Saturday, December 6, 2025
Google search engine
Home Blog Page 8

‘ಸುಡುಗಾಡಿ’ಗೆ ರಸ್ತೆ ಯಾವುದಯ್ಯಾ ಸರ್ಕಾರವೇ !?

0

(ಅಲೆಮಾರಿ ಸಿದ್ದರ ಕೇರಿಯೇನು ಜನ-ವಸತಿಯೋ ಸುಡುಗಾಡೋ…!? ಎಂದು ಕೇಳುತ್ತಿರುವ ಸಿದ್ದ ಜನಾಂಗದ ಅಲೆಮಾರಿಗರು)

ಚಿಕ್ಕನಾಯಕನಹಳ್ಳಿ : ಪಟ್ಟಣದ ಕೇದಿಗೆಹಳ್ಳಿ ಪಾಳ್ಯದ ಗುಂಡುತೋಪಿನಲ್ಲಿ ಗುಡಿಸಲು-ಬಿಡಾರ ಹೂಡಿ ದಶಕಗಳಿಂದ ಹೇಗೋ ಬದುಕಿಕೊಂಡಿದ್ದ ಸಿದ್ಧ ಜನಾಂಗದ ಅಲೆಮಾರಿ ಕುಟುಂಬಗಳನ್ನು ಅಲ್ಲಿಂದ ತೆರವುಗೊಳಿಸಿ, ಕಸಬಾ ಹೋಬಳಿ ದಬ್ಬೇಘಟ್ಟ ಸರ್ವೆ ನಂಬರ್ 122’ರಲ್ಲಿನ 02ಎಕರೆ/20 ಗುಂಟೆ ಜಮೀನಿನಲ್ಲಿ 2019-2020’ರ ಸಾಲಿನಲ್ಲಿ ನಿವೇಶನ ಹಂಚಿಕೆ ಮಾಡಿಕೊಟ್ಟ ಕರ್ನಾಟಕ ಸರ್ಕಾರದ ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ತುಮಕೂರು ಜಿಲ್ಲೆ, ತುಮಕೂರು ನಿರ್ಮಿತಿ ಕೇಂದ್ರ, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಸೇರಿದಂತೆ ಎಲ್ಲ ಸರ್ಕಾರಿ ಯಂತ್ರಾಂಗವೂ, ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಅಲೆಮಾರಿಗಳ ಹಣೆಪಾಡನ್ನು ಮತ್ತೆ ಸುಡುಗಾಡಿಗೆ ಬಿಟ್ಟು ಕೈ-ತೊಳೆದುಕೊಂಡಿವೆ.

ಎಂದು ಸರ್ವೆ ನಂಬರ್-122’ರಲ್ಲಿನ ಸಿದ್ದರ ಬಿಡಾರದಲ್ಲಿ ವಾಸಿಸುತ್ತಿರುವ ಸಿದ್ದ ಜನಾಂಗದ ಅಲೆಮಾರಿಗಳು ನೊಂದು ನಿರ್ವಿವಾದ ನುಡಿಯುತ್ತಾರೆ.

ನಿವೇಶನ ಹಂಚಿಕೆಯಾದರೂ ಮನೆ ಕಟ್ಟಿಕೊಳ್ಳಲು ಧನಸಹಾಯ ಬಿಡುಗಡೆಯಾಗುತ್ತಿಲ್ಲ. ನಿವೇಶನದ ಹಂಚಿಕೆಯಲ್ಲಿ ಆಗಿರುವ ನಿವೇಶನ-ಅಳತೆಯ ಲೋಪದೋಷಗಳನ್ನು ಸರಿಪಡಿಸುವುದರಲ್ಲೇ ಎರಡು-ಮೂರು ವರ್ಷಗಳನ್ನು ತಳ್ಳಿ ಹಾಕಲಾಗಿದೆ.

ಹಕ್ಕುಪತ್ರದಲ್ಲಿ ಬದಲಾಗಲಿರುವ ನಿವೇಶನ ಅಳತೆಗೂ ಮಂಜೂರಾಗಿರುವ ನಿವೇಶನದ ಅಳತೆಗೂ ಎತ್ತಣಿಂದೆತ್ತ ಸಂಬಂಧವನ್ನೂ ಕಲ್ಪಿಸಲಾಗುತ್ತಿಲ್ಲ. ಊರಮಧ್ಯದಲ್ಲಿ ಎಲ್ಲರೊಳಗೆ ತಾವೂ ಒಬ್ಬರು ಎಂಬಂತೆ ಬಾಳಿಕೊಂಡಿದ್ದ ತಮ್ಮನ್ನು, ನಿವೇಶನ ಮತ್ತು ಸ್ವಂತ ಮನೆಯ ಆಸೆಯಲ್ಲಿ ಊರ ಮಧ್ಯದಿಂದ ನಿರ್ಜನ ಬೆಟ್ಟದ ಮೇಲಿನ ಜಾಗಕ್ಕೆ ಸಾಗಹಾಕಿರುವ ಸರ್ಕಾರೀ ಯಂತ್ರದ ನಿರಚನವ ಬಿಡಿಸುತ್ತಾ ತಮ್ಮ ವ್ಯಥೆಯನ್ನು ಕಥಿಸುತ್ತಾರೆ ಇಲ್ಲಿನ ಸಿದ್ದರು.

ಸರ್ಕಾರ ಇದನ್ನೇ ಮಾಡುವುದಿದ್ದರೆ, ಇದರ ಬದಲು ನಮ್ಮನ್ನೇ ಮುಗಿಸಿ ದಫನು ಮಾಡುವ ರುದ್ರಭೂಮಿಯನ್ನಾಗಿ ಇದನ್ನು ಮಾರ್ಪಡಿಸಬಹುದಿತ್ತು. ಬಡಾವಣೆಯ ಹೆಸರಲ್ಲಿ ಮತ್ತೆ ನಮ್ಮನ್ನು ನಿರ್ಜನ ಸುಡುಗಾಡಿಗೇ ಹಾಕಿ ದಿನನಿತ್ಯ ಇಷ್ಟಿಷ್ಟೇ ಬೆಂಕಿಯಿಕ್ಕುವ ಬದಲು, ಒಂದೇ ಸಾರಿ ಸುಟ್ಟೇಬಿಟ್ಡಿದ್ದರೆ ಚೆನ್ನಾಗಿತ್ತು ಎಂದು ಇಲ್ಲಿನ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅಲೆಮಾರಿ ಮಹಿಳೆಯರ ಪರಿಸ್ಥಿತಿ ::

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಿಂದ ಸುಮಾರು ಐದಾರು ಕಿಲೋಮೀಟರುಗಳ ದೂರದಲ್ಲಿರುವ ಸಿದ್ದರ ಈ ಬಡಾವಣೆಯಲ್ಲಿ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು, ಮಕ್ಕಳು, ಶಾಲೆ ಬಿಟ್ಟ ಮಕ್ಕಳು, ಹಿರಿಯರು, ನಾನಾ ಕಾಯಿಲೆಗಳಿಗೆ ತುತ್ತಾದ ವಯೋವೃದ್ಧರು, ಇತರರು ಸಣ್ಣಸಣ್ಣ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ.

ಅಕಸ್ಮಾತ್ ಇಲ್ಲಿ ಯಾರಿಗಾದರೂ ಏನಾದರೂ ತುರ್ತು ಚಿಕಿತ್ಸೆಯ ಅಗತ್ಯ ಒದಗಿಬಂದರೆ ಇಲ್ಲಿಂದ ಮುಖ್ಯರಸ್ತೆಯ ಕಡೆಗೆ ಹೋಗಿ ತಲುಪಲು ಬಡಾವಣೆಯಿಂದ ಸಮರ್ಪಕ ರಸ್ತೆಯೇ ಇಲ್ಲ. ಇಲ್ಲಿಂದ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅಸ್ವಸ್ಥರ ಪ್ರಾಣ ಉಳಿಯುವ ಯಾವ ಖಾತ್ರಿಯೂ ಇಲ್ಲ. ಯಾಕೆಂದರೆ, ಬೇಗನೇ ಪ್ರಯಾಣಿಸಲು ದುರ್ಲಭವಾದ ದುರ್ಗಮ ಕಚ್ಛಾರಸ್ತೆ ಇಲ್ಲಿರುವಂಥದ್ದು.

ಬಂಡಿಖರಾಬ್ ತರಹದ್ದು. ತೀರಾ ಕಿರಿದಾದ್ದು. ವಿಪರೀತ ಆಳದ ಮತ್ತು ಎತ್ತರದ ತಗ್ಗು‌-ದಿಣ್ಣೆಗಳಿಂದ ಕೂಡಿದಂಥ ರಸ್ತೆ. ನಿಧಾನ ಚಲಿಸಿದರೂ ವಾಹನಗಳ ಚಕ್ರಜಾರುವ ಕಂಕ್ರಿಮಣ್ಣಿನ ರಸ್ತೆಯಂಥದ್ದು.

ತುರ್ತು ಸಂದರ್ಭದಲ್ಲಿ 108-ಆ್ಯಂಬ್ಯುಲೆನ್ಸ್ ವಾಹನ ಕೂಡಾ ತಲುಪಲು ಕಷ್ಟಸಾಧ್ಯದ ಕಡುದಾರಿಯ ಜನ-ವಸತಿಯಿದು. ಇಂಥ ಪರಿಸ್ಥಿತಿಯಲ್ಲಿ ನಿತ್ಯದ ಜೀವನ ಸಾಗಿಸುತ್ತಿರುವ ಅಲೆಮಾರಿಗಳು, ಅಲೆಮಾರಿ ಮಹಿಳೆಯರು ಅದಿನ್ನ್ಯಾವ ಸಂಸ್ಕಾರಿ ಭಾಷೆಯಲ್ಲಿ ತಮ್ಮ ಅಸಹನೆ ವ್ಯಕ್ತಪಡಿಸಲು ಸಾಧ್ಯ ಊಹಿಸಿನೋಡಿ.

ಮನೆ ನಿರ್ಮಿಸಿಕೊಳ್ಳಲು ಇನ್ನೂ ನಿವೇಶನಗಳ ಅಳತೆ ಮತ್ತು ಹಂಚಿಕೆ ಬಗೆಹರಿಯುತ್ತಿಲ್ಲ. ಇದರಿಂದಾಗಿ ಧನಸಹಾಯ ಬಿಡುಗಡೆ ಆಗುತ್ತಿಲ್ಲ. ಇದೆಲ್ಲದರ ಪರಿಣಾಮ ಇಲ್ಲಿ ಗುಂಡುತೋಪಿಗಿಂತಲೂ ದುಃಸ್ತರದ ಪರಿಸ್ಥಿತಿಯಿದೆ. ತಾತ್ಕಾಲಿಕವಾಗಿಯಾದರೂ ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ಕನಿಷ್ಠ ಶೌಚಾಲಯ ವ್ಯವಸ್ಥೆಯಿಲ್ಲ. ಕಾಡುಪ್ರಾಣಿಗಳ ಭೀತಿಯ ನಡುವಲ್ಲೇ ಬಯಲ ಶೌಚಾಲಯದಲ್ಲೇ ಇಲ್ಲಿನವರು ಬಹಿರ್ದೆಸೆಗೆ ಹೋಗಿಬರಬೇಕು.

ತಾತ್ಕಾಲಿಕವಾದ ಸ್ನಾನಗೃಹಗಳ ವ್ಯವಸ್ಥೆಯೂ ಇಲ್ಲಿಲ್ಲ. ಇಲ್ಲಿರುವ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಪರಿಸ್ಥಿತಿಯನ್ನು ಊಹಿಸಲೂ ಆಗದು. ಇಂಥ ದ್ವಾಸೊತ್ತಿಗೆ ನಿರ್ಜನ ಗುಡ್ಡದ ಮ್ಯಾಲೆ ನಿವೇಶನ ಮಾಡಿ, ಆ ಗುಡ್ಡಕ್ಕೆ ಸಿದ್ದ ಜನಾಂಗದ ಅಲೆಮಾರಿಗಳನ್ನು ತಂದು ಗುಡ್ಡೆಹಾಕುವ ಅಗತ್ಯವೇನಿತ್ತು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಅಧ್ಯಕ್ಷ ರಂಗನಾಥ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಚಿರತೆ, ಕಾಡುಪ್ರಾಣಿಗಳ ಕಾಟ ::

ಇದು ವಸತಿ ಪ್ರದೇಶದಿಂದ ದೂರವಿರುವ ನಿರ್ಜನ ಗುಡ್ಡದ ಮೇಲಿರುವ ಬಡಾವಣೆ ಆಗಿರುವುದರಿಂದ, ರಾತ್ರಿವೇಳೆಯಲ್ಲಿ ಕರಡಿ, ಚಿರತೆ ಮತ್ತು ಮುಳ್ಳುಹಂದಿ, ಕಂಕನರಿ’ಯಂತಹ ಅರೆ ಅರಣ್ಯ ಪ್ರದೇಶದ ಕಾಡುಪ್ರಾಣಿಗಳ ಹಾವಳಿ ಇಲ್ಲಿದೆ. ಇಲ್ಲಿನ ಅಲೆಮಾರಿಗಳು ಪ್ರತಿರಾತ್ರಿ ಇಲ್ಲಿ ಬೃಹದಾಕಾರದ ಜ್ವಾಲೆ ಬೆಳಗುವಷ್ಟು ಬೃಹತ್ತಾದ ಬೆಂಕಿಯನ್ನು ಹಾಕಿ, ಕಾಡುಪ್ರಾಣಿಗಳನ್ನು ಹೆದರಿಸಿ ಹಿಮ್ಮೆಟ್ಟಿಸಿ ಓಡಿಸುತ್ತಾರೆ. ಹೀಗೆ ನಿತ್ಯ ಆಗುವ ನಿದ್ರಾಭಂಗದಿಂದಾಗಿ ಮಾರನೇ ಬೆಳಗ್ಗೆ ತಾವು ಊರೂರು ಅಲೆದು ಮಾಡುವ ಪ್ಲಾಸ್ಟಿಕ್ಕು, ಪಾತ್ರೆ, ಹೇರ್ಪಿನ್ನ, ಮಕ್ಕಳಾಟಿಕೆ, ತಲೆಗೂದಲಿನ ಸಣ್ಣಪುಟ್ಟ ವ್ಯಾಪಾರಕ್ಕೆ ಬೆಳಗ್ಗೆದ್ದು ಹೋಗುವಾಗ ಆಗುವ ತೊಂದರೆ ತೊಡಕುಗಳನ್ನು ವಿವರಿಸುತ್ತಾ, ಬೆನ್ನುಹೊಕ್ಕಿರುವ ಹೊಟ್ಟೆಗೆ ಉಸಿರು ತುಂಬಿಕೊಂಡು ಉಡುದಾರ ಸಡಿಲಿಸಿಕೊಳ್ಳುತ್ತಾರೆ ಇಲ್ಲಿನ ಸಿದ್ದರು.

