Saturday, December 6, 2025
Google search engine
Home Blog Page 7

ಶನಿವಾರ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

0

ತುರುವೇಕೆರೆ: ತಾಲ್ಲೂಕು ಕ್ಷೇತ್ರ ಶಿಕ್ಷಣ ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಹಾಗು ಇಂಡಿಯನ್ ಪಬ್ಲಿಕ್ ಸ್ಕೂಲ್ ವತಿಯಿಂದ ನ.9ರಂದು 2024-25ನೇ ಸಾಲಿನ ತುರುವೇಕೆರೆ ತಾಲ್ಲೂಕು ಮಟ್ಟದ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ತಿಳಿಸಿದ್ದಾರೆ.
ಬೆಳಗ್ಗೆ 9:30ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ವಹಿಸಲಿದ್ದು, ಸಂಸದ ವಿ.ಸೋಮಣ್ಣ ಘನ ಉಪಸ್ಥಿತಿ ಇರಲಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ವಿರಕ್ತಮಠದ ಕರಿವೃಷಭ ದೇಶಿ ಕೇಂದ್ರ ಶಿವಯೋಗೀಶ್ವರ ಮಹಾ ಸ್ವಾಮೀಜಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ.

ಪ್ರೊ.ಪ್ರಶಾಂತ್ ಕಾಳಪ್ಪಗೆ ರಾಯಲ್ ಸೊಸೈಟಿಯ ಗೌರವ ಫೆಲೋಶಿಫ್

0

ಬೆಂಗಳೂರು: ಪ್ರತಿಷ್ಠಿತ ಲಂಡನ್ ನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಯ (FRSC) ಫೆಲೋಶಿಪ್  ಗೌರವಕ್ಕೆ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಡೀನ್ ಪೊಫೆಸರ್ ಪ್ರಶಾಂತ ಕಾಳಪ್ಪ ಅವರು ಪಾತ್ರರಾಗಿದ್ದಾರೆ.

ಪ್ರಶಾಂತ ಕಾಳಪ್ಪ ಅವರ ಈ ಸಾಧನೆ ಕನ್ನಡನಾಡಿಗೆ ಸಂದ ಗೌರವವೂ ಆಗಿದೆ. ಮೂಲತಃ ಚನ್ನರಾಯನಪಟ್ಟಣದವರಾದ ಪ್ರಶಾಂತ್ ಅವರು, ತಮ್ಮ ಸರಳತೆ, ಮೃಧು ಮಾತುಗಳಿಂದಲೂ ಜನಮನ್ನಣೆಗೆ ಪಾತ್ರರಾಗಿರುವ ಜಾಗತಿಕ ವಿಜ್ಞಾನಿ ಎನಿಸಿದ್ದಾರೆ.

ಪಾಲಿಮರ್ ಕೆಮೆಸ್ಟ್ರಿ ಮತ್ತು ಮೆಟೀರಿಯಲ್ಸ್  ಸೈನ್ಸ್ ನಲ್ಲಿ ಮಾಡಿದ ಇವರ ಅಸಾಧಾರಣ ಸಂಶೋಧನೆಗಾಗಿ ಈ ಗೌರವ ಅವರಿಗೆ ಸಂದಿದೆ.


ಆದಿಚುಂಚನಗಿರಿ ಶ್ರೀ ಅಭಿನಂದನೆ

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಯೂ ಆಗಿರುವ ಚುಂಚನಗುರಿ ಶ್ರೀಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪ್ರಶಾಂತ ಕಾಳಪ್ಪ ಸಾಧನೆಯನ್ನು ಶ್ಲಾಘಿಸಿದ್ದಾರೆ.

ವಿ.ವಿ.ಯ ಉಪಕುಲಪತಿಗಳಾದ ಡಾ. ಎಂ.ಎ. ಶೇಖರ್ ಮತ್ತು ರಿಜಿಸ್ಟ್ರಾರ್ ಡಾ. ಕೆ.ಸಿ ಸುಬ್ರಾಯ ಅವರುಗಳು ಪ್ರಶಾಂತ್ ಅವರನ್ನು ಅಭಿನಂದಿಸಿದ್ದಾರೆ.



ಪ್ರೊಫೆಸರ್ ಪ್ರಶಾಂತ್ ಕಾಳಪ್ಪ ಅವರ ಸಂಶೋಧನಾ ಪರಿಭಾಷೆಗಳು ಅಂತಾಷ್ಟ್ರೀಯ ಮಟ್ಟದಲ್ಲಿ ಪಾಲಿಮರ್ ವಿಜ್ಞಾನದಲ್ಲಿ ದೊಡ್ಡ ಕೊಡುಗೆಗಳನ್ನು ನೀಡಿವೆ. ಇದು ಜಾಗತಿಕವಾಗಿ  ಭಾರತೀಯರಿಗೆ ಹೆಮ್ಮೆಯ ವಿಚಾರವೆನಿಸಿದೆ.

ಬಹುಕ್ರಿಯಾತ್ಮಕ ನ್ಯಾನೊಕಂಪೊಸಿಟ್ ಗಳನ್ನು ಮಾಸ್ಟರ್ ಬ್ಯಾಕ್ ತಂತ್ರಕ್ಕೆ ಅಳವಡಿಸುವ ವಿಷಯದ ಮೊದಲ ಪ್ರವರ್ತಕರು ಇವರು. ಇದು ಕನ್ನಡಿಗರ ಹೆಮ್ಮೆಯಾಗಿದೆ.

ಸ್ಮಾರ್ಟ್ ಪಾಲಿಮರ್ಸ್, 3D ಪ್ರಿಂಟಿಂಗ್ ಮತ್ತು ನ್ಯಾನೊ ಮೆಟೀರಿಯಲ್ಸ್ ಇವುಗಳನ್ನು ಮೂಲಭೂತವಾಗಿ ಒಳಗೊಳ್ಳುವ ಅನ್ವಯಿಕ ಅಂಶಗಳ ಮೇಲೆ ಇವರ ಸಂಶೋಧನೆಗಳು ಬೆಳಕು ಚೆಲ್ಲುತ್ತವೆ.

ಇವರ 110 ಕ್ಕೂ ಹೆಚ್ಚು ಸಂಶೋಧನಾ ಬರಹಗಳು ಅಂತರರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿ ಜಾಗತಿಕ ಮನ್ನಣೆಗಳಿಸಿವೆ. ಈವರಗೂ 5 ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನ ಮಾರ್ಗದರ್ಶನ ನೀಡಿದ್ದಾರೆ.

ಪ್ರತಿಭಾವಂತರಾಗಿರುವ ಪ್ರಶಾಂತ್ ಕಾಳಪ್ಪರವರು ಡಾ.ಬಿ ಎಸ್ ಶೇರಿಗಾರ ಅವರ ಮಾರ್ಗದರ್ಶನದಲ್ಲಿ  ಪಿ.ಹೆಚ್.ಡಿ ಪ್ರಬಂಧ ಮಂಡಿಸಿ ಕುವೆಂಪು ವಿಶ್ವವಿದ್ಯಾಲಯದಲ್ಲಿ  ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

ದಕ್ಷಿಣ ಕೊರಿಯಾದ Chonbuk National University ಯಲ್ಲಿ ಪೊಸ್ಟ್ ಡಾಕ್ಟರಲ್ ಪ್ರಬಂಧ ಮಂಡನೆ,  ಫ್ರಾನ್ಸ್ ದೇಶದ ಮೈನ್ಸ್ ಟೆಲಿಕಾಮ್ ಇನಸ್ಟಿಟ್ಯೂಟ್ ನಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ಬೋಧನಾ ಕ್ಷೇತ್ರದಲ್ಲೂ ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಿದ ಕೀರ್ತಿ ಇವರದಾಗಿದೆ.

ಪ್ರಸ್ತುತ ಇವರು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಂಶೋಧನಾ ಮತ್ತು ನೈಸರ್ಗಿಕ ವಿಜ್ಞಾನ ವಿಭಾಗದ ಪ್ರೊಫೆಸರ್ ಆಗಿ  ಸೇವೆ ಸಲ್ಲಿಸುತ್ತಿದ್ದಾರೆ.

ಫ್ರಾನ್ಸಿನ University of Picardie Jules Verneದಲ್ಲಿ ಇಂಡೋಫ್ರೆಂಚ್ ಪ್ರಾಜೆಕ್ಟ್ ನಲ್ಲಿಯೂ ಸೇವೆ ಸಲ್ಲಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಇವರಿಗೆ ಸಂದ ರಾಯಲ್ ಸೊಸೈಟಿ ಆಫ್ ಕೆಮೆಸ್ಟ್ರಿಯ ಫೆಲೊಶಿಪ್ ಗೌರವ  ಕನ್ನಡನಾಡಿಗೆ ಸಿಕ್ಕ ಮತ್ತೊಂದು ಮುಕುಟಮಣಿಯಾಗಿದೆ.


ರಾಯಲ್ ಸೊಸೈಟಿ ಆಫ್ ಕೆಮೆಸ್ಟ್ರಿ ಲಂಡನ್ನಿನಲ್ಲಿ 1841 ರಲ್ಲಿ ಸ್ಥಾಪನೆಯಾಗಿದ್ದು ಇದರ ಮೂಲ ಧ್ಯೇಯ ಪ್ರಾಪಂಚಿಕ ಮಟ್ಟದಲ್ಲಿ ಪ್ರಮುಖವಾಗಿ ಕೆಮಿಕಲ್ ಸೈನ್ಸ್ ವಿಷಯದಲ್ಲಿ ರುವ ವೃತ್ತಿಪರರಿಗೆ, ಸಂಶೋಧಕರಿಗೆ ಪ್ರೋತ್ಸಾಹ ನೀಡುವುದಾಗಿದೆ.

ರಾಯಲ್ ಸೊಸೈಟಿ ಆಫ್ ಕೆಮೆಸ್ಟ್ರಿ ಶೈಕ್ಷಣಿಕವಾಗಿ ಮಾತ್ರವಲ್ಲದೆ ಕೈಗಾರಿಕೆ, ಸರಕಾರಿ ಮಟ್ಟದ ಯೋಜನಾ ಸಲಹೆಗಳು- ಸೇವೆಗಳನ್ನು ಪ್ರೋತ್ಸಾಹ ಮಾಡುತ್ತಾ ಹೊಸ ಕ್ರಿಯಾಯೋಜನೆಗಳು, ವಿಜ್ಞಾನವಿಭಾಗದ ಮುಂದುವರೆದ ವಿನೂತನ ಸಂಶೋಧನೆಗಳನ್ನು ಪ್ರೋತ್ಸಾಹಿಸುತ್ತಾ ಪ್ರತಿಭಾನ್ವಿತರನ್ನು ಗುರುತಿಸಿ ಮುನ್ನೆಲೆಗೆ ತರುತ್ತಿದೆ.



ಕನ್ನಡ ಮನೆಯಿಂದಲೇ ಬೆಳೆಯಬೇಕು: ನ್ಯಾಯಾಧೀಶೆ ನೂರುನ್ನೀಸಾ

ತುಮಕೂರು: ಕನ್ನಡ ಬೆಳವಣಿಗೆ ಮನೆಯಿಂದಲೇ ಆಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಹೇಳಿದರು.

ತುಮಕೂರಿನ ಸುಫಿಯಾ ಕಾನೂನಿನ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನೆಯಲ್ಲಿ ಮಾತೃ ಭಾಷೆ ಯಾವುದೇ ಇರಲಿ ಮಕ್ಕಳಿಗೆ ಕನ್ನಡ ಕಲಿಸಬೇಕು. ನಾನೂ, ನನ್ನ ಮಕ್ಕಳಿಗೆ ಕನ್ನಡ ಕಲಿಸಿರುವೆ. ನನ್ನ ಮಕ್ಕಳು ಅಂಗನವಾಡಿ ಯಲ್ಲಿ ಕನ್ನಡ ಕಲಿತರು. ಕನ್ನಡ ಪುಸ್ತಕಗಳನ್ನು ಓದುತ್ತಾರೆ ಎಂದರು.

ದಾವಣಗೆರೆಯಲ್ಲಿ ನ್ಯಾಯಾಧೀಶೆಯಾಗಿದ್ದಾಗ ಕನ್ನಡದಲ್ಲೇ ಜಡ್ಜ್ ಮೆಂಟ್ ಬರೆಯುತ್ತೇನೆ. ಕನ್ನಡ ಒಂದು ಅಸ್ಮಿತೆಯಾಗಿದೆ ಎಂದು ಹೇಳಿದರು.

ಕಾಲೇಜಿನ ಆಡಳಿತಾಧಿಕಾರಿ ಸುಪಿಯ ಸುಲ್ತಾನ ಅವರಿಂದ ನ್ಯಾಯಾಧೀಶೆ ನೂರುನ್ನೀಸಾ ಅವರಿಗೆ ಸನ್ಮಾನ.

ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಇಂಗ್ಲೀಷ್ ಸಹ ಬೇಕು. ಆದರೆ ಕನ್ನಡವನ್ನು ಚೆನ್ನಾಗಿ ಕಲಿಯಬೇಕು.‌ಉಚ್ಛರಣೆ ತಪ್ಪಾಗಿ ಮಾಡಬಾರದು ಎಂದು ಸಲಹೆ ನೀಡಿದರು.

ಮಂಗಳೂರಿಗರು ಬಹು ಭಾಷಿಕರಾದರೂ ಕನ್ನಡದಲ್ಲೇ ಅವರು ಅಸ್ಮಿತೆಯನ್ನು ಕಂಡುಕೊಳ್ಳುತ್ತಾರೆ. ಇದು ಎಲ್ಲರಿಗೂ ಬರಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಚಟುವಟಿಕೆಗಳು, ಮಹತ್ವ, ಆಗಿರುವ ಕೆಲಸದ ಬಗ್ಗೆ ಹೇಳಿದರು.

ಕಾಲೇಜಿನ ಅಧ್ಯಕ್ಷರಾದ ಡಾ.ಎಸ್.ಷಫೀ ಅಹಮದ್, ನ್ಯಾಯಾಧೀಶೆ ನೂರುನ್ನೀಸಾ ಹಾಗೂ ಸುಫಿಯಾ ಸುಲ್ತಾನ ಇದ್ದಾರೆ.

ಸುಫಿಯಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನೀಡುತ್ತಿರುವ ಸಹಕಾರದ ಬಗ್ಗೆ ಹೇಳಿದರು.

ನ್ಯಾಯಮೂರ್ತಿ ವೀರಪ್ಪ ಅವರು ಹೇಳುವಂತೆ ನೀವುಗಳೆಲ್ಲ ನ್ಯಾಯಿಕ ಸೈನಿಕರು. ಜಡ್ಜ್ ಮೆಂಟ್ ಗಿಂತ ನ್ಯಾಯ ಕೊಡುವುದೇ ಮುಖ್ಯ. ನ್ಯಾಯವೇ ಸರ್ವ ಶ್ರೇಷ್ಠ ಎಂದರು.

ಸುಫಿಯಾ ಕಾಲೇಜು ಉತ್ತಮ ಕಾನೂನು ಕಾಲೇಜ್ ಆಗಿದೆ.‌ಇಲ್ಲಿನ ಪ್ರಾಂಶುಪಾಲರು, ಬೋಧಕರ ವ್ಯಕ್ತಿತ್ವವೇ ಒಂದು ಮಾದರಿಯಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಂಶುಪಾಲ ಡಾ.ಎಸ್.ರಮೇಶ್ ಅವರಿಂದ ಹಿರಿಯ ಪತ್ರಕರ್ತ, ವಕೀಲರು ಆದ ಸಾ.ಚಿ.ರಾಜಕುಮಾರ್ ಅವರಿಗೆ ಸನ್ಮಾನ.

ಹಿರಿಯ ಪತ್ರಕರ್ತರಾದ ಸಾ.ಚಿ.ರಾಜ್ ಕುಮಾರ್ ಮಾತನಾಡಿ, ನವೆಂಬರ್ ಪೂರಾ ಕನ್ನಡ‌ ರಾಜ್ಯೋತ್ಸವ ಮಾಡುತ್ತಾರೆ. ಕನ್ನಡ ಉತ್ಸವದ ಹೆಸರಿನಲ್ಲಿ  ಹಣ ಸಂಗ್ರಹ ಸಲ್ಲದು. ಭಾಷಣದಿಂದ ಕನ್ನಡ ಉದ್ಧಾರ ಆಗುವುದಿಲ್ಲ. ಕನ್ನಡದ ಬಳಕೆಯನ್ನು ಮಾಡುವುದರಿಂದ, ಬರೆಯುವುದರಿಂದ ಮಾತ್ರವೇ ಉಳಿಸಲು ಸಾಧ್ಯ ಎಂದರು.

ನ್ಯಾಯಾಧೀಶರಾದ ಕೆಂಪಗೌಡರು ಅವರು ಕೌಟುಂಬಿಕ ದೌರ್ಜನ್ಯ ಕುರಿತು ಪುಸ್ತಕ ಬರೆದರು. ಕನ್ನಡದ ಬಗ್ಗೆ ಪ್ರೀತಿ ಇರುವ ಅನೇಕ ನ್ಯಾಯಾಧೀಶರಿದ್ದಾರೆ. ಆದರೆ ಅದಕ್ಕೆ ಪೂರಕವಾದ ವಾತಾವರಣ ಇಲ್ಲವಾಗಿದೆ ಎಂದರು.

ಕೆಲವು ಹೋರಾಟಗಾರದಿಂದಲೇ ಕನ್ನಡ ಹಾಳಾಗುತ್ತಿದೆ. ಕನ್ನಡದ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಪುಸ್ತಕ ಓದುವುದರಿಂದಲೇ ಕನ್ನಡ ಬೆಳೆಯುತ್ತದೆ ಎಂದರು.

ಕಾಲೇಜಿನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ನನಗೆ ಸಂತಸ ತಂದಿದೆ. ಹೆಣ್ಣು ಮಕ್ಕಳು ಅಧಿಕ ಸಂಖ್ಯೆಯಲ್ಲಿ ಕಾನೂನು ಕಲಿತಿರುವುದು ಸಂತಸ ತಂದಿದೆ ಎಂದರು.

ಕ್ರಿಯೆ, ಪ್ರತಿಕ್ರಿಯೆ ಎರಡೂ ಈ ಕಾಲೇಜಿನಲ್ಲಿದೆ. ನಾವು ಸ್ವಾಂತನ ಕೇಂದ್ರ ನಡೆಸುತ್ತಿದ್ದೇವೆ. ಇಲ್ಲಿವರೆಗೂ 9500 ಪ್ರಕರಣಗಳನ್ನು ಬಗೆಹರಿಸಿದ್ದೇವೆ ಎಂದರು.

ಆಯ್ಕೆಯ ಸ್ವಾತಂತ್ರ್ಯ ಇರಬೇಕು. ಹೇರಿಕೆಯು ಪೊಲೀಸ್ ಭಾಷೆ.  ಲಾ ಕಾಲೇಜಿನ ವಿದ್ಯಾರ್ಥಿಗಳು ಆರಂಭಿಸಿದ ವರದಕ್ಷಿಣೆ ವಿರೋಧಿ ವೇದಿಕೆ ಇಡೀ ರಾಜ್ಯದ ಗಮನ ಸೆಳೆಯಿತು ಎಂದರು.

ನ್ಯಾಯಮೂರ್ತಿಗಳು ಹಾಗೂ ಜನರ ನಡುವಿನ ಮುಖಾಮುಖಿಯನ್ನು ಕಾನೂನು ಸೇವಾ ಪ್ರಾಧಿಕಾರ ಸಾಧ್ಯವಾಗಿಸಿದೆ. ನ್ಯಾಯಾಧೀಶೆ ನೂರುನ್ನೀಸಾ ಅವರು ಜಿಲ್ಲೆಯಲ್ಲಿ ಈ ವಿಷಯದಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ ಎಂದರು.

ನಿಮ್ಮ ಪ್ರಾಂಶುಪಾಲರೇ ನಿಮಗೆ ಮಾದರಿ

ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ರಮೇಶ್ ಅವರೇ ನಿಮಗೆ ಮಾದರಿಯಾಗಿದ್ದಾರೆ. ಕಾನೂನು ವಿಷಯದಲ್ಲಿ ತಜ್ಞರಾಗಿದ್ದಾರೆ. ಅವರ  ಜೀವನವೇ ಒಂದು ಅನುಕರಣೀಯ ಎಂದರು.

ಫೆಮಿನಿಸ್ಟ್ ಆಗಬೇಕಿರುವರು ಯಾರು?

ಫೆಮಿನಿಸ್ಟ್ ಆಗಬೇಕಿರುವುದು ಮಹಿಳೆಯರಲ್ಲ, ಪುರುಷರು ಆಗಬೇಕಾಗಿದೆ. ಪುರುಷರಲ್ಲಿ ಮಹಿಳಾತನ ಗಟ್ಟಿಯಾಗಬೇಕು ಎಂದು ಪ್ರಾಂಶುಪಾಲ ಡಾ.ಎಸ್.ರಮೇಶ್ ತಿಳಿಸಿದರು.

ಹೆಣ್ಣು ಮಕ್ಕಳಿಗೆ ಪ್ರಾಧ್ಯಾನತೆ ಕೊಡಬೇಕು. ಕಾಲೇಜಿನಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿದೆ ಎಂದರೆ ಕಾಲೇಜಿನ ಅಡ್ಮಿ಼ಷನ್ ಕಮಿಟಿಯಲ್ಲಿ ಇರುವವರೇ ಕಾರಣವಾಗಿದ್ದಾರೆ. ಅವರು ಹೆಣ್ಣು ಮಕ್ಕಳಿಗೆ ಪ್ರಾಧ್ಯಾನತೆ ನೀಡುತ್ತಾರೆ ಎಂದರು.

ಮಹಿಳಾ ಪ್ರಾಧ್ಯಾನತೆ ಬಗ್ಗೆ ಹೆಚ್ಚು ಮಾತನಾಡಿದ್ದು ನ್ಯಾಯಮೂರ್ತಿ ಚಂದ್ರಚೂಡ್. ಆದರೆ ಅವರಿದ್ದರೂ ಕೊಲೆಜಿಯಂ ನಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರಾಧ್ಯಾನತೆ ಸಾಧ್ಯವಾಗಲಿಲ್ಲ ಎಂದರು.

ಹೆಚ್ಚು ಶೋಷಣೆ

ಅಮೆರಿಕ ಚುನಾವಣೆಯಲ್ಲಿ ಹ್ಯಾರಿಸ್ ಗೆದ್ದರೆ ದೊಡ್ಡ ಬದಲಾವಣೆಗೆ ಸಾಧ್ಯವಾಗಲಿದೆ. ಪಿತೃ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಶೋಷಣೆ ಇದೆ ಎಂದರು.

ನ್ಯಾಯಾಧೀಶರ ಸಂಖ್ಯೆ ಹೆಚ್ಚಾಗಬೇಕು

ಮಹಿಳಾ ನ್ಯಾಯಧೀಶರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದರು.

ಖಾಸಗಿ ಆಸ್ತಿ; ಚರ್ಚೆ ಬೇಕು

ರಂಗನಾಥ ರೆಡ್ಡಿ ಪ್ರಕರಣದಲ್ಲಿ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು ಖಾಸಗಿ ಸ್ವತ್ತು ಸರ್ಕಾರದ್ದು ಎಂದು ಹೇಳಿದರು. ಸಂವಿಧಾನದ 39 ಬಿ ರಾಜ್ಯದ ಸಂಪತ್ತಿನ ಬಗ್ಗೆ ಹೇಳುತ್ತದೆ. ಆದರೆ ನಿನ್ನೆ ಸುಪ್ರೀಂ ಕೋರ್ಟ್ , ರಾಜ್ಯಕ್ಕೆ ಅಧಿಕಾರ ಇಲ್ಲ ಎಂದಿದ್ದಾರೆ. ಇದು ಸಮಾಜವಾದ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಂಡರೆ ಸಂವಿಧಾನದ ಪೀಠಿಕೆಗೆ ಈ ತೀರ್ಪು ಏನು ಹೇಳುತ್ತದೆ ಎಂದು ಅಭಿಪ್ರಾಯಪಟ್ಟರು.

ಆರ್ಥಿಕ ನೀತಿಗೆ ಪೂರಕವಾಗಿ ನ್ಯಾಯಾಲಯಗಳು ಸ್ಪಂದಿಸಬೇಕೇ ಎಂಬ ಕುರಿತು ಚರ್ಚೆ, ಅಧ್ಯಯನ ಬೇಕಾಗಿದೆ ಎಂದು ಹೇಳಿದರು.

ಜಾಗತೀಕರಣಕ್ಕೆ ನ್ಯಾಯಾಲಯಗಳು ಹೊರತಾಗಿಲ್ಲವೇ ಎಂಬ ಪ್ರಶ್ನೆ ಮೂಡಿ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಸುಫಿಯಾ ಸುಲ್ತಾನ, ಉಪ ಪ್ರಾಂಶುಪಾಲರಾದ ಟಿ. ಓಬಯ್ಯ, ಪ್ರೊ. ಮಮತಾ, ಪ್ರೊ. ಸಿ.ಕೆ.ಮಹೇಂದ್ರ, ಪ್ರೊ. ಖಾಷಿಫ್, ಪ್ರೊ. ತರುಣಂ, ಪ್ರೊ. ಸುಬ್ರಹ್ಮಣ್ಯ ಇತರರು ಇದ್ದರು.

