‘ನಾನು ಮತ್ತು ಗುಂಡ’ ಚಿತ್ರತಂಡ ಚಿತ್ರದ ಮತ್ತೊಂದು ಹಾಡನ್ನ ಬಿಡುಗಡೆಗೊಳಿಸಿದೆ.
ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್’ನಲ್ಲಿ ಬಿಡುಗಡೆಗೊಂಡ ಅಯ್ಯಯ್ಯೋ ರಾಮ ರಾಮ ಎಂಬ ಹಾಡು ಕ್ಯಾಚಿ ಲಿರಿಕ್ಸ್’ನಿಂದ ಈಗಾಗಲೇ ಚಿತ್ರ ಪ್ರೇಮಿಗಳಿಗೆ ಮನರಂಜನೆ ನೀಡುತ್ತಿದೆ. .
ಆಟೋ ಡ್ರೈವರ್ ಶಂಕರನ ಬೆನ್ಹತ್ತೋ ಗುಂಡ ಹಾಗೂ ಗುಂಡನ ಕಾಟ ತಡೆಯಲಾರದ ಶಂಕರನ ಪರಿಸ್ಥಿತಿ ಈ ಹಾಡಿನಲ್ಲಿ ತಿಳಿಹಾಸ್ಯದೊಂದಿದೆ ವ್ಯಕ್ತವಾಗಿದೆ. ಜೊತೆಗೆ ಜನಮೆಚ್ಚುಗೆಯನ್ನೂ ಪಡೆಯುತ್ತಿದೆ. ಕಾರ್ತಿಕ್ ಶರ್ಮಾ ಕಂಪೋಸ್ ಮಾಡಿರೋ ಕ್ಯಾಚಿ ಟ್ಯೂನ್’ಗೆ ರೋಹಿತ್ ರಮಣ್ ಅಷ್ಟೇ ಕ್ಯಾಚಿಯಾಗಿರೋ ಸಾಹಿತ್ಯವನ್ನ ಕಟ್ಟಿದ್ದಾರೆ. ಈ ಹಾಡು ಚಿತ್ರಪ್ರೇಮಿಗಳ ಹಾಗೂ ಶ್ವಾನ ಪ್ರೇಮಿಗಳ ಆಸಕ್ತಿಯನ್ನ ಮತ್ತಷ್ಟು ಹೆಚ್ಚಿಸುತ್ತಿದೆ.
ಅಂದಹಾಗೆ ಸೆನ್ಸಾರ್’ನಿಂದ ಶಬಾಶ್’ಗಿರಿ ಪಡೆದ ಚಿತ್ರತಂಡ ಉತ್ಸಾಹದ ಅಲೆಯಲ್ಲಿ ಮಿಂದೇಳುತ್ತಿದೆ.
‘ನಾನು ಮತ್ತು ಗುಂಡ’ ಚಿತ್ರದ ಮತ್ತೊಂದು ಹಾಡು ಬಿಡುಗಡೆ
ಮಕ್ಕಳ ಕೈ ಹಿಡಿದ ಖುರ್ಷಿದ್ ಫೌಂಡೇಶನ್
ತುಮಕೂರು: ಯಾವುದೇ ಒಬ್ಬ ವ್ಯಕ್ತಿಯು ಜೀವನದಲ್ಲಿ ತನ್ನ ಗುರಿಯನ್ನು ಮುಟ್ಟಲು ಶಿಕ್ಷಣವು ಪ್ರಮುಖ ಸಾಧನವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತೀಕ್ ತಿಳಿಸಿದರು.
ತುಮಕೂರು ನಗರದ ಪಿ.ಹೆಚ್.ಕಾಲೋನಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಖುರ್ಷಿದ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ನೋಟ್ ಬುಕ್ ಹಾಗೂ ಕಂಪ್ಯೂಟರ್ ವಿತರಣಾ ಕಾರ‍್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ವಿದ್ಯೆಯು ಸಾಧಕನ ಸ್ವತ್ತು. ಶಾಲೆಗೆ ಹೋಗುವ ಮೂಲಕ ಸತತ ಪರಿಶ್ರಮದಿಂದ ಸಾಧಿಸಿದಾಗ ಮಾತ್ರ ವಿದ್ಯೆ ನಮಗೆ ಒಲಿಯುತ್ತದೆ. ಇಂದಿನ ಮಕ್ಕಳೇ ನಾಳೆಯ ಭವ್ಯ ಭಾರತದ ಪ್ರಜೆಗಳು. ಕೆಲವರಿಗೆ ಶಾಲೆಗೆ ಹೋಗಲು ಆಸಕ್ತಿ ಇದ್ದರೂ ಅವಕಾಶ ಸಿಗುವುದಿಲ್ಲ. ಆದರೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ತಮಗೆ ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬೇಕು. ಇದರಿಂದ ಪೋಷಕರ ಆಸೆಗಳನ್ನು ಈಡೇರಿಸಲು ಸಾಧ್ಯವಾಗಲಿದೆ ಎಂದರು.
ವಿದ್ಯೆಗಾಗಿ, ಜ್ಞಾನಾರ್ಜನೆಗಾಗಿ ವಿದ್ಯಾರ್ಥಿಗಳು ವಿದೇಶಗಳಿಗೆ ಹೋದರೂ ತಪ್ಪಿಲ್ಲ. ಜ್ಞಾನವು ವಿಶಾಲವಾದುದು. ಅದನ್ನು ಪಡೆಯಲು ಎಲ್ಲರೂ ಮುಂದಾಗಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ವ್ಯಾಸಂಗ ಮಾಡುವ ಮೂಲಕ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವುದು ಶ್ಲಾಘನೀಯ ಎಂದರು.
ತುಮಕೂರು ಜಿಲ್ಲಾ ಪಂಚಾಯತ್ ಸಿಇಒ ಶುಭಾಕಲ್ಯಾಣ್ ಮಾತನಾಡುತ್ತಾ, ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಒಬ್ಬ ವ್ಯಕ್ತಿ ಇಂದು ರಾಜ್ಯ ಸರ್ಕಾರದ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಅವರ ಮರ‍್ಗರ‍್ಶನ ತಮಗೆಲ್ಲಾ ದಾರಿದೀಪ ಎಂದು ಬಣ್ಣಿಸಿದರು.
