Monday, December 22, 2025
Google search engine
Home Blog Page 317

ಎಲ್ಲರಿಗೂ ಭೂಮಿ, ಮನೆ: ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ

ತುಮಕೂರು: ಸರ್ಕಾರ ಎಲ್ಲಾ ಬಡವರಿಗೂ ಭೂಮಿ ಮತ್ತು ಮನೆಯನ್ನು ಒದಗಿಸಬೇಕೆಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದಿನಿಂದ ಅರೋರಾತ್ರಿ ಧರಣಿ ಆರಂಭವಾಗಿದೆ. ಮಧುಗಿರಿ ಮತ್ತು ಶಿರಾ ತಾಲೂಕಿನಿಂದ ಬಂದಿರುವ ಭೂರಹಿತರು ಮತ್ತು ಮನೆ ಇಲ್ಲದವರು ಧರಣಿ ನಡೆಸುತ್ತಿದ್ದಾರೆ.

ನೂರಕ್ಕೂ ಹೆಚ್ಚು ಮಂದಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಗೋಮಾಳದಲ್ಲಿ, ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವವರಿಗೆ ಸಾಗುವಳಿ ಚೀಟಿ ನೀಡಬೇಕು. ಮನೆ ಇಲ್ಲದವರಿಗೆ ಮನೆ ನೀಡಬೇಕು ಎಂಬ ಒತ್ತಾಯ ಅವರದ್ದು. ಈ ಧರಣಿ ಸತ್ಯಾಗ್ರಹಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಬೆಂಬಲ ವ್ಯಕ್ತಪಡಿಸಿ ಕೆಲ ಕಾಲ ಧರಣಿಯಲ್ಲಿ ಕುಳಿತು ಮಾತನಾಡಿದರು.

ಧರಣಿಯನ್ನು ಉದ್ಘಾಟಿಸಿ ಮಾತನಾಢಿದ ಅವರು ಬಡವರೂ ಕೂಡ ಭಾರತೀಯರು. ಅವರು ಘನತೆಯ ಬದುಕನ್ನು ಕಟ್ಟಿಕೊಳ್ಳಲು ಸರ್ಕಾರ ನೆರವು ನೀಡಬೇಕು. ಕೇವಲ ಓಟು ಪಡೆಯುವುದು ಮಾತ್ರವಲ್ಲ ಬಡವರನ್ನು ಗೌರವಯುತವಾಗಿ ಕಾಣಬೇಕು. ಬದುಕಿ ಬಾಳಲು ಅವಕಾಶ ನೀಡಬೇಕು. ಅವರಿಗೆ ಬೇಕಾಗಿರುವ ಭೂಮಿ, ವಸತಿ, ಊಟ ಹೀಗೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕಾದುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

ಹಲವು ಹೋರಾಟಗಳನ್ನು ನಡೆಸಿದರೂ ಸರ್ಕಾರಗಳು ಬಡವರ ಬಗ್ಗೆ ಗಮನಹರಿಸುತ್ತಿಲ್ಲ. ಬಡವರನ್ನು ಕಸದಂತೆ ಕಾಣುವ ಪ್ರಥೃತ್ತಿಯನ್ನು ಅಧಿಕಾರಿಗಳು, ರಾಜಕಾರಣಿಗಳು ಮತ್ತು ಜಿಲ್ಲಾಧಿಕಾರಿಗಳು ಬಿಡಬೇಕು. ಬಡವರು ಕೂಡ ಎಲ್ಲರಂತೆ ಮನುಷ್ಯರೇ ಆಗಿದ್ದಾರೆ. ಅವರೂ ಭಾರತೀಯ ಪ್ರಜೆಗಳು. ಅವರನ್ನು ತೃತೀಯ ದರ್ಜೆ ಪ್ರಜೆಗಳನ್ನು ಕಾಣುವುದನ್ನು ಮೊದಲು ಬಿಡಬೇಕು ಎಂದು ತಿಳಿಸಿದರು.

ತಮಗೆ ಸ್ಥಾನ ಸಿಗಲಿಲ್ಲವೆಂದು ಪಕ್ಷ ತೊರೆಯುವವರಿಗೆ ತಕ್ಕ ಪಾಠ ಕಲಿಸಬೇಕು. ಅನರ್ಹರಿಗೆ ಯಾವುದೇ ತತ್ವ ಇಲ್ಲ. ವಿಚಾರ ಇಲ್ಲ. ಅವರಿಗೆ ಅಧಿಕಾರ ಬೇಕು. ಇಂಥವರಿಗೆ ನಾಚಿಕೆಯಾಗಬೇಕು. ಇವರು ಶ್ರೀಮಂತರು, ಕೋಟಿ ಕೋಟಿ ರೂಪಾಯಿ ಲೂಟಿ ಹೊಡೆದವರು. ಇಂಥವರಿಗೇ ನಮ್ಮ ಯುವಕರು ಜೈಕಾರ ಹಾಕುತ್ತಾರೆ. ಇದೇನು ವ್ಯವಸ್ಥೆ. ಇಂಥ ವ್ಯವಸ್ಥೆಯನ್ನು ನೋಡಿ ನೊವಾಗುತ್ತದೆ. ಯುವಕರು ದುಡ್ಡು, ಹೆಂಡಕ್ಕಾಗಿ ಜೈಕಾರ ಹಾಕುವುದನ್ನು ನಿಲ್ಲಿಸಭೇಕು ಎಂದು ಕಿವಿಮಾತು ಹೇಳಿದರು.

