Tuesday, February 24, 2026
Google search engine
Home Blog Page 303

ಪೌರತ್ವ ತಿದ್ದುಪಡಿ ಕಾಯ್ದೆ: ತುಮಕೂರಿನಲ್ಲಿ ಪ್ರತಿಭಟನೆ

Publicstory. In


ತುಮಕೂರು; ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಎನ್ಆರ್ಸಿ ಮತ್ತು ಸಿಎಎ ಯಿಂದ ಅಜಾದಿ ಬೇಕೆಂದು ಘೋಷಣೆ ಕೂಗಿದರು.

ಪ್ರಗತಿಪರ ನಾಗರಿಕ ಸಂಘಟನೆಗಳ ಒಕ್ಕೂಟ, ದಲಿತಪರ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಕೇಂದ್ರ ಸಿಎಎ ಕಾಯ್ದೆ ಜಾರಿಯ ಮೂಲಕ ದೇಶವನ್ನು ಒಡೆಯುವ ಕೆಲಸಕ್ಕೆ ಕೈಹಾಕಿದೆ ಎಂದು ದೂರಿದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ಆವರಣ ಪೂರ್ತಿ ಪ್ರತಿಭಟನಾಕಾರರಿಂದ ತುಂಬಿ ಹೋಗಿತ್ತು. ಅಜಾದಿ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭನಾಕಾರರು ಸಂವಿಧಾನ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪೌರತ್ವ ನೋಂದಣಿ ಕಾಯ್ದೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗಳು ಸಂವಿಧಾನದ ಆಶಯಗಳಿಗೆ ವಿರುದ್ದವಾಗಿವೆ. ಸಂವಿಧಾನದ ಆರ್ಟಿಕಲ್ 14 ಮತ್ತು 21ನ್ನು ಉಲ್ಲಂಘಿಸುತ್ತವೆ. ಇದೊಂದು ಅಪಾಯಕಾರಿ ಬೆಳವಣಿಗೆ ಸಮಾಜವನ್ನು ಛಿದ್ರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಸರ್ಕಾರವೇ ಸಂವಿಧಾನ ಉಲ್ಲಂಘನೆ ಮಾಡುತ್ತಿದೆ ಎಂದು ಧರಣಿ ನಿರತರು ಆರೋಪಿಸಿದರು.

ಧರಣಿಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು. ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆ ಹಾಡಿದರು. ಕೊನೆಯಲ್ಲಿ ಭಾರತಕ್ಕೆ ಜಯವಾಗಲಿ ಘೋಷಣೆಗಳು ಮೊಳಗಿದವು. ಪೊಲೀಸರು ಕೂಡ ರಾಷ್ಟ್ರಗೀತೆಗೆ ಗೌರವ ಸೂಚಿಸಿದರು. ನಂತರ ನಗುತ್ತಿದ್ದ ದೃಶ್ಯ ಕಂಡು ಬಂತು.

ಜಿಲ್ಲಾಧಿಕಾರಿ ಕಚೇರಿ ಎದುರಿನ ಜಾಗ ಪೂರ್ತಿ ಜನಸಾಗರದಿಂದ ತುಂಬಿ ಹೋಗಿತ್ತು. ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ಭಾಗದಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಸ್ವಯಂ ಸೇವಕರು ಪ್ರತಿಭಟನಾಕಾರರನ್ನು ಶಿಸ್ತಿನಿಂದ ಕೂರುವಂತೆ ಹೇಳುತ್ತಿದ್ದ ದೃಶ್ಯವೂ ಕಂಡುಬಂತು. ಜಿಲ್ಲಾಧಿಕಾರಿಗಳ ಕಚೇರಿಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿತ್ತು. ಪೊಲೀಸರು ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶಿಸುವ ಪ್ರತಿಯೊಬ್ಬ ಅಧಿಕಾರಿಗಳ ಗುರುತಿನ ಚೀಟಿ ನೋಡಿದ ಮೇಲೆಯೇ ಅವರನ್ನು ಒಳಬಿಡುತ್ತಿದ್ದರು.

