Wednesday, March 11, 2026
Google search engine
Home Blog Page 82

ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಸಾವು

0

Publicstory/prajayoga

ಕುಣಿಗಲ್: ತಾಲೂಕು ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಪಡುವೆಗೆರೆ ಗ್ರಾಮದ ಬಳಿ ನಿಶ್ಯಕ್ತನಾಗಿ ಮಲಗಿದ್ದ ಸುಮಾರು 65 ವರ್ಷದ ಲೋಕೇಶ್ ಎಂಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು,  ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 7ರಂದು ಬೆಳಿಗ್ಗೆ 10.30ಕ್ಕೆ ಮೃತಪಟ್ಟಿರುತ್ತಾರೆ. 

ಮೃತರು 152 ಸೆಂ.ಮೀ. ಎತ್ತರ, ಕೋಲು ಮುಖ ಹೊಂದಿದ್ದು, ಮೈಮೇಲೆ ಖಾಕಿ ಬಣ್ಣದ ನಿಕ್ಕರ್ ಮತ್ತು ಬ್ಲೂ ಬಣ್ಣದ ಷರ್ಟ್ ಇರುತ್ತದೆ.  ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ವಾ.ಸಂ: 08132-223338/ 0816-227245ಕ್ಕೆ  ಸಂಪರ್ಕಿಸಬೇಕೆಂದು ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪರಿಚಿತ ಶವ ಪತ್ತೆ

0

Publicstory/prajayoga

ಕುಣಿಗಲ್: ತಾಲೂಕು ಹುಲಿಯೂರುದುರ್ಗ ಹೋಬಳಿ ಕಿಚ್ಚಾವಾಡಿ ಗ್ರಾಮದ ಬಳಿ ಇರುವ ಮರಕಟ್ಟೆಯ ಬಳಿ ನೀರಿನಲ್ಲಿ ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ವಾರಸುದಾರರು ತಿಳಿದು ಬಂದಿರುವುದಿಲ್ಲ. 

ಮೃತನು 160 ಸೆಂ.ಮೀ. ಎತ್ತರ, ದುಂಡು ಮುಖ ಹೊಂದಿದ್ದು, ಮೈಮೇಲೆ ಕಪ್ಪು ಬಣ್ಣದ ಟೀ-ಷರ್ಟ್ ಇರುತ್ತದೆ.  ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೂ.ವಾ.ಸಂ: 08142-223338/ 0816-2272451ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ  

Publicstory/prajayoga

ತುಮಕೂರು : ಹಿರೇಹಳ್ಳಿ ಕೈಗಾರಿಕಾ ಪ್ರದೇಶ ತುಮಕೂರು ಕೇಂದ್ರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಮತ್ತು ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಇವರ ಸಹಯೋಗದಲ್ಲಿ 2022-23ನೇ ಸಾಲಿನ ಆಟೋಮೋಟಿವ್ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲು ಪೂರ್ಣ ಅವಧಿಯ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಐಟಿಐ ಪಿಟ್ಟರ್ ಅಥವಾ ಐಟಿಐ ವೆಲ್ಡರ್‌ನಲ್ಲಿ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಸ್ವವಿವರ ಮತ್ತು ವಿದ್ಯಾರ್ಹತೆಯ ಪ್ರಮಾಣ ಪತ್ರದೊಂದಿಗೆ ಆಗಸ್ಟ್ 22ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ), ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ತುಮಕೂರು- 5721168 ದೂ.ವಾ.ಸಂ 9448200407ಕ್ಕೆ ಸಂಪರ್ಕಿಸಬೇಕೆಂದು ತರಬೇತಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಬ್ಬರು ಪ್ರತ್ಯೇಕ ಕಾಣೆ; ಪ್ರಕರಣಗಳು ದಾಖಲು

0

Publicstory/prajayoga

ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.

ಪ್ರಕರಣ-1: ಬಿ.ಸಿ.ಲೋಕೇಶ್ ಎಂಬ 42 ವರ್ಷದ ವ್ಯಕ್ತಿಯು ಕೆಸರಮಡು ಗ್ರಾಮದ ತನ್ನ ಮನೆಯಿಂದ ಜನವರಿ 18, 2022ರಿಂದ ಕಾಣೆಯಾಗಿದ್ದಾನೆ.  ಈತನು 5.5 ಅಡಿ ಎತ್ತರ ದೃಢಕಾಯ ಶರೀರ, ದುಂಡುಮುಖ ಹೊಂದಿದ್ದು, ಮನೆಯಿಂದ ಹೋಗುವಾಗ ಪಿಂಕ್ ಟೀ-ಷರ್ಟ್, ಬ್ರೌನ್ ಪ್ಯಾಂಟ್ ಧರಿಸಿದ್ದನು.