.

ಗಾಂಧೀಜಿಯನ್ನು ಓದದೇ ವಿಮರ್ಶಿಸಬೇಡಿ : ನಾಡೋಜ ಡಾ. ವೂಡೇ ಪಿ ಕೃಷ್ಣ

ಬೆಂಗಳೂರು: ಗಾಂಧೀಜಿ ಅವರನ್ನು ಓದದೇ ವಿಮರ್ಶಿಸಬೇಡಿ ಎಂದು ಗಾಂಧಿ ಪ್ರತಿಷ್ಠಾನದ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ ಕೃಷ್ಣ ಅವರು ಕಟುವಾಗಿ ಹೇಳಿದರು.

ಇಲ್ಲಿನ ಶೇಷಾದ್ರಿಪುರಂ ಕಾನೂನು ಮಹಾವಿದ್ಯಾಲಯ ಬೆಂಗಳೂರು, ಗಾಂಧೀ ಅಧ್ಯಯನ ಕೇಂದ್ರ ಶೇಷಾದ್ರಿಪುರಂ  ಕಾಲೇಜು,ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಗಾಂಧೀ ಶಾಂತಿ ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ “ಗಾಂಧೀ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ಅನಿವಾರ್ಯ” ವಿಚಾರ ಕುರಿತ ಒಂದು ದಿನದ ವಿಚಾರ ಸಂಕಿರಣ ಮತ್ತು ಸಂವಾದದಲ್ಲಿ ಮಾತನಾಡಿದರು.

” ತಾಂತ್ರಿಕತೆಯ ಆರ್ಭಟದಲ್ಲಿ ಇಂದು ಮನುಷ್ಯ ಸಂಬಂಧಗಳು ಹಾಳಾಗುತ್ತಿವೆ, ಪ್ರಕೃತಿಯೊಂದಿಗೆ ಸಾಮರಸ್ಯ ಕಳಚಿಕೊಳ್ಳುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಇಂದು ಜಾತೀಯತೆ ಮತ್ತು ಮತೀಯತೆಯ ಭೇದಭಾವ ಉಂಟುಮಾಡುತ್ತಿರುವ ಇಂದಿನ ದಿನಗಳಲ್ಲಿ ಗಾಂಧೀಯ ತತ್ವಗಳ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ಪಟ್ಟರು.

ಗಾಂಧೀಜಿಯವರು ಹೇಳುತ್ತಾರೆ ” ಸತ್ಯ ಮತ್ತು ಅಹಿಂಸೆಯನ್ನು ನಾನು ಕಂಡು ಹಿಡಿಯಲಿಲ್ಲ. ಅದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಿಳಿತವಾಗಿದೆ ಎಂದು ಹೇಳಿದ್ದಾರೆ.  ಮಹಾತ್ಮ ಗಾಂಧೀಜಿಯವರು ನಮಗೆ ದೊರೆತಿರುವುದು ಬರೀ ರಾಜಕೀಯ ಸ್ವಾತಂತ್ರ್ಯ, ನಾವು ಸಾಮಾಜಿಕವಾಗಿ, ಆರ್ಥಿಕವಾಗಿ ಸ್ವತಂತ್ರವಾಗಿಲ್ಲ ಎಂದು ಹೇಳಿದ್ದರು.  ಗಾಂಧೀಜಿಯವರು ಕಲ್ಪನೆಯ ಸ್ವಾತಂತ್ರ್ಯ ನಮಗೆ ಇನ್ನೂ ಸಿಕ್ಕಿಲ್ಲ ಎಂದರು.

ಗಾಂಧೀಜಿ ಅವರ ಅನೇಕ ವಿಚಾರಧಾರೆಗಳ ಬಗ್ಗೆ ಒತ್ತಿ ಹೇಳಿದ ಅವರು ಗಾಂಧೀಜಿಯವರ ವಿಚಾರಗಳನ್ನು ಓದದೆ ಅವರನ್ನು ವಿಮರ್ಶಿಸಬೇಡಿ ಎಂದರು.

ಸತ್ಯ ಯಾವಗಲೂ ಉಳಿಯುತ್ತದೆ. ನಮ್ಮ ಮಕ್ಕಳ ಮನಸ್ಸನ್ನು ಹಾಳುಮಾಡಬಾರದು. ಗಾಂಧೀ ನಮಗೆ ಯಾಕೆ ಮುಖ್ಯ ಎನ್ನುವುದನ್ನು ಹೇಳುತ್ತಾ, ಅವರ ತತ್ವಗಳಿಂದ ಅವರು ಜೀವಂತವಾಗಿದ್ದಾರೆ.  ಎಂದು ತಿಳಿಸಿದರು.

ದ್ವೇಷಿಸುವವರನ್ನು ಪ್ರೀತಿಸಬೇಕು ಎಂಬ ಗಾಂಧೀಜಿಯವರ ಉದಾತ್ತ ಚಿಂತನೆಗಳಿಂದ ಅವರು ಮಹಾತ್ಮರಾದರು. ಸಮಾಜ ಕಡೆಗಣಿಸಿದವರನ್ನು ಜೊತೆ ಸೇರಿಸಿಕೊಂಡರು. ಕ್ಷಮೆಕೇಳದೆ ಕ್ಷಮಿಸುವುದು.ತಪ್ಪುಗಳನ್ನು ಒಪ್ಪಿಕೊಳ್ಳುವುದು. ಸರಳವಾಗಿ ಬದುಕುವುದು. ನಾವು ನಾವಾಗಿರುವುದು ಮುಖ್ಯ. ಇಂತಹ ತತ್ವಗಳಿಂದಾಗಿ ಗಾಂಧೀ ನಮಗೆ ಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಗಾಂಧೀ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಪ್ರೊ ಜಿ ಬಿ ಶಿವರಾಜು ಅವರು ಮಾತನಾಡಿ, “ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಲ್ಲಾದರೂ ಇದೆಯಾ ಎಂದರೆ ಅದು ಗಾಂಧೀಯ ವಿಚಾರದಲ್ಲಿದೆ” ಎಂದರು.

ಇಂದಿನ ಸಮಾಜದ ವಿಪರ್ಯಾಸವೆಂದರೆ ” ಎಲ್ಲವನ್ನು ಪರಿಹಾಸ್ಯ ಮಾಡುವ ಗುಣ ನಮ್ಮ ರಾಷ್ಟ್ರರಕ್ತಕ್ಕೆ ಅಂಟಿದೆ. ಅದನ್ನು ಮೊದಲು ತೊಲಗಿಸಬೇಕು. ಶ್ರೇಷ್ಠ ಮತ್ತು ಪರಿಶುದ್ದ ಮನಸ್ಸಿನ ಹಿರಿಯರ, ಸಂತರ, ಸಾಧಕರ ವ್ಯಕ್ತಿತ್ವವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು. ನಿಮ್ಮಂತಹ ಮಕ್ಕಳು ಗಾಂಧೀಯ ತತ್ವಗಳನ್ನು, ಮೌಲ್ಯಗಳನ್ನು ತೆಗೆದುಕೊಂಡು ಹೋಗಬೇಕು. ಎಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು. ಗಾಂಧೀ ಸತ್ಯ ಮತ್ತು ಪ್ರೇಮದ ಜ್ವಾಲಾಮುಖಿ ಎಂಬ ಮಾತನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ ಕೃಷ್ಣಸ್ವಾಮಿ, ಪ್ರಾಂಶುಪಾಲರಾದ ಡಾ. ಪ್ರಣೀತ ಬಿ ಎಸ್, ಸಂಪನ್ಮೂಲ ವ್ಯಕ್ತಿಯಾದ ಡಾ. ಎನ್ ಎಸ್ ಸತೀಶ್,  ಶೇಷಾದ್ರಿಪುರಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಚಾಲಕರಾದ ಡಾ. ಸಂದೀಪ್.ಸಿ, ಪ್ರೊ ಜಯಶೀಲ ಜಿ.ಎಸ್ ಉಪಸ್ಥಿತರಿದ್ದರು

ಬಹಿರ್ದೆಸೆಗೆ ಬಯಲ ಆಲಯವೇ ಶೌಚ

0

(ಹೆಣ್ಣುಮಕ್ಕಳೇ ತುಂಬಿರುವ ದಕ್ಕಲಿಗರ ‘ಗಾಂಧಿ’ನಗರದಲ್ಲಿ ಒಂದೇ ಒಂದು ಶೌಚಗೃಹವೂ ಇಲ್ಲ ; ಶೌಚಾಲಯವೂ ಇಲ್ಲ!!)

(ಅಲೆಮಾರಿಗಳು ಮೊದಲು ಎಲ್ಲರಿಗೂ ಅರ್ಥವಾಗುವಂತಾಗಲಿ….)

ಈ ಅಲೆಮಾರಿ ದಿಟ್ಟೆಯರು ಯಾವುದಕ್ಕೂ ದಿಕ್ಕುಗೆಡದೆ, ಕಂಗೆಡದೆ ಹೀಗೆ ಬದುಕು ದೂಡುತ್ತಿರುವುದನ್ನು ಜಿಲ್ಲಾಧಿಕಾರಿ  ಶುಭ ಕಲ್ಯಾಣ್ ಒಮ್ಮೆ ಬಂದು ನೋಡಿದರೆ, ಇಲ್ಲಿನ ತಬ್ಬಲಿತನಕ್ಕೆ ಒಂದಿಷ್ಟು ನೆಳಲೀದಂತಾದೀತು ಎಂಬ ನಿರೀಕ್ಷೆಯಿದೆ.

ಚಿಕ್ಕನಾಯಕನಹಳ್ಳಿ : ಪಟ್ಟಣದ ಹುಳಿಯಾರು ಗೇಟ್’ನಿಂದ ಕೆರೆಮುಂದಲಪಾಳ್ಯ, ರಾಯಪ್ಪನಪಾಳ್ಯ ಕಡೆಗೆ ಹೋಗುವ ಮಾರ್ಗದಲ್ಲಿರುವ ರುದ್ರಭೂಮಿಯ ಬಳಿ, ಅಲೆಮಾರಿ ದಕ್ಕಲಿಗ ಜನಾಂಗದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕುಟುಂಬಗಳು ವಾಸವಾಗಿವೆ. ಎರಡೇ ಎರಡು ಮುಖ್ಯಬೀದಿಗಳನ್ನು ಹೊಂದಿರುವ ಈ ಪುಟ್ಟ ಕಾಲೊನಿಗೆ, “ಗಾಂಧಿ’ನಗರ” ಎಂದು ಕರೆಯಲಾಗಿದೆ.

ಇಪ್ಪತ್ತೆಂಟಕ್ಕೂ ಹೆಚ್ಚಿನ ಸಂಖ್ಯೆಯ ಶಾಲಾ ಮಕ್ಕಳು ಇಲ್ಲಿವೆ. ಈ ಅಲೆಮಾರಿ ಕುಟುಂಬಗಳು ಬದುಕುತ್ತಿರುವ ದುಸ್ಥಿತಿಯಲ್ಲೇ ಇಲ್ಲಿನ ಮಕ್ಕಳೂ ಸಹಾ ತಮ್ಮ ಪೋಷಕರ ಜೊತೆ ಅನಿವಾರ್ಯ ಇಲ್ಲೇ ಬದುಕುತ್ತಿದ್ದಾರೆ. ಇಲ್ಲಿರುವ ಯಾವ ಕುಟುಂಬಕ್ಕೂ ಕನಿಷ್ಠ ಶೌಚಗೃಹ ಮತ್ತು ಶೌಚಾಲಯದ ವ್ಯವಸ್ಥೆಯಿಲ್ಲ. ಬಹಿರ್ದೆಸೆಗೆ ಬಯಲ ಆಲಯವೇ ಇವರ ಶೌಚಾಲಯ.

ಗಾಂಧಿನಗರದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣುಮಕ್ಕಳಿದ್ದಾರೆ. ಇಲ್ಲಿ ವೃದ್ಧ ಮಹಿಳೆಯರು, ಗೃಹಿಣಿಯರು, ಕೂಲಿ ಕಾರ್ಮಿಕ ಮಹಿಳೆಯರು, ಹರೆಯದ ಹುಡುಗಿಯರು, ಶಾಲಾ-ಕಾಲೇಜಿನಲ್ಲಿ ಓದುತ್ತಿರುವ ಹೆಣ್ಣುಮಕ್ಕಳು ಸೇರಿದ್ದಾರೆ. ಇವರಿಗೆಲ್ಲ ಬಯಲ ಆಲಯವೇ ಶೌಚಾಲಯ. ಕಾಲೊನಿ ಪಕ್ಕದ ಹೊಲ, ಹೊಲದ ಬಾರೆ, ರುದ್ರಭೂಮಿಯ ಬಡ್ಡೆ ಇತ್ಯಾದಿ ಕಣ್ಮರೆಯ ಜಾಗಗಳಲ್ಲಿ ಇಲ್ಲಿನ ಹೆಣ್ಣುಮಕ್ಕಳು ಜೋಪಾನವಾಗಿ ಬಹಿರ್ದೆಸೆಗೆ ಹೋಗಿ ಬರಬೇಕು.

