Sunday, March 15, 2026
Google search engine
Home Blog Page 93

ಮರಳೂರು ಕೆರೆ ಏರಿಯ ರಸ್ತೆ ಬಿರುಕು; ಸವಾರರಲ್ಲಿ ಮೂಡಿದ ಆತಂಕ

ತುಮಕೂರು: ಜಿಲ್ಲೆಯಲ್ಲಿ‌ ಸುರಿಯುತ್ತಿರುವ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದರೆ,ಇತ್ತ ಜಿಲ್ಲಾಡಳಿತ ಸಂತ್ರಸ್ತರ ನೆರವಿಗೆ ನಿರಂತರವಾಗಿ ಶ್ರಮಿಸುತ್ತಿದೆ.

ಈಗ ಮರಳೂರು ಕೆರೆಯೂ ತುಂಬಿ ಕೋಡಿ ಹರಿಯುತ್ತಿದ್ದು, ಕೆರೆ ಏರಿ ಮೇಲಿನ ರಸ್ತೆಯಲ್ಲಿ ಅಲ್ಲಲ್ಲಿ ಬಿರುಕು ಪುಟ್ಟ ಪುಟ್ಟ ಬಿರುಕು ಕಾಣಿಸಿಕೊಳ್ಳುತ್ತಿರುವುದು ಆತಂಕ್ಕೆ ಕಾರಣವಾಗಿದೆ.

ಬಿರುಕುಗಳು ರಸ್ತೆಯುದ್ದಕ್ಕೂ ಕಾಣಿಸಿಕೊಂಡಿರುವುದರಿಂದ ವಾಹನ ಸವಾರರು ಈಗ ಭಯದಿಂದಲೇ‌ ಸಾಗುವಂತಾಗಿದೆ. ಜಿಲ್ಲಾಡಳಿತ ಇತ್ತ ಕಡೆಯೂ ಲಕ್ಷ್ಯ ವಹಿಸಬೇಕಿದೆ.

ಮಳೆಯಿಂದ  ಒಂದಾದನಂತರ ಮತ್ತೊಂದು ಅವಘಡಗಳು, ಅನಾಹುತಗಳು ಸಂಭವಿಸುತ್ತಿರುವನ್ನು ನೋಡಿದರೆ ಜನರೂ ಜಾಗರೂಕತೆಯಿಂದ ಇರುವುದು ಅವಶ್ಯವಾಗಿದೆ.

ನೀರಿನಲ್ಲಿ ಕೊಚ್ಚಿ ಹೋದ ಕಾರು; ಒಬ್ಬರು ಪತ್ತೆ ಮತ್ತೊಬ್ಬರು ನಾಪತ್ತೆ

0

Publicstory/prajayoga

ತುರುವೇಕೆರೆ : ತಾಲೂಕಿನ ಕೊಂಡಜ್ಜಿ -ಸೊಪ್ಪನಹಳ್ಳಿ ನಡುವಿನ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಸಾಗುತ್ತಿದ್ದ ಕಾರೊಂದು ಕೊಚ್ಚಿಹೋದ ಘಟನೆ ನಿನ್ನೆ ನಡೆದಿದೆ.
ಕಾರಿನಲ್ಲಿದ್ದ ಇಬ್ಬರ ಪೈಕಿ ಒಬ್ಬರು ಕಾರಿನ ಜೊತೆಗೆ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮತ್ತೊಬ್ಬರು ಪತ್ತೆಯಾಗಿದ್ದಾರೆ.

ತಿಪಟೂರು ತಾಲೂಕಿನ ಗಡಬನಹಳ್ಳಿ ವಾಸಿಗಳಾದ ಪುಟ್ಟಸಿದ್ದಯ್ಯ(65) ಹಾಗೂ ಪಟೇಲ್ ಕುಮಾರಸ್ವಾಮಿ (68) ಎಂಬುವರು ಮದುವೆ ಕಾರ್ಯ ನಿಮಿತ್ತ ಕೊಂಡಜ್ಜಿ ಮಾರ್ಗದ ಸೇತುವೆ ಮೂಲಕ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರು ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಕಂಡ ದಾರಿ ಹೋಕರು ಪುಟ್ಟಸಿದ್ದಯ್ಯ ನನ್ನು ರಕ್ಷಿಸಿದ್ದಾರೆ.

ಘಟನೆಯ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಕತ್ತಲು ಹಾಗೂ ಎಡೆಬಿಡದೇ ಸುರಿಯುತ್ತಿರುವ ಮಳೆಯ ನಡುವೆ ಶೋಧ ಕಾರ್ಯ ನಡೆಸುವುದು ಸವಾಲಾಗಿದೆ ಸ್ಥಳೀಯರಾದ ಕೊಂಡಜ್ಜಿ ವಿಶ್ವನಾಥ್ ತಿಳಿಸಿದ್ದಾರೆ.

ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚನೆ : ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ

Publicstory/prajayoga

ಮಳೆಹಾನಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣಾ ಕಾರ್ಯ

ಶಿರಾ: ತಾಲೂಕಿನಲ್ಲಿ ಇನ್ನೂ 10 ದಿನಗಳ ಕಾಲ ಮಳೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಜಾಗೃತೆಯಿಂದ ಇರಬೇಕು. ಗ್ರಾಮ ಪಂಚಾಯಿತಿಗಂದ ಜನರಲ್ಲಿ ಜಾಗೃತಿ ಮೂಡಿಸಬೇಕ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಎಂದು ಸೂಚಿಸಿದರು.

ಅವರು ನಗರದ ಮಿನಿ ವಿಧಾನಸೌಧದಲ್ಲಿ ಮಳೆ ಹಾನಿ ಬಗ್ಗೆ ಹಾಗೂ ಮುಂಜಾಗ್ರತೆ ತೆಗೆದುಕೊಳ್ಳುವ ಬಗ್ಗೆ ಬುಧವಾರ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಮಳೆ ಹಾನಿಯಿಂದ ಬಹುತೇಕ ಭಾಗದ ತಗ್ಗು ಪ್ರದೇಶಗಳಲ್ಲಿ, ವಸತಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕೃಷಿಕರಿಗೆ ಕೃಷಿ ಚಟುವಟಿಕೆಗಳ ಜಮೀನಿನಲ್ಲಿ ಹೆಚ್ಚು ನೀರು ನುಗ್ಗಿ ಬೆಳೆಗಳು ಹಾನಿಯಾಗಿವೆ. ದಾವೂದ್ ಪಾಳ್ಯದ ಶಿಕ್ಷಕರು ನೀರಿನ ರಭರಸಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ. ಆದ್ದರಿಂದ ಎಲ್ಲಾ ಅಂಶಗಳನ್ನು ಪರಿಗಣಿಸಿ ತಾಲೂಕು ಆಡಳಿತದಿಂದ ಎಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿದೆ. ಗ್ರಾಮ ಪಂಚಾಯಿತಿಗಳಲ್ಲಿ ಸಂಬಂಧಪಟ್ಟ ಪಿಡಿಓಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಯಾರೂ ಸಹ ಜಾನುವಾರುಗಳನ್ನು ಮೈತೊಳೆಯಲು ನೀರಿಗಿಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ತಹಶೀಲ್ದಾರ್ ಮಮತ ಮಾತನಾಡಿ, ಶಿರಾ ತಾಲೂಕಿನಲ್ಲಿ ಜುಲೈ 30 ರಿಂದ ಹೆಚ್ಚು ಮಳೆಯಾಗಿದ್ದು,  ಕೋಡಿ ಹರಿದಿರುವ ಎಲ್ಲಾ ಕೆರೆಗಳ ವಿಕ್ಷಣೆ ಮಾಡಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಕಸಬಾ ಹೋಬಳಿಯಲ್ಲಿ 26 ಮನೆಗಳು, ಹುಲಿಕುಂಟೆ 10 ಮನೆಗಳು, ಗೌಡಗೆರೆ 4 ಮನೆಗಳು, ಬುಕ್ಕಾಪಟ್ಟಣ 5 ಮನೆಗಳು, ಕಳ್ಳಂಬೆಳ್ಳದಲ್ಲಿ 5 ಮನೆಗಳಿಗೆ ಹಾನಿಯಾಗಿದ್ದು, ಸಂಬಂಧಪಟ್ಟವರಿಗೆ ಪರಿಹಾರ ಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಎಂ. ದಾಸರಹಳ್ಳಿ ಗ್ರಾಮದಲ್ಲಿ 3 ಮನೆಗಳಿಗೆ ನೀರು ನುಗ್ಗಿದ್ದು, ಅವರಿಗೆ ತಾತ್ಕಾಲಿಕವಾಗಿ ಸರ್ಕಾರಿ ಶಾಲೆಗೆ ಸ್ಥಳಾಂತರ ಮಾಡಲಾಗಿದೆ. ಚನ್ನನಕುಂಟೆ, ಕೋಟೆ, ಚಿಕ್ಕನಹಳ್ಳಿ, ಇನಕನಹಳ್ಳಿ ಗ್ರಾಮಗಳಿಗೆ ಹೋಗುವಾಗ ಸೇತುವೆಗಳ ಮೇಲೆ ಸಂಚರಿಸಬೇಕಿದ್ದು, ಅಂತಹ ಕಡೆಗಳಲ್ಲಿ ಎಚ್ಚರಿಕೆಯ ನಾಮಫಲಕ ಹಾಗೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಓಗಳು ಮುನ್ನೆಚ್ಚರಿಕೆ ಕ್ರಮವಾಗಿ ಜನರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ತಾಲೂಕಿನ ದಾವೂದ್ ಪಾಳ್ಯ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕರಾದ ಆರೀಫ್ ಉಲ್ಲಾ ಖಾನ್ ಅವರು ಮಂಗಳವಾರ ಚನ್ನನಕುಂಟೆ ಸೇತುವೆ ದಾಟುತ್ತಿದ್ದ ವೇಳೆ ನೀರಿನ ರಭಸಕ್ಕೆ ಸಿಕ್ಕಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹಾಗೂ ತಹಶೀಲ್ದಾರ್ ಮಮತ ಅವರು 5. ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದರು.