ಅನಾರೋಗ್ಯಪೀಡಿತರ ಪಾಡು

ಇಲ್ಲಿ ಚಿರತೆ ಬೋನನ್ನು ಇಟ್ಟು ಚಿರತೆ ಹಿಡಿಯಲು ಎಲ್ಲ ಕ್ರಮಗಳನ್ನೂ ಕೈಗೊಂಡಿರುವ ವಲಯ ಅರಣ್ಯಾಧಿಕಾರಿ ಅರುಣ್ ವಿವರಿಸುವುದು ಹೀಗೆ, ಮೂಲತಃ ಈ ಗುಡ್ಡ ಕಾಡುಪ್ರಾಣಿಗಳ ಆವಾಸ ಸ್ಥಾನ. ಅಲ್ಲೀಗ ಮನುಷ್ಯ ತನ್ನ ಬಡಾವಣೆಗಳನ್ನು ವಿಸ್ತರಿಸಿಕೊಂಡಿದ್ದಾನೆ. ಹೀಗಾಗಿ, ಕಂಗೆಟ್ಟು ದಿಕ್ಕಾಪಾಲಾಗಿ ಅಲ್ಲಿಂದ ವಕ್ಕಲೆದ್ದು ಹೋಗುವ ಆಯೆಲ್ಲ ಕಾಡುಪ್ರಾಣಿಗಳು, ಎಂದೋ ಒಮ್ಮೆ ತಮ್ಮ ಮೂಲ ತವರಿಗೆ ಮರಳುತ್ತವೆ. ಅಲ್ಲಿ ಮನುಷ್ಯನ ಆಕ್ರಾಮಕತೆಗೆ ಹೆದರಿ ಮತ್ತೆ ಹೊರಟುಹೋಗುತ್ತವೆ.

ಇನ್ನು ಕೆಲವೆಡೆ ಈ ಕೋಳಿಫಾರ್ಮ್ ಮತ್ತು ಕುರಿಫಾರ್ಮ್’ಗಳ ತ್ಯಾಜ್ಯದ ಸಮರ್ಪಕ ವಿಲೇವಾರಿ ಆಗದಿದ್ದಾಗ, ಗ್ರಾಮದ ಸನಿಹದಲ್ಲೇ ಅಂತಹ ಫಾರ್ಮ್’ಗಳಿದ್ದಾಗ, ಚಿರತೆಯಂತಹ ಕಾಡುಪ್ರಾಣಿಗಳಿಗೆ ನೇರ ಆಹ್ವಾನ ಸಿಕ್ಕಂತಾಗುತ್ತದೆ. ಆಗ ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ಉದ್ಭವವಾಗುತ್ತದೆ. ಆದರೆ, ಇದು ಪರಸ್ಪರ ಸರಹದ್ದುಗಳನ್ನು ಗುರ್ತಿಸಿಕೊಂಡು ಶಾಂತಿಪಾಲನೆ ಮಾಡಿಕೊಳ್ಳುವುದರ ಮೂಲಕ ಬಗೆಯಹರಿಯಬೇಕಾದ ಸಮಸ್ಯೆ ಎಂದು ಅವರು ಸ್ಪಷ್ಟ ವಿವರಿಸುತ್ತಾರೆ.


ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ನನ್ನ ಕಥೆಯನ್ನು ಒಮ್ಮೆ ಓದಿ….

0

ವರದಿ::ಚಲನ, ಚಿಕ್ಕನಾಯಕನಹಳ್ಳಿ ಸೀಮೆಯಿಂದ

ಚಿಕ್ಕನಾಯಕನಹಳ್ಳಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ‌ ತುಮಕೂರು ವಿಭಾಗದ ಚಿಕ್ಕನಾಯಕನಹಳ್ಳಿ ಬಸ್ ನಿಲ್ದಾಣದ ಆಗಮನ ಮತ್ತು ನಿರ್ಗಮನದ ದ್ವಾರಗಳು(ಎಂಟ್ರಿ-ಎಕ್ಸಿಟ್ ಪಾಯಿಂಟ್ಸ್) ಅವೈಜ್ಞಾನಿಕವಾಗಿದ್ದು, ಮುಖ್ಯರಸ್ತೆಯಿಂದ ನಿಲ್ದಾಣದ ಒಳಕ್ಕೆ ನಿಗಮದ ಬಸ್ಸುಗಳು ತಿರುವು ಪಡೆಯುವಾಗ ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿವೆ.

ಆಗಮನ ಮತ್ತು ನಿರ್ಗಮನದ ಬಗ್ಗೆ ಚಾಲಕರಿಗೆ ಸ್ಪಷ್ಟ ಸೂಚನೆಗಳನ್ನು ಕೊಟ್ಟು, ಎಲ್ಲರಿಗೂ ಕಾಣುವಂತೆ ಎಂಟ್ರಿ-ಎಕ್ಸಿಟ್ ಫಲಕಗಳನ್ನು ಹಾಕುವಂತೆ ಕೋರಿ ಕರಾರಸಾ ನಿಗಮದ ಅಧಿಕಾರಿಗಳಿಗೆ ಸ್ಥಳೀಯರು ಹಲವು ಬಾರಿ ಅರ್ಜಿ ಸಲ್ಲಿಸಿ, ಈ-ಮೇಲ್’ಗಳನ್ನೂ ಕಳಿಸಿದ್ದಾರೆ

ಹಲವುಬಾರಿ ಪತ್ರಿಕೆಗಳೂ ವರದಿ ಪ್ರಕಟಿಸಿವೆ. ಆಗಿರುವ ದೋಷಗಳನ್ನು ಸರಿಪಡಿಸುವಂತೆ ಹಲವುಬಾರಿ ಕೋರಿಕೊಂಡಿದ್ದರೂ ಸಹಾ ನಿಗಮ ತನ್ನ ಬೇಜವಾಬ್ದಾರಿ ನಡೆ ಹಾಗೂ ಅವೈಜ್ಞಾನಿಕ ಕಾಮಗಾರಿ ಮತ್ತು ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವಲ್ಲಿ ಕನಿಷ್ಠ ಮುಂದಡಿಯಿಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಇವರ ಈ ಇಂತಹ ಅವೈಜ್ಞಾನಿಕ ಕಾಮಗಾರಿಗಳ ಕಾರಣದಿಂದಾಗಿ ಪಟ್ಟಣದಲ್ಲಿ ದಿನಕ್ಕೊಂದು ಅಪಘಾತ ಸಂಭವಿಸುತ್ತಿವೆ. ಕರಾರಸಾ ನಿಗಮದ ಬಸ್ಸುಗಳ ಅಪಘಾತಕ್ಕೊಳಗಾಗಿರುವ ಸಂತ್ರಸ್ತರು ಮತ್ತವರ ಕುಟುಂಬಗಳ ವ್ಯಥೆ ಕೇಳುವವರಾರು ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.

ಮೊನ್ನೆ ಇಲ್ಲಿ ನಡೆದ ಅಪಘಾತದಿಂದಾಗಿ ಸ್ಥಳೀಯರ ಆಕ್ರೋಶದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಗಿದೆ. ಅಕ್ಟೋಬರ್ 13 ರ ಮಧ್ಯಾಹ್ನ ಸುಮಾರು 01.10’ರ ಸಮಯದಲ್ಲಿ, ಬೆಂಗಳೂರು-ಹೊಸದುರ್ಗ ಮಾರ್ಗದಲ್ಲಿ ಚಲಿಸುವ ಕೆ ಎಸ್ ಆರ್ ಟಿ ಸಿ ಯ ತಿಪಟೂರು ವಿಭಾಗದ ಕೆ ಎ-06- ಎಫ್-1334 (ನೋಂದಾಯಿತ) ದಸರಾ ವಿಶೇಷ ಬಸ್ಸು, ಚಿಕ್ಕನಾಯಕನಹಳ್ಳಿ ನಿಲ್ದಾಣದ ಒಳಕ್ಕೆ ತೆರಳಲು ತಿರುವು ಪಡೆಯುವಾಗ, ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಹುಬ್ಬಳ್ಳಿ ಮೂಲದ ಕುಟುಂಬವೊಂದರ ಕಾರಿನ ಮುಂಬದಿಯನ್ನು ಉಜ್ಜಿಕೊಂಡು ಮುಂದೆಸಾಗಿ ಸ್ವಲ್ಪದರಲ್ಲೇ ಆಗಬಹುದಾಗಿದ್ದ ಅವಘಢ ತಪ್ಪಿದೆ.

ಹುಬ್ಬಳ್ಳಿ ಮೂಲದ ಕುಟುಂಬ ಮೈಸೂರಿನಲ್ಲಿ ನಾಡಹಬ್ಬ ದಸರಾ ವೀಕ್ಷಿಸಿ ಮರಳಿ ಊರಿಗೆ ಹಿಂತಿರುಗುತ್ತಿದ್ದಾಗ ನಿಗಮದ ದಸರಾ ವಿಶೇಷ ಬಸ್ಸಿನಿಂದಲೇ ಅಪಘಾತಕ್ಕೊಳಗಾಗಿದೆ. ಇದರಿಂದ ಸ್ಥಳೀಯರು ಮತ್ತಷ್ಟು ಆಕ್ರೋಶಿತರಾಗಿ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.

ಶಕ್ತಿ ಯೋಜನೆಯ ವಿಪರ್ಯಾಸ::

ಮಹಿಳಾ ವಿಶ್ರಾಂತಿ ಹಾಗೂ ಶಿಶು ಆರೈಕೆ ಕೊಠಡಿ ಮತ್ತು ಬ್ರೆಸ್ಟ್ ಫೀಡಿಂಗ್ ಪಾಯಿಂಟ್ ತರಹದ ಯಾವುದೇ ಕನಿಷ್ಠ ಸೌಕರ್ಯಗಳೂ ಇಲ್ಲಿಲ್ಲ. ಶಕ್ತಿ ಯೋಜನೆಯ ಗ್ಯಾರಂಟಿಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನೇನೋ ಕೊಟ್ಟಿದ್ದಾಯಿತು. ಆದರೆ, ಬಸ್ ನಿಲ್ದಾಣಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಾದರೂ ಒದಗಿಸಬೇಡವೇ ಎಂದು ಬೇಸತ್ತ ಬಾಣಂತಿಯರು ಇರುಸುಮುರುಸು ತೋರುತ್ತಾರೆ.

