Friday, February 20, 2026
Google search engine
Home Blog Page 274

ಬಗರ್ ಹುಕುಂ ಸಾಗುವಳಿ: ಹಕ್ಕು ಪತ್ರ ನೀಡಲು ಸಚಿವರ ಸೂಚನೆ

Publicstory. in


Tumkuru; ಸಾಮಾಜಿಕ ಅರಣ್ಯ, ಡೀಮ್ಡ್ ಅರಣ್ಯ, ಗೋಮಾಳ ಮತ್ತು ಸರ್ಕಾರಿ ಭೂಮಿಗಳಲ್ಲಿ ಬಗರ್‍ಹುಕುಂ ಸಾಗುವಳಿ ಮಾಡುತ್ತಿರುವ ಭೂಮಿಯ ಸರ್ವೇ ಕಾರ್ಯ ನಡೆಸಿ ಪರಿಶೀಲಿಸಿ ಸಾಗುವಳಿದಾರರಿಗೆ ಭೂಮಿ ನೀಡುವಂತೆ ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಚಿವ ಮಾಧುಸ್ವಾಮಿ ಅವರು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಬಗರ್‍ಹುಕುಂ ಸಾಗುವಳಿದಾರರ ಹೋರಾಟ ಸಮಿತಿಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಗುಬ್ಬಿ ತಾಲೂಕು ಮಂಚಲದೊರೆ ಗ್ರಾಮ ಪಂಚಾಯಿತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ವ್ಯಾಪ್ತಿಯಲ್ಲಿ ಅರಣ್ಯಭೂಮಿಯ ಜಂಟಿ ಸರ್ವೇ ಕಾರ್ಯ ನಡೆಸಿ ಹಿಂದೆ ಭೂಮಿ ಕಳೆದುಕೊಂಡವರಿಗೆ ಭೂಮಿ ನೀಡುವುದಾಗಿ ಭರವಸೆ ನೀಡಿದರು.

ತುಮಕೂರು ತಾಲೂಕು ಶೀಬಿ ಮತ್ತು ಇತರೆ ಗ್ರಾಮಗಳಲ್ಲಿ ಸಾಮಾಜಿಕ ಅರಣ್ಯ, ಡೀಮ್ಡ್ ಫಾರೆಸ್ಟ್ ಪ್ರಕರಣಗಳಲ್ಲಿ ಬಗರ್‍ಹುಕುಂ ಸಾಗುವಳಿ ಸಕ್ರಮ ಮಾಡುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಚಿಕ್ಕನಾಯಕನಹಳ್ಳಿ ಬೋರನಕಣಿವೆ ಜಲಾಶಯದ ಮುಳುಗಡೆ ಪ್ರದೇಶ ಸರ್ವೇ ಮಾಡಿಸಿ ಅದರಿಂದ ಒಳಗಡೆ ಇರುವ ಭೂಮಿಗಳನ್ನು ಸಕ್ರಮ ಮಾಡುವುದಾಗಿ ಭರವಸೆ ನೀಡಿದರು.

ಪಿ (ಪೈಕಿ) ನಂಬರ್‍ಗಳನ್ನು ಕಾಲಮಿತಿಯೊಳಗೆ ಪೋಡು ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು. ನೀರಾವರಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳನ್ನು ಕೈಗೊಳ್ಳುವಾಗ ರೈತರ ಅನುಮತಿಯನ್ನು ಪರಿಗಣಿಸಿ ಸೂಕ್ತ ಪರಿಹಾರವನ್ನು ಕೊಟ್ಟು ಭೂಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಣಗಳು ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ರಾಗಿ ಖರೀದಿಸಲು ಒಂದು ತಿಂಗಳು ಕಾಲಾವಕಾಶ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬೈಯ್ಯಾರೆಡ್ಡಿ ಮತ್ತು ರೈತರು ಮನವಿ ಮಾಡಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರಲ್ಲದೆ ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸುವುದಾಗಿ ರೈತರ ನಿಯೋಗಕ್ಕೆ ಭರವಸೆ ನೀಡಿದರು.

ಮೇಲಿನ ಎಲ್ಲಾ ವಿಷಯಗಳನ್ನು ಕುರಿತು ಏಪ್ರಿಲ್ ತಿಂಗಳಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ರಾಜ್ಯ ರೈತ ಸಂಘದ ಶಂಕರಪ್ಪ, ಮುಖಂಡರಾದ ಕೋದಂಡಪ್ಪ, ದೊಡ್ಡನಂಜಯ್ಯ, ರಾಚಪ್ಪ, ನರಸಿಂಹಮೂರ್ತಿ, ರಾಜಣ್ಣ, ಚನ್ನಬಸಣ್ಣ, ಕರಿಬಸಯ್ಯ, ಮಂಜು, ಆನಂದ, ಶಿವಣ್ಣ ಲೋಕೇಶ್, ಯಲ್ಲಪ್ಪ, ಚಂದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.

ಅಪಘಾತ: ದ್ವಿಚಕ್ರವಾಹನ ಸವಾರರು ಸಾವು

Publicstory. in


ತುರುವೇಕೆರೆ : ದ್ವಿಚಕ್ರವಾಹನ ಮತ್ತು ಕ್ಯಾಂಟರ್ ಗಾಡಿಯ ನಡುವೆ ಮುಖಾಮುಖಿ ಡಿಕ್ಕಿಯಾಗಿ ದ್ವಿ ಚಕ್ರವಾಹನ ಚಾಲಕ ಮತ್ತು ಹಿಂಬದಿಯ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಬದ್ರಿಕಾಶ್ರಮ ಸಮೀಪ ಭಾನುವಾರ ಸಂಜೆ ನಡೆದಿದೆ.