ಪ್ರತಿಭಟನೆಯಲ್ಲಿ ವಕೀಲರು, ವಿದ್ಯಾರ್ಥಿಗಳು, ಯುವಜನರು ಸೇರಿದಂತೆ ಸಹಸ್ರಾರು ಜನ ಸೇರಿದ್ದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಮುಖಂಡರು ಸಿಎಎ ಮತ್ತು ಎನ್ಆರ್ ಸಿ ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುವ ಉದ್ದೇಶವನ್ನು ಹೊಂದಿದೆ. ಯಾವುದೇ ಕಾರಣಕ್ಕೂ ಇವುಗಳನ್ನು ದೇಶದಲ್ಲಿ ಜಾರಿಗೊಳಿಸಬಾರದು. ಕೇಂದ್ರ ಸರ್ಕಾರ ಇವುಗಳ ಜಾರಿಗೆ ಮುಂದಾದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಸಿಎಎ ಮತ್ತು ಎನ್ಆರ್ಸಿ ಬಗ್ಗೆ ವಿಶ್ವದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ನಿವೃತ್ತ ನ್ಯಾಯಮೂರ್ತಿಗಳು ಸಹ ಈ ಕಾಯ್ದೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ಹಾಗಾಗಿ ಜಾರಿ ಮಾಡಬಾರದೆಂದು ಹೇಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಸಮಾಜವನ್ನು ಒಡೆಯುವ ಕೆಲಸದಲ್ಲಿ ನಿರತವಾಗಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಜನಪರ ಚಿಂತಕೆ ಕೆ.ದೊರೈರಾಜ್, ಪರಿಸರವಾದಿ ಸಿ.ಯತಿರಾಜು, ಮಾಜಿ ಶಾಸಕರಾದ ಷಫೀ ಅಹಮದ್, ರಪೀಕ್ ಅಹಮದ್, ಮುಖಂಡರಾದ ಪಿ.ಎನ್.ರಾಮಯ್ಯ, ಎ.ನರಸಿಂಹಮೂರ್ತಿ, ಸೈಯದ್ ಮುಜೀಬ್, ಬಿ.ಉಮೇಶ್, ನಿಸಾರ್ ಅಹಮದ್, ಉಬೇದ್ ಅಹಮದ್, ಬಿ.ಎಸ್. ಮಂಜುನಾಥ್, ಶಕೀಲ್, ಇನಾಯತ್, ಮುಕ್ತಿಯಾರ್, ಇಸ್ಮಾಯಿಲ್, ಷಫೀ, ಜಾಕೀರ್ ಹುಸೇನ್, ಬೆಳ್ಳಿ ಲೋಕೇಶ್, ಎನ್.ಕೆ.ಸುಬ್ರಮಣ್ಯ ಮೊದಲಾದವರು ಹಾಜರಿದ್ದರು.

ರೈತ ದಿನಾಚರಣೆ ಸರ್ಕಾರವೇ ಅಚರಿಸಲಿ: ಕೋಡಿಹಳ್ಳಿ ಜಗದೀಶ್

Publicstory.in


ತುಮಕೂರು: ರೈತರ ದಿನಾಚರಣೆಯನ್ನು ಸರ್ಕಾರಿ ದಿನಾಚರಣೆಯಾಗಿ ಸರ್ಕಾರ ಆಚರಿಸಬೇಕು. ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ರೈತರ ಬೇಡಿಕೆಗಳನ್ನು ಆಲಿಸುವ, ಕೃಷಿ ನೀತಿ ನಿರೂಪಣೆಗಳಿಗೆ ಚರ್ಚೆ ಮಾಡಬೇಕು ಎಂದು ಭಾರತೀಯ ಕೃಷಿಕ ಸಮಾಜದ‌ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್ ಹೇಳಿದರು.ತುಮಕೂರು ನಗರದ ಶ್ರೀ ಶಿರಡಿ ಸಾಯಿ ವೃದ್ಧಾಶ್ರಮ ಆವರಣದಲ್ಲಿ ಭಾರತೀಯ ಕೃಷಿಕ ಸಮಾಜ ತುಮಕೂರು ಜಿಲ್ಲೆ ರವರು ರೈತ ದಿನಾಚರಣೆ ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮಾಜಿ ಪ್ರಧಾನಿಗಳಾದ ಶ್ರೀ ಚರಣ್ ಸಿಂಗ್ ರವರ ಜನ್ಮದಿನದ ಅಂಗವಾಗಿ ರೈತ ದಿನಾಚರಣೆ ಆಚರಿಸುತ್ತೇವೆ. ಅವರು ರೈತರ ಬಗ್ಗೆ ಅಪಾರ ವಾದಂತಹ ಕಾಳಜಿ ಹೊಂದಿದ್ದರು. ಈಗಿನ ಚುನಾಯಿತ ಪ್ರತಿನಿಧಿಗಳು ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರುತ್ತಾರೆ ಆದ್ರೆ ಅಧಿಕಾರದ ಮದದಲ್ಲಿ ರೈತರನ್ನು ಮರೆತಿದ್ದಾರೆ ಎಂದು ಕಿಡಿಕಾಡಿದರು.

ಸರ್ಕಾರ ರೈತರ ದಿನವನ್ನು ಆಚರಣೆ ಮಾಡುವ ಮೂಲಕ ರೈತರಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು.
ಇವತ್ತಿನ ಪರಿಸ್ಥಿತಿಯಲ್ಲಿ ರೈತರ ಗಳಾದ ನಾವು ಪೂರ್ವಜರು ಅಳವಡಿಸಿಕೊಂಡಿದ್ದ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ನಮ್ಮ ಉದ್ದೇಶ ವಿಷಮುಕ್ತ ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.

