Tuesday, February 24, 2026
Google search engine
Home Blog Page 299

Tumukuru: ಮೋದಿ ಆಗಮನ – ಸಂಚಾರ ವ್ಯವಸ್ಥೆ ಬದಲಾವಣೆ

Publicstory. In


ತುಮಕುರು: ಪ್ರಧಾನಮಂತ್ರಿ ನರೇಂದ್ರಮೋದಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜನಸಂದಣಿ ಮತ್ತು ವಾಹನಗಳ ಸಂಚಾರ ದಟ್ಟಣೆಯಾಗುವುದರಿಂದ ಜ. 2ರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ಕಡೆಯಿಂದ ಆಗಮಿಸುವ ವಾಹನಗಳು


ಕ್ಯಾತ್ಸಂದ್ರ-ಬೈಪಾಸ್-ಹನುಮಂತಪುರ-ಕೋತಿತೋಪು-ಅಮಾನಿಕೆರೆ-ಕೋಡಿಸರ್ಕಲ್ (ಪ್ರಮಾಣಿಕರು ಹತ್ತುವ/ ಇಳಿಯುವ ಸ್ಥಳ)ಗಾರ್ಡನ್ ರಸ್ತೆ-ಗುಬ್ಬಿ ಗೇಟ್ ಮುಖಾಂತರ ಶಿವಮೊಗ್ಗ ಕಡೆ ಚಲಿಸುವುದು.

ಬೆಂಗಳೂರು ಕಡೆಯಿಂದ ಆಗಮಿಸಿ ಶಿರಾ ಕಡೆ ತೆರಳುವ ವಾಹನಗಳು


ಕ್ಯಾತ್ಸಂದ್ರ-ಬೈಪಾಸ್-ಹನುಮಂತಪುರ-ಕೋತಿತೋಪು-ಅಮಾನಿಕೆರೆ-ಕೋಡಿಸರ್ಕಲ್(ಪ್ರಮಾಣಿಕರು ಹತ್ತುವ/ಇಳಿಯುವ ಸ್ಥಳ) ರಸ್ತೆ-ಶಿರಾ ಗೇಟ್ ಮೂಲಕ ಎನ್‍ಎಚ್-48ಗೆ ಚಲಿಸುವುದು.
ಶಿವಮೊಗ್ಗ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ಗುಬ್ಬಿ ಗೇಟ್-ಕಾಲ್‍ಟೆಕ್ಸ್-ಬಸ್‍ನಿಲ್ದಾಣ-ಕೋತಿತೋಪು-ಹನುಮಂತಪುರ ಬೈಪಾಸ್ ಮುಖಾಂತರ ಎನ್‍ಎಚ್-48ರಲ್ಲಿ ಬೆಂಗಳೂರು ಕಡೆಗೆ ಚಲಿಸುವುದು.

ಶಿರಾ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು


ಶಿರಾ ಗೇಟ್-ಕೋಡಿ ಸರ್ಕಲ್-ಅಮಾನಿಕೆರೆ (ಪ್ರಮಾಣಿಕರು ಹತ್ತುವ/ಇಳಿಯುವ ಸ್ಥಳ)-ಕೋತಿತೋಪು-ಹನುಮಂತಪುರ ಬೈಪಾಸ್ ಮುಖಾಂತರ ಎನ್‍ಎಚ್-48ರಲ್ಲಿ ಬೆಂಗಳೂರು ಕಡೆಗೆ ಚಲಿಸುವುದು.
ಕುಣಿಗಲ್ ರಸ್ತೆ ಮೂಲಕ ಆಗಮಿಸುವ ವಾಹನಗಳು ಕುಣಿಗಲ್ ಸರ್ಕಲ್-ಬಸ್‍ನಿಲ್ದಾಣ-ಕಾಲ್‍ಟೆಕ್ಸ್- ಕುಣಿಗಲ್ ಸರ್ಕಲ್ ಮೂಲಕ ಕುಣಿಗಲ್ ಕಡೆಗೆ ಚಲಿಸುವುದು.

ತುಮಕೂರು-ಬೆಂಗಳೂರು ವಾಹನಗಳು ತುಮಕೂರು ಬಸ್ ನಿಲ್ದಾಣದಿಂದ ಚರ್ಚ್ ಸರ್ಕಲ್-ಅಮಾನಿಕೆರೆ-ಹನುಮಂತಪುರ ಬೈಪಾಸ್ ಮುಖಾಂತರ ಎನ್‍ಎಚ್-48ರಲ್ಲಿ ಬೆಂಗಳೂರು ಕಡೆಗೆ ಚಲಿಸುವುದು.

ಸದರಿ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ವತಿಯಿಂದ ಒಟ್ಟು 400 ಬಸ್‍ಗಳನ್ನು ನಿಯೋಜಿಸಿರುವುದರಿಂದ ಸದರಿ ದಿನದಂದು ಸಾರಿಗೆಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವ ಸಂಭವವಿದೆ. ಸಾರ್ವಜನಿಕ ಪ್ರಯಾಣಿಕರು ಲಭ್ಯವಿರುವ ಸಾರಿಗೆಗಳನ್ನು ಉಪಯೋಗಿಸಿಕೊಂಡು ಪ್ರಯಾಣಿಸಿ ಸಹಕರಿಸಬೇಕೆಂದು ಪ್ರಕಟಣೆ ಮನವಿ ಮಾಡಿದೆ.

ಉಪ ಮುಖ್ಯಮಂತ್ರಿ ವಿರುದ್ಧ ಸಹಿ ಸಂಗ್ರಹ ಇಲ್ಲ

ತುಮಕೂರು: ಉಪಮುಖ್ಯಮಂತ್ರಿಯ ವಿರುದ್ಧ ಸಹಿ ಸಂಗ್ರಹವನ್ನು ಮಾಡಿಲ್ಲ, ಮಾಡುತ್ತಿದ್ದೇನೆಂದು ಅಧಿಕೃತವಾಗಿ ಮಾಧ್ಯಮಗಳ ಮುಂದೆಯೂ ಹೇಳಿಲ್ಲ ಎಂದು ಶಾಸಕ ರೇಣುಕಾಚಾರ್ಯ ಸ್ಪಷ್ಟಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಉಪಮುಖ್ಯಮಂತ್ರಿಗಳ ವಿರುದ್ದ ಸಹಿ ಸಂಗ್ರಹ ನಡೆದಿರುವ ಬಗ್ಗೆಯೂ ಮಾಹಿತಿ ಇಲ್ಲ. ನಾನು ಯಾರ ವಿರುದ್ದವೂ ಇಲ್ಲ. ಆದರೆ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಕಾರ್ಯಕರ್ತರ ಭಾವನೆಗಳನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇನೆ. ವಿಷಯ ಎಲ್ಲಿಗೆ ಮುಟ್ಟಬೇಕೋ ಅಲ್ಲಿಗೆ ತಲುಪಿದೆ ಎಂದು ಹೇಳಿದರು.

