಾರ್ಮೆಂಟ್ಸ್ ಕಾರ್ಮಿಕರು ಸಾವಿರಾರು ಮಂದಿ ಒಂದೇ ಕಡೆ ದುಡಿಯುತ್ತಿದ್ದಾರೆ. ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಮಿಕರಿಗೂ ವೇತನ ಸಹಿತ ರಜೆಯನ್ನು ನೀಡಬೇಕು. ಪ್ರತಿಯೊಬ್ಬ ಕಾರ್ಮಿಕರಿಗೆ ಮಾಸ್ಕ್ ನೀಡಬೇಕು. ಸ್ಯಾನಿಟೈಜ್ ಕೊಟ್ಟು ರೋಗ ಹರಡದಂತೆ ಕ್ರಮ ವಹಿಸಬೇಕು ಎಂದು ಹೇಳಿದರು.

ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿ, ಕೊರೊನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲೇ ಇರುವಂತಹ ಪರಿಸ್ಥಿತಿ ಇದೆ. ಸಂಕಷ್ಟ ಎದುರಿಸುತ್ತಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಸೂಕ್ತ ನೆರವು ಕಲ್ಪಿಸಬೇಕು ಎಂದು ಆಗ್ರಹಿಸಿದರು.


ಸಿಪಿಎಂ ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ ಮಾತನಾಡಿ, ಕೊರೋನ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಯುವಕರು ಕೆಲಸವಿಲ್ಲದೆ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಇವರಿಗೆ ನೆರವಾಗುವ ಸಂಬಂಧ ಯಾವುದೇ ಪರಿಹಾರೋಪಾಯಗಳನ್ನು ಕಂಡುಕೊಂಡಿಲ್ಲ ಎಂದು ತಿಳಿಸಿದರು.


ಎಸ್.ಎಫ್.ಐ. ಜಿಲ್ಲಾಧ್ಯಕ್ಷ ಈ.ಶಿವಣ್ಣ, ಸಿಪಿಎಂ ಮುಖಂಡ ಸೈಯದ್ ಮುಜೀಬ್, ರಂಗಧಾಮಯ್ಯ, ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮೊದಲಾದವರು ಉಪಸ್ಥಿತರಿದ್ದರು.

ಬಸ್, ರೈಲು ಇಲ್ಲ; ವಿ.ವಿ.ಗಳಿಗೆ ರಜೆ ಸಾರಿದ UGC, 9 ಜಿಲ್ಲೆಗಳಲ್ಲಿ ಎಲ್ಲವೂ ಕಡಿತ

Publicstory.in


Tumkuru; ದೇಶದಲ್ಲಿ ಕರೊನಾ ಸಾವು ಹೆಚ್ಚುತ್ತಿದ್ದಂತೆ ಮತ್ತೊಂದಿಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ನಾಳೆ ಮಾರ್ಚ್ 31 ಎಲ್ಲ ಪ್ಯಾಸೆಂಜರ್ ರೈಲು ಸೇವೆಗಳನ್ನು ಬಂದ್ ಮಾಡಿದೆ.

ಇನ್ನೂ, ರಾಜ್ಯ ಸರ್ಕಾರ ನಾಳೆ ಮಾ.23ರಂದು ಸಹ ರಾಜ್ಯದಲ್ಲಿ ಸಾರಿಗೆ ಬಸ್ ಗಳನ್ನು ನಿಲ್ಲಿಸುವುದಾಗಿ ಪ್ರಕಟಿಸಿದೆ. ಹೀಗಾಗಿ ನಾಳೆಯೂ ಹೆಚ್ಚು ಕಡಿಮೆ ಜನತಾ ಕರ್ಪ್ಯೂ ವಾತಾವರಣವೇ ಮುಂದುವರೆಯಲಿದೆ.

ಈಗಾಗಲೇ ರಾಜ್ಯದ 9 ಜಿಲ್ಲೆಗಳಲ್ಲಿ ಕರೊನಾ ಪೀಡಿತರು ಕಂಡು ಬಂದಿದ್ದು, ಈ ಎಲ್ಲ ಜಿಲ್ಲೆಗಳಲ್ಲೂ ಎಲ್ಲ ವಹಿವಾಟು ಬಂದ್ ಮಾಡಲಾಗುವುದು ಎಂದು ತಿಳಿಸಿದೆ. ಈ ಜಿಲ್ಲೆಗಳಿಗೆ ಬಸ್ ಸಂಚಾರ ಬಂದ್ ಮಾಡಿದೆ.

ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ದಿನ ಬಿಟ್ಟು ದಿನ ಕೆಲಸಕ್ಕೆ ಹಾಜರಾಗಲು ಸೂಚಿಸಲಾಗಿದೆ.