ಮೃತರು ಹಳ್ಳದಹೊಸಹಳ್ಳಿ ಹರೀಶ್(25) ಮತ್ತು ಬೆಂಗಳೂರು ಮೂಲದ ಹೇಮಂತ್ಕುಮಾರ್(24).ಹಳ್ಳದಹೊಸಹಳ್ಳಿ ಹರೀಶ್ ಮತ್ತು ಆತನ ಸ್ನೇಹಿತ ಹೇಮಂತ್ಕುಮಾರ್ನೊಂದಿಗೆ ಸಂಬಂಧಿಕರ ನಾಮಕರಣಕ್ಕೆಂದು ಟಿ.ಬಿ.ಕ್ರಾಸ್ ಕಡೆಗೆ ಹಳ್ಳದ ಹೊಸಹಳ್ಳಿಯಿಂದ ದ್ವಿ ಚಕ್ರವಾಹನದಲ್ಲಿ ತೆರಳುತ್ತಿರುವಾಗ ಮಾಯಸಂದ್ರದ ಕಡೆಯಿಂದೆ ತುರುವೇಕೆರೆಗೆ ಹೋಗುತ್ತಿದ್ದ ಕ್ಯಾಂಡರ್ ಗಾಡಿ ಮತ್ತು ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಂಬೆಳಗೆ ಯಮನ ಅಟ್ಟಹಾಸ ಇಬ್ಬರ ದುರ್ಮರಣ….


ತುಮಕೂರು


ಜಿಲ್ಲೆಯ ಶಿರಾ ಬಳಿ ರಾಷ್ಟ್ರೀಯ ಹೆದ್ದಾರಿ 48 ರ ಉಜ್ಜನಕುಂಟೆ ಸಮೀಪ ಭಾನುವಾರ ಮುಂಜಾನೆ ಯಮ ಅಟ್ಟಹಾಸ ಮೆರೆದಿದ್ದಾನೆ.

ಖಾಸಗಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಆರು ಜನ ಗಾಯಗೊಂಡಿದ್ದಾರೆ.

ಹೆದ್ದಾರಿಯಲ್ಲಿ ಹೋಗುತ್ತಿದ್ದ ಸುಗುಣ ಟ್ರಾವೆಲ್ಸ್ ಎಂಬ ಬಸ್ಸಿಗೆ ಹಿಂದಿನಿಂದ ಬಂದ ವಿ.ಆರ್.ಎಲ್ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಇವರು ಮೃತ ಪಟ್ಟಿದ್ದಾರೆ. ಗಾಯಗೊಂಡಿದ್ದ ಆರು ಜನರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಹಾಗೂ ಗಾಯಗೊಂಡವರ ಮಾಹಿತಿ‌ ಇನ್ನೂ ತಿಳಿಯಬೇಕಿದೆ.

ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಲಾಮಗಿರಿ ‌ಚಿತ್ರಕ್ಕೆ ಪರಮೇಶ್ವರ್ ಚಾಲನೆ

Tumkur: ನಿರ್ದೇಶಕ ರಮಾನಂದ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗುಲಾಮಗಿರಿ ಚಿತ್ರದ ಮುಹೂರ್ತ ತುಮಕೂರಿನಲ್ಲಿ ಅದ್ದೂರಿಯಾಗಿ ನಡೆಯಿತು.

ನಟ ಮತ್ತು ನಿರ್ಮಾಪಕ ರೂಪೇಶ್ ಜೆ ರಾಜ್ ನೂತನ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಹೊಸ ಚಿತ್ರ ಗುಲಾಮಗಿರಿ ಮುಹೂರ್ತಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಶುಭ ಹಾರೈಸಿದರು.

ಕಲ್ಪತರು ಅಭಿನಯ ತರಬೇತಿ ಶಾಲೆಯ ತಂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದೆ. ಎಲ್ಲರೂ ಹೊಸಬರೇ ಆಗಿದ್ದು ಚಿತ್ರ ತುಮಕೂರು ಸೇರಿದಂತೆ ರಾಜ್ಯದ ಹಲವಡೆ ಚಿತ್ರೀಕರಿಸಲು ತಂಡ ನಿರ್ಧರಿಸಿದೆ.

ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ವಾಲೆ ಚಂದ್ರಯ್ಯ, ಸಾಮಾಜಿಕ ಹೋರಾಟಗಾರ ಮತ್ತು ನಟ ಚೇತನ್, ಅಹಿಂಸಾ ಆನಂದ್ ಬಂತೇಜ, ಉಪನ್ಯಾಸಕ ಹ.ರಾ. ಮಹಿಷ, ಮೊದಲಾದವರು ಹಾಜರಿದ್ದು ಚಿತ್ರಕ್ಕೆ ಶುಭಕೋರಿದರು.

ಚಿರತೆಗೆ ಮಗು ಬಲಿ

Tumkuru: ಚಿರತೆ ದಾಳಿಗೆ ಬಾಲಕಿ ಮೃತಪಟ್ಟಿದ್ದಾಳೆ.

ತುಮಕೂರು ತಾಲೂಕು ಹೆಬ್ಬೂರು ಹೋಬಳಿಯ ಕಣಕುಪ್ಪೆ ಪಂಚಾಯಿತಿ ಬೈಚೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಚಿಕ್ಕಣ್ಣ ಅವರ ಮೊಮ್ಮಗ ಮನೆ ಮುಂದೆ ಆಟ ಆಡುವಾಗ ಚಿರತೆ ದಾಳಿ ಮಾಡಿದೆ.

ಇಂದು ಸಂಜೆ 6 ಗಂಟೆಗೆ ಮತ್ತೆ ಚಿರತೆ ದಾಳಿ ನಡೆಸಿದ್ದ 3 ವರ್ಷದ ಮಗು ಬಲಿಯಾಗಿದೆ.

ಈಚೆಗಷ್ಟೇ ಇಲ್ಲಿಯೇ ಸಮೀಪ ಐದು ವರ್ಷದ ಮಗವನ್ನು ಚಿರತೆ ಕೊಂದಿತ್ತು.

