Saturday, December 6, 2025
Google search engine
Home Blog Page 9

ಲೋಕಾಯುಕ್ತ: ಅಹವಾಲು ಸ್ವೀಕಾರ

0

ಚಿಕ್ಕನಾಯಕನಹಳ್ಳಿ : ದಿನಾಂಕ.26.09.2024 ರ ಗುರುವಾರದಂದು ಬೆಳಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ತುಮಕೂರು ಲೋಕಾಯುಕ್ತ ಘಟಕದ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಕುಂದು-ಕೊರತೆ ಸಭೆ ಹಾಗೂ ಅಹವಾಲು ಸ್ವೀಕಾರ ಸಭೆಯನ್ನು ನಡೆಸಲಿದ್ದಾರೆ. ಈ ಸಭೆಯಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿರಲಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ಮತ್ತು ಇತ್ಯರ್ಥವಾಗದೇ ಉಳಿದಿರುವ ಅರ್ಜಿಗಳ ಬಗ್ಗೆ ಸಾರ್ವಜನಿಕರಿಂದ ಲಿಖಿತ ದೂರನ್ನು ಪಡೆದುಕೊಳ್ಳುವುದಕ್ಕಾಗಿ ಲೋಕಾಯುಕ್ತ-ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಏರ್ಪಡಿಸಲಾಗಿದೆ. ಪ್ರಪತ್ರ– 01 ಮತ್ತು ಪ್ರಪತ್ರ– 02 ರಲ್ಲಿ ಸಾರ್ವಜನಿಕರ ದೂರನ್ನು ಅಗತ್ಯ ದಾಖಲಾತಿಗಳೊಂದಿಗೆ ಇಲ್ಲಿ ಪಡೆದುಕೊಳ್ಳಲಾಗುವುದು.

ಸಾರ್ವಜನಿಕರ ಕುಂದು-ಕೊರತೆಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿ ಮತ್ತು ದಾಖಲೆಗಳೊಂದಿಗೆ ತಾಲ್ಲೂಕು ಮಟ್ಟದ ಇಲಾಖಾವಾರು ಎಲ್ಲ ಅಧಿಕಾರಿಗಳು ನಿಗದಿಪಡಿಸಿದ ದಿನದಂದು, ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗಲು ಸೂಚಿಸಲಾಗಿದೆ. ತತ್ಸಂಬಂಧ ಸಾರ್ವಜನಿಕರಿಂದ ತಮಗೆ ಸಲ್ಲಿಕೆಯಾಗಿರುವ ದೂರು ಮತ್ತು ಅರ್ಜಿಗಳಿಗೆ ಸಂಬಂಧಿಸಿದ ಅಗತ್ಯ ಮಾಹಿತಿ ಮತ್ತು ದಾಖಲಾತಿಗಳೊಂದಿಗೆ ತಾಲ್ಲೂಕು ಮಟ್ಟದ ಎಲ್ಲ ಇಲಾಖಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಹಾಜರಿರುವಂತೆ ಸೂಚಿಸಿದೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯ ಪತ್ರಿಕಾ ಪ್ರಕಟಣೆ ನೀಡಿದೆ.

ಸಭೆಯಲ್ಲಿ ಸಿಗಲಿರುವ ಲೋಕಾಯುಕ್ತ ಅಧಿಕಾರಿಗಳು::

ಈ ಸಾರ್ವಜನಿಕ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮಿನಾರಾಯಣ ಎ ವಿ, ಪೊಲೀಸ್ ಉಪಾಧೀಕ್ಷಕ ಕೆ ಜಿ ರಾಮಕೃಷ್ಣ, ಪೊಲೀಸ್ ಉಪಾಧೀಕ್ಷಕ ಬಿ ಉಮಾಶಂಕರ್, ಪೊಲೀಸ್ ನಿರೀಕ್ಷಕ ಸುರೇಶ್ ಕೆ, ಪೊಲೀಸ್ ನಿರೀಕ್ಷಕ ಕೆ ರಾಮರೆಡ್ಡಿ, ಪೊಲೀಸ್ ನಿರೀಕ್ಷಕ ಬಿ ಮೊಹಮ್ಮದ್ ಸಲೀಂ, ಪೊಲೀಸ್ ನಿರೀಕ್ಷಕ ಶಿವರುದ್ರಪ್ಪ ಮೇಟಿ’ಯವರು ಉಪಸ್ಥಿತರಿರುತ್ತಾರೆ ಎಂದು ಪೊಲೀಸ್ ಅಧೀಕ್ಷಕ ಲಕ್ಷ್ಮೀನಾರಾಯಣ ಎ ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

___ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಕನ್ನಡ ಶಾಲೆ ಉಳಿಸಿ: ಸಿದ್ದಪ್ಪ

0

ತುರುವೇಕೆರೆ: ಗ್ರಾಮೀಣ ಪ್ರದೇಶಗಳಲ್ಲಿನ ಕನ್ನಡ ಶಾಲೆಗಳು ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚುವ ಸ್ಥಿತಿಯನ್ನು ತಲುಪುತ್ತಿದ್ದು; ಎಲ್ಲರೂ ತಮ್ಮ ಮಕ್ಕಳನ್ನು ಸೇರಿಸಿ ಕನ್ನಡ ಶಾಲೆಗಳನ್ನು ಉಳಿಸಬೇಕೆಂದು ತಾಲ್ಲೂಕು ಶಿಕ್ಷಣ ಸಂಯೋಜಕ ಸಿದ್ದಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಶ್ರೀ ಚಂಪಕಾ ಪ್ರೌಢ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಆಶಾಲತಾ ಬಿ.ಎಸ್ ಅವರಿಗೆ ಅಭಿನಂಧನೆ, ಗುರುವಂದನಾ ಹಾಗು ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ತಾವು ಓದಿದ ಶಾಲೆಯನ್ನು, ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸುವ ಕೆಲಸವಾಗಬೇಕು ಹಾಗಾದಲ್ಲಿ ಮಾತ್ರ ಕಲಿತ ವಿದ್ಯೆಗೆ ಸಾರ್ಥಕತೆ ಬರುತ್ತದೆ. ತಾವು ಕಲಿತ ವಿದ್ಯೆಯಿಂದ ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕೆ ಮೀಸಲಾಗಿಸದೆ ಸಮಾಜದಲ್ಲಿ ನೊಂದವರ, ಅಸಹಾಯಕರ, ಬಡವರ ಕಣ್ಣೊರಿಸುವ ಶಕ್ತಿಯಾಗಬೇಕು ಎಂದರು.

ಸಂಪಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಲಿಂಗಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೃಜನಶೀಲ ಶಿಕ್ಷಕರು ಸುಸ್ಥಿರ ಸಮಾಜ ಹಾಗು ದೇಶದ ನಿರ್ಮಾತೃಗಳಾಗಿರುತ್ತಾರೆ. ಶಾಲೆಯಿಂದ ಈ ಭಾಗದ ಸಾವಿರಾರು ಮಕ್ಕಳು ಅಕ್ಷರ ಕಲಿತು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಇಂತಹ ಶಾಲೆಯನ್ನು ಉಳಿಸಿ, ಬೆಳೆಸುವ ಸಂಕಲ್ಪ ಎಲ್ಲರದು ಎಂದರು.

ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಬಿ.ಎಸ್.ಆಶಾಲತಾ ಡಾ.ರವೀಶ್ ಎನ್.ಆರ್ ದಂಪತಿಗಳನ್ನು ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಮೈಸೂರು ಪೇಟ ತೊಡಿಸಿ, ಹೂ ಮಳೆಗರೆದು ಅಭಿನಂಧಿಸಿದರು. ನಂತರ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಮಂತ ಕುಮಾರಿರಾಜು, ಚಂಪಕ ವಿದ್ಯಾ ಸಮಿತಿ ಮಾಜಿ ಅಧ್ಯಕ್ಷರಾದ ಸುರೇಶ್, ಮಾಜಿ ಕಾರ್ಯದರ್ಶಿ ರೇಣುಕಪ್ಪ, ಸಿಆರ್ಪಿ ಶ್ರೀದೇವಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಧರ್, ಮಾಜಿ ಉಪಾಧ್ಯಕ್ಷ ಚಿನ್ಮಯ್, ಮಾಜಿ ಸದಸ್ಯರಾದ ಶ್ರೀನಿವಾಸ್, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳ ತಂಡ, ಗ್ರಾಮಸ್ಥರು ಮತ್ತು ಪೋಷಕರು ಭಾಗವಹಿಸಿದ್ದರು. ಹಿರಿಯ ವಿದ್ಯಾರ್ಥಿ ಚಿರಂಜೀವಿ ನಿರೂಪಿಸಿ, ರೂಪೇಶ್ ಎಚ್.ಬಿ ಸ್ವಾಗತಿಸಿ, ವೆಂಕಟೇಶ್ ಪ್ರಸಾದ್ ವಂದಿಸಿದರು.

ಸುರಕ್ಷತೆಗೆ ಆದ್ಯತೆ-ಸೌಲಭ್ಯಕ್ಕೂ ಪ್ರಾಧಾನ್ಯತೆ ; ತಹಸೀಲ್ದಾರ್ ಕೆ ಪುರಂದರ್

0

(ಪುರಸಭೆ ವತಿಯಿಂದ ಆಚರಿಸಲಾದ ಪೌರ ಕಾರ್ಮಿಕರ ದಿನಾಚರಣೆ-2024’ರ ಕಾರ್ಯಕರ್ಮದಲ್ಲಿ)

ಚಿಕ್ಕನಾಯಕನಹಳ್ಳಿ : ಪಟ್ಟಣದ ಹೊಯ್ಸಳ ಸಭಾಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ ಮತ್ತು ಜಿಲ್ಲಾಡಳಿತ ಹಾಗೂ ಪುರಸಭಾ ಕಾರ್ಯಾಲಯ ವತಿಯಿಂದ‌ ಸೋಮವಾರ ಪೌರ ಕಾರ್ಮಿಕರ ದಿನಾಚರಣೆ–2024ನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ ಪುರಂದರ್’ರವರು ಮಾತನಾಡಿ, ಪೌರ ಕಾರ್ಮಿಕರಿಗೆ ಸರ್ಕಾರದ ಕಡೆಯಿಂದ ಮೀಸಲಿರುವ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಪೌರ ಕಾರ್ಮಿಕರು ಹಿಂಜರಿಯಬಾರದು. ಸಫಾಯಿ ಕರ್ಮಚಾರಿಗಳು ತಮಗಾಗಿ ಸರ್ಕಾರ ಒದಗಿಸುವ ನಿವೇಶನ, ವಸತಿ, ವಿಶ್ರಾಂತಿ ಕೊಠಡಿ, ಶೌಚಾಲಯ, ಮಕ್ಕಳ ಶಿಕ್ಷಣ ಸೌಲಭ್ಯ, ಇಎಸ್ಐ, ಪಿಎಫ್, ವಿಮೆ, ಪೌಷ್ಟಿಕಾಂಶ ಯುಕ್ತ ಬೆಳಗಿನ ಉಪಹಾರ ತರಹದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಅದೇರೀತಿ ಕೆಲಸದ ಸಮಯದಲ್ಲಿ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ತಪ್ಪದೆ ಅನುಸರಿಸಿ ಪಾಲಿಸಬೇಕು. ಕರ್ಮಚಾರಿಗಳ ಸುರಕ್ಷತೆಗಾಗಿ ಪುರಸಭೆ ಒದಗಿಸಿರುವ ಉಡುಪು, ಸುರಕ್ಷೆಗಾಗಿರುವ ಮಾಸ್ಕ್, ನೋಸ್ ಪೀಸ್, ಗಮ್’ಬೂಟ್ಸ್ ಇತ್ಯಾದಿ ಧರಿಸಿಕೊಂಡು, ಸುರಕ್ಷತಾ ಸಲಕರಣೆಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸಬೇಕು. ಕರ್ಮಚಾರಿಗಳು ಧೂಮಪಾನ ಮತ್ತು ಮದ್ಯಪಾನಕ್ಕೆ ದಾಸರಾಗಬಾರದು. ಅದು ಪ್ರಾಣಕಂಟಕ ದುಶ್ಚಟಗಳು ಎಂದು ಸಫಾಯಿ ಕರ್ಮಚಾರಿಗಳಿಗೆ ತಿಳಿಹೇಳಿ ಪೌರ ಕಾರ್ಮಿಕ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ಸಮಾಜ ಕಲ್ಯಾಣಾಧಿಕಾರಿ ಶ್ರೀಧರ ಮೂರ್ತಿ ಮಾತನಾಡಿ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನಗಳು ಹಾಗೂ ಕಾಲ ಕಾಲಕ್ಕೆ ಸರ್ಕಾರವೇ ನೇಮಿಸಿದ್ದ ಹಲವು ಆಯೋಗಗಳು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ಸಂಬಂಧಿಸಿದಂತೆ ನೀಡಿರುವ ಸೂಚನೆಗಳನ್ನು ಉಲ್ಲೇಖಿಸುತ್ತಾ, ಕರ್ಮಚಾರಿಗಳಿಗೆ ಇರುವ ಹತ್ತುಹಲವು ಸೌಯ ಮತ್ತು ಸೌಕರ್ಯಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಸಿ ಬಸವರಾಜು ಮಾತನಾಡಿ, ಕೆಲವೊಮ್ಮೆ ಪುರಸಭಾ ಸದಸ್ಯರು ಹಾಗೂ ಪೌರ ಕಾರ್ಮಿಕರ ನಡುವೆ ನಡೆಯುವ ಅನಿವಾರ್ಯ ತಾಕಲಾಟಗಳನ್ನು ತಮಾಷೆಯಾಗಿ ವಿವರಿಸಿ, ನೆರೆದಿದ್ದ ಎಲ್ಲರನ್ನೂ ನಗಿಸಿದರು.