ಸಭೆಯಲ್ಲಿ ಡಿವೈಎಸ್‌ಪಿ ನವೀನ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅನಂತರಾಜು, ಸಹಾಯಕ ಕೃಷಿ ನಿರ್ದೇಶಕ ಆರ್.ರಂಗನಾಥ್, ನಗರ ಸಿಪಿಐ ಹನುಮಂತಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು

ಸಿದ್ಧರಾಮನ ಹುಂಡಿ ಎಕ್ಸ್ ಪ್ರೆಸ್..?’

ಜಿ ಎನ್ ಮೋಹನ್

ಹುಟ್ಟುಹಬ್ಬಕ್ಕೆ ಶುಭಾಶಯ ಸಲ್ಲಿಸುತ್ತಾ
ಸಿದ್ದರಾಮಯ್ಯನವರ ಬಗ್ಗೆ ಈ ಹಿಂದೆ ಬರೆದ ಬರಹ

‘ಹೇಗಿದ್ದೀರಿ

ಸಿದ್ಧರಾಮನ ಹುಂಡಿ ಎಕ್ಸ್ ಪ್ರೆಸ್..?’

ಬಾಗಿಲು ತಟ್ಟಿದ ಸದ್ದಾಯಿತು

ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಗಲ ಗಲ ಮಾತನಾಡುತ್ತಿದ್ದ ನಾನು ಒಂದೇ ಏಟಿಗೆ ಹಾರಿ ಬಾಗಿಲು ತೆಗೆದೆ .

ಒಂದು ಕ್ಷಣ ನಾನು ಮಾತಿಲ್ಲದೆ ನಿಂತೆ.

ಬಾಗಿಲು ಬಡಿದದ್ದು ಇನ್ನಾರೂ ಅಲ್ಲ. ಅದೇ ಪಂಚೆ, ಅದೇ ಜುಬ್ಬಾ, ಅದೇ ಮೇಲು ಹೊದಿಕೆ ಹೊದ್ದ ಅದೇ ಅರೆ ನೆರೆತ ಗಡ್ಡದ- ಸಿದ್ದರಾಮಯ್ಯ.

‘ಈಟಿವಿ’ ಚಾನಲ್ ಗಾಗಿ ನ್ಯೂಸ್ ರೀಡರ್ ಗಳನ್ನು ಆಯ್ಕೆ ಮಾಡಲು ರಾಜ್ಯದ ಎಲ್ಲೆಡೆ ಸಂದರ್ಶನ ನಡೆಸುತ್ತಾ ನಾನು ಮೈಸೂರು ತಲುಪಿಕೊಂಡಿದ್ದೆ.

ಮೈಸೂರು ತಲುಪಿದ ಮೇಲೆ ಕೆ ರಾಮದಾಸ್ ಅವರಿಗೆ ಒಂದು ನಮಸ್ಕಾರ ಹೇಳದೇ ಬರಲು ನನಗಿರಲಿ, ಯಾರಿಗೂ ಸಾಧ್ಯವಿಲ್ಲ.

ಹಾಗಾಗಿ ಅವರ ಮನೆಯಲ್ಲಿ ಕುಳಿತು ಹರಟೆ ಹೊಡೆಯುತ್ತಾ ಇದ್ದಾಗ ಬಂದದ್ದು ಸಿದ್ದರಾಮಯ್ಯನವರು.

ಆನಂತರ ನಾನು ಮತ್ತೆ ಅವರ ಕೈ ಕುಲುಕಿದ್ದು ‘ಕೃಷ್ಣಾ’ದ ಅಂಗಳದಲ್ಲಿ.

ಮೊದಲ ಬಾರಿಗೆ ಕೈ ಕುಲುಕಿದಾಗ ಅವರು ಶಾಸಕರಾಗಿದ್ದರು. ಎರಡನೆಯ ಬಾರಿ ನಾನು ಮುಖ್ಯಮಂತ್ರಿಯ ಕೈ ಕುಲುಕುತ್ತಾ ನಿಂತಿದ್ದೆ.

‘ಹೇಗಿದ್ದೀರಿ ಸಿದ್ಧರಾಮನ ಹುಂಡಿ ಎಕ್ಸ್ ಪ್ರೆಸ್’ ಎಂದೆ.

‘ಅಯ್ಯೋ ಸುಮ್ಮನಿರು ಮಾರಾಯ. ಎಕ್ಸ್ ಪ್ರೆಸ್ ವೇಗದಲ್ಲಿ ವಿಧಾನಸೌಧ ಸಿಗಬೇಕಾದರೆ ನೂರೆಂಟು ವಿದ್ಯೆ ಗೊತ್ತಿರಬೇಕು. ನಾನು ಒಂದು ಶಟಲ್ ಗಾಡಿ ಅಷ್ಟೇ’ ಎಂದು ನಕ್ಕರು.

‘ನಾನು ಹೆಲಿಕ್ಯಾಪ್ಟರ್ ನಿಂದ ಜಿಗಿದು ವಿಧಾನಸೌಧದ ಖುರ್ಚಿಯಲ್ಲಿ ಕೂಡಲಿಲ್ಲ. ಬಹಳ ಹೋರಾಟ ಮಾಡಿಕೊಂಡು ರಾಜಕೀಯದಲ್ಲಿ ಮೇಲೆಬಂದೆ. ಸ್ವಂತ ಶಕ್ತಿಯಿಂದ ರಾಜಕೀಯ ಮಾಡುತ್ತಾಬಂದೆ. ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯನಿಂದ ಶುರು ಮಾಡಿ ಇಲ್ಲಿಯವರೆಗೂ ಬಂದಿದ್ದೇನೆ..’

‘..ಯಾವುದೇ ರಾಜಕೀಯ ಜೀವನಕ್ಕೆಒಂದು ಸ್ಟ್ರಗಲ್ ಬೇಕು, ಒಂದು ಸಿದ್ದಾಂತ ಬೇಕು’ ಎಂದು ತಮ್ಮ ಶಟಲ್ ಗಾಡಿ ಅಲ್ಲಲ್ಲಿ ನಿಲ್ಲುತ್ತಾ ವಿಧಾನಸೌಧದವರೆಗೂ ಅದರಲ್ಲೂ ಮುಖ್ಯಮಂತ್ರಿ ಖುರ್ಚಿಯವರೆಗೂ ಬಂದು ಮುಟ್ಟಿದ ಕಥೆ ಹೇಳಿದರು.

ನನಗೆ ಅವರು ಮರಳಲ್ಲಿ ತಿದ್ದಿ ಅಕ್ಷರ ಕಲಿತ ಕಥೆ ಗೊತ್ತಿತ್ತು. ಹಾಗಾಗಿ ಅವರ ಬಾಲ್ಯಕ್ಕೆ ಅವರನ್ನು ಕರೆದುಕೊಂಡು ಹೋದೆ.

ಸಿದ್ದರಾಮನಹುಂಡಿಯ ನೆನಪು ಮಾಡುತ್ತಿದ್ದಂತೆ ಅವರ ಮುಖ ಅರಳಿತು.