ಬೈಚೇನಹಳ್ಳಿ ಗ್ರಾಪಂ ಸದಸ್ಯ ಗಂಗಚಿಕ್ಕಣ್ಣ ಅವರ ಮೊಮ್ಮಗು ಚಂದನ್ ಮನೆಯ ಮುಂದೆ ಆಟವಾಡುತ್ತಿದ್ದಳು. ಈ ಸಮಯದಲ್ಲಿ ರಾತ್ರಿ ೮ ಗಂಟೆ ವೇಳೆಗೆ ಚಿರತೆ ದಾಳಿ ನಡೆಸಿದ್ದು, ಮಗುವನ್ನು ಹೊತ್ತೊಯ್ದಿದೆ.

ಮಗುವಿನ ತಂದೆ ತಾಯಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಮಗು ಅಜ್ಜನೊಂದಿಗೆ ಬೈಚೇನಹಳ್ಳಿಯಲ್ಲಿತ್ತು. ಮಗುವಿನ ತಂದೆ ಶಂಕರ್ ದಂಪತಿ ಶನಿವಾರವಷ್ಟೇ ಮಗುವನ್ನು ನೋಡಲು ಬೆಂಗಳೂರಿನಿಂದ ಬಂದಿದ್ದರು ಎನ್ನಲಾಗಿದೆ.

ಘಟನೆ ಬಳಿಕ ಅರಣ್ಯ ಹಾಗೂ ಪೊಲೀಸ್ ಅಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಮಗುವಿನ ಶವ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಮನೆಯ ಸಮೀಪದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ.

ಅಧಿಕಾರಿಗಳ ಸಭೆ ನಡೆಸಿದ ಸಂಸದರು…

Tumkuru: ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕಾಮಗಾರಿಗಳನ್ನು ಕಾಲಬದ್ಧ ಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದ ಜಿ.ಎಸ್.ಬಸವರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ಜಿಲ್ಲೆಯ 330 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ತ್ರೀ ಶಕ್ತಿ ಸಂಘಗಳು, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಮಾರ್ಚ್ 31ರೊಳಗಾಗಿ ಇನ್ನೂ 1 ಲಕ್ಷ ಕಾರ್ಡ್‍ಗಳನ್ನು ವಿತರಿಸಬೇಕೆಂದು ಡಿಹೆಚ್‍ಒ ಅವರಿಗೆ ಸೂಚಿಸಿದರು.

ಪೈಲೆಟ್ ಯೋಜನೆಯ ಬಗ್ಗೆ ಮಾಹಿತಿ ಕೇಳಿದ ಸಂಸದರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೊತೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ ಹಾಗೂ ಹೇಮಾವತಿ ಈ ಮೂರು ನದಿಗಳ ನೀರನ್ನು ಬಳಸಿಕೊಂಡು ಊರಿಗೊಂದು ಕೆರೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕುರಿತು ಪ್ರತ್ಯೇಕ ಸಭೆ ನಡೆಸಿ ಚರ್ಚಿಸಬೇಕೆಂದು ಸಂಸದರು ಅಧಿಕಾರಿಗಳಿಗೆ ತಿಳಿಸಿದರು.

ಇನ್ನು ಹತ್ತು ದಿನದೊಳಗಾಗಿ ಸಾಲ ಸೌಲಭ್ಯ ಮಂಜೂರಾತಿ ಬಗ್ಗೆ ನಿಖರವಾದ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಸರ್ವ ಶಿಕ್ಷಣ ಅಭಿಯಾನ ಕುರಿತು ಮಾಹಿತಿ ಕೇಳಿದ ಸಂಸದರು ಉತ್ತಮ ಗುಣಮಟ್ಟದ ಶಿಕ್ಷಣ, ಕಟ್ಟಡಗಳು ಇಲ್ಲದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸದೆ, ದುಬಾರಿ ದಂಡ ತೆತ್ತು ಖಾಸಗಿ ಶಾಲೆಗಳಿಗೆ ಪೋಷಕರು ಸೇರಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕು ಹಾಗೂ ದುರಸ್ಥಿಯಲ್ಲಿರುವ ಕಟ್ಟಡಗಳನ್ನು ಕೇಂದ್ರ ಮತ್ತು ರಾಜ್ಯ ಸರ್ವ ಶಿಕ್ಷಣ ಅಭಿಯಾನದಡಿ ಹಣ ಪಡೆದು ದುರಸ್ಥಿಗೊಳಿಸುವಂತೆ ತುಮಕೂರು ಹಾಗೂ ಮಧುಗಿರಿ ಉಪನಿರ್ದೇಶಕರುಗಳಿಗೆ ಸೂಚನೆ ನೀಡಿದರು..

ಹೊಸ ಸಿಲೆಬಸ್ ಪ್ರಕಾರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರುಗಳಾದ ರೇವಣ ಸಿದ್ಧಪ್ಪ ಮತ್ತು ಎಂ.ಆರ್.ಕಾಮಾಕ್ಷಿ ಅವರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳ ನಿಖರವಾದ ಮಾಹಿತಿಯನ್ನು ಸಂಗ್ರಹಿಸಿ ಆ ಕೆರೆಗಳ ಅಭಿವೃದ್ಧಿಗೆ ಕ್ರಮ ಜರುಗಿಸಬೇಕು. ಪಶ್ಚಿಮ ದಿಕ್ಕಿಗೆ ಹರಿದು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿರುವ ನೀರನ್ನು ಡೈವರ್ಶನ್ ಮೂಲಕ ಕೆರೆಗಳನ್ನು ತುಂಬಿಸುವ ಯೋಜನೆ ಆಧ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು. ಈ ಯೋಜನಾ ವರದಿಯನ್ನು ಜಿಲ್ಲಾಡಳಿತದ ಮೂಲಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲು ಅವರು ಸೂಚಿಸಿದರು.

