Thursday, February 19, 2026
Google search engine
Home Blog Page 288

ನಾಡಿಗ್ ಗೆ ಸಾಹಿತ್ಯ ದತ್ತಿ ಪ್ರಶಸ್ತಿ

Tumukuru: ಬರಹಗಾರರು ಮತ್ತು ಲೇಖಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದೆ. ಹಲವು ಮಂದಿ ತಮ್ಮ ತಂದೆ-ತಾಯಿ, ಅತ್ತೆ ಮೊದಲಾದವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಇಟ್ಟಿದ್ದು ಸಾಹಿತ್ಯ ಲೋಕಕ್ಕೆ ಬೇರೆ ಬೇರೆ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ಹ.ರಮಾಕುಮಾರಿ ಹೇಳಿದರು.

ತುಮಕೂರಿನ ಅಮಾನಿಕೆರೆ ಎದುರಿನಲ್ಲಿರುವ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದೇವಪ್ರಕಾಶ್-ಶಾಲಿನಿ ದಂಪತಿ ಭಗೀರಥಮ್ಮ ಅವರ ಹೆಸರಿನಲ್ಲಿಟ್ಟಿದ್ದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಜಿಲ್ಲೆಯ ಬರಹಗಾರರನ್ನು ಗುರುತಿಸುವ ಕೆಲಸವನ್ನು ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಅದರ ಭಾಗವಾಗಿಯೇ ಈ ದತ್ತಿ ಪ್ರಶಸ್ತಿಯನ್ನು ನೀಡುತ್ತಿರುವುದು. ಕನ್ನಡ ಸಾಹಿತ್ಯದ ಬೆಳವಣಿಗೆ, ನೆಲ, ಜಲ ಸಂರಕ್ಷಣೆಯಂತಹ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಯಪ್ರಕಾಶ್ ತಮ್ಮ ಮಾತೃಶ್ರೀ ಭಾಗೀರಥಮ್ಮನವರ ಸ್ಮರಣಾರ್ಥ ಪ್ರವಾಸ ಸಾಹಿತ್ಯ ಕೃತಿಗೆ ದತ್ತಿ ಪ್ರಶಸ್ತಿ ನೀಡುತ್ತಿದ್ದಾರೆ. ಶಾಲಿನಿ ದೇವಪ್ರಕಾಶ್ ತಮ್ಮ ಅತ್ತೆ ಭಾಗೀರಥಮ್ಮ ಸ್ಮರಣಾರ್ಥ ಮಕ್ಕಳ ಸಾಹಿತ್ಯಕ್ಕಾಗಿ ದತ್ತಿ ಪ್ರಶಸ್ತಿ ನೀಡುತ್ತಿದ್ದಾರೆ. ಜಯಪ್ರಕಾಶ್ ಮತ್ತು ಶಾಲಿನಿಯವರು ಸಾಹಿತ್ಯ ಪರಿಷತ್ತಿನಲ್ಲಿಟ್ಟಿರುವ ನಿಧಿಯಿಂದ ಪ್ರತಿ ವರ್ಷ ಇಬ್ಬರಿಗೆ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದೆ ಎಂದರು.

ಪ್ರವಾಸ ಸಾಹಿತ್ಯಕ್ಕೆ ಪ್ರಕಾಶ್ ನಾಡಿಗ್ ಅವರ ‘ನಾ ಕಂಡ ಯೂರೋಪ್ ಖಂಡ’ ಕೃತಿ ಪ್ರಶಸ್ತಿಗೆ ಭಾಜನವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಲೇಖಕಿ ಸುಮಾ ಬೆಳಗೆರೆ ಬರೆದÀ ’30 ದಿನಕ್ಕೆ 30 ಕಥೆಗಳು’ ಕೃತಿ ಪ್ರಶಸ್ತಿ ಭಾಜನವಾಗಿದೆ. ಪ್ರಶಸ್ತಿ ಪಡೆಯುತ್ತಿರುವ ಇಬ್ಬರೂ ಲೇಖPರಿಗೆ ಅಭಿನಂದನೆಗಳು ಸಲ್ಲಬೇಕು ಎಂದು ತಿಳಿಸಿದರು.

ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಇವುಗಳಿಂದ ಲೇಖಕರನ್ನು ಉತ್ತೇಜಿಸಿದಂತಾಗುತ್ತದೆ ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಕನ್ನಡ ಸಹಾಯ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಬಂಡವಾಳಶಾಹಿಯು ಮನುಷ್ಯನ ಶತ್ರು. ಅದನ್ನು ಬೆಂಬಲಿಸುವ ಪ್ರಭುತ್ವಕ್ಕೆ ನೈತಿಕತೆ ಇಲ್ಲ ಎಂದು ತಿಳಿಸಿದರು.

ನಾ ಕಂಡ ಯೂರೋಪ್ ಖಂಡ ಕೃತಿಯ ಪ್ರಕಾಶ್ ಕೆ. ನಾಡಿಗ್, 30 ದಿನಕ್ಕೆ 30 ಕಥೆಗಳು ಕೃತಿಯ ಸುಮಾ ಬೆಳಗೆರೆ ಅವರಿಗೆ ಭಗೀರಥಮ್ಮ ದತ್ತಿ ಪ್ರಶಸ್ತಿಯನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಶಾಲಿನಿ ದೇವಪ್ರಕಾಶ್ ಮಾತನಾಡಿದರು.