‘ನಮ್ಮ ತಂದೆ ನನ್ನನ್ನು ವೀರಮಕ್ಕಳ ಕುಣಿತಕ್ಕೆ ಸೇರಿಸಿದ್ದರು. ಒಂದು ವೇಳೆ ಅಲ್ಲಿ ಸೇರದೆ ಹೋಗಿದ್ದರೆ ನಾನು ವಿದ್ಯೆಕಲೀತಾ ಇದ್ದೆನೋ ಇಲ್ಲವೋ ಗೊತ್ತಿಲ್ಲ’.

‘ನಾನು ಪ್ರೈಮರಿ ಶಾಲೆ ಮುಖ ಕಂಡವನೇ ಅಲ್ಲ. ನಮಗೆ ವೀರಮಕ್ಕಳ ಕುಣಿತ ಕಲಿಸುತ್ತಿದ್ದಂತಹ ಮೇಷ್ಟ್ರು ನಂಜೇಗೌಡರು ನಮಗೆಲ್ಲಾ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡಿಸಿದರು. ಅವರು ಅಕ್ಷರಾಭ್ಯಾಸ ಮಾಡಿಸಿ, ಕಾಗುಣಿತ ಕಲಿಸಿ, ಲೆಕ್ಕಹೇಳಿಕೊಟ್ಟಿದ್ದರಿಂದ ನನಗೆ ಮುಂದೆ ಓದುವ ಆಸಕ್ತಿ ಬೆಳೆಯಿತು. ಆ ನೆನಪು ನನ್ನೊಳಗಡೆ ಸದಾ ಇರುತ್ತದೆ’ ಎಂದು ಭಾವಪರಾಶರಾದರು.

ಸಿದ್ದರಾಮಯ್ಯನವರಿಗೆ ವೀರಗಾಸೆ ಕುಣಿತದ ಹೆಜ್ಜೆಗಳು ಚೆನ್ನಾಗಿ ಗೊತ್ತು. ಪಟ್ಟು ಹಿಡಿದು ಕಲಿತದ್ದು. ಅದಕ್ಕೇ ಇರಬೇಕು ಅವರಿಗೆ ನಂತರದ ರಾಜಕೀಯ ಹೆಜ್ಜೆಗಳೂ ಸುಲಭವಾದವು.
ಪಟ್ಟು ಹಾಕಿದರೆ ಗೆದ್ದೇ ಸಿದ್ಧ ಎನ್ನುವ ಛಲ ಅವರದ್ದು.

ಹಾಗಾಗಿಯೇ ನೆನಪಿಸಿದೆ. ‘ನೀವು ವಿಧಾನಸೌಧದ ಒಳಗೆ ಹೋಗದಂತೆ ಪೊಲೀಸ್ ಅಧಿಕಾರಿ ತಡೆದಿದ್ದರು’ ಅಂತ.

‘ಅದು ನಾನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವ ಘಟನೆಗಳಲ್ಲಿ ಒಂದು. ವಿಧಾನಸೌಧದ ಒಳಗೆ ಸಿಕ್ಕಾಪಟ್ಟೆ ಗಲಾಟೆ ಆಗಿತ್ತು. ಆಗ ಇದ್ದ ಪೋಲೀಸ್ ಕಮಿಷನರ್ ತಮ್ಮ ಯೂನಿಫಾರ್ಮ್ ಮತ್ತು ಆಯುಧಗಳ ಸಮೇತ ಬಂದು ನನ್ನನ್ನು ಒಳಗೆಬಿಡದಂತೆ ತಡೆದರು’.

‘ಹಾಗೆ ಮಾಡಬಾರದಿತ್ತು ಅವರು. ಆಗ ನಾನು ಅವರಿಗೆ, ಒಂದು ದಿನ ನಾನು ಮುಖ್ಯಮಂತ್ರಿ ಆಗಿಯೇ ವಿಧಾನಸೌಧಕ್ಕೆ ಬರುತ್ತೇನೆ, ಎಚ್ಚರಿಕೆಯಿಂದಿರಿ ಎಂದು ಹೇಳಿದ್ದೆ’.

ಮಗ ಡಾಕ್ಟರ್ ಆಗಬೇಕು ಅನ್ನುವ ಕನಸು ಅಪ್ಪನಿಗಿತ್ತು. ಆದರೆ ಸಿದ್ದರಾಮಯ್ಯನವರಿಗೆ ವಿಜ್ಞಾನ ವಿಷಯಗಳ ಮೇಲೆ ಕಣ್ಣು. ಬಾಟನಿ, ಜುವಾಲಜಿ ಮೇಜರ್ ತೆಗೆದುಕೊಂಡು ಬಿಎಸ್ಸಿ ಮುಗಿಸಿದರು.

‘ಬಾಟನಿಯಲ್ಲಿ ಎಂಎಸ್ಸಿ ಓದುವ ಆಸೆ ಇತ್ತು ನನಗೆ. ಸೀಟ್ ಸಿಗಲಿಲ್ಲ. ವಿದ್ಯಾಭ್ಯಾಸ ನಿಲ್ಲಿಸಿ, ವ್ಯವಸಾಯ ಮಾಡೋಣ ಎಂದುಕೊಂಡು ಊರಿಗೆ ಹಿಂದಿರುಗಿದೆ. ಒಂದು ವರ್ಷ ಊರಿನಲ್ಲೇ ವ್ಯವಸಾಯ ಮಾಡಿಕೊಂಡಿದ್ದೆ. ವ್ಯವಸಾಯದಿಂದ ಏನೂ ಲಾಭವಾಗುವುದಿಲ್ಲ ಎಂದುಕೊಂಡು ಲಾ ಓದುವ ಆಲೋಚನೆ ನನಗೆ ಬಂತು. ಹಾಗಾಗಿ ಲಾ ಕಾಲೇಜಿಗೆ ಸೇರಿದೆ’.

ಅಷ್ಟು ಹೇಳುವ ವೇಳೆಗೆ ಸಿದ್ದರಾಮಯ್ಯನವರ ಕಣ್ಣಲ್ಲಿ ಮಿಂಚಿತ್ತು. ಯಾಕೆಂದರೆ ಅವರ ಬದುಕಿಗೆ ದೊಡ್ಡ ತಿರುವು ಸಿಕ್ಕಿದ್ದೇ ಇಲ್ಲಿ.

ಅವರಿಗೆ ಲಾ ಕಾಲೇಜಿನಲ್ಲಿ ಪ್ರೊ ಎಂ ಡಿ ನಂಜುಂಡಸ್ವಾಮಿ ಸಿಕ್ಕಿ ಹೋಗಿದ್ದರು.

‘ಲಾ ಓದುವಾಗ ಪ್ರೊ ನಂಜುಂಡಸ್ವಾಮಿಯವರ ಪರಿಚಯ ಆಯಿತು. ಅವರು ಆಗಾಗಲೇಸೋಷಲಿಸ್ಟ್ ಪಾರ್ಟಿಯಲ್ಲಿ ಸಕ್ರಿಯರಾಗಿದ್ದರು. ನಮ್ಮನ್ನೂ ಅವರು ಸೋಷಲಿಸ್ಟ್ ಪಾರ್ಟಿಗೆ ಸೇರಿಸಿದರು’.

‘ನಮಗೆ ಅವರು ಪಾಠ ಮಾಡದೇ ಇದ್ದರೂ ಅವರ ಸಂಪರ್ಕ ಪ್ರತಿನಿತ್ಯ ಆಗುತ್ತಲೇ ಇತ್ತು. ಸ್ನೇಹಿತರ ಒಂದು ಗುಂಪನ್ನು ಸೇರಿಸಿ ರಾಜಕೀಯ ಚರ್ಚೆಗಳನ್ನು ಮಾಡುತ್ತಿದ್ದರು. ಹಾಗಾಗಿ ಅವರ ಬಗ್ಗೆ ನಮಗೆ ಬಹಳ ಅಭಿಮಾನ ಮತ್ತು ಪ್ರೀತಿ ಇತ್ತು. ನಾನು ರಾಜಕೀಯಕ್ಕೆ ಎಂಟ್ರಿ ಕೊಡಲು ಅವರೇ ಕಾರಣ’ ಎಂದರು.

‘ಪ್ಲೈಮೌತ್ ಕಾರು..’ ಎಂದು ನಾನು ರಾಗವೆಳೆದೆ.

ನಾನು ಏನು ಕೇಳಲು ಹೊರಟಿದ್ದೇನೆ ಎಂದು ಅವರಿಗೆ ಗೊತ್ತಾಗಿ ಹೋಯಿತು.