ರೈಲ್ವೇ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ, ಕಾಮಗಾರಿಗಳ ಪ್ರಗತಿಯ ವಿವರವಾದ ಮಾಹಿತಿಯನ್ನು ತೆಗೆದುಕೊಂಡು ಮುಂದಿನ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಭಾಗವಹಿಸುವಂತೆ ತಿಳಿಸಿದರು.

ಸಾಮಾಜಿಕ ಅರಣ್ಯ ಯೋಜನೆ ಅಡಿಯಲ್ಲಿ ಬೆಳೆಸಲಾಗಿರುವ ಸಸಿಗಳ ಮಾಹಿತಿ ಪಡೆದ ಸಂಸದರು ರೈತರಿಗೆ ಉಪಯುಕ್ತವಾಗುವ ಸಸಿಗಳನ್ನು ನರ್ಸರಿಗಳಲ್ಲಿ ಬೆಳೆಸಿ ಸೂಕ್ತ ಸಮಯದಲ್ಲಿ ವಿತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಗತಿ ಕಡಿಮೆ ಸಾಧಿಸಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಮುಂದಿನ ಸಭೆಯಲ್ಲಿ ಯಾವುದೇ ಸಬೂಬು ಹೇಳದೇ ನಿಗಧಿತ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸಂಸದರು ಸೂಚನೆ ನೀಡಿದರು.

ಅಪಘಾತ: ವ್ಯಕ್ತಿ ಸಾವು

ತುಮಕೂರು: ಗುಬ್ಬಿ ತಾಲೂಕಿನ ಕಲ್ಲೂರು ಬಿಟ್ಟಗೊಂಡನಹಳ್ಳಿ ಬಳಿ ದ್ವಿಚಕ್ರ ವಾಹನಕ್ಕೆ ಗುದ್ದಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಕಾಡಶೆಟ್ಟಿಹಳ್ಳಿಯ ರಾಮಣ್ಣ ಎಂದು ಗುರುತಿಸಲಾಗಿದೆ.

ಡಿಕ್ಕಿ ಹೊಡೆದ ವಾಹನದಲ್ಲಿ ದೇವರನ್ನು ಇಟ್ಟುಕೊಂಡು ಬರುತ್ತಿದ್ದರು ಎಂದು ತಿಳಿದುಬಂದಿದೆ

ವಾಸುದೇವ್ ಗೆ ಗೌರವ ಡಿ.ಲಿಟ್

ತುಮಕೂರು: ತುಮಕೂರು ನಗರದ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ವಾಸುದೇವ ಬಿ.ಎ. ರವರು ಗೌರವ ಡಿ.ಲಿಟ್. ಪದವಿಗೆ ಪಾತ್ರರಾಗಿದ್ದಾರೆ.

ಶ್ರೀಯುತರು 21 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಹಾಗೂ ಕೈಗೊಂಡಿರುವ ಸಮಾಜಮುಖಿ ಮತ್ತು ವಿದ್ಯಾರ್ಥಿಮುಖಿ ಕಾರ್ಯಗಳನ್ನು ಪರಿಗಣಿಸಿ ಬೊಲಿವಿಯಾದ ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೆರಿಕಾ ಈ ಪದವಿಯನ್ನು ಪ್ರಧಾನ ಮಾಡಿದೆ.

ಇತ್ತೀಚೆಗೆ ಮುಂಬೈನ ಡಾ.ರಾಧಾಕೃಷ್ಣನ್ ಟೀಚರ್ಸ್ ವೆಲ್‍ಫೇರ್ ಅಸೋಸಿಯೇಷನ್‍ನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಸಮಾರಂಭದಲ್ಲಿ ಪದವಿಯನ್ನು ನೀಡಲಾಯಿತು.

ಶ್ರೀಯುತರನ್ನು ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಧ್ಯಕ್ಷ ಎನ್.ಆರ್. ಪಂಡಿತಾರಾಧ್ಯ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣ, ಶಿಕ್ಷಣ ದತ್ತಿಯ ಧರ್ಮದರ್ಶಿಗಳು, ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಒಳ್ಳೊಳ್ಳೆ ಹೂವು,ಎಲ್ಲೆಲ್ಲಿ ಅರಿಳೇವೋ!

ಉಜ್ಜಜ್ಜಿ ರಾಜಣ್ಣ , ಮೊ:9 4 4 8 7 4 7 3 6 0


ಬಡುಗುಲು ಮಳಿ ಬಂದು
ಬೆಳುವಾಡಿ ಕೆರಿ ತುಂಬಿ
ಏಸುಕ್ಕಿ ಕೋಶಿಕ್ಕಿ
ಕರು ಕುಡುದು ಮರಿ ಕುಡುದು
ಗುರುವಿನು ಪಾದುವು ತೊಳುದು………….