ಈ ಬಗ್ಗೆ ಉನ್ನತ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅವರು ಯೋಜನೆ ರೂಪಿಸುತ್ತಿರುವುದಾಗಿ ಉತ್ತರಿಸುತ್ತಾರೆ. ಈ ಮೊದಲು ‘ಪ್ರಯಾಣಿಕ ನಮ್ಮ ದೊರೆ’ ಎಂಬ ಘೋಷವಾಕ್ಯ ಬರೆದುಕೊಂಡಿದ್ದ ಕೆ ಎಸ್ ಆರ್ ಟಿ ಸಿ ಅತ್ಯಂತ ಲಾಭದಾಯಕ ಸಂಸ್ಥೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಪ್ರಯಾಣಿಕರಿಂದ ಗಳಿಸಿದ ಲಾಭವನ್ನು ಸಂಸ್ಥೆ ಏನು ಮಾಡುತ್ತಿದೆ ಎಂದು ಪ್ರಜ್ಞಾವಂತ ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ಕೆರೆಯೋ, ಬಸ್ ನಿಲ್ದಾಣವೋ ::

ಸುಮಾರಾದ ಮಳೆ ಬಂದರೂ ಸಾಕು,ನಿಲ್ದಾಣದ ತಗ್ಗಿನಲ್ಲಿ ನೀರು ನಿಂತುಬಿಡುತ್ತದೆ. ಅದು ದಿ‌ಗಟ್ಟಲೆ ಹಾಗೇ ನಿಂತಿರುತ್ತದೆ. ಅಪಾರ ಸಂಖ್ಯೆಯ ಮಾರಣಾಂತಿಕ ಸೊಳ್ಳೆಗಳಿಗೆ ಅದು ಆವಾಸಸ್ಥಾನವಾಗುತ್ತಿದೆ. ದಿನಬೆಳಗಾದರೆ ಸಾವಿರಾರು ಜನ ಪ್ರಯಾಣಿಕರು, ಶಾಲಾಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯ ನಾಗರೀಕರು ಓಡಾಡುವ ಜಾಗ ಇದಾದ್ದರಿಂದ ಇಲ್ಲಿರುವ ಮಾರಣಾಂತಿಕ ಸೊಳ್ಳೆಗಳ ಉಪಳಕ್ಕೆ ತುತ್ತಾದವರು ಎಷ್ಟು ಮಂದಿಯೋ ಏನೋ….

ಬಸ್ ನಿಲ್ದಾಣದಲ್ಲಿರುವ ಕ್ಯಾಂಟೀನ್’ನಲ್ಲಿ ಶುಚಿತ್ವದ್ದೇ ಸಮಸ್ಯೆ. ತೀರಾ ಕಿರಿದಾದ ಜಾಗದಲ್ಲಿ ಕ್ಯಾಂಟೀನ್ ಇರುವುದರಿಂದ ಅದರ ಅಡುಗೆಕೋಣೆಯ ಶುಚಿತ್ವದಲ್ಲಿ ಯಾವುದೇ ಮಾನದಂಡಗಳನ್ನೂ ಪಾಲಿಸಲಾಗುತ್ತಿಲ್ಲ.

ಅಲ್ಲಿ ಕೊಡುತ್ತಿರುವ ಊಟ-ತಿಂಡಿಯ ಗುಣಮಟ್ಟದ ಪರೀಕ್ಷೆ ನಡೆಸಲಾಗುತ್ತಿಲ್ಲ. ದರ ನಿಗದಿಗೆ ಸಂಬಂಧಿಸಿದ ಮಾನದಂಡಗಳ ಪಾಲನೆಯಾಗುತ್ತಿದೆಯೇ ಎಂಬುದನ್ನು ಹೇಳುವವರು ಕೇಳುವವರು ಯಾರೂ ಇಲ್ಲ ಎಂಬ ಪರಿಸ್ಥಿತಿ ಇಲ್ಲಿದೆ. ಪರವೂರಿನಿಂದ ಬಂದು ಮಾರ್ಗಮಧ್ಯೆ ಇಲ್ಲಿ ತಿಂಡಿ ಸೇವಿಸುವ ಪ್ರಯಾಣಿಕರು ಇಲ್ಲಿನ ಅವ್ಯವಸ್ಥೆಯನ್ನು ಹೊಟ್ಟೆತುಂಬಾ ದೂಷಿಸುತ್ತಾರೆ.

ಆಗಮನ ಮತ್ತು ನಿರ್ಗಮನ ದ್ವಾರಗಳ ಅವೈಜ್ಞಾನಿಕ ಅವ್ಯವಸ್ಥೆ ಒಂದೆಡೆಯಾದರೆ, ನಿಲ್ದಾಣದ ಒಳಗಡೆ ಬಸ್ಸುಗಳು ಬಂದು ನಿಲ್ಲಲು ಪ್ರತ್ಯೇಕ ಲೇನ್’ಗಳನ್ನೇ ನಿರ್ಮಿಸಿಲ್ಲ. ಯಾವ ಊರು, ಎತ್ತ ಕಡೆ ಪ್ರಯಾಣ, ಯಾವ ನಿಲ್ದಾಣ, ಇತ್ಯಾದಿ ಯಾವುದೇ ಬಗೆಯ ಮಾರ್ಗಸೂಚಿ ಫಲಕಗಳಿಲ್ಲ. ಯಾವ ಬಗೆಯ ಪ್ರತ್ಯೇಕ ವ್ಯವಸ್ಥೆಯೂ ಇಲ್ಲ. ಮಹಿಳಾ ವಿಶ್ರಾಂತಿ ಹಾಗೂ ಶಿಶು ಆರೈಕೆ ಕೊಠಡಿ ಅಥವಾ ಬ್ರೆಸ್ಟ್ ಫೀಡಿಂಗ್ ಪಾಯಿಂಟ್ ಸೌಕರ್ಯಗಳೂ ಇಲ್ಲಿಲ್ಲ ಎಂದು ಪುರಸಭಾ ಸದಸ್ಯ ಮಹಮದ್ ಹುಸೇನ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವರದಿ,
ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ತುರುವೇಕೆರೆಯಲ್ಲಿ ವಾಲ್ಮೀಕಿಗೆ ನಮನ

0

ತುರುವೇಕೆರೆ: ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಕಾವ್ಯವು ಜಗತ್ತಿನ ಮಹಾಕಾವ್ಯಗಳಲ್ಲೇ ಅತ್ಯಂತ ದಾರ್ಶನಿಕವಾದ ಕೃತಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪಅಭಿಪ್ರಾಯ ಪಟ್ಟರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕ ಜಯಂತಿ ಆಚರಣೆಯ ಅಂಗವಾಗಿ ವಾಲ್ಮೀಕಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಅವರು

ರಾಮಾಯಣದಲ್ಲಿ ದಶರತನ ಪುತ್ರ ವಾತ್ಸಲ್ಯ, ಪಿತೃಪಾರಿಪಾಲನೆ, ರಾಮನ ಆದರ್ಶ, ಪ್ರಜಾನುರಾಗಿ ಆಡಳಿತ ಇಂತಹ ಹತ್ತಾರು ಘಟನೆಗಳು, ಕಾವ್ಯದಲ್ಲಿ ಮೇಳೈಸಿವೆ. ಪರಿಪೂರ್ಣ ವ್ಯಕ್ತಿತ್ವದ ಮೂಲಕ ರಾಮನ ಆದರ್ಶ ಗುಣವನ್ನು ವಾಲ್ಮೀಕಿ ಕವಿ ವಿಶ್ವ ವಿಖ್ಯಾತಗೊಳಿಸಿದ್ದಾರೆ.

‘ರಾಮಾಯಣ’ ಕಾವ್ಯ ಕೇವಲ ಚಾರಿತ್ರಿಕ ಅಥವಾ ಪೌರಾಣಿಕ ಕತೆ ಎನಿಸದೆ ಸಮಕಾಲೀನ ಜತ್ತಿಗೆ ತನ್ನದೇ ಆದ ಮೌಲ್ಯಗಳನ್ನು ತಿಳಿಸಿಕೊಡುತ್ತದೆ. ಮಿಗಿಲಾಗಿ ರಾಮಾಯಣದಲ್ಲಿ ಬರುವ ಪಾತ್ರಗಳು ಕೇವಲ ಪಾತ್ರಗಳಾಗಿ ಉಳಿಯದೇ ನಮ್ಮ ಸಮಾಜದಲ್ಲಿನ ವಿವಿಧ ಸ್ತರದ ವ್ಯಕ್ತಿಗಳ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಕೃತಿಯಾಗಿಯೂ ಹೊರಹೊಮ್ಮಿದೆ ಎಂದರು.

ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ಮಾತನಾಡಿ, ರಾಮಾಯಣ ಮತ್ತು ಮಹಾಭಾರತ ಎರಡೂ ಇಂಡಿಯಾದ ಮಹಾನ್ ಕಾವ್ಯಗಳು ಅವು ಸಾಂಸ್ಕೃತಿಕ, ಚಾರಿತ್ರಿಕ, ಧಾರ್ಮಿಕ, ಸಾಮಾಜಿಕ, ರಾಜನೀತಿ ಮತ್ತು ತಾತ್ವಿಕ ಅಂಶಗಳು ಅಡಕವಾಗಿವೆ. ಈ ಕಾವ್ಯಗಳಲ್ಲಿ ಅಪಾರ ಜೀವನ ಮೌಲ್ಯಗಳಿದ್ದು ಅವುಗಳನ್ನು ಯುವ ಪೀಳಿಗೆ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್, ತೋಟಗಾರಿಕಾ ಸಹಾಯಕ ನಿರ್ದೇಶಕಿ ಪೂಜಾ.ಬಿ, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಶಿವಲಿಂಗಯ್ಯ, ಗ್ರಾಮ ಲೆಕ್ಕಾಧಿಕಾರಿ ರಮೇಶ್, ವಾಲ್ಮೀಕಿ ಆಶ್ರಮ ಶಾಲೆಯ ಎಚ್.ಎಸ್.ಚಿದಾನಂದಸ್ವಾಮಿ, ದಸಂಸ ಸಂಚಾಲಕ ದಂಡಿನಶಿವರ ಕುಮಾರ್, ವಾಲ್ಮೀಕಿ ಸಮಾಜದ ಅಧ್ಯಕ್ಷ ವಂಸತ್ ಕುಮಾರ್, ಬೋರಪ್ಪ, ಹುಳಿಸಂದ್ರ ಧನಂಜಯ, ಡೊಂಕಿಹಳ್ಳಿ ರಾಮಯ್ಯ, ಮುದ್ದಮಾರನಹಳ್ಳಿ ಶಿವಣ್ಣ, ಆನಂದ್ ರಾಜ್ ಸಮುದಾಯದ ಮುಖಂಡರು, ಅಧಿಕಾರಿಗಳು ಇದ್ದರು.

ವಾಲ್ಮೀಕಿ ದರೋಡೆಕೋರನಲ್ಲ , ಕೃತಿಕಾರ ಮತ್ತು ವಿದ್ವಚ್ಚಿಂತಕ ; ಸಿಂಗದಹಳ್ಳಿ ರಾಜಕುಮಾರ್

0

ಚಿಕ್ಕನಾಯಕನಹಳ್ಳಿ : ಶಾಸಕ ಸಿ ಬಿ ಸುರೇಶ್ ಬಾಬು’ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ತಹಸೀಲ್ದಾರ್ ಕಚೇರಿಯಲ್ಲಿರುವ ನ್ಯಾಯಿಕ ಸಭಾಂಗಣದಲ್ಲಿ, ಮಹರ್ಷಿ ವಾಲ್ಮೀಕಿ‌ ಜಯಂತಿಯನ್ನು ಆಚರಿಸಲಾಯಿತು.

ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ತಹಸೀಲ್ದಾರ್ ಕೆ ಪುರಂದರ್’ರವರು, ಮಹರ್ಷಿ ವಾಲ್ಮೀಕಿ’ಯವರು ರಚಿಸಿದ ಭಾರತದ ಮಹಾಕಾವ್ಯವನ್ನು ಸೋದಾಹರಿಸುತ್ತಾ, ಬೇಟೆಗೆ ತುತ್ತಾದ ಪಕ್ಷಿಗಳ ಆಕ್ರಂದನವನ್ನು ಕಂಡ ವಾಲ್ಮೀಕಿ, ತಮ್ಮ ನಿಸರ್ಗ ಸಹಜವಾದ ವಿವೇಕದಿಂದ ಸತ್ಯ, ನ್ಯಾಯ, ನೈತಿಕತೆ ಮತ್ತು ಮಾನವತೆಯ ಸಂದೇಶವನ್ನು ಸಾಕ್ಷಾತ್ಕರಿಸಿ, ತನ್ನ ಕಾವ್ಯ ರಚನೆಯಲ್ಲಿ ಪ್ರಸ್ತುತಪಡಿಸಿದ ರೀತಿಯನ್ನು ಸ್ಮರಿಸಿದರು.

