Tuesday, February 24, 2026
Google search engine
Home Blog Page 302

ತುಮಕೂರಿಗೆ ಮೋದಿ: ಫುಡ್ ಪಾರ್ಕ್ ಪ್ರಶ್ನೆಗಳಿಗೆ ಉತ್ತರ ಸಿಗಲಿದೆಯೇ?

0

ಫುಡ್ ಪಾರ್ಕ್ ಉದ್ಘಾಟನೆ ಸಂದರ್ಭದಲ್ಲಿ ವಿವರ ಪಡೆದ ಪ್ರಧಾನಿ (ಸಂಗ್ರಹ ಚಿತ್ರ)

ಮಹೇಂದ್ರ ಕೃಷ್ಣಮೂರ್ತಿ


ತುಮಕೂರು: ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜ.3 ರಂದು ರಾಜ್ಯ ಸರ್ಕಾರ ಆಯೋಜಿಸಿರುವ ರೈತರ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ವಸಂತನರಸಾಪುರದಲ್ಲಿ ಫುಡ್ ಪಾರ್ಕ್ ಸಮಸ್ಯೆಗೆ ಉತ್ತರ ಸಿಲ್ಕ್ ಯೇ ಎಂಬುದನ್ನು ನೋಡಬೇಕಾಗಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಮಂಜೂರಾದ ಈ ಫುಡ್ ಪಾರ್ಕ್ ದೇಶದ ಮೊದಲ ಫುಡ್ ಪಾರ್ಕ್ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೇಂದ್ರ ಸರ್ಕಾರದ ಆಹಾರ ಸಂಸ್ಕರಣೆ ಸಚಿವಾಲಯದ ಅಡಿಯಲ್ಲಿ ಬರುವ ಇದು ಸರ್ಕಾರ- ಖಾಸಗಿ ಸಹಭಾಗಿತ್ವದ ಒಂದು ಯೋಜನೆ. ಅಂದರೆ ಇದಕ್ಕೆ ಕೇಂದ್ರ ಸರ್ಕಾರ ಸಹ ಬಂಡವಾಳ ವಿನಿಯೋಗಿಸಿದೆ. ಇದು ಸರ್ಕಾರದ ಕೈಗಾರಿಕೆಯೂ ಹೌದಾಗಿದೆ.

ಇದನ್ನು ಉದ್ಘಾಟನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಬಂದಿದ್ದರು. ಈ ಪಾರ್ಕ್ ನಿಂದಾಗಿ ತುಮಕೂರಿನ ಮೂವತ್ತು ಸಾವಿರ ಯುವಕರಿಗೆ ನೇರ ಉದ್ಯೋಗ, ಲಕ್ಷ ಕ್ಕೂ ಅಧಿಕ ಜನರಿಗೆ ಪರೋಕ್ಷ ಉದ್ಯೋಗ ಸಿಗಲಿದೆ ಎಂದು ಆಗ ಬಿಜೆಪಿಯ ಮುಖಂಡರು ಹೇಳಿಕೊಂಡಿದ್ದರು. ಆದರೆ ವಾಸ್ತವದಲ್ಲಿ ಹಾಗೇನು ಆಗಲಿಲ್ಲ.

ಸ್ಥಳೀಯರಿಗೆ ಉದ್ಯೋಗ ಇರಲಿ, ರೈತರಿಗೂ ಏ‌ನೇನು ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್.

ಸಂಸದ ಜಿ.ಎಸ್.ಬಸವರಾಜ್

ಮಾಜಿ ಸಂಸದ ಎಸ್ ಪಿಎಂ

ಇಲ್ಲಿ ಏನು ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಈ ಹಿಂದಿನ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಫುಡ್ ಪಾರ್ಕ್ ಸಮಸ್ಯೆಯ ಬಗ್ಗೆ ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೆ‌ ಏನೇನು ಅಗಲಿಲ್ಲ. ಆಗ ಮಾಜಿಯಾಗಿದ್ದ ಜಿ.ಎಸ್.ಬಸವರಾಜ್‌ ಅವರು ಫುಡ್ ಪಾರ್ಕ್ ಬರಲು ಕಾರಣರು. ಇದಕ್ಕಾಗಿ ಅತ್ಯಂತ ಕಡಿಮೆ ದರದಲ್ಲಿ ರೈತರ ಭೂಮಿ ಹೋಗಿದೆ. ನಾನು ಸಂಸದನಾದರೆ ಮೊದಲು ಫುಡ್ ಪಾರ್ಕ್ ಗೆ ಭೇಟಿ ನೀಡುತ್ತೇನೆ ಎಂದಿದ್ದರು. ಅವರಿಂದಲೂ ಇನ್ನು ಏನೇನು ಆಗಿಲ್ಲ.

ಮಾಜಿ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಫುಡ್ ಪಾರ್ಕ್ ಜಮೀನು ಮಾರಲಾಗಿದೆ. ರೈತರಿಗೆ ಟೋಪಿ ಹಾಕಲಾಗಿದೆ ಎಂದು ಆರೋಪ ಮಾಡಿದ್ದರು. ಈ ಆರೋಪದ ಬಗ್ಗೆಯೂ ಫುಡ್ ಪಾರ್ಕ್ ಕಂಪನಿ ಕಡೆಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.

ಫುಡ್ ಪಾರ್ಕ್ ಸ್ಥಾಪನೆಯಿಂದ ತುಮಕೂರು ಜಿಲ್ಲೆ ಮಾತ್ರವಲ್ಲದೇ ಪಕ್ಕದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರಿಂದಲೂ ತರಕಾರಿ, ಮಾವು, ಬಾಳೆ ಮತ್ತಿತತ ಕೃಷಿ ಉತ್ಪನ್ನ ಕೊಳ್ಳುತ್ತೇವೆ. ಇದಕ್ಕಾಗಿ ಗುಬ್ಬಿ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಗ್ರಹಗಾರ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ರೈತರು ಇಲ್ಲಿಗೆ ಉತ್ಪನ್ನ ತರಬೇಕು ಎಂದು ಹೇಳಲಾಗಿತ್ತು. ಅದು ಕಾರ್ಯರೂಪಕ್ಕೆ ಬಂದಂತೆ ಕಾಣುತ್ತಿಲ್ಲ.

