Monday, February 23, 2026
Google search engine
Home Blog Page 306

ಪ್ರತಿಭಟನೆಗೆ ನಿರಾಕರಣೆ – ಪೊಲೀಸರೊಂದಿಗೆ ಮುಖಂಡರ ವಾಗ್ವಾದ

ತುಮಕೂರು/ಹಾಸನ: ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಗಳನ್ನು ವಿರೋಧಿಸಿ ಪ್ರಗತಿಪರ ನಾಗರಿಕ ಸಂಘಟನೆಗಳ ಒಕ್ಕೂಟದಿಂದ ಗುರುವಾರ ತುಮಕೂರು, ಹಾಸನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ತುಮಕೂರಿನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ವಾಗ್ವಾದ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆ ಸಜ್ಜಾಗಿದ್ದ ಮುಖಂಡರನ್ನು ಸುತ್ತುವರಿದ ನೂರಾರು ಪೊಲೀಸರು ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಾಗಿ ಪ್ರತಿಭಟನೆ ಅವಕಾಶ ನೀಡುವುದಿಲ್ಲ ಎಂದರು. ಇದಕ್ಕೆ ಪ್ರಗತಿಪರ ನಾಗರಿಕ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಪೊಲೀಸರಿಗೂ-ಮುಖಂಡರ ನಡುವೆ ವಾಗ್ವಾದ ನಡೆಯಿತು.

ಹಾಸನದಲ್ಲಿ ಸೇರಿದ್ದ ಪ್ರತಿಭಟನಾಕಾರರು

ಪೊಲೀಸರು ಸುತ್ತುವರಿಯುತ್ತಿದ್ದಂತೆಯೇ ಅಲ್ಲಲ್ಲಿ ಚದುರಿದಂತಿದ್ದ ಪ್ರತಿಭಟನಾಕಾರರು ಪೊಲೀಸರತ್ತ ಧಾವಿಸಿದರು. ಆಗ ಮೈಕ್ ಮೂಲಕ 144 ನಿಷೇಧಾಜ್ಞೆ ಜಾರಿಯಲ್ಲಿದೆ. ಗುಂಪು ಸೇರಬಾರದು ಎಂದು ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿ ಕಳಿಸಿದರು.

ಹಾಸನದಲ್ಲಿ‌ ನಿಷೇಧಾಜ್ಞೆ ಉಲ್ಲಂಗಿಸಿ NRC CAA ವಿರೋಧಿಸಿ ಎಡಪಕ್ಷಗಳು ಮತ್ತು ಜಾತ್ಯಾತೀತ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಹಾಸನದಲ್ಲಿ ಸೇರಿದ್ದ ಪ್ರತಿಭಟನಾಕಾರರು

ತುಮಕೂರಿನಲ್ಲಿ ಪಿಯುಸಿಎಲ್ ಜಿಲ್ಲಾಧ್ಯಕ್ಷ ಕೆ.ದೊರೈರಾಜ್, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಸ್ಲಂ ಜನಾಂದೋಲ ಸಂಚಾಲಕ ಎ.ನರಸಿಂಹಮೂರ್ತಿ, ಸಾಮಾಜಿಕ ಕಾರ್ಯಕರ್ತರಾದ ತಾಜುದ್ದೀನ್, ಅತೀಕ್ ಅಹಮದ್, ಸೈಯದ್ ಮುಜಪೀರ್, ಕರ್ನಾಟಕ ಪ್ರಾಂತ ಸಂಘದ ಸಹಸಂಚಾಲಕ ಬಿ.ಉಮೇಶ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಅವರನ್ನು ಪೊಲೀಸರು ಮಾತುಕತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಕರೆದೊಯ್ದರು.
ಎಎಸ್‍ಪಿ ನೇತೃತ್ವದಲ್ಲಿ ಮಾತುಕತೆ ನಡೆಯಿತು.

ತುಮಕೂರಿನಲ್ಲಿ ….

ಪ್ರತಿಭಟಟನೆ ನಮ್ಮ ಹಕ್ಕು ಅದನ್ನು ಹತ್ತಿಕ್ಕುವುದು ಸರಿಯಲ್ಲ. ಸಂವಿಧಾನಬದ್ದವಾಗಿರುವ ಪ್ರತಿಭಟನೆಯ ಹಕ್ಕನ್ನು ನಿಷೇಧಾಜ್ಞೆ ಜಾರಿಗೊಳಿಸಿ ಬೆದರಿಸಿರುವುದು ಖಂಡನೀಯ. ಪ್ರತಿಭಟನೆ ನಡೆಸಲು ನಮಗೆ ಅವಕಾಶ ನೀಡಬೇಕು ಎಂದು ನಾಯಕರು ಪಟ್ಟುಹಿಡಿದರು. ನಂತರ ಅಪರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿಯಲ್ಲಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಅಂಗೀಕರಿಸಿ ಕಾಯ್ದೆಯನ್ನಾಗಿ ಜಾರಿಗೆ ತರಲು ಹೊರಟಿದೆ. ಸಿಎಎ-2019 ಕಾಯ್ದೆಯಂತೆ ಆಫ್ಘಾನಿಸ್ತಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ದಿಂದ ಬಂದಿರುವ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯದವರು ಡಿಸೆಂಬರ್ 31, 2014ರ ಮೊದಲು ಭಾರತಕ್ಕೆ ಬಂದು ಕೇವಲ ಐದು ವರ್ಷ ನೆಲೆಸಿದ್ದರೆ ಅವರನ್ನು ಅಕ್ರಮ ವಲಸಿಗರೆಂದು ಪರಿಗಣಿಸದೆ ಪೌರತ್ವ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಆದಿವಾಸಿಗಳು, ದಲಿತರು, ಬಡವರು, ನಿರಾಶ್ರಿತರು, ದೊಡ್ಡ ಯೋಜನೆಗಳಿಂದ ಸ್ಥಳಾಂತರಗೊಂಡವರು, ವಲಸೆ ಕಾರ್ಮಿಕರು, ಅಲೆಮಾರಿಬುಡಕಟ್ಟು ಸಮುದಾಯಗಳು, ಕಳ್ಳಸಾಗಾಣಿಕೆಯಾದವರು, ಮದುವೆ ನಂತರ ಗಂಡನ ಮನೆಗೆ ಹೋದ ಮಹಿಳೆಯರು ಸೇರಿದಂತೆ ಇವರೆಲ್ಲರೂ ಎನ್.ಆರ್.ಸಿ. ಪೌರತ್ವದ ಆಧಾರಕ್ಕಾಗಿ ಬೇಕಾಗುವ 50 ವರ್ಷಗಳ ದಾಖಲೆಗಳನ್ನು ಪಡೆಯುವುದು ಕಷ್ಟಸಾಧ್ಯವೇ ಸರಿ ಎಂದು ತಿಳಿಸಲಾಗಿದೆ.

