Sunday, December 28, 2025
Google search engine
Home Blog Page 316

ಮಧುಗಿರಿ: ಅಭಿವೃದ್ಧಿ ಗೆ ಹಕ್ಕೊತ್ತಾಯ

ತಾಲೂಕಿನ ಐಡಿಹಳ್ಳಿ ಗ್ರಾಮದಲ್ಲಿ ಮಯೂರ ಕನ್ನಡ ಅಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 64 ವೈಭವದ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜೆಎಸ್‍ಎನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಂಗವಿಕಲರಿಗೆ ವೀಲ್ ಚೇರ್ ವಿತರಿಸಲಾಯಿತು

ಮಧುಗಿರಿ ; ಕರ್ನಾಟಕ ರಾಜ್ಯದ ಏಕೀಕರಣಕ್ಕಾಗಿ ದುಡಿದಂತಹ ಮಹನೀಯರನ್ನು ಸದಾ ನೆನಪು ಮಾಡಿಕೊಳ್ಳುತ್ತಾ, ನಮ್ಮ ನೆಲ, ಜಲ ಮತ್ತು ಭಾಷೆಯನ್ನು ರಕ್ಷಣೆ ಮಾಡಬೇಕು ಎಂದು ತಹಶೀಲ್ದಾರ್ ಎಲ್.ಎಂ.ನಂದೀಶ್ ತಿಳಿಸಿದರು.

ತಾಲೂಕಿನ ಐಡಿಹಳ್ಳಿ ಗ್ರಾಮದಲ್ಲಿ ಮಯೂರ ಕನ್ನಡ ಅಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 64 ವೈಭವದ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆ 2500 ವರ್ಷಗಳ ಹಿಂದಿನಿಂದಲೂ ಗತವೈಭವವನ್ನು ಹೊಂದಿರುವ ಭಾಷೆಯಾಗಿದ್ದು, ಭಾರತದಲ್ಲಿ ಅತ್ಯಂತ ಶ್ರೇಷ್ಠ ಭಾಷೆ ನಮ್ಮದ್ದಾಗಿದೆ. ಕನ್ನಡ ಉಳಿಸಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಪಡಲು ಒಗ್ಗಟ್ಟಾಗಬೇಕು ಎಂದರು.

ಜೆಎಸ್‍ಎನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಜಗದೀಶ್ ರೆಡ್ಡಿ ಮಾತನಾಡಿ, ನವಂಬರ್ ತಿಂಗಳಲ್ಲಿ ಮಾತ್ರವಲ್ಲದೆ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಯುವಕರು ಸಜ್ಜಾಗಬೇಕು. ಕನ್ನಡದ ಪ್ರೇಮ ಪ್ರತಿಯೊಬ್ಬ ಕನ್ನಡಿಗನ ರಕ್ತದಲ್ಲೂ ಇರಬೇಕು, ನಾಡು-ನುಡಿ ವಿಚಾರವಾಗಿ ಯಾವುದೇ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ ಎಂದರು.

ಗಡಿನಾಡ ಪ್ರದೇಶವಾಗಿರುವ ಇಲ್ಲಿ ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಲ್ಲಿ ಉದ್ಯೋಗ ಸೃಷ್ಟಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರದ ಗಮನ ಸೆಳೆಯಲು ನಾವೆಲ್ಲರೂ ಒಗ್ಗಟಾಗಿ ಹೋರಾಟ ನಡೆಸಬೇಕಾಗಿದ್ದು, ಗಡಿನಾಡಿನಲ್ಲಿ ಉದ್ಯೋಗ ಸೃಷ್ಠಿಸಲು ಕಾರ್ಖಾನೆಗಳನ್ನು ತೆರೆಯಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದ ಅವರು, ತಾಲ್ಲೂಕಿನ ಬಡ ಜನರಿಗೆ ಯಾವುದೇ ಕಷ್ಟ-ಸುಖ ಬಂದರೂ ನಾನು ಎಂದಿಗೂ ಜೊತೆಯಲ್ಲಿರುತ್ತಾನೆ ಎಂದರು.

ಸಾಹಿತಿ ಹಾಗೂ ಅಧ್ಯಾಪಕ ಕೆ.ಜಿ.ಪರಶುರಾಮ್ ಮಾತನಾಡಿ, ಸತತ ಬರಗಾಲಕ್ಕೆ ತುತ್ತಾಗಿರುವ ಮಧುಗಿರಿ ತಾಲೂಕನ್ನು 371ಜೆ ಗೆ ಸೇರಿಸಲು ಒತ್ತಾಯ ಮಾಡಬೇಕು, ಗಡಿನಾಡಿನಲ್ಲಿ ಇರುವ ಎಲ್ಲರಿಗೂ ಕಡ್ಡಾಯ ಶಿಕ್ಷಣ ನೀಡಬೇಕು ಹಾಗೂ ಸರ್ಕಾರ ಶಿಕ್ಷಣಕಾಗಿ ನೀಡಿರುವ ಎಲ್ಲಾ ಸೌಲಭ್ಯಗಳನ್ನು ಗಡಿ ನಾಡಿನ ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜೆಎಸ್‍ಎನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಂಗವಿಕಲರಿಗೆ ವೀಲ್ ಚೇರ್, ಆಟೋ ಚಾಲಕರಿಗೆ ಸಮವಸ್ತ್ರ, ವಿಧ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ನೋಟ್ ಪುಸ್ತಕ, ಸವಿತಾ ಸಮಾಜ ಹಾಗೂ ಮಡಿವಾಳ ಸಮಾಜದವರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ವೇದಿಕೆಯ ಅಧ್ಯಕ್ಷ ಎಸ್.ಮಹಾಲಿಂಗಯ್ಯ, ಗೌರವಾಧ್ಯಕ್ಷ ಪಿ ನಾಗರೆಡ್ಡಿ, ಟ್ರಸ್ಟ್ ನ ಕಾರ್ಯದರ್ಶಿ ಶುಭ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾರ್ವತಮ್ಮ, ಉಪಾಧ್ಯಕ್ಷ ನಾಗರಾಜು, ಮಾಜಿ ಅಧ್ಯಕ್ಷ ಶನಿವಾರಂ ರೆಡ್ಡಿ, ಸದಸ್ಯರಾದ ಜಿಲಾನ್, ಪಿಡಿಒ ನಟರಾಜ್, ಉಪಪ್ರಾಂಶುಪಾಲ ನಾಗರಾಜು, ಉಪ ತಹಸೀಲ್ದಾರ್ ನಾರಾಯಣಪ್ಪ, ತನುಜ, ಶಿಕ್ಷಕ ಸಂಜಯ್, ಮುಖಂಡರುಗಳಾದ ರಾಜಣ್ಣ, ವೇಣುಗೋಪಾಲ್ ಹಾಗೂ ಮುಂತಾದವರು ಇದ್ದರು.