ಮೂಕಜ್ಜಿ ಕನಸುಗಳು ಚಲನಚಿತ್ರ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೊದಲ ಬಹುಮಾನ ಎಲ್.ಉಷಾ ಮತ್ತು ದ್ವಿತೀಯ ಬಹುಮಾನ ಜಿ.ಎಸ್.ನಾಗೇಶ್ ಗುಬ್ಬಿ, ತೃತೀಯ ಬಹುಮಾನ ಸಂತೋಷ್ ನೀಡಲಾಯಿತು. ಕುಸುಮಾ ಜೈನ್ ಮತ್ತು ತಂಡ ಪ್ರಾರ್ಥಿಸಿದರು. ಲೇಖಕಿ ಶೈಲಾ ನಾಗರಾಜ್ ಸ್ವಾಗತಿಸಿದರು

ಕೃಷ್ಣೆಯ ನೀರಲ್ಲಿ ರಕ್ತದ ಕಲೆಗಳ ಶುದ್ಧಿ

ಗಡಿ ಹಂಚಿಕೊಂಡಿರುವ ತಾಲ್ಲೂಕಿನಲ್ಲಿ ಈ ಹಿಂದೆ ಅಂಟಿದ್ದ ರಕ್ತದ ಕಲೆಗಳನ್ನು ಕೃಷ್ಣೆಯ ನೀರಿನಿಂದ ತೊಳೆಯಲು ಬದ್ಧರಾಗಿದ್ದೇವೆ ಎಂದು ಆಂಧ್ರದ ಹಿಂದೂಪುರ ಕ್ಷೇತ್ರದ ಲೋಕಸಭೆ ಸದಸ್ಯ ಗೋರೆಂಟ್ಲ ಮಾಧವ್ ತಿಳಿಸಿದರು.

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ನಾಗಲಮಡಿಕೆ ಹಂದ್ರಿನಿವಾ ಯೋಜನೆ ಕಾಮಗಾರಿ ನಿರ್ವಿಘ್ನವಾಗಿ ನೆರವೇರಲೆಂದು ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಪೇರೂರು ಡ್ಯಾಂಗೆ ನೀರು ಹರಿಸುವ ಸಲುವಾಗಿ ಜನತೆಯ ಕಾಲಿಗೆ ಮುಗಿಯಲು ಸಿದ್ದರಿದ್ದೇವೆ. ರೈತರಿಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಲಾಗುವುದು ಎಂದರು.

ರಾಪ್ತಾಡು ಶಾಸಕ ತೋಪುದುರ್ತಿ ಪ್ರಕಾಶ್ ರೆಡ್ಡಿ, ಫೆಬ್ರವರಿ 5 ರೊಳಗೆ ನಾಗಲಮಡಿಕೆ ಮೂಲಕ ಆಂಧ್ರದ ಪೇರೂರು ಡ್ಯಾಂಗೆ ನೀರು ಹರಿಸಲಾಗುವುದು. ಸರ್ಕಾರ ಅನುದಾನ ಬಿಡುಗಡೆ ಮಾಡುವುದು ತಡವಾಗುತ್ತದೆ.ಹೀಗಾಗಿ ಸ್ವಂತ ಖರ್ಚಿನಿಂದ ಕಾಮಗಾರಿ ಆರಂಭಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಉತ್ತರ ಪಿನಾಕಿನಿ ನದಿ ಮೂಲಕ ನೀರು ಹರಿಸಲಾಗುವುದು ಎಂದರು.

ಆಂಧ್ರದ ರೊದ್ದಂ ಕೆನಾಲ್ ನಿಂದ ತುರ್ಕಲಾಪಟ್ನಂ ನಿಂದ ನದಿಯಲ್ಲಿಯೇ ಕಾಲುವೆ ತೋಡಿ ನಾಗಲಮಡಿಕೆ ಚೆಕ್ ಡ್ಯಾಂ ತುಂಬಿಸಿ ಅಲ್ಲಿಂದ ಪೇರೂರಿಗೆ ನೀರು ಹರಿಸಲಾಗುವುದು. ತಾಲ್ಲೂಕಿನಾದ್ಯಂತ ಇಲ್ಲ ಸಲ್ಲದ ಊಹಾ ಪೋಹಗಳನ್ನು ಹಬ್ಬಿಸಲಾಗುತ್ತಿದೆ. ಪೇಪರ್ ಬಳಸದೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿಯೇ ನೀರು ಹರಿಸಲಾಗುವುದು ಎಂದರು.

ಹಿಂದಿನ ಶಾಸಕಿ ಪರಿಟಾಲ ಸುನಿತಾ ನಾಗಲಮಡಿಕೆ ಹೋಬಳಿ ರೈತರಿಗೆ ನೀರು ಕೊಡುವುದಿಲ್ಲ. ಕರ್ನಾಟಕದವರಿಗೆ ಏಕೆ ನೀರು ಕೊಡಬೇಕು ಎಂದು ಹೇಳಿಕೆ ನೀಡಿ ಗೊಂದಲ ಸೃಷ್ಠಿಸಿದ್ದರು. ಎರಡೂ ರಾಜ್ಯದವರು ಅಣ್ಣ ತಮ್ಮಂದಿರಿದ್ದಂತೆ. ರಾಪ್ತಾಡು ಕ್ಷೇತ್ರದಷ್ಟೇ ಪ್ರಾಮುಖ್ಯತೆಯನ್ನು ಪಾವಗಡ ತಾಲ್ಲೂಕಿನ ರೈತರಿಗೂ ನೀಡಲಾಗುವುದು ಎಂದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಕಾಲುವೆಗೆ ಪೇಪರ್ ಅಳವಡಿಸಿದರೆ ಅದರಿಂದ ತಾಲ್ಲೂಕಿನ ಜನತೆಗೆ ಅನುಕೂಲವಾಗುವುದಿಲ್ಲ. ನಾಗಲಮಡಿಕೆ ಚೆಕ್ ಡ್ಯಾಂ ತುಂಬಿಸಿ ನಂತರ ನೀರು ಹರಿಸಿ ಎಂದು ಮನವಿ ಮಾಡಿದರು.