ಹದಿನೈದು ದಿನಗಳ ಹಿಂದೆ ದಾವಣಗೆರೆ ಮತ್ತು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ವಿರುದ್ಧ ಶಾಸಕರ ಅಭಿಪ್ರಾಯಗಳನ್ನು ಬಹಿರಂಗಪಡಿಸಿದ್ದೆ. ಅವು ನನ್ನ ಅಭಿಪ್ರಾಯಗಳಾಗಿರಲಿಲ್ಲ. ಮುಖ್ಯಮಂತ್ರಿಗಳು ನನಗೆ ಬೆಂಬಲವನ್ನು ವ್ಯಕ್ತಪಡಿಸಿಲ್ಲ. ಸಹಿ ಸಂಗ್ರಹ ಮಾಡಿಲ್ಲವೆಂದ ಮೇಲೆ ಆ ಪ್ರಶ್ನೆ ಎಲ್ಲಿ ಬಂತು ಎಂದು ತಿಳಿಸಿದರು.

ಬಹುತೇಕ ಶಾಸಕರು ಮತ್ತು ಕಾರ್ಯಕರ್ತರ ಅಭಿಪ್ರಾಯಗಳನ್ನು ನಳಿನ್ ಕುಮಾರ್ ಕಟೀಲ್ ಅವರ ಮೂಲಕ ಎಲ್ಲಿಗೆ ತಲುಪಬೇಕೋ ಅಲ್ಲಿಗೆ ಹೋಗಿ ತಲುಪಿವೆ. ಸಮರ್ಥ ಮುಖ್ಯಮಂತ್ರಿ ಇದ್ದಾರೆ. ಅವರಿದ್ದಾ ಉಪಮುಖ್ಯಮಂತ್ರಿ ಬೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಅದನ್ನಷ್ಟೇ ವ್ಯಕ್ತಪಡಿಸಿದ್ದೇನೆ. ನಾನು ಸಹಿ ಸಂಗ್ರಹ ಮಾಡಿಯೂ ಇಲ್ಲ. ಮಾಡುವಂತೆ ಹೇಳಿಯೂ ಇಲ್ಲ ಎಂದು ಪುನರುಚ್ಚರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರೈತರ ಸಮಾವೇಶದಲ್ಲಿ 14 ಪುರುಷರು ಮತ್ತು 16 ಮಂದಿ ಮಹಿಳಾ ರೈತರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ತುಮಕೂರು ಕಾರ್ಯಕ್ರಮ ಅಭೂತಪೂರ್ವವಾಗಿ ನೆರವೇರಲಿದೆ ಎಂದರು.

ತುಮಕೂರಿಗೆ PM: ಕಟ್ಟೆಚ್ಚರ

ತುಮಕೂರು: ಹೊಸ ವರ್ಷದ 2ನೇ ದಿನವೇ ಪ್ರಧಾನಿ ನರೇಂದ್ರ ಮೋದಿ ತುಮಕೂರು ನಗರಕ್ಕೆ ಭೇಟಿ ನೀಡುತ್ತಿದ್ದು ವ್ಯಾಪಕ ಬಂದೋಬಸ್ತ್ ಹಾಕಲಾಗಿದೆ. ನಗರದ ಎಲ್ಲ ಕಡೆ ಪೊಲೀಸರು ಕಂಡುಬರುತ್ತಿದ್ದಾರೆ.

ಸಿದ್ದಗಂಗಾ ಮಠಕ್ಕೆ ಪ್ರಧಾನಿ ಮೊದಲು ಆಗಮಿಸಿ ಅಲ್ಲಿಯೇ ಸ್ವಲ್ಪಕಾಲ ವಿದ್ಯಾರ್ಥಿಗಳಿಗೆ ಭಾಷಣ ಮಾಡಲಿರುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಬೆಟ್ಟದ ಮೇಲೆ ವಿಶೇಷ ರಕ್ಷಣ ಪಡೆ (ಎಸ್.ಪಿ.ಜಿ)ಯ ಯೋಧರು ಕಾವಲು ಕಾಯುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಈಗಾಗಲೇ ಇಡೀ ನಗರ ಎಸ್.ಪಿ.ಜಿ ಕಮಾಂಡೋಗಳ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಅಶೋಕ ರಸ್ತೆ, ಕುಣಿಗಲ್ ರಸ್ತೆ, ಸೋಮೇಶ್ವರಂ ಮುಖ್ಯರಸ್ತೆ, ಬಟವಾಡಿ, ಕ್ಯಾತ್ಸಂದ್ರ, ರಿಂಗ್ ರಸ್ತೆ, ಕೋತಿ ತೋಪು, ತುಮಕೂರು ವಿವಿ ಆವರಣ ಹೀಗೆ ಎಲ್ಲ ಕಡೆ ಪೊಲೀಸರು ಗಸ್ತು ತಿರುಗುತಿದ್ದಾರೆ. ಕಾವಲು ಕಾಯುತ್ತಿದ್ದಾರೆ. ಪ್ರತಿಯೊಬ್ಬರ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ.

ಡ್ರೋಣ್ ಬಳಕೆಗೆ ನಿರ್ಬಂಧ


ಭದ್ರತೆಯ ದೃಷ್ಟಿಯಿಂದಾಗಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾರೊಬ್ಬರೂ ಡ್ರೋಣ್ ಬಳಸಿ ಚಿತ್ರೀಕರಣ ಮಾಡುವುದನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ್ದಾರೆ. ಕಳೆದ ಮೂರು ದಿನಗಳಿಂದ ಹೆಲಿಕಾಪ್ಟರ್ ಗಳಲ್ಲಿ ಭದ್ರತೆಯ ಪರಿಶೀಲನೆ ನಡೆಸಲಾಗುತ್ತಿದೆ. ದಿನಕ್ಕೆ ಎರಡು ಮೂರು ಬಾರಿ ತುಮಕೂರು ನಗರದ ಮೇಲೆ ಸೇನಾ ಹೆಲಿಕಾಪ್ಟರ್ ಗಳು ಹಾರಾಡುತ್ತಿವೆ. ಜನರು ಕುತೂಹಲದಿಂದ ಇವುಗಳನ್ನು ನೋಡುತ್ತಿದ್ದಾರೆ.

ರಾಜ್ಯಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳು ತುಮಕೂರು ನಗರದಲ್ಲೇ ಮೊಕ್ಕಾಂ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋಶಿ ವಂಸಿಕೃಷ್ಣ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ, ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಪೊಲೀಸ್ ವಾಹನಗಳ ಮೂಲಕ ನಗರದಲ್ಲೆಡೆ ಸಂಚರಿಸಿ ಭದ್ರತೆಯನ್ನು ಪರಿಶೀಲಿಸುತ್ತಿದ್ದಾರೆ.

ಮಠದ ತುಂಬೆಲ್ಲ ರಕ್ಷಣಾ ಪಡೆ


ವಿಶೇಷವಾಗಿ ಸಿದ್ದಗಂಗಾ ಮಠ ಮತ್ತು ರೈತರ ಸಮಾವೇಶ ನಡೆಯುವ ಸ್ಥಳದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಸಮಾವೇಶದಲ್ಲಿ ಯಾವುದೇ ಲೋಪಗಳು ಜರುಗದಂತೆ ತಡೆಯುವ ಹಿನ್ನೆಲೆಯಲ್ಲಿ ಟೌನ್ ಹಾಲ್ ನಿಂದ ಕ್ಯಾತ್ಸಂದ್ರದವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಕಾರ್ಯಕ್ರಮ ನಡೆಯಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದ ಸುತ್ತಮುತ್ತ ವಾಹನ ನಿಲುಗಡೆಗೂ ಒಂದು ದಿನದ ಮಟ್ಟಿಗೆ ನಿಷೇಧ ಹೇರಿದೆ. ಬಿ.ಎಚ್.ರಸ್ತೆ, ಅಶೋಕ ರಸ್ತೆ, ಎಂ.ಜಿ.ರಸ್ತೆ, ಜನರಲ್ ಕಾರಿಯಪ್ಪ ರಸ್ತೆ, ರಾಧಾಕೃಷ್ಣ ರಸ್ತೆ, ಎಸ್.ಎಸ್.ಪುರಂ, ಎಸ್.ಐಟಿ. ಮುಖ್ಯರಸ್ತೆ ರೈಲ್ವೆ ಸ್ಟೇಷನ್ ರಸ್ತೆ ಹೀಗೆ ಎಲ್ಲಿಯೂ ಕೂಡ ವಾಹನಗಳನ್ನು ನಿಲ್ಲಿಸುವಂತಿಲ್ಲ. ಹೀಗಾಗಿ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ.