ಪ್ರಕರಣ-2: ಲಲಿತ ಎಂಬ 32 ವರ್ಷದ ಮಹಿಳೆಯು ಊರ್ಡಿಗೆರೆ ಹೋಬಳಿ ಮಾರನಾಯಕನಹಳ್ಳಿ ಗ್ರಾಮದ ತನ್ನ ಮನೆಯಿಂದ ಆಗಸ್ಟ್ 10 ರಂದು ಬೆಳಿಗ್ಗೆ 9.45 ಕ್ಕೆ ಸಮಯದಲ್ಲಿ ಕ್ಯಾತ್ಸಂದ್ರದ ಟೈಲರ್ ಅಂಗಡಿಗೆ ಹೋಗಿ ಬರುತ್ತೇನೆಂದು ಹೋದವಳು ಮರಳಿ ಬಂದಿರುವುದಿಲ್ಲ.  ಈಕೆಯು 5.2 ಅಡಿ ಎತ್ತರ, ಸಾಧಾರಣ ಶರೀರ, ಕೋಲುಮುಖ, ಗೋಧಿ ಬಣ್ಣ ಹೊಂದಿದ್ದು, ಬೌದ್ಧಿಕ ಮಟ್ಟ ಕಡಿಮೆ ಇರುತ್ತದೆ.  ಈಕೆಯು ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ್ ಧರಿಸಿದ್ದಳು. 

ಕಾಣೆಯಾದ ಇವರ ಬಗ್ಗೆ ಸುಳಿವು ಸಿಕ್ಕವರು ಕೂಡಲೇ ದೂ.ವಾ.ಸಂ. 0816-2281124 ಅಥವಾ 9480802933 ಕ್ಕೆ ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ರೋಗಗಳು ಹರಡದಂತೆ ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

0

Publicstory/prajayoga

ತುಮಕೂರು : ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್ ಗುನ್ಯ  ರೋಗಗಳು ಹರಡದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿಂದು ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿದ್ದು ಎಲ್ಲಿಯೂ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ನೀರು ಸರಾಗವಾಗಿ ಹರಿಯುವಂತೆ ಅಧಿಕಾರಿಗಳು ಗಮನಹರಿಸಬೇಕೆಂದು ತಿಳಿಸಿದರಲ್ಲದೇ ನೀರು ಸರಬರಾಜು ಮಾಡುವ ಪೈಪುಗಳನ್ನು ಆಗಿಂದ್ದಾಗ್ಗೆ ಪರೀಕ್ಷಿಸುವುದು ಮತ್ತು ನೀರಿನ ಸೋರಿಕೆಯಾಗದಂತೆ ಎಚ್ಚರಿಕೆವಹಿಸಬೇಕೆಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ವಾರಕೊಮ್ಮೆ ಸೊಳ್ಳೆ ನಾಶಕ ದ್ರಾವಣಗಳನ್ನು ಸೊಳ್ಳೆ ಉತ್ಪತ್ತಿಯಾಗುವ ತಾಣಗಳಲ್ಲಿ ಸಿಂಪಡಿಸಿಕೊಳ್ಳಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು. ರಸ್ತೆ ಬದಿಯ ತೆರೆದ ವಾತಾವರಣದಲ್ಲಿ ಕತ್ತರಿಸಿದ ಹಣ್ಣುಗಳ ಮಾರಾಟ ನಿಷೇಧಿಸುವುದು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹೋಟೆಲ್‌ಗಳಲ್ಲಿ ಸ್ವಚ್ಛತೆ, ನೈರ್ಮಲ್ಯತೆಯನ್ನು ಕಾಪಾಡುವುದು,  ಧೂಮೀಕರಣ ಕೈಗೊಳ್ಳುವುದು, ಉದ್ಯಾನವನಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ ನೀರು ನಿಲ್ಲದಂತೆ ಸೂಕ್ತ ಕ್ರಮವಹಿಸಬೇಕೆಂದು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡಬೇಕು. ನಗರದಲ್ಲಿರುವ ಉದ್ಯಾನವನಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿಯನ್ನು ಫಲಕಗಳನ್ನು ಅಳವಡಿಸಬೇಕು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕೃಷಿ ಉತ್ಪನ್ನ ಮಾರುಕಟ್ಟೆ, ಚಿತ್ರಮಂದಿರ, ತರಕಾರಿ ಮಾರುಕಟ್ಟೆ, ಸಾರ್ವಜನಿಕ ಪ್ರದೇಶಗಳಲ್ಲಿ ಸಮರ್ಪಕವಾಗಿ ಘನತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ  ಬಳಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಶೌಚಾಲಯ ವ್ಯವಸ್ಥೆ ಸರಿಯಿಲ್ಲದಿದ್ದಲ್ಲಿ ಶಾಲಾಭಿವೃದ್ಧಿ ಸಮಿತಿ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಗಮನಕ್ಕೆ ತಂದು ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಎಲ್ಲಾ ಶಾಲೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಡಿಡಿಪಿಐ ಸಿ ನಂಜಯ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  ಅಧಿಕಾರಿಗಳಿಗೆ ಸೂಚಿಸಿದರು.
ಆಶಾ ಕಾರ್ಯಕರ್ತೆಯರು ಮನೆ- ಮನೆಗೆ ಭೇಟಿ ನೀಡಿ ಹಳೆಯ ಪಾತ್ರೆ, ಟೈರುಗಳಲ್ಲಿ ನೀರು ನಿಲ್ಲದಂತೆ ಹಾಗೂ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಅರಿವು ಮೂಡಿಸಬೇಕುಈ ಕುರಿತು ಸೂಕ್ತ ನಿರ್ದೇಶನ ನೀಡಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಿ ಲಾರ್ವಹಾರಿ ಮೀನು ಸಾಕಾಣಿಕಾ ತೊಟ್ಟಿಗಳನ್ನು ನರೇಗಾ ಯೋಜನೆಯಡಿ ನಿರ್ಮಿಸಲು ಅವಕಾಶವಿದ್ದಲ್ಲಿ ಸಿಇಓ ಅವರೊಂದಿಗೆ ಚರ್ಚಿಸಿ ತಿಳಿಸಲಾಗುವುದೆಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್,  ಜಿಲ್ಲಾ  ಶಸ್ತ್ರ ಚಿಕಿತ್ಸಕ ಡಾ.ಟಿ.ಎ ವೀರಭದ್ರಯ್ಯ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಮೋಹನ್ ದಾಸ್, ಆರ್.ಸಿ.ಎಚ್ ಅಧಿಕಾರಿ ಡಾ. ಕೇಶವರಾಜ್, ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಖಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್ ಆಂಜನಪ್ಪ, ಡಾ.ಸನತ್ ಕುಮಾರ್ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಬರಗೂರು ಗ್ರಾಪಂ ಗೆ ದಿಢೀರ್ ಭೇಟಿ ; ಜಿಪಂ ಸಿಇಒ ಯಿಂದ ಪ್ರಶಂಸೆ ವ್ಯಕ್ತ