ಮುಖಂಡ ತಿಮ್ಮಾರೆಡ್ಡಿ, ಎಸ್.ಕೆ.ರೆಡ್ಡಿ, ಗಂಗುಲ ಭಾನುಮತಿ, ಮೀನುಗ ನಾಗರಾಜು, ಸಿಮೆಂಟ್ ಮಂಜು, ಬೋರ್ ವೆಲ್ ಮಂಜುನಾಥ ರೆಡ್ಡಿ, ರಾಮಕೃಷ್ಣರೆಡ್ಡಿ, ಕೃಷ್ಣಾರೆಡ್ಡಿ, ರಮೇಶ್ ಉಪಸ್ಥಿತರಿದ್ದರು.

Republic day ಸಂಭ್ರಮ

Tumkuru: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ 71ನೇ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ದಿನದಷ್ಟೇ ಮಹತ್ವಪೂರ್ಣವಾದ್ದದ್ದು ಗಣರಾಜ್ಯೋತ್ಸವ. ಈ ಸಂದರ್ಭದಲ್ಲಿ ಪ್ರಜಾತಂತ್ರ ಗಣತಂತ್ರದ ಜಾತ್ಯತೀಲ ಮೌಲ್ಯಗಳನ್ನು ಒಳಗೊಂಡ ನಮ್ಮ ಸಂವಿಧಾನವನ್ನು ಅಳವಡಿಸಿಕೊಂಡ ದಿನ ಜ.26 ಅತ್ಯಂತ ಮಹತ್ವದ ದಿನ ಎಂದರು.

ಬಹುತ್ವದಲ್ಲಿ ಏಕತೆಯನ್ನು ಸಾರುವ ರಾಷ್ಟ್ರೀಯ ಭಾವೈಕ್ಯತೆಯನ್ನು ಹೊಂದಿರುವ ವಿಶ್ವ ಭ್ರಾತೃತ್ವವನ್ನು ಸಾರುವ ಸಂವಿಧಾನವನ್ನು ಅರ್ಥೈಸಿಕೊಳ್ಳುವುದು ಇಂದೆಂದಿಗಿಂತಲೂ ಅಗತ್ಯವಾಗಿದೆ. ಏಕೆಂದರೆ ಗಣತಂತ್ರ ವ್ಯವಸ್ಥೆಯನ್ನು ರಣತಂತ್ರಗೊಳಿಸುವ ಶಕ್ತಿಗಳು ಹೆಚ್ಚಾಗುತ್ತಿವೆ.

ರಾಷ್ಟ್ರೀಯತೆಯ ಅಪವ್ಯಾಖ್ಯಾನಗಳು ವಿಜೃಂಭಿಸುತ್ತಿವೆ. ನಿಜವಾದ ರಾಷ್ಟ್ರೀಯತೆಯನ್ನು ಮರೆಮಾಚಿ ಸ್ಥಾಪಿತ ಮೌಲ್ಯಗಳನ್ನು ಪ್ರತಿಪಾದಿಸುವ ಹುನ್ನಾರಗಳು ನಡೆಯುತ್ತಿವೆ. ಪ್ರತಿಯೊಬ್ಬರೂ ಸಂವಿಧಾನದ ಮೂಲ ಆಶಯವನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ತಿಳಿಸಿದರು. ಜಾತ್ಯತೀತ ಮೌಲ್ಯಗಳನ್ನು ದಿಕ್ಕರಿಸಿ ಮೂಲಭೂತವಾದವನ್ನು ಎತ್ತಿಹಿಡಿಯುವ ಅಪಾಯಕಾರಿ ಸಂಗತಿಗಳು ಘಟಿಸುತ್ತಿವೆ.

ಸಂವಿಧಾನದ ಆಶಯಕ್ಕೆ ವಿರುದ್ದವಾದ ಪ್ರಯತ್ನಗಳು ನಡೆಯುತ್ತಿವೆ. ಬಹುಧರ್ಮ, ಬಹುಭಾಷೆ, ಬಹುಸಂಸ್ಕತಿಗಳ ಭಾರತದಲ್ಲಿ ಪ್ರತಿಯೊಬ್ಬ ಭಾರತೀಯರೂ ಕೂಡ ಸಮಾನರು ಎಂದು ಸಂವಿಧಾನ ಹೇಳಿದೆ. ಆದ್ದರಿಂದ ಭಾರತ ಸಂವಿಧಾನವೇ ಸರ್ವ ಶ್ರೇಷ್ಠವಾಗಿದೆ. ಇಂತ್ಯ ಅತ್ಯಮೂಲ್ಯ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರನ್ನುಇಂದು ಸ್ಮರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕೋಶಾಧ್ಯಕ್ಷ ಬಿ.ಮರುಳಯ್ಯ, ಕಾರ್ಯದರ್ಶಿ ಗೋವಿಂದಯ್ಯ ದ್ವಾರನಕುಂಟೆ, ನಿರ್ದೇಶಕ ಲಕ್ಷ್ಮೀಕಾಂತರಾಜೇ ಅರಸ್ ವಿದ್ಯಾರ್ಥಿಗಳು ಹಾಜರಿದ್ದರು.