ಮದ್ಯ ಮಾರಾಟ ನಿಷೇಧ


ಮುನ್ನೆಚ್ಚರಿಕೆ ಕ್ರಮವಾಗಿ ಜನವರಿ 2ರ ಬೆಳಗ್ಗೆ 6 ಗಂಟೆಯಿಂದ ಜನವರಿ 3ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯದ ಅಂಗಡಿಗಳನ್ನು ತೆರೆಯದಂತೆ ಆದೇಶಿಸಲಾಗಿದೆ.

ರೈತ ಸಂಘಟನೆಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಪ್ರತಿಭಟನಾಕಾರರು ಬರದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಎಸ್.ಪಿ.ಜಿ ಕಮಾಂಡೋಗಳು ಮತ್ತು ಸಾವಿರಾರು ಮಂದಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಜನವರಿ 2ರಂದು ತುಮಕೂರು ನಗರದಲ್ಲಿ ವ್ಯಾಪಾರ ವಹಿವಾಟು ನಡೆಯುವುದು ಮತ್ತು ಜನರು ಒಂದು ಸ್ಥಳದಿಂದ ಮತ್ತೊಂದು ಪ್ರದೇಶಕ್ಕೆ ವಾಹನಗಳ ಮೂಲಕ ಸಂಚಾರ ಮಾಡುವುದು ಕಷ್ಟವಾಗುವ ಸಾಧ್ಯತೆ ಇದೆ.

ನಗರದಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿರುವುದರಿಂದ ಹೊರಭಾಗಗಳಿಂದ ತುಮಕೂರು ನಗರಕ್ಕೆ ಬರುವ ಸಾರ್ವಜನಿಕರು ತೊಂದರೆ ಅನುಭವಿಸಲಿದ್ದಾರೆ. ಬೆಂಗಳೂರು, ಸಿರಾ, ಕುಣಿಗಲ್, ಗುಬ್ಬಿ ಕಡೆ ತೆರಳಿರುವ ಬಸ್ ಗಳು ಸುತ್ತಿಬಳಸಿ ಹೋಗಬೇಕಾಗುತ್ತದೆ. ಆಟೊಗಳು ಕೂಡ ಬೇರೆ ಬೇರೆ ಮಾರ್ಗಗಳ ಮೂಲಕ ತೆರಳಬೇಕಾಗುವ ಸಾಧ್ಯತೆ ಇದೆ.

ಹೊಸವರ್ಷದ ಹೊಸ್ತಿಲಲ್ಲಿ ಒಂದಿಷ್ಟು..

ತುಳಸೀತನಯ


ತುಮಕೂರು: ಅಂತೂ ಇಂತು ಈ ವರ್ಷ ಮುಗಿತಪ್ಪ. ನಾಳೆಯಿಂದ ಹೊಸ ವರ್ಷ. ಇಷ್ಟು ದಿನ ಏನೇನು ಮಾಡಬೇಕೆಂದುಕೊಡಿದ್ದೇನೋ ಅದನ್ನ ಇನ್ಮೇಲೆ ಎಲ್ಲಾನು ಚಾಚೂ ತಪ್ಪದೇ ಮಾಡಬೇಕಪ್ಪ.

ಅರೇ..! ಇಷ್ಟು ದಿನ ಅಂದುಕೊಂಡು ಏನೂ ಮಾಡ್ದೇ ಸುಮ್ನೆ ಕಾಲ ಕಳೆದುಬಿಟ್ಟಿದ್ದೀನಿ ಇನ್ಮೇಲಾದ್ರೂ ಇತ್ತ ಗಮನಹರಿಸಬೇಕಪ್ಪಾ.

ಈ ವರ್ಷ ಮುಗಿಯೋ ಅಷ್ಟರಲ್ಲಿ ನಾನು ಏನಾರ ಮಾಡಿ ಸೆಟ್ಲಾಗಿ ಬಿಡಬೇಕು. ಹೀಗೆ ಪ್ರತಿಯೊಬ್ರೂ ಪ್ರತಿ ವರ್ಷ ಹೊಸ ವರ್ಷದ ಹೊಸ್ತಿಲಲ್ಲಿ ಹೆಜ್ಜೆ ಇಡುವಾಗ ಅಂದುಕೊಳ್ಳೋದು ಸಹಜ. ಆದರೆ ಅಂದುಕೊಂಡವುಗಳಲ್ಲಿ ವರ್ಷಾಂತ್ಯದಲ್ಲಿ ಎಷ್ಟು ಪೂರೈಸಿದ್ದೇವೆ ಎಂದು ಹಿಂತಿರುಗಿ ನೋಡಿದಾಗ ಬೆರೆಳಣಿಕೆಯಷ್ಟೆ ಕಾರ್ಯಗತವಾಗಿರುತ್ತವೆ. ಕೆಲವೊಮ್ಮೆ ಅವೂ ಕೂಡ ಆಗಿರುವುದಿಲ್ಲ.

ಮತ್ತದೇ.. ಅಯ್ಯೋ..! ಈ ವರ್ಷ ಅಂದುಕೊಂಡಿದ್ದು ಆಗಲಿಲ್ಲ ಅಂತಾ, ಹಾಕಿಕೊಂಡ ಯೋಜನೆಗಳು ಮುಂದಿನ ವರ್ಷಕ್ಕೆ ಮುಂದೂಡೋದು.

ಹೀಗೆ ಪ್ರತೀ ವರ್ಷ ದಿನಗಳು ಕಳೆದೇ ಹೋಯಿತು. ಒಂದೊಳ್ಳೆ ದಿನ ಬಂದೇ ಬರುತ್ತೆ ಅಂತಾ ಅಂದುಕೊಂಡು ಕಾದು ಕುಳಿತ್ತದೆ ಆಯ್ತು. ಆ ದಿನ ಬರಲಿಲ್ಲ. ಇದಕ್ಕೆ ನಾವೇ ಕಾರಣ ನಿಶ್ಚಿತ

ಯೋಜನೆಗಳೆನೋ ಮಾಡ್ತೇವೆ ಸರಿ. ಅದನ್ನು ಎಷ್ಟರ ಮಟ್ಟಿಗೆ ಅನುಸರಿಸಿದೇವೆ..? ಎಂದು ಪ್ರಶ್ನಿಸಿಕೊಂಡರೆ ದೊಡ್ಡ ಸೊನ್ನೆಯಷ್ಟೆ ಉತ್ತರವಾಗಿ ಮುಂದೆ ಬಂದು ನಿಲ್ಲುತ್ತದೆ. ಅಯ್ಯೋ..! ಇದೊಂತರ ಹೇಳಿ ಕೊಳ್ಳೋಕೆ ಆಗದಂತ ಸ್ಥಿತಿನಪ್ಪ.