0

Publicstory/prajayoga

ಶಿರಾ: ತಾಲೂಕು ಬರಗೂರು ಗ್ರಾಪಂ ಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿದ್ಯಾಕುಮಾರಿ ದಿಢೀರ್ ಭೇಟಿ ನೀಡಿ ಅಮೃತ ಯೋಜನೆ ಹಾಗೂ ಇನ್ನಿತರ ಯೋಜನೆಯ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಮಂಗಳವಾರ ಬರಗೂರು ಗ್ರಾಮಪಂಚಾಯ್ತಿಗೆ ಭೇಟಿ ನೀಡಿ, ಕುಡಿಯುವ ನೀರು, ಚರಂಡಿ, ಕಸವಿಲೇವಾರಿ ಘಟಕ, ಡಿಜಿಟಲ್ ಲೈಬ್ರರಿ, ಅಮೃತ ಪಾರ್ಕು, ಶಾಲಾ ಕಾಂಪೌಂಡ್, ಆಟದ ಮೈದಾನ, ಅಡುಗೆ ಕೊಠಡಿಗಳು, ಶೌಚಾಲಯಗಳನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, ಅಮೃತ ಯೋಜನೆ ಅಡಿ ನೀಡಲಾಗಿರುವ ಕಾಮಗಾರಿಗಳನ್ನು ಚನ್ನಾಗಿಯೇ ನಿರ್ವಹಿಸಿದ್ದಾರೆ. ಆದರೂ ಕೆಲವು ಸಲಹೆಗಳನ್ನು ನೀಡಿದ್ದೇನೆ. ಇದರ ಜೊತೆಗೆ ಜಿಲ್ಲಾ ಪಂಚಾಯ್ತಿಯ ಇತರೆ ಕಾರ್ಯಗಳನ್ನು ಸದರಿ ಗ್ರಾಮಪಂಚಾಯ್ತಿತಿ ಯಲ್ಲಿ ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಪ್ರಶಂಶೆ ವ್ಯಕ್ತಪಡಿಸಿದರು.

ಕಳೆದ ಸಾಲಿನಲ್ಲಿ ಶಿರಾ ತಾಲೂಕು ಬರಗೂರು ಗ್ರಾಮಪಂಚಾಯಿತಿಯನ್ನು ಅಮೃತ ಯೋಜನೆಯಡಿ ಆಯ್ಕೆ ಮಾಡಲಾಗಿದ್ದು, ಗ್ರಾಪಂ. ವ್ಯಾಪ್ತಿಯ ಜನರಿಗೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಿದ್ದಾರೆ ಎಂದರು.

ಅಮೃತ ಯೋಜನೆಯಡಿ ಒಂದು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೂ ಅಗತ್ಯವಿದ್ದ ರಸ್ತೆ, ಚರಂಡಿ, ಕುಡಿಯುವ ನೀರು, ಶೌಚಾಲಯ, ಮಕ್ಕಳಿಗೆ ಅಗತ್ಯವಿರುವ ಶಾಲಾ ಕಾಂಪೌಂಡ್, ಅಡುಗೆ ಕೋಣೆ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಾಲೋನಿಯ ಸಮಗ್ರ ಅಭಿವೃದ್ಧಿಗೆ ಕಾಮಗಾರಿಗಳನ್ನು ನೀಡಲಾಗಿದೆ. ಬರಗೂರು ಗ್ರಾಪಂ ನಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಅಧಿಕಾರಿಗಳು ಮತ್ತು ಚುನಾಯಿತ ಮಂಡಳಿ ಸೇರಿ ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ ಎಂದರು.