ಐಯ್ಯೋಜಿಹೊಸಮಾಲೆದುರ್ಗ್ದು ರಾಜ ಕಂಪುಲಿರಾಯ; ಹನ್ನೆರ್ಡಾಳುದ್ದುದು ಗಣಿ ಮ್ಯಾಗಡೆಯಾ, ಬಾಗಿ ಬಳುಕಿ ಎಗ್ಗಲಿಸಿ ಒನ್ದು ಕುಪ್ಪಳಿಸಿ ಒಯ್ಯಾರವುನ್ನೇ ಆಡಿ, ಮುಂಗೈಅಂಗೈಮಾಡಿ ಅಂಗೈಮುಂಗೈಮಾಡಿ ಒಳ್ಳೆಒಳ್ಳೆಯಾ ಒನುಪಾದ ನಾಟ್ಯೇವ್ಕು, ದೊಂಬುರು ರತ್ನಾಜಿಗೆ ಮನಸೋತ. ವೈನಾಗಿ ಆಟಕಟ್ಟಿ ಆಡ್ದು ಆ ವೈಯ್ಯಾರುದು ಒನುಪಾದ ತೊನ್ದಾಡುವ ಮೈಯ್ಯಾಟುಕ್ಕೆ ಮನ ಜೋತು ಅವ್ಳುಗುವೆ ಪಟ್ಟದು ರಾಣಿ ಪದುವಿ ಕೊಟ್ಟಾಗ, ಅವ್ನ ಪತ್ನಿ ಆಸ್ಥಾನ್ದು ಅರಸಿ ಪದುವಿ ತೊರಿಬೇಕಾದ ಸಂದರ್ಪು. ಆಗ ಗುಡ್ಡುದಂತ ಬಸುರಿ ದಿನುಮನುಸ್ಥಿ ಹಾಲೇಸ ಬಾಲೇಕಂದ ಕಾಯ್ದು ಕಂದು ಹೊಟ್ಟೇಲೇ ಬೆಳಿವಾಗ ಅರಸು ಅವುಳ್ನು ಪಟ್ನುದೊರುಗಿನು ಬೀಳುಬಿದ್ದ ಹಾಳು ಸಾವುಡಿಗೆ ಕಳುಸ್ದ. ಅತ್ತ ಆರುಗಾವ್ದು ಸುತ್ತುಲಿಂದ್ಲೂವೆ ಮೂರುಗಾವ್ದು ಕನ್ನಪ್ಪುನುಕಾಡು ಕೀಂಕಾರಣ್ಯ ಕಾಡಂಚಿನು ಮೆಣಿ ಹುಲ್ಲಿ ಗಂಟುಸಾಲೆಬೋಟಿನು ಬೀಳು; ಅಲ್ಲಿ ನೀನೇ ಅನ್ನೋ ದೆವ್ವುಲ್ದು ಜಾಗ್ವುವ, ಜೀವ್ಣುಕು ಜೀವ್ನಾಶಿಗೆ ಹರಿಯಾಲದೇವಿಗೆ ಪಾಲ್ವಂಚಿಗೆ ಭಾಗ್ವಾಗಿ ಬಹಳ ಬೆಲಿ ಬಾಳಾದು ಅತಂಥುವಾ ಕೊಟ್ಟ. ಹುಟ್ಟುತುಲೆ ಉರುಬಂಜೆ ಕಟ್ಟುತುಲೆ ಗೊಡ್ಡುಗಾಳಿ ಎರಡೆಮ್ಮೆನೂವೆ ಒಂಜೊತೆ ಎತ್ನಂತುವೆ ಗೇಯ್ಕಂದು ತಿಂಬೋಕೆ ಕೊಟ್ಟು ಅರುಗಾದ. ಪಡ್ದು ಮಗ ಕಾಟಯ್ಯ ಹೊತ್ತಿಗು ಬಂದೋನು ಜಾವ್ಕು ಬಂದ ಜಾವ್ಕು ಬಂದಾನು ಹೊತ್ತಿಗು ಬಂದು ದೊಡ್ಡನಾದ; ಫಲದ್ರನುನೂ ಆದ ಅಂತನ್ನಿ. ಅಂಗಾಡಿ ಮೇಣಿ ಹಿಡಿಕಾಯಿಡ್ದುವೆ ಬ್ಯಾಸಾಯ ತಿರುವಂಗಾದ. ಅವ್ವು ಕಾಡಂಚಿನು ಬೀಳು ಗಿಡಗೆಂಟೆ ತಗುದ್ರುರೆ, ಮಗ ಬ್ಯಸಾಯ ತಿರುವೋನು.

ಅಂಗೈ ಅಗುಲ; ವತ್ತೋಳುದ್ದ, ಗೇಣುಗೇಣಿಗೂ ಗೆಣ್ಣಿಕ್ಕಿ, ಸೀಳ್ದಿ ಗೆರಿಗೆರಿಯಾಗಿ ಗರಿಗರಿಯಾದ ಮಿಂಚುಟ್ಟಿ ಭೂಮಿ ತೂಕ್ದು ಗುಡುಗಾಗಿ ವನುದು ಜೀವುವೇ ಬೆದುರಿ ಬೆಂಡೆ ಬಿಸುಲಾತು. ಮದುಗುದು ಗುಡ್ಡುದು ಅಡ್ಡೇಣು ಒಳುಗುಲಿಂದವಾ ಎದ್ದಾಯ್ಕು ಗದಿಗದಿಯಾಗಿ ಒಳ್ಳೇದು ಒದಿಯಾಗಿ ಎದ್ದದ್ದೇ ಮಾಡ; ಮುಂಗಾರು ಗುಡ್ದು ಮೇಲೆ ಅಡ್ಡಾದು ಮಳಿ ಕಾಲೂರಿ ಬಿದ್ದ ಬಿರುವಿಗೆ, ಮದುಗುದು ಗುಡ್ದು ಅಡ್ಡೇಣು ಇಳ್ದು ಸೀಳಿ ಹರುದುವು ಹಳ್ಳಸರುದು ತೊರಿ ಹಳ್ಳಗುಳು. ಮಡುದೊಳುಗು ಹಣ್ಣೆಲಿ ಸುರುದಂಗು ಬಂತು ಮಳಿ. ಮಂಗಾರುಗುಡ್ದು ಒಬ್ಬಿಗುಂಟ ರಾಮ್ದೇವುರು ಕಾಡು ಬಗಾಲು ಮಾಡ್ಕಂದುವೆ, ತಾರೆಮರದು ಬಯಲು, ತ್ಯಾಗ್ದು ಮರುದ ತಗ್ಗು, ಮರಡಿ ಮರುದು ಹಾಳು, ಕ್ವಾಟೆ ಕಲ್ಯಾಣಿ ಬೀಳು ಹಾದ್ಕಂದುವೆ, ಪಹಣಿಕಲ್ಲಿನು ತಗ್ಗು ಮೂರೇಣಿನು ಕಲ್ಲು ದಾಟ್ಕಣುತ್ಲುವೆ ನುಗ್ದು ಮಂಗಾರು ಮಳೆ ಖಾನೆ ಅಡ್ಲುಗುಳಲ್ಲಿ ತೇಪಾಡಂಗುವೆ ಹರಿಯುತ್ತೆ ಹೊಸ ನೀರು.