ತುಮಕೂರು‌ ನರ್ವ್ ಸೆಂಟರ್ ಗೆ ಪ್ರಶಸ್ತಿ ಗರಿ

ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ತುಮಕೂರು ನಗರದ ರೋಗಿಗಳ ತ್ವರಿತ ಸೇವೆಗಾಗಿ ಆರಂಭಿಸಲಾಗಿರುವ ಡಿಜಿಟಲ್ ನರ್ವ್ ಸೆಂಟರ್ (DiNC) Best Smart Health Initiative of the Year ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಪೋರ್ಟ್ ಬ್ಲೇರ್ನಲ್ಲಿ ನವೆಂಬರ್ 29ರಂದು ನಡೆದ 7th edition of BW Business world National Smart Cities Conclave & Awards 2019 ಸಮಾವೇಶದಲ್ಲಿ ಜಿಲ್ಲೆಯ ಪರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಿಕಾ ಪ್ರಶಸ್ತಿಯನ್ನು ಸ್ವೀಕರಿಸಿದರು.

ಗಂಭೀರ ಪರಿಸ್ಥಿತಿಯಲ್ಲಿ ತೊಂದರೆ ಅನುಭವಿಸುತ್ತಿರುವ ತುಮಕೂರು ನಗರ ವ್ಯಾಪ್ತಿಯ ರೋಗಿಗಳಿಗೆ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ನೀಡಲು ಹಾಗೂ ಜನಸಾಮಾನ್ಯರಿಗೆ ಆರೋಗ್ಯ ಸೇವೆಯನ್ನು ತಕ್ಷಣ ದೊರೆಯುವಂತೆ ಮಾಡುವ ದೃಷ್ಟಿಯಿಂದ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಸುಮಾರು 2.27 ಕೋಟಿ ವೆಚ್ಚದಲ್ಲಿ ಡಿಜಿಟಲ್ ನರ್ವ್ ಸೆಂಟರ್ ಯೋಜನೆಯನ್ನು ಆರಂಭಿಸಲಾಗಿದೆ.

ಕೇಂದ್ರ ಸರಕಾರದ ಮಾಜಿ ಕಾರ್ಯದರ್ಶಿ ಹಾಗೂ ಆರ್ಬಿಐನ ಡಿಜಿಟಲೀಕರಣ ಸಮಿತಿಯ ಸದಸ್ಯ ಡಾಕ್ಟರ್ ಅರುಣಾ ಶರ್ಮಾ ಹಾಗೂ ನಗರಾಭಿವೃದ್ಧಿ ಮತ್ತು ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಮಾಜಿ ಕಾರ್ಯದರ್ಶಿ ಶಂಕರ್ ಅಗರ್ವಾಲ್, ಪಂಜಾಬ್ ಸರ್ಕಾರದ ಮಾಜಿ ಅಪರ ಮುಖ್ಯ ಕಾರ್ಯದರ್ಶಿ ಡಾ. ನಿರ್ಮಲ್ಜೀತ್ ಸಿಂಗ್ ಕಲ್ಸಿ, ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ನ Group Government Affairs ಅಧಿಕಾರಿ ತನ್ಮೋಯ್ ಚಕ್ರವರ್ತಿ, ಬಿಡಬ್ಲ್ಯೂ ಬಿಸಿನೆಸ್ ವಲ್ರ್ಡ್ ಮೀಡಿಯಾ ಪ್ರೈ.ಲಿ.ನ ಅಧ್ಯಕ್ಷ ಮತ್ತು ಪ್ರಧಾನ ಸಂಪಾದಕ ಡಾ. ಅನ್ನೂರಾಗ್ ಬಾತ್ರಾ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿಯು ತುಮಕೂರು ಡಿಜಿಟಲ್ ನರ್ವ್ ಸೆಂಟರ್(DiNC)UÉ Best Smart Health Initiative of the Year ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡಿತ್ತು.

ಹೀಗೆ ಓದಿದ್ರೆ ಜಾಸ್ತಿ ಅಂಕ ಬರ್ತಾವಂತೆ

ತುಮಕೂರು: ಓದಿದ ವಿಷಯವನ್ನು ನೆನಪಿಟ್ಟುಕೊಳ್ಳಲು ಪದೇಪದೇ ರಿಕಾಲ್ (ಪುನರ್ ಪಠಣ) ಮಾಡಬೇಕು ಎಂದು ಜಿಲ್ಲಾ ಬಾಲಭವನದ ಸದಸ್ಯ ಎಂ.ಬಸವಯ್ಯ ಸಲಹೆ ನೀಡಿದರು.
ಜಿಲ್ಲಾ ಬಾಲಭವನದಲ್ಲಿ “ಎಸ್.ಎಸ್.ಎಲ್.ಸಿ ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ” ಕುರಿತು ಆಯೋಜಿಸಿದ್ದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಪದೇ ಪದೇ ಅಭ್ಯಾಸ ಮಾಡುವುದರಿಂದ ಓದಿದ ವಿಷಯ ಮನಸ್ಸಿನಲ್ಲಿ ಹೆಚ್ಚಿನದಾಗಿ ಉಳಿಯುತ್ತದೆ. ಇದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಾಗುತ್ತದೆ ಎಂದು ಮಕ್ಕಳಿಗೆ ಮನಃಸ್ಥೈರ್ಯವನ್ನು ತುಂಬಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್. ಕಾಮಾಕ್ಷಿ ಮಾತನಾಡಿ, ಇಂತಹ ಕಾರ್ಯಕ್ರಮ ಪರೀಕ್ಷೆಗೆ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಮಕ್ಕಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಬಹಳ ಅತ್ಯಮೂಲವಾದದ್ದು. ಮಕ್ಕಳಲ್ಲಿ ಶಕ್ತಿಯ ಜೊತೆಗೆ ಆಸಕ್ತಿಯೂ ಇರಬೇಕು ಎಂದು ಕಿವಿ ಮಾತು ಹೇಳಿದರು.

