Monday, December 29, 2025
Google search engine
Home Blog Page 313

NRC: ಅಕ್ರಮ ವಲಸಿಗರನ್ನು ಇಡಲು ನೆಲಮಂಗಲದಲ್ಲಿ ಜೈಲು

ಅಸ್ಸಾಂನಲ್ಲಿ‌‌ಎನ್ಅರ್ಸಿ ನೋಂದಣಿ ಚಿತ್ರ

Publicstory.in


ನೆಲಮಂಗಲ: ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬಲು ಜಾರಿಗೆ ತರುತ್ತಿರುವ ರಾಷ್ಟ್ರೀಯ ಪೌರತ್ವ ನೋಂದಣಿ ( ಎನ್ ಆರ್ ಸಿ)ಯಡಿ ಪೌರತ್ವ ದಿಂದ ಕೈ ಬಿಡುವವರನ್ನು ಬಂಧಿಸಿಡಲು ನೆಲಮಂಗಲದ ಬಳಿ ಈಗಾಗಲೇ ಬಂಧಿಖಾನೆ ಸ್ಥಾಪಿಸಲಾಗಿದೆ.

ರಾಜ್ಯದಲ್ಲಿ ಇನ್ನೂ ಎನ್ಆರ್ ಸಿ ಜಾರಿಯಾಗಬೇಕಾಗಿದೆ. ಇದಕ್ಕಾಗಿ ಈಗಲೇ ಬಂಧೀಖಾನೆ ಸಿದ್ಧಪಡಿಸಿದ್ದು ಇಲ್ಲಿಯೇ ಇಡಲಾಗುವುದು ಎಂದು ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ ಮೂಲಗಳು ತಿಳಿಸಿವೆ.

ಜನವರಿಯಿಂದ‌ ಈ ಜೈಲು ಕಾರ್ಯಾರಂಭ ಮಾಡಲಿದೆ. ಈಗಾಗಲೇ 750 ಅಕ್ರಮ ವಲಸಿಗರನ್ನು ಗುರುತಿಸಲಾಗಿದ್ದು, ಇವರನ್ನು ಜನವರಿಯಿಂದ ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿದು ಬಂದಿದೆ.

2024ರ‌‌ ವೇಳೆಗೆ ದೇಶದಲ್ಲಿರುವ ಎಲ್ಲ ಅಕ್ರಮ ವಲಸಿಗರನ್ನು ಹೊರದಬ್ಬಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕರ್ನಾಟಕದಲ್ಲು ಎನ್ ಆರ್ ಸಿ ಜಾರಿಗೊಳಿಸುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ.

ನೆಲಮಂಗಲ ದಲ್ಲಿರುವ ಸಮಾಕ ಕಲ್ಯಾಣ ಇಲಾಖೆಗೆ ಸೇರಿದ್ದ ವಿದ್ಯಾರ್ಥಿ ನಿಲಯವನ್ನೇ ಬಂಧೀಖಾನೆಯಾಗಿ ಪರಿವರ್ತಿಸಲಾಗಿದೆ. ಅಕ್ರಮ ವಲಸಿಗರನ್ನು ಆಯಾಯ ದೇಶಕ್ಕೆ ಸ್ಥಳಾಂತರಿಸುವವರೆಗೂ ಈ ಜೈಲಿನಲ್ಲೇ ಇಡಲಾಗುತ್ತದೆ. ಅವರವರ ದೇಶಕ್ಕೆ ನಂತರ ಹೊರದಬ್ಬಲಾಗುತ್ತದೆ.

ಈ ಜೈಲು ಗೃಹಖಾತೆಯ ನೇರ ಉಸ್ತುವಾರಿಯಲ್ಲಿ ಇರಲಿದೆ.

ಹೆಚ್ಚಿದ ಆತಂಕ; ಎನ್ಆರ್ಸಿ ಜಾರಿ ಸಂಬಂಧ ಮುಸ್ಲಿಂ, ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬಂದಿರುವವರಲ್ಲಿ ಹೆಚ್ಚು ಆತಂಕ ಮನೆ ಮಾಡಿದೆ.

ಅತ್ಯಾಚಾರ: ತಿಪಟೂರಿನಲ್ಲಿ ಕಟ್ಟೆಯೊಡೆದ ಆಕ್ರೋಶ

ತಿಪಟೂರು: ಪಶು ವೈದ್ಯೆ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಸಮಾನ ಮನಸ್ಕ ಸಂಘಟನೆಗಳು ಮೊಂಬತ್ತಿ ಬೆಳಗಿ ನಗರದ ನಗರಸಭೆ ವೃತ್ತದ ಬಳಿಪ್ರತಿಭಟಿಸಿದವು.

ಈ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜನಸ್ಪಂದನ ಟ್ರಸ್ಟ್ ನ ಅಧ್ಯಕ್ಷರಾದ ಸಿ ಬಿ ಶಶಿಧರ್ ಮಾತನಾಡಿ ಅತ್ಯಾಚಾರದಂತ ಹೇಯ ಕೃತ್ಯಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹದು . ಹಲವರು ಈ ಪ್ರಕರಣವನ್ನು ಧರ್ಮದ ಆಧಾರದ ಮೇಲೆ ವಿಂಗಡಿಸುವ ಕೆಟ್ಟ ಪ್ರಯತ್ನಕ್ಕೆ ಕೈಹಾಕಿರುವುದು ಖಂಡನೀಯ. ನನ್ನ ಪ್ರಕಾರ ಅತ್ಯಾಚಾರಿಗಳಿಗೆ ಯಾವುದೇ ದರ್ಮವಿಲ್ಲ ಎಂದರು.

ಪತ್ರಕರ್ತರಾದ ಉಜ್ಜಜ್ಜಿ ರಾಜಣ್ಣ ಮಾತನಾಡಿ, ಇದೆ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಆಗುವ ಇಂತಹ ಪ್ರಕರಣಗಳು ಬೆಳಕಿಗೆ ಬರಬೇಕು ಎಂದರು.

ಸೌಹಾರ್ದ ತಿಪಟೂರು ನ ಕಾರ್ಯದರ್ಶಿ ಅಲ್ಲಾಬಕಾಶ್ ಎ ಮಾತನಾಡಿ ಅತ್ಯಾಚಾರಕ್ಕೆ ಒಳಗಾದ ಎಲ್ಲ ಹೆಣ್ಣು ಮಕ್ಕಳ ಕುಟುಂಬಗಳಿಗೂ ನ್ಯಾಯ ಸಿಗಬೇಕು ಎಂದರು.

ನಗರಸಭೆ ಮಾಜಿ ಉಪಾಧ್ಯಕ್ಷರಾದ ಜಹೇರಾ ಜಬೀನ್ ರವರು ಮಾತನಾಡಿ ಇಂದಿನ ಸ್ಥಿತಿ ನೋಡಿದರೆ ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತಿದೆ ಎಂದರು.