ವ್ಯಾಸಂಗದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಓದುವುದು ಬಿಟ್ಟರೆ ಯಾವುದೇ ಜವಾಬ್ದಾರಿ ಇರುವುದಿಲ್ಲ. ವಿದ್ಯಾರ್ಥಿ ಜೀವನವನ್ನು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಮೀಸಲಿಟ್ಟು ನಿಗಧಿತ ಗುರಿ ಮುಟ್ಟಲು ಸತತ ಪರಿಶ್ರಮಪಡಬೇಕೆಂದು ವಿದ್ಯರ‍್ಥಿಗಳಿಗೆ ಕರೆ ನೀಡಿದರು.
ಸರ‍್ವಜನಿಕ ಶಿಕ್ಷಣ ಇಲಾಖೆ ಉಪನರ‍್ದೇಶಕಿ ಕಾಮಾಕ್ಷಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಪ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸರ್ಕಾರಿ ಪೌಢಶಾಲೆಯ ಮುಖ್ಯ ಶಿಕ್ಷಕಿ ಅಸ್ಮಾ ತಬಸುಂ ಅವರು, ಶಾಲೆಗೆ ಸ್ವಂತ ಕಟ್ಟಡವಿಲ್ಲದೆ ವಕ್ಫ್ ಬೋರ್ಡ್ ಕಟ್ಟಡದಲ್ಲಿ ಕಳೆದ ೨೫ ವರ್ಷಗಳಿಂದ ನಡೆಸಲಾಗುತ್ತಿದ್ದು, ಆದಷ್ಟು ಬೇಗ ಶಾಲೆಗೆ ಸ್ವಂತ ನಿವೇಶನ ನೀಡುವಂತೆ ನೆರೆದಿದ್ದ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ತುಮಕೂರು ತಾಲ್ಲೂಕು ಕೋರ ಹೋಬಳಿ ಓಬಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ಉಚಿತ ನೋಟ್ಬುಕ್ ಹಾಗೂ ಕಂಪ್ಯೂರ‍್ಗಳನ್ನು ವಿತರಣೆ ಮಾಡಲಾಯಿತು.
ತುಮಕೂರು: ಮಹಿಳೆಯರಿಂದ ಅಜಾದಿ ಘೋಷಣೆ
Publicstory. in
ತುಮಕೂರು: ಕೇಂದ್ರ ಸರ್ಕಾರ ಸಮಾಜದಲ್ಲಿ ನೆಮ್ಮದಿಯಿಂದ ಬದುಕುತ್ತಿರುವ ಜನರ ನಡುವೆ ತಾರತಮ್ಯ ಹುಟ್ಟುಹಾಕುತ್ತಿದೆ. ಸಿಎಎ ಮತ್ತು ಎನ್.ಸಿ.ಆರ್ ಕಾಯ್ದೆಗಳನ್ನು ಜಾರಿಗೆ ತಂದು ಇಡೀ ದೇಶದ ಜನರನ್ನು ಅನುಮಾನದಿಂದ ನೋಡುತ್ತಿದೆ. ಇದರ ವಿರುದ್ಧ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿದ್ದು ಜನ ಬೀದಿಗೆ ಇಳಿದಿದ್ದಾರೆ. ಕೇಂದ್ರ ಸರ್ಕಾರ ಧರ್ಮಾಧಾರಿತ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ನಾಯಕಿ ಕೆ.ಎಸ್. ವಿಮಲ ಹೇಳಿದರು.
ತುಮಕೂರು ನಗರದ ಟೌನ್ ಹಾಲ್ ನಲ್ಲಿ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಸಿಎಎ, ಎನ್.ಆರ್.ಸಿ. ಎನ್.ಪಿಆರ್ ವಿರುದ್ದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಹೊಸದೇನೋ ಕಾಯ್ದೆಗಳನ್ನು ತಂದು ಜನರಿಗೆ ಎಬಿಸಿಸಡಿ ಕಲಿಸಲು ಹೊರಟಿದೆ. ಅದರ ಬದಲಿಗೆ ನಾವು ಎಕ್ಸ್ ವೈ ಝಡ್ ಹೇಳಿಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಧರ್ಮ, ಜಾತಿ, ಭಾಷೆ, ಲಿಂಗ ಮತ್ತು ವರ್ಗದ ಬೇಧವಿಲ್ಲದೆ ನಮ್ಮ ಸಂವಿಧಾನವನ್ನು ನಾವೇ ಒಪ್ಪಿಕೊಂಡು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಇಂತಹ ಸಂವಿಧಾನಕ್ಕೆ ಅಪಾಯ ಬಂದಿದೆ. ಕೇಂದ್ರ ಸರ್ಕಾರ ಎನ್ಆರ್.ಸಿ ಮತ್ತು ಸಿಎಎ ಕಾಯ್ದೆಯನ್ನು ಜಾರಿಗೆ ತಂದು ಜನರನ್ನು ಅನುಮಾನದಿಂದ ನೋಡುತ್ತಿದೆ ಎಂದು ಟೀಕಿಸಿದರು.