ವಿದ್ಯಾರ್ಥಿಗಳಲ್ಲಿ ಒಳ್ಳೆಯ ಅಭ್ಯಾಸ ಹಾಗೂ ಹವ್ಯಾಸಗಳು ಇರಬೇಕು. ಕಲಿಕೆಯಲ್ಲಿ ನಿರಂತರವಾಗಿ ಮಕ್ಕಳು ಅಭ್ಯಾಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರೆ ಒಳ್ಳೆಯ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಗುರುವಿನ ಗುಲಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ವೇದವಾಕ್ಯದಂತೆ ವಿದ್ಯಾರ್ಥಿಗಳು ಶಿಕ್ಷಕರು ಬೋಧಿಸುವ ವಿಷಯವನ್ನು ನೆನಪಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಮಾತನಾಡಿ, ಕಲಿಕೆಯಲ್ಲಿ ಅತೀ ಹಿಂದುಳಿದಿರುವ ಮಕ್ಕಳನ್ನು ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಮಾಡಬೇಕು. ಶೈಕ್ಷಣಿಕವಾಗಿ ಹಿಂದುಳಿದಿರುವ ಮಕ್ಕಳನ್ನು ಮುಂದೆತರುವುದು ಈ ಕಾರ್ಯಾಗಾರದ ಮೂಲ ಉದ್ದೇಶ ಎಂದರು.

ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಅವ್ಯವಹಾರ ನಡೆದಿಲ್ವಂತೆ

ಸ್ಮಾರ್ಟ್ ಸಿಟಿ ಯೋಜನಾ ಪಟ್ಟಿಯಲ್ಲಿ ಎರಡನೇ ಸುತ್ತಿನಲ್ಲಿ ಆಯ್ಕೆಯಾಗಿರುವ ತುಮಕೂರು ಸ್ಮಾರ್ಟ್‍ಸಿಟಿ ಯೋಜನಾ ಪ್ರಕ್ರಿಯೆಗಳು ಸರ್ಕಾರದ ಕಾರ್ಯಾದೇಶದಂತೆ ನಡೆಯುತ್ತಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಕಳಪೆಯಿಂದ ನಡೆಯುತ್ತಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದ ಮೇರೆಗೆ ತುಮಕೂರು ನಗರದಲ್ಲಿ ಕೈಗೊಂಡಿರುವ ಯೋಜನೆಗಳ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕಾರ್ಯದೇಶವನ್ನು ನೀಡಲಾಗಿದೆ. ಅದರಂತೆ ಈಗಾಗಲೇ 50.17 ಕೋಟಿ ರೂ.ಗಳ ಯೋಜನೆಯನ್ನು ಪೂರ್ಣಗೊಳಿಸಿದ್ದು, 716.50 ಕೋಟಿ ರೂ.ಗಳ ಯೋಜನೆಯು ಅನುಷ್ಠಾನ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ 82.18 ಕೋಟಿ ರೂ.ವೆಚ್ಚದಲ್ಲಿ ಇಂಟಿಗ್ರೇಟೆಡ್ ಬಸ್ ಟರ್ಮಿನಲ್, 58 ಕೋಟಿ ರೂ. ವೆಚ್ಚದಲ್ಲಿ ಟ್ರಾಮ ಕೇರ್ ಸೆಂಟರ್, 56 ಕೋಟಿ ರೂ. ವೆಚ್ಚದಲ್ಲಿ 24×7 ಕುಡಿಯುವ ನೀರಿನ ಸೌಲಭ್ಯ, 52.30 ಕೋಟಿ ರೂ.ವೆಚ್ಚದಲ್ಲಿ ಮಹಾತ್ಮಗಾಂಧಿ ಸ್ಟೇಡಿಯಂ ಅಭಿವೃದ್ಧಿ ಯೋಜನೆಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ತಾಂತ್ರಿಕ ವರದಿಗಳ ವಿಸ್ತøತ ವರದಿಯನ್ನು (ಡಿ.ಪಿ.ಆರ್) ಪಡೆದು ಅನುಮೋದಿಸಿ ಯೋಜನೆಯ ಅನುಷ್ಠಾನವನ್ನು ಸಂಬಂಧಪಟ್ಟ ಇಲಾಖೆಗಳಿಂದ ನಿರ್ವಹಿಸಲು ಯೋಜಿಸಲಾಗಿದೆ. ಕಾಮಗಾರಿಗಳಿಗೆ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆಯಲ್ಲದೆ ಟೆಂಡರ್ ಪ್ರಕ್ರಿಯೆ ಮತ್ತು ಅನುಷ್ಟಾನದ ಹೊಣೆಯನ್ನು ಸಂಬಂಧಪಟ್ಟ ಇಲಾಖೆಗಳು ಹೊಂದಿವೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಆದೇಶದಂತೆ ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನವನ್ನು ಏಕಕಾಲದಲ್ಲಿ ಕೈಗೊಂಡಿದ್ದರಿಂದ ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ಕಾಮಗಾರಿಯ ಅನುಷ್ಠಾನದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ “ಸಮನ್ವಯ ಸಮಿತಿ”ಯನ್ನು ಸಹ ರಚಿಸಿದ್ದು, ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಅನುಕೂಲವಾಗಿದೆ ಎಂದು ಅವರು ಹೇಳಿದ್ದಾರೆ.
ಕಾಮಗಾರಿಯಲ್ಲಿ ಗುಣಮಟ್ಟವನ್ನು ನಿಯಮಾವಳಿ ಪ್ರಕಾರ ನಗರದಲ್ಲಿರುವ ವಿವಿಧ ಇಂಜಿನಿಯರಿಂಗ್ ಕಾಲೇಜ್ ಹಾಗೂ ಪ್ರತಿಷ್ಠಿತ ಬೆಂಗಳೂರಿನ ಆರ್.ವಿ.ಕಾಲೇಜ್‍ನಿಂದ ಅವಶ್ಯಕವಾದ ಎಲ್ಲಾ ರೀತಿಯ ಪರೀಕ್ಷೆಗೊಳಪಡಿಸಲಾಗಿದೆ. ಅಲ್ಲದೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಎಂದು ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯ Quality Control Department Cell ನಿಂದ ವರದಿ ನೀಡಲು ಸಹ ಕೋರಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಯಾವುದೇ ಅವ್ಯವಹಾರ ನಡೆದಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವ್ಯಕ್ತಿ ರಕ್ತ ಹೀರಿ ಕೊಂದ ಚಿರತೆ