ಕೇಂದ್ರ ಸರ್ಕಾರದ ಈ ಕ್ರಮ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಸಂವಿಧಾನ ಆರ್ಟಿಕಲ್ 14 ಮತ್ತು 21ರ ಪ್ರಕಾರ ನೀಡಿರುವ ಸಮಾನತೆ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಈಗ ಜಾರಿಗೊಳ್ಳುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‍ಆರ್‍ಸಿ ಕಾಯ್ದೆ ಮೂಲಭೂತ ಹಕ್ಕುಗಳು, ನೈಸರ್ಗಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.

ಈಗಾಗಲೇ ಅಸ್ಸಾಂನಲ್ಲಿ ಎನ್‍ಆರ್‍ಸಿ ಯಿಂದ 19 ಲಕ್ಷ ಮಂದಿ ಪೌರತ್ವದಿಂದ ವಂಚಿತರಾಗಿದ್ದಾರೆ. ಇದೇ ದೇಶದಲ್ಲಿ ಹುಟ್ಟಿ ಬೆಳೆದು ಮರಣದ ಸಮೀಪದಲ್ಲಿರುವ ಜನರು ಪೌರತ್ವವನ್ನು ಸಾಬೀತುಪಡಿಸಲು ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆಯೂ ಇದೇ ಪರಿಸ್ಥಿತಿ ದೇಶಾದ್ಯಂತ ಉದ್ಭವವಾಗಲಿದೆ. ಈ ಹಿನ್ನೆಲೆಯಲ್ಲಿ ಸಿಎಎ ಮತ್ತು ಎನ್‍ಆರ್‍ಎ ಕಾಯ್ದೆ ಜಾರಿಗೊಳಿಸಬಾರದೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು‌ ಕೋರಿಕೊಂಡಿದ್ದಾರೆ.

ಬರಗೂರು ನೇತೃತ್ವದಲ್ಲಿ ತುಮಕೂರಿನಲ್ಲಿ ಯುವ ಬರಹಗಾರರ ಕಾರ್ಯಾಗಾರ

ತುಮಕೂರು: ಕರ್ನಾಟಕ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯಿಂದ ತುಮಕೂರಿನಲ್ಲಿ ರಾಜ್ಯಮಟ್ಟದ ಯುವ ಬರಹಗಾರರಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2020ರ ಜನವರಿ 4 ಮತ್ತು 5 ರಂದು ಎರಡು ದಿನಗಳ ಕಾಲ ನಡೆಯಲಿರುವ ಯುವ ಬರಹಗಾರರ ಸಾಹಿತ್ಯ ಕಾರ್ಯಾಗಾರದಲ್ಲಿ ನಲವತ್ತು ವರ್ಷದೊಳಗಿನ ಬರಹಗಾರರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಈ ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಕನ್ನಡ ಸಾಹಿತ್ಯದ ತಾತ್ತಿಕ ನೆಲೆಗಳಲ್ಲದೆ, ಸಾಹಿತ್ಯದಲ್ಲಿ ಬದ್ಧತೆ, ಸಾಮಾಜಿಕ ಜವಾಬ್ದಾರಿ ಕುರಿತಂತೆ ತಜ್ಞರಿಂದ ವಿಷಯ ಮಂಡನೆಯಾಗಲಿದ್ದು ಅರ್ಥಪೂರ್ಣ ಚರ್ಚೆ ನಡೆಯಲಿದೆ ಎಂದಿದ್ದಾರೆ.

ಕಾರ್ಯಾಗಾರವನ್ನು ಪ್ರಸಿದ್ಧ ಮಲೆಯಾಳಿ ಸಾಹಿತಿ ಹಾಗೂ ಚಲನಚಿತ್ರ ವಿಮರ್ಶಕ ರಾಮಚಂದ್ರನ್ ಉದ್ಘಾಟಿಸಲಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸುವ ಬಂಡಾಯಗಾರರಿಗೆ ಉಚಿತ ವಸತಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಹೆಸರು ನೋಂದಾಯಿಸಿಕೊಳ್ಳಲು ತುಮಕೂರು ಜಿಲ್ಲಾ ಸಂಚಾಲಕರಾದ ಡಾ.ನಾಗಭೂಷಣ್ ಬಗ್ಗನಡು-9964852518 ಮತ್ತು ಡಾ. ಓ.ನಾಗರಾಜ್-9448659644 ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದೆ.