ಯುಜಿಸಿ ಸುತ್ತೋಲೆ ಹೊರಡಿಸಿದ್ದು, ಶಿಕ್ಷಕರು ಹಾಗೂ ಎಲ್ಲ ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಿದೆ. ಹೀಗಾಗಿ ರಾಜ್ಯದ ಎಲ್ಲ‌ ವಿ.ವಿ.ಗಳು ನಾಳೆಯಿಂದ ಬಂದ್‌ ಆಗಲಿವೆ.

ಸಿದ್ಧರಬೆಟ್ಟದ ಶ್ರೀಗಳಿಂದ ಜಾಗಟೆ, ಜನರಿಂದ ಚಪ್ಪಾಳೆ: ವೈದ್ಯರು, ದಾದಿಯರಿಗೆ ಬೆಂಬಲ

Pubicstory.in


Tumkuru; ಕಲ್ಪತರು ನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ‌ ಜನತಾ ಕರ್ಪ್ಯೂ ಗೆ ಭಾರೀ ಬೆಂಬಲ ವ್ಯಕ್ತವಾಯಿತು.

ಸಂಜೆ ಸಿದ್ಧರಬೆಟ್ಟದಲ್ಲಿ ಪ್ರಪಂಚದಾದ್ಯಂತ ಹೆಮ್ಮಾರಿ ಯಾಗಿ ಮೆರೆಯುತ್ತಿರುವ ಕೋರನ ವೈರಸ್‌ಗಳ ನಿರ್ಮೂಲನೆಗೆ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೈದ್ಯರ ತಂಡಕ್ಕೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ದರಬೆಟ್ಟದ ಶ್ರೀಗಳು ಶಂಕನಾದ ಮಾಡುವ ಮೂಲಕ ಭಗವಂತನಲ್ಲಿ ಪ್ರಾರ್ಥಿಸಿ ಶುಭಹಾರೈಸಿದರು.

ಜಿಲ್ಲೆಯ ಎಲ್ಲ ಕಡೆಯು ಜನರು ಚಪ್ಪಾಳೆ, ಜಾಗಟೆ ಹೊಡೆಯುವ ಮೂಲಕ ಬೆಂಬಲ ಸೂಚಿಸಿದರು. ಕೃತಜ್ಞತೆ ಅರ್ಪಿಸಿದರು.

ಜನತಾ ಕರ್ಫ್ಯೂಗೆ ಉತ್ತಮ ಬೆಂಬಲ. ಎಲ್ಲ
ತಾಲೂಕುಗಳ ವಿವಿಧ ಗ್ರಾಮಗಳಲ್ಲೂ ಬಂದ್ ಆಚರಣೆ. ಬಸ್, ಆಟೋ ಸಂಚಾರ, ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧ.
ವಾಹನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದದ್ದವು.

ಚರ್ಚ್ ನಲ್ಲಿ ನಡೆಯದ ಪ್ರಾರ್ಥನೆ


ಇದೊಂದು ಬಹಳ ದುಃಖಕರ ದಿನ-ಕಷ್ಟಕರ ದಿನ
ಮೊದಲನೇ ಬಾರಿಗೆ ಇಷ್ಟು ಕಷ್ಟಕರ ದಿನವನ್ನು ನೋಡುತ್ತಿದ್ದೇನೆ.
ದೇವರು ಕೊರೋನಾ ಖಾಯಿಲೆಯನ್ನು ಪ್ರಪಂಚದಿಂದ ನಿವಾರಿಸಲಿ
ಕ್ರಿಶ್ಚಿಯನ್ ಬಾಂಧವರು ಸಾಮೂಹಿಕ ಪ್ರಾರ್ಥನೆಗೆ ಬಂದಿಲ್ಲ.
ಪ್ರಧಾನಿಯವರ ಜನತಾ ಕರ್ಪ್ಯೂವನ್ನು ನಾವು ಸ್ವಾಗತಿಸುತ್ತೇವೆ.
ಮಾರ್ಚ್ 31ರ ತನಕ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸ್ಥಗಿತ.
ಸಾಮೂಹಿಕ ಪ್ರಾರ್ಥನೆ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ‌.
ಸಂಕಟದ ಸಮಯದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತರು
ಒಂದೇ ತಾಯಿಯ ಮಕ್ಕಳಂತೆ ಬದುಕೋಣ
ಉಡುಪಿಯ ಧರ್ಮಗುರು ಫಾ. ವೆಲೇರಿಯನ್ ಮೆಂಡೋನ್ಸಾ ಹೇಳಿದ್ದಾರೆ.

