Monday, February 23, 2026
Google search engine
Home Blog Page 308

ದನದ‌ ಮೇವಿನ ಹೆಸರಿನಲ್ಲಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ

ಕೊರಟಗೆರೆ: ಜಾನುವಾರುಗಳಿಗೆ ಮೇವು ಕೊಡುತ್ತಾರ ಎಂದು ನೆಪ ಹೇಳಿಕೊಂಡು ಒಂಟಿ ಮಹಿಳೆಯೊಬ್ಬಳು ಜವೀುನಿನಲ್ಲಿ ಕೆಲಸವನ್ನು ಮಾಡುತ್ತಿದ್ದ ವೇಳೆ
ಇಬ್ಬರೂ ಅಪರಿಚಿತ ವ್ಯಕ್ತಿ ಗಳು ಬೈಕ್ ನಲ್ಲಿ ಬಂದು ವಡ್ಡಗೆರೆ ಗ್ರಾಮದ ವೀರನಾಗಪ್ಪ ಪತ್ನಿ ಯ ಕೊರಳಿನಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆ.

ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯ ವಡ್ಡಗೆರೆ ಗ್ರಾಮದ ಹೊರವಲಯದ ಉಂಜ್ಜಿನ ಹಳ್ಳದ ಬಳಿ ಶನಿವಾರ ಘಟನೆ ನಡೆದಿದ್ದು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.

ಬಾಲ್ಯವೇ ನೀ ಮತ್ತೊಮ್ಮೆ ಬಂದುಬಿಡು…

0

ಚಿದು


ಆಟಿಕೆಗೂ ಬರವಿತ್ತು,ಆಟ ಸಾಗುತಲಿತ್ತು! ಮೋರಿಯ ನೀರಲ್ಲೂ ದೋಣಿಯಾಟವಿತ್ತು.

ಅಪ್ಪ ಹಬ್ಬಕ್ಕೆ ಕೊಡಿಸುತ್ತಿದ್ದ ಬಟ್ಟೆಯಿತ್ತು. ಸಂಬಂಧ ಬೆಸೆಯುವ ಆತ್ಮೀಯ ಭೇಟಿಗಳಿತ್ತು.

ಹೂಂಗುಟ್ಟುತ್ತಾ ಮಲಗಲು ಅಜ್ಜಿಯ ಕತೆಯಿತ್ತು!
ಒಂದೇ ಹಲಸನ್ನು ಹಂಚಿ ತಿನ್ನುವ ಹಳಸದ
ಸಂಬಂಧಗಳಿತ್ತು!

ತುಟಿ ಕೆಂಪಾಗಿಸುತಿದ್ದ ಪೆಪ್ಪರ್ಮೆಂಟಿತ್ತು.
ಕೈಗೆ ಕಟ್ಟಲು ತೆಂಗಿನಗರಿಯ
ಕೈ ಗಡಿಯಾರವಿತ್ತು.

ಮಳೆಗಾಲದಲ್ಲಿ ಹರಿದ ಛತ್ರಿಯಿತ್ತು.
ನೆನೆದು ಒದ್ದೆಯಾಗುವ ಹುಚ್ಚುತನವಿತ್ತು.

ಜ್ವರ ಬಂದರೆ ರಜೆಯೆಂಬ ಖುಷಿಯಿತ್ತು.
ಜ್ವರದ ರಾತ್ರಿಗಳಲಿ ಅಮ್ಮನ ಕಾವಲು ಇತ್ತು.

ಶಾಲೆಯಲ್ಲಿ ಮಾತನಾಡಲು ಕ್ಲಾಸ್ ಲೀಡರ್ ಭಯವಿತ್ತು.
ಖುಷಿಕೊಡುತ್ತಿದ್ದ ಲಾಂಗ್-ಬೆಲ್ ಇತ್ತು.

ಚೀಲದಲ್ಲಿ ಬಣ್ಣದ ಬಳಪವಿತ್ತು.
ಮತ್ತೆ ಮತ್ತೆ ತಪ್ಪುತ್ತಿದ್ದ ಉಕ್ತಲೇಖನವಿತ್ತು.

ಕಣ್ಣೀರು ತರಿಸುವ ರೋಗ ನಿರೋಧಕ ಚುಚ್ಚುಮದ್ದು ಇತ್ತು.
ತರಗತಿಯಲ್ಲಿ ಮಾಡಿದ ತಪ್ಪಿಗೆ ಮೈದಾನ ಸುತ್ತುವ ಶಿಕ್ಷೆ ಇತ್ತು.

ಏನೂ ಇಲ್ಲ ಎನ್ನುತ್ತಿದ್ದ ನನಗೆ ಆಗ ಎಲ್ಲವೂ ಇತ್ತು.
ಎಲ್ಲಕ್ಕೂ ಮಿಗಿಲಾದ ಮುಗ್ಧತೆಯಿತ್ತು!!.

ಓ ಬಾಲ್ಯವೇ…
ನೀ ಮತ್ತೆ ಬಂದುಬಿಡು…
ನನ್ನ ಮತ್ತೆ .. ಮಗುವಾಗಿಸು..

ಕುಷ್ಠರೋಗಿಗಳತ್ತ ಕೈ ಚಾಚಿದ ಸತ್ಯಸಾಯಿ ಸಂಘಟನೆ

Publicstory.in


ಪಾವಗಡ: ಶನಿವಾರದಂದು ರಾಜ್ಯದ ಶ್ರೀ ಸತ್ಯಸಾಯಿ ಮಹಿಳಾ ಸಂಘಟನೆಯಿಂದ ಒಂದು ಆಪೂರ್ವಸೇವಾಕಾರ್ಯವು ನಡೆಯಿತು.

ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯಕೇಂದ್ರದಲ್ಲಿ ನೂರಾರು ಕುಷ್ಠರೋಗಿಗಳು ಆಗಮಿಸಿದ್ದು ಅವರೆಗೆ ಔಷೋದೋಪಚಾರ ನೀಡುವುದರ ಜೊತೆಗೆ ಶ್ರೀ ಸತ್ಯಸಾಯಿ ಮಹಿಳಾಮಂಡಳಿಯ ಸುಮಾರು ಎಪ್ಪತ್ತೈದು ಸ್ವಯಂಸೇವಕರು ರೋಗಿನಾರಾಯಣ ಸೇವೆಯನ್ನು ಅತ್ಯಂತ ಶ್ರಾದ್ಧ ಭಕ್ತಿಯೊಂದಿಗೆ ಪೂಜ್ಯ ಸ್ವಾಮಿ ಜಪಾನಂದಜಿರವರ ಮಾರ್ಗದರ್ಶನದಲ್ಲಿ ನೆರವೇರಿಸಿದರು.

ಭಗವಾನರ ಪವಿತ್ರಸ್ಮರಣೆಯಲ್ಲಿ ಈ ಕಾರ್ಯಕ್ರಮ ನೆರವೇರಿತು. ಪಾವಗಡ, ಮಧುಗಿರಿ ಹಾಗು ಸುತ್ತಮುತ್ತಲ ಪ್ರದೇಶಗಳಿಂದ ನೂರಕ್ಕೂ ಮಿಗಿಲಾದ ಬಡ ರೋಗಿಗಳು ಆಗಮಿಸಿದ್ದರು. ಅವರ ವ್ರಣಗಳನ್ನು ಶುದ್ಧಿಗೊಳಿಸಿ ಔಷದೋಪಚಾರವನ್ನು ಆಸ್ಪತ್ರೆಯ ಸಿಬ್ಬಂದಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ ನೇತೃತ್ವದಲ್ಲಿ ನಡೆಸಿಕೊಟ್ಟರು.