ಹೇಳಂಗಿಲ್ಲಾ.. ಬಿಡಂಗಿಲ್ಲ. ಹೇಳಿಕೊಂಡ್ರೆ ಮರ್ಯಾದೆ ಹೋಗತ್ತೆ. ಹೇಳ್ದೆ ಇದ್ರೆ ಮನಸೂ ತಡೆಯೊಲ್ಲ. ಆಗಂತ ಹೇಳಿಕೊಳ್ಳೋದು ಅಲ್ಲ. ಯಾಕಂದ್ರೆ ಎಲ್ಲರ ಮನೆ ದೋಸೇನೂ ತೂತೆ. ಎಲ್ರೂ ಹಿಂಗೇ ಅಂದುಕೊಂಡಿರ್ತಾರೆ. ಆದ್ರೆ ಯಾವುದೋ ಕಾರಣಕ್ಕೆ ಅಂದುಕೊಂಡ ಕೆಲ್ಸ ಆಗ್ದೆ ಇರೋದ್ನ ಯಾರ ಅತ್ರನೂ ಹೇಳಿಕೊಂಡಿರಲ್ಲ ಅಷ್ಟೆ.

ಪ್ರತೀ ವರ್ಷ ಹೊಸ ವರ್ಷನೇ. ಡಿಸೆಂಬರ್ ತಿಂಗಳು ಬಂದ್ರೆ ಸಾಕು ಈ ವರ್ಷ ಮುಗೀತು. ಇನ್ನೇನು ಸ್ವಲ್ಪ ದಿನ ಹೊಸ ವರ್ಷ ಬಂದ್ಬಿಡತ್ತೆ ಅಂತ ಬಹಳ ಸಂತೋಷ ಪಡ್ತಾ ಇರ್ತೀವಿ. ಆದ್ರೆ ಬದಲಾಗುತ್ತಿರುವುದು ನಮ್ಮ ಮನೆ, ಆಫೀಸಿನ ಗೋಡೆ ಮೇಲೆ ನೇತಾಕಿರುವ ಕ್ಯಾಲೆಂಟರ್ ಅಷ್ಟೆ ಬದಲಾಗುತ್ತಿದೆ ಅಂತಾ ನಾವ್ಯಾರೂ ಅಂದ್ಕೊಳೋದೆ ಇಲ್ಲ.

ಹೊಸ ವರ್ಷ ಅಂತಾ ಆ ಒಂದು ದಿನ ಏನೆಲ್ಲಾ ಮೋಜು ಮಸ್ತಿ ಮಾಡಬೇಕು ಎನ್ನೋದರ ಬಗ್ಗೆಯಷ್ಟೆ ಆಲೋಚಿಸ್ತೀವಿ. ಆದ್ರೆ ಹೊಸ ವರ್ಷದ ಮೊದಲ ದಿನ ಕಳೆದು ಮರುದಿನ ಎಂದಿನಂತೆಯೇ ಅನ್ನೋದು ಮಾತ್ರ ಯಾರಿಗೂ ಅರಿವಾಗೋದೇ ಇಲ್ಲ. ಹಾಗೆ ಅನ್ನೋದೆ ಆದ್ರೆ ಬರೋ ಪ್ರತಿ ದಿನ ಕೂಡ ಹೊಸ ದಿನ, ಹೊಸ ವರ್ಷವೇ ಸರಿ. ರಾತ್ರಿ ಮಲಗಿ ಬೆಳಗ್ಗೆ ಜೀವಂತವಾಗಿ ಎದ್ದು ಪ್ರಪಂಚಕ್ಕೆ ಕಣ್ಣು ಬಿಡೋ ಸಂದರ್ಭ ನಮಗೆ ಸಿಗೋ ಮರು ಹುಟ್ಟು ಎನ್ನೋ ಸಿಂಪಲ್ ಲಾಜಿಕ್ ನಮ್ಗೆ ಅರ್ಥನೇ ಆಗೋಲ್ಲ. ಆ ಮೊದಲ ದಿನ ಇರುವ ಹುಮ್ಮಸ್ಸು ಅದ್ಯಾಕೆ ಪ್ರತಿ ದಿನ ಇರೋಲ್ಲ.


ಬದಲಾಗುತ್ತಿರುವುದು ಹಳೇ ವರ್ಷದ ದಿನಚರಿಯಷ್ಟೆ ವಿನಹ ನಮ್ಮ ಜೀವನದ ಗುರಿ ಮತ್ತು ನಮ್ಮ ಸಂಬಂಧಗಳು ಅಲ್ಲ. ಒಂದೇ ಒಂದು ದಿನ ಖುಷಿ ಪಡೋಕೆ ಹೊಸ ವರ್ಷ ಅಂತಾ ಆಚರಣೆ ಮಾಡುವ ಬದಲು ಬದುಕಿರುವ ಅಷ್ಟೂ ದಿನ ಖುಷಿಯಾಗಿರೋಕೆ ಒಳ್ಳೆ ವಿಚಾರ, ಆಲೋಚನೆ, ಒಳ್ಳೆ ಕೆಲಸ ಮಾಡೋ ಬಗ್ಗೆ ನಾವ್ಯಾಕೆ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ..? ನೀವೇನಂತಿರಿ…?

ರೈತರ ಸಮಾವೇಶಕ್ಕೆ ಒಂದೂವರೆ ಲಕ್ಷ ರೈತರು : ಬಿಎಸ್ ವೈ

ತುಮಕೂರು: ತುಮಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜನವರಿ 2ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಲಕ್ಷ ರೈತರು ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಿದ್ದಗಂಗಾ ಮಠ ಮತ್ತು ಕಾರ್ಯಕ್ರಮದ ಸ್ಥಳವನ್ನು ಪರೀಶೀಲನೆ ಮಾಡಿದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಸಮಾರಂಭ ನಡೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಬಿ.ಎಚ್.ರಸ್ತೆಯಲ್ಲಿ ಎಲ್.ಇ.ಡಿ ಪರದೆಗಳನ್ನು ಅಳವಡಿಸಿ ಜನರು ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಜನವರಿ 2 ರಂದು ಮಧ್ಯಾಹ್ನ 2.15ಕ್ಕೆ ಸಿದ್ದಗಂಗಾ ಮಠಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ, ಲಿಂಗೈಕ್ಯ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಆನಂತರ 10 ನಿಮಿಷ ಮಠದ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆನಂತರ ತುಮಕೂರಿನಲ್ಲಿ ನಡೆಯಲಿರುವ ರೈತರ ಸಮಾವೇಶದಲ್ಲಿ ಭಾಷಣ ಮಾಡುವರು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮಣಿಪುರ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳು, ರಾಜ್ಯಪಾಲರೊಬ್ಬರು ಆಗಮಿಸಲಿದ್ದಾರೆ. ವೇದಿಕೆಯಲ್ಲಿ ಪ್ರಗತಿಪರ ಅರ್ಹ ಫಲಾನುಭವಿ ರೈತರಿಗೆ ಸರ್ಟಿಫಿಕೇಟ್ ಗಳನ್ನು ವಿತರಿಸಲಾಗುವುದು. 5.30ಕ್ಕೆ ಇಲ್ಲಿಂದ ಬೆಂಗಳೂರಿಗೆ ತೆರಳಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಡೀ ಬಿ.ಎಚ್.ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಟೌನ್ ಹಾಲ್ ನಿಂದ ಸ್ವಾಮೀಜಿ ಸರ್ಕಲ್ ವರೆಗೂ ಎಲ್.ಇ.ಡಿ. ಪರದೆಗಳನ್ನು ಅಳವಡಿಸಿ ಜನರು ಸಮಾರಂಭ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಮೂರು ಕಡೆಯಿಂದ ಬರುವ ಬಸ್ ಗಳನ್ನು ರಿಂಗ್ ರಸ್ತೆ, ಕ್ಯಾತ್ಸಂದ, ಸಿರಾ ಗೇಟ್ ನಲ್ಲಿಯೇ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುದ್ದಹನುಮೇಗೌಡರ ಪ್ರಶ್ನೆಗಳಿಗೆ ಆಮೇಲೆ ಉತ್ತರ ಹೇಳೋಣ. ಅದಕ್ಕೆ ಕಾಲ ಬರಲಿ ಎಂದು ವ್ಯಂಗ್ಯವಾಡಿದರು.