ವಿದ್ಯಾರ್ಥಿ ಸಮುದಾಯ ಸೇರಿದಂತೆ ಎಲ್ಲರೂ ಬೀದಿಗೆ ಇಳಿದಿದ್ದಾರೆ. ಯಾವುದೇ ಕಾರಣಕ್ಕೂ ಈ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳಬಾರದು. ಸಂವಿಧಾನವನ್ನು ರಕ್ಷಿಸಲು ಪ್ರಾಣವನ್ನೇ ಅರ್ಪಿಸಲು ಸಿದ್ದರಿದ್ದೇವೆ. ಇದರ ಜೊತೆಗೆ ಎಕ್ಸ್ ಮತ್ತು ವೈ ಜೊತೆಯಲ್ಲಿ ಬದುಕುತ್ತಿದ್ದಾರೆ. ಅವರು ಸರ್ಕಾರದ ಮುಂದೆ ಯಾವುದೇ ಬೇಡಿಕೆಗಳನ್ನು ಕೇಳುತ್ತಿಲ್ಲ. ಎಕ್ಸ್ ವೈ ಬದುಕಲು ಜಾಗ ಕೇಳುತ್ತಿದ್ದೇವೆ. ನಾವು ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿಲ್ಲ. ನಮ್ಮ ಸಂವಿಧಾನಬದ್ದ ಹಕ್ಕುಗಳನ್ನು ಕೇಳುತ್ತಿದ್ದೇವೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಎಕ್ಸ್ ವೈ ಸೇರಿದರೆ ಭಾರತೀಯರು. ಇಂತಹ ಸಮುದಾಯ ಒಟ್ಟಾಗಿ ಬದುಕಲು ಅವಕಾಶ ಕೊಟ್ಟರೆ ಸಾಕು. ಅದು ಬಿಟ್ಟು ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈಹಾಕಬಾರದು. ಇದಕ್ಕೆ ಅವಕಾಶ ನೀಡಿದರೆ ಎಕ್ಸ್ ವೈ ಸೇರಿ ದೇಶದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತೇವೆ. ನೋಟು ಅಮಾನ್ಯೀಕರಣದ ನಂತರ ಜನರು ನರಕ ಸದೃಶ ಜೀವನ ಸಾಗಿಸುವಂತಹ ಪರಿಸ್ಥಿತಿ ಬಂದಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ದೂರಿದರು.
ಮಹಾನಗರ ಪಾಲಿಕೆ ಸದಸ್ಯೆ ಫರೀದಾ ಬೇಗಂ ಮಾತನಾಡಿ ಕೇಂದ್ರ ಸರ್ಕಾರ ಧರ್ಮದ ಆಧಾರದ ಮೇಲೆ ಎನ್.ಆರ್.ಸಿ ಜಾರಿ ಮಾಡಲು ಹೊರಟಿದೆ. ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಎಐಎಂಎಸ್ಎಸ್ ಉಪಾಧ್ಯಕ್ಷೆ ಹರಿಣಿ ಆಚಾರ್ಯ ಮಾತನಾಡಿ, ದೇಶದಲ್ಲಿ ವೇಶ್ಯೆಯರು, ದೇವದಾಸಿಯರು ವಿಧವೆಯರ ಮಕ್ಕಳು ಯಾವ ದಾಖಲೆಗಳನ್ನು ತೋರಿಸಲು ಸಾಧ್ಯ. ಅದಿವಾಸಿ ಜನರು, ನೆರೆ ಸಂತ್ರಸ್ಥರು ಎಲ್ಲಿಂದ ದಾಖಲೆ ತರುತ್ತಾರೆ ಎಂದು ಪ್ರಶ್ನಿಸಿದರು.
ಮಹಿಳಾ ನಾಯಕಿ ಶೀಮಾ ಮೊಹಸೀನ್ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂವಿಧಾನದ 14, 21 ಮತ್ತು 25ನೇ ಆರ್ಟಿಕಲ್ ಗಳು ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಎನ್ಆರ್ ಸಿಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಾ.ಹ.ರಮಾಕುಮಾರಿ, ಮಹಿಳಾ ನಾಯಕಿ ಝೈನಬ್ ಮೊಹಮ್ಮದಿ, ಭಾರತೀಯ ಮಹಿಳಾ ಒಕ್ಕೂಟ ಸಂಚಾಲಕಿ ಭಾರತಿ, ಹರ್ಷಿಯಾ ಹರ್ಷಫ್ ಮೊದಲಾದವರು ಮಾತನಾಡಿದರು.
ಎಐಎಂಎಸ್ಎಸ್ ನ ಎಂ.ವಿ.ಕಲ್ಯಾಣಿ ಕಾರ್ಯಕ್ರಮ ನಿರೂಪಿಸಿದರು. ಫರಿದಾ ಬೇಗಂ ಸ್ವಾಗತಿಸಿದರು. ಆಶ್ವಿನಿ, ಶಮಾ ರಾಷ್ಟ್ರಗೀತೆ ಹಾಡಿದರು. ಅಜಾದಿ ಘೋಷಣೆಗಳು ಕಾರ್ಯಕ್ರಮದಲ್ಲಿ ಮೊಳಗಿದವು. ಸಾರೆ ಜಹಾ ಸೆ ಅಚ್ಚ ಹಾಡು ಹಾಡಲಾಯಿತು.
ಎಸ್.ಎಂ.ಕೃಷ್ಣ ಭೇಟಿ ರಾಜಕೀಯವಲ್ಲ: ಡಿಕೆಶಿ
ಬೆಂಗಳೂರು:
ಎಸ್.ಎಂ ಕೃಷ್ಣ ಅವರ ಭೇಟಿ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜತೆ ಇಂದು ಮಾತನಾಡಿದ ಅವರು, ‘ನನ್ನ ಹಾಗೂ ಕೃಷ್ಣ ಅವರ ಸಂಬಂಧ ಎಲ್ಲರಿಗೂ ತಳಿದೆ ಇದೆ. ಮಕರ ಸಂಕ್ರಾತಿ ಹಬ್ಬದ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿ ಶುಭ ಕೋರಿ, ಅವರಿಂದ ಆಶೀರ್ವಾದ ಪಡೆದಿದ್ದೇನೆ. ಅಷ್ಟು ಬಿಟ್ಟರೆ ಬೇರೆ ಏನೂ ಇಲ್ಲ ಎಂದರು.
ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ದಿನೇಶ್ ಗುಂಡೂರಾವ್ ಅವರು ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆ ಹೈ ಕಮಾಂಡ್ ಬಳಿ ಮಾತನಾಡಲಿ. ನನ್ನ ಪ್ರಕಾರ ಅವರ ಸ್ಥಾನ ಇನ್ನು ಖಾಲಿ ಇಲ್ಲ. ಅವರ ರಾಜೀನಾಮೆ ವಿಚಾರವಾಗಿ ಪಕ್ಷದವರು ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ಪಕ್ಷದಲ್ಲಿ ಅವರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ.