ವಕೀಲರಾದ ಮಹೇಂದ್ರ ಕೃಷ್ಣಮೂರ್ತಿ ಅವರು ಮಾತನಾಡಿ, ಭಾರತೀಯ ಕೃಷಿಕ ಸಮಾಜ ಪವರ್ ಗ್ರಿಡ್ ವಿಚಾರವಾಗಿ, ಕೈಗಾರಿಕೆಗಳ ವಿಚಾರವಾಗಿ ಬಹಳ ದೊಡ್ಡಮಟ್ಟದ ಹೋರಾಟವನ್ನು ಮಾಡಿದ್ದರು. ಕೆಲವು ಕಾಣದ ಕೈಗಳು ಹೋರಾಟವನ್ನು ಹತ್ತಿಕ್ಕದ್ದವು ಎಂದರು.

ನಾನೊಬ್ಬ ರೈತ ಮುಖಂಡನಾಗಿ ರೈತರ ಚಳವಳಿ ಕಟ್ಟಬೇಕು ಎಂಬುದು ನನ್ನ ತಂದೆಯವರ ಆಸೆಯಾಗಿತ್ತು. 2004ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ವಿದ್ಯುತ್ ಕಳ್ಳತನ ಕಾಯ್ದೆಯಡಿ ರೈತರು ಬೋರ್ವೆಲ್ ಗೆ ವಿದ್ಯುತ್ ಸಂಪರ್ಕವನ್ನು ಮಾಡಿದರೆ ಜೈಲು ಶಿಕ್ಷೆಗೆ ಒಳಗಾಗಬೇಕಿತ್ತು. ಈ ವಿಚಾರವಾಗಿ ರೈತರು ಹೋರಾಟವನ್ನು ಮಾಡಿ ಯಶಸ್ವಿಯಾದರು ಎಂದರು.

ನಾನೊಬ್ಬ ಪತ್ರಕರ್ತನಾಗಿ ಯಶಸ್ವಿಯಾದೆ. ಯಾಕೆಂದರೆ ರೈತರ ಕಷ್ಟ ನೋವುಗಳು ನನಗೆ ತಿಳಿದಿತ್ತು. ನೀರಾವರಿ ವಿಚಾರವಾಗಿ ಆಗಿರಬಹುದು, ಕೊಬ್ಬರಿ ಹೋರಾಟಗಳು ಬಹಳಷ್ಟು ವಿಚಾರವನ್ನು ಪತ್ರಿಕೆಯಲ್ಲಿ ಬರೆದಿದ್ದೆ. ಹೊಸ ಬೀಜ ಮಸೂದೆ ಕಾಯ್ದೆ ಸರ್ಕಾರ ತರ್ಲಿಕ್ ಹೊರಟಿದೆ.ಇದು ರೈತರನ್ನು ನಿಧಾನವಾಗಿ ಒಕ್ಕಲೆಬ್ಬಿಸಲಿದೆ ಎಂದರು.

ಬೀಜ ಮಸೂದೆ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗಬೇಕಾಗಿತ್ತು. ಬೀಜ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದರೆ ಬೀಜ ಇರೋದಿಲ್ಲ ಭೂಮಿ ನು ಇರೋದಿಲ್ಲ. ಅಂತ ಪರಿಸ್ಥಿತಿ ಬರ್ತಾಯಿದೆ. ರೈತರು ಎಚ್ಚೆತ್ತುಕೊಂಡು ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಪ್ರಗತಿಪರ ರೈತರಾದ ಬಸವರಾಜ್, ವಕೀಲರಾದ ಮಹೇಂದ್ರ ಹಾಗೂ ಪರಿಸರ ಪ್ರೇಮಿ ವೃಕ್ಷಮಿತ್ರ ಸಂಸ್ಥಾಪಕರಾದ ಸಸ್ಯಶಾಸ್ತ್ರ ಮುಖ್ಯಸ್ಥರು ಸಿದ್ದಪ್ಪ ಅವರ ಮಗನಾದ ಅಮೋಘ್ ಅವರನ್ನು ಸನ್ಮಾನಿಸಲಾಯಿತು.

ಭಾರತೀಯ ಕೃಷಿಕ ಸಮಾಜದ ಗೌರವಾಧ್ಯಕ್ಷರಾದ ಬ್ರಹ್ಮಸಂದ್ರ, ಪುಟ್ಟರಾಜು ಉಪಾಧ್ಯಕ್ಷರಾದ ರಾಜಣ್ಣ ಬಿ.ಕೆ., ಸಂಘಟನಾ ಕಾರ್ಯದರ್ಶಿಗಳಾದ ಸಿದ್ದಪ್ಪ, ಗೌಡಿಹಳ್ಳಿ ಸಹಕಾರ್ಯದರ್ಶಿ ಆನಂದ್, ನಿರ್ದೇಶಕರಾದ ಅನು ಕುಮಾರ್, ಪೃಥ್ವಿರಾಜ್ ಗಿರೀಶ್ ವೀರಣ್ಣ, ಈಶ್ವರ್, ಖಜಾಂಚಿ ಧನಂಜಯ ಮತ್ತಿತರರು ಇದ್ದರು.

