Friday, October 17, 2025
Google search engine
Home Blog Page 6

ಸರ್ಕಾರಿ ಶಾಲೆ ಮಕ್ಕಳಿಗೆ ವೇದಿಕೆಯಾದ ಆದಿಚುಂಚಗಿರಿ ವಿಶ್ವವಿದ್ಯಾನಿಲಯ

ರಸಾಯಶಾಸ್ತ್ರದ ಪ್ರಯೋಗಗಳಿಗೆ ಸಾಥ್ ನೀಡಿದ ಹಳ್ಳಿ ಮಕ್ಕಳು

 

 ಬಾಲಗಂಗಾಧರನಾಥ ಸ್ವಾಮೀಜಿ ನಗರ:  ಇಲ್ಲಿನ ಆದಿಚುಂಚನಗಿರಿ ವಿಶ್ವವಿದ್ಯಾಲಯವು(ACU) ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ (RSC) ಭಾರತ  ಘಟಕದ ಸಹಯೋಗದೊಂದಿಗೆ  ಆಯೋಜಿಸಿದ್ದ ಯೂಸೂಫ್  ಹಮೀದ್ ರಸಾಯನಶಾಸ್ತ್ರ ಶಿಬಿರ ಸರ್ಕಾರಿ ಶಾಲೆಯ ಮಕ್ಕಳಿಗೆ ರಸಾಯನಶಾಸ್ತ್ರದ ಹೊಸಲೋಕವನ್ನೇ ತೆರೆದಿಟ್ಟಿತು.

ಮಂಡ್ಯ, ಹಾಸನ, ತುಮಕೂರಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ರಸಾಯನಶಾಸ್ತ್ರದ ಪ್ರಯೋಗಗಳಿಗೆ ತೆರೆದುಕೊಂಡು ಬೆರಗುಮೂಡಿಸಿದರು. ಮಕ್ಕಳಲ್ಲಿನ ರಸಾಯನಶಾಸ್ತ್ರದ ಕುತೂಹಲ ತಣಿಸಿದ ಶಿಬಿರವು,  ಅವರಲ್ಲಿನ ರಸಾಯನಶಾಸ್ತ್ರದ ಕಡೆಗಿನ ಆಸಕ್ತಿಗೆ ಬೆಳಕಿಂಡಿಯಾಯಿತು. ಡಿ.4ರಿಂದ 6ರವರೆಗೆ ಶಿಬಿರ ನಡೆಯಿತು. 
 
 ಶಿಬಿರದಲ್ಲಿ  ಮೂರು ಜಿಲ್ಲೆಗಳ 9ನೆ ತರಗತಿಯ 83 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳಿಗೆ  ವಿಷಯದ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ರಸಾಯನಶಾಸ್ತ್ರದ ಕಲಿಕೆಯನ್ನುಆನಂದದಿಂದ ಆಸ್ವಾದಿಸುವುದು ಹೇಗೆಂದು ವಿವಿಧ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟರು.
ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ರಸಾಯನಶಾಸ್ತ್ರವನ್ನು ಅನ್ವೇಷಿಸಲು ಶಿಬಿರ ಅವಕಾಶ ಒದಗಿಸಿತು. ವಿಶ್ವವಿದ್ಯಾಲಯದ ಮಟ್ಟದಲ್ಲಿ ಮತ್ತು ಅದರಾಚೆಗೆ ರಸಾಯನಶಾಸ್ತ್ರವನ್ನು ಮುಂದುವರಿಸಲು ಮಕ್ಕಳನ್ನು  ಪ್ರೇರೇಪಿಸಿತು.
ಇದು ಯೂಸುಫ್ ಹಮೀದ್ 66ನೇ ರಸಾಯನಶಾಸ್ತ್ರ ಶಿಬಿರವಾಗಿತ್ತು.  ಯೂಸುಫ್ ಹಮೀದ್ ಸ್ಪೂರ್ತಿದಾಯಕ ವಿಜ್ಞಾನ ಕಾರ್ಯಕ್ರಮದ ಭಾಗವಾಗಿ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಈ ಶಿಬಿರ ಆಯೋಜಿಸಲಾಗಿತ್ತು.
 
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಸುರಕ್ಷತಾ ಪರಿಕರಗಳು ಮತ್ತು ಸಲಕರಣೆಗಳನ್ನು ಪರಿಚಯಿಸಲಾಯಿತು.  ಬಣ್ಣ ರಚನೆ, ಸ್ಫಟಿಕೀಕರಣ, ಫೋರೆನ್ಸಿಕ್ ಚಾಲೆಂಜ್, ಗಡಿಯಾರ ಪ್ರತಿಕ್ರಿಯೆಗಳು, ಲೋಳೆ ಪ್ರತಿಕ್ರಿಯೆ, ಜಾಗತಿಕ ಕಾಯಿನ್ ಬ್ಯಾಟರಿ ಪ್ರಯೋಗ ಮತ್ತು ಇತರ ಕಿರು ಪ್ರಯೋಗಗಳು ಸೇರಿದಂತೆ ವಿವಿಧ ಪ್ರಯೋಗಗಳನ್ನು ಮಕ್ಕಳಿಂದ ಮಾಡಿಸಲಾಯಿತು. ಹಲವು ಪ್ರಯೋಗಗಳನ್ನು ಅವರಿಗೆ ಹೇಳಿಕೊಡಲಾಯಿತು,
ಕುಲಪತಿಗಳಾದ ಡಾ. ಎಂ ಎ ಶೇಖರ್
 ಎಸಿಯುನ ಉಪಕುಲಪತಿಗಳಾದ ಪ್ರೊ.ಎಂ.ಎ.ಶೇಖರ್ ಮಾತನಾಡಿ, “ರಸಾಯನಶಾಸ್ತ್ರವು ನಮ್ಮ ಸುತ್ತಲೂ ಇದೆ, ಮತ್ತು ಅದನ್ನು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಹಲವು ವಿಧಗಳಲ್ಲಿ ಬಳಸಿಕೊಳ್ಳ ಬಹುದು. ಇದು ಔಷಧಿಗಳ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ರಾಸಾಯನಿಕ ಜೀವಶಾಸ್ತ್ರದ ಪ್ರಗತಿಯೊಂದಿಗೆ, ವಿದ್ಯಾರ್ಥಿಗಳು ಮಾಲಿನ್ಯದಂತಹ ಸವಾಲುಗಳನ್ನು ಎದುರಿಸುವ ಮೂಲಕ ರಾಷ್ಟ್ರ-ನಿರ್ಮಾಣಕ್ಕೆ ಕೊಡುಗೆ ನೀಡಬಹುದು’ ಎಂದು ಹೇಳಿದರು.
ಕುಲಸಚಿವರಾದ ಡಾ. ಸಿ ಕೆ ಸುಬ್ರಾಯ
ಎಸಿಯುನ ಕುಲಸಚಿವರಾದ ಪ್ರೊ. ಸಿ.ಕೆ.ಸುಬ್ಬರಾಯ ಅವರು ಮಾತನಾಡಿ,  "ವಿಶ್ವವಿದ್ಯಾನಿಲಯ ಪ್ರಾರಂಭವಾದಗಿನಿಂದಲೂ  ನೆರೆಹೊರೆಯ ಶಾಲೆಗಳು ಮತ್ತು ಸಂಸ್ಥೆಗಳೊಂದಿಗೆ ಸಂಪರ್ಕ ಕಾರ್ಯಕ್ರಮಗಳ ಆಯೋಜಿಸುತ್ತಾ ಅಲ್ಲಿನ ಮಕ್ಕಳ  ಶಿಕ್ಷಣದ ಬೆಳವಣಿಗೆಗೂ ಒತ್ತು ನೀಡುತ್ತಿದೆ.  ಗ್ರಾಮೀಣ  ವಿದ್ಯಾರ್ಥಿಗಳಲ್ಲಿ ವಿಜ್ಞಾನ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸಿ ಅವರು ವಿಜ್ಞಾನ ಶಿಕ್ಷಣ  ಅಧ್ಯಯನಕ್ಕೆ  ಪ್ರರೇಪಿಸುವುದು ವಿ.ವಿಯ ಗುರಿಯಾಗಿದೆ ಎಂದರು.

ಎಸಿಯುನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಡೀನ್ ಡಾ. ಕೆ. ಪ್ರಶಾಂತ ಕಾಳಪ್ಪ ಅಚರ ಮಾತನಾಡಿ,  ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಭಾರದ ಘಟಕದ ಸಹದ್ಯೋಗಿಗಳು ದೇಶದಲ್ಲಿ ರಸಾಯನಶಾಸ್ತ್ರ ಶಿಬಿರಗಳನ್ನು ಆಯೋಜಿಸುವ ಮೂಲಕ ಭಾರತದ ಶಿಕ್ಷಣ ಸಮುದಾಯದೊಂದಿಗೆ ಕೆಲಸ ಮಾಡುತ್ತಿದೆ. ಕೆಮಿಸ್ಟ್ರಿಯ ಅಧ್ಯಯನ ಬೆಂಬಲಿಸುತ್ತಿದೆ. ಇದರಿಂದಾಗಿ ಅಂತರರಾಷ್ಟ್ರೀಯ ರಾಸಾಯನಿಕ ವಿಜ್ಞಾನಗಳ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಪ್ರಯೋಜನ ದಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ಎಸಿಯು ಪ್ರಾಧ್ಯಾಪಕರು ಪ್ರಯೋಗಾಲಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ವಿವಿಧ ಸಂಸ್ಥೆಗಳಿಗೆ ಮಕ್ಕಳು ಭೇಟಿ ನೀಡಿದರು.  
ಹಿರೀಸಾವೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಖಿತಾ  ಶಿಬಿರದ ಕುರಿತು ತನ್ನ  ಅನುಭವ ಹಂಚಿಕೊಳ್ಳುತ್ತಾ, 
‘ಶಿಬಿರದ ದಿನಕ್ಕಾಗಿ ನಾನು ಕಾತುರಗಳಾಗಿದ್ದೆ, ಇಲ್ಲಿ ನಾವು   ರಾಸಾಯನಿಕಗಳ ಬಗ್ಗೆ ಅನೇಕ ಹೊಸ ವಿಷಯಗಳನ್ನು ಕಲಿತೆ. ಹೇಗೆ ವಿವಿಧ ಬಣ್ಣಗಳನ್ನು ಉತ್ಪಾದಿಸಬಹುದು ಎಂದು ನಾನು ಕಲಿತೆ.  ಸ್ಫಟಿಕೀಕರಣ ಪ್ರಕ್ರಿಯೆ ನನ್ನಲ್ಲಿ ಖುಷಿ ತರಿಸಿತು. ಇದೆಲ್ಲವನ್ನು ಹೇಳಿಕೊಳ್ಳಲು ನನ್ನ ಶಾಲೆಗೆ ಯಾವಾಗ ಹೋಗುತ್ತೇನೋ ಎಂದು ಕಾಯುತ್ತಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದರು.
 
  ‘ಕದಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ  ಚೈತ್ರ ಮಾತನಾಡಿ, ಇಂಥ ಪ್ರಯೋಗಗಳನ್ನು ನಾನು ಮಾಡಿರಲೇ ಇಲ್ಲ.  ಬ್ಯಾಟರಿ ತಂತ್ರಜ್ಞಾನ ನನ್ನಲ್ಲಿ ಅಚ್ಚರಿ ಮೂಡಿಸಿತು. ಇದನ್ನು ನನ್ನ ಶಾಲೆಯ ನನ್ನ ಸ್ನೇಹಿತೆಯರಿಗೂ ಹೇಳಿಕೊಡುವೆ.   ಹತ್ತನೇ ತರಗತಿ ನಂತರ ಕೆಮಿಸ್ಟ್ರಿ ಅಧ್ಯಯನವನ್ನೇ ಮಾಡುತ್ತೇನೆ’ ಎಂದರು. 
 