‘ಹೌದು, ನಂಜುಂಡಸ್ವಾಮಿ ಅವರು ತಮ್ಮ ಬಳಿ ಇದ್ದ ಪ್ಲೈಮೌತ್ ಕಾರನ್ನು ಚುನಾವಣಾ ಓಡಾಟಕ್ಕೆ ಅಂತ ಕೊಟ್ಟರು. ಒಂದಿಷ್ಟು ಹಣಕಾಸಿನ ವ್ಯವಸ್ಥೆಯನ್ನೂ ಮಾಡಿಕೊಟ್ಟರು. ಕಾರು ಎರಡು ಮೂರು ದಿನ ಓಡಿ ನಿಂತುಹೋಯಿತು’ ಎಂದರು.

ಅವರು ಹಣಕಾಸು ಅಂದಾಕ್ಷಣ ನನ್ನ ನೆನಪಿಗೆ ಬಂದದ್ದು ಇವರು ಕಡಲೆ ಕಾಯಿ ಮಾರುವ ಅಜ್ಜಿಯ ಬಳಿ ಸಾಲ ತೆಗೆದುಕೊಳ್ಳುತ್ತಾ ಇದ್ದದ್ದು.

‘ನಾನು ಲಾಯರ್ ಗಿರಿ ಶುರು ಮಾಡಿದೆ. ಕಕ್ಷಿದಾರರು ಸಿಗಬೇಕಲ್ಲ. ಕೈ ಎಲ್ಲಾ ಖಾಲಿ. ಅಲ್ಲೇ ಕಡ್ಲೆ ಕಾಯಿ ಮಾರುವವಳ ಹತ್ರ ಸಾಲ ಮಾಡಿ ಸಿಗರೇಟು ಸೇದುತ್ತಿದ್ದೆ, ಆಮೇಲ್ಯಾವಾಗಾದ್ರೂ ದುಡ್ಡು ಬಂದಾಗ ಒಟ್ಟಿಗೆ ಅದನ್ನು ತೀರಿಸುವುದು ನಡೀತಾ ಇತ್ತು’.

‘ನಾನು ಎಂಎಲ್ ಎ ಆದ ಮೇಲೆ ಹೋಗಿ ಎಷ್ಟು ಸಾಲ ಬಾಕಿ ಇಟ್ಟಿದ್ದೆನೋ ಅಷ್ಟೂ ಚುಕ್ತಾ ಮಾಡಿ ಬಂದೆ’ ಎಂದು ನಕ್ಕರು.

‘ಎಂ ಡಿ ಎನ್ ಪ್ರಭಾವ ಇರಬೇಕು. ಚೆನ್ನಾಗಿ ಲೆಕ್ಚರ್ ಕೊಡ್ತೀರಾ..’ ಅಂತ ಅವರ ಕಡೆ ಒಂದು ಬಾಣ ಬಿಟ್ಟೆ.

ನಾನು ಏನು ಕೇಳುತ್ತಿದ್ದೇನೆ ಎನ್ನುವುದು ಅವರಿಗೆ ತಕ್ಷಣ ಗೊತ್ತಾಗಿ ಹೋಯಿತು.

‘ಹೌದು ನಾನು ಸ್ವಲ್ಪ ದಿನ ಪಾರ್ಟ್ ಟೈಮ್ ಲೆಕ್ಚರರ್ ಆಗಿದ್ದೆ, ಸುಮಾರು ಮೂರು ವರ್ಷಗಳ ಕಾಲ. ಆ ಅನುಭವ ನನಗೆ ಬಹಳ ಖುಷಿ ಕೊಟ್ಟಿದೆ. ಲಾಯರ್ ಹುದ್ದೆಗಿಂತಾ ಪಾಠ ಮಾಡುವ ಹುದ್ದೆಯನ್ನು ನಾನು ಬಹಳ ಪ್ರೀತಿಸುತ್ತಿದ್ದೆ.’

‘ಕುರಿಗಳ ಲೆಕ್ಕ ಮಾಡೋದಿಕ್ಕೆ ಬರದೇ ಇರೋ ಸಿದ್ದರಾಮಯ್ಯ ಬಜೆಟ್ ಮಂಡಿಸ್ತಾನಂತೆ ಅಂದರು..’ ಎಂದು ಅವರ ನೆನಪು ಮೀಟಿದೆ.

‘ನಾನು ಅರ್ಥಶಾಸ್ತ್ರ ಖಂಡಿತಾ ಓದಿಲ್ಲ. ಬಾಟನಿ, ಜುವಾಲಜಿ, ಕಾನೂನು ಓದಿದವನು. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗನನಗೆ ಹಣಕಾಸಿನ ಮಂತ್ರಿ ಆಗಲು ಆಹ್ವಾನಿಸಿದರು. ನಿಜ ಹೇಳಬೇಕು ಎಂದರೆ ಆಗ ನನ್ನ ಮನಸ್ಸಿನಲ್ಲಿದ್ದದ್ದು ಗೃಹ ಅಥವಾ ಕಂದಾಯ ಇಲಾಖೆ. ಹಣಕಾಸಿನ ಇಲಾಖೆ ಎಂದಾಗ ಅದನ್ನು ಒಂದು ಸವಾಲು ಎಂದೇ ನಾನು ಸ್ವೀಕರಿಸಿದೆ’.

‘ಆಗಲೇ ಕೆಲವರು ಕುಹಕವಾಡಿದ್ದು. ಸಿದ್ದರಾಮಯ್ಯನಿಗೆ ಕುರಿ ಎಣಿಸಲು ಸಹ ಬರೋಲ್ಲ,ಹಣಕಾಸು ಇಲಾಖೆ ಹೇಗೆ ನಿಭಾಯಿಸ್ತಾನೆ ಅಂತ. ನಾನು ಅದನ್ನು ಒಂದು ಚಾಲೆಂಜ್ ಅಂತ ತಗೊಂಡೆ’ ಎಂದು ತಾವು ಪಟ್ಟು ಹಾಕಿ ಗೆದ್ದ ಕಥೆಯನ್ನು ಹೇಳಿದರು.

ಸಿದ್ದರಾಮಯ್ಯನವರಿಗೆ ಕುಸ್ತಿ ಸಹಾ ಇಷ್ಟ ಎನ್ನುವುದು ಎಷ್ಟೋ ಜನಕ್ಕೆ ಗೊತ್ತಿಲ್ಲ. ‘ನೀವು ಹಾಕಿದ ಕುಸ್ತಿ ಪಟ್ಟುಗಳನ್ನು ಒಂದೊಂದಾಗಿ ನೆನಪಿಸಿಕೊಳ್ಳಿ’ ಎಂದೆ.

‘ನನಗೂ ಮುಖ್ಯಮಂತ್ರಿ ಆಗಲು ಸಾಧ್ಯ ಎಂದು ನನಗೆ ಅನ್ನಿಸಿತ್ತು. ಅದಕ್ಕೆ ನಾನು ಅರ್ಹನಿದ್ದೇನೆ ಎಂದು ಸಹ ನನಗೆ ನಂಬಿಕೆ ಇತ್ತು. ೧೯೯೬ ರಲ್ಲಿ ಮತ್ತೆ ೨೦೦೪ ರಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ನನಗೆ ಇತ್ತು
ರಡು ಬಾರಿಯೂ ತಪ್ಪಿಹೋಯಿತು. ಕಾಂಗ್ರೆಸ್ ಸೇರಿದ ಮೇಲೆ ಮತ್ತೆ ಆ ಆಸೆ ಚಿಗುರೊಡೆಯಿತು. ಮುಖ್ಯಮಂತ್ರಿ ಆದೆ’ ಎಂದರು.

‘ಸರ್ ನೀವು ಇನ್ನೂ ಒಂದು ಕುಸ್ತಿ ಮಾಡಿದ್ದೀರಿ ಇಂಗ್ಲಿಷ್ ಜೊತೆ’ ಎಂದೆ.

ಅಯ್ಯೋ ಹೌದಪ್ಪಾ, ಈ ಇಂಗ್ಲಿಷ್ ಸಹವಾಸ ಯಾರಿಗೂ ಬೇಡ. ಇಂಗ್ಲಿಷ್ ನನ್ನನ್ನ ಹೆದರಿಸಿ ಹಾಕಿತ್ತು. ನಾನು ಬೆಳೆದು ಬಂದ ಹಿನ್ನಲೆ ಮತ್ತು ವಾತಾವರಣ ಇದಕ್ಕೆ ಕಾರಣ. ಹಳ್ಳಿಯಲ್ಲಿ ನಾನು ಯಾರ ಜೊತೆ ಇಂಗ್ಲಿಷ್ ಮಾತನಾಡಬಹುದಿತ್ತು? ಹಳ್ಳಿ ಶಾಲೆಗಳಲ್ಲಿ ಇಂಗ್ಲಿಷ್ ಗೊತ್ತಿರುವ ಉಪಾಧ್ಯಾಯರೂ ಇರ್ತಾ ಇರಲಿಲ್ಲ. ಹೀಗಾಗಿ ಅದನ್ನೂ ಮಣಿಸಬೇಕಾಗಿ ಬಂತು’ ಎಂದು ಗೆದ್ದ ನಗು ಬೀರಿದರು.