ಜನತಾ ಕಫ್ರ್ಯೂಗೆ ಕರಾವಳಿ ಸ್ತಬ್ಧ


ದ.ಕ ಮತ್ತು ಉಡುಪಿ ಜಿಲ್ಲೆ ಸಂಪೂರ್ಣ ಸ್ತಬ್ಧ
ರಸ್ತೆಗಿಳಿಯದ ಬಸ್, ಆಟೋ, ಟ್ಯಾಕ್ಸಿ
ಬಿಕೋ ಎನ್ನುತ್ತಿರುವ ನಗರಗಳು.
ಜನತಾ ಕಫ್ರ್ಯೂಗೆ ಮನೆಯಿಂದ ಹೊರಬಾರದ ಜನತೆ.
ದೇಶದೆಲ್ಲೆಡೆ ಜನತಾ ಕಫ್ರ್ಯೂಗೆ ಅಭೂತಪೂರ್ವ ಬೆಂಬಲ.
ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್
ಕೊರೊನಾ ಸೋಂಕು ತಡೆಗಟ್ಟುವಂತೆ ಸರ್ಕಾರದ ಕ್ರಮ.
ಒಂದು ದಿನ ಮನೆಯಲ್ಲೇ ಕೂತು ಸ್ವಯಂ ನಿರ್ಬಂಧ
ದ.ಕ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ
ಬಂಟ್ವಾಳ, ಉಳ್ಳಾಲ, ಮೂಡುಬಿದ್ರೆ, ಕಡಬ ಸಂಪೂರ್ಣ ಸ್ತಬ್ಧ.
ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಬೈಂದೂರು, ಉಡುಪಿ, ಕಾಪು ತಾಲೂಕಿನಲ್ಲಿ ಜನತಾ ಕಫ್ರ್ಯೂಗೆ ಬೆಂಬಲ ವ್ಯಕ್ತವಾಯಿತು.

ಕರೊನಾದ‌‌ ತಲ್ಲಣ…ಒಂದು ಸುತ್ತೋಟ

0

ತುಳಸೀತನಯ


ತುಮಕೂರು: ಅಬ್ಬಾ ಎಂತಾ ಕಾಲ ಬಂತಪ್ಪ.. ಒಂದು ವೈರಾಣು ಇಡೀ‌ ಜಗತ್ತನ್ನೆ ನಿಬ್ಬೆರಗಾಗಿಸಿ‌ ಜನರನ್ನ ನಿಶ್ಚಲಗೊಳಿಸಿದೆ.

ಬಹುಶಃ ಪ್ರತಿಯೊಬ್ಬ ಮನುಷ್ಯನಿಗೂ ಈಗ ಜೀವ ಭಯ ಪ್ರಾರಂಭವಾಗಿದೆ. ದೇವರು, ಆಚರಣೆ ಭಯ, ಭಕ್ತಿ ಇವೆಲ್ಲವನ್ನೂ ಮರೆತು‌ ನಾನೇ ಎಲ್ಲ. ನನ್ನಿಂದಲೇ ಎಲ್ಲ ಎಂದು ಬೀಗುತ್ತಿದ್ದ ಹುಲು‌ಮಾನವನಿಗೆ ಪ್ರಕೃತಿ ಉತ್ತರ‌ ಕೊಡಲು ಹೊರಟಿದೆ.

ಈ ಹಿಂದೆ ಯಾವುದೇ ವೈಜ್ಞಾನಿಕತೆ ಇಲ್ಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಹರಡಿದಾಗ ಇಡೀ ಊರೇ ಸ್ಮಶಾನವಾಗಿ ಮಾರ್ಪಡುತ್ತಿತ್ತು. ಇಂದು ಎಲ್ಲ ರೀತಿಯ ವೈಜ್ಞಾನಿಕ ಸವಲತ್ತುಗಳಿದ್ದರೂ ವೈರಾಣು ಹೆಸರು ಕೇಳಿಯೇ ಜನ ಬದುಕ್ಕಿದ್ದೂ ಊರೂರೇ ಸ್ಮಶಾನ ಮೌನವಾಗಿಸಿದೆ.

ಇಂದು ಪ್ರಾಣಿ, ಪಕ್ಷಿಗಳು ನಿಸ್ಸಂದೇಹ, ನಿರ್ಭಯವಾಗಿ ಓಡಾಡ್ತಿದಾವೆ,‌ ಹಾರಾಡ್ತಿದಾವೆ.
ಆದರೆ ಮನುಷ್ಯ ತನಗೆ ತಾನೆ ಬಂಧಿಯಾಗಿದ್ದಾನೆ.

ದಿನ ಜನಜಂಗುಳಿ ಇರುತ್ತಿದ್ದ ರಸ್ತೆಗಳು ಹಾಳು ಹಾದಿಯಂತೆ ಕಾಣುತ್ತಿದೆ. ಶಬ್ಧ‌ಮಾಡುತ್ತ ಓಡಾಡುತ್ತಿದ್ದ ವಾಹನಗಳು ಬಾಯಿ ಮುಚ್ಚಿಕೊಂಡು ಮೌನ ವಹಿಸಿ ನಿಂತಿವೆ. ಜನರಿಂದ ಕೂಡಿದ್ದ ಪಟ್ಟಣಗಳು ಪಾಳು ಬಿದ್ದ ಊರಿನಂತೆ ಕಾಣುತ್ತಿವೆ.