ಈ ವೇಳೆ ಬರಗೂರು ಗ್ರಾಪಂ ಅಧ್ಯಕ್ಷ ಟಿ.ರವಿಕುಮಾರ್, ಉಪಾಧ್ಯಕ್ಷರಾದ ಯಶೋಧ ದೇವರಾಜು, ಸದಸ್ಯರಾದ ಲೋಕೇಶ್ ಹಾರೋಗೆರೆ, ಕಂಬಿ ಮಂಜು, ಪಂಕಜಾಕ್ಷಿ ಜಯರಾಮಯ್ಯ, ಬಾಲು, ಸಿದ್ದಪ್ಪ, ತಾಪಂ ಇಒ ಅನಂತರಾಜು, ಎಡಿ ವೆಂಕಟೇಶ್, ಪಿಡಿಒ ನಾಗರಾಜಯ್ಯ, ಇಂಜಿನಿಯರ್ ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೇಕಾರ ಸಮುದಾಯ ತಮ್ಮ ರಾಜಕೀಯ ಶಕ್ತಿ ಪ್ರದರ್ಶಿಸಲಿದೆ : ಧನಿಯಾಕುಮಾರ್

Publicstory/prajayoga

ತುಮಕೂರು: ನೇಕಾರರ ಸಮುದಾಯ ಶಿಕ್ಷಣ ಮತ್ತು ರಾಜಕಾರಣ ಕ್ಷೇತ್ರದಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದು, ನೇಕಾರರ ಒಕ್ಕೂಟದ ಹೆಸರಿನಲ್ಲಿ ಒಂದಾಗಿರುವ ನೇಕಾರ ಸಮುದಾಯಗಳು ಮುಂದಿನ ದಿನಗಳಲ್ಲಿ ತಮ್ಮ ರಾಜಕೀಯ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ತಿಳಿಸಿದರು.

ನಗರದ ಹೊರಪೇಟೆಯ ಶ್ರೀನೀಲಕಂಠೇಶ್ವರ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ನೇಕಾರರ ಒಕ್ಕೂಟದಿಂದ ಬುಧವಾರ ಆಯೋಜಸಿದ್ದ ರಾಷ್ಟ್ರೀಯ ನೇಕಾರರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಸೇರಿದಂತೆ ನಾಲ್ಕು ಜನರಿಲ್ಲ. ಇಂತಹವರಿಗೆ ಅಧಿಕಾರ ನೀಡಲು ಸಾಧ್ಯವೇ ಎಂದು ಹೀಯಾಳಿಸುವವರಿಗೆ ಮುಂದಿನ ದಿನಗಳಲ್ಲಿ ನಮ್ಮ ಶಕ್ತಿ ಏನು ಎಂಬುದನ್ನು ತೋರ್ಪಡಿಸುವ ಗುರುತರ ಜವಾಬ್ದಾರಿ ಎಲ್ಲಾ ನೇಕಾರ ಬಂಧುಗಳ ಮೇಲಿದೆ ಎಂದರು.
ನೇಕಾರರು ತಮ್ಮ ಶ್ರಮವನ್ನೇ ನಂಬಿ ಬದುಕುತ್ತಿದ್ದಾರೆ. ಆದರೆ ಮಧ್ಯವರ್ತಿಗಳ ಹಾವಳಿಯಿಂದ ಅಂದಿನ ಕೂಲಿಯೂ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಕೋವಿಡ್ನಿಂದ ಆದ ಅರ್ಥಿಕ ನಷ್ಟದಿಂದ ಕಂಗಾಲಾಗಿದ್ದ ಸಮುದಾಯವನ್ನು, ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ನೈಲಾನ್ ಮತ್ತು ಪಾಲಿಸ್ಟರ್ನಿಂದ ತಯಾರಿಸಿ ವಿದೇಶದಲ್ಲಿ ತಯಾರಾದ ಬಾವುಟವನ್ನು ತರಿಸುವ ಮೂಲಕ ನಮ್ಮ ಹೊಟ್ಟೆಯ ಮೇಲೆ ಹೊಡೆದಿದ್ದಾರೆ. ನೆರೆಯ ತಮಿಳುನಾಡಿನಲ್ಲಿ ನೇಕಾರರಿಗೆ ಉಚಿತ ವಿದ್ಯುತ್, ಮಗ್ಗ ಹಾಗೂ ವಸತಿಯನ್ನು ನೀಡುವುದರ ಜೊತೆಗೆ, ನೇಕಾರರ ಮಕ್ಕಳಿಗೆ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಚುನಾವಣೆ ಸಮಯದಲ್ಲಿ ಮಾತ್ರ ನೇಕಾರರು ನೆನಪಾಗುತ್ತಾರೆ. ಯಾವುದೇ ಪಕ್ಷವಿರಲಿ, ನಮ್ಮ ಸಮುದಾಯಕ್ಕೆ ಅವಕಾಶ ಸಿಕ್ಕರೆ ಎಲ್ಲರೂ ಒಗ್ಗೂಡಿ ಅವರ ಗೆಲುವಿಗೆ ಶ್ರಮಿಸಿ. ನಮ್ಮ ರಾಜಕೀಯ ಪ್ರಾತಿನಿಧ್ಯ ಹೊಂದಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರು ಹೆಚ್ಚಿನ ಸಂಘಟನೆಯಲ್ಲಿ ತೊಡಗುವಂತೆ ಧನಿಯಕುಮಾರ್ ಸಲಹೆ ನೀಡಿದರು.

ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ನೇಕಾರರ ಸಮುದಾಯಕ್ಕೆ ಸುಮಾರು 4000 ವರ್ಷಗಳ ಇತಿಹಾಸವಿದೆ. ಸಿಂಧು ಕಣಿವೆ ಮತ್ತು ಹರಪ್ಪ, ಮಹೆಂಜೋದಾರೋ ನಾಗರಿಕತೆಯ ವೇಳೆಯಲ್ಲಿಯೇ ನೇಕಾರಿಕೆ ಇತ್ತು. ವಸ್ತೋದ್ಯಮ ಇಂದು ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ. ದೇಶದ 29 ರಾಜ್ಯಗಳಲ್ಲಿ 27 ವಿವಿಧ ರೀತಿಯ ಬಟ್ಟೆಗಳನ್ನು ನೇಯ್ಗೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಇಂದಿಗೂ 25 ಲಕ್ಷ ಮಗ್ಗಗಳಿದ್ದು, 45-50 ಲಕ್ಷ ಜನರಿಗೆ ನೇರವಾಗಿ, ಕೋಟ್ಯಾಂತರ ಜನರಿಗೆ ಪರೋಕ್ಷವಾಗಿ ಅನ್ನನೀಡುತ್ತಿದೆ. ಹಾಗಾಗಿ ಸರ್ಕಾರ ನೇಕಾರರಿಗೆ ರಿಯಾಯಿತಿ ದರದಲ್ಲಿ ಕಚ್ಚಾವಸ್ತು ನೀಡಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸಬೇಕು. ಹಾಗೆಯೇ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ನೇಕಾರರ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಜಯಜಯಲಕ್ಷ್ಮಿಸವರಾಜು ಮಾತನಾಡಿ, ರಾಜ್ಯದಲ್ಲಿ ನೇಕಾರರ ಸಮುದಾಯದ 27 ಉ ಪಂಗಡ ಹಾಗೂ 6ಪಪಂಗಡಗಳು ಸೇರಿ 70 ಲಕ್ಷ ಜನಸಂಖ್ಯೆ ಇದ್ದೇವೆ. ಇಷ್ಟು ದೊಡ್ಡ ಜನಸಂಖ್ಯೆ ಇದ್ದರೂ ಎಂಡಿಎಲ್ ಮತ್ತು ಕೆ.ಸಿ.ಕೊಂಡಯ್ಯ ಅವರುಗಳನ್ನು ಹೊರತು ಪಡಿಸಿದರೆ ಬೇರೆ ಜನಪ್ರತಿನಿಧಿಗಳಿಲ್ಲ. ಒಕ್ಕೂಟದ ರಾಜ್ಯಾಧ್ಯಕ್ಷರ ಮುಂದೆ ದೊಡ್ಡ ಸವಾಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿ, ಎಲ್ಲರಿಗೂ ನ್ಯಾಯ ದೊರಕಿಸಿಕೊಡಲಿ ಎಂದರು.

ರಾಜ್ಯ ನೇಕಾರರ ಒಕ್ಕೂಟದ ರಾಜ್ಯಾಧ್ಯಕ್ಷ ಸೋಮಶೇಖರ್ ಮಾತನಾಡಿ, ರಾಜ್ಯದಲ್ಲಿ ಉಪಪಂಗಡದ ಹೆಸರಿನಲ್ಲಿ ಹರಿದು ಹಂಚಿ ಹೋಗಿರುವ ನೇಕಾರರ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದ ನೇಕಾರರ ಸಮುದಾಯಗಳ ಒಕ್ಕೂಟವನ್ನು ರಚಿಸಲಾಗಿದೆ. ಇದನ್ನು ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಕ್ರಿಯವಾಗಿ ಕಟ್ಟುವ ಮೂಲಕ ನಮ್ಮ ಶಕ್ತಿಯನ್ನು ಆಳುವ ಸರ್ಕಾರಗಳಿಗೆ ತೋರಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳನ್ನು ಪುನರ್‌ರಚಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.70 ಲಕ್ಷ ದಷ್ಟು ಜನಸಂಖ್ಯೆ ಇರುವ ನೇಕಾರ ಸಮುದಾಯಕ್ಕೆ ಬೆಂಗಳೂರಿನಲ್ಲಿ ಒಂದು ಭವನ ಕಟ್ಟಬೇಕೆಂಬುದು ನಮ್ಮ ಮಹದಾಸೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ನಿವೇಶನ ಮತ್ತು ಅನುದಾನಕ್ಕೆ ಮನವಿ ಮಾಡಲಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಬಹುದಿನದ ಕನಸು ನನಸಾಗಲಿದೆ ಎಂದರು.

ಇದೇ ವೇಳೆ ನೇಕಾರರ ಸಮುದಾಯದ ಅಭಿವೃದ್ದಿಗೆ ದುಡಿದ ಟಿ.ಬಿ.ಚೌಡೇಶ್, ಎಸ್.ಎನ್.ರಂಗಸ್ವಾಮಿ, ಪಿ.ರಾಮಕೃಷ್ಣ, ಶ್ರೀಮತಿ ಕಮಲಮ್ಮ ಅವರುಗಳನ್ನು ಸನ್ಮಾನಿಸಲಾಯಿತು.