THE NEW PUBLIC SCHOOL: ವಾರ್ಷಿಕೋತ್ಸವ

Tumkuru: ತಂದೆ-ತಾಯಿಗಳ ಮಕ್ಕಳ ಬೆಳವಣಿಗೆ ಮತ್ತು ಓದಿನ ಕಡೆ ಗಮನ ಕೊಡದಿದ್ದರೆ ಮಕ್ಕಳ ವ್ಯಕ್ತಿತ್ವದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಸಿದ್ದಗಂಗಾ ಆಸ್ಪತ್ರೆ ಮೆಡಿಷನ್ ವಿಭಾಗದ ಮುಖ್ಯಸ್ಥೆ ಡಾ.ಎಂ.ಶಾಲಿನಿ ತಿಳಿಸಿದರು.

ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ದಿ ನ್ಯೂ ಪಬ್ಲಿಕ್ ಶಾಲೆಯ 15ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಸಾಧನೆ ಮಾಡಿದರೆ ಅದರಷ್ಟು ಸಂತೋಷ ಮತ್ತು ಸಾರ್ಥಕತೆ ಬೇರೊಂದಿಲ್ಲ ಎಂದರು.

ಸಮಾಜದಲ್ಲಿ ಮೂರು ರೀತಿಯ ಪೋಷಕರನ್ನು ನೋಡುತ್ತೇವೆ. ಮೊದಲ ರೀತಿಯ ಪೋಷಕರು ಮಕ್ಕಳು ಕೇಳಿದ್ದೆಲ್ಲವನ್ನೂ ತಂದುಕೊಟ್ಟು ಅದರ ಸ್ವಂತಿಕೆ ಇಲ್ಲದಂತೆ ಮಾಡುತ್ತಾರೆ. ಎರಡನೆ ರೀತಿಯ ಪೋಷಕರು ಉದ್ಯೋಗಿಗಳಾಗಿದ್ದು ಮಕ್ಕಳ ಬಗ್ಗೆ ಗಮನ ಕೊಡುವುದಿಲ್ಲ. ಇವರು ಬೆಳಗ್ಗೆ ಮನೆ ಬಿಟ್ಟರೆ ಮತ್ತೆ ಸಂಜೆ ಮನೆ ಸೇರುತ್ತಾರೆ. ಮಕ್ಕಳ ಬಗ್ಗೆ ವಿಚಾರಿಸುವುದೇ ಇಲ್ಲ. ಹೀಗಾಗಿ ಆ ಮಕ್ಕಳು ಕಲಿಕೆಯ ಬಗ್ಗೆ ಆಸಕ್ತಿ ವಹಿಸುವುದಿಲ್ಲ.

ಮೂರನೇ ರೀತಿ ಪೋಷಕರು ತುಂಬ ಹಠವಾದಿಗಳು, ತಾವು ಹೇಳಿದ್ದನ್ನು ಮಾತ್ರ ಮಕ್ಕಳು ಕೇಳಬೇಕು. ಪುಸ್ತಕ ಹಿಡಿ ಅಂದ್ರೆ ಹಿಡಿಯಬೇಕು. ಊಟಕ್ಕೆ ಬಾ ಎಂದರೆ ಬರಬೇಕು. ಮಲಗು ಅಂದ್ರೆ ಮಲಗಬೇಕು. ಹೀಗೆ ತಮ್ಮ ನಿಯಮಗಳನ್ನು ಹೇರುವ ಪೋಷಕರಿಂದ ಮಕ್ಕಳು ಓದುವುದೂ ಇಲ್ಲ. ಸ್ವಂತಿಕೆಯನ್ನು ಕಲಿಯುವುದಿಲ್ಲ. ಪೋಷಕರ ಇಂತಹ ನಡವಳಿಕೆಗಳು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಹಾಗಾಗಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲೇಖಕ ಕೆ.ಪಿ. ಲಕ್ಷ್ಮೀಕಾಂತರಾಜೇ ಅರಸ್ ಮಾತನಾಡಿ, ಮಕ್ಕಳ ಹಸಿವಿಗೆ ಅನ್ನಬೇಕು. ಹಾಗೆಯೇ ಜ್ಞಾನವೃದ್ದಿಗೆ ಕೇಳುವ ಮನೋಭಾವ ಬೆಳೆಸಬೇಕು. ಹೊಸ ಆಲೋಚನೆ, ಹೊಸ ಕಲ್ಪನೆ ಮತ್ತು ಪುಸ್ತಕ ಓದುವಂತಹ ವಾತಾವರಣವನ್ನು ಪೋಷಕರು ನಿರ್ಮಿಸಬೇಕು. ಆಗ ಮಕ್ಕಳು ಕ್ರಿಯಾಶೀಲವಾಗಿರುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಶೀರ್ವಾದ ಟ್ರಸ್ಟ್ ಅಧ್ಯಕ್ಷ ಎಚ್.ಡಿ.ರೇಣುಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ದಿ ನ್ಯೂ ಪಬ್ಲಿಕ್ ಶಾಲೆ ಗೌರವ ಕಾರ್ಯದರ್ಶಿ ವಿರೇಶ್ ಉಪಸ್ಥಿತರಿದ್ದರು. ಶಿಕ್ಷಕಿ ವಿ.ಕೆ.ನೇಹ ಸ್ವಾಗತಿಸಿ, ದೀಪ್ತಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ: ಸಚಿವ ಮಾಧುಸ್ವಾಮಿ