ಕೃಷಿ ಉತ್ಪನ್ನಗಳ ಬೆಲೆ ಕುಸಿತದ ವೇಳೆ ರೈತರಿಗೆ ಉತ್ತಮ ಬೆಲೆ ಸಿಗಲಿದೆ ಎಂದು ಹೇಳಲಾಗಿತ್ತು. ಫುಡ್ ಪಾರ್ಕ್ ಆರಂಭದ ಬಳಿಕ ಏನ್ನೆಲ್ಲ ಬದಲಾವಣೆ ಆಗಿದೆ ಎಂಬ ಬಗ್ಗೆ ಜಿಲ್ಲಾಡಳಿತ, ಕೇಂದ್ರ. ಸರ್ಕಾರ ಈಗ ಉತ್ತರಿಸಬೇಕಾಗಿದೆ.

ಪ್ರಧಾನಿ ನರೇಂದ್ರ ಮೋದಿ ರೈತರ ಸಮಾವೇಶದಲ್ಲೇ ಫುಡ್ ಪಾರ್ಕ್ ಗೆ ಸಂಬಂಧಿಸಿದಂತೆ ಉತ್ತರ ನೀಡಬೇಕಾಗಿದೆ. ಎಷ್ಟು ಸಾವಿರ ರೈತರ ಆದಾಯ ಹೆಚ್ಚಾಗಿದೆ ಎಂಬ ಬಗ್ಗೆ ಉತ್ತರ ಬೇಕಾಗಿದೆ.

ಸಂಸದರು ಪ್ರಶ್ನೆ ಎತ್ತಲಿ


ಸಂಸದರು ಈ ಬಗ್ಗೆ ಪ್ರಧಾನಿ ಅವರ ಮುಂದೆಯೇ ಪ್ರಶ್ನೆ ಎತ್ತುವ ಮೂಲಕ ಜಿಲ್ಲೆಯ ರೈತರ ಬಗೆಗಿನ ಅವರ ಕಾಳಜಿ ಹೊರ ಹಾಕಬೇಕಾಗಿದೆ ಎನ್ನುತ್ತಾರೆ ತಿಪಟೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ರಾಜಣ್ಣ.

ಇಲ್ಲಿ ಸೂರ್ಯಗ್ರಹಣ ನೋಡಿ ಖುಷಿಪಟ್ಟರು…

ತುಮಕೂರು: ಕಂಕಣ ಸೂರ್ಯಗ್ರಹಣದ ಪ್ರಯುಕ್ತ ತುಮಕೂರು ವಿಜ್ಞಾನ ಕೇಂದ್ರವು ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಸುರಕ್ಷಿತ ಸೂರ್ಯಗ್ರಹಣದ ವೀಕ್ಷಿಸಿ ಜನರು ಖುಷಿಪಟ್ಟರು.

ಇದಲ್ಲದೇ ಹಲವಾರು ಶಾಲಾ ಕಾಲೇಜುಗಳ ಬಳಿಯೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯರು, ತುಮಕೂರು ವಿಜ್ಞಾನ ಕೇಂದ್ರ ಕಾರ್ಯದರ್ಶಿ ರವಿಶಂಕರ್, ಸಿ.ಯತಿರಾಜು, ವಿಶ್ವನಾಥ್, ಕೆ.ಎನ್.ಉಮೇಶ್, ಪತ್ರಕರ್ತರಾದ ಸಾ.ಚಿ.ರಾಜ್ ಕುಮಾರ್, ಬೈರೇಶ್, ಉಪನ್ಯಾಸಕಿ ಶ್ವೇತರಾಣಿ ಇತರರು ಇದ್ದರು.

ಆಸಕ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು ಕೇಂದ್ರದ ಆವರಣದಲ್ಲಿ ದೂರದರ್ಶಕ, ಸೂಜಿರಂಧ್ರ ಬಿಂಬಗ್ರಾಹಿ, ಸನ್ ಪ್ರೊಜೆಕ್ಟರ್ ಹಾಗೂ ಸೋಲಾರ್ ಫಿಲ್ಟರ್ ಮೂಲಕ ಗ್ರಹಣವನ್ನು ವೀಕ್ಷಿಸಿದರು.

ಶೇಕಡ 89.1ರಷ್ಟು ಸೂರ್ಯನನ್ನು ಚಂದ್ರನ ಮರೆಮಾಡುವ ಅದ್ಭುತ ನೈಸರ್ಗಿಕ ವಿದ್ಯಮಾನವನ್ನು ವೀಕ್ಷಿಸಿದರು.

ಬೆಳಗ್ಗೆ 8.06 ಗಂಟೆಗೆ ಗ್ರಹಣದ ಪ್ರಥಮ ಸ್ಪರ್ಶ ನಂತರ ಗರಿಷ್ಠ ಗ್ರಹಣವು 9.27ರಿಂದ 9.30ರವರೆಗೆ ಶೇಕಡ 89.1ರಷ್ಟು ಗ್ರಹಣ ಆವರಿಸಿಕೊಂಡಿತು.

3 ಗಂಟೆ 40 ಸೆಕೆಂಡ್‍ಗಳ ಕಾಲ ಸಂಭವಿಸಲಿರುವ ಇಂತಹ ಗ್ರಹಣವನ್ನು ಮತ್ತೊಮ್ಮೆ ನೋಡಲು 17ನೇ ಫೆಬ್ರವರಿ 2064ನೇ ಇಸವಿಯವರೆಗೆ ಕಾಯಬೇಕಾಗಿದೆ.