ಪುರಸಭೆಯ ಸಫಾಯಿ ಕರ್ಮಚಾರಿಗಳ ವ್ಯಾಪ್ತಿಗೆ ಒಳಪಡದ ಕೆಲವು ಕಚೇರಿ ಆವರಣವನ್ನು ಶುಚಿಗೊಳಿಸುವ ಕೆಲಸವನ್ನು ನಮ್ಮ ಪೌರ ಕಾರ್ಮಿಕರಿಂದ ಮಾಡಿಸಿಕೊಳ್ಳಲಾಗುತ್ತಿದೆ. ಇದು ಸಲ್ಲದ್ದು. ಪಟ್ಟಣ, ಪುರ ಮತ್ತು ಪುರಸಭೆ ವ್ಯಾಪ್ತಿಯ 23 ವಾರ್ಡುಗಳ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವುದೇ ಈಗ ದೊಡ್ಡ ಸವಾಲಾಗಿದೆ. ಅದರೊಂದಿಗೆ ಕಚೇರಿ-ನೈರ್ಮಲ್ಯವನ್ನು ಕಾಪಾಡುವ ಕೆಲಸವನ್ನೂ ಸಫಾಯಿ ಕರ್ಮಚಾರಿಗಳಿಗೆ ವಹಿಸಿದರೆ, ಅವರು ಹೇಗೆ ಕೆಲಸ ನಿರ್ವಹಿಸಲು ಸಾಧ್ಯ ಎಂದು ಪ್ರಶ್ನೆ ಎತ್ತಿದ ನಾಮ ನಿರ್ದೇಶಿತ ಪುರಸಭಾ ಸದಸ್ಯ ಮಹಮದ್ ಹುಸೇನ್ ಗುಂಡಾ, ಪೌರ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿ ಕಾಪಾಡಿಕೊಂಡು ಅವನ್ನು ಪಾಲಿಸಿಕೊಂಡು ಹೋಗಬೇಕಾದ ಅಗತ್ಯತೆಯಿದೆ ಎಂದು ಪುರಸಭೆಯ ಅಧಿಕಾರಿಗಳಿಗೆ ಒತ್ತಾಯಿಸಿದರು.

ಬಹುತೇಕ ಎಲ್ಲ ಪುರಸಭಾ ಸದಸ್ಯರು ಹಾಗೂ ಅಧಿಕಾರಿಗಳು, ಸಫಾಯಿ ಕರ್ಮಚಾರಿಗಳಿಗೆ ಪೌರ ಕಾರ್ಮಿಕ ದಿನಾಚರಣೆಯ ಶುಭಾಶಯ ಕೋರಿದರು.

ಕಡೆಯಲ್ಲಿ, ಪೌರ ಕಾರ್ಮಿಕ ದಿನಾಚರಣೆಯ ಶುಭಾಶಯಗಳನ್ನು ಕೋರಿ ಮಾತನಾಡಿದ ಪುರಸಭಾ ಅಧ್ಯಕ್ಷ ಸಿ ಹೆಚ್ ದಯಾನಂದ್, ಸಫಾಯಿ ಕರ್ಮಚಾರಿಗಳು ಆರೋಗ್ಯ ಮತ್ತು ಆಯಸ್ಸಿನ ಬಗ್ಗೆ ಸದಾ ಜಾಗ್ರತೆ ವಹಿಸಬೇಕು ಎಂದು ಕಾಳಜಿ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಲವು ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಕರ್ಮಚಾರಿಗಳು ಹಾಗೂ ಉತ್ತಮ ಸೇವೆ ಸಲ್ಲಿಸಿದ ಸಫಾಯಿ ಕರ್ಮಚಾರಿಗಳು ಮತ್ತು ಹಿರಿಯ ಸಫಾಯಿ ಕರ್ಮಚಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ, ಪಟ್ಟಣ ಪುರಸಭೆಯ ಎಲ್ಲ ವಾರ್ಡುಗಳ ಎಲ್ಲ ಸದಸ್ಯರು, ಪುರಸಭೆ ಅಧಿಕಾರಿಗಳು, ಮಹಮದ್ ಹುಸೇನ್ ಗುಂಡಾ, ಪುರಸಭಾ ಸದಸ್ಯ(ನಾಮ ನಿರ್ದೇಶಿತ) ಕರ್ಮಚಾರಿಗಳು, ಕರ್ಮಚಾರಿಗಳ ಕುಟುಂಬಸ್ಥರು ಹಾಜರಿದ್ದರು.


_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಛಲವಾದಿ ಮತ್ತು ಮಾದಿಗ ಒಂದೇ ನಾಣ್ಯದ ಎರಡು ಮುಖ ; ಚೆನ್ನವೀರಯ್ಯ