ಜನರ ಓಡಾಟವಿಲ್ಲ. ಮನೆಯಿಂದ ಯಾರೂ ಹೊರಬರಲು ಸಿದ್ದರಿಲ್ಲ.‌ ಹೊರಗೆ ಏನಾಗುತ್ತಿದೆ ಎಂಬುದರ ಪರಿವೇ ಜನಕ್ಕಿಲ್ಲ.

ಇಂತ ಪರಿಸ್ಥಿತಿ ಬರಬಹುದು ಎಂದು ಯಾರೂ ನಿರೀಕ್ಷಿಸಿಯೂ ಇರಲಿಲ್ಲ. ಯಾವ ಪೊಲೀಸು, ಕಾನೂನು, ಕಟ್ಲೆ ಮಾಡಲಾಗದ ಸ್ವ-ಬಂಧನ ಇಂದು‌ ಕೊರೊನಾ ವೈರಾಣು ಮಾಡಿದೆ.

ಕೊರೊನಾ: ದೇಶದ 75 ನಗರಗಳು ಮಾ.31ರ ವರೆಗೆ ಲಾಕ್ ಡೌನ್

ತುಮಕೂರು: ಕೊರೊನಾ ಸೋಂಕು ಅತಿ ಹೆಚ್ಚು ಹಬ್ಬಿರುವ ದೇಶದ 75 ನಗರ/ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿಸಲು ಕೇಂದ್ರ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಕರ್ನಾಟಕದಲ್ಲಿ ಮಂಗಳೂರು, ಧಾರವಾಡ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕಲಬುರ್ಗಿ, ಚಿಕ್ಕಬಳ್ಳಾಪುರ, ಬೆಳಗಾವಿ, ಮಡಿಕೇರಿ, ಮೈಸೂರು ಜಿಲ್ಲೆಗಳು ಮಾರ್ಚ್ 31ರ ವರೆಗೆ ಲಾಕ್ ಡೌನ್ ಆಗಲಿದೆ.

ಈ ಸಂದರ್ಭ ಅಗ್ಯತ್ಯ ವಸ್ತುಗಳಿಗೆ ವಿನಾಯಿತಿ ಇದೆ. ಸೋಮವಾರ ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ.

ಜನತಾ ಕರ್ಪ್ಯೂ: ಹೀಗೆ ಮಾಡಿ ನೋಡಿ…

0

ತುರುವೇಕೆರೆ ಪ್ರಸಾದ್


ಮಾರಕ ವೈರಸ್ ಕೊರೋನಾ ನಿಯಂತ್ರಣ ಹಾಗೂ ನಿರ್ಮೂಲನಕ್ಕಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 22ರಂದು ಭಾನುವಾರ ದೇಶಾದ್ಯಂತ ವಿಶೇಷವಾದ ಜನತಾ ಕಪ್ರ್ಯೂಗೆ ಮನವಿ ಮನವಿ ಮಾಡಿದ್ದಾರೆ.

ಇದು ಜನರು ತಮ್ಮನ್ನು ತಾವು ಇತರರ ಸಂಪರ್ಕದಿಂದ ಹಾಗೂ ತನ್ಮೂಲಕ ಕೊರೋನಾ ಸೋಂಕಿನಿಂದ ದೂರ ಉಳಿಯಲು ನಿರ್ಬಂಧಿಸಿಕೊಳ್ಳುವ ಒಂದು ಮಾರ್ಗವಾಗಿದೆ.

ಅಂದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಇಡೀ ದಿನ ಸಾರ್ಥಕವೆನಿಸುವಂತೆ ಈ ಕಫ್ರ್ಯೂ ಸಮಯದಲ್ಲಿ ನಾವು ಏನೇನು ಮಾಡಬಹುದು ನೋಡೋಣ

ಬೆಳಿಗ್ಗೆ ಎದ್ದು ಜಾಗಿಂಗ್, ಆಫೀಸ್ ಎಂದು ಬಸ್ಸು, ಮೆಟ್ರೋ, ಊಬರ್ ಹಿಡಿದು ಎಲ್ಲೂ ಧಾವಂತದಲ್ಲಿ ಓಡಿ ಹೋಗುವ ಹಾಗಿಲ್ಲ. ವಾರಾಂತ್ಯದ ಪ್ರವಾಸವಂತೂ ಇಲ್ಲವೇ ಇಲ್ಲ, ಹಾಗಾಗಿ ಬೇಗನೆ ಎದ್ದು ಮಾಡಬೇಕಾದ ತುರ್ತು ಹಾಗೂ ಒತ್ತಡದ ಕೆಲಸಗಳೇನೂ ಇಲ್ಲದಿರುವುದರಿಂದ ಬೆಳಗಿನ ಸವಿನಿದ್ರೆ ಮಾಡಿ ನಿಧಾನವಾಗಿ ಏಳಿ.