ನಾವು ಗಾಂಧಿಯೊಂದಿಗೆ ಹೋರಾಟ ಮಾಡಿದೆ. ನಮ್ಮ ಉದ್ದೇಶ ಸುಂದರ ಸಮಾಜ ನಿರ್ಮಾಣವಾಗಿತ್ತು. ಇಂದು ರಾಜ್ಯ ದೇಶ ಹಾಳಾಗಿ ಹೋಗುತ್ತಿದೆ. ಕೊಳ್ಳೆ ಹೊಡೆಯುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದನ್ನು ನೋಡಿಕೊಂಡು ಯುವಕರು-ಯುವತಿಯರು ಸುಮ್ಮನಿದ್ದಾರೆ. ಯುವಕರ ಮೌನ ಒಳ್ಳೆಯದಲ್ಲ. ಯುವರಕು ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ದೇಶ ಕಟ್ಟಲು ಯುವಕರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಪ್ರತಿಭಟನಾ ಧರಣಿಯಲ್ಲಿ ಸಿರಿಮನೆ ನಾಗರಾಜು ಪ್ರಾಸ್ತಾವಿಕ ಮಾತನಾಡಿ ಸರ್ಕಾರಗಳು ಜನರ ಬಗ್ಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿವೆ. ಹಲವು ವರ್ಷಗಳಿಂದ ಭೂಮಿ ಮತ್ತು ವಸತಿ ನೀಡುವಂತೆ ಮನವಿ ಮಾಡಿಕೊಂಡು ಬರುತ್ತಿದ್ದರೂ ಯಾವುದೇ ಸರ್ಕಾರವೂ ಗಮನಹರಿಸುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.

ಧರಣಿಯಲ್ಲಿ ಜನಸಂಗ್ರಾಮ ಪರಿಷತ್ ನ ಸಿ.ಯತಿರಾಜು, ಎ.ನಾಗೇಶ್. ಪಿ.ಎನ್.ರಾಮಯ್ಯ, ಅಭಯಕುಮಾರ್, ಹಂದ್ರಾಳ್ ನಾಗಭೂಷಣ್, ಸಿದ್ದಪ್ಪ, ತು. ಮಲ್ಲೇಶ್, ರಾಜಸಿಂಹ, ವೈ.ಎಚ್.ಹುಚ್ಚಯ್ಯ, ರಾಘವೇಂದ್ರಸ್ವಾಮಿ, ವೆಂಕಟೇಶ್, ಮಲ್ಲಿಕಾರ್ಜನಯ್ಯ ಸೇರಿದಂತೆ ಹಲವರು ಇದ್ದರು. ಅಹೋರಾತ್ರಿ ಧರಣಿ ಮುಂದುವರೆದಿದೆ.

12ರಂದು ವಿಧಾನಸೌಧ ಚಲೋ

ತುಮಕುರು; ರಾಜ್ಯದಲ್ಲಿ ಹಮಾಲಿ ಕಾರ್ಮಿಕರು, ಬೀದಿಬದಿ ಮಾರಾಟಗಾರರು, ಮನೆಗೆಲಸ ಕಾರ್ಮಿಕರು ಆಟೋ, ಟ್ಯಾಕ್ಸಿ, ಖಾಸಗಿವಾಹನ ಚಾಲಕರು, ನಿರ್ವಾಹಕರು, ಟೈಲರ್‍ಗಳು ಹಾಗೂ ದ್ವಿಚಕ್ರವಾಹನ ಮೆಕಾನಿಕ್‍ಗಳಿಗೆ ಕಾರ್ಮಿಕ ಇಲಾಖೆ ರೂಪಿಸಿರುವ ಭವಿಷ್ಯನಿಧಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು. 2020 ಬಜೆಟ್‍ನಲ್ಲಿ ಕನಿಷ್ಟ 500 ಕೋಟಿ ಅನುದಾನ ಘೋಷಿಸಬೇಕು ಎಂದು ಆಗ್ರಹಿಸಿ ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ಬೃಹತ್ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ತಿಳಿಸಿದರು.

ತುಮಕೂರಿನ ಗಾಂಧೀನಗರದಲ್ಲಿರುವ ಜನಚಳವಳಿ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸುಮಾರು ಮೂರು ಕೋಟಿಯಷ್ಟಿರುವ ಕಾರ್ಮಿಕರು ಕನಿಷ್ಟ ವೇತನ, ಪಿಂಚಣಿ ಸೇರಿದಂತೆ ಯಾವೊಂದು ಸಾಮಾಜಿಕ ಭದ್ರತೆ ಇಲ್ಲದೆ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಅಸಂಘಟಿತ ವಲಯದ ಕೊಡುಗೆ ಶೇ 60 ಕ್ಕಿಂತ ಅಧಿಕವಿದೆ. ಹೀಗಿದ್ದರೂ ಅವರಿಗೆ ಯಾವುದೇ ಸೌಲಭ್ಯಗಳನ್ನು ನೀಡಲ್ಲ ಎಂದು ಹೇಳಿದರು.