0

ಚಿಕ್ಕನಾಯಕನಹಳ್ಳಿ : ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜೈಭೀಮ್ ಛಲವಾದಿ ಮಹಾಸಭಾ ತಾಲ್ಲೂಕು ಶಾಖೆಯ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜೈಭೀಮ್ ಛಲವಾದಿ ಮಹಾಸಭಾ ಮುಖಂಡ ಚೆನ್ನವೀರಯ್ಯ, ದಲಿತ ಸಮುದಾಯಗಳ ಪರಿಶಿಷ್ಟರಲ್ಲಿ ಛಲವಾದಿ ಮತ್ತು ಮಾದಿಗ ಬೇರೆ ಬೇರೆ ಅಲ್ಲ. ಇವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಬ್ಬರ ನಡುವೆ ಭಿನ್ನಬೇಧ ಮಾಡಿ ಒಡೆದಾಳುವ ಪಟ್ಟಭದ್ರ ಶಕ್ತಿಗಳಿಗೆ ಅವಕಾಶ ಮಾಡಿಕೊಡಕೂಡದು. ನಾವೆಲ್ಲರೂ ಒಗ್ಗೂಡಿ ಒಗ್ಗಟ್ಟಿನಿಂದ ನಮ್ಮ ನಮ್ಮ ನೆಲೆಗಳನ್ನು ಬೇಗ ಕಂಡುಕೊಳ್ಳುವ ತುರ್ತಿದೆ ಎಂದು ದಲಿತ ಸಮುದಾಯಗಳ ಪರಿಶಿಷ್ಟರೆಲ್ಲರನ್ನು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭೀಮಬಂಧು ಗೌತಮ್, ಎಡಗೈಯ್ಯಲ್ಲಿ ಸಂವಿಧಾನ ಹಿಡಿದು ಅಧಿಕಾರ ಕೇಂದ್ರಗಳ ಕಡೆಗೆ ತಮ್ಮ ಬಲಗೈ ತೋರುಬೆರಳನ್ನು ತೋರುತ್ತಿರುವ ಅಂಬೇಡ್ಕರ್ ಪುತ್ಥಳಿಯ ಸಾಂಕೇತಿಕ ಅರ್ಥವಿಸ್ತಾರವನ್ನು ಬಿಡಿಸಿ ಹೇಳುತ್ತಾ, ಅಂಬೇಡ್ಕರ್ ಕೊನೆಯ ದಿನಗಳು (ಎ ಲಾಸ್ಟ್ ಫಿವ್ ಯೀಯರ್ಸ್ ಆಫ್ ಅಂಬೇಡ್ಕರ್) ಎಂಬ ಪುಸ್ತಕವನ್ನು ಎಲ್ಲರೂ ಓದಿಕೊಳ್ಳಲೇಬೇಕಾದ ಪ್ರಾಮುಖ್ಯತೆಯನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಾಧ್ಯಕ್ಷ ಶ್ರೀನಿವಾಸ್’ರವರು ಜೈಭೀಮ್ ಛಲವಾದಿ ಮಹಾಸಭಾ ಸ್ಥಾಪಿಸಿದ ಧ್ಯೇಯೋದ್ದೇಶ ಮತ್ತು ಅದನ್ನು ಸಾಕಾರಗೊಳಿಸಲು ಗೊತ್ತು ಮಾಡಿಕೊಂಡಿರುವ ಗುರಿಗಳನ್ನು ಸಭೆಯಲ್ಲಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಜೈಭೀಮ್ ಛಲವಾದಿ ಮಹಾಸಭಾ ತಾಲ್ಲೂಕು ಶಾಖೆಗೆ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಮಾಡಲಾಯ್ತು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೈಭೀಮ್ ಛಲವಾದಿ ಮಹಾಸಭಾ ಶಾಖೆಯ ಗೌರವಾಧ್ಯಕ್ಷರಾಗಿ ಅಗಸರಹಳ್ಳಿ ನರಸಿಂಹಮೂರ್ತಿ, ಅಧ್ಯಕ್ಷರಾಗಿ ಆನಂದ್ ಬಿ ಆಶ್ರಿಹಾಲ್, ಕಾರ್ಯದರ್ಶಿಯಾಗಿ ಜಿ ಮಂಜುನಾಥ್’ರವರನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಜೈಭೀಮ್ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಶ್ರೀನಿವಾಸ್ ಎಮ್, ಯುವ ಘಟಕದ ಅಧ್ಯಕ್ಷ ಆನಂದ್ ಕೆ ಸಿ, ತುಮಕೂರು ಜಿಲ್ಲಾಧ್ಯಕ್ಷ ನರಸಿಂಹ ಮೂರ್ತಿ, ಹಾಗೂ ಮುಖಂಡ ಕೇಶವರ್ಧನ್ ಮತ್ತು ತಾಲ್ಲೂಕು ಪದಾಧಿಕಾರಿಗಳು, ಸಮುದಾಯದ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಹದಾರಿ ಇಲ್ಲದೆ ಮರದ ದಿಮ್ಮಿ ಸಾಗಾಣಿಕೆ ; ವಾಹನ ಜಪ್ತಿ

0

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ-ಶೆಟ್ಟಿಕೆರೆ ಸರ್ಕಾರಿ ರಸ್ತೆಯ ಮಾರ್ಗಮಧ್ಯದಲ್ಲಿರುವ ಕೇದಿಗೆಹಳ್ಳಿ ಬಳಿ ಅರಣ್ಯ ಇಲಾಖೆಯ ರಹದಾರಿ ಇಲ್ಲದೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಮಾಲುಸಮೇತ ಅರಣ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ದುಗಡೀಹಳ್ಳಿ ಗ್ರಾಮವಾಸಿ ಚಿಕ್ಕನರಸಯ್ಯ ಬಿನ್ ಕೆಂಪಯ್ಯ (45) ಚಲಾಯಿಸುತ್ತಿದ್ದ ಕೆಎ-44-ಎಮ್-5578 ನಂಬರಿನ ಟ್ರಾಕ್ಟರ್ ಸರಕು ಸಾಗಣೆ ವಾಹನದಲ್ಲಿ 08 ತೇಗ, 03 ಹಲಸು ಹಾಗೂ 07 ಮಾವಿನ ಮರದ ದಿಮ್ಮಿಗಳು ಸೇರಿ ಒಟ್ಟು 18 ಮರದ ದಿಮ್ಮಿಗಳು ಮತ್ತು 13 ತೇಗದ ಮರದ ಪೋಲ್’ಗಳನ್ನು ಸಾಗಿಸಲಾಗುತ್ತಿತ್ತು. ಸುದ್ದಿ ತಿಳಿದ ಉಪ-ವಲಯ ಅರಣ್ಯಾಧಿಕಾರಿ ಟಿ ಡಿ ಗೌರಿಶಂಕರ್’ರವರು ವಲಯ ಅರಣ್ಯಾಧಿಕಾರಿ ಸಿ ಆರ್ ಅರುಣ್’ರವರ ಮಾರ್ಗದರ್ಶನದಲ್ಲಿ ಬಿ ಕೆ ದಿಲೀಪ್, ಹೆಚ್ ಕೆ ಶಿವಕುಮಾರ್ ಹಾಗೂ ಗಸ್ತು ಅರಣ್ಯ ಪಾಲಕರು ಮತ್ತು ಅರಣ್ಯ ವೀಕ್ಷಕ ಡಿ ಎಸ್ ಪುನೀತ್’ರವರನ್ನು ಒಳಗೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಚಿಕ್ಕನಾಯಕನಹಳ್ಳಿ-ಶೆಟ್ಟಿಕೆರೆ ಸರ್ಕಾರಿ ರಸ್ತೆಯಲ್ಲಿನ ಕೇದಿಗೆಹಳ್ಳಿ ಬಳಿ ಟ್ರಾಕ್ಟರ್ ತಡೆದು ತಪಾಸಣೆ ನಡೆಸಿದ್ದಾರೆ. ಆಗ ಅರಣ್ಯ ಇಲಾಖೆಯ ರಹದಾರಿ ಇಲ್ಲದೆ ಮರದ ದಿಮ್ಮಿಗಳನ್ನು ಟ್ರಾಕ್ಟರ್’ನಲ್ಲಿ ಸಾಗಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಟ್ರಾಕ್ಟರ್ ಸರಕು ಸಾಗಣೆ ವಾಹನ ಹಾಗೂ ಅದರ ಚಾಲಕ ಚಿಕ್ಕನರಸಯ್ಯರನ್ನು ವಶಕ್ಕೆ ಪಡೆದ ಅಧಿಕಾರಿಗಳು, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ವಲಯ ಕಚೇರಿಯಲ್ಲಿ ಅರಣ್ಯ ಸಂರಕ್ಷಣೆ ಕಾನೂನಿನ್ವಯ ಮೊಕದ್ದಮೆ ಸಂಖ್ಯೆ 10/2024-25 ನ್ನು ದಿನಾಂಕ.22.09.2024ರಂದು ದಾಖಲಿಸಿದ್ದಾರೆ.