ಸಿಎಂ ಯಡಿಯೂರಪ್ಪ ಹಾಗೂ ಮಠಾಧೀಶರ ನಡುವಣ ಮಾತುಕತೆಗೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗ ಅದೇ ಕಾರ್ಯಕ್ರಮಕ್ಕಾಗಿ ಹರಿಹರಕ್ಕೆ ಹೋಗುತ್ತಿದ್ದೇನೆ. ಅವರ ನಡುವೆ ಏನು ಮಾತುಕತೆ ಆಗಿದೆಯೋ ಗೊತ್ತಿಲ್ಲ.
ಯಡಿಯೂರಪ್ಪ ಅವರು ಮಠಾಧೀಶರಿಗೆ ಏನು ಮಾತು ಕೊಟ್ಟಿದ್ದರೋ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಜನರಿಗೆ, ಮಠಾಧೀಶರಿಗೆ ಮಾತು ಕೊಟ್ಟಿರಬಹುದು. ಯಾರು ಯಾವಾಗ ಏನು ಮಾತು ಕೊಟ್ಟಿರುತ್ತಾರೆ ಎಂದು ಗೊತ್ತಿಲ್ಲ. ಆ ವಿಚಾರದಲ್ಲಿ ನಾವ್ಯಾಕೆ ಮಧ್ಯ ಪ್ರವೇಶಿಸಬೇಕು? ಆಂತರಿಕವಾಗಿ ಅವರು ಏನು ಮಾತನಾಡಿಕೊಂಡಿದ್ದಾರೋ ನಮಗೆ ಗೊತ್ತಿಲ್ಲ. ಅವರ ನಡುವಿನ ಸಮಸ್ಯೆ ಅವರು ಬಗೆಹರಿಸಿಕೊಳ್ಳುತ್ತಾರೆ. ಹೀಗಾಗಿ ಅದರ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ. ಅದರ ಅವಶ್ಯಕತೆ ನನಗೆ ಇಲ್ಲ ಎಂದರು.
ಸಂಕ್ರಾತಿ ಎಂದರೆ ಹೀಗಿತ್ತು
ಧನಂಜಯ್ಯ ಕುಚ್ಚಂಗಿಪಾಳ್ಯ
ಸಂಕ್ರಾಂತಿ ಹಬ್ಬದ ಹೊತ್ತಿಗೆ ರೈತ ತಾನು ಬೆಳೆದ ಫಸಲುಗಳನ್ನೇಲ್ಲಾ ತಾನು ಬೆಳೆದ ಹೊಲದಿಂದ ತಂದು ಒಂದೆಡೆ ಮೂರ್ನಾಲ್ಕು ರೈತರು ಸಹಕಾರ ಮನೋಭಾವದಿಂದ ಸಂಗ್ರಹಿಸಿಟ್ಟು, ಹವಾಮಾನ ಬದಲಾವಣೆಗೆ ತಕ್ಕಂತೆ, ಈ ಸಂಕ್ರಾಂತಿ ಹಬ್ಬದ ನಂತರ ಮಾಗಿಯ ಚಳಿಯು ಕಡಿಮೆಯಾಗಿ ಬಿಸಿಲು ಜಾಸ್ತಿಯಾಗುವ ಈ ದಿನದ ಅವುಗಳನ್ನು ಕಣದಲ್ಲಿ ಹರಡಿ ಸುಲಭವಾಗಿ ಕಾಳುಗಳನ್ನು ಬೇರ್ಪಡಿಸುವುದಕ್ಕೆ ಕಾರ್ಯನ್ನೋಖನಾಗುತ್ತಿದ್ದಂತಹ ಸಕಾಲವಿದು.
ಅಂದು ರಾಸುಗಳನ್ನ ಸಿಂಗರಿಸಿ ಕಿಚ್ಚು ಹಾಯಿಸುವ ಸುಗ್ಗಿಯ ದಿನ. ಆದರೆ ಇದು ತಮಿಳುನಾಡಿಗೆ ಹೊಂದಿಕೊಂಡಂತೆ ಇರುವ ಕರ್ನಾಟಕದ ಪ್ರದೇಶಗಳಲ್ಲಿ ತುಂಬಾ ಪ್ರಸಿದ್ದಿಯಾದರೂ ಮಧ್ಯ ಕರ್ನಾಟಕದಲ್ಲಿ ಕಡಿಮೆಯೇ. ನಮಗೆಲ್ಲ ಈ ಹಬ್ಬದಂದೂ ರಾಸುಗಳ ಮೈ ತೊಳೆದು ಸಿಂಗರಿಸುವ ಸಡಗರ.ಹಿರಿಯರಿಗೆಲ್ಲಾ ಗಿಡದಿಂದ ಕಾಳುಗಳನ್ನು ಬೆರ್ಪಡಿಸಲು ಅಗತ್ಯವಿರುವ ಕಣ ಸಿದ್ದಪಡಿಸುವತ್ತ ಗಮನ.
ಸಣ್ಣವರಿದ್ದ ನಮಗೆ ಅಂದು ರಜೆಯ ದಿನವಾದ್ದರಿಂದ ಕಣ ಗಟ್ಟಿಯಾಗಿ ಮಾರ್ಪಾಡುವುದಕ್ಕೆ ಕುರಿ ಮಂದೆಯನ್ನೋ ಇಲ್ಲಾ ಐದಾರು ಮನೆಯ ದನಕರುಗಳನ್ನು ಹಿಡಿದು ತಂದು ಕಣದ ಒಳಗೆ ಓಡಾಡಿಸುವ ಕೆಲಸ ಹಚ್ಚುತ್ತಿದ್ದರು. ಈ ಹಬ್ಬದಲ್ಲಿ ಹವಾಗುಣಕ್ಕೆ ಅನಗುಣವಾಗಿ ದೇಹದ ಆರೋಗ್ಯಕ್ಕೆ ಅವಶ್ಯಕವಾದ ಅವರೆಕಾಯಿ ಮತ್ತು ಕಡಲೆಕಾಯಿಯನ್ನು ಉಪ್ಪು ಮಿಶ್ರಿತವಾಗಿ ಹದವಾಗಿ ಬೇಯಿಸಿ ಉಣ ಬಡಿಸುವ ಪರಿ ನಿಜಕ್ಕೂ ನಮ್ಮ ಹಿರಿಯರ ಅನುಭವದ ಸಂಶೋಧನೆ ಮೆಚ್ಚುವಂತದ್ದೆ.