ರಾಜ್ಯದ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಒದಗಿಸುವ ಸಲುವಾಗಿ 2009 ರಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ ರಚನೆಯಾಗಿದೆ. ಆರಂಭದಲ್ಲಿ ಕೇಂದ್ರದ ಸಾಮಾಜಿಕ ಭದ್ರತಾ ಮಂಡಳಿ ರೂಪಿಸಿದ ಯೋಜನೆಗಳ ಅನ್ವಯ ಮಕ್ಕಳಿಗೆ ಶಿಕ್ಷಣ, ಅಪಘಾತ ಪರಿಹಾರ, ವಸತಿ ಹಾಗೂ ಪಿಂಚಣಿ ಸೇರಿ ಹಲವು ಕಾರ್ಯಕ್ರಮಗಳನ್ನು ಅಂಗೀಕರಿಸಿದರೂ ಅನುದಾನದ ಕೊರತೆಯಿಂದ ಅವುಗಳು ಜಾರಿಯಾಗಲಿಲ್ಲ ಎಂದು ಹೇಳಿದರು.

ಹಲವು ಹೋರಾಟ ನಡೆಸಿದ ಪರಿಣಾಮ ಕಾರ್ಮಿಕ ಇಲಾಖೆ ಹಮಾಲಿ ಕಾರ್ಮಿಕರು, ಮನೆಗೆಲಸ ಮಾಡುವವರು, ಬೀದಿಬದಿ ವ್ಯಾಪಾರಿಗಳು ಹಾಗೂ ಚಿಂದಿ ಆಯುವ ಕಾರ್ಮಿಕರಿಗೆ ಆಧ್ಯತೆ ನೀಡಿ ಭವಿಷ್ಯ ನಿಧಿ ಜಾರಿಗೊಳಿಸಲು ರಾಜ್ಯ ಸರಕಾರದ ಮುಂದೆ 133 ಕೋಟಿ ರೂಗಳ ಅನುದಾನದ ಕೋರಿಕೆ ಸಲ್ಲಿಸಿತ್ತು. ಹೀಗಾಗಿ 2017 ರ ರಾಜ್ಯ ಸರಕಾರದ ಬಜೆಟ್‍ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಸಂಘಟಿತ ಕಾರ್ಮಿಕರಿಗಾಗಿ ಸ್ಮಾರ್ಟ್ ಕಾರ್ಡ್ ಹಾಗೂ ಭವಿಷ್ಯನಿಧಿ ಯೋಜನೆ ಘೋಷಿಸಿದರು.

ಕಾರ್ಮಿಕ ಇಲಾಖೆ ಕೋರಿಕೆಯಂತೆ ರೂ 133 ಕೋಟಿ ಬದಲು ಕೇವಲ 25 ಕೋಟಿ ಹಣಕಾಸಿನ ನೆರವನ್ನು ನೀಡಿದರು. ಆದರೆ ಈ ಹಣದಿಂದ ಕೇವಲ ಸ್ಮಾರ್ಟ್ ಕಾರ್ಡ್ ನೀಡಲು ಮಾತ್ರ ಸಾಧ್ಯವಾಯಿತು. ಭವಿಷ್ಯನಿಧಿ ಯೋಜನೆ ಅನುಷ್ಟಾನ ಮಾತ್ರ ಹಾಗೇ ಉಳಿಯಿತು. ಈಗ ಹಮಾಲಿ ಕಾರ್ಮಿಕರು ಮತ್ತು ಮನೆಕೆಲಸ ಕಾರ್ಮಿಕರಿಗೆ, ಸಾಕಷ್ಟು ಒತ್ತಡ ಹಾಗೂ ಹೋರಾಟದ ಬಳಿಕ ಡಾ.ಅಂಬೇಡ್ಕರ್ ಸಹಾಯ ಹಸ್ತ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಿಸಲಾಗಿದೆಯಾದರೂ ಅದರಿಂದ ಯಾವುದೇ ಸೌಲಭ್ಯಗಳಿಲ್ಲ ಎಂದರು.

ಕಾರ್ಮಿಕ ಮುಖಂಡರಾದ ಸಯ್ಯದ್ ಮುಜೀಬ್, ಎನ್.ಕೆ.ಸುಬ್ರಹ್ಮಣ್ಯ ಇದ್ದರು.

ಅವರು ಹೊಂಚು ಹಾಕುತ್ತಿದ್ದರು ಏಕೆ ಗೊತ್ತೇ?

ಟಾಟಾ ಸುಮೋ ರಸ್ತೆಯಲ್ಲಿ ನಿಲ್ಲಿಸಿ ಕಾಯುತ್ತಿದ್ದರು. ಅದೂ ರಾತ್ರಿ ಹೊತ್ತು. ರಾತ್ರಿ ವೇಳೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವುದು ಊಟಕ್ಕಾಗಿಯೋ ಇಲ್ಲವೇ ದೈಹಿಕ ಬಾಧೆಗಳನ್ನು ತೀರಿಸಿಕೊಳ್ಳಲೋ ಉಂಟು. ಆದರೆ ಹಾಗೆ ನಿಂತಿದ್ದವರ ಬಳಿ ಮಚ್ಚು ಲಾಂಗು ಇವೆಯೆಂದರೆ ಅವರು ದರೋಡೆಕೋರರೇ ಇರಬೇಕು ಅಲ್ಲವೇ?


