Sunday, December 28, 2025
Google search engine
Home Blog Page 320

ವಿದ್ಯಾರ್ಥಿಗಳು ಫೇಲಾದ್ರೆ ಶಿಕ್ಷಕರೆ ಹೊಣೆ: ತುಮಕೂರು ಸಿಇಒ ಹೊಸ ನೀತಿ

ತುಮಕೂರು: 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾದಲ್ಲಿ ಶಿಕ್ಷಕರನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಎಚ್ಚರಿಗೆ ನೀಡಿದ್ದಾರೆ.

ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಸಂಬಂಧ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಶಾಲೆಗಳ ಅರ್ಧವಾರ್ಷಿಕ ಪರೀಕ್ಷೆ ಫಲಿತಾಂಶದ ವಿವರ ಪಡೆದು ಈ ಎಚ್ಚರಿಕೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಗಣಿತ, ಇಂಗ್ಲೀಷ್ ವಿಷಯದಲ್ಲಿ ಹಿಂದುಳಿದಿರುವುದು ಅರ್ಧ ವಾರ್ಷಿಕ ಪರೀಕ್ಷಾ ಫಲಿತಾಂಶದಿಂದ ತಿಳಿದುಬಂದಿದೆ. ಅರ್ಧ ವಾರ್ಷಿಕ ಪರೀಕ್ಷೆ ಫಲಿತಾಂಶ ಆಧರಿಸಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ವಿಶೇಷ ತರಗತಿ ನಡೆಸುವ ಮೂಲಕ ಮಕ್ಕಳು ಹೆಚ್ಚಿನ ಅಂಕ ಪಡೆಯಲು ಪ್ರತಿಯೊಬ್ಬ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ತುಮಕೂರು,ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ಸರ್ಕಾರಿ ಶಾಲಾ ಮಕ್ಕಳ ಪ್ರಗತಿಯತ್ತ ವಿಶೇಷ ಆಸಕ್ತಿ ವಹಿಸುವ ಮೂಲಕ ಜಿಲ್ಲೆಯ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಸುಧಾರಣೆ ತರಬೇಕು. ಮಕ್ಕಳ ಶೈಕ್ಷಣಿಕ ಸ್ಥಿತಿಗತಿಗಳನ್ನು ಮತ್ತಷ್ಟು ಉತ್ತಮಪಡಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಹಾಲನೂರಿನ ಹಾಲಿನಂತ ಮನುಷ್ಯ ಎಲ್ಲಿ ಹೋದ?

0

ಸುಯೋಧನಂಜಯ

ಶಶಿ….ಶಶಿ ಎಂದು ಕರೆದರೂ ಬಾರದ ಆ ಬಾನಿನ ಶಶಿಯಂತೆ, ಇನ್ನೆಂದೂ ಭೌತಿಕವಾಗಿ ಕೈಗೆ ಸಿಗದವನಾಗಿ, ಮತ್ತೆ ಬಾರದವನಾಗಿ ಧೃವ ತಾರೆಯಾಗಿಬಿಟ್ಟ ನನ್ನ ಸ್ನೇಹ ಲೋಕದೊಳಗಿನ ಈ ಶಶಿ.

ತುಮಕೂರು ಜಿಲ್ಲೆಯ ಹಾಲನ್ನೆಲ್ಲಾ ತನ್ನಲ್ಲಿಗೆ ತರಿಸಿಕೊಳ್ಳುವ ಮಲ್ಲಸಂದ್ರದ ಪಕ್ಕದಿಂದ ಹಾದು ಹೋಗುವ ಹಾಲನೂರಿನ ಹಾಲಿನಂಥಹ ಮನಸ್ಸುಳ್ಳ ಶಶಿ ಇನ್ನೂ ನಮಗೆ ನೆನಪು ಮಾತ್ರ ಅಂಥ ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯವಾಗಿರುಷ್ಟಿತ್ತು ನಮ್ಮ ಅವನ ಒಡನಾಟ.

ಆಕಸ್ಮಿಕವಾಗಿ ಪರಿಚಿತನಾದವನು ಆತ್ಮೀಯತೆ ಗಳಿಸಿಕೊಂಡು ನಮ್ಮನ್ನಗಲಿ ಒಂದು ದಿನ ಕಳೆದರೂ ಎಡಬಿಡದೆ ಕಾಡಿದ ವ್ಯಕ್ತಿ .ಕೆಲಸದ ಒತ್ತಡದಿಂದ ಕೋಪಿಸಿಕೊಂಡರು ಆಯ್ತು ಬಿಡ್ಲಾ ದುರ್ಯೋಧನಾ, ಬಾರ್ಲಾ ಟೀ ಕುಡಿದು ಬರೋಣ ಅಂತ ಬೇಗ ಸಮಾಧಾನಕ್ಕೆ ಬರುತ್ತಿದ್ದವನು.ಅಲ್ಲಾ ಕಣ್ಲಾ ಆತ್ಮೀಯ ಸ್ನೇಹಿತಂಗೆ ಬೇಗ ಕೆಲ್ಸ ಮಾಡ್ಕೋಡಲ್ಲಾ ಅಂತಿಯಲ್ಲ? ನಮ್ಮನ್ನೇ ಸತಾಯಿಸ್ತೀಯಾ? ಸ್ನೇಹಿತನ ಕೆಲ್ಸ ಮಾಡಿ ಕೋಡೋ.. ಮಗನೇ ಇಲ್ಲಾಂದ್ರೇ ಟ್ರಾನ್ಸ್ವರ್ ಮಾಡುಸ್ತೀನಿ,ಅಂಥ ನಗು ನಗುತ್ತಲೇ ಹೇಳಿ, ತನ್ನ ಕೆಲಸವನ್ನು ನಯವಾಗೇ ಸಾಧಿಸಿಕೊಂಡು, ಸ್ನೇಹವನ್ನು ಕಾಪಾಡಿಕೊಳ್ಳುತ್ತಿದ್ದ ಸ್ನೇಹಮಯಿ.