ಪ್ರತಿಭಟನಾ ಸಭೆಯಲ್ಲಿ ದಲಿತ ಸಾಹಿತ್ಯ ಪರಿಷತ್ ನ ತಿಪಟೂರು ಕೃಷ್ಣ , ಜಯಕರ್ನಾಟಕ ವೇದಿಕೆಯ ಕುಮಾರ್ , ದಲಿತ ಮುಖಂಡರಾದ ಬಜಗೂರು ಮಂಜುನಾಥ್, ಜೈಭಾರತ ಯುವ ಸೇನೆಯ ಸಿಂದೂದರ್, ಭೋಮಿ ಸಾಂಸ್ಕೃತಿಕ ವೇದಿಕೆಯ ಸತ್ತೀಶ್, ಮತ್ತಿತರರು ಮಾತನಾಡಿದರು ಈ ಪ್ರತಿಭಟನೆಯಲ್ಲಿ ಮಹಿಳಾ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಬಾಗ್ಯ ಮೂರ್ತಿ, ರೈತ ಸಂಘದ ಮುಖಂಡರಾದ ಬಸ್ತಿಹಳ್ಳಿ ರಾಜಣ್ಣ , ಮನೋಹರ್ ಪಟೇಲ್, ಬೇಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ಮುಸ್ಲಿಂ ಜಮಾಯತ್ ನ ಶಫಿಉಲ್ಲಾ ಶರೀಫ್, ಸಮೀವುಲ್ಲಾ ,ಸೈಯದ್ ಮಹಮೂದ್, ತನ್ವೀರುಲ್ಲಾ ಶರೀಫ ಭೌದ್ದ ಮಹಾಸಭಾ ದ ಮೋಹನ್ ಸಾಗಿ , ರಘು ವಸಂತ್ ,ಚೆನ್ನಪ್ಪ, ಜೈಭಾರತ ಯುವಸೇನೆಯ ಜಿಲ್ಲಾ ಅಧ್ಯಕ್ಷರಾದ ವರುಣ ಅಧ್ಯಕ್ಷರಾದ ಬಳ್ಳೆಕಟ್ಟೆ ಶಿವಕುಮಾರ್ ಚಿಕ್ಕನಾಯಕನಹಳ್ಳಿ ಅಧ್ಯಕ್ಷರಾದ ಗುರುಪ್ರಸಾದ್, ಅಂಬೇಡ್ಕರ್ ಸೇನೆ ಯ ಜಿಲ್ಲಾ ಉಪಾಧ್ಯಕ್ಷರಾದ ಅನಂದ್ , ಸೇರಿದಂತೆ ಸಮಾನ ಮನಸ್ಕ ಸಂಘಟನೆಯ ಪ್ರತಿನಿಧಿಗಳು ಭಾಗವಹಿಸಿದ್ದರು.

ಕೊನೆಯಲ್ಲಿ ಕ್ಯಾಂಡಲ್ ಹಿಡಿದು ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿದ್ದರು.

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ತುಮಕೂರು: ಅಂಗನವಾಡಿಗಳಲ್ಲೇ ಎಲ್‍ಕೆಜಿ ಮತ್ತು ಯುಕೆಜಿ ಆರಂಭಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಢೇರಿಕೆಗೆ ಒತ್ತಾಯಿಸಿ ಸಾವಿರಾರು ಮಂದಿ ಅಂಗನವಾಡಿ ಕಾರ್ಯಕರ್ತೆಯರು ತುಮಕೂರಿನಲ್ಲಿ ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ತುಮಕೂರು ನಗರದ ಟೌನ್‍ಹಾಲ್‍ನಲ್ಲಿ ಸಮಾವೇಶಗೊಂಡ ಸುಮಾರು ಸಾವಿರಾರು ಕಾರ್ಯಕರ್ತೆಯರು ಬಿಎಚ್.ರಸ್ತೆ ಎಂ.ಜಿ.ರಸ್ತೆ ಮೂಲಕ ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು. ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಅಂಗನವಾಡಿ ಕೇಂದ್ರ ವೇಳಾಪಟ್ಟಿಯಲ್ಲಿ ಮೂರು ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಾತೃಪೂರ್ಣ ಯೋಜನೆ ಯಶಸ್ವಿಗೆ ಹೆಚ್ಚುವರಿ ಸಹಾಯಕಿ ಕೊಡಬೇಕು. ಅಂಗನವಾಡಿಗಳಿಗೆ ಗುಣಾತ್ಮಕ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

1995 ರಿಂದ ಪ್ರಾರಂಭವಾಗಿರುವ ಎಲ್ಲಾ ಯೋಜನೆಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಎಸ್.ಎಸ್.ಎಲ್.ಸಿ ಪಾಸಾದವರು ಅನೇಕರು ಪಧವೀಧರರು ಇದ್ದು ಅವರಿಗೆ ತರಬೇತಿ ನೀಡಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ-ಯು.ಕೆ.ಜಿ ಪ್ರಾರಂಭಿಸಬೇಕು ಎಂದರು.

ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಎಲ್.ಕೆ.ಜಿ – ಯು.ಕೆ.ಜಿಯನ್ನು ಪ್ರಾರಂಭಿಸದಂತೆ ಇಲಾಖೆಯಿಂದ ತಡೆಯೊಡ್ಡಬೇಕು ಮತ್ತು ಕ್ರಮ ವಹಿಸಬೇಕು. ಐಸಿಡಿಎಸ್ 6 ಉದ್ದೇಶಗಳಿಗೆ ಬಿಟ್ಟು ಉಳಿದ ಯಾವುದೇ ಕೆಲಸವನ್ನು ಅಂಗನವಾಡಿ ನೌಕರರಿಂದ ಕಡ್ಡಾಯವಾಗಿ ಮಾಡಿಸಬಾರದು ಎಂದರು.

ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿನಲ್ಲಿರುವ 3 ರಿಂದ 9 ವರ್ಷದ ವರ್ಗೀಕರಣವನ್ನು ವಿರೋಧಿಸಬೇಕು. ಈಗಿರುವ ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ. ಎಲ್.ಐ.ಸಿ ಆಧಾರಿತ ಪೆನ್‍ಷನ್ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಕೊಡುವ ಎನ್.ಪಿ.ಎಸ್ ಮಾನದಂಡದಂತೆ ವೇತನ ವಂತಿಕೆ ಆಧಾರಿತ ಪಿಂಚಣಿ ಯೋಜನೆ ಜಾರಿ ಮಾಡಬೇಕು. ನಿವೃತ್ತಿ ಆದ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಗೆ ಇಡುಗಂಟು ತಕ್ಷಣ ಬಿಡುಗಡೆ ಆಗಬೇಕು. ಇಲಾಖೆಯ ಲೋಪದೋಷಗಳಿಂದ ಪ್ರಾನ್ ಕಾರ್ಡು ನೀಡದವರಿಗೆ ಹಣ ಕಡಿತ ಆಗದವರಿಗೂ ನಿವೃತ್ತಿ ಸೌಲಭ್ಯ ಬಿಡುಗಡೆ ಮಾಡಬೇಕು. ಕಾರ್ಯಕರ್ತೆ ಸಹಾಯಕಿಯರಿಗೆ ಪ್ರಾನ್ ಕಾರ್ಡು ನೀಡದವರಿಗೆ ತಕ್ಷಣ ನೀಡಬೇಕು. 2016 ಏಪ್ರಿಲ್ ನಿಂದ ಆಯ್ಕೆ ಆದ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಖಾಯಂ ನಿವೃತ್ತಿ ಸೌಲಭ್ಯದಡಿ ತರಬೇಕು. ನಿವೃತ್ತಿ ಆದವರಿಗೆ ಕನಿಷ್ಠ 6000 ರೂ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಮೀನಾಕ್ಷಿಸುಂದರಂ ಮಾತನಾಡಿ, ದೇಶದಾದ್ಯಂತ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಏರುತ್ತಿದೆ. ಇದರಿಂದ ಜನರು ತತ್ತರಿಸುತ್ತಿದ್ದಾರೆ. ಆದರೆ ನಾವು ಈರುಳ್ಳಿ ತಿನ್ನಲ್ಲ, ನಮಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ಕೇಂದ್ರ ಸರ್ಕಾರದ ಸಚಿವರು ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇನ್ನೂ ಹಲವು ಸಮಸ್ಯೆಗಳು ಜನರನ್ನು ಬಾಧಿಸುತ್ತಿವೆ. ಈ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವುದು ಬಿಟ್ಟು ಕೇಂದ್ರ ಸರ್ಕಾರ ವೃಥಾ ಅನ್ಯವಿಷಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಅಂಗನವಾಡಿಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗಾಗಿ ಇರುವ ಯೋಜನೆಗಳ ಪ್ರಮುಖ ಜವಾಬ್ದಾರಿಗಳನ್ನು ಬೇರೆಡೆಗೆ ವರ್ಗಾಯಿಸುವ ಮುಖಾಂತರ ಬಲಹೀನಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ದೂರಿದರು.