ಭಕ್ತರಹಳ್ಳಿ ಕಾಮರಾಜ್ ಮತ್ತು ಡಾ.ರಂಗಾರೆಡ್ಡಿ ಕೋಡಿರಾಂಪುರ ಕಾರ್ಯಾಗಾರದ ನಿರ್ದೇಶಕರಾಗಿದ್ದಾರೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ತುಮಕೂರಿಗೆ ನರೇಂದ್ರ ಮೋದಿ

Publicstory.in


ತುಮಕೂರು: ರಾಜ್ಯ ಸರ್ಕಾರ ಆಯೋಜಿಸುತ್ತಿರುವ ರೈತರ ಸಮಾವೇಶ ಹಾಗೂ ಕೃಷಿ ವಸ್ತುಗಳ ಪ್ರದರ್ಶ‌ನವನ್ನು ಪ್ರಧಾನಿ ನರೇಂದ್ರ ಮೋದಿ‌ ಉದ್ಘಾಟಿಸುವ ಸಾಧ್ಯತೆ ಹೆಚ್ಚಿದೆ.

ಜನವರಿ 3ರಂದು ತುಮಕೂರಿನ ಬಿ.ಎಚ್.ರಸ್ತೆಯಲ್ಲಿರುವ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಮಾರಂಭ ನಡೆಯಲಿದೆ.

ರಾಜ್ಯದ ವಿವಿಧ ಕಡೆಗಳಿಂದ ಸುಮಾರು‌ ಒಂದು ಲಕ್ಷ ರೈತರು ಭಾಗವಹಿಸುವ ನಿರೀಕ್ಷೆ ಇದೆ.

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿದ ಬಳಿಕ ಇಷ್ಟು ದೊಡ್ಡ ಪ್ರಮಾಣದ ಸಮಾರಂಭ ಇದಾಗಿದೆ. ಹೀಗಾಗಿ ಪ್ರಧಾನಿ ಮೋದಿ ಅವರನ್ನು ಕರೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ಸುಕವಾಗಿದೆ. ಪ್ರಧಾನಿ ಅವರ ಜತೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಹ ಭಾಗವಹಿಸುವರು‌. ಮುಖ್ಯಮಂತ್ರಿ ಯಡಿಯೂರಪ್ಪ ವೇದಿಕೆಯಲ್ಲಿ ಇರುತ್ತಾರೆ.

ಬೆಂಗಳೂರು ಅಥವಾ ತುಮಕೂರಿನಲ್ಲಿ ಸಮಾರಂಭ ನಡೆಸಲು ಮೊದಲಿಗೆ ಉದ್ದೇಶಿಸಲಾಗಿತ್ತು. ಆದರೆ‌ ಈಗ ತುಮಕೂರಿನಲ್ಲೇ ಸ‌ಮಾರಂಭ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತುಮಕೂರಿನ ವಸಂತನರಾಸಪುರದಲ್ಲಿ ಫುಡ್ ಪಾರ್ಕ್ ಉದ್ಘಾಟನೆಗೆ ಪ್ರಧಾನಿ ಬಂದಿದ್ದರು. ಅದನ್ನು ಬಿಟ್ಟರೆ ಎಚ್ ಎಎಲ್ ಶಿಲಾನ್ಯಾಸ ನೆರವೇರಿಸಲು ಬಂದಿದ್ದರು. ಈ ಸಮಾರಂಭ ತುಮಕೂರಿನಲ್ಲಿ ನಡೆದು ಪ್ರಧಾನಿ ಬಂದರೆ ತುಮಕೂರಿನಲ್ಲಿ ಇದು ಅವರ ಮೂರನೇ ಕಾರ್ಯಕ್ರಮ ಆಗಲಿದೆ.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದರೆ ತಿಪಟೂರು ಕೊಬ್ಬರಿಗಾಗಿಯೇ ಪ್ರತ್ಯೇಕ ಬೆಂಬಲ ಬೆಲೆ ನೀಡಲು ಕೃಷಿ ಬೆಲೆ ಮತ್ತು ವೆಚ್ಚ ಆಯೋಗದಲ್ಲಿ ವಿಶೇಷ ಉತ್ಪನ್ನವಾಗಿ ಪಟ್ಟಿ ಮಾಡಲಾಗುವುದು ಎಂದು ತಿಪಟೂರಿನ ವಿಧಾನಸಭಾ ಚುನಾವಣಾ ಪ್ರಚಾರ ಭಾಷಣದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಲ್ಲಿನ ರೈತರಿಗೆ ಭರವಸೆ ನೀಡಿದ್ದರು. ಈಗ ಅವರದೇ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೋದಿಯವರೇ ರೈತರ ಸಮಾವೇಶ ಉದ್ಘಾಟಿಸುತ್ತಿರುವುದರಿಂದ ಇಲ್ಲಿನ ತೆಂಗು‌ ಬೆಳೆಗಾರರಿಗೆ ನೀಡಿದ್ದ ಭರವಸೆ ಬಗ್ಗೆ ಏನು ಮಾತನಾಡುತ್ತಾರೆ ಎಂಬ ಬಗ್ಗೆ ಕುತೂಹಲವೂ ಗರಿಗೆದರಿದೆ.

ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಸಿದ್ದತೆ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಡಿಸೆಂಬರ್ 30 ಮತ್ತು 31 ರಂದು ಸಿದ್ದಗಂಗಾ ಮಠದ ಆವರಣದಲ್ಲಿ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಕಾರ್ಯಕ್ರಮವಾಗಿರುವುದರಿಂದ ಅಗತ್ಯ ವೇದಿಕೆ ವ್ಯವಸ್ಥಿತವಾಗಿ ಸಿದ್ದಪಡಿಸಿಕೊಳ್ಳಬೇಕು. ಹಾಗೆಯೇ ಜಿಲ್ಲಾಡಳಿತದ ವತಿಯಿಂದ ಆಗಬೇಕಾದ ವ್ಯವಸ್ಥೆಯನ್ನು ಮಾಡಲಾಗುವುದು. ಆರಕ್ಷಕ, ಅಗ್ನಿಶಾಮಕ, ಆರೋಗ್ಯ ಇಲಾಖೆಗಳಿಗೂ ಸಹಕರಿಸುವಂತೆ ಸೂಚನೆ ನೀಡಲಾಗುವುದು ಎಂದರು.ವಸ್ತು ಪ್ರದರ್ಶನದಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಯಿಂದ 646 ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದು, ಪಾರದರ್ಶಕವಾಗಿ ಸ್ಪರ್ಧೆ ಏರ್ಪಡಿಸಿ ತೀರ್ಪು ನೀಡಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮಕ್ಕೆ ಆಗಮಿಸುವ ಮಕ್ಕಳಿಗೆ ಸಿದ್ದಗಂಗಾ ಮಠದಲ್ಲಿ ಊಟ ಹಾಗೂ ವಸತಿಯ ವ್ಯವಸ್ಥೆ ಮಾಡಿರುವ ಬಗ್ಗೆ ಮಠದ ಆಡಳಿತಾಧಿಕಾರಿಗಳಿಂದ ಖಾತ್ರಿ ಪಡಿಸಿಕೊಂಡರು. ನಂತರ ಈ ಕಾರ್ಯಕ್ರಮಕ್ಕಾಗಿ ರಚನೆ ಮಾಡಿರುವ ವಿವಿಧ ಸಮಿತಿಯ ಸದಸ್ಯರು ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಯಾಗುವಂತೆ ನೋಡಿಕೊಳ್ಳಿ ಎಂದು ಅವರು ತಿಳಿಸಿದರು.ಸಭೆಯಲ್ಲಿ ತುಮಕೂರು ಡಯಟ್ ಪ್ರಾಂಶುಪಾಲ ಬಸವರಾಜು, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ರಾಮಕೃಷ್ಣಯ್ಯ, ಹಿರಿಯ ಉಪನ್ಯಾಸಕ ಮಹೇಶ, ಶಿಕ್ಷಣಾಧಿಕಾರಿ ಅಶ್ವಥನಾರಾಯಣ, ಶಿಕ್ಷಣಾಧಿಕಾರಿ ಪ್ರಭುಸ್ವಾಮಿ, ಡಿವೈಎಸ್‍ಪಿ ಸೂರ್ಯ ನಾರಾಯಣ, ಸಿದ್ದಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥ್, ವಿಜ್ಞಾನ ಕೇಂದ್ರದ ಅಧ್ಯಕ್ಷ ಮರುಳಯ್ಯ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಬಿಇಒ, ಮಧುಗಿರಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಸ್.ಆರ್. ವೃಷಭೇಂದ್ರಪ್ಪ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್ ಸೇರಿದಂತೆ ಮತ್ತಿತರ ಶಿಕ್ಷಕರ ಸಂಘದ ಅಧ್ಯಕ್ಷರು, ಅಧಿಕಾರಿಗಳು ಉಪಸ್ಥಿತರಿದ್ದರು.

ಡಿಡಿಪಿಐ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸುವಂತೆ ಜಿಲ್ಲಾಧಿಕಾರಿ ಸೂಚನೆ

ಖಾಸಗಿ ಶಾಲಾ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕೊಂಡೊಯ್ಯುವುದು, ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತಿಳಿಸಲು ಅನುಕೂಲವಾಗುವಂತೆ ಡಿಡಿಪಿಐ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರಕು ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಆದರೂ ಗ್ರಾಮೀಣ ಭಾಗಗಳಲ್ಲಿ ಇದನ್ನು ಕಾಣುತ್ತಿದ್ದೇವೆ ಹಾಗೂ ಒಂದೇ ವಾಹನದಲ್ಲಿ ಹೆಚ್ಚು ಸಂಖ್ಯೆಯ ಮಕ್ಕಳನ್ನು ಕರೆದೊಯ್ಯವಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಈ ದೂರುಗಳನ್ನು ದಾಖಲಿಸಿಕೊಳ್ಳಲು ಸಹಾಯವಾಣಿಯನ್ನು ಸ್ಥಾಪಿಸಬೇಕು ಎಂದರು.

ಈ ದೂರುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಶಾಲೆಯ ಹಾಗೂ ವಾಹನಗಳ ವಿರುದ್ದ ಅಗತ್ಯ ಕ್ರಮ ವಹಿಸಬೇಕು ಹಾಗೂ ಈ ಕುರಿತಂತೆ ಜಾಗೃತಿ ಮೂಡಿಸಲು ಆಟೋ ಚಾಲಕರ ಸಂಘ, ಸರಕು ವಾಹನಗಳ ಚಾಲಕರ ಸಂಘ ಹಾಗೂ ಖಾಸಗಿ ಶಾಲೆಯವರನ್ನು ಆಗಾಗ ಸಭೆ ಕರೆದು ತಿಳುವಳಿಕೆ ನೀಡಬೇಕು ಎಂದು ಬಿಇಒ ಗಳಿಗೆ ಸೂಚನೆ ನೀಡಿದರು.

ಶಿಕ್ಷಣ ಸಂಸ್ಥೆಗಳೆಂದರೆ ಲಾಭದಾಯಕವಾಗಿ ನಡೆಸುವುದಲ್ಲ. ಜಿಲ್ಲೆಯಲ್ಲಿರುವ 251 ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ದಾಖಲಾತಿ ಇರುವ ಶಾಲೆಗಳಲ್ಲಿ ಶುಲ್ಕ ಹಾಗೂ ವಿವಿಧ ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ, ಆರೋಗ್ಯ ತಪಾಸಣೆ, ವಿಪತ್ತು ನಿರ್ವಹಣೆ, ಸಿಸಿ ಕ್ಯಾಮೆರಾ ಅಳವಡಿಕೆ ಕುರಿತಂತೆ ವಿವರವಾದ ಆಡಿಟ್ ಮಾಡಿಸಿ ವರದಿಯನ್ನು ನೀಡಬೇಕೆಂದು ಅವರು ತಿಳಿಸಿದರು.

ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಸಾಮೂಹಿಕವಾಗಿ ನೀಡುವ ತಿಂಡಿತಿನಿಸು ಅಥವಾ ಊಟವನ್ನು ಪ್ರಾಂಶುಪಾಲರು ಅಥವಾ ಶಿಕ್ಷಕರು ಮೊದಲು ಸೇವಿಸಿ ಪರಿಶೀಲಿಸಿ ಸಮಸ್ಯೆ ಇಲ್ಲವೆಂದು ದೃಢೀಕರಿಸಿದ ನಂತರ ಮಕ್ಕಳಿಗೆ ನೀಡಬೇಕು. ಹಾಗೆಯೇ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಊಟವನ್ನು ರುಚಿ ಮತ್ತು ಶುಚಿ ಪರಿಶೀಲಿಸಿ ನೀಡಬೇಕೆಂಬ ಸುತ್ತೊಲೆಯ ಕುರಿತು ಆಗಾಗ ಮುಖ್ಯ ಶಿಕ್ಷಕರ ಗಮನಕ್ಕೆ ತರಬೇಕು ಎಂದು ಅವರು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಶುದ್ದ ಕುಡಿಯುವ ನೀರು, ಶೌಚಾಲಯ, ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಲ್ಲದ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಗ್ರಾಮಪಂಚಾಯ್ತಿಗಳಿಗೆ ಕೂಡಲೆ ತಿಳಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಶಾಲೆಗಳಲ್ಲಿ ಮಕ್ಕಳಿಗೆ ಸ್ಪೂರ್ತಿ ತುಂಬಲು ವಿವಿಧ ಇಲಾಖೆಗಳಲ್ಲಿ ವೃತ್ತಿಯಲ್ಲಿರುವ ವಿವಿಧ ಅಧಿಕಾರಿಗಳನ್ನು ವಾರಕ್ಕೊಮ್ಮೆ ಶಾಲೆಗೆ ಕರೆಸಿ ಅವರ ವೃತ್ತಿಯ ಕುರಿತಂತೆ ತಿಳಿಸುವಂತಹ ವ್ಯವಸ್ಥೆ ಮಾಡಿದಲ್ಲಿ ಮಕ್ಕಳಿಗೆ ವಿವಿಧ ವೃತ್ತಿಯ ಬಗ್ಗೆ ಪರಿಚಯವಾಗುವುದು ಎಂದು ಸಲಹೆ ನೀಡಿದರು.

ಮಕ್ಕಳಲ್ಲಿ ಉತ್ತಮ ಹವ್ಯಾಸ ಬೆಳೆಸಿ

ಮಕ್ಕಳು ಬೆಳವಣಿಗೆಗೆ ಅಡ್ಡಿಯಾಗಿರುವ ಒತ್ತಡ ಕಡಿಮೆ ಮಾಡಲು ಪೋಷಕರು ಒಂದು ಉತ್ತಮ ಅಭ್ಯಾಸ ಕಲಿಸಬೇಕು ಎಂದು ಜಿಲ್ಲಾಧಿಕಾರಿ. ಕೆ.ರಾಕೇಶ್ ಕುಮಾರ್ ಪತ್ನಿ ಅಮೂಲ್ಯ ತಿಳಿಸಿದರು.ಗುಬ್ಬಿವೀರಣ್ಣ ಕಲಾಕ್ಷೇತ್ರಲ್ಲಿ ಕೇಂದ್ರೀಯ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ ಪೋಷಕರು ಸದಾ ಕಾಲ ಮಕ್ಕಳ ಜೊತೆಗೆ ಇರಲು ಸಾಧ್ಯವಿಲ್ಲ ಆದರೆ ಒಂದು ಉತ್ತಮ ಅಭ್ಯಾಸವನ್ನು ಮಕ್ಕಳಿಗೆ ಕಲಿಸಿದರೆ ಸದಾ ಕಾಲ ಮಕ್ಕಳ ಜೊತೆಗೆ ಇದ್ದು ಅವರಿಗೆ ಸಹಾಯ ಮಾಡುತ್ತದೆ ಹಾಗಾಗಿ ಮಕ್ಕಳ ಆಸಕ್ತಿಗನುಗುಣವಾಗಿ ಒಂದು ಉತ್ತಮ ಅಭ್ಯಾಸವನ್ನು ರೂಢಿಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.ಪೋಷಕರು ಮಕ್ಕಳ ವ್ಯಕ್ತಿತ್ವದ ಕಡೆ ಗಮನಹರಿಸುವುದರ ಜೊತೆಗೆ ಮಕ್ಕಳು ಮಾತನಾಡುವ ಶೈಲಿ, ನಡವಳಿಕೆ ಸರಿಯಾದ ರೀತಿಯಲ್ಲಿರುವಂತೆ ಹೇಳಿಕೊಡಬೇಕು. ಮಕ್ಕಳ ನಡವಳಿಕೆಯಲ್ಲಿ ತಪ್ಪು ಕಂಡು ಬಂದರೆ ತಿದ್ದಿ ಬುದ್ದಿ ಹೇಳಬೇಕು ಎಂದರಲ್ಲದೆ ಮಕ್ಕಳಿಗೆ ಶ್ರದ್ಧೆ, ಸಮಯಪಾಲನೆ ಅರಿವು ಮೂಡಿಸಬೇಕು ಎಂದರು.ಸಮಾರಂಭದಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಆರ್.ಎಂ.ಸೊಕಲ್ಲ, ವಿದ್ಯಾಲಯದ ಸಿಬ್ಬಂದಿ ಸೇರಿದಂತೆ ಮಕ್ಕಳು, ಪೋಷಕರು ಉಪಸ್ಥಿರಿದ್ದರು.

ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ವಿರುದ್ದ ಆರೋಪ ಮಾಡಿರುವವರ ಹೇಳಿಕೆ ಖಂಡನೀಯ:ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ

ಮಧುಗಿರಿ – ಮಾಜಿ ಶಾಸಕ ಕೆ.ಎನ್.ರಾಜಣ್ಣ ನುಡಿದಂತೆ ನಡೆದವರಾಗಿದ್ದು, 5 ವರ್ಷಗಳಲ್ಲಿ ತಾಲ್ಲೂಕಿನಾದ್ಯಂತ ಅಭಿವೃದ್ದಿ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಅವರ ವಿರುದ್ದ ಆರೋಪ ಮಾಡಿರುವವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ ತಿಳಿಸಿದರು.

ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹೊಸಕೆರೆ ಗ್ರಾಮದಲ್ಲಿ ಡಿಸಿಸಿ ಬ್ಯಾಂಕಿನ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಕೆ.ಎನ್.ರಾಜಣ್ಣನವರು ಮಾತನಾಡಿ, ಅವರ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳ ಬಗ್ಗೆ ತಿಳಿಸಿ ಇಷ್ಟು ಅಭಿವೃದ್ದಿ ಕಾರ್ಯಗಳು ಮತಗಳಾಗಿ ಪರಿವರ್ತನೆಯಾಗಲಿಲ್ಲ. ಮತದಾರರು ಆಸೆ ಆಮೀಷಗಳಿಗೆ ಒಳಗಾಗಿದ್ದರೆಂದು ನೊಂದು ನುಡಿದರೆ ಹೊರತು ಮತದಾರರು ಭ್ರಷ್ಟರೆಂದು ಹೇಳಲಿಲ್ಲ.

ಸಿದ್ದರಾಮಯ್ಯ ಸಿ.ಎಂ ಆಗಿದ್ದಾಗ ಮಿಡಿಗೇಶಿಗೆ ಆಗಮಿಸಿದ್ದಾಗ ಶೂ ಭಾಗ್ಯ ಘೋಷಣೆ ಮಾಡಿದ್ದರಿಂದ ಈ ಯೋಜನೆ ಇಡೀ ರಾಜ್ಯಕ್ಕೆ ವಿಸ್ತಾರಗೊಂಡು ಸಾವಿರಾರು ಬಡ ವಿಧ್ಯಾರ್ಥಿಗಳಿಗೆ ಅನುಕೂಲವಾಯಿತು. ಎತ್ತಿನಹೊಳೆ ಯೋಜನೆಗೆ ಆಯವ್ಯಯದಲ್ಲಿ 12.900 ಕೋಟಿ ರೂ ಮೀಸಲಿರಿಸಿದ್ದು, 4000 ಕೋಟಿ ರೂ ತಕ್ಷಣ ಬಿಡುಗಡೆಗೊಳಿಸಿದ್ದರಿಂದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ರೈತರ ಸಾಲ ನೀಡುವಲ್ಲಿ ಅವ್ಯವಹಾರ ಆಗಿದೆ ಮತ್ತು ವಿ.ಎಸ್.ಎಸ್.ಎನ್‍ನಲ್ಲಿ ರೈತರಿಗೆ ಸಾಲ ನೀಡುವಾಗ ಹಣ ಕಟಾವು ಮಾಡಿ ಕೊಡುತ್ತಾರೆ ಎಂದು ಜೆ.ಡಿ.ಎಸ್ ನವರು ಸುಳ್ಳು ಆರೋಪ ಮಾಡಿದ್ದಾರೆ. ಸಹಕಾರಿ ನಿಯಮದಂತೆ ಶೇಕಡ ಇಂತಿಷ್ಟು ಷೇರು ಹಣ ಹಿಡಿಯುತ್ತಾರೆ. ಅದು ರೈತರ ಖಾತೆಯಲ್ಲಿದ್ದು, ಮರು ಪಾವತಿ ಮಾಡುವಾಗ ಅದನ್ನು ಜಮಾ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಇತ್ತೀಚಿನ ಬರಗಾಲದಲ್ಲಿ ಮೇವು ಬ್ಯಾಂಕಿನಿಂದ ರಾಸುಗಳಿಗೆ ಪ್ರತಿದಿನ ಮೇವು ವಿತರಿಸಲಾಗಿದೆ ಎಂದು ಹೇಳಿಕೆ ನೀಡುತ್ತಾರೆ. ಐಡಿಹಳ್ಳಿ ಮತ್ತು ಮಿಡಿಗೇಶಿ ಹೋಬಳಿಗಳಲ್ಲಿ ಕಾಟಾಚಾರಕ್ಕೆ ಮೇವು ವಿತರಿಸಿದ್ದು, ಅದೂ ಕೂಡ ಕಳಪೆಯಾಗಿದೆ. ಹಸಿ ಮೇವು ಸರಬರಾಜು ಮಾಡಿ ಒಣ ಮೇವಿನ ದರದಲ್ಲಿ ಬಿಲ್ ಮಾಡಿದ್ದಾರೆ ಎಂದು ಆರೋಪಿಸಿದರು.