ತುಮಕೂರು ಜಿಲ್ಲಾ ನೇಕಾರರ ಒಕ್ಕೂಟವನ್ನು ಪುನಃರಚಿಸಲಾಯಿತು.ಗೌರವ ಅಧ್ಯಕ್ಷರಾಗಿ ಟಿ.ಎಚ್.ಶಿವಾ ನಂದ್,ಅಧ್ಯಕ್ಷರಾಗಿ ಧನಿಯಕುಮಾರ್, ಉಪಾಧ್ಯಕ್ಷರುಗಳಾಗಿ ಕರಿಯಪ್ಪ, ಎನ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ರಾಮಕೃಷ್ಣಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ಅನಿಲ್ಕುಮಾರ್.ಆರ್, ಖಜಾಂಚಿಯಾಗಿ ಚೌಡಯ್ಯ ಅವರುಗಳನ್ನು ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ಪಾಲಿಕೆ ಸದಸ್ಯೆ ಶ್ರೀಮತಿ ಗಿರಿಜಾ ಎಸ್.ವಿ.ವೆಂಕಟೇಶ್,ರವೀಂದ್ರಕುಮಾರ್,ಪಿ.ಶ್ರೀಧರ್, ಟಿ.ಆರ್.ಭಾಸ್ಕರ್, ಆರ್.ಅನಿಲ್ ಕುಮಾರ್, ಶ್ರೇಯಸ್ ಮಣಿಕಂಠ, ಟಿ.ಎನ್.ಕೇಶವ್, ಯೋಗಾನಂದ, ಲಿಂಗರಾಜು,ರಂಗಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.

ತುಮಕೂರು ವಿವಿಯಲ್ಲಿ ಆ.20 ರಂದು ಉದ್ಯೋಗ ಮೇಳ

Publicstory/prajayoga

ತುಮಕೂರು:  ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ವತಿಯಿಂದ ಆ.20 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಂಡಿರುವುದಾಗಿ ಎಂಬಿಎ ವಿಭಾಗದ ಮುಖ್ಯಸ್ಥೆ ನೂರ್ ಅಫ್ಸಾ ಅವರು ತಿಳಿಸಿದರು.

ವಿ.ವಿ. ಆವರಣದ ಡಾ. ಪಿ.ಸದಾ ನಂದಮಯ್ಯ ಬ್ಲಾಕ್ ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಉದ್ಯೋಗ ಮೇಳದಲ್ಲಿ ಸುಮಾರು 30 ರಿಂದ 40 ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, 2000 ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಇದೆ ಎಂದರು.

ಪಿಯುಸಿಯಿಂದ ಹಿಡಿದು ಬಿಎ, ಬಿಕಾಂ. ಬಿಎಸ್ಸಿ, ಇಂಜಿನಿಯರಿಂಗ್, ಎಂಬಿಎ ಸೇರಿ ಅನೇಕ ಕೋರ್ಸ್ಗಳನ್ನು ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸ ಬಹುದಾಗಿದ್ದು, ಯಾವುದೇ ನೋಂದಣಿ ಶುಲ್ಕವಿಲ್ಲದೆ ಉಚಿತವಾಗಿ ನಡೆಸಲಾಗು ವುದು ಎಂದರು.

ವಿದ್ಯಾಭ್ಯಾಸ ಮುಗಿದ ನಂತರ ವಿದ್ಯಾರ್ಥಿಗಳು ಕೆಲಸಕ್ಕಾಗಿ ಬೆಂಗಳೂರು ನಗರ ಸೇರಿದಂತೆ ಬೇರೆ, ಬೇರೆ ಕಡೆ ಹೋಗಿ ಹುಡುಕಿ ಉದ್ಯೋಗ ಪಡೆಯುವುದು ಕಷ್ಟಕರ. ಆದ ಕಾರಣ ನಾವು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಉದ್ಯೋಗ ಮೇಳವನ್ನು ಆಯೋಜಿಸಿರುವುದಾಗಿ ತಿಳಿಸಿದರು.

ತುಮಕೂರು ವಿ.ವಿ. ಎಂಬಿಎ ವಿಭಾಗದಿಂದ ರಾಜ್ಯದ ಪ್ರತಿಷ್ಠಿತ 75 ಕಂಪನಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ಪೈಕಿ 30 ರಿಂದ 40 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗ ವಹಿಸಲು ಒಪ್ಪಿಗೆ ನೀಡಿವೆ. ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕಾರ್ವಿ, ಯುರೇಕಾ ಫೋರ್ಬ್ಸ್, ಚೋಳಮಂಡಲ, ಸಮೃದ್ಧಿ ಸರ್ವೀಸಸ್ ಇತ್ಯಾದಿ ಪ್ರಮುಖ ಕಂಪನಿಗಳು ಭಾಗ ವಹಿಸಲಿವೆ ಎಂದರು.

ತುಮಕೂರು ನಗರದ ಹೊರ ವಲಯದಲ್ಲಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಅನೇಕ ಕಂಪನಿಗಳನ್ನು ಇಂದು ಭೇಟಿ ಮಾಡಿ ಉದ್ಯೋಗ ಮೇಳದಲ್ಲಿ ಭಾಗ ವಹಿಸುವಂತೆ ಕೋರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2018ರಲ್ಲಿ ತುಮಕೂರು ವಿ.ವಿ. ಯಿಂದ ಉದ್ಯೋಗ ಮೇಳ ಆಯೋಜಿಸಿದ್ದು, ಸುಮಾರು 350 ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಾಗಿತ್ತು. ಪ್ರಸಕ್ತ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಆದೇಶ ಪತ್ರವನ್ನು ನೀಡಲಾಗುವುದು ಎಂದರು.

ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳು ನಮ್ಮಿಂದ ಹಾಗೂ ನಾವು ಸದರಿ ಕಂಪನಿಗಳಿಂದ ಯಾವುದೇ ಹಣಕಾಸು ಸಹಾಯವನ್ನು ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಆ.20 ರಂದು ಬೆಳಿಗ್ಗೆ 10.30ಕ್ಕೆ ತುಮಕೂರು ವಿ.ವಿ. ಕುಲಪತಿ ಪ್ರೊ.ವೆಂಕಟೇಶ್ವರಲು ಉದ್ಯೋಗ ಮೇಳವನ್ನು ಉದ್ಘಾಟಿಸುವರು. ಜಯಚಂದ್ರ ಆರಾಧ್ಯ, ಕಿಶೋರ್ಚಂದ್ರ ಇವರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.

ಚಿಕ್ಕನಾಯಕನಹಳ್ಳಿ ಯಿಂದ ಸ್ಪರ್ಧೆ ಇಲ್ಲ : ಮಾಜಿ ಶಾಸಕ ಕೆ.ಷಡಕ್ಷರಿ ಸ್ಪಷ್ಟನೆ

Publicstory/prajayoga

ತಿಪಟೂರು:  ನಾನು ಚಿಕ್ಕನಾಯಕನಹಳ್ಳಿಗೆ ಹೋಗುವುದಾಗಲೀ ಅಥವಾ ಮಾಧುಸ್ವಾಮಿ ತಿಪಟೂರಿಗೆ ಬಂದು ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ತೀರ್ಮಾನ ಮಾಡಿಕೊಂಡಿದ್ದೇವೆ. ನಾನು ಕಾಂಗ್ರಸ್ ಪಕ್ಷದ ಅಭ್ಯರ್ಥಿಯಾಗಿ ಐದು ಬಾರಿ ಸ್ಪರ್ಧಿಸಿ ಎರಡು ಸಾರಿ ಗೆದ್ದು, ಮೂರು ಬಾರಿ ಸೋತಿದ್ದೇನೆ. ಮುಂದಿನ ಚುನಾವಣೆಯಲ್ಲೂ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತೇನೆ. ಅದರಲ್ಲಿ ಸಂಶಯ ಬೇಡ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಸ್ಪಷ್ಟಪಡಿಸಿದರು

ಇಂದು ತಮ್ಮ ನಿವಾಸದಲ್ಲಿ‌ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಮಾಧುಸ್ವಾಮಿ ಅವರಿಗೆ ನಮ್ಮ ಪಕ್ಷಕ್ಕೆ ಬನ್ನಿ. ಚಿಕ್ಕನಾಯಕಹಳ್ಳಿ ಕ್ಷೇತ್ರದಿಂದಲೇ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತೇವೆ ಎಂದಿದ್ದೆ. ಅದಕ್ಕವರು ಪ್ರತಿಕ್ರಿಯಿಸಿ, ನಾನ್ಯಾಕೆ ಪಕ್ಷ ಬಿಟ್ಟು ಬರಲಿ. ಬಿಜೆಪಿ ಪಕ್ಷದಿಂದ ಶಾಸಕನಾಗಿ, ಸಚಿವನೂ ಆಗಿದ್ದೇನೆ. ಆದ್ದರಿಂದ ಪಕ್ಷ ಬದಲಾವಣೆ ಮಾಡುವ ಅವಶ್ಯಕತೆ ನನಗಿಲ್ಲ ಎಂದಿದ್ದರು. ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. ನಾನು ಅವರನ್ನು ಕ್ಯಾಶ್ಯುಯಲ್ ಆಗಿ ಕೇಳಿದ್ದೆ ಅಷ್ಟೆ. ಆಗ ಹೀಗೇಳಿದ್ದರು ಎಂದು ತಿಳಿಸಿದ್ದರು.

ಈ ಬಗ್ಗೆ  ಕಾಂಗ್ರೆಸ್ ಪಕ್ಷದಿಂದ ತಿಪಟೂರಿನಲ್ಲಿ ಮಾಧುಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸತ್ಯವಲ್ಲ ಎಂದು ಷಡಕ್ಷರಿ ತಿಳಿಸಿದರು.

ಆರು ಪ್ರತ್ಯೇಕ ಕಾಣೆ ಪ್ರಕರಣ : ಠಾಣೆಯಲ್ಲಿ ದೂರು ದಾಖಲು

0

Publicstory/prajayoga

ತುಮಕೂರು: ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿವೇದಿತಾ(19), ಚಿಕ್ಕಗಂಗಯ್ಯ(43), ಪೈರೋಜ್(40), ಮಹದೇವ(38), ಗೀತಾ ಬಿ.ಎಲ್. (34), ತೇಜಸ್ವಿನಿ(22) ಎಂಬ 6 ಮಂದಿ ಕಾಣೆಯಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ :- 1 ನಿವೇದಿತಾ ಎಂಬ ಮಹಿಳೆಯು ತುಮಕೂರು ತಾಲೂಕು ಹೆಬ್ಬೂರು ಹೋಬಳಿಯ ಅರಿಯೂರು ಗ್ರಾಮದ ನಿವಾಸಿಯಾಗಿದ್ದು, ಈಕೆಯು ಜನವರಿ 06. 2022ರಂದು ಬೆಳಿಗ್ಗೆ ಸಮಯದಲ್ಲಿ ಕಾಣೆಯಾಗಿದ್ದಾಳೆ ಎಂದು ಈಕೆಯ ಪತಿ ಪುನೀತ್ ಕುಮಾರ್ ಬಿನ್ ಲೇಟ್ ಸಿದ್ಧಗಂಗಯ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಈಕೆಯು ದೃಢಕಾಯ ಶರೀರ, 4.8 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾಳೆ.