ಜಿಲ್ಲಾಧ್ಯಕ್ಷೆ ಜಿ.ಕಮಲ ಮಾತನಾಡಿ ಮೇಲ್ವೀಚಾರಕಿಯಾಗಿ ಮುಂಬಡ್ತಿ ಹೊಂದುವ ಹುದ್ದೆಗಳನ್ನು ಸಂಪೂರ್ಣ ಅಂಗನವಾಡಿ ನೌಕರರಿಗೆ ಕೊಡಬೇಕು. ಮೇಲ್ವಿಚಾರಕಿಯರ ಹುದ್ದೆಗಳಿಗೆ 2015ರ ಭಾರತ ಸರ್ಕಾರÀದ ಸುತ್ತೋಲೆ ಪ್ರಕಾರ ಈಗಾಗಲೇ ಇರುವಂತೆ, 50ರಷ್ಟು ಹುದ್ದೆಗಳಿಗೆ ಮುಂಬಡ್ತಿ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಬೇಕು. ಅಂಗನವಾಡಿ ಸಹಾಯಕಿ ಕಾರ್ಯಕರ್ತೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ವಿಸ್ತೀರ್ಣದ ಮಿತಿಯನ್ನು ಸಡಿಲಿಸಬೇಕು. ಅನುಕಂಪದ ಆಧಾರದಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹೆಣ್ಣು ಮಕ್ಕಳಿಗೆ ಮಾತ್ರ ವಲ್ಲದೆ ಕುಟುಂಬದವರಿಗೆ ಎಂದು ತಿದ್ದುಪಡಿಯಾಗಬೇಕು. ಖಾಲಿಯಿರುವ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳನ್ನು ತುಂಬಬೇಕು. ಹಲವು ಯೋಜನೆಗಳಿಗೆ ಡಿಡಿ, ಪಿಓ, ಸಿಡಿಪಿಓ, ಎಸಿಡಿಪಿಓ ಮೇಲ್ವಿಚಾರಕಿಯರನ್ನು ಖಾಯಂ ಆಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎನ್..ಕೆ.ಸುಬ್ರಮಣ್ಯ, ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು, ಅನಸೂಯ, ಪುಷ್ಪ, ಗುಬ್ಬಿ ಅನಸೂಯ, ಶಾಂತಕುಮಾರಿ, ಮಂಗಳ ಮೊದಲಾದವರು ಇದ್ದರು

ವಿ. ವಿ.ಗಳು ಪೇಟೆಂಟ್ ಪಡೆಯುವ ಹಂತಕ್ಕೆ ಬೆಳೆಯಬೇಕು: ಕುಲಪತಿ ಡಾ.ಸಿದ್ದೇಗೌಡ

Publicstory.in


ತುಮಕೂರು: ವಿಶ್ವವಿದ್ಯಾನಿಲಯಗಳು ಪೇಟೆಂಟ್ (ಭೌತಿಕ ಆಸ್ತಿ ಹಕ್ಕು) ಪಡೆಯುವ ಮಟ್ಟಿಗೆ ಬೆಳೆಯಬೇಕು ಎಂದು ತುಮಕೂರು ವಿ.ವಿ. ಕುಲಪತಿ ಡಾ. ಸಿದ್ದೇಗೌಡ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ವಿ.ವಿಯ ಸ್ನಾತಕೋತ್ತರ ಸಾವಯವ ಅಧ್ಯಯನ ಭೌತಿಕ ಮತ್ತು ಸಂಶೋಧನಾ ವಿಭಾಗ ಮತ್ತು ಆಂತರಿಕ ಗುಣಮಟ್ಟ ಕೋಶ ಆಯೋಜಿಸಿದ್ದ ಭೌತಿಕ ಆಸ್ತಿ ಹಕ್ಕು ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿಶ್ವವಿದ್ಯಾನಿಲಯಗಳು ಸಂಶೋಧನೆಯ ಕಡೆಗೆ ಹೆಚ್ಚು ಒತ್ತು ನೀಡಬೇಕು. ಸಂಶೋಧನೆಗಳಿಗೆ ಭೌತಿಕ ಆಸ್ತಿ ಹಕ್ಕು ಪಡೆದುಕೊಳ್ಳಬೇಕು. ಇದು ದೇಶದ ಆಸ್ತಿಯಾಗಲಿದೆ ಎಂದು ಹೇಳಿದರು.
ದೇಶ ಬೆಳೆಯಬೇಕಾದರೆ ಸಂಶೋಧನೆಯ ಕಡೆಗೆ ಹೆಚ್ಚು ಒತ್ತು ನೀಡಬೇಕು. ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು. ಪ್ರಾಧ್ಯಾಪಕರು ಈ ನಿಟ್ಟಿನಲ್ಲಿ ಹೆಚ್ಚು ಯೋಚಿಸಬೇಕು. ಆಳವಾದ ಸಂಶೋಧನೆಯ ಕಡೆಗೆ ಗಮನ ಕೊಡಬೇಕು ಎಂದು ಒತ್ತಿ ಹೇಳಿದರು.

ಎಸ್ ಐಟಿ ಕಾಲೇಜಿನ ಟೆಕ್ನಾಲಜಿ ಬ್ಯುಸನೆಸ್ ಇನ್ ಕ್ಯೂಬಟರ್ ಸೆಂಟರ್ ನ ಡಾ.ಸಿ.ಪಿ.ಲೋಹಿತ್ ಮಾತನಾಡಿ, ಭಾರತದಲ್ಲಿ ಭೌತಿಕ ಆಸ್ತಿ ಹಕ್ಕಿನ ಬೆಳವಣಿಗೆ, ಅದರ ಮಹತ್ವ ಹೆಚ್ಚುತ್ತಿರುವ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು.
ಪ್ರಾಧ್ಯಾಪಕ ಶ್ರೀನಿವಾಸ್ ಎಸ್. ಸ್ವಾಗತಿಸಿದರು. ಕುಲಸಚಿವ ಪ್ರೊ. ಕೆ.ಎನ್.ಗಂಗಾನಾಯಕ್, ಆಂತರಿಕ ಗುಣಮಟ್ಟ ಖಾತರಿ ಕೋಶದ ನಿರ್ದಶಕ ಡಾ.ಕೆ.ಜಿ.ಪರುಶರಾಮ್, ಡಾ.ಅರುಣ್ ಕುಮಾರ್ ಇತರರು ಇದ್ದರು.