ಶೌಚಬಾಧೆ ಹಗಲಲ್ಲೂ ಬರುತ್ತದೆ. ರಾತ್ರಿಯೂ ಬರುತ್ತದೆ. ಹಗಲಿನಲ್ಲಿ ಹೊಲದ ಮಾಲೀಕರ ಕಾಟ, ಬೈಗುಳ, ನಿಂದನೆ. ರಾತ್ರಿಯಲ್ಲಿ ಹಾವು, ಚೇಳು, ಹುಳ, ಹುಪ್ಪಟೆ ಅಥವಾ ಹೆಣ್ಣುಬಾಕರ ಕಾಟ, ಅಪಾಯ. ಇಂಥ ಅಪಾಯಕಾರಿ, ಆತಂಕಕಾರಿ ಸ್ಥಿತಿಯಲ್ಲಿ ನಮ್ಮ ಹೆಣ್ಣುಮಕ್ಕಳು ಜೀವ ಬಿಗಿಹಿಡಿದು ಬಹಿರ್ದೆಸೆಗೆ ಹೋಗಿ ಬರಬೇಕು.

ಮಹಿಳಾ ಸಬಲೀಕರಣ, ಬೇಟಿ ಬಚಾವೊ-ಬೇಟಿ ಪಡಾವೊ, ಸ್ವಚ್ಛ ಭಾರತ, ನಿರ್ಮಲ ಕರ್ನಾಟಕ ಇತ್ಯಾದಿ ಬಗೆಬಗೆಯ ಎಲ್ಲ ಸರ್ಕಾರಿ ಅಭಿಯಾನಗಳಿಂದ ಅಲೆಮಾರಿಗಳು ಪಡೆದ ಪ್ರಯೋಜನವಿದು.

ಕಟ್ಟಕಡೆಯ ಪ್ರಜೆಗಳಿಗೂ ಕನಿಷ್ಠ ಮೂಲಭೂತ ಸೌಕರ್ಯದ ಹಕ್ಕಿದೆ ಎಂದು ಭಾರತ ಸಂವಿಧಾನ ಕೊಡಮಾಡಿರುವ ನಮ್ಮ ಹಕ್ಕನ್ನು ನಾವು ಯಾರ ಬಳಿ ಕೇಳಿ ಪಡೆಯಬೇಕು, ಯಾಕೆ ನಾವು ಕೇಳಿ ಪಡೆಯಬೇಕು ಎಂದು ಅಲೆಮಾರಿ ದಕ್ಕಲಿಗರ ರಾಜ್ಯಮುಖಂಡ ಡಿ ಶಾಂತರಾಜು ಪ್ರಶ್ನಿಸುತ್ತಾರೆ.

ಪ್ರತಿ ಮನೆಗೂ ಶೌಚಾಲಯ ಕಟ್ಟಿಕೊಟ್ಟಿದ್ದೇನೆ ಎನ್ನುವ ಕೇಂದ್ರ ಸರ್ಕಾರ ಎಲ್ಲಿದೆ, ಬಯಲು ಶೌಚ ಮುಕ್ತ ಕರ್ನಾಟಕ ಮಾಡಿಬಿಟ್ಟಿದ್ದೇನೆ ಅನ್ನುವ ರಾಜ್ಯ ಸರ್ಕಾರ ಎಲ್ಲಿದೆ. ಈ ಪೌರಾಡಳಿತ, ತಾಲ್ಲೂಕು ಆಡಳಿತ, ಜಿಲ್ಲಾಡಳಿತ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ, ಪಂಚಾಯಿತಿ ಇಲಾಖೆ, ಇತ್ಯಾದಿ ಎಲ್ಲವೂ ಎಲ್ಲಿವೆ, ಕಟ್ಟಕಡೆಯ ಅಂಚಿನಲ್ಲಿರುವ ಅಲೆಮಾರಿಗಳ ಕನಿಷ್ಠ ಯೋಗಕ್ಷೇಮಕ್ಕಾಗಿ ಇವು ಏನು ಮಾಡುತ್ತಿವೆ ಎಂದು ಅಲೆಮಾರಿ ದಕ್ಕಲಿಗರ ರಾಜ್ಯಮುಖಂಡ ಶಾಂತರಾಜು ಆಕ್ರೋಶದಿಂದ ಪ್ರಶ್ನಿಸುತ್ತಾರೆ.

ಮಂಜಮ್ಮ, ಶಿವಮ್ಮ, ಜ್ಯೋತಿ, ಅಶ್ವಿನಿ, ರಾಧಾ ಮುಂತಾದ ಅಲೆಮಾರಿ ದಿಟ್ಟ ಹೆಣ್ಣುಮಕ್ಕಳು, ಶೌಚ ವಿಸರ್ಜನೆಗೆ ಸಂಬಂಧಿಸಿ ನಿತ್ಯ ತಮಗಾಗುತ್ತಿರುವ ಕಷ್ಟ-ತೊಂದರೆಗಳ ಬಗ್ಗೆ ಹೇಳಿದರು. ‘ಸಮಾಜದಿಂದ ದೂರ ಸರಿಸಲ್ಪಟ್ಟ ಅಂಚಿನ ಜನ ನಾವು’ ಎಂಬ ಅನಾಥತೆ ಅವರ ಕಣ್ಣುಗಳಲ್ಲಿ ಕಂಬನಿ ಮಿಡಿಸುತ್ತಿತ್ತು.

ಈ ಅಲೆಮಾರಿ ದಿಟ್ಟೆಯರು ಯಾವುದಕ್ಕೂ ದಿಕ್ಕುಗೆಡದೆ, ಕಂಗೆಡದೆ ಹೀಗೆ ಬದುಕು ದೂಡುತ್ತಿರುವುದನ್ನು ಜಿಲ್ಲಾಧಿಕಾರಿ  ಶುಭ ಕಲ್ಯಾಣ್ ಒಮ್ಮೆ ಬಂದು ನೋಡಿದರೆ, ಇಲ್ಲಿನ ತಬ್ಬಲಿತನಕ್ಕೆ ಒಂದಿಷ್ಟು ನೆಳಲೀದಂತಾದೀತು ಎಂಬ ನಿರೀಕ್ಷೆಯಿದೆ.

ಅಲೆಮಾರಿಗಳ ಸಂಕಟವನ್ನು ಅರ್ಥ ಮಾಡಿಕೊಳ್ಳದ ಆಡಳಿತ ::
ಸರ್ಕಾರ, ಸ್ಥಳೀಯ ಆಡಳಿತ, ಜನ ಪ್ರತಿನಿಧಿಗಳು, ಅಧಿಕಾರಿಗಳು, ರಾಜಕೀಯ ಮುಖಂಡರು ಅಷ್ಟೇ ಅಲ್ಲದೆ, ಬಹುತೇಕ ಸಂದರ್ಭಗಳಲ್ಲಿ ಕೆಲಮಂದಿ ಸಾಮಾಜಿಕ ಹೋರಾಟಗಾರರು ಹಾಗೂ ಪ್ರಗತಿಪರರಿಗೂ ಅಲೆಮಾರಿಗಳ ಸಮಸ್ಯೆಗಳು ಅರ್ಥವೇ ಆಗುವುದಿಲ್ಲ. ಮೇಲ್’ಸ್ತರದ, ಮೇಲ್ನೋಟದ ತಿಳುವಳಿಕೆಯೇ ಅವರಲ್ಲಿರುವ ಅಲೆಮಾರಿ ಜ್ಞಾನ. ಅಲೆಮಾರಿ ಮತ್ತು ಬುಡಕಟ್ಟು-ಪಣಕಟ್ಟುಗಳನ್ನು ಆಳವಾಗಿ ತಿಳಿದು ಅರ್ಥಮಾಡಿಕೊಳ್ಳುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ.

ಹಾಗಾಗಿ, ಅಲೆಮಾರಿಗಳ ಸಾಮಾನ್ಯ ಸಮಸ್ಯೆ ಅಥವಾ ಸಂಕಷ್ಟಕ್ಕೂ ಪರಿಹಾರ ಸಿಗದೆ, ನಮ್ಮ ಅಲೆಮಾರಿಗಳ ಸ್ಥಿತಿ ಹೀಗೇ ಉಳಿದಿರುವುದು. ಅಲೆಮಾರಿಗಳು ಮೊದಲು ಎಲ್ಲರಿಗೂ ಅರ್ಥವಾಗಲಿ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ತಾಲ್ಲೂಕು ಅಧ್ಯಕ್ಷ ರಂಗನಾಥ್ ಖೇದ ವ್ಯಕ್ತಪಡಿಸಿದರು.

ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ತುಮಕೂರು ಶಿವಮೊಗ್ಗ ಹೆದ್ದಾರಿ: ಹೆಚ್ಚುವರಿ ಪರಿಹಾರ ನಿಗದಿಯಲ್ಲಿ ಅನ್ಯಾಯ: ಕೇಂದ್ರ ಸಚಿವರಿಗೆ ದೂರು

0

ತಿಪಟೂರು: ತುಮಕೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಗಾಗಿ ಭೂಮಿ ಕೊಟ್ಟ ರೈತರಿಗೆ ಜಿಲ್ಲಾಧಿಕಾರಿಗಳ ನ್ಗಾಯಾಲಯದಲ್ಲಿ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ದೂರಿ ಭಾನುವಾರ ಕೇಂದ್ರ ಸಚಿವ ಎಸ್. ಸೋಮಣ್ಣ ಅವರಿಗೆ ರೈತರು ಮನವಿ ನೀಡಿದರು.

ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಹೆಚ್ಚುವರಿ ಪರಿಹಾರ ನೀಡುವುದಾಗಿ ಆಗಿನ ಜಿಲ್ಲಾಧಿಕಾರಿಗಳು ಹಳ್ಳಿ ಹಳ್ಳಿಗೆ ಭೇಟಿ ನೀಡಿ ರೈತರಿಗೆ ವಚನ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ಸರಿಯಾದ ರೀತಿಯಲ್ಲಿ ನ್ಯಾಯದಾನ ಮಾಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ರೈತ ಮುಖಂಡ ಕಲ್ಲೇಶ್ ಮಾತನಾಡಿ, ಪಕ್ಕದ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಹಾಸನದ ಜಿಲ್ಲಾಧಿಕಾರಿಗಳು ಆಬ್ರಿಟ್ರೇಷನ್ ನ್ಯಾಯಾಲಯದಲ್ಲಿ ಹೆಚ್ಚುವರಿ ಪರಿಹಾರ ನೀಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಏಕೆ ಹೀಗೆ ಮಾಡುತ್ತಿಲ್ಲ. ಸರಿಯಾದ ಪರಿಹಾರ ನೀಡಲಾಗಿದೆ ಎಂದು ಎಲ್ಲ ಕೇಸ್ ಗಳನ್ನು ವಜಾ ಮಾಡುತ್ತಾ ಬರಲಾಗುತ್ತಿದೆ ಎಂದು ನೊಂದು ನುಡಿದರು.

ಆಬ್ರಿಟ್ರೇಷನ್ ನ್ಯಾಯಾಲಯದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಹ ರೈತರಿಗೆ ಸಾಧ್ಯವಾಗುತ್ತಿಲ್ಲ. ರೈತರಿಗೆ ಅಂತಹ ಶಕ್ತಿಯೂ ಇಲ್ಲ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಇಲ್ಲವೇ ಕೇಂದ್ರ ಸರ್ಕಾರದ ಕಾನೂನು ಇಲಾಖೆಯ ನೆರವಿನಲ್ಲಿ ಕೇಸುಗಳನ್ನು ನಡೆಸಿ ರೈತರಿಗೆ ನ್ಯಾಯ ಒದಗಿಸಲು ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳು ಮನಸ್ಸು ಮಾಡಿದರೆ ಮಾರುಕಟ್ಟೆ ಬೆಲೆ ಕಂಡು ಹಿಡಿಯಲು ಸಮಿತಿ ನೇಮಕ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಮಾರುಕಟ್ಟೆ ಬೆಲೆ ಕಂಡು ಹಿಡಿಯಲು ಜಿಲ್ಲಾಧಿಕಾರಿ ಅವರು ಸಮಿತಿ ನೇಮಕ ಮಾಡುವಂತೆ ಸೂಚನೆ ನೀಡಬೇಕು. ಈ ಸಂಬಂಧ ಸಮಿತಿ ನೇಮಕ ಮಾಡಲು ಸೂಚಿಸಬೇಕು ಎಂದು ಅವರು ಹೇಳಿದರು.