ನಂತರ ಪ್ರತಿಯೊಬ್ಬರಿಗೂ ಸುಮಾರು ಒಂದುಸಾವಿರದ ಐದುನೂರು ರೂಪಾಯಿಗಳ ಬ್ಯಾಗ್ ನೀಡಿದರು.

ಕುಟುಂಬ ಚೀಲದಲ್ಲಿ ಬಟ್ಟೆ, ಹೊದಿಕೆಗಾಗಿ ಕಂಬಳಿ, ಸೀರೆ, ಟವೆಲ್, ಪಂಚೆ, ಚಾಪೆ ಹೀಗೆ ಗೃಹಬಳಕೆಯ ವಸ್ತುಗಳನ್ನು ನೀಡಲಾಯಿತು. ನೂರಾರು ರೋಗಿಗಳಿಗೆ ಸೇವೆಸಲ್ಲಿಸಿದ ಭಾಗ್ಯನಮಗಾಯಿತು ಎಂದು ಸತ್ಯಸಾಯಿ ಸ್ವಯಂಸೇವಕರಿಗೆ ಸಂತೃಪ್ತಿಯಾಯಿತು.

ಇದೇಸಂದರ್ಭದಲ್ಲಿ ಆಶ್ರಮಕ್ಕೆ ಭೇಟಿನೀಡಿದ ಭಕ್ತರು ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸ್ವಾಮಿ ಜಪಾನಂದಜಿ ರವರು ನಾಮಸಂಕೀರ್ತನೆಯೊಂದಿಗೆ “ಸತ್ಸಂಗ ಮಹಿಮೆ” ಎಂಬುದರ ಮೇಲೆ ಉಪನ್ಯಾಸವಿತ್ತರು. ಒಟ್ಟಿನಲ್ಲಿ ಬೆಂಗಳೂರಿನಿಂದ ಬಂದಂತಹ ಭಕ್ತರಿಗೆ ನಿಜವಾದ ಅರ್ಥದಲ್ಲಿ ಸೇವೆ ಹಾಗು ಆದ್ಯಾತ್ಮ ಎರಡು ದೊರೆತಂತಾಯಿತು‌ ಎಂದರು.

ಶ್ರೀ ರಾಮಕೃಷ್ಣ ಸೇವಾಶ್ರಮ ಕಳೆದ ಮೂವತ್ತು ವರುಷಗಳ ನಿರಂತರ ಸೇವೆ ಮತ್ತು ಆದ್ಯಾತ್ಮ ಕಾರ್ಯಕ್ರಮಗಳು ದೂರದೂರದಿಂದ ಜನರನ್ನು ಆಕರ್ಷಿಸುತ್ತಿರುವುದು ಶ್ಲಾಘನೀಯ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾ‌ನ ಯಾರಿಗೆ?

Publicstory.in


ತುಮಕೂರು: ಜಿಲ್ಲಾ ಬಿಜೆಪಿ ಘಟಕಕ್ಕೆ ನೂತನ ಅಧ್ಯಕ್ಷ ‌ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮನೆ ಮಾಡಿದೆ.

ಸದ್ಯ, ಶಾಸಕರಾದ ಜ್ಯೋತಿ ಗಣೇಶ್ ಅಧ್ಯಕ್ಷ ರಾಗಿದ್ದಾರೆ. ಅವರ ಅವಧಿ ಮುಗಿದ ಕಾರಣ ಹೊಸಬರ ಹುಡುಕಾಟ ನಡೆದಿದೆ.
ನಿರ್ಮಲ ಕುಮಾರ ಸುರಾನ, ಶಿವಯೋಗಿ ಸ್ವಾಮಿ ನೇತೃತ್ವದಲ್ಲಿ ಶನಿವಾರ ಈ ಸಂಬಂಧ ಸಭೆ‌ ನಡೆಸಲಾಯಿತು.

ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜ್, ಜಿಲ್ಲಾ‌ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕರಾದ ಬಿ.ಸಿ.ನಾಗೇಶ್, ಜ್ಯೋತಿ ಗಣೇಶ್, ಮಾಜಿ ಶಾಸಕರಾದ ಬಿ.ಸುರೇಶಗೌಡ ಇತರರು ಹಾಜರಿದ್ದರು.

ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರನ್ನು ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಮಾಜಿ ಶಾಸಕ ಬಿ.ಸುರೇಶಗೌಡ, ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿನಯ್ ಬಿದರೆ, ರವಿ ಹೆಬ್ಬಾಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್, ಚಂದ್ರಶೇಖರ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಈ ಪಟ್ಟಿಯನ್ನು ರಾಜ್ಯ ಸಮಿತಿಗೆ ಸಲ್ಲಿಸಲಾಗುವುದು. ಅಲ್ಲಿ ಅಂತಿ‌ಮ ಆಯ್ಕೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಯಾರ ಕೈ ಮೇಲಾಗಲಿದೆ ಎಂಬುದರ ಮೇಲೆ ಆಯ್ಕೆ ನಿಂತಿದೆ ಎಂದು ಹೇಳಲಾಗುತ್ತಿದೆ.

ಯಾರು ಹಿತವರು


ಲಿಂಗಾಯತರು, ಒಕ್ಕಲಿಗರು, ಹಿಂದುಳಿದವರು ಯಾರ ಕೈಗೆ ಅಧ್ಯಕ್ಷ ಸ್ಥಾ‌ನ ಹೋಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈಗಾಗಲೇ ಒಕ್ಕಲಿಗ ಸಮುದಾಯದ ಮಾಜಿ ಶಾಸಕ‌ಬಿ.ಸುರೇಶ ಗೌಡ ಅಧ್ಯಕ್ಷರಾಗಿದ್ದರು. ಇವರ ಅವಧಿಯಲ್ಲಿ ಪಕ್ಷಕ್ಕೆ ಜಿಲ್ಲೆಯಲ್ಲಿ ಉತ್ತಮ ಬುನಾದಿ ಹಾಕಿಕೊಟ್ಟರು. ತುರುವೇಕೆರೆ, ಕೊರಟಗೆರೆ, ಶಿರಾ,‌ಮಧುಗಿರಿಯಲ್ಲಿ ಪಕ್ಷಕ್ಕೆ ಗಟ್ಟಿ ನೆಲೆ ಒದಗಿಸಿ ಕೊಟ್ಟರು.

ಮಧುಗಿರಿಯಲ್ಲಿ ಈ ಸಲ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ಬರಲು ಇವರು ಇಲ್ಲಿ ಪಕ್ಷ ಬಲ ಪಡಿಸಿದ್ದು ಕಾರಣ ಎಂಬುದನ್ನು ಪಕ್ಷದ ಹಿರಿಯರೇ ಒಪ್ಪಿಕೊಂಡಿದ್ದಾರೆ.
ಶಿರಾದಲ್ಲಿ ಜೆಡಿಎಸ್ ಮುಖಂಡರನ್ನು ಕರೆ ತಂದರು. ತುರುವೇಕೆರೆಯಲ್ಲಿ ವಿರೋಧದ ನಡುವೆಯೂ ಮಸಲಾ ಜಯರಾಂ ಅವರನ್ನು ಪಕ್ಷಕ್ಕೆ ಕರೆ ತಂದು,‌ಇಲ್ಲಿ ಕಮಲ ಅರಳಲು ಕಾರಣರಾದರು. ಕೊರಟಗೆರೆಯಲ್ಲಿ ಜಿ.ಪಂನ ಗೆಲುವು ಇವರ ಕಾಲಾವಧಿಯಲ್ಲೇ ಸಾಧ್ಯವಾಗಿತ್ರು.‌ಕೆಜೆಪಿ- ಬಿಜೆಪಿ ಒಂದು ಮಾಡಲು ಶ್ರಮಿಸಿದ್ದರು.