ತುಮಕೂರಿಗೆ ಬರುತ್ತಿರುವ ಪ್ರಧಾನಿ ಮೋದಿಗೆ ರೈತರ ಪ್ರಶ್ನೆ

ತುಮಕೂರು: ಎನ್ಆರ್ ಸಿ ಮತ್ತು ಸಿಎಎ ಕಾಯ್ದೆಗಳನ್ನು ಅತ್ಯಂತ ಆದ್ಯತೆಯಾಗಿ ಹುಮ್ಮಸ್ಸಿನಿಂದ ಜಾರಿಗೆ ತರುವ ಪ್ರಧಾನಿಗಳು ರೈತರ ನೆರವಿಗೆ ಬರುವ ಡಾ.ಸ್ವಾಮಿನಾಥ ವರದಿಯನ್ನು ಯಾಕೆ ಅನುಷ್ಠಾನಗೊಳಿಸುತ್ತಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.

ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ತಮಗೆ ಬೇಕಾಗುವ ಕಾಯ್ದೆಗಳನ್ನು ಜಾರಿ ಮಾಡಲು ಬದ್ತತೆ ತೋರುವ ಪ್ರಧಾನಿ ನರೇಂದ್ರ ಮೋದಿ ರೈತರ ಹಿತಾಸಕ್ತಿ ಕುರಿತು ಕಿಂಚಿತ್ತೂ ಗಮನಹರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ 2ರಂದು ಪ್ರಧಾನಿ ವಿರುದ್ಧ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ಮಾಡುವುದು ಶತಸಿದ್ದ. ಪ್ರತಿಭಟನಾಕಾರರನ್ನು ಬಂಧಿಸುವ ಸ್ವಾತಂತ್ರ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಗ್ರಾಮೀಣ ಭಾರತವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ರೈತರ ಪರವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಬಿಟ್ಟು ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಅದಾನಿ ಗುಂಪಿಗೆ ಲಾಭವಾಗುತ್ತಿದೆ. ಎನ್ಆರ್ ಸಿ ಮತ್ತು ಸಿಎಎ ಬಗ್ಗೆ ಬದ್ದತೆ ತೋರಿದಂತೆ ರೈತರ ವಿಷಯದಲ್ಲೂ ತೋರಬೇಕಲ್ಲವೇ ಎಂದು ಪ್ರಶ್ನಿಸಿದರು.

ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ ನಡೆದ 300 ಚುನಾವಣಾ ಪ್ರಚಾರ ಭಾಷಣಗಳಲ್ಲಿ ಡಾ.ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ತರುವ ಭರವಸೆ ನೀಡಿದ್ದಿರಿ. ಇದನ್ನು ಮರೆತಿದ್ದೀರಾ ಪ್ರಧಾನಿಗಳೇ? ತುಮಕೂರಿಗೆ ಈಗ ಬರುತ್ತಿರುವುದು ಸೇರಿ ಮೂರು ಬಾರಿ ಭೇಟಿ ನೀಡಿದಂತೆ ಆಗುತ್ತದೆ. ವಸಂತನರಸಾಪುರದಲ್ಲಿ ಫುಡ್ ಪಾರ್ಕ್ ಸ್ಥಾಪನೆ ಮಾಡಿದಿರಿ. ತೆಂಗು ಬೆಳೆಗಾರರಿಗೆ ಅನುಕೂವಾಗುತ್ತದೆ ಎಂದು ಹೇಳಿದಿರಿ. ಪುಡ್ ಪಾರ್ಕ್ ನಿಂದ ಯಾರಿಗೆ ಪ್ರಯೋಜನವಾಗಿದೆ ತೋರಿಸಿ ಎಂದು ಕೇಳಿದರು.

ಯಾವುದೇ ಚರ್ಚೆ ಇಲ್ಲದೆ 30 ಮಸೂದೆಗಳನ್ನು ಅಂಗೀಕಾರ ಮಾಡಿದಿರಿ. ಇದರ ಜೊತೆಗೆ ಬೀಜ ಕಾಯ್ದೆಯೂ ಬರುತ್ತಿದೆ. ಕೊನೆಯ ಪಕ್ಷ ಬೀಜ ಕಾಯ್ದೆ ತರುವಾಗ ರೈತರೊಂದಿಗೆ ಚರ್ಚೆ ಮಾಡಲಿಲ್ಲ. ಚರ್ಚೆ ಮಾಡಲು ಅವಕಾಶ ನೀಡಲಿಲ್ಲ. ಬೀಜ ಕಾಯ್ದೆ ಯಾರ ಪರವಾಗಿದೆ ಎಂಬುದನ್ನು ಜನರಿಗೆ, ರೈತರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಬೀಜ ಕಾಯ್ದೆ ಜಾರಿಯಾದರೆ ರೈತರಿಗೆ ಕಿಂಚಿತ್ತೂ ಪ್ರಯೋಜನವಾಗುವುದಿಲ್ಲ. ಬದಲಿಗೆ ಕೆಲವು ಬೀಜ ಕಂಪನಿಗಳಿಗೆ ಹಚ್ಚು ಅನುಕೂಲವಾಗುತ್ತದೆ. ಈ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೀಜ ಕಾಯ್ದೆ ಅನುಷ್ಟಾನಕ್ಕೆ ಜರೂರು ಮಾಡಲಾಗುತ್ತಿದೆ. ಇದು ರೈತರ ಸಾರ್ವಭೌಮತ್ವವನ್ನು ಕಿತ್ತುಕೊಳ್ಳಲಿದೆ. ಈ ಕಾಯ್ದೆಯಲ್ಲಿ ಸಾರ್ವಜನಿಕ ಹಿತ ಅಡಗಿಲ್ಲ. ಬದಲಿಗೆ ಕಂಪನಿಗಳಿಗೆ ಆದ್ಯತೆ ನೀಡಲಾಗಿದೆ. ಇದನ್ನು ರೈತರಿಗೆ ತಿಳಿಸುವಿರಾ ಎಂದು ಪ್ರಶ್ನಿಸಿದರು.