ಕನ್ನಡಿಗ ವಿಶ್ವನಾಥ್‌ ಸಜ್ಜನರಿಗೆ ಅಭಿನಂದನೆಗಳ ಸುರಿಮಳೆ

ಹೈದರಾಬಾದ್: ಪಶುವೈದ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್‌ಕೌಂಟರ್‌ ಕಾರ್ಯಾಚರಣೆಯ ಮುಖ್ಯ ರುವಾರಿ  ಸೈಬರಾಬಾದ್‌ ಪೊಲೀಸ್‌ ಆಯುಕ್ತ ಹುಬ್ಬಳ್ಳಿಯವರಾದ ವಿಶ್ವನಾಥ್ ಸಜ್ಜನರ. 

ಈ ಹಿಂದೆ ಆಂಧ್ರಪ್ರದೇಶದ ವಾರಂಗಲ್‌ನಲ್ಲಿ ನಡೆದ ಆ್ಯಸಿಡ್ ದಾಳಿಯ ಆರೋಪಿಗಳನ್ನು ವಿಶ್ವನಾಥ್‌ ಎನ್‌ಕೌಂಟರ್‌ ಮಾಡಿದ್ದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿಗೆ ಕಾರಣವಾಗಿದ್ದ  ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿರುವುದಕ್ಕೆ ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಸೂಟಿ ವಿಶ್ವನಾಥ್‌ ಅವರ ತಂದೆಯ ಸ್ವಗ್ರಾಮ . ವಿಶ್ವನಾಥ್‌ ಅವರು ಹುಟ್ಟಿ ಬೆಳದಿದ್ದು ಹುಬ್ಬಳ್ಳಿಯಲ್ಲಿ.  ಅವರ ಕುಟುಂಬದವರು ಹುಬ್ಬಳ್ಳಿಯಲ್ಲಿಯೇ ನೆಲೆಸಿದ್ದಾರೆ. ವಿಶ್ವಾನಾಥ್‌ ಅವರು ಜೆಜಿ ಕಾಲೇಜಿನಲ್ಲಿ ಬಿ.ಕಾಂ ಪೂರ್ಣಗೊಳಿಸಿದ್ದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

1996 ಐಪಿಎಸ್‌ ಬ್ಯಾಚ್‌ನವರಾದ ವಿಶ್ವನಾಥ್‌ ಆಂಧ್ರಪ್ರದೇಶ ಪೊಲೀಸ್‌ ಇಲಾಖೆಗೆ ನಿಯೋಜನೆಯಾದರು. ಅವರಿ ಈವರೆಗೆ 8 ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ(ಎಸ್.ಪಿ) ಯಾಗಿ ಕಾರ್ಯನಿರ್ವಹಿಸಿದ್ದಾರೆ. ಆಂಧ್ರ ನಕ್ಸಲ್‌ ನಿಗ್ರಹ ದಳದಲ್ಲಿ ನಕ್ಸಲರ ಶರಣಾಗತಿ ಮಾಡಿ, ಅವರನ್ನು ಮುಖ್ಯವಾಹಿನಿ ತರುವಲ್ಲಿ ವಿಶ್ವನಾಥ್ ಅವರ ಪಾತ್ರ ಪ್ರಮುಖವಾದದ್ದು.

 

ಅತ್ಯಾಚಾರ ಆರೋಪಿಗಳ ಎನ್ ಕೌಂಟರ್

 ಹೈದರಾಬಾದ್: ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸೈಬರಾಬಾದ್ ಪೊಲೀಸರು ಗುಂಡು ಹಾರಿಸಿದ್ದಾರೆ.

  ಪಶುವೈದ್ಯೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಘಟನಾ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಆರೋಪಿಗಳಿಂದ ಮಾಹಿತಿ ಪಡೆಯುತ್ತಿದ್ದ ವೇಳೆ,  ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಗುಂಡು ಹಾರಿಸಬೇಕಾಯಿತು ಎಂದು ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ್ ಸಜ್ಜನರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆರೋಪಿಗಳು ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿಯೂ ಅಪರಾಧ ಕೃತ್ಯಗಳನ್ನು ಎಸಗಿರುವ ಸಾಧ್ಯತೆಗಳಿವೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಪಶು ವೈದ್ಯೆಯ ಮೇಲೆ ನಾಲ್ವರು ದುಷ್ಕರ್ಮಿಗಳು ನವೆಂಬರ್ 27ರಂದು ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದರು.

ಪ್ರಕರಣ ಸಂಬಂಧ ಸೂಕ್ತ ಸಾಕ್ಷ್ಯಧಾರಗಳನ್ನು ಕಲೆ ಹಾಕಿ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ ಆರೋಪಿಗಳನ್ನು 10 ದಿನಗಳ ಪೊಲೀಸ್‌ ವಶಕ್ಕೆ ನೀಡಿತ್ತು.

ಚರ್ಲಪಲ್ಲಿ ಜೈಲಿನಲ್ಲಿ ಆರೋಪಿಗಳನ್ನು ಇರಿಸಲಾಗಿತ್ತು. ಕೃತ್ಯ ನಡೆದ ಸ್ಥಳದಲ್ಲಿ ಮಹಜರು ಮಾಡಲು ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲು ಶಿವಾ, ಜೊಲ್ಲು ನವೀನ್ ಕುಮಾರ್ ಮತ್ತು ಚಿನಟಕುಂಟ ಚೆನ್ನ ಕೇಶವುಲು ಅವರನ್ನು  ಅಗತ್ಯ ಭದ್ರತೆಯೊಂದಿಗೆ ಕರೆದುಕೊಂಡು ಹೋಗಲಾಗಿತ್ತು.

ವಿಚಾರಣೆ ವೇಳೆ ಆರೋಪಿಗಳು ಪೊಲೀಸರ ಮೇಲೆ ಕಟ್ಟಿಗೆಗಳಿಂದ ಹೊಡೆದು ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದರು. ಆಗ   ಪೊಲೀಸರ ತಂಡ ಆರೋಪಿಗಳ ಮೇಲೆ ಫೈರಿಂಗ್‌ ನಡೆಸಿದೆ ಎಂದು ಮಾಹಿತಿ ನೀಡಿದರು.

ಮುಂಜಾನೆ 6 ರಿಂದ 6.15ರ ಸುಮಾರಿಗೆ ಎನ್‌ಕೌಂಟರ್‌ ನಡೆದಿದೆ. ಸ್ಥಳದಲ್ಲಿದ್ದ ಎಸ್‌ಐ ಸೇರಿದಂತೆ ಇಬ್ಬರು ಪೋಲಿಸರು ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.

ಆರೋಪಿಗಳು ಸಂತ್ರಸ್ತೆಯ ಮೊಬೈಲ್‌ ಸೇರಿ ಆಕೆಯ ವಸ್ತುಗಳನ್ನು ಅಡಗಿಸಿಟ್ಟಿದ್ದರು. ಅವುಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣ ಸಂಬಂಧ  ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಎನ್ ಕೌಂಟರ್ ನಡೆದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ಮಂದಿ ಪೊಲೀಸರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

 

ರೈತರಿಗೆ ದುಪ್ಪಟ್ಟು ಆದಾಯ: ಪ್ರಧಾನಿ ನರೇಂದ್ರಮೋದಿ ಕನಸು ತುಮಕೂರಿನಲ್ಲಿ ನನಸಾಗುವುದೇ ?