ಇನ್ನೂ ಜ್ಯೋತಿ ಗಣೇಶ್ ಅಧ್ಯಕ್ಷರಾದ ಬಳಿಕ‌ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷ ಒಳ್ಳೆಯ ಕೂಯ್ಲನ್ನೇ ಪಡೆಯಿತು.

ಈಗಾಗಲೇ ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ಅವಕಾಶ ಕೊಟ್ಟಿರುವ ಕಾರಣ ಹಿಂದುಳಿದ ವರ್ಗದವರಿಗೆ ಅವಕಾಶ ಕೊಡಬೇಕೆಂಬ ಒತ್ತಡವೂ ಇದೆ. ಹೀಗಾದ್ದಲ್ಲಿ ಲಕ್ಷ್ಮೀಶ್ ಅವರಿಗೆ ಅಧ್ಯಕ್ಷ ಸ್ಥಾನ ಲಭಿಸಲಿದೆ.

ಯಾರ ಕೈ ಮೇಲಾಗಲಿದೆ


ಆಯ್ಕೆ ಅಷ್ಟು ಸುಲಭವಾಗಿಲ್ಲ. ಯಾರ ಕೈ ಮೇಲಾಗಲಿದೆ ಎಂಬುದನ್ನು ನೋಡಬೇಕಾಗಿದೆ. ಸಭೆಯಲ್ಲು ವಾಗ್ವಾದ ನಡೆದಿದೆ. ಆದರೆ ಇದೆಲ್ಲ ಚರ್ಚೆ ರೀತಿಯ ವಾಗ್ವಾದ ಎಂದು ಹಿರಿಯ ರಾಜಕಾರಣಿಯೊಬ್ಬರು ಪಬ್ಲಿಕ್ ಸ್ಟೋರಿಗೆ ತಿಳಿಸಿದರು.

ಸಂಸದ ಜಿ.ಎಸ್.ಬಸವರಾಜ್, ಶಾಸಕ ಜ್ಯೋತಿ ಗಣೇಶ್ ಒಂದು ಪರವಾಗಿದ್ದರೆ, ಸಚಿವ ಮಾಧುಸ್ವಾಮಿ ಅವರ ಗುಂಪೇ ಬೇರೆ ಇದೆ. ಮಾಜಿ ಸಚಿವ ಸೊಗಡು ಶಿವಣ್ಣ ಈಗಲೂ ಮೂಲ ಬಿಜೆಪಿಗರ ನಾಯಕರೇ ಆಗಿರುವ ಕಾರಣ ಯಾರ ಕೈ ಮೇಲಾಗಲಿದೆ ಎಂಬುದನ್ನು ನೋಡಬೇಕಾಗಿದೆ.

ಮಾಧುಸ್ಚಾಮಿ ಅವರ‌ ಮಾತು ನಡೆದರೆ ಹೆಬ್ಬಾಕ ರವಿ ಅವರಿಗೆ ಸ್ಥಾನ ದಕ್ಕಲಿದೆ. ಆದರೆ ಮಾಧುಸ್ವಾಮಿ ಅವರ‌ ಮಾತನ್ನು ನಡೆಸಲು ಸಂಸದರು ಬಿಡುವುದು ಕಷ್ಟ ಎ‌ನ್ನುತ್ತವೆ ಬಿಜೆಪಿ ಮೂಲಗಳು.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ನಿರ್ಧಾರ ಕೂಡ ಪ್ರಮುಖವಾಗಲಿದೆ‌. ಯಾರ ಪರ ಲಾಬಿ ಹೇಗೆ ಕೆಲಸ ಮಾಡಲಿದೆ ಎಂಬುದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.

ಜಗತ್ತಿನ ಎಲ್ಲ ಸಮಸ್ಯೆಗೂ ಗಾಂಧಿ ತತ್ವ ಪರಿಹಾರ

Publicstory.in


ತುಮಕೂರು: ಮಹಾತ್ಮ ಗಾಂಧೀಜಿ ಈ ದೇಶದ ಆತ್ಮ, ಅಂತಃಶಕ್ತಿ. ಜಗತ್ತಿನ ಸರ್ವ ಸಮಸ್ಯೆಗಳಿಗೂ ಗಾಂಧಿ ತತ್ವ ಒಂದೇ ಪರಿಹಾರವಾಗಿದೆ ಎಂದು ಹಿರಿಯ ಸಾಹಿತಿ ಎಂ.ವಿ.ನಾಗರಾಜರಾವ್ ತಿಳಿಸಿದರು.

ಜಿಲ್ಲಾ ಸರ್ವೋದಯ ಮಂಡಲ, ಮಹಾತ್ಮಗಾಂಧಿ ಯುವ ಸಂಘ ಮತ್ತು ಬಾಪೂಜಿ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ನಗರದ ರವೀಂದ್ರ ಕಲಾನಿಕೇತನದಲ್ಲಿ `ಬಾ-ಬಾಪೂ 150 ಮತ್ತು ಸರ್ವೋದಯ’, ಪರಿಚಯ ದರ್ಶಿನಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಎಂಬ ವ್ಯಕ್ತಿ ಹುಟ್ಟಿದ್ದರೆ? ಈ ನೆಲದಲ್ಲಿ ಬದುಕಿದ್ದರೆ? ಎಂದು ಮುಂದಿನ ಪೀಳಿಗೆಗೆ ಪ್ರಶ್ನಾರ್ಥಕ ಚಿಹ್ನೆ ಮೂಡಬಹುದು ಎಂದರು.

ಆ ರೀತಿ ಬದುಕಲು ಸಾಧ್ಯವೇ ಎಂಬ ಅನುಮಾನವೂ ಕೆಲವರಲ್ಲಿ ಮೂಡಬಹುದು. ತಮ್ಮ ಪ್ರಾಮಾಣಿಕತೆ, ಸತ್ಯ, ಸರಳತೆ ಮೂಲಕ ಗಾಂಧೀಜಿ ಮಹಾತ್ಮರಾಗಿ ಬೆಳೆದರು. ಅಹಿಂಸೆ ಮೂಲಕ ಸಾಮಾನ್ಯ ಜನರನ್ನು ಕೂಡ ಆಂದೋಲನದಲ್ಲಿ ಭಾಗಿಯಾಗುವಂತೆ ಮಾಡಿದ ಗಾಂಧೀಜಿ, ಉಪ್ಪು, ಚರಕ, ಖಾದಿಯಂತಹ ವಸ್ತುಗಳನ್ನೆ ಶಸ್ತ್ರಗಳನ್ನಾಗಿ ಪರಿವರ್ತಿಸಿದರು. ಸ್ವಚ್ಛತೆ ಎಲ್ಲಿರುತ್ತದೋ ಅಲ್ಲಿ ಭಗವಂತ ಇರುತ್ತಾನೆ ಎಂದು ಸ್ವಚ್ಛತೆಗೆ ಗಾಂಧೀಜಿ ಕರೆ ನೀಡಿದರು. ಗಾಂಧಿ ಮಾರ್ಗ ಮನುಷ್ಯರನ್ನು ಮಾತ್ರವಲ್ಲದೆ ಪ್ರಾಣಿ, ಪಕ್ಷಿಗಳನ್ನೂ ಬದುಕಿಸುತ್ತದೆ. ದೇಶವನ್ನು ಸ್ವಚ್ಛಗೊಳಿಸುವ ಜತೆಗೆ ಮನಸ್ಸುಗಳನ್ನೂ ಸ್ವಚ್ಛಗೊಳಿಸಿಕೊಳ್ಳಬೇಕಿದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಎಂ.ಗೋವಿಂದರಾಯ ಮಾತನಾಡಿ, ಯುವ ಪೀಳಿಗೆಗೆ ಮಹಾತ್ಮ ಗಾಂಧೀಜಿ ಅವರ ತತ್ವ, ಸಿದ್ಧಾಂತ ಹಾಗೂ ವಿಚಾರಧಾರೆ ಕುರಿತಾದ ಲೇಖನ ಈ ಪರಿಚಯ ದರ್ಶಿನಿ ಒಳಗೊಂಡಿದೆ. ಪ್ರಸ್ತುತ ಪ್ರೀತಿ, ಸಹನೆ ದೂರ ಮಾಡಿ ದ್ವೇಷ ಅಸೂಹೆ ಹುಟ್ಟು ಹಾಕುತ್ತಿರುವ ಸಂದರ್ಭದಲ್ಲಿ ಮುಂದಿನ ಪೀಳಿಗೆಯಲ್ಲಿ ಗಾಂಧಿ ತತ್ವ ಪ್ರವಹಿಸಬೇಕು ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಲೇ ಬೇಕಾದ ಸಂಪಾದಿತ ಕೃತಿ ಇದು. ಕುತೂಹಲ-ಉತ್ಸಾಹದಿಂದ ಓದಿಸಿಕೊಂಡು ಹೋಗುತ್ತದೆ. ಪ್ರಸ್ತುತ ಹೊಸ ಪೀಳಿಗೆಗೆ ಗಾಂಧೀಜಿ ಅವರ ಸತ್ಯ, ಅಹಿಂಸೆ ತತ್ವಗಳನ್ನು ತಿಳಿಸಿಕೊಡುವ ಅವಶ್ಯಕತೆ ಬಹುಮುಖ್ಯವಾಗಿದೆ ಎಂದರು.