ಹೌದು ತುಮಕೂರು ತಾಲೂಕು ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಣಾವರ ಗೇಟ್ ಬಳಿ ಹೀಗೆ ಮಚ್ಚು ಲಾಂಗು, ಪಿಸ್ತೂಲು ಸೇರಿದಂತೆ ಮಾರಾಕಾಸ್ತ್ರಗಳನ್ನು ಟಾಟಾ ಸುಮೋ ವಾಹನದಲ್ಲಿಟ್ಟುಕೊಂಡು ಕಾಯುತ್ತಿದ್ದರು. ಮಧ್ಯರಾತ್ರಿ ಗಸ್ತಿಗೆ ಬಂದ ಪೊಲೀಸರು ದರೋಡೆಕೋರರು ಇದ್ದಲಿಗೆ ಬಂದು ವಿಚಾರಿಸಿದರು. ಅಷ್ಟೇಕ್ಕೆ ಸುಮ್ಮನಾಗುತ್ತಾರೆಯೇ ಪೊಲೀಸರು. ಟಾಟಾ ಸುಮೋ ವಾಹನಕ್ಕೂ ಕಣ್ಣು ಹಾಕಿದರು. ಆಗಲೇ ಇವರು ದರೋಡೆ ಕೋರರೆಂಬುದು ಖಚಿತವಾಗಿದ್ದು.


ಈ ದರೋಡೆಕೋರರು 25 ದಿನಗಳ ಹಿಂದೆ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಲ್ಲಿ ಸುಮೋ ಮತ್ತು ಮೊಬೈಲ್ ಸುಲಿಗೆ ಮಾಡಿದ್ದರಂತೆ. ಮಾಗಡಿಯಲ್ಲೂ ದೇವರ ವಿಗ್ರಹ ಕದ್ದಿದ್ದರು. ಬೆಂಗಳೂರಿನ ಭಾರತಿ ನಗರದಲ್ಲೂ ಒಂದು ಟಾಟಾ ಸುಮೋವನ್ನು ಕಳವು ಮಾಡಿರುವ ಪ್ರಕರಣಗಳು ಆರೋಪಿಗಳು ಬಾಯಿ ಬಿಟ್ಟಂತೆ ಒಂದೊಂದೇ ಹೊರಬಂದಿವೆ. ಸರಿ ಕನ್ ಫರ್ಮ್ ಆಗಿ ನಾಲ್ವರನ್ನು ಬಂದಿಸಿದ್ದಾರೆ. ತುಮಕೂರು ಶಾಂತಿನಗರದ ಜಪ್ರುದ್ದೀನ್, ಬೆಂಗಳೂರು ನೀಲಸಂದ್ರದ ಸಫೀರುದ್ದೀನ್, ಮಿಕದ್ದರ್ ಪಾಷಾ, ವೆಂಕಟೇಶಪುರದ ಮೊದಮದ್ ಸಲೀಂ, ಕಲೀಂಪಾಷಾ ಬಂದಿಸಿಸಲಾಗಿದೆ. ಈ ದರೋಡೆಕೋರದಿಂದ ಒಂದು ಟಾಟಾ ಸುಮೋ, ಸುಮೋ ಇಂಜಿನ್ ಮತ್ತು ಬಿಡಿಭಾಗಗಳು, 10 ಮೊಬೈಲ್ ಗಳು, ಒಂದು ನಾಡ ಪಿಸ್ತೂಲು, 5 ಜೀವಂತ ಗುಂಡುಗಳು , ಲಾಂಗು, 7 ಡ್ರಾಗರ್, ಮೂರು ದೇವರ ವಿಗ್ರಹ ವಶಪಡಿಸಿಕೊಳ್ಳಲಾಗಿದೆ.

ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಅವ್ಯವಹಾರ; ಸೊಗಡು ಶಿವಣ್ಣ ಆರೋಪ

ತುಮಕೂರು; ನಗರದಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಸಮಗ್ರ ತನಿಖೆ ನಡೆಸುವಂತೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎಸ್.ಶಿವಣ್ಣ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್. ಶಿವಣ್ಣ, ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಕೋಟ್ಯಂತರ ರೂಪಾಯಿ ಅವ್ಯವಹಾರವೂ ನಡೆದಿದೆ. ಹಾಗಾಗಿ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಸ್ಮಾರ್ಟ್ ಸಿಟಿ ಕಾಮಗಾರಿಯ ಕಳಪೆ ಗುಣಮಟ್ಟ ಮತ್ತು ಅವ್ಯವಹಾರದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಸ್ಮಾರ್ಟ್ ಸಿಟಿ ಕಾಮಗಾರಿಗಳ ನೇತೃತ್ವ ವಹಿಸಿರುವ ಶಾಲಿನಿ ರಜನೀಶ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳೇ ಸಮರ್ಪಕವಾಗಿ ನಡೆದಿಲ್ಲ. ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಆದರೂ ಶೇಕಡ 50ರಷ್ಟು ಬಿಲ್ ಗಳು ಪಾಸಾಗಿವೆ. ಕಾಮಗಾರಿ ಪೂರ್ಣಗೊಳ್ಳದೆ ಹಣ ಹೇಗೆ ಬಿಡುಗಡೆ ಮಾಡಿದರು ಎಂದು ಪ್ರಶ್ನಿಸಿದರು.

ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ಅದೊಂದು ಅವೈಜ್ಞಾನಿಕ ಕಾಮಗಾರಿ. ಇದಕ್ಕಾಗಿರುವ ವೆಚ್ಚವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಕೆ.ಪಿ.ಮಹೇಶ್,ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಅಂಗವಿಕಲರ ಪ್ರತಿಭಟನೆ

ತುಮಕೂರು; ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಠಕ ರಾಜ್ಯ ವಿಕಲಚೇನತರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ನೇತೃತ್ವದಲ್ಲಿ ವಿಕಲ ಚೇತನರು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿರುವ ಶೇಕಡ 75ರಷ್ಟು ಜನರ ಪೈಕಿ ಶೇ. 6ರಷ್ಟು ವಿಕಲಚೇತನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಪುನರ್ವಸತಗಾಗಿ 2006-07ರಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.