ಇಂದು ವಿಶೇಷ ವ್ಯಾಯಾಮ ಮಾಡುವ ಅಗತ್ಯವಿರುವುದಿಲ್ಲ. ಏಕೆಂದರೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿದ ನಂತರ ನಿಮಗಾಗಿ ಪಾತ್ರೆ, ಬಟ್ಟೆಗಳ ರಾಶಿ ಕಾಯುತ್ತಿರಬಹುದು. ಏಕೆಂದರೆ ಜನತಾ ಕಫ್ರ್ಯೂ ಆದ್ದರಿಂದ ಕೆಲಸದ ಹೆಂಗಸು ಸಹ ಅಂದು ಬೆಳಿಗ್ಗೆ ಎದ್ದು ಡ್ಯೂಟಿಗೆ ಬಂದಿರುವುದಿಲ್ಲ. ನೀವೇ ಪಾತ್ರೆ ತೊಳೆದು, ಮನೆ ಸಾರಿಸಿ, ಬಟ್ಟೆ ಒಗೆಯಬೇಕಾಗುತ್ತದೆ. ಎಷ್ಟೋ ದಿನಗಳಿಂದ ಕಾರು,ಸ್ಕೂಟರ್ ಧೂಳು, ಕೊಚ್ಚೆ ಮೆತ್ತಿಕೊಂಡಿರುತ್ತದೆ. ಕಳೆದ ಆಯುಧಪೂಜೆಯ ನಂತರ ಅವು ನೀರಿನ ಮುಖ ನೋಡಿರುವುದೇ ಇಲ್ಲ. ಅವಕ್ಕೆ ಒಂದಿಷ್ಟು ನೀರು ಕಾಣಿಸಬಹುದು.

ನಾಯಿ, ಬೆಕ್ಕುಗಳನ್ನು ಲಾನ್‍ನಲ್ಲೇ ಸುತ್ತಾಡಿಸಿ ಅವಕ್ಕೂ ಸ್ನಾನ ಮಾಡಿಸಬಹುದು. ಅದಾದ ನಂತರ ರೂಮಿನ ಟೇಬಲ್, ಲಿವಿಂಗ್ ರೂಂನ ಟೀಪಾಯಿ, ಬೆಡ್‍ರೂಮಿನ ಹಾಸಿಗೆ ಮೇಲೆ ಅಸ್ತವ್ಯಸ್ಥವಾಗಿ ವಾರಗಳಿಂದ ಬಿದ್ದಿದ್ದ ವಸ್ತುಗಳನ್ನು ಜೋಡಿಸಿ ಅವುಗಳ ಜಾಗಕ್ಕೆ ಸೇರಿಸಬಹುದು.

ಕಾರ್‍ಶೆಡ್ಡು, ಸ್ಟೋರ್‍ರೂಂನಲ್ಲಿ ಇಳಿಬಿದ್ದ ಜೇಡರ ಬಲೆ, ಶಲಬೆಗಳನ್ನು ಕ್ಲೀನ್ ಮಾಡಬಹುದು. ಅಪರೂಪಕ್ಕೊಮ್ಮೆಯಾದರೂ ಗಾಂಧಿವಾದಿಗಳಾಗಿ ನಮ್ಮ ಮನೆ ಟಾಯ್ಲೆಟ್ಟನ್ನು ನಾವೇ ತೊಳೆದುಕೊಳ್ಳಬಹುದು. ಇದೇ ಸಾಕಷ್ಟು ವ್ಯಾಯಾಮವೆನಿಸುತ್ತದೆ.

ಆ ನಂತರ ಸ್ನಾನ ಪರ್ವ. ನಿಮಗೆ ನೆನಪಿರಬಹುದು..ಮೊದಲೆಲ್ಲ ಭಾನುವಾರ ಬಂತೆಂದರೆ ಅಜ್ಜಿಯೋ, ಅಮ್ಮನೋ ನಾವು ಮಲಗಿದ್ದಲ್ಲಿಗೆ, ಕೂತಿದ್ದಲ್ಲಿಗೇ ಬಂದು ತಲೆಗೆ ಹರಳೆಣ್ಣೆ ತಿಕ್ಕಿ ಮೈ ಕೈ ಎಲ್ಲಾ ಮಸಾಜ್ ಮಾಡಿ ಹೋಗುತ್ತಿದ್ದರು. ಆ ನಂತರ ಸುಡು ಸುಡು ನೀರಿನಲ್ಲಿ ಅಭ್ಯಂಜನ ನಡೆಯುತ್ತಿತ್ತು. ಈಗ ಈ ಅಭ್ಯಂಜನ ಕೇವಲ ಕನಸೋ,ನೆನಪೋ ಆಗಿದೆ. ಈಗ ಸರ ಸರ ಶಾಂಪೂ ತಿಕ್ಕಿಕೊಂಡು ನೀರು ಸುರಿದುಕೊಂಡು ಅರ್ಧಸ್ನಾನ ಮಾಡಿ ಬಂದ ಆರ್ಕಿಮಿಡೀಸನಂತಾಗಿದೆ ಹಲವು ನಗರವಾಸಿಗಳ ಸ್ಥಿತಿ. ಈ ಭಾನುವಾರ ನೀವು ಅಪರೂಪಕ್ಕೆ ಒಂದು ಎಣ್ಣೆ ಅಭ್ಯಂಜನ ಮಾಡಿ ಮೈ ಮನಸ್ಸನ್ನು ಹಗುರಾಗಿಸಿಕೊಳ್ಳಬಹುದು.