ಕರ್ನಾಟಕ ಸರ್ವೋದಯ ಮಂಡಲ ಅಧ್ಯಕ್ಷ ಎಲ್.ನರಸಿಂಹಯ್ಯ ತೊಂಡೋಟಿ ಮಾತನಾಡಿ, ಮಹಾತ್ಮ ಗಾಂಧೀಜಿ ಏನು ಅಂತ ಯುವಕರಿಗೆ ತಿಳಿ ಹೇಳಬೇಕು. ಗಾಂಧೀಜಿ ಒಂದು ಪ್ರೇರಕ ಶಕ್ತಿ ಆಗುತ್ತಾರೆ ಎಂದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಸರ್ವೋದಯ ಮಂಡಲ ಜಿಲ್ಲಾಧ್ಯಕ್ಷ ಎಂ.ಬಸವಯ್ಯ, ಕಾರ್ಯದರ್ಶಿ ಹೆಚ್.ಎಸ್.ಸುರೇಶ್, ಪ್ರಧಾನ ಕಾರ್ಯದರ್ಶಿ ಆರ್.ವಿ.ಪುಟ್ಟಕಾಮಣ್ಣ, ಸಿ.ಡಿ.ಚಂದ್ರಶೇಖರ್, ಆರ್.ಅನಿತಾ ಉಪಸ್ಥಿತರಿದ್ದರು.

ಕಿಡ್ಸ್ ಕಾಲೊನಿ ಮಕ್ಕಳು ಮೂಡಿಸಿದ ಕೌತುಕ!

Publicstory.in


ತುಮಕೂರು ನಗರದ ಜಯನಗರದ ಆ ರಸ್ತೆಯಲ್ಲಿ ಓಡಾಡುತ್ತಿದ್ದವರ ಕ್ಷಣ ಹೊತ್ತು ನಿಂತು ಮುಂದೆ ಸಾಗುತ್ತಿದ್ದರು.

ಕೆಲವರು ಗೇಟು ಇಣುಕಿ ಮುಂದೆ ಹೋಗುತ್ತಿದ್ದರು. ಬೇರೆ ಶಾಲೆಗಳ ಮಕ್ಕಳಂತೂ ಏನಿರಬಹುದು ಎಂದು ಕೇಳುತ್ತಿದ್ದರು.
ಇದು ಕಿಡ್ಸ್ ಕಾಲೊನಿ ಮಕ್ಕಳ ಸೊಬಗು, ಸಂಭ್ರಮ. ಶಾಲಾ ವಾರ್ಷಿಕೋತ್ಸವ ಅಂಗವಾಗಿ‌ ಮಕ್ಕಳ ಪ್ರತಿಭೆಗೆ ಅವಕಾಶ ಮಾಡಿಕೊಡಲಾಗಿತ್ತು.

ಎಲ್ ಜಿ, ಯು ಕೆಜಿ ಮಕ್ಕಳ ಮಾತಿಗೆ ಎಲ್ಲರೂ ತಲೆದೂಗಿದರು.

ಟ್ರಾಫಿಕ್ಸ್, ನೆಲ, ಜಲ, ಸೈನಿಕರು, ಗಾಳಿ ವಿದ್ಯುತ್, ಕಾಡು, ಪ್ರಾಣಿಗಳು, ಹಣ್ಣು ಹಂಪಲು, ಡಾಕ್ಟರ್, ನರ್ಸ್ ಹೀಗೆ ನಾನಾ ವಿವಿಧ ಪ್ರಾಜೆಕ್ಟ್‌ ಗಳೊಂದಿಗೆ ಮಿಂಚಿದರು.
ಮಕ್ಕಳು ಪಟಪಟನೇ ತಮ್ಮ ಪ್ರಾಜೆಕ್ಟ್ ಗಳ ಬಗ್ಗೆ ವಿವರಿಸಿದರು.

ತಮ್ಮ ಮಕ್ಕಳ ಕೌಶಲ ಕಂಡು ತಂದೆ ತಾಯಿಗಳು ಹಿರಿ ಹಿರಿ ಹಿಗ್ಗಿದರು.
ಶಿಕ್ಷಕಿಯರಾದ ಜಯಂತಿ, ಆಸ್ಮಾಭಾನು, ನಾಗಶಿಲ್ಪಾ, ಪ್ರಪುಲ್ಲಾ ಇತರರ ಶ್ರಮ ಎದ್ದು ಕಾಣುತ್ತಿತ್ತು.

ತುಮಕೂರು ಸ್ಮಾರ್ಟ್ ಸಿಟಿ ಅವ್ಯವಹಾರ: 18ಕ್ಕೆ ವರದಿ ಸಲ್ಲಿಕೆ?

Public story.in


ತುಮಕೂರು: ತುಮಕೂರು ನಗರದಲ್ಲಿ ಸುಮಾರು 900 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳು ಕಳಪೆಯಿಂದ ಕೂಡಿವೆ, ಅನಗತ್ಯವಾಗಿ ಕಾಮಗಾರಿ ಕೈಗೊಂಡು ಹಣ ವ್ಯರ್ಥ ಮಾಡಲಾಗಿದೆ,ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ನೇಮಿಸಿದ್ದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೈಪ್ರಕಾಶ್ ಕೆ. ಅವರ ನೇತೃತ್ವದಲ್ಲಿ ನೇಮಿಸಿದ್ದ ಸ್ಮಾರ್ಟ್ ಸಿಟಿ ಅನುಷ್ಠಾನ ತಂಡಕ್ಕೆ ಡಿ.18ರಂದು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಈ ತಂಡವೂ ಈಗಾಗಲೇ ದೂರು ಬಂದಿರುವ ಕಾಮಗಾರಿಗಳ ಗುಣಮಟ್ಟ ಮತ್ತಿತರರ ವಿಷಯಗಳ ಬಗ್ಗೆ ಅಧ್ಯಯನ ನಡೆಸಬೇಕಾಗಿದೆ. ಅಗತ್ಯವಿದ್ದರೆ ತಜ್ಞರ ಅಭಿಪ್ರಾಯವನ್ನು ಪಡೆಯಲು ಸಹ ತಂಡಕ್ಕೆ ಸ್ವಾತಂತ್ರ ನೀಡಲಾಗಿದೆ. ಈ ತಂಡ ಏನು ವರದಿ ನೀಡಲಿದೆ ಎಂಬ ಕುತೂಹಲ ಮನೆಮಾಡಿದೆ.