ದೇಶಕಾಲ ಮತ್ತು ಸಮಕಾಲೀನ ಸಮಾಜ ಹೇಗೆ ತನ್ನ ಸಾಕ್ಷೀಪ್ರಜ್ಞೆಯ ನೈತಿಕ ಹೊಣೆಗಾರಿಕೆಯ ಜೊತೆಗೆ ಅಭಿವೃದ್ಧಿ ಹೊಂದಬೇಕು ಎಂಬುದನ್ನು ಕಲ್ಪಿಸಿ ರೂಪಿಸಿಕೊಟ್ಟ ಮಹಾನ್ ಮಹರ್ಷಿ ನಮ್ಮ ವಾಲ್ಮೀಕಿ. ವಾಲ್ಮೀಕಿ ಎಂದಿಗೂ ದರೋಡೆಕೋರನಲ್ಲ. ಇದೆಲ್ಲ ಕಟ್ಟುಕತೆ. ಹಿಂದುಳಿದ ವರ್ಗಗಳ ಮಹಾಪುರುಷರ ಬಗ್ಗೆ ಈ ಬಗೆಯ ತಪ್ಪು ಚರಿತ್ರೆಗಳನ್ನು ಕಟ್ಟಿ, ಅವರ ತೇಜೋವಧೆ ಮಾಡುವ ಹುನ್ನಾರ ಆದಿಯಿಂದಲೂ ನಡೆಯುತ್ತಾ ಬಂದಿದೆ. ಇದರ ಅರಿವಿಲ್ಲದೆ ಅನೇಕಮಂದಿ ನಮ್ಮ ರಾಜಕಾರಣಿಗಳು, ಅಧಿಕಾರಿಗಳು, ಸಾರ್ವಜನಿಕರು ಎಲ್ಲರೂ ತಪ್ಪುತಪ್ಪಾಗಿ ವಾಲ್ಮೀಕಿಯವರ ಜೀವನಚರಿತ್ರೆಯ ಸುಳ್ಳು ವ್ಯಾಖ್ಯಾನಗಳನ್ನೇ ಸತ್ಯ ಎಂದು ನಂಬಿ ವೇದಿಕೆಗಳಲ್ಲಿ ಮಾತಾಡಿಬಿಡುತ್ತಾರೆ ಎಂದು ವಾಲ್ಮೀಕಿ ಸಮಾಜದ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

2008-2010’ರ ಸುಮಾರಿನಲ್ಲಿ ಉತ್ತರಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಜೀವನಚರಿತ್ರೆ ಆಧಾರಿತ ಟಿವಿ ಧಾರಾವಾಹಿಯನ್ನು ಪ್ರಸಾರ ಮಾಡಲಾಗಿತ್ತು. ಆ ಧಾರಾವಾಹಿಯಲ್ಲಿ ವಾಲ್ಮೀಕಿ ತನ್ನ ಪೂರ್ವಾಶ್ರಮದಲ್ಲಿ ದರೋಡೆಕೋರನಾಗಿದ್ದ ಎಂದು ಬಿಂಬಿಸಲಾಗಿತ್ತು. ಇದನ್ನು‌ ನೋಡಿದ ಅಲ್ಲಿನ ವಾಲ್ಮೀಕಿ ಸಮುದಾಯ ಬೇಸರದದ ಕುಗ್ಗಿಹೋಗಿತ್ತು. ಆಗ ನಾವಿಕಾಸನ್ ಎಂಬ ವಕೀಲ ಅಲ್ಲಿನ ಪಂಜಾಬ್ ಹೈಕೋರ್ಟಿನಲ್ಲಿ ‘ವಾಲ್ಮೀಕಿ ಮಹರ್ಷಿಯ ಬಗ್ಗೆ ಧಾರಾವಾಹಿಯಲ್ಲಿ ಬಿತ್ತರಿಸಿರುವ ಕಟ್ಟುಕತೆ’ಯ ವಿರುದ್ಧ ದಾವೆ ಹೂಡುತ್ತಾನೆ. ಆಗ ಹೈಕೋರ್ಟ್ ಆದೇಶದ ಮೇರೆಗೆ ಅಲ್ಲಿನ ವಿಶ್ವವಿದ್ಯಾಲಯದ ಮೂಲಕ ಮಹರ್ಷಿ ವಾಲ್ಮೀಕಿ ಜೀವನಚರಿತ್ರೆಯ ಸಮಗ್ರವಾದ ಆಧುನಿಕ ಅಧ್ಯಯನ ನಡೆಸಲಾಗುತ್ತದೆ. ಈ ಅಧ್ಯಯನದ ನೇತೃತ್ವವನ್ನು ರಾಜೀವಸುಲೋಚನ ಎಂಬ ವಿದ್ವಾಂಸರಿಗೆ ವಹಿಸಿಕೊಡಲಾಗುತ್ತದೆ. ಅವರ ಸುದೀರ್ಘ ಮತ್ತು ಸಮಗ್ರವಾದ ಅಧ್ಯಯನವನ್ನು ಆಧರಿಸಿ ಅಲ್ಲಿನ ಹೈಕೋರ್ಟ್, ಧಾರಾವಾಹಿಯಲ್ಲಿ ಬಿಂಬಿಸುತ್ತಿರುವ ವಾಲ್ಮೀಕಿ ಜೀವನಚರಿತ್ರೆಯ ಅಪವ್ಯಾಖ್ಯಾನದ ವಿರುದ್ಧ ತೀರ್ಪು ನೀಡಿ ಆ ಧಾರಾವಾಹಿ ಪ್ರಸಾರಕ್ಕೆ ತಡೆ ನೀಡುತ್ತದೆ.
ಮತ್ತೆ, ಮುಂದಿನ ದಿನಗಳಲ್ಲಿ ಯಾರೂ ಯಾವುದೇ ಕಾರಣಕ್ಕೂ ಮಹರ್ಷಿ ವಾಲ್ಮೀಕಿಯವರನ್ನು ದರೋಡೆಕೋರ ಎನ್ನುವಂತಿಲ್ಲ ಎಂದು ಆದೇಶ ಹೊರಡಿಸಲಾಗುತ್ತದೆ. ಆ ತೀರ್ಪಿನ ನಂತರ ಟಿವಿ ವಾಹುನಿ ಮತ್ತು ಧಾರಾವಾಹಿ ನಿರ್ಮಾಪಕರು ಬಹಿರಂಗ ಕ್ಷಮೆ ಯಾಚನೆ ಮಾಡಬೇಕಾಯಿತು. ಹಾಗಾಗಿ, ಯಾರೂ ಯಾವುದೇ ಕಾರಣಕ್ಕೂ ವಾಲ್ಮೀಕಿ’ಯವರನ್ನು ದರೋಡೆಕೋರ ದು ತಪ್ಪುತಪ್ಪಾಗಿ ಬಿಂಬಿಸಬಾರದು ಎಂದು ಅವರು ಕಿವಿಮಾತು ಹೇಳಿದರು.

ಸಮಾಜದ ಮುಖಂಡ ಶಶಿಶೇಖರ್ ಮಾತನಾಡಿ, ಪ್ರತಿವರ್ಷ ಅದ್ಧೂರಿ ಮೆತವಣಿಗೆ ಮತ್ತು ಜಯಘೋಷಗಳೊಂದಿಗೆ ಆಚರಿಸಲಾಗುತ್ತಿದ್ದ ವಾಲ್ಮೀಕಿ ಜಯಂತಿಯನ್ನು, ವಾಯುಭಾರ ಕುಸಿತದ ಕಾರಣದಿಂದಾಗಿ ಈ ಬಾರಿ ಕೇವಲ ಸಾಂಕೇತಿಕವಾಗಿ ಆಚರಿಸುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದರು.

ಸಾಂತ್ವನ ಕೇಂದ್ರದ ಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಮಹಾಶಯರು ನಮ್ಮ ಆದಿಮ ಗುರುಗಳು. ಅಕ್ಷರವನ್ನು ಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುತ್ತಿದ್ದವರ ಎದುರು ಮಹಾಕಾವ್ಯವನ್ನೇ ರಚಿಸಿ, ತಳ ಸಮುದಾಯಗಳ ಪ್ರತಿಭಾಕೌಶಲ್ಯವನ್ನು ಎತ್ತಿಹಿಡಿದ ಮೇರುಪ್ರತಿಭೆ. ಅವರ ಜಯಂತಿಯನ್ನು ನಾವು ಆಚರಿಸುತ್ತಿರುವುದು ನಮ್ಮೆಲ್ಲರ ಸುದೈವ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ ಬಿಸುರೇಶ್ ಬಾಬು ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಕಾವ್ಯ ಪ್ರತಿಭೆಯನ್ನು ಸ್ಮರಿಸುತ್ತಾ, ಅವರ ಬಗ್ಗೆ ಸಮಾಜದಲ್ಲಿ ಗೌರವಾದರಗಳು ಮೂಡುವಂತೆ ಮಾಡಬೇಕು ಎಂದು ಹೇಳಿದರು. ವಾಲ್ಮೀಕಿ ದರೋಡೆಕೋರ ಎಂಬ ಅಪವ್ಯಾಖ್ಯಾನವನ್ನು ಸಂಬಂಧಿಸಿದ ಎಲ್ಲಾ ಗ್ರಂಥಗಳಿಂದಲೂ ಅದನ್ನು ತೆಗೆದುಹಾಕಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ,
ಗ್ರೇಡ್-2 ತಹಸೀಲ್ದಾರ್ ಕೀರ್ತಿ, ಸಮಾಜ ಕಲ್ಯಾಣ ಅಧಿಕಾರಿ ಶ್ರೀಧರಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ ಹೊನ್ನಪ್ಪ, ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್, ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರರಾದ ತಿಮ್ಮಣ್ಣ, ಪಿಆರ್ ಡಿಒ ಎಇಇ ಮೋಹನ್ ಕುಮಾರ್, ಪಶು ಸಹಾಯಕ ನಿರ್ದೇಶಕ ಡಾ ರೆ ಮಾ ನಾಗಭೂಷಣ್, ಅಬಕಾರಿ ನಿರೀಕ್ಷಕ ಗಂಗರಾಜು, ಬೆಸ್ಕಾಂ ಎಇಇ ಗವಿರಂಗಯ್ಯ, ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಯ್ಯ,
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ ಡಿ ಚಂದ್ರಶೇಖರ್, ಮಾದಿಗ ದಂಡೋರದ ಬೇವಿನಹಳ್ಳಿ ಚನ್ನಬಸವಯ್ಯ, ರಾಷ್ಟ್ರೀಯ ಸೇವಾದಳದ ಕೃಷ್ಣೇಗೌಡ, ಮುಖಂಡ ಅಗಸರಹಳ್ಳಿ ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

ವರದಿ: ಸಂಚಲನ, ಚಿಕ್ಕನಾಯಕನಹಳ್ಳಿ ಸೀಮೆಯಿಂದ

ನನಗೆ ರಾಜಕೀಯ ಮರುಹುಟ್ಟು: ಸೋಮಣ್ಣ

ತುರುವೇಕೆರೆ: ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ತುರುವೇಕೆರೆ 1.75 ಲಕ್ಷಕ್ಕೂ ಅಧಿಕ ಮತಗಳನ್ನು ನೀಡುವ ಮೂಲಕ ರಾಜಕೀಯವಾಗಿ ಮರುಹುಟ್ಟು ನೀಡಿದ ಕ್ಷೇತ್ರವಾಗಿದ್ದು ಇಲ್ಲಿನ ಜನತೆಗೆ ಋಣಿಯಾಗಿದ್ದಾನೆ ಎಂದು ಕೇಂದ್ರ ರೈಲ್ವೆ ಮತ್ತು ಜಲ ಸಂಪನ್ಮೂಲ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಪಟ್ಟಣದ ಗುರು ಸಿದ್ದರಾಮೇಶ್ವರ ಸಮುದಾಯಭವನದಲ್ಲಿ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ, ಅಭಿನಂಧನಾ ಮತ್ತು ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು

ಬಸವಣ್ಣನವರ ವಿಚಾರಧಾರೆಗಳನ್ನು ಕೇವಲ ಭಾರತವೇ ಅಲ್ಲದೆ ವಿಶ್ವವೇ ಮೆಚ್ಚಿಕೊಂಡಿದೆ. ಬುದ್ದ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ರವರಂತಹ ವಿಶ್ವ ಮೆಚ್ಚುವ ಮಾನವತಾವಾದಿ, ಸಾಮಾಜಿಕ ಚಿಂತಕರನ್ನು ವಿವಿಧ ಸ್ಥರದ ಜಾತಿಗೆ ಸೀಮಿತಗೊಳಿಸಿದ್ದು ಈ ಸಮಾಜ ಮಾಡಿದ ಬಹು ದೊಡ್ಡ ಪ್ರಮಾದವಾಗಿದೆ. ಅಂತಹ ಜ್ಞಾನಿಗಳನ್ನು ಸಮಕಾಲೀನ ಸಮಾಜಕ್ಕೆ ಅರ್ಥೈಯಿಸಬೇಕಾದ ಜರೂರಿದೆ. ದೇಶದ ಪಾರ್ಲಿಮೆಂಟ್ ಬಸವಣ್ಣನವರ ಅನುಭವ ಮಂಟಪವಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆಂದು ಅಭಿಪ್ರಾಯಪಟ್ಟರು.

ಬಸವಣ್ಣನವರು ಎಲ್ಲ ಸಮುದಾಯಗಳನ್ನು ಒಳಗೊಂಡಂತೆ ಶರಣ ಧರ್ಮ ಕಟ್ಟಿದವರು ಹಾಗಾಗಿ ಮುಂದಿನ ವರ್ಷದಿಂದ ಪ್ರತಿಭಾ ಪುರಸ್ಕಾರ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಮೀಸಲಾಗದೆ ಎಲ್ಲ ಸಮುದಾಯದ ಪ್ರತಿಭಾವಂತ ಮಕ್ಕಳಿಗೂ ನೀಡಿ ಅದಕ್ಕೆ ನಾನು ಸಹಕಾರ ನೀಡುವೆ ಎಂದು ಭರವಸೆ ನೀಡಿದರು.

ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪನವರಾಗಲಿ ಅಥವಾ ಬಿಜೆಪಿ ಮಾಜಿ ಶಾಸಕ ಮಸಾಲ ಜಯರಾಮ್ ಇಬ್ಬರೂ ಮಾತಾಡಿಕೊಂಡು ಒಬ್ಬರು ಮಾತ್ರ ನಿಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುವುದು.

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ನನ್ನ ಕ್ಷೇತ್ರದಲ್ಲಿ ಹೆಚ್ಚು ಲೀಡ್ ಬರುತ್ತದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ಮಸಾಲ ಜಯರಾಮ್ ಇಬ್ಬರೂ ಘಂಟಾ ಘೋಷವಾಗಿ ಹೇಳಿ ಅದರಂತೆ ಗೆಲ್ಲಿಸಿದವರು ಆದ್ದರಿಂದ ನನ್ನ ರಾಜಕೀಯ ಜೀವನದಲ್ಲಿ ಇಬ್ಬರನ್ನೂ ಮರೆಯುವಂತಿಲ್ಲ ಇದರ ಸಹ ವರ್ತಿಯಾಗಿ ಎಚ್.ಡಿ.ದೇವೇಗೌಡರು ಮತ್ತು ಕುಮಾರ ಸ್ವಾಮಿಯವರ ಪರೋಕ್ಷ ಬೆಂಬಲವೂ ನನ್ನ ಗೆಲುವಿನ ಕೈಹಿಡಿದಿದೆ. ಕುತೂಹಲವೆಂದರೆ ನಾನು ಬಯಸದೇ ಸಚಿವನಾಗುವ ಭಾಗ್ಯವನ್ನು ಭಗಂವಂತ ಕರುಣಿಸಿದ ಅದು ನನ್ನಪುಣ್ಯ.

ರಕ್ಷಣಾ ಇಲಾಖೆಯಂತೆಯೇ ರೇಲ್ವೆ ಇಲಾಖೆಯೂ ಅತ್ಯಂತ ಜವಬ್ದಾರಿಯುತ ಕೆಲಸವಾಗಿದ್ದು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇನೆ.

ನಾಫೆಡ್ ಮೂಲಕ ಉಂಡೆ ಕೊಬ್ಬರಿ ಮಾರಿದ್ದ ರಾಜ್ಯದ 27 ಸಾವಿರ ಫಲಾನುಭವಿ ರೈತರ ಹಣವನ್ನು ಸಚಿವನಾದ ತಕ್ಷಣ ಮಂಜೂರು ಮಾಡಿಸಿದ್ದೇನೆ. ತದ ನಂತರ ಮತ್ತೆ ನಾಫೆಡೆ ಮೂಲಕ ಕೊಬ್ಬರಿ ಖರೀದಿ ಮಾಡಲಾಗುವುದು ಎಂದು ಹೇಳಿಕೆ ಕೊಟ್ಟಾಗ ಕೊಬ್ಬರಿ ಬೆಲೆ ದಿಢೀರ್ 16 ಸಾವಿರಕ್ಕೇರಿತು. ಆಗ ಯಾರು ಖಷಿಪಟ್ಟರೋ ಗೊತ್ತಿಲ್ಲ ಶಾಸಕ ಎಂ.ಟಿ.ಕೃಷ್ಣಪ್ಪನವರ ಆನಂದಕ್ಕೆ ಪಾರವೇ ಇರಲಿಲ್ಲ.

ಬಾಣಸಂದ್ರದಲ್ಲಿ ಕೆಲ ರೈಲು ನಿಲುಗಡೆ ಮಾಡುವಂತೆ ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪನವರು ಮನವಿ ಮಾಡಿದ್ದು ಅದು ಶೀಘ್ರವೇ ನೆರವೇರಲಿದೆ. ಪಟ್ಟಣದಲ್ಲಿ ಪ್ರಧಾನ ಮಂತ್ರಿ ಕೌಸಲ್ಯ ಯೋಜನೆಯನ್ನು ತಹಶೀಲ್ದಾರ್ ಮೂಲಕ ಚಾಲನೆಯಾಗುವಂತೆ ಸೂಚನೆ ನೀಡಲಾಗುವುದು ಎಂದು ಸ್ಥಳೀಯರ ಹಲವು ಮನವಿ ಪತ್ರಕ್ಕೆ ಉತ್ತರಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ರೈಲ್ವೆ ಇಲಾಖೆಯಲ್ಲಿ ಪ್ರಪ್ರಥಮ ಬಾರಿಗೆ ರೈಲ್ವೆ ಇಲಾಖೆಯಲ್ಲಿ 46 ಸಾವಿರ ವಿವಿಧ ಹುದ್ದೆಗಳ ನೇಮಕಾತಿ ಕರೆದಿದ್ದು ಕ್ಷೇತ್ರದ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಿ. ಕ್ಷೇತ್ರದಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿದ್ದು ಸರ್ಕಾರ ಅನುದಾನ ನೀಡುತ್ತಿಲ್ಲವೆಂದು ತರಾಟೆಗೆ ತೆಗೆದುಕೊಂಡರು.

ಮಾಜಿ ಸಂಸದ ಜಿ.ಎಸ್.ಬಸವರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಕುಮಾರ ಸ್ವಾಮಿ ಮಾತನಾಡಿದರು. ವಿರಕ್ತಮಠದ ಕರಿವೃಷಭದೇಶಿ ಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಹಾಗು ಗೋಡೆಕೆರೆಯ ಮೃತ್ಯುಂಜಯ ದೇಶಿ ಕೇಂದ್ರ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿದರು. ಇದೇ ವೇಳೆ ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಅಭಿನಂಧನೆ ಹಾಗು ಅಕ್ಕನ ಬಳಗದ ವತಿಯಿಂದ ವಚನ ಗಾಯನ ಜರುಗಿತು.

ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಪರಮೇಶ್ವರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಬಿಇಒ ಎನ್.ಸೋಮಶೇಖರ್, ಸಮುದಾಯದ ಮುಖಂಡರು, ಸಂಘದ ಪದಾಧಿಕಾರಿಗಳು ಇನ್ನಿತರರು ಪಾಳ್ಗೊಂಡಿದ್ದರು.

ಏಕದಿನ ಸತ್ಯಾಗ್ರಹ ; ಗಾಂಧಿ ಜಯಂತಿಯ ವಾಸ್ತವಿಕ ಆಚರಣೆ

0

( ಪ್ರತಿ ಗಾಂಧಿ ಜಯಂತಿಯಂದು ಕರ್ನಾಟಕ ರಾಷ್ಟ್ರ ಸಮಿತಿಯ ಏಕದಿನ ಸತ್ಯಾಗ್ರಹ)

ಚಿಕ್ಕನಾಯಕನಹಳ್ಳಿ : ಪ್ರತಿಬಾರಿ ಗಾಂಧಿ ಜಯಂತಿಯ ದಿನದಂದು ಕರ್ನಾಟಕ ರಾಷ್ಟ್ರ ಸಮಿತಿ ಪಾಲಿಸುತ್ತಾ ಬಂದಿರುವ ಏಕದಿನ ಸತ್ಯಾಗ್ರಹ’ವನ್ನು ಪಟ್ಟಣದ ನೆಹರೂ ಸರ್ಕಲ್’ನಲ್ಲಿ ಇದೇ ಅಕ್ಟೋಬರ್ 02.10.2024’ರ ಬುಧವಾರ ಬೆಳಗ್ಗೆ 09.00 ಗಂಟೆಯಿಂದ ಸಂಜೆ 04.00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಏಕದಿನ ಸತ್ಯಾಗ್ರಹದ ಧ್ಯೇಯ, ಹಳ್ಳಿ-ಹಳ್ಳಿಗಳಲ್ಲಿ ನಿರಾಂತಕವಾಗಿ ಮಾರಾಟವಾಗುತ್ತಿರುವ ಅಕ್ರಮ ಮದ್ಯ-ಮಾರಾಟವನ್ನು ತಡೆಗಟ್ಟುವಂತೆ ತಾಲ್ಲೂಕು ಆಡಳಿತ ಮತ್ತು ಅಬಕಾರಿ ಇಲಾಖೆಯನ್ನು ಒತ್ತಾಯಿಸುವುದು. ತಾಲ್ಲೂಕಿಗೆ ಬಿಡುಗಡೆಯಾಗಿರುವ ಮತ್ತು ಮುಂದೆಯೂ ಆಗಲಿರುವ ಗಣಿಭಾಧಿತ ಪ್ರದೇಶಾಭಿವೃದ್ಧಿ ಮತ್ತು ಪರಿಸರ ಪುನಶ್ಚೇತನ ಕಾರ್ಯಕ್ರಮ CEPMIZ ಯೋಜನೆಗೆ ಮೀಸಲಾದ ಕೋಟ್ಯಾಂತರ ರೂಪಾಯಿ ಹಣದ ಪ್ರಾಮಾಣಿಕ ಮತ್ತು ಪಾರದರ್ಶಕ ಸದ್ಬಳಕೆಗಾಗಿ ಒತ್ತಾಯಿಸುವುದು. ಮತ್ತು ಗ್ರಾಮ ಪಂಚಾಯ್ತಿಗಳಲ್ಲಿ ನರೇಗಾ ಯೋಜನೆಯ ಕೆಲಸ-ಕಾಮಗಾರಿಗಳಲ್ಲಿ ಯಂತ್ರಗಳನ್ನು ಬಳಸಿ ಕೆಲಸ ನಿರ್ವಹಿಸದೆ, ಜಾಬ್ ಕಾರ್ಡ್ ಹೊಂದಿರುವ ಕಾರ್ಮಿಕರನ್ನು ಮಾತ್ರ ಬಳಸಿಕೊಂಡು ಕೆಲಸ ನಿರ್ವಹಿಸುವುದು. ತನ್ಮೂಲಕ ದೇಶದ ಎಲ್ಲ ಎಲ್ಲರಿಂದ ಸಂವಿಧಾನದ ಆಶಯಗಳನ್ನು ಅನೂಚಾನ ಎತ್ತಿ ಹಿಡಿಯುವ ಬದ್ಧತೆಯನ್ನು ಒತ್ತಾಯಿಸುವುದು.

ಈಯೆಲ್ಲ ಗಾಂಧಿ-ಮಾದರಿಯ ಸ್ವರಾಜ್ಯ ಪರಿಕಲ್ಪನೆಯ ಧ್ಯೇಯೋದ್ದೇಶಗಳ ಈಡೇರಿಕೆಯನ್ನು ಒತ್ತಾಯಿಸುವ ಸಲುವಾಗಿ, ಕರ್ನಾಟಕ ರಾಷ್ಟ್ರ ಸಮಿತಿ, ಲಂಚಮುಕ್ತ ಕರ್ನಾಟಕ, ರಾಷ್ಟ್ರೀಯ ಕಿಸಾನ್ ಸಂಘ ಮತ್ತಿತರೆ ರೈತಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘ-ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವದ ಆಶಯದ ಈಡೇರಿಕೆಯಲ್ಲಿ ಬದ್ಧತೆಯಿರುವ ಎಲ್ಲ ನಾಗರಿಕರು ಒಟ್ಟಾಗಿ ಸೇರಿ, ಶಾಂತಿಯುತವಾದ ಸಾಂಕೇತಿಕ ಪ್ರತಿಭಟನೆಯನ್ನು ದಾಖಲಿಸುವ ಉದ್ದೇಶದಿಂದ ಈ ಏಕದಿನ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಸಬ್ಬೇನಹಳ್ಳಿ ಶ್ರೀನಿವಾಸ್ ತಿಳಿಸಿದರು.

ಸಂಜೆ 4.00 ಗಂಟೆಯ ಹೊತ್ತಿಗೆ ಮಾನ್ಯ ತಹಸೀಲ್ದಾರ್’ರವರಿಗೆ ಸತ್ಯಾಗ್ರಹಿಗಳ ಒತ್ತಾಯಪತ್ರವನ್ನು ಸಲ್ಲಿಸಿದ ನಂತರ ಈ ಏಕದಿನ ಸತ್ಯಾಗ್ರಹ’ವನ್ನು ಕೊನೆಗೊಳಿಸಲಾಗುವುದು.

ಸತ್ಯಾಗ್ರಹದೊಂದಿಗೆ ಸೇರ ಬಯಸುವ ಎಲ್ಲರಿಗೂ ಸ್ವಾಗತವಿದೆ. ಆಸಕ್ತರು 73380 99271 ಸಂಖ್ಯೆಗೆ ಕರೆಮಾಡಿ ಸಬ್ಬೇನಹಳ್ಳಿ ಶ್ರೀನಿವಾಸರವರನ್ನು ಸಂಪರ್ಕಿಸಬಹುದು.