ಕುಣಿಗಲ್: ಚಿರತೆ ದಾಳಿಯಿಂದ ತೀವ್ರ ಗಾಯಗೊಂಡಿರುವ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡ ಮರಳವಾಡಿಯಲ್ಲಿ ನಡೆದಿದೆ.

ಜಮೀನಿನ ಪಕ್ಕದ ಅರಣ್ಯದ ಅಂಚಿನಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ವ್ಯಕ್ತಿಯ ಮೇಲೆ ಚಿತರೆ ದಾಳಿ ನಡೆಸಿದೆ. ವ್ಯಕ್ತಿಯ ಕುತ್ತಿಗೆ ಬಾಗಕ್ಕೆ ಕಚ್ಚಿದ್ದರಿಂದ ರಕ್ತ ಸುರಿದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಮೃತ ವ್ಯಕ್ತಿಯನ್ನು ಸುಮಾರು 55 ವರ್ಷದ ಅನಂದಯ್ಯ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಈ ಸರ್ಕಾರಿ ಕೆಲಸಕ್ಕೆ ಪರೀಕ್ಷೆಯು ಇಲ್ಲ, ಸಂದರ್ಶನವೂ ಇಲ್ಲ, ಬರೀ ಅರ್ಜಿ ಹಾಕಿದರೆ ಸಾಕು

0

ಲಕ್ಷ್ಮೀಕಾಂತರಾಜು ಎಂಜಿ.9844777110

ರಾಜ್ಯ ಸರ್ಕಾರದಲ್ಲಿ ಸರ್ಕಾರಿ‌ ಹುದ್ದೆಗಳಿಗೆ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ,ಪರೀಕ್ಷೆ ಇಲ್ಲದೇ ಅರ್ಹತಾ ಪರೀಕ್ಷೆಯ ಅಂಕಗಳ ಮೇರೆ ನೇಮಕ ಮಾಡಿಕೊಳ್ಳುತ್ತಿರುವುದು ಗ್ರಾಮ ಲೆಕ್ಕಿಗರ ಹುದ್ದೆ ಮಾತ್ರ.

ಹೌದು. ಕಂದಾಯ ಇಲಾಖೆಯು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಖಾಲಿ‌ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನ ಅರ್ಹತಾ ಪರೀಕ್ಷೆಯಾದ ಪಿಯುಸಿ ಅಂಕಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಪ್ರಸ್ತುತವಾಗಿ ಉಡುಪಿ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ. ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿಯೂ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನ ಕಂದಾಯ ಇಲಾಖೆ ಆಗಾಗ ತುಂಬಿಕೊಳ್ಳುತ್ತಿದೆ. ಆದರೆ, ಈ ಹುದ್ದೆಗಳಿಗೆ ಅರ್ಹತಾ ಪರೀಕ್ಷೆಯಾದ ಪಿಯುಸಿ ಅಂಕಗಳ ಆಧಾರದ ಮೇರೆಗೆ ನೇಮಕಮಾಡಿಕೊಳ್ಳಲಾಗುತ್ತಿದೆ.

ಗ್ರಾಮ ಲೆಕ್ಕಿಗರ ಹುದ್ದೆಗೆ ಸಮಾನವಾದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯೂ ಸೇರಿದಂತೆ ಎಲ್ಲ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ,ಪೊಲೀಸ್ ಇಲಾಖೆ, ಹಾಗೂ ಇತರೆ ಇಲಾಖೆಯವರು ಪರೀಕ್ಷೆ ನಡೆಸಿ ಗಳಿಸಿದ ಅಂಕಗಳ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿರುವಾಗ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಮಾತ್ರ ಅರ್ಹತಾ ಪರೀಕ್ಷೆಯ ಅಂಕಗಳನ್ನ ಆಧರಿಸಿ ನೇಮಕ ಮಾಡಿಕೊಳ್ಳುತ್ತಿರುವುದು ಅವೈಜ್ಞಾನಿಕವಾಗಿದೆ .