ಪದವೀಧರ ವಿಕಲಚೇತನರನ್ನು ಎಂ.ಆರ್.ಡಬ್ಲ್ಯೂ ತಾಲೂಕು ಪಂಚಾಯಿತಿಗೆ, ಎಸ್.ಎಲ್.ಸಿ. ಉತ್ತೀರ್ಣರಾದ ವಿಕಲಚೇತನರನ್ನು ವಿಆರ್.ಡಬ್ಲ್ಯೂಗಳಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಗೌರವಧನದ ಆಧಾರದ ಮೇಲೆ ನೇಮಕ ಮಾಡಿತ್ತು. ಇವರಿಗೆ ಉದ್ಯೋಗ ಭದ್ರತೆ ಇರುವುದಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಈ ಯೋಜನೆಯಡಿ 11 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಬಹುಜನಸಂಖ್ಯೆಯ ಪುನರ್ವಸತಿ ಜವಾಬ್ದಾರಿಯನ್ನು ತಾಲೂಕು ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಾವೇ ನಿರ್ವಹಿಸುತ್ತಿದ್ದೇವೆ. ಸ್ಥಳೀಯ ಇಲಾಖೆಯ ಸಿಬ್ಬಂದಿ ಇಲ್ಲದೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮನ್ನು ಎಂಆರ್.ಡಬ್ಲ್ಯೂವನ್ನು ತಾಲೂಕು ಕಲ್ಯಾಣಾಧಿಕಾರಿಗಳಾಗಿ, ವಿ.ಆರ್.ಡಬ್ಲ್ಯೂ ಆರ್.ಡಬ್ಲ್ಯೂ ವಿಕಲಚೇತನ ಅಭಿವೃದ್ಧಿ ಸಹಾಯೇತರರನ್ನಾಗಿ ಹುದ್ದೆಗಳನ್ನು ಸೃಜಿಸಿ ಖಾಯಂಗೊಳಿಸಬೆಕು ಎಂದು ಆಗ್ರಹಿಸಿದರು.

ಸಂವಿಧಾನ ಭಾರತೀಯರ ಧರ್ಮ ಗ್ರಂಥ

ತಿಪಟೂರು: ಭಾರತದ ಸಂವಿಧಾನವು ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಸಿದ್ಧಾಂತಗಳ ಆಧಾರದ ಮೇಲೆ ರಚಿತವಾಗಿರುವ ಶ್ರೇಷ್ಠ ಗ್ರಂಥ. ಈ ಗ್ರಂಥ ಭಾರತೀಯರ ಪಾಲಿನ ಧರ್ಮಗ್ರಂಥವಾದ ಸಂವಿಧಾನ ಗೌರವಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ ತಿಳಿಸಿದರು.

ತಿಪಟೂರು ನಗರದಲ್ಲಿ ಆಯೋಜಿಸಿದ್ದ ಸಂವಿಧಾನ ಸಮರ್ಪಣಾದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅವರು ಸಂವಿಧಾನ ಭಾರತೀಯರ ಪಾಲಿನ ಶ್ರೇಷ್ಠ ಗ್ರಂಥ ಹಲವಾರು ಭಾಷೆ ಪ್ರಾಂತ್ಯ ಜಾತಿ ಧರ್ಮಗಳ ಹೆಸರಿನಲ್ಲಿ ಹಂಚಿಹೋಗಿದ್ದ ಭಾರತೀಯರನ್ನು ಒಗ್ಗೂಡಿಸಿದ ಪರಮಶ್ರೇಷ್ಠ ಗ್ರಂಥ ಸಂವಿಧಾನ ಎಂದರು.