ಸೂರ್ಯ ಗ್ರಹಣ ವೀಕ್ಷಣೆಗೆ ಇಲ್ಲಿದೆ ಉಚಿತ ಅವಕಾಶ

Publicstory.in


ತುಮಕೂರು: ಡಿಸೆಂಬರ್ 26ರಂದು ಕಂಕಣ ಸೂರ್ಯಗ್ರಹಣದ ಪ್ರಯುಕ್ತ ತುಮಕೂರು ವಿಜ್ಞಾನ ಕೇಂದ್ರವು ಕೇಂದ್ರದ ಆವರಣದಲ್ಲಿ ಸುರಕ್ಷಿತ ಸೂರ್ಯಗ್ರಹಣದ ವೀಕ್ಷಣೆಗೆ ಸಿದ್ದತೆ ಮಾಡಲಾಗಿದೆ ಎಂದು ತುಮಕೂರು ವಿಜ್ಞಾನ ಕೇಂದ್ರ ಕಾರ್ಯದರ್ಶಿ ಎಸ್.ರವಿಶಂಕರ್ (ಮಾಮರವಿ) ತಿಳಿಸಿದ್ದಾರೆ.

ಆಸಕ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು ಕೇಂದ್ರದ ಆವರಣದಲ್ಲಿ ದೂರದರ್ಶಕ, ಸೂಜಿರಂಧ್ರ ಬಿಂಬಗ್ರಾಹಿ, ಸನ್ ಪ್ರೊಜೆಕ್ಟರ್ ಹಾಗೂ ಸೋಲಾರ್ ಫಿಲ್ಟರ್ ಮೂಲಕ ಗ್ರಹಣವನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.

ಅಂದು ತುಮಕೂರಿನಲ್ಲಿ ಪಾಶ್ರ್ವ ಸೂರ್ಯ ಗ್ರಹಣ ಕಂಡುಬರಲಿದೆ. ಶೇಕಡ 89.1ರಷ್ಟು ಸೂರ್ಯನನ್ನು ಚಂದ್ರನ ಮರೆಮಾಡುವ ಅದ್ಭುತ ನೈಸರ್ಗಿಕ ವಿದ್ಯಮಾನವನ್ನು ವೀಕ್ಷಿಸಲು ಅವಕಾಶವಿದ್ದು ಜನತೆ ಮನೆಯಿಂದ ಹೊರಬಂದು ಈ ಅದ್ಭುತ ನೆರಳುಬೆಳಕಿನ ಆಟದ ದೃಶ್ಯಾವಳಿಗಳನ್ನು ಸುರಕ್ಷಿತವಾಗಿ ಕಣ್ತುಂಬಿಕೊಳ್ಳಲು ಮುಂದಾಗಿ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು.

ಅಂದು ಬೆಳಗ್ಗೆ 8.06 ಗಂಟೆಗೆ ಗ್ರಹಣದ ಪ್ರಥಮ ಸ್ಪರ್ಶ ನಂತರ ಗರಿಷ್ಠ ಗ್ರಹಣವು 9.27ರಿಂದ 9.30ರವರೆಗೆ ಶೇಕಡ 89.1ರಷ್ಟು ಗ್ರಹಣ ಆವರಿಸಿಕೊಳ್ಳುವ ಸುಂದರ ಖಗೋಳ ವಿಸ್ಮಯವನ್ನು ತಪ್ಪದೇ ವೀಕ್ಷಿಸಬೇಕು. 11 ಗಂಟೆ, 9 ನಿಮಿಷ 48 ಸೆಕೆಂಡ್ ಗೆ ಗ್ರಹಣ ಮುಕ್ತಾಯಗೊಳ್ಳಲಿದೆ.

3 ಗಂಟೆ 40 ಸೆಕೆಂಡ್‍ಗಳ ಕಾಲ ಸಂಭವಿಸಲಿರುವ ಇಂತಹ ಗ್ರಹಣವನ್ನು ಮತ್ತೊಮ್ಮೆ ನೋಡಲು 17ನೇ ಫೆಬ್ರವರಿ 2064ನೇ ಇಸವಿಯವರೆಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಗ್ರಹಣವನ್ನು ತಮ್ಮ ಮನೆಯಲ್ಲೇ ಸುರಕ್ಷಿತವಾಗಿ ವೀಕ್ಷಿಸಲು ಸೋಲಾರ್ ಫಿಲ್ಟರ್‍ಗಳು ಹಾಗೂ ಗ್ರಹಣ ಪುಸ್ತಕ ಕಡಿಮೆ ದರದಲ್ಲಿ ತುಮಕೂರು ವಿಜ್ಞಾನ ಕೇಂದ್ರದಲ್ಲಿ ಮಾರಾಟಕ್ಕೆ ಲಭ್ಯವಿದ್ದು ಆಸಕ್ತರು ಕೆ.ನಾಗರಾಜರಾವ್ 9164888006 ಇವರನ್ನು ಸಂಪರ್ಕಿಸಲು ಕೋರಿದೆ.

ವಿಜ್ಞಾನ ಕೇಂದ್ರವು ಹವ್ಯಾಸಿ ಖಗೋಳ ವೀಕ್ಷಕರ ನೇತೃತ್ವದಲ್ಲಿ ಜಿಲ್ಲಾದ್ಯಂತ ಶಾಲಾ-ಕಾಲೇಜು ಮತ್ತು ಸಾರ್ವಜನಿಕರಿಗೆ ‘ಗ್ರಹಣ ಪಯಣ’ ಅಭಿಯಾನ ನಡೆಸಿ ಗ್ರಹಣದ ಬಗ್ಗೆ ಜನಜಾಗೃತಿಯನ್ನು ಮೂಡಿಸಲಾಗಿದೆ. ಈ ಅಭಿಯಾನದಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರಹಣದ ಕುರಿತು ಪಿಪಿಟಿ ಪ್ರದರ್ಶನ ಹಾಗೂ ಉಪನ್ಯಾಸವನ್ನು ನೀಡಲಾಗಿರುತ್ತದೆ.

ಕೇಳು ಮಗುವೇ ಕಥೆ

Publicstory.in


ರಾಣಿ ಚಂದ್ರಶೇಖರ್ ಕತೆ ಹೇಳಿದರು.