ಈ ತಂಡಕ್ಕೆ ವರದಿ ನೀಡುವಂತೆ ಸೂಚಿಸಿದ್ದ ಬೆನ್ನಲ್ಲೆ ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರನ್ನು ರಾಜ್ಯ ಸರ್ಕಾರ ವರ್ಗ ಮಾಡಿರುವುದು ಸಹ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಕಪ್ಪು ಪಟ್ಟಿಗೆ ಗುತ್ತಿಗೆದಾರರು


ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಅವ್ಯವಹಾರ, ಕಳಪೆ ಕಂಡುಬಂದಿದ್ದರೆ ಅಂತಹ ಕಾಮಗಾರಿಗಳ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಸ್ತಾವನೆಯನ್ನು ಸಹ ನೀಡುವಂತೆ ತಂಡಕ್ಕೆ ನಿರ್ದೇಶನ ನೀಡಲಾಗಿದೆ.

ಈ ತಂಡ ಯಾವುದಾದರೂ ಗುತ್ತಿಗೆದಾರರನ್ನು ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಿದೆಯೇ ಇಲ್ಲವೇ ಎಂಬ ಬಗ್ಗೆಯೂ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಕಚೇರಿ ಅಂಗಗಳಲ್ಲಿ ಊಹಾಪೋಹಗಳು ಹರಿದಾಡುತ್ತಿವೆ.

ಡಿಸೆಂಬರ್ 18ರಂದು ಸಂಸದ ಜಿ.ಎಸ್.ಬಸವರಾಜ್ ಅವರು ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲೇ ವರದಿ ಮಂಡನೆ ಮಾಡುವಂತೆ ಜಯಪ್ರಕಾಶ್ ಅವರಿಗೆ ಈಗಾಗಲೇ ಲಿಖಿತವಾಗಿಯೇ ನಿರ್ದೇಶನ ನೀಡಲಾಗಿದೆ.

ಸಭೆಯು ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕರೆಯಲಾಗಿದೆ. ಸಭೆಗೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಗೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳು, ಸಲಹಾ ಸಮಿತಿ ಸದಸ್ಯರು ಹಾಗೂ ದಿಶಾ ಸಮಿತಿ ಸದಸ್ಯರನ್ನು ಆಹ್ವಾನಿಸಲಾಗಿದೆ. ಸಭೆಯಲ್ಲಿ ಕೆಲವು ಪ್ರಮುಖ ವಿಚಾರಗಳು ಮಂಡನೆಯಾಗಲಿವೆ ಎಂದು ತಿಳಿದುಬಂದಿದೆ.

ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಎಲ್ಲ ಕಾಮಗಾರಿಗಳ ಮಾಹಿತಿಯನ್ನು ಅಂತರ್ಜಾಲ ತಾಣಕ್ಕೆ ಸ್ಮಾರ್ಟ್ ಸಿಟಿ ವೆಬ್ ಸೈಟ್ ಗೆ ಹಾಕುವ ಸಂಬಂಧ ಮಹತ್ವದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.

ವಿನಾಕಾರಣ ಕೆಲಸ ವಿಳಂಬ ಮಾಡಿದರೆ ಎಸಿಬಿಗೆ ದೂರು ನೀಡಿ

ತುಮಕೂರು:
ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಕೆಲಸಗಳನ್ನು ವಿನಾ ಕಾರಣ ಮುಂದೂಡದೆ ಕಾಲ ಪರಿಮಿತಿಯಲ್ಲಿ ಮಾಡಿಕೊಟ್ಟಲ್ಲಿ ಸಾಮಾನ್ಯ ಜನ ಇಲಾಖೆಗೆ ಅಲೆಯುವುದು ತಪ್ಪುತ್ತದೆ ಎಂದು ಎಂದು ಎಸಿಪಿ ಇನ್ ಸ್ಪೆಕ್ಟರ್ ಎಚ್.ಸುನಿಲ್ ಕುಮಾರ್ ತಿಳಿಸಿದರು.

ಕೊರಟಗೆರೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿ, ಇತ್ತೀಚೆಗೆ ಜನ ಬುದ್ಧಿವಂತರಾಗಿದ್ದಾರೆ. ವಿನಾಕಾರಣ ಅಧಿಕಾರಿಗಳು ಜನ ಸಾಮಾನ್ಯರ ಕೆಲಸ ಕಾರ್ಯ ವಿಳಂಬ ಮಾಡಿದರೆ, ಕೆಲಸ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟರೆ ಎಸಿಬಿಗೆ ದೂರು ನೀಡುವುದನ್ನು ಕಲಿತಿದ್ದಾರೆ. ಇದರೊಂದಿಗೆ ಎಸಿಪಿ ಇಲಾಖೆ ಸಾರ್ವಜನಿಕರಿಗೆ ಹತ್ತಿರವಾಗಿ ಅವರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡುತ್ತಿದೆ. ಇಂತಹ ವೇಳೆ ಸಾರ್ವಜನಿಕರಿಗೆ ತೊಂದರೆ ನೀಡಿ ಎಸಿಬಿ ಬಲೆಗೆ ಬಿದ್ದು ನಿಮ್ಮ ಉದ್ಯೋಗ ನೀವೇ ಹಾಳು ಮಾಡಿಕೊಳ್ಳುವ ಪರಿಸ್ಥಿತಿ ತಂದುಕೊಳ್ಳದಿರಿ ಎಂದು ಅಧಿಕಾರಿಗಳಿಗೆ ತಿಳುವಳಿಕೆ ನೀಡಿದರು.

ಯಾವುದೇ ಸರ್ಕಾರಿ ಇಲಾಖೆಯಲ್ಲಿ ಜನ ಸಾಮಾನ್ಯರ ಕೆಲಸ ನಿರ್ವಹಿಸಲು ವಿನಾಕಾರಣ ಅಲೆದಾಡಿಸಿ ವಿಳಂಬ ಮಾಡಿದ್ದಲ್ಲಿ ಅಂತಹ ವೇಳೆ ಭ್ರಷ್ಟಾಚಾರದ ನಿಗ್ರಹದಳಕ್ಕೆ(ಎಸಿಬಿ) ಸಾರ್ವಜನಿಕರು ಧೈರ್ಯವಾಗಿ ದೂರು ನೀಡಬಹುದಾಗಿದೆ. ಎಸಿಬಿ ಇಲಾಖೆ ಜನ ಸಾಮಾನ್ಯರಿಗಾಗಿ ಇದ್ದು, ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂಧಿಸಲಿದೆ ಎಂದು ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಕಂದಾಯ ಇಲಾಖೆಯಲ್ಲಿ ಖಾತೆ ಬದಲಾವಣೆ ಹಾಗೂ ಮನೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಐದು ಅರ್ಜಿಗಳು ಸಾರ್ವಜನಿಕರಿಂದ ನೀಡಲಾಯಿತು. ಬಹುತೇಕ ಅರ್ಜಿಗಳು ಕಂದಾಯ ಇಲಾಖೆ ಸಂಬಂಧಿಸಿದ ಬಹಳ ವರ್ಷಗಳಿಂದ ಖಾತೆ ಬದಲಾವಣೆಯಾಗಿಲ್ಲ ಎಂಬುದರ ಬಗ್ಗೆ ದೂರುಗಳು ಇದ್ದವು.

ಸಭೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಆದರೆ ತಹಶೀಲ್ದಾರ್  ಸ್ಥಳೀಯವಾಗಿ ಇದ್ದುಕೊಂಡು ಸಭೆಗೆ ಬಂದಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂತು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಪ್ರಕಾಶ್, ಆರೋಗ್ಯ ಇಲಾಖೆಯ ಡಾ. ವಿಜಯ್ ಕುಮಾರ್, ಉಪನೊಂದಣಾಧಿಕಾರಿ ಪರಮಶಿವಮೂರ್ತಿ, ಎಇಇ ರಂಗಪ್ಪ ಇತರರು ಇದ್ದರು.

ಪೌರತ್ವ ನೋಂದಣಿ: ಈ ದಾಖಲೆ ಬೇಕೇ ಬೇಕು

0

ಕೆ.ಇ.ಸಿದ್ದಯ್ಯ


ದೇಶಾದ್ಯಂತ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ಜಾರಿ ಮಾಡುವ ಕೇಂದ್ರ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷಗಳು, ವಿವಿಧ ಕ್ಷೇತ್ರಗಳ ಗಣ್ಯರು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಪ್ರೊಫೆಸರ್ ಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವ ನಡುವೆಯೇ ರಾಜ್ಯಸಭೆಯಲ್ಲಿಂದು ಪೌರತ್ವ ತಿದ್ದುಪಡಿ ಮಸೂದೆ ಮಂಡನೆಯಾಗಿದೆ. ರಾಷ್ಟ್ರಪತಿ ಅಂಕಿತವೂ ಸಿಕ್ಕಿದೆ.

ಈಗಾಗಲೇ ಅಸ್ಸಾಂ ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಕಾರ್ಯ ಪೂರ್ಣಗೊಂಡಿದೆ. ಮೊದಲ ಬಾರಿಗೆ ಪೌರತ್ವ ನೋಂದಣಿ ಕೈಗೊಂಡಾಗ 40 ಲಕ್ಷ ಮಂದಿ ಪಟ್ಟಿಯಿಂದ ಹೊರಗಿದ್ದರು.

ನಂತರ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಗೆ ಚಾಲನೆ ನೀಡಲಾಯಿತು. ಈ ಕ್ರಮದಿಂದ ಬಹುತೇಕ ಮಂದಿ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿದ್ದು, ಇನ್ನೂ 20 ಲಕ್ಷ ಮಂದಿ ಪಟ್ಟಿಯಿಂದ ಹೊರಗಿದ್ದಾರೆ. ಇವರನ್ನು ಸೇರಿಸಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಇಷ್ಟೆಲ್ಲಾ ವಿರೋಧಗಳ ನಡುವೆಯು ಭಾರತೀಯ ಜನತಾ ಪಕ್ಷ ಮತ್ತು ಭಾರತ ಸರ್ಕಾರ ಇಡೀ ದೇಶವ್ಯಾಪಿ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ಜಾರಿಗೊಳಿಸಲು ಸಾಕಷ್ಟು ಪ್ರಯತ್ನಗಳನ್ನು ಹಾಕುತ್ತಲೇ ಇದೆ.

ದೇಶದಲ್ಲಿ ಮೊದಲ ಬಾರಿಗೆ ಅಸ್ಸಾಂ ರಾಜ್ಯದಲ್ಲಿ ಪೌರತ್ವ ನೋಂದಣಿಗೆ ಚಾಲನೆ ದೊರೆತಿದೆ. ಕರ್ನಾಟಕದಲ್ಲೂ ಜಾರಿಯ ಪ್ರಕ್ರಿಯೆಗೆ ಈಗಾಗಲೇ‌ ಚಾಲನೆ ದೊರೆತಿದೆ. ಬೆಂಗಳೂರು ಸಮೀಪದ ನೆಲಮಂಗಲದಲ್ಲಿ ಬಂಧನ ಕೇಂದ್ರ ಸ್ಥಾಪಿಸಲಾಗಿದೆ.

ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವವರನ್ನು ದೇಶದಿಂದ ಹೊರಹಾಕುವ ಉದ್ದೇಶದಿಂದ ರಾಷ್ಟ್ರೀಯ ಪೌರತ್ವ ನೋಂದಣಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಧರ್ಮದ ಆಧಾರದ ಮೇಲೆ ದೇಶವನ್ನು ಛಿದ್ರಗೊಳಿಸುವ ಯತ್ನ ನಡೆಯುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಅಸ್ಸಾಂ ರಾಜ್ಯದಲ್ಲಿ ಈಗಾಗಲೇ ರಾಷ್ಟ್ರೀಯ ಪೌರತ್ವ ನೋಂದಣಿ ಮಾಡಲಾಗಿದ್ದು ಅದೇ ಮಾದರಿಯನ್ನು ಇಡೀ ದೇಶಾದ್ಯಂತ ಅನುಸರಿಸಲಾಗುವುದೇ ಎಂಬ ಬಗ್ಗೆ ಈವರೆಗೆ ಯಾವುದೇ ತೀರ್ಮಾನಗಳನ್ನು ಭಾರತ ಸರ್ಕಾರ ಪ್ರಕಟಿಸಿಲ್ಲ ಮತ್ತು ಸ್ಪಷ್ಟಪಡಿಸಿಲ್ಲ. ಭಾರತ ಭಿನ್ನ ದೇಶವಾಗಿರುವುದರಿಂದ ಅಸ್ಸಾಂನಲ್ಲಿ ಅನುಸರಿಸಿದ ಮಾನದಂಡಗಳನ್ನು ಇಡೀ ದೇಶಕ್ಕೇ ಅನ್ವಯಿಸಲು ಬರುವುದಿಲ್ಲ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

1971 ಮಾರ್ಚ್ 24ರಂದು ಮಧ್ಯಾರಾತ್ರಿ 12 ಗಂಟೆಯ ಓಲಗೆ ವಲಸೆ ಬಂದವರು ಈ ದೇಶದಲ್ಲಿಯೇ ಉಳಿಯಲು ಅವಕಾಶ ಕಲ್ಪಿಸಲಾಗಿದೆ. ಅದರ ನಂತರ ಅಂಚರೆ ಮಾರ್ಚ್ 24ರ ನಂತರ ವಲಸೆ ಬಂದವರನ್ನು ದೇಶದಿಂದ ಹೊರಹಾಕಬೇಕು ಎಂಬುದನ್ನು 1986ರಲ್ಲಿ ಮಾಡಿಕೊಂಡ ಅಸ್ಸಾಂ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇದು ಇಡೀ ದೇಶಕ್ಕೆ ಅನ್ವಯವಾಗುತ್ತದೆಯೇ ಈವರೆಗೂ ಭಾರತ ಸರ್ಕಾರ ಸ್ಪಷ್ಟನೆ ನೀಡಿಲ್ಲ. ಆದರೆ ನವೆಂಬರ್ 21ರಂದು ರಾಜ್ಯಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಹಾಗೂ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಇಡೀ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದರು. ಅದು ನವೆಂಬರ್ 22ರಂದು ಎಲ್ಲಾ ಪತ್ರಿಕೆಗಳು ಮತ್ತು ದೃಶ್ಯಮಾಧ್ಯಮದಲ್ಲಿ ಮುಖಪುಟದಲ್ಲಿ ಹೆಡ್ ಲೈನ್ ಗಳಾಗಿ ಪ್ರಕಟವಾಗಿದ್ದವು.