_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಗೌಡಗೆರೆಯ ಅಲೆಮಾರಿ ನಗರದ ಅಲೆಮಾರಿಗಳಿಗೆ ಮನೆ-ಮಂಜೂರಾತಿ ಪತ್ರ

0

ಚಿಕ್ಕನಾಯಕನಹಳ್ಳಿ : ಕರ್ನಾಟಕ ಸರ್ಕಾರದ ವಸತಿ ಇಲಾಖೆಯ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಯೋಜನೆಯಡಿಯಲ್ಲಿ 27 ಮಂದಿ ಅರ್ಹ ಫಲಾನುಭವಿ ಅಲೆಮಾರಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಪತ್ರ ನಮೂನೆ- 2 ನ್ನು ಪ್ರತಿ ಸೋಮವಾರದ ತಮ್ಮ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಸಿ ಬಿ ಸುರೇಶ್ ಬಾಬು ವಿತರಿಸಿದರು.

ತಾಲ್ಲೂಕಿನ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೌಡಗೆರೆ ವಸತಿ ಪ್ರದೇಶದಲ್ಲಿ ಎಸ್ ಸಿ-ಎಸ್ ಟಿ ಅಲೆಮಾರಿ ಸಮುದಾಯದವರಿಗೆ ಹಂಚಲಾಗಿದ್ದ ‌ನಿವೇಶನಗಳಲ್ಲಿ ಆಗಿರುವ ಮನೆ-ಮಂಜೂರಾತಿ ಹಾಗೂ ಕಾಮಗಾರಿ ಪತ್ರದ ನಮೂನೆ-2 ನ್ನು ತಾಲ್ಲೂಕು ಪಂಚಾಯತ್ ಹಾಗೂ ಕೆಂಕೆರೆ ಗ್ರಾಮ ಪಂಚಾಯತಿ ವತಿಯಿಂದ ಶಾಸಕರ ಮೂಲಕ ಹಕ್ಕುದಾರ ಅಲೆಮಾರಿಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಂದಿಜೋಗಿ-ರಾಜಣ್ಣ, ಹಳ್ಳಳ್ಳಿ ತಿರುಗಿ ಹೇರ್ ಪಿನ್ನು, ಪ್ಲಾಸ್ಟಿಕ್ ಸಾಮಗ್ರಿ, ಮಕ್ಕಳಾಟಿಕೆ ಮಾರಿಕೊಂಡು ಹೊಟ್ಟೆ ಹೊರೆಯುತ್ತಿದ್ದ ಅಲೆಮಾರಿಗಳು, ಈ ಆನ್’ಲೈನ್ ಶಾಪಿಂಗು ಮತ್ತು ಹೋಮ್ ಡೆಲಿವರಿ ಆಧುನಿಕ ಕಾಲದ ಜೊತೆ ಏಗಲಾಗದೆ ನಿರುದ್ಯೋಗಿಗಳಾಗಿ ನಾಶವಾಗುತ್ತಿರುವುದನ್ನು ಶಾಸಕರ ಬಳಿ ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸಿ ಬಿ ಸುರೇಶ್ ಬಾಬು’ರವರು, ಅಲೆಮಾರಿಗಳ ಉದ್ಯೋಗ ಹಾಗೂ ಜೀವನೋಪಾಯಕ್ಕೆ ಸಂಬಂಧಿಸಿದಂತೆ ವಿವರವಾಗಿ ಚರ್ಚಿಸಿ, ಶೀಘ್ರವೇ ಪರಿಹಾರೋಪಾಯಗಳನ್ನು ಕಂಡುಕೊಳ್ಳೋಣ ಎಂದು ಭರವಸೆ ನೀಡಿದರು.

ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಡಿ ದೊಡ್ಡಸಿದ್ಧಯ್ಯನವರು ಪ್ರತಿಕ್ರಿಯಿಸಿ, ತಾಲ್ಲೂಕು ಯೋಜನಾಧಿಕಾರಿಗಳ ಕೂಡಲೇ ಚರ್ಚಿಸಿ, ಅಲೆಮಾರಿ ಸಮುದಾಯದವರಿಗೆ ಕೌಶಲ್ಯ ತರಬೇತಿ, ಸ್ವಸಹಾಯ ಗುಂಪು ಮತ್ತು ನಿರ್ದಿಷ್ಟವಾದ ಯಾವುದಾದರೂ ಒಂದು ಉತ್ಪಾದಕ ಸಾಮಗ್ರಿ, ಕೌಶಲ್ಯಾಧಾರಿತ ಕಸುಬುದಾರಿಕೆಯ ತರಬೇತಿ ಕಾರ್ಯಾಗಾರಗಳಿಗೆ ಒತ್ತುಕೊಡುವ ಯೋಜನೆಯನ್ನು ಶೀಘ್ರವೇ ರೂಪಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ, ತಹಸೀಲ್ದಾರ್ ಕೆ ಪುರಂದರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ ದೊಡ್ಡಸಿದ್ಧಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕೆಂಕೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಪ್ಪೇಸ್ವಾಮಿ ಸೇರಿದಂತೆ ಮನೆ ಮಂಜೂರಾತಿ ಪತ್ರ ಪಡೆದ ಅಲೆಮಾರಿ ಸಮುದಾಯದ ಮಹಿಳೆಯರು ಉಪಸ್ಥಿತರಿದ್ದರು.

_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಚಿ.ನಾ.ಹಳ್ಳಿ ; ಹೆದ್ದಾರಿ 150’ಎ ಮೂಲಕ ಚಲಿಸುವ ವಾಹನ ಚಾಲಕರು ಎಷ್ಟು ಸುರಕ್ಷಿತ ?!

0

C N Halli:

(ಮೈಸೂರು-ಜೇವರ್ಗಿ ಹೆದ್ದಾರಿಯ ನಿರ್ಮಾಣದೋಷ ಸರಿಪಡಿಸಿ, ವೈಜ್ಞಾನಿಕ ದುರಸ್ತಿ ಮಾಡಿಕೊಡುವಂತೆ ಟ್ಯಾಕ್ಸಿ ಚಾಲಕರ ಆಗ್ರಹ)

ಚಿಕ್ಕನಾಯಕನಹಳ್ಳಿ : ಮೈಸೂರು-ಜೇವರ್ಗಿ ಹೆದ್ದಾರಿ ಹಾದುಹೋಗುವ ಮಾರ್ಗಮಧ್ಯದಲ್ಲಿ ಸಿಗುವ ತಾಲ್ಲೂಕಿನ ಆಲದಕಟ್ಟೆ, ಸಾಲ್ಕಟ್ಟೆ ಭಾಗದಲ್ಲಿ ದಿನಕ್ಕೊಂದರಂತೆ ಒಂದಲ್ಲಾ ಒಂದು ರೀತಿಯ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ನಿರ್ಮಿಸಿರುವ ಹೆದ್ದಾರಿ ‌ರಸ್ತೆಯ ನಿರ್ಮಾಣ ಅವೈಜ್ಞಾನಿಕವಾಗಿರುವುದೇ ಇದಕ್ಕೆ ಕಾರಣ ಎಂದು ಟ್ಯಾಕ್ಸಿ ಚಾಲಕರ ಸಂಘ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದೆ.

ಚಿಕ್ಕನಾಯಕನಹಳ್ಳಿಯಿಂದ ಹುಳಿಯಾರು ಮಾರ್ಗವಾಗಿ ಮೈಸೂರು-ಜೇವರ್ಗಿ ಹೆದ್ದಾರಿಯ ರಸ್ತೆಯ ಎರಡೂ ಬದಿಯ ಪಥ ಸಮತಟ್ಟಾಗಿರುವುದಿಲ್ಲ. ಎಡಬದಿಯ ಪಥ ತುಸು ಎತ್ತರಕ್ಕಿದ್ದರೆ, ಬಲಬದಿಯ ಪಥ ಕೊಂಚ ತಗ್ಗಾಗಿದೆ. ಭಾರೀ ವಾಹನಗಳು ಮತ್ತು ಸರಕು ಸಾಗಣೆಯ ವಾಹನಗಳು ಇಲ್ಲಿ ಚಲಿಸುವಾಗ ಏಕಾಏಕಿ‌ ಒಂದುಕಡೆಗೆ ವಾಲಿಕೊಂಡು ಆಯತಪ್ಪಿ ಪಲ್ಟಿ ಹೊಡೆದುಬೀಳುತ್ತವೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲೂ ತೀವ್ರ ಚರ್ಚೆಗೆ ಗ್ರಾಸವಾದ ಕಾರಣ, ಚಿಕ್ಕನಾಯಕನಹಳ್ಳಿಯ ಆರಕ್ಷಕ ವೃತ್ತ ನಿರೀಕ್ಷಕರಾದ ಎಫ್ ಕೆ ನದಾಫ್’ರವರು ಈ ಮಾರ್ಗದ ರಸ್ತೆಯಲ್ಲಿ ಸ್ವತಃ ತಮ್ಮ ಜೀಪ್ ಚಾಲನೆ ಮಾಡಿ, ರಸ್ತೆ ನಿರ್ಮಾಣದ ಏರು-ಪೇರುಗಳನ್ನು ಅನುಭವಿಸಿದ್ದಾರೆ. ಟ್ಯಾಕ್ಸಿ ಚಾಲಕರ ಸಂಘ ಹಾಗೂ ಸ್ಥಳೀಯರ ಒತ್ತಾಯಕ್ಕೆ ಮಣಿದ ಪೊಲೀಸ್ ಇಲಾಖೆ ಮೇಲಧಿಕಾರಿಗಳು ಸದರಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಮೃತ್ಯುಂಜಯ ಮತ್ತು ರಸ್ತೆ ನಿರ್ಮಾಣ ಗುತ್ತಿಗೆದಾರ ಕಂಪನಿಯಾದ ಶ್ರೀ ಸಾಯಿ‌ ಕನ್ಸಟ್ರಕ್ಷನ್ಸ್’ಗೆ ಪತ್ರ ಬರೆದಿದ್ದಾರೆ.

ಮಹಮದ್ ಹುಸೇನ್

ವೈಜ್ಞಾನಿಕವಾಗಿ ರಸ್ತೆಯ ಮರುಪರಿಶೀಲನೆ ನಡೆಸಿ, ಅದರಲ್ಲಿ ಆಗಿರುವ ಲೋಪಗಳನ್ನು ಸಾಧ್ಯವಾದಷ್ಟು ಬೇಗನೇ ಸರಿಪಡಿಸುವುದು. ಪ್ರಸ್ತುತ ಸ್ಥಿತಿಯಲ್ಲಿ ರಸ್ತೆಮೇಲೆ ಚಲಿಸುವ ವಾಹನಗಳು ಆಯತಪ್ಪುವ ಸಂಭವ ಹೆಚ್ಚಿದೆ.

ಇದರಿಂದಾಗಿ ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ದಿನೇದಿನೆ ಏರುತ್ತಿದೆ. ಕೂಡಲೇ ಹೆದ್ದಾರಿ ರಸ್ತೆಯ ವೈಜ್ಞಾನಿಕ ಪರಿಶೀಲನೆ ನಡೆಸಿ, ಅದನ್ನು ಸರಿಪಡಿಸಿ ಸಾರ್ವಜನಿಕ ಬಳಕೆಗೆ ವಹಿಸತಕ್ಕದ್ದು ಎಂದು ಆರಕ್ಚಕ ವೃತ್ತ ನಿರೀಕ್ಷಕ ಎಫ್ ಕೆ ನದಾಫ್’ರವರ ಕಚೇರಿಯಿಂದ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಮತ್ತು ರಸ್ತೆ ನಿರ್ಮಾಣ ಗುತ್ತಿಗೆದಾರ ಕಂಪನಿ ಶ್ರೀ ಸಾಯಿ ಕನ್ಸಟ್ರಕ್ಷನ್ಸ್’ಗೆ ಪತ್ರ ರವಾನಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೃತ್ಯುಂಜಯ ಪ್ರತಿಕ್ರಿಯಿಸಿ, ಸಾಧ್ಯವಾದಷ್ಟೂ ಶೀಘ್ರವೇ ರಸ್ತೆಯ ಸಮರ್ಪಕ ದುರಸ್ತಿಯನ್ನು ನಿರ್ವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದಿದ್ದಾರೆ.