ತುಮಕೂರು: ಸಂವಿಧಾನ ಜಾರಿಗೆ ಬಂದ ನಂತರ ದೇಶ ಹಾಗೂ ರಾಜ್ಯದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ 71ನೇ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಕರಡು ರಚನಾ ಸಮಿತಿ ಅಧ್ಯಕ್ಷರಾಗಿ ಪ್ರಪಂಚದಲ್ಲಿ ಉತ್ಕಷ್ಟ ಮಟ್ಟದ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನ ಕತೃಗಳು ಈ ದೇಶದ ಜನರ ಬದುಕು, ಜೀವನದ ಬದಲಾವಣೆಗೆ ತಕ್ಕಂತೆ ಕಾನೂನುಗಳನ್ನು ಬದಲಾಯಿಸುವ ಬಹುದೊಡ್ಡ ಅವಕಾಶ ನೀಡಿದ್ದಾರೆ ಎಂದರು.

ದೇಶದಲ್ಲಿ ಬೇಕಾದಷ್ಟು ಧರ್ಮಗಳು, ಭಾಷೆಗಳು, ಪ್ರಾಂತ್ಯಗಳು ಇದ್ದರೂ ಜನರು ನೆಮ್ಮದಿಯಾಗಿ ಬದುಕುವ ಸ್ಥಿತಿ ಹಾಗೂ ಸಮಾಜವಾದ, ಸಮತಾವಾದ ಹಾಗೂ ಅಶಕ್ತರನ್ನು ಶಕ್ತರನ್ನಾಗಿಸುವ ಹಾಗೂ ಸಂಪತ್ತಿನ ಸಮಾನ ಹಂಚಿಕೆಯ ಬಗ್ಗೆ ಸಂವಿಧಾನದಲ್ಲಿ ತಿಳಿಸಲಾಗಿದೆ ಎಂದರು.

ಸ್ವಾತಂತ್ರ್ಯ ನಂತರ ದೇಶದಲ್ಲಿ ಆಹಾರದ ಕೊರತೆ ಇಲ್ಲ. ಆಹಾರ ಭದ್ರತೆ ಕಾಯ್ದೆಯನ್ವಯ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಆಹಾರವನ್ನು ಪಡೆಯುತ್ತಿವೆ. ಕಡ್ಡಾಯ ಶಿಕ್ಷಣ ಕಾರ್ಯಕ್ರಮವನ್ನು ಜಾರಿಗೆ ತಂದು ಉಚಿತವಾಗಿ 0-14 ವಯಸ್ಸಿನ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಇದರಿಂದಾಗಿ ಶೇ.30ರಷ್ಟಿದ್ದ ಸಾಕ್ಷರತಾ ಪ್ರಮಾಣ 80% ರಷ್ಟರವರೆಗೆ ಏರಿಕೆಯಾಗಿ ಆ ಮೂಲಕ ಮುಖ್ಯವಾಹಿನಿಗೆ ತರಲು ಸಾಧ್ಯವಾಗಿದೆ ಎಂದರು ಅವರು ತಿಳಿಸಿದರು.

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಅಭಿವೃದ್ಧಿಯಾಗುತ್ತಿದ್ದು, ಸ್ವಾತಂತ್ರ್ಯ ನಂತರ ದೇಶ ರಕ್ಷಣಾ ಶಕ್ತಿಯಲ್ಲಿ ಪ್ರಪಂಚದಲ್ಲಿಯೇ 3ನೇ ಸ್ಥಾನ ಪಡೆದಿದೆ. ವೈಜ್ಞಾನಿಕ ಸಂಶೋಧನೆಯಲ್ಲೂ ಭಾರತ ಮುಂದಿದೆ ಎಂದು ಅವರು ತಿಳಿಸಿದರು.

ಹೇಮಾವತಿ ತುಮಕೂರು ನಾಲೆ 0-70 ಕಿ.ಮೀ. ಅಗಲೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು, ಕಾಮಗಾರಿ ಪೂರ್ಣಗೊಂಡರೆ ಈಗಿನ ಎರಡರಷ್ಟು ನೀರನ್ನು ಪಡೆಯಬಹುದಾಗಿದೆ ಎಂದರು.

ಸಮಾರಂಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಕಾಂತರಾಜ್ ಬಿಎಂಎಲ್, ಕೆ.ಎ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಮೇಯರ್ ಲಲಿತ ರವೀಶ್, ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್, ಜಿ.ಪಂ. ಸಿಇಓ ಶುಭಾ ಕಲ್ಯಾಣ್, ಎಸ್‍ಪಿ ಡಾ: ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಪಾಲಿಕೆ ಆಯುಕ್ತ ಭೂಬಾಲನ್ ಹಾಜರಿದ್ದರು.

ಕಾರ್ಯಕ್ರಮದಲ್ಲಿ ತುಮಕೂರು ನಗರದ ವಿವಿಧ ಕಾಲೇಜು ಮಕ್ಕಳಿಂದ ದೇಶಭಕ್ತಿ ಸಾರುವ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಪೊಲೀಸ್, ಎನ್‍ಸಿಸಿ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳಿಂದ ಆಕರ್ಷಕ ಕವಾಯಿತು ನಡೆಯಿತು.

ಹೊಂದಿಕೊಂಡು ಹೋಗುವಂತೆ ವಿರೋಧ ಪಕ್ಷಗಳಿಗೆ ರಾಷ್ಟ್ರಪತಿ ಸಲಹೆ

publicstory.in


Tumukuru: ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ದೇಶದ ಎಂಟು ಕೋಟಿ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಗಳನ್ನು ವಿತರಿಸಿದೆ. ಹಾಗೆಯೇ ಕಿಸಾನ್ ಸನ್ಮಾನ್ ಯೋಜನೆಯಡಿ 14 ಕೋಟಿ ರೈತರ ಖಾತೆಗಳಿಗೆ 6 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹ ಧನವನ್ನಾಗಿ ನೀಡಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದರು.

ದೇಶವನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ. ಒಂದು ದೇಶ ಒಂದು ತೆರಿಗೆ, ಒಂದು ಮಾರುಕಟ್ಟೆ ಒಂದು ದೇಶ ಹೀಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದದೆ. ಸ್ವಚ್ಚಭಾರತ ಯೋಜನೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಪ್ರತಿಯೊಬ್ಬರಿಗೂ ಶುದ್ಧ ನೀರು ಪೂರೈಸುವುದಕ್ಕಾಗಿಯೂ ಆದ್ಯತೆ ಕೊಟ್ಟಿದೆ ಎಂದು ಹೇಳಿದರು.

ದೇಶದ ಅಂತರಿಕ ಭದ್ರತೆಗೆ ಅಗತ್ಯ ಗಮನ ಕೊಟ್ಟಿದೆ. ಆರೋಗ್ಯ, ಶಿಕ್ಷಣ ಮತ್ತು ಉತ್ತಮ ಆಡಳಿತ ನೀಡುವತ್ತ ಕೇಂದ್ರ ಸರ್ಕಾರ ಹೆಜ್ಜೆಗಳನ್ನು ಇಡುತ್ತಿದೆ. ಜನಾರೋಗ್ಯದ ಮುಂದುವರಿದ ಕಾರ್ಯಕ್ರಮವಾಗಿ ಆಯುಷ್ಮಾನ್ ಭಾರತ್ ಜಾರಿಗೆ ತಂದಿದೆ. ಇದರ ಉದ್ದೇಶ ಜನರಿಗೆ ಗುಣಮಟ್ಟದ ಆರೋಗ್ಯ ನೀಡುವುದಾಗಿದೆ. ದೇಶವ್ಯಾಪಿ ಜನೌಷಧ ಕೇಂದ್ರಗಳನ್ನು ತೆರೆದು ಜನರಿಗೆ ಜನರಿಕ್ ಔಷಧಿಗಳನ್ನು ಕೈಗೆಟಕುವ ದರದಲ್ಲಿ ನೀಡುತ್ತಿದೆ ಎಂದು ಬಣ್ಣಿಸಿದರು.

ಕೇಂದ್ರ ಸರ್ಕಾರ ನೇತೃತ್ವದಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಗಗನ್ ಯಾನ್ ಯೋಜನೆಯನ್ನುರೂಪಿಸುತ್ತಿದೆ. ವಿಜ್ಞಾನ, ಆವಿಷ್ಕಾರ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಆಗಬೇಕಾಗಿದೆ. ಕೃಷಿಗೆ ಒತ್ತು ನೀಡುತ್ತಿದೆ. ಮಹಿಳೆಯರ ರಕ್ಷಣೆಗೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ನಾವು 21ನೇ ಶತಮಾನದ ಮೂರನೇ ದಶಕದಲ್ಲಿದ್ದೇವೆ. ಇಂತಹ ಹೊತ್ತಿನಲ್ಲಿ ನವಭಾರತ ನಿರ್ಮಾಣ ಮಾಡಬೇಕು. ಅದಕ್ಕಾಗಿ ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಹಾತ್ಮ ಗಾಂಧಿ ಹೇಳಿದಂತೆ ಜನರು ಅಹಿಂಸಾ ಮಾರ್ಗದಲ್ಲಿ ನಡೆಯಬೇಕು. ಅಹಿಂಸಾ ತತ್ವವನ್ನು ಎತ್ತಿ ಹಿಡಿಯಬೇಕು. ದೇಶ ನಿರ್ಮಾಣದಲ್ಲಿ ಅಹಿಂಸೆಯ ಪಾತ್ರ ಮಹತ್ವದ್ದಾಗಿದೆ. ಸರ್ಕಾರವು ಇದೇ ನಿಟ್ಟಿನಲ್ಲಿ ಸಾಗುತ್ತಿದೆ ಎಂದರು.

ಪ್ರಸಕ್ತ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳು ಪರಸ್ಪರ ಹೊಂದಿಕೊಂಡು ಹೋಗಬೇಕು. ಸರ್ಕಾರ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಹೀಗಾಗಿ ಅಹಿಂಸೆಯ ಮಾರ್ಗದಲ್ಲಿ ಎಲ್ಲರೂ ಸಾಗಬೇಕು ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಅದನ್ನು ಈಡೇರಿಸುವತ್ತ ಹೆಜ್ಜೆ ಹಾಕಬೇಕು. ವಸುದೈವಂ ಕುಟುಂಬಕಂ ಎಂಬ ಭಾರತೀಯ ತತ್ವ ವಿಸ್ತರಿಸಬೇಕು. ಜನವರಿ 26ರಂದು ಬೋಲ್ಸೋ ನಯಿ ಅವರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿ ಎಲ್ಲರಿಗೂ ಗಣರಾಜ್ಯೋತ್ಸವ ದಿನಾಚರಣೆ ಶುಭಕೋರಿದರು.

ಏಳು ವರ್ಷದ ಪೋರಿಗೆ ಡಾಕ್ಟರೇಟ್…!