ತುಮಕೂರು; ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯಿಂದ, ಪ್ರತಿ ಶನಿವಾರ ಕನ್ನಡ ಶಾಲೆಯ ಮಕ್ಕಳಿಗೆ ಕಥೆ ಹೇಳಲು ಹಮ್ಮಿಕೊಂಡಿರುವ ಕೇಳು ಮಗುವೇ ಕಥೆಯ ಸರಣಿಯ ಐದನೇ ಕಾರ್ಯಕ್ರಮವನ್ನು ತುಮಕೂರಿನ ಹೊರಪೇಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ನಡೆಸಲಾಯಿತು.

ಲೇಖಕಿ ರಾಣಿಚಂದ್ರಶೇಖರ್ ಅವರು ಕುವೆಂಪುರವರ ನನ್ನ ಗೋಪಾಲ ನಾಟಕವನ್ನು ಕಥೆಯಾಗಿಸಿ ಮಕ್ಕಳಿಗೆ ಚೆಂದವಾಗಿ ಹೇಳಿದರು .

ಅತಿಥಿಗಳಾಗಿ ಮಾತನಾಡಿದ ಸಂಘದ ನಿಕಟಪೂರ್ವ ಅಧ್ಯಕ್ಷೆ ಸಿ.ಎನ್.ಸುಗುಣಾದೇವಿ ಕಥೆ ಕೇಳುವುದರಿಂದ ಮಕ್ಕಳಲ್ಲಿ ಆಲಿಸುವ ಗುಣ ಬೆಳೆಯುತ್ತದೆ , ಕಥೆ ಹೇಳುವ ಮೂಲಕ ಮಕ್ಕಳಲ್ಲಿ ಬುದ್ದಿ ಶಕ್ತಿ ತೀಕ್ಷಣಗೊಳ್ಳುತ್ತದೆ.,ವಿದ್ಯೆ ಕಲಿಸುವ, ,ಚಾಕಚಕ್ಯತೆ ಬೆಳೆಸುವ ವಿಧಾನ ಹಿಂದಿನಿಂದಲೂ ನಮ್ಮಲ್ಲಿ ಇರುವುದಾಗಿ ಹೇಳಿ ,ಪಂಚತಂತ್ರ ಕಥೆಗಳನ್ನು ಉದಾಹರಿಸಿದರು.

ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಜಿ.ಮಲ್ಲಿಕಾ ಬಸವರಾಜು ಮಾತನಾಡಿ ,ಮಕ್ಕಳಲ್ಲಿ ಕನ್ನಡ ಸಾಹಿತ್ಯ ಮತ್ಯು ಕನ್ನಡ ಭಾಷೆಯ ಬಗ್ಗೆ ಪ್ರೀತಿ ಬೆಳೆಸುವ, ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಸಂಘವು ,ಕೇಳು ಮಗುವೇ ಕಥೆಯಾ ಸರಣಿ ಕಾರ್ಯಕ್ರಮ ಮುನ್ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಡಿ.ಗಿರಿಜಾ ಅಧ್ಯಕ್ಷತೆ ವಹಿಸಿದ್ದರು. ಸದರಿ ಶಾಲೆಯಲ್ಲಿ ಎಪ್ಪತ್ತು ಮಕ್ಕಳು ಹಾಜರಿದ್ದು ಎಲ್ಲರಿಗೂ ಕಥೆಪುಸ್ತಕ ,ಪೆನ್ನು ಪೆನ್ಸಿಲ್ ಕ್ರಯಾನ್ಸ್ ಮತ್ತು ಬಾಳೆ ಹಣ್ಣು ವಿತರಿಸಲಾಯಿತು.

ಬಳ್ಳಗೆರೆ ಬಿ.ಜಿ. ಗೀತಾಂಜಲಿಗೆ ಪ್ರಥಮ ರ‌್ಯಾಂಕ್ 

ಪಬ್ಲಿಕ್ ಸ್ಟೋರಿ: ತುಮಕೂರು ವಿಶ್ವವಿದ್ಯಾಲಯದ ಪದವಿ ಶ್ರೇಣಿ ಪಟ್ಟಿ ಯಲ್ಲಿ ಬಳ್ಳಗೆರೆ ಬಿ.ಜಿ. ಗೀತಾಂಜಲಿ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ.
ತುಮಕೂರಿನ ಸಿದ್ದಾರ್ಥ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿರುವ ಇವರು ಸಧ್ಯ ಎಸ್.ಐ.ಟಿ ಕಾಲೇಜಿನಲ್ಲಿ ಎಂ.ಬಿ.ಎ ಶಿಕ್ಷಣ ಪಡೆಯುತ್ತಿದ್ದಾರೆ.
ತಂದೆ ಗೋವಿಂದಯ್ಯ, ತಾಯಿ ಮಮತ ಅವರು ನನ್ನ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಪರೀಕ್ಷೆಯ ಭಯ ಬಿಟ್ಟು ಮನಸ್ಸನ್ನು ಕೇಂದ್ರಿಕರಿಸಿಕೊಂಡು ಒತ್ತಡವಿಲ್ಲದೆ ತಯಾರಿ ನಡೆಸಿದೆ.