ಕಾರ್ಯಕ್ರಮದ ಮುಖ್ಯ ಸಂಯೋಜಕರಾಗಿ ಹಿರಿಯ ವಿಜ್ಞಾನಿಯಾ್ದ ಪ್ರೊ.ಕೆ.ಪ್ರಶಾಂತ್ ಕಾಳಪ್ಪ ಕಾರ್ಯನಿರ್ವಹಿಸಿದ್ದರು. ಡಾ.ವೈ.ಆರ್.ಗಿರೀಶ್, ಡಾ.ಎಸ್.ಎಂ.ಅನುಷ್, ಡಾ.ಅವಿನಾಶ್, ಡಾ.ಕೆ.ಎನ್.ನಂದೀಶ್ ಸಹ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ  ಮೆಲಿಸ್ಸಾ ಮೆಂಡೋಜಾ  ಕಾರ್ಯಕ್ರಮದ ಕಾರ್ಯನಿರ್ವಾಹಕರಾಗಿ  ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
 ಪ್ರಯೋಗಾಲಯದ ಪ್ರಯೋಗಗಳು ಹಾಗೂ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಇನ್ನಿತರ ವಿಷಯಗಳ ಕುರಿತು   ಆದಿಚುಂಚನಗಿರಿ ವಿ ವಿಯ ಪ್ರಾಧ್ಯಾಪಕರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಅವರು ACU ಪರಿಸರವನ್ನು ಆನಂದಿಸಿದರು ಮತ್ತು ಭವಿಷ್ಯದಲ್ಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಆಸಕ್ತಿಯನ್ನು ವ್ಯಕ್ತಪಡಿಸಿದರು.

 

 ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಡಿ.7ರಿಂದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಪಾದಯಾತ್ರೆ

0

ತುರುವೇಕೆರೆ: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳಿಂದ ಡಿ.7ರಂದು ಪಾದಯಾತ್ರೆ ಹಮ್ಮಿಕೊಂಡಿದ್ದು ಕ್ಷೇತ್ರದ ಎಲ್ಲ ರೈತರು ಪಕ್ಷಾತೀತವಾಗಿ ಭಾಗವಹಿಸಿ ನಮ್ಮ ಹಕ್ಕು ಪಡೆಯಲು ಹೋರಾಟ ಮಾಡಬೇಕಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹಾಗು ಮಾಜಿ ಶಾಸಕ ಮಸಾಲೆ ಜಯರಾಮ್ ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಜಂಟಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಸಿ.ಎಸ್.ಪುರ, ತುರುವೇಕೆರೆ ಕ್ಷೇತ್ರದ ರೈತರು ಹಾಗು ಕಾಂಗ್ರೆಸ್ ರೈತರೂ ಪಕ್ಷಬೇಧ ಮರೆತು ಹೇಮಾವತಿ ನಾಲೆ ಡಿ.206ನ ಸಾಗರನಹಳ್ಳಿ ಗೇಟ್ ನಿಂದ ಶನಿವಾರ 10:30 ಗಂಟೆಗೆ ಪಾದಯಾತ್ರೆ ಪ್ರಾರಂಭಗೊಂಡು ಭಾನುವಾರ ಕಾಮಗಾರಿ ನಡೆಯುವ ಸ್ಥಳಕ್ಕೆ ಸೇರಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಎನ್.ಡಿ.ಎ ಹೋರಾಟ ನಿಲ್ಲದು. ಯಾವುದೇ ಕಾರಣಕ್ಕೂ ಸರ್ಕಾರದೊಂದಿಗೆ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಮಗಾರಿ ನಿಲ್ಲಸಿದರೆ ಮಾತ್ರ ಸರ್ಕಾರದ ನಡೆಯನ್ನು ಗೌರವಿಸುತ್ತೇವೆ. ಕಾಂಗ್ರೆಸ್ ಸರ್ಕಾರ ತುಮಕೂರು ಜಿಲ್ಲೆಯ ರೈತರ ಪಾಲಿಗೆ ರೈತ ವಿರೋಧಿಯಾಗಿದೆ.

ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರುದ್ದ ಕಳೆದ ಆರೇಳು ತಿಂಗಳುಗಳಿಂದ ಮೈತ್ರಿ ಪಕ್ಷಗಳು ಸತತ ಹೋರಾಟ ಮಾಡಿ ನಿಲ್ಲಿಸಿದ್ದೆವು. ಆದರೆ ಈಗ ಪುನಃ ಕಾಮಗಾರಿ ಪ್ರಾರಂಭಿಸಿರುವುದು ಖಂಡನೀಯ. ಈ ಕಾಮಗಾರಿ ತುಮಕೂರು ಜಿಲ್ಲೆಯ ರೈತರಿಗೆ ಮರಣ ಶಾಸನವಾಗಲಿದೆ.

ಗೊರೂರು ಡ್ಯಾಮ್ ನಿಂದ ಮಾಗಡಿಗೆ ನೇರ ಪೈಪ್ ಲೈನ್ ಮಾಡಿಕೊಂಡು ನೀರು ತೆಗೆದುಕೊಂಡು ಹೋಗಲಿ ಅದಕ್ಕೆ ಅಭ್ಯಂತರವಿಲ್ಲ. 24 ಟಿಎಂಸಿ ನೀರನ್ನು ಕುಣಿಗಲ್, ಮಾಗಡಿ ಸೇರಿಯೇ ನಾಲಾ ನೀರು ಹಂಚಿಕೆ ಮಾಡಲಾಗಿದೆ. 12 ಅಡಿ ವಿನ್ಯಾಸವುಳ್ಳ ಪೈಪ್ ನಲ್ಲಿ ಸುಮಾರು 70 ಕಿ.ಮೀ ನೀರು ತೆಗೆದುಕೊಂಡು ಹೋದರೆ ಗ್ರಾವಿಟಿ ಮೂಲಕ ಎಲ್ಲಾ ನೀರು ಮಾಗಡಿ ಸೇರಿದರೆ ಇಲ್ಲಿನ ಎರಡು ತಾಲ್ಲೂಕಿನ ರೈತರ ಗತಿ ಏನು? ಜೊತೆಗೆ ಇಡೀ ಕಾಮಗಾರಿಯೇ ಅವೈಜ್ಞಾನಿಕವಾದದ್ದು.

ಎಚ್.ಡಿ.ಕುಮಾರ ಸ್ವಾಮಿಯವರು ರಾಜ್ಯದ ಮುಖ್ಯ ಮಂತ್ರಿಯಾಗಿದ್ದಅವಧಿಯಲ್ಲೇ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೈಜ್ಞಾನಿಕವಾದುದಲ್ಲ ಎಂದು ಹೇಳಿದರು. ನಂತರ ಬಂದ ಬಿ.ಎಸ್.ಯಡಿಯೂರಪ್ಪನವರು ಕೂಡ ಈ ಕಾಮಗಾರಿ ರದ್ದುಮಾಡಿದರು. ಈ ನಡುವೆ ಕಾಮಗಾರಿ ತಾಂತ್ರಿಕ ಅಧಿಕಾರಿಗಳು ಜಿಲ್ಲೆಯ ಶಾಸಕರನ್ನು ಕರೆದಿದ್ದರು ನಾವು ತಿರಸ್ಕರಿಸಿದ್ದೇವೆ.

ಈ ಸರ್ಕಾರ ಈ ಭಾಗದ ರೈತರ ಶವಗಳ ಮೇಲೆ ನೀರು ತೆಗೆದುಕೊಂಡು ಹೋಗುಬೇಕಷ್ಟೇ. ಪ್ರಾಣಬಿಟ್ಟರೂ ನೀರು ಬಿಡೆವು. ಕುಣಿಗಲ್ ತಾಲ್ಲೂಕಿಗೆ ನಾಲುವೆ ಮಾಡಿಕೊಂಡು ನೀರು ತೆಗೆದುಕೊಂಡು ಹೋಗಲು ಯಾವ ಶಾಸಕರ ವಿರೋಧವೂ ಇಲ್ಲ. ಮುಂದಿನ ದಿನಗಳಲ್ಲಿ ಮೈತ್ರಿ ಪಕ್ಷಗಳು ಸೇರಿಕೊಂಡು ಬೆಂಗಳೂರು ವಿಧಾಸಭೆ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದೆಂದು ಹಾಲಿ ಮತ್ತು ಮಾಜಿ ಶಾಸಕರಿಬ್ಬರೂ ಒಕ್ಕೊರಲಿನಿಂದ ಸರ್ಕಾರಕ್ಕೆ ಎಚ್ಚರಿಗೆ ನೀಡಿದರು.

ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮೃತ್ಯುಂಜಯ ಮತ್ತು ಮೈತ್ರಿ ಕಾರ್ಯಕರ್ತರು ಇದ್ದರು.

ಆದಿಚುಂಚನಗಿರಿ ವಿ.ವಿ.ಗೆ ಕೃಷಿ ವಿಜ್ಞಾನ ಕಾಲೇಜು: ಆದಿಚುಂಚನಗಿರಿ ಶ್ರೀ

0

ಮಾಯಸಂದ್ರ (ತುರುವೇಕೆರೆ): ಇಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ವತಿಯಿಂದ ಆರಂಭಿಸಿರುವ ಕೃಷಿ ವಿಜ್ಞಾನ ಕಾಲೇಜಿನ ಉದ್ಘಾಟನೆ ಗುರುವಾರ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಮ್ಮದು ಇನ್ನೂ ಕೃಷಿ ಆಧಾರಿತ ದೇಶವಾಗಿದೆ. ಕೃಷಿಕರು ಹೆಚ್ಚಾಗಿ ಆಧುನಿಕ ಉಪಕರಣಗಳನ್ನು ಉಪಯೋಗಿಸಬೇಕು. ಆಧುನಿಕತೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದೇಶದ ಶೇ.60 ರಷ್ಟು ಜನರು ಹಳ್ಳಿಗಳಲ್ಲಿದ್ದು ಅದರಲ್ಲಿ ಶೇ.50ರಷ್ಟು ಜನರು ವ್ಯವಸಾಯ ಮಾಡಿ ದುಡಿಮೆ ಮಾಡುತ್ತಾರೆ. ಕೃಷಿಯಿಂದ ಶೇ.18 ರಷ್ಟು ಮಾತ್ರ ದೇಶಕ್ಕೆ ಜಿ.ಡಿ.ಪಿ ಆದಾಯ ಬರುತ್ತಿದೆ. ನಮ್ಮ ದೇಶದ ಕೃಷಿ ವಿಜ್ಞಾನವಾಗಿ ಮಾರ್ಪಟಿಲ್ಲ. ಕೃಷಿ ಕೃಷಿಯಾಗಿಯೇ ಉಳಿದಿದೆ. ಬೇರೆ ದೇಶದ ರೈತರು ಉತ್ಪಾದನೆ ಮಾಡುವಷ್ಟು ನಮ್ಮ ರೈತರು ಮಾಡಲು ಸಾದ್ಯವಾಗುತ್ತಿಲ್ಲ. ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಬೇಕಿದೆ. ಕೃಷಿ ಸಚಿವರು ಹೆಚ್ಚು ಮುತುವರ್ಜಿ ವಹಿಸಿ ನಮ್ಮ ಶಿಕ್ಷಣ ಸಂಸ್ಥೆಗೆ ಕೃಷಿ ವಿಜ್ಞಾನ ಕಾಲೇಜು ನೀಡಿದ್ದಾರೆ. ಅವರಿಗೆ ಮಠದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಸಾಂಪ್ರದಾಯಿಕ ಕೃಷಿಗಿಂತ ಆಧುನಿಕ ಕೃಷಿ ಪದ್ಧತಿಯಲ್ಲಿ ಸಮಗ್ರ ಬೆಳೆ ಬೆಳೆಯುವುದನ್ನು ರೈತರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡು ಆರ್ಥಿಕ ಸಬಲತೆ ಕಡೆಗೆ ಹೆಜ್ಜೆ ಇಡಬೇಕು ಎಂದು ಕಾಲೇಜು ಉದ್ಘಾಟಿಸಿ ಮಾತನಾಡಿದ ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಶಾಲಾ ಮಕ್ಕಳು ಆಯೋಜಿಸಿದ್ದ ಮಕ್ಕಳ ಸಂತೆಗೆ, ಕೃಷಿ ಸಚಿವರು ಭೇಟಿ ನೀಡಿ ಮಕ್ಕಳ ವ್ಯಾಪಾರವನ್ನು ಪರಿಶೀಲಿಸಿದರು.

ಮಠದ ಪರವಾಗಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಸಿರು ಶಾಲು ಹೊದಿಸಿ ಸಚಿವ ಚಲುವರಾಯಸ್ವಾಮಿಯವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ವಿವಿಧ ಶಾಖಾ ಮಠದ ಸ್ವಾಮೀಜಿಗಳಾದ ಸೋಮನಾಥ ಸ್ವಾಮೀಜಿ, ಮಂಗಳಾನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಡಾ. ಎಸ್.ವಿ.ಸುರೇಶ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ.ಎ.ಶೇಖರ್, ಆದಿಚುಂಚನಗಿರಿ ಮಠದ ಸಿಇಓ ಎನ್.ಎಸ್. ರಾಮೇಗೌಡ, ಕೃಷಿ ವಿಜ್ಞಾನ ಕಾಲೇಜು ಪ್ರಾಚಾರ್ಯ ಶಿವಲಿಂಗೇಗೌಡರು, ಪ್ರೊ.ಪುಟ್ಟರಂಗಪ್ಪ ಇತರರು ಇದ್ದರು.