ಹಾಗಾದರೆ ರಾಷ್ಟ್ರೀಯ ಪೌರತ್ವ ನೋಂದಣಿಗೆ ಬೇಕಾಗುವ ದಾಖಲೆಗಳು ಯಾವುವು? ಅವುಗಳನ್ನು ಯಾರಿಂದ ಪಡೆದಿರಬೇಕು ಯಾವೆಲ್ಲ ದಾಖಲೆಗಳನ್ನು ಹೊಂದಿರಬೇಕು ಬೇರೆ ದೇಶ ಮತ್ತು ರಾಜ್ಯಗಳಿಂದ ಬಂದವರು ಯಾವ ದಾಖಲೆಗಳನ್ನು ನೀಡಬೇಕೆಂಬ ಬಗ್ಗೆ ತಿಳಿಯೋಣ. ಬೇಕಾಗುವ ದಾಖಲೆಗಳು ಈ ಕೆಳಗಿನಂತಿವೆ.

ಈ‌ ದಾಖಲೆಗಳು ಬೇಕು


1) ಎರಡು ವಿಭಿನ್ನ ರಾಜ್ಯಗಳಿಂದ ಬಂದ ಪೋಷಕರು ತಮ್ಮ ಕುಟುಂಬದ ವಂಶವೃಕ್ಷವನ್ನು ನೀಡಲು ಅವಕಾಶ ನೀಡಲಾಗಿದೆ.

2)ಅಸ್ಸಾಂ ರಾಜ್ಯದಲ್ಲಿ ನೂರಾರು ರಾಷ್ಟ್ರೀಯ ಪೌರತ್ವ ನೋಂದಣಿ ಸೇವಾ ಕೇಂದ್ರಗಳ ಮೂಲಕ ಅರ್ಜಿಗಳನ್ನು ವಿತರಿಸಿ ಅಸ್ಸಾಂ ಒಪ್ಪಂದದ ಪ್ರಕಾರ ವಿಶೇಷ ಪೌರತ್ವಕ್ಕೆ ನಿಗದಿಗೊಳಿಸಿದ ದಿನಾಂಕದೊಳಗೆ ವಾಸಿಸುತ್ತಿದ್ದವರು ಮಾತ್ರ ಇಲ್ಲೇ ಉಳಿಯಬಹುದು. ಅದಕ್ಕೆ ಸೂಕ್ತ ದಾಖಲೆಗಳು ಬೇಕು.ಅರ್ಜಿದಾರರು 14 ದಾಖಲೆಗಳನ್ನು ಪೌರತ್ವ ನೋಂದಣಿ ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು.

ಅವುಗಳನ್ನು ಸಂವಿಧಾನದಿಂದ ಪ್ರದತ್ತವಾಧ ಅಧಿಕಾರ ಹೊಂದಿರುವ ಅಧಿಕಾರಿಗಳು ನೀಡಿರಬೇಕು.

1) 1951ರ ರಾಷ್ಟ್ರೀಯ ಪೌರತ್ವ ನೋಂದಣಿ ದೃಡೀಕರಣ ಪತ್ರ2) ಮಾರ್ಚ್ 24, 1971ರ ಮತದಾರರ ಪಟ್ಟಿ

3) ಭೂಮಿ ಮತ್ತು ಹಿಡುವಳಿ ದಾಖಲೆಗಳು

4) ಪೌರತ್ವ ದೃಢೀಕರಣ ಪತ್ರ

5) ಶಾಶ್ವತ ನಿವಾಸಿ ಸರ್ಟಿಫಿಕೇಟ್

6) ನಿರಾಶ್ರಿತರ ನೋಂದಣಿ ಧೃಢೀಕರಣ ಪತ್ರ

7) ಸರ್ಕಾರ ವಿತರಿಸಿರುವ ಸೇವಾ/ ಉದ್ಯೋಗ ಸರ್ಟಿಫಿಕೇಟ್

8) ಬ್ಯಾಂಕ್ ಅಥವಾ ಅಂಚೇ ಕಚೇರಿ ಖಾತೆ ಪುಸ್ತಕ

9) ಜನನ ಪ್ರಮಾಣ ಪತ್ರ

10) ರಾಜ್ಯ ಶಿಕ್ಷ ಮಂಡಳಿ ಮತ್ತು ವಿಸ್ವವಿದ್ಯಾಲಯ ನೀಡಿರುವ ಶಿಕ್ಷಣ ಪತ್ರ

11) ನ್ಯಾಯಾಲಯದ ದಾಖಲೆಗಳು / ಪ್ರಕ್ರಿಯೆಗಳು

12) ಪಾಸ್ ಪೋರ್ಟ್

13) ಜೀವ ವಿಮಾ ಪಾಲಿಸಿ/ ಎಲ್ಐಸಿ ಪಾಲಿಸಿ

14) ಸರ್ಕಾರ ವಿತರಿಸಿರುವ ಪರವಾನಗಿ / ಸರ್ಟಿಫಿಕೇಟ್ಇದರ ಜೊತೆಗೆ ತಂದೆ ಅಥವಾ ತಾತನಿಗೆ ಸಂಬಂಧಿಸಿದ 1971 ಮಾರ್ಚ್ 24ರೊಳಗಿನ ದಾಖಲೆಗಳು ಇರಬೇಕು.

ಒಂದು ಅಥವಾ ಹೆಚ್ಚು ದಾಖಲೆಗಳು ಇದ್ದರೆ ಅಂಥವರನ್ನು ಬಿ. ಪಟ್ಟಿಗೆ ಸೇರಿಸಲಾಗುವುದು. ಈ ಬಿ ಪಟ್ಟಿಗೆ ಸೇರಲು ಬೇಕಾಗುವ ದಾಖಲೆಗಳು ಹೀಗಿವೆ.-

ಜನನ ಪ್ರಮಾಣ ಪತ್ರ- ಭೂಮಿ ದಾಖಲೆಗಳು- ಮಂಡಳಿ ಅಥವಾ ವಿಶ್ವವಿದ್ಯಾಲಯ ನೀಡಿದ ಪತ್ರ- ಬ್ಯಾಂಕ್ ಅಥವಾ ಎಲ್ಐಸಿ / ಅಂಚೇ ಕಚೇರಿ ದಾಖಲೆ- ವಿವಾಹವಾಗಿದ್ಲರೆ ವಲಯ ಅಧಿಕಾರಿ ಅಥವಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ- ಮತದಾರರ ಪಟ್ಟಿ- ಪಡಿತರ ಚೀಟಿ ಅಥವಾ ಕಾನೂನುಬದ್ದ ದಾಖಲೆ- ಒಂದೊಮ್ಮೆ ಪತ್ನಿ ಬೇರೆ ಸ್ಥಳದಲ್ಲಿ ವಿವಾಹವಾಗಿದ್ದರೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

ಮುಖ್ಯವಾಗಿ ಬಿ ಪಟ್ಟಿಯಲ್ಲಿ ಸಂಪರ್ಕ ಹೊಂದಿರುವ ದಾಖಲೆಗಳಿರಬೇಕು. ಇದಕ್ಕು ಎರಡ ದಾಖಲೆಗಳು ಅಗತ್ಯ.1) ವಲಯ ಅಧಿಕಾರಿ ಅಥವಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪತ್ರ. ಅದು ಮಹಿಳೆ ಮದುವೆಯಾಗಿರುವುದನ್ನು ಸಮರ್ಥಿಸುವುದಾಗಿರಬೇಕು. ಅದು 1971 ಮಾರ್ಚ್ 24ರ ಮೊದಲಿನದಾಗಿರಬೇಕು.