ಊರಲ್ಲೇ ಮನೆ ಕಟ್ಟ್ತೀಯಂತೆ ತುಂಬಾ ಒಳ್ಳೆಯ ನಿರ್ಧಾರ ಕಣ್ಣ್ಲಾ. ಹುಷಾರು ಮಗನೇ ಅಲ್ಲಿಗೆ ಹೋಗಿ ದಾನಶೂರ ಕರ್ಣ ಆಗೋಕೆ ಓಗ್ಬೇಡಾ.. ಕಷ್ಟದಲ್ಲಿರೋ ಹಳ್ಳಿ ಜನಕ್ಕೆ, ಅಣ್ಣ-ತಮ್ಮಂದಿರಿಗೆ ಒಂದಿಷ್ಟು ಸವಕೋ..ನಾ ಹೇಳಿದ ಜಾಗದಲ್ಲಿ ಮನೆ ಕಟ್ಲಾ, ನಿನಗೆ ಆಗಿ ಬಂದಿರೋ ಆಯ ವೃಷಭಾಯ ಕಣ್ಲಾ, ನಾವು ಬಸವನ ಕುಲದವರು ನಾನೇಳ್ತೀನಿ ಕೇಳು ನಿಂಗೆ ಒಳ್ಳೆದಾಗುತ್ತೆ ಕಣ್ಲಾ ಅಂತ ಮನ ತುಂಬಿ ಹರಸಿದವನು.ನಿಮ್ಮೂರಿಗೆ ರೋಡೇ ಇಲ್ಲವಲ್ಲೋ.! ನಾನೇಳ್ತೀನಿ ಹಾಗೆ ಮಾಡು ಸರ್ಕಾರದಿಂದ ರಸ್ತೆ ಆಗುತ್ತೆ ಅಂದವನ್ನಲ್ಲದೇ ಕೊನೆಗೆ ಸರ್ವೇ ಮಾಡಿ ಅನುಮೋದನೆಯಾಗುವಂತೆ ಅಂದಾಜು ಪಟ್ಟಿ ತಯಾರಿಸಿ ತಕಾರಿಲ್ಲದೇ ಅನುಮೋದಿಸುವಂತೆ ಮಾಡಿ, ರಸ್ತೆ ನಿರ್ಮಾಣಕ್ಕೆ ಮೂಲ ಕಾರಣ ಕರ್ತನಾಗಿ ನಮ್ಮೂರ ಜನರ ಮೇಲೆ ಋಣ ಭಾರ ಹೊರಿಸಿ ಹೋದವ.

ಬರ್ರೋ ಎಲ್ಲಾದರೂ ಪ್ರವಾಸ ಹೋಗೋಣ ಅಂಥ ಹುರಿದುಂಬಿಸಿ ಹೊರಡಿಸುತ್ತಿದ್ದವನು.ತನ್ನ ಕೊನೆಯ ಜೀವನದ ಪ್ರಯಾಣವನ್ನು ಅಷ್ಟೇ ವೇಗವಾಗಿ ಕಾಲನ ಕರೆಗೆ ಬಿಟ್ಟು ಕೊಟ್ಟು ಅಸಹಾಯಕನಂತೆ ತೆರಳಿದ.ಅದೇಕೋ ಇತ್ತೀಚೆಗೆ ತಿಂಗಳು ಗಟ್ಟಲೇ ಮುಖಾಮುಖಿಯಾಗಲಿಲ್ಲ.ನವೆಂಬರ್ 18 ರಂದು ನಮ್ಮೆಲ್ಲರ ನಂಟನ್ನು ದಾಟಿ ತಿರುಗಿ ಬರಲಾದಷ್ಟು ದೂರ ಹೊರಟು ಹೋಗಿದ್ದ.ಅವನಂಥ ಸ್ನೇಹಿತನ ಕೊನೆ ದರ್ಶನವನ್ನು ನೋಡಲಾಗದಷ್ಟು ದೂರದ ಕೊಪ್ಪಳದಲ್ಲಿದ್ದದ್ದು ನನ್ನ ದುರ್ದೈವ.

ಇಡೀ ರಾಜ್ಯದಲ್ಲಿ ನೀನು ದೂರದುಂಬಿ ಹಿಡಿದು ಸರ್ವೇ ಮಾಡಿದ ರಸ್ತೆಗಳಲ್ಲಿ ಈಗಲೂ ಚಿರಸ್ಥಾಯಿಯಾಗಿ ನಿಂತೆ ಇದ್ದೀಯಾ.ಅಂತಹ ನಿನಗೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುವುದಕ್ಕಿಂತ ಮತ್ತೆ ಹುಟ್ಟಿ ಬರಲೆಂಬುದೇ ಆ ದೇವರಲ್ಲಿ ಈ ಗೆಳೆಯ ಮತ್ತು ಗೆಳೆಯರ ಬಳಗದ ಪ್ರಾರ್ಥನೆ.. ಓ ನಮಃ ಶಿವಾಯ…

ಕಾಮರ್ಸ್ ಗೆ ಹೆಚ್ಚಿದ ಬೇಡಿಕೆ; ಕುಲಪತಿ ಸಿದ್ದೇಗೌಡ

ತುಮಕೂರು: ಜಾಗತೀಕರಣ ಹಾಗೂ ಖಾಸಗೀಕರಣದಿಂದ ವಾಣಿಜ್ಯಶಾಸ್ತ್ರ ಅಧ್ಯಯನಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ತಿಳಿಸಿದರು.

ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದಿಂದ ಆಯೋಜಿಸಿದ್ದ ‘ಟೈಮ್ ವ್ಯಾಲ್ಯೂ ಆಫ್ ಮನಿ ಅಂಡ್ ಕ್ರಿಯೇಟಿಂಗ್ ವ್ಯಾಲ್ಯೂ ಫಾರ್ ಶೇರ್ಹೋಲ್ಡರ್ಸ್’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ವಿಷಯಗಳಿಗೆ ಕೆಲವು ವರ್ಷಗಳ ಹಿಂದೆ ಅಷ್ಟೊಂದು ಮನ್ನಣೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಜಾಗತೀಕರಣ ಮತ್ತು ಖಾಸಗೀಕರಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಬದಲಾವಣೆಗಳಾಗುತ್ತಿವೆ. ಇದರಿಂದ ವಾಣಿಜ್ಯ ಶಾಸ್ತ್ರವನ್ನು ಅಧ್ಯಯನ ಮಾಡಲು ಹೆಚ್ಚು ಮಂದಿ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾಮರ್ಸ್ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಭಾವವನ್ನು ಸಹಜವಾಗಿಯೇ ವಿಸ್ತರಿಸಿಕೊಳ್ಳುತ್ತಿದೆ. ವ್ಯವಹಾರ ಮತ್ತು ನಿರ್ವಹಣೆ ಇಲ್ಲದೆ ಯಾವ ಸಂಸ್ಥೆಯೂ ಪ್ರಗತಿ ಹೊಂದುವುದು ಸಾಧ್ಯವಿಲ್ಲ. ಹೀಗಾಗಿ ಇದನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹೇರಳ ಉದ್ಯೋಗಾವಕಾಶಗಳಿವೆ ಎಂದು ಹೇಳಿದರು.

ವಾಣಿಜ್ಯಶಾಸ್ತ್ರ ಅಧ್ಯಯನ ಮಾಡುವವರು ಕೇವಲ ಪಠ್ಯದ ಜ್ಞಾನಕ್ಕಿಂತ ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ಕುತೂಹಲದಿಂದ ಗಮನಿಸಿ ವ್ಯವಹಾರ ಕುಶಲತೆ ಬೆಳೆಸಿಕೊಳ್ಳಬೇಕು. ಉತ್ತಮ ನಾಯಕತ್ವ ಹಾಗೂ ಸಂವಹನ ಕಲೆ ಬೆಳೆಸಿಕೊಳ್ಳು ವವರಿಗೆ ಉದ್ಯೋಗಕ್ಷೇತ್ರದಲ್ಲಿ ಅಪಾರ ಬೇಡಿಕೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಬಿ.ಎನ್. ಬಹಾದುರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ನ ನಿವೃತ್ತ ಪ್ರಾಧ್ಯಾಪಕ ಪ್ರೊ. ಶಿವರಾಜ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಸುದರ್ಶನ ರೆಡ್ಡಿ, ಹಣಕಾಸು ಅಧಿಕಾರಿ ಪ್ರೊ. ಪಿ. ಪರಮಶಿವಯ್ಯ, ಎಂಬಿಎ ವಿಭಾಗದ ಪ್ರಾಧ್ಯಾಪಕಿ ಪ್ರೊ. ನೂರ್ ಅಫ್ಜಾ, ಸಂಯೋಜಕ ಡಾ. ಕೆ. ಸಿ. ಶಿವಶಂಕರ್, ಎಂಕಾಂ ಸಂಯೋಜಕ ಡಾ. ಎಸ್. ದೇವರಾಜಪ್ಪ ಉಪಸ್ಥಿತರಿದ್ದರು.

ಉರ್ದುಶಾಲೆಯ ಮಕ್ಕಳ ಕನ್ನಡ ಪ್ರೇಮ ಹೀಗಿತ್ತು…

ತುಮಕೂರರು; ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಉರ್ದು ಶಾಲೆಗಳ ಮಕ್ಕಳಿಗೆ ಏರ್ಪಡಿಸಿದ್ದ ಕನ್ನಡ ಪ್ರಬಂಧ ಸ್ಪರ್ಧೆ ಮತ್ತು ಪದ್ಯ ಹೇಳುವ ಸ್ಪರ್ಧೆಯಲ್ಲಿ ವಿಜೇತರಾದ ಸುಮಾರು 85 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಶಸ್ತಿ ಪತ್ರ ಮತ್ತು ಬಹುಮಾನ ಪಡೆದ ವಿದ್ಯಾರ್ಥಿಗಳ ಮುಖದಲ್ಲಿ ಹರ್ಷದ ಹೊನಲು ತುಂಬಿ ತುಳುಕುತ್ತಿತ್ತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ನಗರ ಘಟಕ ಮತ್ತು ಜಿಲ್ಲಾ ಲೇಖಕಿಯರ ಸಂಘದ ಆಶ್ರಯದಲ್ಲಿ ಉರ್ದು ಶಾಲೆಯ ಮುಸ್ಲೀಂ ಮಕ್ಕಳಿಗೆ ಕನ್ನಡ ಕಲಿಸುವ ಬೆಳೆಸುವ ಮತ್ತು ಕನ್ನಡ ಪ್ರೀತಿ ಹೆಚ್ಚಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಿತ್ತು. ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಅನ್ನಪೂರ್ಣ ವೆಂಕಟನಂಜಪ್ಪ ಮತ್ತು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜಿ.ಮಲ್ಲಿಕಾ ಬಸವರಾಜು ಅವರ ಪರಿಶ್ರಮದಿಂದ ಇಂಥದ್ದೊಂದು ಉತ್ತಮ ಕಾರ್ಯಕ್ರಮ ನಡೆಯಿತು.

ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ಪ್ರದಾನ ಮಾಡುತ್ತಿದ್ದರೆ ಉಳಿದ ನೂರಾರು ಮಕ್ಲಳು ಚಪ್ಪಾಳೆ ತಟ್ಟಿ ಖುಷಿಪಟ್ಟರು. ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ರಂಗಧಾಮಪ್ಪ ಮಕ್ಕಳಿಗೆ ಬಹುಮಾನ ವಿತರಿಸಿದರು.