ಸಂವಿಧಾನದ ರಕ್ಷಣೆ: ಕೋರ್ಟ್ ಗಳ ಪಾತ್ರ ಹಿರಿದು- ನ್ಯಾಯಾಧೀಶ ರಾಮಲಿಂಗೇಗೌಡ

ತುಮಕೂರು: ಎಪ್ಪತ್ತೈದು ವರ್ಷಗಳ ಇತಿಹಾಸ ನೋಡಿದಾಗ ಸಂವಿಧಾನ ರಕ್ಷಿಸುವಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಗಳು ನಿರ್ವಹಿಸಿದ ಪಾತ್ರ ಅಗಾಧವಾದುದ್ದಾಗಿದೆ ಎಂದು ತುಮಕೂರು ಏಳನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ಪಿ. ರಾಮಲಿಂಗೇಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಸುಫಿಯಾ ಕಾನೂನು ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಯಲ್ಲಿ ಅವರು ಮಾತನಾಡಿದರು.
ಸಂವಿಧಾನದ ಆರ್ಟಿಕಲ್ 14, 15, 16 ಹಾಗೂ ಆರ್ಟಿಕಲ್ 21ರ ಮಹತ್ವದ ಬಗ್ಗೆ ಒತ್ತಿ ಹೇಳಿದ ಅವರು, ದೇಶದ ಜನರು ಘನತೆಯಿಂದ ಜೀವಿಸುವ, ಮುಕ್ತ ಸ್ವಾತಂತ್ರ್ಯ ಇದು ಸಂವಿಧಾನ ನೀಡಿದ ರಕ್ಷಣೆಯ ಕಾರಣದಿಂದ ನಮಗೆ ಸಿಗುತ್ತಿದೆ ಎಂದರು.
ಜನರ ಹಿತಾಸಕ್ತಿಗೆ ವಿರುದ್ಧವಾದ, ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದ ಅನೇಕ ಕಾನೂನುಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದನ್ನು ಸ್ಮರಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧಿಕಾರದ ಗೆರೆಯನ್ನು ಸಹ ಸಂವಿಧಾನ ಹಂಚಿದೆ. ನಮ್ಮದು ಒಕ್ಕೂಟದ ಸರ್ಕಾರ ಎಂದು ಹೇಳಿದರು.
ಜನರಿಗೆ ಪ್ರಜಾಸತ್ತಾತ್ಮಕ ಹಕ್ಕುಗಳಷ್ಟೇ ಅಲ್ಲ, ಸಾಮಾಜಿಕ ಸಬಲತೆ, ಆರ್ಥಿಕ ಸಬಲತೆ, ರಾಜಕೀಯ ಸ್ವಾತಂತ್ರ್ಯ ಇವು ಸಂವಿಧಾನದ ಮುಖ್ಯ ಆಶಯವಾಗಿದೆ ಎಂದರು.
ಸಂವಿಧಾನದ ಕರಡು ರಚನಾ ಸಮಿತಿ ಸಭೆಯ ಚರ್ಚೆಗಳನ್ನು ಓದುವುದರಿಂದ ಸಂವಿಧಾನದ ಆಶಯದ ಬಗ್ಗೆ ಗೊತ್ತಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ. ಜಯಂತಕುಮಾರ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಂವಿಧಾನದ ಕರಡುವರಚನಾ ಸಮಿತಿಯ ಎಲ್ಲಾ ಪ್ರಮುಖರನ್ನು ನೆನೆಯಬೇಕು ಎಂದರು.
ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಿಂದಲೇ ಕೋರ್ಟ್ ಗಳಿಗೆ ಬರುವುದರಿಂದ ನ್ಯಾಯಾಲಯಗಳ ಕಲಾಪಗಳ ಬಗ್ಗೆ ತಿಳುವಳಿಕೆ ಬರಲಿದೆ. ಇದು, ಮುಂದೆ ವಕೀಲಿಕೆ ಅಭ್ಯಾಸಕ್ಕೆ ಸಹಕಾರಿಯಾಗಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ಹಿರಿಯ ವಕೀಲರಿಗೆ ಗೌರವ ಕೊಡುವುದನ್ನು ಕಿರಿಯ ವಕೀಲರು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಪ್ರಾಂಶುಪಾಲರಾದ ಡಾ. ರಮೇಶ್, ಪ್ರಾಧ್ಯಾಪಕರಾದ ಓಬಣ್ಣ, ಮಮತಾ ಇತರರು ಇದ್ದರು.

ಅಲೆಮಾರಿ ವಸತಿ ಪ್ರದೇಶಕ್ಕೆ ಮತ್ತೆ ರಸ್ತೆ ನಿರ್ಮಾಣ‌ ಕಾಮಗಾರಿ ಪ್ರಾರಂಭ

0

(*ಪಬ್ಲಿಕ್ ಸ್ಟೋರಿ ಫಲಶೃತಿ*)

ಚಿಕ್ಕನಾಯಕನಹಳ್ಳಿ : ಕಸಬಾ ಹೋಬಳಿ ಹೊನ್ನೆಬಾಗಿ ಗ್ರಾಮ ಪಂಚಾಯತಿಯ ದಬ್ಬೇಘಟ್ಟ ಗ್ರಾಮದ ಸರ್ವೆ ನಂಬರ್-122’ರಲ್ಲಿ ಸುಡುಗಾಡು ಸಿದ್ಧ ಜನಾಂಗದ ಅಲೆಮಾರಿ ಸಮುದಾಯದವರಿಗೆ ನಿವೇಶನ ಹಂಚಿಕೆ ಮಾಡಿ ಆರೇಳು ವರ್ಷಗಳೇ ಕಳೆದುಹೋಗಿವೆ. ಆದರೆ, ಅಲ್ಲಿಗೆ ಸಮರ್ಪಕವಾದ ಒಂದು ಸುರಕ್ಷಿತ ರಸ್ತೆಯನ್ನು ಇದುವರೆಗೂ ಕಲ್ಪಿಸಲಾಗಿರಲಿಲ್ಲ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ಗ್ರಾಮ ಪಂಚಾಯತಿ ಇತ್ಯಾದಿ ಇಲಾಖೆಗಳ ಹಗ್ಗ-ಜಗ್ಗಾಟದಿಂದ ರಸ್ತೆ ನಿರ್ಮಾಣ ಕಾರ್ಯ ಕೇವಲ ಪತ್ರ ವ್ಯವಹಾರದಲ್ಲೇ ಏದುಸಿರು ಬಿಡುತ್ತಾ ಕುಂತಿತ್ತು.

ಕಳೆದ ಅಕ್ಟೋಬರ್‌ 20’ನೇ ತಾರೀಕಿನಲ್ಲಿ ಪಬ್ಲಿಕ್ ಸ್ಟೋರಿ (ಸುಡುಗಾಡಿಗೆ ರಸ್ತೆ ಯಾವುದಯ್ಯಾ ಸರ್ಕಾರವೇ….!? ಶೀರ್ಷಿಕೆಯಲ್ಲಿ) ಇಲ್ಲಿನ ಈಯೆಲ್ಲ ಕುಂದು-ಕೊರತೆಗಳ ಬಗ್ಗೆ ವಿವರವಾದ ವರದಿ ಪ್ರಕಟಿಸಿತ್ತು. ಕೂಡಲೇ ಕಾರ್ಯಪ್ರವೃತ್ತಗೊಂಡ ತಾಲ್ಲೂಕು ಆಡಳಿತ, ಅಕ್ಟೋಬರ್ 21’ನೇ ತಾರೀಕಿನಂದೇ ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಿಕೊಡಲು ಕಾಮಗಾರಿ ಪ್ರಾರಂಭಿಸಿತ್ತು.

ಆದರೆ, ಅಕ್ಕಪಕ್ಕದ ಜಮೀನಿನವರು ರಸ್ತೆಗೆ ಜಾಗ ಬಿಟ್ಟುಕೊಡಲು ತಕರಾರು ತೆಗೆದು ಅಂದಿನ ಕಾಮಗಾರಿಯನ್ನು ತಡೆದು, ಅಧಿಕಾರಿಗಳು ಹಾಗೂ ನಿರ್ಮಾಣ ಕಾರ್ಮಿಕರನ್ನು ವಾಪಸ್ಸು ಕಳಿಸಿದ್ದರು.

ಜಮೀನಿನ ಮೂಲ ದಾಖಲೆ, ಜಮೀನಿನ ಸರ್ವೆ, ರಸ್ತೆ ಯೋಜನೆ, ವಸತಿ ಪ್ರದೇಶ ಬಡಾವಣೆಯ ನಕ್ಷೆ, ಲೇಔಟ್ ಪ್ಲಾನಿಂಗ್ ಮತ್ತಿತ್ಯಾದಿ ಮೂಲ ದಾಖಲೆಗಳನ್ನು ಪರಿಶೀಲಿಸಿ, ಮತ್ತೊಮ್ಮೆ ಖಾತ್ರಿ ಮಾಡಿಕೊಂಡಿರುವ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಹೊನ್ನೆಬಾಗಿ ಗ್ರಾಮ ಪಂಚಾಯತಿಯ ಅಧಿಕಾರಿಗಳು, ಈ ಬಾರಿ ಸೂಕ್ತ ತಯಾರಿ ಹಾಗೂ ಭದ್ರತೆಯ ಜೊತೆಗೆ ದಿನಾಂಕ.27.11.2024’ನೇ ಬುಧವಾರದಂದು ಮತ್ತೆ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದಾರೆ.

ಅಕ್ಕಪಕ್ಕದ ಜಮೀನು ಮಾಲೀಕರು ದಾಖಲೆ ಪತ್ರಗಳನ್ನು ಪರಿಶೀಲಿಸಿ, ಬೇರಿನ್ನೇನೂ ತಕರಾರು ತೆಗೆಯಲಾಗದೆ ಸುಮ್ಮನಾಗಿದ್ದಾರೆ. ಬಹುತೇಕ ಇನ್ನೊಂದೆರಡು ವಾರಗಳಲ್ಲಿ ಸುಡುಗಾಡು ಸಿದ್ಧರ ಅಲೆಮಾರಿ ವಸತಿ ಪ್ರದೇಶಕ್ಕೆ ಸಮರ್ಪಕವಾದ ಸುರಕ್ಷಿತ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ಪ್ರತಿಬಾರಿ ಒಂದಿಲ್ಲೊಂದು ಕಾರಣದಿಂದ ಸ್ಥಗಿತಗೊಳ್ಳುತ್ತಿದ್ದ ರಸ್ತೆ ನಿರ್ಮಾಣ ಕಾಮಗಾರಿಯಿಂದ ಬೇಸತ್ತಿದ್ದ ಸುಡುಗಾಡು ಸಿದ್ಧರ ಪಾಲಿಗೆ ಸಮರ್ಪಕವಾದ ಒಂದು ಸುರಕ್ಷಿತ ರಸ್ತೆ ಎಂಬುದು, ದೂರದ ಕನಸಿನಂತೆ ಭಾಸವಾಗಿತ್ತು.

ಆದರೀಗ,
ರಸ್ತೆ ನಿರ್ಮಾಣಗೊಳ್ಳುತ್ತಿದೆ….!


*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಕನ್ನಡ ಉಳಿಯ ಬೇಕಾದರೆ ಅನ್ನದ ಭಾಷೆಯಾಗಲಿ: ಚ.ಹ. ರಘುನಾಥ್

ತುಮಕೂರು: ಕನ್ನಡ ಬಳಸಿದರೆ ಕನ್ನಡ ಉಳಿಯಲಿದೆ. ಹಾಗೆಯೇ, ಕನ್ನಡ ಅನ್ನ ಕೊಡುವ  ಭಾಷೆಯಾದರೆ ಮಾತ್ರ ಉಳಿಯಲು ಸಾಧ್ಯ ಎಂದು ಸುಧಾ ವಾರಪತ್ರಿಕೆ, ಮಯೂರ ಮಾಸ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಚ.ಹ.ರಘುನಾಥ್ ಹೇಳಿದರು.

ಅವರು ಇಲ್ಲಿನ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ  ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.