ಬೀಜ ಕಾಯ್ದೆ 2019 ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪರಿಸರಕ್ಕೆ ಅಪಾಯಕಾರಿ ಮಸೂದೆ. ಸಮಾಜದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ಆದರೆ ಕಪ್ಪು ಷರ್ಟ್ ಧರಿಸಿ ಭಾಗವಹಿಸುತ್ತೇವೆ. ಪ್ರತಿಭಟನೆ ಮಾಡಿಯೇ ತೀರುತ್ತೇವೆ. ರಾಜ್ಯ ಸರ್ಕಾರಕ್ಕೆ ಪ್ರತಿಭಟನೆ ಮಾಡುವ ರೈತರನ್ನು ಬಂಧಿಸುವ ಸ್ವಾತಂತ್ರ್ಯ ಇದ್ದೇ ಇದೆ ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮೊದಲಾದವರು ಹಾಜರಿದ್ದರು.

ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆ

ತಿಪಟೂರು :
ಮೂಲಭೂತ ಸೌಕರ್ಯಕ್ಕಾಗಿ ಒತ್ತಾಯಿಸಿ ನಗರದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರದ ಆದೇಶದ ಪ್ರಕಾರ ಪ್ರತಿ ಒಂದು ಶಾಲಾ ಕೊಠಡಿಗೆ ಸುಮಾರು ತೊಂಬತ್ತು ರಿಂದ ನೂರು ಜನ ವಿದ್ಯಾರ್ಥಿಗಳಿಗೆ ಅನುಮೋದಿಸುವಂತೆ ಆದೇಶ ಬಂದಿದ್ದು ಅದರ ಪ್ರಕಾರ ಈಗಾಗಲೇ ಮೂರು ಜನ ವಿದ್ಯಾರ್ಥಿಗಳು ಪಾಠ ಕೇಳುವಂತಹ ಕೊಠಡಿಗಳಾಗಿ ಮೂಲಭೂತ ವ್ಯವಸ್ಥೆಗಳಾಗಲಿ ಬೋರ್ಡ್ ಗಳಾಗಲಿ ಕಾಲೇಜಿನಲ್ಲಿ ಇಲ್ಲದಿರುವುದು ದುರದೃಷ್ಟಕರ.

ಅಷ್ಟೇ ಅಲ್ಲದೆ ಅಲ್ಲದೇ ಇಲ್ಲಿಯ ಶೌಚಾಲಯಗಳು ಸ್ಥಿತಿ ಹೇಳತೀರದು.
ಕಟ್ಟಡಗಳು ಸಂಪೂರ್ಣ ಹಾಳಾಗಿದ್ದು ಬೀಳುವ ಹಂತದಲ್ಲಿದ್ದು ಎಲ್ಲೆಂದರಲ್ಲಿ ರಂಧ್ರಗಳು ಕಾಣಿಸುತ್ತಿದ್ದು ಮಳೆಗಾಲದಲ್ಲೂ ಇದರ ಸ್ಥಿತಿ ತೀರಾ ಶೋಚನೀಯವಾಗಿರುತ್ತದೆ.

ಇಂತಹ ದುಃಸ್ಥಿತಿಯಲ್ಲಿ ವಿದ್ಯಾರ್ಥಿಗಳು ತೊಂಬತ್ತು ರಿಂದ ನೂರು ವಿದ್ಯಾರ್ಥಿಗಳು ಒಂದೇ ರೂಮಿನಲ್ಲಿ ಪಾಠ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತೀರಾ ಚಿಕ್ಕದಾದ ಶಾಲಾ ಕೊಠಡಿಗಳಲ್ಲಿ ಕುಳಿತುಕೊಂಡು ಪಾಠ ಕೇಳುವುದು ವಿದ್ಯಾರ್ಥಿಗಳಿಗಂತೂ ಶೋಚನೀಯ ಸ್ಥಿತಿ ಉಂಟಾಗಿದೆ.


ಜೊತೆಗೆ ಪದವಿ ಕಾಲೇಜು ರಾಷ್ಟ್ರೀಯ ಹೆದ್ದಾರಿ ಇನ್ನೂರರ ಅಕ್ಕಪಕ್ಕದಲ್ಲಿದ್ದು ತರಗತಿಗಳನ್ನು ಮುಗಿಸಿ ಪಕ್ಕದ ಆಡಳಿತ ಕಚೇರಿಗೆ ತೆರಳಲು ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಮುಂದೆ ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಹಂತದಲ್ಲಿ ಹಲವಾರು ಅಪಘಾತಗಳು ಈಗಾಗಲೇ ಸಂಭವಿಸಿದ್ದು ಈಗಾಗಲೇ ಕಾಲೇಜು ವಿದ್ಯಾರ್ಥಿಗಳು ಇದರಿಂದ ಸಾಕಷ್ಟು ಕಷ್ಟವನ್ನು ಅನುಭವಿಸಿರುವುದು ಕಂಡು ಬರುತ್ತಿದೆ.

ಈಗಲಾದರೂ ಕಾಲೇಜು ಶಿಕ್ಷಣ ಇಲಾಖೆಯು ಇತ್ತ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಕೊಠಡಿ ಶೌಚಾಲಯ ಹಾಗೂ ರಸ್ತೆಯ ಬದಿಯಲ್ಲಿ ಬರುವ ಸ್ಕೈವಾಕ್ಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಇಲ್ಲಿಯ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಅಬ್ಬಬ್ಬಾ ಇವರ ಆಟ ನೋಡಿ ಖುಷಿಪಟ್ಟರು…..

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಜಿ.ಪಂ ಸದಸ್ಯ ಚೌಡಪ್ಪ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು.

ಮಧುಗಿರಿ : ಕ್ರೀಡಾಪಟುಗಳು ಸೋಲು-ಗೆಲುವಿನ ಬಗ್ಗೆ ಯೋಚಿಸದೆ ಕ್ರೀಡಾಮನೋಭಾವನೆಯಿಂದ ಪಾಲ್ಗೊಳ್ಳಬೇಕು ಎಂದು ಜಿ.ಪಂ ಸದಸ್ಯ ಹೆಚ್.ಕೆಂಚಮಾರಯ್ಯ ತಿಳಿಸಿದರು.

ಪಟ್ಟಣದ ರಾಜೀವ್‍ಗಾಂಧಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಶೇಷ ಚೇತನರ ಕ್ರೀಡಾಕೂಟ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಪಡೆಯಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.

ವಿಶೇಷ ಚೇತನರು ನಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬ ಮನಸ್ಥಿತಿಯನ್ನು ಹೊಂದಬೇಕು. ವಿಶೇಷ ಚೇತನರು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದ ಅವರು ಸರ್ಕಾರ ನೀಡುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿ.ಪಂ ಸದಸ್ಯ ಕೊಂಡವಾಡಿ ತಿಮ್ಮಯ್ಯ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಎಲ್ಲ ಉಳ್ಳವರು ಸೋಮಾರಿಗಳಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿ ವಿಶೇಷ ಚೇತನರು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ಉಪನಿರ್ದೆಶಕ ರೇವಣ್ಣ ಸಿದ್ದಪ್ಪ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ದಿಯಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 34 ಜಿಲ್ಲೆಗಳಿಂದ 510 ಬಾಲಕರು ಹಾಗೂ 410 ಬಾಲಕೀಯರು ಭಾಗವಹಿಸಿದ್ದಾರೆ. ಈ ಎಲ್ಲಾ ಮಕ್ಕಳಿಗೂ ಊಟ, ವಸತಿ ಹಾಗೂ ವಾಹನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ ವ್ಯವಸ್ಥಾಪಕರಿಗೆ ಸೂಚಿಸಿದರು.