ಕಲುಷಿತ ನೀರು‌ ಸೇವನೆ ; ಒಂದೇ ವಾರದಲ್ಲಿ ಎರಡು ಸಾವು

0

ಸ್ವತಃ ನೀರು ಕುಡಿದು ಪರಿಶೀಲಿಸಿದ ತಹಶೀಲ್ದಾರ್

(ಶಿಥಿಲಗೊಂಡಿರುವ ಟ್ಯಾಂಕು ; ನಿದ್ರಾವಸ್ಥೆಯಲ್ಲಿರುವ ಗ್ರಾಮ ಆಡಳಿತ)

(ಗ್ರಾಮಕ್ಕೆ ಜೆಜೆಎಂ ಕಾಮಗಾರಿ ತಂದಿಟ್ಟ ಕುತ್ತು)

(ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ)

(ವಯೋವೃದ್ಧರಿಗೂ ಬೆಲೆಯಿಲ್ಲ ; ಮಕ್ಕಳ ಹಕ್ಕುಗಳ ರಕ್ಷಣೆಗೂ ಕಿಮ್ಮತ್ತಿಲ್ಲ)

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಹಂದನಕೆರೆ ಹೋಬಳಿಯ ಸೋರಲಮಾವು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಒಂದೇ ವಾರದಲ್ಲಿ ಎರಡು ಸಾವು ಸಂಭವಿಸಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ಥಳಕ್ಕೆ ಉಪ-ವಿಭಾಗಾಧಿಕಾರಿ ಸಪ್ತ ಶ್ರೀ ಹಾಗೂ ತಹಸೀಲ್ದಾರ್ ಕೆ ಪುರಂದರ್ ಸ್ಥಳಕ್ಕೆ ಭೇಟಿನೀಡಿ ಸಮಸ್ಯೆಯ ಮಾಹಿತಿ ಪಡೆದುಕೊಂಡರು. ಹಂದನಕೆರೆ ಪೊಲೀಸ್ ಠಾಣೆಯ ಪಿಎಸ್ಸೈ ರವೀಂದ್ರರವರು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮೃತ ದುರ್ದೈವಿಗಳು ರಂಗಮ್ಮ (55) ಹಾಗೂ ಭುವನೇಶ್ವರಿ (13) ಇಬ್ಬರೂ ಇದೇ ಗ್ರಾಮದ ಒಂದೇ ಟ್ಯಾಂಕ್’ನಿಂದ ನೀರು ಸೇವಿಸುತ್ತಿದ್ದವರು. ಮಂಗಳವಾರ ಅಸುನೀಗಿದ ರಂಗಮ್ಮ’ನವರು ಅವರ ಮಗ ರಮೇಶ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಈಗ್ಗೆ ಎರಡು ವರ್ಷದ ಹಿಂದೆ ರಮೇಶ್’ರವರ ಪತ್ನಿ ಕೂಡ ಕಾಯಿಲೆಬಿದ್ದು ನಿಧನರಾಗಿದ್ದರು.

ಆ ಕುಟುಂಬದ ಗೃಹಕಾರ್ಯಗಳಿಗಿದ್ದ ಏಕೈಕ ಆಧಾರ ದಿವಂಗತ ರಂಗಮ್ಮನೇ ಆಗಿದ್ದರು. ಮೂರು ದಿನಗಳ ಹಿಂದೆ ಅಸುನೀಗಿದ ಭುವನೇಶ್ವರಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ. ಈಕೆಯ ಕುಟುಂಬವೂ ಅದೇ ಟ್ಯಾಂಕ್’ನಿಂದ ನೀರು ಕುಡಿಯುತ್ತಿದ್ದುದಾಗಿ ಅವರ ತಾಯಿ ತಿಳಿಸಿದರು. ಭುವನೇಶ್ವರಿ ತನ್ನ ತಮ್ಮ ಹಾಗೂ ತಂದೆ-ತಾಯಿಯನ್ನು ಅಗಲಿದ್ದಾರೆ.

ತಾಲ್ಲೂಕು ಆರೋಗ್ಯಾಧಿಕಾರಿ ಡಾ ಯಶ್ವಂತ್, ಆರಕ್ಷಕ ವೃತ್ತ ನಿರೀಕ್ಷಕ ಎಫ್ ಕೆ ನದಾಫ್ ಮತ್ತು ಪಂಚಾಯತ್ ಇಲಾಖೆಯ ಇತರೆ ಅಧಿಕಾರಿಗಳು ಮಂಗಳವಾರ ರಾತ್ರಿ ಭೇಟಿ ಕೊಟ್ಟು ತಡರಾತ್ರಿಯವರೆಗೂ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಕುಡಿಯುವುದಕ್ಕಾಗಿ ಮತ್ತು ಅಡುಗೆ ಮಾಡುವುದಕ್ಕಾಗಿ ಬಳಸುತ್ತಿದ್ದ ನೀರಿನ ಸ್ಯಾಂಪಲ್’ಗಳನ್ನು ಸಂಗ್ರಹಿಸಿ, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತಿರುವುದಾಗಿ ಡಾ ಯಶ್ವಂತ್ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ ಯಶ್ವಂತ್’ರವರ ಮಾಹಿತಿಪ್ರಕಾರ ಭುವನೇಶ್ವರಿಗೆ ಮೂರ್ಛೆರೋಗದ ಸಮಸ್ಯೆ ಇತ್ತಂತೆ. ಅವರು ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರಂತೆ. ಅದರ ಎಲ್ಲ ವಿವರಗಳನ್ನು ಅವರು ಗ್ರಾಮಸ್ಥರ ಎದುರೇ ಬಿಡಿಸಿ ವಿವರಿಸಿದರು. ಆದರೆ, ಗ್ರಾಮಸ್ಥರು ಅವರ ಮಾತನ್ನು ತಳ್ಳಿಹಾಕಿದರು. ರಂಗಮ್ಮನವರ ಸಾವಿಗೆ ವಯೋಸಹಜ ಕಾಯಿಲೆಗಳ ಅಡ್ಡಪರಿಣಾಮದ ಹಿನ್ನೆಲೆಯ ಆಯಾಮದಿಂದದ ಕೂಡ ಪರಿಶೀಲನೆ ನಡೆಸಲಾಗುತ್ತಿದೆ.

ಜೆಜೆಎಂ ಕಾಮಗಾರಿ ಗ್ರಾಮಕ್ಕೆ ತಂದಿಟ್ಟ ಅವಾಂತರ ::

ಊರಿಗೆ, ಜೆಜೆಎಂ ಯೋಜನೆಯಡಿ ಮನೆ ಮನೆ ಗಂಗೆ ಮೂಲಕ ಗ್ರಾಮದ ಮನೆ ಮನೆಗೂ ನೀರು ಕಲ್ಪಿಸುವ ಕಾಮಗಾರಿಯ ಎಡವಟ್ಟುಗಳೇ ಇಷ್ಟೆಲ್ಲಕ್ಕೂ ಕಾರಣ ಎಂದು ಗ್ರಾಮಸ್ಥರು ದೂರುತ್ತಾರೆ. ಜೆಜೆಎಂ ಕಾಮಗಾರಿಯ ಇಂಜಿನಿಯರ್ ಹಾಗೂ ಗುತ್ತಿಗೆದಾರ ಇಬ್ಬರೂ ಇಷ್ಟೆಲ್ಲ ದುರಂತಕ್ಕೆ ಕಾರಣ ಎಂದು ತಹಸೀಲ್ದಾರ್ ಹಾಗೂ ಉಪ-ವಿಭಾಗಾಧಿಕಾರಿಗಳ ಬಳಿ ಗ್ರಾಮಸ್ಥರು ನೇರವಾಗಿ ದೂರಿದರು. ಒಡೆದ ಪೈಪುಗಳು, ಬಾಯ್ತೆರೆದ ಗುಂಡಿಗಳು, ಒಡೆದ ಪೈಪುಗಳಿಂದ ಗ್ರಾಮದ ಗಲ್ಲಿಗಲ್ಲಿಯಲ್ಲೂ ಹರಿಯುತ್ತಿರುವ ನೀರು. ಇದು ಈಗ ಸೋರಲಮಾವು ಗ್ರಾಮದ ಚಿತ್ರಣ. ಸೀಪೇಜ್ ನಿಲ್ಲದ ರಸ್ತೆಗಳು ಹಾಗೂ ಪೈಪ್ ಅಳವಡಿಸಲು ಬಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಹಾಗೇ ಬಿಟ್ಟುಹೋದದ್ದರ ಪರಿಣಾಮ ಗ್ರಾಮದ ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕಕ್ಕೆ ಪೈಪುಗಳ ಮೂಲಕ ಹರಿಯುವ ನೀರಿನಲ್ಲಿ ಉದ್ದಕ್ಕೂ ಕಲ್ಮಶ ಮಿಶ್ರಿತಗೊಂಡಿದೆ. ಉದ್ದಕ್ಕೂ ಕಲುಷಿತಗೊಂಡಿರುವ ಆ ನೀರನ್ನು ಸಂಸ್ಕರಣಾ ಘಟಕ ಇನ್ನೆಷ್ಟು ಶುದ್ಧಗೊಳಿಸೀತು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕಕ್ಕೆ ತಹಸೀಲ್ದಾರ್ ಕೆ ಪುರಂದರ್’ರವರು ಭೇಟಿಕೊಟ್ಟು, ಗ್ರಾಮಸ್ಥರು ನಿತ್ಯ ಕುಡಿಯುತ್ತಿರುವ ಆ ನೀರನ್ನು ತಾವೇ ಕುಡಿದು ಪರಿಶೀಲಿಸಿದರು. ನಂತರ, ಈ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿ, ಪರೀಕ್ಷಿಸಿದ ನಂತರ ಇದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದರು.

ಮಕ್ಕಳ ಹಕ್ಕುಗಳು….!? ::

ಶುದ್ಧ ಗಾಳಿ, ಶುದ್ಧ ನೀರು, ಪೌಷ್ಠಿಕ ಆಹಾರ ಜೊತೆಗೆ ಸ್ವಚ್ಛಂದ ಬೆಳಕಿನ ಜೊತೆಗೆ ಕನಿಷ್ಠ ಬದುಕಿಕೊಳ್ಳುವ ಮಕ್ಕಳ ಹಕ್ಕನ್ನೂ ಸ್ಥಳೀಯ ಆಡಳಿತ ರಕ್ಷಿಸುತ್ತಿಲ್ಲ. ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಭುವನೇಶ್ವರಿಯ ಸಾವು ಇದನ್ನು ಮತ್ತೆ ಪುಷ್ಠೀಕರಿಸುತ್ತಿದೆ. ಆಕೆಯ ಅಸ್ವಸ್ಥತೆಯ ಬಗ್ಗೆ ಸಂಬಂಧಪ್ಟವರು ಇನ್ನಷ್ಟು ಜಾಗ್ರತೆ ವಹಿಸಬೇಕಿತ್ತು. ಸ್ಥಳೀಯ ಆಶಾ ಕಾರ್ಯಕರ್ತೆಯರು, ಸರ್ಕಾರಿ ದಾದಿಯರು ಹಾಗೂ ಕುಟುಂಬಸ್ಥರು ಇಲ್ಲಿ ತೀವ್ರ ನಿಗಾ ವಹಿಸಬೇಕಿತ್ತು.

ಆರೋಗ್ಯ ತಪಾಸಣಾ ಶಿಬಿರ ::

ಹಂದನಕೆರೆ ಹೋಬಳಿಗೇ ದೊಡ್ಡ ಊರಾಗಿರುವ ಸೋರಲಮಾವು ಗ್ರಾಮದಲ್ಲಿ ಸರಿಸುಮಾರು 900 ಕುಟುಂಬಗಳಿದ್ದು, ಸುಮಾರು 400 ಕುಟುಂಬಗಳ ಸದಸ್ಯರು ತೀವ್ರತರವಾದ ವಾಂತಿ-ಬೇಧಿಗೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನೂ ಕೆಲವರು ಈಗಲೂ ವಾಂತಿ-ಬೇಧಿಯಿಂದ ಬಳಲುತ್ತಿದ್ದಾರೆ. ಕಲುಷಿತ ನೀರಿನ ಸೇವನೆಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು, ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕ ಮತ್ತು ಪಿಡಿಒ ನವೀನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ, ಪಬ್ಲಿಕ್ ಸ್ಟೋರಿಗೆ ಪ್ರತಿಕ್ರಿಯಿಸಿದ ಉಪ-ವಿಭಾಗಾಧಿಕಾರಿ ಸಪ್ತ ಶ್ರೀಯವರು, ಗ್ರಾಮದ ಎರಡೂ ಸಾವುಗಳಿಗೆ ಕಾರಣ ಕಲುಷಿತ ನೀರಿನ ಸೇವನೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ. ಆದರೆ, ಸೂಕ್ತ ಕಾರಣ ಇನ್ನೂ ಸಿಕ್ಕಿಲ್ಲ. ನಾವು ಆಸ್ಪತ್ರೆ ಮತ್ತು ಸಂಬಂಧಿಸಿದ ಎಲ್ಲ ಇಲಾಖೆಗಳಿಂದ ವರದಿ ಕೇಳಿದ್ದೇವೆ. ವರದಿ ಬಂದ ನಂತರ ಸ್ಪಷ್ಟ ಮಾಹಿತಿ ಕೊಡಲಾಗುವುದು. ಅದಕ್ಕೂ ಮೊದಲು ಕೂಡಲೇ ಗ್ರಾಮದ ಪ್ರತಿ ಸದಸ್ಯರ ಆರೋಗ್ಯ ತಪಾಸಣೆ ನಡೆಸುವುದು ಮತ್ತು ಸೂಕ್ತ ಚಿಕಿತ್ಸೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಆದ್ಯತೆಯಾಗಿದೆ. ತನಿಖೆ ಹಾಗೂ ವರದಿ ಬಂದ ನಂತರ ಸ್ಪಷ್ಟ ಮಾಹಿತಿ ಸಿಗಲಿದೆ ಎಂದರು.