ತಾ.ಪಂ.ಅಧ್ಯಕ್ಷೆ ಇಂದಿರಾ ದೇನಾನಾಯ್ಕ್ ಮಾತನಾಡಿ, ಮೇವು ವಿತರಣೆಯಲ್ಲಿ ಅವ್ಯವಹಾರ ನಡೆದಿಲ್ಲವೆಂದು ಜೆ.ಡಿ.ಎಸ್ ಮುಖಂಡರು ಹೇಳುತ್ತಾರೆ. ಆದರೆ ಅಧಿಕಾರಿಗಳೇ ಬಂದು ಬಿಲ್ ಮಾಡುವುದಕ್ಕೋಸ್ಕರ ಶಾಸಕರಿಗೆ ಹಣ ನೀಡಬೇಕೆಂದು ನನ್ನ ಬಳಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ರಾಜ್ಯ ಸಹಕಾರಿ ಮಹಾಮಂಡಲದ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ಪುರಸಭಾ ಸದಸ್ಯ ಈ ಹಿಂದ ಮಾಡಿರುವ ಅಕ್ರಮ, ಅವ್ಯವಹಾರಗಳ ಬಗ್ಗೆ ಇಡೀ ತಾಲ್ಲೂಕಿನ ಜನತೆಗೆ ತಿಳಿದಿದೆ. ಕೆ.ಎನ್.ರಾಜಣ್ಣನವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ತಮ್ಮ ನಡವಳಿಕೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಕೆ.ಎನ್.ಆರ್ ಬಗ್ಗೆ ಮಾತನಾಡಲಿ ಎಂದರು.

ತುಮುಲ್ ಮಾಜಿ ಅಧ್ಯಕ್ಷ ಬಿ.ನಾಗೇಶ್ ಬಾಬು ಮಾತನಾಡಿ, ಎಂಪಿಸಿಎಸ್ ಕಾರ್ಯದರ್ಶಿಗಳಿಂದ ಉದ್ಯೋಗ ಕೊಡಿಸುವುದಾಗಿ ಆಮೀಷ ಹೊಡ್ಡಿ ಅಧಿಕಾರಿಯೊಬ್ಬರು ಸುಮಾರು 50 ಲಕ್ಷದವರೆಗೂ ವಸೂಲಿ ಮಾಡಿದ್ದಾರೆ. ಶಾಸಕರು ಈ ಭ್ರಷ್ಟ ಅಧಿಕಾರಿಯನ್ನು ಕರೆಸಿ ಕಾರ್ಯದರ್ಶಿಗಳಿಗೆ ಹಣ ಮರುಪಾವತಿ ಮಾಡಿಸಲಿ. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.

ತಾ.ಪಂ.ಸದಸ್ಯ ಸೊಸೈಟಿ ರಾಮಣ್ಣ ಮಾತನಾಡಿ, ನಮ್ಮ ಸಮುದಾಯದ 8 ಮಂದಿಗೆ ಡಿಸಿಸಿ ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸಿ ಕೆ.ಎನ್.ರಾಜಣ್ಣ ನುಡಿದಂತೆ ನಡೆದಿದ್ದಾರೆ. ಆಪೆಕ್ಸ್ ಬ್ಯಾಂಕಿನಲ್ಲಿಯೂ ಜಾತಿ ಪಕ್ಷ ನೋಡದೆ ತಾಲ್ಲೂಕಿನ ಯುವ ಜನರಿಗೆ ನೌಕರಿ ಕೊಡಿಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಸದಸ್ಯ ಚೌಡಪ್ಪ, ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯರಾದ ಎಂ.ವಿ.ಗೋವಿಂದರಾಜು, ತಿಮ್ಮರಾಯಪ್ಪ, ಲಾಲಾಪೇಟೆ ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ಮಾಜಿ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಗ್ರಾ.ಪಂ.ಅಧ್ಯಕ್ಷ ವಿ.ಆರ್.ಭಾಸ್ಕರ್, ಮುಖಂಡರುಗಳಾದ ಎಸ್.ಆರ್.ರಾಜಗೋಪಾಲ್, ಎಂ.ಎಸ್.ಶಂಕರನಾರಾಯಣ್, ಆದಿನಾರಯಣ ರೆಡ್ಡಿ, ಸುವರ್ಣಮ್ಮ, ದೊಡ್ಡೇರಿ ಕಣಿಮಯ್ಯ, ಡಿ.ಟಿ.ಸಂಜೀವಮೂರ್ತಿ, ಷಕೀಲ್, ಸಾದಿಕ್, ಅಲೀಂ, ಅನಂದ್, ಸಿದ್ದಾಪುರ ವೀರಣ್ಣ, ಎಸ್.ಬಿ.ಟಿ ರಾಮು, ಎಂ.ಜಿ.ರಾಮು, ಅದ್ದೂರಿ ಗೌಡ, ಬಾಬಾ ಫಕೃದ್ದಿನ್,ಸೂರ್ಯಪ್ರಕಾಶ್, ಬಾಲಾಜಿ. ಹೆಂಜಾರಪ್ಪ ಹಾಗೂ ಮುಂತಾದವರು ಇದ್ದರು.

ಸುಂಕ ವಸೂಲಿ ನಿಲ್ಲಿಸುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ಆಗ್ರಹ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಧನಗಳ ಜಾತ್ರೆ, ಅಂಗಡಿ ಮಳಿಗೆಗಳ ಸುಂಕ ವಸೂಲಿಯನ್ನುತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು ಈ ಕೂಡಲೇ  ನಿಲ್ಲಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.