ಆದರೆ ಇಂದು ಆ ಅವರೆಯ ಸೊಗಡು ಇಲ್ಲಾ ಕಡಲೆಕಾಯಿಯನ್ನು ಹುಡುಕಿ ತಂದು ತಿನ್ನುವ ಪರಿಸ್ಥಿತಿ ಬಂದೊದಿಗಿದೆ.ಜನಗಳಿಗೂ ಅಷ್ಟೇ ಸಂಕ್ರಾಂತಿಯೆಂದರೆ ಏನೂ ಒಂದು ಬಂದು ಹೋಗುವ ಹಬ್ಬವಾಗಿದೆಯೇ ಹೊರತು ಸಡಗರ ಸಂಭ್ರಮದ ಹಬ್ಬವಾಗಿ ಉಳಿದಿಲ್ಲ..ಸುಗ್ಗಿಯ ಹಬ್ಬವೆಸಿದರೂ ಜೀವಂತ ದನಕರುಗಳು ಕಡಿಮೆಯಾಗಿ ಯಾಂತ್ರಿಕ ವಸ್ತುಗಳೇ ತುಂಬಿ ಮನುಷ್ಯ ಸಂಬಂಧಗಳು ಇಲ್ಲವಾಗುತ್ತಿವೆ.
ಪ್ರಕೃತಿಯ ಬದಲಾವಣೆಯಾಗುವ ವಿರುದ್ಧ ದಿಕ್ಕಿನಲ್ಲಿ ಮಾನವನ ಮನಸ್ಥಿತಿಗಳು ಬದಲಾಗುತ್ತಿರುವ ಈ ದಿನಗಳಿಗೂ ತದ್ವಿರುದ್ಧ .
ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪ್ರೇಮಿಗಳು. ಯುವತಿ ಸಾವು
ತುರುವೇಕೆರೆ,: . ಪ್ರೀತಿಸುತ್ತಿದ್ದ ಜೋಡಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಇವರಲ್ಲಿ ಯುವತಿ ಪ್ರಾಣ ಕಳೆದುಕೊಂಡರೆ, ಯುವಕ ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಘಟನೆ ವರದಿಯಾಗಿದೆ.
ತಾಲೂಕಿನ ಗೋವಿಂದಘಟ್ಟದ ಪ್ರೇಮ್ ಕುಮಾರ್ (21) ಮತ್ತು ಮೊರಸನಕೊಟ್ಟಿಗೆಯ ಸಹನ (18) ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಪ್ರೇಮ್ ಕುಮಾರ್ ಪರಿಶಿಷ್ಠ ಜಾತಿ ಜನಾಂಗಕ್ಕೆ ಸೇರಿದವನಾಗಿದ್ದರೆ, ಯುವತಿ ಸಹನ ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿದ್ದಾಳೆ. ಪ್ರೇಮ್ ಕುಮಾರ್ ಇಲ್ಲಿಯ ಕೆಎಸ್ ಆರ್ ಟಿ ಸಿ ಡಿಪೋನಲ್ಲಿ ಮೆಕಾನಿಕ್ ಆಗಿ ಕರ್ತವ್ಯ ನಿರ್ವಸುತ್ತಿದ್ದರೆ, ಯುವತಿ ಇಲ್ಲಿಯ ಸರಸ್ವತಿ ಪ್ರೌಢಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು ಎನ್ನಲಾಗಿದೆ.
ತಮ್ಮ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸುವರು ಎಂಬ ಹೆದರಿಕೆಯಿಂದ ಪ್ರೇಮ್ ಕುಮಾರ್ ಮತ್ತು ಸಹನ ತಾಲೂಕಿನ ಕಂಚೀರಾಯಬೆಟ್ಟದ ತಪ್ಪಲಿಗೆ ತೆರಳಿ ಮಧ್ಯಾಹ್ನ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಕುಡಿದ ನಂತರ ಯುವತಿ ತನ್ನ ಸಂಬಂಧಿಕರಿಗೆ ಪೋನ್ ಮಾಡಿ ಕೊನೆಯದಾಗಿ ನಿಮ್ಮನ್ನು ನೋಡಬೇಕೆಂಬ ಆಸೆ ಇದೆಯೆಂದೂ, ಈರ್ವರೂ ವಿಷ ಕುಡಿದು ಕಂಚೀರಾಯಸ್ವಾಮಿ ತಪ್ಪಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ. ಆ ವೇಳೆ ಯುವಕ ಸಹ ಸಹನಳ ಸಂಬಂಧಿಕರ ಜೊತೆ ಮಾತನಾಡಿದ ಎಂದು ತಿಳಿದುಬಂದಿದೆ.
ಪ್ರೇಮ್ ಕುಮಾರ್ ಸಹ ತನ್ನ ಕುಟುಂಬದ ಸದಸ್ಯರೊಂದಿಗೆ ಫೋನಿನಲ್ಲಿ ಮಾತನಾಡಿ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ.
ಹುಡುಕಾಟ – ಸಹನ ಮತ್ತು ಪ್ರೇಮ್ ಕುಮಾರ್ ನೀಡಿದ ಮಾಹಿತಿಯನ್ನು ಅರಸಿ ಕಂಚೀರಾಯಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಎರಡೂ ಕುಟುಂಬದ ಸದಸ್ಯರು ಸುಮಾರು ಎರಡು ಗಂಟೆಗಳ ಕಾಲ ಹುಡುಕಾಡಿದ ನಂತರ ಅರೆಪ್ರಜ್ಞಾವಸ್ಥೆಯಲ್ಲಿದ್ದ ಇವರ ಕುರುಹು ಪತ್ತೆಯಾಗಿದೆ.