ಜಿ.ಪಂ ಸದಸ್ಯ ಚೌಡಪ್ಪ, ಬಿ.ಇ.ಒ ರಂಗಪ್ಪ, ಡಿವೈಪಿಸಿ ರಾಜಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೆಶಯ್ಯ, ಜಿಲ್ಲಾ ಪ್ರೌಡಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಂ.ವೆಂಕಟರಾಮು, ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟಾರಂಗಾರೆಡ್ಡಿ, ಕಾರ್ಯದರ್ಶಿ ಸಂಜಯ್, ದೈಹಿಕ ಶಿಕ್ಷಣಾಧಿಕಾರಿಗಳಾದ ಹನುಮಂತರಾಯಪ್ಪ, ಸತ್ಯನಾರಾಯಣ್, ನಾಗರಾಜು, ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸು

ರೋಗಗಳಿಗೆ ತುತ್ತಾಗುತ್ತಿರುವ ಬಡ್ತಿ ಹೊಂದಿದ ಶಿಕ್ಷಕರು; ಆತಂಕ

ಮಧುಗಿರಿ ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಮುಖ್ಯ ಶಿಕ್ಷಕರ ಕಾರ್ಯಾಗಾರ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ತಹಶೀಲ್ದಾರ್ ಎಲ್.ಎಂ.ನಂದೀಶ್ ಉದ್ಘಾಟಿಸಿದರು.

Publicstory. in


ಮಧುಗಿರಿ: ಶಿಕ್ಷಕ ವೃತ್ತಿ ತಂತಿ ಮೆಲಿನ ನಡಿಗೆಯಾಗಿದ್ದು, ಬಡ್ತಿ ಹೊಂದಿದ ಶಿಕ್ಷಕರು ಕೆಲವೇ ತಿಂಗಳುಗಳಲ್ಲಿ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ವಿ.ಹೆಚ್.ವೆಂಕಟೇಶಯ್ಯ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಮುಖ್ಯ ಶಿಕ್ಷಕರ ಕಾರ್ಯಾಗಾರ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಾಥಮಿಕ ಶಿಕ್ಷಣ ರಾಷ್ಟ್ರದ ಭದ್ರ ಬುನಾದಿಯಾಗಿದೆ. ಶಿಕ್ಷಕರ ಕರ್ತವ್ಯ ದುಸ್ತರವಾಗಿದೆ. ಮುಖ್ಯ ಶಿಕ್ಷಕರು ಸಹ ಶಿಕ್ಷಕರಿಗೆ ಹೆದರುವಂತಹ ಪರಿಸ್ಥಿತಿ ಇದೆ ಎಂದರು.

ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆಗಳನ್ನು ಪಡೆದುಕೊಳ್ಳಿ, ದಾಖಲಾತಿಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ನಿಯಮಗಳನ್ನು ತಿಳಿದುಕೊಳ್ಳಿ ಎಂದು ಹೇಳಿದರು.

ಮುಗ್ದ ಶಿಕ್ಷಕರಿಗೆ ತೊಂದರೆಯಾದಲ್ಲಿ ಶಿಕ್ಷಕರ ಹಾಗೂ ಸರ್ಕಾರಿ ನೌಕರರ ಸಂಘ ನೆರವಿಗೆ ಬರಲಿದೆ. ಯಾವುದೇ ಇಲಾಖೆಯ ನೌಕರರ ಸಮಸ್ಯೆಗಳು ಇದ್ದರೂ ಬಗೆಹರಿಸಲಾಗುವುದು. 2022ಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿ ವೇತನ ಕೊಡಿಸುವುದಾಗಿ ರಾಜ್ಯಾಧ್ಯಕ್ಷ ಷಡಕ್ಷರಿ ಭರವಸೆ ನೀಡಿದ್ದಾರೆ ಎಂದರು.

ತಾಲ್ಲೂಕಿನ ಸುಮಾರು 600 ಜನ ಸರ್ಕಾರಿ ನೌಕರರಿಗೆ ಹಾಗೂ ಶಿಕ್ಷಕರಿಗೆ ಡಿ.ಎಲ್ ಮಾಡಿಸಿಕೊಡುವುದಾಗಿ ತಿಳಿಸಿದರು.

ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ರಾಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಪ್ರತಿಯೊಂದು ವಿಷಯಕ್ಕೂ ಮುಖ್ಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡುತ್ತಿದ್ದು, ಇಲಾಖೆ ಅಧಿಕಾರಿಗಳು ಮನೋಸ್ಥೈರ್ಯ ತುಂಬಬೇಕು ಎಂದರು.

ಮುಖ್ಯ ಶಿಕ್ಷಕ ವೆಂಕಟರಮಣಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ, ಈ ಹಿಂದೆ ಶಾಲೆಗಳಲ್ಲಿಡಿ.ಗ್ರೂಪ್ ನೌಕರರಿದ್ದು, ಸ್ವಚ್ಚತಾ ಕಾರ್ಯ ಮಾಡುತ್ತಿದ್ದರು. ಈಗ ಆ ಕಾರ್ಯಕ್ಕೆ ವಿಧ್ಯಾರ್ಥಿಗಳನ್ನು ಬಳಸಿಕೊಂಡರೆ ಪೋಷಕರು ಪ್ರಶ್ನಿಸುತ್ತಾರೆ. ಆದ್ದರಿಂದ ಸರ್ಕಾರ ಶಾಲೆಗಳಿಗೆ ಡಿ.ಗ್ರೂಪ್ ನೌಕರರನ್ನು ನೇಮಿಸಬೇಕು. ಇಲ್ಲದಿದ್ದರೆ ಗ್ರಾ.ಪಂ ನವರು ಶಾಲಾ ಆವರಣ, ಶೌಚಾಲಯ ಸ್ವಚ್ಚಗೊಳಿಸಲು ನೆರವು ನೀಡಬೇಕು ಎಂದರು.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿದರು. ತಹಶೀಲ್ದಾರ್ ಎಲ್.ಎಂ.ನಂದೀಶ್, ಬಿಇಓ ರಂಗಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಂಗಾರೆಡ್ಡಿ, ಮುಖ್ಯ ಶಿಕ್ಷಕರ ಸಂಘದ ಉಪಾದ್ಯಕ್ಷ ನರಸಪ್ಪ, ಪ್ರೌಡಾಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ಶಿಕ್ಷಣ ಸಂಯೋಜಕ ಪ್ರಾಣೇಶ್, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಜಯರಾಮಯ್ಯ, ಪದಾಧಿಕಾರಿಗಳಾದ ಸಂಜಯ್, ಬಸವರಾಜು, ಹೆಚ್.ಆರ್.ಶಶಿಕುಮಾರ್, ಚಂದ್ರಕಲಾ, ನಟರಾಜು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮೋದಿ ಸ್ವಾಗತಕ್ಕೆ ಸಜ್ಜಾದ ತುಮಕೂರು

ತುಮಕೂರು; ತುಮಕೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕಾಗಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ.

ಹತ್ತಿರಹತ್ತಿರ ಒಂದು ಲಕ್ಷ ರೈತರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಇಲ್ಲವೇ ಜಿಲ್ಲೆಗೆ ಏನನ್ನಾದರೂ ಕೊಡುಗೆ ನೀಡಲಿದ್ದಾರೆ ಎಂಬ ಕುತೂಹಲ ಜನರಲ್ಲಿದೆ.