ಸದರಿ ಪ್ರಕರಣದಲ್ಲಿ ಅಮಾನತ್ತು ಮಾಡಿಕೊಳ್ಳಲಾಗಿರುವ ಸ್ವತ್ತಿನ ಮೌಲ್ಯ ಸರ್ಕಾರದ ಟೆಂಕಿ ತೀರುವಳಿ ದರದಂತೆ, 1ಲಕ್ಷ ರೂಪಾಯಿಗಳಿಗೂ ಹೆಚ್ಚಿನದ್ದು ಎಂದು ಅಂದಾಜಿಸಲಾಗಿದೆ.

ರಾಗಿ ಬೆಳೆ ರಕ್ಷಣೆಗೆ ಪ್ರಾಮುಖ್ಯತೆ ; ಶಿವರಾಜಕುಮಾರ್

0

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನಲ್ಲಿ ಪ್ರಸ್ತುತ ಬಂದೊದಗಿರುವ ಮಳೆ ಕೊರತೆಯಿಂದ ಈ ಸಾಲಿನ ರಾಗಿ ಬೆಳೆಗೆ ಉಂಟಾಗಿರುವ ಪ್ರತಿಕೂಲ ಪರಿಣಾಮ ತಡೆಯಲು ರೈತರಿಗೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ಕೆಲವು ಸಲಹೆಗಳನ್ನು ನೀಡಿದರು.

ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಉದ್ದೇಶಿತ ಗುರಿಯನ್ನು ಮೀರಿ ತಾಲ್ಲೂಕಿನ ರೈತರು 31500 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಿದ್ದಾರೆ. ಆಗಸ್ಟ್ ತಿಂಗಳಿಂದಲೇ ಮಳೆ ಕಡಿಮೆಯಾಗುತ್ತಾ ಬಂದಿತ್ತು. ಪ್ರಸ್ತುತ ಬೆಳೆಯು 45 ದಿನದ ಹಂತದಲ್ಲಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾಗದೆ ಇರುವುದು ಚಿಂತೆಗೆ ಕಾರಣವಾಗಿದೆ.

ಅದೇರೀತಿ ಕಳೆದ ಎರಡು ವಾರಗಳಲ್ಲಿ ಮಳೆ ಕೈಕೊಟ್ಟ ಪರಿಣಾಮವಾಗಿ ಬಿತ್ತಿರುವ ರಾಗಿ ಸೇರಿದಂತೆ ಹಲವು ಬೆಳೆಗಳಿಗೆ ತೇವಾಂಶದ ಕೊರತೆ ಉಂಟಾಗಿದೆ. ಇದರಿಂದ ಬೆಳೆಗಳು ಒಣಗತೊಡಗಿವೆ. ಬೆಳೆ ಒಣಗದಂತೆ ತಡೆಯಲು ತುಂತುರು ನೀರಾವರಿ ಮೂಲಕ ನೀರನ್ನು ಹಾಯಿಸಿ ಬೆಳೆ ಹಾಳಾಗುವುದನ್ನು ರೈತರು ತಡೆಯಬಹುದಾಗಿದೆ.

ಕಳೆದ ಸಾಲಿನಲ್ಲಿ 6150 ಸೂಕ್ಷ್ಮ ನೀರಾವರಿ ಘಟಕಗಳನ್ನು ಇಲಾಖೆಯಿಂದ ರೈತರಿಗೆ ವಿತರಿಸಲಾಗಿದೆ. ಅವನ್ನು ರೈತರು ಈಗ ಸಮರ್ಪಕವಾಗಿ ಬಳಸಬಹುದು. ಕೃಷಿ ಹೊಂಡಗಳಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡಿದ್ದರೆ ಡೀಸೆಲ್ ಇಂಜಿನ್ ಸಹಾಯದಿಂದ ಆ ನೀರನ್ನು ಸೆಳೆದು ತುಂತುರು ನೀರಾವರಿ ಮೂಲಕ ಬೆಳೆಗಳಿಗೆ ನೀರುಣಿಸಿಕೊಂಡು ತೇವಾಂಶವನ್ನು ಕಾಪಾಡಿಕೊಳ್ಳಬೇಕು. ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಕೃಷಿಯಲ್ಲಿ ತುಂತುರು ಅಥವಾ ಹನಿ ನೀರಾವರಿ ವಿಧಾನಗಳನ್ನು ಬಳಸುವ ವಿಧಾನಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಸಹಾಯಕ್ಕಾಗಿ, ಘಟಕದ ಅವಶ್ಯಕತೆ ಇರುವವರು ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿದರೆ ಒಂದು ವಾರದೊಳಗೆ ಅದನ್ನು ವಿತರಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ರೈತನ ಅನುಭವ :
ದೊಡ್ಡೆಣ್ಣೆಗೆರೆ ರಮೇಶ್ ಎಂಬ ರೈತರ ಪ್ರಕಾರ ಆರಂಭದಲ್ಲಿ ಸುರಿದ ಮಳೆಯ ನಂತರ ಬಿಸಿಲಿನ ಪ್ರಕೋಪ ಹೆಚ್ಚಳ ಕಂಡಿದೆ. ಅದರಿಂದಾಗಿ ರಾಗಿ ಬೆಳೆಗೆ ನೀರು ಹರಿಸುವ ಅನಿವಾರ್ಯತೆಗೆ ರೈತರು ಸಿಲುಕಿದ್ದಾರೆ. ಅಂತೆಯೇ ತುಂತುರು ನೀರಾವರಿ ಘಟಕವನ್ನು ಕೃಷಿ ಇಲಾಖೆ ಸಹಾಯಧನದ ಅಡಿಯಲ್ಲಿ ಪಡೆದಿದ್ದು ನೀರನ್ನು ಇದರ ಮೂಲಕ ರಾಗಿ ಬೆಳೆಗೆ ಹರಿಸಿ ಬೆಳೆ ಸಂರಕ್ಷಣೆ ಮಾಡಿಕೊಂಡಿದ್ದೇನೆ. ತಾಲ್ಲೂಕಿನ ರೈತರು ಈ ಬಗೆಯಲ್ಲಿ ತಮ್ಮ ಬೆಳೆಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂದು ರೈತ ರಮೇಶ್ ತಮ್ಮ ಅನುಭವದ ಆಧಾರದಲ್ಲಿ ಸಲಹೆ ನೀಡಿದ್ದಾರೆ.

ಭರವಸೆಯ ಕ್ರೀಡಾಪಟು ; ಪ್ರಜ್ವಲ್ ಹೆಚ್

0

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಬೆಳಗುಲಿಯ ರಂಗನಾಥ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಜ್ವಲ್ ಎಚ್ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಎಸೆತ ಮತ್ತು ಚಕ್ರ ಎಸೆತದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆದು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಈ ವಿದ್ಯಾರ್ಥಿಗೆ ಶಾಲೆಯ ಸಹಪಾಠಿಗಳು, ಶಾಲೆಯ ಶಿಕ್ಷಕ ವೃಂದ ಹಾಗೂ ಬೆಳಗುಲಿ ಗ್ರಾಮಸ್ಥರು ಅಭಿನಂದಿಸಿದರು.