0

Publicstory.in


ತುಮಕೂರು: ರೈತರ ಆದಾಯ ದುಪ್ಪಟ್ಟು ಮಾಡುವ ಪ್ರಧಾನಿ ನರೇಂದ್ರಮೋದಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು, ಅದು ನಿಜರೂಪಕ್ಕೆ ಬರಲಿದೆಯೇ ಎಂಬ ಕುತೂಹಲ ಮನೆ ಮಾಡಿದೆ.

2022ರ ವೇಳೆಗೆ ರೈತರ ಈಗಿನ ಆದಾಯ ಎರಡು ಪಟ್ಟು ಹೆಚ್ಚಾಗಬೇಕೆಂಬುದು ಪ್ರಧಾನಿ ಕನಸು. ರೈತರ ಆದಾಯ ದುಪ್ಪಟ್ಟು ಆಗಬೇಕಾದರೆ ಕೃಷಿಗೆ ನೀರು ಹಾಗೂ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಬೆಲೆ ಸಿಗಬೇಕು. ಈ ಮೂರು ನಿಟ್ಟಿನಲ್ಲಿ ತುಮಕೂರಿನಲ್ಲಿ ಸದ್ದಿಲ್ಲದೇ ಕೆಲಸ ಆರಂಭಿಸಲಾಗಿದೆ.

ಸಂಸದ ಜಿ.ಎಸ್.ಬಸವರಾಜ್, ತುಮಕೂರು ನಗರ ಕ್ಷೇತ್ರದ ಶಾಸಕ ಜ್ಯೋತಿಗಣೇಶ್ ಅವರು ಎರಡು ಯೋಜನೆಗಳನ್ನು ಕೈಗೆತ್ತಿಗೊಂಡಿದ್ದಾರೆ.

ತುಮಕೂರು ಜಿಲ್ಲೆಯ ಎಲ್ಲ ಕೆರೆಗಳಿಗೆ, ಕೆರೆಗಳು ಇಲ್ಲದ ಊರುಗಳಿಗೆ ಹೊಸದಾಗಿ ಕೆರೆಕಟ್ಟಿಸಿ ನದಿ ನೀರು ನೀಡುವ ಬೃಹತ್ ಯೋಜನೆ ಜಾರಿಯ ಹಿಂದೆ ಸಂಸದ ಬಸವರಾಜ್ ಬಿದ್ದಿದ್ದಾರೆ. ಇದೇ ಕಾರಣಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹಕಾರ ಪಡೆಯಲು ಹಿಂದೆ-ಮುಂದೆ ನೋಡುವುದಿಲ್ಲ ಎಂದಿದ್ದಾರೆ.

ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು, ಅಭಿವೃದ್ಧಿ ಕೆಲಸ ಮಾಡುವಲ್ಲಿ ದೇವೇಗೌಡರು ರಾಕ್ಷಸ ಇದ್ದಂತೆ ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ತುಮಕೂರು ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಕೊಟ್ಟರೆ ಜಿಲ್ಲೆಯ ಅಂತರ್ಜಲ ಸಮಸ್ಯೆಯೇ ಬಗೆಹರಿಯಲಿದೆ. ಇದಕ್ಕಾಗಿ ಎತ್ತಿನಹೊಳೆ, ಹೇಮಾವತಿ ಫ್ಲಡ್ ಕೆನಾಲ್, ಕುಮಾರಧಾರ ಯೋಜನೆಯಿಂದ ಜಿಲ್ಲೆಗೆ ನೀರು ತರುವ ಯೋಜನೆ ಜಾರಿಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ಆರಂಭಗೊಂಡಿದೆ.

ಇಡೀ ರಾಜ್ಯದ ಎಲ್ಲ ಕೆರೆಗಳಿಗೂ ನೀರು ಕೊಡಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಟೆಂಡರ್ ಕರೆಯಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿದ್ದು, ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಸದ ಜಿ.ಎಸ್.ಬಸವರಾಜ್ ಅವರ ಒತ್ತಡ ಹಾಗೂ ಮನವಿ ಮೇರೆಗೆ ಈ ಯೋಜನೆಯಡಿ ಪ್ರಾಯೋಗಿಕವಾಗಿ ತುಮಕೂರು ಜಿಲ್ಲೆಯನ್ನು ಮೊದಲಿಗೆ ಆಯ್ಕೆ ಮಾಡಲಾಗಿದೆ. ಆ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಬಿಡಲು ಸುಮಾರು 2000 ಕೋಟಿ ರೂಪಾಯಿ ವೆಚ್ಚದ ಯೋಜನೆ ಬೇಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮುಖ್ಯಮಂತ್ರಿ ಅವರ ಆದೇಶದ ಮೇರೆಗೆ ಸಂಸದರು ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪ್ರಸ್ತಾವನೆಯನ್ನು ನೀತಿ ಆಯೋಗಕ್ಕೆ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ. ಹೀಗಾಗಿ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಾಗಿದೆ ಎಂದರು.ಈ ಪ್ರಾಯೋಗಿಕ ಯೋಜನೆ ಜಾರಿಗಾಗಿ ಸಂಸದರು ಅಧಿಕಾರಿಗಳು ಹಾಗೂ ಅಭಿವೃದ್ಧಿ ತಜ್ಞರ ತಂಡ ರಚಿಸಿದ್ದು, ಅವರೆಲ್ಲರ ಸಲಹೆ ಸೂಚನೆಗಳನ್ನು ಸಹ ಪಡೆಯುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪುವ ಸಾಧ್ಯತೆ ಇದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೊಳ್ಳಲಿದೆ ಎಂದು ಅವರು ಹೇಳಿದರು.ಕೆರೆಗಳಿಗೆ ನೀರು ಹರಿಸಿದರೆ ರೈತರು ಬೇರೆ ಏನನ್ನು ಕೇಳುವುದಿಲ್ಲ. ತುಮಕೂರು ಎಲ್ಲ ಕೃಷಿ ಉತ್ಪನ್ನಗನ್ನು ಬೆಳೆಯುವ ಯೋಗ್ಯವಾದ ಜಿಲ್ಲೆಯಾಗಿದೆ. ನೀರು ಕೊಡುವುದರಿಂದ ರೈತರ ಆದಾಯ ದುಪ್ಪಟ್ಟು ಆಗುವುದರಲ್ಲಿ ಅನುಮಾನ ಇಲ್ಲ ಎಂದರು.

ರಫ್ಯೋದ್ಯಮಕ್ಕೆ ಸ್ಮಾರ್ಟ್ ಸಿಟಿ ಹಣ


ರಫ್ಯೋದ್ಯಮಕ್ಕೆ ಸ್ಮಾರ್ಟ್ ಸಿಟಿ ಹಣ ಬಳಕೆ
ತುಮಕೂರು ನಗರದ ಸ್ಮಾರ್ಟ್ ಸಿಟಿ ಹಣವನ್ನು ಬಳಸಿಕೊಂಡು ರೈತರ ಆದಾಯ ದುಪ್ಪಟ್ಟು ಮಾಡುವ ಯೋಜನೆಯತ್ತ ನಗರ ಶಾಸಕ ಜ್ಯೋತಿ ಗಣೇಶ್ ಗಮನ ಹರಿಸಿದ್ದಾರೆ.