ಕನ್ನಡ ಬಾವುಟದಂಥ ಟೋಪಿಗಳನ್ನು ಧರಿಸಿದ್ದ ಮಕ್ಕಳು ಬಹುಮಾನ ಪಡೆದು ಸಂತಸಗೊಂಡರು.
ತಮ್ಮ ಶಾಲೆಯ ಮಕ್ಕಳು ಬಹುಮಾನ ಪಡೆಯುತ್ತಿದ್ದರೆ ಶಿಕ್ಷಕರು ಸಂತೋಷಗೊಂಡು ಮಕ್ಕಳ ಭಾವಚಿತ್ರಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.

ಉರ್ದು ಶಾಲೆಯ ಸಿಆರ್ ಪಿ ಗಳಾದ ನಜರತ್ ಫಾತಿಮಾ, ಶಮಾಬಾನು, ಬೀಬಿ ಸಾರ ನೂರಾನಿ, ಫಿರ್ದೋಸ್ ಖಾನಂ ಮತ್ತು ಉರ್ದು ಶಾಲೆಯ ಶಿಕ್ಷಕ ವೃಂದ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಬೆಳೆಸಲು ಪ್ರಯತ್ನಿಸಿದರು.

ಇದೇ ವೇಳೆ 9ನೇ ತರಗತಿ ವಿದ್ಯಾರ್ಥಿನಿ ಮುದ್ದ ತೀರ್ಥಹಳ್ಳಿ ವಿರಚಿತ ಹಾಗೂ ಸಾಹಿತಿ ಎಲ್. ಮುಕುಂದರಾಜ್ ನಿರ್ದೇಶಿಸಿರುವ ಕಾಡ ಹಾದಿಯ ಹೂಗಳು ಸಿನಿಮಾ ಪ್ರದರ್ಶಿಸಲಾಯಿತು. ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತರು ಇದ್ದಾರೆ. ಅವರನ್ನು ಗುರುತಿಸುವ ಮತ್ತು ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಕೆಲಸ ಆಗಬೇಕು ಎಂಬುದನ್ನು ಸಿನಿಮಾ ಸಾರಿ ಹೇಳಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಪ್ಪ ಉರ್ದು ಶಾಲೆಗಳ ಮಕ್ಕಳು ಕನ್ನಡ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಕೆಲಸ ಮಾಡಿರುವ ಆಯೋಜಕರಿಗೆ ಅಭಿನಂದನೆಗಳು ಸಲ್ಲಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ. ಬಾ.ಹ.ರಮಾಕುಮಾರಿ ಮಾತನಾಡಿರರು. ಕಾರ್ಯಕ್ರಮದಲ್ಲಿ ಪೂರ್ಣಿಮ ಜಯಣ್ಣ, ಮುಷ್ತಾಕ್ ಅಹಮದ್, ಸಿಆರ್ಪಿಗಳಾದ ನಜûಹತ್ ಫಾತಿಮಾ, ಶಮಾಬಾನು, ಬೀಬಿ ಸಾರ ನೂರಾನಿ, ಫಿರ್ದೋಸ್ ಖಾನಂ ಉಪಸ್ಥಿತರಿದ್ದರು. ಗೀತಾ ನಾಗೇಶ್ ಸ್ವಾಗತಿಸಿದರು. ಸುಭಾಷಿಣಿ ಆರ್. ಕುಮಾರ್ ಪ್ರಾರ್ಥಿಸಿದರು. ಲೇಖಕಿ ಸಿ.ಎಲ್.ಸುನಂದಮ್ಮ ಕಾರ್ಯಕ್ರಮ ನಿರೂಪಿಸಿದರು.

47 ನೇ ಮುಖ್ಯ ನ್ಯಾಯಮೂರ್ತಿಯಾಗಿ ಎಸ್ ಎ ಬೊಬ್ಡೆ ಪ್ರಮಾಣವಚನ

ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ಭಾರತದ 47 ನೇ ಮುಖ್ಯ

ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರು ಪ್ರಮಾಣವಚನ ಬೋದಿಸಿದರು.

ನಾಗಪುರ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದ ನಂತರ ನ್ಯಾಯಮೂರ್ತಿ ಬೊಬ್ಡೆ, 1978 ರಲ್ಲಿ ಮಹಾರಾಷ್ಟ್ರದ ಬಾರ್ ಕೌನ್ಸಿಲ್‌ಗೆ ಸೇರಿದರು.

ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ 21 ವರ್ಷಗಳ ಕಾಲ ಅಭ್ಯಾಸ ಮಾಡಿದ ಇವರು ಸುಪ್ರೀಂ ಕೋರ್ಟ್‌ನ ಮುಂದೆ ವಕೀಲರಾಗಿ ಹಲವರು ಪ್ರಕರಣಗಳಲ್ಲಿ ಹಾಜರಾಗಿದ್ದರು. ಅವರನ್ನು 1998 ರಲ್ಲಿ ಹಿರಿಯ ವಕೀಲರಾಗಿ ನೇಮಿಸಲಾಯಿತು ಮತ್ತು ನಂತರ ಮಾರ್ಚ್, 2000 ರಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. 2013 ರ ಏಪ್ರಿಲ್‌ನಲ್ಲಿ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಪದೊನ್ನತಿಗೊಳಿಸಲಾಗಿತ್ತು.

ಗೌಪ್ಯತೆ ಹಕ್ಕನ್ನು ಮೂಲಭೂತ ಹಕ್ಕು, ಇತ್ತೀಚಿನ ಅಯೋಧ್ಯ ಶೀರ್ಷಿಕೆ ವಿವಾದ, ಪುಟ್ಟಸ್ವಾಮಿ ಪ್ರಕರಣದಂತಹ ಹಲವಾರು ಪ್ರಮುಖ ಪೀಠಗಳಲ್ಲಿ ಇವರು ಕಾರ್ಯ ನಿರ್ವಹಿಸಿದ್ದರು.

ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ಇಂದೂ ಮಲ್ಹೋತ್ರಾ ಅವರೊಂದಿಗೆ ಸಿಜೆಐ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸಿದರು.

ಕೊಲಿಜಿಯಂಗೆ ಜಸ್ಟಿಸ್ ಬಾನುಮತಿ : ದಶಕದ ನಂತರ‌ ಮಹಿಳೆಗೆ ಒಲಿದ ಉನ್ನತ ಸ್ಥಾನ

ದಶಕಗಳ ನಂತರ ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಕೊಲಿಜಿಯಂ ಸದಸ್ಯೆಯಾಗಿ ನ್ಯಾಯಮೂರ್ತಿ ಆರ್.ಭಾನುಮತಿ ನೇಮಕವಾಗಿದ್ದಾರೆ. 2006ರಲ್ಲಿ ನಿವೃತ್ತರಾಗಿದ್ದ ರುಮಾ ಪಾಲ್ ನಂತರ ಕೊಲಿಜಿಯಂನ ಮಹಿಳಾ ಸದಸ್ಯರಾಗಿ ಆಯ್ಕೆಯಾಗಿರುವ ಸದಸ್ಯೆಯಾಗಿದ್ದಾರೆ.

ಸುಪ್ರಿಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗಯ್ ಇಂದು ನಿವೃತ್ತರಾಗುತ್ತಿದ್ದು. ಸುಪ್ರಿಂ ಕೋರ್ಟ್ನ ಜೇಷ್ಠತೆಯ ಆಗ್ರ ಐವರು ಕೊಲಿಜಿಯಂ ಸದಸ್ಯರಾಗಿರಲಿದ್ದಾರೆ. ಸುಪ್ರಿಂ ಕೋರ್ಟ್ನ 34 ನ್ಯಾಯಾಧೀಶರಲ್ಲಿ ಮೂವರು ಮಾತ್ರ ಮಹಿಳಾ ನ್ಯಾಯಾಧೀಶರಿದ್ದಾರೆ.

ದಕ್ಷಿಣ ಭಾರತದ ತಮಿಳಿನಾಡು ಮೂಲದ ಇವರು2014ರಲ್ಲಿ ಸುಪ್ರಿಂ ಕೋರ್ಟ್ ನ ನ್ಯಾಯಾಧೀಶರಾಗಿ ನೇಮಕವಾಗಿದ್ದರು.

ಜಿಲ್ಲಾ ಸೆಷನ್,ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾಗಿ ಹಾಗೂ ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದ ಇವರು 2014ರಲ್ಲಿ ಸುಪ್ರಿಂ ಕೋರ್ಟ್ ಗೆ ಪದೋನ್ನತಿ ಪಡೆದಿದ್ದರು. ಜುಲೈ 19,2020 ರಲ್ಲಿ ನಿವೃತ್ತರಾಗಲಿರುವ ಭಾನುಮತಿ ಒಂಬತ್ತು ತಿಂಗಳು ಕೊಲಿಜಿಯಂ ಸದಸ್ಯರಾಗಿರಲಿದ್ದಾರೆ.

ಇದುವರೆಗೂ ಸುಪ್ರಿಂ ಕೋರ್ಟ್ 8 ಮಂದಿ ಮಹಿಳಾ ನ್ಯಾಯಾಧೀಶರನ್ನು ಮಾತ್ರ ನೋಡಿದ್ದರೆ.ಸುಪ್ರಿಂ ಇತಿಹಾಸದಲ್ಲಿ ಇದುವರೆಗೂ ಯಾರೂ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿಲ್ಲ.

ನಿರ್ವಹಿಸಿದ ಪ್ರಮುಕ ಪ್ರಕರಣಗಳು:-
ನಿರ್ಭಯಾ ಹತ್ಯೆ ಆರೋಪಿಗೆ ಮರಣದಂಡಣೆ ವಿಧಿಸಿದ ತ್ರಿಸದಸ್ಯ ಪೀಠದ ಭಾಗವಾಗಿದ್ದರು.
INX MEDIA ಪ್ರಕರಣದಲ್ಲಿ ಚಿದಂಬರಂಗೆ ಜಾಮೀನು ನಿರಾಕರಿಸಿದ್ದರು.
ಮಧ್ಯಪ್ರದೇಶದ ಹೈಕೊರ್ಟ್ ನ್ಯಾಯಾಧೀಶರಾಗಿದ್ದ ಗಂಗಲೆ ವಿರುದ್ಧದ ಲೈಂಗಿಕ ದೌರ್ಜನ್ಯ ವಿಚಾರಣಾ ಸಮಿತಿ ಮುಖ್ಯಸ್ಥರಾಗಿದ್ದರು.

ಕೋರಾದ ಅಂಕಿತಾ ಪ್ತಶ್ನೆಗೆ ದಂಗು ಬಡಿದರು…

ಕೋರ ಗ್ರಾಮ ಪಂಚಾತಿಯು ಮಕ್ಕಳ ಗ್ರಾಮ ಸಭೆಯನ್ನು ಗ್ರಾಮ ಪಂಚಾತಿಯ ಆವರಣದಲ್ಲಿ ನಡೆಸಲಾಯಿತು. ಮಕ್ಕಳ ಗ್ರಾಮ ಸಭೆಯಲ್ಲಿ ಸರ್ಕಾರಿ ಶಾಲೆ ಏಳನೇ ತರಗತಿ ಅಂಕಿತ ಶಾಲಾ ಆವರಣದಲ್ಲಿ ವಿದ್ಯುತ್ ಕಂಬ ಇದ್ದು ಅದನ್ನು ತಕ್ಷಣವೇ ತೆರವುಗೊಳಿಸುವಂತೆ ಒತ್ತಾಯಿಸಿದರು.