ಸ್ವತಂತ್ರ ಭಾರತದ ಸಂವಿಧಾನ ರಚನಾ ಕಾರ್ಯದ ಜವಾಬ್ದಾರಿಯನ್ನು ಶಿಕ್ಷಣತಜ್ಞ ವಿಶ್ವ ಜ್ಞಾನಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರವರಿಗೆ ವಹಿಸಿದಾಗ ವಿಶ್ವದ ಎಲ್ಲಾ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಹಲವು ದೇಶಗಳ ಸಂವಿಧಾನದ ಉತ್ತಮ ಅಂಶಗಳನ್ನು ಹಾಯ್ದು ವಿವಿಧತೆಯಲ್ಲಿ ಏಕತೆಯಿಂದ ಕೂಡಿರುವ ಭಾರತಕ್ಕೆ ಉತ್ತಮ ಸಂವಿಧಾನ ರಚನೆ ಮಾಡಿದ ಪರಿಣಾಮವಾಗಿ ಇಂದು ನಮ್ಮ ಸಂವಿಧಾನ ವಿಶ್ವಶ್ರೇಷ್ಠ ಸಂವಿಧಾನವಾಗಿದೆ ಅಲ್ಲದೆ ವಿಶ್ವಕ್ಕೆ ಉತ್ತಮ ಮಾರ್ಗದರ್ಶನವನ್ನು ನೀಡುವ ಶಕ್ತಿಯನ್ನು ಪಡೆದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಲಿತ ಸಂಘರ್ಷ ಸಮಿತಿ ತಾಲ್ಲೋಕು ಅಧ್ಯಕ್ಷ ನೊಣವಿನಕೆರೆ ಪ್ರಸನ್ನ ಮಾತನಾಡಿ ಸಂವಿಧಾನವು ಭಾರತದ ಸರ್ವಶ್ರೇಷ್ಠ ಕಾನೂನಾಗಿದ್ದು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ರೂಪುಗೊಂಡಿದೆ ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶದ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವ ದೃಷ್ಟಿಯಿಂದ ಮೀಸಲಾತಿ ವ್ಯವಸ್ಥೆಯನ್ನು ಒಳಗೊಂಡಿದೆ, ದೇಶದಲ್ಲಿ ಕಾನೂನಿನ ದೃಷ್ಟಿಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಸರ್ವಸಮಾನ ಎನ್ನುವ ಆಸೆಯನ್ನು ಒಳಗೊಂಡ ಜಗತ್ತಿನ ಸರ್ವಶ್ರೇಷ್ಠ ಸಂವಿಧಾನ ನಮ್ಮ ಭಾರತೀಯ ಸಂವಿಧಾನ ನಮ್ಮ ಸಂವಿಧಾನದಲ್ಲಿ ಹಕ್ಕುಗಳ ಅಷ್ಟೇ ಕರ್ತವ್ಯಕ್ಕೆ ಆದ್ಯತೆ ನೀಡಲಾಗಿದೆ ಆದ್ದರಿಂದ ಪ್ರತಿಯೊಬ್ಬ ಭಾರತೀಯನು ಗೌರವಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಕುಪ್ಪಾಳು ರಂಗಾಸ್ವಾಮಿ.ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ನೊಣವಿನಕೆರೆ ಪ್ರಸನ್ನ.ಚಿಗ್ಗಾವಿ ಪುಟ್ಟಸ್ವಾಮಿ. ಕೆ.ಇಬಿ ಸೋಮಶೇಖರ್. ಶೆಟ್ಟಿಹಳ್ಳಿ ಚಿಕ್ಕಣ್ಣ.ಕಾರ್ಮಿಕ ಮುಖಂಡ ಗ್ಯಾರಘಟ್ಟ ಹೊನ್ನಪ್ಪ.ಗಾಂಧಿನಗರ ಬಸವರಾಜು.ಬೋವಿ ಸಮಾಜದ ಮುಖಂಡ ವಿಜಯಕುಮಾರ್ ಮತ್ತಿಘಟ್ಟ ಕಲ್ಲೇಶಯ್ಯ. ಚಂದ್ರಶೇಖರ್ ಮುಂತ್ತಾದವರು ಉಪಸ್ಥಿತರಿದರು ಕುಪ್ಪಾಳು ರಂಗಸ್ವಾಮಿ ತಂಡದಿಂದ ಕ್ರಾಂತಿ ಗೀತೆ ಹಾಡಲಾಯಿತು

ಸಂವಿಧಾನವೇ ಎಲ್ಲರ ಆದರ್ಶವಾಗಬೇಕು

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಹಂಜಾಟೆ ಸಂಜೀವ್ ಕುಮಾರ್ ಚಾಲನೆ ನೀಡಿದರು.

ಎಲ್ಲಾ ಕಲ್ಪನೆಗಳನ್ನೊಳಗೊಂಡ ರೂಪು-ರೇಷೆ ಹಾಗೂ ಚಿಂತನ-ಮಂಥನದಲ್ಲಿ ರಚನೆಯಾಗಿರುವ ಸಂವಿಧಾನ ಕೇವಲ ಪುಸ್ತಕ ರಚನೆಯಲ್ಲ ಅದೊಂದು ಆದರ್ಶ ಗ್ರಂಥ. ಸಂವಿಧಾನವನ್ನು ಆಡಳಿತಕ್ಕೆ ಮಾತ್ರ ಸೀಮಿತಗೊಳಿಸಬಾರದು. ಅದರಲ್ಲಿನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಸಂವಿಧಾನದ ಮೌಲ್ಯಗಳು ಜೀವನದ ಮೌಲ್ಯಗಳಾಗಬೇಕು ಎಂದು ನ್ಯಾಯಾಧೀಶರು ಸಲಹೆ ನೀಡಿದರು.

ಸಂವಿಧಾನದ ಪ್ರತಿಜ್ಞಾ ವಿಧಿ ಎನ್ನುವುದು ಕೇವಲ ಅಕ್ಷರನ್ನೊಳಗೊಂಡ ಪದಪುಂಜಗಳಲ್ಲ. ಅದರಲ್ಲಿ ಭಾವನೆಗಳು ಅಡಕವಾಗಿರುತ್ತವೆ. ಸಂವಿಧಾನ ಪೀಠಿಕೆಯನ್ನು ಅಕ್ಷರಕ್ಕೆ ಮಾತ್ರ ಸೀಮಿತಗೊಳಿಸಿ ಅಭ್ಯಸಿಸದೆ, ಭಾವನೆಗಳನ್ನು ಮೇಳೈಸಿಕೊಂಡು ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಜಗತ್ತಿನಾದ್ಯಂತ ಮೊದಲ ಹತ್ತು ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನಿಲ್ಲುತ್ತಾರೆ ಸಂವಿಧಾನವನ್ನು ಬದಿಗಿಟ್ಟು ಬಿ.ಆರ್. ಅಂಬೇಡ್ಕರ್ ಅವರನ್ನು ನೋಡಲು ಸಾಧ್ಯವಿಲ್ಲ. ಬಾಬಾ ಸಾಹೇಬರನ್ನು ಬದಿಗಿಟ್ಟು ಸಂವಿಧಾನ ನೋಡಲು ಸಾಧ್ಯವಿಲ್ಲ. ಸಂವಿಧಾನದ ಆಶಯದಿಂದ ಭಾರತ ವಿಶ್ವದಲ್ಲೆಡೆ ಅಖಂಡತೆಯನ್ನು ಉಳಿಸಿಕೊಂಡಿದೆ ಎಂದರು.