ಹಿಂಗೆ , ಮಂಡೆವೊದರಿ ಮರಮಂಡಿ ಎಡುತಾಕಿ ಹೊರಟ ನಿಂತ ಹಳ್ಳಗುಳಿಗೆ ಕರೇ ಕೊಳ್ಳಾಳು ಪಾಳುನುಗುಡ್ಡ, ಗಂಡಿಗುಡ್ಡ, ಜೇನ್ಕಲ್ಲು ಗುಡ್ಡುಗುಳು ಒಳುಗುಲುಂದವಾ ದೇವುದಾರು ಹಳ್ಳ ತುಂಬೆರಿತುಲುವೆ, ಶಿವುರಾಂಪುರ ಬುಕ್ಕಾಪಟ್ನು ಮಾರ್ಗುವ ದಾಟ್ಕಂದು ಕರಿಯಾಲ್ದು ಕತುರುಗಲ್ಲು ಎತ್ತುರುದು ಕತ್ತು ಮುಳುಗುತುವಾ ಹೊಸ ನೀರು ನುಗ್ಗುತ್ತೆ. ಬಾರೀ ಉಂಟಾತು ಹೊಸು ಮಳೆ.

ಉಂಟಾದುದ್ದು ಅರುವಾಗಿಲ್ಲ. ಅಂಗೈ ಅಗಲ್ದು ಮಿಂಚು ಕಂಡಿಲ್ಲ. ಭೂಮಿ ತೂಕ್ದು ಗುಡುಗೂ ಕೇಳ್ಸಿಲ್ಲ. ಒಗುರಾದ ಕೋರುಡ್ಗ ಹೊಸ ಬ್ಯಾಸಾಯ. ಗಾವ್ದುದ್ದ ದೋಣು ಸಾಲು ಮುಂಬಿಡ್ದು ಸಣ್ಣುಗು ಸಾಲಿಡುದು ಒತ್ತಾರಿಗೆ ಭೂಮಿ ಉಳುವಾಗ, ಕರಿಯಾಲ್ದ ತೊರಿ ಬಂದು ಕಾಟಯ್ಯನ್ನ ಹೊತ್ಕಂದು ಹೋತು. ಕರಿಯಾಲ್ದ ತೊರಿ ಹರದು ರಬುಸ್ಕು ಬ್ಯಾಸಾಯ್ಕ ಹೂಡ್ಕಂದಿದ್ದ ಉರಿಬಂಜೆ ಗೊಡ್ಡಗಾಳಿ ಎಂಬ ಎರಡೆಮ್ಮಿಗುಳು ಕೊರಳುಗುಳು ಪಟುಗಣ್ಣಿ ಹರುಕಂದು ಅವು ಈಜಿಕಂದು ದಡಮುಂಟ ಸೇರಿ ಗುಡ್ಲು ಕುಂಟೆ ಕಾಡು ಪಹಣಿಕಲ್ಲಯ ಮೂರೇಣಿನ ಕಲ್ಲಾಸಿಗುಂಟವಾ ರಾಮೇದೇವ್ರು ಗುಡಿ ಸೇರಿಕಂದುವು. ಅಲ್ಲೇ ಮೇಯ್ಕಂದು ಕಾಲಹಾಕ್ದವು. ಅವು ಕಾಡಿನು ಮೇವ್ಗು ಬಂದು ಕ್ವಾಣ್ಗುಳು ಕೂಡಿ ಅವುಗುಳು ಎದಿ ಒಳುಗೂ ಬೆದಿಯಾಡಿ ಮಟ್ಟಾಡಿ ಮರುದೊಳುಗು ಮರುಹುಟ್ಟಿ ಒಂದೆರಡು ಆಗ್ಲಾಗಿ; ಉರಿಬಂಜೆ ಗೊಡ್ಡುಗಾಳಿ ಅಂಬೊ ಅವ್ಗುಳು ಬಂಗುವರಿಯುತ್ತೆ ರಾಮೇದೇವ್ರು ಗುಡ್ಲು ಕುಂಟೆ ಕಾಡು ಬಯ್ಲೊಳಿಗೆ.

ಒಂದಪ್ಪು ಅಡಿಕೆ; ಒಂದ್ಸಿಗುಳು ನಾಗ್ವಾಳ, ಒಂದುಗ್ರು ಕಣ್ಣಿನುಷ್ಟು ಸುಣ್ಣ ನೊರಕ್ಡು ಮುದ್ರಿ ಹಲ್ಲು ಸಂದಿಗೆ ಅವ್ಸಿಕಳುದ್ರು ಹೊತ್ತಿಗೆ ಮುಗಿಯುತ್ತಾ ಕತಿ. ಇದು, ನೆಲ ನಡೆದಷ್ಟೂ ಕತಿ ಅಡ್ಕಂದು ಕುಂತವೆ ಈರ್ಮಂಡಿ ವಯ್ಕಂದುವೆ. ಯಡಿಗೆಗುಳ ರಾಗಿ ಹಿಡಿವೊಳುಗಾದು ಕಲ್ಲಿನು ಕೊಣ್ದುದೊಳುಗುಲಿಂದುವಾ ಇಳ್ದು ಪಡಿಯಾಗು ತನುಕುವಾ ಹೇಳುದ್ರೂವೆ ಯಾವ್ದಾರ ಒಂದು ಸಂದೂ ಹೇಳಿ ಮುಗುಸಕ್ಕಾಗಲಾದಂತುವು. ಸುಣ್ಣುದು ಮಗಿ ಮುಂದೆ; ತಿರುವಿದು ಕವ್ಳುಗೆ ಇಳ್ಳೇದೆಲಿ ಪೆಂಡಿ ಒಳುಗುಲು ಎಲಿ ಕಟ್ಟು, ಸೇರಡಿಕೆ ಸುರುಕಂದ್ರೂವೆ ಸವಿಲಾರುವು ಕತಿಗುಳು ಅತಂಥವು ಹೇಳಾರು.