ಚಾಲಕರ ಮೇಲೆ‌ ಬೀಳುವ ಒತ್ತಡ ಮತ್ತದರ ದುಷ್ಪರಿಣಾಮ ::

ರಸ್ತೆ ಪರಿಶೀಲನೆ ನಡೆಸಿದ ತಂಡ

ನಾಗರಿಕರ ಮೇಲೆ ವಿಧಿಸಲ್ಪಟ್ಟಿರುವ ನಾನಾ ರೀತಿಯ ತೆರಿಗೆಗಳಷ್ಟೇ ಅಲ್ಲದೆ ನಾವು ರಸ್ತೆ ತೆರಿಗೆಯನ್ನೂ ಪಾವತಿಸುತ್ತೇವೆ. ಟೋಲ್ ಸುಂಕವನ್ನೂ ಪಾವತಿಸುತ್ತೇವೆ. ಇಷ್ಟೆಲ್ಲಾ ಪಾವತಿಸಿದ ನಂತರವೈ ನಮಗೆ ವ್ಯವಸ್ಥಿತ ರಸ್ತೆ ಸಿಗುವುದೇ ಮರೀಚಿಕೆಯಾಗಿದೆ. ವಾಹನ ಚಾಲಕರಾದ ನಾವು, ದಿನದ ಹದಿನೆಂಟು-ಇಪ್ಪತ್ತು ಗಂಟೆಗಳ ಅವಧಿಗೆ ರಸ್ತೆ ಮೇಲೆ ಚಲಿಸುತ್ತಿರುತ್ತೇವೆ. ಹೀಗೆ ಸಮವಲ್ಲದ ಅಸಮತೋಲ ರಸ್ತೆಯ ಮೇಲೆ ವಾಹನ ಚಾಲನೆ ಮಾಡುವಾಗ ಉಂಟಾಗುವ ದೈಹಿಕ ಮತ್ತು ಮಾನಸಿಕ ಒತ್ತಡಗಳು ನಮ್ಮನ್ನು, ನಮ್ಮ ಆಯಸ್ಸಿಗೂ ಮೊದಲೇ ಬಲಿ ತೆಗೆದುಕೊಳ್ಳುತ್ತಿವೆ. ನಮ್ಮ ಈಯೆಲ್ಲ ಸಂಕಟಗಳಿಗೆ ಯಾರನ್ನು ಹೊಣೆ ಮಾಡುವುದು. ನಮ್ಮ ಅಕಾರಣ ಪ್ರಾಣಹಾನಿಗೆ ಯಾರನ್ನು ದೂಷಿಸುವುದು. ಇದರಿಂದ ನಮ್ಮ ಕುಟುಂಬಗಳಿಗೆ ಒದಗುವ ತಬ್ಬಲಿತನಕ್ಕೆ ಯಾರು ಜವಾಬ್ದಾರರಾಗುತ್ತಾರೆ ಎಂದು ಕರ್ನಾಟಕ ರಾಜ್ಯ ಟ್ಯಾಕ್ಸಿ ಚಾಲಕ‌ರ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮಹಮದ್ ಹುಸೇನ್ ಗುಂಡಾ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಆರಕ್ಷಕ ವೃತ್ತ ನಿರೀಕ್ಷಕರು ಸದರಿ ರಸ್ತೆಯ ಸಮತೋಲನವನ್ನು ಪರೀಕ್ಷಿಸುವ ಸಂದರ್ಭದಲ್ಲಿ, ಕರ್ನಾಟಕ ರಾಜ್ಯ ಟ್ಯಾಕ್ಸಿ ಚಾಲಕರ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮಹಮದ್ ಹುಸೇನ್ ಗುಂಡಾ ಮತ್ತು ಚಿಕ್ಕನಾಯಕನಹಳ್ಳಿ ಪಟ್ಟಣದ ಟ್ಯಾಕ್ಸಿ ಚಾಲಕರುಗಳಾದ ಯೋಗೇಶ್, ನರೇಂದ್ರ, ಅರುಣ್ ಉಪಸ್ಥಿತರಿದ್ದರು.

__ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಗಂಡಾತರಕಾರಿ ಕುಲಾಂತರಿ(ಜಿಎಂ) ವಿರುದ್ಧ ಗಾಂಧಿ ಬೇಸಾಯಾಶ್ರಮದ ದೊಡ್ಡಹೊಸೂರು ಸತ್ಯಾಗ್ರಹ

0

ಗಂಡಾತರಕಾರಿ ಕುಲಾಂತರಿ(ಜಿಎಂ) ವಿರುದ್ಧ
ಗಾಂಧಿ ಬೇಸಾಯಾಶ್ರಮದ ದೊಡ್ಡಹೊಸೂರು ಸತ್ಯಾಗ್ರಹ

ಚಿಕ್ಕನಾಯಕನಹಳ್ಳಿ : ದೇಶದ ಮೇಲೆ ಎರಗುವ ಎಲ್ಲ ಗಂಡಾಂತರಗಳಿಗೂ ಸದಾಕಾಲ ರೈತ ಮತ್ತು ಸೈನಿಕನೇ ತಕ್ಕ ಉತ್ತರದಂತೆ ಎದುರಾಗಿ ಹೋರಾಡುವುದು. ಎಲ್ಲ ಅರ್ಥದಲ್ಲೂ ರೈತ ದೇಶದ ಬೆನ್ನೆಲುಬೇ ಹೌದು ಎಂದು ರೈತ-ಸಹಜಕೃಷಿ ಕಾರ್ಯಕರ್ತ ಮಲ್ಲಿಕಾರ್ಜುನ ಭಟ್ರಳ್ಳಿ ವಿಶ್ಲೇಷಿಸುತ್ತಾರೆ. ಗುರುವಾರ ಚಿಕ್ಕನಾಯಕನಹಳ್ಳಿ ತಾಪಂ ಸಭಾಂಗಣದಲ್ಲಿ ನಡೆದ ಸಭೆಯೊಂದರಲ್ಲಿ ದೊಡ್ಡಹೊಸೂರಿನ ಸತ್ಯಾಗ್ರಹ ಬೆಂಬಲಿಸುವ ಅಗತ್ಯತೆಯ ಕುರಿತು ಮಲ್ಲಿಕಾರ್ಜುನ ಭಟ್ರಳ್ಳಿ ಮುಖೇನ ಆಸಕ್ತಿಯ ಬಹಳಷ್ಟು ಮಾತುಕತೆಗಳು ನಡೆದವು.

ಪ್ರಸ್ತುತ ಕಾಲದಲ್ಲಿ ಹಿಂದೆಂದೂ ಕಂಡಿಲ್ಲದಷ್ಟು ವ್ಯಾಪಕವಾಗಿ ನಮ್ಮ ಮಾರುಕಟ್ಟೆಯನ್ನು ಆಕ್ರಮಿಸಿರುವ ಕುಲಾಂತರಿ ತಳಿಯ (ಜಿಎಂ) ಆಹಾರವು, ನಮ್ಮ ಆರೋಗ್ಯ, ನಮ್ಮ ಪರಿಸರ ಹಾಗೂ ನಮ್ಮ ಕೃಷಿ ಭದ್ರತೆಗೆ ಸವಾಲುಗಳನ್ನು ಒಡ್ಡುತ್ತಿದೆ. ಈಯೆಲ್ಲ ಸವಾಲು ಮತ್ತು ಬೆದರಿಕೆಗಳನ್ನು ಇದಿರುಗೊಳ್ಳಲು ದೊಡ್ಡಹೊಸೂರು ಸತ್ಯಾಗ್ರಹ ಒಂದು ಪರ್ಯಾಯವಾಗಿ ಕಂಡಿದೆ. ಈ ಸತ್ಯಾಗ್ರಹ ಚಳವಳಿಯ ಮೂಲಕ ಕುಲಾಂತರಿ ತಳಿಯ(ಜಿಎಂ) ಆಹಾರಗಳನ್ನು ಧಿಕ್ಕರಿಸುವುದಷ್ಟೇ ಅಲ್ಲದೆ, ಹವಾಮಾನ ವೈಪರೀತ್ಯಗಳಿಗೆ ಹೊಂದಿಕೊಳ್ಳುವ ಗುಣವುಳ್ಳ ಸುಸ್ಥಿರ ಮತ್ತು ಸಮರ್ಥವಾದ ಸಹಜ ಬೇಸಾಯ ಪದ್ಧತಿ ಹಾಗೂ ಸಾವಯವ ಕೃಷಿ ಪದ್ಧತಿಗಳ ಮೂಲಕ ನಮ್ಮ ಭವಿಷ್ಯವನ್ನು ಸದೃಢದಾಯವಾಗಿ ಕಾಪಾಡಿಕೊಳ್ಳುವುದೂ ಆಗಿದೆ. ಆಶಾವಾದ ಮತ್ತು ನೈಸರ್ಗಿಕ ಅಪಾಯಗಳ ನಡುವಿನ ಜಗ್ಗಾಟದಲ್ಲಿ ಜನಸತ್ಯಾಗ್ರಹದ ಇಂತಹ ಶಾಂತಿಯುತ ಹೋರಾಟ ಉತ್ತರವಾಗಿ ಜಗತ್ತಿಗೆ ಕಾಣ್ಕೆ ನೀಡಬೇಕಿದೆ ಎಂದು ಗಾಂಧಿ ಸಹಜ ಬೇಸಾಯ ಆಶ್ರಮದ ಡಾ.ಮಂಜುನಾಥ್ ತಿಳಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸಹಜಕೃಷಿ ಅನುಷ್ಠಾನ’ ಯೋಜನೆಯ ಪ್ರಗತಿಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದ ಮಂಜುನಾಥ್ ಮಾತನಾಡುತ್ತಾ, ಸೆಪ್ಟೆಂಬರ್ 29, 30 ಮತ್ತು ಅಕ್ಟೋಬರ್ 1 ಹಾಗೂ 2 ರವರೆಗೆ ತುಮಕೂರಿನ ದೊಡ್ಡಹೊಸೂರಿನಲ್ಲಿ ನಡೆಯಲಿರುವ ದೊಡ್ಡಹೊಸೂರು ಸತ್ಯಾಗ್ರಹದ ವಿವರಗಳನ್ನು ಹಂಚಿಕೊಂಡರು.

ಪ್ರಕೃತಿ ಮತ್ತು ಮಾನವತೆಯ ಪರವಾದ ಸಹಜ ಕಾಳಜಿಯುಳ್ಳ ರೈತರು, ರೈತ ಮುಖಂಡರು, ಧಾರ್ಮಿಕ ಮುಖಂಡರು, ಸಂವೇದನಾಶೀಲರು, ಬುದ್ಧಿಜೀವಿಗಳು, ನಿಷ್ಠಾವಂತ ಅಧಿಕಾರಿಗಳು, ಮಹಿಳಾ ಗುಂಪುಗಳು, ಕಾರ್ಮಿಕರು, ಕಾರ್ಮಿಕ ಒಕ್ಕೂಟಗಳು, ಕಾರ್ಮಿಕ ಮುಖಂಡರು, ಗ್ರಾಹಕರು ಹಾಗೂ ಸಹಜ ಮತ್ತು ಸಾವಯವ ಕೃಷಿಯ ಪ್ರತಿಪಾದಕರು, ವಿದ್ಯಾರ್ಥಿಗಳು ಹಾಗೂ ಪ್ರತಿಯೊಬ್ಬ ಭಾರತೀಯ ನಾಗರೀಕರು ಒಗ್ಗೂಡಿ ದೊಡ್ಡಹೊಸೂರು ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ, ತಾಲ್ಲೂಕಿನ ರೈತ ಮತ್ತು ಸಹಜಕೃಷಿ ಕಾರ್ಯಕರ್ತರಾದ ಮಲ್ಲಿಕಾರ್ಜುನ ಭಟ್ರಳ್ಳಿ ಮಾತನಾಡಿ,
ಸಹಜಕೃಷಿ ಹೇಗೆ ಕುಲಾಂತರಿ (ಜಿಎಂ) ತಳಿಗಳ ಆಹಾರೋತ್ಪನ್ನಗಳಿಗೆ ಸವಾಲೊಡ್ಡಬೇಕು ಮತ್ತು ಸುಸ್ಥಿರವಾದ ಜನ-ಜಾನುವಾರು ಹಾಗೂ ಜೀವಪರ ಕೃಷಿಯೇ ದೇಶದ ರೈತನ ಧ್ಯೇಯವಾಗಬೇಕು ಎಂಬುದನ್ನು ವಿವರಿಸಿದರು.