ರೈತರು ಏನೇ ಬೆಳೆದರೂ ಮಾರುಕಟ್ಟೆ, ಬೆಲೆ ಇಲ್ಲದಿದ್ದರೆ ಅವರ ಆದಾಯ ದುಪ್ಪಟ್ಟುಗೊಳಿಸಲು ಸಾಧ್ಯವಿಲ್ಲ. ಇನ್ನೊಂದು ದಶಕದಲ್ಲಿ ತುಮಕೂರು ದೇಶದ ನಂ- 1 ಕೃಷಿ ರಫ್ತೋದ್ಯಮ ಜಿಲ್ಲೆಯಾಗಿ ಬೆಳೆಯಬೇಕು. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ನಲ್ಲಿ 20 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.

ಈ ಹಣದಲ್ಲಿ ನಗರ ವ್ಯಾಪ್ತಿಯಲ್ಲಿ 342 ಉತ್ಪನ್ನಗಳ ಕ್ಲಸ್ಟರ್ ಗಳನ್ನು ಆರಂಭಿಸಲಾಗುವುದು. ಈ ಕ್ಲಸ್ಟರ್ ಗಳು ರಫ್ತು, ಮಾರುಕಟ್ಟೆ, ಮೌಲ್ಯವರ್ಧನೆ, ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಕೆ, ತಂತ್ರಜ್ಞಾನವನ್ನು ನೀಡುವ ಸಂಬಂಧ ಸಂಶೋಧನೆ, ಮಾರುಕಟ್ಟೆ ವಿಶ್ಲೇಷಣೆ, ರೈತರಿಗೆ ನೆರವು ನೀಡುವ ಕೆಲಸ ಮಾಡಲಿವೆ ಎಂದು ತಿಳಿದುಬಂದಿದೆ.

ಈ ಹಿಂದೆ ಜಿ.ಎಸ್.ಬಸವರಾಜ್ ಸಂಸದರಾಗಿದ್ದಾಗ ಆರ್ಟಿಸನ್ ಹಬ್ ಸ್ಥಾಪಿಸಲು ರೂಪುರೇಷೆ ಸಿದ್ಧಪಡಿಸಿದ್ದರು. ಅವರು ಸೋತ ಬಳಿಕ ಯೋಜನೆ ಸ್ಥಗಿತಗೊಂಡಿತ್ತು. ಈಗ ಅವರು ಸಂಸದರು. ಆದರೆ ಇದೇ ಯೋಜನೆಯನ್ನು ನಗರ ಶಾಸಕರು ಸ್ಕಿಲ್ ಸಿಟಿ ಹೆಸರಿನಲ್ಲಿ ಜಾರಿಗೆ ತರಲು ಹೊರಟಿದ್ದಾರೆ. ಈ ಯೋಜನೆ ಜಾರಿಗೊಂಡರೆ ರೈತರ ಬದುಕು ಬದಲಾಗಿದೆ ಎಂದು ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಪ್ರತಿಕ್ರಿಯಿಸಿದರು.

.

ಸ್ಕಿಲ್ ಸಿಟಿಯಲ್ಲಿ ತಂತ್ರಜ್ಞಾನವನ್ನು ಮೀರಿ ರೈತರ ಸಮಸ್ಯೆಗಳನ್ನು ಎತ್ತಿಕೊಂಡಿರುವುದು ಸ್ವಾಗತಾರ್ಹ. ತುಮಕೂರು ತೆಂಗು, ಅಡಿಕೆ, ಶೇಂಗಾ, ಮಾವು, ಹುಣುಸೆ, ಹೂವು, ರಾಗಿ ಮತ್ತಿರರ ಬೆಳೆಗಳಿಗೆ ದೇಶದಲ್ಲೇ ಪ್ರಸಿದ್ಧಿಯಾಗಿದೆ.ಇವುಗಳ ರಫ್ತಿಗೆ ಮೊದಲ ಆದ್ಯತೆ ನೀಡಬೇಕು. ಪ್ರಾಯೋಗಿಕವಾಗಿ ತಕ್ಷಣವೇ ಸ್ಕಿಲ್ ಸಿಟಿಯಲ್ಲಿ ತೆಂಗು ಕ್ಲಸ್ಟರ್ ಆರಂಭಿಸಬೇಕು. ನಗರ ಶಾಸಕರ ಪ್ರಯತ್ನ ಶಾಘ್ಲನೀಯ. ಜಿಲ್ಲೆಯ ಎಲ್ಲ ಶಾಸಕರು ಇದಕ್ಕೆ ಕೈ ಜೋಡಿಸಬೇಕು. ಸರ್ಕಾರದ ಮೇಲೆ ಒತ್ತಡ ಹಾಕಿ ಮತ್ತಷ್ಟು ಅನುದಾನವನ್ನು ತರಬೇಕು ಎಂದು ಬೆಲೆ ಕಾವಲು ಸಮಿತಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ ಕೆಳಹಟ್ಟಿ ತಿಳಿಸಿದರು.

ನೀರಾವರಿ ವಿಷಯದಲ್ಲಿ ಈಗಾಗಲೇ ಜಿಲ್ಲೆಯ ಜನಪ್ರತಿನಿಧಿಗಳು ಒಂದಾಗಬೇಕು. ಪಕ್ಷಾತೀತವಾಗಿ ಕೈ ಜೋಡಿಸಬೇಕು. ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಪ್ರಾಯೋಗಿಕ ಯೋಜನೆ ಶೀಘ್ರವೇ ಅನುಷ್ಠಾನಕ್ಕೆ ಸಂಸದರ ನೇತೃತ್ವದಲ್ಲಿ ಮುಖ್ಯಮಂತ್ರಿ ಮೇಲೆ ಎಲ್ಲ ಶಾಸಕರು ಒತ್ತಡಹಾಕಬೇಕು ಎಂದು ರೈತ ಸಂಘದ ಮುಖಂಡ ರಾಜಣ್ಣ ಪ್ರತಿಕ್ರಿಯಿಸಿದರು.

ಈಜಿಪ್ಟ್ ಈರುಳ್ಳಿ ತಿನ್ನುತ್ತೀರಾ?

ನವದೆಹಲಿಕೇಂದ್ರ ಸಚಿವೆ ಸದನದಲ್ಲಿ ಈರುಳ್ಳಿ ಬಗ್ಗೆ ನೀಡಿದ ಹೇಳಿಕೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ  ‘ನಾನು ಈರುಳ್ಳಿ ಹೆಚ್ಚು ತಿನ್ನುವುದಿಲ್ಲ, ತಲೆಕೆಡಿಸಿಕೊಳ್ಳಬೇಡಿ. ಈರುಳ್ಳಿ ಮತ್ತು ಬೆಳ್ಳುಳ್ಳಿ ಉಪಯೋಗಿಸದ ಕುಟುಂಬದಿಂದ ಬಂದಿದ್ದೇನೆ’ ಎಂದು ಹೇಳಿದ್ದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

‘ನಿರ್ಮಲಾ ಅವರಿಗೆ ಜನರ ಪರಿಸ್ಥಿತಿ ಅರ್ಥವಾಗುತ್ತಿಲ್ಲ’ ಎಂದು ಕಾಂಗ್ರೆಸ್‌ ಟೀಕಿಸಿದೆ. ಅವರು ತಮ್ಮ ಜಾತಿಯನ್ನು ಎತ್ತಿಹಿಡಿಯುವ ಮಾತು ಆಡಿದ್ದಾರೆ. ಯಾವ ಕುಟುಂಬದ ಹಿನ್ನೆಲೆಯಿಂದ ಬಂದರು ಎಂಬುದನ್ನು ಸದನದಲ್ಲಿ ತಿಳಿಸುವ ಅಗತ್ಯವಿಲ್ಲ. ಜನತೆಯ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದರೆ ಸಾಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗಿದೆ.