ಅಂಬಾಲುಪುರುದು ತುಂಬೊಳ್ಳೆ ಕಾಡಿಗೆ ದೇವ್ರು ಮಾಡಾಕೆ ಗೂಡೆ ಹೊತ್ತು ನಡಿವಾಗ ಹಿರೀಖುರ ಹಿಂದೆ ನಡಿತಿದ್ದ ದೂರುದು ಪಯಣ. ಹೆಂಗುಸ್ರುಮಕ್ಕಳು ದಾರಿ ಸವಿಲಿ ಅಂತಾವಾ ಕತಿ ಹೇಳಾರು. ನೆಡುದು ಕಾಲು ನೊಂದ್ರೂವೆ ಹಿಂದುಬಿದ್ರೆ ಕತಿ ಕೇಳಲುವಲ್ಲ ಅಂತವಾ ಕತಿ ಹೇಳಾರು ಸಮ್ಕೆಯಾ ಸಣ್ಣುಡ್ಗ್ರುವೆ ನಡಿಯೇವು.

ಕುರಿಯಾರು ದನಿನೋರು ದೇವ್ರಿನೋರು ಒಕ್ಕುಲು ಮೇಲು ಸತ್ತೋರಿಂದೆ ಆದಿನಗಳಲ್ಲಿ ಸುತ್ತೋಗುತಿದ್ದವನು ಐದಾರು ವರ್ಷುಗುಳಿಂದ ತತ್ವ ಪದುಕಾರರ ಹುಡುಕಿ ಸತ್ತೋದು ನಡ್ಕಂದು ಹೋಗುತೈತಿ.

ತತ್ವ ಪದಕಾರರು ನಾಥ ಶರಣ ಆರೂಢ ಅವಧೂತ ಆಜೀವಿಕ ಅಚಲ ಸೂಫಿ ದತ್ತ ಹೀಗೆ ಅವೈದಿಕ ಚಿಂತನಾ ಪ್ರಸ್ಥಾನಗಳ ನೆಲೆಯಲ್ಲಿ ನಡೆದು ಶ್ರಮವಹಿಸುತ್ತಿರುವ ಕರ್ನಾಟಕ ಸಮಗ್ರ ತತ್ವ ಪದಗಳ ಪ್ರಕಟಣಾ ಯೋಜನೆಯ ಸಂಪಾದಕರಾಗಿ ನಟರಾಜ್ ಬೂದಾಳು. ಕತೆಗಾರರು ಎಸ್ ಗಂಗಾಧರಯ್ಯ, ಲತಾ ಬೂದಾಳು, ಕೋಮಲ ಬಾಡೇನಹಳ್ಳಿ, ಕವಯತ್ರಿ ಗೀತಾಲಕ್ಷಿ ಅವ್ರುಗುಂಟ ನಾನುವೆ ಜೊತೆಯಲ್ಲಿ. ಹಿಂದಿನ ವರ್ಷದಿಂದುಲೂವೇ ಜಾಲಗಿರಿ ಹೂ ನೋಡಲು ಹೋಗುವುದು ಇವರ್ಸುವೂ ಮುಂದುವರಿತು. ಕಾಡು ಹಾದಿ ಏಣುಗುಂಟುವೂ ಗಿರಿ ನೆತ್ತಿವರಿವಿಗೂ ನೆಡಿವಾಗ ನಾನು ಹೆಚ್ಚು ಮಾತನಾಡಿದ್ದೇ ಎದೆಗೆ ಆತು ಬಂದಂತಹ ಪೂರ್ವಿಕರ ಕತೆಗಳ ಜೊತೆಯಲ್ಲಿ ಅವರ ಗದ್ದುಗೆಗಳ ಮಗ್ಗುಲುಗಳಲ್ಲಿ ಆಲಿಸಿದ ಮಾತಗಳಾಗಿ. ಕೊರಳಿಗೆ ತಿರುವಿಕೊಂಡ ಅರಿವೆ ಹಾಸಿ ಮಗ್ಗಲಾಗುವವರೆವಿಗೂ ಇವೇ ಮಾತುಕತೆಗಳಾದವು.

ಕನ್ನಡದ ಕಾವ್ಯದಲ್ಲಿ ಕೇಳಿದ್ದಂತಹ ಗುಡ್ಲು ಕುಂಟೆ ಮತ್ತು ರಾಮೇದೇವರ ಕಾಡು ಪ್ರದೇಶಗಳು ಇಂದಿಗೂ ಹೊಂದಿದ್ದ ತಾರೆ ತ್ಯಾಗ ಕಮರ ಮರಡಿ ಬಯಲುಗಳು ಕಣ್ಣಿಗಂತೂ ಯತೇಚ್ಚವಾಗಿ ಕಂಡವು. ಮಾರ್ಚ್ ಮೊದಲ ವಾರಕ್ಕೆ ಗಿರಿ ಸಾಲುಗಳಲ್ಲಿ ಜಾಲಗಿರಿ ವನದ ಉತ್ಸವದ ತೇರು ಇನ್ನಷ್ಟು ಸೃಜನಶೀಲವಾಗಬಹುದು. ಕನ್ನಡದ ಕಾವ್ಯಗಳಾಗಿ ಹಿರಿಯರು ಎದೆಗಿಳಿಸಿಕೊಂಡ ಕಾನುಗಳಿವು. ಕರ್ನಾಟಕದ ಪಶುಪಾಲನಾ ಸಂಸ್ಕೃತಿ ಕಟ್ಟಿಕೊಂಡ ಕರ್ನಾಟಕಾಂತರ್ಗತ ಕನ್ನಡದ ಕಾವ್ಯಗಳ ಆವರಣಗಳು. ಈ ಕಾನುಗಳ ಭೌಗೋಳಿಕ ಪ್ರದೇಶಗಳಲ್ಲಿ ನಾವು ನಡೆದ ಕಡೆಯೆಲ್ಲಾ ಅಪುರೂಪದ ಐತಿಹ್ಯಗಳು.