ಪರೀಕ್ಷೆಗಾಗಿ ಹೆಚ್ಚುವರಿ ಸಮಯವನ್ನು ನೀಡಿಲ್ಲ ಆರಂಭದಿಂದಲೂ ಒಂದೇ ತರನಾಗಿ ತಯಾರಿ ನಡೆಸಿದ್ದೇನೆ. ಹಾಗೆಂದು ಪರೀಕ್ಷೆಯ ಹೆಸರಿನಲ್ಲಿ ಮನರಂಜನೆ ಸೇರಿದಂತೆ ಇತರೆ ವಿಚಾರಗಳನ್ನು ಬದಿಗಿಟ್ಟಿರಲಿಲ್ಲ. ಎಲ್ಲದಕ್ಕೂ ಸಮಾನವಾಗಿ ಸಮಯ ಮೀಸಲಿಡಬೇಕು. ವಿದ್ಯಾರ್ಥಿ ಜೀವನದಲ್ಲಿ ಸಮಯ ನಿರ್ವಹಣೆ ಪ್ರಮುಖ ಪಾತ್ರ ವಹಿಸುತ್ತದೆ
ಪ್ರಥಮ ರ‌್ಯಾಂಕ್ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಪಟ್ಟಿಯಲ್ಲಿ ಮೊದಲ ಹೆಸರಿರುವುದು ಸಂತಸ ತಂದಿದೆ. ಎಂ.ಬಿಯ ಮುಗಿಸಿ ಉದ್ಯಮಿಯಾಗುವ ಗುರಿ ಇದೆ ಎಂದು ಬಿ.ಜಿ. ಗೀತಾಂಜಲಿ “ಪಬ್ಲಿಕ್ ಸ್ಟೋರಿ” ಜೊತೆಗೆ ಸಂತಸ ಹಂಚಿಕೊಂಡರು.

ಇಬ್ಬರ ರಕ್ತ ಹೀರಿ ಕೊಂದಿದ್ದ ಹೆಣ್ಣು ಚಿರತೆ ಕೊನೆಗೂ ಸೆರೆ

ತುಮಕೂರು: ತಾಲ್ಲೂಕಿನ ಹೆಬ್ಬೂರು ಸುತ್ತಮುತ್ತಲ ಗ್ರಾಮಗಳಲ್ಲಿ ಒಂದು ತಿಂಗಳಿಂದ ಜನರ ನಿದ್ದೆಗೆಡಿಸಿದ್ದ ಹೆಣ್ಣು ಚಿರತೆ ಕೊನೆಗೂ ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಹೆಬ್ಬೂರು ಸಮೀಪದ ಗಿಡದಪಾಳ್ಯದಲ್ಲಿ ಬೋನು ಇಡಲಾಗಿತ್ತು. ಈ ಚಿರತೆ ಇಬ್ಬರ ರಕ್ತ ಹೀರಿ ಕೊಂದಿತ್ತು.

ಚಿರತೆ ಹಿಡಿಯಲು ಅರಣ್ಯ ಇಲಾಖೆ ಹರ ಸಾಹಸ ಪಟ್ಟಿತ್ತು. ಒಮ್ಮೆ ನಾಯಿಯನ್ನು ಕಟ್ಟಿದರೂ ಬೋನಿಗೆ ಬಿದ್ದಿರಲಿಲ್ಲ. ಬೋನಿನ ಬಳಿ ಬಂದು ನಾಯಿಯನ್ನು ನೋಡಿಕೊಂಡು ವಾಪಸ್ ಆಗಿತ್ತು.

ಇದಾದ ಬಳಿಕ ಬೋನಿಗೆ ದನದ ಮಾಂಸದ ವಾಸನೆ ಬಡಿಯುವ ದ್ರವ ಸಹ ಸಿಂಪಡಿಸಲಾಗಿತ್ತು. ಆದರೂ ಚಿರತೆ ಬೋನಿನೊಳಗೆ ಹೋಗಿರಲಿಲ್ಲ.

ಇದರಿಂದ ಕೊನೆಗೆ ಅರಣ್ಯ ಸಿಬ್ಬಂದಿ ಬೇಸತ್ತಿದ್ದರು.ನಿನ್ನೆ ನಾಯಿ ತೆಗೆದು ಕುರಿ ಕಟ್ಟಿದ್ದರು. ಕುರಿ ತಿನ್ನಲು ಹೋಗಿ ಸಿಕ್ಕಿ ಬಿದ್ದಿದೆ.

ಅರಣ್ಯ ಇಲಾಖೆ ಕೆಲಸಕ್ಕೆ ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೀಪು ಬೋರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಕಾಡು ಪ್ರಾಣಿಗಳ ಇರುವಿಕೆ ಬಗ್ಗೆ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಚಿರತೆ ದಾಳಿಗೆ ಬಲಿಯಾದ ಇಬ್ಬರ ಮಕ್ಕಳಿಗೂ ಸರ್ಕಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜೀವನ ನಾವು ಎಂಗೆ ರೂಪಿಸಿಕೊಳ್ತಿವೋ ಅಂಗೆ…

0

ಚಿದು


ಮೊನ್ನೆ ನಮ್ಮ‌ಮದುವೆ ವಾರ್ಷಿಕೋತ್ಸವ ಇತ್ತು. ಎಲ್ರೂ ಬೆಳಿಗ್ಗೆನೆ ವಾರ್ಷಿಕೋತ್ಸವದ ಶುಭ ಹಾರೈಸಿದ್ರು.‌ ಅದ್ರಲ್ಲು ನಮ್ಮ ದೊಡ್ಮನೆ ಕುಟುಂಬದ ಸದಸ್ಯರೆಲ್ಲ ಹರಸಿ ಹಾರೈಸಿದ್ರು.

ಅಂತೂ ಇಂತು ನಾವು ನಮ್ಮ ಸ್ವ-ಸ್ವತಂತ್ರ ಕಳಕೊಂಡು ಏಳು ವರ್ಷ ಮುಗಿದೋಯ್ತು. ದಿನ ಕಳೆದಿದ್ದೇ‌ ಗೊತ್ತಾಗಲಿಲ್ಲ. ಏರುಪೇರಿನ ಗಾಯನಕ್ಕೆ ಜೊತೆಗೂಡಿ ಅಡಿ ಇಟ್ಟವಳು ನಮ್ಮಾಕೆ.