ಇದಾದ ನಂತರ ಮನೆ ಮಂದಿಯೆಲ್ಲಾ ಸೇರಿ ದೇವತಾಪ್ರಾರ್ಥನೆ ಕಾರ್ಯಕ್ರಮ ಇಟ್ಟುಕೊಳ್ಳಬಹುದು. ವೇದ,ಉಪನಿಷತ್ತುಗಳಲ್ಲಿರುವ ಪ್ರಕೃತಿಗೆ ಸಂಬಂಧಿಸಿದ ‘ ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ, ದೇಶೋಯಂ ಕ್ಷೋಭ ರಹಿತಃ ಸಜ್ಜನಾಃ ಸಂತು ನಿರ್ಭಯಾಃ” “ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ, ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖ ಭಾಗ್ಭವೇತ್” ಎಂದು ಕೊರೋನಾ ವೈರಸ್ ನಿರ್ಮೂಲನೆಗೆ ಸಂಕಲ್ಪ ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಬಹುದು.

ಎಷ್ಟೋ ದಿನ/ವರ್ಷಗಳ ನಂತರ ನಾವೆಲ್ಲಾ ಒಟ್ಟಿಗೆ ಸೇರಿರುತ್ತೇವೆ. ಮನೆಯಲ್ಲಿ ಒಟ್ಟಾಗಿ ಕುಳಿತು ತಿಂಡಿ ತಿಂದ,ಊಟ ಮಾಡಿದ ನೆನಪೇ ಇಲ್ಲದಿರಬಹುದು. ಭಾನುವಾರ ಬೆಳಿಗ್ಗೆ ಎದ್ದು ದರ್ಶಿನಿ, ಸುಖ ಸಾಗರ್‍ಗಳು, ರೆಸ್ಟೋರೆಂಟ್‍ಗಳನ್ನು ಹುಡುಕಿ ಹೋಗಿ, ಜನರ ಮಧ್ಯೆ ಕಾದು,ಆ ಸಂದಿಯಲ್ಲೇ ನಿಂತೇ ತಿಂಡಿ ಶಾಸ್ತ್ರ ಮಾಡಿ ಅಲ್ಲಿಂದ ಹಾಗೇ ಔಟಿಂಗ್ ಹೋಗಿ ಮಧ್ಯಾಹ್ನ ಮತ್ತೆ ದಾಬಾದಲ್ಲೋ, ರೆಸ್ಟೋರೆಂಟಲ್ಲೋ ದುಬಾರಿ ಭರ್ಜರಿ ಊಟ( ಬೆಂಗಳೂರಿನ ಬಹುತೇಕ ಹೋಟೆಲ್‍ಗಳಲ್ಲಿ ಶನಿವಾರ, ಭಾನುವಾರ ಸಾಮಾನ್ಯ ಲಘು/ತಟ್ಟೆ ಊಟ ಹುಡುಕಿದರೂ ಸಿಗುವುದಿಲ್ಲ)ಮಾಡಿ ಸಿನಿಮಾ ನೋಡಿಕೊಂಡು ಮತ್ತೆ ಮನೆಗೆ ಬಂದು ಜೊಮೊಟೋಗೆ ಆರ್ಡರ್ ಮಾಡಿ ತಿಂಡಿ ತರಿಸಿಕೊಂಡು ತಿಂದು ನಿದ್ರೆ ಮಾತ್ರೆ ನುಂಗಿ ಮಲಗುವುದೇ ಭಾನುವಾರದ ಸಾರ್ಥಕತೆ ಎನಿಸಿಬಿಟ್ಟಿತ್ತು. ಆದರೆ ಇವತ್ತು ಅದೆಲ್ಲಾ ನಡೆಯುವುದಿಲ್ಲ.

ಅಡುಗೆ ಮನೆಯ ಸಾಸಿವೆ ಡಬ್ಬಿಯಿಂದ ಹಿಡಿದು ಬೇಳೆ ಡಬ್ಬಿಯವರೆಗೆ ಎಲ್ಲಾ ಹುಡುಕಿ, ತಡಕಿ, ಫ್ರಿಜ್ಜಲ್ಲಿ ಅಳಿದುಳಿದ ತರಕಾರಿ ಅವಶೇಷಗಳನ್ನು ಕತ್ತರಿಸಿ ಹಾಕಿ ಸಾರು, ಪಲ್ಯ ಮಾಡಿಕೊಂಡು ತಿನ್ನಬೇಕು. ಅದನ್ನೇ ಬೇಸರಿಸದೆ, ಗೊಣಗದೆ ಸ್ವಲ್ಪ ಖುಷಿ, ಸಂಭ್ರಮದಿಂದ ಮಾಡಬಹುದು. ಒಂದು ಪಾಯಸ ಮಾಡಿಕೊಂಡರೆ ಹಬ್ಬವೂ ಆಯಿತು.