‘ಸಾಧಾರಣವಾಗಿ ಮುಖ್ಯಮಂತ್ರಿ ಆದ ತಕ್ಷಣ ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಾರೆ, ಮಠಗಳಿಗೆ ಹೋಗಿ ಸ್ವಾಮಿಗಳ ಕಾಲಿಗೆಬೀಳುತ್ತಾರೆ. ಆದರೆ ನೀವು ಸಾಹಿತಿಗಳನ್ನು, ವಿಚಾರವಂತರನ್ನೂ ಭೇಟಿಮಾಡಿದಿರಿ?

‘ಈ ಸಾಹಿತಿಗಳುಈ ನಾಡಿನ ಸಂಪತ್ತು. ತಮ್ಮ ತಮ್ಮ ಕ್ಷೇತ್ರಗಳಲ್ಲಿಅಪಾರವಾದ ಕೆಲಸ ಮಾಡಿದಂತವರು. ಸಮಾಜದ ಬಗ್ಗೆಕಳಕಳಿ ಇಟ್ಟುಕೊಡಿರುವಂತವರು. ರಾಜ್ಯದ ಹಿತದಬಗ್ಗೆ ಕಳಕಳಿ ಇಟ್ಟುಕೊಂಡಿರುವವರು. ಅದಕ್ಕಾಗೇ ನಾನು ಸಾಹಿತಿಗಳನ್ನು ಭೇಟಿಮಾಡಿ, ಅವರ ಜೊತೆ ಚರ್ಚೆ ಮಾಡಿ, ಅವರ ಹಾರೈಕೆಗಳನ್ನು ತೆಗೆದುಕೊಳ್ಳೋಣ ಎಂದು ನಾನು ಅವರನ್ನುಭೇಟಿ ಮಾಡಿದೆ’.

ಇಷ್ಟೆಲ್ಲಾ ಮಾತನಾಡುತ್ತಿರುವಾಗಲೇ ನಾನು ಅವರ ಪಂಚೆಯುತ್ತ ಬೆರಳು ತೋರಿಸಿದೆ.

ತಕ್ಷಣ ನನ್ನ ಹೆಗಲ ಮೇಲೆ ಕೈ ಹಾಕಿದವರೇ ‘ಪಂಚೆ ನಾನು ಬಯಸಿ ಆಯ್ಕೆಮಾಡಿಕೊಂಡ ಟ್ರೇಡ್ ಮಾರ್ಕ್ ಏನಲ್ಲ’ ಎಂಬ ಗುಟ್ಟು ಬಿಟ್ಟುಕೊಟ್ಟರು.

‘ನಾನೂ ಪ್ಯಾಂಟು, ಶರ್ಟು, ಕೋಟು ಎಲ್ಲಾ ಹಾಕ್ಕೋತಾ ಇದ್ದೆ. ನನಗೆ ಈ ‘ಡ್ರೈ ಸ್ಕಿನ್’ ಸಮಸ್ಯೆ ಬಂತು. ಆಗ ಡಾಕ್ಟರು ನೀವು ಸದಾ ಕಾಟನ್ ಬಟ್ಟೆ ಹಾಕಿಕೊಳ್ಳಬೇಕು ಎಂದು ಹೇಳಿದರು. ಸ್ವಲ್ಪ ಗಾಳಿ ಆಡುವಂತಹ ಬಟ್ಟೆಹಾಕಿಕೊಳ್ಳಬೇಕು ಎಂದರು

‘೧೯೯೪ ರಿಂದ ನಾನು ಕಾಟನ್ ಬಟ್ಟೆ ಹಾಕಲು ಶುರು ಮಾಡಿದೆ, ಧೋತಿ ಕುರ್ತಾ ಹಾಕಲು ಶುರು ಮಾಡಿದೆ. ಹಾಗಾಗಿ ಆಗಿನಿಂದ ಇದೇ ಅಭ್ಯಾಸ ಆಯಿತು’.

‘ಡ್ರೈ ಸ್ಕಿನ್ ಸಮಸ್ಯೆ ಏನೋ ಕಡಿಮೆ ಆಯಿತು, ಆದರೆ ಪಂಚೆ ಮೇಲಿನ ಪ್ರೀತಿ ಜಾಸ್ತಿ ಆಗಿ ಹೋಗಿತ್ತು’ ಎಂದವರೇ ‘ಫಾರಿನ್ ಗೆ ಹೋದಾಗ ನಾನೂ ಸೂಟು, ಬೂಟುಹಾಕಿಕೊಳ್ತೀನಪ್ಪಾ’ ಎಂದು ಜೋರಾಗಿ ನಕ್ಕರು.

ಸಿದ್ದರಾಮಯ್ಯನವರಿಗೆ ತಮ್ಮ ಅಮ್ಮ ಎಂದರೆ ಇನ್ನಿಲ್ಲದ ಪ್ರಾಣ. ಯಾವಾಗಲೇ ಊರಿಗೆ ಹೋದರೂ ನೂರಾರು ರೊಪಾಯಿಯ ಅಡಿಕೆ ಎಲೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದರು
.
ತಕ್ಷಣ ದೊಡ್ಡದಾಗಿ ನಕ್ಕುಬಿಟ್ಟ ಸಿದ್ದರಾಮಯ್ಯನವರು ‘ಅಮ್ಮನ ಮೇಲೆ ಪ್ರೀತಿ ಏನೋ ಇತ್ತು. ಆದರೆ ಎಲೆ ಅಡಿಕೆ ಕೊಡೋದರ ಹಿಂದೆ ಒಂದು ಸ್ವಾರ್ಥವೂ ಇತ್ತು. ಹಾಗೆ ನಮ್ಮವ್ವನಿಗೆ ಒಳ್ಳೆ ವೀಳ್ಯೆದೆಲೆ, ಅಡಿಕೆ ತೆಗೆದುಕೊಂಡು ಹೋದರೆ ಬರುವಾಗ ಸ್ವಲ್ಪ ದುಡ್ಡು ಹೆಚ್ಚಾಗಿ ಕೊಡ್ತಾ ಇದ್ಲು’ ಎಂದರು.

ಸಿದ್ದರಾಮಯ್ಯನವರಿಗೆ ಹಿಂದುಸ್ಥಾನಿ ಸಂಗೀತ ಎಂದರೆ ಪ್ರಾಣ.
ಈ ಗುಟ್ಟು ನನಗೆ ಗೊತ್ತಿತ್ತು.
ಮಹಮದ್ ರಫಿ ಹಾಡುಗಳಿಗಂತೂ ಅವರ ಎಲ್ಲಾ ಒತ್ತಡಗಳನ್ನ ಒಂದೇ ಕ್ಷಣಕ್ಕೆ ದೂರ ಎಸೆಯುವಷ್ಟು ತಾಖತ್ತು ಇದೆ.

ಅದು ಗೊತ್ತಿದ್ದ ನಾನು ಅಲ್ಲಿಯವರೆಗೂ ಅಡಗಿಸಿಟ್ಟುಕೊಂಡಿದ್ದ ಮಹಮದ್ ರಫಿ ಅವರ ಸಿ ಡಿಗಳನ್ನು ತೆಗೆದು ಅವರ ಕೈಗಿಟ್ಟೆ.

ಅವರು ಮಾತಿಲ್ಲದಂತಾದರು.
ಅವರ ಕೈಗಳು ನನ್ನನ್ನು ಒತ್ತಿ ಹಿಡಿದ ರೀತಿಯೇ ಅವರ ಸಂಭ್ರಮವನ್ನು ನನಗೆ ದಾಟಿಸಿತ್ತು.