ಯಾವಾಗಾದ್ರು ನನ್ನ ಮೇಲೆ ಬೇಜಾರಾದಾಗ ಅಯ್ಯೋ ಈ ಮನುಷ್ಯನ್ನ ಎಲ್ಲೆಲ್ಲೋ ಕಟ್ಕೊಂಡೆ ಅಂತ ಅವ್ಳು ಬೇಸರಿಸುತ್ತಿರುತ್ತಾಳೆ. ಬೆಳಗ್ಗೆ ಆಗಂದವಳೆ ಸಂಜೆ ಶಾಲೆಯಿಂದ ಬಂದವ್ಳು ನನಗೆ ಇಷ್ಟದ ಟೀ ಕೊಟ್ಟು ಮಧ್ಯಾಹ್ನ ಏನು ಊಟ ಮಾಡ್ಕಂಡ್ರಿ ಅಂತ ಆರೈಕೆ ಮಾಡ್ತಾಳೆ.

ಒಂದ್ವೇಳೆ ನಾನು ಮಧ್ಯಾಹ್ನ ಏನು ತಿಂದಿಲ್ಲ ಅಂದ್ರೆ.. ಅದ್ಕೂ ಬೈತಾಳೆ‌.. ಏನಾರ ತಿನ್ಕೊಳೋದಲ್ವ ಅಂತಾ… ಬೆಳಗೆ ನೋಡಿದ್ರೆ ಯಾಕಾದ್ರು ಕಟ್ಕೊಂಡೆ ಅಂದವಳು ಸಂಜೆ ನಿಗಾ ವಹಿಸ್ತಾಳೆ. ಹಿಂಗೇ ಆಗ್ಲೆ ಏಳು ವರ್ಷ ಪೂರೈಸಿ ಎಂಟನೇ ವರ್ಷಕ್ಕೆ ಕಾಲಿಟ್ಟಿದಿವಿ.

ಜೀವನ ನಾವು ಎಂಗೆ ರೂಪಿಸಿಕೊಳ್ತಿವೋ ಅಂಗೆ. ಯಾವುದನ್ನು ಹೆಚ್ಚು ‌ಹೊತ್ತು ತಲೆಲೀ ಇಟ್ಕೊಳ್ಳದೆ ಸಿಕ್ಕ ಸಣ್ಣ ಸಣ್ಣ ಸಮಯದಲ್ಲಿ ಆದಷ್ಟು ನಗ್ತಾ ಇದ್ದಿದರಲ್ಲಿ ಖುಷಿ ಪಡೋದ್ರಲ್ಲೆ ಸ್ವರ್ಗ ಸುಖ.

ನಾನಂತು ಕೆಲವು ಸಲ ನನ್ನಾಕೆ ಜೊತೆ ಜಗಳ ಹಾಡೋದ್ರಲ್ಲು ಜೀವನಾನಂದ ಅನುಭವಿಸ್ತಿನಿ ಯಾಕಂದ್ರೆ ಅವ್ಳು ನನ್ನ ಜೊತೆ ಜಗಳ ಆಡಿದಷ್ಟು ಹೆಚ್ಚೆಚ್ಚು ನನ್ನ ಕೇರ್ ಮಾಡ್ತಾಳೆ. ಜಗಳ ಹಾಡೋಕೆ, ಖುಷಿ‌ ಪಡೋಕೆ, ಅನ್ಸಿದ್ನ ಹೇಳಿಕೊಂಡು ಬೈಸಿಕೊಳ್ಳೋಕೆ ನನಗೊಂದು ಒಳ್ಳೆ ಜೀವ ಸಿಕ್ಕಿದೆ. ಇದಷ್ಟು ದಿ‌ನ ಇಂಗೇ ಇರ್ಲಿ ಭಗವಂತ…

ತಲೆ ಚಂಡಾಡಿದವರು ಎರಡೇ ದಿನದಲ್ಲಿ ಅಂದರ್

ತುಮಕೂರು: ಕೊರಟಗೆರೆ ತಾಲ್ಲೂಕಿನ ಜಿ. ನಾಗೇನಹಳ್ಳಿ ಬಳಿ ಡಿ.19ರಂದು ಸಂಜೆ ಯುವಕನೊಬ್ಬನನ್ನು ಲಾಂಗು ಮಚ್ಚುಗಳಿಂದ ಕೊಚ್ಚಿದ್ದ ಆರೋಪಿಗಳು ಕೃತ್ಯ ನಡೆದ ಎರಡೇ ದಿನದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿ ಕೊಂಡವಾಡಿಯ ಸಿ.ರಂಜಿತ್ ಕುಮಾರ್(28) ಆಲಿಯಾಸ್ ರಂಜಿತ್, ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಳೇನಹಳ್ಳಿಯ ಎಂ.ಎಚ್.ಮುನಿರಾಜು(24) ಆಲಿಯಾಸ್ ಮುನಿಯಾ, ಬೆಂಗಳೂರು ಬಗಲಗುಂಟೆಯ ಮಂಜುನಾಥ(21) ಆಲಿಯಾಸ್ ಬಟ್ಲು, ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿ ಕಾವಣದಾಲದ ನಾರಾಯಣ(27) ಆಲಿಯಾಸ್ ಕುರುಡ, ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗಾ ಹೋಬಳಿ ಗಿಡದ ಕೆಂಚನಹಳ್ಳಿಯ ಸುನಿಲ್(21), ಬಗಲಗುಂಟೆಯ ನರಸಿಂಹಮೂರ್ತಿ(21), ಅನಂತಪುರ ಜಿಲ್ಲೆ ಮಡಕಶೀರಾ ತಾಲ್ಲೂಕಿನ ಅಗಳಿ ಮಂಡಲ ಮದೂಡಿಯ ಸುರೇಶ(24) ಬಂಧಿತ ಆರೋಪಿಗಳು.