ಮನೆ ಮಂದಿಯೆಲ್ಲಾ ಮಾತಾಡಿಕೊಂಡು ಖುಷಿಯಾಗಿ ಊಟ ಮಾಡಿ ಒಂದು ಚರಿತ್ರಾರ್ಹ ಸವಿನೆನಪಿನ ದಾಖಲೆ ಬರೆಯಬಹುದು.

ಊಟದ ನಂತರ ಮನೆಯಲ್ಲಿ ಚಿಕ್ಕ ಪುಟ್ಟ ಮಕ್ಕಳಿದ್ದರೆ ಅವುಗಳ ಜೊತೆ ಆಟವಾಡಿ, ನಿಮಗೆ ನೆನಪಿದ್ದರೆ ಅವಕ್ಕೆ ನಿಮ್ಮಜಿ/ ಅಜ್ಜ ಹೇಳಿದ ಕತೆ ಹೇಳಿ. ಅವುಗಳನ್ನು ಮಲಗಿಸಿ ನೀವು ಸಣ್ಣದೊಂದು ನಿದ್ದೆ ಮಾಡಿ

ಸಂಜೆ ಎದ್ದು ಮೊಬೈಲ್, ಲ್ಯಾಪ್‍ಟಾಪ್‍ಲ್ಲಿರುವ ಅನಗತ್ಯ ಸಂಪರ್ಕ, ಫೈಲ್‍ಗಳು( ಇವೂ ವೈರಸ್‍ಗಳೇ) ಇವನ್ನು ಡಿಲೀಟ್ ಮಾಡುವ ಯಜ್ಞ ಮಾಡಿ. ನಿಮ್ಮ ಮೊಬೈಲ್, ಲ್ಯಾಪ್‍ಟಾಪನ್ನು ಸ್ವಚ್ಛ ಮಾಡಿಕೊಳ್ಳಲು ಇದಕ್ಕಿಂತ ಉತ್ತಮ ಅವಕಾಶ ನಿಮಗೆ ಸಿಗಲಾರದು. ಹಾಗೆ ಮಾಡುವಾಗ ನಿಮ್ಮ ಹಳೇ ಸಂಬಂಧಗಳ, ಸ್ನೇಹಿತರ ನಂಬರ್ ನಿಮ್ಮ ಕಣ್ಣಿಗೆ ಬೀಳುತ್ತದೆ.

ಅವರಲ್ಲಿ ಕೆಲವರೊಂದಿಗೆ ಮಾತನಾಡಿ, ಸುಖ, ದುಃಖ ಹಂಚಿಕೊಳ್ಳಿ, ಮನಸ್ಸು ಹಗುರ ಮಾಡಿಕೊಳ್ಳಿ. ಹಾಗೇ ನಿಮ್ಮ ಸಂಪರ್ಕದಿಲ್ಲಿರುವ ಎಲ್ಲರೊಂದಿಗೆ ಕೊರೋನಾ ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿ, ಜಾಗೃತಿ ಸಂದೇಶ ಕಳಿಸಿ.

ಇದಾದ ನಂತರ ಪ್ರಧಾನಿ ಮೋದಿಯವರು ಹೇಳಿರುವಂತೆ ನಿಮ್ಮ ಮನೆಯ ಕಿಟಕಿ, ಬಾಲ್ಕನಿಯಲ್ಲಿ ನಿಂತು ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಂಕೇತ ಹೊರಡಿಸಿ

ನಂತರ ಸಂಜೆ ನಿಮ್ಮ ಮನೆಯಲ್ಲಿರುವ ಗಿಡಗಳಿಗೆ, ಕುಂಡಗಳಿಗೆ ನೀರೆರೆಯಿರಿ. ಮನೆಯ ಹಿರಿಯರು ಮನೆಯ ಕಿರಿಯರು, ಯುವಕರೊಂದಿಗೆ ನಮ್ಮ ಸಂಸ್ಕøತಿ, ಧರ್ಮ ಕುರಿತು ಒಂದು ಪ್ರವಚನ, ಮಾತುಕತೆ, ನಡೆಸಬಹುದು. ಅವರಿಗೆ ಸಂಸ್ಕಾರ, ಮಾನವೀಯತೆ, ಸೇವೆಯ ಮಹತ್ವ ಕುರಿತ ಒಂದು ಸಂದೇಶ ನೀಡಬಹುದು. ಹಾಗೆಯೇ ಕೊರೋನಾ ವೈರಸ್ ತಡೆ ಬಗ್ಗೆ, ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಕೂಡ ಚಿಂತನ-ಮಂಥನ ನಡೆಸಹುದು.