ಅವದೂತ ಶಾಂತವೀರರ ಗದ್ದುಗೆ ಓಣಿಗುಂಟವಾ ಹೋದರೆ ನೊಣವಿನಕೆರೆ ಬಯಲು ದಾಟಿದರೆ ಜುಂಜಪ್ಪನ ಕಾವ್ಯದಲ್ಲಿ ಬರುವ ಗಂಟೇನಹಳ್ಳಿ ಭೂತನ ತೊರೆ ಹಳ್ಳ. ಮಂದೆ ಕರಿಯಾಲ್ದ ತೊರೆ. ಅತ್ತಲಾಗಿ ಅಪ್ಪಣ್ಣ ಚಿತ್ರದೇವರ ಕಾವುಲು, ಗುಡ್ಡೇನಹಳ್ಳಿ ಕೆರೆ. ಅಲ್ಲೇ ಗುಡ್ಡೇನಳ್ಳಿ ಕೆರಿ ದಿಣ್ಣೆ ಮೇಲೆ ನಾವು ಬುತ್ತಿ ಬಿಚ್ಚಿದು. ಅಲ್ಲಿಂದ್ಲುವೆ ನಡೆದದ್ದೆಲ್ಲಾ ಗುಡ್ಲು ಕುಂಟೆ ಗಿಡ.

ನಿಸರ್ಗ ಸಹಜ ಸೌಂದರ್ಯದ ಜಾಲಗಿರಿ ಜಾಲದ ಘಮ್ಮನೆಯ ಘಮಲು. ಧೂಪುಕಣಗಿಲೆ ಹೂವು ಹೋಲುವ ಎಸಳು ಕಿರಿದಾದ ಮೈಯ್ಯೆಲ್ಲಾ ಹೂವಾಡಿಸಿ ಕೊಂಡಿದ್ದ ಕಾಡು ಬಿಕ್ಕೆ. ಶಿವರಾತ್ರಿ ಕಳೆದರೂ ಉಳಿದು ಮುಗಿಯದ ಮುತ್ತಗುದ ಹೂವು. ಶಿವರಾತ್ರಿ ಸಿಗುಳು ನೀರಿಗೆ ಕಾಯ್ದುಕೊಂಡು ನಿಂತ ಜಾಲಗಿರಿ ವನ ಒಂದುಕಡೆಯಾದರೆ, ಇನ್ನೊಂದು ಕಡೆ; ಕಾಡೇ ಉಗಾದಿಯ ಉಗುರು ನೀರಿಗೆ ಎಲೆ ಉದುರಿಸಿ ಬೆತ್ತಲಾಗಿ ನಿಂತ ಸಸ್ಯ ಕೋಟಿಯ ಅಡವಿ.

ಗಿರಿಕಾಣೋ ಗಿರಿ
ನವುಲು ಬಣ್ದು ಗಿರಿ
ಗಿರಿಯ ಮೇಲೆರಡು
ಹುಲಿಕರಡಿ ಹುಲ್ಲೇಮರಿ
ಶಿವ್ನಿಗು ವಾಲ್ಗುವಾ ಮಾಡೇವೋ

ಕಾಡಿನ ವಿಸ್ಮಯವೇ ಕಾವ್ಯಮಯವಾದುದು.

ಒಳ್ಳೊಳ್ಳೆ ಹೂವು,ಎಲ್ಲೆಲ್ಲಿ ಅರಿಳೇವೋ! ಎಂದುಕೊಂಡಾಗಲೆಲ್ಲಾ ಕಣ್ಣು ಪರುವಿಗೆ ಜಾಲಗಿರಿ ಹೂವು ಕಾಣಾವು.

ಬಡವನಹಳ್ಳಿಯಲ್ಲಿ ಕಥಾ ಲಹರಿ

ಮಧುಗಿರಿ: ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ಟಾರ್ಗೆಟ್ ಎಜುಕೇಶನ್ ಟ್ರಸ್ಟ್ ವತಿಯಿಂದ ಐನ್ ಸ್ಟೀನ್ ಪಬ್ಲಿಕ್ ಸ್ಕೂಲ್  ಶಾಲಾ ಆವರಣದಲ್ಲಿ ಫೆ. 29 ರಂದು ಸಂಜೆ 5 ಕ್ಕೆ ಕಥಾ ಲಹರಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಬಾಲಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ರಂಭಾಪುರಿ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸುರಭಿ ಗೋಶಾಲೆಯ ಅಧ್ಯಕ್ಷ ಮಧುಸೂದನ್ ನೆರವೇರಿಸಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೀರ್ತಿ ಸುರೇಶ್, ಎಪಿಎಂಸಿ ಸದಸ್ಯ ಬಸವರಾಜು, ಡಿಡಿಪಿಐ ರೇವಣಸಿದ್ದಪ್ಪ, ಬಿಇಓ ರಂಗಪ್ಪ, ಮಕ್ಕಳ ತಜ್ಞ ಡಾಕ್ಟರ್ ಶಿವಾನಂದ ನಾಯಕ್, ಮೆಡುಮಾ ಅಧ್ಯಕ್ಷ ಭಾಸ್ಕರ್ ರೆಡ್ಡಿ, ವೃತ್ತ ನಿರೀಕ್ಷಕ ಪ್ರಭಾಕರ್, ತಾ.ಪಂ. ಸದಸ್ಯೆ ಗೀತಾ ಬಸವರಾಜು  ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದಿದ್ದಾರೆ.