-ಜಿ ಎನ್ ಮೋಹನ್

ವಿದ್ಯೋದಯ ಕಾನೂನು ಕಾಲೇಜಿನಲ್ಲಿ ‘ನಾಳೆ’ ಬೌದ್ಧಿಕ ಹಕ್ಕುಗಳ ಸಮ್ಮೇಳನ

Publicstory/prajayoga

ತುಮಕೂರು: ವಿದ್ಯೋದಯ ಕಾನೂನು ಕಾಲೇಜು ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಇವರ ಸಹಯೋಗದೊಂದಿಗೆ ಬೌದ್ಧಿಕ ಆಸ್ತಿ ಹಕ್ಕುಗಳು ಎಂಬ ವಿಷಯದ ಬಗ್ಗೆ ಒಂದು ದಿನದ ಸಮ್ಮೇಳನವನ್ನು ನಾಳೆ ಬೆಳಿಗ್ಗೆ 10:30 ಕ್ಕೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದ್ದು, ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ಕಾನೂನು ಪ್ರಾಧ್ಯಾಪಕ ಪ್ರೊ.ಡಾ.ಟಿ.ರಾಮಕೃಷ್ಣ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಚ್. ಹೇಮಂತ್ ಕುಮಾರ್ ಬೌದ್ಧಿಕ ಆಸ್ತಿ ಹಕ್ಕಿನ ಘಟಕದ ಉದ್ಘಾಟನೆ ಮಾಡಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಐ.ಪಿ. ಅಟಾರ್ನಿ ವಿವೇಕ್ ಆನಂದ್ ಸಾಗರ್ ಹಾಗೂ ನಾಗರ್ಜುನ ಎಮ್. ಜಿ. ಪ್ರಾಜೆಕ್ಟ್ ಅಸೋಸಿಯೇಟ್ ಇವರು ಭಾಗವಹಿಸಲಿದ್ದಾರೆ. ಮ್ಯಾನೇಜಿಂಗ್ ಟ್ರಸ್ಟಿ ಎಚ್. ಎಸ್. ರಾಜು, ವಿದ್ಯೋದಯ ಫೌಂಡೇಶನ್ ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ.ಕೆ.ಚಂದ್ರಣ್ಣ ಹಾಗೂ ಪ್ರಭಾರ ಪ್ರಾಂಶುಪಾಲ ಡಾ.ಎ.ನಾರಾಯಣ ಸ್ವಾಮಿ ಇರಲಿದ್ದಾರೆ.

ಶಾಸಕ ಗೌರಿಶಂಕರ್ ಅವರಿಂದ ವಿವಿಧ ಕಾಮಗಾರಿಗೆ ಚಾಲನೆ

Publicstory/prajayoga

ತುಮಕೂರು:  ಗ್ರಾಮಾಂತರದ, ಹೊನ್ನುಡಿಕೆ , ಹೊಳಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳ್ಳೆನಹಳ್ಳಿ ಕೆರೆಗೆ ಶಾಸಕ ಡಿಸಿ ಗೌರಿಶಂಕರ್ ಬುಧವಾರ ಗಂಗಾಪೂಜೆ ನೆರವೇರಿಸಿದರು.

ಕರೆಯು ಸುಮಾರು 23 ವರ್ಷಗಳ ನಂತರ ತುಂಬಿ ಕೋಡಿ ಹರಿಯುತ್ತಿದೆ. ಗಂಗಾ ಪೂಜೆಯ ವೇಳೆ  500 ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಹಿಂದೂ ಸಂಪ್ರದಾಯದಂತೆ  ಬಾಗಿನ ನೀಡಿದರು.

ಗಂಗಾಪೂಜೆ ಕಾರ್ಯಕ್ರಮದ ಬಳಿಕ ಹೊಳಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಡೇಸಾಬರ ಪಾಳ್ಯ ಗ್ರಾಮದಲ್ಲಿ, 38 ಲಕ್ಷ ರೂಗಳ ವೆಚ್ಚದಲ್ಲಿ ಮನೆ-ಮನೆಗೆ ಕುಡಿಯುವ ನೀರಿನ ನಲ್ಲಿ ಹಾಕುವ ಕಾಮಗಾರಿ ಮತ್ತು ಹೊಳಕಲ್ಲು ಮತ್ತು ಸಂಗೀ ಪಾಳ್ಯ ಗ್ರಾಮಗಳಲ್ಲಿ 38 ಲಕ್ಷ ರೂಗಳ ವೆಚ್ಚದಲ್ಲಿ ಮನೆ-ಮನೆಗೆ ಕುಡಿಯುವ ನೀರಿನ ನಲ್ಲಿ ಹಾಕುವ ಕಾಮಗಾರಿ,

ವಿವಿಧ ಕಾಮಗಾರಿಗಳ ಶಂಕುಸ್ಥಾಪನ ಸಮಾರಂಭದಲ್ಲಿ ಶಾಸಕರು ಪ್ರತಿ ಗ್ರಾಮಗಳಿಗೂ ಭೇಟಿ ನೀಡಿದಾಗಲೂ ಅಲ್ಲಿನ ಸ್ಥಳೀಯ ಬಡಕುಟುಂಬ ಗಳ ಆರೋಗ್ಯ ಸಮಸ್ಯೆಗಳಿಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕ ಸಮಸ್ಯೆಗಳ ಸಹಾಯಕ್ಕಾಗಿ ಸ್ಥಳದಲ್ಲೇ 1. ಲಕ್ಷಕ್ಕೂ ಹೆಚ್ಚು ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.

ಈ ಸಂದರ್ಭದಲ್ಲಿ ತುಮಕೂರು ತಾಲೂಕು ಜೆಡಿಎಸ್ ಅಧ್ಯಕ್ಷರಾದ ರಾಮಚಂದ್ರಪ್ಪ, ಹೊನ್ನುಡಿಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಮಂಜುನಾಥ್, ಮಾಜಿ ಎಪಿಎಂಸಿ ಅಧ್ಯಕ್ಷರಾದ ವಿಜಿ ಕುಮಾರ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ದೀಪು,ಗ್ರಾಮ ಪಂಚಾಯತ್ ಸದಸ್ಯರಾದ ಹನುಮಂತರಾಯಪ್ಪ ಮುಂತಾದವರು ಉಪಸ್ಥಿತರಿದ್ದರು.

ಮಳೆ ಹಾನಿ ಸಂತ್ರಸ್ತರ ನೆರವಿಗೆ ನಿಂತ ಶಾಸಕ ಜ್ಯೋತಿಗಣೇಶ್

Publicstory/prajayoga

ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತುಮಕೂರು ನಗರದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಿಟಿ ರೌಂಡ್ ನಡೆಸಿ ಮಳೆಹಾನಿ ಸಂತ್ರಸ್ತ ಕುಟುಂಬಗಳ ನೆರವಿಗೆ ನಿಂತಿದ್ದಾರೆ.

ತುಮಕೂರು : ವಿದ್ಯುತ್ ಶಾರ್ಟ್  ಸರ್ಕ್ಯೂಟ್‌ನಿಂದ ಮೃತಪಟ್ಟಿದ್ದ ಈರಣ್ಣನ ಪತ್ನಿಗೆ  5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಶಾಸಕ ಜ್ಯೋತಿಗಣೇಶ್ ಬುಧವಾರ ವಿತರಿಸಿದರು.

ನಗರದ ಉಪ್ಪಾರಹಳ್ಳಿಯಲ್ಲಿರುವ ಮೃತ ಈರಣ್ಣನ ಮನೆಗೆ ಬುಧವಾರ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಈರಣ್ಣನವರ ಸಾವು ಅತ್ಯಂತ ದುಃಖಕರ ಸಂಗತಿ. ಅತಿಯಾದ ಮಳೆಯಿಂದಾಗಿ ಅವಾಂತರ, ಅವಘಡಗಳು ಸಂಭವಿಸುತ್ತಲೇ ಇವೆ. ಅವಘಡಗಳು ಆಗದಂತೆ ಅಧಿಕಾರಿಗಳು ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿದ್ದಾರೆ ಎಂದರು.

ಮೃತ ಈರಣ್ಣನವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರವನ್ನು ವಿತರಿಸಲಾಗಿದೆ. ಅಲ್ಲದೆ ಪಾಲಿಕೆ ವತಿಯಿಂದಲೂ 1 ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ ಎಂದು ತಿಳಿಸಿದರು.

ಕಳೆದ 30 ವರ್ಷದಲ್ಲಿ ಜುಲೈ ತಿಂಗಳಲ್ಲಿ ಅತಿ ಹೆಚ್ಚು ಮಳೆ ಒಂದೇ ರಾತ್ರಿಯಲ್ಲಿ ಸುರಿದಿರುವುದು ಈ ಬಾರಿ ಮಾತ್ರ. ಈ ಪ್ರಮಾಣದಲ್ಲಿ ಮಳೆಯಾದರೆ ಯಾರು ಏನೂ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್‌ಕುಮಾರ್, ಕಂದಾಯ ನಿರೀಕ್ಷಕ ಅಜಯ್, ಗ್ರಾಮ ಲೆಕ್ಕಿಗ ರವಿ, ಪಾಲಿಕೆ ಸದಸ್ಯ ಶಿವರಾಮ್ ಮತ್ತಿತರರು ಉಪಸ್ಥಿತರಿದ್ದರು.