ಇವರೆಲ್ಲರೂ ಸದ್ಯ ಬೆಂಗಳೂರಿನ ಬಗಲಗುಂಟೆಯಲ್ಲಿ ವಾಸವಾಗಿದ್ದರು. ಸುನಿಲ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಡಿ. 19ರಂದು ಗುರುವಾರ ಸಂಜೆ 6 ಗಂಟೆ ಸುಮಾರಿನಲ್ಲಿ ಕೊರಟಗೆರೆ, ದಾಬಸ್ಪೇಟೆ ರಾಜ್ಯ ಹೆದ್ದಾರಿ ರಸ್ತೆಯ ಜಿ.ನಾಗೇನಹಳ್ಳಿ ಬಳಿ ಪ್ರೇಮಿಗಳಿಬ್ಬರು ಸ್ಕಾರ್ಪಿಯೋ ವಾಹನದಲ್ಲಿ ಹೋಗುತ್ತಿದ್ದಾಗ ಇನ್ನೊಂದು ಸ್ಕಾರ್ಪಿಯೋ ವಾಹನದಲ್ಲಿ ಅಡ್ಡಗಟ್ಟಿದ ಏಳು ಜನ ದುಷ್ಕರ್ಮಿಗಳು ಶ್ರೀನಿವಾಸ್(25) ಎಂಬಾತನನ್ನು ಪ್ರೇಯಸಿ ಎದುರಿನಲ್ಲೆ ಲಾಂಗು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು.

ಕೊಲೆಯಾದ ಶ್ರೀನಿವಾಸ ಮಧುಗಿರಿ ತಾಲ್ಲೂಕಿನ ಬಿದರಗೆರೆ ವಾಸಿ. ಶ್ರೀನಿವಾಸ ಹಾಗೂ ಬಗಲಗುಂಟೆ ವಾಸಿ ಅಕ್ಷತಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿನ್ನೆಯಲ್ಲಿ ಮನೆಯವರು ಒಪ್ಪಿ ಮದುವೆ ನಿಶ್ಚಯವೂ ಆಗಿತ್ತು. ಡಿ.19ರಂದು ಮಧುಗಿರಿ ತಾಲ್ಲೂಕಿನ ಬಿದರಗೆರೆ ಗ್ರಾಮಕ್ಕೆ ಇಬ್ಬರೂ ಬಂದು ವಾಪಸ್ ಆಗುವಾಗ ಜಿ. ನಾಗೇನಹಳ್ಳಿ ಬಳಿ ಶ್ರೀನಿವಾಸನ ಕೊಲೆ ಮಾಡಲಾಗಿತ್ತು. ಶ್ರೀನಿವಾಸ ಬೆಂಗಳೂರಿನ ಬಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದ. ಕೊಲೆ ಮಾಡಿದ ಆರೋಪಿಗಳ ವಿರುದ್ಧವು ವಿವಿಧ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಕ್ರಿಮಿನಲ್ ಕೇಸು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷ ದರ್ಶಿ ಶ್ರೀನಿವಾಸನ ಹೆಂಡತಿ ಅಕ್ಷತಾ ನೀಡಿದ ಹೇಳಿಕೆ ಮೇರೆಗೆ ಮಧುಗಿರಿ ಡಿವೈಎಸ್ಪಿ ಎಂ.ಪ್ರವೀಣ್ ನೇತೃತ್ವದಲ್ಲಿ ಮೊಬೈಲ್ ಜಾಡು ಹಿಡಿದು ಬೆನ್ನು ಹತ್ತಿದ ಪೊಲೀಸ್ ತಂಡ ದಾವಣಗೆರೆ ಜಿಲ್ಲೆಯ ಚನ್ನಗಿರಿ ಬಳಿ ಸ್ಕಾರ್ಪಿಯೋ ವಾಹನದ ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಒಂದು ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನ, ಲಾಂಗು, ಮಚ್ಚು, ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಕೊರಟಗೆರೆ ಸಿಪಿಐ ಎಫ್.ಕೆ.ನದಾಫ್, ಪಿಎಸೈ ಬಿ.ಸಿ.ಮಂಜುನಾಥ, ಕೋಳಾಲ ಪಿಎಸೈ ನವೀನ್ ಕುಮಾರ್, ಮಧುಗಿರಿ ಪಿಎಸೈ ಕಾಂತರಾಜು, ಎಎಸೈ ಯೋಗೀಶ್, ಸಿಬ್ಬಂದಿಗಳಾದ ಮೋಹನ್, ಜಯಸಿಂಹ, ನರಸಿಂಹರಾಜು, ನರಸಿಂಹಮೂರ್ತಿ, ವಿಷ್ಣುಕದಂ, ನಾರಾಯಣ, ಗಂಗಾಧರ್ ಇದ್ದರು. ಪ್ರಕರಣ ನಡೆದು ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಬ್ಬಂಧಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಶಿಕೃಷ್ಣ, ಹೆಚ್ಚುವರಿ ವರಿಷ್ಠಾಧಿಕಾರಿ ಉದೇಶ್ ಅವರು ಅಭಿನಂಧಿಸಿದ್ದಾರೆ.

ಡಾ.ವಿರೇಂದ್ರ ಹೆಗ್ಗಡೆಯವರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ 

ಬೆಂಗಳೂರು ಪ್ರೆಸ್ ಕ್ಲಬ್‌ ವರ್ಷದ ವ್ಯಕ್ತಿ ಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಯವರನ್ನು ಆಯ್ಕೆ ಮಾಡಿದ್ದಾರೆ.
ಯುಗದ ಸಾಧಕ ಪ್ರಶಸ್ತಿ ಗೆ ಪ್ರೊ.ಜಿ.ವೆಂಕಟಸುಬ್ಬಯ್ಯ ರವರು ಪುರುಸ್ಕೃತರಾಗಿದ್ದಾರೆ.