ಈಗಾಗಲೇ ತುಮಕೂರು ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿರುವ ಪ್ರಧಾನಿ ಮೋದಿ ತುಮಕೂರು ನಗರದ ವಸಂತನರಸಾಪುರದಲ್ಲಿ ಫುಡ್ ಪಾರ್ಕ್ ಉದ್ಘಾಟನೆ ಮತ್ತು ಗುಬ್ಬಿಯಲ್ಲಿ ಎಚ್.ಎ.ಎಲ್ ತಯಾರಿಕಾ ಘಟಕ ಉದ್ಘಾಟನೆಗೆ ಬಂದಿದ್ದರು.

ಇದೀಗ ಮೂರನೇ ಬಾರಿಗೆ ತುಮಕೂರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ ತುಮಕೂರಿಗೆ ಹೊಸ ಯೋಜನೆಗಳನ್ನು ಪ್ರಕಟಿಸಲಿದ್ದಾರೆಯೇ ಎಂಬುದು ನಿಗೂಢವಾಗಿಯೇ ಇದೆ.

ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಕೆಲವೊಮ್ಮೆ ಮಾಧ್ಯಮಗಳಿಗೂ ಗೊತ್ತಾಗದ ಹಾಗೆ ಹೊಸ ಯೋಜನೆಗಳನ್ನು ಪ್ರಕಟಿಸಿರುವುದು ಈವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದ್ದರಿಂದ ತುಮಕೂರಿನಲ್ಲಿ ವಿಶೇಷ ಕೊಡುಗೆಗಳನ್ನು ನೀಡಲಿದ್ದಾರೆಯೇ ಎಂಬ ಕುತೂಹಲ ಎಲ್ಲರಲ್ಲಿದೆ.

ನಿರೀಕ್ಷೆ ನನಸಾಗಲಿದೆಯೇ ನೋಡಬೇಕು.ಜನವರಿ 2ರಂದು ನಡೆಯಲಿರುವ ಸಮಾವೇಶದಲ್ಲಿ ಕೃಷಿ ಸನ್ಮಾನ್ ನಿಧಿ ಯೋಜನೆಯ ನಾಲ್ಕನೇ ಕಂತು ಹಣ ವಬಿಡುಗಡೆಗೊಳಿಸುವುದಾಗಿ ಈಗಾಗಲೇ ವರದಿಯಾಗಿದೆ. ಇದರ ಜೊತೆಗೆ ಕೃಷಿಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಕರ್ನಾಟಕ ಸರ್ಕಾರಕ್ಕೆ ಪ್ರಶಸ್ತಿ ಪ್ರದಾನ ಮಾಡುವ ನಡೆಯಲಿದೆ. ಕೃಷಿಕರನ್ನು ಸನ್ಮಾನಿಸಲಿದೆ.

ತುಮಕೂರಿಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸಿದ್ದಗಂಗಾ ಮಠದಲ್ಲಿ ಒಂದೂವರೆ ಗಂಟೆ ಕಳೆಯಲಿದ್ದಾರೆ. ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ನಂತರ ಧ್ಯಾನಮಂದಿರ ಧ್ಯಾನ ಮಾಡಲಿದ್ದಾರೆ.

ಒಂದುವರೆ ಗಂಟೆ ಸಿದ್ದಗಂಗಾ ಮಠದಲ್ಲೇ ಕಳೆಯುವ ಮೂಲಕ ಕರ್ನಾಟಕ ಜನರು ಮತ್ತು ದೇಶದ ಗಮನವನ್ನು ಸೆಳೆಯುವುದು ಇದರ ಹಿಂದಿರುವ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


ಬಿಜೆಪಿಯ ದಕ್ಷಿಣದ ದ್ವಾರಬಾಗಿಲು ಮೂಲಕ ದಕ್ಷಿಣದ ಜನರನ್ನು ತನ್ನತ್ತ ಸೆಳೆಯುವ ಉದ್ದೇಶವೂ ಅಡಗಿದೆ.

ಇನ್ನೊಂದು ರಾಜ್ಯದಲ್ಲಿ ಅಧಿಕಾರ ಹಿಡಿಯುವ ಯತ್ನವೂ ತುಮಕೂರಿನ ಕಾರ್ಯಕ್ರಮದ ಪ್ರಮುಖ ಕಾರಣ ಎಂಬಂತ ಸೂಚನೆಗಳನ್ನು ನೀಡಲು ಹೊರಟಿದ್ದಾರೆ. ಇದುವರೆಗೆ ತುಮಕೂರು ಫುಡ್ ಪಾರ್ಕ್ ನಲ್ಲಿ ಯಾವುದೇ ಉದ್ಯೋಗಗಳು ಸೃಷ್ಟಿಯಾಗಿಲ್ಲ.

2019ರ ವೇಳೆಗೆ ಎಚ್.ಎ.ಎಲ್ ಲಘು ಯುದ್ದ ವಿಮಾನಗಳು ಕಾರ್ಯಾರಂಭ ಮಾಡಲಿವೆ ಎಂಬ ನಿರೀಕ್ಷೆಯೂ ಈಡೇರಿಲ್ಲ. ಈ ಪ್ರಶ್ನೆಯನ್ನು ಜನ ಕೇಳತೊಡಗಿದ್ದಾರೆ.ಬಿಜೆಪಿ ರಾಷ್ಟ್ರ ನಾಯಕರು ತುಮಕೂರಿಗೆ ಭೇಟಿ ನೀಡಿದಾಗಲೆಲ್ಲ, ತುಮಕೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನೇ ಬಳಸಿಕೊಂಡಿರುವುದು ನಡೆಯುತ್ತ ಬಂದಿದೆ.

ಎಲ್.ಕೆ. ಅಡ್ವಾಣಿ ಕೂಡ ಇದೇ ಜಾಗದಲ್ಲೇ ಆಯೋಜಿಸಿದ್ದ ಕಾರ್ಯಕ್ರಮದಲ್ಲೇ ಭಾಷಣ ಮಾಡಿದ್ದರು. ಈಗ ಬಿಜೆಪಿ ಅದೇ ದಾಳವನ್ನು ಮತ್ತೊಮ್ಮೆ ಉರುಳಿಸುತ್ತಿದೆಯೇ ಎಂಬ ಪ್ರಶ್ನೆ ಮೂಡತೊಡಗಿದೆ.

ತುಮಕೂರು ನಗರ ಸ್ಮಾರ್ಟ್ ಸಿಟಿಗೂ ಆಯ್ಕೆಯಾಗಿದೆ. ಫುಡ್ ಪಾರ್ಕ್ ಬಂದಿದೆ. ಎಚ್.ಎ.ಎಲ್ ಉದ್ಘಾಟನೆ ಆಗಿದೆ. ಆದರೆ ಅದರಿಂದ ಜನರಿಗಾಗಿರುವ ಅನುಕೂಲ ಹೇಳಿಕೊಳ್ಳುವಂತೇನೂ ಇಲ್ಲ. ಜನವರಿ 2ರ ಕಾರ್ಯಕ್ರಮದಲ್ಲಿ ಮೋದಿ ಹೊಸ ಯೋಜನೆಗಳನ್ನು ಕೊಡಲಿದ್ದಾರೆಯೇ ಎಂಬುದನ್ನು ತುಮಕೂರು ಜಿಲ್ಲೆಯ ಜನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅದು ಫಲಪ್ರದವಾಗುವುದೇ ನೋಡಬೇಕು