5 ದಿನಗಳ ಕಾಲ ನಗರದಲ್ಲಿ ರೆಡ್ ಅಲರ್ಟ್ ಘೋಷಣೆ

ತುಮಕೂರು : ‘ಧೈರ್ಯದಿಂದಿರಿ, ನಿಮ್ಮೊಂದಿಗೆ ನಾವಿದ್ದೇವೆ’ ತುಮಕೂರು ನಗರದಲ್ಲಿ ಮುಂದಿನ 5  ದಿನಗಳನ್ನು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಕಾರಣದಿಂದ ಸಾರ್ವಜನಿಕರು ಜಾಗರೂಕರಾಗಿರಿ ಹಾಗೂ ರಾತ್ರಿ ಸಮಯದಲ್ಲಿ ಬಾರಿ ಮಳೆ ಸುರಿಯುತ್ತಿದ್ದು, ವಿದ್ಯುತ್‌ನಿಂದಾಗಿ ಅಪಾಯವಾಗುವ ಸಂಭವವಿದೆ. ಈ ಬಗ್ಗೆ ಎಲ್ಲರೂ ಗಮನವಹಿಸಿ ಎಚ್ಚರದಿಂದಿರಿ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.


ಹೊಸಳಯ್ಯನತೋಟ: ವಾರ್ಡ್ ನಂ.22ರ ಹೊಸಳಯ್ಯನತೋಟದ ಭಾಗ ಸುಮಾರು ಮನೆಗಳಿಗೆ ನೀರು ನುಗ್ಗಿದ್ದು, ಇಲ್ಲಿನ ಸ್ಥಳೀಯರನ್ನು ಹತ್ತಿರದಲ್ಲಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ 4 ರಿಂದ 5 ಕಾಳಜಿ ಕೇಂದ್ರ ತೆರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಕ್ಷಣವೇ ಅಧಿಕಾರಿಗಳು ಎಚ್ಚೆತ್ತು ನಗರದಲ್ಲಿ 4 ಕಡೆ, ಅಂದರೆ  ಟೂಡಾ ಟ್ರಕ್ ಟರ್ಮಿನಲ್, ಕ್ಯಾತಸಂದ್ರ, ಅಂಬಾ ವಿಲಾಸ, ಸದಾಶಿವನಗರ, ಮಹಾನಗರಪಾಲಿಕೆ ಸಮುದಾಯ ಭವನ, ಬಟವಾಡಿ,  ಪೂರ್ಣಯ್ಯ ಛತ್ರ, ಚಿಕ್ಕಪೇಟೆ,  ಮಹಾನಗರಪಾಲಿಕೆ ಆವರಣದಲ್ಲಿ ಕಾಳಜಿ ಕೇಂದ್ರ ತೆರೆದು ಅನುಕೂಲ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀನಿವಾಸ್, ಪಾಲಿಕೆ ಆಯುಕ್ತರಾದ ರೇಣುಕಾ, ಮುಖಂಡರಾದ ನರಸಿಂಹಮೂರ್ತಿ, ಮುಂತಾದವರು ಇದ್ದರು.

ದೇವರಾಯಪಟ್ಟಣ:  ವಾರ್ಡ್ ನಂ.35ರ ದೇವರಾಯಪಟ್ಟಣದಲ್ಲಿ ಬಾರಿ ಮಳೆಯಿಂದಾಗಿ ದೊಡ್ಡ ಆಲದಮರ ಧರೆಗೆ ಉಳಿದಿದ್ದು, ಹತ್ತಿರದಲ್ಲಿದ್ದ ಜೀಪ್ ಮೇಲೆ ಮರ ಉರುಳಿತ್ತು. ಇದರಿಂದ ಜೀಪ್ ಹಾನಿಗೊಳಗಾಗಿತ್ತು. ಈ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಮಳೆಯಿಂದಾಗಿ ಬೆಸ್ಕಾಂನ 4 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಅವುಗಳನ್ನು ಕೂಡಲೇ ದುರಸ್ಥಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ಮಳೆಯಿಂದಾಗಿ ಮನೆ ಬಿದ್ದಿರುವ ಕುಟುಂಬಕ್ಕೆ ಹಾಗೂ ನೀರು ನುಗ್ಗಿರುವ ಮನೆಗಳಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನ ತಕ್ಷಣವೇ ದೊರಕುವಂತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ನಿರ್ಮಲಾ ಶಿವಕುಮಾರ್, ಮಾಜಿ ಪಾಲಿಕೆ ಸದಸ್ಯರಾದ ಡಿ.ಆರ್.ಬಸವರಾಜ್, ಮುನಿಯಪ್ಪ ಹಾಗೂ ಮುಂತಾದ ಮುಖಂಡರು ಹಾಗೂ ಅಧಿಕಾರಿಗಳು ಹಾಜರಿದ್ದರು.

ತುಮಕೂರು ನಗರದಲ್ಲಿ ಭಾರಿ ಮಳೆಯಿಂದಾಗಿ ನಿರಾಶ್ರಿತರಿಗಾಗಿ 04 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕಾಳಜಿ ಕೇಂದ್ರಗಳಿಗೆ ಬೇಟಿ ನೀಡಿ ಕಾಳಜಿ ಕೇಂದ್ರದಲ್ಲಿರುವ 14 ಜನ ನಿರಾಶ್ರಿತರಿಗೆ ಊಟವನ್ನು ಬಡಿಸಿ, ಧೈರ್ಯ ತುಂಬಿದರು ಹಾಗೂ ಕಾಳಜಿ ಕೇಂದ್ರದಲ್ಲಿರುವವರಿಗೆ ಆರೋಗ್ಯ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆ.8ಕ್ಕೆ ದೊಡ್ಡಾಘಟ್ಟ ಚಂದ್ರೇಶ್ ಹುಟ್ಟುಹಬ್ಬ ಅಚರಣೆ

Publicstory/prajayoga

ತುರುವೇಕೆರೆ :ಪಟ್ಟಣದಲ್ಲಿ ದೊಡ್ಡಾಘಟ್ಟಚಂದ್ರೇಶ್ ಅಭಿಮಾನಿ ಬಳಗದ ವತಿಯಿಂದ ಜೆ.ಡಿ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಅವರ 48 ನೇ  ಹುಟ್ಟುಹಬ್ಬವನ್ನು  ಇದೇ ತಿಂಗಳ 8 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅಭಿಮಾನಿ ಬಳಗದ ಶರತ್ ತಿಳಿಸಿದರು.

ಹುಟ್ಟುಹಬ್ಬ ಅಚರಣೆ ಹಿನ್ನಲೆಯಲ್ಲಿ ಬುಧವಾರ ಚಂದ್ರೇಶ್ ಅಭಿಮಾನಿ ಬಳಗದ ವತಿಯಿಂದ  ಪಟ್ಟಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾಹಿತಿ ನೀಡಿದ ಅವರು, ಸಮಾಜಸೇವಕ ಜೆ.ಡಿ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್  ಅವರ ಹುಟ್ಟುಹಬ್ಬವನ್ನು ಇದೇ ತಿಂಗಳ 8 ರಂದು ಆಚರಿಸಲಾಗುತ್ತಿದೆ. ಕಳೆದೆರೆಡು ವರ್ಷಗಳ ಕಾಲ ಕೊರೋನ ಹಿನ್ನಲೆಯಲ್ಲಿ ಹುಟ್ಟುಹಬ್ಬ ಆಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂಬುದು ಅಭಿಮಾನಿಗಳ ಒತ್ತಾಸೆಯಾಗಿದೆ. ಅಭಿಮಾನಿಗಳ ಒತ್ತಾಸೆಯಂತೆ ಹುಟ್ಟುಹಬ್ಬ ಆಚರಣೆಯನ್ನು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ಆಚರಿಸಲಾಗುವುದು ಎಂದರು.

ಗ್ರಾ.ಪಂ. ಮಾಜಿ ಅದ್ಯಕ್ಷ ಶ್ರೀನಿವಾಸ್ ಮಾತನಾಡಿ, ಸಮಾಜಮುಖಿ ಹಾಗೂ ಬಡವರ ಪರ ಚಿಂತನೆಯುಳ್ಳ  ದೊಡ್ಡಾಘಟ್ಟಚಂದ್ರೇಶ್ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಅಧಿದೈವ ಬೇಟೆರಾಯಸ್ವಾಮಿ ಹಾಗೂ ಆದಿದೇವತೆ ಉಡುಸಲಮ್ಮ ದೇವಿಗೆ ವಿಶೇಷಪೂಜೆ ಸಲ್ಲಿಸಲಾಗುವುದು.  ಈ ಸಂದರ್ಭದಲ್ಲಿ ಅನೇಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಈ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.