ತುಮಕೂರು

ನರಗುಂದದ ಸರ್ ಎಂ. ವಿಶ್ವೇಶ್ವರಯ್ಯ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ವೈದೃತಿ ಕೋರಿಶೆಟ್ಟರ್ಗೆ ತಮಿಳುನಾಡಿನ ಯೂನಿವರ್ಸಲ್ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.

ಪ್ರಧಾನಮಂತ್ರಿ, ಮುಖ್ಯಮಂತ್ರಿ, ಶಾಸಕರು, ಸಚಿವರು, ರಾಜ ಮಹಾರಾಜರ ಆಳ್ವಿಕೆ ಕಾಲ ಕುರಿತು ಕೇಳುಗರ ಪ್ರಶ್ನೆಗಳಿಗೆ ವೈದೃತಿ ಪಟಪಟನೆ ಉತ್ತರಿಸುತ್ತಾಳೆ. ವೈದೃತಿಯ ಅದ್ಭುತ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜ.25 ಸಂಜೆ 5 ಗಂಟೆಗೆ ಮಧುರೈನಲ್ಲಿ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತದೆ.

ಇದಲ್ಲದೆ ಕರ್ನಾಟಕ ದರ್ಶನ ಮಾಸಪತ್ರಿಕೆ ಸೇವಾ ಅಭಿವೃದ್ಧಿ ಸಂಸ್ಥೆಯಿಂದ ಪ್ರತಿವರ್ಷ ನೀಡಲಾಗುವ ಕರ್ನಾಟಕ ಜ್ಞಾನ ಚಕ್ರವರ್ತಿ ರಾಷ್ಟ್ರೀಯ ಪ್ರಶಸ್ತಿಗೂ ವೈದೃತಿ ಆಯ್ಕೆಯಾಗಿದ್ದಾಳೆ.

ಪದ್ಮಶ್ರೀ ಪ್ರಶಸ್ತಿ ಪ್ರಕಟ

ತುಮಕೂರು :

ದೇಶದ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಕರ್ನಾಟಕದ ಇಬ್ಬರು ಸೇರಿದಂತೆ 21 ಮಂದಿ ಸಾಧಕರಿಗೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಈ ಅತ್ಯುನ್ನತ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಕರ್ನಾಟಕದ ಹಾಲಕ್ಕಿ, ಬುಡಕಟ್ಟು ಸಮುದಾಯದ ಮಹಿಳೆ ತುಳಸೀಗೌಡ ಅವರಿಗೆ ಸಮಾಜಸೇವೆ ಹಾಗೂ ಅರಣ್ಯರಕ್ಷಣೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಹಾಬಜ್ಜ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕದ ಈ ಇಬ್ಬರು ಸಾಧಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ 21 ಮಂದಿಗೆ ಅತ್ಯುನ್ನತ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ…

ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ‌ಮಾಡಿದ ಗಡ್ಗರಿ

ಬೆಂಗಳೂರು: 

ಎಲೆಕ್ಟ್ರಾನಿಕ್, ತಾಂತ್ರಿಕತೆ, ವಿಜ್ಞಾನ ಸೇರಿದಂತೆ ಆಧುನಿಕ ಭಾಷೆಗಳಲ್ಲಿ ಬೆಂಗಳೂರು ಇತರ ಎಲ್ಲಾ ನಗರಗಳಿಗಿಂತ ಮುಂದಿದೆ. ದೇಶದ ಇತರ ನಗರಗಳಿಗಿಂತ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ನಿರ್ಮಾಣ ಬೆಂಗಳೂರಿನಲ್ಲೇ ಆಗುತ್ತಿದೆ. ಇದೀಗ ಟಿವಿಎಸ್ ಸ್ಕೂಟರ್ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್ ಬಿಡುಗಡೆ ಮಾಡಿದರು. ಗಡ್ಕರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಸಾಥ್ ನೀಡಿದರು. ಟಿವಿಎಸ್ ಬಿಡುಗಡೆ ಮಾಡಿರುವ ನೂತನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ಬೆಂಗಳೂರು). ಸದ್ಯ ಬೆಂಗಳೂರು ನಗರದಲ್ಲಿ ಮಾತ್ರ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ.

ಟಿವಿಎಸ್ ಐಕ್ಯೂಬ್ ಇಲೆಕ್ಟ್ರಿಕ್ ಪರಿಸರ ಸ್ನೇಹಿ ಹಾಗೂ ಸಂಪರ್ಕಿತ, ಆರಾಮದಾಯಕ ಸ್ಕೂಟರ್ ಆಗಿದ್ದು, ಅತ್ಯಾಧುನಿಕ ಡ್ರೈವ್‍ಟ್ರೈನ್ ಹಾಗೂ ಮುಂದಿನ ಪೀಳಿಗೆಯ ಸ್ಮಾರ್ಟ್ ಕನೆಕ್ಟ್ ಪ್ಲಾ ಟ್‍ಫಾರಂನಿಂದ ಚಾಲಿತವಾಗಿದೆ. 5,000 ರೂಪಾಯಿ ನೀಡಿ ನೂತನ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು.

ಟಿವಿಎಸ್ ಮೋಟಾರ್ ಕಂಪನಿಯ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಇದಾಗಿದೆ. ಪ್ರತಿ ತಿಂಗಳು 1000 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಮಾಡಲು ಟಿವಿಎಸ್ ನಿರ್ಧರಿಸಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 75 ಕಿ.ಮೀ ಮೈಲೇಜ್ ನೀಡಲಿದೆ. ಸ್ಕೂಟರ್ ಗರಿಷ್ಠ ವೇಗ 78 KMPH.

ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಫಾಸ್ಟ್ ಚಾರ್ಜಿಂಗ್ ಲಭ್ಯವಿಲ್ಲ. ಸಂಪೂರ್ಣ ಚಾರ್ಜ್‌ಗೆ 5 ಗಂಟೆ ಸಮಯ ತೆಗೆದುಕೊಳ್ಳುತ್ತದೆ. 6 bhp ಪವರ್ ಹಾಗೂ 140 Nm ಪೀಕ್ ಟಾರ್ಕ್ ಉತ್ಪಾದಿಸಿಬಲ್ಲ ಸಾಮರ್ಥ್ಯ ಹೊಂದಿದೆ.

ಕೆಪಿಸಿಸಿ ಗದ್ದುಗೆಗೆ ಡಿಕೆಶಿ ಪಟ್ಟು

ನವದೆಹಲಿ/ಬೆಂಗಳೂರು: ಶತಾಯಗತಾವಾಗಿ ಕೆಪಿಸಿಸಿ ಅಧ್ಯಕ್ಷ ಕುರ್ಚಿ ಮೇಲೆ ಕೂರಲು ಕಸರತ್ತು ನಡೆಸಿರುವ ಡಿಕೆ ಶಿವಕುಮಾರ್ ಮಧ್ಯಪ್ರದೇಶದ ಬಗಲಾಮುಖಿಗೆ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ದೆಹಲಿ ವಿಮಾನ ಏರಿದ್ದು, ಶನಿವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಜತೆ ಮಾತುಕತೆ ನಡೆಸಿದರು.

ವೇಣುಗೋಪಾಲ್ ಭೇಟಿ ಬಳಿಕ ಡಿಕೆಶಿ ಹೇಳಿದ್ದೇನು..?


ಯಾರನ್ನು ಭೇಟಿಯಾಗಲು ದೆಹಲಿ ಬಂದಿಲ್ಲ ಎನ್ನುತ್ತಲೇ ಶನಿವಾರ ಬೆಳಗ್ಗೆ ಎಐಸಿಸಿ ಕಚೇರಿಗೆ ಭೇಟಿ ನೀಡಿ. ವೇಣುಗೋಪಾಲ್ ಜತೆ 10 ನಿಮಿಷ ಮಾತುಕತೆ ನಡೆಸಿದರು.

ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಟಿಯೇ ಬೇಡ ಎಂದು ಪಟ್ಟು ಹಿಡಿದಿರುವ ಡಿಕೆಶಿ, ಕಾರ್ಯಧ್ಯಕ್ಷರ ನೇಮಕದಿಂದಾಗುವ ದುಷ್ಟಪರಿಣಾಮಗಳನ್ನು ವೇಣುಗೋಪಾಲ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನುವ ಮಾಹಿತಿ ಉನ್ನತ ಮಾಹಿತಿಗಳಿಂದ ತಿಳಿದುಬಂದಿದೆ.

ಮೂರ್ನಾಲ್ಕು ಕಾರ್ಯಾಧ್ಯಕ್ಷರ ನೇಮಕದಿಂದ ಪಕ್ಷದ ಸಂಘಟನೆ ಕಷ್ಟ ಕಷ್ಟವಾಗುತ್ತದೆ.

ಕಾರ್ಯಾಧ್ಯಕ್ಷರ ಹುದ್ದೆಗಳು ಜಾಸ್ತಿಯದಂತೆ ಪವರ್ ಸೆಂಟರ್‌ಗಳು ಹೆಚ್ಚಾಗುತ್ತವೆ.

ಬಣ ರಾಜಕಾರಣ ಶುರು


ರಾಜಕಾರಣದಲ್ಲಿ ಯಾರ ಮೇಲೆ ಕೇಸ್ ಇಲ್ಲ ಹೇಳಿ.. ಈ ಬಗ್ಗೆ ಯೋಚನೆ ಅನಗತ್ಯ.

ಹೀಗೆ ಡಿಕೆ ಶಿವಕುಮಾರ್ ತಮ್ಮ ಅಭಿಪ್ರಾಯಗಳನ್ನು ವೇಣುಗೋಪಾಲ್ ಮುಂದೆ ಹೇಳಿದರು. ಬಳಿಕ ವೇಣುಗೋಪಾಲ್ ನಿಮ್ಮೆಲ್ಲಾ ಅಭಿಪ್ರಾಯವನ್ನು ಮೇಡಂಗೆ (ಸೋನಿಯಾ ಗಾಂಧಿ) ತಿಳಿಸುತ್ತೇನೆ ಎಂದು ಹೇಳಿ ತೆರಳಿದರು.

ಬೆಂಗಳೂರಿನಲ್ಲಿ ಸಿದ್ದು ಬಣದ ಸಭೆ:


ದೆಹಲಿಯಲ್ಲಿ ಡಿಕೆಶಿ ಬ್ಯಾಟಿಂಗ್ ಮಾಡುತ್ತಿದ್ದರೆ, ಇತ್ತ ಮಾಜಿ ಸಿದ್ದರಾಮಯ್ಯನವರ ತಂಡದಲ್ಲಿ ಗುರುತಿಸಿಕೊಂಡಿರುವ ನಾಯಕರು ಗುಪ್ತವಾಗಿ ಸಭೆ ನಡೆಸಿದ್ದಾರೆ.
ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಕಾಂಗ್ರೆಸ್‌ನಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಕಾರ್ಯಧ್ಯಕ್ಷರ ನೇಮಕವಾಗುತ್ತಾ ಅಥವಾ ಇಲ್ಲ ಎನ್ನುವುದನ್ನು ಕಾದು ನೋಡಬೇಕಿದೆ.