ಭಾರತಿ ಗೋವಿಂದರಾಜು ಆಯ್ಕೆ

ಜೆಡಿಎಸ್ ಮಹಿಳಾ ಜಿಲ್ಲಾ ಕಾರ್ಯಾಧ್ಯಕ್ಷೆಯಾಗಿ ಮಧುಗಿರಿ ಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭಾರತಿ ಗೋವಿಂದರಾಜು ಆಯ್ಕೆಯಾಗಿದ್ದಾರೆ.

Kpsc: ಸಿರಾದ ಭೂತೇಗೌಡಗೆ 6ನೇ ಶ್ರೇಯಾಂಕ: Dysp ಹುದ್ದೆಗೆ ಆಯ್ಕೆ

3

ಲಕ್ಷ್ಮೀಕಾಂತರಾಜು ಎಂಜಿ, 9008777110


ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಗೆಜಿಟೆಡ್ ಪ್ರೊಬೆಷನರಿ ಗ್ರೂಪ್ ಎ‌ ಮತ್ತು ಗ್ರೂಪ್ ಬಿ ಅಧಿಕಾರಿಗಳ ನೇಮಕಾತಿಯ ಫಲಿತಾಂಶ ಪ್ರಕಟಗೊಂಡಿದ್ದು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ವಡ್ಡನಹಳ್ಳಿ ಗ್ರಾಮದ ಭೂತೇಗೌಡ ಫಲಿತಾಂಶದಲ್ಲಿ ರಾಜ್ಯಕ್ಕೇ ಆರನೇ ಶ್ರೇಯಾಂಕ ಪಡೆದು ಡಿವೈಎಸ್ಪಿ ಹುದ್ದೆಯ ಪಟ್ಟಿಯಲ್ಲಿ ಮೊದಲ ಶ್ರೇಯಾಂಕದೊಂದಿಗೆ ಆಯ್ಕೆಯಾಗಿರುವುದು ತುಮಕೂರು ಜಿಲ್ಲೆಯ ಮಟ್ಟಿಗೆ ಹೆಮ್ಮೆಯೇ ಸರಿ.

2017 ರ ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆಯಲ್ಲಿ ಅರ್ಜಿ ಕರೆದು ಎಲ್ಲ ಪ್ರಕ್ರಿಯೆಗಳೂ ಮುಗಿದು ಡಿ 23 ರಂದು ಫಲಿತಾಂಶ ಪ್ರಕಟಗೊಂಡು ರಾಜ್ಯಕ್ಕೆ ಆರನೇ ಶ್ರೇಯಾಂಕವನ್ನು ಭೂತೇಗೌಡ ಹಾಗೂ ಹರ್ಷವರ್ಧನ ಎಂಬುವರು ಪಡೆದಿರುತ್ತಾರೆ.

ಆರನೇ ಶ್ರೇಯಾಂಕ ಪಡೆದ ಇವರಲ್ಲಿ ವಯೋಮಿತಿಯಲ್ಲಿ ಒಂದು ವರ್ಷ ದೊಡ್ಡವರಾದ ಹರ್ಷವರ್ಧನ ಅವರು ಎಸಿ ರೆವೆನ್ಯೂ ಹುದ್ದೆಗೆ ಆಯ್ಕೆಯಾಗಿ ಭೂತೇಗೌಡ ಅವರು ಡಿವೈಎಸ್ಪಿಯಾಗಿ ಆಯ್ಕೆಯಾಗಿರುವುದು ನೇಮಕಾತಿಗಳ ನಿಯಮದಿಂದ ಭೂತೇಗೌಡರಿಗೆ ಎಸಿ ಹುದ್ದೆ ತಪ್ಪಿರುವುದು ಬೇಸರದ ಸಂಗತಿಯಾಗಿದೆ.