ಲಕ್ಷ್ಮಣ ಕೊಡಸೆ

2019 ರ ಪ್ರೆಸ್ ಕ್ಲಬ್ ವಾರ್ಷಿಕ ವ್ಯಕ್ತಿ ಗಳಾಗಿ ಎಂ. ಸಿದ್ಧರಾಜು, ಕೆ. ಸುನಿಲ್ ಪ್ರಸಾದ್, ಕೆ.ಎಚ್. ಸಾವಿತ್ರಿ, ಬಿ.ವಿ. ನಾಗರಾಜು, ರವೀಂದ್ರ ಜಿ. ಭಟ್, ಕೆ.ಚೆನ್ನೆಗೌಡ, ಬಿ.ಹರಿಶ್ಚಂದ್ರ ಭಟ್, ಅಬ್ದಲ್ ಹಮೀದ್ ಎಂ (ಪಾಳ್ಯ), ಇಮ್ರಾನ್ ಖುರೇಶಿ, ಜಿ.ಕೆ. ಸತ್ಯ, ಲಕ್ಷ್ಮಣ ಕೊಡಸೆ, ಜೋಸೆಫ್ ಹೂವರ್, ಎಸ್.ಎನ್. ಶಂಕರ್, ಬಿ.ಕೆ. ರವಿ, ರು ಬಸಪ್ಪ, ಮತ್ತು ಜಯಪ್ರಕಾಶ್ ಶೆಟ್ಟಿ ರವರುಗಳು ಭಾಜನರಾಗಿದ್ದಾರೆ.

ಡಿಸೆಂಬರ್ 31 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯ ಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ ನಾರಾಯಣ, ಲಕ್ಷ್ಮಣ ಸವದಿ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಶೈಕ್ಷಣಿಕ ಪ್ರವಾಸದ ನೆಪದಲ್ಲಿ ಖಾಸಗಿ ಶಾಲೆಗಳ ಹಗಲು ದರೋಡೆ

ಪಾವಗಡ:   ತಾಲ್ಲೂಕಿನ ಖಾಸಗಿ ಶಾಲೆಗಳಲ್ಲಿ ಪ್ರವಾಸದ ಹೆಸರಿನಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಶಾಲೆ ಆರಂಭವಾಗುವಾಗ ಶುಲ್ಕದ ಹೆಸರಿನಲ್ಲಿ 20 ರಿಂದ 40 ಸಾವಿರ ರೂಪಾಯಿ ಹಣ ವಸೂಲಿ ಮಾಡುತ್ತಾರೆ. ಕಾರ್ಯಕ್ರಮಗಳಿಗೆ, ಪುಸ್ತಕ, ಸಮವಸ್ತ್ರ ಹೀಗೆ ಪ್ರತಿಯೊಂದಕ್ಕೂ ಹಣ ದೋಚುತ್ತಾರೆ. ಡಿಸೆಂಬರ್, ಜನವರಿ ಮಾಹೆಯಲ್ಲಿ ಹತ್ತಿರದ ಮಾರಿಕಣಿವೆ, ಚಿತ್ರದುರ್ಗ ಇತರೆ ಪ್ರದೇಶಗಳಿಗೆ ಪ್ರವಾಸದ ನೆಪದಲ್ಲಿ ಮನಬಂದಂತೆ ಪೋಷಕರಿಂದ ಹಣ ವಸೂಲಿಮಾಡಲಾಗುತ್ತಿದೆ ಎಂದು ಪಟ್ಟಣದ ವೆಂಕಟೇಶ್, ಸುಮಲತಾ, ನರಸಿಂಹ ಆರೋಪಿಸಿದ್ದಾರೆ.

ಚಳ್ಳಕೆರೆ ಮಾರ್ಗದಲ್ಲಿರುವ ಖಾಸಗಿ ಶಾಲೆಯೊಂದರಿಂದ 100 ಕಿ.ಮೀ ದೂರದ ಹಿರಿಯೂರಿನ ಮಾರಿಕಣಿವೆಗೆ 150 ಮಂದಿ ವಿದ್ಯಾರ್ಥಿಗಳನ್ನು ಎರಡು ಬಸ್ ನಲ್ಲಿ ಕರೆದೊಯ್ಯಲಾಗಿದೆ. ಪ್ರತಿ ವಿದ್ಯಾರ್ಥಿಯಿಂದ 600 ರೂಪಾಯಿ ವಸೂಲಿ ಮಾಡಿದ್ದಾರೆ. ಸುಮಾರು 90 ಸಾವಿರ ವಸೂಲಿಯಾಗಿದೆ. ಇಷ್ಟೊಂದು ಹಣ ಪ್ರವಾಸಕ್ಕೆ ಖರ್ಚಾಗುತ್ತದೆಯೇ? ಉಳಿಕೆ ಹಣ ಯಾರ ಜೇಬಿಗೆ ಸೇರುತ್ತದೆ?. ಇದು ಹಗಲು ದರೋಡೆಯೇ ಸರಿ ಎಂದು  ಅಳಲು ತೋಡಿಕೊಂಡಿದ್ದಾರೆ.

ಬಸ್ ಒಂದರಲ್ಲಿ 75 ಮಂದಿಯನ್ನು ಕುರಿಮಂದೆಯಂತೆ ಕೂಡಿಕೊಂಡು ಹೋಗುವ ಇವರು  ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ. ಶಿಕ್ಷಣ ಇಲಾಖೆಯ ಅನುಮತಿಯನ್ನೂ ತೆಗೆದುಕೊಂಡಿಲ್ಲ. ಶಾಲೆಗಳು ವ್ಯಾಪಾರ ಕೇಂದ್ರಗಳಂತಾಗಿವೆ.  ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ದೂರಿದ್ದಾರೆ.

ಈ ಬಗ್ಗೆ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ ಪ್ರತಿಕ್ರಿಯಿಸಿ, ಸರ್ಕಾರಿ ಶಾಲೆಯ  ಮುಖ್ಯ ಶಿಕ್ಷಕರು ಅನುಮತಿ ತೆಗೆದುಕೊಳ್ಳುತ್ತಿದ್ದಾರೆ. ಖಾಸಗಿ ಶಾಲೆಯವರು   ಅನುಮತಿ ತೆಗೆದುಕೊಳ್ಳಬೇಕು. ಪೋಷಕರಿಂದ ಹೆಚ್ಚಿನ ಹಣ ವಸೂಲಿ ಮಾಡಬಾರದು ಜೊತೆಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಪಬ್ಲಿಕ್ ಸ್ಟೋರಿ ಗೆ ತಿಳಿಸಿದರು.