_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ರಾಸುಗಳ ಆಧುನಿಕ ಲಾಲನೆ-ಪಾಲನೆಯಿಂದ ಲಾಭದಾಯಕ ಹೈನುಗಾರಿಕೆ ;             ಡಾ. ರೆ ಮಾ ನಾಗಭೂಷಣ್

0

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಕುಪ್ಪೂರು, ಮಲ್ಲೇನಹಳ್ಳಿ, ಬೇವಿನಹಳ್ಳಿ ಹಾಗೂ ಬೇವಿನಹಳ್ಳಿ-ಗೊಲ್ಲರಹಟ್ಟಿ ಗ್ರಾಮಗಳಲ್ಲಿ ‘ಕರುಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕರುಣಾ’ ಅಭಿಯಾನವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೂ ಮೊದಲೇ ಈಯೆಲ್ಲ ಗ್ರಾಮಗಳಲ್ಲಿ ಇಲಾಖೆಯ ಕರುಣಾ- ಅಭಿಯಾನದ ಬಗ್ಗೆ ವ್ಯಾಪಕವಾದ ಪ್ರಚಾರ ನಡೆಸಲಾಗಿತ್ತು. ಇದರಿಂದ, ಸಮಯಕ್ಕೆ ಸರಿಯಾಗಿ ನೂರಾರು ಮಂದಿ ಪಶುಪಾಲಕ-ರೈತರು ತಮ್ಮ ರಾಸುಗಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು.

ಕರುಣಾ ಅಭಿಯಾನದ ಅಂಗವಾಗಿ ಈಯೆಲ್ಲ ಗ್ರಾಮಗಳ 75 ಕರುಗಳಿಗೆ ಸಮಗ್ರ ಚಿಕಿತ್ಸೆಯನ್ನು ನೀಡಲಾಯಿತು. ಎಲ್ಲ ಜಾತಿ-ಪ್ರಬೇಧದ ಕರುಗಳ ಸಮಗ್ರವಾದ ಪರೀಕ್ಷೆ ನಡೆಸಿ, ಅಗತ್ಯ ಚಿಕಿತ್ಸೆ ನೀಡಲಾಯಿತು. ಕರುಗಳಿಗೆ ಜಂತುನಾಶಕ ಔಷಧಿಗಳನ್ನು ಕುಡಿಸಿ, ಅವುಗಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾದ ಚುಚ್ಚುಮದ್ದುಗಳನ್ನು ನೀಡಿ, ರೋಗನಿರೋಧಕ ಲಸಿಕೆಗಳನ್ನೂ ನೀಡಲಾಯಿತು. ಅವುಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ಮಾತ್ರೆ ಮತ್ತು ಟಾನಿಕ್ಕುಗಳನ್ನು ಪಾಲಕರಿಗೆ ವಿತರಿಸಿ, ಅವನ್ನು ಕರುಗಳಿಗೆ ನೀಡಬೇಕಾದ ವಿಧಾನಗಳನ್ನು ತಿಳಿಸಿಕೊಡಲಾಯಿತು.

ಈ ಸಂದರ್ಭದಲ್ಲಿ, ಪಶು ಸಹಾಯಕ ನಿರ್ದೇಶಕ ಡಾ. ರೆ ಮಾ ನಾಗಭೂಷಣ್, ಆಧುನಿಕ ಮತ್ತು ಲಾಭದಾಯಕ ವಿಧಾನಗಳ ಮೂಲಕ ಕರುಸಾಕಣೆ ಮತ್ತು ಪಶುಪಾಲನೆಗೆ ಕೈಗೊಳ್ಳಬೇಕಾದ ಅಗತ್ಯಗಳ ಕುರಿತಾಗಿ ಮಾಹಿತಿ ನೀಡಿ, ರೈತರೊಂದಿಗೆ ಮಾತುಕತೆ ನಡೆಸಿದರು. ಕರುಗಳ ಲಾಲನೆ-ಪಾಲನೆ , ಒಂದು ವರ್ಷದೊಳಗೆ ಕರು ಬೆದೆಗೆ ಬರುವಂತೆ ಮಾಡಲು ಅನುಸರಿಸಬೇಕಾದ ಅಂಶಗಳು, ಕೃತಕ ಗರ್ಭಧಾರಣೆಯ ಸಾಧಕ-ಬಾಧಕಗಳು, ಗರ್ಭ ಧರಿಸಿದ ರಾಸುಗಳ ಪಾಲನೆ-ಪೋಷಣೆ, ಒಣಮೇವು ಪೌಷ್ಠೀಕರಣ, ರಸಮೇವು ತಯಾರಿಕೆ, ಮೇವಿನ ಬೆಳೆಗಳ ಪ್ರಾಮುಖ್ಯತೆ, ಲಸಿಕೆಗಳ ಮಹತ್ವ, ಆಧುನಿಕ ಮತ್ತು ಲಾಭದಾಯಕ ಹೈನುಗಾರಿಕೆಯ ಪ್ರಮುಖ ತತ್ವಗಳು, ರೋಗಗಳ ನಿಯಂತ್ರಣ, ಕಂದು ರೋಗದ ಲಸಿಕೆ, ಚರ್ಮ ಗಂಟಿಕ್ಕುವ ರೋಗದ ಲಸಿಕೆ, ಕಾಲುಬಾಯಿ ಜ್ವರದ ಲಸಿಕೆಗಳನ್ನು ಸಕಾಲದಲ್ಲಿ ರಾಸುಗಳಿಗೆ ಹಾಕಿಸುವುದರ ಮಹತ್ವಗಳ ಬಗ್ಗೆ ರೈತರಿಗೆ ಅವರು ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಕುಪ್ಪೂರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶು ಪರೀಕ್ಷಕರಾದ ಬಸವರಾಜು, ಕಿರಿಯ ಪಶು ಪರೀಕ್ಷಕ ಮನೋಜ್, ಸಹಸಿಬ್ಬಂದಿ ಅತಾಉಲ್ಲಾ, ದಯಾನಂದ್ ಮತ್ತು ಕುಪ್ಪೂರು ಗ್ರಾಮ ಪಂಚಾಯತಿಯ ಪಶು ಸಖಿ ಆಶಾ ಹಾಜರಿದ್ದರು.

___ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಕುಲಾಂತರಿ ತಳಿ: ತಿಪಟೂರಿನಲ್ಲಿ ಬಿಸಿಬಿಸಿ ಚರ್ಚೆ

0

ತಿಪಟೂರು:  ಬೇಸಾಯ ಕ್ಷೇತ್ರಕ್ಕೆ ಕೇವಲ ಹುಸಿ ಭರವಸೆಯನ್ನು ಅಷ್ಟೇ ಕೊಡುತ್ತಿರುವುದು. ಇಡೀ ಕೃಷಿ ವ್ಯವಸ್ಥೆಯನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಸಂಚನ್ನು ಈ ತಂತ್ರಜ್ಞಾನ ಮತ್ತು ಅದನ್ನು ಹೊಂದಿರುವವರ ಉದ್ದೇಶ ಎಂದು ರಮೇಶ್ ದೇವನಹಳ್ಳಿ ತಿಳಿಸಿದರು.