ಪಿಯುಸಿಯಲ್ಲಿ ಗರಿಷ್ಠ ಅಂಕಗಳನ್ನ ಪಡೆದುಕೊಂಡವರು ಬಹುತೇಕರು ಆಯ್ಕೆಯಾಗುತ್ತಿದ್ದಾರೆ. ಅದರಲ್ಲೂ ಕಲಾ ವಿಭಾಗದವರು ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಯಾಗುತ್ತಿದ್ದು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪಿಯು ಅಭ್ಯರ್ಥಿಗಳು ಆಯ್ಕೆಯಾಗುತ್ತಿಲ್ಲ. ಪಿಯುಸಿಯ ಮೂರು ವಿಭಾಗಗಳಾದ ವಿಜ್ಞಾನ ,ಕಲಾ‌ ವಿಭಾಗ,ವಾಣಿಜ್ಯ ವಿಷಯಗಳನ್ನ ಸಮಾನವಾಗಿ ನಿಗಧಿ ಪಡಿಸಿರುವ ಕಾರಣ ಕಲಾ ವಿಭಾಗದವರು ಹೆಚ್ಚು ಅಂಕಗಳನ್ನ ಪಡೆದು ಆಯ್ಕೆಯಾಗುತ್ತಿದ್ದಾರೆ. ಕಬ್ಬಿಣದ ಕಡಲೆಯಾಗಿರುವ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದವರು ಕಲಾ ವಿಭಾಗವರ ಅಂಕಗಳಷ್ಟು ತಗೆಯಲಾದೀತೆ? ಇದೊಂದು ರೀತಿಯಲ್ಲಿ ಸಂಪೂರ್ಣ ಅವೈಜ್ಞಾನಿಕ ಕ್ರಮವಾಗಿದೆ‌‌ ಎಂದು ದೂರುತ್ತಿದ್ದಾರೆ ಗ್ರಾಮ ಲೆಕ್ಕಿಗರ ಹುದ್ದೆ ಬಯಸಿರುವ ಅಭ್ಯರ್ಥಿಗಳು

ಪಿಯುಸಿಯ ಈ ಮೂರು ವಿಭಾಗಗಳಿಗೆ ಆಗಿರುವ ಅಸಮತೋಲನವನ್ನ ಸರಿಪಡಿಸಿ ಎಂದು ಅನೇಕ ಮನವಿಗಳನ್ನ ಕಂದಾಯ ಮಂತ್ರಿಗಳು ಸೇರಿದಂತೆ ಇಲಾಖೆತ ಪ್ರಧಾನ ಕಾರ್ಯದರ್ಶಿಗಳಿಗೂ ಮನವಿ ಸಲ್ಲಿಸಿದರೂ ಪ್ರಯೋಜನ ವಾಗಿಲ್ಲವೆಂದು ಈ ಸಂಬಂಧ ಹೋರಾಟ ಮಾಡಿರುವ ಅಭ್ಯರ್ಥಿಗಳು ಬೇಸರಿಸಿಕೊಳ್ಳುತ್ತಿದ್ದಾರೆ.

ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ದ್ವಿತೀಯ ಪಿಯುಸಿಯನ್ನ ಕೇವಲ ಅರ್ಹತಾ ಪರೀಕ್ಷೆಯನ್ನಾಗಿ ಪರಿಗಣಿಸಿ ಅರ್ಜಿ ಕರೆದು ಪ್ರವೇಶ ಪರೀಕ್ಷೆ ನಡೆಸಿ ಅದರಲ್ಲಿ ಗಳಿಸಿದ ಅಂಕಗಳ ಆಧಾರದ ಮೇರೆಗೆ ಆಯ್ಕೆ ಮಾಡಿಕೊಂಡರೆ ಪಿಯುಸಿ ಯ ಎಲ್ಲಾ ವಿಭಾಗದವರಿಗೂ ಸಮಾನ ಅವಕಾಶ ಮಾಡಿಕೊಟ್ಟಂತಾಗುತ್ತದೆ.ಜೊತೆಗೆ, ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ಘಟನೆಗಳ ಅರಿವು ಇರುವವರಿಗೆ ಅವಕಾಶ ದೊರೆದಂತಾಗುತ್ತದೆ.

ಪಿಯುಸಿ ಯ ಎಲ್ಲ ವಿಭಾಗಗಳನ್ನ‌ ಸಮಾನವಾಗಿ ಸ್ವೀಕರಿಸಿರುವ ಕಾರಣ ಕಲಾ ವಿಭಾಗದವರ ಅಂಕಗಳ ಮುಂದೆ ವಿಜ್ಞಾನ ವಿಭಾಗದ ಅಭ್ಯರ್ಥಿಗಳ ಅಂಕಗಳು ಸಾಲುತ್ತಿಲ್ಲ. ಈ ಹುದ್ದೆಗಳಿಗೆ ಆಯ್ಕೆಯಾಗುತ್ತಿರುವವರು ಕಲಾ ವಿಭಾಗದವರೇ ಆಯ್ಕೆಯಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದಲ್ಲಿ ನೇಮಕ ಮಾಡಿಕೊಂಡರೆ ವಿಜ್ಞಾನ ವಿಭಾಗದವರು ಆಯ್ಕೆಯಾಗುವ ಸಾಧ್ಯತೆ ಇರುತ್ತದೆ.

ವಿನಯ್ ,ಗ್ರಾಮ ಲೆಕ್ಕಿಗ ಹುದ್ದೆಯ ಆಕಾಂಕ್ಷಿ.ಚೇಳೂರು

…………….

ಅರ್ಹತಾ ಪರೀಕ್ಷೆ ಅಂಕಗಳ ಆಧಾರದ ಮೇರೆ ಆಯ್ಕೆ ಮಾಡಿಕೊಳ್ಳುತ್ತಿರುವ ಕಾರಣ ಅತಿ ಹೆಚ್ಚು ಅಂಕಗಳಿಸಿದ ಆಗಷ್ಟೇ ಪಿಯುಸಿ ಮುಗಿಸಿರುವ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಇವರಿಗೆ ಕಂದಾಯ ಇಲಾಖೆಯ ಸಾಮಾನ್ಯ ತಿಳುವಳಿಕೆ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಕಂದಾಯ ಇಲಾಖೆಯ ಕುರಿತ ಪತ್ರಿಕೆಯೊಂದನ್ನ ನಡೆಸುವ ಮೂಲಕ ಆಯ್ಕೆ ಮಾಡಿಕೊಂಡರೆ ಒಳ್ಳೆಯದು