ಭಾನುವಾರವಾದ್ದರಿಂದ ಯಾವುದೇ ಸೀರಿಯಲ್‍ಗಳು ಇರುವುದಿಲ್ಲ. ರಾತ್ರಿ ಮತ್ತೆ ಎಲ್ಲಾ ಜೊತೆಯಾಗಿ ಸೇರಿ ಊಟ ಮಾಡಿ. ತಡರಾತ್ರಿ ಸಿನಿಮಾಗಳು, ಮಿಡ್‍ನೈಟ್ ಮಸಾಲಾಗಳನ್ನು ನೋಡಲು ಅವಕಾಶ ಇರುವುದಿಲ್ಲ.ಏಕೆಂದರೆ ಮಕ್ಕಳು, ಮನೆಯವರೆಲ್ಲಾ ಜೊತೆಯಲ್ಲೇ ಇರುತ್ತಾರೆ. ಅವರೊಂದಿಗೆ ಟೆರೇಸ್ ಮೇಲೆ ಬಂದು ಅನಂತ ಆಕಾಶದ ಪ್ರಜ್ವಲಿಸುವ ನಕ್ಷತ್ರಗಳನ್ನು ನೋಡಿ.( ಕೃಷ್ಣಪಕ್ಷವಾದ್ದರಿಂದ ನಕ್ಷತ್ರಗಳು ಹೆಚ್ಚು ಪ್ರಜ್ವಲ್ಯಮಾನವಾಗಿ ಕಾಣುತ್ತವೆ).ಮಕ್ಕಳಿಗೆ ಮಹಾವ್ಯಾಧ, ನಕುಲ, ವಿಜಯಸಾರಥಿ ಇತರೆ ನಕ್ಷತ್ರಪುಂಜಗಳ ಪರಿಚಯ ಮಾಡಿಕೊಡಿ. ಹಾಯಾಗಿ ಮಲಗಿ. ಜೀವನದ ಒಂದು ದಿನವನ್ನು ಸಾರ್ಥಕವಾಗಿ ಕಳೆದ ಧನ್ಯತೆಯನ್ನು ಅನುಭವಿಸುತ್ತಾ ಕೊರೋನಾಗೊಂದು ಥ್ಯಾಂಕ್ಸ್ ಹೇಳಿ ನಿದ್ದೆಗೆ ಜಾರಿ.
~

ತುಮಕೂರಿಗೆ ಬಂದರು ಕರೊನಾ ಸೈನಿಕರು!

ತುಮಕೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಗೆ ಕೊರೊನಾ ಸೈನಿಕರು ಭೇಟಿ ನೀಡಿ ಮಾಹಿತಿ ತರಬೇತಿ ಪಡೆದರು. ಕೊರೊನಾ ಸೈನಿಕರು ಎಂಬ ಪರಿಕಲ್ಪನೆಯ ಉದ್ದೇಶ ಹಾಗೂ ಅಗತ್ಯತೆಯ ಬಗ್ಗೆ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಡಿ. ಅವರು ಕೊರೊನಾ ಸೈನಿಕರಿಗೆ ವಿವರಣೆ ನೀಡಿದರು.

ಕೊರೊನಾ ವೈರಾಣು ಹರಡುವಿಕೆ ಕುರಿತಾಗಿ ವಿವಿಧ ಮಾಧ್ಯಮ, ಸಾಮಾಜಿಕ ಮಾಧ್ಯಮ, ಜಾಲತಾಣಗಳಲ್ಲಿ ಮೂಡಿಬರುವ ವದಂತಿಗಳ ಬಗ್ಗೆ ಪರಾಮಾರ್ಶಿಸಿ, ನೈಜ ಮಾಹಿತಿ ಕೊಡುವುದು ಹಾಗೂ ಸ್ಥಳೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಕೊಡುವುದು ಕೊರೊನಾ ಸೈನಿಕರ ಕೆಲಸವಾಗಿದೆ ಎಂದು ಹೇಳಿದರು.

ತುಮಕೂರಿನಲ್ಲಿ 19 ಜನ ಸ್ವಯಂ ಸೇವಕರು ಕೊರೊನಾ ಸೈನಿಕರಾಗಲು ನೋಂದಾಯಿಸಿದ್ದು, ಕೊರೊನಾ ವೈರಾಣು ಹರಡುವುದನ್ನು ತಪ್ಪಿಸಲು ತಮ್ಮಿಂದಾಗುವ ಸೇವೆ ಸಲ್ಲಿಸಲು ಸಿದ್ಧ ಎಂಬ ಸಂದೇಶವನ್ನು ಎಲ್ಲಾ ಸ್ವಯಂ ಸೇವಕರು ನೀಡಿದರು.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಕರ್ನಾಟಕ ಹಾಗೂ ಕಾರ್ಮಿಕ ತರಬೇತಿ ಸಂಸ್ಥೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಭಾಗ್ವಿತದಲ್ಲಿ “ಕೊರೊನಾ ಸೈನಿಕರು” ಎಂಬ ಟೆಲಿಗ್ರಾಮ್ ಗುಂಪು ರಚನೆಯಾಗಿರುತ್ತದೆ.