ಸಿರಾ ತಾಲ್ಲೂಕಿನ‌ ವಡ್ಡನಹಳ್ಳಿಯ ಕುಂಚಿಟಿಗ ಸಮುದಾಯದ ಶಂಕರಲಿಂಗೇಗೌಡ ,ಶ್ರೀಮತಿ‌ ದಾಕ್ಷಾಯಿಣಿ ದಂಪತಿಯ ಪುತ್ರರಾದ ಭೂತೇಗೌಡರು ಪ್ರಾಥಮಿಕ ಶಿಕ್ಷಣವನ್ನ ಹುಟ್ಟೂರು ವಡ್ಡನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮುಗಿಸಿ ಹೈಸ್ಕೂಲು ಶಿಕ್ಷಣವನ್ನ ಶಿರಾ ನಗರದ ಸೆಂಟಾನ್ಸ್ ಶಾಲೆಯಲ್ಲಿ ಕಲಿತು ಬಿಇ ಪದವಿಯನ್ನ ಬೆಂಗಳೂರಿನ ಆರ್ ಎನ್ ಎಸ್ ಕಾಲೇಜಿನಲ್ಲಿ ಪಡೆದಿರುತ್ತಾರೆ.

ಯಾವುದೇ ಅಧಿಕಾರಿ ಹಿನ್ನೆಲೆ ಹೊಂದಿಲ್ಲದೆ ಸ್ವ ಪರಿಶ್ರಮದಿಂದ ಒಂದು ಸಣ್ಣ ಹಳ್ಳಿಯಿಂದ ಇಂಥಹ ಒಂದು ದೊಡ್ಡ ಹುದ್ದೆಗೇರಿರುವುದು ಸುಲಭದ ಮಾತಲ್ಲ.

ತಾಂತ್ರಿಕ ಪದವಿಯನ್ನ ಪಡೆದರೂ ಕರ್ನಾಟಕ ಆಡಳಿತ ಸೇವೆ ಮಾಡಲೆಂದು ಆಸಕ್ತಿ ವಹಿಸಿ ಸುದೀರ್ಘ ಅಧ್ಯಯನದ ಫಲವಾಗಿ ಎರಡನೇ ಪ್ರಯತ್ನದಲ್ಲಿ ಭೂತೇಗೌಡರು ಯಶಸ್ವಿಯಾಗಿದ್ದಾರೆ. ಮೊದಲನೇಯ ಪ್ರಯತ್ನದಲ್ಲಿ ಸಂದರ್ಶನದ ಹಂತದವರೆಗೂ ಬಂದು ಆಯ್ಕೆಯಾಗಿರಲಿಲ್ಲ.

ಪ್ರತಿಭೆ ಇದ್ದರೆ ಯಾವುದೇ ಶಿಫಾರಸ್ಸು ಇಲ್ಲದಿದ್ದರೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ಡಿವೈಎಸ್ಪಿ ಹುದ್ದೆಯನ್ನ ಪಡೆಯಬಹುದು ಎಂಬುದಕ್ಕೆ ಇವರು ಸಾಕ್ಷಿಯಾಗಿದ್ದಾರೆ.


ಕೆಪಿಎಸ್ಸಿಯ ಫಲಿತಾಂಶದಲ್ಲಿ ರಾಜ್ಯಕ್ಕೆ ಆರನೇಯ ಶ್ರೇಯಾಂಕ ಸ್ಥಾನದಲ್ಲಿದ್ದರೂ ನೇಮಕಾತಿ ನಿಯಾಮಳಿಗಳ ಪ್ರಕಾರ ಪ್ರತಿಸ್ಪರ್ಧಿಗಿಂತ ನಾನು ಒಂದು ವರ್ಷ ಚಿಕ್ಕವನಾಗಿರುವ ಕಾರಣ ಎಸಿ ರೆವೆನ್ಯೂ ಹುದ್ದೆ ಕೈ ತಪ್ಪಿದೆ. ಇದರಿಂದ ಬೇಸರವೇನಿಲ್ಲ. ಆಯ್ಕೆಯಾಗಿರುವ ಡಿವೈಎಸ್ಪಿ ಹುದ್ದೆಗೆ ತೃಪ್ತಿ ಇದೆ. ಮುಂದಿನ ದಿನಗಳಲ್ಲಿ ಐಎಎಸ್ ಅಧಿಕಾರಿ ಆಗುವ ಬಯಕೆ ಇದ್ದು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆಯಲಿದ್ದೇನೆ.


ಭೂತೇಗೌಡ

ಕಳಪೆ ಎರೆಹುಳುಗೊಬ್ಬರ: ಪ್ರತಿಭಟನೆ

ತುಮಕೂರು: ಖಾಸಗಿ ಸಂಸ್ಥೆಯೊಂದು ವಿತರಿಸಿರುವ ಎರೆಹುಳು ಗೊಬ್ಬರ ಕಳಪೆಯಿಂದ ಕೂಡಿದ್ದು ಆ ಸಂಸ್ಥೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರೈತರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.