ಈರುಳ್ಳಿಯ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಿರ್ಮಲಾ ಸೀತಾರಾಮನ್  ಲೋಕಸಭೆಯಲ್ಲಿ ವಿವರಿಸುತ್ತಿದ್ದರು.  ಆಗ  ದೇಶದಲ್ಲಿ ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ಈಜಿಪ್ಟ್‌ನಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದರು.

ಅವರ ಮಾತನ್ನು ಅರ್ಧದಲ್ಲೇ ತಡೆದ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ‘ನೀವೂ ಈಜಿಪ್ಟ್‌ ಈರುಳ್ಳಿ ತಿನ್ನುತ್ತೀರಾ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಅವರು ಮೇಲಿನಂತೆ ಉತ್ತರ ನೀಡಿದ್ದರು.

ಈ ಬಗ್ಗೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿ, ತಾವು ಈರುಳ್ಳಿ ತಿನ್ನುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಹೇಳಿದ್ದಾರೆ. ಮತ್ತೇನು, ಅವರು ಬೆಣ್ಣೆಹಣ್ಣು ತಿನ್ನುತ್ತಾರೆಯೇ?

 ಎಂದು ಪ್ರಶ್ನಿಸಿದ್ದಾರೆ.

ಅಧಿಕಾರಿಗಳು ನಮ್ಮನ್ನು ಯಾಕೆ‌ ಕರೆಯುತ್ತಿಲ್ಲ?

ಮಧುಗಿರಿ:ತಾಲ್ಲೂಕಿನಲ್ಲಿ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ ಆರೋಪಿಸಿದ್ದಾರೆ.

ತಾ.ಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ನಡೆಯುತ್ತಿರುವ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸುತ್ತಿಲ್ಲ ಹಾಗೂ ಅವರ ಗಮನಕ್ಕೂ ತಾರದೆ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ. ನಾವೂ ಸಹ ಚುನಾಯಿತರಾಗಿ ಆಯ್ಕೆಯಾಗಿದ್ದು, ನಮಗೂ ಸಹ ಗೌರವ ಕೊಡುವ ಪರಿಪಾಠವನ್ನು ಅಧಿಕಾರಿಗಳು ರೂಢಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇಲಾಖಾ ಅಭಿವೃದಿ ಕಾರ್ಯಕ್ರಮಗಳಿಗೆ ಪ್ರಗತಿ ಪತ್ರ ನೀಡುವುದಿಲ್ಲ ಮತ್ತು ಅಂತಹ ಅಧಿಕಾರಿಗಳು ಸಭೆಗೆ ಹಾಜರಾಗುವ ಅವಶ್ಯಕತೆ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆಗಾಗಿ 5 ರಿಂದ 10 ಸಾವಿರದವರೆಗೂ ಲಂಚಾ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಇದು ಹೆಣದ ಮೇಲಿನ ದುಡ್ಡಿಗೆ ಆಸೆಪಟ್ಟಂತಾಗುತ್ತದೆ ಎಂದು ಕಿಡಿಕಾರಿದರು.

ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಸಣ್ಣ ಪುಟ್ಟ ಪೆಟ್ಟಿಗೆ ಅಂಗಡಿಗಳಲ್ಲಿಯೂ ಕಾಫಿ-ಟೀ ನೀಡುವ ರೀತಿಯಲ್ಲಿ ನಿರ್ಭಯವಾಗಿ ಅಕ್ರಮ ಮಧ್ಯವನ್ನು ಮಾರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು ಅಬಕಾರಿ ಇಲಾಖೆಗೆ ದೂರು ನೀಡಲು ಭಯ ಪಡುತ್ತಿದ್ದಾರೆ. ಕಾರಣವೇನೆಂದರೆ ಅಕ್ರಮ ಮಧ್ಯ ಮಾರಾಟ ಮಾಡುವವರ ಬಗ್ಗೆ ದೂರು ನೀಡಿದವರ ವಿವರಗಳನ್ನು ಅಧಿಕಾರಿಗಳು ಮಧ್ಯ ಮಾರಾಟ ಮಾಡುವವರಿಗೆ ತಿಳಿಸಿ ಅವರ ಮೇಲೆ ಗಲಾಟೆ ಮಾಡುಸುತ್ತಾರೆ. ಇದರಿಂದ ಅಬಕಾರಿ ಇಲಾಖೆಯವರೂ ಸಹ ಅಕ್ರಮ ದಂದೆಯಲ್ಲಿ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ ಎಂದರು.

ಬಿಜವರ ಕ್ಷೇತ್ರದ ಸದಸ್ಯ ರಂಗನಾಥ್ ಮಾತನಾಡಿ, ಕುಪ್ಪಾಚಾರಿ ರೊಪ್ಪದಿಂದ ಹಾವೇಕಟ್ಟೆ ರಸ್ತೆ ಅಭಿವೃದ್ದಿ ಕಾಮಗಾರಿಯು ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದು, ತುಂಬಾ ಕಳಪೆ ಕಾಮಗಾರಿಯಾಗಿದೆ. ಯಾವುದೇ ಕಾರಣಕ್ಕೂ ಇದರ ಬಿಲ್ ಮಾಡಬಾರದು ಎಂದು ಎಇಇ ಹೊನ್ನೇಶಪ್ಪರವರಿಗೆ ತಿಳಿಸಿದಾಗ ಈ ಕಾಮಗಾರಿಯನ್ನು ರದ್ದುಪಡಿಸಿ ಮರುಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಪಶು ವೈಧ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗಭೂಷಣ್ ಮಾತನಾಡಿ, ನಮ್ಮ ಇಲಾಖೆಯಿಂದ 40 ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಗಿದೆ. ಗೊಂದಿಹಳ್ಳಿ ಮತ್ತು ಸಜ್ಜೇಹೊಸಹಳ್ಳಿ ಗ್ರಾಮಗಳಿಗೆ ನೂತನ ಪಶು ವೈಧ್ಯ ಕೇಂದ್ರದ ಕಟ್ಟಡ ಮಂಜೂರಾಗಿವೆ. ತೆರೆಯೂರು, ನಿಟ್ರಹಳ್ಳಿ ಕ್ರಾಸ್, ಮರುವೇಕೆರೆ, ಕೊಂಡವಾಡಿ ಮತ್ತು ಕೋಡ್ಲಾಪುರ ಗ್ರಾಮಗಳಿಗೆ ಪಶು ವೃಧ್ಯ ಕೇಂದ್ರ ಕಟ್ಟಡದ ಅವಶ್ಯಕತೆ ಇದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. ಗರಣಿ, ತಗ್ಗಿಹಳ್ಳಿ, ಕೊಂಡವಾಡಿ, ಕವಣದಾಲ ಮತ್ತು ರಂಟವಳಲು ಗ್ರಾಮದಲ್ಲಿರುವ ಪ್ರಾಥಮಿಕ ಪಶು ವೈಧ್ಯ ಕೇಂದ್ರಗಳನ್ನು ಉನ್ನತೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ತಾ.ಪಂ ಸಮಿತಿ ಶಿಫಾರಸ್ಸು ಮಾಡಬೇಕೆಂದು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಇಓ ದೊಡ್ಡಸಿದ್ದಪ್ಪ, ತಾ.ಪಂ ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.