 ಜಗತ್ತಿನಲ್ಲಿ ಶೇಕಡಾ 50 ರಷ್ಟು ಭಾಷೆ ನಾಶವಾಗುತ್ತವೆ ಎಂದು ಭಾಷಾ ವಿಜ಼್ಞಾನಿಗಳು ಹೇಳುತ್ತಾರೆ. ಆದರೆ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾದಾಗ ಮಾತ್ರ ಭಾಷೆ ಮೃತವಾಗುತ್ತವೆ. ಬಳಕೆಯಲ್ಲಿರುವ ಯಾವ ಭಾಷೆಯೂ ಮೃತವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಕನ್ನಡದ ವಿದ್ಯಾರ್ಥಿಗಳೆಲ್ಲ ಕನ್ನಡದ ದೀಪದ ಹಾಗೆ ಕಾಣುತ್ತೀರಿ. ಭಾಷೆಯನ್ನು ನಾವು ಉಳಿಸುವುದಲ್ಲ, ನಮ್ಮ ಉಳಿವಿಗಾಗಿ ಭಾಷೆಯನ್ನು ಉಳಿಸಬೇಕು ಎಂದರು.

ಕನ್ನಡ ಅನ್ನದ ಭಾಷೆ ಕೂಡ ಆಗಬೇಕು. ಹೆಚ್ಚು ಹೆಚ್ಚು ಕನ್ನಡದಲ್ಲಿ ಓದಿದವರಿಗೆ ಉದ್ಯೋಗ ಸೃಷ್ಟಿಯಾಗಬೇಕು.

ಭಾಷೆಯನ್ನ ಬಳಸುವುದರ ಜೊತೆಗೆ ಭಾಷೆಯಲ್ಲಿಯೇ ತಂತ್ರಜ್ಞಾನವನ್ನು ಸೃಷ್ಟಿಸಿ ಅದೇ ತಂತ್ರಜ್ಞಾನ ವನ್ನು ಬಳಸುವಂತಹ ಸ್ವಾವಲಂಬಿಗಳಾಗಬೇಕು ಎಂದರು.

ಗೆದ್ದರೆ ಗೆಲ್ಲಬೇಕು, ಬಾಹುಬಲಿಯಂತೆ, ಬಿಟ್ಟುಕೊಡುವುದರಿಂದ. ನಮ್ಮ ಬಲ ಪ್ರದರ್ಶನ, ಅಧಿಕಾರ ಪ್ರದರ್ಶನದಿಂದ ಅಲ್ಲ. ತ್ಯಾಗ ಮಾಡುವುದರಿಂದ ಗೆಲ್ಲಬೇಕು. ಏನಾದರೂ ಆಗಿ ಮೊದಲು ಒಳ್ಳೆಯ ಓದುಗರಾಗಿ ಎಂದರು. ಒಳ್ಳೆಯ ಓದುಗರಾದರೆ ಒಳ್ಳೆಯ ವ್ಯಕ್ತಿತ್ವ ನಿಮ್ಮದಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಗದೀಶ ಜಿ ಟಿ ಅವರು ” ನಮ್ಮ ಮಾತೃ ಭಾಷೆಗೆ ಘನತೆ ತರುವಂತೆ ನಾವೆಲ್ಲರೂ ಭಾಷೆಯಲ್ಲಿರುವ ಒಳ್ಳೆಯ ಪದಗಳನ್ನು ಮಾತನಾಡಬೇಕು. ಒಳ್ಳೆಯ ಆಲೋಚನೆಗಳನ್ನು ರೂಢಿಸಿಕೊಳ್ಳಬೇಕು. ಅಂದು ನಿಜವಾಗಿ ಭಾಷೆಗೆ ಗೌರವ ಸಲ್ಲುತ್ತದೆ ಎಂದರು.

ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಡಾ. ಶ್ವೇತಾರಾಣಿ ಹೆಚ್ ಅವರು ” ಕನ್ನಡನಾಡಿನಲ್ಲಿ ನಾವಿದ್ದರೆ ಸಾಲದು ಕನ್ನಡ ನಮ್ಮೊಳಗೆ ಇದ್ದಾಗ ಮಾತ್ರ ನಮ್ಮ ಜೀವನ ಸಾರ್ಥಕವೆನಿಸುತ್ತದೆ ಎಂದರು. ಉಪನ್ಯಾಸಕಿರಾದ ಕಿಮ್ ಶುಖ,  ವಿಜಯಲಕ್ಷ್ಮಿ ಉಪಸ್ಥಿತರಿದ್ದರು.

ಮನುವಾದ’ದಿಂದ ಬಿಡುಗಡೆ ತಂದುಕೊಟ್ಟ ಸಂವಿಧಾನ: ಸಿ.ಡಿ. ಚಂದ್ರಶೇಖರ್

0

ಚಿಕ್ಕನಾಯಕನಹಳ್ಳಿ : ಪಟ್ಟಣದ ತೀ.ನಂ.ಶ್ರೀ ಭವನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಮಂಗಳವಾರ ಬೆಳಗ್ಗೆ 75’ನೆಯ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು.

ಸಂವಿಧಾನ ಗ್ರಂಥ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿದ ನಂತರ ತಹಸೀಲ್ದಾರ್ ಕೆ ಪುರಂದರ್’ರವರು,‌ ಸಭಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಸಂವಿಧಾನದ ಬಗ್ಗೆ ಉಪನ್ಯಾಸ ನೀಡಿದ ಅಧ್ಯಾಪಕ ಪ್ರಕಾಶ್, ಸಂವಿಧಾನ ರಚನೆಯಾದ ಸಂದರ್ಭ ಹಾಗೂ ಅದರ ರಚನೆಯಲ್ಲಿ ಸಮೀಕ್ಷಿಸಲಾದ ಮುಖ್ಯ ಸಂಗತಿಗಳು, ಸಮಕಾಲೀನ ಪ್ರಸ್ತುತೆ, ಮೂಲಭೂತ ಹಕ್ಕು ಮತ್ತು ಧರ್ಮನಿರಪೇಕ್ಷ ಆದ್ಯತೆ ತರಹದ‌ ಬಹಳಷ್ಟು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಬಿಡಿಸಿ ಹೇಳಿದರು.

ನಂತರ ಮಾತನಾಡಿದ ಮಾದಿಗ ದಂಡೋರ ಚಂದ್ರು, ಸಂವಿಧಾನ ಸಮರ್ಪಿಸಿಕೊಂಡು ಎಪ್ಪತ್ತೈದು ವರ್ಷ ಕಳೆದರೂ ಸಂವಿಧಾನದ ಆಶಯಗಳನ್ನು ಈಡೇರಿಸಿಕೊಳ್ಳುವಲ್ಲಿ ಸಮಾಜ ವಿಫಲವಾಗಿದೆ. ಸಮಾಜದಲ್ಲಿ ಇಂದಿಗೂ ಮೇಲು-ಕೀಳು, ತಾರತಮ್ಯ, ಸ್ವಜನ ಪಕ್ಷಪಾತ, ಅಸಮಾನತೆ ನಿರ್ಮೂಲನೆಯಾಗಿಲ್ಲ. ಅವು ಈಗಲೂ ನಮ್ಮ ಸುತ್ತ ತಾಂಡವವಾಡುತ್ತಿವೆ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳಾಗುವ ಕಾರಣದಿಂದ ಸಂವಿಧಾನದ ಆಶಯಗಳು ವಾಸ್ತವವಾಗಿ ಸಮಾಜದಲ್ಲಿ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮನುವಾದ’ದಿಂದ ಬಿಡುಗಡೆ ತಂದುಕೊಟ್ಟ ಸಂವಿಧಾನ ::

ಸರ್ಕಾರದ ಗ್ಯಾರಂಟಿಭಾಗ್ಯ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆದ ಸಿ ಡಿ ಚಂದ್ರಶೇಖರ್ ಮಾತನಾಡಿ, ಡಾ.ಅಂಬೇಡ್ಕರರು ರಚಿಸಿಕೊಟ್ಟ ಸಂವಿಧಾನದ ಕಾರಣದಿಂದ ಮನುವಾದದ ಚಾತುರ್ವರ್ಣ ವ್ಯವಸ್ಥೆಯ ದಾಸ್ಯಕ್ಕೆ ಈಡಾಗಿದ್ದ ನಮ್ಮ ವಂಚಿತ, ಅಲಕ್ಷಿತ, ಆದಿವಾಸಿ, ದಲಿತ-ಶೂದ್ರ ವರ್ಗಗಳು ಬಿಡುಗಡೆಯ ಭಾಗ್ಯ ಪಡೆದುಕೊಂಡವು. ಸಂವಿಧಾನ ಒಂದಿಲ್ಲದಿದ್ದರೆ, ಈಯೆಲ್ಲ ದಲಿತ-ಶೂದ್ರ ವರ್ಗಗಳು ಶಾಶ್ವತವಾಗಿ ಮನುವಾದದ ದಾಸ್ಯದಡಿಯಲ್ಲೇ ಇರಬೇಕಾಗುತ್ತಿತ್ತು. ಸಂವಿಧಾನ ಯಾಕೆ ಬೇಕು ಎಂದು ಕೇಳಿಕೊಂಡರೆ, ರಾಜಪ್ರಭುತ್ವ ಅಳಿದು ಪ್ರಜೆಗಳೇ ರಾಜ್ಯ ಆಳುವ ಪ್ರಜಾಪ್ರಭುತ್ವ ಜಾರಿಯಾಗುವುದಕ್ಕಾಗಿ ಬೇಕು. ಪುರೋಹಿತಶಾಹಿ ದಾಸ್ಯದಿಂದ ವಿಮೋಚನೆ ಪಡೆದು ಸಮಾನತೆಯ ಕಡೆಗೆ ವ್ಯವಸ್ಥೆಯನ್ನು ಬದಲಾಯಿಸುವುದಕ್ಕಾಗಿ ಬೇಕು. ಸರ್ವ ಜನಾಂಗದ ಶಾಂತಿಯ ತೋಟ’ದಂತಿರುವ ನಾಡು-ನುಡಿ-ನೆಲದ ಜೊತೆ ಬಾಳುವ ಎಲ್ಲ ಪ್ರಜೆಗಳ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲಿಕ್ಕಾಗಿ ಬೇಕು. ಪ್ರಜೆಗಳ ಅಭಿವ್ಯಕ್ತಿಯ ಹಕ್ಕುಗಳ ಸಂರಕ್ಷಣೆಗಾಗಿ, ನ್ಯಾಯಾಂಗದ ಹಕ್ಕುಗಳ ಸಂರಕ್ಷಣೆಗಾಗಿ ಮತ್ತು ಯಾವುದೇ ರಾಷ್ಟ್ರ ಅಥವಾ ರಾಜ್ಯವೊಂದರ ಸುವ್ಯವಸ್ಥಿತ ಆಡಳಿತ ನಡೆಸಲು ಸಂವಿಧಾನ ಬೇಕು ಎಂದು ಅವರು ಹೇಳಿದರು.

ಚಾತುರ್ವರ್ಣ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿ, ಎಲ್ಲರಿಗೂ ಲಭಿಸುವ ಸಮಾನ ಅಧಿಕಾರದ ಅವಕಾಶಗಳಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿ ಮಾಡಿಕೊಂಡು ಜನಸಮೂಹಗಳನ್ನು ಮುನ್ನಡೆಸಲು ಸಂವಿಧಾನ ಬೇಕು. ಇಲ್ಲದಿದ್ದರೆ, ಶಿಕ್ಷಣ ವಂಚಿತರಾಗಿ, ಭೂ-ರಹಿತರಾಗಿ ಎಲ್ಲ ಬಹುಜನ ಸಮುದಾಯಗಳು ಬದುಕಿರಬೇಕಾಗಿತ್ತು. ಈ ಸಂದರ್ಭದಲ್ಲಿ ಅವರು, ಏಕಲವ್ಯ-ದ್ರೋಣಾಚಾರ್ಯರ ಪ್ರಸಂಗವನ್ನು ನೆನಪಿಸುವ ಮೂಲಕ ಸಂವಿಧಾನದ ರಕ್ಷಣೆ ಮಾಡಿಕೊಳ್ಳದಿದ್ದರೆ, ಭವಿಷ್ಯದಲ್ಲಿ ಮತ್ತೆ ಬಂದೆರಗಲಿರುವ ಮನುವಾದ ಮತ್ತು ಚಾತುರ್ವರ್ಣ ವ್ಯವಸ್ಥೆಯ ಅಪಾಯಗಳನ್ನು ವಿವರಿಸಿದರು. ಹಾಗಾಗಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಉಪಾಯಗಾರರಿಂದ ಸಂವಿಧಾನ ರಕ್ಷಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ ಬಿ ಸುರೇಶ್ ಬಾಬು ಮಾತನಾಡಿ, ಸಂವಿಧಾನ ರಚಿಸಿದ ಡಾ.ಅಂಬೇಡ್ಕರರ ಜೀವನ ಮತ್ತು ವಿದ್ಯಾಭ್ಯಾಸದ ಸಂದರ್ಭದಲ್ಲಿ ಶಾಹು ಮಹಾರಾಜರು ಅವರಿಗೆ ಚಾಚಿದ ಸಹಾಯಹಸ್ತದ ಕುರಿತು ಪ್ರಸ್ತಾಪಿಸಿದರು. ಸಂವಿಧಾನದ ಅಡಿಯಲ್ಲಿ ಅಧಿಕಾರದ ಅವಕಾಶಗಳನ್ನು ಪಡೆದಿರುವ ಯಾರೇ ಆದರೂ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಬೇಕು. ಮಹಾಓದುಗ ಅಂಬೇಡ್ಕರ್’ರವರು ಅವರ ವಿದ್ಯಾಭ್ಯಾಸಕ್ಕಾಗಿ ಅನುಭವಿಸಿದ ನೋವುಗಳನ್ನು ಕುರಿತು ಸೂಚ್ಯವಾಗಿ ಪ್ರಸ್ತಾಪಿಸಿದರು. ಇಷ್ಟೆಲ್ಲಾ ಆದರೂ ರಾಜಕೀಯವಾಗಿ ಸಾಮಾಜಿಕವಾಗಿ ಎಲ್ಲ ರೀತಿಯ ಹಕ್ಕು-ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡಿರುವಂತಹ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿ ಅವರು ಎಂದು ಅಂಬೇಡ್ಕರ್’ರವರನ್ನು ಸ್ಮರಿಸಿದರು.

ಸಮಾಜ ಕಲ್ಯಾಣಾಧಿಕಾರಿ ಶ್ರೀಧರಮೂರ್ತಿಯವರು, ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡು ನಿರೂಪಿಸಿದರು. ತಹಸೀಲ್ದಾರ್ ಕೆ ಪುರಂದರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು, ಮುಖಂಡ ಮಹಬೂಬ್ ಆಲಮ್, ಮುಖಂಡ ಲಿಂಗದೇವರು, ಮಾದಿಗ ದಂಡೋರದ ಚಂದ್ರಶೇಖರ್, ಮುಖಂಡ ಕೆ ಜಿ ಕೃಷ್ಣೇಗೌಡ, ಕನ್ನಡ ಸಂಘದ ಸಿ ಬಿ ರೇಣುಕಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಚಂದ್ರಶೇಖರ್, ಅಧ್ಯಾಪಕ ಪ್ರಕಾಶ್ ಸೇರಿದಂತೆ, ಸುನೀಲ್, ಇಮ್ರಾನ್, ಪಾಂಡು ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಮಾಹಿತಿ ಕೇಂದ್ರದ ಸಿಬ್ಬಂದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.


ಸಂಚಲನ

ಚಿಕ್ಕನಾಯಕನ ಸೀಮೆಯಿಂದ

ಅನಾಥ, ಪರಿತ್ಯಕ್ತ ಮಕ್ಕಳ  “ದತ್ತು” ಹೇಗೆಲ್ಲ ಪಡೆಯಬಹುದು ಗೊತ್ತೇ?

ಲೇಖಕರಾದ ಶಿವಣ್ಣ ಅವರು ಮಕ್ಕಳ ರಕ್ಷಣಾಧಿಕಾರಿಯಾಗಿದ್ದಾರೆ.



ಅನಾಥ, ಪರಿತ್ಯಕ್ತ ಮಕ್ಕಳ ಘನತೆಯ ಬದುಕಿಗೆ ಧನಾತ್ಮಕ ಕೊಡುಗೆಯೇ “ದತ್ತು”
ದತ್ತು ಮಾಸಾಚರಣೆಯ ಪ್ರಾಮುಖ್ಯತೆ ಮತ್ತು ಏಕೆ ಆಚರಿಸುತ್ತೇವೆ?
ದತ್ತು ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳಲು ಇತರರನ್ನು ಉತ್ತೇಜಿಸಲು ಹಾಗೂ ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಲು ಮತ್ತು ದತ್ತು ತೆಗೆದುಕೊಳ್ಳುಲು ಪ್ರಭಾವಿತರಾಗಿರುವ ಈ ದೇಶದ ಜನರನ್ನು ಗುರುತಿಸಲು ಮತ್ತು ದತ್ತು ಸ್ವೀಕಾರದ ಮೂಲಕ ಬೆಳೆದ ಕುಟುಂಬಗಳನ್ನು ಗೌರವಿಸುವುದು ಹಾಗೂ ಶಾಶ್ವತ ಕುಟುಂಬಗಳಿಗಾಗಿ ಇನ್ನೂ ಕಾಯುತ್ತಿರುವ ಅನೇಕ ಮಕ್ಕಳನ್ನು ಗುರುತಿಸುವುದು ದತ್ತು ಮಾಸಾಚರಣೆಯ ಧ್ಯೇಯವಾಗಿದೆ.

ಅಲ್ಲದೆ ದತ್ತು ಕಾರ್ಯಕ್ರಮ ಕುರಿತು ವ್ಯಾಪಕ ಪ್ರಚಾರದ ಮೂಲಕ ಬೆಳಕು ಚೆಲ್ಲುವುದಾಗಿದೆ ಹಾಗೂ ಶಾಶ್ವತ ಕುಟುಂಬಗಳಿಗಾಗಿ ಕಾಯುತ್ತಿರುವ ಸಾವಿರಾರು ಮಕ್ಕಳನ್ನು ಗುರುತಿಸಿ ದತ್ತು ಸ್ವೀಕಾರದ ಬಗ್ಗೆ ಜಾಗೃತಿ ಮೂಡಿಸುವುದು, ಪೋಷಕರ ಆರೈಕೆಯಲ್ಲಿರುವ ಮಕ್ಕಳ ಯೋಗಕ್ಷೇಮ ಮತ್ತು ಭವಿಷ್ಯಕ್ಕಾಗಿ ಪ್ರತಿಪಾದಿಸುವುದು.

ನಮ್ಮ ನೆರೆಹೊರೆಯವರು, ಸಮುದಾಯಗಳು, ನಗರಗಳು ಮತ್ತು ರಾಜ್ಯಗಳು ಒಂದು ನಿಲುವು ತೆಗೆದುಕೊಳ್ಳಲು ಪ್ರೋತ್ಸಾಹಿಸುವುದು ಹಾಗೂ ದತ್ತು ಪ್ರಕ್ರಿಯೆಗಳಲ್ಲಿ ಎಲ್ಲರನ್ನು ತೊಡಗಿಸಿಕೊಳ್ಳಲು ಎಲ್ಲರಿಗೂ ಅವಕಾಶವನ್ನು ಒದಗಿಸುವುದು.


ನವೆಂಬರ್-2024ರ ದತ್ತು ಮಾಸಾಚರಣೆ ಇದು ದತ್ತು ತೆಗೆದುಕೊಳ್ಳುವ ಮೂಲಕ ಪ್ರಭಾವಿತರಾದವರಿಗೆ ದತ್ತು ಸ್ವೀಕಾರದ ಹಲವು ಅಂಶಗಳನ್ನು ಪ್ರತಿಬಿಂಬಿಸಲು ಮತ್ತು ಅಂಗೀಕರಿಸಿದ ಅವಕಾಶಗಳನ್ನು ಒದಗಿಸುತ್ತದೆ.

ಎಲ್ಲಾ ದತ್ತು ಕಥೆಗಳು ವಿಭಿನ್ನ ಮತ್ತು ಅನನ್ಯವಾಗಿವೆ ಮತ್ತು ದತ್ತು ಸ್ವೀಕಾರದ ಬಗ್ಗೆ ಜಾಗೃತಿ ಮೂಡಿಸಲು ಒಂದು ತಿಂಗಳನ್ನು ಮೀಸಲಿಡುವುದರಿಂದ ಜೈವಿಕ ಪೋಷಕರು, ದತ್ತು ಪಡೆದ ಪೋಷಕರು ಮತ್ತು ನಿರೀಕ್ಷಿತ ದತ್ತು ಪೋಷಕರು ಮತ್ತು ಕುಟುಂಬಗಳ ವ್ಯಕ್ತಿಗಳನ್ನು ಗೌರವಿಸಲು ನಮಗೆ ಅವಕಾಶ ಮಾಡುತ್ತದೆ.


ಪೋಷಕತ್ವ ಆರೈಕೆಯಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ಆಚರಿಸಲು ಮತ್ತು ಉತ್ತೇಜಿಸಲು ಮೀಸಲಾದ ವಿಶೇಷ ತಿಂಗಳುಗಳಾಗಿದೆ. ಶಾಶ್ವತ ಕುಟುಂಬ ಅಗತ್ಯವಿರುವ ಮಕ್ಕಳಿಗೆ ಶಾಶ್ವತ, ಪ್ರೀತಿ, ವಾತ್ಸಲ್ಯ ಮತ್ತು ಕಾಳಜಿಯುಳ್ಳ ವಾತಾವರಣವನ್ನು ಒದಗಿಸಲು ಮತ್ತು ಪ್ರೀತಿಯ ಕುಟುಂಬಗಳನ್ನು ಗುರುತಿಸುವ ಸಂದರ್ಭವಾಗಿದೆ.

ಇದು ದತ್ತು ಸ್ವೀಕಾರದ ಮಹತ್ವ ಮತ್ತು ಪ್ರೀತಿಯ ಕಟುಂಬಗಳಿಗಾಗಿ ಕಾಯುತ್ತಿರುವ ಸಾವಿರಾರು ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವುದು, ಕುಟುಂಬದಲ್ಲಿ ನೆಲೆಸಲು ಕನಸುಗಳನ್ನು ಹೊತ್ತ ಮಕ್ಕಳಿಗೆ ನನಸಾಗಿಸುವ ಸಮರ್ಪಣೆಯನ್ನು ಅಂಗೀಕರಿಸುವ ನಿಟ್ಟಿನಲ್ಲಿ ದತ್ತು ಮಾಸಚಾರಣೆ ಆಚರಿಸುವ ವಿವಿಧ ಅರ್ಥಪೂರ್ಣ ಧ್ಯೇಯ ಮತ್ತು ಚಟುವಟಿಕೆಗಳ ಕಾರ್ಯಗಳನ್ನು ಒಳಗೊಂಡಿರುತ್ತದೆ.


ಮಕ್ಕಳ ದತ್ತು ಎನ್ನುವುದು ಕಾನೂನುಗಳನ್ನು ಮೀರಿದ ಒಂದು ಪ್ರಕ್ರಿಯೆ, ಕಟುಂಬಕ್ಕೆ ಮಗುವನ್ನು ಒಪ್ಪಿಸುವುದು ಮತ್ತು ಅವರಿಗೆ ಪ್ರೀತಿ ವಾತ್ಸಲ್ಯ ಮತ್ತು ಬೆಂಬಲದ ಆರೈಕೆಯನ್ನು ಒದಗಿಸುವುದು ಒಳಗೊಂಡಿದೆ.

ಭಾರತದಲ್ಲಿ ದತ್ತು ಕಾಯಿದೆ ಸಾಮಾಜಿಕ, ಭಾವನಾತ್ಮಕ ಮತ್ತು ಕಾನೂನಿನ ಮಹತ್ವವನ್ನು ಹೊಂದಿದೆ, ಯಾವುದೇ ಜೈವಿಕ ಸಂಬಂಧವಿಲ್ಲದ ಮಗುವಿಗೆ ಕಾನೂನುಬದ್ದ ಪೋಷಕರು ಎಂದು ಗುರುತಿಸಲಾಗುತ್ತದೆ.

ಈ ಮಾಹಿತಿಯು ಭಾರತದಲ್ಲಿ ಮಗುವನ್ನು ದತ್ತು ತೆಗೆದುಕೊಳ್ಳುವ ಐತಿಹಾಸಿಕ ಬೇರುಗಳು, ಅದರ ಜನಪ್ರೀಯತೆಯ ಹಿಂದಿನ ಕಾರಣಗಳು ಮತ್ತು ದೇಶದಲ್ಲಿ ಮಗುವನ್ನು ದತ್ತು ತೆಗೆದುಕೊಳ್ಳುವ ವಿವಾರವಾದ ಪ್ರಕ್ರಿಯೆಯನ್ನು ವಿವರಿಸಲು ಪ್ರಯತ್ನಿಸಲಾಗಿದೆ.


ದತ್ತು ಸ್ವೀಕಾರದ ಐತಿಹಾಸಿಕ ಹಿನ್ನಲೆ
ಭಾರತದಲ್ಲಿ ದತ್ತು ಸ್ವೀಕಾರವನ್ನು ಅಳವಡಿಸಿಕೊಳ್ಳವುದು ಹೊಸ ಪರಿಕಲ್ಪನೆಯಲ್ಲವಾದರೂ ಅದರ ಗ್ರಹಿಕೆಯು ಕಾಲಾನಂತರದಲ್ಲಿ ವಿಕಸನಗೊಂಡಿತು.

ಹಿಂದೆ ಮಗುವಿನ ದತ್ತು ಕಲ್ಪನೆಯು ಸಾಮಾಜಿಕ ಅಸಮ್ಮತಿಯನ್ನು ಎದುರಿಸಿತು.

ಅದಾಗ್ಯೂ ಸಮಕಾಲೀನ ಭಾರತೀಯ ಸಮಾಜವು ಅಳವಡಿಕೆಯ ಬಗ್ಗೆ ಬಹಿರಂಗವಾಗಿ ಚರ್ಚಿಸುತ್ತ, ಇದು ಸಾಂಸ್ಕೃತಿಕ ವರ್ತನೆಗಳಲ್ಲಿ ಧನಾತ್ಮಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.

ಈ ಪ್ರಕ್ರಯೆಯು ಕಾನೂನು ಮತ್ತು ಕಾರ್ಯವಿಧಾನದ ಅಂಶಗಳನ್ನು ಒತ್ತಿಹೇಳುವ ಮೂಲಕ ಮಗುವನ್ನು ದತ್ತು ಪಡೆಯುವುದು ಹೇಗೆ ಎಂಬುವುದನ್ನು ಅರ್ಥಮಾಡಿಕೊಳ್ಳುವ ಗಮನವು ಈಗ ಬದಲಾಗಿಬಿಟ್ಟಿದೆ.


ಮಗುವನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಒಂದು ಅನುಭವ
ಮಗುವನ್ನು ದತ್ತು ಪಡೆಯುವುದು ಕಾನೂನು ಬದ್ದತೆಯನ್ನು ಮೀರಿದ ಆಳವಾದ ಪ್ರಕ್ರಯೆಯಾಗಿದ್ದು, ದತ್ತು ಪಡೆದ ಪೋಷಕರಿಗೆ ಯಾವುದೇ ಜೈವಿಕ ಸಂಬಂಧವಿಲ್ಲದ ಮಗುವನ್ನು ನೋಡಿಕೊಳ್ಳುವ ಭಾವನಾತ್ಮಕ ಸ್ವೀಕಾರ ಮತ್ತು ಬದ್ದತೆಯನ್ನು ಒಳಗೊಂಡಿರುತ್ತದೆ.

ಇದು ಮಕ್ಕಳಿಗೆ ಪ್ರೀತಿ ವಾತ್ಸಲ್ಯ, ಸ್ಥಿರತೆ ಮತ್ತು ಬೆಂಬಲವನ್ನು ಅನುಭವಿಸಲು ಅವಕಾಶಗಳನ್ನು ಒದಗಿಸುವುದಲ್ಲದೆ, ಅವರ ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ. ದತ್ತು ಪಡೆದ ಪೋಷಕರಿಗೆ ಇದು ಒಂದು ಪರಿವರ್ತಕ ಅನುಭವವಾಗಿದ್ದು, ಅರ್ಥಪೂರ್ಣ ಕುಟುಂಬಗಳನ್ನಾಗಿ ಪೂರೈಸುವ ರೀತಿಯಲ್ಲಿ ಅನುವು ಮಾಡಿಕೊಡುತ್ತದೆ.


ಮಗುವನ್ನು ದತ್ತು ತೆಗೆದುಕೊಳ್ಳಲು ಅರ್ಹತೆಯ ಮಾನದಂಡಗಳು
ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಸಚಿವಾಲಯದ ಅಡಿಯಲ್ಲಿ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ (ಅಂಖA)ನೋಡಲ್ ಏಜೆನ್ಸಿಯಾಗಿದ್ದು, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015 ತಿದ್ದುಪಡಿ 2021 ಹಾಗೂ ದತ್ತು ಮಾರ್ಗಸೂಚಿ 2022ರ ಅನ್ವಯದಂತೆ ಮಗುವನ್ನು ದತ್ತು ತೆಗೆದುಕೊಳ್ಳುವ ಅರ್ಹತೆ ಮಾನದಂಡಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಹಾಗೂ ನಿರೀಕ್ಷಿತ ದತ್ತು ಪೋಷಕರು ಪೂರೈಸಬೇಕಾದ ಪ್ರಮುಖ ಷರತ್ತುಗಳು ಮತ್ತು ದಾಖಲೆಗಳು ಈ ಕೆಳಕಂಡಂತಿವೆ.


ಪೌರತ್ವ: ಭಾರತೀಯ ಪ್ರಜೆ, ಅನಿವಾಸಿ ಭಾರತೀಯ ಅಥವಾ ವಿದೇಶಿ ಪ್ರಜೆಗಳು ಸಹ ವಿಭಿನ್ನವಾದ ಮಗುವನ್ನು ಪಡೆಯುವ ವಿಧಾನವನ್ನು ಹೊಂದಿದೆ. ವೈವಾಹಿಕ ಸ್ಥಿತಿ: ಯಾವುದೇ ವ್ಯಕ್ತಿ ಲಿಂಗ ಅಥವಾ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ದತ್ತು ಪಡೆಯಲು ಅರ್ಹರಾಗಿರುತ್ತಾರೆ.


ಮಗುವಿನ ಹಿತಾಸಕ್ತಿ:


ನ್ಯಾಯಾಲಯದ ವಿಚಾರಣೆ:

ವಿವಾಹಿತ ದಂಪತಿಗಳು ಕನಿಷ್ಠ ಎರಡು ವರ್ಷಗಳ ಸಂಸಾರಿಕ ಜೀವನವನ್ನು ಪೂರ್ಣಗೊಳಿಸಿರಬೇಕು ಮತ್ತು ದತ್ತು ತೆಗೆದುಕೊಳ್ಳಲು ಜಂಟಿ ಒಪ್ಪಿಗೆ ನೀಡಬೇಕು.

ವಯಸ್ಸಿನ ಮಾನದಂಡಗಳು: ಮಗು ಮತ್ತು ನಿರೀಕ್ಷಿತ ದತ್ತು ಪೋಷಕರ ನಡುವಿನ ವಯಸ್ಸಿನ ವ್ಯತ್ಯಾಸವು ಕನಿಷ್ಠ 25 ವರ್ಷಗಳು ಇರಬೇಕು ಮತ್ತು ದತ್ತು ತೆಗೆದುಕೊಳ್ಳುವ ಪೋಷಕರು 25 ರಿಂದ 55 ವರ್ಷ ವಯಸ್ಸಿನವರಾಗಿರಬೇಕು.


ದತ್ತು ಪೂರ್ವ ಪೋಷಕತ್ವ:

ಆರೋಗ್ಯ: ದತ್ತು ಪಡೆದ ಪೋಷಕರು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸ್ಥಿರವಾಗಿರಬೇಕು, ಮಗುವಿನ ಮೂಲಭೂತ ಅಗತ್ಯಗಳನ್ನು ಒದಗಿಸುವ ಆರ್ಥಿಕ ಸಾಮರ್ಥ್ಯವನ್ನು ಹೊಂದಿರಬೇಕು.
ಏಕ ಪೋಷಕ ದತ್ತು:

ಪುರುಷ ಮತ್ತು ಮಹಿಳೆ ಏಕ ವ್ಯಕ್ತಿಗಳು ಇಬ್ಬರೂ ಮಗುವನ್ನು ದತ್ತು ಪಡೆಯಬಹುದಾಗಿದೆ. ಒಂಟಿ ಮಹಿಳೆ ಯಾವುದೇ ಲಿಂಗದ ಮಗುವನ್ನು ದತ್ತು ಪಡೆಯಬಹುದು ಆದರೆ ಒಬ್ಬ ಪುರುಷ ಗಂಡು ಮಗುವನ್ನು ಮಾತ್ರ ದತ್ತು ಪಡೆಯಬಹುದಾಗಿದೆ.
ದತ್ತು ಪಡೆಯುವ ಏಕ ಪೋಷಕರ ವಯಸ್ಸು 55 ವರ್ಷಕ್ಕಿಂತ ಕಡಿಮೆ ಇರಬೇಕು ಹಾಗೂ ಇಬ್ಬರು ದಂಪತಿಗಳ ಸಂಚಿತ ವಯಸ್ಸು ಗರಿಷ್ಠ 110 ವರ್ಷಕ್ಕಿಂತ ಕಡಿಮೆ ಇರಬೇಕು.
ದತ್ತು ನೀಡುವ ಮಕ್ಕಳ ಅರ್ಹತೆ:

ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯಿಂದ ಮಕ್ಕಳು ಕಾನೂನು ಬದ್ದವಾಗಿ ದತ್ತು ಮುಕ್ತವೆಂದು ಘೋಷಿಸಲ್ಪಟ್ಟು ನಿರ್ದಿಷ್ಟಡಿಸಿದ್ದು ನಂತರ ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳನ್ನು ದತ್ತು ನೀಡಲು ಅರ್ಹತೆಯನ್ನು ನಿರ್ಧರಿಸುತ್ತದೆ.
ದತ್ತು ಪಡೆಯಲು ಬಯಸುವ ಪೋಷಕರು ಉತ್ತಮ ಆರೋಗ್ಯ, ದೈಹಿಕ, ಮಾನಸಿಕ, ಮತ್ತು ಭಾವನಾತ್ಮಕ ಸ್ಥಿರತೆ, ಆರ್ಥಿಕ ಸಾಮರ್ಥ್ಯ ಮತ್ತು ವಯಸ್ಸಿನ ಮಿತಿಗಳ ಅನುಸರಣೆ ಸೇರಿದಂತೆ CARA ವಿವರಿಸಿರುವ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ಮಗುವಿನ ಪಾಲನೆಯು ಪ್ರೀತಿ ಮತ್ತು ಬೆಂಬಲದ ವಾತಾವರಣವನ್ನು ಸೃಷ್ಠಿಸುವುದು ಮತ್ತು ಮಗುವಿನ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಹಾಗೂ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. CARA ನಿರ್ದಿಷ್ಠಪಡಿಸಿದಂತೆ ದತ್ತು ಪಡೆಯುವ ಪೋಷಕರು ಕೆಲವು ಮಾನದಂಡಗಳನ್ನು ಪೂರೈಸುವ ಅಗತ್ಯವಿದ್ದು, ಉತ್ತಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಹೊಂದಿರಬೇಕು,

ವಿಶೇಷ ಅಗತ್ಯವುಳ್ಳ ಮಗುವಿನ ಸಂದರ್ಭವನ್ನು ಹೊರತುಪಡಿಸಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ದಂಪತಿಗಳು ದತ್ತು ಪಡೆಯಲು ಅರ್ಹರಾಗಿರುವುದಿಲ್ಲ.
ಮಕ್ಕಳ ದತ್ತು ಪ್ರಕ್ರಿಯೆ :ಮಗುವನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಯು ಹಲವಾರು ವಿವರವಾದ ಹಂತಗಳನ್ನು ಒಳಗೊಂಡಿರುತ್ತದೆ.
ನೋಂದಣಿ:

ನಿರೀಕ್ಷಿತ ದತ್ತು ಪೋಷಕರು ಹತ್ತಿರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ಅಧಿಕೃತ ದತ್ತು ಏಜೆನ್ಸಿಯೊಂದಿಗೆ www.cara.wcd.nic.in ಕೇರಿಂಗ್ಸ್ನಲ್ಲಿ ನೋಂದಾಯಿಸಿಕೊಳ್ಳಬೇಕು, ನೋಂದಾಣಿಯು ಅಲ್ಲಿನ ಸಮಾಲೋಚಕರು/ಸಾಮಾಜಿಕ ಕಾರ್ಯಕರ್ತರ ಮಾರ್ಗದರ್ಶನ ಹಾಗೂ ಸಂಬಂಧಿಸಿದ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳುವುದು.
ಗೃಹ ಅಧ್ಯಯನ ಮತ್ತು ಸಮಾಲೋಚನೆ (ಹೋಮ್ ಸ್ಟಡಿ ಮತ್ತು ಕೌನ್ಸಿಲಿಂಗ್): ಒಬ್ಬ ಸಾಮಾಜಿಕ ಕಾರ್ಯಕರ್ತರು ನಿರೀಕ್ಷಿತ ದತ್ತು ಪಡೆಯುವ ಪೋಷಕರ ನಿವಾಸಕ್ಕೆ ಭೇಟಿ ನೀಡಿ ಗೃಹ ಅಧ್ಯಯನವನ್ನು ನಡೆಸುತ್ತಾನೆ,

ಅವರ ಪ್ರೇರಣೆಗಳು, ಸಾಮರ್ಥ್ಯಗಳೂ ಮತ್ತು ದೌರ್ಬಲ್ಯಗಳನ್ನು ಅಧ್ಯಾಯನಿಸಿ ವರದಿ ಸಿದ್ದಪಡಿಸುವುದು ಮತ್ತು ದತ್ತು ಪಡೆಯಲು ಅವರ ಸನ್ನದ್ದತೆಯ ಒಳನೋಟಗಳನ್ನು ಪಡೆಯಲು ಸಮಾಲೋಚನೆಯನ್ನು ನಡೆಸುತ್ತಾರೆ.
ಮಗುವಿನ ರೆಫರಲ್: ಮಗುವು ದತ್ತು ನೀಡಲು ಲಭ್ಯವಾದಾಗ, ಪೋರ್ಟಲ್ ಮೂಲಕ ನೋಂದಾಯಿಸಿಕೊಂಡ ಪೋಷಕರ ಜೇಷ್ಠತೆಯ ಆಧಾರದ ಮೇಲೆ ಮಗುವಿನ ಫೋಟೋ, ವೈದ್ಯಕೀಯ ವರದಿಗಳು, ಮಗುವಿನ ಅಧ್ಯಯನ ವರದಿ ಸೇರಿದಂತೆ ಸಂಬAಧಿತ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ ಮತ್ತು ದತ್ತು ಪಡೆಯುವ ಪೋಷಕರ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲಾಗುವುದು.

ದತ್ತು ಪಡೆಯುವ ಪೋಷಕರ ಅಗತ್ಯ ದಾಖೆಲೆಗಳನ್ನು ದತ್ತು ಸಮಿತಿ (ಅಡಪ್ಸನ್ ಕಮಿಟಿ)ಗೆ ಮಂಡಿಸಲಾಗುತ್ತದೆ, ಸಮಿತಿಯು ಅವರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಹಾಗೂ ಪೋಷಕರು ಮಗುವಿನ ಎಲ್ಲಾ ಅಗತ್ಯಗಳನ್ನು ಪೂರೈಸುವ ಬಗ್ಗೆ ಮತ್ತು ಮಗುವಿನ ಪಾಲನೆ ಕುರಿತು ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ದತ್ತು ಕೇಂದ್ರದಿಂದ ಮಗುವನ್ನು ಪೋಷಕರ ವಶಕ್ಕೆ ನೀಡಲಾಗುತ್ತದೆ.


ಅರ್ಜಿಯನ್ನು ಸಲ್ಲಿಸುವುದು: ಏಜನ್ಸಿಯವರು ದತ್ತು ಪೋಷಕರ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಿದ್ದಪಡಿಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸಲ್ಲಿಸುತ್ತಾರೆ ಅವರು ಪೋಷಕರ ದಾಖಲೆಗಳನ್ನು ಪರೀಶಿಲಿಸಿ ದತ್ತು ಆದೇಶ ನೀಡುವಂತೆ ಕಡತವನ್ನು ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ.

ಪೋಷಕರು ಜಿಲ್ಲಾಧಿಕಾರಿಯವರ ನ್ಯಾಯಾಲಯದ ವಿಚಾರಣೆಗೆ ಹಾಜರಾಬೇಕು, ಅಲ್ಲಿ ಜಿಲ್ಲಾಧಿಕಾರಿಯವರು ಪ್ರಶ್ನೆಗಳನ್ನು ಕೇಳಬಹುದು ಹಾಗೂ ಮಗುವಿನ ಅಗತ್ಯಗಳು, ಪಾಲನೆ ಮತ್ತು ರಕ್ಷಣೆ ಕುರಿತು ಸಮಾಲೋಚಿಸಿ ದತ್ತು ಆದೇಶ ನೀಡುತ್ತಾರೆ.
ಅನುಸರಣೆ (ಫಾಲೋ ಅಪ್): ದತ್ತು ಏಜೆನ್ಸಿಯು ಪ್ರತಿ ಆರು ತಿಂಗಳಿಗೊಮ್ಮೆ ಎರಡು ವರ್ಷಗಳವರೆಗೆ ದತ್ತು ಪೋಷಕರ ಮನೆಗೆ ಭೇಟಿ ನೀಡಿ ಮಗುವಿನ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಅನುಸರಣಾ ವರದಿ ತಯಾರಿಸಿ ಪೋರ್ಟಲ್‌ನಲ್ಲಿ ಆಪ್‌ಲೋಡ್ ಮಾಡಲಾಗುತ್ತದೆ
ಮೂಲಭೂತ ತತ್ವಗಳು: ಮಗುವನ್ನು ದತ್ತು ಪಡೆಯುವುದು ಎಲ್ಲಕ್ಕಿಂತ ಹೆಚ್ಚಾಗಿ ಮಗುವಿನ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತದೆ, ಪ್ರತಿ ದತ್ತು ಪ್ರಕ್ರಿಯೆಗೆ ಮಾರ್ಗದರ್ಶನ ನೀಡುವ ಪ್ರಮುಖ ತತ್ವಗಳು ಇಲ್ಲಿವೆ.

ದತ್ತು ಪ್ರಕ್ರಿಯೆಯ ಉದ್ದಕ್ಕೂ ಪ್ರತಿಯೊಂದು ನಿರ್ಧಾರವು ಮಗುವಿನ ಒಟ್ಟಾರೆ ಯೋಗಕ್ಷೇಮ, ಭದ್ರತೆ ಮತ್ತು ಸಂತೋಷಕ್ಕಾಗಿ ಯಾವುದು ಉತ್ತಮ ಎಂಬುವುದರ ಮೇಲೆ ಕೇಂದ್ರಿಕರಿಸುತ್ತದೆ.ಶಾಶ್ವತ ಕುಟುಂಬಗಳನ್ನು ಹುಡುಕುವುದು: ಸಾಧ್ಯವಾದಗಲೆಲ್ಲಾ ಸಾಂಸ್ಕೃತಿಕ ನಿರಂತರತೆ ಮತ್ತು ಮಗುವಿಗೆ ಪರಿಚಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ದತ್ತು ಪಡೆಯುವ ಕುಟುಂಬಗಳನ್ನು ಹುಡುಕಲಾಗುತ್ತದೆ. ದತ್ತು ದಾಖಲೆಗಳನ್ನು ರಕ್ಷಿಸುವುದು: ಎಲ್ಲಾ ದತ್ತುಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ಮಗುವಿನ ಹಾಗೂ ದತ್ತು ಪಡೆದ ಕುಟುಂಬದ ಗೌಪ್ಯತೆಯನ್ನು ರಕ್ಷಿಸಲು ಸುರಕ್ಷಿತ ವ್ಯವಸ್ಥೆಯೊಂದಿಗೆ ನೋಂದಾಯಿಸಲಾಗುತ್ತದೆ.
ದತ್ತು ಪ್ರಕ್ರಿಯೆಯಲ್ಲಿ ಬರುವ ಪಾಲುದಾರರು:ಅನಾಥ, ಪರಿತ್ಯಕ್ತ ಹಾಗೂ ಒಪ್ಪಿಸಲ್ಪಟ್ಟ ಮಕ್ಕಳನ್ನುದತ್ತು ನೀಡಲು ಅಗತ್ಯವಿರುವ ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ನಿರ್ವಹಿಸುವ ಒಂದು ರೀತಿಯ ಸಮರ್ಪಿತ ತಂಡವನ್ನು ಒಳಗೊಂಡಿದೆ.


ಕೇAದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ (CARA): ದತ್ತು ನೀಡಲು ಮತ್ತು ಪಡೆಯಲು ಅಂಖA ಕೇಂದ್ರವಾಗಿ ಕೆಲಸ ನಿರ್ವಹಿಸುತ್ತದೆ, ಅವರು ಸಂಪೂರ್ಣ ದತ್ತು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವುದು, ಮಾರ್ಗಸೂಚಿಗಳನ್ನು ಹೊರಡಿಸುವುದು ಮತ್ತು ಪ್ರಕ್ರಿಯೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು.


ರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿ (SARA): ಪ್ರತಿ ರಾಜ್ಯವು ತನ್ನದೇ ಆದ ರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿಯನ್ನು ಹೊಂದಿರುತ್ತದೆ, ಇದು ಸ್ಥಳೀಯ ಶಾಖಾ ಕಛೇರಿಯಂತೆ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ದತ್ತು ಪಡೆಯುವುದನ್ನು ಉತ್ತೇಜಿಸಲು ಅಂಖA ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅಸಾಂಸ್ಥಿಕ ಸೇವೆಗಳಲ್ಲಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುವುದನ್ನು ಮೇಲ್ವಿಚಾರಣೆ ಮಾಡುತ್ತದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ: ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಹೊಂದಿರುತ್ತದೆ, ಇದು ಜಿಲ್ಲೆಯಲ್ಲಿ ದತ್ತು ಪಡೆಯುವುದನ್ನು ಉತ್ತೇಜಿಸಲು SARA ಮತ್ತು CARA ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ, ದತ್ತು ನೀಡಲು ಅರ್ಹರಾಗಬಹುದಾದ ಮಕ್ಕಳನ್ನು ಗರುತಿಸುವುದು, ನಿರೀಕ್ಷಿತ ದತ್ತು ಪೋಷಕರ ಗೃಹ ಅಧ್ಯಯನ ಸಿದ್ದಪಡಿಸುವುದು, ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳನ್ನು ಗುರುತಿಸಿ ಅವರಿಗೆ ಶಾಶ್ವತ ಕುಟುಂಬಗಳನ್ನು ಹುಡುಕುವ ಹಾಗೂ ಕಾರ್ಯ ನಿರ್ವಹಿಸುತ್ತದೆ.


ದತ್ತು ಏಜೆನ್ಸಿ: ದತ್ತು ಏಜೆನ್ಸಿಯು ತಮ್ಮ ಆರೈಕೆಯಲ್ಲಿರುವ ಮಕ್ಕಳನ್ನು ಪಾಲನೆ ಮಾಡುವುದು, ಎಸ್.ಐ.ಆರ್, ಎಂ.ಇ.ಆರ್ ಹಾಗೂ ನಿರೀಕ್ಷಿತ ದತ್ತು ಪೋಷಕರ ಗೃಹ ಅಧ್ಯಯನ ಸಿದ್ದಪಡಿಸುವುದು ಮತ್ತು ನಿರೀಕ್ಷಿತ ದತ್ತು ಪೋಷಕರಿಗೆ ಸಮಾಲೋಚನೆಗೆ ಒಳಪಡಿಸಿ ಸಿದ್ದಗೊಳಿಸುವುದು, ಪ್ರತಿಯೊಬ್ಬರ ಅಗತ್ಯತೆಗಳ ಆಧಾರದ ಮೇಲೆ ಸಾಧ್ಯವಾದಷ್ಟು ಉತ್ತಮ ಹೊಂದಾಣಿಕೆಗಳನ್ನು ಮಾಡುವುದು ಒಟ್ಟಾರೆ ಮ್ಯಾಚ್‌ಮೇಕರ್‌ಗಳಂತೆ ಕಾರ್ಯನಿರ್ವಹಿಸುತ್ತದೆ.
ದತ್ತು ಪ್ರಕ್ರಿಯೆಯ ಅವಧಿ:ಮಗುವಿನ ದತ್ತು ಪ್ರಕ್ರಿಯೆಯು ಸುಮಾರು ಮೂರರಿಂದ ನಾಲ್ಕು ವರ್ಷಗಳನ್ನು ತೆಗೆದುಕೊಳ್ಳುತ್ತದೆ, ದತ್ತು ಶಲ್ಕ: ಗೃಹ ಅಧ್ಯಯನ ನಡೆಸುವ ಸಂದರ್ಭದಲ್ಲಿ ರೂ.6೦೦೦/- ನೀಡಬೇಕು ಹಾಗೂ ಮಗುವನ್ನು ಪೋಷಕರ ವಶಕ್ಕೆ ನೀಡುವ ಸಮಯದಲ್ಲಿ ದತ್ತು ಏಜೆನ್ಸಿಗೆ ರೂ.5೦೦೦೦/- ನೀಡಬೇಕಾಗುತ್ತದೆ.


ಮಗುವನ್ನು ದತ್ತು ಪಡೆಯುವುದು ಒಂದು ಮಹತ್ವದ ನಿರ್ಧಾರವಾಗಿದ್ದು, ಅದು ದತ್ತು ಪಡೆದ ಪೋಷಕರ ಜೀವನವನ್ನು ಪರಿವರ್ತಿಸುತ್ತದೆ, ಮಗುವಿಗೆ ಪ್ರೀತಿ, ವಾತ್ಸಲ್ಯ ಮತ್ತು ಘನತೆಯಿಂದ ಬದುಕುವ ಅವಕಾಶವನ್ನು ಒದಗಿಸುತ್ತದೆ, ಭಾರತವು ವಿಶಾಲವಾದ ಜನಸಂಖ್ಯೆಯನ್ನು ಹೊಂದಿದ್ದು, ದತ್ತು ಪಡೆಯುವುದು ಉದಾತ್ತ ಕಾರ್ಯವನ್ನಾಗಿ ಮಾಡಿದೆ.ಪ್ರತಿ ಮಗುವೂ ಕುಟುಂಬದಲ್ಲಿ ಬೆಳೆಯುವ ಹಕ್ಕುನ್ನು ಹೊಂದಿದೆ ಮತ್ತು CARA ವಿವರಿಸಿರುವ ಕಾನೂನು ಕಾರ್ಯವಿಧಾನಗಳ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ.ಮಕ್ಕಳು ರಾಷ್ಟದ ಅತ್ಯಮೂಲ್ಯ ಸಂಪತ್ತು ಮತ್ತು ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ಸಾಮೂಹಿಕ ಜವಾಬ್ದಾರಿಯಾಗಿದೆ ಅಲ್ಲದೆ ದತ್ತು ಎರಡೂ ಜಿವನಕ್ಕೆ ಧನಾತ್ಮಕ ಕೊಡುಗೆ ನೀಡುವ ಅರ್ಥಪೂರ್ಣ ಪ್ರಯತ್ನವೆಂದು ಭಾವಿಸಬಹುದಾಗಿದೆ.

ಶನಿವಾರ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

0

ತುರುವೇಕೆರೆ: ತಾಲ್ಲೂಕು ಕ್ಷೇತ್ರ ಶಿಕ್ಷಣ ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಹಾಗು ಇಂಡಿಯನ್ ಪಬ್ಲಿಕ್ ಸ್ಕೂಲ್ ವತಿಯಿಂದ ನ.9ರಂದು 2024-25ನೇ ಸಾಲಿನ ತುರುವೇಕೆರೆ ತಾಲ್ಲೂಕು ಮಟ್ಟದ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ತಿಳಿಸಿದ್ದಾರೆ.
ಬೆಳಗ್ಗೆ 9:30ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ವಹಿಸಲಿದ್ದು, ಸಂಸದ ವಿ.ಸೋಮಣ್ಣ ಘನ ಉಪಸ್ಥಿತಿ ಇರಲಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ವಿರಕ್ತಮಠದ ಕರಿವೃಷಭ ದೇಶಿ ಕೇಂದ್ರ ಶಿವಯೋಗೀಶ್ವರ ಮಹಾ ಸ್ವಾಮೀಜಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ.

ಪ್ರೊ.ಪ್ರಶಾಂತ್ ಕಾಳಪ್ಪಗೆ ರಾಯಲ್ ಸೊಸೈಟಿಯ ಗೌರವ ಫೆಲೋಶಿಫ್

0

ಬೆಂಗಳೂರು: ಪ್ರತಿಷ್ಠಿತ ಲಂಡನ್ ನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಯ (FRSC) ಫೆಲೋಶಿಪ್  ಗೌರವಕ್ಕೆ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಡೀನ್ ಪೊಫೆಸರ್ ಪ್ರಶಾಂತ ಕಾಳಪ್ಪ ಅವರು ಪಾತ್ರರಾಗಿದ್ದಾರೆ.

ಪ್ರಶಾಂತ ಕಾಳಪ್ಪ ಅವರ ಈ ಸಾಧನೆ ಕನ್ನಡನಾಡಿಗೆ ಸಂದ ಗೌರವವೂ ಆಗಿದೆ. ಮೂಲತಃ ಚನ್ನರಾಯನಪಟ್ಟಣದವರಾದ ಪ್ರಶಾಂತ್ ಅವರು, ತಮ್ಮ ಸರಳತೆ, ಮೃಧು ಮಾತುಗಳಿಂದಲೂ ಜನಮನ್ನಣೆಗೆ ಪಾತ್ರರಾಗಿರುವ ಜಾಗತಿಕ ವಿಜ್ಞಾನಿ ಎನಿಸಿದ್ದಾರೆ.

ಪಾಲಿಮರ್ ಕೆಮೆಸ್ಟ್ರಿ ಮತ್ತು ಮೆಟೀರಿಯಲ್ಸ್  ಸೈನ್ಸ್ ನಲ್ಲಿ ಮಾಡಿದ ಇವರ ಅಸಾಧಾರಣ ಸಂಶೋಧನೆಗಾಗಿ ಈ ಗೌರವ ಅವರಿಗೆ ಸಂದಿದೆ.


ಆದಿಚುಂಚನಗಿರಿ ಶ್ರೀ ಅಭಿನಂದನೆ

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಯೂ ಆಗಿರುವ ಚುಂಚನಗುರಿ ಶ್ರೀಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪ್ರಶಾಂತ ಕಾಳಪ್ಪ ಸಾಧನೆಯನ್ನು ಶ್ಲಾಘಿಸಿದ್ದಾರೆ.

ವಿ.ವಿ.ಯ ಉಪಕುಲಪತಿಗಳಾದ ಡಾ. ಎಂ.ಎ. ಶೇಖರ್ ಮತ್ತು ರಿಜಿಸ್ಟ್ರಾರ್ ಡಾ. ಕೆ.ಸಿ ಸುಬ್ರಾಯ ಅವರುಗಳು ಪ್ರಶಾಂತ್ ಅವರನ್ನು ಅಭಿನಂದಿಸಿದ್ದಾರೆ.



ಪ್ರೊಫೆಸರ್ ಪ್ರಶಾಂತ್ ಕಾಳಪ್ಪ ಅವರ ಸಂಶೋಧನಾ ಪರಿಭಾಷೆಗಳು ಅಂತಾಷ್ಟ್ರೀಯ ಮಟ್ಟದಲ್ಲಿ ಪಾಲಿಮರ್ ವಿಜ್ಞಾನದಲ್ಲಿ ದೊಡ್ಡ ಕೊಡುಗೆಗಳನ್ನು ನೀಡಿವೆ. ಇದು ಜಾಗತಿಕವಾಗಿ  ಭಾರತೀಯರಿಗೆ ಹೆಮ್ಮೆಯ ವಿಚಾರವೆನಿಸಿದೆ.

ಬಹುಕ್ರಿಯಾತ್ಮಕ ನ್ಯಾನೊಕಂಪೊಸಿಟ್ ಗಳನ್ನು ಮಾಸ್ಟರ್ ಬ್ಯಾಕ್ ತಂತ್ರಕ್ಕೆ ಅಳವಡಿಸುವ ವಿಷಯದ ಮೊದಲ ಪ್ರವರ್ತಕರು ಇವರು. ಇದು ಕನ್ನಡಿಗರ ಹೆಮ್ಮೆಯಾಗಿದೆ.

ಸ್ಮಾರ್ಟ್ ಪಾಲಿಮರ್ಸ್, 3D ಪ್ರಿಂಟಿಂಗ್ ಮತ್ತು ನ್ಯಾನೊ ಮೆಟೀರಿಯಲ್ಸ್ ಇವುಗಳನ್ನು ಮೂಲಭೂತವಾಗಿ ಒಳಗೊಳ್ಳುವ ಅನ್ವಯಿಕ ಅಂಶಗಳ ಮೇಲೆ ಇವರ ಸಂಶೋಧನೆಗಳು ಬೆಳಕು ಚೆಲ್ಲುತ್ತವೆ.

ಇವರ 110 ಕ್ಕೂ ಹೆಚ್ಚು ಸಂಶೋಧನಾ ಬರಹಗಳು ಅಂತರರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿ ಜಾಗತಿಕ ಮನ್ನಣೆಗಳಿಸಿವೆ. ಈವರಗೂ 5 ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನ ಮಾರ್ಗದರ್ಶನ ನೀಡಿದ್ದಾರೆ.

ಪ್ರತಿಭಾವಂತರಾಗಿರುವ ಪ್ರಶಾಂತ್ ಕಾಳಪ್ಪರವರು ಡಾ.ಬಿ ಎಸ್ ಶೇರಿಗಾರ ಅವರ ಮಾರ್ಗದರ್ಶನದಲ್ಲಿ  ಪಿ.ಹೆಚ್.ಡಿ ಪ್ರಬಂಧ ಮಂಡಿಸಿ ಕುವೆಂಪು ವಿಶ್ವವಿದ್ಯಾಲಯದಲ್ಲಿ  ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

ದಕ್ಷಿಣ ಕೊರಿಯಾದ Chonbuk National University ಯಲ್ಲಿ ಪೊಸ್ಟ್ ಡಾಕ್ಟರಲ್ ಪ್ರಬಂಧ ಮಂಡನೆ,  ಫ್ರಾನ್ಸ್ ದೇಶದ ಮೈನ್ಸ್ ಟೆಲಿಕಾಮ್ ಇನಸ್ಟಿಟ್ಯೂಟ್ ನಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ಬೋಧನಾ ಕ್ಷೇತ್ರದಲ್ಲೂ ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಿದ ಕೀರ್ತಿ ಇವರದಾಗಿದೆ.

ಪ್ರಸ್ತುತ ಇವರು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ನೈಸರ್ಗಿಕ ವಿಜ್ಞಾನ ವಿಭಾಗದ ಪ್ರೊಫೆಸರ್ ಆಗಿ  ಸೇವೆ ಸಲ್ಲಿಸುತ್ತಿದ್ದಾರೆ.

ಫ್ರಾನ್ಸಿನ University of Picardie Jules Verneದಲ್ಲಿ ಇಂಡೋಫ್ರೆಂಚ್ ಪ್ರಾಜೆಕ್ಟ್ ನಲ್ಲಿಯೂ ಸೇವೆ ಸಲ್ಲಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಇವರಿಗೆ ಸಂದ ರಾಯಲ್ ಸೊಸೈಟಿ ಆಫ್ ಕೆಮೆಸ್ಟ್ರಿಯ ಫೆಲೊಶಿಪ್ ಗೌರವ  ಕನ್ನಡನಾಡಿಗೆ ಸಿಕ್ಕ ಮತ್ತೊಂದು ಮುಕುಟಮಣಿಯಾಗಿದೆ.


ರಾಯಲ್ ಸೊಸೈಟಿ ಆಫ್ ಕೆಮೆಸ್ಟ್ರಿ ಲಂಡನ್ನಿನಲ್ಲಿ 1841 ರಲ್ಲಿ ಸ್ಥಾಪನೆಯಾಗಿದ್ದು ಇದರ ಮೂಲ ಧ್ಯೇಯ ಪ್ರಾಪಂಚಿಕ ಮಟ್ಟದಲ್ಲಿ ಪ್ರಮುಖವಾಗಿ ಕೆಮಿಕಲ್ ಸೈನ್ಸ್ ವಿಷಯದಲ್ಲಿ ರುವ ವೃತ್ತಿಪರರಿಗೆ, ಸಂಶೋಧಕರಿಗೆ ಪ್ರೋತ್ಸಾಹ ನೀಡುವುದಾಗಿದೆ.

ರಾಯಲ್ ಸೊಸೈಟಿ ಆಫ್ ಕೆಮೆಸ್ಟ್ರಿ ಶೈಕ್ಷಣಿಕವಾಗಿ ಮಾತ್ರವಲ್ಲದೆ ಕೈಗಾರಿಕೆ, ಸರಕಾರಿ ಮಟ್ಟದ ಯೋಜನಾ ಸಲಹೆಗಳು- ಸೇವೆಗಳನ್ನು ಪ್ರೋತ್ಸಾಹ ಮಾಡುತ್ತಾ ಹೊಸ ಕ್ರಿಯಾಯೋಜನೆಗಳು, ವಿಜ್ಞಾನವಿಭಾಗದ ಮುಂದುವರೆದ ವಿನೂತನ ಸಂಶೋಧನೆಗಳನ್ನು ಪ್ರೋತ್ಸಾಹಿಸುತ್ತಾ ಪ್ರತಿಭಾನ್ವಿತರನ್ನು ಗುರುತಿಸಿ ಮುನ್ನೆಲೆಗೆ ತರುತ್ತಿದೆ.