: ಜಿಲ್ಲಾಧಿಕಾರಿ ಕಚೇರಿ ಮುಂದೆ ಜಾಮಾಯಿಸಿ ರೈತರು ಖಾಸಗಿ ಸಂಸ್ಥೆ ವಿತರಿಸಿರುವ ಎರೆಹುಳು ಗೊಬ್ಬರವನ್ನು ನೀರಿನಲ್ಲಿ ಹಾಕಿದರೆ ಬರೀ ಮಣ್ಣು ಮತ್ತು ಕಲ್ಲುಗಳೇ ತುಂಬಿದೆ. ಇದು ಕಳಪೆಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಕಳಪೆ ಎರೆಹುಳು ಗೊಬ್ಬರ ವಿತರಿಸಿರುವ ಸಂಸ್ಥೆ ಹಾಗೂ ಈ ಸಂಸ್ಥೆಗೆ ಬೆಂಬಲವಾಗಿರುವ ಅಧಿಕಾರಿಗಳ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರಿಗೆ ಮನವಿ ಪತ್ರವನ್ನು ಅರ್ಪಿಸಲಾಯಿತು.

ಡಿ.ಟಿ ಲಸಿಕೆ: ಮಗು ಸಾವು- ಆರೋಪ

ಮಧುಗಿರಿ: ಶಾಲೆಯಲ್ಲಿ ನೀಡಿದ ಡಿ.ಟಿ ಲಸಿಕೆಯಿಂದ ಪಟ್ಟಣದ ಖಾಸಗಿ ಶಾಲೆಯ 5ನೇ ತರಗತಿಯ ವಿಧ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ತಾಲ್ಲೂಕಿನ ಪುರವರ ಹೋಬಳಿಯ ಗೋವಿಂದನಹಳ್ಳಿ ಗ್ರಾಮದ ನರೇಂದ್ರ ಕುಮಾರ್ ಹಾಗೂ ರಾಧಮಣಿ ಎಂಬುವರ ಪುತ್ರ ನವೀನ್ (11) ಮೃತಪಟ್ಟವನಾಗಿದ್ದು, ಸೋಮವಾರ ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳಿಗೆ ಡಿ.ಟಿ ಲಸಿಕೆಯನ್ನು ನೀಡಲಾಗಿತ್ತು. ಶಾಲೆ ಬಿಟ್ಟ ನಂತರ ಮನೆಗೆ ಬಂದ ವಿದ್ಯಾರ್ಥಿ ನವೀನ್ ನೀರು ಕುಡಿದು ಕುಸಿದು ಬಿದ್ದಿದ್ದಾನೆ. ಪೋಷಕರು ಕೂಡಲೇ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅಸುನೀಗಿದ್ದಾರೆ. ಸಾರ್ವಜನಿಕ ಆಸ್ಪತ್ರೆ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಡಿವೈಎಸ್ ಪಿ ಪ್ರವೀಣ್ , ಪಿಎಸ್ ಐ ಕಾಂತರಾಜು, ಡಿಡಿಪಿಐ ಚನ್ನಬಸಪ್ಪ,

ಬಿಇಒ ರಂಗಪ್ಪ , ಚಿಕ್ಕಮಾಲೂರು ಗ್ರಾ.ಪಂ.ಅಧ್ಯಕ್ಷ ವಿ.ಆರ್.ಭಾಸ್ಕರ್, ಭೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದರು.

ಪಾವಗಡ: ರೈತರ ದಿನಾಚರಣೆ

Publicstory.in


ಪಾವಗಡ: ಹೆಲ್ಪ್ ಸೊಸೈಟಿ ಸಂಸ್ಥೆ ಮತ್ತು ಬ್ರೈಟ್ ಫ್ಯೂಚರ್ ಸಂಸ್ಥೆ ಇವರ ಸಮಕ್ಷದಲ್ಲಿ ರೈತರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿ ಕಿರಣ್ ರವರು ಮಾತನಾಡುತ್ತ ಈ ದೇಶದ ಬೆನ್ನೆಲುಬು ರೈತರಾಗಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಘ ಸಂಸ್ಥೆಗಳು ರೈತರನ್ನು ಗುರ್ತಿಸಿ ರೈತರ ದಿನಾಚರಣೆ ಆಚರಿಸಬೆಕೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಂತರ ವೀರಮ್ಮನಹಳ್ಳಿ ಬಲರಾಮ ನವರು ಮಾತನಾಡುತ್ತ ರಾತ್ರಿ ಹಗಲು ಕಷ್ಟಪಟ್ಟು ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿದರೆ ರೈತರ ಕಷ್ಟಕ್ಕೆ ಒಂದು ಅರ್ಥ ಇರುತ್ತದೆ, ರೈತರನ್ನು ಗುರ್ತಿಸಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವ ಹೆಲ್ಪ್ ಸೊಸೈಟಿ ಮತ್ತು ಬ್ರೈಟ್ ಫ್ಯೂಚರ್ ಸಂಸ್ಥೆಗಳಿಗೆ ಧನ್ಯವಾದಗಳು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವಿವಿಧ ಬೆಳೆಗಳು ಬೆಳೆಯುವ ಸಾಯಿ ಕ್ರಿಷ್ಣರೆಡ್ಡಿ, ಎಂ.ಎಸ್.ಬಲರಾಮ್, ಗಿರಿಬಾಬು, ರಹಮತ್ತುಲ್ಲ,ಗೋವಿಂದ ಎನ್ನುವ ಐದು ಮಂದಿ ರೈತರಿಗೆ ಸನ್ಮಾನ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ವೀರಮ್ಮನಹಳ್ಳಿ ಲೋಕೇಶ್, ಗೌತಮ್, ಕಾರ್ತಿಕ್,ಅನಿಲ್,ರಾಜು,ಆದಿಶೇಶು ಮತ್ತು ಬ್ರೈಟ್ ಫ್ಯೂಚರ್ ಸಂಸ್ಥೆಯ ಸಿ.ಇ.ಒ ಶ್ರೀಧರ್ ಗುಪ್ತಾರವರು ಹಾಗು ಬ್ರೈಟ್ ಫ್ಯೂಚರ್ ಟೈಲರಿಂಗ್ ತರಬೇತಿಯ ಮಹಿಳೆಯರು ಮತ್ತು ಬ್ರೈಟ್ ಫ್ಯೂಚರ್ ಕಂಪ್ಯೂಟರ್ ತರಬೇತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು

ಡಿ.26ರಂದು ಸೂರ್ಯಗ್ರಹಣ ನೋಡಿ ಆನಂದಿಸಿ

Publicstory.in


ತುಮಕೂರು: ದಿನಾಂಕ:26-12-2019ರಂದು ಘಟಿಸಲಿರುವ ಕಂಕಣ ಸೂರ್ಯಗ್ರಹಣದ ಪ್ರಯುಕ್ತ ತುಮಕೂರು ವಿಜ್ಞಾನ ಕೇಂದ್ರವು ಕೇಂದ್ರದ ಆವರಣದಲ್ಲಿ ಸುರಕ್ಷಿತ ಸೂರ್ಯಗ್ರಹಣದ ವೀಕ್ಷಣೆಗೆ ಸಿದ್ದತೆ ಮಾಡಲಾಗಿದೆ ಎಂದು ತುಮಕೂರು ವಿಜ್ಞಾನ ಕೇಂದ್ರ ಕಾರ್ಯದರ್ಶಿ ಎಸ್.ರವಿಶಂಕರ್ (ಮಾಮರವಿ) ತಿಳಿಸಿದ್ದಾರೆ.

ಆಸಕ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ಶಿಕ್ಷಕರು ಕೇಂದ್ರದ ಆವರಣದಲ್ಲಿ ದೂರದರ್ಶಕ, ಸೂಜಿರಂಧ್ರ ಬಿಂಬಗ್ರಾಹಿ, ಸನ್ ಪ್ರೊಜೆಕ್ಟರ್ ಹಾಗೂ ಸೋಲಾರ್ ಫಿಲ್ಟರ್ ಮೂಲಕ ಗ್ರಹಣವನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.

ಅಂದು ತುಮಕೂರಿನಲ್ಲಿ ಪಾಶ್ರ್ವ ಸೂರ್ಯ ಗ್ರಹಣ ಕಂಡುಬರಲಿದೆ. ಶೇಕಡ 89.1ರಷ್ಟು ಸೂರ್ಯನನ್ನು ಚಂದ್ರನ ಮರೆಮಾಡುವ ಅದ್ಭುತ ನೈಸರ್ಗಿಕ ವಿದ್ಯಮಾನವನ್ನು ವೀಕ್ಷಿಸಲು ಅವಕಾಶವಿದ್ದು ಜನತೆ ಮನೆಯಿಂದ ಹೊರಬಂದು ಈ ಅದ್ಭುತ ನೆರಳುಬೆಳಕಿನ ಆಟದ ದೃಶ್ಯಾವಳಿಗಳನ್ನು ಸುರಕ್ಷಿತವಾಗಿ ಕಣ್ತುಂಬಿಕೊಳ್ಳಲು ಮುಂದಾಗಿ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು.