2) 1971ಕ್ಕೂ ಮೊದಲು ವಿತರಿಸಿರುವ ಪಡಿತರ ಚೀಟಿ
ಪೌರತ್ವ ಕಾಯ್ದೆ 1955ರ ಸೆಕ್ಷನ್ 6ಎಯಲ್ಲಿ ಉಲ್ಲೇಖಿಸಿರುವಂತೆ ವಿಶೇಷ ಪೌರತ್ವಕ್ಕೆ ಕಟ್ ಆಫ್ ಡೇಟ್ ನಿಗದಿಗೊಳಿಸಿದೆ. ಈ ಕಾಯ್ದೆಯನ್ನು 1987ರಲ್ಲಿ ತಿದ್ದುಪಡಿ ಮಾಡಲಾಗಿದೆ.ಹೀಗಾಗಿ ಅದು ಕೆಲ ಬದಲಾವಣೆಗಳನ್ನು ಹೊಂದಿದ್ದು ಸಹಕಾರಿಯಾಗಬಹುದು. ರಾಷ್ಟ್ರೀಯ ಪೌರತ್ವ ನೋಂದಣಿ ಪರೀಕ್ಷೆಯನ್ನು ದೇಶವ್ಯಾಪಿ ಒಂದೇ ಮಾಧರಿಯಲ್ಲಿ ಬರುವುದಿಲ್ಲ.ಯಾಕೆಂದರೆ ಬಡವರು, ಅಲೆಮಾರಿಗಳು, ಆದಿವಾಸಿಗಳು, ಮಹಿಳೆ ಮತ್ತು ದೊಡ್ಡ ವಿಸ್ತಾರ ಹೊಂದಿರುವುದರಿಂದ ಒಂದೇ ಮಾದರಿಯ ಪೌರತ್ವ ನೋಂದಣಿ ಸಮಸ್ಯೆಗಳನ್ನು ಹುಟ್ಟುಹಾಕುವ ಸಾಧ್ಯತೆ ಇದೆ.

ಮುಂದಿನ ಬಜೆಟ್ ನಲ್ಲಿ ನೀರಾವರಿಗೆ‌ ಒತ್ತು: ಬಿಎಸ್ ವೈ

ಕುಪ್ಪೂರು: ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಮುಂದಿನ ಬಜೆಟ್‍ನಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ನಡೆದ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವದ ಉದ್ಘಾಟನೆ ಹಾಗೂ ಕುಪ್ಪೂರು ಗುರು ಮರುಳಸಿದ್ದೇಶ್ವರ ಮಹಾಪುರಾಣ ವ್ಯಾಖ್ಯಾನ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.

ಈ ನಾಡಿನ ರೈತರ ಸಂಕಷ್ಟಗಳನ್ನು ಬಗೆಹರಿಸಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವುದು, ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ರೈತರನ್ನು ಸಂಕಷ್ಟದಿಂದ ದೂರ ಮಾಡಬೇಕು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗ ಸೇರಿದಂತೆ ಎಲ್ಲಾ ವರ್ಗದ ಜನರು ವಿಶೇಷವಾಗಿ ಮಹಿಳಾ ಸಬಲೀಕರಣದ ದೃಷ್ಠಿಯಿಂದ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ದೃಷ್ಠಿಯಿಂದ ಅನೇಕ ಯೋಜನೆಗಳು ಕಾರ್ಯ ರೂಪಕ್ಕೆ ತರಲು ಚಿಂತನೆಗಳು ನಡೆಯುತ್ತಿವೆ ಎಂದರು.

ಮುಂಬರುವ ಫೆಬ್ರವರಿ ಮಾಹೆಯ ಬಜೆಟ್‍ನಲ್ಲಿ ಅನೇಕ ಕಾರ್ಯಕ್ರಮಗಳನ್ನು ಘೋಷಣೆ ಮಾಡುವುದರ ಮೂಲಕ ರಾಜ್ಯವನ್ನು ಒಂದು ಮಾದರಿ ರಾಜ್ಯವನ್ನಾಗಿ ಮಾಡಬೇಕೆನ್ನುವ ಸಂಕಲ್ಪ ಇದೆ. ಈ ನಿಟ್ಟಿನಲ್ಲಿ ಅತ್ಯಂತ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಚಿಕ್ಕನಾಯಕನಹಳ್ಳಿ ತಾಲೂಕು ಕುಪ್ಪೂರು ಗದ್ದುಗೆಗೆ 400 ವರ್ಷಗಳ ಇತಿಹಾಸವಿದೆ. ಪರಂಪರೆ ಇತಿಹಾಸವುಳ್ಳ ಈ ಮಠವು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ. ಮಠದ ಮಹಾಸ್ವಾಮಿಗಳು ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿನ ಒಳಿತಿಗಾಗಿ ಸೇವೆ ಸಲ್ಲಿಸುತ್ತಿರುವುದು ಸಂತಸದ ವಿಷಯ ಎಂದರು.

ಜಾತ್ರೆಗಳು ಅಪ್ಪಟ ದೇಶಿಯ ಸಂಸ್ಕಂತಿಯನ್ನು ಬಿಂಬಿಸುತ್ತವೆ. ಜಾತ್ರೆ-ಸಂತೆಗಳು ನಮ್ಮ ಜನರ ನಂಬಿಕೆಯನ್ನು ಗಟ್ಟಿಗೊಳಿಸುವಂತಹ ಅಪೂರ್ವ ಸಾಧನ. ಜಾತ್ರೆಗಳು ನಮ್ಮ ನಾಡಿನ ಪರಂಪರೆಯಲ್ಲದೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕಂತಿಕ ಮಹೋತ್ಸವದ ಸಂಗಮ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಮೊದಲನೇ ಅವಧಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ 26 ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಸುಮಾರು 106 ಕೋಟಿ ರೂ.ಗಳ ಹಣ ಬಿಡುಗಡೆಗೊಳಿಸಿದ್ದಾರೆ. ಜಿಲ್ಲೆಗೆ 260 ಕೋಟಿ ರೂ.ವೆಚ್ಚದಲ್ಲಿ 96 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಅನುಮೋದನೆ ನೀಡಿದ್ದಾರೆ ಎಂದರು.

ಇತ್ತಿಚೆಗೆ ಹೇಮಾವತಿ ನಾಲೆಯಲ್ಲಿ 1200 ಕ್ಯೂಸೆಕ್ ನೀರು ಹರಿಯುವುದೇ ಕಷ್ಟ ಆಗುತ್ತಿತ್ತು, ನಾನು ಮತ್ತು ಸಂಸದ ಬಸವರಾಜು ಅವರು ಕೇಳಿಕೊಂಡಾಗ ನಾಲೆಯ ಅಗಲೀಕರಣ ಮಾಡಿ ಈಗ 2400 ಕ್ಯೂಸೆಕ್ ನೀರು ಹರಿಯುವುದಕ್ಕೆ ಬೋರ್ಡ್‍ನಲ್ಲಿ 550 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗಳು ಜನ ನೋಡುವ ಸ್ಥಿತಿಯಲ್ಲಿ ನಿರ್ಮಾಣವಾಗಲು ಸ್ಪಂದಿಸಿದ್ದಾರೆ ಇದಕ್ಕೆ ನಾನು ಮುಖ್ಯಮಂತ್ರಿಗಳಿಗೆ ಆಭಾರಿಯಾಗಿದ್ದೆನೆ ಎಂದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಕುಪ್ಪೂರು ಮಠದ ಡಾ. ಯತೀಶ್ವರ ಶಿವಾಚಾರ್ಯ ಮಹಾ ಸ್ವಾಮೀಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಸಚಿವ ಆರ್.ಅಶೋಕ್, ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ಶಾಮನೂರು ಶಿವಶಂಕರಪ್ಪ, ಶಾಸಕ ಬಿ.ಸಿ ನಾಗೇಶ್, ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ, ಹಾಜರಿದ್ದರು.