ಮಿಡಿಗೇಶಿ ತಾ.ಪಂ ಸದಸ್ಯೆ ಯಶೋಧಮ್ಮ ಮಾತನಾಡಿ, ಮಿಡಿಗೇಶಿ ಗ್ರಾಮದಲ್ಲಿ ಇತ್ತೀಚೆಗೆ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ ಶಂಕು ಸ್ಥಾಪನಾ ಕಾರ್ಯಕ್ರಮ ನಡೆದಿದ್ದು, ಅಧಿಕಾರಿಗಳು ನಮ್ಮನ್ನು ಆಹ್ವಾನಿಸದೆ ಶಂಕುಸ್ಥಾಪನೆ ನೆರವೇರಿಸಿರುತ್ತಾರೆ. ನಾನೂ ಸಹ ಶಾಸಕರಂತೆ ಜನರಿಂದ ಮತ ಪಡೆದು ಚುನಾಯಿತರಾಗಿದ್ದೇನೆ ಎಂದು ಕೆ.ಆರ್.ಐ.ಡಿ.ಎಲ್ ಅಧಿಕಾರಿ ಹನುಂತರಾಯಪ್ಪನನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎ.ರಾಜು ಮಾತನಾಡಿ, ಅಧಿಕಾರಿಗಳು ಮತ್ತು ಇಂಜಿನೀಯರ್‍ಗಳು ಸ್ಥಳ ಗುರುತಿಸದೆ ಕಾಮಗಾರಿ ಪ್ರಾರಂಭಿಸಲು ಸಾದ್ಯವೇ. ಆದ್ದರಿಂದ ಕಾಮಗಾರಿ ನಿಲ್ಲಿಸುವಂತೆ ಸದಸ್ಯರಿಗೆ ತಿಳಿ ಹೇಳಿದರು.

ಗ್ರಾಮ ಹಬ್ಬದಂತೆ ರಾಜ್ಯೋತ್ಸವ ಆಚರಣೆ

0

ಗ್ರಾಮದ ಬೀದಿಗಳನ್ನು ಬಾಳೆಕಂದು, ಮಾವಿನ ತೋರಣ, ಹೂವುಗಳಿಂದ ಅಲಂಕರಿಸಲಾಗುತ್ತದೆ. ಬಂಧುಗಳನ್ನು, ನೆರೆ ಗ್ರಾಮದವರನ್ನು ಕರೆಸಿ ಹಬ್ಬದ ಊಟ ಹಾಕಿಸುತ್ತಾರೆ. ಹೊಸ ಬಟ್ಟೆ ಧರಿಸಿ ಮಕ್ಕಳೊಂದಿಗೆ ನಲಿದಾಡುತ್ತಾರೆ……

ಇದು ಯಾವುದೋ ಗ್ರಾಮ ದೇವತೆಯ ಜಾತ್ರೆ ಅಥವಾ ಹಬ್ಬವಿರಬಹುದು ಎಂದುಕೊಂಡರೆ ನಿಮ್ಮ ಊಹೆ ತಪ್ಪು..

ರಾಜ್ಯದ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಪುಟ್ಟ ಗ್ರಾಮ ರಾಮಯ್ಯನಪಾಳ್ಯದಲ್ಲಿ ಕನ್ನಡ ರಾಜ್ಯೋತ್ಸವವನ್ನೂ ಹಬ್ಬದಂತೆ ಆಚರಿಸುತ್ತಾರೆ. ಇದು ಒಂದೆರೆಡು ವರ್ಷಗಳ ಆಚರಣೆಯಲ್ಲ ಸತತ 23 ವರ್ಷಗಳಿಂದ ಇದೇ ಪರಿಪಾಠ ಮುಂದುವರೆದುಕೊಂಡು ಬರುತ್ತಿದೆ.

ಬೆಳಿಗ್ಗೆ ಗ್ರಾಮದ ಸರ್ಕಾರಿ ಕನ್ನಡ ಶಾಲೆ ಮಕ್ಕಳಿಗೆ ಸ್ವತಂತ್ರ ಹೋರಾಟಗಾರರು, ದಾರ್ಶನಿಕರ ಪೋಷಾಕು ಹಾಕಿಸಿ, ಅಲಂಕೃತ ವಾಹನಗಳಲ್ಲಿ ಭುವನೇಶ್ವರಿಯ ಭಾವಚಿತ್ರ, ಕನ್ನಡ ಭಾವುಟಗಳೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ.  ಕೆ.ಟಿ.ಹಳ್ಳಿ, ದೇವಲಕೆರೆ, ಚಿನ್ನಮ್ಮನಹಳ್ಳಿ, ಗುಜ್ಜನಡು ಇತ್ಯಾದಿ ನೆರೆಹೊರೆಯ ಗ್ರಾಮಗಳಿಗೆ ಮೆರವಣಿಗೆ ಹೋಗಿ ಬರಲಾಗುತ್ತದೆ.

ಸಂಜೆ ಸಾಹಿತಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಕರೆಸಿ ವೇದಿಕೆ ಕಾರ್ಯಕ್ರಮ ನಡೆಸಲಾಗುತ್ತದೆ. ನಂತರ ಕನ್ನಡ ಶಾಲೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಾರೆ.

ಇದರ ಸಂಪೂರ್ಣ ವೆಚ್ಚವನ್ನು ಗ್ರಾಮದ ಯುವಕರು, ಗ್ರಾಮಸ್ಥರೇ ಭರಿಸುವುದು ವಿಶೇಷ. ಬೆಂಗಳೂರಿಗೆ ಕೆಲಸ ಹರಸಿ ಹೋಗಿರುವವರು,  ಗ್ರಾಮದ ಸರ್ಕಾರಿ ನೌಕರರು ತಮ್ಮ ಕೈಲಾದಷ್ಟು ವಂತಿಗೆ ನೀಡಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಳಿಲು ಸೇವೆ ಮಾಡುತ್ತಿದ್ದಾರೆ.

ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಸಣ್ಣನಾಗಪ್ಪ ಮಾತನಾಡಿ,  ರಾಜ್ಯೋತ್ಸವವನ್ನು ಊರ ಹಬ್ಬದಂತೆ ಆಚರಿಸುವ ಗ್ರಾಮಸ್ಥರ ಕನ್ನಡ ಪ್ರೇಮ ಅನುಕರಣೀಯ.   ಗ್ರಾಮದ ರಾಜ್ಯೋತ್ಸವ ಆಚರಣೆ ರಾಜ್ಯಕ್ಕೆ ಮಾಧರಿ ಎಂದು ಶ್ಲಾಘನೆ ವ್ಯಕ್ತಪಡಿಸಿದರು.


ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಟಿ.ಖಾನ್, ಕಾರ್ಯದರ್ಶಿ ಕೃಷ್ಣಮೂರ್ತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಬಿ.ಆರ್.ಸಿ ಪವನ್ ಕುಮಾರ್ ರೆಡ್ಡಿ,  ಶಿಕ್ಷಕ ಸಿದ್ದೇಶ್, ನಾಗರಾಜಪ್ಪ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಶಿವಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಈರಣ್ಣ, ಉಪಾಧ್ಯಕ್ಷ ಭಾಗ್ಯಮ್ಮ ಶಿವಣ್ಣ, ರಾಮಚಂದ್ರಪ್ಪ, ನಾಗಣ್ಣ, ರಂಗದಾಮಣ್ಣ, ಹನುಮಂತರಾಯಪ್ಪ, ವೀರಕ್ಯಾತಪ್ಪ, ಮಲ್ಲಪ್ಪ, ನರಸಿಂಹಮೂರ್ತಿ ಉಪಸ್ಥಿತರಿದ್ದರು.