ಜಾತ್ಯಾತೀತ ಮನೋಭಾವನೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ನಾವೆಲ್ಲರೂ ಒಂದೇ ಎನ್ನುವ ಭಾವನೆಯಲ್ಲಿ ಸಾಮರಸ್ಯ ಅಡಗಿರುತ್ತದೆ. ಆದರೆ ಪ್ರಸ್ತುತ ಜಾತ್ಯಾತೀತೆಯನ್ನು ಕದಡುವ ಪ್ರಯತ್ನ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂವಿಧಾನ ಮೌಲ್ಯಗಳಲ್ಲೊಂದಾದ ಸಮಾಜವಾದಿ ಪರಿಕಲ್ಪನೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಂಪತ್ತಿನ ಕ್ರೊಢೀಕರಣ ಕೇವಲ ಒಬ್ಬರಿಗೆ ಮಾತ್ರ ಸೀಮಿತವಾಗದೆ ಸಮಾನ ಹಂಚಿಕೆಯಾಗಬೇಕು. ಎಲ್ಲಿ ಸಮಾಜವಾದಿ ತತ್ವವನ್ನು ಅಳವಡಿಸಿಕೊಂಡಿರುತ್ತಾರೋ ಅಲ್ಲಿ ಭ್ರಷ್ಟಾಚಾರ ಇರುವುದಿಲ್ಲ. ಒಂದು ವೇಳೆ ಭ್ರಷ್ಟಾಚಾರ ನಡೆಯುತ್ತಿದ್ದರೆ ಅಲ್ಲಿ ಸಮಾಜವಾದಿ ತತ್ವ ಉಲ್ಲಂಘನೆಯಾಗಿದೆ ಎಂದು ಅರ್ಥ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ, ಸೂಫಿಯ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಎಸ್. ಜಗದೀಶ್, ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಕೆ. ಅನಿಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಬಿ. ದಶರಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್. ನಟರಾಜ್, ಇತರೆ ವಕೀಲರು, ಅಂಗನವಾಡಿ ಕಾರ್ಯಕರ್ತೆಯರು, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು – ಸುಪ್ರೀಂಕೋರ್ಟ್ ಕಾಯ್ದಿರಿಸಿದ ಆದೇಶದಲ್ಲಿ ಏನಿರಬಹುದು?

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಲು ಆಹ್ವಾನ ನೀಡಿರುವ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಕುರಿತು ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ.

ಎನ್.ಸಿ.ಪಿ. ಶಿವಸೇನೆ ಮತ್ತು ಕಾಂಗ್ರೆಸ್ ಹಾಗೂ ಬಿಜೆಪಿಯ ಪರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಮಂಗಳವಾರ ಬೆಳಗ್ಗೆ 10.30ಕ್ಕ ಆದೇಶ ಪ್ರಕಟಿಸಲಿದೆ.

ಬಿಜೆಪಿ ಮತ್ತು ಎನ್.ಸಿ.ಪಿ ಶಾಸಕರ ಬೆಂಬಲ ಪತ್ರವನ್ನು ಮಂಗಳವಾರ ಹಾಜರುಪಡಿಸುವುದಾಗಿ ಹೇಳಿದ್ದು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಹಾಜರಾಗಲಿದ್ದಾರೆ.

ಇದೇ ವೇಳೆ ಅಜಿತ್ ಪವಾರ್ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಮೆಹ್ತಾ, ಎನ.ಸಿ.ಪಿ ನಾಯಕ ಅಜಿತ್ ಪವಾರ್ 54 ಮಂದಿ ಎನ್.ಸಿ.ಪಿ ಶಾಸಕರು ಮತ್ತು ರಾಜ್ಯಪಾಲರ ಸಹಿಯುಳ್ಳ ಪತ್ರವನ್ನು ನ್ಯಾಯಾಲಯಕ್ಕೆ ತೋರಿಸಿದರು.

ಆ ಪತ್ರದ ಪ್ರಕಾರ ನವೆಂಬರ್ 22ರಂದು ಅಜಿತ್ ಪವಾರ್ ತನ್ನ ಶಾಸಕರ ಬೆಂಬಲ ಪತ್ರವನ್ನು ನೀಡಿ ದೇವೇಂದ್ರ ಫಡ್ನಾವೀಸ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ ಎಂದಿದೆ.

ಮಹಾರಾಷ್ಟ್ರದ ವಿಧಾನಸಭೆಯ 288 ಶಾಸಕರ ಪೈಕಿ ಬಿಜೆಪಿ 105, ಎನ್.ಸಿ.ಪಿ. 54, ಪಕ್ಷೇತರ ಶಾಸಕರು 11 ಮಂದಿ ಸೇರಿ ಒಟ್ಟು 170 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ಈ ಪತ್ರವನ್ನು ಸುಪ್ರೀಂಕೋರ್ಟ್ ಪರಿಶೀಲನೆ ನಡೆಸುವುದನ್ನು ಮೆಹ್ತಾ ಪ್ರಶ್ನಿಸಿದರು.

ತುಮಕೂರಿನಲ್ಲಿ 40 ಸಾವಿರ ಜನರಿಗೆ ಕ್ಷಯ

ತುಮಕೂರು;ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರವು ನವೆಂಬರ್ 25ರಿಂದ ಡಿಸೆಂಬರ್ 10ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಅಂದೋಲನದಲ್ಲಿ ಜಿಲ್ಲೆಯಲ್ಲಿ ಸುಮಾರು 395170 ಜನರನ್ನು ಕ್ಷಯರೋಗಕ್ಕೆ ತುತ್ತಾಗಿರುವುದಾಗಿ ಅಂದಾಜಿಸಿ, ಸದರಿ ಜನಸಂಖ್ಯೆಯಲ್ಲಿ ಸುಮಾರು 84538 ಮನೆಗಳಿಗೆ ಭೇಟಿ ನೀಡುವ ಉದ್ದೇಶವಿದೆ.

ಆಂದೋಲನದಲ್ಲಿ ಭಾಗವಹಿಸುವ ಪ್ರತಿ ತಂಡವು ಕ್ಷಯರೋಗ ಲಕ್ಷಣಗಳಾದ ರಾತ್ರಿ ವೇಳೆ ಜ್ವರ ಬರುವುದು, ತೂಕ ಕಡಿಮೆಯಾಗುವುದು, ಹಸಿರವಾಗದಿರುವುದು, ರಾತ್ರಿವೇಳೆ ಬೆವರುವುದು ಇದರ ಬಗ್ಗೆ ಅರಿವು ಮೂಡಿಸುವುದಾಗಿದೆ. ಕ್ಷಯರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯ ಕಫ ಸಂಗ್ರಹಣೆ ಮಾಡಿಸಿ ಅಂದೇ ಕಫ ಪರೀಕ್ಷೆ ಮಾಡಿಸುವುದು, ಕಫದಲ್ಲಿ ಕ್ರಿಮಿಗಳು ಪತ್ತೆಯಾದಲ್ಲಿ ಅಂದೇ ಚಿಕಿತ್ಸೆ ಪ್ರಾರಂಭಿಸಲಾಗುವುದು ಆಂದೋಲನದ ಮುಖ್ಯ ಉದ್ದೇಶವಾಗಿದೆ.

ಕ್ಷಯರೋಗಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ 104ಕ್ಕೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ.

ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಆರ್. ಚಂದ್ರಿಕಾ, ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಜಿ.ಕೆ ಸನತ್‍ಕುಮಾರ್, ಡಾ. ತ್ರಿವೇಣಿ, ಹಿರಿಯ ಪ್ರಯೋಗಾಲಯ ತಂತ್ರಜ್ಞರಾದ ಡಿ. ವಿಷ್ಣು, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಸಿದ್ದಲಿಂಗಪ್ಪ, ಜಿಲ್ಲಾ ಟಿಬಿ ಮತ್ತು ಹೆಚ್‍ಐವಿ ಮೇಲ್ವಿಚಾರಕ ಕೃಷ್ಣಕುಮರ್, ಜಿಲ್ಲಾ ಪಿಪಿಎಂ ಸಂಯೋಜಕ ಆರ್. ಕಿಶೋರ್‍ಕುಮಾರ್ ಉಪಸ್ಥಿತರಿದ್ದರು.

ಮಹಾರಾಷ್ಟ್ರ ಸರ್ಕಾರ ರಾತ್ರಿ ಪತನ; ಜಯಂತ್ ಪಾಟೀಲ್

ತುಮಕೂರು; ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಾತ್ರಿ ರಚನೆಯಾಗಿದೆ, ರಾತ್ರಿಯೇ ಪತನವಾಗಲಿದೆ ಎಂಧೂ ಎನ್.ಸಿ.ಪಿ ನಾಯಕ ಜಯಂತ್ ಪಾಟೀಲ್ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು ದೇವೇಂದ್ರ ಫಡ್ನಾವೀಸ್ ಮತ್ತು ಅಜಿತ್ ಪವಾರ್ ಇಬ್ಬರೇ ಸರ್ಕಾರ ಎಂದು ಗೇಲಿ ಮಾಡಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಭೆ ನಡೆಸಿ ಇಬ್ಬರೂ ಪರಸ್ಪರ ಖಾತೆಗಳನ್ನು ಹಂಚಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಮತ್ತೊಂದೆಡೆ ಅಜಿತ್ ಪವಾರ್ ಜೊತೆ ಗುರುತಿಸಿಕೊಂಡಿದ್ದ ಶಾಸಕರಾದ ಻ನಿಲ್ ಪಾಟೀಲ್ ಮತ್ತು ದೌಲತ್ ದರೋದಾ ಇಬ್ಬರೂ ಕೂಡ ಎನ್.ಸಿ.ಪಿ ತೆಕ್ಕೆಗೆ ಬಂದಿದ್ದು ಅವರು ಹೋಟೆಲ್ ಹಯಾತ್ ಸೇರಿಕೊಂಡಿದ್ದಾರೆ.

ನಮಗೆ 165 ಶಾಸಕರ ಬೆಂಬಲವಿದೆ. 53 ಶಾಸಕರು ನಮ್ಮ ಜೊತೆ ಇದ್ದಾರೆ. ಅಜಿತ್ ಪವಾರ್ ತಪ್ಪು ಮಾಡಿದ್ದಾರೆ. ಅವರು ರಾಜಿನಾಮೆ ನೀಡಲೇಬೇಕು ಎಂದು ಎನ್.ಸಿ.ಪಿ. ವಕ್ತಾರ ನವಾಬ್ ಮಲ್ಲಿಕ್ ಸ್ಪಷ್ಟಪಡಿಸಿದ್ದಾರೆ