ತಿಪಟೂರಿನ ರೋಟರಿ ಭವನದಲ್ಲಿ ಸೆಪ್ಟಂಬರ್ ೨೧ರಂದು ಕುಲಾಂತರಿ ಬೆಳೆಗಳು ಮತ್ತು ಆಹಾರ ಕುರಿತು ನಡೆದ ಒಂದು ದಿನದ ಸಮಾಲೋಚನೆಯು ವಿವಿಧ ಸಂಗತಿಗಳ ಕುರಿತು ಚರ್ಚೆ ನಡೆಸಿದ್ದು ,ನಮ್ಮ ಆಹಾರ ಹಾಗೂ ಕೃಷಿ ವ್ಯವಸ್ಥೆಯಲ್ಲಿ ಜೀನ್ ವರ್ಗಾವಣೆ ತಂತ್ರಜ್ಞಾನ ಪರಿಣಾಮದ ಮುನ್ನೆಚ್ಚರಿಕೆ ನೀಡುವ ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ನ್ಯಾಯಪೀಠದ ತೀರ್ಪು ಹಾಗೂ ಆದೇಶಗಳನ್ನು ನಾವು ಗಮನಕ್ಕೆ ತೆಗೆದುಕೊಂಡಿದ್ದೇವೆ ಎಂದರು.


ನಾವು, ತುಮುಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ರೈತ ಹಕ್ಕುಗಳ ಕಾರ್ಯಕರ್ತರು, ವಿವಿಧ ರೀತಿಯ ಬೇಸಾಯ ಪದ್ದತಿ ಮತ್ತು ಅಭ್ಯಾಸಗಳನ್ನು ಅನುಸರಿಸುತ್ತಿರುವ ರೈತರನ್ನು ಪ್ರತಿನಿಧಿಸುತ್ತಿದ್ದೆವೆ. ಕೃಷಿ ಕಾರ್ಮಿಕರು, ಜಾನುವಾರು ಪಾಲಕರು, ಹಿಡುವಳಿದಾರರು, ಮೀನು ಸಾಕಣಿಕೆದಾರರು, ಮಹಿಳಾ ರೈತರು, ಆಹಾರ ಉತ್ಪಾದಕರು, ಗ್ರಾಹಕರು, ಗಿಡಮೂಲಿಕೆ ಪಂಡಿತರು ಮತ್ತು ಜೇನುಸಾಕಣೆದಾರರನ್ನು ನಾವು ಭೇಟಿಯಾಗಿದ್ದೇವೆ ಎಂದರು.


ಕುಲಾಂತರಿ ಬೆಳೆಗಳ ಕುರಿತು ರಾಷ್ಟ್ರೀಯ ನೀತಿಯನ್ನು ರೂಪಿಸಲು ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನ್ಯಾಯಾಲಯವು ಸೂಚಿಸಿದೆ. ರೈತ ಪ್ರತಿನಿಧಿಗಳೂ ಒಳಗೊಂಡಂತೆ ವಿವಿಧ ಭಾಗೀದಾರರನ್ನು ಆಹ್ವಾನಿಸಿ, ನಾರ್ವಜನಿಕ ಸಮಾಲೋಚನೆಯನ್ನು ನಾಲ್ಕು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಅದೇಶ ನೀಡಿದೆ ಎಂದರು.

ನ್ಯಾಯಾಲಯದ ಆದೇಶವನ್ನು ನಾವು ಜಾಗರೂಕತೆಯಿಂದ ಸ್ವಾಗತಿಸುತ್ತೇವೆ.
ಲಂಗುಲಗಾಮು ಇಲ್ಲದೇ ರೂಪಿಸಲಾದ ಹಾಗೂ ಅನಿಯಂತ್ರಿತ ‘ಜೀನ್ ಎಡಿಟಿಂಗ್’ ತಂತ್ರಗಳ ಮೂಲಕ ಜಾರಿಗೆ ತಂದAತಹಕುಲಾಂತರಿ ತಂತ್ರಜ್ಞಾನವು ಭಾರತದಲ್ಲಿ ಇಗಾಗಲೇ ಅಡ್ಡ ಪರಿಣಾಮಗಳನ್ನು ಉಂಟು ಮಾಡಿವೆ ಎಂದು ವೈಜ್ಞಾನಿಕ ಸಂಶೋಧನಾ ಅಧ್ಯಯನ ಪ್ರಬಂಧಗಳು ತೋರಿಸಿವೆ.

ಭಾರತದಲ್ಲಿ ಸರ್ಕಾರಿ ಸಂಶೋಧನಾ ಸಂಸ್ಥೆಗಳು ಹಾಗೂ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಕುಲಾಂತರಿ ತಳಿಗಳು ಸುರಕ್ಷಿತವೆಂದು ಹೇಳಲಿಕ್ಕೆ ಯಾವುದೇ ಗ್ಯಾರಂಟಿಯತು ಇಲ್ಲವೇ ಇಲ್ಲ.
ಒಂದು ವೇಳೆ ಬೃಹತ ಕಾರ್ಪರೇಟ್ ಕಂಪನಿಗಳ ಏಕಸ್ವಾಮ್ಯದಲ್ಲಿರುವ ಭೌತಿಕ ಹಕ್ಕು (ಐಪಿಆರ್)-ಆಧಾರಿತ ಕುಲಾಂತರಿ ಬೆಳೆ ತಂತ್ರಜ್ಞಾನಗಳನ್ನು ಅವಲಂಬಿಸಿದರೆ, ವಿಶಾಲವಾದ ಕೃಷಿ ವ್ಯವಹಾರ ಮೌಲ್ಯಗಳ ಬದಲಾಗಿ ಕಾರ್ಪೊರೇಟ್ ವ್ಯಕ್ತಿಗಳ ಪರವಾಗಿರುವ ಸಂಕೀರ್ಣ ಕಾನೂನುಗಳಿಗೆ ಭಾರತದ ರೈತರು ಬಲವಂತವಾಗಿ ಒಡ್ಡಿಕೊಳ್ಳಬೇಕಾಗುತ್ತದೆ ಎಂಬ ಸಂಶಯ ಉಂಟಾಗುತ್ತಿದೆ. ೮. ಭಾರತದಲ್ಲಿ ಬಿಟಿ ಹತ್ತಿ ಬೆಳೆಯ ವೈಫಲ್ಯದ ಕಥೆಯು ಈ ವಿನಾಶಕಾರಿ ತಂತ್ರಜ್ಞಾನದ ಒಂದು ಶ್ರೇಷ್ಟ ನಿರ್ದೆಶನವಾಗಿದೆ ದೇಶದಲ್ಲಿ ಆಗುತ್ತಿರುವ ರೈತರ ಆತ್ಮಹತ್ಯೆಗಳಲ್ಲಿ ಹೆಚ್ಚಿನದಾಗಿ ಬಿ.ಟಿ ಹತ್ತಿ ಬೆಳೆಯುವ ರೈತರುಗಳಾಗಿದ್ದು ಎಂದು ಕೂಡಾ ಭಾರತ ಸರ್ಕಾರವು ಸ್ವತಃ ನ್ಯಾಯಾಲದಲ್ಲಿ ಅಫಿಡವಿಟ್ ನಲ್ಲಿ ತಿಳಿಸಿರುವುದು ಈ ಕುಲಾಂತರಿ ಬೆಳೆಯ ಅವಾಂತರಗಳನ್ನು ತಿಳಿಸುತ್ತದೆ.