ದೊಡ್ಡಹೊಸೂರು ಸತ್ಯಾಗ್ರಹ ಕಾರ್ಯಕ್ರಮಗಳು ::

ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಜಿಎಂ ಆಹಾರಗಳ ಪ್ರತಿಕೂಲ ಪರಿಣಾಮಗಳು ಹಾಗೂ ಪಂಚಾಯತಿ ಮಟ್ಟದಲ್ಲಿ ನೈಸರ್ಗಿಕ ಕೃಷಿಯನ್ನು ಮುಂದುವರೆಸುವ ತಂತ್ರಗಳ ಕುರಿತ ಚರ್ಚಾ ಅಧಿವೇಶನವನ್ನು ಆಯಾಯಾ ದಿನದ ಮುಖ್ಯ ಅತಿಥಿಗಳು ನಡೆಸಿಕೊಡುತ್ತಾರೆ.
ಸತ್ಯಾಗ್ರಹಿ ಗುಡಿಸಲುಗಳ ಕಾರ್ಯಾಗಾರದಲ್ಲಿ, ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳ ವೈಜ್ಞಾನಿಕ ಅರಿವು, ಗಿಡಗಳ ಕಸಿ ಮಾಡುವ ಮತ್ತು ಕಟ್ಟುವ ತಂತ್ರಗಳ ತರಬೇತಿ, ಕುಡಗೋಲು-ಗುದ್ದಲಿ ಇತ್ಯಾದಿ ಕೃಷಿ ಉಪಕರಣಗಳನ್ನು ತಯಾರಿಸುವ ತರಬೇತಿ, ನೈಸರ್ಗಿಕ ಕೃಷಿಯಲ್ಲಿ ಸಂಪನ್ಮೂಲಗಳು ಮತ್ತು ಮಾಹಿತಿ ಪುಸ್ತಕಗಳ ಲಭ್ಯ, ಸ್ಥಳೀಯ ಬೀಜಗಳ ತಯಾರಿ ಮತ್ತು ಅವುಗಳ ಅನುವಂಶಿಕ ಶಕ್ತಿಯ ನಿರ್ವಹಣೆ ಬಗೆಗಿನ ತರಬೇತಿ ಜೊತೆಗೆ,
ಕೊಂಬುಜಾ, ಕುನಾಪಜಲ, ಮಜ್ಜಿಗೆ ಪಂಚಗವ್ಯ, ಮೊಟ್ಟೆ ಮತ್ತು ಮೀನಿನ ಅಮೈನೋ ಆಮ್ಲಗಳು, ಹಾಲಿನ ಸೂಕ್ಷ್ಮಜೀವಿಗಳು, ಜೈವಿಕ ಕಿಣ್ವಗಳು ಸೇರಿದಂತೆ ಇತ್ಯಾದಿ ಸಾವಯವ ಒಳಸುರಿಗಳ ತಯಾರಿಕೆಯ ತರಬೇತಿಯನ್ನು ನೀಡಲಾಗುವುದು. ಅಲ್ಲದೇ ಸತ್ಯಾಗ್ರಹದಲ್ಲಿ ಪಾಲ್ಗೊಂಡವರು ಜಿಎಂ ಆಹಾರಗಳನ್ನು ಬಹಿಷ್ಕರಿಸಬೇಕಾದ ತಮ್ಮ ವಿಚಾರ ಮತ್ತು ನಿಲುವು ವ್ಯಕ್ತಪಡಿಸಲು ಒಂದು ‌ನಿಮಿಷದ ವಿಡಿಯೋ ಚಿತ್ರಿಸಲು ವಿಡಿಯೋ ಪಾಯಿಂಟ್ ಕೂಡ ಲಭ್ಯ ಇರುತ್ತದೆ.

ಕಾರ್ಯಕ್ರಮದಲ್ಲಿ ಸಹಜಕೃಷಿ ಕಾರ್ಯಕರ್ತ ಮತ್ತು ರೈತ ಮಲ್ಲಿಕಾರ್ಜುನ ಭಟ್ರಳ್ಳಿ ಹಾಗೂ ಕೆಲವು ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ರೈತರು ಉಪಸ್ಥಿತರಿದ್ದರು.

__ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಲೇಖನಿ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಗ್ರಾಮ ಆಡಳಿತಾಧಿಕಾರಿಗಳು

0

ಚಿಕ್ಕನಾಯಕನಹಳ್ಳಿ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕಾರ್ಯಕಾರಿಣಿ ಸಭೆಯ ನಿರ್ಣಯದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಮಸ್ತ ಗ್ರಾಮ ಆಡಳಿತಾಧಿಕಾರಿಗಳು ಲೇಖನಿ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗುತ್ತಿರುವ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ತಹಸೀಲ್ದಾರ್ ಕೆ ಪುರಂದರ್ ಮುಖೇನ ಸೋಮವಾರ ಮನವಿ ಸಲ್ಲಿಸಲಾಯಿತು.

ಮೂಲಭೂತ ಸೌಕರ್ಯ ಮತ್ತು ಅಗತ್ಯ ಸಾಧನ-ಸಲಕರಣೆ ಸೇರಿದಂತೆ ಕರ್ತವ್ಯ ನಿರ್ವಹಿಸಲು ವೃತ್ತಕ್ಕೆ ಒಂದರಂತೆ ಒಂದು ಕಚೇರಿ ಅಥವಾ ಕೊಠಡಿ, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ, ಜೊತೆಗೊಂದು ಆಲ್ಮೆರಾ, ಅತ್ತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್ ಹಾಗೂ ಡೇಟಾ ಸೌಲಭ್ಯ, ಗೂಗಲ್ ಖ್ರೋಮ್’ಬುಕ್, ಲ್ಯಾಪ್‌ಟಾಪ್, ಸ್ಕ್ಯಾನರ್, ಪ್ರಿಂಟರ್, ಅಗತ್ಯ ಸ್ಟೇಷನರಿ ವೆಚ್ಚ, ಹೆಚ್ಚುವರಿ ಪ್ರಯಾಣ ಭತ್ಯೆ, ಅಂತರ್ ಜಿಲ್ಕಾ ವರ್ಗಾವಣೆಗೆ ಅವಕಾಶ ಸೇರಿದಂತೆ ಒತ್ತಡ ರಹಿತವಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕಾಗಿತ್ತು. ಆದರೆ, ಈ ಯಾವ ಸೌಕರ್ಯವನ್ನೂ ಒದಗಿಸದೆ ಸಕಾಲದಲ್ಲಿ ಕೆಲಸ ಸಾಗಿಸಿ ಎಂದು ಒತ್ತಡ ಹೇರಲಾಗುತ್ತಿದೆ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಒದಗಿರುವ ಈಯೆಲ್ಲ ಕಷ್ಟ-ನಷ್ಟಗಳನ್ನು ಪರಿಹರಿಸಿ, ರಾಜ್ಯದ ಕೇಂದ್ರ ಸಂಘದ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಇಲಾಖೆಯಿಂದ ಅಭಿವೃದ್ಧಿಪಡಿಸಲಾಗಿರುವ 17ಕ್ಕೂ ಹೆಚ್ಚಿನ ಮೊಬೈಲ್ ಆ್ಯಪ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ಸಮರ್ಪಕ ಬಳಕೆ ಮತ್ತು ನಿರ್ವಹಣೆಗೆ ಅವಶ್ಯವಿರುವ ಮೊಬೈಲ್‌ ಸಾಧನ, ಲ್ಯಾಪ್‌ಟಾಪ್ ಹಾಗೂ ಅದನ್ನು ಜೋಡಿಸಲು ಬೇಕಾದ ಇಂಟರ್’ನೆಟ್ ಮತ್ತು ಸ್ಕ್ಯಾನರ್, ಪ್ರಿಂಟರ್ ಯಾವುದನ್ನೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಒದಗಿಸದೆ, ತಮ್ಮ ಬಳಿಯಿರುವ ಮೊಬೈಲ್ ಮೂಲಕವೇ ಕರ್ತವ್ಯ ನಿರ್ವಹಿಸಲು ಒತ್ತಡ ಹೆಚ್ಚುತ್ತಿದೆ. ಇದರಿಂದಾಗಿ ಕ್ಷೇತ್ರಮಟ್ಟದಲ್ಲಿ ಒಡ್ಡುತ್ತಿರುವ ಅಧಿಕ ಒತ್ತಡ ಕಾರಣದಿಂದಾಗಿ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ತೀವ್ರ ಪರಿಣಾಮ ಬೀರಿ ಅದು ಸಾವು-ನೋವುಗಳಲಿ ಸಮಾಪ್ತಿಯಾಗುತ್ತಿದೆ. ವ್ಯವಸ್ಥಿತ ಸಾಧನ-ಸಲಕರಣೆಗಳಿಲ್ಲದ ಕಾರಣ ಸಕಾಲಕ್ಕೆ ಕೆಲಸ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ.

ಇದರಿಂದ ಆಕ್ರೋಶಿತರಾಗುವ ಜನ ಕರ್ತವ್ಯದಲ್ಲಿರುವ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೆ ಕೆಲವೊಮ್ಮೆ ಮಾರಣಾಂತಿಕ ಹಲ್ಲೆಗಳಿಗೂ ಮುಂದಾಗುವ ಪ್ರಕರಣಗಳು ನಡೆಯುತ್ತಿವೆ.

ಎಲ್ಲಾ ಮೊಬೈಲ್ ಆ್ಯಪ್’ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿರುವುದರಿಂದ ಅಧಿಕಾರಿಗಳ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿ ಅವರನ್ನು ರೋಗಗ್ರಸ್ತರನ್ನಾಗಿ ಮಾಡುತ್ತಿವೆ.

ಹೀಗಾಗಿ, ಎಲ್ಲ ಬೇಡಿಕೆಗಳು ಈಡೇರುವವರೆಗೂ ದಿನಾಂಕ.26.09.2024ರಿಂದ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್ ಹುಕುಂ, ಹಕ್ಕುಪತ್ರ, ನಮೂನೆ 1-5 ರ ವೆಬ್ ಅಪ್ಲಿಕೇಶನ್, ಪೌತಿ ಆಂದೋಲನ ಆ್ಯಪ್ ಸೇರಿದಂತೆ ಮೊಬೈಲ್ ತಂತ್ರಾಂಶಗಳ ಯಾವುದೇ ಕೆಲಸವನ್ನು ನಿರ್ವಹಿಸದಂತೆ ಗ್ರಾಮ ಆಡಳಿತ ಅಧಿಕಾರಿಗಳ ಕಾರ್ಯಕಾರಿಣಿಯಲ್ಲಿ ತೀರ್ಮಾನಿಸಲಾಗಿದೆ.

ಸೇವೆ ಮತ್ತು ಪದೋನ್ನತಿ ::

ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳು ಕಳೆದ 30 ವರ್ಷಗಳಿಂದಲೂ ಪದೋನ್ನತಿಯಿಂದ ವಂಚಿತರಾಗಿದ್ದಾರೆ. ನಿವೃತ್ತಿಯ ಅಂಚಿನಲ್ಲಿ ಪದೋನ್ನತಿ ಸಿಗುತ್ತದಾದ್ದರಿಂದ ಅದರಿಂದ ಅಧಿಕಾರಿಗಳಿಗೆ ಯಾವುದೇ ಸೇವಾ ಪ್ರಯೋಜನ ಸಿಗುತ್ತಿಲ್ಲ. ಹಾಗಾಗಿ, ರಾಜ್ಯದ 1196 ಗ್ರೇಡ್–1 ಗ್ರಾಮ ಪಂಚಾಯತ್ ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು ಗ್ರೇಡ್–1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಿ ಪದೋನ್ನತಿಯನ್ನು ನೀಡಬೇಕು. ಅದೇರೀತಿ ರಾಜಸ್ವ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು ಹಾಗೂ ಗ್ರೇಡ್–1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಪರಿಷ್ಕರಿಸುವುದರ ಮೂಲಕವೂ ಪದೋನ್ನತಿ ನೀಡಬಹುದು.

ವರ್ಗಾವಣೆ ಅವಕಾಶ ::

ಅಂತರ್ ಜಿಲ್ಲಾ ಪತಿ-ಪತ್ನಿ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿ, ಅಂತಿಮ ಆದೇಶಕ್ಕಾಗಿ ಬಾಕಿ ಉಳಿದಿರುವ ವರ್ಗಾವಣೆಗಳ ತ್ವರಿತ ಆದೇಶ ನೀಡಬೇಕು. ಕೆ.ಸಿ.ಎಸ್.ಆರ್.ನಿಯಮಾವಳಿಗಳಂತೆ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳಿಗೆ ಮೆಮೊ ಹಾಕಬಾರದು. ಹಾಗೆ ಮೆಮೊ ಹಾಕುವ ಮೇಲಧಿಕಾರಿಗಳ ಮೇಲೆ ಸೂಕ್ತವಾದ ಶಿಸ್ತುಕ್ರಮ ಜರುಗಿಸಲು ಆದೇಶ ಹೊರಡಿಸಬೇಕು. ಕಂದಾಯ ಇಲಾಖೆಯಲ್ಲಿನ 3 ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗೆ ಸೂಕ್ತ ಮಾರ್ಗಸೂಚಿಗಳನ್ನು ರಚಿಸಿ ನೌಕರರಿಗೆ ವರ್ಗಾವಣೆ ಅವಕಾಶ ಕಲ್ಪಿಸಬೇಕು.

ಈಯೆಲ್ಲ ಬೇಡಿಕೆಗಳು ಈಡೇರುವವರೆಗೂ ರಾಜ್ಯದ ಕೇಂದ್ರ ಸಂಘ ನಿರ್ಣಯಿಸಿರುವಂತೆ, ದಿನಾಂಕ.26.09.2024 ರಿಂದ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು, ಎಲ್ಲ ಬಗೆಯ ಮೊಬೈಲ್ ಆ್ಯಪ್ ಹಾಗೂ ವೆಬ್ ಅಪ್ಲಿಕೇಶನ್ ಕೆಲಸಗಳನ್ನು ಸ್ಥಗಿತಗೊಳಿಸಿ ತಮ್ಮ ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಲಿದ್ದಾರೆ ಎಂದು ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಮರುಳಸಿದ್ಧನಗೌಡ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ನವೀನ್, ಗೌರವಾಧ್ಯಕ್ಷ ಪ್ರಸನ್ನಕುಮಾರ್, ಕಾರ್ಯದರ್ಶಿ ಲತಾಮಣಿ, ಖಜಾಂಚಿ ಲಕ್ಷ್ಮಿಪತಿ ಹಾಗೂ ತಾಲ್ಲೂಕಿನ 47 ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 27 ಮಂದಿ ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.

_ಸಂಚಲನ
ಚಿಕ್ಕನಾಯಕನ ಸೀಮೆಯಿಂದ