ಕೂಡಲೇ ಆಂಬ್ಯುಲೆನ್ಸ್ ನಲ್ಲಿ ಈರ್ವರನ್ನೂ ಸಕರ್ಾರಿ ಆಸ್ಪತ್ರೆಗೆ ಕರೆ ತರುವ ವೇಳೆಗಾಗಲೇ ಯುವತಿ ಸಹನ ಕೊನೆಯುಸಿರೆಳೆದಿದ್ದಳು. ಯುವಕ ಪ್ರೇಮ್ ಕುಮಾರ್ ನ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಡಾ.ಮುರುಳಿ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಪ್ರೇಮ್ ಕುಮಾರ್ ನ ಸ್ಥಿತಿ ಗಂಭೀರವಾಗಿದೆ.
ಮಹಿಳಾ ಆಯೋಗಕ್ಕೆ ಪ್ರತಿದಿನ 200 ದೂರು!
ತುಮಕೂರು: ಮಹಿಳಾ ಆಯೋಗಕ್ಕೆ ಬರುತ್ತಿರುವ ಸಮಸ್ಯೆಗಳನ್ನು ಗಮನಿಸಿದರೆ ಮಹಿಳೆಯರೂ ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲ ಎಸ್.ಕುಂದರ್ ತಿಳಿಸಿದರು.
ಮಹಿಳೆಯರಿಗೆ ಆಸ್ತಿ; ರಮೇಶ್ ಮಾತು
ತುಮಕೂರು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕಾನೂನುಗಳ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ಸಮ್ಯೆಗಳನ್ನು ಪರಾಮರ್ಶಿಸಿದಾಗ ಮಹಿಳೆಯರೂ ಪುರುಷರಂತೆ ಕಾನೂನುಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದರು.

ವಕೀಲ ಎಸ್.ರಮೇಶ್ ಅವರು ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕು ಕುರಿತಂತೆ ಮಾತನಾಡಿದರು.
ಅತ್ತೆ ಮಾವಂದಿರನ್ನು ಸೊಸೆ ತಂದೆ-ತಾಯಿಗಳಂತೆ ನೋಡಬೇಕು. ಹಾಗೆಯೇ ಅತ್ತೆ ಮಾವಂದಿರು ಸೊಸೆಯನ್ನು ತನ್ನ ಮಗಳು ಎಂಬ ಭಾವನೆಯಿಂದ ನೋಡಬೇಕು ಹಾಗಾದಾಗ ಮಾತ್ರ ಸಂಸಾರದಲ್ಲಿ ಸಂತೋಷ ಕಾಣಲು ಸಾಧ್ಯ ಎಂದು ವಿಶ್ಲೇಷಿಸಿದರು.
ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ಇರುತ್ತವೆ ಎನ್ನುತ್ತಾರೆ. ಅದು ಸತ್ಯ. ಭಾರತದಲ್ಲಿ ಮಹಿಳೆಗೆ ಗೌರವ ದೊರೆತಿದೆ. ಭೂಮಿಯನ್ನು ಮಾತೆಗೆ ಹೋಲಿಸಲಾಗಿದೆ. ಭಾರತಮಾತೆ ಕೂಡ ಒಬ್ಬ ಹೆಣ್ಣು, ದೇಶದಲ್ಲಿ ಹರಿಯುವ ಪ್ರತಿಯೊಂದು ನದಿಯೂ ಕೂಡ ಹೆಣ್ಣಿನ ಹೆಸರಿಂದ ಕೂಡಿದೆ. ಅಂದಾಗ ಹೆಣ್ಣಿಗೆ ಇರುವ ಮಹತ್ವ ತಿಳಿಯುತ್ತದೆ ಎಂದು ಹೇಳಿದರು.
ಹಿಂದೆ ಸಂಜೆಯ ವೇಳೆ ಮನೆಗಳಲ್ಲಿ ಭಜನೆಗಳು ಕೇಳಿಬರುತ್ತಿದ್ದವು. ಇಂದು ಅವು ಮಾಯವಾಗಿವೆ. ಆದುನಿಕ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಆದರೆ ಹೆಚ್ಚು ಬಳಕೆ ಇರಬಾರದು. ಇಂದು ಎಲ್ಲರೂ ಮೊಬೈಲ್ ಬಳಸುತ್ತಾರೆ. ಮನೆಯಲ್ಲೇ ಇರುವ ಮಗ-ಳನ್ನು ಕರೆಯಲೂ ಪೋನ್ ಮಾಡುವಂತಹ ಪರಿಸ್ಥಿತಿ ಬಂದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಿವಿಮಾತು ಹೇಳಿದರು.
ಮಹಿಳೆಗೆ ಆಗುತ್ತಿರುವ ಅನ್ಯಾಯವನ್ನು ನೋಡಿ ಸುಮ್ಮನೆ ಕೂರದೆ ಪ್ರತಿಭಟಿಸಬೇಕು. ಅನ್ಯಾಯಕ್ಕೊಳಗಾದವರ ದನಿಗೆ ದನಿಗೂಡಿಸಬೇಕು. ಇದು ಆಗದಿದ್ದರೆ ನಮ್ಮ ಮನೆಯಲ್ಲೂ ಅನ್ಯಾಯ ನಡೆಸುವ ಸಾಧ್ಯತೆ ಇದೆ. ಹಾಗಾಗಿ ಅಂಥವುಗಳನ್ನು ಪ್ರತಿಭಟಿಸಬೇಕು ಎಂದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಾತನಾಡಿ ಆಯೋಗಕ್ಕೆ ನಿತ್ಯವೂ 150-200 ಅರ್ಜಿಗಳು ಬರುತ್ತಲೇ ಇವೆ. ಅಂದರೆ ಸಮಸ್ಯೆಗಳು ಸಾಕಷ್ಟಿವೆ ಎಂಬುದನ್ನು ಇದು ತೋರಿಸುತ್ತದೆ. ನಾವು ಸುಮಾರು 9 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಿದ್ದೇವೆ. ಆದರೂ ಇನ್ನೂ ಅರ್ಜಿಗಳು ಇವೆ. ಪೊಲೀಸರು ನಮಗೆ ಸಹಕಾರ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ. ವೈ.ಎನ್.