ಪಿಡಿಒ ನವೀನ್’ರವರ ಅತಿಯಾದ ಸಜ್ಜನಿಕೆ ಹಾಗೂ ನಿಧಾನಗತಿಯ ಕಾರ್ಯವೈಖರಿಯಿಂದಾಗಿ ವರ್ಷಾವರ್ಷ ಕಳೆದರೂ ಗ್ರಾಮದ ನೀರಿನ ಟ್ಯಾಂಕುಗಳನ್ನು ಶುಚಿಗೊಳಿಸಲಾಗಿಲ್ಲ. ತಾತ್ಕಾಲಿಕ ನೀರುಗಂಟಿಗಳನ್ನು ಬಳಸಿಕೊಂಡು ಕೆಲಸ ಸಾಗಿಸಲಾಗುತ್ತಿದೆ. ಖಾಯಮ್ಮಾದ ನೀರುಗಂಟಿಗಳಿಲ್ಲ. ಊರಿನಲ್ಲಿರುವ ನಾಲ್ಕೈದು ಟ್ಯಾಂಕುಗಳೂ ವಿಪರೀತ ಪಾಚಿಗಟ್ಟಿ, ಒಳಭಾಗದಲ್ಲಿ ಕಿಲುಬುಗಟ್ಟಿ, ಕನಿಷ್ಠ ಮನೆಗೆಲಸಕ್ಕೆ, ಕನಿಷ್ಠ ಬಟ್ಟರ ತೊಳೆಯಲಿಕ್ಕೆ ಉಪಯೋಗಿಸಲೂ ಬಾರದಷ್ಟು ತೀವ್ರಪ್ರಮಾಣದಲ್ಲಿ ನೀರು ಕಲುಷಿತಗೊಂಡಿದೆ ಎಂದು ದಿವಂಗತ ರಂಗಮ್ಮ ಮತ್ತು ಭುವನೇಶ್ವರಿಯವರ ನೆರೆಹೊರೆಯ ಮನೆಗಳವರು ಹೇಳುತ್ತಾರೆ.

ಬುಧವಾರ ಬೆಳಗ್ಗಿನಿಂದಲೇ ಸೋರಲಮಾವು ಗ್ರಾಮದಲ್ಲಿ ಆರೋಗ್ಯ ತಪಾಸಣೆಯ ಶಿಬಿರ ನಡೆಸುವಂತೆ ಉಪ-ವಿಭಾಗಾಧಿಕಾರಿ ಸಪ್ತಶ್ರೀರವರು ಆರೋಗ್ಯಾಧಿಕಾರಿ ಡಾ ಯಶ್ವಂತ್’ರವರಿಗೆ ಸೂಚಿಸಿದರು. ಬುಧವಾರ ಬೆಳಗ್ಗಿನಿಂದಲೇ ಸೋರಲಮಾವು ಗ್ರಾಮದ ಪ್ರತಿಯೊಂದು ಕುಟುಂಬದ ಪ್ರತಿಯೊಬ್ಬ ಸದಸ್ಯರ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗುವುದು.

ಗ್ರಾಮದಲ್ಲಿ ಮಂಗಳವಾರ ತಡರಾತ್ರಿಯವರೆಗೂ ಡಿಎಸ್ ಪಿ ವಿನಾಯಕ ಎಸ್ ಶೆಟಗೇರಿ, ಆರಕ್ಷಕ ವೃತ್ತ ನಿರೀಕ್ಷಕ ಎಫ್ ಕೆ ನದಾಫ್, ಪಿಎಸ್ಸೈ ರವೀಂದ್ರ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದರು.

ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಅಲೆಮಾರಿ ವಸತಿ ಪ್ರದೇಶಕ್ಕೆ ರಸ್ತೆ ಗೆ ಅಡ್ಡಿ

0

(ಪಬ್ಲಿಕ್ ಸ್ಟೋರಿ ಪ್ರಕಟಿಸಿದ್ದ “ಸುಡುಗಾಡಿಗೆ ರಸ್ತೆ ಯಾವುದಯ್ಯಾ ಸರ್ಕಾರವೇ…!?” ವರದಿಯ ಪರಿಣಾಮ ಸಿದ್ದ ಜನಾಂಗದ ಅಲೆಮಾರಿ ವಸತಿ‌ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭಗೊಂಡಿವೆ)

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಕಸಬಾ ಹೋಬಳಿ ಹೊನ್ನೆಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಬ್ಬೇಘಟ್ಟ ಗ್ರಾಮದ ಸರ್ವೆ ನಂಬರ್-122’ರಲ್ಲಿ ಸಿದ್ದ ಜನಾಂಗದ ಅಲೆಮಾರಿ ಕುಟುಂಬಗಳಿಗೆ ನಿವೇಶನ ಹಂಚಿಕೆಯಾಗಿರುವ ವಸತಿಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಲು ಬಂದಿದ್ದ ಅಧಿಕಾರಿಗಳನ್ನು ತಡೆದು, ಸ್ಥಳೀಯರು ರಸ್ತೆ ನಿರ್ಮಾಣ ಕಾಮಗಾರಿಗೆ ವಿರೋಧ ಒಡ್ಡಿದ್ದಾರೆ.

ಸ್ಥಳದಲ್ಲಿ ತಾಲ್ಲೂಕಿನ ಸಮಾಜ ಕಲ್ಯಾಣ ಅಧಿಕಾರಿ ಶ್ರೀಧರಮೂರ್ತಿ ಮತ್ತು ಸಿಬ್ಬಂದಿ, ಹೊನ್ನೆಬಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೈರಪ್ಪ ಹಾಗೂ ಹೊನ್ನೆಬಾಗಿ ಗ್ರಾಮ ಆಡಳಿತ ಅಧಿಕಾರಿ ಅಶೋಕ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ತುಮಕೂರು ಜಿಲ್ಲೆ, ತುಮಕೂರು ನಿರ್ಮಿತಿ ಕೇಂದ್ರ, ಜಿಲ್ಲಾ ಆಡಳಿತ ಹಾಗೂ ತಾಲ್ಲೂಕು ಆಡಳಿತ ಜಾಗ ಗುರ್ತಿಸಿ, ನಿವೇಶನ ಹಂಚಿಕೆ ಮಾಡಿ, ಅಲೆಮಾರಿ ಸಿದ್ದರಿಗೆ ವಸತಿ ಕಲ್ಪಿಸಿರುವ ಪ್ರದೇಶ ಅದು. ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಆಗಲೇ ಅಳೆದು, ನಿರ್ಧರಿಸಿ ನಿಗದಿ ಮಾಡಲಾಗಿತ್ತು. ಈಗ ಅಲ್ಲಿ ಬಳಕೆಯಲ್ಲಿರುವ ಕಚ್ಛಾರಸ್ತೆಯೇ ಅಲ್ಲಿಗಿರುವ ಸಂಪರ್ಕದ ಏಕೈಕ ದಾರಿ. ಈ ಹಿಂದೆ (ಸರ್ವೇಯರ್) ಭೂ-ಮಾಪನ ಅಧಿಕಾರಿ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳವನ್ನು ಅಳೆದು ರಸ್ತೆಗಾಗಿ ಈಗಿರುವ ಜಾಗವನ್ನೇ ಬಾಂದು-ಬಂದೋಬಸ್ತ್ ಮಾಡಿ ತೆರಳಿದ್ದರು. ಆಗ ಅಕ್ಕಪಕ್ಕದವರು ಇದನ್ನು ಒಪ್ಪಿ ಸಹಿ ಮಾಡಿಕೊಟ್ಟಿದ್ದರು. ಅದೇ ಕಚ್ಚಾ ರಸ್ತೆಯನ್ನು ಪಕ್ಕಾ ರಸ್ತೆಯನ್ನಾಗಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಜೆಸಿಬಿ ಸಮೇತ ಭಾನುವಾರ ಬೆಳಗ್ಗೆ ಅಲ್ಲಿಗೆ ಹೋದಾಗ, ಕಾಮಗಾರಿ ಕೆಲಸಗಳನ್ನು ತಡೆದು ಈಗ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಪ್ರಸ್ತುತ, ಅಲೆಮಾರಿಗಳ ವಸತಿ ಪ್ರದೇಶದಲ್ಲಿ ಭೂ-ಮಾಪನ ಇಲಾಖೆಯ ಅಧಿಕಾರಿಗಳು ಮತ್ತೊಮ್ಮೆ ಹೊಸದಾಗಿ ನಿವೇಶನಗಳ ಚಕ್ಕುಬಂದಿ ಸಿದ್ಧಪಡಿಸಿದ್ದು, ವಿತರಣೆಯಾಗಿರುವ ಹಕ್ಕುಪತ್ರಗಳಲ್ಲಿ ಆಗಿರುವ ಅಳತೆ ಮತ್ತು ಚಕ್ಕುಬಂದಿ ಲೋಪಗಳನ್ನು ಸರಿಪಡಿಸಿ, ನಿವೇಶನಗಳಲ್ಲಿಮನೆ ನಿರ್ಮಾಣ ಕಾಮಗಾರಿಗೆ ಅನುಮತಿ ಪತ್ರಗಳನ್ನು ವಿತರಿಸಲಾಗುವುದು. ಜಿಲ್ಲೆಯ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ತಾಲ್ಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳ ವ್ಯಾಪ್ತಿ ಸುಪರ್ದಿಗೆ ಲಿಖಿತವಾಗಿ ನಿವೇಶನ ಹಂಚಿಕೆಯ ಜಾಗ ಹಸ್ತಾಂತರವಾದ ನಂತರ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಹಸಿರು ನಿಶಾನೆ ಸಿಕ್ಕಂತಾಗುತ್ತದೆ.

ಈಗ ಆ ವಸತಿ ಪ್ರದೇಶ ಹೊನ್ನೆಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ್ದರೂ, ಅಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅಧಿಕಾರ‌ ಪಂಚಾಯತಿಗಿರುವುದಿಲ್ಲ. ಇದು ಸುಪರ್ದು-ಹಸ್ತಾಂತರ ಕುರಿತ ತಾಂತ್ರಿಕ ಸಮಸ್ಯೆ. ಇದನ್ನೆಲ್ಲ ಶೀಘ್ರವೇ ನಿವಾರಿಸಿಕೊಂಡು ಅಲೆಮಾರಿಗಳ ನಿವೇಶನ ಜಾಗದಲ್ಲಿ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಹೊನ್ನೆಬಾಗಿ ಗ್ರಾಮ ಆಡಳಿತ ಅಧಿಕಾರಿ ಅಶೋಕ್ ತಿಳಿಸಿದ್ದಾರೆ.

ಜಿಲ್ಲೆಯ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ತುಮಕೂರು ‌ನಿರ್ಮಿಸಿ ಕೇಂದ್ರ ವತಿಯಿಂದ ನಮಗೆ ಸದರಿ ಜಾಗಕ್ಕೆ ಸಂಬಂಧಿಸಿ ಸ್ಪಷ್ಟವಾದ ಲಿಖಿತ ಸುಪರ್ದು-ಹಸ್ತಾಂತರ ಸಿಗದ ಹೊರತು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಯಾವ ನಿರ್ಣಯಗಳನ್ನು ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ ಎಂದು
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೈರಪ್ಪ ಹೇಳಿದರು.