ಅಚ್ಚರಿಯ ವಿಷಯವೆಂದರೆ, ಭಾರತ ಒಕ್ಕೂಟ ಸರ್ಕಾರವು ಒಂದೆಡೆ ನೈಸರ್ಗಿಕ ಅಥವಾ ಸಾವಯವ ಕೃಷಿಯನ್ನು ಉತ್ತೇಜಿಸುವ ಬಗ್ಗೆ ಘಂಟಾಘೋಷದಿಂದ ಮಾತಾಡುತ್ತಿದ್ದರೆ, ಇನ್ನೊಂದೆಡೆ ಕುಲಾಂತರಿ ತಳಿಗಳ ಬಗ್ಗೆ ಕದ್ದು ಮುಚ್ಚಿ ಒಲವು ತೋರುತ್ತಿದೆ. ಇದು ನೀತಿ ನಿರೂಪಣೆಯಲ್ಲಿನ ವೈರುಧ್ಯ!
ಕರ್ನಾಟಕ ರಾಜ್ಯ ರೈತ ಸಂಘದ ಅದ್ಯಕ್ಷ ಮಂಡಳಿಯ ಸದಸ್ಯರಾದ ಕೆ.ಟಿ ಗಂಗಾಧರ್ ಮಾತನಾಡಿ ನಾವು ಧೃಡ ನಿಶ್ಚಯದಿಂದ ತಿಳಿಸುವುದೇನೆಂದರೆ ಸದರಿ ರಾಷ್ಟ್ರೀಯ ನೀತಿ-ಕಾನೂನು ರೂಪಿಸುವ ಮೊದಲು ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ದೇಶದಲ್ಲಿ ವ್ಯಾಪಕವಾದ ಮತ್ತು ನಂಬಿಕಾರ್ಹ ವಿಧಾನದ ಮೂಲಕ ಪ್ರಜಾತಾಂತ್ರಿಕವಾದ ಸಮಾಲೋಚನೆ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ;ಈ ಸಮಾಲೋಚನೆಗಳಲ್ಲಿ ರಾಜ್ಯ ಸರ್ಕಾರಗಳು ಯಾವುದೇ ರೀತಿಯ ಒತ್ತಡಕ್ಕೆ ಮಣಿದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ;


ಭಾರತ ಸರಕಾರವು ಇಗಾಗಲೇ ದೇಶದ ರೈತರ ಮೇಲೆ ಹೇರಿರುವ ತೀವ್ರ ಕೃಷಿ/ಕೈಗಾರಿಕೆ ಕೃಷಿ ಮಾದರಿಯ ನಕಾರತ್ಮಕ ಪರಿಣಾಮಗಳು ಮತ್ತು ಅದರ ಬಿಕ್ಕಟ್ಟುಗಳ ಬಗ್ಗೆ ಮೊದಲು ಪರಿಹರಿಸುವಂತೆ ಮಾಡುತ್ತೇವೆ.ಸ್ವಾಯತ್ತ ಕೃಷಿ-ಜೀವಾವರಣದ ಅರಿವಿನ ಮೂಲಕ ಹೊಸ ಮಾರ್ಗವನ್ನು ರೂಪಿಸುತ್ತೇವೆ, ನಮ್ಮ ಕೃಷಿ ಕಸುಬಿಗೆ ಹೆಚ್ಚಿನ ಅಪಾಯಕಾರಿ ತಂತ್ರಜ್ಞಾನಗಳನ್ನು ಸೇರಿಸದಂತೆ ನೋಡಿಕೊಳ್ಳುತ್ತೇವೆ. ಹಾಗೂ ದೇಶಿ ಬೀಜಗಳು ಮತ್ತು ಅನುವಂಶಿಕ ತತ್ವಾಂಶಗಳ ಮೇಲೆ ಕಾರ್ಪೊರೇಟ್ ನಿಯಂತ್ರಣವು ಬೌದ್ಧಿಕ ಸೊತ್ತಿನ ಹಕ್ಕುಗಳ ಮೂಲಕ ನೆಡೆಯದಂತೆ ನೋಡಿಕೊಳ್ಳುತ್ತೇವೆ.


ಇದೇ ಸಂದರ್ಭದಲ್ಲಿ ಕ.ರಾ.ರೈ.ಸ, ಹಸಿರು ಸೇನೆ, ಸಾವಯವ ಕೃಷಿ ಪರಿಹಾರ, ಜೇನುಸಾಕಣಿಕೆದಾರ ಸಂಘ, ಸೌಹಾರ್ದ ತಿಪಟೂರು, ಕನ್ನಡ ರಕ್ಷಣಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಗ್ರಾಹಕ ಹಕ್ಕುಗಳ ಸಮಿತಿ, ನಿವೃತ್ತ ನೌಕರರ ಸಂಘ ಮತ್ತಿತರ ರಾಜ್ಯ ಮತ್ತು ತಾಲೂಕಿನ ಸಂಘಟನೆಯ ಸದಸ್ಯರುಗಳು ಭಾಗವಹಿಸಿದ್ದರು.

ಪವತಿ ಖಾತೆ ಆಂದೋಲನ

0

ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಇದೇ 21.09.2024 ರಿಂದ 20.10.2024 ವರೆಗೆ ಪವತಿ ಖಾತೆ ಆಂದೋಲನ ನಡೆಯುತ್ತಿದೆ. ಜಿಲ್ಲಾಧಿಕಾರಿಗಳ ಆದೇಶಪತ್ರದ ಉಲೇಖ ರೀತ್ಯಾ ತಾಲ್ಲೂಕು ಆಡಳಿತ ಈ ಪವತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ.

ತಾಲ್ಲೂಕಿನ ಎಲ್ಲ ಗ್ರಾಮಗಳ ರೈತರು, ಅಗತ್ಯ ದಾಖಲೆಗಳೊಂದಿಗೆ ತಮ್ಮ ವೃತ್ತ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ, ಈ ಪವತಿ ಖಾತೆ ಆಂದೋಲನದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಹಸೀಲ್ದಾರ್’ರವರ ಕಾರ್ಯಾಲಯ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.