ಸತತ ಬರದಿಂದಾಗಿ ರೈತರು ಆರ್ಥಿಕವಾಗಿ ಅಬಲರಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಅವರು ಜಾನುವಾರುಗಳನ್ನು ಜಾತ್ರೆಗೆ ತಂದು ಮಾರಾಟ ಮಾಡಲು ಸುಂಕ ಕೊಡಬೇಕಿರುವುದು ಅಮಾನವೀಯ. ಧನಗಳ ಜಾತ್ರೆಯ ಸುಂಕ ವಸೂಲಿಗಾಗಿ ಈ ವರ್ಷ 52 ಸಾವಿರಕ್ಕೆ ಹರಾಜು ಕೂಗಲಾಗಿದೆ. ಹರಾಜು ಕೂಗಿದವರು ಸುಮಾರು 6 ರಿಂದ 7 ಲಕ್ಷ ವಸೂಲಿ ಮಾಡುತ್ತಾರೆ. ಜಾನುವಾರುಗಳು ಮಾರಾಟವಾದರೂ, ಆಗದಿದ್ದರೂ ರೈತರು ಸುಂಕ ಪಾವತಿಸಲೇ ಬೇಕು. ಇದರಿಂದ ಸರ್ಕಾರಕ್ಕಿಂತ ವಸೂಲಿ ಮಾಡುವವರಿಗೆ ಹೆಚ್ಚಿನ ಲಾಭವಾಗುತ್ತದೆ. ರೈತರ ಹಿತ ದೃಷ್ಠಿಯಿಂದ ಸುಂಕ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಅಂಗಡಿ ಮಳಿಗೆಗಳಿಂದ ಸುಂಕ ವಸುಲಿಮಾಡಲು ಸುಮಾರು 1 ಲಕ್ಷ ಹರಾಜು ಕೂಗಲಾಗಿದೆ. ಬಡ ಜನತೆ ಜಾತ್ರೆಯಲ್ಲಿ ದುಡಿಯುವ ಸಲುವಾಗಿ ಅಂಗಡಿ ಹಾಕಿಕೊಳ್ಳುತ್ತಾರೆ 1 ಲಕ್ಷ ರೂಪಾಯಿಗೆ ಹರಾಜು ಕೂಗಿರುವರು 10 ಲಕ್ಷ ರೂಪಾಯಿ ವಸೂಲಿ ಮಾಡುವ ಗುರಿ ಹಾಕಿಕೊಳ್ಳುತ್ತಾರೆ. ಇದರಿಂದ ಬಡ ಜನತೆಯ ಮೇಲೆ ದೌರ್ಜನ್ಯ ಎಸಗಲಾಗುತ್ತದೆ ಎಂದರು.

ದೇಗುಲ ಆವರಣ, ಗ್ರಾಮದ ಸ್ವಚ್ಚತೆ ಇನ್ನಿತರ ಆಗು ಹೋಗುಗಳನ್ನು ನೊಡಿಕೊಳ್ಳುವ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳನ್ನು ಕಡೆಗಣಿಸಿ ಉಪ ವಿಭಾಗಾಧಿಕಾರಿ, ತಹಶೀಲ್ದಾರರು ಶಿಷ್ಠಾಚಾರ ಉಲ್ಲಂಘಿಸಿದ್ದಾರೆ. ಜಾತ್ರೆಯ ಪ್ರಯುಕ್ತ ಪೂರ್ವ ಭಾವಿ ಸಭೆಯನ್ನೂ ಕರೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

 

 

 

ಗುಡಿಸಲಿಗೆ ಬೆಂಕಿ

ಪಾವಗಡ ತಾಲ್ಲೂಕಿನ ನೀಲಮ್ಮನಹಳ್ಳಿಯಲ್ಲಿ ಮಂಗಳವಾರ ಗುಡಿಸಲ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಶಾರ್ಟ್ ಸರ್ಕಿಟ್ ನಿಂದಾಗಿ ನರಸಿಂಹ ಅವರ ಗುಡಿಸಲು ಸುಟ್ಟಿದೆ.

ಗುಡಿಸಲಿನಲ್ಲಿದ್ದ ದವಸ ಧಾನ್ಯ ಬಟ್ಟೆ ಪಾತ್ರೆ ಇತ್ಯಾದಿ ಸಲಕರಣೆಗಳು ಸುಟ್ಟಿವೆ.

ಘಟನೆಯಿಂದ ಬಡ ಕುಟುಂಭ ಸದಸ್ಯರು ನಿರಾಶ್ರಿತರಾಗಿದ್ದಾರೆ.

ರಸ್ತೆ ಅಪಘಾತ : ದ್ವಿಚಕ್ರವಾಹನ ಸವಾರ ಸಾವು

ಕೊರಟಗೆರೆ:
ದ್ವಿಚಕ್ರ ವಾಹನ ಹಾಗೂ ಬೊಲೆರೋ ಗೂಡ್ಸ್ ವಾಹನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿ ಮಾದವಾರ ಗ್ರಾಮದ ಅಶ್ವತ್ಥನಾರಾಯಣ(42) ಎಂಬುವರು ಮೃತಪಟ್ಟಿದ್ದಾರೆ.
ಅಶ್ವತ್ಥನಾರಾಯಣ ಸೋಮವಾರ  ಮಧ್ಯಾಹ್ನ ಗ್ರಾಮದ ಬಳಿ ದ್ವಿಚಕ್ರವಾಹದಲ್ಲಿ ಗೊರವನಹಳ್ಳಿ ಗ್ರಾಮದ ಕಡೆ ಹೋಗುವಾಗ ಎದುರಿಗೆ ಬಂದ ಬೊಲೆರೋ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದಿಂದ  ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.  ಚಿಕಿತ್ಸೆಗೆ ಸ್ಪಂಧಿಸದೇ ಸೋಮವಾರ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೊಲೆರೋ ಗೂಡ್ಸ್ ವಾಹನ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿರುವುದು ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ಹಾಗೂ ಗೂಡ್ಸ್ ವಾಹನದ ವಿರುದ್ಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸ್ಥಳಕ್ಕೆ ಎಎಸ್ಐ ರಾಮಕೃಷ್ಣಪ್ಪ ಸಿಬ್ಬಂಧಿಗಳಾದ ನಿತ್ಯಾನಂದ, ನರಸಿಂಹರಾಜು ಭೇಟಿ ನೀಡಿದ್ದರು.