ಈ ವೇಳೆ ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ  ದೊಡ್ಡಾಘಟ್ಟ ಶ್ರೀನಿವಾಸ್, ಶಿವಾನಂದ್, ಹಾವಾಳ ಕೃಷ್ಣೇಗೌಡ, ಗೊಟ್ಟಿಕೆರೆಪ್ರಕಾಶ್, ಅಭಿಮಾನಿ ಬಳಗದ ಗೊಟ್ಟಿಕೆರೆ ಕುಮಾರ್, ಧರೀಶ್   ಮತ್ತಿತರಿದ್ದರು.

ಮಳೆರಾಯನ ಅಬ್ಬರಕ್ಕೆ ಕುಸಿದ ಮನೆಯ ಗೋಡೆ


Publicstory/prajayoga

ಪ್ರಾಣಾಪಾಯದಿಂದ ಕುಟುಂಬ ಪಾರು| ಉಕ್ಕಿ ಹರಿದ ಹಳ್ಳಜನ ಸಂಚಾರ ಅಸ್ತವ್ಯಸ್ಥ

ತುರುವೇಕೆರೆ : ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಮಳೆರಾಯನ ಅಬ್ಬರಕ್ಕೆ ಬಾಣಸಂದ್ರ ಗ್ರಾಮದಲ್ಲಿ ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ.

ತಾಲೂಕಿನ ಬಾಣಸಂದ್ರ ಗ್ರಾಮದ ಅಜೀಜ್ ಎಂಬುವರಿಗೆ ಸೇರಿದ ಮನೆಯಗೋಡೆ ಕುಸಿದು ಬಿದ್ದ ಹಿನ್ನಲೆಯಲ್ಲಿ ಸೂರು ಕಳೆದುಕೊಂಡು ಕುಟುಂಬ ಬೀದಿಗೆ ಬಿದ್ದಂತಾಗಿದೆ. ಮನೆಯಲ್ಲಿದ್ದ  ಸಾಮಾನು ಸರಂಜಾಮುಗಳು ನುಜ್ಜುಗುಜ್ಜಾಗಿವೆ.  ಮನೆಯ ಕುಟುಂಬದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಹಶೀಲ್ದಾರ್ ಸ್ಥಳಕ್ಕೆ ಭೇಟಿ

ಘಟನೆಯ ಸ್ಥಳಕ್ಕೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್  ಬೇಟಿ ನೀಡಿ ಮನೆ ಕಳೆದುಕೊಂಡು ಸಂತ್ರಸ್ಥರಾಗಿರುವ ಅಜೀಜ್ ಕುಟುಂಬಸ್ಥರಿಗೆ ಸಾಂತ್ವನ  ಹೇಳಿದರು. ಸರ್ಕಾರದ ಮಾನದಂಡದನ್ವಯ ಪರಿಹಾರ ದೊರಕಿಸಿಕೊಡುವ ಭರವಸೆ  ನೀಡಿದರು.  ಮಳೆಯ ಆರ್ಭಟ ಹೆಚ್ಚಾಗಿ ವಾಸದ ಮನೆಗಳು ಕುಸಿಯುತ್ತಿರುವ ಹಿನ್ನಲೆಯಲ್ಲಿ ಕಂದಾಯ ಇಲಾಖೆ  ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು  ಕೇಂದ್ರ ಸ್ಥಾನದಲ್ಲಿದ್ದು  ವರದಿ ನೀಡುವಂತೆ ಅವರು ಸೂಚನೆ ನೀಡಿದರು.

ತಾಲೂಕು ವ್ಯಾಪ್ತಿಯಅರಳೀಕೆರೆ ಬಳಿಯ ಹಳ್ಳದಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಮಾದಿಹಳ್ಳಿ ಮಾರ್ಗವಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಮಾದಿಹಳ್ಳಿ ಶಾಲೆಗೆ ತೆರಳುವ ಮಕ್ಕಳು ಶಿಕ್ಷಕರು ಪರದಾಡಬೇಕಾಯಿತು. ತಾಲೂಕಿನ ವ್ಯಾಪ್ತಿಯ ತೋಟ, ಹೊಲ ಗದ್ದೆಗಳು  ಜಲಾವೃತಗೊಂಡಿವೆ. ಮಣೆಚಂಡೂರು ಗ್ರಾ.ಪಂ. ವ್ಯಾಫ್ತಿಯಲ್ಲಿ  8ಕ್ಕೂ  ಅಧಿಕ ವಿದ್ಯುತ್ ಕಂಬಗಳು ನೆಲಕ್ಕೊರಗಿವೆ. ಇಟ್ಟಿಗೆಹಳ್ಳಿ, ಸೀಗೆಹಳ್ಳಿ ಮತ್ತಿತರ ಕಡೆಗಳಲ್ಲಿ ರಸ್ತೆಗಳು ಮಳೆಯ ನೀರಿನಲ್ಲಿ ಕೊಚ್ಚಿಹೋಗಿವೆ. ವರುಣನ ಅರ್ಭಟಕ್ಕೆ ಹಳೆ ಮನೆಗಳಲ್ಲಿ, ಗುಡಿಸಲುಗಳಲ್ಲಿ ವಾಸಿಸುವ ಜನತೆ ಜೀವಭಯದ ಆತಂಕ ಎದುರಿಸುವಂತಾಗಿದೆ. ಗ್ರಾಮೀಣ  ಪ್ರದೇಶದ ಮಣ್ಣಿನ ರಸ್ತೆಗಳು ಮಳೆಗೆ ತೋಯ್ದು ಕೆಸರು ಗದ್ದೆಗಳಾಗಿವೆ.  ತಾಲೂಕಿನ ಬಹುತೇಕ ಕೆರೆಕಟ್ಟೆಗಳು  ಕೋಡಿ ಬಿದ್ದು ಮೈದುಂಬಿ ಹರಿಯುತ್ತಿವೆ.

ಮಳೆಯ ಪ್ರಮಾಣ

ಮಂಗಳವಾರ ರಾತ್ರಿ ತಾಲೂಕಿನ ವ್ಯಾಪ್ತಿಯ  ಕಸಬಾದಲ್ಲಿ 33.6 ಮಿ.ಮೀ, ದಂಡಿನಶಿವರದಲ್ಲಿ 6.3 ಮಿ.ಮೀ.ಮಾಯಸಂದ್ರದಲ್ಲಿ 51.6 ಮಿ.ಮೀ, ದಬ್ಬೇಘಟ್ಟದಲ್ಲಿ 10.1 ಮಿ.ಮೀ, ಸಂಪಿಗೆಯಲ್ಲಿ 15.8 ಮಿ,ಮೀ. ಮಳೆ ಪ್ರಮಾಣ ದಾಖಲಾಗಿದ್ದು, ಸರಾಸರಿ 24 ಮಿ.ಮೀ. ಮಳೆ ದಾಖಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ನಾಳೆ ತುಮಕೂರು ವಿವಿ ನೂತನ ಕುಲಪತಿಗೆ ಅಭಿನಂದನಾ ಸಮಾರಂಭ

0

Publicstory/prajayoga

ತುಮಕೂರು: ವಿಶ್ವವಿದ್ಯಾಲಯಕ್ಕೆ ನೇಮಕವಾಗಿರುವ ನೂತನ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅವರಿಗೆ ‘ಸಂಕಲ್ಪ 2022  ನಮ್ಮ ಹಬ್ಬ’ ಅಭಿನಂದನಾ ಸಮಾರಂಭವನ್ನು ವಿವಿಯ ಕಲಾ ಕಾಲೇಜು ಆವರಣದಲ್ಲಿ ನಾಳೆ  ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ರಂಗ ನಿರ್ದೇಶಕ ಜನಾರ್ಧನ ಜನ್ನಿ ಹಾಗೂ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಕರಿಯಣ್ಣ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ತುಮಕೂರು ವಿವಿಯ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ, ತುಮಕೂರು ವಿವಿ ಕಲಾ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ಟಿ.ಎನ್. ಹರಿಪ್ರಸಾದ್ ಭಾಗವಹಿಸಿದಲಿದ್ದಾರೆ.

ಆಹ್ವಾನ ಪತ್ರಿಕೆ