…….
ರಮೇಶ್ ಸಾಮಾಜಿಕ ಹೋರಾಟಗಾರ

ಮಾಗೋಡು: ಮಕ್ಕಳ ಗ್ರಾಮಸಭೆಗೆ ಪಿಡಿಒ ವಿರುದ್ಧ ಮಕ್ಕಳ ಮುನಿಸು

ಶಿರಾ;ಮಕ್ಕಳ ಹಕ್ಕುಗಳ ಗ್ರಾಮಸಭೆ ಎನ್ನುವ ವಿಶೇಷ ಕಾರ್ಯಕ್ರಮ ಇರುವುದು ಕರ್ನಾಟಕ ರಾಜ್ಯದಲ್ಲಿ ಮಾತ್ರ. ಇದು ಪಂಚಾಯತ್‌ ರಾಜ್‌ ಇಲಾಖೆಯಿಂದ ನಡೆಸುವ ಒಂದು ವಿನೂತನ ಕಾರ್ಯಕ್ರಮ. ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳು ನವೆಂಬರ್‌ ತಿಂಗಳಲ್ಲಿ ಕಡ್ಡಾಯವಾಗಿ ಮಕ್ಕಳ ಹಕ್ಕುಗಳ ಗ್ರಾಮಸಭೆ ಆಯೋಜಿಸಲೇಬೇಕು ಮತ್ತು ಅತ್ಯಂತ ಯಶಸ್ವಿಯಾಗಿ ನಡೆಸಬೇಕು.

ಸಿರಾ ತಾಲ್ಲೂಕಿನ ಮಾಗೋಡು ಗ್ರಾಮ ಪಂಚಾಯಿತಿಯಿಂದ ನಡೆದ ಮಕ್ಕಳ ಗ್ರಾಮಸಭೆ ಮಕ್ಕಳ ಹಕ್ಕುಗಳಿಗೆ ಬೆಲೆ ನೀಡಲಿಲ್ಲ. 12 ಶಾಲೆಗಳ ಸುಮಾರು 280 ಮಕ್ಕಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಇದರಲ್ಲಿ ಶಾಮಿಯಾನದ ಅಡಿಯಲ್ಲಿ ನೆರಳಿನಲ್ಲಿ ಕುಳಿತಿದ್ದ ಮಕ್ಕಳ ಸಂಖ್ಯೆ 80 ರಿಂದ 100. ಇನ್ನುಳಿದ 180 ಮಕ್ಕಳು ಬಿಸಿಲಿನಲ್ಲಿ ಕುಳಿತುಕೊಳ್ಳಲು ಆಗದೆ ಎದ್ದು ಹೋಗಲು ಆಗದೆ ಪರದಾಡುತ್ತಿದ್ದದ್ದು ಅತ್ಯಂತ ಬೇಸರದ ಸಂಗತಿ.

ಪಂಚಾಯ್ತಿಯಿಂದ ನಡೆಸುವ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಉಪಸ್ಥಿತಿ ಬಹಳ ಮುಖ್ಯವಾಗಿರುತ್ತದೆ. ಆದರೆ ಈ ಪಂಚಾಯಿತಿ ವತಿಯಿಂದ ಮಾಡಿರುವ ಮಕ್ಕಳ ಗ್ರಾಮಸಭೆಗೆ ಕಳೆದ 3 ವರ್ಷದಿಂದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಭಾಗವಹಿಸದೆ ಇರುವುದು ಶೋಚನೀಯ.

ವಿಶ್ವ ಸಂಸ್ಥೆಯ ಪ್ರಕಾರ ೦ ಯಿಂದ 18 ವರ್ಷದವರನ್ನು ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಇದರ ಅನುಸಾರ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಕಿರಿಯ, ಹಿರಿಯ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಮಾಹಿತಿ ನೀಡಬೇಕು. ಆದರೆ ಮಕ್ಕಳ ಗ್ರಾಮ ಸಭೆ ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಪಕ್ಕದಲ್ಲಿಯೇ ಪದವಿ ಪೂರ್ವ ಕಾಲೇಜು ಇದ್ದರೂ ಸಹಾ ಯಾವುದೇ ಮಾಹಿತಿ ನೀಡಿಲ್ಲ ಎಂದು ಪ್ರಾಂಶುಪಾಲರು ಬೇಸರ ವ್ಯಕ್ತಪಡಿಸಿದರು.

ಮಕ್ಕಳು ಸಭೆಯಲ್ಲಿ ಶಾಲೆ ಮತ್ತು ಗ್ರಾಮಕ್ಕೆ ಸಂಬಂಧಿಸಿದ ಸುಮಾರು 30 ಪ್ರಶ್ನೆಗಳನ್ನು ಕೇಳಿದರು. ಮಕ್ಕಳ ಪ್ರಶ್ನೆಗಳಿಗೆ ಪಂಚಾಯಿತಿಯ ಕಾರ್ಯದರ್ಶಿ ಸಾಹಿರಾ ಬಾನು ಮಾತ್ರ ಉತ್ತರಿಸುವಂತಹ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು.

ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಮ್ಮ, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಸದಸ್ಯರಾದ ಕರಿಯಣ್ಣ, ನರಸಿಂಹರಾಜು, ಭಾಗ್ಯಮ್ಮ, ಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.

ಉದ್ದವ್ ಠಾಕ್ರೆ ಈಗ ಮಹಾರಾಷ್ಟ್ರ ಮುಖ್ಯಮಂತ್ರಿ

ಶಿವಸೇನೆಯ ಮುಖ್ಯಸ್ಥ ಉದ್ದವ್ ಠಾಕ್ರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರ್ ಪ್ರಮಾಣ ವಚನ ಬೋಧಿಸಿದರು. ಬಾಳಠಾಕ್ರೆಯ ಮೊದಲ ಪೀಳಿಗೆಯ ಉದ್ದವ್ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿರುವುದು ವಿಶೇಷವಾಗಿದೆ.

ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪ್ರಮಾಣ ವಚನ ಸಮಾರಂಭದಲ್ಲಿ ಶಿವಸೇನೆಯಿಂದ ಇಬ್ಬರು, ಕಾಂಗ್ರೆಸ್ ಪಕ್ಷದಿಂದ ಇಬ್ಬರು ಮತ್ತು ಎನ್.ಸಿ.ಪಿ ಯಿಂದ ಇಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಶಿವಸೇನೆಯಿಂದ ಏಕನಾಥ್ ಶಿಂಧೆ, ಸುಭಾಷ್ ದೇಸಾಯಿ, ಕಾಂಗ್ರೆಸ್ ಪಕ್ಷದಿಂದ ಬಾಳಾಸಾಹೇಬ್ ಥೋರಟ್ ಮತ್ತು ನಿತಿನ್ ರಾವುತ್ ಹಾಗೂ ಎನ್.ಸಿ.ಪಿಯಿಂದ ಜಯಂತ್ ಪಾಟೀಲ್, ಛಗನ್ ಬುಜ್ ಬಲ್ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ಟಿ.ಆರ್. ಬಾಲು, ಕಾಂಗ್ರೆಸ್ ನಾಯಕ ಅಹಮದ್ ಪಟೇಲ್, ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಶಿವಸೇನೆ-ಕಾಂಗ್ರೆಸ್-ಎನ್.ಸಿ.ಪಿ ಮೂರು ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಿದ್ದು ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿವೆ. ರೈತರ ಸಾಲ ಮನ್ನಾ, ನೆರೆ ಸಂತ್ರಸ್ಥರಿಗೆ ಪರಿಹಾರ, ನಿರುದ್ಯೋಗ ಪದವೀಧರರಿಗೆ ನಿರುದ್ಯೋಗ ವೇತನ, ವಿಧರ್ಬ ರೈತರ ಸಂಕಷ್ಟಕ್ಕೆ ಪರಿಹಾರ ರೂಪಿಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾಗಿದೆ.

ಸಂವಿಧಾನವನ್ನು   ಮೀರಿದ್ದು ಯಾವುದು ಇಲ್ಲ; ನ್ಯಾಯಾಧೀಶ ನಾಗೇಶ್

ತುಮಕೂರು: ದೇಶದಲ್ಲಿ ಸಂವಿಧಾನವೇ ಶ್ರೇಷ್ಠ. ಸಂವಿಧಾನದ ಮೀರಿ ಯಾರು ಏನನ್ನು ಮಾಡಲು ಸಾಧ್ಯವಿಲ್ಲ. ಸಂವಿಧಾನದ ಚೌಕಟ್ಟು ಉಲ್ಲಂಘಿಸುವ ಕಾಯ್ದೆಗಳನ್ನು ಸಂಸತ್ ಜಾರಿಗೆ ತಂದಾಗ ಸುಪ್ರೀಂ ಕೋರ್ಟ್ ಅವುಗಳನ್ನು ‌ರದ್ದುಗೊಳಿಸಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀರಾದ ಕೆ.ಎ.ನಾಗೇಶ ಅವರು ಹೇಳಿದರು.

ಸೂಫಿಯ ಕಾನೂನು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನ ಉದ್ಘಾಟಿಸಿ ಮಾತನಾಡಿದರು.

ದೇಶದ ಲ್ಲಿ ಸಂವಿಧಾನವೇ ಶ್ರೇಷ್ಠ. ಸಂವಿಧಾನದ ಕರಡು ಸಮಿತಿ ಅಧ್ಯಕ್ಷ ರಾಗಿದ್ದ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಸಂವಿಧಾನ ದಿನ ಆಚರಣೆ ಮಾಡಲಾಗುತ್ತಿದೆ ಎಂದರು.

ದೇಶದ ನಾಗರಿಕರಿಗೆ ಮೂಲ ಭೂತ ಹಕ್ಕುಗಳನ್ನು ಸಂವಿಧಾನ ನೀಡಿದೆ. ಅದೇ ರೀತಿ ಮೂಲಭೂತ ಕರ್ತವ್ಯಗಳನ್ನು ಹೇಳಿದೆ. ಈ ಎರಡೂ ಹಕ್ಕುಗಳು ಒಂದಕ್ಕೊಂದು ಪೂರಕವಾಗಿವೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ದ ಆಶಯಗಳನ್ನು ಸಂವಿಧಾನ ಒತ್ತಿ ಹೇಳಿದೆ. ಸಂವಿಧಾನದ ಈ ಆಶಯಗಳನ್ನು ಜನರ ನಡುವೆ ಪ್ರಚುರಪಡಿಸಬೇಕು ಎಂದು ಅವರು ಹೇಳಿದರು.

ಕಾನೂನು ವಿದ್ಯಾರ್ಥಿಗಳು, ವಕೀಲರು ಮೂಲಭೂತ ಹಕ್ಕುಗಳ ಬಗ್ಗೆ ಆಳವಾದ ಅಧ್ಯಯನ ಮಾಡಬೇಕು. ಇದರಿಂದ ಕಕ್ಷಿದಾರನಿಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕನ್ನಡಪ್ರಭ ಮುಖ್ಯವರದಿಗಾರ ಉಗಮ ಶ್ರೀನಿವಾಸ್ ಮಾತನಾಡಿ, ಬಹುತ್ವ ಸಂವಿಧಾನದ ಮುಖ್ಯ ಆಶಯವಾಗಿದೆ. ಸಂವಿಧಾನ ವನ್ನು ಬದಲಾಯಿಸುವ ಬಗ್ಗೆ ಬಹಿರಂಗವಾಗಿ ಮಾತನಾಡಲಾಗುತ್ತಿದೆ. ಇದನ್ನು ಎಚ್ಚರಿಕೆಯಿಂದ ಗಮನಿಸಬೇಕು ಎಂದರು.

ಏಕ ಸಂಸ್ಕೃತಿಯ ನ್ನು ಏರಿ ದೇಶದ ಬಹುತ್ವ ಹಾಳು ಮಾಡುವ ಕೆಲಸ ಆಗುತ್ತಿದೆ. ದೇಶದ ಬಹತ್ವವನ್ನು ಹೇಳುವ ಸಂವಿಧಾನವನ್ನು ಉಳಿಸಲು ವಕೀಲರು ಹೋರಾಟದ ಮುನ್ನೆಲೆಗೆ ಬರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾನೂನು ಕಾಲೇಜಿನ ಅಧ್ಯಕ್ಷ ಷಫಿ ಅಹ್ಮದ್ ಮಾತನಾಡಿ, ಸಂವಿಧಾನದ ಆಶಯಗಳ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ‌. ಇಂತಗ ಕೆಲಸದಲ್ಲಿ ಕಾಲೇಜು ತೊಡಗಿಕೊಂಡಿದೆ ಎಂದರು.

ರಾಜ್ಯ ದಲ್ಲಿ ನಡೆದ ಆಫರೇಷನ್ ಕಮಲ, ಅನರ್ಹರ ಚುನಾವಣೆಗೆ ಹೋಗಿರುವುದು, ಮಹಾರಾಷ್ಟ್ರ ದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಸಂವಿಧಾನದ ಬುಡನೇಲು ಮಾಡುವಂತವಾಗಿವೆ. ಇಂತ ಘಟನೆಗಳು ಆಗದಂತೆ ದೇಶದ ಜನರು ಬುದ್ಧಿವಂತಿಕೆ ತೋರಬೇಕಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಎಸ್.ರ‌ಮೇಶ್ ಮಾತನಾಡಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಇಂದು ದೇಶದ ನೀತಿಗಳು ರೂಪುಗೊಳ್ಳುತ್ತಿವೆ. 2004ರ ದಶಕದ ನಂತರ ಇದು ಹೆಚ್ಚಾಗುತ್ತಿದೆ ಎಂದು ಹೇಳಿದರು.
ಉಪ ಪ್ರಾಂಶುಪಾಲರಾದ ಓಬಣ್ಣ, ಬಿಇಡಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ಇದ್ದರು.

ದೇವಲಕೆರೆಯಲ್ಲಿ ವಿಜೃಂಭಣೆಯ ರಾಜ್ಯೋತ್ಸವ

ರಾಜ್ಯೋತ್ಸವ ವಾರ್ಷಿಕೋತ್ಸವವಾಗದೆ ನಿತ್ಯೋತ್ಸವವಾಗಬೇಕು ಎಂದು ಶಿಕ್ಷಕ ಸುವರ್ಣರೆಡ್ಡಿ ತಿಳಿಸಿದರು.

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ದೇವಲಕೆರೆ ಗ್ರಾಮದಲ್ಲಿ ಬುಧವಾರ ರಾತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮತ್ತು ಕನ್ನಡ ಅಭಿಮಾನಿಗಳ ಬಳಗ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಡಿ ಭಾಗದಲ್ಲಿ ನಿತ್ಯವೂ ಕನ್ನಡಕ್ಕೆ ಸಂಬಂಧಿಸಿ ಕಾರ್ಯಾಗಾರ, ವಿಚಾರ ಸಂಕಿರಣಗಳು ನಡೆಯಬೇಕು ಎಂದರು. ವರ್ಷಕ್ಕೊಮ್ಮೆ ರಾಜ್ಯೋತ್ಸವ ಆಚರಿಸಿ ಸುಮ್ಮನಾಗಬಾರದು ಎಂದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮಾತನಾಡಿ, ತಾಲ್ಲೂಕಿನಾದ್ಯಂತ ತೆಲುಗು ಪ್ರಭಾವ ಇದ್ದರೂ ಕನ್ನಡ ಭಾಷೆ ಸಂಸ್ಕೃತಿ ಉಳಿಸುವಲ್ಲಿ ವಿವಿಧ ಸಂಸ್ಥೆಗಳು ಶ್ರಮಿಸುತ್ತಿವೆ. ನಾಡು ನುಡಿಯ ಸೇವೆ ಮಾಡುವಲ್ಲಿ ಪ್ರತಿಯೋರ್ವರು ಕೈಜೋಡಿಸಬೇಕು ಎಂದರು.

ಶಾಲಾ ಕ್ಷೇಮಾಭಿವೃದ್ದಿ ಸವಿತಿ ಮಾಜಿ ಅಧ್ಯಕ್ಷ ಪಾಳೇಗಾರ್ ಲೋಕೇಶ್, ನಿಡಗಲ್ ಹೋಬಳಿಯಲ್ಲಿ ವರ್ಷದಿಂದ ವರ್ಷಕ್ಕೆ ಕಲಾವಿದರ ಸಂಖ್ಯೆ ಹೆಚ್ಚುತ್ತಿದೆ. ಯುವ ಜನತೆ ರಾಜ್ಯೋತ್ಸವದ ಹೆಸರಿನಲ್ಲಿ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಗುತ್ತಿರುವುದು ಶ್ಲಾಘನೀಯ ಎಂದರು.

 ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕಲಾ ತಂಡಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದವು.

ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ, ನಮ್ಮ ಹಕ್ಕು ತಾಲ್ಲೂಕು ಘಟಕದ ಅಧ್ಯಕ್ಷ ಗಿರಿ ಫ್ಯಾಷನ್ಸ್ ಗಿರೀಶ್, ಬಲರಾಂ, ನವೀನ್, ಲಿಂಗಪ್ಪ, ಶಶಿಕಿರಣ್, ಸುವರ್ಣರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಸದಸ್ಯೆ ಚಂದ್ರಮ್ಮ, ಬಿ.ಆರ್.ಸಿ ಸುವರ್ಣರೆಡ್ಡಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಈರಣ್ಣ, ಶಾಲಾ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಅಂಬರೀಷ್, ವೈದ್ಯ ಪ್ರಭಾಕರ ರೆಡ್ಡಿ, ಸಿಬ್ಬಂದಿ ಲೋಕೇಶ್ ನಾಯಕ, ಶಿಲ್ಪ, ಕನ್ನಡ ಅಭಿಮಾನಿ ಬಳಗದ ಪದಾಧಿಕಾರಿ ಅಜಯ್ ಕುಮಾರ್, ಮದೂಶ್, ರಾಮಚಂದ್ರ, ನಾರಾಯಣರೆಡ್ಡಿ, ಕೆ.ಪಿ.ಲಿಂಗಣ್ಣ, ಹನುಮಂತರಾಯಪ್ಪ, ರಾಜಶೇಖರ್, ಗೌತಮಿ, ರಘು, ನಾಗರಾಜು ಉಪಸ್ಥಿತರಿದ್ದರು.