ಅವಕಾಶ ವಂಚಿತ ಅನಕ್ಷರಸ್ಥರೇ ಆಗಿರುವ ನಮಗೆ ಸರ್ಕಾರಿ ಕಡತಗಳ ವಿಚಾರ ಅರ್ಥವಾಗುವುದಿಲ್ಲ. ಓದಿ ತಿಳಿದ ದೊಡ್ಡವರು ನಮ್ಮಂಥ ಬಡವರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಜಿಲ್ಲಾಧಿಕಾರಿಗಳು, ತಾಲ್ಲೂಕು ದಂಡಾಧಿಕಾರಿಗಳು ಆದಷ್ಟು ಬೇಗ ಈ ವಿಚಾರದಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸಿ, ಅಲೆಮಾರಿ ಕುಟುಂಬಗಳು ವಾಸವಿರುವ ವಸತಿ ಪ್ರದೇಶಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಇಲ್ಲಿಗೆ ಸಂಪರ್ಕ ಕಲ್ಪಿಸುವ ಪಕ್ಕಾ ರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಸಿದ್ದ ಜನಾಂಗದ ಅಲೆಮಾರಿ ಮುಖಂಡ ವೆಂಕಟೇಶ್ ಆಗ್ರಹಿಸಿದ್ದಾರೆ.

ನಾವೂ ಚೊಚ್ಚಲಮಕ್ಕಳು ::

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳ ಅನುಸಾರ ಯಾವುದೇ ದೇಶವೊಂದರ ಕಟ್ಟಕಡೆಯ ಪ್ರಜೆಗೂ, ತನ್ನ ಮೂಲಭೂತ ಹಕ್ಕು-ಸೌಕರ್ಯಗಳನ್ನು ಪಡೆದುಕೊಳ್ಳಲು ಬೇಕಾದ ಹಕ್ಕಿದೆ. ನಾವು ಕೂಡ ಈ ‌ಭೂಮ್ತಾಯಿಯ ಚೊಚ್ಚಲಮಕ್ಕಳು. ಆದಿ ಮನುಜರು. ಈ ನೆಲದ ಮೂಲನಿವಾಸಿಗಳು. ನಮಗೆ ನಮ್ಮ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಿಸಿಕೊಳ್ಳಲು ಹಕ್ಕಿದೆ. ಸಂಬಂಧಿಸಿದ ಅಧಿಕಾರಿ ಮತ್ತು ಇಲಾಖೆಗಳ ಎದುರು ನಾವು ನಮ್ಮ ಸಂವಿಧಾನಬದ್ಧ ಹಕ್ಕನ್ನು ಕೇಳುತ್ತಿದ್ದೇವೆ. ಇನ್ನೂ ಅದೆಷ್ಟು ದಶಕಗಳ ಕಾಲ ನಾವು ಹೀಗೇ ನಿರ್ಗತಿಕರಾಗಿರಬೇಕು, ಈ ವಿಶಾಲ ಆಕಾಶದ ಕೆಳಗೆ ನಾವು ಮಾತ್ರ ಯಾಕೆ ಅನಾಥರಾಗಿರಬೇಕು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಪರಮೇಶ್, ತಮ್ಮ ನಾಗರಿಕ ಹಕ್ಕುದಾರಿಕೆಯನ್ನು ಮಂಡಿಸುತ್ತಾರೆ.

ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಹೆದ್ದಾರಿ 150 ಎ ; ಒಂದೇ ದಿನದಲ್ಲಿ ಎರಡೆರಡು ಅಪಘಾತ

(ಇಂಜಿನಿಯರ್ ಮತ್ತು ಗುತ್ತಿಗೆದಾರ ಕಂಪನಿಯ ಮೇಲೆ ಎಫ್ ಐ ಆರ್ ದಾಖಲಿಸುವಂತೆ ಒತ್ತಾಯ)

(ಅಸಮರ್ಪಕ ರಸ್ತೆಯ ವೈಜ್ಞಾನಿಕ ದುರಸ್ತಿಗೆ ಹತ್ತಾರು ಬಾರಿ ಆಗ್ರಹಿಸಿದರೂ ಜಪ್ಪೆನ್ನದ ಹೆದ್ದಾರಿ ನಿರ್ಮಾಣ ಅಧಿಕಾರಿಗಳು)

ಚಿಕ್ಕನಾಯಕನಹಳ್ಳಿ : ಪಟ್ಟಣದ ಮೂಲಕ ಹಾದುಹೋಗುವ ಮೈಸೂರು-ಜೇವರ್ಗಿ ಹೆದ್ದಾರಿ ಮಾರ್ಗಮಧ್ಯದಲ್ಲಿ ಸಿಗುವ ಆಲದಕಟ್ಟೆ ಮತ್ತು ಸಾಲ್ಕಟ್ಟೆ ಭಾಗದಲ್ಲಿ ಶನಿವಾರ ಮಧ್ಯಾಹ್ನ ದ್ವಿಚಕ್ರ ವಾಹನ ಅಪಘಾತಗೊಂಡಿದ್ದರೆ, ಸಂಜೆ ಅಡುಗೆ ಅನಿಲ (ಹೆಚ್ ಪಿ ಗ್ಯಾಸ್) ಸರಕು ಸಾಗಣೆ ವಾಹನ ಪಲ್ಟಿಯಾಗಿ ಉರುಳಿಬಿದ್ದಿದೆ.

ಅಪಘಾತದಲ್ಲಿ ತಲೆಗೆ ಬಿದ್ದ ತೀವ್ರ ಪೆಟ್ಟಿನಿಂದ ಹೆಚ್ಚಿನ ರಕ್ತಸ್ರಾವವಾಗಿ ಆಸ್ಪತ್ರೆಗೆ ದಾಖಲಿಸಿರುವ ದ್ವಿಚಕ್ರ ವಾಹನ ಸವಾರ ಸಾಲ್ಕಟ್ಟೆ ಸಮೀಪದ ಮುದ್ದೇನಹಳ್ಳಿಯವರು ಎಂದು ಗುರ್ತಿಸಲಾಗಿದೆ. ಅವರ ಚಿಕಿತ್ಸೆ ನಡೆಯುತ್ತಿದೆ. ಅದೇರೀತಿ, ಸಂಜೆಹೊತ್ತಿಗೆ ಅದೇ ಜಾಗದಲ್ಲಿ ಅಡುಗೆ ಅನಿಲ‌ ಸರಕು ಸಾಗಣೆ ವಾಹನವೂ ಅಪಘಾತಕ್ಕೊಳಗಾಗಿದೆ.

ಈ ರಸ್ತೆಯಲ್ಲಿ ದಿನಕ್ಕೊಂದರಂತೆ ಒಂದಲ್ಲಾ ಒಂದು ರೀತಿಯ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ನಿರ್ಮಿಸಿರುವ ಹೆದ್ದಾರಿ ‌ರಸ್ತೆಯ ನಿರ್ಮಾಣ ಅವೈಜ್ಞಾನಿಕವಾಗಿರುವುದೇ ಇದಕ್ಕೆ ಕಾರಣ ಎಂದು ಈ ಭಾಗದ ಚಾಲಕರ ಸಂಘ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿ, ದೋಷಗಳನ್ನು ಶೀಘ್ರವೇ ವೈಜ್ಞಾನಿಕವಾಗಿ ಸರಿಪಡಿಸಿಕೊಡಬೇಕು ಎಂದು ಹಲವು ಬಾರಿ ಆಗ್ರಹಿಸಿದೆ.

ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಕಾರಣ, ಚಿಕ್ಕನಾಯಕನಹಳ್ಳಿಯ ಆರಕ್ಷಕ ವೃತ್ತ ನಿರೀಕ್ಷಕರಾದ ಎಫ್ ಕೆ ನದಾಫ್’ರವರು ಈ ಮಾರ್ಗದ ರಸ್ತೆಯಲ್ಲಿ ಸ್ವತಃ ತಮ್ಮ ಜೀಪ್ ಚಾಲನೆ ಮಾಡಿ, ರಸ್ತೆ ನಿರ್ಮಾಣ ಕಾಮಗಾರಿ ಸಂದರ್ಭದ ಏರು-ಪೇರುಗಳನ್ನು ಅನುಭವಿಸಿದ್ದಾರೆ. ಟ್ಯಾಕ್ಸಿ ಚಾಲಕರ ಸಂಘ ಹಾಗೂ ಸ್ಥಳೀಯರ ಒತ್ತಾಯಕ್ಕೆ ಮಣಿದ ಪೊಲೀಸ್ ಇಲಾಖೆ ಮೇಲಧಿಕಾರಿಗಳು ಸದರಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಮೃತ್ಯುಂಜಯ ಮತ್ತು ರಸ್ತೆ ನಿರ್ಮಾಣ ಗುತ್ತಿಗೆದಾರ ಕಂಪನಿಯಾದ ಶ್ರೀ ಸಾಯಿ‌ ಕನ್ಸಟ್ರಕ್ಷನ್ಸ್’ಗೆ ಪತ್ರ ಬರೆದಿದ್ದರು. ಅವರಿಂದ ಲಿಖಿತ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದರು. ಆದರೆ, ಅತ್ತ ಕಡೆಯಿಂದ ಯಾವುದಕ್ಕೂ ಏನೂ ಸ್ಪಂದನೆಯಿಲ್ಲದಂತಾಗಿದೆ.

ಆರಕ್ಷಕ ವೃತ್ತ ನಿರೀಕ್ಷಕರ ಪತ್ರ ಮುಖೇನ, ವೈಜ್ಞಾನಿಕವಾಗಿ ರಸ್ತೆಯ ಮರುಪರಿಶೀಲನೆ ನಡೆಸಿ, ಅದರಲ್ಲಿ ಆಗಿರುವ ಲೋಪಗಳನ್ನು ಸಾಧ್ಯವಾದಷ್ಟು ಬೇಗನೇ ಸರಿಪಡಿಸುವುದು. ಪ್ರಸ್ತುತ ಸ್ಥಿತಿಯಲ್ಲಿ ರಸ್ತೆಮೇಲೆ ಚಲಿಸುವ ವಾಹನಗಳು ಆಯತಪ್ಪುವ ಸಂಭವ ಹೆಚ್ಚಿದೆ. ಇದರಿಂದಾಗಿ ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ದಿನೇದಿನೆ ಏರುತ್ತಿದೆ. ಕೂಡಲೇ ಹೆದ್ದಾರಿ ರಸ್ತೆಯ ವೈಜ್ಞಾನಿಕ ಪರಿಶೀಲನೆ ನಡೆಸಿ, ಅದನ್ನು ಸರಿಪಡಿಸಿ ಸಾರ್ವಜನಿಕ ಬಳಕೆಗೆ ವಹಿಸತಕ್ಕದ್ದು ಎಂಬ ಸಲಹೆಗಳನ್ನು ನೀಡಲಾಗಿತ್ತು. ಗುತ್ತಿಗೆದಾರ ಕಂಪನಿಯೇ ಆಗಲಿ ಅಥವಾ ಹೆದ್ದಾರಿ ನಿರ್ಮಾಣ ಅಧಿಕಾರಿಯೇ ಆಗಲಿ ಯಾರಿಂದಲೂ ಇದೂತನಕ ಯಾವುದೇ ಪ್ರತಿಸ್ಪಂದನೆ ಕಂಡುಬಂದಿಲ್ಲ.

ಅಪಘಾತಕ್ಕೆ ಕಾರಣ ::

ಚಿಕ್ಕನಾಯಕನಹಳ್ಳಿಯಿಂದ ಹುಳಿಯಾರು ಮಾರ್ಗವಾಗಿ ಮೈಸೂರು-ಜೇವರ್ಗಿ ಹೆದ್ದಾರಿಯ ರಸ್ತೆಯ ಎರಡೂ ಬದಿಯ ಪಥ ಸಮತಟ್ಟಾಗಿರುವುದಿಲ್ಲ. ಎಡಬದಿಯ ಪಥ ತುಸು ಎತ್ತರಕ್ಕಿದ್ದರೆ, ಬಲಬದಿಯ ಪಥ ಕೊಂಚ ತಗ್ಗಾಗಿದೆ. ಭಾರೀ ವಾಹನಗಳು ಮತ್ತು ಸರಕು ಸಾಗಣೆಯ ವಾಹನಗಳು ಇಲ್ಲಿ ಚಲಿಸುವಾಗ ಏಕಾಏಕಿ‌ ಒಂದುಕಡೆಗೆ ವಾಲಿಕೊಂಡು ಆಯತಪ್ಪಿ ಪಲ್ಟಿಹೊಡೆದು ಉರುಳಿಬೀಳುತ್ತವೆ.

ಸಾಧ್ಯವಾದಷ್ಟೂ ಶೀಘ್ರವೇ ರಸ್ತೆಯ ಸಮರ್ಪಕ ದುರಸ್ತಿಯನ್ನು ನಿರ್ವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದು ಈಗ್ಗೆ ತಿಂಗಳ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಧಿಕಾರಿ ಮೃತ್ಯುಂಜಯ ಹೇಳಿದ್ದರು. ಆದರೆ, ಇದುವರೆಗೂ ಅವರು ಏನೂ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಶನಿವಾರ ಮಧ್ಯಾಹ್ನ ಮತ್ತು ಸಂಜೆ ಮತ್ತೆ ಇದೇ ಜಾಗದಲ್ಲಿ ಎರಡೆರಡು ಅಪಘಾತಗಳು ಸಂಭವಿಸಿವೆ. ಇದರ ಹೊಣೆಯನ್ನು ಅವರ ಮೇಲೆ ಹೊರೆಸಿ, ಎಫ್ ಐ ಆರ್ ದಾಖಲಿಸಬೇಕು ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.

ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಸಭಾ ಮರ್ಯಾದೆ ಮತ್ತು ಪರಸ್ಪರ ಗೌರವ ಮುಖ್ಯ ; ಡಾ ಸತೀಶ್ ಸಾಸಲು

ಚಿಕ್ಕನಾಯಕನಹಳ್ಳಿ : ಶಾಸಕಾಂಗ ಮತ್ತು ಕಾರ್ಯಾಂಗದ ಸಾಂವಿಧಾನಿಕ ಹುದ್ದೆಗಳಲ್ಲಿರುವ ವ್ಯಕ್ತಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಸಭಾ ಮರ್ಯಾದೆ ಮತ್ತು ಪರಸ್ಪರ ಗೌರವ ಭಾವನೆಯಿಂದ ವರ್ತಿಸುವ ಸಾಮಾನ್ಯ ಜ್ಞಾನವನ್ನು ರೂಢಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಮತ್ತು ಜಿಲ್ಲೆಯ ಅಹಿಂದ ವರ್ಗಗಳ ದಿಟ್ಟನಾಯಕ ಡಾ. ಸಾಸಲು ಸತೀಶ್ ಹೇಳಿದರು. ಇದೇ ಅಕ್ಟೋಬರ್ ತಿಂಗಳ 15’ನೇ ತಾರೀಕಿನ ಸೋಮವಾರದಂದು, ಪಟ್ಟಣದಲ್ಲಿ ಒಂದು ಖಾಸಗಿ ನೇತ್ರ ಚಿಕಿತ್ಸಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕ್ಷೇತ್ರದ ಶಾಸಕ ಹಾಗೂ ಜೆಡಿ(ಎಸ್) ಪಕ್ಷದ ಶಾಸಕಾಂಗ ನಾಯಕರೂ ಆಗಿರುವ ಸಿ ಬಿ ಸುರೇಶ್ ಬಾಬುರವರು, ಪತ್ರಕರ್ತರ ಸಮ್ಮುಖದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಗ್ಗೆ ಆಡಿದ ಮಾತುಗಳಿಗೆ ಪ್ರತಿಯಾಗಿ ಡಾ. ಸತೀಶ್ ಸಾಸಲು ಹೀಗೆ ಉತ್ತರಿಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ ಪುರಂದರ್ ಹಾಗೂ ಆರಕ್ಷಕ ವೃತ್ತ ನಿರೀಕ್ಷಕ ಎಫ್ ಕೆ ನದಾಫ್ ಕೂಡಾ ಭಾಗಿಯಾಗಿದ್ದರು. ಉದ್ಘಾಟನೆ ಮತ್ತು ಇತರೆ ಕಾರ್ಯಕ್ರಮಗಳೆಲ್ಲ ಮುಗಿದ ಮೇಲೆ ಎಲ್ಲರೂ ಒಟ್ಟಾಗಿ ಕೂತು ಚಹಾ ಸೇವಿಸುತ್ತಿದ್ದ ಸಂದರ್ಭದಲ್ಲಿ, ಪತ್ರಿಕಾ ವರದಿಗಾರರೊಬ್ಬರು ಎಡಿಜಿಪಿ ಚಂದ್ರಶೇಖರ್’ರವರು ದಾಖಲಿಸಿರುವ ಎಫ್ ಐ ಆರ್ ಹಾಗೂ ಮುಡಾ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಶಾಸಕರು ಥಟ್ಟನೆ ಪ್ರತಿಕ್ರಿಯಿಸಿದ್ದರು. ಆಗ ಅವರ ಪಕ್ಕದಲ್ಲಿ ತಹಸೀಲ್ದಾರರು ಮತ್ತು ಆರಕ್ಷಕ ವೃತ್ತ ನಿರೀಕ್ಷಕರು ಉಪಸ್ಥಿತರಿದ್ದರು. ಇದರ ಅನೌಚಿತ್ಯವನ್ನು ಉಲ್ಲೇಖಿಸಿದ ಕಾಂಗ್ರೆಸ್ ಮುಖಂಡ ಡಾ.ಸತೀಶ್ ಸಾಸಲು, ಸರ್ಕಾರಿ ಅಧಿಕಾರಿಗಳ ಜೊತೆ ಶಾಸಕರು ಸಾರ್ವಜನಿಕ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದಾಗ, ತಮ್ಮ ವೈಯಕ್ತಿಕ ಅಥವಾ ತಮ್ಮ ಪಕ್ಷದ ಅಜೆಂಡಾಗಳಿಗನುಸಾರ ಸರ್ಕಾರದ ವಿರುದ್ಧ ಅಥವಾ ರಾಜ್ಯದ ಮುಖ್ಯಮಂತ್ರಿಯ ವಿರುದ್ಧ ಮಾತನಾಡುವುದು ನ್ಯಾಯೋಚಿತವೇ ಎಂದು ಕೇಳಿದ್ದಾರೆ.

ಸಭಾ ಮರ್ಯಾದೆ ಮತ್ತು ಪರಸ್ಪರ ಗೌರವ ಮುಖ್ಯ ::

ಸಂವಿಧಾನದ ಆಶಯಗಳ ಕುರಿತು ಮಾತಾಡುವ ಕ್ಷೇತ್ರದ ಶಾಸಕ ಮತ್ತು ಜೆಡಿ(ಎಸ್) ಪಕ್ಷದ ಶಾಸಕಾಂಗ ನಾಯಕ ಸಿ ಬಿ ಸುರೇಶ್ ಬಾಬುರವರು, ಬಂದೀಖಾನೆಯಿಂದ ಸರ್ಕಾರ ನಡೆಸಬೇಕಾದ ಸಮಯ ಬರಲಿದೆ ಎನ್ನುವ ಮೂಲಕ ಮತ್ತು ಮುಖ್ಯಮಂತ್ರಿಯವರ ಕುರಿತು ಲಘುಶಬ್ಧಗಳನ್ನು ಬಳಸಿ ಮಾತಾಡುವುದರ ಮೂಲಕ ತಾವು ಸಂವಿಧಾನದ ಯಾವ ಬಗೆಯ ಆಶಯಗಳನ್ನು ಎತ್ತಿಹಿಡಿಯುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಕಾರ್ಯಕ್ರಮವೊಂದರಲ್ಲಿ ವಿರಾಮವಾಗಿ ಕೂತು ಚಹಾ ಹೀರುವ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು ಪಕ್ಕದಲ್ಲೇ ಉಪಸ್ಥಿತರಿದ್ದಾಗ, ಸಭಾ ಮರ್ಯಾದೆ ಮತ್ತು ಪರಸ್ಪರ ಅಧಿಕಾರ ವ್ಯಾಪ್ತಿಯ ಗೌರವಾದರಗಳನ್ನು ಮರೆತು, ಸರ್ಕಾರ ಮತ್ತು ಸರ್ಕಾರದ ಮುಖ್ಯಮಂತ್ರಿಯ ವಿರುದ್ಧ ಪತ್ರಕರ್ತರ ಜೊತೆ ಮಾತಾಡಿರುವುದು ಒಂದು ಪಕ್ಷದ ಶಾಸಕಾಂಗ ನಾಯಕರಿಗೆ ಶೋಭೆ ತರುವಂಥದ್ದಲ್ಲ. ಡೆಕೋರಮ್ ಮತ್ತು ಪ್ರೊಟೊಕಾಲ್ ಸಂಬಂಧಿತ ಸಾಮಾನ್ಯ ಜ್ಞಾನ ಜನಪ್ರತಿನಿಧಿಗಳಲ್ಲಿ ಇರಬೇಕು. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಅಲ್ಲೇ ಕೂರುವುದು ಸಮಂಜಸವಾದುದಲ್ಲ. ತಕ್ಷಣ ಅವರು ಅಲ್ಲಿಂದ ನಿರ್ಗಮಿಸಬೇಕಿತ್ತು. ಇದು ಅಚಾತುರ್ಯದ ಘಟನೆ. ತಾಲ್ಲೂಕಿನ ಶಾಸಕಾಂಗ ಮತ್ತು ನ್ಯಾಯಾಂಗ ಇದು ಮರುಕಳಿಸದಂತೆ ಎಚ್ಚರ ವಹಿಸುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.

ಹಗರಣವಲ್ಲ ಅದು ಪ್ರಕರಣ, ಅಷ್ಟೆ ::

ಮುಡಾ ಪ್ರಕರಣವನ್ನು ಹಗರಣ ಎಂಬಂತೆ ಬಿಂಬಿಸಲು ಯತ್ನಿಸುತ್ತಿರುವ ಜೆಡಿ(ಎಸ್) ಶಾಸಕಾಂಗ ನಾಯಕ ಹಾಗೂ ಕ್ಷೇತ್ರದ ಶಾಸಕ ಸುರೇಶ್ ಬಾಬುರವರು, ಅದೊಂದು ಪ್ರಕರಣವಷ್ಟೇ, ಹಗರಣವಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಲಿ. ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಟೀಕಿಸುವ ಭರದಲ್ಲಿ ಸ್ವಪಕ್ಷೀಯ ವರಿಷ್ಠರ ಮೇಲೆ ದಾಖಲಾಗಿರುವ ಕೇಸುಗಳನ್ನು ಮರೆತು ಏಕಪಕ್ಷೀಯವಾಗಿ ಮಾತನಾಡಬಾರದು. ಪೂರ್ವಾಗ್ರಹಪೀಡಿತ ಬಾಧೆಯಿಂದ ಯಾರೊಬ್ಬರ ಮೇಲೆಯೂ ಆರೋಪಗಳನ್ನು ಅಂಟಿಸಬಾರದು.

ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾರ್ಯಕ್ರಮಗಳಿಗೆ ವಿನಿಯೋಗಿಸಬೇಕಾದ ಹಣ, ತಾಲ್ಲೂಕಿನಲ್ಲಿ ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ನಿಯೋಜಿತ ಕಾಮಗಾರಿಗಳು, ಉದ್ದೇಶಿತ ಕಾಮಗಾರಿಗಳು ಮತ್ತು ನಿಯತವಾದ ಘಟಕ ಯೋಜನೆಗಳಿಗೆ ಸರ್ಕಾರದ ಪ್ರತ್ಯೇಕ ಅನುದಾನವಿದ್ದೇ ಇರುತ್ತದೆ. ಅದರಂತೇ ಗಣಿ ಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದ ಬಳಕೆಗಾಗಿ ನಿಗದಿಯಾಗಿರುವ ಉದ್ದೇಶಗಳು ನಿಯಮಗಳು ಮತ್ತು ಸ್ಪಷ್ಟವಾದ ನಿಗದಿತ ಕಾಮಗಾರಿಗಳ ಅನುಷ್ಠಾನದ ಪ್ರಗತಿಯನ್ನು ಸಾರ್ವಜನಿಕಗೊಳಿಸಬೇಕು. ಬಳಕೆಯಾದ ಹಣ, ಬಳಕೆಗೆ ಬಿಡುಗಡೆಯಾಗಿರುವ ಹಣ ಹಾಗೂ ಇನ್ನೂ ಬಿಡುಗಡೆಯಾಗಲಿರುವ ಹಣ ಸೇರಿದಂತೆ ಎಲ್ಲದರ ಪಾರದರ್ಶಕವಾದ ಸಾರ್ವಜನಿಕ ಪರಿಶೀಲನೆ ನಡೆಯಲಿ. ಇದೂ ಸೇರಿದಂತೆ ಇನ್ನೂ ಅನೇಕ ರೀತಿಯ ಭಾನಗಡಿಗಳು ನಡೆಯುತ್ತಿರುವುದರ ಬಗ್ಗೆ ಮಾಹಿತಿಯಿದೆ. ಮುಂದಿನ ದಿನಗಳಲ್ಲಿ ಇದೆಲ್ಲದರ ಲೆಕ್ಕ. ಸಾರ್ವಜನಿಕವಾಗಿ ಕೇಳಲಾಗುವುದು ಎಂದು ಎಚ್ಚರಿಸುತ್ತಾ, ಗಾಜಿನ ಮನೆಯಲ್ಲಿರುವವರು ಗಾಜಿಗೆ ಕಲ್ಲು ಹೊಡೆಯಲು ಹೋಗಬಾರದು ಎಂಬ ಗಾದೆಯನ್ನು ಇಲ್ಲಿ ಡಾ.ಸತೀಶ್ ಸಾಸಲು ನೆನಪಿಸಿದರು.