ಸಿದ್ದೇಗೌಡ ಮಾತನಾಡಿ, ಮಹಿಳೆಗೆ ಮೊದಲಿನಿಂದಲೂ ಸ್ಥಾನಮಾನವಿದೆ. ಗಾಂಧೀ ಅಂದೇ ಹೇಳಿದ್ದರು. ಪುರುಷನಿಗೆ ವಿದ್ಯಾಭ್ಯಾಸ ಕೊಟ್ಟರೆ, ಅವನು ಮಾತ್ರ ಅಭಿವೃದ್ಧಿಯಾಗುತ್ತಾನೆ. ಮಹಿಳೆಯರಿಗೆ ವಿದ್ಯಾಭ್ಯಾಸ ಕೊಟ್ಟರೆ ಇಡೀ ಕುಟುಂಬ ಮತ್ತು ಸಮುದಾಯ ಅಭಿವೃದ್ದಿಯಾಗುತ್ತದೆ. ಹಾಗಾಗಿ ಮಹಿಳೆಯರಿಗೆ ವಿದ್ಯೆ ಕೊಡಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಪುರುಷರಿಗೂ ಪ್ರಜ್ಞೆ ಬಂದಿದೆ. ಕುಟುಂಬದಲ್ಲಿ ಹೆಂಡತಿಯ ಒಪ್ಪಿಗೆ ಪಡೆಯದೇ ಒಂದು ನಿರ್ಧಾರವನ್ನೂ ಯಾವೊಬ್ಬ ಪುರುಷನೂ ತೆಗೆದುಕೊಳ್ಳುವುದಿಲ್ಲ. ಪತ್ನಿಯನ್ನು ಏಕವಚನದಲ್ಲಿ ಬೈದರೂ ಕೂಡ ಅವಳ ಒಪ್ಪಿಗೆ ಪಡೆದೇ ತೀರ್ಮಾನ ಮಾಡುವಂತ ಕಾಲ ಹಿಂದಿನಿಂದಲೂ ಇದೆ. ಅದು ಹೊರಗೆ ಮಾತ್ರ ಕಾಣುವುದಿಲ್ಲ ಎಂದರು.
ವಕೀಲ ಎಸ್.ರಮೇಶ್ ಅವರು ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕು ಕುರಿತಂತೆ ಸವಿಸ್ತಾರವಾಗಿ ಮಾತನಾಡಿದರು.
ಅತ್ಯಚಾರಿಗೆ 12 ವರ್ಷ ಸೆರೆವಾಸ
ತುಮಕೂರು:
ಅಂಗವಿಕಲ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿ ಗರ್ಭವತಿಯಾಗಲು ಕಾರಣನಾಗಿದ್ದ ಆರೋಪಿಗೆ ತುಮಕೂರು ಜಿಲ್ಲಾ ಅಧಿಕ ಸತ್ರನ್ಯಾಯಾಲಯ 12 ವರ್ಷ ಕಠಿಣ ಶಿಕ್ಷೆ ನೀಡಿ ತೀರ್ಪು ನೀಡಿದೆ.

ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೊರಟಗೆರೆ ಟೌನ್ ಕುಂಭಾರ ಬೀದಿ ಲೇಟ್ ಪುಟ್ಟಣ್ಣ ಎಂಬುವರ ಮಗ ಕೆ.ಪಿ. ಪ್ರಕಾಶ(35) ಶಿಕ್ಷೆಗೊಳಗಾದ ವ್ಯಕ್ತಿ.ಪ್ರಕಾಶ ತಮ್ಮ ಬೀದಿಯಲ್ಲೆ ವಾಸವಿಗಿದ್ದ 16 ವರ್ಷದ ಅಂಗವಿಕಲ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಾವತಿಯಾಗಲು ಕಾರಣನಾಗಿದ್ದ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಪೋಷಕರು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋದಾಗ ತಪಾಸಣೆ ನಡೆಸಿದ ಆಸ್ಪತ್ರೆ ವೈದ್ಯರು ಬಾಲಕಿ ಗರ್ಭವತಿಯಾಗಿರುವುದನ್ನು ದೃಡಪಡಿಸಿಕೊಂಡು ಸ್ಥಳಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶಮಂತಕ ಅವರು ಡಿಸೆಂಬರ್ 12, 2018ರಲ್ಲಿ ಸಂತ್ರಸ್ಥೆ ಪರವಾಗಿ ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕೇಸು ದಾಖಲಿಸಿಕೊಂಡ ಕೊರಟಗೆರೆ ಪೊಲೀಸ್ ಠಾಣಾ ಸಿಪಿಐ ಎಫ್.ಕೆ. ನದಾಫ್ ಅವರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಾಲಕಿ ಮೇಲೆ ಒಂದು ವರ್ಷಗಳ ನಿರಂತರ ಆತ್ಯಾಚಾರ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪ್ರಕಾಶನ ವಿರುದ್ಧ ನಧಾಫ್ ಅವರು ನ್ಯಾಯಾಲಯಕ್ಕೆ ದೋಶಾರೋಪ ಪಟ್ಟಿ ಸಲ್ಲಿಸಿದ್ದರು.

ವಾದ ವಿವಾದ ಆಲಿಸಿದ ತುಮಕೂರು ಜಿಲ್ಲಾ ಅಧಿಕ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಆರೋಪಿ ಪ್ರಕಾಶನಿಗೆ 12 ವರ್ಷ ಕಠಿಣ ಜೈಲು ಶಿಕ್ಷೆ, 5 ಸಾವಿರ ದಂಡ ವಿದಿಸಿ ತೀರ್ಪು ನೀಡಿದ್ದಾರೆ. ದಂಡ ಕಟ್ಟಲು ವಿಫಲವಾದಲ್ಲಿ 3 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ವಿದಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ವಿಶೇಷ ಅಭಿಯೋಜಕಿ ಗಾಯಿತ್ರಿರಾಜು ಸಂತ್ರಸ್ತೆ ಪರ ವಾದ ಮಂಡಿಸಿದ್ದರು.
ರಂಗೋಲಿ ಸ್ಪರ್ಧೆ
ಪಾವಗಡ: ಪಟ್ಟಣದ ಪುರಸಭೆ ಕಚೇರಿ ಮುಂಭಾಗ ಮಂಗಳವಾರ ಸಂಕ್ರಾಂತಿ ಪ್ರಯುಕ್ತ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರು, ಮಹಿಳೆಯರು ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಸಂಭ್ರಮಿಸಿದರು.
ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ, ಸಂಕ್ರಾತಿ ಸುಗ್ಗಿಯ ಹಬ್ಬ. ಗ್ರಾಮಿಣ ಭಾಗದಲ್ಲಿ ರೈತಾಪಿ ವರ್ಗವದವರು ಕಣದಲ್ಲಿ ಸಂಗ್ರಹಿಸಿರುವ ದವಸ, ಧಾನ್ಯ, ಬೆಳೆಗಳಿಗೆ ಪೂಜಿಸುವ ವಾಡಿಕೆ ಇದೆ. ಸ್ಥಳೀಯ ಕ್ರೀಡೆಗಳಲ್ಲಿ ಭಾಗವಹಿಸಿ ಐಕ್ಯತೆ ಸಾರುವ ಸಂದೇಶ ಹಬ್ಬದಲ್ಲಿದೆ ಎಂದರು.

ಪುರಸಭೆ ವತಿಯಿಂದ ಸ್ವಚ್ಚತೆ, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಲು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಸಾರ್ವಜನಿಕರು ಪುರಸಭೆಯ ಕಾರ್ಯಕ್ರಮಗಳಿಗೆ ಸಹಕಾರ ಕೊಟ್ಟು, ಪಟ್ಟಣದ ಸ್ವಚ್ಚತೆಗೆ ಸಹಕರಿಸಬೇಕು ಎಂದರು.
ಪುರಸಭೆ ಸದಸ್ಯ ಗೊರ್ತಿ ನಾಗರಾಜು, ಸಂಕ್ರಾಂತಿಯನ್ನು ಸುಗ್ಗಿ ಹಬ್ಬವಾಗಿ ರೈತರು ಆಚರಿಸುತ್ತಾರೆ. ಎಳ್ಳು ಬೆಲ್ಲ ತಯಾರಿಸಿ ಮನೆ ಮನೆಗೆ ಹಂಚಿ ಸೌಹಾರ್ಧತೆ ಮೆರೆಯುವ ಹಬ್ಬ. ಬೇಧ ಭಾವ ಮರೆತು ಶಾಂತಿಯುತ ಜೀವನ ನಡೆಸಬೇಕು ಎಂದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭಾರತಿ, ಎನ್.ಮಂಜುಳಾ, ದ್ವಿತೀಯ ಸ್ಥಾನ ಭಾಗ್ಯಶ್ರೀ, ಸುಜಾತ, ತೃತೀಯ ಸ್ಥಾನ ಪಡೆದ ಸುಜಾತ, ಸೌಭಾಗ್ಯಮ್ಮ ಅವರಿಗೆ ಬಹುಮಾನ ವಿತರಿಸಲಾಯಿತು.
ಪುರಸಭೆಯ ಸದಸ್ಯ ರಾಮಂಜಿನಪ್ಪ, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂಶಶಿಕಿರಣ್, ಬ್ರೈಟ್ ಪ್ಯುಚರ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಗುಪ್ತ, ರೋಟರಿ ಸಂಸ್ಥೆಯ ನಿರ್ದೇಶಕ ಕಿರಣ್, ಅಂತರಗಂಗೆ ಶಂಕರಪ್ಪ ಉಪಸ್ಥಿತರಿದ್ದರು.
ತುಮಕೂರಿನ ಕೀರ್ತಿ ಹೆಚ್ಚಿಸಿದ ಪ್ರೊ.ಶ್ರೀನಿವಾಸ್
Publicstory. in
ತುಮಕೂರು: ಕೇರಳದ ಕೋಝಿಕೋಡ್ ನಲ್ಲಿ ಜನವರಿ 10 ರಿಂದ 12ರವರೆಗೆ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಫ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ನಾಲ್ವರ ತಂಡ ಎರಡು ಸ್ಪರ್ಧೆಗಳಲ್ಲಿ ಬೆಳ್ಳಿಪದಕ ಮತ್ತು ವ್ಯಕ್ತಿಗತವಾಗಿ ಕಂಚಿನ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ.
ಕರ್ನಾಟಕದ ತುಮಕೂರು ಜಿಲ್ಲೆಯಿಂದ ಶ್ರೀನಿವಾಸ್ ಬಿ (ತುಮಕೂರು), ಜೋಷಿ, ಪದ್ಮನಾಭ, ರಾಜಮೋನಿ (ದಕ್ಷಿಣ ಕನ್ನಡ) ಅವರು 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿಪದಕ ಪಡೆದಿದ್ದಾರೆ.

ರಾಜ್ಯಪ್ರತಿನಿಧಿಸಿದ್ದ ತಂಡ. ಮುಂದೆ ಇರುವವರು ಶ್ರೀನಿವಾಸ್
ರಾಜ್ಯದ ಶ್ರೀನಿವಾಸ್ ಬಿ (ತುಮಕೂರು), ಹನುಮಂತಪ್ಪ (ಚಿತ್ರದುರ್ಗ), ಜೋಷಿ (ದಕ್ಷಿಣ ಕನ್ನಡ), ಮೋನಪ್ಪ (ಮೈಸೂರು) ಇವರು 4X400 ಮೀಟರ್ ರಿಲೇ ಓಟ ಸ್ಪರ್ಧೆಯಲ್ಲಿ ಪಾಲ್ಗೊಂಡು ಬೆಳ್ಳಿಪದಕ ಗಳಿಸಿದ್ದಾರೆ.
ವಿಶೇಷವಾಗಿ 400 ಮೀಟರ್ ಅಡೆತಡೆ ಓಟ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ತುಮಕೂರಿನ ಬಿ.ಶ್ರೀನಿವಾಸ್ ಅವರು ಕಂಚಿನ ಪದಕವನ್ನು ಪಡೆದು ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇವರೆಲ್ಲರೂ ಮಾರ್ಚ್ ತಿಂಗಳಲ್ಲಿ ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಶ್ರೀನಿವಾಸ ಬಿ ಇವರು ಪಾವಗಡ ತಾಲೂಕು ವೈ.ಎನ್. ಹೊಸಕೋಟೆಯವರಾಗಿದ್ದು ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