ಜಿಲ್ಲಾ ಮಕ್ಕಳ ತನಿಖಾ ಸಮಿತಿಯ ಕೆ.ಟಿ ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಜೀವಿಸುವ ಹಕ್ಕು ರಕ್ಷಣಾ ಹಕ್ಕು, ಭಾಗವಹಿಸುವ ಹಕ್ಕು, ವಿಕಾಸ ಹೊಂದುವ ಹಕ್ಕುಗಳ ಬಗ್ಗೆ ತಿಳುವಳಿಕೆ ಮೂಡಿಸಿದರು.

ಭಾರತ ಸರ್ಕಾರ ಮಕ್ಕಳ ಹಕ್ಕುಗಳ ಒಡಂಬಡಿಕೆ ವಿಶ್ವ ಸಂಸ್ಥೆಗೆ ಸಲ್ಲಿಸಿ 30 ವರ್ಷ ಕಳೆದಿದೆ. ಭಾರತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ 40ರಷ್ಟು ಮಕ್ಕಳಿದ್ದಾರೆ. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ರಾಜ್ಯದ ಎಲ್ಲಾ ಪಂಚಾಯತಿಗಳು ಕೂಡ ಮಕ್ಕಳ ಗ್ರಾಮಸಭೆ ನಡೆಸಬೇಕು. ಮಕ್ಕಳ ಹಕ್ಕುಗಳ ಕುಂದು ಕೊರತೆಗಳು ಮತ್ತು ಸಮಸ್ಯೆಗಳನ್ನು ಹಂಚಿಕೊಳ್ಳಲು ಒಂದು ವೇದಿಕೆ ಕೊಡಬೇಕು.

ವೇದಿಕೆ ಬಳಸಿಕೊಳ್ಳಲು ಅವಕಾಶ ನೀಡಬೇಕು. ಊರು, ಶಾಲೆಯ ಹಾಗೂ ವ್ಯಯಕ್ತಿಕ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು ಎಂದರು.

ಮಕ್ಕಳ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷ ನಜೀರ್ ಅಹಮ್ಮದ್ ಮಾತನಾಡಿ ನಮ್ಮ ಪಂಚಾಯತಿ ಹಿಂದಿನ ಮಕ್ಕಳ ಗ್ರಾಮ ಸಭೆಯಲ್ಲಿ ಕೇಳಿದ ಸಮಸ್ಯೆಗಳನ್ನು ನಾವು ಬಗೆಹರಿಸಿದ್ದೇವೆ. ಮಕ್ಕಳು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿದ್ದಾರೆ. ಮಕ್ಕಳು ಕೇಳಿದ ಸಮಸ್ಯೆಗೆಳು ನಾವು ಬಗೆಹರಿಸಿದ ಮೇಲೆ ಅದನ್ನು ಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ಹೇಳಿದರು.

ಸಭೆಯಲ್ಲಿ 9 ಶಾಲೆಯ 121 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು ಮಕ್ಕಳು 31 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಶಾಲೆಯ, ಊರಿನ, ನೆರೆಹೊರೆ ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ಕೇಳಿದರು.

ಪುಟಾಣಿ ಭೀಮಾರ್ಜುನರ ಸಮಾಗಮ

ತುಮಕೂರು:
ಮಕ್ಕಳು ಏನು ಮಾಡಿದರು ಅದು ಚೆಂದವಾಗೆ ಕಾಣುತ್ತೆ. ಮುಗ್ದ ಮನಸ್ಸಿನಿಂದ ಮಾತನಾಡುವುದನ್ನು ಕೇಳುವುದೇ ಅದೊಂದು ಆನಂದ. ಅಂತಹ ಮಕ್ಕಳು ಇನ್ನು ವೇಶಭೂಷಣ ತೊಟ್ಟು ಹಿರಿಯರಂತೆ ನಟಿಸಿ, ನರ್ತನ ಮಾಡಿದರೆ ಅಬ್ಬಾ.. ನಯನ ಮನೋಹರವೇ ಸರಿ.
ಕೃಷ್ಣ, ಕುಚೇಲ, ಭೀಮ, ಧುರ್ಯೋಧನ, ಅರ್ಜುನ, ಧರ್ಮರಾಯ, ಬಲರಾಮ, ಈಶ್ವರ, ಯಮಧರ್ಮ, ಸಾತ್ಯಕಿ, ನರ್ತಕಿ ಹೀಗೆ ಘತಕಾಲದ ಪೌರಾಣಿಕ ಪಾತ್ರದಾರಿಗಳೆ ಅಲ್ಲಿ ಮೈಳೈಸಿದ್ದರು. ಈ ಒಂದು ವೇದಿಕೆಗೆ ಸಾಕ್ಷಿಯಾಗಿದ್ದು ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ.


ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿಯನ್ನು ಬಾಲಕಿಯರ ಪ್ರೌಢಶಾಲೆಯಲ್ಲಿ ಏರ್ಪಡಿಸಿತ್ತು. ಕ್ಲಸ್ಟರ್ ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ ಆಯ್ಕೆಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿವಿಧ ಬಗೆಯ ಉಡುಗೆ ತೊಡೆಗೆಯಲ್ಲಿ ಕಂಗೊಳಿಸುತ್ತಿದ್ದರು. ಬೆಳಿಗ್ಗೆ 10.30ಕ್ಕೆ ಇದ್ದ ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿದೆಡೆಗಳಿಂದ ವೇಷಭೂಷಣ ತೊಟ್ಟ ವಿದ್ಯಾರ್ಥಿಗಳನ್ನು ಶಿಕ್ಷಕರು, ಪೋಷಕರು ಆಟೋಗಳಲ್ಲಿ, ದ್ವಿಚಕ್ರವಾಹನಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಶಾಲಾ ಆವರಣಕ್ಕೆ ಕರೆತಂದು ಒಂದೊಮ್ಮೆ ಪೂರ್ವತಯಾರಿ ನಡೆಸುತ್ತಿದ್ದದ್ದು ಕಂಡು ಬಂತು. ಈ ವೇಳೆ ಪೋಷಕರು, ಶಿಕ್ಷಕರು ತಮ್ಮ ಮಕ್ಕಳಿಗೆ `ಹೀಗಲ್ಲಾ, ಹೀಗೆ, ಇನ್ನೂ ಸರಿಯಾಗಿ ಅಭಿನಯ ಬರಬೇಕು. ಅಟ್ಟಹಾಸದ ನಗು ಇರಬೇಕು. ಮಂಕಾಗಿ ಇರಬೇಡ, ನಗ್ತಾನಗ್ತಾ ಇರು’ ಎಂದೆಲ್ಲಾ ಒತ್ತಿಒತ್ತಿ ಹೇಳುತ್ತಿದ್ದರು. ಇದಕ್ಕೆ ಮಕ್ಕಳು ತಲೆಯಾಡಿಸಿ ಅಪ್ಪಣೆ ಸೂಸುತ್ತಿದ್ದವು.


ಭಷ್ಯದ ಕಥೆಗಾರರು, ಹಾಡುಗಾರರು, ವಚನಕಾರರು, ಮಾತುಗಾರರು, ಬರಹಗಾರರು, ಕವಿಗಳು, ಚಿತ್ರಕಾರರು, ಕಲಾವಿದರು.. ಅಬ್ಬಾ.. ಎತ್ತ ನೋಡಿದರು ಪುಟಾಣಿ ಪ್ರತಿಭೆಗಳಿಂದ ಶಾಲಾ ಆವರಣ ತುಂಬಿ ತುಳುಕುತ್ತಿತ್ತು. ಪುಟಾಣಿ ಕೈಗಳಲ್ಲಿ ಕುಂಚ ಹಿಡಿದು ಚಿತ್ರ ಬಿಡಿಸುತ್ತಿದ್ದ ದೃಶ್ಯ ಎಂತಹ ಕಲಾಕಾರನ್ನು ನಾಚುಸುವಂತಿತ್ತು. ಪೌರಾಣಿಕ ತುಣುಕುಗಳಲ್ಲಿ ಭೀಮಾರ್ಜುನರ ಕಾಳಗದಲ್ಲಿ ಪುಟಾಣಿ ಮಕ್ಕಳ ಡೈಲಾಗ್ ಗಳು ನುರಿತ ಕಲಾವಿದರನ್ನೇ ಮೂದಲಿಸುತ್ತಿತ್ತು.
ಡೊಳ್ಳು ಕುಣಿತ, ಯಕ್ಷಗಾನ, ವೀರಗಾಸೆ, ಸೋಮನ ಕುಣಿತ, ಕರಡಿ ಕುಣಿತ, ಕುಚುಪುಡಿ, ಕಥಕ್ಕಳಿ, ಭರನಾಟ್ಯ. ಕೋಲಾಟ ಹೀಗೆ ಜಾನಪದ ಲೋಕವನ್ನೆ ಶಿಕ್ಷಕರು ಸೃಷ್ಟಿ ಮಾಡಿದ್ದರು. ಇದನ್ನೂ ಮೀರಿಸುವಂತೆ ಆಧುನಿಕ ಹಾಡುಗಳಿಗೆ ಪುಟಾಣಿ ಮಕ್ಕಳು ಹೆಜ್ಜೆ ಹಾಕುತ್ತಿದ್ದ ದೃಶ್ಯ ನೋಡುಗರ ಕಣ್ಮನ ಸೆಳೆದಿತ್ತು.


ಸ್ಪರ್ಧೆಗಿಂತಲೂ ಮಕ್ಕಳು ಮುಗ್ದ ಮನಸ್ಸಿನಲ್ಲಿ ಪ್ರತೀ ವಿಭಾಗಕ್ಕೂ ತಮ್ಮದೇ ಆದ ಶೈಲಿಯಲ್ಲಿ ತಯಾರಾಗಿ ಬಂದಿದ್ದ ರೀತಿ ಶಿಸ್ತುಬದ್ಧವಾಗಿತ್ತು. ಈ ಒಂದು ಸನ್ನಿವೇಶ ಸಮಾರಂಭ ಆಯಾಯ ಶಾಲೆಯಲ್ಲಿನ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ಕರೆತಂದಿದ್ದರು. ಒಬ್ಬರಿಗಿಂತ ಒಬ್ಬರು ಏನೂ ಕಮ್ಮಿ ಇಲ್ಲವೇನೋ ಎಂಬಂತೆ ಪುಟಾಣಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಆಯ್ಕೆ ಮಾಡಲು ಕುಳಿತಿದ್ದ ತೀರ್ಪುಗಾರರಿಗೂ ಯಾರನ್ನು ಆಯ್ಕೆ ಮಾಡಬೇಕು. ಎಲ್ಲರೂ ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ಸ್ಪರ್ಧೆ ಒಡ್ಡುತ್ತಿದ್ದಾರೆ ಎಂಬ ಗೊಂದಲ ಉಂಟು ಮಾಡಿದ್ದಂತೂ ಸತ್ಯ. ಏನೇ ಇರಲಿ ಮಕ್ಕಳು ಏನೇ ಮಾಡಿದರೂ ಚೆನ್ನ ಎಂಬುದಕ್ಕೆ ಈ ಕಾರ್ಯಕ್ರಮ ಅಕ್ಷರ ಸಹ ಸಾಕ್ಷಿಯಾಗಿತು.

ಫೆ.13 ರಿಂದ ದೇವರಾಯನದುರ್ಗದ ಕುಂಭಾಭಿಷೇಕ

0

ತುಮಕೂರು: ದೇವರಾಯನದುರ್ಗ ಗ್ರಾಮದಲ್ಲಿ ಫೆಬ್ರವರಿ ಮಾಹೆಯ 13, 14 ಮತ್ತು 15ರಂದು ಯೋಗಲಕ್ಷ್ಮೀನರಸಿಂಹಸ್ವಾಮಿ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.

ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ರಾಜಗೋಪುರ ಕಳಾಕರ್ಷಣೆ ನವೆಂಬರ್ 22ರಂದು ನಡೆಯಲಿದೆ. ಕ್ಷೇತ್ರದ ಬ್ರಹ್ಮರಥೋತ್ಸವ ರಥದ ನಿಲುಗಡೆ ಸ್ಥಳವನ್ನು ತಗ್ಗಿಸಿ ಸಮತಟ್ಟು ಮಾಡಿಸಿ ಸುಭದ್ರತೆ ಮಾಡುವುದು, ಭೋಗನರಸಿಂಹಸ್ವಾಮಿ ದೇವಾಲಯದ ಪ್ರಾಕಾರದಲ್ಲಿ ಗ್ರಿಲ್ ಅಳವಡಿಸುವುದು, ದೇವಾಲಯದ ಅನುಪಯುಕ್ತ ಸಾಮಗ್ರಿಗಳನ್ನು ವಿಲೇವಾರಿ ಮಾಡುವುದು ನೂತನ ನಿತ್ಯ ಅನ್ನಸಂತರ್ಪಣಾ ಭವನದ ಮೇಲ್ಭಾಗದ ಕೊಠಡಿಗಳಿಗೆ ಪೀಠೋಪಕರಣಗಳನ್ನು ಹಾಗೂ ಇತರೆ ಅವಶ್ಯಕ ವಸ್ತುಗಳನ್ನು ಖರೀದಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ.

ಸಭೆಯಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಸಿ.ಎಲ್. ಶಿವಕುಮಾರ್, ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ವ್ಯವಸ್ಥಾಪನ, ಯೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಎನ್.ನರಸಿಂಹಭಟ್ಟರ್, ಭೋಗನರಸಿಂಹಸ್ವಾಮಿ ದೇವಾಲಯದ ವೆಂಕಟರಾಜಭಟ್ಟರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಕುಂಭಾಭಿಷೇಕ ಮಹೋತ್ಸವದ ದಾನಿಗಳು ಉಪಸ್ಥಿತರಿದ್ದರು.

ಸಾಕ್ಷರತೆಯ ಸಾಕಾರ

0

ತುಮಕೂರು ತಾಲ್ಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಸಾಮಗ್ರಿ ವಿತರಣಾ ಸಮಾರಂಭಕ್ಕೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಚಾಲನೆ ನೀಡಿದರು. ಹೆಗ್ಗೆರೆಯ ಕಲಿಕಾ ಕೇಂದ್ರವು ಹೆಗ್ಗೆರೆ ಗ್ರಾಮ ಪಂಚಾಯತಿಯಯನ್ನು ಸಂಪೂರ್ಣ ಸಾಕ್ಷರತಾ ಪಂಚಾಯತಿಯನ್ನಾಗಿ ರೂಪಿಸಲು ಇಟ್ಟಿರುವ ಹೆಜ್ಜೆ ಶ್ಲಾಘನೀಯ, ಅನಕ್ಷರಸ್ಥರು ಈ ಕಲಿಕಾ ಸಾಮಗ್ರಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ನಿವೃತ್ತ ತಹಶೀಲ್ದಾರ್ ವೈ.ಕಾಂತವೀರಯ್ಯ ಮಾತನಾಡಿ, ವಿದ್ಯೆಯುಳ್ಳವನ ಮುಖವು ಮುದ್ದು ಬರುವಂತಕ್ಕದ್ದು-ವಿದ್ಯೆಯಿಲ್ಲದವನ ಮುಖವು ಹಾಳೂರ ಹದ್ದಿನಂತಕ್ಕದ್ದು’ ಎಂಬ ಸರ್ವಜ್ಞನ ವಚನವನ್ನು ಉಲ್ಲೇಖಿಸಿ ಹೆಗ್ಗೆರೆ ಗ್ರಾಮಪಂಚಾಯತಿಯನ್ನು ಸಂಪೂರ್ಣ ಸಾಕ್ಷರತಾ ಪಂಚಾಯತಿಯನ್ನಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಅನಕ್ಷರಸ್ಥರು ಕಲಿಕಾ ಕೇಂದ್ರಕ್ಕೆ ಹಾಜರಾಗಿ ಅಕ್ಷರ ಜ್ಞಾನವನ್ನು ಹೊಂದಬೇಕೆಂದು ಮನವಿ ಮಾಡಿದರು.

ಗ್ರಾ.ಪಂ. ಅಧ್ಯಕ್ಷ ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಗ್ರಾ.ಪಂ. ಸದಸ್ಯ ಭೋಜಣ್ಣ, ವಯಸ್ಕರ ಶಿಕ್ಷಣಾಧಿಕಾರಿ ಬಾಲಾಜಿ, ನರಸಿಂಹಮೂರ್ತಿ, ಶಿವರುದ್ರಯ್ಯ, ಸೋಮಶೇಖರ್, ಕುಮಾರ್, ಎಂ.ಕೃಷ್ಣಯ್ಯ, ಚಂದ್ರಶೇಖರಗೌಡ, ರಾಜಣ್ಣ, ಗಂಗಾಧರಪ್ಪ, ರಂಗಲಕ್ಷ್ಮಿ, ಮತ್ತಿತರರು ಉಪಸ್ಥಿತರಿದ್ದರು