ಪ್ರಕರಣ :- 2 ಚಿಕ್ಕಗಂಗಯ್ಯ ಎಂಬ ವ್ಯಕ್ತಿಯು ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಬನ್ನಿಕುಪ್ಪೆ ಗ್ರಾಮದ ನಿವಾಸಿಯಾಗಿದ್ದು, ಜನವರಿ 19, 2022ರಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಕಾಣೆಯಾಗಿದ್ದು, ಈತನ ತಂದೆ ಚಿಕ್ಕಣ್ಣ ಬಿನ್ ಲೇಟ್ ನರಸಿಂಹಯ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಈತನು 5.5 ಅಡಿ ಎತ್ತರ, ಕಪ್ಪು ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಪ್ಯಾಂಟ್ ನೀಲಿ ಬಣ್ಣದ ಶರ್ಟ್ ಧರಿಸಿದ್ದನು.

ಪ್ರಕರಣ :- 3 ಫೈರೋಜ್ ಎಂಬ ವ್ಯಕ್ತಿಯು ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಜಿ.ಎ. ಪಾಳ್ಯದ ನಿವಾಸಿಯಾಗಿದ್ದು, ಫೆಬ್ರುವರಿ 13, 2022ರಂದು ಬೆಳಿಗ್ಗೆ ಕಾಣೆಯಾಗಿದ್ದು, ಈತನು ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಈತನ ತಂದೆ ಮೊಮ್ಮದ್ ಇಬ್ರಾಹಿಂ ಲೇಟ್ ಮೊಹಮ್ಮದ್ ಅಯಾತ್ ಸಾಬ್ ಠಾಣೆಗೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಈತನು ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, 6 ಅಡಿ ಎತ್ತರವಿದ್ದು ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್ ಹಾಗೂ ಸೀಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದನು.

ಪ್ರಕರಣ :- 4 ಮಹದೇವ ಎಂಬ ವ್ಯಕ್ತಿಯು ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಮಾಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಏಪ್ರಿಲ್ 28, 2023ರಂದು ಬೆಳಿಗ್ಗೆ ಮನೆಯಿಂದ ಹೊರ ಹೋದವರು ಮರಳಿ ಬಂದಿರುವುದಿಲ್ಲ ಎಂದು ಈತನ ಪತ್ನಿ ಶಾಂತಮ್ಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಈತನು ದುಂಡುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಈತನು ಮನೆಯಿಂದ ಹೋಗುವಾಗ ಬಳಿ ಬಣ್ಣದ ಅರ್ಧ ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು.

ಪ್ರಕರಣ :- 5 ಗೀತಾ ಬಿ.ಎಲ್. ಎಂಬುವಳು  ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಬಿದರೆಕಟ್ಟೆ ಗ್ರಾಮದ ನಿವಾಸಿಯಾಗಿದ್ದು, ಜುಲೈ 16, 2022ರಂದು ಬೆಳಗಿನ ಜಾವ ಮನೆಯಿಂದ ಹೊರ ಹೋದವಳು ಮರಳಿ ಬಂದಿರುವುದಿಲ್ಲ ಎಂದು ಈಕೆಯ ಪತಿ ಗೋವಿಂದರಾಜು ಬಿನ್ ವೆಂಕಟಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಈಕೆಯು 5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಎಡ ತೋಳಿನಲ್ಲಿ ಹಳೆಯ ಹಚ್ಚೆಯನ್ನು  ಅಳಿಸಿರುವ ಚುಕ್ಕೆ ಚುಕ್ಕೆ ಗುರುತು  ಇದ್ದು ಮನೆಯಿಂದ ಹೋಗುವಾಗ ಬ್ಲಾಕ್ ಟಾಪ್ ಹಾಗೂ ಕೆಂಪು ಬಣ್ಣದ ಬಾಟಮ್ ಧರಿಸಿರುತ್ತಾಳೆ. 

ಪ್ರಕರಣ :- 6  ತೇಜಸ್ವಿನಿ ಎಂಬುವಳು ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಸಿರಿವರ ಗ್ರಾಮದವಳಾಗಿದ್ದು, ಜುಲೈ 21, 2022 ರಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಕಾಣೆಯಾಗಿದ್ದಾಳೆಂದು ಈಕೆಯ ತಂದೆ ಗಿರೀಶ್ ಬಿನ್ ಲೇಟ್ ಗೊವಿಂದಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಈಕೆಯು 5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಎಡ ಕೈಯಲ್ಲಿ  ಪಿಎಸ್ ಎಂಬ ಇಂಗ್ಲೀಷ್ ಅಕ್ಷರದ ಅಚ್ಚೆ ಗುರುತಿದ್ದು, ಮನೆಯಿಂದ ಹೋಗುವಾಗ ಹಳದಿ ಬಣ್ಣದ ಚುಡಿದಾರ್ ಧರಿಸಿರುತ್ತಾಳೆ.
ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕವರು ದೂ.ವಾ.ಸಂ. 0816-2241036 ಅಥವಾ ಮೊ.ಸಂ. 9480802953/ 33/00 ಯನ್ನು ಸಂಪರ್ಕಿಬಹುದೆಂದು ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.