ಅಂದು ಬೆಳಗ್ಗೆ 8.06 ಗಂಟೆಗೆ ಗ್ರಹಣದ ಪ್ರಥಮ ಸ್ಪರ್ಶ ನಂತರ ಗರಿಷ್ಠ ಗ್ರಹಣವು 9.27ರಿಂದ 9.30ರವರೆಗೆ ಶೇಕಡ 89.1ರಷ್ಟು ಗ್ರಹಣ ಆವರಿಸಿಕೊಳ್ಳುವ ಸುಂದರ ಖಗೋಳ ವಿಸ್ಮಯವನ್ನು ತಪ್ಪದೇ ವೀಕ್ಷಿಸಬೇಕು. 11 ಗಂಟೆ, 9 ನಿಮಿಷ 48 ಸೆಕೆಂಡ್ ಗೆ ಗ್ರಹಣ ಮುಕ್ತಾಯಗೊಳ್ಳಲಿದೆ. 3 ಗಂಟೆ 40 ಸೆಕೆಂಡ್‍ಗಳ ಕಾಲ ಸಂಭವಿಸಲಿರುವ ಇಂತಹ ಗ್ರಹಣವನ್ನು ಮತ್ತೊಮ್ಮೆ ನೋಡಲು 17ನೇ ಫೆಬ್ರವರಿ 2064ನೇ ಇಸವಿಯವರೆಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಗ್ರಹಣವನ್ನು ತಮ್ಮ ಮನೆಯಲ್ಲೇ ಸುರಕ್ಷಿತವಾಗಿ ವೀಕ್ಷಿಸಲು ಸೋಲಾರ್ ಫಿಲ್ಟರ ಹಾಗೂ ಗ್ರಹಣ ಪುಸ್ತಕ ಕಡಿಮೆ ದರದಲ್ಲಿ ತುಮಕೂರು ವಿಜ್ಞಾನ ಕೇಂದ್ರದಲ್ಲಿ ಮಾರಾಟಕ್ಕೆ ಲಭ್ಯವಿದ್ದು ಆಸಕ್ತರು ಕೆ.ನಾಗರಾಜರಾವ್ 9164888006 ಇವರನ್ನು ಸಂಪರ್ಕಿಸಲು ಕೋರಿದೆ.

ವಿಜ್ಞಾನ ಕೇಂದ್ರವು ಹವ್ಯಾಸಿ ಖಗೋಳ ವೀಕ್ಷಕರ ನೇತೃತ್ವದಲ್ಲಿ ಜಿಲ್ಲಾದ್ಯಂತ ಶಾಲಾ-ಕಾಲೇಜು ಮತ್ತು ಸಾರ್ವಜನಿಕರಿಗೆ ‘ಗ್ರಹಣ ಪಯಣ’ ಅಭಿಯಾನ ನಡೆಸಿ ಗ್ರಹಣದ ಬಗ್ಗೆ ಜನಜಾಗೃತಿಯನ್ನು ಮೂಡಿಸಲಾಗಿದೆ. ಈ ಅಭಿಯಾನದಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರಹಣದ ಕುರಿತು ಪಿಪಿಟಿ ಪ್ರದರ್ಶನ ಹಾಗೂ ಉಪನ್ಯಾಸವನ್ನು ನೀಡಲಾಗಿರುತ್ತದೆ.

ಪಾದಪೂಜೆ ಮೂಲಕ ರೈತ ದಿನಾಚರಣೆ

ಕುಣಿಗಲ್ ನ ರೈತ ಸಂಘ ಹಾಗೂ ಹಸಿರು ಸೇನೆ ಕಚೇರಿಯಲ್ಲಿ ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಶಆನಂದ ಪಟೇಲ್ ಹಾಗೂ ವಿವಿಧ ರೈತ ಮುಖಂಡರ ನೇತೃತ್ವದಲ್ಲಿ #ವಿಶ್ವ_ರೈತ_ದಿನಾಚರಣೆ ಯನ್ನು ರೈತರಿಗೆ ಗೌರವಪೂರ್ವಕವಾಗಿ ಪಾದಪೂಜೆ ಮಾಡುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೊಗಳು.

ONLINE ಪರೀಕ್ಷೆ: ITI ವಿದ್ಯಾರ್ಥಿಗಳ ಪ್ರತಿಭಟನೆ

ಐಟಿಐ ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ನಡೆಸಲು ಉದ್ದೇಶಿಸಿರುವುದನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ ಮಧುಗಿರಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ)ದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆನ್ ಲೈನ್ ಪರೀಕ್ಷೆ ಬರೆಯಲು ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಬಹುತೇಕ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಇಲ್ಲ. ಹೀಗಾಗಿ ಮೊದಲಿನಂತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಐಟಿಐ ಕಾಲೇಜುಗಳಿಂದ ಆಗಮಿಸಿದ ನೂರಾರು ವಿದ್ಯಾರ್ಥಿಗಳು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಸಮಾವೇಶಗೊಂಡು ಕೆಲ ಕಾಲ ಧರಣಿ ನಡೆಸಿದರು. ಕೂಡಲೇ ಆನ್ ಲೈನ್ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಉಪವಿಭಾಗಾಧಿಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಪತ್ರವನ್ನು ಸಲ್ಲಿಸಿದರು.
ಆನ್ ಲೈನ್ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ.

ವಿದ್ಯುತ್ ಪದೇ ಪದೇ ಕೈಕೊಡುತ್ತದೆ. ಸರ್ವರ್ ಸಮರ್ಪಕವಾಗಿರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಪರೀಕ್ಷೆ ಎದುರಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದರು.